ಉ || ನಿನ್ನದು ನೇಗಿಲೆೞ್ತುಗಳುಮಪ್ಪೊಡೆ ನಿನ್ನವು ನಿನ್ನ ಕೆಯ್ ಬೆಸಂ
ನಿನ್ನದು ಬಟ್ಟೆವೋಪೆನಗೆ ಬರ್ಕುಮೊ ಮಾಱಿನೊಳಾದುದಲ್ತು ಮ
ತ್ತೆನ್ನ ಕುಲಕ್ರಮಾಗತಮುಮಲ್ತು ನರೇಶ್ವರನಿತ್ತುದಲ್ತು ಪೇ
ೞಿನ್ನಿದನೆಂತುಕೊಳ್ವರಭಿಮಾನ ಮಹೋನ್ನತ ಚಿತ್ತವೃತ್ತಿಯೊಳ್ ೩೭

ವ || ಎಂದೊಡೊಕ್ಕಲಿಗಂ ಮಹಾಪುರುಷನ ವಚನಮಿಂತಾಗಲೆವೇೞ್ಕುಮೆಂದು ಮನದೊಳ್ ಬಗೆದು ಮತ್ತಮಿಂತೆಂದಂ

ಕಂ || ಎಲ್ಲಾ ಕಾಲಮುಮೆಮ್ಮವ
ರೆಲ್ಲರುಮೀ ಕೆಯ್ಯನಾಳ್ವರಾನೆಂದುಂ ಮ
ತ್ತಿಲ್ಲಿಯೆ ಬೆಸಕೆಯ್ವೆಂ ಸೈ
ಪಿಲ್ಲದುದಱಿನೆಮಗೆ ತೋಱದಿನಿತುಂ ಕಾಲಂ ೩೮

ವ || ನೀಂ ಮಹಾಪುರುಷನಯ್ ನೀಂ ಬಂದು ನೇಗಿಲಂ ಪಿಡಿದಾಗಳೆ ಪೊನ್ನಕಲಶಂ ತೋಱಿದುದು ನಿನ್ನ ಸೈಪಿನೊಳ್ ಕಂಡುದಿಂತು ನಿನ್ನೊಡಮೆಯೆನೆ ಧನ್ಯಕುಮಾರನೊಕ್ಕಲಿಗನ ಮನದ ಪೆಂಪಂ ಮೆಚ್ಚಿ ತಾನದನೆಂತುಮಾತಂಗೆ ಮಾಡುವ ಬಗೆಯೊಳಿಂತೆಂದಂ

ಚಂ || ಎನಗೊದವಿರ್ದ ಪುಣ್ಯದ ಮಹಾತ್ಮ್ಯದಿನೆಲ್ಲಿಗೆ ಪೋದೆನಪ್ಪೊಡಂ
ಧನಮದು ತಾನೆ ಬರ್ಕುಮದಱಿಂದರಿದಿಲ್ಲೆನಗೊಲ್ಲೆನೆನ್ನ ಕಂ
ಡನಿತಱಿನೆನ್ನದೆಂಬ ಬಗೆಯಿಂ ನುಡಿದಪ್ಪೆಯದೆನ್ನದಾದೊಡಂ
ನಿನಗಿದನಿತ್ತೆ ನೀಂ ನುಡಿಯದಿರ್ ಪೆಱದಂ ಸುಖದಿಂದಮಾಳದಂ ೩೯

