೧೧. ಬೋಧಿದುರ್ಲಭಾನುಪ್ರೇಕ್ಷೆ

ಕಂ || ಮಾನಿತ ಗುಣತತ್ವಪರಿ
ಜ್ಞಾನಮೆ ತಾಂ ಬೋಧಿತತ್ವಮೆಂಬುದು ಮಳಸಂ
ತಾನಕ್ಷಯಕರಮಪ್ಪುದು
ತಾನಾಪ್ತಾಗಮ ಪದಾರ್ಥನಿರ್ಣಯರೂಪಂ ೧

ವ || ಆಪ್ತನೆಂತಪ್ಪನೆಂದೊಡೆ

ಶ್ಲೋಕಂ || ಕ್ಷುಧಾ ತೃಷಾ ಭಯಂ ದ್ವೇಷೋ ರಾಗೋ ಮೋಹಶ್ಚ ಚಿಂತನಂ
ಜರಾ ರುಜಾ ಚ ಮೃತ್ಯುಶ್ಚ ಸ್ವೇದಃ ಖೇದೋ ಮದೋ ರತಿಃ
ವಿಸ್ಮಯಂ ಜನನಂ ನಿದ್ರಾ ವಿಷಾದೋsಷ್ಟಾದಶ ಸ್ಮೃತಾಃ ||

ವ || ಅಷ್ಟಾದಶ ದೋಷವರ್ಜಿತನಪ್ಪಾತ್ಮನ ವಚನಮಾಗಮಮಂತಪ್ಪಾಗ ಮದಿಷ್ಟದಿಂ ನೆಗೞ್ತೆ ಪದಾರ್ಥಮಕ್ಕುಮಲ್ಲಿ

ಶಾ || ಆಱುಂ ದ್ರವ್ಯದ ಭೇದಮಂ ನವವಿಕಲ್ಪೋ ದ್ಯತ್ಪದಾರ್ಥಂಗಳಂ
ಮೂಱುಂ ಲೋಕವಿಭಾಗದಾಕೃತಿಗಳಂ ಪಂಚಾಸ್ತಿಕಾಯಂಗಳಂ
ಬೇಱಾಗಿರ್ದ ಚತುರ್ಗತಿ ಸ್ಥಿತಿಗಳಂ ಷಡ್ಜೀವಕಾಯಂಗಳಂ
ಮೀಱುತ್ತಿರ್ಪ ದುರಷ್ಟಕರ್ಮದಳವಂ ಮೋಕ್ಷಕ್ರಿಯೋಪಾಯಮಂ ೨

ವ || ಇವು ಮೊದಲಾಗಿ ಪೆಱವು ವಸ್ತುಸ್ಥಿತಿಗಳ ತೆಱನನಱಿದು ನಂಬಿ ಮೆಚ್ಚಿ ನೆಗೞುತ್ತಿರ್ಪುದು ಬೋಧಿಲಕ್ಷಣಂ ಮತ್ತಂ

ಕಂ || ಜ್ಞಾನಾದಿ ತ್ರಿಕ ರತ್ನವಿ
ಧಾನಂಗಳನಱಿದು ನೆಱೆಯೆ ಕೆಯ್ಕೊಂಡು ಗುಣ
ಸ್ಥಾನಂಗಳ ತುದಿಗೆಯ್ದುವೆ
ನಾನೆಂಬುದ್ಯೋಗಮಲ್ತೆ ಬೋಧಿಗೆ ಸಾರಂ ೩

ವ || ಅಂತು ಬೋಧಿಸಿ ಸಾರಮಪ್ಪ ಸಮ್ಯಗ್ದರ್ಶನ ಜ್ಞಾನ ಚಾರಿತ್ರಂಗಳ ಸಂಪೂರ್ಣತೆಯೊಳ್ ಮೋಕ್ಷಮಕ್ಕುಂ

ಉ || ಈ ತೆಱದಿಂದಮೀ ತೆಱದ ಜೀವಮನೋವುವುವೀ ನಿರೋಧದಿಂ
ದೀತೆಱದಿಂದ್ರಿಯಂಗಳನಡಂಗಿಪುದೀ ಪರಿಣಾಮಶುದ್ಧಿಯಿಂ
ದೀತೆಱದುದ್ದತಾಘನಿಕರಂ ಕಿಡುಗುಂ ದಲಮೋಘಮೆಂಬಭಿ
ಪ್ರೇತದಳುರ್ಕೆಯುಂ ರುಚಿಯುಮಿಲ್ಲದೊಡೇವುವೊ ಪೇೞ್ ವ್ರತಾದಿಗಳ್ ೪

ವ || ಬಿನ್ನಣಮುಂ ಕೆಯ್ದುವುಂ ಮನಮುಮಿಲ್ಲದೊಂಗೆನಿತು ಮೆಯ್ಯಾದೊಡಂ ಪಗೆಯಂ ಗೆಲಲಾಗದಂತೆ ಅಱಿವುಮಾರ್ಪುಮೞ್ತಿಯುಮಿಲ್ಲದನೆನಿತು ತಪಂಗೆಯ್ದೊಡಂ ಕರ್ಮಂಗಳಂ ಗೆಲಲಾಱಂ

ಕಂ || ಅಱಿವಿಂ ತ್ರಿಭುವನಮೆಲ್ಲಮ
ನಱಿವಂತಕ್ಕುಂ ಮಹಾನುಭಾವದಿನೆಂದಿಂ
ತಱಿಪೆಯುಮಱಿವಂ ಕೆಯ್ಕೊಳ
ಲಱಿಯರ್ ಬೞಿಯಂ ವಿಮೋಹವಶದಿಂ ಕಿಱಿಯರ್ ೫

ವ || ಬಾವಿಯ ಕಪ್ಪೆ ಸಮುದ್ರಮಂ ಮಚ್ಚದಂತೆಲೆ ಮೂಢ ಜೀವಾ ನಿನ್ನಳವಿಗೆ ಕೇವಲ ಜ್ಞಾನದಳವನುದಾಸೀನಂಗೆಯ್ವುದೇಕೆ ನೀಂ ಮರುಳಾದಿರಿಂತಪ್ಪ ವಸ್ತುಗಳನಱಿದೊಡಂ ಬಲ್ಲಿದನಾಗಿ ಪಗೆವನೊಳ್ ಪೊಣರ್ದೊಡಲ್ಲದೆರಡೆಡೆಯೊಳಂ ಗೆಲ್ಲಮಕ್ಕುಮೆ?

