ಇವತ್ತು ಹೋಳಿ!

ಬೆಳಗಾಗುತ್ತಲೇ ಪಕ್ಕದ ಹಾಸ್ಟಲ್‌ನಿಂದ ಕಿತ್ತುಕೊಂಡು ನುಗ್ಗಿದ ಕಿರುಚು ಕೇಕೆಗಳು ಅದನ್ನು ಸಾರಿದವು. ನಾನಿರುವ ಈ ಹಾಸ್ಟಲ್‌ನಲ್ಲಿ ವಿದ್ಯಾರ್ಥಿಗಳು ಕೆಲವೇ ಕೆಲವರು; ಉಳಿದವರು ಬಹುಮಂದಿ ನನ್ನ ಹಾಗೆ ಸರ್ಕಾರೀ ನೌಕರರು. ಪಕ್ಕದ ಹಾಸ್ಟಲ್‌ನಿಂದ ವಿದ್ಯಾರ್ಥಿಗಳು ಗುಂಪುಗೂಡಿ, ಕೈಯಲ್ಲಿ ಬಣ್ಣದ ಸೀಸೆ ಹಿಡಿದು, ರೂಮಿನಿಂದ ರೂಮಿಗೆ ಹೋಗಿ, ಬಾಗಿಲು ತೆರೆದಿದ್ದರೆ ಒಳಗೆ ನುಗ್ಗಿ, ತೆರೆದಿರದಿದ್ದರೆ ಬಡಿದು ಬಾಗಿಲು ತೆರೆಯಿಸಿ, ಅಲ್ಲಿದ್ದವರ ಮೈಮೇಲೆ ಬಣ್ಣ ಸುರಿದು, ಮತ್ತೆ ಮುಂದಿನ ರೂಮಿನ ಕಡೆ ಧಾವಿಸುತ್ತಿದ್ದಾರೆ. ಹೀಗೇ ಈ ಬಣ್ಣದ ಮೆರವಣಿಗೆ ಒಂಬತ್ತು ಗಂಟೆಯ ಹೊತ್ತಿಗೆ ನಮ್ಮ ಹಾಸ್ಟಲ್ ಕಡೆಗೂ ನುಗ್ಗಿತು. ಅದು ಬರುತ್ತದೆ, ಬಣ್ಣ ಎರಚುತ್ತದೆ ಎಂದು ಮೊದಲೇ ನಮಗೆ ಗೊತ್ತಿತ್ತು. ಯಾವ ರೀತಿಯಿಂದಲೂ ಈ ಹೋಳಿಯ ಹಿಗ್ಗಿನ ಹಾವಳಿಯಿಂದ ನಾವು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ, ಮತ್ತು ತಪ್ಪಿಸಿಕೊಳ್ಳಲೂ ಬಾರದು ಎಂದು ನಾನು ನಿರ್ಧರಿಸಿಯೇ ತಯಾರಾಗಿದ್ದೆ-ಬಾಗಿಲನ್ನು ಅಗಲವಾಗಿ ತೆಗೆದು. ಹೋಳಿಯ ಹೊನಲು ಬಾಗಿಲಿಗೇ ಬಂತು, ರಂಗುರಂಗಿನ ತರಂಗವಾಗಿ. ಬಾಗಿಲಾಚೆ ಕಿರುಚು-ಕೇಕೆಗಳ ಬುಗ್ಗೆ ಪುಟಿಯಿತು. ನೋಡುತ್ತೇನೆ ಸಚಿತ್ರ ಹುಲಿ ವೇಷಗಳು! ಎಲ್ಲಾ ಧಾಂಡಿಗರು. ಮುಖದ ಮೇಲೆ, ತೊಟ್ಟುಕೊಂಡ ಬಟ್ಟೆಯ ಮೇಲೆ ಬಣ್ಣ ಸುರಿದುಕೊಂಡ ರಂಗಿನ ರಂಗಣ್ಣಗಳು. ಆದರೂ ವಿನಯವನ್ನು ಮರೆಯದೆ ಬಾಗಿಲಲ್ಲೆ ನಿಂತು ‘ಒಳಗೆ ಬರಬಹುದೇ ಸಾರ್’ ಎಂದರು. ನಾನೆಂದೆ  ‘ಬನ್ನಿ, ಬಾಗಿಲು, ನಿಮಗಾಗಿಯೇ ತೆರೆದಿದೆಯಲ್ಲ.’ ಎಲ್ಲರೂ ಒಕ್ಕೊರಲಿನಿಂದ  ‘ಹೋ’ ಎಂದು ಅರಚಿದರು. ತಂದ ಬಣ್ಣವನ್ನು ನನ್ನ ಮೇಲೆ ಅಭಿಷೇಕ ಮಾಡಿದರು. ಕೆಂಪು-ಹಸಿರು-ಹಳದಿಯ ಆ ರಂಗು ಕ್ಷಣಮಾತ್ರದಲ್ಲಿ ನನ್ನನ್ನು ರೂಪಾಂತರಗೊಳಿಸಿತು. ಅವರೆಲ್ಲರೂ ಹಿಗ್ಗಿ ಕೇಕೆ ಹಾಕಿದರು. ಅವರ ಆ ಸಂತೋಷದಲ್ಲಿ ನಾನೂ ಒಂದಾದೆ. ಮಾಡಬೇಕಾದ್ದನ್ನು ಮಾಡಿ ಮುಗಿಸಿದ ಆ ಗುಂಪು ನನ್ನ ಪಕ್ಕದ ಕೋಣೆಯ ಬಾಗಿಲನ್ನು ಬಡಿಯತೊಡಗಿತು.

