ವಂದೇ ಮಾತರಂ
ಸುಜಲಾಂ ಸುಫಲಾಂ
ಮಲಯಜ ಶೀತಲಾಂ
ಸಸ್ಯಶ್ಯಾಮಲಾಂ ಮಾತರಂ ||

ಈ ರಾಷ್ಟ್ರಗೀತೆಯನ್ನು ಅರಿಯದವರಿಲ್ಲ. ಆದರೆ ಅದನ್ನು ಬರೆದವರು ಯಾರು ಎಂಬುದು ಬಹುಶಃ ಬಹಳ ಜನರಿಗೆ ಗೊತ್ತಿಲ್ಲ. ಈ ರಾಷ್ಟ್ರಗೀತೆಯನ್ನು ರಚಿಸಿದವರು – ಶ್ರೀ ಬಂಕಿಮಚಂದ್ರ ಚಟರ್ಜಿ ಅವರು. “ಆನಂದ ಮಠ” ಎಂಬುದು ಅವರ ಒಂದು ಕಾದಂಬರಿ. ಅದರಲ್ಲಿ ಅವರು ಸ್ವಾತಂತ್ಯ್ರ ಹೋರಾಟದ ಕಥೆಯನ್ನು ಬಣ್ಣಿಸುವುದನ್ನು ಓದುವಾಗ ಉತ್ಸಾಹದಿಂದ ಮೈ “ಜುಂ” ಎನ್ನುತ್ತದೆ. ಆ ಕಥೆಯ ಭಾಗವಾಗಿ ಈ ಹುರಿದುಂಬಿಸುವ ಹಾಡು ಕಾಣಿಸಿಕೊಳ್ಳುತ್ತದೆ.

ಎಲ್ಲರನ್ನು ಬೆರಗುಗೊಳಿಸಿದ ಬಾಲಕ

ಬಂಕಿಮಚಂದ್ರ ಚಟರ್ಜಿ ಅವರು ಬಂಗಾಲದ ಇಪ್ಪತ್ತನಾಲ್ಕು ಪರಗಣ ಜಿಲ್ಲೆಗೆ ಸೇರಿದ ಕಾಂಚಲಪಾಡಾ ಎಂಬ ಗ್ರಾಮದಲ್ಲಿ ೧೮೩೮ ರ ಜೂನ್ ತಿಂಗಳ ೨೭ನೇಯ ದಿನಾಂಕದಂದು ಜನ್ಮ ತಾಳಿದರು. ಇವರದು ಬ್ರಾಹ್ಮಣ ಮನೆತನ. ಈ ಸಂಸಾರ ಯಾಗಯಜ್ಞಗಳನ್ನು ನಡೆಸಿ ಖ್ಯಾತವಾಗಿತ್ತು.

ಬಂಕಿಮಚಂದ್ರ ತಂದೆ ಯಾದವಚಂದ್ರ ಚಟ್ಟೋಪಾಧ್ಯಾಯ. ಇವರು ಸರಕಾರಿ ಕೆಲಸದಲ್ಲಿದ್ದರು. ಮಗನು ಹುಟ್ಟಿದ ವರುಷವೆ ಡೆಪ್ಯುಟಿ ಕಲೆಕ್ಟರರಾಗಿ ಮಿಡ್ನಾಪುರದಲ್ಲಿಯೇ ಬಂದರು. ಮಗು ಬಂಕಿಮನು ಮಿಡ್ನಾಪುರದಲ್ಲಿಯೇ ಪಾಠಶಾಲೆಯ ಪ್ರವೇಶ ಮಾಡಿದನು. ಬಂಕಿಮಚಂದ್ರನ ತಾಯಿ ಅತ್ಯಂತ ಸಾತ್ವಿಕಳು, ಪ್ರೇಮದ ಸ್ವಭಾವದವಳು. ಬಂಗಳಿಯಲ್ಲಿ ಬಂಕಿಮಚಂದ್ರ ಎಂದರೆ ಬಿದಿಗೆಯ ಚಂದ್ರ ಎಂದರ್ಥ. ತಮ್ಮ ವಂಶವೂ ಈತನಿಂದ ಶುಕ್ಲ ಪಕ್ಷದ ಚಂದ್ರನಂತೆ ಕಳಕಳಿಸಿ ಬೆಳಗಬೇಕು ಎಂಗ ಹಾರೈಕಿ ಇದ್ದಿರಬೇಕು, ಅದರಿಂದ ಮಗುವಿಗೆ ಬಂಕಿಮಚಂದ್ರನೆಂದು ನಾಮಕರಣ ಮಾಡಿರಬೇಕು.

ಬಾಲಕ ಬಂಕಿಮನ ಬುದ್ಧಿ ಶಕ್ತಿ ಅದ್ಭುತವಾಗಿತ್ತು. ಒಂದೇ ದಿನದಲ್ಲಿ ವರ್ಣಮಾಲೆಯನ್ನೆಲ್ಲ ಕಲಿತುಬಿಟ್ಟನಂತೆ. ಗುರುಹಿರಿಯರಿಗೆ ಮಗುವಿನ ಬುದ್ಧಿಶಕ್ತಿಯನ್ನು ನೋಡಿ ಅತ್ಯಾಶ್ಚರ್ಯವಾಯಿತು. ಮಿಡ್ನಾಪುರದ ಮಕ್ಕಳು ಯಾರಾದರೂ ಒಂದಿಷ್ಟು ಬುದ್ಧಿವಂತಿಕೆಯನ್ನು ತೋರಿದರೆ, ಶಿಕ್ಷಕರು, “ಓಹೊ, ಮತ್ತೊಬ್ಬ ಬಂಕಿಮನಾಗಿದ್ದಾನೆ” ಎಂದು ಉದ್ಗಾರ ತೆಗೆಯುತ್ತಿದ್ದರಂತೆ.

ಶಾಲೆಯ ಶಿಕ್ಷಣ ಮುಗಿಯಿತು.

ಕಾಲೆಜಿನಲ್ಲೂ ಕಣ್ಮಣಿ

ಬಂಕಿಮನು ಮಿಡ್ನಾಪುರದಿಂದ ಹುಗ್ಲಿಯ ಮೊಹಸಿನ್ ಕಾಲೇಜಿಗೆ ಬಂದನು. ಅಲ್ಲಿ ಆರು ವರ್ಷಕಾಲ ಅಭ್ಯಾಸ ಮಾಡಿದ. ಕಾಲೇಜಿನಲ್ಲೂ ಅವನ ಅದ್ಭುತ ಬುದ್ಧಿಶಕ್ತಿ ಬೆಳಗಿತು. ಈತನ ವಿದ್ವತ್ತಿಗೆ ಪ್ರಾಧ್ಯಾಪಕ ವರ್ಗವು ಬೆರಗಾಗಿ ಹೋಗಿತ್ತು. ಪರೀಕ್ಷೆಗಳಲ್ಲಿ ಪ್ರಥಮ ದರ್ಜೆಯ ಪಾರಿತೋಷಕಗಳನ್ನು ಗಿಟ್ಟಿಸುವುದೆಂದರೆ ಬಂಕಿಮನಿಗೆ ನೀರು ಕುಡಿದಷ್ಟು ಸುಲಭವಾಗಿತ್ತು.

ಬಂಕಿಮನಿಗೆ ಆಟಪಾಟಗಳಲ್ಲಿ ಅಷ್ಟೊಂದು ಆಸಕ್ತಿ ಇರಲಿಲ್ಲ. ಆದರೆ ಅವನು ಪಠ್ಯಪುಸ್ತಕಗಳನ್ನು ಮಾತ್ರ ಓದುವ ಹುಡುಗನಲ್ಲ, ತನ್ನ ಬಿಡುವಿನ ವೇಳೆಯನ್ನು ಪಠ್ಯೇತರ ಪುಸ್ತಕಗಳನ್ನು ಓದುವುದರಲ್ಲಿ ವಿನಿಯೋಗಿಸುತ್ತಿದ್ದನು. ಆತನಿಗೆ ಸಂಸ್ಕೃತ ಅಭ್ಯಾಸದಲ್ಲಿ ಎಲ್ಲಿಲ್ಲದ ಆಸಕ್ತಿ.  ಸಂಸ್ಕೃತ ಪುಸ್ತಕಗಳು ಹಲವನ್ನು ತಾನೇ ಆಸೆಯಿಂದ ಓದಿದ, ಚೆನ್ನಾಗಿ ಅರ್ಥಮಾಡಿಕೊಂಡ, ಸಂಸ್ಕೃತ ಭಾಷೆಯ ಸೌಂದರ್ಯವನ್ನು ಮೆಚ್ಚಿದ. ಬಂಕಿಮನು ಅದನ್ನು ಅಭ್ಯಾಸ ಮಾಡಿದ್ದು ಒಳ್ಳೆಯದಾಯಿತು. ಮುಂದೆ ಅವನು ಬಂಗಾಳಿ ಭಾಷೆಯಲ್ಲಿ ಪುಸ್ತಕಗಳನ್ನು ಬರೆದ, ಆಗ ಇದರಿಂದ ತುಂಬ ಪ್ರಯೋಜನವಾಯಿತು.

ಬಂಕಿಮ ಹೀಗೆ ಎಂದು ಗೊತ್ತುಮಾಡಿಕೊಂಡು ಓದುತ್ತಿರಲಿಲ್ಲ. ಯಾವುದೋ ಒಂದು ಪುಸ್ತಕವು ಮನಸ್ಸನ್ನಾಕರ್ಷಿಸಿತೆಂದರೆ ತೀರಿತು. ಕಾಲೇಜಿನ ಪುಸ್ತಕ ಭಂಡಾರದ ಒಂದು ಮೂಲೆಯಲ್ಲಿ ಗಂಟೆಗಟ್ಟಲೆ ಓದುತ್ತ ಕುಳಿತುಬಿಡುತ್ತಿದ್ದನು. ಹೀಗೆ ಪಠ್ಯೇತರ ವಾಚನದಲ್ಲಿಯೇ ವರ್ಷದ ಬಹುಭಾಗ ಕಳೆಯುತ್ತಿತ್ತು. ಪರೀಕ್ಷೆ ಸಮೀಪಿಸುತ್ತಲೆ ಪಠ್ಯಪುಸ್ತಕಗಳನ್ನು ಗಪಗಪನೆ ಮುಗಿಸುವದು. ಮತ್ತೆ ಯಥಾಪ್ರಕಾರ ಪ್ರಥಮ ದರ್ಜೆ, ಪ್ರಥಮ ಪಂಕ್ತಿ ಪಾರಿತೋಷಕಗಳು. ಆಮೇಲೆ ಮತ್ತೆ ಪಠ್ಯಪುಸ್ತಕಗಳಿಂದ ದೂರ.

ಬಂಕಿಮನು ೧೮೫೬ ರಲ್ಲಿ ಕಲ್ಕತ್ತ ಪ್ರಸಿಡೆನ್ಸಿ ಕಾಲೇಜಿಗೆ ಬಂದನು. ಮರು ವರ್ಷವೇ ಸ್ವಾತಂತ್ಯ್ರ ಹೋರಾಟಕ್ಕಾಗಿ  ಸಿಪಾಯಿಗಳು ದಂಗೆ ಎದ್ದರು. ಕಲ್ಕತ್ತ ಕಲ್ಲೋಲಮಯವಾಗಿತ್ತು. ಆದರೂ ಬಂಕಿಮನ ಬಿ.ಎ. ಅಭ್ಯಾಸ ಬಿಡದೆ ಸಾಗಿತ್ತು. ಹನ್ನೆರಡು ಜನ ವಿದ್ಯಾರ್ಥಿಗಳು ಬಿ.ಎ. ಪರೀಕ್ಷೆಗೆ ಕುಳಿತಿದ್ದರು, ಅವರಲ್ಲಿ ಬಂಕಿಮನೂ ಒಬ್ಬ. ಇದರಲ್ಲಿ ಬಂಕಿಮನೂ ಅವನ ಮಿತ್ರ ಯದುನಾಥ ವಸುವೂ ತೇರ್ಗಡೆ ಹೊಂದಿದರು. ಬಂಕಿಮನ ಬಿ.ಎ. ಆದ ವರ್ಷವೇ ಕಲ್ಕತ್ತೆಯ ಲೆಫ್ಟಿನೆಂಟ್ ಗವರ್ನರರು ಬಂಕಿಮನನ್ನು ಕರೆಯಿಸಿ ಆತನಿಗೆ ಡೆಪ್ಯುಟಿ ಕಲೆಕ್ಟರರ ಹುದ್ದೆಯನ್ನು ಕೊಟ್ಟರು. ಬಂಕಿಮನ ತಂದೆ ಯಾದವಚಂದ್ರರೂ ಇದೇ ಹುದ್ದೆಯನ್ನು ಮಾಡಿದ್ದರು. ತಂದೆಯ ಇಚ್ಚೆಯಂತೆ ಬಂಕಿಮನು ಡೆಪ್ಯುಟಿ ಕಲೆಕ್ಟರ್ ಅಧಿಕಾರವನ್ನು ಸ್ವೀಕರಿಸಿದನು. ಆಗ ಬಂಕಿಮನಿಗೆ ಇಪ್ಪತ್ತು ವರ್ಷಗಳು. ಮುಂದೆ ಕಾಯಿದೆ ವಿಷಯದ ಬಗ್ಗೆಯೂ ಆಸಕ್ತಿ ಹೆಚ್ಚಿತು. ಆತ ಬಿ.ಎಲ್. ಪದವಿಯನ್ನು ಸುಲಭವಾಗಿ ಯಶಸ್ವಿಯಾಗಿ ಸಂಪಾದಿಸಿದ.