ಉ || ನೆಟ್ಟನೆ ಜೀವಮಂತದು ಮಳಚ್ಛದಮಾಮಳಮಾಸ್ರವೋದ್ಭವಂ
ತೊಟ್ಟನದುಂ ಪ್ರಮಾದದೆ ಮಳವ್ರಜದಿಂ ವಿಪರೀತದಿಂದೊಡಂ
ಬಟ್ಟಿಹ ಕರ್ಮದಿಂದಮದಱೊಳ್ ಸಮವಾಯದೆ ಕಾಲಲಬ್ಧಿಗಳ್
ಪುಟ್ಟುಗುಮಲ್ಲಿ ತತ್ವರುಚಿಯಾಗಿರೆ ದೇಹಿಗೆ ಮುಕ್ತಿ ಕೂಡುಗುಂ ೬

ವ || ಮಹಾವ್ಯಾಧಿಯುಳ್ಳಾತಂಗೆ ರುಚಿ ಪುಟ್ಟೆ ಕುತ್ತಂ ಕಿಡಲ್ ಬಗೆದುದೆಂದಱಿವುದು ಸಂಸಾರಿಜೀವಕ್ಕೆ ತತ್ವರುಚಿ ಪುಟ್ಟೆ ಕರ್ಮಂ ಕಿಡಲ್ ಬಗೆದುದೆಂದಱಿವುದು ಮತ್ತಮೆಂತಪ್ಪುದಱಿಂ ನಿವೃತ್ತಿಯೊಳ್ ಮುಕ್ತಿ ಕೂಡುಗುಮೆಂದೊಡೆ

ಕಂ || ಆವೆಡೆಯೊಳಾವ ತೆಱದಿಂ
ಜೀವಂ ದುರ್ಗತಿಯೊಳಾೞ್ಗುಮದನಾ ತೆಱದಿಂ
ಭಾವಿಸಿ ಬಗೆದಱಿದಾಗಳು
ಮೋವದೆ ತಾಂ ತೊಱೆದು ನೆಗೞೆ ನಿರ್ವೃತಿಯಕ್ಕುಂ ೭

ವ || ರಾಜಾನುಮತದಿಂ ಸೆಱೆಯೊಳಿರ್ದನ ಸಂಕಲೆ ಪಱಿದೊಡಂ ಗುರುಮತದಿಂ ಬಂಧಹೇತುಗಳ್ ಪಱಿದೊಡಮಾ ನಿಗಡಬಂಧಕ್ಕಮೀ ಕರ್ಮಬಂಧಕ್ಕಂ ಮೋಕ್ಷಮಕ್ಕುಂ ನೀನಾಲಸ್ಯನಾಗದಿರ್

ಮ || ಮತಿ ಬೇರ್ ನೈಗಮಾದಿಯಾಗಮನಮಂ ಕೊಂಬಸ್ತಿನಾಸ್ತಿ ಪ್ರವಾ
ಕ್ತತಿಗಳ್ ತಾಮೆಲೆಗಳ್ ವಿನೂತ ಲಲಿತಾನೇಕಾಂತಮಪ್ಪರ್ಥಸಂ
ತತಿಗಳ್ ಪುಷ್ಪಫಲಂಗಳಾಗೆ ಸೊಗಯಿಪ್ಪುತ್ತುಂಗ ಪುಣ್ಯಾಂಕುರ
ಶ್ರುತ ವೃಕ್ಷಾಗ್ರದೊಳಿರ್ದು ನೀಂ ನಲಿಯದೇಕಿರ್ಪಯ್ ಮನಃಕೋಕಿಲಾ ೮

ವ || ಸೊಗಯಿಪ ಪಣ್ತ ಮರನನೇಱಿ ಕೋಕಿಲಂ ನಲಿವಂತೆ ಭವ್ಯಮನಮೆಂಬ ಕೋಕಿಲಂ ಪುಣ್ಯಕ್ಕಾಗರಮಪ್ಪ ಶ್ರುತವೃಕ್ಷದೊಳ್ ನಲಿಯದೇಕಿರ್ಪುದೋ ಶ್ರುತದಿಂದಮಱಿವಿನ ಸಾಮರ್ಥ್ಯಮೇಂ ಕಿಱಿದೇ?

ಕಂ || ಒಡಲ ಪರಿಗ್ರಹದಿರವಂ
ಕಿಡೆ ನೆಗೞ್ದು ತಿಣ್ಣಮಱಿವನಂತಪ್ಪಾತಂ
ತೊಡರ್ಗುಮೆ ಪಾಪದ ಬಲೆಯೊಳ್
ತೊಡರಂ ತೊಡರ್ಗುಂ ವಿನೂತ ಮುಕ್ತ್ಯಂಗನೆಯೊಳ್ ೯

ವ || ಮಣ್ಣೊಳ್ ಮೆತ್ತಿದ ತುಂಬೀಫಲಂ ನೀರೊಳಿಕ್ಕಿದಾಗಳೞ್ದಡಿಯೊಳಿರ್ದ ಮಣ್ ಕರಗೆ ಮೆಗಲ್ಲದೆ ಕೆಳಗೆ ನಿಲ್ಲದಂತೆ ಕರ್ಮಬಂಧಸ್ಥನಪ್ಪ ಜೀವಂ ಬಂಧಕಾರಣಂಗಳ್ ಪೋಗೆ ಮೋಕ್ಷದೊಳಲ್ಲದಿರದು ಕರ್ಮಪ್ರಚ್ಛಾದನದಿಂದಱಿಯದುದರಿದೆ?

ಮ || ಅಱಿಗುಂ ಕಾಣ್ಗುಮಮೂರ್ತನಾದಿರಹಿತಂ ಸೌಖ್ಯಾಕರಂ ಕರ್ಮಮಂ
ಪಱಿದಂದೂರ್ಧ್ವಗತಿಸ್ವಭಾವಸಹಿತಂ ದೇಹಪ್ರಮಾಣಂ ದಲೆಂ
ದಱಿ ನೀಂ ನಿನ್ನಳವಂ ತಗುಳ್ದು ಮಳಮಂ ನೀಗೆಂತುಮಿಂ ಮಾಣದಿರ್
ತಱಿಸಂದೊಪ್ಪುವ ಚಿತ್ತದಿಂ ಗುಣಗಣಪ್ರಖ್ಯಾತ ಸದ್ವೃತ್ತದಿಂ ೧೦

ವ || ಇಂತು ನಿನ್ನಂದಮಂ ನೀಂ ಬಗೆದು ನೋಡಿ ಲೋಹದೊಳ್ ಬೆರಸಿದ ಪೊನ್ನಂ ಶೋಧಿಸಿಕೊಳ್ವಂತೆ ಕರ್ಮದೊಳ್ ಬೆರಸಿದ ನಿನ್ನಂ ಶುದ್ಧಂ ಮಾಡಿ ಕೊಳ್ಳದೇಕಿರ್ಪಯ್

ಕಂ || ನಾನಾ ಪ್ರಕಾರಮಪ್ಪೆನಿ
ತಾನುಂ ಮಾತುಗಳೊಳೇನೊ ಬಿಸುಟು ತೊಡರ್ಪಂ
ಜ್ಞಾನಮನೆ ಭಾವಿಸುತ್ತಿರೆ
ನೀನೆಂತುಂ ಪಡೆವೆಯಲ್ತೆ ಮುಕ್ತಿಶ್ರೀಯಂ ೧೧

ವ || ಬೇಸಗೆಯೊಳೊಣಗಿದ ಪುಲ್ಲಂ ಕಿರ್ಚು ತಗುಳ್ದೊಡೊಂದು ಗೞಿಗೆಯೊಳಾ ಪುಲ್ಲು ಬೇಯದಿರ್ಕುಮೆ? ಕಾಲಲಬ್ಧಿಯೊಳ್ ಸಮ್ಯಗ್‌ಜ್ಞಾನ ಭಾವನೆ ತಗುಳ್ದೊಡಾತನ ಕರ್ಮಂ ಕಿಡದಿರ್ಕುಮದಱಿಂ ಮಾಣದೆ

ಮ || ಮುಳಿಸಂ ಮಾೞ್ಪುದು ಕರ್ಮಬಂಧದೆಡೆಯೊಳ್ ವಿಕ್ರಾಂತದಿಂದಾಗಳುಂ
ವಿಳಸದ್ಧರ್ಮದ ವೃತ್ತಿಯಲ್ಲಿ ಸತತಂ ಮಾಡಾರ್ಪಿನಿಂ ರಾಗಮಂ
ಮುಳಿಸುಂ ರಾಗಮುಮಿನ್ನವಪ್ಪೆಡೆಗಳೊಳ್ ತಾಮೊಳ್ಳಿಕೆಯ್ಗುಂ ಕರಂ
ಮುಳಿಸಂತಲ್ಲದಾರ್ಗಮಾವೆಡೆಯೊಳಂ ದುಃಖಂಗಳುಂ ಕೂಡುಗುಂ ೧೨

