ಕನ್ನಡ ವಿಶ್ವವಿದ್ಯಾಲಯವು ಕರ್ನಾಟಕ ಸರಕಾರದ ಆರ್ಥಿಕ ನೆರವಿನಿಂದ ರೂಪಿಸಿ, ಪ್ರಕಟಿಸುತ್ತಿರುವ ಸಮಗ್ರ ಕನ್ನಡ ಜೈನಸಾಹಿತ್ಯ ಸಂಪುಟಗಳ ಯೋಜನೆಯು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿಯೇ ಮಹತ್ವಪೂರ್ಣವಾದದ್ದು. ೨೦೦೬ರ ಶ್ರವಣಬೆಳಗೊಳದ ಐತಿಹಾಸಿಕ ಗೊಮ್ಮಟ ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ಕನ್ನಡ ವಿಶ್ವವಿದ್ಯಾಲಯ ಹಂಪಿಯು ಈ ಸಮಗ್ರ ಕನ್ನಡ ಜೈನಸಾಹಿತ್ಯ ಸಂಪುಟಗಳ ಯೋಜನೆಯನ್ನು ರೂಪಿಸಿ, ಕರ್ನಾಟಕ ಸರ್ಕಾರಕ್ಕೆ ಸಲ್ಲಿಸಿತು. ಕರ್ನಾಟಕ ಸರ್ಕಾರವು ಈಗಾಗಲೇ ಸಮಗ್ರ ವಚನಸಾಹಿತ್ಯ ಮತ್ತು ದಾಸಸಾಹಿತ್ಯ ಸಂಪುಟಗಳನ್ನು ಹೊರತಂದಿದ್ದು, ಈಗ ಸಮಗ್ರ ಜೈನಸಾಹಿತ್ಯ ಸಂಪುಟಗಳ ಪ್ರಕಟಣೆಯ ಮೂಲಕ ಪ್ರಾಚೀನ ಕನ್ನಡ ಸಾಹಿತ್ಯದ ಬಹಳ ಮಹತ್ವದ ಶರೀರವೊಂದನ್ನು ಪೂರ್ಣಗೊಳಿಸುತ್ತಿದೆ. ಈ ಸಮಗ್ರ ಜೈನಸಾಹಿತ್ಯದ ಸಂಪುಟದ ಯೋಜನೆಯನ್ನು ೨೦೦೬ರ ಶ್ರವಣಬೆಳಗೊಳದ ಮಹಾಮಹಸ್ತಕಾಭಿಷೇಕದ ಭಾಗವಾಗಿ ಕರ್ನಾಟಕ ಸರಕಾರ ಅಂಗೀಕರಿಸಿ ಸಾರಸ್ವರ ಮಹಾಮಹಸ್ತಕಾಭಿಷೇಕ ಮಾಡಿದ ಪುಣ್ಯಕ್ಕೆ ಪಾತ್ರವಾಗಿದೆ.ಈ ಯೋಜನೆಯ ಮಹತ್ವವನ್ನು ಮನಗಂಡು ಉದಾರವಾದ ಆರ್ಥಿಕ ನೆರವು ನೀಡಿದ ಆಗಿನ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಎನ್. ಧರ್ಮಸಿಂಗ್ ಅವರಿಗೂ ಉಪಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಎಂ.ಪಿ.ಪ್ರಕಾಶ ಅವರಿಗೂ ಸನ್ಮಾನ್ಯ ಲೋಕೋಪಯೋಗಿ ಸಚಿವರಾಗ ಶ್ರೀ ಎಚ್. ಡಿ. ರೇವಣ್ಣ ಅವರಿಗೂ ವಿಶೇಷ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ. ಅಂದು ಚಾಲನೆಗೊಂಡ ಯೋಜನೆಗೆ ಮತ್ತೆ ಜೀವ ತುಂಬಿದ ಈಗಿನ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಎಚ್.ಡಿ. ಕುಮಾರಸ್ವಾಮಿ, ಉಪಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್. ಯಡಿಯೂರಪ್ಪ ಅವರಿಗೆ ವಿಶೇಷ ವಂದನೆಗಳನ್ನು ಸಲ್ಲಿಸುತ್ತೇನೆ. ಈ ಪ್ರಸ್ತಾಪವನ್ನು ವಿಧಾನ ಪರಿಷತ್ತಿನಲ್ಲಿ ಮಂಡಿಸಿದ ಪರಿಷತ್ತಿನ ಸದಸ್ಯರಾದ ಡಾ. ಎಂ.ಆರ್. ತಂಗಾ, ಡಾ. ಚಂದ್ರಶೇಖರ ಕಂಬಾರ, ಡಾ. ಎಲ್. ಹನುಮಂತಯ್ಯ, ಶ್ರೀಹಸನಬ್ಬ ಅವರ ನೆರವನ್ನು ವಿಶೇಷವಾಗಿ ಸ್ಮರಿಸುತ್ತೇನೆ. ಕನ್ನಡದ ಹಿರಿಯ ಸಾಹಿತಿಗಳಾದ ಮತ್ತು ಜೈನಸಾಹಿತ್ಯದಲ್ಲಿ ವಿಶೇಷ ಪಾಂಡಿತ್ಯವುಳ್ಳ ಡಾ. ಹಂಪ. ನಾಗರಾಜಯ್ಯ ಮತ್ತು ಡಾ. ಕಮಲಾ ಹಂಪನಾ ಅವರು ಈ ಸಂಪುಟಗಳ ರೂಪರೇಷೆಯಿಂದ ತೊಡಗಿ ಕರ್ನಾಟಕ ಸರಕಾರಕ್ಕೆ ಇದರ ಮಹತ್ವವನ್ನು ಮನವರಿಕೆ ಮಾಡಿಕೊಡುವವರೆಗೆ ವಿಶೇಷವಾದ ಕಾಳಜಿ ವಹಿಸಿ ಸಹಕರಿಸಿದ್ದಾರೆ.