ವ || ಎಂದಿತ್ತೆನೆಂದು ನುಡಿದುದಱಿನಿಂತಾದೊಡಕ್ಕುಮೆನ್ನಂ ಬೆಸಕೆಯ್ಸಿಕೊಳ್ವುದಂ ಮಱೆಯದಿರಿಮೆಂದೊಕ್ಕಲಿಗಂ ಮಗುೞ್ದು ಬಂದಾ ಕಲಶಮಂ ಕೊಂಡು ಮನೆಗೆ ಪೋದನಿತ್ತಲ್ ಧನ್ಯಕುಮಾರನುಮಂತೆ ಬರುತ್ತುಮೊಂದೆಡೆಯೊಳ್ ದಿವ್ಯಜ್ಞಾನಿಗಳಪ್ಪ ಮಹರ್ಷಿಯರಂ ಕಂಡು ಪೊಡೆವಟ್ಟು ಮುಂದೆ ಕುಳ್ಳಿರ್ದು ಭಟಾರಾ ಬೆಸಸಿಮೆನಗೆಮ್ಮಣ್ಣಗಳೇಕೆ ಮುಳಿದು ಕೊಲ್ವನಿತಂ ಬಗೆದರೆನೆ ಭಟಾರರೆಂದರ್ ಮುನ್ನಂ ಪೋದ ಭವಾಂತರದ ಮುಳಿಸೆಂದೊಡದೆಂತಾಯ್ತೆನೆ ಪೇೞ್ದರ್ ಭೋಗವತಿಯೆಂಬೂರೊಳ್ ಕಾಮದೃಷ್ಟಿಯೆಂಬ ಗಾವುಂಡಂಗಂ ಇಷ್ಟದಾನಿಯೆಂಬ ಗಾವುಂಡಿಗಂ ಅಕೃತಪುಣ್ಯನೆಂಬ ಮಗಂ ಪುಟ್ಟಲೊಡಂ

ಕಂ || ತಂದೆ ಮೊದಲಾದ ಪಲಬರು
ಮೊಂದಿದ ನಂಟರ್ಕಳೞಿಯೆ ಸೈಪೞಿದರ್ಥಂ
ನಿಂದು ಕುಡುವನಿತುಮಿಲ್ಲೆಂ
ಬೊಂದೆಡಱಡಸಿದೊಡೆ ಮಗನುಮಬ್ಬೆಯುಮುೞಿದರ್ ೪೦

ವ || ಅಂತವರಿರ್ವರುಮುೞಿಯೆ ತಮ್ಮವರೆಲ್ಲರುಂ ಕೞಿದಲ್ಲಿಯೆ ಸೈಪೞಿಯಲುಮಾದ ದುಃಖಮಂ ತಿಣ್ಣಮಾದ ಬಡತನಮುಮೊಂದೊಂದಂ ಕೆಯ್ಮಿಕ್ಕಡಸೆ ಮಗನಂ ಕೆಲಸಂಗೆಯ್ಸಿ ಬಸಿಱಂ ಪೊರೆದು ಬಾೞುತ್ತಿರ್ದೊಂದು ದೆವಸಂ ಮಗಂ ತಡೆದನೆಂದು ತಾಯೞುತ್ತಿರೆ ಮಗಂ ಬಂದೇಕೞ್ತಪಿರೆನೆ ನಿನ್ನ ಕಾಣದೞ್ತಪೆನೇಕೆ ತಡೆದೆಯೆನೆ ಅಕೃತಪುಣ್ಯಂ ಬನದೊಳ್ ಬೆಸಕೆಯ್ಯುತ್ತಿರ್ದು ತಡೆದೆನೆಂದೊಡೆ ಅಬ್ಬೆಯೆಂದಳೆಮ್ಮ ಭಂಟಂಗೆ ನಾಮೆಬೆಸಕೆಯ್ವನಿತಾಯ್ತಿನ್ನಿಲ್ಲಿರ್ಪುದು ಪರಿಭವಮೆಂದು ಮಗನನೊಡಗೊಂಡು ಪೋಗಿ ಸೀಸಪಾಕಮೆಂಬೂರೊಳ್ ಬಲಭದ್ರನೆಂಬ ಗಾವುಂಡನ ಕೀೞಿಲೊಳ್ ಸಾರ್ದೊಡವರ್ ಕರುಣದಿನೊಂದು ಗುಡಿಸಿಲನೆಡೆಗೊಟ್ಟೊಡಲ್ಲಿರ್ದು ತಾಯುಮಾ ಗಾವುಂಡನ ಮನೆಯೊಳ್ ಬೆಸಕೆಯ್ದುಣ್ಗುಂ ಮಗಂ ಕಱುವಂ ಕಾಯ್ದುಣುತ್ತುಮಿರ್ದೊಂದು ದೆವಸಂ ಮಗಂ ತಾಯ್ಗಿಂತೆಂದಂ

