ಆ ಹುಡುಗ ಬಿಟ್ಟ ಬಾಣ ಸುಯ್ಯನೆ ಬಂದು ಜಿಂಕೆಗೆ ನೆಟ್ಟಿತು. ತಪ್ಪದ ಗುರಿ. ಆಳವಾದ ಪೆಟ್ಟು ಜಿಂಕೆ ಕೂಗಿಕೊಂಡಿತು ಕರುಣೆ ಹುಟ್ಟಿಸುವ ದನಿಯಲ್ಲಿ ಕಾಲುಗಳನ್ನು ಅಲುಗಾಡಿಸಿ ಒದ್ದಾಡಿತು. ಕೊನೆತ ಉಸಿರೆಳೆಯಿತು. ಅದರ ದೇಹದಿಂದ ಚಿಮ್ಮಿಹರಿದ ರಕ್ತ ನೆಲವನ್ನು ನೆನೆಸಿತು.

ಆ ನೋಟವನ್ನು ನೋಡಿ ಹುಡುಗನ ಮನಸ್ಸು ಅಳುಕಿತು. ಆದರೂ ಹೃದಯ ಗಟ್ಟಿಮಾಡಿಕೊಂಡು ಅದರ ಬಳಿಗೆ ಹೋದ.

ಸತ್ತ ಜಿಂಕೆಯನ್ನು ತನ್ನ ಎರಡೂ ಕೈಗಳಲ್ಲಿ ಹೊತ್ತು ಮನೆಗೆ ತಂದ. ಅದನ್ನು ಅಡಿಗೆ ಮಾಡಲೆಂದು ಕತ್ತರಿಸಿದಾಗ ಅವನ ಹೃದಯ ಒಡೆದಂತಾಯಿತು. ಏಕೆಂದರೆ ಜಿಂಕೆಯ ಹೊಟ್ಟೆಯಲ್ಲಿ ಜೀವವಿಲ್ಲದ ಎರಡು ಹಸುಳೆ ಮರಿಗಳು! ಇನ್ನು ಕೆಲವು ದಿನ ಕಳೆದಿದ್ದರೆ ತಾಯಿ ಜಿಂಕೆ ಆ ಮರಿಗಳಿಗೆ ಜನ್ಮ ಕೊಡುತ್ತಿದ್ದಳೇನೋ.

ಇದನ್ನಂತೂ ಹುಡುಗನಿಗೆ ನೋಡಲಾಗಲಿಲ್ಲ. ಅವನು ಕಣ್ಣುಮುಚ್ಚಿದ. ಕಣ್ಣೀರ ಹನಿಗಳು ಅವನ ಉಬ್ಬಿದ ಕೆನ್ನೆಯನ್ನು ಒದ್ದೆ ಮಾಡಿದವು. ಅಂದೇ ಅವನು ನಿರ್ಧಾರ ಮಾಡಿದ-ಬೇಟೆಯಾಡಬಾರದು, ಮಾಂಸ ತಿನ್ನಬಾರದು.

ಆಗಿನಿಂದಲೇ ಅವನು ಸಂನ್ಯಾಸಿಯ ಜೀವನ ಆರಂಭಿಸಿದ. ಅವನೇ ಬಂದಾ ಬಹಾದ್ದೂರ್.

ಬಾಲ್ಯ

ಬಂದಾ ಬಹಾದ್ದೂರ ಹುಟ್ಟಿದ್ದು ೧೬೭೦ರ ಅಕ್ಟೋಬರ್ ೧೬ರಂದು. ಕಾಶ್ಮೀರದ ಪೂಂಛ್ ಜಿಲ್ಲೆಯ ರಾಜೋರಿ ಎಂಬ ಹಳ್ಳಿಯಲ್ಲಿ ಅವನ ನಿಜವಾದ ಹೆಸರು ಲಕ್ಷ್ಮಣದೇವ, ತಂದೆ ರಾಯದೇವ. ಶೌರ‍್ಯ, ಸಾಹಸಗಳಿಗೆ ಹೆಸರಾದ ರಜಪೂತ.

ಲಕ್ಷ್ಮಣ ಹುಟ್ಟಿದ ಹಳ್ಳಿಯಲ್ಲಿ ಆಗ ಶಾಲೆ ಇರಲಿಲ್ಲ. ಆದ್ದರಿಂದ ಅವನಿಗೆ ಹುಡುಗನಾಗಿದ್ದಾಗ ವಿದ್ಯಾಭ್ಯಾಸವೇ ಆಗಲಿಲ್ಲ. ಅವನು ತಮ್ಮ ತಂದೆಗೆ ಹೊಲ-ಗದ್ದೆಗಳ ಕೆಲಸದಲ್ಲಿ ಸಹಾಯ ಮಾಡುತ್ತಿದ್ದ. ಬೇಟೆಯಾಡುವುದು ಅವನಿಗೆ ಸಂತೋಷದ ಹವ್ಯಾಸವಾಯಿತು. ಆದರೆ ಜಿಂಕೆಯ ಸಾವಿನ ಪ್ರಸಂಗ ಅವನನ್ನು ಬದಲಾಯಿಸಿತು.

ಬೈರಾಗಿ

ಆಗ ಬೈರಾಗಿಗಳೆಂಬ ಸಾಧುಗಳು ಊರಿನಿಂದ ಊರಿಗೆ ಹೋಗುತ್ತಾ ಜನರಿಗೆ ಧರ್ಮದ ಉಪದೇಶ ಮಾಡುತ್ತಿದ್ದರು. ಅವರು ಆಗಾಗ್ಗೆ ರಾಜೋರಿಗೂ ಬರುತ್ತಿದ್ದರು. ಅವರ ಸಹವಾಸಕ್ಕೆ ಲಕ್ಷ್ಮಣದೇವನು ಸೆಳೆಯಲ್ಪಟ್ಟ ಅದರಲ್ಲಿ ಜಾನಕೀ ಪ್ರಸಾದ ಎಂಬ ಭೈರಾಗಿಯ ನಗುನಗುವ  ಮುಖ, ಧೈರ್ಯದಿಂದ ತುಂಬಿದ ಮಾತುಗಳು ಇವೆಲ್ಲ ಕಂಡು ಲಕ್ಷ್ಮಣನು ಜಾನಕೀ ಪ್ರಸಾದನ ಪಟ್ಟ ಶಿಷ್ಯನಾದ ಊರು ಮನೆಯನ್ನು ಬಿಟ್ಟು ಗುರುವನ್ನೇ ಹಿಂಬಾಲಿಸಿದ.

ಆಗಿನ ಪದ್ಧತಿಯಂತೆ ಜಾನಕೀಪ್ರಸಾದ ಅವನಿಗೆ ಮಾಧವದಾಸ ಎಂಬ ಹೊಸ ಹೆಸರು ಇಟ್ಟ.

ಒಮ್ಮೆ ಜಾನಕೀಪ್ರಸಾದನೊಡನೆ ಲಾಹೋರ್ ಬಳಿಯ ಪುಣ್ಯಕ್ಷೇತ್ರಕ್ಕೆ ಬಂದಾಗ ಅಲ್ಲಿ ರಾಮದಾಸ ಎಂಬ ಇನ್ನೊಬ್ಬ ಬೈರಾಗಿಯ ಭೇಟಿಯಾಯಿತು. ಮಾಧವದಾಸ ರಾಮದಾಸನ ಪ್ರಭಾವಕ್ಕೆ ಒಳಗಾದ. ಅವನ ಶಿಷ್ಯನಾದ. ಅವನೊಡನೆ ದಕ್ಷಿಣದ ಮಹಾರಾಷ್ಟ್ರಕ್ಕೆ ಬಂದ. ನಾಸಿಕ್ ಬಳಿಯ ಪಂಚವಟಿ ಸಿಕ್ಕಿತು. ಬಹು ಹಿಂದೆ ಶ್ರೀರಾಮ, ಸೀತೆ, ಲಕ್ಷ್ಮಣರು ೧೪ ವರ್ಷಗಳ ತಮ್ಮ ವನವಾಸದ ಕಾಲದಲ್ಲಿ ತಂಗಿದ್ದ ಪವಿತ್ರ ಸ್ಥಳ ಅದು. ಆ ಸ್ಥಳದ ಶಾಂತ ವಾತಾವರಣ ಮಾಧವದಾಸನ ಮನಸ್ಸಿಗೆ ಹಿಡಿಸಿತು. ಅವನು ಅಲ್ಲೇ ಉಳಿಯಲು ನಿರ್ಧರಿಸಿದ.

ವಿದ್ಯಾ ಪರಿಣತ

ಪಂಟವಟಿಯಲ್ಲಿದ್ದಾಗಲೇ ಮಾಧವದಾಸನಿಗೆ ಅಘೋರನಾಥ ಎಂಬ ಯೋಗಿಯ ಪರಿಚಯ ಆಯಿತು. ಅಘೋರ ನಾಥನಿಗೆ ಮಂತ್ರ ವಿದ್ಯೆ, ಯೋಗ ವಿದ್ಯೆಗಳ ಪಾಂಡಿತ್ಯವಿತ್ತು. ಮಾಧವದಾಸ ಅವನಿಂಧ ಆ ವಿದ್ಯೆಗಳನ್ನು ಕಲಿಯಲು ಆರಂಭಿಸಿದ.

ಮಾಧವದಾಸನ ಗುರುಭಕ್ತಿ, ಏಕಾಗ್ರತೆ, ವಿನಯ ಇವುಗಳನ್ನು ನೋಡಿ ಅಘೋರನಾಥ ಸಂತೋಷಗೊಂಡ. ತನಗೆ ತಿಳಿದ ಎಲ್ಲಾ ವಿದ್ಯೆಗಳನ್ನೂ ಮಾಧವದಾಸನಿಗೆ ಹೇಳಿಕೊಟ್ಟ ಮಾಧವದಾಸ ಮಂತ್ರ ವಿದ್ಯೆ, ಯೋಗ ವಿದ್ಯೆಗಳಲ್ಲಿ ಪರಿಣತನಾದ.

ನಾಂದೇಡ್ ನಲ್ಲಿ ಆಶ್ರಮ

೧೬೯೧ರಲ್ಲಿ ಅಘೋರನಾಥ ಮರಣ ಹೊಂದಿದ. ಅನಂತರ ಮಾಧವದಾಸ ತನ್ನದೇ ಆದ ಬೇರೆ ಆಶ್ರಮ ಸ್ಥಾಪಿಸಲು ಯೋಚಿಸಿದ. ಅದಕ್ಕಾಗಿ ಹುಡುಕುತ್ತಾ ಗೋದಾವರಿ ನದೀ ತೀರದ ನಾಂದೇಡ್ ಎಂಬ ಸ್ಥಳಕ್ಕೆ ಬಂದ.

ಸುತ್ತಲೂ ಗಿಡಮರಗಳಿಂದ ಕೂಡಿದ ಸೊಬಗಿನ ನೋಟ. ಮುಂದೆ ನಿರ್ಮಲವಾದ, ಸ್ವಚ್ಛವಾದ ಗೋದಾವರಿಯ ನೀರು ಹರಿಯುತ್ತಿದೆ. ಮಾಧವದಾಸ ಅಲ್ಲೇ ಒಂದು ಗುಡಿಸಲು ಕಟ್ಟಿ ವಾಸಿಸಲು ಆರಂಭಿಸಿದ. ಆಶ್ರಮದ ಸುತ್ತಲು ಕಟ್ಟಿ, ವಾಸಿಸಲು ಆರಂಭಿಸಿದ. ಆಶ್ರಮದ ಸುತ್ತಲೂ ಚೆನ್ನಾಗಿ ಹೂದೋಟವನ್ನು ಬೆಳೆಸಿದ. ಗುಡಿಸಲಿನ ಒಳಗೆ ಒಂದು ಪೀಠವನ್ನು ಸಿದ್ಧಪಡಿಸಿದ.

ಮಾಧವದಾಸನ ಕೀರ್ತಿ ಹರಡಲು ಹೆಚ್ಚು ಕಾಲ ಬೇಕಾಗಲಿಲ್ಲ. ಅವನ ದರ್ಶನ ಮಾಡಲೆಂದು ಜನ ತಂಡೋಪ ತಂಡವಾಗಿ ಆಶ್ರಮಕ್ಕೆ ಬರಲಾರಂಭಿಸಿದರು. ಕೆಲವರು ತಮ್ಮ ದುಃಖ, ಕಾಯಿಲೆಗಳನ್ನು ಅವನೆದುರು ಹೇಳಿಕೊಳ್ಳುತ್ತಿದ್ದರು. ಅವನಿಂದ ಶಾಂತಿ, ಸಮಾಧಾನ ಪಡೆಯುತ್ತಿದ್ದರು. ತನ್ನ ಯೋಗ ಶಕ್ತಿಯಿಂದ ಅವನು ಜನರ ಕಾಯಿಲೆ ವಾಸಿಮಾಡುತ್ತಿದ್ದನೆಂದೂ ಹೇಳುತ್ತಾರೆ.