ಪ್ರಾಚೀನ ಕನ್ನಡ ಸಾಹಿತ್ಯ ಆರಂಭವಾಗುವುದೇ ಜೈನ ಸಾಹಿತ್ಯ ಕೃತಿಗಳ ಮೂಲಕ.ಆದಿಕವಿ ಪಂಪನ ವಿಕ್ರಮಾರ್ಜುನ ವಿಜಯ ಮತ್ತು ಆದಿಪುರಾಣಗಳು ಕನ್ನಡ ಸಾಹಿತ್ಯದ ಮೊತ್ತಮೊದಲ ಮಹಾಕಾವ್ಯಗಳು. ಶಿವಕೋಟ್ಯಾಚಾರ್ಯನ ವೊಡ್ಡಾರಾಧನೆ ಕನ್ನಡದ ಮೊತ್ತಮೊದಲ ಉಪಲಬ್ಧ ಗದ್ಯಗ್ರಂಥ. ಸಂಸ್ಕೃತವೇ ಸಾಹಿತ್ಯನಿರ್ಮಾಣದ ಪ್ರಧಾನ ಭಾಷೆಯಾಗಿದ್ದ ಭಾರತದೇಶದಲ್ಲಿ ಕನ್ನಡದಂತಹ ಪ್ರಾದೇಶಿಕ ಭಾಷೆಯಲ್ಲಿ ಕಾವ್ಯರಚನೆ ಮಾಡುವ ಮೂಲಕ ಜೈನಕವಿಗಳು, ಪ್ರಾದೇಶಿಕ ಸಾಹಿತ್ಯ ನಿರ್ಮಾಣಕ್ಕೆ ನಾಂದಿ ಹಾಡಿದರು.ಆದಿಕವಿ ಪಂಪ ಇದು ನಿಚ್ಚಂ ಪೊಸತು ಅರ್ನವಂಬೋಲ್ ಅತಿ ಗಂಭೀರಂ ಕವಿತ್ವಂ ಎಂದು ಹೇಳಿದ್ದಾನೆ. ಪಂಪಕವಿಯು ಆದಿಪುರಾಣದಲ್ಲಿ ಆದಿನಾಥನ ಭವಾವಳಿಗಳನ್ನು ಮತ್ತು ಆತನ ಮಕ್ಕಳಾದ ಭರತ ಬಾಹುಬಲಿಯರು ರಾಜ್ಯದ ಬಡೆತನಕ್ಕಾಗಿ ಪರಸ್ಪರ ಎದುರಾಳಿಗಳಾಗುವ ಸನ್ನಿವೇಶವನ್ನು ಚಿತ್ರಸಿದ್ದಾನೆ. ಅಣ್ಣ ತಮ್ಮಂದಿರ ನಡುವೆ ಮುಖಾಮುಖಿ ಯುದ್ಧದಲ್ಲಿ ಅಣ್ಣ ಭರತ ಸೋಲುತ್ತಾನೆ, ತಮ್ಮ ಬಾಹುಬಲಿ ಗೆಲ್ಲುತ್ತಾನೆ. ಆದರೆ ಈ ರೀತಿ ಗೆದ್ದ ಬಾಹುಬಲಿಯು ರಾಜ್ಯದ ಒಡೆತನವನ್ನು ನಿರಾಕರಿಸಿ ವೈರಾಗ್ಯಪರನಾಗಿ ಪ್ರತಿಮಾಯೋಗದಲ್ಲಿ ನಿಂತು ಗೊಮ್ಮಟನಾಗುತ್ತಾನೆ. ಅಂತಹ ವೈರಾಗ್ಯದ ಪ್ರತಿಮೆಯಾದ ಗೊಮ್ಮಟನ ಮಹಾಮಸ್ತಕಾಭಿಷೇಕದ ನೆನಪಿಗಾಗಿ ಕನ್ನಡ ಸಾಹಿತ್ಯದ ಗೊಮ್ಮಟ ಸದೃಶ ಜೈನಕೃತಿಗಳನ್ನು ಮತ್ತೆ ಹೊಸದಾಗಿ ಶುಭ್ರಗೊಳಿಸಿ ಸಾಹಿತ್ಯ ಮತ್ತು ಶಾಸ್ತ್ರದ ವಿಭಿನ್ನ ಅರ್ಚನೆಗಳ ಮೂಲಕ ಅವುಗಳಿಗೆ ಪ್ರಕಟಣೆಯ ಅಭಿಷೇಕವನ್ನು ಮಾಡಲಾಗಿದೆ.