ವ || ಕೆಯ್ದು ಪಗೆಯನಿಱಿಯಲೊಳ್ಳಿತ್ತು ತನ್ನನಿಱಿಯಲೊಳ್ಳಿತ್ತೆ ? ಮುಳಿಸುಂ ಕರ್ಮಕ್ಕೆ ಮುಳಿಯಲೊಳ್ಳಿತ್ತು ಧರ್ಮಕ್ಕೆ ಮುಳಿಯಲೊಳ್ಳಿತ್ತೆ ? ಖಂಡಶರ್ಕರೆ ಪಾಲ್ಗುಡಿಯ ಲೊಳ್ಳಿತ್ತು ವಿಷದೊಳ್ ಕುಡಿಯಲೊಳ್ಳಿತ್ತೆ ? ರಾಗಂ ಧರ್ಮದೊಳ್ ಕೂಡಿದೊಡೊಳ್ಳಿತ್ತು ಪಾಪದೊಳ್ ಕೂಡಿದೊಡೊಳ್ಳಿತ್ತೆ ? ರಾಗದ್ವೇಷಂಗಳಿಂತು ಧರ್ಮಕರ್ಮಂ ಗಳೆಡೆಯೊಳಲ್ಲದುೞಿದಾವೆಡೆಯೊಳಂ ಪೊಲ್ಲವೆಂದವರ್ಕಂಜುವುದು

ಕಂ || ಕುತ್ತಂ ಗುಣಮುಳ್ಳವರಂ
ಪತ್ತಿದೊಡವರಂಜರಶುಚಿಯಪ್ಪೞಿಯೊಡಲಂ
ಪತ್ತಿರ್ಪಿರವಂ ತೊಱೆಯಲು
ದಾತ್ತತೆಯಂ ಮೆಱೆಯಲಾದುದೆಂಬುದಱಿಂದಂ ೧೩

ವ || ತಗಪಿರ್ದುಂ ಕಾಪಿನವರಗಲ್ಕೆಯಂ ಮೆಚ್ಚದಿರ್ಪನೆ ? ಗುಣದೊಳ್ ನೆಗೞ್ದಿರ್ದಂ ಮೆಯ್ಯಗಲ್ಕೆಯಂ ಮೆಚ್ಚದಿರ್ಪನೆ?

ಮ || ಅಱಿವುಳ್ಳಂ ರುಜೆ ಪೆರ್ಚಿ ತೀರ್ಚುವೊಡದಂ ಮರ್ದಿಂದಡಂಗೊತ್ತಿದಂ
ದುಱೆಬೇಗಂ ತೊಱೆಯೆಂಬುದಿಂತು ಮನೆಯೊಳ್ ಕಿರ್ಚೆೞ್ದೊಡಾ ಕಿರ್ಚನೇ
ತೆಱದಿಂ ಬೇಗಮಡಂಗಿಸಿರ್ಪೊಡದು ತಾಂ ಕೆಯ್ಮಿಕ್ಕೊಡಾ ಗೇಹದಿಂ
ಪೊಱಮಟ್ಟಾಗಳೆ ಪೋಗದಲ್ಲಿ ಬೞಿಯಂ ಮಾಣ್ದಿರ್ಪುದೇ ಜೀವನೇ ೧೪

ವ || ಅಱಿವುಳ್ಳಂ ಕುತ್ತಂ ಕೆಯ್ಮಿಕ್ಕೊಡಾ ಮೆಯ್ಯಂ ತೊಱೆಯದೊಡಂ ಬುದ್ಧಿಯುಳ್ಳಂ ಮನೆಯೊಳ್ ತಗುಳ್ದ ಕಿರ್ಚು ಕೆಯ್ಮಿಕ್ಕೊಡಾ ಮನೆಯಂ ಪೊಱಮಡದೆ ಮಾಣ್ದೊಡ ಮದೆಲ್ಲಿಯಱಿವುಮದಱಿನಱಿವುಮಣ್ಮುಂ ನೆಗೞ್ತೆಯನೇಱಿ ಸುವಂತದೇನಿೞಿದೇ?

ಕಂ || ತಡೆಯದೆ ಜಗತ್ರಯಂಗಳ
ನೊಡಲೊಳ್ ಮೊದಲಱಿದು ವಸ್ತು ನೆಱೆಯದೊಡಾರ್ಪಿಂ
ತೊಡರ್ದತ್ತ ಬಳ್ಳಿ ದಾಂಗುಡಿ
ವಿಡಿವಂತಿರೆ ಮಿಗುವ ಸಕಳಬೋಧಿಯನೊಲ್ಲಾ ೧೫

ವ || ಒಂದು ವರುಷಮುದ್ಯೋಗಂಗೆಯ್ಯೆ ಮಱುವರುಷಕ್ಕೆ ಪಟ್ಟ ಬಂಧಂ ದೊರೆಕೊಳ್ವಡಮೊಂದು ಭವದೊಳ್ ರತ್ನತ್ರಯಂಗಖಂಡಮಾಗೆ ಮಱುಭವಕ್ಕೆ ಕೇವಲಜ್ಞಾನಂ ದೊರೆಕೊಳ್ವಡಂ ಮತ್ತೆ ಕೆಲವು ವರುಷಕ್ಕೆ ಪಟ್ಟಮಿಲ್ಲದುದಕ್ಕಂ ಈತಂಗಾಸನ್ನಭವ್ಯತೆಯಿಲ್ಲದುದಕ್ಕ ಮತ್ತೆ ಕೆಲವು ವರ್ಷದಿಂ ಪಟ್ಟಬಂಧಮಪ್ಪೊಡಂ ಕೆಲವು ಭವದಿಂ ಮೋಕ್ಷಮಪ್ಪೊಡಮೆಂತುಂ ಪೊಲ್ಲದೆ

ಮ || ಅಱಿವಂ ತಾಳ್ದಿ ಪರಿಗ್ರಹದ್ವಿತಯಮಂ ನೀಂ ತೂಳ್ದಿ ಚಾರಿತ್ರದೊಳ್
ನೆಱೆದಂತೀ ತನು ಮುಕ್ತಿಹೇತುಗುಣದಿಂ ಗೆಂಟಾಗಿ ಸಂಸಾರದ
ತ್ತೆಱಗಿರ್ದಂದದು ಬಂಧಹೇತುವದಱಿಂದೀ ಮೆಯ್ಯೊಳೆಂತಾಗಿಯುಂ
ನಿಱಿಸೊಳ್ಪಂ ಕಿಡಿಸುಗ್ರಕರ್ಮ ರಿಪುವಂ ಮಾಣ್ದಿರ್ಪುದೇ ಜೀವನೇ ೧೬

ವ || ಸೆಂಡಾಡುವವರ ಗೆಲ್ಲ ಸೋಲಕ್ಕೆ ತೋರಣಂ ಗುಱಿಯಪ್ಪಂತೆ ಅಱಿವಂ ಕೊಂಡವರ ಗೆಲ್ಲ ಸೋಲಕ್ಕ ಮನುಷ್ಯಭವಂ ಗುಱಿಯಪ್ಪುದದಱಿಂದವರ್ ತೋರಣಮಂ ಪೊರ್ದಿದಾಗಳುೞಿದು ನೇಱುವುದೀ ಮನುಷ್ಯಭವಮಂ ಪೊರ್ದಿದಾಗಳಱಿದು ತೊಱೆದು ನೆಗೞ್ವುದು