ಇವತ್ತು ಎಲ್ಲಿ ನೋಡಿದರೂ ಸಣ್ಣವರಿಂದ ದೊಡ್ಡವರ ತನಕ ಇದೇ  ವೇಷ, ಇದೇ ಆವೇಶ. ಎಲ್ಲರ ಕೈಯಲ್ಲೂ ಬಣ್ಣದ ಸೀಸೆ. ತೀರಾ ಸಣ್ಣ ಮಕ್ಕಳೂ ಬಣ್ಣದ ಸೀಸೆ ಹಿಡಿದು, ದಾರಿಯಲ್ಲಿ ಬಂದು ಹೋಗುವವರ ಮುಖನೋಡಿ ಬಣ್ಣ ಎರಚಲು ಹೊಂಚುತ್ತಾರೆ. ಕೆಲವರಿಗೆ ರಿಯಾಯಿತಿ ತೋರಿಸುವುದೂ ಉಂಟು. ಬಸ್ಸಿನಲ್ಲಿ ಬೀದಿಯಲ್ಲಿ, ಎಲ್ಲಿ ನೋಡಿದರಲ್ಲಿ ಎಲ್ಲರ ಬಟ್ಟೆಯ ಮೇಲೂ ಬಣ್ಣದ ಕಲೆ. ಬಣ್ಣ ಎರಚುವಾಗ ಬಹುಮಂದಿ ಈ ದಿನ ಅಸಮಾಧಾನವನ್ನಾಗಲೀ, ಕೋಪವನ್ನಾಗಲೀ ಪ್ರಕಟಪಡಿಸಿದ್ದು ಬಹಳ ಕಡಿಮೆ. ಬಣ್ಣದ ಈ ಬಾಂಧವ್ಯದಲ್ಲಿ, ಹಿಗ್ಗಿನ ಸುಗ್ಗಿಯಲ್ಲಿ ಎಲ್ಲರೂ ಪಾಲುಗಾರರೇ.

ಈ ಎಲ್ಲದರಿಂದ ಹೊರಗೆ ನಿಂತು ನೋಡುವವರಿಗೆ ಇಂದು ಕಂಡು ಬರುವ ಈ ಧಾಂಡಿಗರ ಈ ಕಿರುಚು, ಕೇಕೆ, ಚೇಷ್ಟೆ ಅರ್ಥಹೀನವಾಗಿ ತೋರಬಹುದು. ಜೊತೆಗೆ ಅಸಮಾಧಾನವನ್ನೂ ತರಬಹುದು. ಏನಿದು? ಶುದ್ಧ ಅನಾಗರಿಕ ವರ್ತನೆ, ಬಟ್ಟೆಯಲ್ಲಾ ಹಾಳು ಎಂದು ಅನ್ನಿಸಬಹುದು. ಆದರೆ ನನಗೆ ಹಾಗೇನೂ ಅನ್ನಿಸುವುದಿಲ್ಲ. ಇಷ್ಟೊಂದು ಜನ ಪಡುವ ಆನಂದದಲ್ಲಿ ನಾನೊಬ್ಬನೇ ಪ್ರತ್ಯೇಕವಾಗಿ ಹೊರಗೆ ನಿಂತು, ಇದನ್ನು ಟೀಕಿಸಲು ನನಗೆ ಇಷ್ಟವಿಲ್ಲ. ಇಷ್ಟರ ಮೇಲೆ ದಿನಾ ಹೇಳಿ ಕೇಳಿ ಏರ್ಪಾಡು ಮಾಡುವಂಥಾ ಉತ್ಸವವೇ ಇದು? ಇವತ್ತು ಹೋಳಿ.