ಯಾತ್ರಾರ್ಥಿಗಳಾಗಿದ್ದ ಸಾಧುಸಂತರೂ ಬಂದು ಅವನ ಆಶ್ರಮದಲ್ಲಿ ತಂಗುತ್ತಿದ್ದರು. ಆದರೆ ಗುಡಿಸಲಿನಲ್ಲಿದ್ದ ಪೀಠಕ್ಕೆ ಒಂದು ಮಹಿಮೆ ಇತ್ತೆಂದು ನಂಬುತ್ತಾರೆ. ಯಾರಾದರೂ ಬೇರೆಯವರು ಅದರ ಮೇಲೆ ಕುಳಿತರೆ ಬಿದ್ದುಬಿಡುತ್ತಿದ್ದರು. ಮಾಧವದಾಸ ತನ್ನ ಯೋಗ ವಿದ್ಯೆಯಿಂದ ಹೀಗೆ ಮಾಡಿದ್ದನಂತೆ.

ಗುರು ಗೋವಿಂಧ ಸಿಂಹ

ಗುರು ಗೋವಿಂಧ ಸಿಂಹ ಸಿಖ್ಖರ ಹತ್ತನೇ ಗುರು. ದೆಹಲಿಯ ಬಾದಶಹನಾಗಿದ್ದ ಔರಂಗಜೇಬನ ಮತೀಯ ದರ್ಪದ ವಿರುದ್ಧ ಸತತವಾಗಿ ಹೋರಾಡುತ್ತಿದ್ದ ವೀರಾಗ್ರಣಿ.

ಅವರು ದಕ್ಷಿಣದ ಕಡೆ ಬಂದಾಗ ಬೈರಾಗಿ ಮಾಧವದಾಸನ ವಿಷಯ ಕಿವಿಗೆ ಬಿತ್ತು. ಅವರು ಬೈರಾಗಿಯನ್ನು ನೋಡಲು ಬಯಸಿದರು. ಮಾಧವದಾಸನೂ ಗುರುಗೋವಿಂದರ ಹೆಸರು ಕೇಳಿದ್ದ.

ಗುರು ಗೋವಿಂದ ಸಿಂಹ ಬೈರಾಗಿಯ ಆಶ್ರಮಕ್ಕೆ ಬಂದಾಗ ಅವನು ಅಲ್ಲಿರಲಿಲ್ಲ. ನೇರವಾಗಿ ಹೋಗಿ ಪೀಠದ ಮೇಲೆ ಕುಳಿತರು. ಆಶ್ಚರ್ಯವೆಂದರೆ ಅವರಿಗೆ ಏನೂ ಆಗಲಿಲ್ಲ!

ವಿಷಯ ತಿಳಿದ ಮಾಧವದಾಸ ಕೋಪಗೊಂಡು ಆಶ್ರಮಕ್ಕೆ ಬಂದ. ಪೀಠದ ಎದುರು ನಿಂತು ಗೋವಿಂದ ಸಿಂಹರನ್ನು ಪ್ರಶ್ನಿಸಿದ:

“ಯಾರು ನೀನು?”
ಗುರು ಗೋವಿಂದ ಸಿಂಹ ನಸುನಗುತ್ತ ಉತ್ತರಿಸಿದಿರು
“ನಾನಾರೆಂದು ನಿನಗೇ ಗೊತ್ತಿದೆ”
“ಅದು ಹೇಗೆ?”
“ಸ್ವಲ್ಪ ಯೋಚಿಸಿ ನೋಡು”.
“ಓ! ನೀವು ಗುರು ಗೋವಿಂದ ಸಿಂಹರಲ್ಲವೆ?”
“ಹೌದು”
“ನಿಮ್ಮ ಆಗಮನದ ಉದ್ದೇಶವೇನು?”
“ನಿನ್ನನ್ನು ಪರಿವರ್ತಿಸಲು ನಾನು ಬಂದ್ದೇನೆ”
“ಕೃಪೆ ಮಾಡಿ ನನ್ನ ಅಹಂಕಾರವನ್ನು ಮನ್ನಿಸಿ”

ಅರಿಯದೇ ನಾನು ಮಾಡಿದ ತಪ್ಪನ್ನು ಕ್ಷಮಿಸಿ. ನಾನು ನಿಮ್ಮ ಬಂದಾ (ಸೇವಕ) ಎಂದು ಹೇಳಿ ಮಾಧವದಾಸ ಗುರು ಗೋವಿಂದ ಸಿಂಹರಿಗೆ ತಲೆಬಾಗಿ ನಮಸ್ಕರಿಸಿದ.

‘ನನ್ನ ಕೆಲಸ ಮುಂದುವರೆಸು’

ಗುರು ಗೋವಿಂದ ಸಿಂಹರು ಮಾಧವದಾಸನ ಭುಜಗಳನ್ನು ಹಿಡಿದು ಎತ್ತಿದರು.

ನಿನ್ನಿಂದ ಒಂದು ದೊಡ್ಡ ಕೆಲಸ ಆಗಬೇಕು.ಅದಕ್ಕಾಗಿಯೇ ನಾನು ಇಲ್ಲಿಗೆ ಬಂದಿದ್ದೇನೆ ಎಂದು ಹೇಳಿದರು.

ಪೂಜ್ಯರೇ, ನಿಮ್ಮ ಚಿಕ್ಕ ಆಸೆಯನ್ನೇ ಆಗಲಿ, ಅದನ್ನು ಪೂರೈಸಲು ನನ್ನ ಜೀವನವನ್ನೇ ಅರ್ಪಿಸುತ್ತೇನೆ ಮಾಧವದಾಸ ಹೇಳಿದ.

ಗುರು ಗೋವಿಂದ ಸಿಂಹರು ಹೇಳಲು ಆರಂಭಿಸಿದರು.

“ನಮ್ಮ ಭಾರತ ದೇಶದ ಉತ್ತರದ ಭಾಗದಲ್ಲಿ ಕೆಲವರು ಜನರಿಗೆ ಬಹಳ ತೊಂದರೆ ಕೊಡುತ್ತಿದ್ದಾರೆ. ಜನರು ಶಾಂತಿಯಿಂದ ಬದುಕುವುದೇ ಅಸಾಧ್ಯವಾಗಿದೆ. ಸೆರೆಸಿಕ್ಕ ನನ್ನ ಇಬ್ಬರು ಎಳೆಯ ಮಕ್ಕಳ ಮೇಲೆ ಗೋಡೆಕಟ್ಟಿ ಜೀವಂತ ಸಮಾಧಿ ಮಾಡಿದರು.

“ಇಂತಹ ದಬ್ಬಾಳಿಕೆಯ ವಿರುದ್ಧ ನಾನು ಎಡೆಬಿಡದ ಹೋರಾಟ ನಡೆಸುತ್ತಿದ್ದೇನೆ. ಈಗ ದುಷ್ಟರ ವಿರುದ್ಧ ಹೋರಾಡುವ ನನ್ನ ಕೆಲಸವನ್ನು ನೀನು ಮುಂದುವರೆಸು. ಜನರಲ್ಲಿ ಧೈರ್ಯ ತುಂಬು. ಅವರು ಶಾಂತಿಯಿಂದ ಬಾಳುವಂತೆ ಮಾಡು.

“ಇಂದಿನಿಂದ ನಿನ್ನ ಹೆಸರು “ಬಂದಾ ಬಹಾದ್ದೂರ್” ಎಂದಾಗಲಿ. ನನ್ನ ಅನುಯಾಯಿಗಳೆಲ್ಲರೂ ನಿನ್ನ ನಾಯಕತ್ವವನ್ನು ಒಪ್ಪಿ, ನೀನು ಹೇಳಿದಂತೆ ನಡೆಯುತ್ತಾರೆ.

 

"ನಾನು ನಿಮ್ಮ ಬಂದಾ"


ಇಷ್ಟು ಹೇಳಿ ಗುರು ಗೋವಿಂದ ಸಿಂಹರು ಬಂದಾ ಬಹಾದ್ದೂರನ ಚಾಚಿದ ಎರಡೂ ಕೈಗಳ ಮೇಲೆ ತಮ್ಮ ಖಡ್ಗವನ್ನು ಇಟ್ಟರು. ತಮ್ಮ ಬತ್ತಳಿಕೆಯಿಂದ ಐದು ಬಾಣಗಳನ್ನು ತೆಗೆದು ಅವನಿಗೆ ನೀಡಿದರು.

ಬಂದಾ ಬಹಾದ್ದೂರನ ನೇತೃತ್ವದಲ್ಲಿ ಶೂರ್ ಶಿಖ್ ತಂಡ ಹೊರಟಿತು. ಕೆಲವೇ ಜನರಿದ್ದ ಪುಟ್ಟ ಗುಂಪು ಅದು.

ಹೊರಡುವ ಮೊದಲು ಗುರು ಗೋವಿಂದ ಸಿಂಹರು ಬಂದಾನಿಗೆ ಎಚ್ಚರಿಕೆ ಕೊಡುವುದನ್ನು ಮರೆಯಲಿಲ್ಲ.

“ಸ್ತ್ರೀಯ ಸಂಗ ಸೇರಿ ನಡತೆಗೆಡಬಾರದು. ಹೊಸ ಮತಸ್ಥಾಪಿಸಬಾರದು. ನಿನ್ನನ್ನೇ ಗುರು ಎಂದು ಕರೆದುಕೊಳ್ಳಬಾರದು. ‘ಖಾಲಸಾದ’ ಸೇವಕನಾಗಿ ಸಿಖ್ಖರೊಡನೆ ಪ್ರೀತಿಯಿಂದ ಬಾಳಬೇಕು.” (ಗುರು ಗೋವಿಂದ ಸಿಂಹರು ವೀರ ಪಂಥಕ್ಕೆ ‘ಖಾಲಸಾ’ ಎನ್ನುತ್ತಾರೆ.)

ಯುದ್ಧ ಸಿದ್ಧತೆ

ಗುರುವಿನಿಂದ ಅಜ್ಞೆಯನ್ನು ಪಡೆದು ಬಂದಾ ಬಹಾದ್ದೂರನು ಪಂಜಾಬಿನ ಕಡೆ ಪ್ರಯಾಣ ಬೆಳೆಸಿದ. ಮೊಟ್ಟಮೊದಲು ಅವನು ಗುರುವಿನ ಅಪಮಾನದ ಸೇಡನ್ನು ತೀರಿಸಿಕೊಳ್ಳಬೇಕಿತ್ತು. ಜನರು ಶಾಂತಿಯಿಂದ ಬಾಳುವಂತೆ ಮಾಡಬೇಕಿತ್ತು.

ಇದಕ್ಕೆ ಮೊದಲು ಆಗಬೇಕಾದದ್ದು ಸೈನ್ಯದ ಜಮಾವಣೆ. ಸೈನಿಕರಿಗೆ ಶಸ್ತ್ರಾಸ್ತ್ರಗಳ ತರಬೇತಿ ಬಂದಾ ಬಹಾದ್ದೂರ ಸೈನಿಕರನ್ನು  ಸೇರಿಸತೊಡಗಿದ. ಅವರಿಗೆ ಶ್ರೇಷ್ಠ ರೀತಿಯ ತರಬೇತಿಯನ್ನೂ ನೀಡಿದ.

ಆದರೆ ಯುದ್ಧದ ಖರ್ಚಿಗಾಗಿ, ಶಸ್ತ್ರಾಸ್ತ್ರಗಳಿಗಾಗಿ ದುಡ್ಡು ಎಲ್ಲಿಂದ ಬರಬೇಕು? ಆಗ ದೇವರೇ ಕಳಿಸಿದಂತೆ ಭರತಪುರದ ವ್ಯಾಪಾರಿಯೊಬ್ಬ ತನ್ನ ಅಪಾರ ಮೊತ್ತದ ಹಣವನ್ನು ಬಂದಾನಿಗೆ ದಾನ ಮಾಡಿದ. ತನ್ನ ಆದಾಯದ ಹತ್ತನೇ ಒಂದು ಪಾಲನ್ನು ಈ ಕಾರ್ಯಕ್ಕಾಗಿ ಕೊಡುವ ವಾಗ್ದಾನ ಮಾಡಿದ.

ಬಂದಾ ಬಹಾದ್ದೂರನು ಸಭೆಗಳನ್ನು ಸೇರಿಸುತ್ತಿದ್ದ ಅಲ್ಲಿಗೆ ಬರುತ್ತಿದ್ದ ಬಡವರಿಗೆ ಧನಸಹಾಯ ಮಾಡುತ್ತಿದ್ದ ಅವರಿಗೆ ಒಳ್ಳೆಯದಾಗಲಿ ಎಂದು ಮನಸ್ಸು ತುಂಬಿ ಹರಸುತ್ತಿದ್ದ.