ಆದಿಕವಿ ಪಂಪನು ತನ್ನ ವಿಕ್ರಮಾರ್ಜುನ ವಿಜಯದಲ್ಲಿ ಬೆಳಗುವೆನಿಲ್ಲಿ ಲೌಕಿಕಮಂ ಅಲ್ಲಿ ಜಿನಾಗಮಮಂ ಎಂದು ಹೇಳಿಕೊಂಡಿದ್ದಾನೆ. ಹೀಗಾಗಿ ಪ್ರಾಚೀನ ಕಾವ್ಯಗಳಲ್ಲಿ ಲೌಕಿಕ ಮತ್ತು ಆಗಮಿಕ ಎನ್ನುವ ಕಾವ್ಯ ಮತ್ತು ಪುರಾಣಗಳ ನಿರ್ಮಾಣದ ಒಂದು ಪರಪಂರೆ ಕಾಣಿಸಿಕೊಳ್ಳುತ್ತದೆ. ಪಂಪನಿಂದ ತೊಡಗಿ ಪೊನ್ನರನ್ನರಿಂದ ಮುಂದುವರಿದು ಮುಂದಿನ ಕವಿಗಳಲ್ಲಿ ಆಗಮಿಕ ಕಾವ್ಯಗಳಾದ ತೀರ್ಥಂಕರರ ಪುರಾಣಕೃತಿಗಳ ನಿರ್ಮಾಣ ಒಂದು ನೋಂಪಿನಂತೆ ಕಾಣಸಿಗುತ್ತದೆ. ಇನ್ನೊಂದು ಕಡೆ ನಯಸೇನ,ಜನ್ನ,ಬ್ರಹ್ಮಶಿವ, ವೃತ್ತವಿಲಾಸರಂತಹ ಕವಿಗಳು ಲೌಕಿಕ ಕಥೆಗಳಿಗೆ ಜೈನ ಆವರಣವನ್ನು ನಿರ್ಮಾಣ ಮಾಡಿ ಲೌಕಿಕ-ಧಾರ್ಮಿಕಗಳನ್ನು ಒಂದುಗೂಡಿಸುವ ವಿಶಿಷ್ಟ ಕಲೆಗಾರಿಕೆಯನ್ನು ಮೆರೆಯುತ್ತಾರೆ. ಹೀಗೆ ೨೪ ತೀರ್ಥಂಕರರ ಪುರಾಣಕಾವ್ಯ ಒಂದು ಧಾರೆಯಾದರೆ ಚರಿತ್ರೆ ಲೌಕಿಕಕಥೆ ನೀತಿಕಥೆಗಳ ಮೂಲಕ ಸಮಕಾಲೀನ ಬದುಕಿಗೆ ಸ್ಪಂದಿಸಿದ ವೈವಿಧ್ಯಮಯ ಕಾವ್ಯಪರಪಂರೆ ಪ್ರಾಚೀನ ಜೈನಸಾಹಿತ್ಯದ ಇನ್ನೊಂದು ಮುಖ್ಯಧಾರೆಯಾಗಿದೆ. ಇದರೊಂದಿಗೆ ಗದ್ಯಸಾಹಿತ್ಯದ ದೃಷ್ಟಿಯಿಂದ ಶಿವಕೋಟ್ಯಾಚಾರ್ಯನ ವೊಡ್ಡಾರಾಧನೆ ಮತ್ತು ಚಾವುಂಡರಾಯನ ಚಾವುಂಡರಾಯ ಪುರಾಣ ಇನ್ನೊಂದು ಪರಂಪರೆಯನ್ನು ಕಟ್ಟಿಕೊಡುತ್ತವೆ. ಒಂದು ಕಡೆ ಜೈನಧರ್ಮದ ಚೌಕಟ್ಟಿನ ಒಳಗಡೆ ಕತೆಗಳು ಮಾಧ್ಯಮವಾಗಿ ಬಳಕೆಯಾದರೆ, ಇನ್ನೊಂದೆಡೆ ಜೈನಧರ್ಮದ ಮೇಲ್ಮೆಗಾಗಿ ಸಾಧನೆ ಮಾಡಿದ ಸಾಂಸ್ಕೃತಿಕ ವ್ಯಕ್ತಿಯ ಸುತ್ತ ಕಥನವೊಂದು ನಿರ್ಮಾಣವಾಗುತ್ತದೆ. ಇವುಗಳ ನಡುವೆ ನಾಗವರ್ಮನಂತಹ ಶಾಸ್ತ್ರಕಾರನು ಭಾಷೆ ಮತ್ತು ಕಾವ್ಯಲಕ್ಷಣಕ್ಕೆ ಸಂಬಂಧಿಸಿದ ಶಾಸ್ತ್ರಗ್ರಂಥಗಳನ್ನು ರಚಿಸಿದ್ದಾನೆ. ಮಧ್ಯಯುಗೀನ ಕಾಲದಲ್ಲಿ ರತ್ನಾಕರವರ್ಣಿಯಂತಹ ಕವಿಯು ಸಾಂಗತ್ಯದಲ್ಲಿ ಭರತೇಶ ವೈಭವ ಕಾವ್ಯರಚಿಸಿ ಜೈನಕಾವ್ಯಗಳ ಆಶಯದ ಸಾಂಸ್ಕೃತಿಕ ಪಲ್ಲಟವನ್ನು ದಾಖಲಿಸುತ್ತಾನೆ. ೧೮೦೦ರ ಕಾಲಕ್ಕೆ ಬರುವ ದೇವಚಂದ್ರನ ರಾಜಾವಳಿ ಕಥೆಯು ಆಧುನಿಕ ಕನ್ನಡದ ಪೂರ್ವದ ಕಥಾರಚನೆಯ ಅರುಣೋದಯದ ಹೆಜ್ಜೆಯಾಗಿ ಮುಖ್ಯವಾದ ಕೃತಿಯಾಗಿದೆ.