ಕಂ || ಮುನ್ನೆಂದುಂ ಭಾವಿಸದುದ
ನಿನ್ನಾಂ ಭಾವಿಸುವೆನೆನ್ನ ಭಾವನೆಯೊಳ್ ತಾಂ
ಮುನ್ನಂ ನಿಂದುದ ಭಾವಿಸೆನೆಂ
ಬುನ್ನತ ಭಾವನೆಯೆ ಮುಕ್ತಿಯಂ ಸಾಧಿಸುಗುಂ ೧೭

ವ || ಸಮ್ಯಗ್ದರ್ಶನ ಜ್ಞಾನ ಚಾರಿತ್ರಂಗಳಂ ಮುನ್ನೆಂದುಂ ಭಾವಿಸದುದಱಿಂ ಸಂಸಾರದೊಳಗಿರ್ಪುದೆ ಪೇೞ್ಗುಮವನಿಂ ಭಾವಿಸು ಮಿಥ್ಯಾತ್ವ ಕಷಾಯಯೋಗಂಗಳಂ ಭಾವಿಸುತಿರ್ಪುದು ನಿನಗೆ ಮೋಕ್ಷಮಾರ್ಗದಿರವೆ ಪೇೞ್ಗುಮವನಿಂ ಭಾವಿಸದಿರು ನಿನಗಂತಪ್ಪ ಸಾಧನೆಯುಳ್ಳೊಡೆ ಮುಕ್ತಿಯಂ ಸಾಧಿಸುವುದರಿದೆ

ಮ || ನೆರಪಲ್ವೇೞ್ಕುಮೆ ತಿಣ್ಣಮರ್ಥಚಯಮಂ ತೀಕ್ಷ್ಣಾಯುಧಂ ಬೇೞ್ಕುಮೇ
ಕರಿಗಳ್ ಬೇೞ್ಕುಮೆ ವಾಜಿ ಬೇೞ್ಕುಮೆ ಪದಾತಿವ್ಯೂಹಮೇಂ ಬೇೞ್ಕುಮೇ
ಮರುಳೇ ಕೆಮ್ಮನಿದೇಕೆ ಬೆರ್ಚಿ ತಡೆವೈ ನಿನ್ನಿಂದಮೇಂ ತೀರದೇ
ಪರಿಣಾಮಂ ಶುಭಮಾದೊಡೊಂದೆ ಮಳಮಂ ಕೇಡೆಯ್ದಿಸಲ್ ಸಾಲದೇ ೧೮

ವ || ಮಹಾರಾಜಪುರುಷಂಗೆ ಚಕ್ರಂ ಪುಟ್ಟಿದೊಡಮಱಿವುಳ್ಳಂಗೆ ಬೋಧಿ ಪುಟ್ಟಿದೊಡಾತಂಗೆ ಪಗೆಯಂ ಗೆಲ್ವುದುಮೀತಂಗೆ ಕರ್ಮಮಂ ಗೆಲ್ವುದುಮರಿದೇ?

ಕಂ || ಎನ್ನೆವರಂ ಬಿಸುಡುವುವೊಳ
ವನ್ನೆವರಂ ಬಿಸುಡದಿರ್ದು ತವೆ ಬಿಸುಟಂದು
ತ್ಪನ್ನ ನಿವೃತ್ತಿಗೆ ನೆಲಸಿದೊ
ಡಿನ್ನವು ತಪಮಾಗೆ ನಿನ್ನ ಬಯಸುವ ಮೋಕ್ಷಂ

ವ || ಮುನ್ನಮಶುಭ ಕರ್ಮಬಂಧಕಾರಣಂಗಳುಮಂ ಬಿಡುತ್ತುಂ ಬಂದು ಬೞಿಯಂ ಶುಭಬಂಧಕಾರಣಂಗಳುಮಂ ಬಿಸುಡುತ್ತುಂ ಬಂದಿನ್ನುಂ ನಿವೃತ್ತಿಯುಮಿಲ್ಲದಂದು ಮೋಕ್ಷಮಿಲ್ಲ ಮತ್ತಮಿನಿಸಾನುಮೇಕಚಿತ್ತದಿಂ ಕೇಳೆಲೆ ಜೀವಾ

ಉ || ಪೊಲ್ಲಮಿದೊಳ್ಳಿತೆಂಬೆರಡಱಿಂ ದುರಿತಂ ಸುಕೃತಂ ತಗುಳ್ಗುಮಂ
ತಲ್ಲಿಯೆ ದುಃಖಮುಂ ಸುಖಮುಮಪ್ಪುದಱಿಂದವು ಮೂಱು ಭಾಗಮುಂ
ತೆಲ್ಲವಱಾಗಿ ನಿಶ್ಚಯಿಸಿದಂತ್ಯದೊಳೞ್ತಿಗನಪ್ಪುದಾಗಿಯುಂ
ಮೆಲ್ಲನೆ ತದ್ವಿಭಾಗಮುಮನೊಪ್ಪಿರೆ ಪಿಂಗಿಸು ಮುಕ್ತಿ ಕೂಡುಗುಂ ೨೦

ವ || ಅಧಿಕಾರಸೂತ್ರದಂತಾಗಿರ್ದೀ ವೃತ್ತದರ್ಥಮಂ ವ್ಯಾಖ್ಯಾನವಿಶೇಷದಿಂದಲ್ಲದಱಿಯಲಾಗದೆಂತೆನೆ ಪೊಲ್ಲವಪ್ಪ ನೆಗೞ್ತೆಯಿಂ ದುಷ್ಕರ್ಮಬಂಧಮಕ್ಕುಮಾ ಕರ್ಮಬಂಧದಿಂ ದುಃಖಮಕ್ಕುವಂತಾ ಮೊದಲಭಾಗಂ ಮೂಱುಂ ತೆಱ ನಿನ್ನೊಳ್ಳಿತಪ್ಪ ನೆಗೞ್ತೆಯಿಂ ಪುಣ್ಯ ಬಂಧಮಕ್ಕುಮಾ ಪುಣ್ಯಬಂಧದಿಂ ಸುಖಮಕ್ಕುಮಂತೆರಡನೆಯ ಭಾಗಮುಂ ಮೂಱುಂ ತೆಱನಾ ಮೊದಲ ಮೂಱು ಭಾಗಮುಮಂ ತನ್ನೊಳಾಗಲೀಯದೆರಡನೆಯ ಮೂಱು ಭಾಗಕ್ಕಿಚ್ಚೈಸಿ ನೆಗೞ್ದು ತುದಿಯೊಳಿರ್ಪಾಗಳ್ ಕಾಲೊಳ್ ಕರ್ಬೊನ್ನ ಸಂಕಲೆಯನಿಕ್ಕಿ ದೊಡಂ ಪೊನ್ನ ಸಂಕಲೆಯನಿಕ್ಕಿದೊಡಂ ಸೆಱೆಯಿರ್ಪುದುಂಟಪ್ಪೊಡೆರಡಱ ತೊಡರ್ಪುಮಂ ಕಳೆವುದದು ಮೋಕ್ಷಂ

ಕಂ || ತನ್ನಂ ತನ್ನಿಂದಘಮಂ
ಭಿನ್ನಂ ಮಾಡುವುದು ನೋೞ್ಪುದಾಪ್ತನ ತೆಱನಂ
ತನ್ನೊಳ್ ಭಾವಿಸಿ ತಿಳಿದುಱೆ
ತನ್ನಂದಮನೆಯ್ದದಲ್ಲಿ ತೊಡರ್ಗುಮೆ ಜೀವಾ ೨೧