ಬಿಳಿಯರಿಗೆ ತಲೆಬಾಗದ ಅಧಿಕಾರಿ

ಬಂಕಿಮಚಂದ್ರರಿಗೆ ಉಪನ್ಯಾಯಾಧೀಶ ಅಥವಾ ಡೆಪ್ಯುಟಿ ಮ್ಯಾಜಿಸ್ಟ್ರೇಟ್ ಎಂಬ ಕೆಲಸ ಸಿಕ್ಕಿತು. ಮೂವತ್ತೆರೆಡು ವರ್ಷ ಸರ್ಕಾರಿ ಕೆಲಸದಲ್ಲಿದ್ದು ೧೮೯೧ ರಲ್ಲಿ ನಿವೃತ್ತರಾದರು. ಸರ್ಕಾರಿ ನೌಕರಿಯಲ್ಲಿ ತಮ್ಮ ಕೆಲಸವನ್ನು ಮನಸ್ಸಿಟ್ಟು ಶ್ರದ್ಧೆಯಿಂದ ಮಾಡುತ್ತಿದ್ದರು. ಆದರೆ ಅವರ ಮೇಲಿನ ಅಧಿಕಾರಿಗಳಲ್ಲಿ ಬಹುಮಂದಿ ಬಿಳಿಯರು. ತಾವು ಈ ದೇಶವನ್ನು ಆಳುವವರು ಎನ್ನುವ ಅಹಂಕಾರ ಅವರಿಗೆ. ಬಂಕಿಮರು ಅವರ ಅಹಂಕಾರ, ಅನ್ಯಾಯ, ಮೊಂಡುತನಗಳಿಗೆ ತಲೆ ಬಗ್ಗಿಸುವವರಲ್ಲ. “ಆನಂದ ಮಠ” ಬರೆದು, “ವಂದೇ ಮಾತರಂ” ಹಾಡಿದವರಲ್ಲವೇ ಅವರು? ಯಾರೇ ಆಗಲಿ, ಅನ್ಯಾಯ ಮಾಡಿದರೆ ಬುದ್ಧಿ ಕಲಿಸುತ್ತಿದ್ದರು. ಇದರಿಂದ ಹಲವರು ಬಿಳಿಯ ಅಧಿಕಾರಿಗಳಿಗೆ ಅವರೆಂದರೆ ಕೋಪ, ಅವರ ಜೋತೆಗೆ ವಿರಸ. ಬಂಕಿಮರಿಗೆ ಕಾಡ ಕೊಟ್ಟರು. ಆದರೆ ಬಂಕಿಮರು ಎಲ್ಲವನ್ನೂ ತಾಳ್ಮೆಯಿಂದ ಸಹಿಸಿದರು. ಪ್ರಾಮಾಣಿಕವಾಗಿ, ಚೆನ್ನಾಗಿ ಕೆಲಸ ಮಾಡಿದರೂ ಅವರಿಗೆ ಹಿರಿಯ ಸ್ಥಾನ ಕಡೆಗೂ ಸಿಕ್ಕಲೇ ಇಲ್ಲ!

ನ್ಯಾಯ, ಆತ್ಮಗೌರವ ಇವನ್ನು ಬಂಕಿಮರು ಬಿಟ್ಟು ಕೊಡುತ್ತಿರಲಿಲ್ಲ. ಬಿಳಿಯ ಅಧಿಕಾರಿಗಳ ದರ್ಪಕ್ಕೆ ಹೆದರುತ್ತಿರಲಿಲ್ಲ. ಅವರು ಡೆಪ್ಯುಟಿ ಮ್ಯಾಜಿಸ್ಟ್ರೇಟ್ ಆಗಿದ್ದಾಗ, ಅವರ ಮೇಲಿನ ಅಧಿಕಾರಿ ಮನ್ರೋ ಎನ್ನುವವನಿದ್ದ. ಆತ ಪ್ರಾಂತದ “ಕಮೀಷನರ್”, ಮುಖ್ಯಸ್ಥ. ಒಮ್ಮೆ ಈಡನ್ ಗಾರ್ಡನ್ ಎಂಬ ಕಡೆ ಆಕಸ್ಮಾತಾಗಿ ಬಂಕಿಮರು ಅವನನ್ನು ಕಂಡರು. ಕೆಳಗಿನ ಭಾರತೀಯ ಅಧಿಕಾರಿ, ತನ್ನ ಮೇಲಿನ ಬಿಳಿಯ ಅಧಿಕಾರಿಯನ್ನು ಕಂಡಾಗ ತಲೆಬಾಗಿ ವಿನಯದಿಂದ ನಮಸ್ಕಾರ ಮಾಡಬೇಕು ಎಂದು ಬಿಳಿಯರ ನಿರೀಕ್ಷಣೆ. ಬಂಕಿಮರು ತಮ್ಮ ಪಾಡಿಗೆ ತಾವು ಮುಂದೆ ನಡೆದರು. ಮನ್ರೋ ಸಾಹೇಬನಿಗೆ ರೇಗಿತು. ಅವರನ್ನು ಬೇರೆ ಸ್ಥಳಕ್ಕೆ ವರ್ಗಮಾಡಿದ.

ಬಂಕಿಮರು ಸರ್ಕಾರಿ ಕೆಲಸದಲ್ಲಿದ್ದಾಗ ಎಷ್ಟೋ ಬಾರಿ ಹೀಗೆ ನಡೆಯಿತು. ಅವರ ಸ್ವಾಭಿಮಾನದಿಂದ ಬಿಳಿಯರಿಗೆ ಮತ್ತೆ ಮತ್ತೆ ಅಸಮಧಾನವಾಯಿತು. ಅವರಿಗೆ ಮೇಲಿಂದ ಮೇಲೆ ವರ್ಗ, ಕಿರುಕುಳ.

ಮನೆಯಲ್ಲಿಯೂ ಬೇಸರ

ಅಧಿಕಾರ ರಂಗದಲ್ಲಿ ಮನಸ್ಸು ಈ ರೀತಿಯಾಗಿ ಬೇಸರ ಗೊಳ್ಳುತ್ತಿತ್ತು. ಮನೆಯ ಜೀವನದಲ್ಲಿಯೂ ಅವರನ್ನು ದುರ್ದೈವ ಬೆನ್ನಟ್ಟಿಕೊಂಡೆ ನಡೆದಿತ್ತು. ಜಸ್ಸೂರ್ ನಲ್ಲಿ ಡೆಪ್ಯುಟಿ ಕಲೆಕ್ಟರ್ ಎಂದು ನೇಮಕ ಹೊಂದಿದ ಒಂದೆರಡು ವರ್ಷಗಳಲ್ಲಿಯೆ ಬಂಕಿಮರ ಹೆಂಡತಿ ದೈವಾಧೀನರಾದರು. ಚೆಲುವೆಯಾದ ಚಿಕ್ಕವಯಸ್ಸಿನ ಹೆಂಡತಿಯನ್ನು ಕಳೆದುಕೊಂಡ ಬಂಕಿಮರು ಬಹಳವಾಗಿ ವ್ಯಥೆಪಟ್ಟರು. ಹೆಂಡತಿ ತೀರಿಕೊಂಡಾಗ ಬಂಕಿಮರಿಗೆ ಇನ್ನೂ ಇಪ್ಪತ್ತೆರಡು ವರ್ಷ ವಯಸ್ಸು. ಅವರ ವಿವಾಹವಾದಾಗ ಬಂಕಿಮರಿಗೆ ಹನ್ನೊಂದು ವರ್ಷ, ಹೆಂಡತಿಗೆ ಐದು! ಮುಂದೆ ಬಂಕಿಮರು ಎರಡನೆಯ ಮದುವೆ ಮಾಡಿಕೊಂಡರು. ಆಕೆಯ ಹೆಸರು ರಾಜಲಕ್ಷ್ಮೀದೇವಿ. ರಾಜಲಕ್ಷ್ಮೀದೇವಿಯಿಂದ ಮೂವರು ಹೆಣ್ಣು ಮಕ್ಕಳನ್ನು ಪಡೆದರು. ಬಂಕಿಮರಿಗೆ ಒಂದೂ ಗಂಡುಮಗುವಾಗಲಿಲ್ಲ. ಕೊನೆಯ ಮಗಳು ಉತ್ಪಲ ಕುಮಾರಿ ಆತ್ಮಹತ್ಯೆ ಮಾಡಿಕೊಂಡಳಂತೆ.

ಬಂಕಿಮಚಂದ್ರರು ಜಸ್ಸೂರಿನಲ್ಲಿರುವಾಗ, ಎಂದರೆ ತಮ್ಮ ಇಪ್ಪತ್ತನೆಯ ವಯಸ್ಸಿನಲ್ಲಿ, ಧೀನಬಂಧು ಮಿತ್ರ ಎಂಬವರ ಪರಿಚಯ ಆಯಿತು. ಅವರು ಬಂಗಾಲದ ಆಗಿನ ಶ್ರೇಷ್ಠ ನಾಟಕಕಾರರು. ಅವರ ಪರಿಚಯ, ಸ್ನೇಹ ಅತಿ ಗಾಢವಾಗಿ ಬೆಳೆಯಿತು. ಮುಂದೆ ತಮ್ಮ “ಆನಂದ ಮಠ” ಕಾದಂಬರಿಯನ್ನು ಸ್ವರ್ಗೀಯ ದೀನಬಂಧು ಮಿತ್ರ ನೆನಪಿಗೆ ಅರ್ಪಿಸಿದರು.

ಬರಹಗಾರ ಬಂಕಿಮಚಂದ್ರ

ಬಂಕಿಮಚಂದ್ರರು ಬಂಗಾಳದಲ್ಲಿ ಪ್ರಸಿದ್ಧ ಬರಹಗಾರರಾದರು. ಕಾದಂಬರಿಗಳನ್ನು ಬರೆದರು, ಕವನಗಳನ್ನು ಬರೆದರು, ಜನರು ಯಾವುದು ಸರಿ, ಯಾವುದು ತಪ್ಪು ಎಂದು ಯೋಚಿಸುವಂತೆ ಮಾಡುವ ಲೇಖನಗಳನ್ನು ಬರೆದರು. ಬಂಗಾಳದಾಚೆ ಸಹ ಅವರ ಕೀರ್ತಿ ಹಬ್ಬಿತು. ಅವರ ಕಾದಂಬರಿಗಳು ಬೇರೆ ಬೇರೆ ಭಾಷೆಗಳಿಗೆ ಭಾಷಾಂತರ ಆಗಿವೆ. ಅವರ ಕಾದಂಬರಿಗಳಲ್ಲಿ ಕೆಲವನ್ನು ನಾವು ಕನ್ನಡದಲ್ಲಿಯೆ ಓದಬಹುದು.

ಬಂಕಿಮರು ಇಷ್ಟು ದೊಡ್ಡ ಬರಹಗಾರರಾಗಿ ಆದದ್ದು ಹೇಗೆ?

ಅವರಿಗೆ ಸ್ವತಃ ಅಸಾಧಾರಣ ಬುದ್ಧಿಶಕ್ತಿ ಇತ್ತು. ಜೊತೆಗೆ ಇತರ ಒಳ್ಳೆಯ ಲೇಖಕರು ಬರೆದ ಪುಸ್ತಕಗಳನ್ನು ಆಸಕ್ತಿಯಿಂದ ಓದಿದರು. ಅಲ್ಲದೆ, ತಮ್ಮ ಹಿರಿಯರ ಆಶೀರ್ವಾದವೂ ಕಾರಣ ಎನ್ನುತ್ತಿದ್ದರು ಅವರು.

ಬಂಕಿಮರು ತಮ್ಮ ತಂದೆ ತಾಯಿಗಳನ್ನು ದೇವರಂತೆ ಪೂಜಿಸುತ್ತಿದ್ದರು.