ಒಂದು ಅಂದಾಜಿನ ಪ್ರಕಾರ ಸುಮಾರು ೪೫೦ ಜೈನಕವಿಗಳು ೫೩೦ ಕ್ಕೂ ಹೆಚ್ಚಿನ ಕನ್ನಡ ಕೃತಿಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಸುಮಾರು ಅರ್ಧದಷ್ಟು ಕೃತಿಗಳು ಲಭ್ಯವೆಂದು ನಾವು ಭಾವಿಸಿದರೂ ಇವುಗಳ ಪ್ರಮಾಣ ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಗಣನೀಯ ಎನ್ನಿಸುತ್ತದೆ. ಮಹಾಕಾವ್ಯದಿಂದ ತೊಡಗಿ ಮುಕ್ತಕದವರೆಗೆ, ಗಣಿತಶಾಸ್ತ್ರದಿಂದ ಹಿಡಿದು ಸೂಪಶಾಸ್ತ್ರದವರೆಗೆ, ಜನಪದ ಕಥೆಯಿಂದ ಆರಂಭಿಸಿ ವಿಡಂಬನ ಸಾಹಿತ್ಯದವರೆಗೆ ಕನ್ನಡ ಜೈನಸಾಹಿತ್ಯದ ಹರುಹು ವ್ಯಾಪಿಸಿಕೊಂಡಿದೆ.

ಪಂಪಕವಿಯು ತನ್ನ ಕಾವ್ಯದಲ್ಲಿ ಮತ್ತು ದೇಸಿಗಳ ಕುರಿತು ಮಾತನಾಡುತ್ತಾನೆ. ಕನ್ನಡ ಜೈನಸಾಹಿತ್ಯದ ಬಗ್ಗೆ ಹೇಳುವಾಗ ಜೈನ ಪುರಾಣಗಳ ಪರಿಭಾಷೆ ಮತ್ತು ಪರಿಮಾಣಗಳು ಮಾರ್ಗವಾದರೆ, ಇತಿಹಾಸ, ಸಮಾಜ, ಲೌಕಿಕ ಪ್ರಪಂಚ ದೇಸಿಯಾಗುತ್ತದೆ. ಪಂಪನ ಕಾವ್ಯಗಳು ನಾಣ್ಮುಡಿಯಿಂದ ತೊಡಗಿ, ವಡ್ಡಾರಾಧನೆ ಕತೆಗಳ ಗ್ರಾಮೀಣ ಬದುಕಿನಿಂದ ಮುಂದುವರಿದು, ನಯಸೇನನ ಧರ್ಮಾಮೃತದ ಕಥೆಗಳ ಮಾಲೋಪಮೆಗಳಿಂದ ಹಾದು ಬಂದು, ರತ್ನಾಕರನ ಭರತೇಶ ವೈಭವದ ನುಡಿಗಟ್ಟುಗಳವರೆಗೆ ಕನ್ನಡದ ನಿಜವಾದ ದೇಸಿಯನ್ನು ಜೈನಸಾಹಿತ್ಯ ನಿರ್ಮಿಸಿಕೊಂಡಿದೆ. ಕನ್ನಡಸಾಹಿತ್ಯ ಚರಿತ್ರೆಯಲ್ಲಿ ಚಂಪೂಕಾವ್ಯ ಪ್ರಕಾರ ಜೈನರಿಂದ ಆರಂಭವಾಯಿರು. ಸಾಂಗತ್ಯಕಾವ್ಯ ಪ್ರಕಾರಕ್ಕೆ ನಾಂದಿ ಹಾಡಿದವರು ಜೈನಕವಿಗಳು. ಗದ್ಯವನ್ನು ಮೊದಲು ಮಾಡಿದವರು ಜೈನ ಕಥೆಗಾರರು. ಕಾವ್ಯಶಾಸ್ತ್ರ, ಛಂದಸ್ಸು, ವ್ಯಾಕರಣ, ಸೂಪಶಾಸ್ತ್ರದಂತಹ ಶಾಸ್ತ್ರ ಪಾಂಡಿತ್ಯವನ್ನು ಕನ್ನಡದಲ್ಲಿ ಕಟ್ಟಿಕೊಟ್ಟವರು ಜೈನರು. ಹೀಗೆ ಕನ್ನಡದ ವಿದ್ವತ್ತು, ವಿವೇಕ ಮತ್ತು ವಿಸ್ಮಯ ಕನ್ನಡ ಸಾಹಿತ್ಯದಲ್ಲಿ ಜೈನಕವಿಗಳಿಂದ ಅಪೂರ್ವವಾಗಿ ನಿರ್ಮಾಣವಾಗಿದೆ ಮತ್ತು ಪ್ರಸಾರವಾಗಿದೆ.

ಈ ಹಿನ್ನೆಲೆಯಲ್ಲಿ ಸಮಗ್ರ ಕನ್ನಡ ಜೈನ ಸಾಹಿತ್ಯ ಯೋಜನೆಯನ್ನು ನಿಗದಿತ ಕಾರ್ಯವಿಧಾನದ ಮೂಲಕ ರೂಪಿಸಿಕೊಂಡು ವ್ಯವಸ್ಥಿತವಾಗಿ ಕಾರ್ಯನಿರ್ವಹಿಸಬೇಕೆಂದು ನಾವು ತೀರ್ಮಾನಿಸಿಕೊಂಡೆವು.ಇದಕ್ಕಾಗಿ ಈ ಕ್ಷೇತ್ರದಲ್ಲಿ ನುರಿತ ನಾಡಿನ ಹಿರಯರನ್ನೊಳಗೊಂಡ ಉನ್ನತ ಸಲಹಾ ಸಮಿತಿ ಹಾಗೂ ಸಂಪನ್ಮೂಲ ವಿದ್ವಾಂಸರನ್ನು ಈ ಯೋಜನೆಯ ವ್ಯಾಪ್ತಿಗೆ ಒಳಗೊಳ್ಳಲು ಬಯಸಲಾಯಿತು. ಅದರಂತೆ ನಾಡಿನ ಗಣ್ಯ ವಿದ್ವಾಂಸರು ಈ ಬೃಹತ್ ಯೋಜನೆಯಲ್ಲಿ ಪಾಲ್ಗೊಂಡರೆಂಬುದು ಕನ್ನಡ ವಿಶ್ವವಿದ್ಯಾಲಯಕ್ಕೆ ಹೆಮ್ಮೆಯ ಸಂಗತಿ.