ವ || ಅಂತು ಸಕಲ ಕರ್ಮಕ್ಷಯಮಂ ಮಾಡಲುಂ ಮುಕ್ತಿಯೊಳ್ ಕೂಡಲುಂ ನೆರೆದ ಬೋಧಿಯೆಂಬನರ್ಘ್ಯಮಹಾರತ್ನಂ ಸಂಸಾರಿಜೀವಕ್ಕೆ ಕರಂ ದುರ್ಲಭಂ ಸ್ಥಾಣುಸ್ಖಳನ ಅಂಧನಿಧಿಲಾಭ ದೃಷ್ಟಾಂತನ್ಯಾಯದಿಂ ಕರಮರಿದದಱಿಂದಮಲ್ಲದೆ ಪಡೆಯಲಾಗದದೆಂತೆಂದಡೆ

ಉ || ಸ್ಥಾವರದಿಂ ತ್ರಸಪ್ರಕರಮಾ ತ್ರಸದಿಂ ಸಕಳೇಂದ್ರಿಯತ್ವದಿಂ
ಭಾವಿಸಿ ನೋಡೆ ಮತ್ತೆ ಸಕಳೇಂದ್ರಿಯದಿಂ ಬೞಿಸಂಜ್ಞಿ ಸಂಜ್ಞಿಯಿಂ
ದೀ ವರಮಾನುಷತ್ವಮದಱೊಳ್ ಕುಲ ದೇಶ ಸರೂಪ ಸತ್ವ ಸ
ತ್ಸೇವನೆ ಸೇವೆಯಿಂ ವಿಮಳಬೋಧಿಯೆ ದುರ್ಲಭಮಿಂತು ಜೀವನೇ ೨೨

ವ || ಈ ಸಂಸಾರಮೆಂಬ ಮಹಾಸಮುದ್ರದೊಳಗೆ ಕರಮಗಾಧಮಪ್ಪೆಡೆಯೊಳಿರ್ದನಂ ತಾನಂತಪ್ಪ ಸ್ಥಾವರಜಾತಿಯೊಳಗಣಿಂ ಪೊಱಮಟ್ಟು ತ್ರಸಮಾಗಿ ಪುಟ್ಟುವುದು ಕರಮರಿದಾ ತ್ರಸಜಾತಿಯೊಳಗಣಿಂ ಸಮವಾಯದಿಂ ಪೊಱಮಟ್ಟು ಸಕಳೇಂದ್ರಿಯಮಾಗಿ ಪುಟ್ಟುವುದು ಕರಮಾಶ್ವರ್ಯಮಾ ಸಕಳೇಂದ್ರಿಯದೊಳಂ ಸಂಜ್ಞಿಜೀವಿಗಳೊಳಗಣಿಂ ಬಂದು ಮನುಷ್ಯಭವಮಂ ಪಡೆವುದರಿದು ಮನುಷ್ಯಭವಂಬಡೆದುಂ ಧರ್ಮಕ್ಷೇತ್ರಂಬಡೆವೊಡರಿದು ಧರ್ಮಕ್ಷೇತ್ರಂಬಡೆದುಂ ಕುಲಂಬಡೆವುದರಿದು ಕುಲಂಬಡೆದುಂ ರೂಪಂಬಡೆವುದರಿದು ರೂಪಂಬಡೆದುಂ ಸತ್ವಂಬಡೆವುದರಿದು ಸತ್ವಂಬಡೆದುಂ ಕರಂ ಬುಧಸೇವೆವಡೆವುದರಿದು ಬುಧಸೇವೆವಡೆದುಂ ಬೋಧಿಯೆಂಬನರ್ಘ್ಯಮಹಾರತ್ನಮಂ ಪಡೆವುರಿದಿಂತಪ್ಪುದನೆಂತಾನುಂ ಪಡೆದುಂ ಕಿಡಿಸುವರಾರಂ ಪೋಲ್ವರೆಂಬಾ

ಕಂ || ಪಲಕಾಲಮಾಗರಂಗಳೊ
ಳಲಸದೆ ನಮೆದಗುೞ್ದು ಪಡೆದ ಮಾಣಿಕಮೊಂದಂ
ಜಲನಿಧಿಯೊಳಿಕ್ಕಿ ಕಿಡಿಸುವ
ವೊಲಲಘುಗುಣ ಪ್ರಣುತ ಬೋಧಿಯಂ ಕಿಡಿಸುವವರ್ ೨೩

ವ || ಎಂತಾನುಂ ಪಡೆದ ಬೋಧಿರತ್ನಮಂ ಆರಾನುಂ ಕಿಡಿಸಿದರಪ್ಪೊಡೆ ಮಗುೞ್ದು ಪಡೆಯಲಾಗದು ಗಡಿಂ

ಚಂ || ಪಡುವಣ ವಾರ್ಧಿಯಲ್ಲಿ ನೊಗನಂ ಕೞಿಯಂ ಗಡ ಮೂಡಣಬ್ಧಿಯ
ಲ್ಲಿಡಿಕಿದೊಡೊಯ್ಯನಾ ನೊಗದೊಳಾ ಕೞಿ ಮುನ್ನೆ ತಗುಳ್ದು ಛಿದ್ರದೊಂ
ದೆಡೆಯೊಳೆ ಮತ್ತೆ ಬಂದು ಘೞಿಯಿಪ್ಪೊಡೆ ತಾಂ ಘೞಿಯಿಕ್ಕುಮೊರ್ಮೆ ಕೆ
ಟ್ಟೊಡೆ ಬೞಿಕೆಲ್ಲಿಯುಂ ಪಡೆಯಲಾಗದು ನೆಟ್ಟನೆ ಬೋಧಿರತ್ನಮಂ ೨೪

ವ || ಪಿರಿದಪ್ಪಡವಿಯಂ ಕಳೆದುಪೋಗಲ್ ಬಗೆವಾತಂ ಬಲ್ನೆರಂ ದೊರೆಕೊಂಡೆಡೆ ಕೂಡಿಪೋಗದಿರ್ದೊಡಂ ಸಂಸಾರಮಂ ಕಳೆವೆನೆಂಬ ಬಗೆಯುಳ್ಳಾತಂ ಬೋಧಿ ದೊರೆಕೊಂಡೊಡಘಮಂ ಕಿಡೆ ನೆಗೞದಿರ್ದೊಡಮಾತನಾ ಪೇರಡವಿಯುಮನೀತನೀ ಸಂಸಾರಮುಮಂ ಕಳೆಯಲಾಱಂ

ಕಂ || ಅದಱಿಂ ತಪಮಂ ಕೈಕೊಂ
ಡುದಿತ ಮಹಾಬೋಧಿರತ್ನಮಂ ಪಡೆದು ಬೞಿ
ಕ್ಕದು ಮುಕ್ತಿಶ್ರೀವಧುವೊಳ್
ಪುದುವಾೞಲ್ ತಾನೆ ಕೂಡಲಾರ್ಕುಮಮೋಘಂ ೨೫

ವ || ಇಂತಪ್ಪ ಬೋಧಿರತ್ನಮಂ ಪಡೆದು ಬೇಗಂ ತಱಿಸಂದ ಮಹಾಪುರಷರ ಕಥೆಯನಪ್ಪೊಡಂ ಮುಂ ಕೇಳದೊಡಮಿಂ ಕೇಳಿಮದೆಂತೆನೆ

 

