ಕೋಲಾರದ ತಿರುಪತಿ ಗುಟ್ಟಹಳಿ

ತಾಲ್ಲೂಕು ಕೇಂದ್ರದಿಂದ : ೩೦ ಕಿ.ಮೀ
ಜಿಲ್ಲಾ ಕೇಂದ್ರದಿಂದ : ೩೫ ಕಿ.ಮೀ

ಗುಟ್ಟಹಳಿಯಲ್ಲಿ ಶ್ರೀವೆಂಕಟರಮಣಸ್ವಾಮಿ ದೇವಾಲಯ

ಗುಟ್ಟಹಳಿಯಲ್ಲಿ ಶ್ರೀವೆಂಕಟರಮಣಸ್ವಾಮಿ ದೇವಾಲಯ

ಅನೇಕ ಕಲ್ಲಿನ ಗುಡ್ಡಗಳು, ಸಾಕಷ್ಟು ಮರಗಿಡಗಳಿಂದ ಕೂಡಿ ರಮ್ಯ ತಾಣವೆನಿಸಿರುವ ಗುಟ್ಟಹಳಿಯಲ್ಲ್ಳಿ ಶ್ರೀವೆಂಕಟರಮಣಸ್ವಾಮಿ ದೇವಾಲಯವೇ ಪ್ರಮುಖ ಧಾರ್ಮಿಕ ಆಕರ್ಷಣೆ. ಸುಮಾರು ೪೦ ಮೀ ಎತ್ತರದ ಗುಡ್ಡದ ಮೇಲೆ ನೆಲೆಸಿರುವ ವೆಂಕಟರಮಣಸ್ವಾಮಿ ಗುಡಿ ಹಾಗು ಪದ್ಮಾವತಿ ದೇವಿಯ ಗುಡಿಗಳಿಗೆ ಮೆಟ್ಟಿಲುಗಳನ್ನು ಹತ್ತಿ ದರ್ಶಿಸುವ ಪರಂಪರೆ  ಇಲ್ಲಿದೆ. ಅನೇಕ ಭಕ್ತಾದಿಗಳಿಗೆ ಈ ಕ್ಷೇತ್ರವೇ ತಿರುಪತಿಯೆಂಬ ನಂಬಿಕೆಯಿದೆ. ಪ್ರತಿ ಶ್ರಾವಣದಲ್ಲಿ ಇಲ್ಲಿ ಭಾರಿ ಜಾತ್ರೆ ನಡೆಯುತ್ತದೆ. ದೇವಾಲಯದ ಮುಂಭಾಗದ ಕೊಳ, ಹಾವನ್ನು ಹಿಡಿದ ಗರುಡ, ವಿಶೇಷ ಕೆತ್ತನೆಗಳಿಂದ ಕೂಡಿದ ಗೋಪುರ, ಪಾಪನಾಶಿನಿ, ಇತ್ಯಾದಿಗಳಿಂದ ಬಂಗಾರು ತಿರುಪತಿ ಎನಿಸಿಕೊಂಡಿರುವ ಈ ಸ್ಥಳವು ಪವಿತ್ರ ಕ್ಷೇತ್ರವೆನಿಸಿಕೊಂಡಿದ್ದು ಭಾರಿ ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

 