ತಂದೆ ತಾಯಿಗಳು ಬದುಕಿರುವವರೆಗೂ ತಾವು ಎಲ್ಲಿಗಾದರೂ ಪ್ರವಾಸ ಹೊರಟರೆ ಅವರ ಪಾದಗಳನ್ನು ತೊಳೆದು ಆ ತೀರ್ಥವನ್ನು ಭಕ್ತಿಯಿಂದ ತೆಗೆದುಕೊಂಡು ಹೋಗುತ್ತಿದ್ದರಂತೆ. ಒಳ್ಳೆಯ ಸಂಪ್ರದಾಯವಂತ ಮನೆತನ ಇವರದು. ಚಿಕ್ಕಂದಿನಿಂದ ಮನೆಯಲ್ಲಿ ರಾಮಾಯಣ, ಮಹಾಭಾರತಗಳ ಕಥೆಗಳನ್ನು ಕೇಳುತ್ತಿದ್ದರು. ಇವು ಅವರ ಮೇಲೆ ಅಚ್ಚಳಿಯದ ಪರಿಣಾಮವನ್ನುಂಟು ಮಾಡಿರಬೇಕು.ಇದರೊಂದಿಗೆ ಬಂಕಿಮರು ಜೀವನದಲ್ಲಿ ಎಷ್ಟೋ ಕಷ್ಟ, ಸುಖ, ಬೇಸರ ಎಲ್ಲವನ್ನೂ ಅನುಭವಿಸಿದರು. ಇವೂ ಅವರು ಪುಸ್ತಕಗಳನ್ನು ಬರೆಯುವಾಗ ಅವರ ನೆನಪಿನಲ್ಲಿ ಇದ್ದಿರಬೇಕು. ವರ್ಷ ವರ್ಷ ಊರೂರಿಗೆ ತಿರುಗಬೇಕಾಯಿತು. ಬಂಕಿಮರು ಹಲವು ಬಗೆಯ ಅಧಿಕಾರ ಸ್ಥಾನಗಳಲ್ಲಿದ್ದರು. ಆದುದರಿಂದ ಅನೇಕ ಬಗೆಯ ಸ್ವಭಾವದ ಜನರನ್ನು ಕಂಡರು. ಒಳ್ಳೆಯವರು, ಕೆಟ್ಟವರು, ವಿನಯವಂತರು, ಅಹಂಕಾರಿಗಳು, ಬುದ್ಧಿವಂತರು, ದಡ್ಡರು ಎಲ್ಲರನ್ನೂ ಕಂಡರು. ಈ ಅನುಭವ ಅವರ ಕಾದಂಬರಿಗಳ ಪಾತ್ರಗಳಲ್ಲಿ ಪ್ರತಿಬಿಂಬಿತವಾಗುತ್ತಿತ್ತು. 

ಬಂಕಿಮರು ಭಗವದ್ಗೀತೆಯನ್ನು ಎತ್ತಿಕೊಂಡು, ಇದೇ ನನ್ನ ಔಷಧಿ ಎಂದರು

ಬಂಕಿಮರು ಬರೆಯಲು ಪ್ರಾರಂಭಿಸಿದ ಕಾಲದಲ್ಲಿ ಬಂಗಾಳದಲ್ಲಿ ಹೊಸ ಉತ್ಸಾಹ, ಚೇತನ ತುಳುಕಾಡುತ್ತಿದ್ದವು. ದೇಶದ ಸ್ಥಿತಿ ಉತ್ತಮವಾಗಬೇಕು, ನಮ್ಮ ದೋಷಗಳನ್ನು ತಿಳಿದುಕೊಂಡು ನಾವು ಅವುಗಳಿಂದ ಬಿಡಿಸಿಕೊಳ್ಳಬೇಕು – ಈ ರೀತಿ ಯೋಚನೆ ಮಾಡಿದವರು ಅನೇಕರು. ಹಲವರು ಇದಕ್ಕಾಗಿ ಕಷ್ಟಪಟ್ಟರು. ಹೊಸ ರೀತಿಯ ವಿದ್ಯಾಭ್ಯಾಸ ಬೇಕು, ಹೊರಗಿನ ದೇಶಗಳ ವಿಷಯ ತಿಳಿದುಕೊಳ್ಳಬೇಕು, ಕುರುಡು ನಂಬಿಕೆ ಹೋಗಬೇಕು ಎಂದು ರಾಜಾರಾಮ್ ಮೋಹನ ರಾಯ್ ಎಂಬ ಧೀರರು ಕೆಲಸ ಮಾಡಿದರು. ಈಶ್ವರಚಂದ್ರ ವಿದ್ಯಾಸಾಗರ ಎನ್ನುವ ಹಿರಿಯರು ಬಂಗಾಳಿ ಭಾಷೆ, ಸಮಾಜ ಇವು ಮುಂದಕ್ಕೆ ಬರಬೇಕು ಎಂದು ಕಷ್ಟಪಟ್ಟರು. ಇವರಂತೆ ಅನೇಕರು ಕೆಲಸ ಮಾಡಿದರು. ಹೀಗೇ ದೇಶಾಭಿಮಾನ ಬೆಳೆಯುತ್ತಿತ್ತು. ಜನರಲ್ಲಿ ಹೊಸ ಲವಲವಿಕೆ, ಉತ್ಸಾಹ ಕಾಣುತ್ತಿತ್ತು.

ಕಡೆಯ ಮೂರು ವರ್ಷ

ಹೀಗೆ ಬಂಕಿಮಚಂದ್ರರ ಕಾಲಕ್ಕೆ ಒಂದು ಸ್ಫೂರ್ತಿಪ್ರದ ವಾತಾವರಣವು ನಿರ್ಮಾಣಗೊಂಡಿತ್ತು. ಮೊದಮೊದಲು ಬಂಕಿಮರು ಕವನಗಳನ್ನು ಬರೆದರು. ಆಮೇಲೆ ಇಂಗ್ಲಿಷಿನಲ್ಲಿ ಒಂದು ಕಾದಂಬರಿಯನ್ನು ಬರೆದರು. ಆದರೆ ಮುಂದೆ ಬಂಗಾಳಿ ಭಾಷೆಯಲ್ಲಿ ಕಾದಂಬರಿ ರಚನೆಗೆ ತೊಡಗಿದರು. ತಮ್ಮ ಸೇವಾವಧಿಯಲ್ಲಿಯೆ ಬಂಕಿಮರು ಸಾಹಿತ್ಯ ಸೃಷ್ಟಿಗೆ ತೊಡಗಿದರು. ಸೇವೆಯ ಮಧ್ಯದಲ್ಲಿ ಒದಗಿದ ಕಿರುಕುಳಗಳಿಂದ ಅವರಿಗೆ ಬೇಸರವಾಯಿತು. ತಮ್ಮ ಗೌರವ, ಸ್ವಾತಂತ್ಯ್ರ ಇದಕ್ಕೆ ಅಡ್ಡಿ ಬರುತ್ತದೆ ಎನ್ನಿಸಿತು. ಕೆಲಸ ಬಿಟ್ಟು ನಿವೃತ್ತಿ ಹೊಂದಲು ಬಯಸಿದರು. ಆದರೆ ಆಗ ಅವರಿಗಿನ್ನೂ ೫೫ ವರ್ಷ. ಅವರ ಮೇಲಿನ ಅಧಿಕಾರಿಗಳಿಗೆ ಅವರಲ್ಲಿ ಬೇಸರ. ಆದುದರಿಂದ “ಕೆಲಸ ಬಿಡುತ್ತೇನೆ” ಎಂದರೆ ಅದಕ್ಕೂ ಅವಕಾಶ ಕೊಡಲಿಲ್ಲ. ಅನಂತರ ಚಾರ್ಲ್ಸ ಇಲಿಯಟ್ ಎನ್ನುವಾತ ಲೆಫ್ಟಿನೆಂಟ್ ಗವರ್ನರ್ ಆಗಿ ಬಂದ. ಬಂಕಿಮರು ಅವನಿಗೆ ತಾವು ಸಾಹಿತ್ಯ ರಚಿಸಬೇಕು, ಇದಕ್ಕೆ ಬಿಡುವು ಬೇಕು ಎಂದು ಹೇಳಿದರು. “ನಿವೃತ್ತನಾಗುತ್ತೇನೆ, ಒಪ್ಪಿಗೆ ಕೊಡಿ” ಎಂದು ಕೇಳಿದರು. ಆತ ಒಪ್ಪಿದ. ಬಂಕಿಮರಿಗೆ ತಿಂಗಳಿಗೆ ನಾಲ್ಕು ನೂರು ರೂಪಾಯಿ ನಿವೃತ್ತಿ ವೇತನ ದೊರಕಿತು.

ನಿವೃತ್ತರಾದ ಮೇಲೆ ಬೇಕಾದಷ್ಟು ಬರೆಯಬೇಕು ಎಂದು ಬಂಕಿಮರ ಆಸೆ. ಆದರೆ ಬಹುಕಾಲ ಬಹುಗಾತ್ರದ ಸಾಹಿತ್ಯ ರಚನೆಯನ್ನು ಕೈಕೊಳ್ಳಲು ಅವರಿಗೆ ಆಗಲೇಇಲ್ಲ. ಅವರ ಆರೋಗ್ಯವು ಬೇಗನೆ ಕುಸಿಯಿತು. ತಮ್ಮ ಐವತ್ತಾರನೇ ವಯಸ್ಸಿನಲ್ಲಿ (೧೮೯೪ ರಲ್ಲಿ) ಅವರು ಮರಣ ಹೊಂದಿದರು. ತಮ್ಮ ಕೊನೆಯ ದಿನಗಳಲ್ಲಿ ಬಂಕಿಮರು ಹೆಚ್ಚು ವೇದಾಂತಿಗಳಾದರು. ಜೀವನದಲ್ಲಿ ಅವರಿಗೆ ಹೆಚ್ಚು ಆಸಕ್ತಿ ಇರಲಿಲ್ಲ. ಅವರಿಗೆ ಕಾಯಿಲೆಯಾಗಿತ್ತು. ವೈದ್ಯರು ಔಷಧಿ ಕೊಟ್ಟರು. ಆದರೆ ಅವರು “ಔಷಧಿ ಬೇಡ” ಎಂದು ಬಿಟ್ಟರು. “ನೀವು ಔಷಧಿಯನ್ನು ತೆಗೆದುಕೊಳ್ಳದಿದ್ದರೆ ಹೆಚ್ಚು ಕಾಲ ಬದುಕುವುದಿಲ್ಲ; ನೀವೇ ಸಾವಿಗೆ ಬಾ ಎಂದು ಹೇಳಿದ ಹಾಗೆ ಆಗುತ್ತದೆ” ಎಂದು ವೈದ್ಯರು ಹೇಳಿದರು.

ಬಂಕಿಮರು, “ನಾನೆಲ್ಲಿ ಔಷಧಿಯನ್ನು ನಿರಾಕರಿಸಿದ್ದೇನೆ”? ನಾನು ಔಷಧಿಯನ್ನು ತೆಗೆದುಕೊಳ್ಳುತ್ತಲೇ ಇದ್ದೇನಲ್ಲ!” ಎಂದು ಉತ್ತರಿಸಿದರಂತೆ.

ವೈದ್ಯರಿಗೆ ಆಶ್ಚರ್ಯ. “ಎಲ್ಲೀ ತೋರಿಸಿ ನಿಮ್ಮ ಔಷಧಿಯನ್ನು” ಎಂದು ಕೇಳಿದರು.

ಬಂಕಿಮರು ತಮ್ಮ ಮಗ್ಗುಲೆಗೇ ಇದ್ದ ಭಗವದ್ಗೀತೆಯನ್ನು ಎತ್ತಿಕೊಂಡು, “ಇದೇ ನನ್ನ ಔಷಧಿ” ಎಂದರಂತೆ.

ಬರಬರುತ್ತಾ ಗೀತಾ ಪಾರಾಯಣವು ಅವರ ಮನೋವೃತ್ತಿಯನ್ನೇ ಬದಲಿಸಿಬಿಟ್ಟಿತು. ಕಾದಂಬರಿ ರಚನೆಯನ್ನು ಬಿಟ್ಟು ಅವರು ವೇದಾಂತ, ತತ್ವಜ್ಞಾನ, ದೇವರ ವಿಷಯ ಆಲೋಚನೆ ಇವುಗಳ ಕಡೆಗೆ ತಮ್ಮ ಲೇಖನಿಯನ್ನು ಹೊರಳಿಸಿದರು. ಭಗವಾನ್ ಶ್ರೀ ಕೃಷ್ಣನ ಚರಿತ್ರೆ, ಧರ್ಮ ವಿಚಾರವನ್ನು ಕುರಿತು ಗ್ರಂಥ, ಭಗವದ್ಗೀತೆಯ ಅನುವಾದ, ವೇದಗಳ ಅನುವಾದಗಳಿಗೆ ತೊಡಗಿದರು. ವೇದಗಳ ಅನುವಾದವನ್ನು ಮುಗಿಸಬೇಕು ಎಂದು ಅವರಿಗೆ ತುಂಬ ಬಯಕೆ ಇತ್ತು. ಆದರೆ ಅವರು ತಮ್ಮ ಜೀವಿತ ಕಾಲದಲ್ಲಿ ಅದನ್ನು ಪೂರೈಸಲು ಸಮರ್ಥರಾಗಲೇ ಇಲ್ಲ.

ರವೀಂದ್ರನಾಥರು ಒಂದು ಪ್ರಸಂಗವನ್ನು ವರ್ಣಿಸಿದ್ದಾರೆ. ಅದು ಬಂಕಿಮರ ಮನಸ್ಸು ಎಷ್ಟು ಸುಸಂಸ್ಕೃತವಾಗಿತ್ತು ಎನ್ನುವುದನ್ನು ತೋರಿಸುತ್ತದೆ.