ತಮ್ಮ ಉದ್ಧಾರ ಇವನಿಂದಲೇ ಸಾಧ್ಯ ಎಂದು ಜನ ಮಾತನಾಡತೊಡಗಿದರು. ಬೃಹತ್ ಸೈನ್ಯಶಕ್ತಿಯೂ ಸಿದ್ಧವಾಯಿತು.

ದರೋಡೆಕೋರರ ನಿರ್ನಾಮ

ಒಂದು ದಿನ ಬಂಗಾರ್ ಎಂಬ ಹಳ್ಳಿಯ ಜನ ಭಯದಿಂದ ತಪ್ಪಿಸಿಕೊಂಡು ಹೋಗುತ್ತಿರುವುದು ತಿಳಿಯಿತು. ಅವರನ್ನು ವಿಚಾರಿಸಿದಾಗ ದರೋಡೆಕೋರರು ಅವರ ಹಳ್ಳಿಯನ್ನು ಕೊಳ್ಳೆ ಹೊಡೆಯಲಿದ್ದಾರೆಂದೂ ಅದಕ್ಕೇ ಓಡಿ ಹೋಗುತ್ತಿದ್ದಾರೆಂದೂ ತಿಳಿಯಿತು.

ಬಂದಾನು ಆ ಹಳ್ಳಿಗರಿಗೆ ಧೈರ್ಯ ಹೇಳಿದ, ದರೋಡೆಕೋರರನ್ನು ಎದುರಿಸಲು ಉಪಾಯ ಹೂಡಿದ.

ಇದರಿಂದ ದರೋಡೆಕೋರರ ಯೋಜನೆ ಫಲಿಸಲಿಲ್ಲ. ಅವರು ಜೀವಭಯದಿಂದ ಹಳ್ಳಿ ಬಿಟ್ಟು ಓಡಿದರು. ಅವರ ಹಿಂದಿನ ಲೂಟಿಯ ಹಣವೂ ಬಂದಾನ ಕೈವಶವಾಯಿತು.

ಈ ಪ್ರಸಂಗದಿಂದ ಬಂದಾನ ಮೇಲೆ ಜನರ ಗೌರವ ವೃದ್ಧಿಯಾಯಿತು. ಎಲ್ಲೇ ಕಳ್ಳಕಾರಕ, ಡಕಾಯಿತರ ಹಾವಳಿ ಇರಲಿ, ತಾನು ಜನರ ರಕ್ಷಣೆಗಾಗಿ ಬರುವುದಾಗಿ ಬಂದಾ ಘೋಷಿಸಿದ. ಅನ್ಯಾಯ, ದಬ್ಬಾಳಿಕೆಯ ವಿರುದ್ಧ ಹೋರಾಟದಲ್ಲಿ ಜನರೂ ಸಹಕರಿಸಬೇಕೆಂದು ಕರೆ ನೀಡಿದ. ಲಕ್ಷ ಲಕ್ಷ ಜನರು ಅವನ ಕರೆಗೆ ಓಗೊಟ್ಟರು.

ಗುರು ಗೋವಿಂದರ ಹತ್ಯೆ

ಬಂದಾನ ಗುರಿ – ಸರ್ ಹಿಂದ್ ನ ನವಾಬ ವಜೀರ್ ಖಾನ್. ವಜೀರಖಾನನ್ನು ಕೈಯಾರ ವಧೆ ಮಾಡಿ ಪ್ರತೀಕಾರ ತೀರಿಸಿಕೊಳ್ಳಬೇಕೆಂದು ಗುರು ಗೋವಿಂದರ ಆದೇಶವಿತ್ತು.

ಬಂದಾನು ಕೇವಲ ಪರಾಕ್ರಮಿ ಅಷ್ಟೇ ಆಗಿರಲಿಲ್ಲ. ಯುದ್ಧದಲ್ಲಿ ಗೆಲ್ಲಲು ಹೋರಾಡಬೇಕಾದ ತಂತ್ರಗಳ ಬಗ್ಗೆಯೂ ಅವನಿಗೆ ತೀಕ್ಷ್ಣ ಬುದ್ಧಿ ಇತ್ತು. ಸರ್‌ಹಿಂದನ ಕೋಟೆಗಳನ್ನು ಮುತ್ತುವ ಮೊದಲು ಅದರ ಸುತ್ತಮುತ್ತಲ ಕೋಟೆಗಳನ್ನು ವಶಪಡಿಸಿಕೊಳ್ಳಬೇಕೆಂದು ಅವನು ಉಪಾಯ ಹಾಕಿದ. ಇದರಿಂದ ವೈರಿಯ ಶಕ್ತಿ ಕುಗ್ಗುವುದೆಂದು ಅವನ ಎಣಿಕೆ.

ಈ ನಡುವೆ ಬೆಂಕಿಗೆ ತುಪ್ಪ ಹೊಯ್ಯುವಂತಹ ಒಂದು ಘಟನೆ ನಡೆಯಿತು. ದೆಹಲಿಯ ಬಾದಶಹನ ದೂತನೊಬ್ಬ ನಾಂದೇಡ್ ನಲ್ಲಿದ್ದ ಗುರು ಗೋವಿಂದ ಸಿಂಹರ ಬಳಿ ಹೋಗಿ, ಸುಳ್ಳು ಹೆಸರಿನಿಂದ ಅವರ ಕಪಟ ಶಿಷ್ಯನಾದ. ಒಂದು ರಾತ್ರಿ ಅವರು ಮಲಗಿದ್ದಾಗ ಹೇಡಿಯಂತೆ ಅವರ ಮೇಲೆ ಬಿದ್ದು, ಅವರ ಕೊಲೆ ಮಾಡಿದ. ಈ ಸುದ್ದಿ ಬಂದಾನಿಗೆ ಮುಟ್ಟಿದಾಗ ಅವನು ಕೋಪದಿಂದ ಬುಸುಗುಟ್ಟಿದ. ಅವನ ಕ್ರೋಧಜ್ವಾಲೆ ತನ್ನ ಕೆನ್ನಾಲಿಗೆಯನ್ನು ಬಾನೆತ್ತರಕ್ಕೆ ಚಾಚಿತು.

ಮೊದಲು ಸಮಾನಾ ನಗರವನ್ನು ಮುತ್ತಿಗೆ ಹಾಕುವುದೆಂದು ಬಂದಾನು ಯೋಚಿಸಿದ. ಇದಕ್ಕೆ ಒಂದು ಕಾರಣವೂ ಇತ್ತು.

ಗುರು ಗೋವಿಂದ ಸಿಂಹರ ತಂದೆ ಗುರು ತೇಗಬಹಾದ್ದೂರ್. ಅವರನ್ನು ಮೋಸದಿಂದ ಕೊಲ್ಲಲು ಕಾರಣನಾದವನು ಜಲಾಲುದ್ದೀನ್. ಅವನ ಹುಟ್ಟೂರೇ ಸಮಾನಾ. ಸಂಪತ್ತಿನಿಂದ ಕೂಡಿದ ಊರು. ಅಲ್ಲಿಯ ಫಜುದಾರನಿಗೆ ಬಂದಾನ ಸೈನ್ಯಶಕ್ತಿಯ ಅರಿವು ಇರಲಿಲ್ಲ. ನೋಡು-ನೋಡುತ್ತಿದ್ದಂತೆಯೇ ಸಮಾನಾ ನಗರ ಬಂದಾನ ದಾಳಿಗೆ ತುತ್ತಾಯಿತು. ಜಲಾಲುದ್ದೀನನ ಕುಟುಂಬದವರನ್ನು ವಧಿಸಿದಾಗ ಬಂದಾನ ಖಡ್ಗದ ಬಾಯಾರಿಕೆ ಸ್ವಲ್ಪ ಇಂಗಿತು. ಫತೇಸಿಂಗನನ್ನು ಸಮಾನಾದ ಆಡಳಿತ ನೋಡಿಕೊಳ್ಳಲು ನೇಮಿಸಿದ.

ಬಂದಾನ ಸೈನ್ಯವನ್ನು ಅಳತೆ ಮಾಡಲು ವಜೀರ್ ಖಾನನ ಗುಪ್ತಚರರು ಮುತ್ತಿಗೆಯ ಸಮಯದಲ್ಲಿ ನುಸುಳಿದ್ದರು. ಅವರು ಬಂದಾನ ಮಿಂಚುಗಣ್ಣಿನಿಂದ ತಪ್ಪಿಸಿಕೊಳ್ಳಲು ಅಗಲಿಲ್ಲ. ಅವರನ್ನು ಶಿಕ್ಷಿಸಿ ವಜೀರ್ ಖಾನನ ಬಳಿಗೆ ಕಳಿಸಿದ ಬಂದಾ. ವಜೀರನಿಗೂ ಇದೇ ಗತಿ ಕಾದಿದೆ ಎಂದು ಹೇಳಿ ಕಳಿಸಿದ!

ಸಧೌರಾ, ರೋಪಾರ್, ಶಹಾಬಾದ, ಮುಸ್ತಫಾಬಾದ್ ಇವೇ ಮೊದಲಾದ ನಗರಗಳು ಬಂದಾನ ಬಾಹುಬಲಕ್ಕೆ ಶರಣಾದವು.

ಸರ್ ಹಿಂದ್ ಕಾಳಗ

ಬಂದಾನ ವಿಜಯಗಳನ್ನು ಕೇಳಿದ ವಜೀರ್ ಖಾನ್ ಮೋಸದಿಂದ ಕೂಡಿದ ಒಂದು ತಂತ್ರವನ್ನು ಹೂಡಿದ. ತನ್ನ ಕಡೆಯ ಒಂದು ಸಾವಿರ ಸೈನಿಕರನ್ನು ಬಂದಾನ ಕಡೆ ಕಳಿಸಿದ. ಅವರು ಖಾನನ ಪಕ್ಷ ಬಿಟ್ಟು ಬಂದಾನಿಗೆ ಶರಣಾಗಿರುವುದಾಗಿ ಹೇಳಿದರು. ಇದು ವಜೀರನ ಕುತಂತ್ರ ಇರಬಹುದೆಂದು ಬಂದಾನಿಗೆ ಅನಿಸಲಿಲ್ಲ. ಅದಕ್ಕೇ ಅವರಿಗೆ ಆಶ್ರಯ ನೀಡಿದ. ಆದರೆ ಎಚ್ಚರಿಕೆಯನ್ನೂ ಹೇಳಿದ. ಏನಾದರೂ ದ್ರೋಹ ಬಗೆದರೆ ತಲೆ ಉರುಳಿಸುವುದಾಗಿ ತಿಳಿಸಿದ. ಬಂದಾನ ಗೃಧ್ರದೃಷ್ಟಿ ತಪ್ಪಿಸಿಕೊಂಡು ಅವರಿಗೆ ಏನೂ ಮಾಡಲಾಗಲಿಲ್ಲ. ಯುದ್ಧ ಆರಂಭವಾದ ಬಳಿಕ ಅವರು ವೈರಿಗಳ ಕಡೆಗೆ ವಾಲುತ್ತಿರುವುದು ಕಾಣಿಸಿತು. ಮೊದಲು ಅವರನ್ನು ಹೊಡೆದು ಉರುಳಿಸಲಾಯಿತು.

ಯುದ್ಧ ಪ್ರಾರಂಭವಾಗುವ ಮೊದಲು ವಜೀರ್ ಖಾನ್ ಇನ್ನೊಂದು ತಂತ್ರ ಹೂಡಿದ. ಬಂದಾನ ಮನಃಸ್ಥೈರ್ಯ ಕುಗ್ಗಿಸುವ ವಂಚನೆ ಅದು. ಅವನು ಬಂದಾನಿಗೆ ಒಂದು ಪತ್ರವನ್ನು ಬರೆದ.

“ನಿನ್ನ ಗುರುವಿನ ಮಕ್ಕಳನ್ನು ಹತ್ಯೆ ಮಾಡಿದವನು ನಾನೇ. ನಿನ್ನ ಗುರು ಕಳ್ಳ ತಪ್ಪಿಸಿಕೊಂಡು ದೇಶಾಂತರ ಹೋಗುವಂತೆ ಮಾಡಿದೆ. ನನ್ನ ಶಕ್ತಿಯ ಎದುರು ನಿಲ್ಲುವವರೇ ಇಲ್ಲ. ಅಲ್ಲದೆ ನನಗಾದರೋ ದೆಹಲಿಯ ಚಕ್ರವರ್ತಿಯ ಬೆಂಬಲವಿದೆ. ನೀನಾದರೋ ಯಃಕಶ್ಚಿತ್ ಭಿಕಾರಿ, ಬೈರಾಗಿ. ನಿನಗೆ ಯಾರ ಬೆಂಬಲವಿದೆ? ಆದ್ದರಿಂದ ನಿನ್ನ ಯೋಕ್ಷೇಮ ನೋಡಿಕೋ. ಒಳ್ಳೆಯ ಮಾತಿನಿಂದ ಸರ್ ಹಿಂದ್ ಗೆ ಲಗ್ಗೆ ಹಾಕುವ ದುಸ್ಸಾಹಸದಿಂದ ಹಿಂತಿರುಗು.

ಇಂತಹ ಬೆದರಿಕೆಗಳಿಗೆ ತತ್ತರಿಸುವ ಮನುಷ್ಯ ಆಗಿರಲಿಲ್ಲ ಬಂದಾ. ಅವನದು ಉಕ್ಕಿನ ಮನಸ್ಸು. ಅವನೂ ಒಂದು ಮಾರುತ್ತರ ಬರೆದು ಕಳಿಸಿದ.

“ನೀನು ಹೇಳುವುದು ನಿಜ. ನಾನೋ ಕೇವಲ ಒಬ್ಬ ಬೈರಾಗಿ ಹೇಳಿಕೊಳ್ಳುವಂತಹ ಯಾವುದೇ ಅಧಿಕಾರ ದೌಲತ್ತುಗಳು ನನಗಿಲ್ಲ. ಆದರೆ ನಿನ್ನ ಪೈಶಾಚಿಕ ಕೃತ್ಯಗಳಿಂದ ನಿನ್ನ ಪಾಪದ ಬುಟ್ಟಿ ತುಂಬಿದೆ. ನಿನ್ನ ಪಾಪದ ಫಲ ಉಣ್ಣುವ ಕಾಲ ಬಂದಿದೆ. ಹಿಂದಿರುಗು ಎಂದು ಉಪದೇಶಿಸುವೆಯಾ? ಅದರ ಮಾತೇ ಬೇಡ. ನನ್ನ ಗುರುವಿನ ಆದೇಶವನ್ನು ನಾನು ಅಕ್ಷರಶಃ ಪಾಲಿಸುವೆ. ಸುಮ್ಮನೆ ಆಟಾಟೋಪದ ಜೊಳ್ಳು ಪತ್ರದಿಂದೇಕೆ ಸಮಯ ಹಾಳು ಮಾಡುವೆ?”

ಸಿಡಿಗುಂಡಿನಂತರ ಉತ್ತರ ನೋಡಿ ಖಾನ ಸಾಹೇಬನಿಗೆ ಒಮ್ಮೆ ಎದು ನಡುಗಿತು. ತನ್ನ ಸಹಾಯಕ್ಕಾಗಿ ಸರದಾರರನ್ನು ಫೌಜುದಾರರನ್ನು ಕರೆಸಿದ. ತುಫಾಕಿಗಳೇ ಮುಂತಾದ ಆಧುನಿಕ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿದ. ನೂರಾರು ಆನೆಗಳು, ಸಹಸ್ರಾರು ಯುದ್ಧಾಶ್ವಗಳು ಸಿದ್ಧವಾದವು.

ಬಂದಾನಾ ಸೈನ್ಯದಲ್ಲಿ ಸಲಕರಣೆಗಳು ತುಂಬಾ ಕಡಿಮೆ. ಆನೆಗಳೊಂದೂ ಇರಲಿಲ್ಲ. ತುಫಾಕಿಯೂ ಇಲ್ಲ. ಆದರೆ ಸಿಖ್ ಯೋಧರಲ್ಲಿ ತುಳಿಯಲಾಗದ ಕೆಚ್ಚಿತ್ತು.

೧೭೧೦ ರ ಮೇ ೨೨ ರಂದು ಯುದ್ಧ ಶುರುವಾಯಿತು. ಬಂದಾನು ಒಂದು ಎತ್ತರದ ಗುಡ್ಡದ ಮೇಲೆ ಕುಳಿತು ಸೈನ್ಯವನ್ನು ನಿರ್ದೇಶಿಸುತ್ತಿದ್ದ. ಆನೆಯ ಮೇಲೆ ಕುಳಿತು ಯುದ್ಧ ಮಾಡುತ್ತಿದ್ದ ವಜೀರನ ಸೈನಿಕರ ವಿರುದ್ಧ ಬಂದಾನ ಯೋಧರ ಕೈ ಸೋಲತೊಡಗಿತು. ಬಂದಾನ ಸೈನದಲ್ಲಿ ಒಳ್ಳೆಯ ಜಾತಿಯ ಯುದ್ಧ ಕುದುರೆಗಳೂ ಇರಲಿಲ್ಲ.

ಬಂದಾ ಸುಮ್ಮನೇ ಕುಳಿತುಕೊಳ್ಳಲಾಗಲಿಲ್ಲ. ತಾನೇ ಕುದುರೆಯೇರಿ ಉದ್ಧವಾದ ಖಡ್ಗವನ್ನು ಝಳಪಿಸುತ್ತ ಸಮರಾಂಗಣಕ್ಕೆ ನೆಗೆದ. ಮಿಂಚಿನಂತೆ ತನ್ನ ಕುದುರೆಯನ್ನು ಓಡಿಸಿದ. ಅದರ ಕಾಲ್ತುಳಿತಕ್ಕೆ ಸಿಕ್ಕೇ ಶತ್ರುಗಳನೇಕರು ಹತರಾದರು. ಶಿವನ ಉರಿಗಣ್ಣಿನಂತೆ ಅವನ ಕಣ್ಣುಗಳು ಕಿಡಿಕಾರುತ್ತಿದ್ದವು. ಅವನ ನೋಟಕ್ಕೇ ಕೆಲವರ ಕೈ ಕಾಲುಗಳು ನಡುಗಲಾರಂಭಿಸಿದವು.

 


ಬಂದಾ ಬಹದ್ದೂರನನು ಸಮರಾಂಗಣಕ್ಕೆ ನೆಗೆದ.


 

ತಮ್ಮ ನಾಯಕನೂ ಯುದ್ಧ ಭೂಮಿಗೆ ಧುಮುಕಿದ್ದು ಕಂಡು ಸಿಖ್ಖರಿಗೆ ಇಮ್ಮಡಿ ಉತ್ಸಾಹ ಬಂತು. ಅವರೂ ದೇಹದಲ್ಲಿ ಭೂತಸಂಚಾರವಾದಂತೆ ಕಾದಿದರು. ಸತ್ ಶ್ರೀ ಅಕಾಲ್ ಎಂಬ ಉದ್ಘೋಷ ಗಗನಕ್ಕೇರಿತು.

ಸ್ವತಃ ವಜೀರ್ ಖಾನನೂ ಆನೆಯ ಮೇಲೆ ಕುಳಿತು ಧಾವಿಸಿದ. ಬಂದಾನ ಯೋಧರ ಸಿಡಿಲಿನಂತಹ ಕೆಚ್ಚಿನ ವಿರುದ್ಧ ಮೊಗಲ ಸೈನಿಕರು ನಿಲ್ಲಲಾಗಲಿಲ್ಲ.

ಬಂದಾ ಬಹಾದ್ದೂರನು ಸೈನ್ಯವನ್ನು ತೂರಿಕೊಂಡು ನೇರವಾಗಿ ವಜೀರ್ ಖಾನನ ಎದುರಿಗೇ ನುಗ್ಗಿದ.

“ಏ ಪಾಪಿ! ನೀನಲ್ಲವೇ ಗುರುವಿನ ಮಕ್ಕಳನ್ನು ಕೊಂದವನು? ಇಗೋ ನಿನಗೆ ತಕ್ಕ ಶಾಸ್ತ್ರಿ” ಎಂದು ಖಡ್ಗವನ್ನು ಬೀಸಿದ.

ಅದರ ಆಘಾತಕ್ಕೆ ಖಾನನು ಮೂರ್ಛೆ ಬಿದ್ದ. ಅವನನ್ನು ತಕ್ಷಣವೇ ಸೆರೆ ಹಿಡಿಯಲು ಆಜ್ಞೆ ಮಾಡಿದ ಬಂದಾ. ತಮ್ಮ ಯಜಮಾನ ಸೆರೆಸಿಕ್ಕ ಮೇಲೆ ಖಾನನ ಸೈನಿಕರ ಹೋರಾಟ ದುರ್ಬಲಗೊಂಡಿತು. ಬದುಕುಳಿಯಲು ಅವರು ಮೆಲ್ಲನೆ ಕಾಲಿಗೆ ಬುದ್ಧಿ ಹೇಳಿದರು. ಇನ್ನು ಕೆಲವರು ಶಸ್ತ್ರಾಸ್ತ್ರಕೆಳಗಿಟ್ಟು ಶರಣಾದರು.

ಮೇ ೨೪ ರಂದು ಬಂದಾ ವಿಜಯೋತ್ಸಾಹದಿಂದ ಸರ್‌ಹಿಂದ್ ಪ್ರವೇಶಿಸಿದ. ವಜೀರ್ ಖಾನನನ್ನು ಸರಪಳಿಯಿಂದ ಬಿಗಿದು ಊರಿನ ರಸ್ತೆಗಳಲ್ಲಿ ಮೆರವಣಿಗೆ ಮಾಡಿ ಅನಂತರ ವಧಿಸಲಾಯಿತು.

ಸರಕಾರ ಸ್ಥಾಪನೆ

ಸರ್‌ಹಿಂದ್‌ನ ಮೇಲೆ ಖಾಲಸಾದ ಧ್ವಜ ಪಟಪಟನೆ ಹಾರಾಡತೊಡಗಿತು. ಬಾಜ್ ಸಿಂಗ್ ನನ್ನು ಸರ್ ಹಿಂದ್ ನ ಆಡಳಿತ ನೋಡಿಕೊಳ್ಳಲು ನೇಮಿಸಿದ ಬಂದಾ.

ಸರ್ ಹಿಂದ್ ನಲ್ಲಿ ಭದ್ರವಾಗಿ ತಳವೂರಿ ಸುತ್ತಮುತ್ತಲಿನ ಪ್ರದೇಶಗಳನ್ನೆಲ್ಲ ಗೆದ್ದು ತನ್ನ ವಶಕ್ಕೆ ಸೇರಿಸಿಕೊಂಡ. ೫೨ ಲಕ್ಷ ರೂಪಾಯಿಗಳ ಕಂದಾಯ ಬರುವ ೨೮ ಜಿಲ್ಲೆಗಳು ಬಂದಾನ ಆಡಳಿತಕ್ಕೆ ಒಳಪಟ್ಟವು.

ಬಂದಾನು ಕ್ರಮಬದ್ಧವಾಗಿ ದರಬಾರನ್ನು ನಡೆಸುತ್ತಿದ್ದ ಅಲ್ಲಿ ದುಃಖಿತರ, ಬಡವರ ಸಂಕಟವನ್ನು ಆಲಿಸುತ್ತಿದ್ದ. ಅವರಿಗೆ ಅನುಕೂಲ ಆಗುವಂತೆ ಏರ್ಪಾಡು ಮಾಡುತ್ತಿದ್ದ. ಕ್ರಮೇಣ ಬಂದಾನು ಸಾಮಾನ್ಯ ಪ್ರಜೆಗಳ ಆರಾಧ್ಯ ದೈವವೇ ಅದ.

ಮಾಲೇರ್ ಕೋಟ್ಲಾ, ರಾಮಕೋಟೆಗಳೂ ಬಂದಾನ ಹಿಡಿತಕ್ಕೆ ಸೇರಿದವು.

ರಾಜಧಾನಿಯ ನಿರ್ಮಾಣ

ಈಗ ರಾಜಧಾನಿಯನ್ನು ಎಲ್ಲಿ ಸ್ಥಾಪಿಸಬೇಕೆಂದು ಬಂದಾನು ಯೋಚಿಸತೊಡಗಿದ. ಸರ್ ಹಿಂದ್ ನ ಕೋಟೆ ಬಲವಾಗಿಯೇ ಇತ್ತು. ಆದರೆ ಅದು ಮೈದಾನ ಪ್ರದೇಶದಲ್ಲಿ ಇದ್ದುದರಿಂದ ಶತ್ರುಗಳು ಯಾವಾಗಲಾದರೂ ಲಗ್ಗೆ ಹಾಕ ಬಹುದಿತ್ತು.