ನೀರುನಾದಕ್ಕೆ ಹೆಸರಾದ ಬೇತಮಂಗಲ

ತಾಲ್ಲೂಕು ಕೇಂದ್ರದಿಂದ : ೨೦ ಕಿ.ಮೀ
ಜಿಲ್ಲಾ ಕೇಂದ್ರದಿಂದ : ೨೫ ಕಿ.ಮೀ

ಬೇತಮಂಗಲ ಕೆರೆ - ಬೇತಮಂಗಲ ಅಣೆಕಟ್ಟು

ಬೇತಮಂಗಲ ಕೆರೆ – ಬೇತಮಂಗಲ ಅಣೆಕಟ್ಟು

ಜಿಲ್ಲೆಯ ಪ್ರಮುಖ ನದಿ ಪಾಲಾರ್ ನದಿಯ ಬಲದಂಡೆಯ ಮೇಲಿರುವ ಈ ಸ್ಥಳದಲ್ಲಿ ನೊಳಂಬರ ಕಾಲದಲ್ಲಿ ಅಂದರೆ ಕ್ರಿ. ಶ. ೮೯೦ರಲ್ಲಿ ನಿರ್ಮಿಸಲಾದ ಕೆರೆಯೊಂದಿದೆ. ಕೆರೆಗೆ ಅಡ್ಡಲಾಗಿ ನಿರ್ಮಿಸಿರುವ ಉದ್ದನೆಯ ಅಣೆಕಟ್ಟಿಗೆ ೩೨ ಬಾಗಿಲುಗಳಿವೆ. ಕೆರೆಯಲ್ಲಿ ನೀರು ತುಂಬಿದಾಗ ಪ್ರವಾಸಿಗರ ಮನರಂಜನೆಗಾಗಿ ದೋಣಿವಿಹಾರ ನಡೆಯುತ್ತಿತ್ತು. ಕೆರೆಯ ದಂಡೆಯಲ್ಲಿ ೧೯೦೪ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಕಾಲದಲ್ಲಿ ಸ್ಥಾಪಿಸಲಾಗಿರುವ ನೀರು ಸರಬರಾಜು ಕೇಂದ್ರ (ವಾಟರ್ ವರ್ಕ) ಕೆ.ಜಿ.ಎಫ್.ಗೆ ಕುಡಿಯುವ ನೀರು ಒದಗಿಸುವ ಸಲುವಾಗಿಯೇ ಆರಂಭವಾಗಿದೆ. ಇಲ್ಲಿ ರಾಜ್ಯದಲ್ಲೇ ಪ್ರಸಿದ್ಧವೆನಿಸಿದ ಗಂಗಾಧರಂ ನಾದಸ್ವರ ಸಂಗೀತ ಶಾಲೆಯಿದೆ. ಒಳನಾಡು ಮೀನುಗಾರಿಕೆಗೆ ಹೆಸರುವಾಸಿಯಾಗಿದ್ದು, ಮೀನುಗಾರಿಕಾ ತರಬೇತಿ ಕೇಂದ್ರವಿದೆ. ಸುಂದರ ಪ್ರಕೃತಿ ತಾಣವಾದ ಇದು ವಿದೇಶಿ ಪ್ರವಾಸಿಗರನ್ನು ಆಕರ್ಷಿಸಿದೆ.

 

ಪವಿತ್ರ ಕ್ಷೇತ್ರ ಕೋಟಿಲಿಂಗೇಶ್ವರ

ತಾಲ್ಲೂಕು ಕೇಂದ್ರದಿಂದ : ೧೦ ಕಿ.ಮೀ
ಜಿಲ್ಲಾ ಕೇಂದ್ರದಿಂದ : ೩೦ ಕಿ.ಮೀ

 

ಕೋಟಿಲಿಂಗೇಶ್ವರ

ಕೆ.ಜಿ.ಎಫ್. ನಿಂದ ಬೇತಮಂಗಲ ರಸ್ತೆಯಲ್ಲಿ ಸುಮಾರು ೮ ಕಿ.ಮಿ. ದೂರದಲ್ಲಿರುವ ಕಮ್ಮಸಂದ್ರ ಎಂಬ ಸ್ಥಳದಲ್ಲಿ ಸ್ಥಾಪಿಸಲಾಗಿರುವ ಈ ಕ್ಷೇತ್ರವು ಪ್ರವಾಸಿಗರ ಧಾರ್ಮಿಕ ಕೇಂದ್ರವಾಗಿದೆ. ಇಲ್ಲಿ ಸಹಸ್ರಾರು ಸಂಖ್ಯೆಯ ಶಿವಲಿಂಗಗಳ ಸಮುಚ್ಚಯವುಳ್ಳ ದೇವಾಲಯವಿದೆ.

ವಿಶ್ವದಲ್ಲೇ ಅತಿ ಎತ್ತರದ್ದೆನ್ನಲಾದ ೧೦೮ ಅಡಿ ಎತ್ತರದ ಆಧುನಿಕ ಶಿವಲಿಂಗವಿದೆ. ಇದರ ಮುಂಭಾಗದಲ್ಲಿ ಸುಮಾರು ೩೫ ಅಡಿ ಎತ್ತರದ ನಂದಿ ವಿಗ್ರಹವಿದೆ. ಅನೇಕ ಗಣ್ಯರ ಹೆಸರಿನಲ್ಲಿ ಹೆಸರಿನಲ್ಲಿ ಪ್ರತಿಷ್ಠಾಪಿಸಿರುವ ಶಿವಲಿಂಗಗಳು ಇಲ್ಲಿವೆ. ಇತ್ತೀಚಿನ ಸಿನಿಮಾಗಳಲ್ಲಿ ಈ ಕ್ಷೇತ್ರ ಕುರಿತು ಚಿತ್ರೀಕರಣ ನಡೆಸಿರುವುದರಿಂದ ಇದಕ್ಕೆ ಸಾಕಷ್ಟು ಜನಪ್ರಿಯತೆ ದಕ್ಕಿದೆ.