ಸಮಗ್ರ ಕನ್ನಡ ಜೈನ ಸಾಹಿತ್ಯ ಸಂಪುಟದ ಯೋಜನೆಯ ಉನ್ನತ ಸಲಹಾ ಸಮಿತಿಯ ಸದಸ್ಯರಾದ ಡಾ. ದೇ. ಜವರೇಗೌಡ, ಡಾ. ಜಿ.ಎಸ್. ಶಿವರುದ್ರಪ್ಪ, ಡಾ. ಟಿ.ವಿ. ವೆಂಕಟಾಚಲ ಶಾಸ್ತ್ರೀ, ಡಾ. ಪಂಪ ನಾಗರಾಜಯ್ಯ, ಡಾ. ಕಮಲಾ ಹಂಪನಾ, ಡಾ. ಚಂದ್ರಶೇಖರ ಕಂಬಾರ, ಡಾ. ಎಂ.ಎಂ. ಕಲಬುರ್ಗಿ, ಡಾ. ಎಚ್.ಜೆ. ಲಕ್ಕಪ್ಪಗೌಡ, ಡಾ. ಎಂ.ಜಿ. ಬಿರಾದಾರ ಮತ್ತು ಕನ್ನಡ ಸಂಸ್ಕೃತಿ ನಿರ್ದೇಶನಾಲಯದ ನಿರ್ದೇಶಕರು, ಕರ್ನಾಟಕ ಸರ್ಕಾರದ ಕಂದಾಯ ಮತ್ತು ಮುಜರಾಯಿ ಇಲಾಖೆಯ ಕಾರ್ಯದರ್ಶಿಗಳು ತಮ್ಮ ಸೂಚನೆ ಸಲಹೆಗಳಿಂದ ಈ ಸಂಪುಟಗಳ ಸ್ವರೂಪ ಮತ್ತು ಅನುಷ್ಠಾನಗಳ ಎಲ್ಲಾ ಹಂತಗಳಲ್ಲಿಯೂ ಮಾರ್ಗದರ್ಶನ ಕೊಟ್ಟಿದ್ದಾರೆ. ಪ್ರಸಾರಾಂಗದ ನಿರ್ದೇಶಕರಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರು ಸಮಿತಿಯ ಸಂಚಾಲಕರಾಗಿ ಇಡೀ ಯೋಜನೆಯ ಅನುಷ್ಠಾನದ ಕೆಲಸವನ್ನು ಹೆಜ್ಜೆ ಹೆಜ್ಜೆಗೂ ಸಮರ್ಥವಾಗಿ ನಿರ್ವಹಿಸಿದ್ದಾರೆ. ಕುಲಸಚಿವರಾದ ಪ್ರೊ. ಕರೀಗೌಡ ಬೀಚನಹಳ್ಳಿ ಅವರು ಯೋಜನೆಯ ಆಡಳಿತಾತ್ಮಕ ನಿರ್ವಹಣೆಯನ್ನು ಅಚ್ಚುಕಟ್ಟಾಗಿ ನಡೆಸಿದ್ದಾರೆ. ನಮ್ಮ ವಿಶ್ವವಿದ್ಯಾಲಯದ ಜೈನಸಂಸ್ಕೃತಿ ಅಧ್ಯಯನ ಪೀಠದ ಸಂಚಾಲಕರಾದ ಡಾ. ಎಂ. ಉಷಾ ಅವರು ಈ ಯೋಜೆನಯನ್ನು ರೂಪಿಸುವಲ್ಲಿ ವಿಶೇಷವಾಗಿ ಸಹಕರಿಸಿದ್ದಾರೆ.