ಬಂದಾನ ಕಣ್ಣು ಮುಖಲೀಸ್ ಪುರದ ಮೇಲೆ ಬಿತ್ತು. ಅದು ಹಿಮಾಲಯದ ಬೆಟ್ಟಗಳ ಸಾಲಿಗೆ ಸೇರಿದ ತಪ್ಪಲು ಪ್ರದೇಶದಲ್ಲಿತ್ತು. ಅದನ್ನು ಮುಟ್ಟಬೇಕಾದರೆ ಬೆಟ್ಟಗುಡ್ಡಗಳ ಕಲ್ಲುಗಾಡಿನ ಪ್ರದೇಶ ಹಾದು ಬರಬೇಕು. ದುರ್ಗಮವಾದ ದಾರಿ. ಅಲ್ಲದೆ ಅಲ್ಲಿ ಎರಡು ಚಿಕ್ಕ ನದಿಗಳು ಹರಿಯುತ್ತಿದ್ದವು. ರಕ್ಷಣೆಯ ದೃಷ್ಟಿಯಿಂದ ಒಳ್ಳೆಯ ಆಯಕಟ್ಟಿನ ತಾಣ. ಆದರೆ ಆ ಕೋಟೆಯು ಅಷ್ಟು ಗಟ್ಟಿಮುಟ್ಟಾಗಿರಲಿಲ್ಲ.

ಬಂದಾನು ಮುಖಲೀಸ್‌ಪುರದ ಕೊಟೆಯನ್ನು ಆಕ್ರಮಿಸಿ ಅದನ್ನು ದುರ್ಭೇದ್ಯವಾದ ಕೋಟೆ ಆಗುವಂತೆ ಪುನರ್ ನಿರ್ಮಿಸಿದ. ಅದಕ್ಕೆ ಲೋಹಗಢ ಎಂದು ಹೆಸರಿಟ್ಟ. ಅಂದರೆ ಅದು ಉಕ್ಕಿ (ಲೋಹ) ನಂತೆ ಗಟ್ಟಿ ಎಂದರ್ಥ. ಲೋಹಗಢ ಬಂದಾನ ರಾಜಧಾನಿ ಆಯಿತು.

ಬಂದಾ ಬಹಾದ್ದೂರನು ಗುರು ನಾನಕ್ ಮತ್ತು ಗುರು ಗೋವಿಂದ ಸಿಂಹರ ಹೆಸರಿನಲ್ಲಿ ನಾಣ್ಯಗಳನ್ನು ಹೊರಡಿಸಿದ ಅವನು ಬಳಕೆಗೆ ತಂದ ರಾಜಮುದ್ರೆಯಲ್ಲಿ ಮಡಕೆ ಮತ್ತು ಖಡ್ಗದ ಚಿತ್ರಗಳಿದ್ದವು.

ಮಡಕೆ (ಬಡವರಿಗೆ ಅನ್ನ ಕೊಡುವ ಚಿಹ್ನೆ) ಮತ್ತು ಖಡ್ಗ (ದುರ್ಬಲರನ್ನೂ ಅಸಹಾಯಕರನ್ನೂ ರಕ್ಷಿಸುವ ಶಕ್ತಿಯ ಸಂಕೇತ) ಇವುಗಳನ್ನು ಗುರು ನಾನಕ್ ಮತ್ತು ಗುರು ಗೋವಿಂದ ಸಿಂಹರ ಪರಂಪರೆಯಿಂದ ಪಡೆಯಲಾಗಿದೆ ಎನ್ನುವ ಬರಹ ರಾಜಮುದ್ರೆಯ ಮೇಲಿತ್ತು.

ಬಂದಾನ ಆಡಳಿತದ ಮುಖ್ಯ ಬದಲಾವಣೆ ಎಂದರೆ ಜಮೀನ್ ದಾರಿಯನ್ನು ರದ್ದುಗೊಳಿಸಿದ್ದು. ಮೊಗಲರು ಜಾರಿಗೆ ತಂದಿದ್ದ ಜಹಗೀರು ಪದ್ಧತಿಯು ನಿರಂಕುಶ ಶ್ರೀಮಂತಿಕೆಗೆ ಎಡೆ ಮಾಡಿಕೊಟ್ಟಿತ್ತು. ಬಂದಾನು ಬೇಸಾಯಗಾರರಿಗೆ ಭೂಮಿಯನ್ನು ದೊರಕಿಸಿಕೊಟ್ಟ.

ಬಂದಾನ ವಿಜಯ ದುಂದುಭಿಯಿಂದ ಸಿಖ್ಖರ ಪ್ರತಿಷ್ಠೆ ಹೆಚ್ಚಿತು.

ಲೋಹಗಢದಿಂದ ಪರಾರಿ

ಗುರುಗೋವಿಂದ ಸಿಂಹರ ಅಭಿಲಾಷೆಯನ್ನು ಪೂರೈಸಿದ ಸಮಾಧಾನ ಉಂಟಾಯಿತು ಬಂದಾನಿಗೆ. ಈಗ ಬೆಟ್ಟಗುಡ್ಡಗಳ ನಡುವೆ ಮರೆಯಾಗಿ ಧ್ಯಾನ, ಏಕಾಂತ ಸಾಧನೆ ಮಾಡಲು ನಿಶ್ಚಯಿಸಿದ. ಸಿಖ್ ವೀರರೂ ತಂತಮ್ಮ ಗ್ರಾಮಗಳಿಗೆ ತೆರಳಿದರು. ಪುನಃ ಕರೆ ಬಂದಾಗ ಧಾವಿಸಿ ಬರುವ ನಿರ್ಧಾರ ಅವರ ಮನದಲ್ಲಿತ್ತು.

ಇತ್ತ ದೆಹಲಿಯ ಬಾದಶಹನಾಗಿದ್ದ ಬಹಾದ್ದೂರ್ ಶಹ ದಕ್ಷಿಣದ ದಿಗ್ವಿಜಯ ಮುಗಿಸಿ ಹಿಂತಿರುಗುತ್ತಿದ್ದ. ಅವನ ಕಿವಿಗೆ ಬಂದಾನ ವಿಷಯ ಕಾದ ಸೀಸದಂತೆ ಬಿತ್ತು! ಸಧೌರಾ, ಸಮಾನಾ, ಸರ್ ಹಿಂದ್ ಗಳ ಪತನದ ಸುದ್ದಿ ಕೇಳಿ ಹೌಹಾರಿದ. ಸಿಖ್ಖರ ಹುಟ್ಟಡಗಿಸುವ ಮನಸ್ಸುಂಟಾಯಿತು.

ಬಾದಶಹನ ಸೈನ್ಯದ ದಳಪತಿ ಮುನೀಮ್ ಖಾನ್ ತಾನೇ ಬಂದಾನ ಸೊಕ್ಕು ಮುರಿದು ಎಳೆತರುವುದಾಗಿಯೂ ಬಾದಶಹರು ಸ್ವತಃ ಇಂತಹ ಲಘುವಾದ ಕಾರ್ಯಕ್ಕೆ ಇಳಿಯುವುದು ಅವರ ಘನತೆಗೆ ತಕ್ಕದ್ದಲ್ಲವೆಂದೂ ಹೇಳಿದ. ಆದರೆ ತಾನೇ ಯುದ್ಧವನ್ನು ನಿರ್ವಹಿಸಲು ಬಾದಶಹ ಇಚ್ಛಿಸಿದ. ಅವನ ವಿರಾಟ್ ಸೇನೆ ಪಂಜಾಬಿನ ಕಡೆ ತಿರುಗಿತು. ಬಹಾದ್ದೂರ್ ಶಹನ ಭಾರೀ ಸೈನ್ಯದ ಎದುರು ಸಿಖ್ಖರು ನಿಲ್ಲಲಾಗಲಿಲ್ಲ. ಅಸಂಖ್ಯವಾದ ಪ್ರಾಣಹಾನಿ ಉಂಟಾಯಿತು.

ಸರ್‌ಹಿಂದ್ ನನ್ನು ವಶಪಡಿಸಿಕೊಳ್ಳಲು ಬಾದಶಹನು ಅಖಗರ್ ಖಾನನ ಕೈಯಲ್ಲಿ ಮುಂದಾಗಿ ೧೨ ಸಾವಿರ ಸೈನ್ಯ ಕೊಟ್ಟು ಕಳಿಸಿದನು.

ಬಂದಾನಿಗೆ ಸುದ್ಧಿ ಮುಟ್ಟಿತು. ಅವನು ಸರ್‌ಹಿಂದ್‌ನ ಕಡೆಗೆ ಶೀಘ್ರವಾಗಿ ಬಂದ. ಬಂದಾನ ಪುನರಾಗಮನ ಸಿಖ್ಖರಿಗೆ ನವೋತ್ಸಾಹ ತಂದಿತು. ಶಹಾಬಾದ್ ನಲ್ಲಿ ಬಂದಾನ ಸೈನ್ಯ ಖಾನನ ಬೃಹತ್ ಸೈನ್ಯವನ್ನು ಎದುರಿಸಿತು. ತೀವ್ರವಾದ ಸಾವುನೋವುಗಳಿಂದ ಖಾನನ ಸೈನ್ಯ ಬೆನ್ನು ತಿರುಗಿಸಿತು.

ತಕ್ಷಣವೇ ಬಂದಾ ಲೋಹಗಢದ ಒಳ ಹೊಕ್ಕು ಅಲ್ಲಿಂದ ಶತ್ರುವನ್ನು ಎದುರಿಸುವುದು ಸೂಕ್ತವೆಂದು ಅವನ ಚಾಣಾಕ್ಷ ಬುದ್ಧಿ ಲೆಕ್ಕ ಹಾಕಿತು!

ಬಹಾದ್ದೂರ್ ಶಹನು ತುಂಬ ಕಾಳಜಿಯಿಂದ ಆರಿಸಿದ ಯುದ್ಧಪಟುಗಳ ನೇತೃತ್ವದಲ್ಲಿ ಸಾಗರದಂತಹ ಸೇನೆ ಬಂದಾನ ಕಡೆ ಮುಂದುವರೆಯಿತು. ಬೆಟ್ಟಗುಡ್ಡಗಳಿಂದ ಆವರಿಸಿದ ದುರ್ಗಮ ಲೋಹಗಢ ತಲುಪಲು ಕುದುರೆ, ಆನೆಗಳಿಂದ ಇಳಿದು ಕಾಲ್ನಡಿಗೆಯಲ್ಲಿ ಹೋಗಬೇಕಾಯಿತು.

ಸಿಖ್ಖರ ಸೈನ್ಯ ಹಿಂಜರಿಯುತ್ತಾ ಕೋಟೆಯೊಳಗೆ ಸೇರಬೇಕಾಯಿತು. ಆವರೂ ಪ್ರಬಲವಾಗಿಯೇ ವೈರಿಗಳನ್ನು ತಡೆದರು. ಕ್ರಮೇಣ ಅವರ ಆಹಾರ ಸಂಗ್ರಹ ಕಡಿಮೆಯಾಗುತ್ತಾ ಬಂದಿತು.

ಬಂದಾನು ಧೀರನಂತೆ ರಣಾಂಗಣದಲ್ಲಿ ಕಾದು ಸ್ವರ್ಗವನ್ನಪ್ಪುವ ನಿರ್ಧಾರಕ್ಕೆ ಬರತೊಡಗಿದ. ಆಗ ಗುಲಾಬ್ ಸಿಂಹನೆಂಬವ ಬಂದಾನ ಎದುರು ನಿಂತ. ಅವನು ನೋಡಲು ಬಂದಾನಂತೆಯೇ ಇದ್ದ. ಅದೇ ಎತ್ತರ. ಅದೇ ಮೈಕಟ್ಟು ಅದೇ ಮುಖ.

ಪ್ರಭೂ! ನನ್ನಿಂದ ಒಂದು ಸೇವೆಯನ್ನು ಸ್ವೀಕರಿಸಬೇಕು. ನನ್ನ ರೂಪ ನಿಮ್ಮಂತೆಯೇ ಇರುವುದು ನನ್ನ ಪರಮ ಸೌಭಾಗ್ಯ. ನಿಮ್ಮ ವೇಷವನ್ನು ನಾನು ತೊಡುತ್ತೇನೆ. ಶತ್ರುಗಳಿಗೆ ಕಾಣಿಸಿ ಕೊಳ್ಳುತ್ತೇನೆ. ಆಗ ನೀವು ಬೇರೆ ಕಡೆಯಿಂದ ಶತ್ರುಗಳ ಕಣ್ಮರೆಯಾಗಬಹುದು ಪ್ರಭೂ. ಆಮೇಲೆ ಹೇಗಾದರೂ ಯುದ್ಧ ಮುಂದುವರಿಸಬಹುದು. ದಯವಿಟ್ಟು ಈ ಸಲಹೆಯನ್ನು ಮನ್ನಿಸಿ ಎಂದು ಪ್ರಾರ್ಥಿಸಿದ ಗುಲಾಬ್ ಸಿಂಹ.