 

ಬಂಗಾರುಪೇಟೆ ಜಂಕ್ಷನ್

ತಾಲ್ಲೂಕು ಕೇಂದ್ರದಿಂದ: ೨ ಕಿ.ಮೀ
ಜಿಲ್ಲಾ ಕೇಂದ್ರದಿಂದ : ೨೦ ಕಿ.ಮೀ

ಬಂಗಾರಪೇಟೆ ರೈಲ್ವೆ ಜಂಕ್ಷನ್ ಬೆಂಗಳೂರಿನ ರೈಲ್ವೆ ಜಂಕ್ಷನ್ ನಂತರ ದೊಡ್ಡ ಜಂಕ್ಷನ್

ಇದರ ಮೂಲಕ ಬೆಂಗಳೂರು-ಚೆನ್ನೆ ಎಕ್ಸ್ಪ್ರೆಸ್, ಬೃಂದಾವನ ಎಕ್ಸ್ಪ್ರೆಸ್, ಮುಂಬಯಿ-ನಾಗರ ಕೊಯಿಲ್, ಲಾಲ್ಬಾಗ್, ಕನ್ಯಾಕುಮಾರಿ- ಬೆಂಗಳೂರು ಇತ್ಯಾದಿ ಎಕ್ಸ್ಪ್ರೆಸ್ಗಳು ಹಾದು ಹೋಗುತ್ತವೆ. ಚಿಕ್ಕಬಳ್ಳಾಪುರ-ಬೆಂಗಳೂರು ರೈಲ್ವೆ ಹಳಿಗಳು ಇಲ್ಲಿ ಸಂಧಿಸುತ್ತವೆ. ಬೆಂಗಳೂರು ಹಾಗೂ ಮಾರಿಕುಪ್ಪಂ ರೈಲ್ವೆ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುತ್ತದೆ.

 

ಸಂತ ತೆರೇಸಾ ಚರ್ಚ್

ತಾಲ್ಲೂಕು ಕೇಂದ್ರದಿಂದ: ೦ ಕಿ.ಮೀ
ಜಿಲ್ಲಾ ಕೇಂದ್ರದಿಂದ : ೪೨ ಕಿ.ಮೀ

ಸಂತ ತೆರೇಸಾ ಚರ್ಚ್ ಕೆ.ಜಿ.ಎಫ್. ನಗರದ ಒಂದು ಪ್ರಮುಖ ಕ್ಯಾಥೋಲಿಕ್ ಚರ್ಚ್. ೧೯೨೯ರಲ್ಲಿ ಸಂತ ತೆರೇಸಾ ಅವರ ಹೆಸರಿನಲ್ಲಿ ಸ್ಥಾಪಿತವಾದ ಈ ಚರ್ಚಿನ ಆಶ್ರಯದಲ್ಲಿ ಕನ್ನಡ, ತಮಿಳು, ಇಂಗ್ಲಿಷ್ ಮಾಧ್ಯಮಗಳಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಸುಮಾರು ೩೫೦೦ ಮಕ್ಕಳಿಗೆ ಶಿಕ್ಷಣ ನೀಡುತ್ತಿವೆ

 