ವಿಶ್ವವಿದ್ಯಾಲಯವು ಈ ಯೋಜನೆಯನ್ನು ಕೈಗೆತ್ತಿಕೊಂಡಾಗ ಪ್ರಕಟಣ ಸ್ವರೂಪವನ್ನು ಸ್ಥೂಲವಾಗಿ ಹೀಗೆ ಗುರುತಿಸಿಕೊಳ್ಳಲಾಯಿತು. ಇದು ಡೆಮ್ಮಿ ೧/೮ ಆಕಾರದ ಸುಮಾರು ಇಪ್ಪತ್ತು ಸಂಪುಟಗಳಿಂದ ಕೂಡಿರಬೇಕು. ಪ್ರತಿ ಸಂಪುಟವೂ ಅಂದಾಜು ೬೦೦ ಪುಟಗಳಾಗಿರಬೇಕು. ಸಂಪುಟದ ಸಂಪಾದಕರು ಆಯಾ ಸಂಪುಟಕ್ಕೆ ಸೂಕ್ತವಾದ ಕವಿ ಕಾವ್ಯ ಪರಿಚಯ, ಚಾರಿತ್ರಿಕ ಹಾಗೂ ಸಾಹಿತ್ಯಿಕ ಮಹತ್ವ ಇತ್ಯಾದಿ ವಿವರಗಳನ್ನು ಒಳಗೊಂಡ ಪ್ರಸ್ತಾವನೆ ಬರೆಯಬೇಕೆಂದು ನಿರ್ಣಯಿಸಲಾಯಿತು. ಸಂಪುಟಗಳ ಜನಪ್ರಿಯ ಆವೃತ್ತಿ ಆಗಿರುವುದರಿಂದ ಪಠ್ಯಗಳಲ್ಲಿ ಪಾಠಾಂತರಗಳನ್ನು ನೀಡಬೇಕಾಗಿಲ್ಲ. ಪ್ರತಿಯೊಬ್ಬ ಕವಿಯು ಸಮಗ್ರ ಕಾವ್ಯವನ್ನು ಒಂದು ಸಂಪುಟದಲ್ಲಿ ತರುವುದೆಂದು ಸಮಿತಿ ತೀರ್ಮಾನಿಸಿತು. ವಸ್ತು ವಿಷಯಕ್ಕೆ ಅನುಗುಣವಾಗಿ ಬೇರೆ ಬೇರೆ ಎರಡೆರಡು ಕಾವ್ಯಗಳನ್ನು ಒಂದೇ ಸಂಪುಟದಲ್ಲಿ ಅಳವಡಿಸುವುದು ಸೂಕ್ತವೆಂದು ತೀರ್ಮಾನ ತೆಗೆದುಕೊಳ್ಳಲಾಯಿತು. ಈಗಾಗಲೇ ಸಂಪಾದನೆಗೊಂಡು, ಪ್ರಕಟವಾಗಿರುವ ಕಾವ್ಯಗಳನ್ನು ಮೊದಲ ಹಂತದಲ್ಲಿ ತೆಗೆದುಕೊಳ್ಳುವುದೆಂದೂ ಅಪೂರ್ವ ಕೃತಿಗಳನ್ನು ಈ ಮಾಲೆಯಲ್ಲಿ ಸೇರಿಸಿಕೊಳ್ಳುವುದೆಂದೂ ನಿಶ್ಚಯಿಸಿಲಾಯಿತು. ಪಂಪ, ಪೊನ್ನ, ರನ್ನ, ಜನ್ನ, ನಾಗವರ್ಮ, ನಯಸೇನ, ಸಾಳ್ವ ಮುಂತಾದವರ ಕಾವ್ಯಗಳ ಈಗಾಗಲೇ ಮುದ್ರಣಗೊಂಡಿವೆ.ಆದರೂ ಪಾಠಕ್ಲೇಶ ಅರ್ಥಕ್ಲೇಶಗಳು ಹೇಗೋ ಉಳಿದುಬಿಟ್ಟಿವೆ. ಆದುದರಿಂದ ಎಲ್ಲ ಮುದ್ರಿತ ಪಾಠಗಳನ್ನು ಗಮನಿಸಿ ಈ ಎಲ್ಲ ಕ್ಲೇಶಗಳನ್ನು ನಿವಾರಿಸಿ ಸರ್ವಪ್ರತಿಪಾಠಗಳನ್ನು ಇಟ್ಟುಕೊಳ್ಳುವುದು ಅಗತ್ಯವೆಂದು ಸಮಿತಿ ಭಾವಿಸಿತು.ಗ್ರಂಥದ ಕೊನೆಗೆ ಶಬ್ದಾರ್ಥಕೋಶ, ಪಾರಿಭಾಷಿಕಕೋಶ, ಸಹಾಯಕ ಸಾಹಿತ್ಯ ನೀಡುವುದು ಅಗತ್ಯವೆಂದು ಸಂಪಾದಕರಿಗೆ ಬಿನ್ನವಿಸಿಕೊಳ್ಳಲಾಯಿತು. ಈ ಹಿನ್ನೆಲೆಯಲ್ಲಿ ಪ್ರಸ್ತುತ ಇಪ್ಪತ್ತು ಸಂಪುಟಗಳ ನಿಮ್ಮ ಎದುರಿಗಿವೆ. ಶ್ರಮಸಾದ್ಯವಾದ ಇಂಥ ಕಾವ್ಯಗಳನ್ನು ಸಂಪಾದಿಸಿಕೊಟ್ಟ ಕನ್ನಡದ ಹಿರಿಯ ವಿದ್ವಾಂಸರಾದ ಎಲ್ಲ ಸಂಪಾದಕರಿಗೆ ಕೃತಜ್ಞತೆ ಹೇಳುವುದು ಮಾತ್ರ ಈಗ ನಮಗೆ ಸಾಧ್ಯವಾಗಿದೆ.