“ಗುಲಾಬ್‌ಸಿಂಹ! ನಿನ್ನ ತ್ಯಾಗ ಮೆಚ್ಚುವಂಥದು. ನೀನಲ್ಲದೆ ಇನ್ನಾರಿಗೂ ಇಂತಹ ತ್ಯಾಗಬುದ್ಧಿ ಬರಲಾರದು. ನಿನ್ನಂತಹ ಪ್ರಾಣಸೇವಕನನ್ನು ಪಡೆದ ನಾನೇ ಧನ್ಯ! ಆದರೆ ಸಿಖ್ ಸೋದರ ಒಬ್ಬನನ್ನು ಬಲಿಗೊಟ್ಟು ನನ್ನ ಪ್ರಾಣ ಉಳಿಸಿಕೊಳ್ಳಲು ಮನಸ್ಸುಬಾರದು”.

ಸುತ್ತಲೂ ನೆರೆದಿದ್ದ ಸೇನಾಪತಿಗಳು ಗುಲಾಬ್ ಸಿಂಹನ ಸಲಹೆ ಒಪ್ಪುವಂತೆ ಬಂದಾನನ್ನು ಒತ್ತಾಯಿಸಿದರು! ಅವನು ತನಗಾಗಿ ಅಲ್ಲವಾದರೂ ಸಿಖ್ಖರಿಗಾಗಿ ಉಳಿಯಬೇಕೆಂದು ವಿನಂತಿ ಮಾಡಿದರು. ಬಂದಾ ಕೊನೆಗೆ ಮಣಿಯಲೇ ಬೇಕಾಯಿತು.

ಗುಲಾಬ್ ಸಿಂಹ ಬಂದಾನ ವೇಷ ತೊಟ್ಟು ಕೋಟೆಯ ಹೆಬ್ಬಾಗಿಲ ಬಳಿ ಕಾಣಿಸಿಕೊಂಡು ಹೋರಾಡತೊಡಗಿದ. ಆಗ ವೈರಿ ಸೈನ್ಯದ ಗಮನವೆಲ್ಲ ಅತ್ತ ಹರಿಯಿತು. ಬೇರೆ ಕಡೆ ಅವರ ಕಾವಲು ಸಡಿಲವಾಯಿತು. ಇದೇ ಸಮಯದಲ್ಲಿ ಬಂದಾ ಹಿಂಬಾಗಿಲಿನಿಂದ ತನ್ನ ನೆಚ್ಚಿನ ಕೆಲವು ಸೈನಿಕರೊಡನೆ ಪರಾರಿ ಯಾದ!

ಬಾದಶಹನ ಸೈನ್ಯ ಕೋಟೆಯೊಳಗೆ ನುಗ್ಗಿತು. ಬಂದಾ ಸೆರೆಸಿಕ್ಕನೆಂದು ಸೈನಿಕರು ಆನಂದಭರಿತರಾಗಿ ಕುಣಿದಾಡಿದರು. ಆದರೆ ಆ ಆನಂದ ನೀರುಗುಳ್ಳೆಯಂತೆ ಕ್ಷಣಿಕವಾಗಿತ್ತು. ಸಿಕ್ಕಿರುವುದು ನಕಲಿ ಬಂದಾ ಎಂದು ತಿಳಿಯಲು ತಡವಾಗಲಿಲ್ಲ. ತನ್ನ ಬುದ್ಧಿಗೇ ಸವಾಲು ಹಾಕಿದ ಈ ಕೃತ್ಯದಿಂದ ಬಾದಶಹ ಹೆಡೆಮೆಟ್ಟಿದ ಸರ್ಪದಂತಾದ. ಚಿತ್ರಹಿಂಸೆ ಕೊಟ್ಟು ಗುಲಾಬ್‌ಸಿಂಹನ ಕೊಲೆ ಮಾಡುವಂತೆ ಆಜ್ಞೆ ಮಾಡಿದ! ಗುಲಾಬ್‌ಸಿಂಹ ತನ್ನ ಜೀವ ಕೊಟ್ಟ. ಆದರೆ ಧ್ರುವತಾರೆಯಂತಹ ಕೀರ್ತಿ ಪಡೆದ.

ಮದುವೆ

ಲೋಹಗಢದಿಂದ ತಪ್ಪಿಸಿಕೊಂಡ ಬಂದಾ ಧೈರ್ಯ ಗೆಡಲಿಲ್ಲ. ಸಿಖ್ಖರಲ್ಲಿ ಹುಮ್ಮಸ್ಸು ತುಂಬಲು ಅವನು ೧೭೧೨ ರ ಡಿಸೆಂಬರ್ ೧೨ ರಂದು ಒಂದು ಸಂದೇಶವನ್ನು ಕಳಿಸಿದ. ಕೀರ್ತಿಪುರದಲ್ಲಿ ಸಿಖ್ ವೀರರು ಸೇರಿದರು. ಹೋರಾಟದ ಮನೋಭಾವ ಮರೆಯದಂತೆ ಬಂದಾ ಅವರಿಗೆ ಸ್ಪೂರ್ತಿ ತುಂಬಿದ.

ಮುಂದೆ ಬಂದಾ ಚಂಬಾ ರಾಜ್ಯವನ್ನು ಗೆಲ್ಲಲು ಹೊರಟ. ಆದರೆ ಚಂಬಾದ ದೊರೆಯು ಬಂದಾನನ್ನು ದಾರಿಯಲ್ಲೇ ಎದುರುಗೊಂಡು ಸ್ವಾಗತಿಸಲು ತನ್ನ ಮಂತ್ರಿಗಳನ್ನೇ ಕಳಿಸಿದ. ಅತ್ಯಂತ ಲಾವಣ್ಯವತಿಯಾದ ತನ್ನ ಮಗಳನ್ನು ಮದುವೆಯಾಗಬೇಕಂದು ಪ್ರಾರ್ಥಿಸಿದ. ಬಂದಾ ಚಂಬಾದ ರಾಜಕುಮಾರಿಯ ಕೈ ಹಿಡಿದ.

ಈ ರಾಜಕುಮಾರಿಯಿಂದ ೧೭೧೩ ರ ಕೊನೆಯಲ್ಲಿ ಹುಟ್ಟಿದ ಮಗನಿಗೆ ಅಜಯಸಿಂಹ ಎಂದು ಹೆಸರಿಟ್ಟ.

ಆಮೇಲೆ ಕೆಲವು ಕಾಲದ ನಂತರ ವಜೀರಾಬಾದಿನ ಖತ್ರಿ ಸಿಖ್ಖನ ಮಗಳು ಸಾಹಿಬ್ ಕೌರಳನ್ನು ತನ್ನ ಎರಡನೇ ಹೆಂಡತಿಯನ್ನಾಗಿ ಮಾಡಿಕೊಂಡ.

ಬಹಾದ್ದೂರ್ ಶಹ ಇನ್ನೂ ಸಧೌರಾದಲ್ಲೇ ಬೀಡುಬಿಟ್ಟಿದ್ದ. ಆದರೂ ಬಂದಾ ಬೆಟ್ಟಗಳಿಂದ ಇಳಿದು ಪಠಾಣ ಕೋಟೆಯನ್ನು ಮುತ್ತಿದ. ಬಹರಾಮ್‌ಪುರವನ್ನು ವಶಪಡಿಸಿಕೊಂಡ.

ಬಹರಾಮ್‌ಪುರದ ಸುದ್ಧಿಯಿಂದ ಬಾದಶಹ ಚುರುಕಾದ. ಮಹಮದ್ ಅಮೀನಖಾನ್, ಅಖಗರ್ ಖಾನ್, ಮತ್ತು ರುಸ್ತುಂದಿಲ್ ಖಾನರ ಸೈನ್ಯ ಮೂರು ದಿಕ್ಕುಗಳಿಂದ ಬಂದಾನನ್ನು ಸುತ್ತುವರೆಯಿತು. ಬಂದಾನ ಒಂದು ತುಕಡಿ ರುಸ್ತುಂ ದಿಲ್ ಖಾನನನ್ನು ಹಿಂದಿನಿಂದ ಬಂದು ಎದುರಿಸಿತು. ಬಂದಾ ಬಹಾದ್ದೂರನು ನೋಡುತ್ತಿದ್ದಂತೆಯೇ ತಪ್ಪಿಸಿಕೊಂಡು ಹೋದ. ರುಸ್ತುಂದಿಲ್ ಖಾನನಿಗೆ ಅವನನ್ನು ಬೆನ್ನಟ್ಟಿ ಹೋಗಲು ಆಗಲಿಲ್ಲ. ತನ್ನ ಕೋಪವನ್ನು ಮುಗ್ಧಜನರನ್ನು ಹಿಂಸಿಸಿತೀರಿಸಿಕೊಂಡ ಅವನು!

ಮತ್ತೆ ಲೋಹಗಢಕ್ಕೆ

ಸಧೌರಾದಿಂದ ಲಾಹೋರಿಗೆ ಬಂದ ಬಹಾದೂರ್ ಶಹ ಅಲ್ಲಿ ಕಾಯಿಲೆ ಬಿದ್ದ. ಅನಂತರ ಕೆಲವೇ ದಿನಗಳಲ್ಲಿ ಅಂದರೆ ೧೭೧೨ ಫೆಬ್ರವರಿ ೨೮ ರಂದು ನಿಧನನಾದ.

ತರುವಾಯ ಅವನ ಮಕ್ಕಳಲ್ಲಿ ಸಿಂಹಾಸನಕ್ಕಾಗಿ ಕಚ್ಚಾಟವಾಯಿತು. ಅದರಲ್ಲಿ ಒಬ್ಬ ಮಗ ಸತ್ಯ. ಜಹಾಂದರ್ ಶಹನು ತನ್ನ ಉಳಿದ ಸೋದರರನ್ನು ಕೊಂದು ಪಟ್ಟಕ್ಕೇರಿದ. ಹತ್ತೇ ತಿಂಗಳಲ್ಲಿ ತನ್ನಸೋದರನ ಮಗನಾದ ಫರೂಕ್ ಸಿಯರ್ ನಿಂದ ಸೋಲಿಸಲ್ಪಟ್ಟ. ಫರೂಕ್ ಸಿಯರ್ ದೆಹಲಿಯ ಬಾದಶಹನಾದ.

ಅಧಿಕಾರಕ್ಕಾಗಿ ನಡೆದ ಕಚ್ಚಾಟದಿಂದ ಬಂದಾ ಬಹಾದ್ಧೂರ ಲಾಭ ಹೊಂದಿದ. ತನ್ನ ಕೈಬಿಟ್ಟ ಹೋಗಿದ್ದ ಸಧೌರಾ ಮತ್ತು ಲೋಹಗಢವನ್ನು ವಶಪಡಿಸಿಕೊಂಡ. ಲೋಹ ಗಢ ಮತ್ತ ಎರಡು ವರ್ಷ ರಾಜಧಾನಿಯಾಗಿ ವೈಭವದಿಂದ ಮೆರೆಯಿತು.

ಪುನಃ ಲೋಹಗಢದಿಂದ ಪಲಾಯನ

ಫರೂಕ್‌ಸಿಯರ್ ಸಿಖ್ಖರ ಬಗ್ಗೆ ತುಂಬ ನಿರ್ದಯನಾಗಿದ್ದ. ಸಮರ್ ಖಾನ್, ಮಹಮದ್ ಅಮೀನ್ ಖಾನ್ ಮುಂತಾದವರ ಮುಂದಾಳತ್ವದಲ್ಲಿ ಬಂದಾನ ವಿರುದ್ಧ ಬೃಹತ್ ಸೇನೆ ಹೊರಟಿತು.

ಮೊದಲು ಸಧೌರಾದ ಕೋಟೆಯನ್ನು ಮುತ್ತಿಗೆ ಹಾಕಿ ಕುಳಿತಿತು. ಆದರೆ ತಿಂಗಳುಗಳಾದರೂ ಅದು ಜಗ್ಗಲಿಲ್ಲ. ಆಗ ಮಹಮದ್ ಖಾನನು ಕೋಟೆಯ ಸುತ್ತಲೂ ಗುಂಡಿಗಳನ್ನು ತೋಡಿಸಿ ಅಲ್ಲಿ ಫಿರಂಗಿಗಳನ್ನು ಇಟ್ಟು ಕೋಟೆಯ ಮೇಲೆ ಗುಂಡಿನ ಮಳೆಯನ್ನೇ ಸುರಿಸಿದ.

ಸಿಖ್ಖರು ಸುರಂಗ ತೋಡಿ ಆ ಫಿರಂಗಿಗಳನ್ನು ಅಪಹರಿಸಲು ಯೋಚಿಸಿದರು. ಆದರೆ ಸುರಂಗ ಮುಗಿದ ಇನ್ನೇನು ಕೆಲಸ ಮುಗಿಯಬೇಕೆನ್ನುವಾಗ ಹಗ್ಗತುಂಡಾಗಿ ಅವರ ಪ್ರಯತ್ನ ವ್ಯರ್ಥವಾಯಿತು.