ಒಂದು ಸಮಾರಂಭದಲ್ಲಿ ಅನೇಕರು ಮಾತನಾಡುತ್ತ ನಿಂತಿದ್ದರು. ಅವರಲ್ಲಿ ಒಬ್ಬರು ದೇಶಾಭಿಮಾನದ ವಿಷಯವಾಗಿ ತಾವು ಬರೆದಿದ್ದ ಸಂಸ್ಕೃತ ಶ್ಲೋಕಗಳನ್ನು ಓದಿ ವಿವರಿಸುತ್ತಿದ್ದರು. ಬಂಕಿಮರೂ ಅಲ್ಲೇ ನಿಂತಿದ್ದರು. ಓದುತ್ತಿದ್ದವರು, ಕಷ್ಟ ಸ್ಥಿತಿಯಲ್ಲಿದ್ದ ಭಾರತೀಯರನ್ನು ಹಾಸ್ಯ ಮಾಡಿ ಒಂದು ಮಾತನ್ನು ಹೇಳಿದರು. ಬಂಕಿಮರು ಮುಖವನ್ನು ಮುಚ್ಚಿಕೊಂಡು ಸರಸರನೆ ಅಲ್ಲಿಂದ ಹೊರಟು ಹೋದರಂತೆ.

ಬಂಕಿಮರಿಗೆ ರಾಮಕೃಷ್ಣ ಪರಮಹಂಸರ ಪರಿಚಯವಿತ್ತು. “ಬಂಕಿಮ” ಎಂದರೆ “ಬಾಗಿರುವದು” ಎಂದೂ ಒಂದು ಅರ್ಥ. ಒಮ್ಮೆ ರಾಮಕೃಷ್ಣರು ಹಾಸ್ಯವಾಗಿ, “ಯಾವುದು ನಿನ್ನನ್ನು ಬಗ್ಗಿಸಿತು?” ಎಂದು ಕೇಳಿದರು. ಬಂಕಿಮರು “ಬ್ರಿಟಿಷರ ಬೂಟಿನ ಹೊಡೆತ” ಎಂದರು. ಪರಮಹಂಸರು ಬಂಕಿಮರ ಚಾರಿತ್ರಿಕ ಕಾದಂಬರಿಗಳನ್ನು ಓದಿಸಿ ಕೇಳಿದರು. ವಿವೇಕಾನಂದರು ನರೇಂದ್ರನಾಥವಾಗಿದ್ದಾಗ ಅವರನ್ನು ಪರಮಹಂಸರು ಬಂಕಿಮರ ಬಳಿಗೆ ಕಳುಹಿಸಿದ್ದರು.

ಕಾದಂಬರಿಕಾರ ಬಂಕಿಮಚಂದ್ರ

“ಬಹು ದೊಡ್ಡ ಕಾಡು. ಕಾಡಿನಲ್ಲಿ ಅನೇಕ ಜಾತಿಗಳ ಮರಗಳು. ಮರಗಳ ಕೊಂಬೆಗಳೂ ಎಲೆಗಳೂ ದಟ್ಟವಾಗಿದ್ದುವು. ಹೆಣೆದುಕೊಂಡು ಬಿಟ್ಟಿದ್ದವು. ಸೂರ್ಯನ ಕಿರಣ ಮಧ್ಯೆ ಬರುವದಕ್ಕೂ ಸ್ಥಳವಿಲ್ಲ. ಕೊನೆಯೇ ಇಲ್ಲದ ಹಾಗೆ ಎಲೆಗಳೇ ಕಾಣುತ್ತಿದ್ದವು. ಕೆಳಗೆ ಏನೂ ಕಾಣದಷ್ಟು ಕತ್ತಲೆ, ಕಪ್ಪು ಕತ್ತಲೆ. ಮಧ್ಯಾಹ್ನದಲ್ಲಿಯೂ ಅಲ್ಲಿ ಎಲ್ಲೋ ಸ್ವಲ್ಪ ಬೆಳಕು. ಹೆದರಿಕೆಯಾಗುವ ಹಾಗಿದ್ದಿತು! ಅಲ್ಲಿ ಮನುಷ್ಯರು ಕಾಲಿಡುವದೇ ಕಷ್ಟ. ಎಲೆಗಳ ಮರ್ಮರ ಶಬ್ದ, ಕಾಡಿನ ಮೃಗಗಳು ಮತ್ತು ಪಕ್ಷಿಗಳ ಶಬ್ದ, ಇಷ್ಟಲ್ಲದೆ ಕಾಡಿನಲ್ಲಿ ಬೇರೆ ಯಾವ ಶಬ್ದವೂ ಇಲ್ಲ”.

ಕತ್ತಲು ತಂಬಿದ ಕಾಡು, ಮೈ ನಡುಗಿಸುವ ಕತ್ತಲೆ, ಶಬ್ದವೇ ಇಲ್ಲ; ಅರ್ಧ ರಾತ್ರಿಯಾಗಿದೆ. ಇಂತಹ ಸಮಯದಲ್ಲಿ ಒಬ್ಬ ಮನುಷ್ಯ ಧ್ವನಿ ಕೇಳಿಸುತ್ತದೆ.

“ನನ್ನ ಮನಸ್ಸಿನ ಇಷ್ಟ ಕೈಗೂಡುವುದಿಲ್ಲವೇ?”.

ಮತ್ತೇ ನಿಶ್ಯಬ್ದ.

ಮತ್ತೆ ಧ್ವನಿ ಕೇಳಿಸುತ್ತದೆ.

“ನನ್ನ ಮನಸ್ಸಿನ ಇಷ್ಟ ಕೈಗೂಡುವುದಿಲ್ಲವೇ?”.

ಮತ್ತೇ ನಿಶ್ಯಬ್ದ.

ಮತ್ತೆ ಧ್ವನಿ ಕೇಳಿಸುತ್ತದೆ.

“ನನ್ನ ಮನಸ್ಸಿನ ಇಷ್ಟ ಕೈಗೂಡುವುದಿಲ್ಲವೇ?”.

ಈಗ ಉತ್ತರ ಕೇಳಿಸುತ್ತದೆ. ಉತ್ತರವೂ ಒಂದು ಪ್ರಶ್ನೆಯೇ! ಅದೊಂದು ಸವಾಲು: “ಇದಕ್ಕೆ ಪ್ರತಿಯಾಗಿ ನೀನೇನು ಕೊಡಬಲ್ಲೆ?”

ಮೊದಲು ಮಾತನಾಡಿದವನು ಎನ್ನುತ್ತಾನೆ: “ನನ್ನದು ಎಂದು ಇರುವುದನ್ನೆಲ್ಲ ಕೊಟ್ಟುಬಿಡುತ್ತೇನೆ. ನನ್ನ ಪ್ರಾಣವನ್ನೇ ಕೊಡುತ್ತೇನೆ”.

ಮತ್ತೆ ಉತ್ತರ: “ಪ್ರಾಣ ಏನು ಮಹಾ? ಎಲ್ಲರೂ ಅದನ್ನು ಕೊಡಬಲ್ಲರು”.

“ಮತ್ತೇನಿದೆ? ಇನ್ನೇನು ಕೊಡಬೇಕು?”

ಅದಕ್ಕೆ ಉತ್ತರ: “ಭಕ್ತ”.

– ಎಷ್ಟು ಚೆನ್ನಾಗಿದೆ ಕಥೆ, ಅಲ್ಲವೇ? ಮಹಾ ಅರಣ್ಯದಲ್ಲಿ ಕಗ್ಗತ್ತಲಿಯಲ್ಲಿ, ಮೌನದಲ್ಲಿ, ಧ್ವನಿ ಕೇಳಿಸಿತು ಎಂದರೆ ಮೈ “ಜುಂ” ಎನ್ನುತ್ತದೆ. ಅದೂ ಎಂತಹ ಪ್ರಶ್ನೆ ಆ ಧ್ವನಿಯದು! ಅದಕ್ಕೆ ಎಂತಹ ಉತ್ತರ! ಮುಂದೆ ಓದಬೇಕು, ಓದಬೇಕು ಎನ್ನಿಸುತ್ತದೆ.

ಕಾದಂಬರಿ ವಿಚಾರ ಸಾಹಿತ್ಯ, ಪತ್ರಿಕೋದ್ಯಮ ಎಲ್ಲ ಕ್ಷೇತ್ರಗಳಲ್ಲಿ ಬಂಕಿಮರದು ಹಿರಿಯ ಸಾಧನೆ

“ವಂದೇ ಮಾತರಂ” ಹಾಡನ್ನು ಭಾರತಕ್ಕೆ ಕೊಟ್ಟ “ಆನಂದಮಠ”ದ ಹೆಸರನ್ನು ಆಗಲೆ ಕೇಳಿದೆವೆಲ್ಲ? ಆ ಕಾದಂಬರಿಯ ಪ್ರಾರಂಭ ಮೇಲೆ ಕೊಟ್ಟಿರುವುದು.

ಜನ ಆಸೆಯಿಂದ ಇದನ್ನು ಓದಿದರು ಎನ್ನುವುದರಲ್ಲಿ ಆಶ್ಚರ್ಯವೇನು?

ಬಂಕಿಮರೇ ಪ್ರಾರಂಭ ಮಾಡಿದ “ವಂಗದರ್ಶನ” ಎನ್ನುವ ಪತ್ರಿಕೆ ತಿಂಗಳಿಗೆ ಒಂದು ಬಾರಿ ಬರುತ್ತಿತ್ತು. ಅದರಲ್ಲಿ ತಿಂಗಳಿಗೆ ಕೆಲವು ಪುಟಗಳ ಹಾಗೆ ಈ ಕಾದಂಬರಿ ಪ್ರಕಟವಾಯಿತು. ೧೮೮೨ ರಲ್ಲಿ ಇದು ಪುಸ್ತಕವಾಗಿ ಹೊರಕ್ಕೆ ಬಂದಿತು. ಅಷ್ಟೂ ಪ್ರತಿಗಳೂ ಮುಗಿದುಹೋದವು ಮತ್ತೆ ಅಚ್ಚು ಮಾಡಬೇಕಾಯಿತು. ಮತ್ತೆ ಪ್ರತಿಗಳು ಮುಗಿದು ಹೋದವು. ಹೀಗೆ ಹತ್ತು ವರ್ಷಗಳಲ್ಲಿ – ಬಂಕಿಮರು ತೀರಿಕೊಳ್ಳುವ ಮೊದಲು – ಐದು ಬಾರಿ ಮುದ್ರಣವಾಯಿತು!

ಬಂಕಿಮರ ಕಾದಂಬರಿಗಳು ಹೊಚ್ಚ ಹೊಸ ಬಗೆಯ ಬರಹ ಎನ್ನಿಸಿತು ಜನಕ್ಕೆ. ಬಂಗಾಳದ ಜನ ಅವರ ಕಾದಂಬರಿಗಳಿಗೆ ಮನಸೋತರು. ಅವು ನಮ್ಮ ದೇಶದ ಬೇರೆ ಭಾಷೆಗಳಿಗೆ ಭಾಷಾಂತರವಾದಾಗ ಆ ಭಾಷೆಗಳ ಜನರೂ ಹಾಗೆಯೇ ಮನಸೋತರು.

ಹೀಗೆ ಬಂಕಿಮರ ಹೆಸರು ಬಂಗಾಳಕ್ಕೆ ಒಂದು ಬಂಗಾರದ ಕಾಣಿಕೆ ಎನ್ನುವ ಹಾಗೆ ಆದದ್ದೂ ಅವರ ಕಾದಂಬರಿಗಳಿಂದ.

ಕಥೆಗಾರ ಕಥೆ ಬರೆಯುತ್ತಾನೆ. ಹೇಗೆ ಬರೆಯಬೇಕು? ಜನರ ಆಡುವ ಭಾಷೆಯಲ್ಲಿ, ಅವರಿಗೆ ಅರ್ಥವಾಗುವ ಭಾಷೆಯಲ್ಲಿ ಬರೆಯಬೇಕು ಎಂದು ಬಂಕಿಮರಿಗೆ ಎನ್ನಿಸಿತು. ಹಾಗೆಯೇ ಬರೆದರು. ಅವರು ಜನರು ಆಡುವ ಭಾಷೆಯಲ್ಲೆ ಬರೆದರೂ ಅವರ ಬರಹ ಮನಸ್ಸನ್ನು ಸೆಳೆಯುವ ಹಾಗಿತ್ತು. ಬಂಗಾಳಿ ಭಾಷೆಗೆ ಹೊಸ ಗೌರವ ಬರುವಹಾಗಾಯಿತು.

ಒಟ್ಟು ಹದಿನಾಲ್ಕು ಕಾದಂಬರಿಗಳನ್ನು ಬರೆದರು ಅವರು. ಕಥೆ ಬಹು ಚೆನ್ನಾಗಿರುವ ಕಾದಂಬರಿಗಳು ಕೆಲವು – “ದುರ್ಗೇಶ ನಂದಿನೀ”, “ಕಪಾಲ ಕುಂಡಲಾ”, “ಮೃಣಾಲಿನೀ”, “ಚಂದ್ರಶೇಖರ” ಮತ್ತು “ರಾಜಹಂಸ”. ನಮ್ಮ ದೇಶದ ಚರಿತ್ರೆಯಲ್ಲಿ ವಿಷಯಗಳನ್ನು ತೆಗೆದುಕೊಂಡು ಕಾದಂಬರಿಗಳನ್ನಉ ಬರೆದರು – “ಆನಂದಮಠ”, ದೇವಿ ಚೌಧುರಾಣೀ”, “ಸೀತಾರಾಮ”. ತಮ್ಮ ಸುತ್ತಮುತ್ತಲಿನ ಜನರ ಜೀವನವನ್ನು ನೋಡುತ್ತಿದ್ದ ಬಂಕಿಮರು, ಸಮಾಜದಲ್ಲಿ ಏನು ತಪ್ಪು, ಏನು ಸರಿ ಎಂದು ಯೋಚಿಸುತ್ತಿದ್ದರು. ಸಮಾಜದ ರೀತಿಯನ್ನು ಕುರಿತು ಬರೆದ ಕಾದಂಬರಿಗಳು “ವಿಷವೃಕ್ಷ”, ಇಂದಿರಾ “ರಾಧಾರಣೀ”, “ಯುಗಳಾಂಗುರೀಯಂ”, “ರಜನೀ”, “ಕೃಷ್ಣ ಕಾಂತನ ಉಯಿಲು”.