ಶಾ || ನಾಮುಂ ಮಾನಸರೆಂ ದಲೀ ಮನೆಯವರ್ ನಮ್ಮಂತೆ ದಲ್ ಮಾನಸರ್
ನಿಮಿಂತೇಕಿವರ್ಗೞ್ಕಿ ಬೞ್ಕಿ ಬೆಸಗೆಯ್ದಿಂತೇಕೆ ಕಣ್ಬಟ್ಟಪಂ
ನೀಮಿಂ ಪೇೞಿಮಮೋಘಮೆಂದೊಡವರ್ಗಳ್ ಸೈಪುಳ್ಳರೀ ಕಾಲದೊಳ್
ನಾಮುಂ ಮುನ್ನಿವರಿಂದಮಗ್ಗಳಿಕೆಯೊಳ್ ಮಿಕ್ಕಿರ್ದೆವಾ ಕಾಲದೊಳ್ ೪೧

ವ || ಮತ್ತಂ

ಕಂ || ಕಡುವಿಸಿಲಾದೊಡೆ ಮಂಜಿನ
ಪಡೆಯುಂ ಕಿಡುವಂತೆ ಬಱಿದೆ ನೀಂ ಪುಟ್ಟಲೊಡಂ
ತಡೆಯದೆ ಕೆಟ್ಟುದು ಸೈಪೊಂ
ದೆಡಱಡಸಿಂತಾಯ್ತು ನಮಗಮೀಗಳ್ ಮಗನೇ ೪೨

ವ || ಎಂದು ತಮ್ಮ ಮುನ್ನಿನ ಸಂಪತ್ತು ಮನೀಗಳಿನಾಪತ್ತುಮುಮಂ ನೆನೆದುಬ್ಬೆಗದೊಳ್ ಕೆಲಕಾಲಂ ಪೋಗೆ ಮತ್ತ ಮತ್ತಮವಱ ಮೇಗೆ ಗಾವುಂಡನೆಣ್ಬರ್ ಮಗಂದಿರುಂ ತನ್ನನಲೆದು ಬೆಸಕೆಯ್ಯೆ ಕಱುಕುಚಿಗನವರ್ಗೆ ಪಲ್ಮೊಱೆದು ಕನಲ್ದೊನಲ್ದು ಬಡವಾಗಿರ್ದಾ ಮನೆಯವರುಣ್ಬುದಂ ಕಂಡು ಕಣ್ಬಾತುದಂ ತಾಯ್ ಕಂಡಱಿದೞುತ್ತಿರೆ ಗಾವುಂಡಂ ಕಂಡೇತರ್ಕೞ್ತಪೆಯೆಂದು ಕೀಱಿ ಬೆಸಗೊಳೆ ಕಿಱಿಯಾತಂ ತುಯ್ಯಲಂ ಬಯಸಿ ಕಣ್ಬಾತುದದು ಕೂಡದುದಱಿನೞ್ತಪೆನೆಂದೊಡಾಗಳ್ ಕರುಣಿಸಿ ಪಾಲನಕ್ಕಿಯುಮಂ ಕುಡವೇೞೆ ತಂದು ತುಯ್ಯಲನಟ್ಟು ಮಗನಂ ಕಾದಿರಿಸಿ ತಾಯ್ ನೀರ್ಗೆ ಪೋದಳನ್ನೆಗಮಿತ್ತಲ್

ಕಂ || ಪರಮ ತಪೋಧನರೊರ್ವರ್
ಚರಿಗೆಗೆವರೆ ಕಂಡು ನೆಟ್ಟನೆನ್ನಿಂದೀತಂ
ಕರಮೆ ಬಡವಂ ದಲೆಂದಾ
ದರದಿಂ ಕಱುಕುಚಿಗನವರ ಕೆಯ್ಯಂ ಪಿಡಿದಂ ೪೩