ಬಂದಾ ಬಹಾದ್ದೂರ್ ಆ ವೇಳೆಯಲ್ಲಿ ಲೋಹಗಢದಲ್ಲಿದ್ದ. ಸಧೌರಾದಲ್ಲಿದ್ದ ಸಿಖ್ಖರ ಸಹಾಯಕ್ಕಾಗಿ ಮೂರು ನಾಲ್ಕು ತುಕಡಿಗಳನ್ನು ಕಳಿಸಿದ. ಆದರೆ ಅಗಲೂ ಸಿಖ್ ಸೈನ್ಯದ ಕೈ ಕೆಳಗಾಯಿತು.

ಸಧೌರಾವನ್ನು ಗೆದ್ದ ಬಳಿಕ ಮೊಗಲ ಸೈನ್ಯ ಲೋಹಗಢವನ್ನು ಮುತ್ತಿತ್ತು. ಆದರೆ ಮುಂದಾಲೋಚನೆ ಮಾಡಿದ ಬಂದಾ ಪುನಃ ಲೋಹಗಡದಿಂದ ಪಲಾಯನ ಮಾಡಿದ. ಬೆಟ್ಟಗುಡ್ಡಗಳ ನಡುವೆ ಮರೆಯಾದ.

ಖಡ್ಗಕ್ಕೆ ವಿಶ್ರಾಂತಿಯಿಲ್ಲ

ಸಧೌರಾದ ಮೇಲಿನ ಜಯ, ಲೋಹಗಢದಿಂದ ಬಂದಾನ ಪಲಾಯನದ ಸುದ್ದಿಯಿಂದ ದೆಹಲಿಯಲ್ಲಿದ್ದ ಫರೂಕ್ ಸಿಯರ್ ಹರ್ಷಗೊಂಡ. ಗೆಲುವಿನ ಕಾರಣರಾದವರನ್ನು ಬಹುಮಾನ ಕೊಟ್ಟು ಗೌರವಿಸಿದ. ಇದರಿಂದ ಮೊಗಲರ ದರ್ಪಕ್ಕೆ ರೆಕ್ಕೆ ಬಂದಂತಾಯಿತು. ಜನರ ಮೇಲೆ ಅತ್ಯಾಚಾರ ಶುರುವಾಯಿತು.

ಆಗ ಬಂದಾ ಬಹಾದ್ದೂರ್ ಬಬ್ಬಾರ್ ಎಂಬಲ್ಲಿ ಇದ್ದ. ಅತ್ಯಾಚಾರಗಳನ್ನು ಕೊನೆಗಾಣಿಸಲು ಸರಿಯಾದ ಅವಕಾಶಕ್ಕಾಗಿ ಕಾಯುತ್ತಿದ್ದ. ಮತ್ತೆ ಹಂಚಿ ಹರಡಿಹೋಗಿದ್ದ ಸಿಖ್ ಸಿಪಾಯಿಗಳನ್ನು ಒಟ್ಟುಗೂಡಿಸಿ ಖಡ್ಗ ಹಿಡಿದು ಹೊರಟ. ಅವನ ಖಡ್ಗಕ್ಕೆ ವಿಶ್ರಾಂತಿ ಇರಲೇ ಇಲ್ಲ.

ಕಲಾನೌರ್ ನ ಸುಹ್ರಾಬ್ ಖಾನ್ ಬಂದಾನಿಗೆ ಮೊದಲ ಬಲಿ. ಮುಂದೆ ಬಟಾಲಾವೂ ಬಂದಾನಿಗೆ ತಲೆಬಾಗಿತು.

ಬಂದಾನ ಗುಂಪಿನಲ್ಲಿ ಒಡಕು

ಅನಂತರ ಬಂದಾ ಬಹಾದ್ದೂರನು ಸಿಖ್ಖರ ಯಾತ್ರಾಸ್ಥಳ ಅಮೃತಸರಕ್ಕೆ ಬಂದ. ಅಲ್ಲಿ ಗುರುಗೋವಿಂದ ಸಿಂಹನಿಗೆ ಗೌರವ ಸಲ್ಲಿಸಿದ. ತಾನೇ ಗುರುವಿನ ಉತ್ತರಾಧಿಕಾರಿ ಎಂದು ಗುರುವಿನಂತೆ ದರಬಾರ್ ನಡೆಸಿದ ಎಂದು ಹೇಳುತ್ತಾರೆ. ಇದರಿಂದ ಕೆಲವು ಸಿಖ್ಖರಲ್ಲಿ ಅಸಮಾಧಾನ ತಲೆದೋರಿತು.

ಕಲಾನೌರ್ ಮತ್ತು ಬಟಾಲಾಗಳ ಸುದ್ಧಿಯನ್ನು ಕೇಳಿದ ಫರೂಕ್ ಸಿಯರ್ ಬಂದಾನ ಗುಂಪಿನಲ್ಲಿ ಒಡಕು ಹುಟ್ಟಿಸುವ ದುಷ್ಟ ಸಂಚು ಹೂಡಿದ.

ಅಮೃಸರದ ಪ್ರಸಂಗದಿಂದ ಆಗಲೇ ಸಿಖ್ಖರಲ್ಲಿ ಅಸಮಾಧಾನ ಹೊಗೆಯಾಡುತ್ತಿತ್ತು. ಬಂದಾನು ಗುರು ಗೋವಿಂದ ಸಿಂಹರ ಇಚ್ಛೆಯಂತೆ ನಡೆಯುತ್ತಿಲ್ಲ ಎಂದು ಅವರು ಮಾತನಾಡುತ್ತಿದ್ದರು.

ಗುರು ಗೋವಿಂದ ಸಿಂಹನ ಹೆಂಡತಿಯಾಗಿದ್ದ ವಿಧವೆ ಮಾತಾ ಸುಂದರಿಯು ಆಗ ದೆಹಲಿಯಲ್ಲಿ ವಾಸಿಸುತ್ತಿದ್ದಳು. ಅವಳನ್ನು ದುರಪಯೋಗ ಮಾಡಿಕೊಳ್ಳುವ ಸಂಚು ಫರೂಕ್ ಸಿಯರನದು!

ಗುರುವಿನ ಸೇಡು ತೀರಿರುವುದರಿಂದ ಯುದ್ಧ ನಿಲ್ಲಿಸಲು ಬಂದಾನಿಗೆ ಹೇಳಬೇಕೆಂದು ಫರೂಕ್ ಸಿಯರ್ ಮಾತಾಜಿಯ ಮನ ಒಲಿಸಿದ. ಮಾತಾ ಸುಂದರಿಯೂ ಸಿಖ್ ಮುಖಂಡರಿಗೆ ಕಾಗದ ಬರೆದು ಬಂದಾನಿಗೆ ಬೆಂಬಲ ಕೊಡದಿರುವಂತೆ ಸೂಚಿಸಿದಳು.

ನಿಧಾನವಾಗಿ ಬಂದಾನ ಗುಂಪಿನಲ್ಲಿ ಬಿರುಕುಬಿಟ್ಟಿತು. ಬಂದಾನಿಗೆ ನಿಷ್ಠೆಯಿಂದ ಇರುವವರು “ಬಂದಾಯಿ ಖಾಲಸಾ” ಎಂದು ಹೆಸರು ಪಡೆದರು. ಅವನನ್ನು ಬಿಟ್ಟು ಹೋದವರಿಗೆ ‘ತತ್ ಖಾಲಸಾ’ ಎಂಬ ಹೆಸರು ಬಂತು.

ಗುರುದಾಸ್ ಪುರದಲ್ಲಿ ಸೆರೆ

ಬಂದಾ ಬಹಾದ್ದೂರನನ್ನು ಹೇಗಾದರೂ ಮಾಡಿ ಮೆಟ್ಟಿ ಹಾಕಲು ಫರೂಕ್ ಸಿಯರನು ಕಡೆಯ ಪ್ರಯತ್ನ ಆರಂಭಿಸಿದ. ತನ್ನ ಬಳಿಯಿದ್ಧ ವಿರಾಧಿವೀರರನ್ನು ಒಟ್ಟುಗೂಡಿಸಿದ. ಲಾಹೋರಿನಲ್ಲಿದ್ದ ಸುಮದ್ ಖಾನನಿಗೆ ಬಂದಾನಿಂದ ಆಗುತ್ತಿರುವ ಕಿರುಕುಳಕ್ಕೆ ಮುಕ್ತಾಯ ಹಾಡಬೇಕೆಂದು ಆಜ್ಞಾಪಿಸಿದ. ತನ್ನ ಅಧೀನದಲ್ಲಿದ್ದ ಎಲ್ಲ ಸಾಮಂತರು ಸಹಾಯಕ್ಕೆ ಸೈನ್ಯ ಸಮೇತ ಬರಬೇಕೆಂದು ಆಜ್ಞಾಪಿಸಿದ. ತನ್ನ ಅಧೀನದಲ್ಲಿದ್ದ ಎಲ್ಲ ಸಾಮಂತರು ಸಹಾಯಕ್ಕೆ ಸೈನ್ಯ ಸಮೇತ ಬರಬೇಕೆಂದು ಸೂಚನೆ ಕಳಿಸಿದ. ಕಾಶ್ಮೀರದ ಜಬರದಸ್ತ್ ಖಾನ್, ಗುಜರಾತಿನ ಫೌಜುದಾರ, ಅಹಮದಾಬಾದಿನ ನೂರ್ ಮಹಮದ್ ಖಾನ್, ರಾಜಾ ಭೀಮಸಿಂಗ್, ಧೃವದೇವ ಮುಂತಾದವರು ತಂತಮ್ಮ ಸೈನ್ಯದೊಂದಿಗೆ ಲಾಹೋರಿನಲ್ಲಿ ಹಾಜರಾದರು. ಬಹುದೊಡ್ಡ ಪ್ರಮಾಣದಲ್ಲಿ ಯುದ್ಧ ಸಿದ್ಧತೆ ನಡೆಯಿತು.

ಕಲಾನೌರ್ ಬಳಿಯಿದ್ದ ಬಂದಾನನ್ನು ದಶದಿಕ್ಕುಗಳಿಂದಲೂ ಸೈನ್ಯ ಆವರಿಸಿತು. ಬಂದಾನು ಅಳುಕದೆ ವೈರಿಗಳಿಗೆ ಉಗ್ರ ವಿರೋಧ ತೋರಿದನು. ಆದರೂ ಅಪಾರವಾದ ಮಿಡತೆಯ ಹಿಂಡಿನಂತಹ ಸೈನ್ಯದ ಎದುರು ಹಂತ ಹಂತವಾಗಿ ಹಿಮ್ಮೆಟ್ಟಬೇಕಾಯಿತು. ವೀರಾವೇಶದಿಂದ ಹೋರಾಡುತ್ತಾ ಬಂದಾನು ಶತ್ರುಗಳಿಗೆ ತುಂಬ ನಷ್ಟ ಊಂಟು ಮಾಡಿದನು. ಮೆಲ್ಲ ಮೆಲ್ಲನೆ ಹಿಂದೆ ಸರಿಯುತ್ತಾ ಗುರುದಾಸ ಪುರದ ಕೋಟೆಯೊಳಗೆ ಬಂದು ಸೇರಿದನು.

ಗುರುದಾಸಪುರದ ಕೋಟೆ ಇನ್ನೂ ಪೂರ್ಣವೇ ಆಗಿರಲಿಲ್ಲ. ಅದು ವೈರಿಯ ಹೊಡೆತಕ್ಕೆ ಸೆಟೆದು ನಿಲ್ಲಲು ಸಾಧ್ಯವಿರಲಿಲ್ಲ.

ಇನ್ನೊಂದು ಕಹಿ ಪ್ರಸಂಗವೂ ನಡೆಯಿತು. ಬಂದಾನ ಅನುಚರನಾಗಿದ್ದ ಬಾಬಾ ವಿನೋದಸಿಂಹನಿಗೂ ಬಂದಾನಿಗೂ ಮಾತಿಗೆ ಮಾತು ಬೆಳೆಯಿತು. ವಿನೋದ ಸಿಂಹನು ಕೋಪದಿಂದ ಬಂದಾನನ್ನು ಬಿಟ್ಟು ಹೊರಟು ಹೋದ.

ಮೊಗಲ್ ಸೈನಿಕರು ಬಂದಾನನ್ನು ರಣಹದ್ದುಗಳಂತೆ ಸುತ್ತುವರೆದರು. ಯಾವ ದಿಕ್ಕಿನಲ್ಲಿ ನೊಡಿದರೂ ವೀರ ಸೇನಾಪತಿಯ ಕೈ ಕೆಳಗಿನ ಸೈನ್ಯ! ಗೆಲುವು ಇಲ್ಲವೇ ಸಾವು ಎಂದು ಒಬ್ಬೊಬ್ಬ ಸಿಖ್ ಯೋಧರೂ ಹಸಿದ ಹೆಬ್ಬುಲಿಯಂತೆ ಜೀವದ ಆಸೆ ತೊರೆದು ಹೋರಾಡಿದರು.