ಧನ್ಯಕುಮಾರ ಚರಿತೆ

ಕಂ || ಶ್ರೀನಾರಿಯುತಮಪ್ಪು
ಜ್ಜೈನಿಯೊಳಭಿನೂತ ವೈಶ್ಯಕುಲದೊಳಗೆ ಮಹಾ
ಸ್ಥಾನದಿನಭಿಮಾನದಿನತಿ
ದಾನದಿನೆಸೆದಂ ಪ್ರಸಿದ್ಧಗುಣಿ ಧನಪಾಳಂ ೨೬

ವ || ಆತನ ಸೆಟ್ಟಿತಿ ಪ್ರಭಾವತಿಯೆಂಬೊಳಾಯಿರ್ವರ್ಗಮೆಣ್ಬರ್ ಗಂಡುಗೂಸುಗಳಾದೊಡವರ್ಗುತ್ಸಾಹಕಾರ್ಯಂಗಳ್ಗಂ ದಾನ ಸನ್ಮಾನಾದಿಗಳಿನರ್ಥಂ ತವಿಪ್ಪೊಡಂ ಮನಮಿಕ್ಕದೆ ಮಕ್ಕಳಂ ದಾರಿದ್ಯ್ರಂಗೆಯ್ಸಿ ಬಾೞುತ್ತುಮಿರೆ ಪ್ರಭಾವತಿಯೊಂದು ದೆವಸಂ ಚತುರ್ಥಸ್ನಾನ ಮಾಡಿ ಮಿಂದು ಬಂದು ಧನಪಾಲಸೆಟ್ಟಿಯೊಡನೆ ನಿದ್ರಾವಶಗತೆಯಾಗಿ ಮಲಂಗಿರ್ದು ಶುಭಸ್ವಪ್ನಂಗಳಂ ಕಂಡೊಸೆದಱಿವುಳ್ಳರಂ ಬೆಸಗೊಂಡೊಡೆ ನಿನಗೆ ಸ್ವರ್ಗದಿಂ ಬಂದು ಪುಟ್ಟುವನೊರ್ವಂ ಸುಪುತ್ರನಂ ಪಡೆವೆಯೆಂದೊಡೊಸೆದಿರ್ದು ಕೆಲವು ದೆವಸದಿಂ ಗರ್ಭಮಾಗಿ ನವಮಾಸಂ ನೆಱೆಯೆ ಮಗನಂ ಪೆತ್ತಾಗಳಾ ಕೂಸಿಂಗೆ ಜಾತಕರ್ಮ ನಾಮಕರ್ಮಂಗಳೊಸಗೆಗಳಂ ಮಾಡಿ

ಉ || ಈತನ ಗರ್ಭದಿಂ ಬೞಿಕೆ ಪೆರ್ಚಿ ಧನೋದ್ಭವಮಾಗುತೆ ಬಂದುದೆಂಬತಿ
ಪ್ರೀತಿಯೆ ಧನ್ಯನೆಂಬ ಪೆಸರಾಗೆ ಸುಖಂ ಬಳೆದಕ್ಷರಾದಿ ವಿ
ಖ್ಯಾತಕಳಾಗಮಂಗಳನಚಿಂತಿತ ಸಂಚಿತ ಪುಣ್ಯಕಾಶಿ ಸ
ನ್ನೂತ ನರೇಂದ್ರಪುತ್ರರೊಡನಿರ್ದತಿಗರ್ವಿತನಾದನುನ್ನತಂ ೨೭

ವ || ಅಂತು ಸಕಳ ವಿದ್ಯಾವಿರಾಜಿತನುಂ ರಾಜಪೂಜಿತನುಮಾಗೆ ತಾಯ್ಗೆ ಧನ್ಯಕುಮಾರನ ಮೇಗತಿಸ್ನೇಹಮುಂ ಮೋಹಮುಂ ತಿಣ್ಣಮಾಗೆ ನಿಚ್ಚಮಾತನ ಬೀಯಮಂ ಸಲಿಸಿ ಕೊಂಡಾಡುವುದರ್ಕಣ್ಣಂಗಳೆಮ್ಮುಳ್ಳುದೆಲ್ಲಮಂ ನಿನ್ನ ಕಿಱಿಯಮಗನ ಬೀಯಕ್ಕೆ ಕೊಟ್ಟೆಮ್ಮಂ ಕಿಡಿಸಿದಪ್ಪೆಯೆಂದಬ್ಬೆಯಂ ನಿಚ್ಚಮನಿಷ್ಟಂಗೆಯ್ಯುತ್ತಿರೆ ಧನ್ಯಕುಮಾರನಂ ತಾಯ್ ಕರೆದಿಂತೆಂದಳ್

ಕಂ || ಪರದರ ಮಗನತಿಮದದಿಂ
ಪರದುೞಿದಿರೆ ಧನದ ಬರವುಮೊಲ್ದಿಷ್ಟಮನೋ
ಹರಮುಂ ಸುಖಕರಮುಂ ಕುಲ
ಭರಮುಂ ತಾವಿಂತಿವೆಲ್ಲಮೆಂತುಟು ಬರ್ಕುಂ ೨೮

ವ || ಕೆಮ್ಮಗಿರಲಾಗದು ಪಿಡಿ ಪರದುಗೆಯ್ ಎಂದು ನೂಱು ಗದ್ಯಾಣಮಂ ಕೊಟ್ಟೊಡೆ ಕೊಂಡು ಪರದುಗೆಯ್ವುದೆಂತೆಂದೊಡೆ ಒಂದಂ ಕೊಟ್ಟೊಂದಂ ಕೊಳ್ವುದೆಂದೊಡಂತೆಗೆಯ್ವೆ ನೆಂದಂಗಡಿಯ ಬೀದಿಯತ್ತಲ್ ಬಂದು ಸಮಿಧೆಯ ಭಂಡಿಯಂ ಕೊಂಡಾ ಭಂಡಿಯಂ ಕೊಟ್ಟೊಂದು ತಗರಂ ಕೊಂಡದಂ ಪಿಡಿದಿರ್ಪಿನಮೊರ್ವ ಪೊಲೆಯನೊಂದು ಮಂಚದೆಕ್ಕೆಯಂ ಕೊಂಡು ಬರುತ್ತಿರೆ ಕಂಡಾ ತಗರಂ ಕೊಟ್ಟಾ ಮಂಚದಕ್ಕೆಯಂ ಕೊಂಡು ಪಗಲಾದಾಗಳ್ ಪಸಿದು ಮನೆಗೆವರೆ ಪೊಸತು ಪರದುಗೆಯ್ದು ಮಗಂ ಬಂದನೆಂದವನಬ್ಬೆ

ಕಂ || ರಂಗವಲಿಯಿಕ್ಕಿ ತೋರಣ
ಮುಂಗುಡಿಯುಮನೊಪ್ಪೆ ಕಟ್ಟಿ ಪಸೆವಾಸಿ ಮಹಾ
ಮಂಗಳಕಳಶದಿನಿದಿರ್ಗೊಂ
ಡಂಗಡಿಯಿಂ ಬರ್ಪ ಸುತನನೊಸೆದಭಿನುತನಂ ೨೯