ಹೋಳಿ, ಬಣ್ಣದ ಹೋಳಿ. ಫಾಲ್ಗುಣ ಮುಗಿಯಿತು, ಆಗಲೇ ವಸಂತ ಋತು ಕಾಲಿರಿಸಿದೆ. ಛಳಿಗಾಲ ಕಳೆಯಿತು; ಹಳೆಯ ಎಲೆ ಉದುರಿದೆ; ಹೊಸ ಚಿಗುರು ಬಂದಿದೆ. ಹೊಸ ಜೀವನ ಆರಂಭವಾಗಿದೆ ಪ್ರಕೃತಿಯಲ್ಲಿ. ಈ ವಸಂತೋದಯದ ಹಿಗ್ಗನ್ನು, ಸಂಭ್ರಮವನ್ನು ಪಡಿನುಡಿಯ ಬೇಡವೇ ನಮ್ಮ ಹೃದಯ? ಹೊಸ ಬದುಕನ್ನು ಸ್ವಾಗತಿಸಬೇಡವೇ? ಅದರಲ್ಲಿ ಒಂದಾಗಬೇಡವೇ?  ನಮಗೂ ಸುತ್ತಣ ನಿಸರ್ಗಕ್ಕೂ ಇರುವ ನಿತ್ಯ ಪ್ರಾಣಸ್ಪಂದನವನ್ನು ನಾವು ಪ್ರಕಟಿಸಬೇಡವೇ? ಅದಕ್ಕೇ ಈ ಹಿಗ್ಗು, ಈ ಸಂಭ್ರಮ, ಈ ಬಣ್ಣ.

ಎಲ್ಲ ಕಾಲದಲ್ಲೂ ಕವಿಗಳು ಮಾತ್ರವಲ್ಲ-ನಿಸರ್ಗದ ಸೊಗಸನ್ನು ಕಂಡು ಬೆರಗಾದವರು, ಜನಸಾಮಾನ್ಯರೂ ಕೂಡ. ಹಿಂದೆ ಜನ ವಸಂತೋತ್ಸವ, ಕೌಮುದೀ ಮಹೋತ್ಸವಗಳನ್ನು,  ಆಚರಿಸುತ್ತಿದ್ದರಂತೆ.  ಆದರೆ ಅದರ ವರ್ಣನೆಯನ್ನು ಕವಿಗಳು ಬರೆಯಲಿಲ್ಲ. ಅವರು ಬರೆದದ್ದು ರಾಜ ಮಹಾರಾಜರುಗಳ ಬದುಕನ್ನು, ಅವರ ಕೌಮುದೀ ಮಹೋತ್ಸವಗಳನ್ನು,  ಅವರ ವಸಂತಭೋಗವನ್ನು, ಅರಮನೆಯ ಲಲನಾಮಣಿಯರೊಂದಿಗೆ ಮಹಾರಾಜರು ಆಡಿದ ಓಕುಳಿಯಾಟಗಳನ್ನು. ಅರಮನೆಯ ನೆರಳಿನಲ್ಲಿ ಸುಖಸಂಕಥಾ ವಿನೋದಗಳಲ್ಲಿ ಮಗ್ನನಾದ ಮಹಾರಾಜನಿಗೆ ಒಂದು ದಿನ ವನಪಾಲಕನು ಬಂದು ಬಿನ್ನವಿಸುತ್ತಾನೆ; “ದೇವಾ, ವಸಂತ ಋತು ಆಗಮಿಸಿದೆ; ತಾವು ದಯಮಾಡಿಸಿ ಅದರ ಶೋಭೆಯನ್ನು ಪರಾಂಬರಿಸಬೇಕು”-ಎಂದು. ಆಗ ಮಹಾರಾಜನು ತನ್ನ ಅಂತಃಪುರದ ವಿಲಾಸಿನಿಯರೊಂದಿಗೆ ಹೊರಡುತ್ತಾನೆ ವನವಿಹಾರಕ್ಕೆ. ಸರಿ ಕಾವ್ಯದಲ್ಲಿ ಶುರುವಾಯಿತು ‘ವನವಿಹಾರ ವರ್ಣನಂ’, ‘ಜಲಕೇಳೀ ವರ್ಣನಂ’. ಇದು ಅಷ್ಟಾದಶ ವರ್ಣನೆಯ ವೈಖರಿಗಳಲ್ಲಿ ಒಂದು. ಈ ಅರಮನೆಯ ಪ್ರಾಕಾರದ ಆಚೆ, ಹರಹಿದ ವಿಸ್ತಾರವಾದ ಜನಪದ ಜೀವನದಲ್ಲಿ ಸಾಮಾನ್ಯ ಜನತೆ ಸವಿದ ವಸಂತಾನುಭವದ ಸೊಗಸು ಹಳೆಯ ಕವಿಗಳ ಪಾಲಿಗೆ ಲಭ್ಯವಾಗಲಿಲ್ಲ. ಆದರೆ ಬಂದ ವಸಂತದಲ್ಲಿ ಆ ಜನತೆ ಪಟ್ಟ ಪಾಡು, ಅನುಭವಿಸಿದ ಆನಂದ, ಪರಂಪರಾಗತವಾಗಿ, ಕೋಲಾಟದ ಪದಗಳಲ್ಲಿ, ಹೋಳಿಯಂಥ ಹಬ್ಬಗಳಲ್ಲಿ ಹರಿದು ಬಂತು. ಹಳ್ಳಿಯಿಂದ ದಿಳ್ಳಿಯ ತನಕ ಜೀವಂತವಾದ ಹಿಗ್ಗಿನ ಬುಗ್ಗೆಯಾಗಿ ಪುಟಿಯಿತು. ವಸಂತದ ಇಂಪು, ಈ ಬೆಳದಿಂಗಳ ತಂಪು, ಜನಸಾಮಾನ್ಯರ ಹೃದಯದಲ್ಲಿಯೂ ಅನಿರ್ಬಂಧವಾಗಿ, ತನ್ನದೇ ಆದ ರುಚಿಯಿಂದ, ಅಭಿವ್ಯಕ್ತಿಯನ್ನು ಪಡೆಯಿತು. ವಸಂತೋದಯದ ಈ ಸಂಭ್ರಮದ ಸಂಕೇತವೇ ಹೋಳಿ.

ಹೌದು, ವಸಂತ ಆಗಲೇ ಮುಂಗಡವಾಗಿಯೇ ಬಂದಿದೆ. ಬೇವಿನಮರ ಚಿಗುರಿದೆ. ಬಂದ ಹಸುರಿನ ಜತೆಗೇ ಆಗಲೇ ಬೆಳ್ಳಗಿನ ಹೂವೂ ಕೂಡಿಕೊಂಡಿದೆ. ಹೊಂಗೆಯ ಮರಗಳಲ್ಲಿ ಬಂಗಾರದ ಚಿಗುರು ತುಂಬಿಕೊಂಡಿದೆ. ಮಾವಿನ ಮರ ಚಿಗುರಿ, ಚೆಲುವಿನ ಚಾಮರವಾಗಿ ನಿಂತುಕೊಂಡಿದೆ. ಅಲ್ಲೊಂದು ಇಲ್ಲೊಂದು ಮರ ಇದ್ದ ಎಲೆಗಳನ್ನು ಒಣಗಿಸಿಕೊಂಡು ಇನ್ನೇನು ಒಂದು ಗಾಳಿ ತೀಡಿದರೆ ಸಾಕು, ಎಲ್ಲವನ್ನೂ ಬಿಟ್ಟುಕೊಟ್ಟೇನು ಎನ್ನುವಂತೆ ನಿಂತುಕೊಂಡಿವೆ. ತುಂಬು ಬಾಳನ್ನು ಬಾಳಿ, ಬದುಕನ್ನು ಸಾವಿನ ಗಾಳಿಗೆ ತೂರಲು ಅತ್ಯಂತ ಸಹಜವಾಗಿ ನಿಂತಿರುವ ಪರಿಣತ ಜೀವವೊಂದರೆ ನೆನಪಾಗುತ್ತದೆ ಇಂಥ ಮರಗಳನ್ನು ನೋಡಿದರೆ. ಮತ್ತೆ ಕೆಲವು ಮರ ಒಂದಾದರೂ ಎಲೆಯಿಲ್ಲದೆ ಜೈನ ಸಂನ್ಯಾಸಿಗಳಂತೆ ನಿಂತಿವೆ. ಮತ್ತೆ ಕೆಲವು ಮರಗಳ ಕೊಂಬೆಕೊಂಬೆಗಳಲ್ಲಿ ಮಿದುವಾದ ಚಿಗುರು ಮೆಲ್ಲಗೆ ಪುಟಿಯತೊಡಗಿದೆ. ಕೆಳಗೆ ನೆಲವಲ್ಲಾ ಒಣಗಿ ಗಾರಾಗಿದೆ. ಮೇಲೆ ಬಿಸಿಲು ಬಡಿಯುತ್ತಿದೆ. ಇಂಥ ಬಿರು ಬಿಸಿಲಲ್ಲಿಯೂ ಹಸುರಿನ ಹೆಸರೇ ಇಲ್ಲದ ಈ ನೆಲದ ಮೇಲೆ ಮರಮರಗಳ ಕೊಂಬೆಯ ಮೇಲೆ ವಸಂತ ಋತುವಿನ ಬಣ್ಣದ ಕುಂಚ ಆಡುತ್ತಿದೆ.