ಇಷ್ಟಾದರೂ ಸಮದ್ ಖಾನನಿಗೆ ಗೆಲ್ಲುವ ನಂಬಿಕೆ ಇರಲಿಲ್ಲ. ಆಗುವನು ಕೋಟೆಯೊಳಗೆ ಆಹಾರ ಹೋಗುತ್ತಿದ್ದ ಗುಪ್ತ ದಾರಿಗಳನ್ನು ಪತ್ತೆ ಹಚ್ಚಿ ಅವರನ್ನು ನಿಲ್ಲಿಸಿಬಿಟ್ಟನು. ಮುತ್ತಿಗೆ ಮುಂದುವರೆಯಿತು.

ಕೋಟೆಯೊಳಗಿದ್ದ ಸಿಖ್ ಯೋಧರು ಹೊಟ್ಟೆಗಿಲ್ಲದೆ ತಳಮಳಿಸತೊಡಗಿದರು. ಎಲ್ಲಿಯವರೆಗೆ ದುರ್ಗತಿ ಬಂತೆಂದರೆ ಕೆಲವರು ಹೊಟ್ಟೆಯ ಚೀತ್ಕಾರ ತಡೆಯಲಾರದೆ ಕುದುರೆಗಳನ್ನೇ ಕೊಂದು ಮಾಂಸ ತಿನ್ನಲಾರಂಭಿಸಿದರು! ಎದ್ದು ನಿಂತುಕೊಳ್ಳಲೂ ಅನೇಕರಿಗೆ ಶಕ್ತಿ ಇಲ್ಲವಾಯಿತು. ಹಸಿವೆಯಿಂದ ಕೆಲವರು ಪ್ರಜ್ಞೆ ತಪ್ಪಿ ಬಿದ್ದರೆ, ಇನ್ನು ಕೆಲವರು ಸತ್ತೇ ಹೋದರು.

ಈ ಘಟ್ಟದಲ್ಲಿ ಸಮದ್ ಖಾನನು ಶಾಂತಿಯ ಬಾವುಟ ಹಾರಿಸಿ ಶರಣಾದವರಿಗೆ ಕ್ಷಮಿಸಿ ಆಹಾರ ಕೊಡುವುದಾಗಿ ಘೊಷಿಸಿದನು. ಕೆಲವು ಸಿಖ್ಖರು ಹಸಿವೆ ತಾಳಲಾರದೆ ಶರಣಾದರು. ಆದರೆ ಅವರಿಗೆ ಸಿಕ್ಕಿದ್ದು ಆಹಾರವಲ್ಲ, ಮೊನಚು ಕತ್ತಿಯ ರುಚಿ! ಇದಲ್ಲದೆ ಸುಮಾರು ೨೦೦ ಯೋಧರು ಹೋರಾಡುತ್ತಾ ಸೆರೆಸಿಕ್ಕರು.

ಕೊನೆಗೆ ಉಳಿದವನು ಬಂದಾ ಒಬ್ಬನೇ. ಆದರೂ ಅವನ ಬಳಿ ಹೋಗಲು ಎಲ್ಲರಿಗೂ ಪುಕ್ಕಲು. ಸೆರೆಸಿಕ್ಕುವ ಮುನ್ನ ಬಂದಾನು ರಣಕಲಿಯಂತೆ ೫೯ ಸೈನಿಕರನ್ನು ತನ್ನ ಖಡ್ಗಕ್ಕೆ ಆಹುತಿ ತೆಗೆದುಕೊಂಡನು.

ಬಂದಾ ಸೆರೆಯಾದ ಸುದ್ದಿ ದೆಹಲಿಗೆ ರವಾನೆಯಾಯಿತು.

ಮೆರವಣಿಗೆಯಲ್ಲಿ ದೆಹಲಿಗೆ

ಬಂದಾನನ್ನು ಬಲವಾದ ಸರಪಳಿಗಳಿಂದ ಬಿಗಿದರು. ಒಂದು ಸರಪಳಿ ಕುತ್ತಿಗೆಗೆ. ಇನ್ನು ನಾಲ್ಕು ಸರಪಳಿಗಳು ಕೈಕಾಲುಗಳಿಗೆ. ಬಂದಾನನ್ನು ಒಂದು ಕಬ್ಬಿಣದ ಬೋನಿನಲ್ಲಿ ದೂಡಲಾಯಿತು. ಅದನ್ನು ಹೊತ್ತ ಆನೆ ಮೆರವಣಿಗೆ ಮಾಡಿಕೊಂಡು ನಡೆಯಿತು. ಎಡಬಲಗಳಲ್ಲಿದ್ದ ಕಟ್ಟುಮಸ್ತಾದ ವೀರರು ಬಂದಾನ ಮೇಲೆ ಕಣ್ಣನ್ನು ನೆಟ್ಟಿದ್ದರು. ಕೆಲವು ದಿನಗಳಲ್ಲಿ ದೆಹಲಿ ಬಂತು.

ಸೆರೆ ಸಿಕ್ಕವರೆಂದು ೨೦೦ ಯೋಧರನ್ನು ಫರೂಕ್ ಸಿಯರನ ಎದುರು ಒಯ್ದರೆ, ಬೈಗಳನ್ನು ತಿನ್ನಬೇಕಾದೀತೆಂದು ದಾರಿಯಲ್ಲಿ ಕೈಗೆ ಸಿಕ್ಕ ಸಿಖ್ಖರನ್ನೆಲ್ಲ ಖೈದುಮಾಡಿ ಸಂಖ್ಯೆಯನ್ನು ೭೦೦ ಕ್ಕೆ ಮುಟ್ಟಿಸಿದರು.

ದೆಹಲಿಯ ಪೇಟೆಗಳಲ್ಲಿ ರಸ್ತೆಗಳಲ್ಲಿ ಮೆರವಣಿಗೆ ನಡೆಯಿತು. ಜನ ಬಂದಾನನ್ನು ಹೀಯಾಳಿಸಿ ಅವಮಾನಿಸಲಿ ಎಂಬುದೇ ಇದರ ಉದ್ದೇಶ!

ಬಂದಾನನ್ನು ಫರೂಕ್ ಸಿಯರನ ಎದುರು ಕರೆದೊಯ್ಯಲಾಯಿತು. ಪ್ರತಿದಿನ ನೂರು ಪ್ರತಿ ಪಕ್ಷದವರ ತಲೆ ಕಡಿಯಬೇಕೆಂದು ಆಜ್ಞೆ ಮಾಡಿದ ಫರೂಕ್ ಸಿಯರ್. ೧೭೧೬ ಮಾರ್ಚ ೫ ರಿಂದ ಈ ಕೆಲಸ ಆರಂಭವಾಯಿತು.

ಬಂದಾನ ಬಲಿ

೧೭೧೬ ಜೂನ್ ೧೯ರ ಭಾನುವಾರ ಬಂದಾ ಬಹಾದ್ಧೂರ್, ಅವನ ಮಗ ಅಜಯಸಿಂಹ ಮತ್ತು ಇತರ ಸಿಖ್ ವೀರರನ್ನು ಸೆರೆಮನೆಯಿಂದ ಹೊರತಂದರು. ದೆಹಲಿಯನ್ನೆಲ್ಲ ಒಂದು ಸುತ್ತು ಮೆರವಣಿಗೆ ಹಾಕಿಸಿದರು. ಬಹಾದ್ದೂರ್ ಶಹನ ಸಮಾಧಿಯ ಪ್ರದಕ್ಷಿಣೆಯೂ ಆಯಿತು.

ಕೊನೆಯದಾಗಿ ಬಂದಾನಿಗೆ ಫರೂಕ್ ಸಿಯರನು ಹೇಳಿದಂತೆ ಕೇಳಿ, ತನ್ನ ಗುರುವಿನಲ್ಲಿ ಭಕ್ತಿ ತ್ಯಜಿಸಿ, ಶರಣಾಗತ ನಾಗುವುದಾದರೆ ಅವನ ಪ್ರಾಣ ಉಳಿಸುವುದಾಗಿ ಹೇಳಿದನು. ಬಂದಾ ಒಪ್ಪಲಿಲ್ಲ.

ಬಂದಾನ ನಾಲ್ಕು ವರ್ಷದ ಮಗ ಅಜಯಸಿಂಹನನ್ನು ತಂದೆಯ ತೊಡೆಯ ಮೇಲೆ ಕೂಡಿಸಿದರು. ಮಗನ ನಾಲಿಗೆಯನ್ನು ಕತ್ತರಿಸುವಂತೆ ಬಂದಾನಿಗೆ ಆಜ್ಙಾಪಿಸಿದರು! ಬಂದಾ ಅದಕ್ಕೆ ಹೇಗೆ ಒಪ್ಪಿಯಾರು? ಅಜಯ ಸಿಂಹನನ್ನು ತಂದೆಯ ಕಣ್ಣೆದುರೇ ಕತ್ತರಿಸಿ ತುಂಡು ತುಂಡು ಮಾಡಲಾಯಿತು.

ಬಂದಾನನ್ನು ಬಾದಶಹ ಫರೂಕ್ ಸಿಯರನೇ ಅಟ್ಟಹಾಸದಿಂದ ನಗುತ್ತಾ ಪ್ರಶ್ನಿಸಿದ : “ನಿನಗೆ ಯಾವ ರೀತಿಯ ಸಾವು ಬೇಕೋ?”

ಬಂದಾನ ಉತ್ತರ ಅವನ ಪೌರುಷಕ್ಕೆ ಒಪ್ಪುವಂತಿತ್ತು. “ನೀನು ನಿನ್ನ ಸಾವನ್ನು ಹೇಗೆ ಬಯಸುವೆಯೋ ಹಾಗೆ!”

 


"ನೀನು ನಿನ್ನ ಸಾವನ್ನು ಹೇಗೆ ಬಯಸುವೆಯೋ ಹಾಗೆ"


 

ಕೆರಳಿದ ಬಾದಶಹ ಕೆಂಪಗೆ ಕಬ್ಬಿಣದ ಸಲಾಕೆಯಿಂದ ಬಂದಾನನ್ನು ಸಾಯುವವರೆಗೂ ಸುಡಬೇಕಂದು ಅಪ್ಪಣೆ ಕೊಟ್ಟ! ಬಂದಾನ ಕಥೆ ಮುಗಿಯಿತು.

ಧೈರ್ಯ ಸಾಹಸದ ಬೆಟ್ಟ

ಬಂದಾ ಬಹಾದ್ದೂರ್ ಸನ್ಯಾಸಿ ಆಗಿದ್ದವನು. ಆದರೆ ಗುರು ಗೋವಿಂದ ಸಿಂಹರಿಂದ ಮಹಾನ್ ಕಾರ್ಯದ ದೀಕ್ಷೆ ಪಡೆದ. ಅನಂತರ ಅವನ ವ್ಯಕ್ತಿತ್ವವೇ ಬದಲಾಯಿತು. ಗುರು ಗೋವಿಂದರ ಸೇಡನ್ನು ಮಾತ್ರ ಬಂದಾ ತೀರಿಸಿದ ಎಂದರೆ ತಪ್ಪಾಗುತ್ತದೆ. ಎಲ್ಲೇ ಅನ್ಯಾಯ, ಅತ್ಯಾಚಾರಗಳು ಕಂಡರೂ ಅಲ್ಲಿ ಪ್ರತ್ಯಕ್ಷವಾಗುತ್ತಿದ್ದ ಬಂದಾ. ಸರ್ವಸಾಮಾನ್ಯ ಪ್ರಜೆಗಳು ಸುಖ ಶಾಂತಿಯಿಂದ ಇರಬೇಕೆಂದು ಅವನ ಮನಸ್ಸು ಹಾತೊರೆಯುತ್ತಿತ್ತು.

ಯುದ್ಧ ತಂತ್ರದಲ್ಲೂ ಅವನದು ನಿಸ್ಸೀಮ ಬುದ್ಧಿ. ಛತ್ರಪತಿ ಶಿವಾಜಿಯ ತಂತ್ರಗಳನ್ನು ಅದು ಸ್ಮರಣೆಗೆ ತರುತ್ತದೆ. ಇಡೀ ಭಾರತದಲ್ಲೇ ಬಲಾಡ್ಯವಾಗಿದ್ದ ದೆಹಲಿಯ ಸಾಮ್ರಾಜ್ಯದ ವಿರುದ್ಧ ಸೆಣಸಿದ ಬಂದಾ ಬಹಾದ್ದೂರ್ ಧೈರ್ಯ, ಸಾಹಸಗಳ ಬೆಟ್ಟವೇ ಸರಿ!