ಕೆಲವು ವರ್ಷಗಳ ಹಿಂದಿನ ಮಾತು. ಆಗಿನ್ನೂ ಥಂಬ್‌ಡ್ರೈವ್ ಪೆನ್‌ಡ್ರೈವ್ ಇತ್ಯಾದಿಗಳಲ್ಲ ಅಷ್ಟಾಗಿ ಬಳಕೆಗೆ ಬಂದಿರಲಿಲ್ಲ. ಸಿ.ಡಿ.ಗಳು ಇದ್ದವಾದರೂ ಅವುಗಳ ಬೆಲೆ ಈಗಿನಷ್ಟು ಕಡಿಮೆಯಿರಲಿಲ್ಲ. ಅಷ್ಟೇ ಅಲ್ಲ, ಅವುಗಳಿಗೆ ಮಾಹಿತಿ ತುಂಬಲು ಬೇಕಾದ ಸಿ.ಡಿ. ರೈಟರ್‌ಗಳು ಎಲ್ಲ ಗಣಕಗಳಲ್ಲೂ ಇರುತ್ತಿರಲಿಲ್ಲ. ಯಾವುದೋ ಸೈಬರ್ ಕೆಫೆಗೆ ಹೋಗಿ ನಮಗೆ ಬೇಕಾದ ಮಾಹಿತಿಯನ್ನು ಒಂದು ಸಿ.ಡಿ.ಗೆ ತುಂಬಿಸಿಕೊಂಡು ಬರಲು ಸಿ.ಡಿ. ಬೆಲೆಯ ಮೂರು ಪಟ್ಟು ಹಣ ಕೊಡಬೇಕಾದ ಪರಿಸ್ಥಿತಿಯಿತ್ತು.

ಆಗ ಸಹಾಯಕ್ಕೇ ಬರುತ್ತಿದ್ದದ್ದೇ ಫ್ಲಾಪಿ ಡಿಸ್ಕ್. ಸೈಬರ್ ಕೆಫೆಯಲ್ಲಿ ಅಂತರಜಾಲದಿಂದ ಪಡೆದ ಮಾಹಿತಿಯನ್ನು ಮನೆಗೆ ತರಲು, ಮನೆಯಲ್ಲೋ ಕಾಲೇಜಿನಲ್ಲೋ ಸಿದ್ಧಪಡಿಸಿದ ಕಡತವನ್ನು ಬೇರೊಬ್ಬರೊಡನೆ ಹಂಚಿಕೊಳ್ಳಲು – ಹೀಗೆ ಎಲ್ಲ ಕೆಲಸಕ್ಕೂ ಫ್ಲಾಪಿಯೇ ಬೇಕಾಗಿತ್ತು. ಮನೆಯಲ್ಲಿ ಡಜನ್‌ಗಟ್ಟಲೆ ಫ್ಲಾಪಿಗಳನ್ನು ತಂದಿಟ್ಟುಕೊಳ್ಳುವ ಅಭ್ಯಾಸ ಬಹುತೇಕ ಗಣಕ ಬಳಕೆದಾರರಲ್ಲಿ ಇತ್ತು.

ಇತಿಹಾಸ:

ಐಬಿಎಂ ಸಂಸ್ಥೆಯಲ್ಲಿ ಫ್ಲಾಪಿ ಡಿಸ್ಕ್‌ಗಳು ಮೊದಲ ಸಲ ತಯಾರಾದದ್ದು ೧೯೬೦ರ ದಶಕದ ಕೊನೆಯ ವೇಳೆಗೆ. ಎಂಟು ಇಂಚುಗಳ ವ್ಯಾಸ ಹೊಂದಿದ್ದ ಈ ಡಿಸ್ಕ್‌ಗಳನ್ನು ಮೊದಲಿಗೆ ‘ಟೈಪ್ ೧ ಡಿಸ್ಕ್’ಗಳೆಂದು ಕರೆಯಲಾಗುತ್ತಿತ್ತಂತೆ. ಇವು ತೆಳ್ಳಗೆ ಬಳುಕುವಂತಿದ್ದರಿಂದಲೇ ಆನಂತರ ಅವುಗಳಿಗೆ ಫ್ಲಾಪಿ ಎಂಬ ಹೆಸರು ಬಂತು.