ಆನಂದ ಮಠ

ಬಂಕಿಮರ ಕಾದಂಬರಿ ಎಂದರೆ ಜನ ಬಾಯಿ ತೆರೆದು ಕುಳಿತಿರುತ್ತಿದ್ದರು. “ವಂಗದರ್ಶನ”ದ ಒಂದು ತಿಂಗಳ ಸಂಚಿಕೆಯಲ್ಲಿ ಕಥೆಯ ಸ್ವಲ್ಪ ಭಾಗವನ್ನು ಓದುವರು, ಮುಂದಿನ ತಿಂಗಳು ಬಂದೀತೇ, ಕಥೆಯ ಮುಂದಿನ ಭಾಗವನ್ನು ಓದಿಯೇವೆ ಎಂದು ತವಕದಿಂದ ಕಾಯುವರು. ಅವರ ಕಾದಂಬರಿ ಎಷ್ಟು ಆಸಕ್ತಿಯನ್ನು ಹುಟ್ಟಿಸುತ್ತಿತ್ತು, ಮುಂದೇನಾಯಿತು ಮುಂದೇನಾಯಿತು ಎಂದು ತಿಳಿಯಬೇಕೆನ್ನುವ ಆಸೆಯನ್ನು ಬೆಳೆಸುತ್ತಿತ್ತು ಎನ್ನುವದನ್ನು “ಆನಂದ ಮಠ” ದ ಪ್ರಾರಂಭದಿಂದ ನೋಡಿದ್ದೇವೆ. ಮತ್ತೆ ಆ ಭಾಗ ಓದಿ. ಮುಂದೇನಾಯಿತು ಎನ್ನುವ ಕುತೂಹಲ ಹೆಚ್ಚುತ್ತದೆ. ಕಾಡಿನ ವರ್ಣನೆ ಎಷ್ಟು ಚೆನ್ನಾಗಿದೆ, ಅಲ್ಲವೆ? ಅಷ್ಟೇ ಅಲ್ಲ. ಮತ್ತೆ ಓದಿ ನೋಡಿ. ಕತ್ತಲೆಯಲ್ಲಿ, ಮನುಷ್ಯರ ಧ್ವನಿಯೇ ಕೇಳದಿದ್ದಾಗ ಒಬ್ಬನ ಕೂಗು ಕೇಳುತ್ತದೆ. “ಆನಂದ ಮಠ”ದ ಕಥೆ ೧೭೭೩ ರಲ್ಲಿ ಬಂಗಳದಲ್ಲಿ ನಡೆದ ಸ್ವಾತಂತ್ಯ್ರ ಹೋರಾಟದ ಕಥೆ. ಬಂಗಾಳದಲ್ಲಿ ಭಯಂಕರ ಕ್ಷಾಮ. ಆಳುವವರಿಗೆ ಈ ದೇಶದ ಜನರ ಕಷ್ಟದ ಯೋಚನೆ ಇಲ್ಲ. ಹೇಳುವವರಿಲ್ಲ. ಕೇಳುವವರಿಲ್ಲ. ಜನಕ್ಕೆ ಬಿಳಿಯರನ್ನು ಕಂಡರೆ ಹೆದರಿಕೆ. ಹೀಗೆ ಬಂಗಾಳದ ಜೀವನದಲ್ಲಿ ಕತ್ತಲೇ ತುಂಬಿದೆ, ಯಾರಿಗೂ ಮಾತನಾಡುವ ಧೈರ್ಯ ಇಲ್ಲ. ಇಂತಹ ಕಾಲದಲ್ಲಿ ಒಬ್ಬ ಮಹಾನುಭಾವ, ಸತ್ಯಾನಂದ ಎನ್ನುವವನು, ತಾಯಿಯ ಕಷ್ಟವನ್ನು ಕೊನೆಗಾನಿಸಬೇಕು ಎಂದು ಹಂಬಲಿಸುತ್ತಾನೆ. ನಾಡೇ ಕಾಡಾಗಿದ್ದ ಕಾಲದಲ್ಲಿ ಒಬ್ಬನ ಹಂಬಲದ ಧ್ವನಿ ಕೇಳುತ್ತದೆ: “ನನ್ನ ಮನಸ್ಸಿನ ಇಷ್ಟ ಕೈಗೂಡುವುದಿಲ್ಲವೆ?”

ಎಷ್ಟು ಅರ್ಥವಿದೆ ಬಂಕಿಮರ ವರ್ಣನೆಯಲ್ಲಿ!

“ಆನಂದ ಮಠ” ದ ಕಥೆಯು ಬಂಗಾಳದಲ್ಲಿ ಉಂಟಾದ ಭಾರಿ ಬರಗಾಲದ ವರ್ಣನೆಯಿಂದ ಪ್ರಾರಂಭವಾಗುತ್ತದೆ. ಪದಚಿಹ್ನೆ ಎಂಬ ಗ್ರಾಮ. ಅಲ್ಲಿ ಮಹೇಂದ್ರ ಎಂಬ ಶ್ರೀಮಂತ. ಅವನ ಹೆಂಡತಿ ಕಲ್ಯಾಣಿ. ಅವರಿಗೆ ಒಂದು ಮಗು. ಆ ಬರಗಾಲವನ್ನು ಸಹಿಸದೆ ಅವರು ಹೊರಡುತ್ತಾರೆ. ಕಾಡಿನಲ್ಲಿ ಬೇರೆ ಬೇರೆ ಆಗಿಬಿಡುತ್ತಾರೆ. ಕಲ್ಯಾಣಿಯೂ ಅವಳ ಮಗುವೂ ಕ್ಷಾಮದಿಂದ ಕಂಗೆಟ್ಟವರ ಕೈಗೆ ಸಿಕ್ಕಿ ಬೀಳುತ್ತಾರೆ. ಹೇಗೋ ತಪ್ಪಿಸಿಕೊಳ್ಳುತ್ತಾರೆ. ಸಂತಾನರು ಎಂಬ ಸನ್ಯಾಸಿಗಳ ಮುಖ್ಯಸ್ಥ ಸತ್ಯಾನಂದ. ಕಲ್ಯಾಣಿಯೂ ಮಗುವೂ ಅವನ ಹತ್ತಿರ ಆಶ್ರಯ ಪಡೆಯುತ್ತಾರೆ. ಕಲ್ಯಾಣಿ ಮಹೇಂದ್ರನ ಹೆಂಡತಿ ಎಂದು ಸತ್ಯಾನಂದನಿಗೆ ಗೊತ್ತಾಗುತ್ತದೆ. ಅವನು ಮಹೇಂದ್ರನನ್ನು ಹುಡುಕಲು ಭವಾನಂದ ಎಂಬ ಸನ್ಯಾಸಿಯನ್ನು ಕಳುಹಿಸುತ್ತಾನೆ. ಭವಾನಂದ ಮಹೇಂದ್ರನನ್ನು ಕಾಣುತ್ತಾನೆ. ಆದರೆ ಇಬ್ಬರೂ ಬ್ರಿಟಿಷ್ ಕಂಪನಿಯ ಸರ್ಕಾರದ ಸಿಪಾಯಿಗಳ ಕೈಗೆ ಸಿಕ್ಕಿಕೊಳ್ಳುತ್ತಾರೆ. ಅವರಿಬ್ಬರನ್ನೂ ಸಿಪಾಯಿಗಳು ಹಗ್ಗದಿಂದ ಕಟ್ಟಿಹಾಕುತ್ತಾರೆ. ಹಣ ಸಾಗಿಸುವ ಎತ್ತಿನ ಗಾಡಿಯಲ್ಲಿ ಹಾಕಿಕೊಂಡು ಹೊರಡುತ್ತಾರೆ. ಅವರು ಉಪಾಯದಿಂದ ಹಗ್ಗವನ್ನು ಕತ್ತರಿಸಿಕೊಂಡು ಓಡಿಬಿಡುತ್ತಾರೆ. ಆಮೇಲೆ ಸನ್ಯಾಸಿ ಪಡೆಯವರು ಗಾಡಿಯ ಮೇಲೆ ಬಿದ್ದು ಹಣದ ಪೆಟ್ಟಿಗೆಗಳನ್ನು ಹೇರಿಕೊಂಡು ನಡೆಯುತ್ತಾರೆ.

ಮಹೇಂದ್ರ ಹೆಂಡತಿ ಮಕ್ಕಳನ್ನೇನೂ ಕೂಡಿಕೊಳ್ಳುತ್ತಾನೆ. ಹೆಂಡತಿಯ ಒಪ್ಪಿಗೆ ಪಡೆದು ತಾನೂ ಸಂತಾನರನ್ನು ಸೇರುತ್ತಾನೆ. ಅವರ ಜೊತೆಯಲ್ಲಿ ದೇಶದ ಸ್ವಾತಂತ್ಯ್ರಕ್ಕಾಗಿ ಹೋರಾಡಬೇಕು ಎಂದು ಆಸೆ ಅವನಿಗೆ. ಕಲ್ಯಾಣಿ ಹೊಳೆಯ ಪಾಲಾಗುತ್ತಾಳೆ. ಜೀವಾನಂದ ಎಂಬ ಸನ್ಯಾಸಿ ಅವಳನ್ನು ಉಳಿಸುತ್ತಾನೆ. ಅವನ ತಂಗಿ ಮತ್ತು ಭವಾನಂದನ ಹೆಂಡತಿ ಶಾಂತಿ ಇವರ ಹತ್ತಿರ ಕಲ್ಯಾಣಿಯನ್ನು ಬಿಡುತ್ತಾನೆ.

ಕ್ಷಾಮ ಇನ್ನೂ ಭಯಂಕರವಾಗುತ್ತದೆ. ಊರೆಲ್ಲ ಕಾಡೇ. ಕಾಡಿನ ಮೃಗಗಳ ಹಾವಳಿ, ಕಳ್ಳಕಾಕರ ಭಯ. ಆಗ ಭಾರತದಲ್ಲಿ ಇಂಗ್ಲೀಷರ ಮುಖ್ಯ ಅಧಿಕಾರಿ ವಾರನ್ ಹೆಸ್ಟಿಂಗ್ಸ್. ಅವನು ಗವರ್ನರ್ ಜನರಲ್. ಸಂತಾನರ ಹೋರಾಟವನ್ನು ಅಡಗಿಸಲು ಅವನು ಕ್ಯಾಪ್ಟನ್ ಥಾಮಸ್ ಎನ್ನುವವನನ್ನು ನೇಮಿಸುತ್ತಾನೆ. ಥಾಮಸನು ಸೋತು “ವಂದೇ ಮಾತರಂ” ಗೀತೆ ಹೇಳುತ್ತ ವೀರಮರಣ ಹೊಂದುತ್ತಾನೆ. 

ಭವಾನಂದನು ಮಹೇಂದ್ರನಿಗೆ ಜನ್ಮಭೂಮಿಯೇ ನಮ್ಮ ತಾಯಿ ಎಂದು ಹೇಳಿದ (ಆನಂದಮಠ)

ಸತ್ಯಾನಂದ ಜಯ ಪಡೆದು ಆನಂದಮಠಕ್ಕೆ ಬರುತ್ತಾನೆ. ಆಗ ಅಲ್ಲಿಗೆ ಒಬ್ಬ ಮಹಾಪುರುಷ ಬರುತ್ತಾನೆ. ಮುಂದೆ ಆಗುವುದನ್ನು ತಿಳಿಸುತ್ತಾನೆ. “ಮುಸಲ್ಮಾನ ರಾಜರು ಇನ್ನು ಇಲ್ಲವಾದರು. ಜನ ಸತ್ತದ್ದು ಸಾಕು, ಯುದ್ಧ ನಿಲ್ಲಿಸು. ಇಂಗ್ಲಿಷರು ರಾಜರಾಗಿ ಉಳಿಯುತ್ತಾರೆ. ಈಗ ಅವರನ್ನು ಸೋಲಿಸುವ ಹಾಗಿಲ್ಲ. ಎಷ್ಟು ದಿನ ಹಿಂದುಗಳು ಜ್ಞಾನಿಗಳಾಗುವುದಿಲ್ಲವೋ, ಗುಣಾಢ್ಯರಾಗುವುದಿಲ್ಲವೋ, ಬಲಿಷ್ಠರಾಗುವುದಿಲ್ಲವೋ, ಅಷ್ಟು ದಿನ ಇಂಗ್ಲಿಷರ ರಾಜ್ಯ ಇಲ್ಲಿರುತ್ತದೆ” ಎಂದು ಹೇಳುತ್ತಾನೆ. ಸತ್ಯಾನಂದನಿಗೆ ಇನ್ನೂ ಕೋಪವೆ, ಸಂಕಟವೆ, ಇಂಗ್ಲಿಷರ ರಾಜ್ಯವಿರುವುದೂ ಅವನಿಗೆ ಬೇಕಿಲ್ಲ.

ಇಲ್ಲಿಗೆ ಕಥೆ ಮುಗಿಯುತ್ತದೆ.

ಕಥೆಯೇ ಸ್ವಾರಸ್ಯಮಯವಾಗಿದೆ. ಇಲ್ಲಿನ ಜನರ ಕಷ್ಟ, ಸುಖ, ಏಳು, ಬೀಳು ನೋಡುವಾಗ, “ಮುಂದೇನಾಗುವುದೋ” ಎಂದು ತವಕ ಆಗುತ್ತದೆ. ಅದರ ಜೊತೆಗೆ ಇಲ್ಲಿನ ಜನರೂ ದೇವಾನುದೇವತೆಗಳಲ್ಲ, ನಮ್ಮಂತಹವರೇ, ಜನ ಸಾಮಾನ್ಯರೇ. ಸಂತಾನರಾದವರೂ ಸಾಮಾನ್ಯ ಜನರಾಗಿದ್ದು, ತಾಯಿಯ ಸೇವೆಗಾಗಿ ವೃತ ಹಿಡಿದವರೇ. ಇದರಿಂದ ಕಥೆಯನ್ನು ನಾವು ಬಹು ಆಸಕ್ತಿಯಿಂದ ಓದುವ ಹಾಗಿ ಆಗುತ್ತದೆ.

ಆದರೆ ಮುಖ್ಯವಾಗಿ ಇದು ದೇಶಾಭಿಮಾನದ ಕಥೆ. ತಾಯಿಗಾಗಿ ಬದುಕಿ ತಾಯಿಗಾಗಿ ಸಾಯಲು ಸಿದ್ಧರಾದವರ ಕಥೆ. ಈ ಹೋರಾಟದಲ್ಲಿ ಸನ್ಯಾಸಿನಿಯರ ಪಾತ್ರ ಕೂಡ ಮೆಚ್ಚುವ ಹಾಗಿದೆ. ಜೀವಾನಂದನ ಹೆಂಡತಿ ಶಾಂತಿ ಇಂತಹ ಒಬ್ಬ ವೀರ ಸನ್ಯಾಸಿನಿ. ಅಗತ್ಯ ಬಿದ್ದಾಗ ಗಡ್ಡಮೀಸೆ ಧರಿಸುತ್ತಾಳೆ, ಗಂಡಸಿನಂತೆ ವೇಷ ಧರಿಸುತ್ತಾಳೆ, ಶತ್ರುಗಳ ಮಧ್ಯೆ ಓಡಾಡುತ್ತಾಳೆ. ಬಿಳಿಯು ಸೈನ್ಯದ ಅಧಿಕಾರಿಗಳನ್ನು ಮರುಳು ಮಾಡುತ್ತಾಳೆ. ಅವರ ಸುದ್ದಿಯನ್ನೆಲ್ಲ ಸತ್ಯಾನಂದನಿಗೆ ತಿಳಿಸುತ್ತಾಳೆ.

ಭವಾನಂದ ಮಹೇಂದ್ರನಿಗೆ ಹೇಳುತ್ತಾನೆ: “ನಾವು ಬೇರೆ ಮಾತೆಯನ್ನು ಒಪ್ಪುವುದಿಲ್ಲ. ಜನ್ಮ ಭೂಮಿಯೇ ನಮ್ಮ ತಾಯಿ; ನಮಗೆ ಬೇರೆ ತಾಯಿಯಿಲ್ಲ, ತಂದೆಯಿಲ್ಲ, ಹೆಂಡತಿಯಿಲ್ಲ, ಮಕ್ಕಳೀಲ್ಲ, ಮನೆಯಿಲ್ಲ, ಸಂಸಾರವಿಲ್ಲ; ನಮಗೆ ಇರುವುದು ಕೇವಲ ಸುಜಲಾ, ಸುಫಲಾ, ಮಲಯದಶೀತಲಾ”.

ಸಂತಾನರಾಗಿ ದೇಶದ ಸ್ವಾತಂತ್ಯ್ರಕ್ಕೆ ಹೋರಾಡುತ್ತೇವೆ ಎನ್ನುವವರು ತಾಯಿಯ ಸನ್ನಿಧಿಯಲ್ಲಿ ಪ್ರತಿಜ್ಞೆ ಮಾಡಬೇಕು. ಅಂತಹವರನ್ನು ಸತ್ಯಾನಂದ ಪ್ರಶ್ನಿಸುತ್ತಾನೆ, ಅವರು ಉತ್ತರ ಹೇಳುತ್ತಾರೆ. ಈ ಭಾಗ ಮನಸ್ಸನ್ನು ಇಂದಿಗೂ ಶುದ್ಧ ಗೊಳಿಸುತ್ತದೆ.

“ತಾಯಿನಾಡಿನ ಉದ್ಧಾರ ಆಗುವವರೆಗೆ ಮನೆ ಬಿಡುವಿರಾ?”.

“ಬಿಟ್ಟುವಿಡುತ್ತೇವೆ”.

“ತಾಯಿ ತಂದೆ, ಅಣ್ಣ, ತಮ್ಮ, ಅಕ್ಕ ತಂಗಿಯರನ್ನು ಬಿಡುತ್ತೀರ?”

“ಬಿಡುತ್ತೇವೆ”.
“ಹೆಂಡತಿ, ಮಕ್ಕಳು?”.

“ಬಿಡುತ್ತೇವೆ”.

“ಹಣ, ಸುಖ ಎಲ್ಲವನ್ನೂ?”

“ಎಲ್ಲವನ್ನೂ ಬಿಡುತ್ತೇವೆ”.

“ಯುದ್ಧ ರಂಗದಲ್ಲಿ ಹಿಂದಕ್ಕೆ ಓಡುವುದಿಲ್ಲವೆ?”

“ನೀವು ಜಾತಿಯನ್ನು ಬಿಡುತ್ತೇರ? ಸಂತಾನರೆಲ್ಲ ಒಂದೇ ಜಾತಿ. ಈ ಮಹಾವ್ರತದಲ್ಲಿ ಬ್ರಾಹ್ಮಣ ಶೂದ್ರ ಎಂಬ ವ್ಯತ್ಯಾಸವಿಲ್ಲ. ಏನು ಹೇಳೂತ್ತೀರಿ?”

“ನಾವು ಆ ವ್ಯತ್ಯಾಸವನ್ನು ನೋಡುವುದಿಲ್ಲ. ನಾವೆಲ್ಲ ಒಬ್ಬ ತಾಯಿಯ ಮಕ್ಕಳು”.

“ಹಾಗಾದರೆ ನಿಮಗೆ ದೀಕ್ಷೆ ಕೊಡುತ್ತೇನೆ”.

ಇವತ್ತಿಗೂ ನಮ್ಮ ದೇಶ ಮುಂದಕ್ಕೆ ಬರಬೇಕಾದರೆ ಇದೇ “ಸಂತಾನವ್ರತ” ಬಿಟ್ಟು ಬೇರೆ ದಾರಿಯೇ ಇಲ್ಲ. ಅಲ್ಲವೆ?

ಈ ಕಾದಂಬರಿ ಸಂಪೂರ್ಣವಾಗಿ ಚರಿತ್ರೆಯಿಂದ ತೆಗೆದುಕೊಂಡ ಸಂಗತಿಗಳನ್ನೆ ಹೇಳುವುದಿಲ್ಲ. ಆನಂದಮಠ ಎನ್ನುವ ಸಂಸ್ಥೆಯೇ ಇರಲಿಲ್ಲ. ಚರಿತ್ರೆಯ ಕೆಲವು ಸಂಗತಿಗಳನ್ನು ಬಂಕಿಮರು ಉಪಯೋಗಿಸಿಕೊಂಡರು, ಹಲವು ಪಾತ್ರಗಳನ್ನು ಸೃಷ್ಟಿಸಿದರು. ನಾನು, ನನ್ನದು, ನನಗೆ ಇದು ಬೇಕು – ಅದು ಬೇಕು ಎನ್ನುವ ಸಣ್ಣತನದಿಂದ ಓದುಗರ ಮನಸ್ಸು ತಪ್ಪಿಸಿಕೊಳ್ಳುವಂತೆ ಮಾಡುವ ಕಾದಂಬರಿಯನ್ನು ಕೊಟ್ಟು; ದೇಶಕ್ಕಾಗಿ ಎಲ್ಲವನ್ನೂ ಅರ್ಪಿಸಿ ದೇಶಕ್ಕಾಗಿಯೆ ಬದುಕುವ ಪಾತ್ರಗಳನ್ನು ಮರೆಯಲು ಸಾಧ್ಯವೇ ಆಗದಂತೆ ಚಿತ್ರಿಸಿದರು. “ವಂದೇ ಮಾತರಂ” ಮಂತ್ರವನ್ನು ಭಾರತದ ಜನಕ್ಕೆ ಉಪದೇಶಿಸಿದರು.

ಇನ್ನೆರಡು ಕಾದಂಬರಿಗಳು

ಬಂಕಿಮರು ಬರೆದ ಕಾದಂಬರಿಗಳಲ್ಲಿ ಬಹಳ ಪ್ರಸಿದ್ಧವಾದದ್ದು “ಆನಂದಮಥ”. ಇದಲ್ಲದೆ ಅವರ ಇನ್ನೂ ಅನೇಕ ಕಾದಂಬರಿಗಳನ್ನು ಬಹು ಜನ ಸಂತೋಷದಿಂದ ಓದಿದರು. ಇವುಗಳಲ್ಲಿ ಒಂದು “ದುರ್ಗೇಶ ನಂದಿನೀ”.

ಮಂದಾರಣ ಎನ್ನುವುದು ಒಂದು ದುರ್ಗ. ಅದರ ಅಧಿಪತಿ ವೀರೇಂದ್ರಸಿಂಹ. ಇವನೇ ದುರ್ಗೇಶ ನಂದಿನೀ. ಇವನ ಮಗಳು ತಿಲೋತ್ತಮೆ; ಅವಳೇ ಕಾದಂಬರಿಯ ನಾಯಕಿ. ಕಾದಂಬರಿಯ ನಾಯಕ ಜಗತ್ಸಿಂಹ ಎನ್ನುವವನು. ಅವನ ತಂದೆ ಮಾನಸಿಂಹ. ಮಾನಸಿಂಹ ರಜಪೂತ. ಆದರೆ ಅಕ್ಬರನ ಸೈನ್ಯದಲ್ಲಿ ಅಧಿಕಾರಿ! ಜಗತ್ಸಿಂಹನು ಮಂದಾರಣ ದುರ್ಗದ ಹತ್ತಿರ ತಿಲೋತ್ತಮೆಯನ್ನು ನೋಡುತ್ತಾನೆ. ಅವಳನ್ನು ಮದುವೆಯಾಗಬೇಕೆಂದು ಅವನ ಮನಸ್ಸು. ಆದರೆ ವೀರೆಂದ್ರಸಿಂಹ ಅವನ ಶತ್ರು. ಶತ್ರುವಿನ ಮಗಳನ್ನು ಮದುವೆಯಾಗುವುದು ಹೇಗೆ? ಏನೇನೋ ವಿಘ್ನಗಳು, ಅಪಾಯಗಳು, ಮೋಸಗಳು. ಇಷ್ಟರ ನಡುವೆ ಆಯೇಷೆ ಎಂಬ ಹುಡುಗಿ ಬರುತ್ತಾಳೆ; ಅವಳು ಇತರರಿಗಾಗಿ ತನ್ನ ಸುಖವನ್ನೇ ಬಿಟ್ಟುಕೊಡುತ್ತಾಳೆ; ಅಷ್ಟು ತ್ಯಾಗಮಯಿ. ಕೊನೆಯಲ್ಲಿ ಮಂದಾರಣ ದುರ್ಗದಲ್ಲಿ ಜಗತ್ಸಿಂಹನಿಗೂ ತಿಲೋತ್ತಮೆಗೂ ಮದುವೆಯಾಗುತ್ತದೆ.

ಈ ಕಾದಂಬರಿ ೧೮೬೫ ರಲ್ಲಿ ಪ್ರಕಟವಾಯಿತು. ಇಪ್ಪತ್ತೆಂಟು ವರ್ಷಗಳಲ್ಲಿ ಹದಿಮೂರು ಬಾರಿ ಅಚ್ಚಾಯಿತು. ಅಷ್ಟೊಂದು ಜನರಿಗೆ ಹಿಡಿಸಿತು ಆ ಪುಸ್ತಕ.

ತಮ್ಮ ಸುತ್ತಮುತ್ತಲಿನ ಸಮಾಜವನ್ನು ಕುರಿತೂ ಬಂಕಿಮರು ಕಾದಂಬರಿಗಳನ್ನು ಬರೆದರು ಎಂದು ಆಗಲೇ ಹೇಳಿದೆ. ಇಂತಹ ಕಾದಂಬರಿಗಳಲ್ಲಿ ಒಂದು “ವಿಷವೃಕ್ಷ” ಇದೇ ಬಂಕಿಮರ ಮೊದಲನೆಯ ಸಾಮಾಜಿಕ ಕಾದಂಬರಿ.