ವ || ಪಿಡಿದು ನೀಂ ಬನ್ನಿಂ ನಿಮಗುಣಲಿಕ್ಕಿದಪ್ಪೆನೆಂದಾ ತುಯ್ಯಲಂ ತಂದಿರಿಸಿದನೆನ್ನಗಂ ಅವನಬ್ಬೆ ಬಂದು ಕೊಡನನಿೞಿಪಿ ಪೊಡೆವಟ್ಟು ಭಟಾರಾ ನಿಲ್ಲಿಮೆಂದು ನಿಲಿಸೆ ಕರಮೊಳ್ಳಿಕೆಯ್ದೆಯೆಂದು ಮಗನಂ ಪೊಗೞ್ದು ಮನೆಯೊಳುಚಿತಮಪ್ಪೆಡೆಯೊಳ್ ಕುಳ್ಳಿರಿಸಿ ಕಾಲಂ ಕರ್ಚಿ ಶ್ರದ್ಧಾಶಕ್ತಿ ಭಕ್ತಿರ್ವಿಜ್ಞಾನಮಲುಬ್ಧತಾ ಕ್ಷಮಾಶೌಚಮೆಂಬೇೞುಂ ತೆಱದ ಗುಣಂಗಳೊಳ್ ಕೂಡಿ ತುಯ್ಯಲಂ ಬಡಿಸಿದೊಡುಂಡು ಅಕ್ಷಯದಾನಮಕ್ಕೆಂದು ಪರಸಿ ಭಟಾರರ್ ಪೋದಿಂಬೞಿಯಂ ತುಯ್ಯಲಂ ಮಗನುಂ ತಾನುಮುಂಡೊಡಂ ತವೆಯದಾಯ್ತು ಭಟಾರ ರಾಹಾರಾಕ್ಷಿಣರ್ಧಿಸಾಮರ್ಥ್ಯದಿನಂತಾ ಕೇರಿಯೆಲ್ಲಕ್ಕಂ ನೇಸಱ್ ಪಡುವಿನೆಗಂ ಬಡ್ಡಿಸುತ್ತಿರೆಯುಂ ಮತ್ತಮುಂಟಾಗಿರ್ದತ್ತು ಮಱುದೆವಸಮಾ ಕಱುಕುಚಿಗಂ ಕಱುವಂ ಕಾಯಲ್ ಪೋಗಿ ಕಱುವಂ ಕಿಡಿಸಿ ಮನೆಗೆ ಬರಲಮ್ಮದಿರೆ ಗಾವುಂಡನೆೞ್ದು ಕಱುಗಳ್ ಬಂದುವುಕಿಱಿಯವನೇಕೆ ಬಾರನೊಯೆಂದಾತನಱಸಿಪೋಗಿ ಕಂಡು ಜಡಿದು ಬಗ್ಗಿಸಿದೊಡೆ ಯಂಜಿಯೋಡಿ ಪೞುವಮಂ ಪೊಕ್ಕು ಬೆಟ್ಟದ ಗುಹೆಯಂ ಸಾರ್ದಾಗಳಾ ಗುಹೆಯೊಳಿರ್ದ ಮಹರ್ಷಿಯರಂ ಸಾರ್ದು

ಉ || ಕೊಲ್ಲದ ಕಳ್ಳದಿರ್ಪ ಪುಸಿವೇೞದಣುವ್ರತದಿಂದಮಿಂತು ತ
ಳ್ವಿಲ್ಲದಿವಂ ಮನೋಮುದದೆ ತಾಳ್ದಿದರ್ಗಿಂತು ಫಳಂಗಳಾದುವೆಂ
ದೆಲ್ಲಮನಂದು ಪೇೞುತಿರೆ ಕೇಳ್ದಭಿಲಾಷದೆ ವತ್ಸಪಾಲಕಂ
ಮೆಲ್ಲನೆ ಸಾರ್ದು ಕೆಮ್ಮುಗಿದು ರಾಗದೆ ಕೊಂಡನಣುವ್ರತಂಗಳಂ ೪೪