ಇಷ್ಟು ದಿನ ನೀಲ ನಿರ್ಭಾವವಾಗಿದ್ದ ಆಕಾಶ ಈಗ ಮೋಡದ ಕನಸು ಕಾಣತೊಡಗಿದೆ. ಆಕಾಶದ ತುಂಬ ಮೋಡವೇ ಮೋಡ-ವಿವಿಧ ಭಂಗಿಗಳಲ್ಲಿ. ಸಂಜೆಯಂತೂ ಸೊಗಸು. ಒಂದೊಂದು ಮೋಡವೂ ಮುಳುಗುವ ಸೂರ‍್ಯನ ಬಂಗಾರದ ಬಿಸಿಲಿನಲ್ಲಿ ರಮ್ಯೋಜ್ವಲವಾಗಿದೆ. ನುಣ್ಣನೆ ಬಣ್ಣದ ಬೆಣ್ಣೆಮೋಡಗಳು ಪರ್ವತಾಕಾರವಾಗಿ, ಶಿಖರ ಶಿಖರಗಳನ್ನು ಚಾಚಿ ಬಾನಂಚಿನಲ್ಲಿ ನಿಂತಿವೆ. ದಿಗಂತದಂಚನ್ನು ಕಾಲಿನಿಂದ ಮೆಟ್ಟಿ, ನೀಲಿಯಲ್ಲಿ ತಲೆಯೆತ್ತಿನಿಂತ ಅವುಗಳ ವೈಖರಿ ಅದ್ಭುತವಾಗಿದೆ. ಕೆಳಗಿನಿಂದ ಒಂದಿಷ್ಟು ಭಾಗ ನೀಲಿ; ನಡುವೆ ಒಂದಿಷ್ಟು ಬೂದು ಬಣ್ಣ ; ತಲೆಯಲ್ಲಿ ಬಂಗಾರಗೆಂಪು. ಒಂದೊಂದು ಮೋಡದ ಸುರುಳಿ ಸುರುಳಿ ವರ್ತುಲವೂ ಖಚಿತವಾಗಿ, ಕಂಡರಿಸಿ ಇರಿಸಿದಂತೆ, ಆ ಮೋಡಗಳ ಮೇಲೆ ನಾವು ಕಾಲೂರಿ ಸಲೀಸಾಗಿ ನಡೆದರೆ ಎಷ್ಟು ಚಂದ ಎನ್ನಿಸುವಂತೆ ಘನವಾಗಿ, ಆಕರ್ಷಕವಾಗಿ ತೋರುತ್ತಿವೆ. ದೂರದ ಹಿಮಾಲಯದ ಒಂದು ಪರ್ವತ ಖಂಡವನ್ನೂ ಅದನ್ನೇರುವ ಕನಸನ್ನೂ ಈ ಸಂಧ್ಯೆ ನಮ್ಮ ಕಣ್ಣೆದುರಿಗೆ ಕಡೆದು ನಿಲ್ಲಿಸಿದೆ.