ಹರಿಪುರ ಜಿಲ್ಲೆಯಲ್ಲಿ ಗೋವಿಂದಪುರ ಎನ್ನುವ ಗ್ರಾಮ. ಅಲ್ಲಿ ನಗೇಂದ್ರ ಐಶ್ವರ್ಯವಂತ ಜಮೀನುದಾರ. ಅವನು ಆಕಸ್ಮಾತಾಗಿ ಕುಂದನಂದಿನಿ ಎನ್ನುವ ತರುಣಿಯನ್ನು ಭೇಟಿಮಾಡುತ್ತಾನೆ. ಅವಳು ಅನಾಥೆ. ಅವಳ ಯೋಗಕ್ಷೇಮದ ಹೊಣೆಯನ್ನೆಲ್ಲ ತೆಗೆದುಕೊಳ್ಳುತ್ತಾನೆ. ಅವಳನ್ನು ತಾರಾಚರಣ ಎಂಬಾತನಿಗೆ ಕೊಟ್ಟು ಮದುವೆ ಮಾಡುತ್ತಾನೆ. ಆದರೆ ಮೂರು ವರ್ಷಗಳಲ್ಲಿ ತಾರಾಚರಣ ಸಾಯುತ್ತಾನೆ, ಮತ್ತೆ ನಗೇಂದ್ರನೇ ಅವಳ ಯೋಗಕ್ಷೇಮವನ್ನು ನೋಡಿಕೊಳ್ಳಬೇಕಾಗುತ್ತದೆ. ಹೀರೆ ಎಂಬುವಳು ಹೊಟ್ಟೆಕಿಚ್ಚಿನಿಂದ ಕುತಂತ್ರಗಳನ್ನು ಮಾಡುತ್ತಾಳೆ. ನಗೇಂದ್ರ, ಕುಂದನಂದಿನಿ, ನಗೇಂದ್ರನ ಹೆಂಡತಿ ಸೂರ್ಯಮುಖಿ ಎಲ್ಲರೂ ಕಷ್ಟ ಪಡಬೇಕಾಗುತ್ತದೆ. ಸೂರ್ಯಮುಖಿ ತುಂಬ ದುಃಖದಲ್ಲಿ ಸಾಯುತ್ತಾಳೆ.

ವಿಷವೃಕ್ಷ ಎಂದರೆ ವಿಷದ ಮರ. ಈ ಕಾದಂಬರಿಯಲ್ಲಿ ವಿಷದ ಮರ ಪ್ರತಿಯೊಬ್ಬ ಮನುಷ್ಯನಲ್ಲಿರುವ ಸುಖದ ಆಸೆ ಮತ್ತು ಕೋಪ. ಈ ವಿಷದ ಮರ ಯಾರ ಮನಸ್ಸಿನಲ್ಲಾದರೂ ಬೆಳೆಯಬಹುದು. ಮನಸ್ಸು ಗಟ್ಟಿಯಾಗಿದ್ದರೆ ಅಲ್ಲಿ ಬೆಳೆಯುವುದಿಲ್ಲ. ಮನಸ್ಸು ದುರ್ಬಲವಾಗಿದ್ದರೆ ಅಲ್ಲಿ ಬೆಳೆಯುತ್ತದೆ. ಮನಸ್ಸನ್ನು ಗಟ್ಟಿಮಾಡಿಕೊಳ್ಳದೆ ಇದ್ದರೆ, ಆಸೆ ಮತ್ತು ಕೋಪಗಳನ್ನು ತಡೆದುಕೊಳ್ಳದೆ ಹೋದರೆ ಇದ್ದರೆ, ಆ ಮನುಷ್ಯನಿಗೂ ದುಃಖ, ಇತರರಿಗೂ ದುಃಖ.

ಬಂಕಿಮರು ಬರೆದ ಕಾದಂಬರಿಗಳಲ್ಲಿ ಮೂರರ ವಿಷಯ ಮಾತ್ರ ಇಲ್ಲಿ ಹೇಳಿದೆ. ಆದರೆ “ಕಪಾಲಕುಂಡಲಾ”, “ದೇವಿ ಚೌಧುರಾಣೀ” ಮೊದಲಾದ ಅವರ ಕಾದಂಬರಿಗಳೂ ಜನಪ್ರಿಯವಾಗಿವೆ.

ಕಾದಂಬರಿಯು ಜಗತ್ತಿನಲ್ಲಿ ಹೊಸ ದಾರಿ

ಕಾದಂಬರಿಗಳ ಪ್ರಪಂಚದಲ್ಲಿ ಬಂಕಿಮರು ಹೊಸದೊಂದು ಯುಗವನ್ನೇ ಪ್ರಾರಂಭಿಸಿದರು. ಅದುವರೆಗೆ ಕಾದಂಬರೆ ಎಂದರೆ ಅಡಗೊಲಜ್ಜಿಯ ಕಥೆಯೇ ಆಗಿತ್ತು. ಚಮತ್ಕಾರಗಳು ನಡೆದು ಕಥೆ ಮುಂದಕ್ಕೆ ಸಾಗುವದೇ ಮುಖ್ಯವಾಗಿತ್ತು. ಬಂಕಿಮರ “ದುರ್ಗೇಶ ನಂದಿನೀ” ಬರುತ್ತಲೇ ಹೊಸ ಯುಗವೇ ಪ್ರಾರಂಭವಾದ ಹಾಗೆ ಆಯಿತು. ಕಥೆ “ಮುಂದಕ್ಕೆ ಓದಬೇಕು” ಎನ್ನುವಷ್ಟು ಸ್ವಾರಸ್ಯವಾಗಿಯೇ ಇತ್ತು. ಜೊತೆಗೆ ಕಥೆಯಲ್ಲಿ ಬರುವ ಜನರು ಓದುಗರ ಸುತ್ತ ಕಾಣುವಂತಹವರೇ – ಒಳ್ಳೆಯವರು, ಕೆಟ್ಟವರು, ಕೋಪಿಗಳು, ತಾಳ್ಮೆ ಇರುವವರು ಎಲ್ಲ ಇದ್ದರು. ಅಲ್ಲದೆ ಕಾದಂಬರಿ ಓದುವವರು ಕಥೆಯಲ್ಲಿ ಏನಾಯಿತು, ಯಾರಿಗೆ ಒಳ್ಳೆಯದಾಯಿತು, ಯಾರಿಗೆ ಕೆಟ್ಟದಾಯಿತು ಎಂದು ತಿಳಿದುಕೊಳ್ಳುವದು ಮಾತ್ರವೇ ಮುಖ್ಯವಾಗಲಿಲ್ಲ. “ಇದು ಹೀಗೇಕೆ ಆಯಿತು? ಯಾರು ಮಾಡಿದ್ದು ಸರಿ? ಯಾರು ಮಾಡಿದ್ದು ತಪ್ಪು?” ಹೀಗೆ ತಾವೇ ಯೋಚಿಸುವ ಹಾಗೂ ಆಯಿತು. ಬರೀ ಕಾಲ ಕಳೆಯಲು ಕಾದಂಬರಿ ಓದುವುದು ಹೋಯಿತು. ಸಂತೋಷವಾಗಿ ಕಾಲ ಕಳೆಯುವುದರ ಜೊತೆಗೆ ತಾವೇ ಯೋಚನೆ ಮಾಡುವಂತೆಯೂ ಆಯಿತು.

“ವಂದೇ ಮಾತರಂ” ಗೀತೆಯಂತೂ ಭಾರತೀಯರಿಗೆ ಸ್ವಾತಂತ್ಯ್ರದ ಹೋರಾಟದಲ್ಲಿ ಮಂತ್ರವಾಯಿತು. ಇದರ ಪ್ರಭಾವ ಎಷ್ಟೊಂದು ಆಯಿತು ಎಂದರೆ, ಇದರ ಹೆಸರು ಕೇಳಿದರೇ ಇಂಗ್ಲೀಷ್ ಅಧಿಕಾರಿಗಳಿಗೆ ಕೋಪ ಉಕ್ಕುತ್ತಿತ್ತು. ಇದನ್ನು ಯಾರಾದರೂ ಹಾಡುತ್ತಾರೆ ಎಂದರೇ ಅವರನ್ನು ಜೈಲಿಗೆ ಹಾಕುವಂತಾಯಿತು.

ಸ್ವತಂತ್ರ ಭಾರತದಲ್ಲಿಯೂ “ವಂದೇ ಮಾತರಂ” ಗೀತೆಗೆ ಬಹು ಗೌರವವಿದೆ. ಭಾರತೀಯನ ಹೃದಯದಲ್ಲಿ ತಾಯಿನಾಡಿನ ಸೇವೆಯ ಆದರ್ಶ ಹೊಳೆ ಹೊಳೆಯುವಂತೆ ಆ ಹಾಡು ಮಾಡಿದೆ.
ಶ್ರೀ ಕೃಷ್ಣನ ದರ್ಶನ

ಬಂಕಿಮರು ಕಾದಂಬರಿಗಳಿಂದ ಪ್ರಸಿದ್ಧರಾದರು. ಆದರೆ ಅವನು ಕಾದಂಬರಿಗಳಲ್ಲದೆ ಇತರ ಸೊಗಸಾದ ಪುಸ್ತಕಗಳನ್ನೂ ಬರೆದರು. “ಶ್ರೀಕೃಷ್ಣನ ಚರಿತ್ರೆ”, “ಧರ್ಮತತ್ವ”, “ದೇವತತ್ವ”, “ಭಗವದ್ಗೀತೆಯ ಟೀಕೆ” ಮೊದಲಾದ ಪುಸ್ತಕಗಳನ್ನು ಬರೆದರು. ಹಿಂದೂ ಧರ್ಮವನ್ನು ಕುರಿತು ಇಂಗ್ಲಿಷಿನಲ್ಲಿ ಮತ್ತು ಬಂಗಾಳಿಯಲ್ಲಿ ಲೇಖನಗಳನ್ನು ಬರೆದರು. ಅವರು ಇಂಗ್ಲಿಷ್ ಭಾಷೆಯಲ್ಲಿ ಹಲವು ಪುಸ್ತಕಗಳನ್ನು ಆಳವಾಗಿ ಓದಿದ್ದರು. ಜೊತೆಗೆ ಚಿಕ್ಕ ವಯಸ್ಸಿನಿಂದ ಮನೆಯಲ್ಲಿ ಹಿಂದೂಧರ್ಮದ ವಾತಾವರಣದಲ್ಲಿ ಬೆಳೆದಿದ್ದರು. ಸ್ವತಃ ಚೆನ್ನಾಗಿ ಯೋಚಿಸಬಲ್ಲವರು. ಇವರ “ಶ್ರೀಕೃಷ್ಣ ಚರಿತ್ರ” ಬಹು ಒಳ್ಳೆಯ ಕೃತಿ. ಶ್ರೀಕೃಷ್ಣ ದೇವರ ಅವತಾರ ಎಂದು ಬಹು ಜನ ಹಿಂದುಗಳ ಭಕ್ತಿ ಭಾವನೆ. ಆದರೆ ಕೃಷ್ಣನ ವಿಷಯವಾಗಿ ಎಷ್ಟೋ ಕತೆಗಳು, ನಂಬಿಕೆಗಳು ಜನರ ಮನಸ್ಸಿನಲ್ಲಿ ಸೇರಿಕೊಂಡುಬಿಟ್ಟವೆ; ಶ್ರೀಕೃಷ್ಣ ನಿಜವಾಗಿ ನಮ್ಮ ಭಕ್ತಿಗೆ ಯೋಗ್ಯನೆ?” ಎಂದು ಅನ್ನಿಸುವ ಹಾಗಾಗುತ್ತದೆ. ಕೃಷ್ಣನಿಗೆ ಹದಿನಾರು ಸಾವಿರ ಹೆಂಡತಿಯರು ಎಂಬ ಕಥೆ ಇದಕ್ಕೆ ಉದಾಹರಣೆ. ಬಂಕಿಮರು ಶ್ರೀಕೃಷ್ಣನ ವಿಷಯ ಹೇಳುವ ಮಹಾಭಾರತ, ಹರಿವಂಶ, ಪುರಾಣಗಳು ಇವನ್ನೆಲ್ಲ ಓದಿದವರು. ಪ್ರತಿ ಗ್ರಂಥದಲ್ಲಿ ಏನು ಹೇಳಿದೆ, ಎಷ್ಟನ್ನು ನಾವು ತೆಗೆದುಕೊಳ್ಳಬಹುದು, ಎಷ್ಟನ್ನು ಬಿಡಬೇಕು, ಏಕೆ, ಎಲ್ಲವನ್ನೂ “ಶ್ರೀ ಕೃಷ್ಣ ಚರಿತ್ರ” ದಲ್ಲಿ ವಿಮರ್ಶಿಸುತ್ತಾರೆ. ಕೃಷ್ಣನು ಹೇಳಿದುದಕ್ಕಿಂತ ಒಳ್ಳೆಯ ಧರ್ಮ, ದಾರಿ ಪ್ರಪಂಚದಲ್ಲಿ ಇಲ್ಲ; ಅವನು ಪುಣ್ಯಮಯ, ದಯಾಮಾಯಿ, ನ್ಯಾಯಕ್ಕಾಗಿ ಬದುಕಿದ; ತನಗಾಗಿ ಏನನ್ನೂ ಬಯಸಲಿಲ್ಲ; ಅವನು ಕಾಡಿಗೆ ಹೋಗದಿದ್ದರೂ ತಪಸ್ವಿ ಎಂದು ತೋರಿಸಿ ಕೊಡುತ್ತಾರೆ.

