ಹರಿದೋಡುವೀ ಹೊನಲ ಮಧುರ ಮಂಜುಳಗೀತೆ
ತಡೆದು ನಿಲಿಸಿತು ಮನವ. ಎಲ್ಲಿಂದಲೋ ಬಂದು
ಮತ್ತೆಲ್ಲಿಗೋ ಹರಿವ ಈ ನಿರಂತರ ಹೊನಲ
ಬಳಗದಂತಿವೆ ನೂರು ಕಗ್ಗಲ್ಲ ಬಂಡೆಗಳು.
ಹರಿಯುತಿದೆ ಹೊಳೆ, ಹರಿಯಲಾರವು ಬಂಡೆ ! ಪಾಪ,
ಮೂಕ ಮೌನದಿ ಕೂತು ಇಂತೇಸು ದಿನ ರಾತ್ರಿ
ನೋಡಿ ಕೊರಗುತಲಿಹವೊ….. ಎಂಬ ಚಿಂತೆಯೊಳಿರಲು
ಮಧುರ ಮಂಜುಳಗೀತೆ ಮತ್ತೆ ತಣಿಸಿತು ಕಿವಿಯ.

ತನ್ನ ಪಾಡಿಗೆ ತಾನು ಹರಿದೋಡುವೀ ಹೊನಲ
ಈ ಬಗೆಯ ಬಂಡೆಗಳು ತಡೆಯದಿರೆ, ಎದೆಯೊಡ್ಡಿ
ನಿಲಿಸದಿರೆ, ಹೊಮ್ಮುತಿತ್ತೇನಿಂಥ ಮಧುರ ಮಂ-
ಜುಳಗೀತೆ ? ಹರಿವ ಮೌನವ ತಡೆದು ಮಧುರ ಗಾ-
ನವ ಕಡೆದು ಕೊಡುವ ಬಂಡೆಯ ಕಡೆಗೆ ನಿಡುನೋಡಿ
ನಿಂತೆ ನಾ ಬಿಗಿದಿರಲು ಮಧುರ ರಾಗದ ಮೋಡಿ !