ಫ್ಲಾಪಿಯ ಒಳಗಡೆ ಒಂದು ವೃತ್ತಾಕಾರದ ತೆಳು ಅಯಸ್ಕಾಂತೀಯ ತಟ್ಟೆ ಇರುತ್ತದೆ. ಮಾಹಿತಿ ಸಂಗ್ರಹಣೆಯೆಲ್ಲ ಇದರಲ್ಲೇ ಆಗುವುದು. ನಮಗೆ ಕಾಣುವ ಹೊರಗಿನ ಚೌಕ ಈ ಅಯಸ್ಕಾಂತೀಯ ತಟ್ಟೆಯನ್ನು ಜೋಪಾನವಾಗಿ ಕಾಪಾಡಿಕೊಳ್ಳುವ ಲಕೋಟೆ ಅಷ್ಟೆ. ಫ್ಲಾಪಿ ಎಂದಾಕ್ಷಣ ನಮ್ಮ ಮನಸ್ಸಿಗೆ ಬರುವ ಚಿತ್ರ ಈ ಚೌಕಾಕಾರದ್ದೇ. ಈ ಚಿತ್ರ ಅದೆಷ್ಟು ಜನಪ್ರಿಯ ಎಂದರೆ ಇಂದಿನ ಅತ್ಯಾಧುನಿಕ ತಂತ್ರಾಂಶಗಳಲ್ಲೂ ಕಡತಗಳನ್ನು ಉಳಿಸಬೇಕೆಂದರೆ ಫ್ಲಾಪಿಯ ಚಿತ್ರದ ಮೇಲೆಯೇ ಕ್ಲಿಕ್ ಮಾಡಬೇಕು.

ಫ್ಲಾಪಿಗಳಿಂದ ಮಾಹಿತಿ ಓದಲು, ಹಾಗೂ ಅದರೊಳಕ್ಕೆ ಮಾಹಿತಿಯನ್ನು ಬರೆಯಲು ಫ್ಲಾಪಿ ಡಿಸ್ಕ್ ಡ್ರೈವ್ ಎಂಬ ಸಾಧನ ಬೇಕು.

ನಡೆದು ಬಂದ ದಾರಿ:

೧೯೭೧ರಲ್ಲಿ ಎಂಟು ಇಂಚಿನ ಫ್ಲಾಪಿ ಮಾರುಕಟ್ಟೆಗೆ ಬಂದಾಗ ಅವುಗಳಲ್ಲಿ ಕೇವಲ ೨೪೦ ಕಿಲೋಬೈಟ್‌ಗಳಷ್ಟು ಮಾಹಿತಿಯನ್ನು ಮಾತ್ರ ಶೇಖರಿಸಲು ಸಾಧ್ಯವಿತ್ತು. ಈಗಿನ ಲೆಕ್ಕದಲ್ಲಿ ನೋಡಿದರೆ ಸಾಧಾರಣ ಮೊಬೈಲ್ ಕ್ಯಾಮೆರಾದಲ್ಲಿ ತೆಗೆದ ಚಿತ್ರವೂ ಇಷ್ಟಕ್ಕಿಂತ ಕಡಿಮೆ ಗಾತ್ರ ಹೊಂದಿರುವುದು ಕಷ್ಟ. ಗಿಗಾಬೈಟ್‌ಗಟ್ಟಲೆ ಮಾಹಿತಿಯನ್ನು ಹೆಬ್ಬೆರಳು ಗಾತ್ರದ ಥಂಬ್ ಡ್ರೈವ್‌ಗಳಲ್ಲಿ ಇಟ್ಟುಕೊಂಡು ಓಡಾಡುವ ಈ ಕಾಲದಲ್ಲಿ ಇದೆಲ್ಲ ಎಷ್ಟು ತಮಾಷೆ ಅನಿಸುತ್ತದಲ್ಲ?