ವಂಗದರ್ಶನ

ಬಂಕಿಮರು ಪತ್ರಿಕೆಗಳ ಜಗತ್ತಿನಲ್ಲಿಯೂ ಕೆಲಸ ಮಾಡಿದರು!

ಆ ಕಾಲದಲ್ಲಿ ಇದ್ದ ಪತ್ರಿಕೆಗಳ ಸಂಖ್ಯೆಯೇ ಕಡಿಮೆ. ಕಥೆ ಕಾದಂಬರಿ, ಇವುಗಳ ಜೊತೆಗೆ ಆಧುನಿಕ ವಿಜ್ಞಾನ, ಜನರು ಯೋಚನೆ ಮಾಡುವಂತೆ ಮಾಡಬಲ್ಲ ಲೇಖನಗಳು ಎಲ್ಲ ಇರುವ ಪತ್ರಿಕೆಯೊಂದು ಇರಬೇಕು ಎಂದು ಬಂಕಿಮರಿಗೆ ತೋರಿತು. ಅವರು ಬರ್ಹಾಂಪುರದಲ್ಲಿದ್ದಾಗ, ೧೮೭೨ ರ ಏಪ್ರಿಲ್ ನಲ್ಲಿ “ವಂಗದರ್ಶನ” ಎನ್ನುವ ಮಾಸ ಪತ್ರಿಕೆಯನ್ನು ಪ್ರಾರಂಭ ಮಾಡಿದರು.

ಅದನ್ನು ಪ್ರಾರಂಭಿಸಿದಾಗ ಮೊದಲನೆ ಸಂಚಿಕೆಯಲ್ಲಿ ಬಂಕಿಮರು ಹೀಗೆ ಬರೆದರು:

“ನನಗೆ ಇಂಗ್ಲಿಷಿನ ಮೇಲಾಗಲೆ, ಇಂಗ್ಲಿಷಿನವರ ಮೇಲಾಗಲೆ ದ್ವೇಷವಿಲ್ಲ… ಇಂಗ್ಲಿಷನ್ನು ಎಷ್ಟು ಅಭ್ಯಾಸ ಮಾಡಿದರೆ ಅಷ್ಟು ಒಳ್ಳೆಯದು…. (ಆದರೆ) ಗಿಲೀಟಿನ ಹಿತ್ತಾಳೆಗಿಂತ, ಶುದ್ಧ ಬೆಳ್ಳಿ ಮೇಲು….. ನಕಲು ಇಂಗ್ಲಿಷಿನ ವನಿಗಿಂತ ಶುದ್ಧ ಬಂಗಾಳಿ ವಾಸಿ …… ವಿದ್ಯಾವಂತರೂ ಜ್ಞಾನವಂತರೂ ಆದ ಬಂಗಾಳಿಗಳು ಎಲ್ಲಿಯವರೆಗೆ ತಾವು ಹೇಳಬೇಕಾದದ್ದನ್ನು ಬಂಗಾಳಿಯಲ್ಲಿ ಹೇಳುವುದಿಲ್ಲವೋ, ಅಲ್ಲಿಯವರೆಗೆ ಬಂಗಾಳಿಗಳು ಮುಂದಕ್ಕೆ ಬರಲಾರರು”.

ಹೀಗೆ ಜನರ ಮನಸ್ಸನ್ನು ವಿಜ್ಞಾನ, ಸಮಾಜ ಮತ್ತು ದೇಶದ ಉನ್ನತಿ ಇವುಗಳ ಕಡೆ ತಿರುಗಿಸುವುದು ಬಂಕಿಮರ ಒಂದು ಗುರಿ. ವಿದ್ಯಾವಂತ ಬಂಗಾಳಿಗಳಿಗೂ ಬಂಗಾಳಿ ಭಾಷೆಯಲ್ಲಿ ಅಭಿಮಾನ ಬರುವಂತೆ ಮಾಡುವುದು, ಅವರ ಜ್ಞಾನ ಇತತರಿಗೂ ಆ ಭಾಷೆಯಲ್ಲಿ ಲಭ್ಯವಾಗುವಂತೆ ಮಾಡುವುದು ಮತ್ತೊಂದು ಗುರಿ.

“ವಂಗದರ್ಶನ” ಬಂಗಾಳಕ್ಕೆ ಆಷಾಡದ ಮೊದಲ ಮಳೆಯಂತೆ ಲವಲವಿಕೆ ತಂದಿತು ಎಂದಿದ್ದಾರೆ ಪ್ರಸಿದ್ಧ ಕವಿ ರವೀಂದ್ರನಾಥರು. ಒಂದು ಸಂಚಿಕೆ ಓದಿದವರು “ಇನ್ನೊಂದು ಬಂದೀತೆ, ಓದಿಯೇವೆ!” ಎಂದು ತವಕದಿಂದ ಕಾಯುತ್ತಿದ್ದರು. ಅಷ್ಟೇ ಅಲ್ಲ, “ವಂಗದರ್ಶನ”ದಿಂದ ಎಷ್ಟೋ ಕಾವ್ಯಗಳು ನಾಡಕಗಳು ಕಥೆಗಳು ಕಾದಂಬರಿಗಳು ವಿಮರ್ಶೆಗಳು ಪತ್ರಿಕೆಗಳು ಹೊರಬರುವುದು ಸಾಧ್ಯವಾಯಿತು.

ಸಾಹಿತ್ಯ ಶಿಲ್ಪಿಜನಮನದ ಗುರು

ಭಾರತದಲ್ಲಿ ಒಳ್ಳೆಯ ಪುಸ್ತಕಗಳನ್ನು ಬರೆದಿರುವವರು ಯಾರು ಎಂದು ಪಟ್ಟಿ ಮಾಡಿದರೆ, ಬಂಕಿಮರಿಗೆ ಖಂಡಿತ ಅದರಲ್ಲಿ ದೊಡ್ಡ ಸ್ಥಾನ ಸಿಕ್ಕುತ್ತದೆ. ಅವರು ಬರೆದದ್ದು ಬಂಗಾಳಿ ಭಾಷೆಯಲ್ಲಿ. ಆದರೆ ಭಾರತದ ಸಂಸ್ಕೃತಿಯನ್ನು ತೋರಿಸಿಕೊಟ್ಟರು. ಹಿಂದೂ ಧರ್ಮವನ್ನು ಕುರಿತು ಒಳ್ಳೆಯ ಪುಸ್ತಕಗಳನ್ನು ಬರೆದರು, ಅದರ ಉಪದೇಶಗಳನ್ನು ಸ್ವತಂತ್ಯ್ರವಾಗಿ ವಿಚಾರಮಾಡಿ ನೋಡಿದರು. ಸಮಾಜದಲ್ಲಿ ಯಾವ ಬದಲಾವಣೆಗಳಾಗಬೇಕು, ದೇಶಕ್ಕೆ ಉನ್ನತಿ ಆಗಬೇಕಾದರೆ ಜನ ಹೇಗೆ ಯೋಚಿಸಬೇಕು ಎಂದು ತಮ್ಮ ವಿಚಾರವನ್ನು ಮುಂದಿಟ್ಟರು. ಅವರಿಗೆ ಎಷ್ಟೋ ಜನ ವಿರೋಧಮಾಡಿದರು, ಅವರನ್ನು ಹಾಸ್ಯ ಮಾಡಿದರು. ಹಿಂದಿನ ನಂಬಿಕೆಗಳನ್ನೇ ಇಟ್ಟುಕೊಂಡಿದ್ದವರಿಗೆ ಅವರು ಶ್ರೀ ಕೃಷ್ಣನ ವಿಷಯ ಹೇಳಿದ ಅಭಿಪ್ರಾಯಗಳಿಂದ ಕೋಪ ಬಂದಿತು. ಆದರೆ ಅವರು ತಾವು ಹಿಡಿದ ಹಾದಿಯಲ್ಲಿ ಒಂದು ಹೆಜ್ಜೆ ಹಿಂದಕ್ಕೆ ಹೋಗಲಿಲ್ಲ. ಎದೆಗಾರಿಕೆಯಿಂದ ಮುಂದಕ್ಕೆ ನಡೆದರು. ಬಹುಮಂದಿ ವಿದ್ಯಾವಂತರು  ಇಂಗ್ಲಿಷರ ರೀತಿನೀತಿಗಳಿಗೆ ಇಂಗ್ಲಿಷ್ ಭಾಷೆಗೆ ಮೋಹಪಟ್ಟ ಕಾಲ ಅದು. ತನ್ನ ಭಾಷೆಯನ್ನು ಉಪಯೋಗಿಸಲು ಎಂತಹ ವಿದ್ಯಾವಂತನೂ ನಾಚಿಕೆಪಡಬೇಕಾಗಿಲ್ಲ ಎಂದು ಸಾರಿದರು. ಜನರ ಭಾಷೆಯಿಂದಲೇ ಜನ ಮುಂದಕ್ಕೆ ಬರಬಲ್ಲರು, ಇತರ ಭಾಷೆಯಿಂದ ಕಲಿಯುವುದನ್ನು ಕಲಿಯೋಣ, ಅದರ ವಿಷಯ ದ್ವೇಷ ಬೇಡ, ಆದರೆ ನಾವು ಮುನ್ನಡೆಯಬೇಕಾದರೆ ನಮ್ಮ ಭಾಷೆಯೇ ರಾಜಮಾರ್ಗ ಎಂದು ಅವರ ಅಭಿಪ್ರಾಯ.

ಇನ್ನೊಂದು ದೇಶದ ಆಡಳಿತಕ್ಕೆ ಸಿಕ್ಕು ಸ್ವಾತಂತ್ಯ್ರವಿಲ್ಲದ ಭಾರತೀಯರಲ್ಲಿ ಸ್ವಾತಂತ್ಯ್ರ ಬಯಕೆಯನ್ನು ಹುಟ್ಟಿಸಿದವರಲ್ಲಿ ಬಂಕಿಮರು ಒಬ್ಬರು. ರಾಷ್ಟ್ರೀಯತ್ವ ಎಂದರೇನು ಎಂದು ಅವರ ಲೇಖನಗಳು ತಿಳಿಸಿಕೊಟ್ಟವು. “ಆನಂದಮಠ” ಬಹು ಶ್ರೇಷ್ಠ ರಾಷ್ಟ್ರೀಯತ್ವದ ಕಾದಂಬರಿ.

ಒಬ್ಬ ಕಥೆಗಾರನೂ ಒಬ್ಬ ನಾಟಕಕಾರನೂ ಒಬ್ಬ ಕಾದಂಬರಿಕಾರನೂ ನಿರ್ಮಿಸುವ ಒಂದೊಂದು ಉದಾತ್ತ ಪಾತ್ರವೂ ತನ್ನ ದೇಶಕ್ಕೆ ಆತ ಕೊಟ್ಟ ಅಮರ ಕಾಣಿಕೆ. ಬಂಕಿಮರು ಅಂತಹ ಹಲವು ಪಾತ್ರಗಳನ್ನು ನಮ್ಮ ದೇಶಕ್ಕೆ ತಮ್ಮ ಜೀವಂತ ಕೊಡುಗೆಯಾಗಿ ನೀಡಿದ ಮಹಾ ಸಾಹಿತ್ಯ ಶಿಲ್ಪಿಯಾಗಿದ್ದಾರೆ.

“ಆನಂದಮಠ” ಕಾದಂಬರಿಯಲ್ಲಿ ಶಾಂತಿ ತನ್ನ ಗಂಡನಿಗೆ ಹೇಳುತ್ತಾಳೆ: “ಪ್ರಭುವೇ ! ನೀನು ನನಗೆ ಗುರು; ನಾನು ನಿನಗೆ ಧರ್ಮವನ್ನು ಹೇಳಿಕೊಡಲೆ? ನೀನು ವೀರನು; ನಿನಗೆ ಆ ವೀರವ್ರತವನ್ನು ನಾನು ಕಲಿಸಲೆ? ಈಗ “ವಂದೇ ಮಾತರಂ” ಹೇಳೋಣ”

ಭವಾನಂದನಂತಹ ಗಂಡಸರು, ಶಾಂತಿಯಂತಹ ಹೆಂಗಸರು ಜನರ ಹೃದಯಗಳಲ್ಲಿ ಸ್ಥಿರವಾಗಿ ನೆಲೆಸುವಂತೆ ಮಾಡಿದ ಬಂಕಿಮಚಂದ್ರರೊಂದಿಗೆ ನಾವೂ ಈ ಮಹಾ ಮಂತ್ರವನ್ನು ಹೃದಯ ಸಿಂಹಾಸನದಲ್ಲಿ ಪ್ರತಿಷ್ಠಾಪನೆ ಮಾಡಿಕೊಳ್ಳೋಣ:

ವಂದೇ ಮಾತರಂ!