ವ || ಅಂತಣುವ್ರತಮಂ ಕೊಂಡು ಗುಹೆಯ ಬಾಗಿಲ ಪೊಱಗಿರ್ದವನಂ ಪುಲಿಪಾಯೆ ಸತ್ತಾ ವ್ರತದ ಫಲದಿಂ ಸ್ವರ್ಗದೊಳ್ ಪುಟ್ಟಿದನಿತ್ತಲ್ ಮಗಂ ಬಾರದುದರ್ಕೆ ತಾಯ್ ಮಱುಗಿ ಪೋದ ದೆಸೆಯನಱಸಿ ಪೋಗಿ ಮಹಾರಣ್ಯಮಂ ಪೊಕ್ಕು ಗುಹೆಯ ಪೆಱಗಿರ್ದನಂ ಪುಲಿಪಾಯ್ದರೆದಿಂದ ಪೆಣನಂ ಕಂಡು ಪುಲಿ ಕೊಂಡುದೆಂದಱಿದು ಮಹಾಶೋಕದಿಂ ಪಳಯಿಸುತ್ತಿರ್ಪನ್ನೆಗಮಾ ಕಱುಕುಚಿಗಂ ಸ್ವರ್ಗದೊಳ್ ಪುಟ್ಟಿರ್ಧವಧಿಜ್ಞಾನದಿಂ ತನ್ನ ಭವದಂದಮುಮನಱಿದು ತಾಯ ದುಃಖಮನಾಱಿಸುವೆನೆಂದು ಮುನ್ನಿನ ರೂಪುಗೊಂಡು ಬಂದೊಡೆ ತಾಯ್ ಕಂಡೆೞ್ದಪ್ಪಿಕೊಳಲ್ ಬಗೆದೊಡೆ ದಿವ್ಯ ಶರೀರಮಂ ಮಾನಸರ್ ಮುಟ್ಟಲಾಗದ ಕಾರಣದಿಂದಾಕಾಶಕ್ಕೆ ನೆಗೆದು ದೇವನಪ್ಪ ರೂಪಂ ತೋಱಿ ಸಂಸಾರಸ್ಥಿತಿಯಿಂತುಟು ನೀಮುಬ್ಬೆಗಬಡದಿರಿಯಾ ವ್ರತದ ಫಲದಿಂದಾನಿಂತಾದೆಂ ನೀಮುಂ ವ್ರತಮಂ ಕೆಯ್ಕೊಳ್ವದೆಂದು ತಿಳಿಯೆ ಪೇೞ್ದೂ ದೇವಂ ದೇವಲೋಕಕ್ಕೆ ಪೋಗಿ ಪಲವುಕಾಲಂ ದಿವ್ಯಸುಖಮನನುಭವಿಸಿ ಬಂದು

ಕಂ || ಧನಪಾಳಂಗಾ ದೇವಂ
ತನಯಂ ನೀನಾದೆಯಿಂತು ಮತ್ತಾ ಗಾವುಂ
ಡನ ಸುತರೆಣ್ಬರುಮಂದಿನ
ಮುನಿಸಿಂದಣ್ಣಂಗಳಾಗಿಯುಂ ನಿನಗಿನ್ನುಂ ೪೫

ವ || ಮುನಿಯುತ್ತಿರ್ಪರೆಂದಿಂತು ತನ್ನ ಮುನ್ನಿನ ಭವಾಂತರಮಂ ತಿಳಿಯಪೇೞೆ ಕೇಳ್ದಾ ಭಟಾರರಂ ಬಂದಿಸಿ ಮತ್ತಮಂತೆ ಪಯಣಂಬೋಗಿ ರಾಜಗೃಹಪುರಮನೆಯ್ದೆವಂದು ಪೊಱಗಣುದ್ಯಾನದೊಳ್ ವಿಶ್ರಮಿಸಿರ್ದನನ್ನೆಗಮಲ್ಲಿಯ ಮಹತ್ತರನಪ್ಪ ಮಾಲೆಗಾಱಂ ಬಂದು ನೋೞ್ಪೂಗಳ್