ಅದೋ ಸೂರ‍್ಯ ಮುಳುಗಿದ. ಮೋಡಗಳ ಮೇಲಿನ ಬಣ್ಣ ಹೋಳೀ ಹಬ್ಬದ ಸಮಸ್ತ ವರ್ಣವೈರುಧ್ಯಗಳನ್ನೂ ಪ್ರಕಟಿಸುತ್ತಾ ಕ್ರಮೇಣ ಬೂದಿಯಾಗತೊಡಗಿದೆ. ಕಾಮದಹನದ ಕಿಚ್ಚಿನಂತೆ ಪಡುವಣದಲ್ಲಿ ಸೂರ‍್ಯನ ಕೆಂಬೆಳಕು ಹರಹಿದೆ. ಗಾಳಿ ತಣ್ಣಗೆ ತೀಡಿದೆ. ಪೂರ‍್ವ ದಿಕ್ಕಿನಿಂದ, ಕೆಂಪಗೆ ದಾಸವಾಳದ ಬಣ್ಣದ ಹುಣ್ಣಿಮೆಯ ಚಂದ್ರ ಸದ್ದಿಲ್ಲದೆ ನಿಧಾನವಾಗಿ ಮೇಲೇರಿ ರಾತ್ರಿಯ ರಾಜ್ಯಭಾರದ ಗದ್ದುಗೆಯ ಮೇಲೆ ಕೂತಿದ್ದಾನೆ. ನೋಡನೋಡುತ್ತಾ ಮೋಡಗಳೆಲ್ಲೋ ಕರಗಿ ಹೋಗಿವೆ;  ಆಕಾಶ ನಿರಭ್ರವಾಗುತ್ತಿದೆ. ಚಂದ್ರ ಮೇಲೇರ ತೊಡಗಿದ್ದಾನೆ. ಚಿಗುರಿ ನಿಂತ ಮರಗಳ ಮೇಲೆ, ಮೈಚಾಚಿ ಮಲಗಿದ ಈ ಬಯಲಿನ ಮೇಲೆ ಸುರಿದಿದೆ ರಜನೀಕಾಂತನ ರೌಪ್ಯಕಾಂತಿ. ಬಯಲಂಚಿನಲ್ಲಿ ಹಗಲೆಲ್ಲಾ ಬಿರುಬಿಸಿಲಿನಲ್ಲಿ ಬೇಯುತ್ತಾ ಬಿದ್ದಿದ್ದ ಮೊಂಡ ಮುಖದ ಬಂಡೆಗಳೂ ಈ ಬೆಳದಿಂಗಳ ಸ್ಪರ್ಶದಿಂದ ಮಿದುವಾದಂತೆ ತೋರುತ್ತಿವೆ. ಆಕಾಶದಲ್ಲಿ ವಿಶೇಷ ಪ್ರಕಾಶವುಳ್ಳ ಕೆಲವು ನಕ್ಷತ್ರಗಳ ಹೊರತು ಉಳಿದವೆಲ್ಲಾ, ಹಾಲಿನಲ್ಲಿ ಸಕ್ಕರೆಯ ಹಾಗೆ ಕರಗಿ ಹೋಗಿವೆ-ಮಹಾಪ್ರತಿಭಾಶಾಲಿಯಾದ ಕವಿಯೊಬ್ಬನ ಕಾಲದಲ್ಲಿ ಉಳಿದ ಸಣ್ಣಪುಟ್ಟ ಕವಿಗಳಿಗೊದಗುವ ಪಾಡನ್ನು ಪ್ರತಿಮಿಸುತ್ತಾ. ಬೆಳದಿಂಗಳ ಈ ಸದ್ದಿಲ್ಲದ ಜಲಪಾತದಲ್ಲಿ ಗದ್ದಲವೆಲ್ಲಾ ಕೊಚ್ಚಿಕೊಂಡು ಹೋಗಿದೆ. ದೂರದ ಹಳ್ಳಿಯಿಂದ ಕೇಳಿಬರುವ ತಮಟೆಯ ಸದ್ದು, ಕೇಕೆಯ ಸದ್ದು, ಎಲ್ಲೋ ರೈಲು ‘ಕೂ’ ಎನ್ನುವ ಸದ್ದು, ಈ ನಿಶ್ಶಬ್ದತೆಯಲ್ಲಿ ಎದ್ದ ಅದ್ಭುದವಾಗಿದೆ. ಒಂದು ಬಗೆಯ ವಿಲಕ್ಷಣ ಮೌನ ಆವರಿಸಿದೆ. ಈ ಹೊತ್ತಿನಲ್ಲಿ ಅನ್ನಿಸುತ್ತದೆ-ಮೌನ ಎಂದರೆ ಶಬ್ದದ ಅಭಾವವಲ್ಲ ; ಅಥವಾ ಶಬ್ದಲಯವೂ ಅಲ್ಲ. ಎಲ್ಲ ಶಬ್ದಗಳನ್ನೂ ತನ್ನಲ್ಲಿ ಮಲಗಿಸಿಕೊಳ್ಳುವ ವಾತ್ಸಲ್ಯದ ಮಡಿಲು ಅದು. ಈ ಮೌನದ ಒಳಗೆ ಎಲ್ಲ ಸದ್ದುಗಳೂ ತಮ್ಮ ಪಾಡಿಗೆ ತಾವು ಇವೆ. ಇಂಥ ಮೌನದಲ್ಲಿ ನಾನೂ ನನ್ನ ನೆರಳೂ ಚಲಿಸುತ್ತಾ ಸಾಗಿದ್ದೆವು. ಈ ಆಲೋಚನೆಯ ದಾರಿಯಲ್ಲಿ, ತಟಕ್ಕನೆ ನಾನು ಹಾಸ್ಟಲ್‌ನ್ನು ಸಮೀಪಿಸಿದ ಹಾಗೆ, ಬೆಳಗಿನಿಂದಲೂ ಕಾಣಿಸದೆ ಇದ್ದ ಒಂದು ಮುಖ, “ನಮಸ್ಕಾರ. ಎಲ್ಲೋ ಹೊರಗೆ ಹೋಗಿದ್ದಿರೇನೋ” ಎಂದಿತು. ಕಂಡೆ, ಅವರು ನನ್ನ ಕೊಠಡಿಯಿಂದ ಮೂರನೆಯ ಕೊಠಡಿಯಲ್ಲಿರುವ ಸಂಶೋಧಕ ಮಿತ್ರರು. ಹದಿಮೂರನೆಯ ಶತಮಾನದ ವ್ಯಾಕರಣ ಗ್ರಂಥಗಳನ್ನು ಕುರಿತು ಥೀಸಿಸ್ ಬರೆಯುವ ಪ್ರಯತ್ನದಲ್ಲಿದ್ದಾರೆ ಅವರು. ನಾನು ಇಡೀ ದಿನ ಬೆಳಗಿಂದ ಸಂಜೆಯ ತನಕ ಅವರ ಮುಖವನ್ನು ಕಂಡಿರಲಿಲ್ಲ. “ಇದೇನು, ಇವತ್ತು ಕಾಣಿಸಲಿಲ್ಲವಲ್ಲ ನಿಮ್ಮ ಮುಖ” -ಎಂದೆ. “ಅಯ್ಯೋ, ನಾನು  ಇಲ್ಲೇ ಇದ್ದೆನಲ್ಲಾ ನನ್ನ ರೂಮಿನಲ್ಲಿ” ಎಂದರು. “ನಿಮ್ಮ ರೂಮಿನಲ್ಲಿ! ಇಡೀ ದಿನ ಬೀಗ ಹಾಕಿತ್ತಲ್ಲ ನಿಮ್ಮ ರೂಮಿಗೆ” ಎಂದು ನಾನು ಉದ್ಗಾರವೆತ್ತಿದೆ. “ರೂಮೇನೋ ಬೀಗ ಹಾಕಿತ್ತು, ಆದರೆ ನಾನು ಅದರೊಳಗೇ ಇದ್ದೆ” -ಎಂದವರು ಏನೋ ಮಹಾ ಸಾಹಸವನ್ನು  ಮೆರೆದವರಂತೆ. ನಾನು ಬೆರಗಾಗಿ ಮೂಕನಾದೆ. ಮತ್ತೆ ಅವರೇ ಹೇಳಿದರು, “ಇವತ್ತು ಹೋಳೀ ಹಬ್ಬ; ಈ ದರಿದ್ರ ಪುಂಡರ ಗಲಾಟೆ. ಬೇಡವೆಂದರೂ ಮೈ ಮೇಲೆ ಬಣ್ಣ ಚೆಲ್ಲುತ್ತಾರೆ. ಇನ್ನೇನು ಮಾಡುವುದು? ಜವಾನನಿಗೆ ಒಂದು ರೂಪಾಯಿ ಕೊಟ್ಟು, ನಾನು ರೂಮಿನ ಒಳಗೆ ಕೂತು, ಹೊರಗೆ ಬೀಗಹಾಕಿಕೊಳ್ಳುವಂತೆ ಹೇಳಿದ್ದೆ. ಅವನು ಹಾಗೇ ಮಾಡಿದ. ಮಧ್ಯಾಹ್ನ ಮೂರು ಗಂಟೆಯ ಮೇಲೆ ಬಾಗಿಲು ತೆಗೆಯಿಸಿ ಹೊರಗೆ ಬಂದು ಪೇಟೆಕಡೆ ಹೋಗಿ ನಮ್ಮ ನೆಂಟರೊಬ್ಬರ ಮನೆಯಲ್ಲಿ ಕಾಲಕಳೆದು ಈಗ ಬರ‍್ತಾ ಇದೀನಿ” ಎಂದರು.

