ಅನಂದಕಂದರ ಗೋಕಾಕ ಪರಿಸರದ ಜಿಗುಟು ಮಣ್ಣಿನ ಅಂಶವೇ ಅವರಲ್ಲಿ ಒಂದು ಬಗೆಯ ಜಿಗುಟುತನವನ್ನು ಬೆಳೆಸಿದಂತೆ, ಸ್ವಾಭಿಮಾನದ ಜತೆ ಬಂಡಾಯ ಮನೋವೃತ್ತಿಯನ್ನೂ ಹುಟ್ಟುಹಾಕಿತ್ತು. ಈ ಹಿಂದೆ ರಾಣೆಬೆನ್ನೂರಿಗೆ ವಿದ್ಯಾಧೀಶರ ಪುಣ್ಯತಿಥಿಗೆ ಕಾವ್ಯಾನಂದರ (ಪುಣೇಕರ) ಆದೇಶದಂತೆ ಹೋದ ಸಮಯ, ಅಲ್ಲಿ ಊಟದ ಜಾಗೆಗಾಗಿ ಕಚ್ಚಾಡುವ ಪ್ರವೃತ್ತಿಯಿಂದ ಬೇಸರಗೊಂಡು, ಅದನ್ನೇ ಕಾವ್ಯಾನಂದರಿಗೆ ಗವರದಿ ಒಪ್ಪಿಸಿದ್ದು, ಬೆಳಗಾವಿಯಲ್ಲಿ ಮರಾಠಿಗರ ದುರಭಿಮಾನಕ್ಕೆ ಪ್ರತಿಯಾಗಿ ಕನ್ನಡವನ್ನು ಪ್ರಯೋಗದಲ್ಲಿ ತಂದಿದ್ದು, ಬೆಂಗಳೂರಿನಲ್ಲಿ ಮೈಸೂರು ಪೇಟಾ ಧರಿಸದೇ ನೌಕರಿಗೆ ಶರಣು ಹೊಡೆದು ಬಂದಿದ್ದು, ಇವೆಲ್ಲ ಆನಂದಕಂದರ ಬಂಡಾಯ ಮನೋವೃತ್ತಿಗೆ ಸಾಕ್ಷಿಯಾಗಿವೆ. ಇನ್ನೊಂದು ಬಗೆಯ ಬಂಡಾಯವನ್ನು ಆನಂದಕಂದರು ಮನೆಯಲ್ಲಿಯೇ ಪ್ರಯೋಗಿಸಿದ್ದನ್ನು ಅವರಣ್ಣ ಬಲರಾಮಪ್ಪ ಈ ರೀತಿ ಸ್ಮರಿಸಿಕೊಳ್ಳುತ್ತಾರೆ;

“….ಅವನು ರಚಿಸಿದ ‘ಸುದರ್ಶನ’ ಕಾದಂಬರಿಯೂ ಅವನ ಆದರ್ಶದ ಹಂಬಲದ ಪ್ರತೀಕವೇ. ಆದರೆ ಅವನ ಆದರ್ಶಗಳಲ್ಲೊಂದು ವಾಸ್ತವತೆಯಿತ್ತು. ಮನೆಯ  ಹೊರಗಷ್ಟೇ ಆತ ಅದಕ್ಕಾಗಿ ಹೋರಾಡುತ್ತರಲಿಲ್ಲ. ಮನೆಯ ಒಳಗೂ ಆತ ಹೋರಾಡಿದ್ದಾನೆ. ನಮ್ಮ ೬೨ ವರ್ಷದ ಹಿರಿಯಣ್ಣ ಮುಧೋಳ ಆಚಾರ್ಯೋರ್ವರ ೧೧ ವರ್ಷದ ಬಾಲಿಕೆಯನ್ನು ಲಗ್ನವಾಗಲು ತಯಾರಿ ನಡೆಸಿದ್ದಾಗ ಎದ್ದ ಗೊಂದಲ ಅಂಥಿಂಥದಲ್ಲ. ಈಶ ಹೇಳಿದ್ದಿನ್ನೂ ನೆನಪಿದೆ. “ಅಣ್ಣ, ನೀನು ವಿಚಾರ ಮಾಡು. ನಿನಗೆ ಮದುವೆಯಾಗುವ ವಯಸ್ಸಿಲ್ಲ. ಅದು ಧರ್ಮದಿಂದ ನಿಷಿದ್ಧ. ಇನ್ನೂ ದೈಹಿಕ ತೃಪ್ತಿಗಾಗಿ ಬೇಕಾದರೆ ಹೇಳು-ನಾನೇ ಗೋವೆಗೆ ಹೋಗಿ ಉತ್ತಮ ಹೆಣ್ಣು ತರುತ್ತೇನೆ. ಸುಮ್ಮನೆ ಒಂದು ಹುಡುಗಿಯ ಬಾಳು ಹಾಳಾಗುವುದು ಬೇಡ. ನಮ್ಮ ವಯಸ್ಸೂ ಚಿಕ್ಕದು. ನಮಗೆ ಆ ಹುಡುಗಿಯ ಬಗ್ಗೆ ಅತ್ತಿಗೆ ಅನ್ನುವ ಭಾವನೆ ಬಾರದೇ ಹೋದರೆ,  ಆಗಬಹುದಾದ ಅನಾಹುತವನ್ನು ಯೋಚಿಸಿರುವಿಯಾ?”

[1][1]  ಬೆಳುವಲ(ನನ್ನ ತಮ್ಮ ಈಶ):ಬಲರಾಮಪ್ಪ ಬೆಟಗೇರಿ-ಪುಟ ೭೨