ಈಗಿನ ವಿಷಯ ಯಾಕೆ, ೧೯೭೦ರ ದಶಕದ ಕೊನೆಯ ವೇಳೆಗಾಗಲೇ ಹಾಗನ್ನಿಸಲು ಶುರುವಾಗಿತ್ತು. ಎಂಟು ಇಂಚಿನ ಫ್ಲಾಪಿ ತೀರಾ ದೊಡ್ಡದು, ಅದನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಕೊಂಡೊಯ್ಯುವುದು ಕಷ್ಟ ಅನ್ನಿಸಿದಾಗ ಐದೂಕಾಲು ಇಂಚು ವ್ಯಾಸದ ಫ್ಲಾಪಿ ಸಿದ್ಧವಾಯಿತು. ಜೊತೆಯಲ್ಲೇ ಫ್ಲಾಪಿಯ ಶೇಖರಣಾ ಸಾಮರ್ಥ್ಯವೂ ಹೆಚ್ಚುತ್ತಾ ಹೋಯಿತು.

ಮೂರೂವರೆ ಇಂಚು ವ್ಯಾಸದ ಫ್ಲಾಪಿ ಎಂಬತ್ತರ ದಶಕದಲ್ಲಿ ಮಾರುಕಟ್ಟೆ ಪ್ರವೇಶಿಸಿತು. ಅಲ್ಲಿಯವರೆಗೆ ಮಾರುಕಟ್ಟೆಯಲ್ಲಿದ್ದ ಫ್ಲಾಪಿಗಳಿಗಿಂತ ಗಟ್ಟಿಯಾದ ಹೊರಕವಚ ಹೊಂದಿದ್ದ ಈ ವಿನ್ಯಾಸದೊಡನೆ ಫ್ಲಾಪಿಯ ಬಳುಕಾಟ ನಿಂತಿತು; ಆದರೆ ಹೆಸರು ಮಾತ್ರ ಹಾಗೆಯೇ ಉಳಿದುಕೊಂಡಿತು ಅಷ್ಟೆ. ಇವುಗಳಲ್ಲಿ ೩೬೦ ಕಿಲೋಬೈಟ್‌ನಿಂದ ೧.೪೪ ಮೆಗಾಬೈಟ್‌ವರೆಗಿನ ಗಾತ್ರದ ಮಾಹಿತಿಯನ್ನು ಸಂಗ್ರಹಿಸಿಡುವ ಅನುಕೂಲತೆ ಇತ್ತು.

ಇವುಗಳಲ್ಲಿ ೧.೪೪ ಮೆಗಾಬೈಟ್ ಸಾಮರ್ಥ್ಯದವು ಮಾರುಕಟ್ಟೆಯಲ್ಲಿ ಅಭೂತಪೂರ್ವ ಜನಪ್ರಿಯತೆ ಗಳಿಸಿಕೊಂಡವು. ಎರಡು ಎಂ.ಬಿ.ಗೂ ಹೆಚ್ಚು ಸಾಮರ್ಥ್ಯದ ಕೆಲ ಫ್ಲಾಪಿ ಡಿಸ್ಕ್‌ಗಳು ಮಾರುಕಟ್ಟೆಗೆ ಬಂದವಾದರೂ ಅವು ಹೆಚ್ಚಿನ ಜನಪ್ರಿಯತೆ ಗಳಿಸಿಕೊಳ್ಳಲಿಲ್ಲ.

ತೊಂಬತ್ತರ ದಶಕದ ಕೊನೆಯ ವೇಳೆಗೆ ಫ್ಲಾಪಿ ಡಿಸ್ಕ್‌ಗಳ ಉತ್ಪಾದನೆ ಗರಿಷ್ಟಮಟ್ಟ ತಲುಪಿತ್ತು. ಆಗ ಪ್ರತಿವರ್ಷವೂ ನೂರಾರು ಕೋಟಿ ಫ್ಲಾಪಿಗಳು ತಯಾರಾಗುತ್ತಿದ್ದವು.