ನಾನು ಅವರ ಮಾತು ಕೇಳಿ ತಬ್ಬಿಬ್ಬಾದೆ; ಆಮೇಲೆ ಅವರಿಗಾಗಿ ವಿಷಾದಿಸಿದೆ. ಹೊರಗೆ ಈ ಹಿಗ್ಗು, ಉಲ್ಲಾಸ ಪುಟಿಯುತ್ತಿರುವಾಗ ಈ ನನ್ನ ಮಿತ್ರರು ಬೆಳಿಗ್ಗೆಯಿಂದ ಮಧ್ಯಾಹ್ನದ ತನಕ ಕಮಕ್ ಕಿಮಕ್ ಅನ್ನದೆ ರೂಮಿನ ಒಳಗೇ ಹುದುಗಿ ಕೂತಿದ್ದಾರೆ, ಹೊರಗಡೆಗೆ ಬಾಗಿಲಿಗೆ ಬೀಗ ಹಾಕಿಸಿ. ಹೊರಗಿನ ಈ ಉತ್ಸವವನ್ನು ಅನಾಗರಿಕ ಎಂದೋ, ಅವಿವೇಕ ಎಂದೋ ತೀರ್ಮಾನಿಸಿ ಅದರ ಉಸಿರನ್ನರಿಯದೆ ತಾವು ಉಸಿರುಕಟ್ಟಿಸುವ ಕೋಣೆಯಲ್ಲಿ-ಒಬ್ಬರೇ ಕುಳಿತು ಪಡಬಾರದ ಪಾಡನ್ನು ಪಟ್ಟರಲ್ಲಾ ಎಂದು ವ್ಯಥೆಯಾಯಿತು. ಅವರು ಹೀಗೆ ಮಾಡಿದ್ದರಿಂದ ಆದದ್ದೇನು-ಅವರ ಬಟ್ಟೆಗಳು ಒಂದಷ್ಟು ಶುಭ್ರವಾಗೇ ಉಳಿದವು. ಆದರೆ ಹೊರಗಿನ ಹತ್ತು ಜನರೊಂದಿಗೆ ಸೇರಿ, ಬಣ್ಣ ಚೆಲ್ಲಿ ಅಥವಾ ಚೆಲ್ಲಿಸಿಕೊಂಡು ಸಂತೋಷಪಡುವ ಅವಕಾಶವನ್ನು ಇವರು ಕಳೆದುಕೊಂಡರು. ನಮ್ಮ ಭಯ-ಭೀತಿಗಳಿಗೆಲ್ಲಾ ಮೂಲಕಾರಣ ಸ್ವಾರ್ಥ. ನಮಗೆ, ನಮ್ಮತನಕ್ಕೆ ಏನಾಗಿಹೋಗುತ್ತದೋ ಎಂಬುದೇ ನಮಗೆ ದೊಡ್ಡ ಚಿಂತೆ. ಆದರೆ ಸುತ್ತಣ ಹಿಗ್ಗಿನಲ್ಲಿ ಬೆರೆಯುವ ಪುಣ್ಯ, ಇವರಿಗೆ ಇವರಂಥ ಎಷ್ಟೋ ಜನಕ್ಕೆ ಇಲ್ಲ. ನಾಗರಿಕತೆಗೂ ಸಂಸ್ಕೃತಿಗೂ ಎಷ್ಟೊಂದು ವ್ಯತ್ಯಾಸ! ನಾವು ನಾಗರಿಕರಾಗಿದ್ದೇವೆ ಎಂಬ ನೆವದಲ್ಲಿ ಸಂಸ್ಕೃತಿಯ ಎಷ್ಟೋ ಆಚರಣೆಗಳನ್ನು ಜರಿದು, ಅದರಿಂದ ದೂರ ಸರಿದು ಯಾವುದೋ ಮೂಲೆಯಲ್ಲಿ ನಾವೇ ಪ್ರತ್ಯೇಕವಾಗಿ ನಿಂತು ಬಿಡುತ್ತೇವೆ. ಸುತ್ತಣ ಚೆಲುವಿನೊಂದಿಗೆ, ನಲವಿನೊಂದಿಗೆ ನಮಗಿರಬೇಕಾದ ಸಹಜ ಸಂಬಂಧವನ್ನು ಕಡಿದುಕೊಂಡು ಬಿಡುತ್ತೇವೆ. ಬದುಕಿನಲ್ಲಿ ಇದಕ್ಕಿಂತ ಶೋಚನೀಯವಾದುದು ಬೇರೆ ಇದೆಯೇ?

ಯಾವುದೂ ಸಣ್ಣದಲ್ಲ : ೨೦೦೪