ವ || ಪಸೆಯ ಮೇಲೆ ಕುಳ್ಳಿರಿಸಿ ಪರಸಿ ಸೇಸೆಯನಿಕ್ಕಿ ಮನ್ನಿಸಿಸುವುದಂ ಕಂಡಣ್ಣಂಗಳೆಣ್ಬರಾವು ಮೊಂದಕ್ಕೆ ನೂಱಂ ಪಡೆದೊಡಂ ಬಗೆವಳಲ್ಲೀತಂ ನೂಱು ಗದ್ಯಾಣಮಂ ಕೊಟ್ಟೊಂದು ಕೋಳದ ಮಂಚದೆಕ್ಕೆಯಂ ಕೊಂಡು ಬಂದೊಡಿನಿತೊಸಗೆಯಂ ಮಾಡಿದಳ್ ತಾಯ್ ಕೂರ್ತೊಡೇಗೆಯ್ಯಳೆಂದು ತಮ್ಮೊಳನಿಬರುಂ ನುಡಿಯುತ್ತಿರೆ ತಾಯಾತನ ತಂದ ಮಂಚದೆಕ್ಕೆಯಂ ಮಣ್ ಪತ್ತಿತ್ತೆಂದದನೊರಸಿ ಕರ್ಚಿದೊಡೆ ಬಂಧಮಳಿದಲ್ಲಿಯ ಕೀಲ್ ಸಡಿಲ್ದುರ್ಚಿ ಕಳಲ್ದಾಗಳ್

ಮ || ಬೆಲೆಯಿಲ್ಲೆಂಬನಿತಗ್ಗಳಿಕ್ಕೆಯ ಮಹಾರತ್ನಂಗಳಾಗಳ್ ತೆಱಂ
ಬೊಳೆದುಂ ತೊಟ್ಟನೆ ಕೂಚಿಪತ್ರಸಹಿತಂ ಬಂದೊಕ್ಕುವಂ ಕಂಡು ನಿ
ರ್ಮಲಚಿತ್ತಂಗ ಮಗಂಗೆ ತೋಱಿದೊಡವಂ ಕಂಡೆಂಗುಮೇಂ ಬುದ್ಧಿಯೋ
ಬಲವೋ ಕ್ಲೇಶಮನೂನಪುಣ್ಯಮೆ ಗಡೀ ದ್ರವ್ಯಂಗಳಂ ಮಾಡುಗುಂ ೩೦

ವ || ಎಂದು ಮತ್ತಮಿಂತೆಂದಂ

ಕಂ || ಆನೆತ್ತಲ್ ಮಾಱೆತ್ತೆನ
ಗೀ ನುತ ಸದ್ವಸ್ತುವೆಂತು ಸಮನಿಸಿದುವು ಮ
ತ್ತೇನೋ ಪೆಱನಾವಂ ತಾಂ
ಮಾನಿತ ಪುಣ್ಯೋದಯಂ ಪ್ರಧಾನಂ ನಿಯತಂ ೩೧

ವ || ಎಂದಾ ಕೂಚಿಪತ್ರಮಂ ಬಾಜಿಸಿದೊಡಿಂತಪ್ಪ ಮನೆಯಾತನಿಂತಪ್ಪ ಕುಲದಾತನಿಂತಪ್ಪ ಪೆಸರಾತನಿನಿತು ರತ್ನಂಗಳಿವು ಮನೆಯೊಳಿಂತಪ್ಪ ವಸ್ತುಗಳಿರ್ದುವೆಂದು ಬರೆದಿರ್ದುದಱಿಂದದೆಂತಪ್ಪೊಡಾ ಮನೆಯೊಳೆಲ್ಲಂ ಮಾರಿ ಪೊಕ್ಕು ಸತ್ತರೀ ಮಂಚದೊಳಾತನ ಪೆಣನೊಯ್ದು ದಹಿಸುವಲ್ಲಿ ಬಿಸುಟುದಂ ಪೊಲೆಯರದಂ ಪರ್ಚಿಕೊಂಡೊಲ್ಲಿಯವಂಗಿದು ಬಂದುದಂತು ನಮಗೆ ಸಮನಿಸಿದ ಪುಣ್ಯಮೆಂದೊಸೆದಿರ್ದಂ ನಾಮಂತಪ್ಪೊಡಾ ಮನೆಯರಸರ ದೆಸೆಯಿಂ ಮಾಱಗೊಳ್ವಮೆಂದು ಕೆಲವಾನುಂ ದೆವಸದಿನರಮನೆಗೆ ಪೋಗಿಯರಸಂಗೆ ಬಿನ್ನಪಂಗಬೆಯ್ದಾ ಮನೆಯಂ ಬೇಡಿದೊಡೆ ಮಾರಿ ಪೊಕ್ಕು ಸಾಯೆ ಪಾಱಾದ ಮನೆ ಬೇಡ ಪೆಱತಂ ಬೇಡಿಕೊಳ್ಳಿಮೆಂದೊಡಾ ಧನ್ಯಕುಮಾರನಿಂತೆಂದು ಪೇೞ್ಗುಂ

ಕಂ || ಮಾರಿ ಪೆಱದಲ್ತು ಮೃತ್ಯುವೆ
ಬಾರಿಪರಾರ್ ಮೃತ್ಯುವಡಸುವಂದೇತಱೊಳಂ
ಮಾರಿಗಮಿದಿರ್ಚಿ ನಿಂದು
ಗ್ರಾರಿಗಮೇಕಂಜುವರ್ ನರರ್ ಧರಣಿಪತೀ ೩೨

ವ || ಎನೆ ಮಹಾಪುರುಷನೀತನೆಂದರಸಂ ಮೆಚ್ಚಿಯಾ ಮನೆಯಂ ಕೊಟ್ಟೊಡೆ ಮನೆಯಂ ಪಡೆದು ಶುಭದಿನದೊಳಾ ಮನೆಯಂ ಪೊಕ್ಕು ಧನ್ಯಕುಮಾರಂ ಧನಕನಕಸಮೃದ್ಧನಾಗಿ ಪೊೞಲ್ಗಮರಮನೆಗಂ ಪ್ರಭುವಾಗಿರ್ದಂ

ಉ || ಆ ಪೊೞಲೊಳ್ ವಣಿಗ್ಜನ ಮಹಾಪ್ರಭುವೊರ್ವನುದಾತ್ತಚಿತ್ತಕಂ
ಶ್ರೀಪದನಾಗಿ ಮಿಕ್ಕ ಜನಮಾನ್ಯದ ಧನ್ಯನ ಪುಣ್ಯದೊಳ್ಪುಮಂ
ರೂಪಿನ ಚೆಲ್ವುಮಂ ಮನದ ಪೆಂಪುಮನೊಳ್ಳಿತು ಮಚ್ಚಿನೋಡಿ ವಿ
ಖ್ಯಾಪಿತೆಯಪ್ಪ ತನ್ನ ಸುತೆಯಂ ನುತೆಯಂ ಕುಡುವೊಂದು ಬುದ್ಧಿಯಂ ೩೩

ವ || ಬಗೆದು ಧನ್ಯಕುಮಾರನ ತಂದೆಯಲ್ಲಿ ಗಟ್ಟಿದೊಡೊಡಗೊಂಡುಯ್ದು ತನ್ನಂ ಪಿರಿಯರಿರ್ದಂತೆ ಕಿಱಿಯರ್ಗೆ ಮುನ್ನೆ ಮದುವೆಯಂ ಮಾಡಲಾಗದು ಪಿರಿಯಂಗೀವುದೆಂದಟ್ಟಿದೊಡಂದಿ ರ್ದೊಡಮಾತಂಗಲ್ಲದೆ ಕುಡೆನೆಂದಿರ್ದೊಡದಕ್ಕಂ ಪ್ರಭುಗಳುಮರಸರುಂ ಮನದೆ ಕೊಂಡಾಡುವುದುಮಂ ಕಂಡಣ್ಣಂಗಳೆಲ್ಲಂ ಮುಳಿದು ಕೊಲಲ್ ಬಗೆದು ಪುಸಿಗೂರ್ಮೆಯೊಳಿರ್ದೊಂದು ದೆವಸಮೆಂದರ್ ಬಾ ನಾಮೀ ಬಾವಿಯೊಳ್ ಜಲಕ್ರೀಡೆ ಯಾಡುವಮೆಂದೊಡ ಗೊಂಡೊಯ್ದಾತನಂ ಬೊಡ್ಡಣದ ಬಾವಿಯೊಳಗೆ ಪುಗುವಂತೆಗೆಯ್ದು ದರಿಯಂ ಮೆಟ್ಟಿರ್ದಾತನಂ ಪೆಱಗಣಿಂ ಬಂದು ತೊಟ್ಟನೆ ನೂಂಕಿ ಕಲ್ಲೊಳಂ ಮರದೊಳಂ ಪೂೞಲ್ ಬಗೆವನ್ನೆಗಂ