ಕರ್ನಾಟಕದ ಚಿನ್ನದ ನಾಡು : ಕೆ.ಜಿ.ಎಫ್

ತಾಲ್ಲೂಕು ಕೇಂದ್ರದಿಂದ: ೨ ಕಿ.ಮೀ
ಜಿಲ್ಲಾ ಕೇಂದ್ರದಿಂದ : ೪೨ ಕಿ.ಮೀ

ಸಯನೈಡ್ ಮಣ್ಣಿನ ಗುಡ್ಡಗಳು

ಪ್ರಪಂಚದ ಅತಿ ಆಳದ ಎರಡು ಚಿನ್ನದ ಗಣಿಗಳಲ್ಲಿ ಒಂದಾದ ಕೆ.ಜಿ.ಎಫ್. ಗಣಿಯಿಂದಾಗಿ ಚಿನ್ನದ ನಾಡೆಂಬ ಹೆಸರಿಗೆ ಅನ್ವರ್ಥವಾಗಿದೆ. ಈ ಗಣಿಯು ರಾಜ್ಯದ ಒಟ್ಟು ಚಿನ್ನದ ಉತ್ಪಾದನೆಯ ಶೇ. ೯೯ ರಷ್ಟು ಪಾಲನ್ನು ನೀಡಿ ವಿಶೇಷವೆನಿಸಿದೆ. ೧೮೭೫ರಲ್ಲಿ ಜಾನ್ ಟೇಲರ್ ಕಂಪನಿ ಆರಂಭಿಸಿದ ಗಣಿ ಪ್ರದೇಶದಲ್ಲಿ ೯ ಶಾಫ್ಟ್‌ ಗಳಲ್ಲಿ ೩ ಮಾತ್ರ ಇತ್ತೀಚಿನವರೆಗೂ ಕಾರ್ಯನಿರ್ವಹಿಸುತ್ತಿದ್ದವು. ಸಾವಿರಾರು ಅಡಿ ಆಳ ಮತ್ತು ಉದ್ದದ ಸುರಂಗಗಳಿಂದ ಕೂಡಿದ ಈ ಚಿನ್ನದ ಗಣಿಗಳು ರಾಷ್ಟ್ರದ ಬೊಕ್ಕಸಕ್ಕೆ ಸಾಕಷ್ಟು ಆದಾಯ ನೀಡಿದೆ. ಗಣಿಗಳಿಂದ ಹೊರ ತೆಗೆದ ಸಯನೈಡ್ ಮಣ್ಣಿನ ಗುಡ್ಡಗಳು ಇಲ್ಲಿನ ಮತ್ತೊಂದು ವಿಶೇಷ.

 

ಜಿಲ್ಲೆಯ ಪ್ರಮುಖ ಕೈಗಾರಿಕಾ ಕೇಂದ್ರ ಭಾರತ್ ಅರ್ತ್ ಮೂವರ್ಸ್ ಲಿಮಿಟೆಡ್


೧೯೬೪ರಲ್ಲಿ ಸ್ಥಾಪಿತವಾದ ಈ ಕೈಗಾರಿಕಾ ಕೇಂದ್ರವು ರಕ್ಷಣೆ, ಸಂಚಾರ, ಸಾರಿಗೆ ಹಾಗು ಮಣ್ಣೆತ್ತುವ ಬೃಹತ್ ಯಂತ್ರಗಳ ಉತ್ಪಾದನೆಯೊಂದಿಗೆ ಇಡೀ ದೇಶದಲ್ಲೇ ಹೆಸರುವಾಸಿಯಾಗಿದೆ. ಇದು ದೇಶದ ಬೃಹತ್ ಕೈಗಾರಿಕೆಗಳಲ್ಲೊಂದೆನಿಸಿದೆ.

 

