ಬಂಗ್ಲಾದೇಶದ ನಿರಾಶ್ರಿತರಿಗಾಗಿ
ನಿಧಿ ಸಂಗ್ರಹದಲ್ಲಿ ತೊಡಗಿದ್ದಾವೆ.
ಗಂಡೊ ಹೆಣ್ಣೊ ತಟ್ಟನೆ ಗುರುತು ಹತ್ತುವುದಿಲ್ಲ.
ಡಬ್ಬ ಹಿಡಿದು, ಕರಪತ್ರ ಹಂಚಿ
ವನಪು ವಯ್ಯಾರದಲ್ಲಿ
ಶುದ್ಧ ಇಂಗ್ಲಿಷಿನಲ್ಲಿ ಬೇಡುತ್ತವೆ.

ಅಲ್ಲೇ ಪುಟ್‌ಪಾತಿನ ಮೇಲೆ ಯಾವಾಗಿನಿಂದಲೋ
ಬಿದ್ದಿದ್ದಾನೆ ಪುಟ್ಟ ಹುಡುಗ ;
ಕೇಳುವವರೇ ಇಲ್ಲ; ಕಂಡರೂ ಕಾಣದ ಹಾಗೆ
ಅಲ್ಲೇ ಓಡಾಡುತ್ತವೆ,
ಬರುವ ಹೋಗುವ ರಿಕ್ಷಾ, ಕಾರು, ಸ್ಕೂಟರು
ಗಳನ್ನು ತಡೆದು, ಬಂಗ್ಲಾದೇಶಕ್ಕೆ
ನಿಧಿ ಕೇಳುತ್ತವೆ.

ಬಿಸಿಲಲ್ಲಿ ಬಸವಳಿದು ಬಾಯಾರಿ ಬೆಂಡಾಗಿ
ನೋಡುತ್ತವೆ, ಯಾರಾದರೂ ಪತ್ರಿಕೆಯವರು ಬಂದು
ತಮ್ಮ ಫೋಟೊ ತೆಗೆದಾರೆಯೇ ಹೇಗೆ?
ಮರುದಿನದ ಪತ್ರಿಕೆಯಲ್ಲಿ ಈ ಮಹಾಕಾರ‍್ಯ
ದಪ್ಪಕ್ಷರದ ಡೋಲು ಬಜಾಯಿಸುವ ಚಿಂತೆ.

ಮಧ್ಯಾಹ್ನ ಮುನಿಸಿಪಲ್ ವ್ಯಾನ್ ಬಂದು
ಬಿದ್ದ ಹುಡುಗನ ಅನಾಥ ಪ್ರೇತವನ್ನೆತ್ತಿ ಸಾಗಿಸುವಾಗ,
Poor Chap ಅನ್ನುತ್ತ, ನಿಧಿ ಸಂಗ್ರಹಿಸಿದಾಯಾಸಕ್ಕೆ
ಕ್ಯಾಂಟೀನಿನಲ್ಲಿ ಕೋಕೊ ಕೋಲಾ ಕುಡಿದು
ಮರಮರದ ಕೆಳಗೆ ಎಂದಿನ ಹಾಗೆ
ಸಲ್ಲಾಪ ನಡೆಸುತ್ತವೆ.