ಆ ವೇಳೆಗೆ ಸಿ.ಡಿ.ಗಳ ಬಳಕೆ ಹೆಚ್ಚು ವ್ಯಾಪಕವಾಯಿತು. ಸಿ.ಡಿ, ರೈಟರ್‌ಗಳ ಬೆಲೆಯೂ ಕಡಿಮೆಯಾಯಿತು. ದಪ್ಪನೆಯ ಫ್ಲಾಪಿಯಂತಿದ್ದ ಜಿಪ್‌ಡ್ರೈವ್ ಎಂಬ ಸಾಧನವೂ ಕೆಲಕಾಲ ಮಾರುಕಟ್ಟೆಯಲ್ಲಿತ್ತು. ಸಾಮಾನ್ಯ ಫ್ಲಾಪಿಗಿಂತ ನೂರಾರು ಪಟ್ಟು ಹೆಚ್ಚಿನ ಮಾಹಿತಿ ಸಂಗ್ರಹಿಸಬಲ್ಲವಾಗಿದ್ದ ಈ ಸಾಧನಗಳ ಮುಂದೆ ಫ್ಲಾಪಿ ಸಹಜವಾಗಿಯೇ ತಲೆಬಾಗಬೇಕಾಯಿತು.

ಅಂತರಜಾಲದ ಹರವು ವ್ಯಾಪಿಸಿದಂತೆ ಕಡತಗಳ ವಿನಿಮಯ ಬಹಳ ಸುಲಭವಾಗಿತು. ಮುಂದೆ ಡಿವಿಡಿಗಳು ಬಂದವು, ಪೆನ್‌ಡ್ರೈವುಗಳೂ ಬಂದವು. ಗಿಗಾಬೈಟ್ ಸಾಮರ್ಥ್ಯದ ಈ ಸಾಧನಗಳ ಮುಂದೆ ಫ್ಲಾಪಿಗಳ ೧.೪೪ ಮೆಗಾಬೈಟ್ ಸಾಮರ್ಥ್ಯ ನಗೆಪಾಟಲಿಗೀಡಾಯಿತು.

ದಾರಿಯ ಕೊನೆ:

ಯಂತ್ರಾಂಶ ನಿರ್ಮಾತೃಗಳು ನಿಧಾನಕ್ಕೆ ಫ್ಲಾಪಿ ಡಿಸ್ಕ್‌ಗಳಿಂದ ದೂರ ಸರಿಯಲು ಪ್ರಾರಂಭಿಸಿದ್ದೇ ಆಗ. ಮೊದಲಿಗೆ ಆಪಲ್ ಹಾಗೂ ಡೆಲ್‌ನಂತಹ  ದೊಡ್ಡ ಸಂಸ್ಥೆಗಳು ತಮ್ಮ ಹೊಸ ಗಣಕಗಳಲ್ಲಿ ಫ್ಲಾಪಿ ಡಿಸ್ಕ್ ಡ್ರೈವ್‌ಗಳನ್ನು ಅಳವಡಿಸದಿರಲು ತೀರ್ಮಾನಿಸಿದವು.

ನಿಧಾನಕ್ಕೆ ಫ್ಲಾಪಿಗಳಿಗೆ ಬೇಡಿಕೆ ಕಡಿಮೆಯಾಗುತ್ತಿದ್ದಂತೆ ಫ್ಲಾಪಿ ಡ್ರೈವ್‌ಗಳು ಎಲ್ಲ ಗಣಕಗಳಿಂದಲೂ ಮಾಯವಾಗತೊಡಗಿದವು. ಫ್ಲಾಪಿ ಡ್ರೈವ್‌ಗಳೇ ಇಲ್ಲದ ಮೇಲೆ ಫ್ಲಾಪಿಗಳಿಗೇನು ಕೆಲಸ, ಅವುಗಳ ಉತ್ಪಾದನೆಯೂ ನಿಲ್ಲುತ್ತ ಬಂತು. ೨೦೧೧ರ ಮಾರ್ಚ್‌ನಲ್ಲಿ ಸೋನಿ ಸಂಸ್ಥೆ ಫ್ಲಾಪಿ ಡಿಸ್ಕ್‌ಗಳ ಉತ್ಪಾದನೆ ನಿಲ್ಲಿಸಿದಾಗ ಫ್ಲಾಪಿ ಡಿಸ್ಕ್‌ಗಳ ಇತಿಹಾಸದ ಮತ್ತೊಂದು ಮಹತ್ವದ ಅಧ್ಯಾಯ ಕೊನೆಯಾಯಿತು.

(ಉದಯವಾಣಿ ಜುಲೈ ೧೯, ೨೦೧೧ರ ಸಂಚಿಕೆಯಲ್ಲಿ ಪ್ರಕಟವಾದ ಲೇಖನದ ಸುಧಾರಿತ ರೂಪ)