ಹನ್ನೆರಡನೆಯ ಶತಮಾನದ ಕಾಲಘಟ್ಟದಲ್ಲಿ ಶಿವಶರಣರ ವಚನಸಾಹಿತ್ಯವು ಸಾಮಾಜಿಕ ಮತ್ತು ಸಾಂಸ್ಕೃತಿಕವಾಗಿ ಕನ್ನಡ ನಾಡಿನ ಬದುಕಿನಲ್ಲಿ ಪಲ್ಲಟಗಳನ್ನು ದಾಖಲಿಸಿತು. ಧರ್ಮ ಎನ್ನುವ ಪರಿಕಲ್ಪನೆ ಹೊಸ ವ್ಯಾಖ್ಯಾನವನ್ನು ಬರೆದ ವೀರಶೈವಧರ್ಮ ಜನಸಾಮಾನ್ಯರನ್ನು ಜಾತಿ, ಮತ, ಲಿಂಗ ಭೇದವಿಲ್ಲದೆ ಆವರಿಸಿಕೊಳ್ಳುವ ವೇದಿಕೆಯೊಂದನ್ನು ಸಿದ್ಧಮಾಡಿತು. ಇಂತಹ ಕಾಲಘಟ್ಟದಲ್ಲಿ ಬಂದ ಜೈನಕೃತಿಗಳನ್ನು ಧಾರ್ಮಿಕ ಉದಾರವಾದ ದೃಷ್ಟಿಯಿಂದ ಗಮನಿಸಬೇಕು. ಕುಂದಕುಂದಾಚಾರ್ಯರ ತತ್ತ್ವಗಳನ್ನು ಕನ್ನಡ ಜಿನಸಮಾಜಕ್ಕೆ ಸರಳವಾದ ಸುಗಮ ಮಾಧ್ಯಮಗಳಲ್ಲಿ ಸಂವಹನ ಮಾಡುವ ಉದ್ದೇಶದಿಂದ ಹುಟ್ಟಿದ ಕೃತಿಗಳಲ್ಲಿ ಮುಖ್ಯವಾದುದು ಬಂಧುವರ್ಮನ ಜೀವನಸಂಬೋಧನಂ, ಜೀವವನ್ನು ಸಂಬೋಧಿಸಿ ಜೈನದ್ವಾದಶಾನುಪ್ರೇಕ್ಷೆಗಳನ್ನು ಬೋಧಿಸುವ ಕ್ಲಿಷ್ಟಕರ ಸವಾಲನ್ನು ಸಮರ್ಥವಾಗಿ ನಿರ್ವಹಣೆ ಮಾಡಿದ ಕೃತಿಯಾಗಿ ಜೀವಸಂಬೋಧನೆ ಕನ್ನಡದಲ್ಲಿ ಮುಖ್ಯವಾಗಿದೆ. ಅನುಪ್ರೇಕ್ಷ್ಯಗಳ ಗಹನತತ್ತ್ವಗಳನ್ನು ಜನಸಾಮಾನ್ಯರಿಗೆ ಪರಿಣಾಮಕಾರಿಯಾಗಿ ಮುಟ್ಟಿಸುವ ಉದ್ಧೇಶದಿಂದ ಸರಳ ನಿದರ್ಶನಗಳ ಮೂಲಕ ಚಿಕ್ಕ ಚಿಕ್ಕ ಕತೆಗಳ ಮೂಲಕ ಈಕಾವ್ಯವನ್ನು ರೂಪಿಸಲಾಗಿದೆ. ಜೈನಪುರಾಣಗಳಲ್ಲಿ ಬಹಳ ಘನವಾಗಿ ಚರ್ಚಿತವಾಗುವ ಭವಾವಳಿಗಳ ಸ್ವರೂಪಗಳನ್ನು ತುಂಬಾ ನೇರವಾಗಿ ಸರಳವಾಗಿ ಇಲ್ಲಿ ಮಂಡಿಸಲಾಗಿದೆ. ದೇಹ ಮತ್ತು ಜೀವಗಳು ಬದಲಾಗುವುದರ ಮೂಲಕ ಸಂಸಾರದ ಸಂಬಂಧಗಳೇ ಅಸಂಗತವಾಗುವ ದಾರ್ಶನಿಕ ತತ್ತ್ವ ಇಲ್ಲಿ ವಿಶೇಷವಾಗಿ ಪ್ರಸ್ತಾವನಗೊಂಡಿವೆ. ತಾಯಿ ಹಾಗೂ ಅಕ್ಕ ತಂಗಿಯರು ಪತ್ನಿಯರಾಗುವ, ತಂದೆ ಹಾಗು ಅಣ್ಣತಮ್ಮಂದಿರು ಗಂಡಂದಿರಾಗುವ ಸಂಸಾರದ ವಿಚಿತ್ರ ಸನ್ನಿವೇಶಗಳನ್ನು ದೇಹ ಮತ್ತು ಜೀವಗಳ ಸಂಬಂಧಗಳ ನೆಲೆಯಲ್ಲಿ ಚರ್ಚಿಸಲಾಗಿದೆ.ತನು-ಧನಗಳು ಜೀವಕ್ಕಿಂತ ಹೊರಗಿನವು ಎನ್ನುವುದರ ಮೂಲಕ ಕರ್ಮನಿವಾರಣೆ ಮಾಡಿಕೊಳ್ಳುವುದೇ ದಿವ್ಯಸುಖವನ್ನು ಪಡೆಯುವ ಮಾರ್ಗ ಎಂದು ಹೇಳುತ್ತ,ಮೋಕ್ಷದ ಕಲ್ಪನೆಯನ್ನು ತುಂಬಾ ಅಚ್ಚುಕಟ್ಟಾಗಿ ವಿವರಿಸಲಾಗಿದೆ. ಬಂಧುವರ್ಮನು ತನ್ನ ಜೀವಸಂಬೋಧನೆಯಲ್ಲಿ ದ್ವಾದಶಾನುಪ್ರೇಕ್ಷೆಗಳ ಸಮರ್ಥನೆಗಾಗಿ ಕತೆಗಳ ನಿದರ್ಶನಗಳನ್ನು ಬಳಸಿಕೊಳ್ಳುತ್ತಾನೆ.ಆದರೆ, ಯಾವುದೇ ಕತೆಯನ್ನು ದೀರ್ಘವಾಗಿ ಪ್ರತ್ಯೇಕ ಕಾವ್ಯ ಎನ್ನುವ ಹಾಗೆ ವಿಸ್ತರಿಸುವುದಿಲ್ಲ.