ಕಂ || ತುಂಬಿದ ಬೊಡ್ಡಣವಾವಿಯ
ತೂಂಬಂ ತಡವರಿಸಿ ಕಂಡದಂ ಕಳೆದಲ್ಲಿಂ
ದಂ ಬೇಗಂ ಪೊಱಮಡೆ ಕಂ
ಡೇಂ ಬಲ್ಲಿತ್ತೊ ಪುಣ್ಯಮೆಂದು ವನದೇವತೆಗಳ್ ೩೪

ವ || ಅಂತು ಪೊಗೞೆ ತಮ್ಮಣ್ಣಂಗಳಿಂತು ನೆಗೞೆ ತನ್ನೊಳೆ ಬಗೆದು ನೋಡುತ್ತಿರ್ದು ಮೆೞ್ಪ ಟ್ಟಾನಿಲ್ಲಿರ್ದೊಡಿವರೆನ್ನನೆಂತುಂ ಕೊಲ್ವುದುಮಾಂ ದುರ್ಗತಿಗೆ ಸಲ್ವುದುಮಮೋಘಮಕ್ಕು ಮಿನಿತಂ ಮಾಡೆನೆಂದಾಗಳೆ ಕಪ್ಪಡಮಂ ಸೀೞ್ದುಟ್ಟು ಪೊೞಲನಂದಗಲ್ದೊರ್ವನೆ ಪಯಣಂಬೋಗುತ್ತುಂ ಪಸಿದು ಬೞಲ್ದು ನಿಂದು ಬಟ್ಟೆಯ ಕೆಲದೊಳುೞುತ್ತಿರ್ದೊಕ್ಕ ಲಿಗನಂ ಕಂಡೆಲ್ಲಮಂ ಬಲ್ಲೆನೀ ವಿದ್ಯೆಯನಱಿಯೆನೆಂದು ನಿಂದು ನೋಡುತ್ತಿರೆ ಕುಮಾರನ ನೊಕ್ಕಲಿಗಂ ಕಂಡಿಂತಪ್ಪ ತೇಜಮಾರ್ಗಮಿಲ್ಲೀತಂ ಪ್ರಭುವಿನ ಮಗನಾಗಲೆವೇೞ್ಕುಂ ಪಸಿದು ಬೞಲ್ದು ಪೋದಪ್ಪನೆಂದು ನೇಗಿಲಂ ನಿಲಿಸಿ ಬಂದು ನೀಮಿಂದೆನಗೆ ಬಿರ್ದಿನರಾಗಿಮೆಂದು ಭರಂಗೆಯ್ದೊಡಗೊಂಡೊಯ್ದು ನೇಗಿಲ ಸಾರೆಯಿರ್ಪುದುಂ ಪಾಸಿಯುಣಲೆಲೆಯಂ ತಂದಪ್ಪೆನೆಂದಲ್ಲಿರಿಸಿ ಪೋದನ್ನೆಗಂ ಧನ್ಯಕುಮಾರಂ ಉೞ್ತು ನೋೞ್ಪೆನೆಂದು ಮೇೞಿಯಂ

ಕಂ || ಪಿಡಿದೊತ್ತಿ ಪೊಡೆಯೆ ನೇಗಿಲ್
ನಡೆ ಮೊನೆಯೊಳ್ ನೆಗೆದ ಕಳಶಮಂ ಕಂಡಿಂತ
ಪ್ಪೊಡಮೆಯುಮನೊಲ್ಲದಾಂ ಬಿಸು
ಟಡವಿಗೆ ಬರೆ ಬರ್ಕುಮೆನ್ನ ಬೞಿಯನೆ ಮತ್ತಂ ೩೫

ವ || ಇದು ಪುಣ್ಯದೇವತೆಯ ಗೊಡ್ಡಮಕ್ಕುಮಾದೊಡೇನಿದನೀಯೊಕ್ಕಲಿಗಂಗೆ ಮಾಡುವೆನಾಂ ಕಂಡು ಕೊಟ್ಟೊಡೆ ಶಂಕಿಸುಗುಮೆಂದದನಱಿಯದಂತುೞುತ್ತಿರೆ ಬನ್ನಿಮೆಲೆಯಂ ತಂದೆನೆಂದು ಕರೆಯುತ್ತಿರೆ ಬಂದು ಕುಳ್ಳಿರೆ ಪೂೞ್ದ ಕರಗದ ನೀರಂ ತಂದು ಕಾಲ್ಗಂ ಕೆಯ್ಗಮೆಱೆದೆಲೆಯಂ ಪಾಸಿ ಕಲಸುಗೂೞಂ ಬಡಿಸಿದೊಡುಂಡು ರಾಜಗೃಹದ ಬಟ್ಟೆಯಂ ಬೆಸಗೊಂಡಾ ಧನ್ಯಕುಮಾರಂ ಪೋಪಾಗಳೊಕ್ಕಲಿಗಂ ಮಿಕ್ಕಿರ್ದುದಂ ತಾನುಂಡು ಮತ್ತಮುೞುತ್ತಿರ್ದಾಗಳಾ ಕಲಶಮಂ ಕಂಡು ಬೆಕ್ಕಸಂಬಟ್ಟೀ ಕಳಶಮಪ್ಪೊಡಾತನುೞ್ತ ಸಾಲೊಳ್ ತೋಱಿದುದಾತನ ಪುಣ್ಯದಿಂದಾದುದಾತಂಗಪ್ಪುದೆಂದೆೞ್ತಂ ನಿಲಿಸಿ ಬೇಗಮಾತನ ಪಿಂದನೆ ಪರಿದೆಯ್ದಿ ನಿಲಿಸಿ ಮತ್ತಮಿಂತೆಂದಂ

ಕಂ || ನಿನ್ನುೞ್ತ ಸಾಲೊಳೊಗೆದುದು
ಪೊನ್ನೊಳ್ ತೀವಿರ್ದ ಕಳಶಮದನಾಂ ಕೊಂಡಂ
ದೆನ್ನೊಳ್ಪು ಕಿಡುಗುಮೊಲ್ಲೆಂ
ನಿನ್ನೊಡಮೆಯನೇಕೆ ಕೊಂಡು ಪೋಗದೆ ಪೋಪೈ ೩೬

ವ || ಎಂಬುದುಂ ಧನ್ಯಕುಮಾರಂ ಕೇಳ್ದಿದೇಂ ಚೋದ್ಯಮೋ ಪೇೞಿಮೆಂದು ತಲೆಯಂ ತೂಗುತ್ತುಂ ತಕ್ಕನುಮಿಂತೊಳ್ಪಿನೊಳ್ ಮಿಕ್ಕನುಮಾವನುಮಿಲ್ಲೆಂದಿಂತೆಂದಂ