ಬೆಟ್ಟಬಂಡೆಯ ಮೇಲೆ ಕಲ್ಲೆ ಮರವಾದಂತೆ
ದೇವಗಣಗಲೆ ಮರವು ನಿಂತು ಮುಗಿಲಿಗೆ ಹೂವಿ-
ನಾರತಿಯನೆತ್ತುತಿದೆ ! ಎಲೆಗಳೊಂದಾದರೂ
ಇಲ್ಲ ; ಹಿಡಿಹಿಡಿ ಹಿಡಿದ ಹೂವೆಲ್ಲ ಬಿಳಿದು ; ಅಹ
ಹೂವು ಎಂಥ ಮಿದು ! ಬಂಡೆಯೊ ಘಟ್ಟಿ ; ಬಲು ಘಟ್ಟಿ.
ಒಂದು ಮೃದು ಮತ್ತೊಂದು ಕಠಿಣ ; ಈ ಮೃದುತೆ ಆ
ಕಠಿಣತೆಯ ಮತ್ತೊಂದು ರೂಪ ! ಕಾಠಿಣ್ಯವೀ-
ಮೃದುತೆಯಿನ್ನೊಂದು ರೂಪ ; ಈ ಮೃದು ಕಠಿನವೆಂ-
ಬೆರಡು ಬೇರೊಂದು ನಿಲುವಿನ ರೂಪ ! ನೋಡು ಈ
ಹೂವನರಳಿಸಿದ ಮರ ಆ ಕಲ್ಲುಬಂಡೆಯೊಳು
ಬೇರೂರಿ ರಸವ ಹೀರುತಿದೆ ;  ಕಲ್‌ಗುಂಡಿನೆದೆ-
ಯಲ್ಲು ಕೋಮಲತೆಯರಳಿಸುವ ಮೂಲ ರಸವಡ-
ಗಿಹುದು ! ಈ ಬಂಡೆಯೇ ಅಲ್ಲಿ ಮರದ ತುದಿಯಲಿ
ಹೂವಾಗಿ ಅರಳಿಹುದು ! ಓ ಮನವೆ ನೋಡಿ ಕಲಿ.