ಬಂಧುವರ್ಮನ ಹರಿವಂಶಾಭ್ಯುದಯಂ ಕನ್ನಡ ನೇಮಿನಾಥಪುರಾಣಗಳ ಸಾಲಿಗೆ ಸೇರುವ ಹದಿನಾಲ್ಕು ಆಶ್ವಾಸಗಳ ಚಂಪೂಕಾವ್ಯ. ಒಂದನೆಯ ಗುಣವರ್ಮನ ಹರಿವಂಶದ ಪ್ರೇರಣೆಯಿಂದ ಬರೆದಿರಬಹುದಾದ ಹರಿವಂಶಾಭ್ಯುದಯಂ ವೈದಿಕ ಪರಪಂರೆಯ ಭಾರತ ಹಾಗೂ ಭಾಗವತದ ಕತೆಗಳಿಗೆ ಜೈನೀಕರಣವನ್ನು ಮಾಡಿದ ಪುರಾಣಕಾವ್ಯ. ನಾಗಚಂದ್ರ ರಾಮಚಂದ್ರಚರಿತ ಪುರಾಣ ಇಂತಹ ಇನ್ನೊಂದು ಜೈನಕಾವ್ಯ.ವೈದಿಕ ಮತ್ತು ಜೈನ ಮುಖಾಮುಖಿಯಾಗಿ ಹೊಸತೊಂದು ಪುರಾಣವನ್ನು ಕಟ್ಟುವ ವಿಶಿಷ್ಟ ಮಾದಿರಿಯೊಂದನ್ನು ಹರಿವಂಶಾಭ್ಯುದಯದಲ್ಲಿ ನಾವು ಕಾಣಬಹುದು. ಕರ್ಣಪಾರ್ಯ ಮತ್ತು ನೇಮಿಚಂದ್ರ ಕೃತಿಗಳಿಗಿಂತ ಅನೇಕ ದೃಷ್ಟಿಯಲ್ಲಿ ಭಿನ್ನ ನಿರ್ವಹಣೆಯುಳ್ಳ ಕಾವ್ಯ ಹರಿವಂಶಾಭ್ಯುದಯ.ಧರ್ಮ-ಕಾವ್ಯಧರ್ಮದ ಜತೆಗೆ ಮಾನವಧರ್ಮವನ್ನು ತನ್ನ ಕವ್ಯದ ಜೀವ ಸಂಬೋಧನೆಯನ್ನಾಗಿ ಇಟ್ಟುಕೊಂಡಿರುವ ಬಂಧುವರ್ಮ, ಹರಿವಂಶಾಭ್ಯುದಯ ಪುರಾಣಕಾವ್ಯಕ್ಕೆ ಮಾನವೀಯ ಮುಖವನ್ನು ಜೋಡಿಸುತ್ತಾನೆ.

ಬಂಧುವರ್ಮನ ಜೀವಸಂಬೋಧನಂ ಮತ್ತು ಹರಿವಂಶಾಭ್ಯುದಯಂ ಇವುಗಳನ್ನು ಸಂಪಾದಿಸಿ ಕೊಟ್ಟಿರುವ ಶ್ರೀ ಬಿ.ಎಸ್. ಸಣ್ಣಯ್ಯನವರು ಪ್ರಾಚೀನ ಕನ್ನಡ ಹಸ್ತಪ್ರತಿಶಾಸ್ತ್ರ ಮತ್ತು ಸಂಪಾದನೆಗಳಲ್ಲಿ ಅಪಾರ ಪರಿಶ್ರಮ ಮತ್ತು ಪಾಂಡಿತ್ಯವನ್ನು ಉಳ್ಳವರು ಅವರು ಸಂಪಾದಿಸಿರುವ ನೇಮಿನಾಥಪುರಾಣಂ ಮುಂತಾದ ಪ್ರಾಚೀನ ಕಾವ್ಯ ಕೃತಿಗಳು ಕನ್ನಡ ಸಂಪಾದನೆ ಕ್ಷೇತ್ರಕ್ಕೆ ಬೆಲೆಯುಳ್ಳ ಕಾಣಿಕೆಗಳಾಗಿವೆ. ಅವರು ಈಚೆಗೆ ಪ್ರಕಟಿಸಿರುವ ‘ಪ್ರಾಚೀನ ಕನ್ನಡ ಗ್ರಂಥ ಸಂಪಾದನೆ’ ವಿಶಿಷ್ಟ ಕೃತಿಯಾಗಿದೆ. ಅವರಿಗೆ ವಂದನೆಗಳನ್ನು ಸಲ್ಲಿಸುತ್ತೆನೆ.

ಗ್ರಂಥವನ್ನು ಅಚ್ಚುಕಟ್ಟಾಗಿ ಹೊರತರುತ್ತಿರುವ ಪ್ರಸಾರಾಂಗದ ನಿರ್ದೇಶಕರಾದ ಪ್ರೊ. ಮಲ್ಲೇಪುರಂ ಜಿ.ವೆಂಕಟೇಶ ಅವರಿಗೆ ಆಭಾರಿಯಾಗಿದ್ದೇನೆ.

ಬಿ.ಎ. ವಿವೇಕ ರೈ
ಕುಲಪತಿ