ಬಂತು ಬೆಳಕು ಬಂಗಾರದ ನಗೆ-
ಎವೆ ತೆರೆದವು ಕಿಟಕಿ.
ಮರಮರದಲಿ ಮಗುವಾಡಿತು
ಹಕ್ಕಿ ಗೆಜ್ಜೆ ಗಿಲಕಿ !

ಬಂತು ಬೆಳಕು ಬಂಗಾರದ ನಗೆ-
ಸ್ವಿಚ್ಚು ಮೇಲೆ ಕೆಳಗೆ,
ಬೆಳಕು ಬಣ್ಣಗಳ ಹೂವು ತೂಗಿದವು
ನಿಂತ ಗಿಡಕೆ ಮರಕೆ !

ಬಂತು ಬೆಳಕು ಬಂಗಾರದ ನಗೆ-
ಶುರುವಾಯಿತು ಗಿರಣಿ !
ಅಲ್ಲೂ ಇಲ್ಲೂ ಎಲ್ಲೂ
ಬಗೆ ಬಗೆ ವಾಕ್ಸರಣಿ.

ಬಂತು ಬೆಳಕು ಬಂಗಾರದ ನಗೆ-
ಸಾಲು ಸಾಲು ತಿಪ್ಪೆ.
ರಾಜಕೀಯ ಬಣ ಸಭೆಯ ಸೇರಿಸಿವೆ
ಹಸಿರು ಹಳದಿ ಕಪ್ಪೆ !

ಬಂತು ಬೆಳಕು ಬಂಗಾರದ ನಗೆ-
ಗೋಡೆ ತುದಿಗೆ ಕೋಳಿ !
‘ನಾನೆ ಅಧ್ಯಕ್ಷ ಈ ಹೊಸ ರಾಜ್ಯಕೆ,
ನನ್ನ ಮಾತು ಕೇಳಿ.’

ಬಂತು ಬೆಳಕು ಬಂಗಾರದ ನಗೆ-
ಹೊರಟವಣ್ಣ ಎಮ್ಮೆ,
‘ಹೋಟೆಲ ಕಾಫಿಗೆ ಹಾಲು ಕರೆಯುವುದೆ
ನಮ್ಮ ಕುಲಕೆ ಹೆಮ್ಮೆ.’

ಬಂತು ಬೆಳಕು ಬಂಗಾರದ ನಗೆ-
ಪತ್ರಿಕೆ ಮಾರುವ ಹುಡುಗ,
ಹರಡುತಿರುವನದೊ ಬೆಳಗಿನ ಬೀದಿಗೆ
ನೂರು ಸುದ್ದಿ ಪಿಡುಗ.

ಬಂತು ಬೆಳಕು ಬಂಗಾರದ ನಗೆ-
ಗುಡಿ ಗಂಟೆಯ ಮೊಳಗು,
ಮೊದಲಿನಂದದೊಳು ಕೇಳದಾಗಿಹುದು,
ಸುತ್ತ ಬರಿಯ ಗುಡುಗು !