ದಿಂಬುಶಿಲೆ

ಕೆ.ಜಿಎಫ್.  ಮಾರಿಕುಪ್ಪಂ ರಸ್ತೆಯ ಭೂ  ವೈಜ್ಞಾನಿಕ ಸ್ಮಾರಕ

ತಾಲ್ಲೂಕು ಕೇಂದ್ರದಿಂದ: ೭ ಕಿ.ಮೀ
ಜಿಲ್ಲಾ ಕೇಂದ್ರದಿಂದ : ೩೭ ಕಿ.ಮೀ

ಪಿಲ್ಲೋ ಲಾವಾ ಅಥವಾ ದಿಂಬು ಶಿಲೆ

ಭಾರತ ಉಪಖಂಡವೂ ಸುಮಾರು ೨೫೦ ಕೋಟಿ ವರ್ಷಗಳ ಹಿಂದೆ ಸಮುದ್ರದೊಳಗಿತ್ತು ಎಂಬುದಕ್ಕೆ ಸಾಕ್ಷಿ ಈ ದಿಂಬು ಶಿಲೆಗಳು. ಸಾಗರದೊಳಗಿನ ಜ್ವಾಲಾಮುಖಿಯಿಂದ ಹೊರಬರುವ ಲಾವಾರಸ ನೀರಿನ ಸಂಪರ್ಕಕ್ಕೆ ಬಂದ ಕೂಡಲೆ ತಣ್ಣಗಾಗುವುದರಿಂದ ಉಂಟಾಗುವ ಶಿಲೆಗಳೇ ಈ  ದಿಂಬು ಶಿಲೆಗಳು. ಸುಮಾರು ೨೦೦ ಕೋಟಿ ವರ್ಷಗಳ ಹಿಂದೆ ಗೊಂಡ್ವಾನಾ ಖಂಡದಿಂದ ಬೇರ್ಪಟ್ಟ ಭೂಭಾಗವೊಂದು ಖಂಡಾಂತರ ಚಲನೆಯ ಕಾರಣದಿಂದ ಉತ್ತರಕ್ಕೆ ಚಲಿಸಿ ಸಾಗರದಿಂದ ಮೇಲೆ  ಬಂದು ಯುರೇಷಿಯಾ ಖಂಡಕ್ಕೆ ತಾಗಿದೆ. ಈ ಭೂಭಾಗವೇ ಭಾರತ ಉಪಖಂಡ, ಇದಕ್ಕೆ ಸಾಕ್ಷಿ ಈ ದಿಂಬು ಶಿಲೆಗಳು. ಹಾಗಾಗಿಯೇ ಇದು ರಾಷ್ಟ್ರೀಯ ಭೂ ವೈಜ್ಞಾನಿಕ ಸ್ಮಾರಕ ಎನಿಸಿಕೊಂಡಿದೆ.

 

ಹೈದರಾಲಿಯ ಜನ್ಮ ಸ್ಥಳ ಬೂದಿಕೋಟೆ

ತಾಲ್ಲೂಕು ಕೇಂದ್ರದಿಂದ : ೧೨ ಕಿ.ಮೀ
ಜಿಲ್ಲಾ ಕೇಂದ್ರದಿಂದ : ೩೨ ಕಿ.ಮೀ

ಹೈದರಾಲಿಯ ಜನ್ಮ ಸ್ಥಳ ಬೂದಿಕೋಟೆ

ಬೂದಿಕೋಟೆ ಮೈಸೂರಿನ ಹುಲಿ ಟಿಪ್ಪುವಿನ ತಂದೆ ಹೈದರಾಲಿಯ ಜನ್ಮ ಸ್ಥಳ. ಎಂಟನೆಯ ಶತಮಾನಕ್ಕೂ ಹಿಂದಿನ ಇತಿಹಾಸ ಹೊಂದಿರುವ ಈ ಸ್ಥಳವು ಇತಿಹಾಸಕಾಲದಲ್ಲಿ ನಡೆದ ಭಾರಿ ಅಗ್ನಿ ಕಾರ್ಯದಿಂದಾಗಿ ಬೂದಿಕೋಟೆ ಎಂದು ಹೆಸರಾಯಿತೆಂಬ ಪ್ರತೀತಿಯಿದೆ. ಮಾರ್ಕಂಡೇಯ ನದಿಯ ಎರಡೂ ಕವಲುಗಳ ಸಂಗಮ ಸ್ಥಳದಲ್ಲಿ ನಿರ್ಮಾಣವಾಗಿರುವ ಈ ಊರು ಹಿಂದೊಮ್ಮೆ ಹೈದರಾಲಿಯ ತಂದೆ ಫತ್ತೆ ಮಹಮದ್ನ ಜಹಗೀರಾಗಿತ್ತು. ಇಲ್ಲಿ ೭೭೦ರ ಬಾಣವಂಶದ ಕಾಲದ ಶಾಸನವಿದೆ. ಕೋಟೆ ಕೊತ್ತಲಗಳಿಂದ ಕೂಡಿದ ಈ ಸ್ಥಳದಲ್ಲಿ ಸೋಮೆಶ್ವರ ದೇವಾಲಯ ಸೇರಿದಂತೆ ಅನೇಕ ದೇವಾಲಯಗಳ ಸಮುಚ್ಛಯ ಹಾಗೂ ವೀರಗಲ್ಲುಗಳಿವೆ. ಚೌಕಾಕಾರದ ಪುರಾತನ ಕಲ್ಯಾಣಿಯೊಂದಿದೆ. ನದಿಯ ದಂಡೆಯ ಮೇಲೆ  ಅತ್ಯಂತ ಪ್ರಾಚೀನವೆನಿಸಿದ ಹಾಗೂ ಎರಡನೇ ಮಂತ್ರಾಲಯವೆಂದು ಕರೆಯಲಾಗುವ ೧೬೮೧ರಲ್ಲಿ ಪ್ರತಿಷ್ಠಾಪನೆಗೊಂಡ ರಾಘವೇಂದ್ರ ಯತಿಗಳ ಬೃಂದಾವನವಿದೆ. (ಮಂತ್ರಾಲಯದ ಪ್ರತಿಷ್ಠಾಪನೆ ೧೬೭೧)

 

ಕೋಲಾರದ ಮಿನಿ ಕೆ.ಆರ್.ಎಸ್. ಮಾರ್ಕಂಡೇಯ ಜಲಾಶಯ.

ತಾಲ್ಲೂಕು ಕೇಂದ್ರದಿಂದ : ೧೬ ಕಿ.ಮೀ
ಜಿಲ್ಲಾ ಕೇಂದ್ರದಿಂದ : ೩೬ ಕಿ.ಮೀ

ಕೋಲಾರ ಜಿಲ್ಲೆಯ ಮಿನಿ ಕೆ.ಆರ್.ಎಸ್. ಎಂದೇ ಪ್ರಸಿದ್ಧಿಯಾಗಿರುವ ಮಾರ್ಕಂಡೇಯ ಜಲಾಶಯ ೧೯೩೬ರಲ್ಲಿ ಮೈಸೂರು ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಆಡಳಿತದಲ್ಲಿ ಆರಂಭವಾಯಿತು. ಅಂದಿನ ಗವರ್ನರ್ ಮಿರ್ಜಾ ಇಸ್ಮಾಯಿಲ್ ರವರ ಕಾಲದಲ್ಲಿ ಇಂಜಿನಿಯರ್ ಸರ್.ಎಂ. ವಿಶ್ವೇಶ್ವರಯ್ಯನವರ ಉಸ್ತುವಾರಿಯಲ್ಲಿ ಸುಮಾರು ೪.೩೫ ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣವಾದ ಈ ಜಲಾಶಯದ ಕಾಮಗಾರಿ ಪೂರ್ಣವಾಗಲು ನಾಲ್ಕು ವರ್ಷಗಳೇ ಹಿಡಿದಿವೆ. ೧೯೪೦ ರಲ್ಲಿ ಇದರ ಮೂಲಕ ನೀರು ಹರಿಸುವ ಕಾರ್ಯ ಆರಂಭವಾಗಿದೆ. ಬಹುತೇಕ ಕೆ. ಆರ್. ಎಸ್. ನಿರ್ಮಾಣದ ತಾಂತ್ರಿಕ ವಿಧಾನದಲ್ಲೇ ನಿರ್ಮಿಸಲಾದ ಈ ಜಲಾಶಯ ೮೧ ಅಡಿ ಎತ್ತರವಿದ್ದು, ೭೫೦ ಮೀಟರ್ ಉದ್ದವಿದೆ. ಅಣೆಕಟ್ಟು ೭೯ ಅಡಿ ನೀರು ನಿಲ್ಲುವ ಸಾಮರ್ಥ ಹೊಂದಿದೆ. ಅಂದರೆ ಸರಾಸರಿ ೮೨೦೦ ಕ್ಯೂಸೆಕ್ ನೀರು ಜಲಾಶಯದಲ್ಲಿ ಸಂಗ್ರಹವಾಗುತ್ತದೆ. ೬೧.೬೦ ಅಡಿ ನೀರು ಸಂಗ್ರಹವಾದರೆ ಮಾತ್ರ ರೈತರ ಬೆಳೆಗಳಿಗೆ ನೀರು ಹರಿಸಬಹುದಾಗಿದೆ. ಜಲಾಶಯದಲ್ಲಿ ಸಂಪೂರ್ಣ ನೀರು ತುಂಬಿದರೆ ಸುಮಾರು ನಾಲ್ಕು  ಸಾವಿರ ಎಕರೆ ಜಮೀನಿಗೆ ನೀರುಣಿಸಬಹುದಾಗಿದೆ. ವಕ್ಕಲೇರಿ ಬಳಿಯ ಬೆಟ್ಟದಲ್ಲಿ ಹುಟ್ಟುವ ಮಾರ್ಕಾಂಡೇಯ ನದಿಯ ನೀರೇ ಈ ಜಲಾಶಯಕ್ಕೆ ಮುಖ್ಯ ಆಧಾರವಾಗಿದೆ. ಜಲಾಶಯ ತುಂಬಿ ಹರಿವ ನೀರು ನೋಡುಗರ ಮನ ತಣಿಸುವುದುಂಟು.