ತರಳ || ದಿವಸಮಲ್ಲದೆಯುಂ ಕೊನರ್ತು ತಳಿರ್ತು ಪೂತು ಫಲಂಗಳಾ
ದುವು ತರುಪ್ರಕರಂಗಳಿಂಚರಮೀಯೆ ಕೋಗಿಲೆ ತೆಂಕಣಿಂ
ಪವನನೊಯ್ಯನೆ ಕಂಪನೀೞ್ಕುಳಿಗೊಂಡು ಬಂದಪುದೇಕೆಯೋ
ಪ್ರವರ ಪುಣ್ಯಸಮೇತನತ್ಯಭಿನೂತನಿಲ್ಲಿಗೆ ಬಂದನೋ ೪೬

ವ || ತೊಟ್ಟನಿಂತತಿಶಯಮಪ್ಪುದೆಂಬುದು ಮುನ್ನ ಪೇೞ್ದಾದೇಶಪುರುಷಂ ಬಂದನಕ್ಕುಮೆನುತ್ತುಂ ಬರ್ಪ ಮಾಲೆಗಾಱಂ ಕುಮಾರನಂ ಕಂಡು ಸಾರೆವಂದು ನೋಡಿ ನೀಮಾರ್ಗೆತ್ತಣಿಂ ಬಂದಿರೆನೆ ದೇಶಾಂತರಿಗನೆಂ ಬಟ್ಟೆವೋಗುತ್ತುಂ ಬಂದೆನೆಂದೊಡಕ್ಕುಂ ನೀಮೆನಗಿಂದಭ್ಯಾಗತರಾಗಿ ಮೆಂದು ಭರಂಗೆಯ್ದು ನುಡಿದು ಮನೆಗೊಡಗೊಂಡು ಪೋಗಿ ಪೂಗಟ್ಟುವ ಮನೆಯೊಳ್ ಕುಳ್ಳಿರಿಸಿದಾಗಳಾ ಮನೆಯವರ್ ಪೂಗಟ್ಟುವಂದಮಂ ನೋಡಿ ತಾನುಮೊಂದು ನೂಲಂಕೊಂಡು ನಾನಾ ವಿಧ ಚಿತ್ರಮಾಲೆಗಳಂ ಸಮೆವ ಹಸ್ತಕೌಶಲ್ಯಮಂ ಕಂಡಾತ್ಮಜಾತಿ ವಿದ್ಯಾನಿಪುಣನೀತನೆಂದಾ ಮಹತ್ತರಂ ಮಚ್ಚಿ ಇತ್ತೆೞ್ತನ್ನಿಮೆಂದು ಪಿರಿದು ಮನೆಗೊಯ್ದೆನ್ನ ತಂಗೆಯ ಮಗಂ ನಿನ್ನಳಿಯಂ ಬಂದನೆಂದು ಪೆಂಡತಿಗೆ ಪೇೞ್ದತಿಪ್ರೀತಿಯಿಂ ಸ್ನಾನಾನ್ನ ಪಾನಾದಿಗಳಿಂ ತಣಿಪಿ ನೀಮೆತ್ತಲುಂ ಪೋಗದಿಲ್ಲಿರ್ಪುದು ಕಾರಣಮುಂಟೆಂದಿರಿಸಿದೊಡಾ ಮಾಲೆಗಾಱನ ಮಗಳ್ ಪುಷ್ಪಾವತಿಯೆಂಬಳ್

ಕಂ || ಧನ್ಯಂಗೆ ಕುಸುಮಶರಸಾ
ಮಾನ್ಯಂಗೆ ನರೇಂದ್ರವರ್ಗಮಾನ್ಯಂಗೆ ಲಸ
ತ್ಕನ್ಯೆ ಸುರೂಪಾತಿಶಯಾ
ಮಾನ್ಯೆ ಕರಂ ಕೂರ್ತು ಕೂಟಮಂ ಬಯಸಿರ್ಕುಂ ೪೭

ವ || ಇರ್ದೊಡೊಂದು ದೆವಸಮಾತಂ ಕಟ್ಟಿದ ಪೂಮಾಲೆಯನರಸರ ಮಗಳ್ಗೆ ಕೊಂಡು ಪೋಗಿ ಕೊಟ್ಟೊಡಮಿನ್ನೆಗಮೇಕೆ ಬಾರೆಯೆಂದು ನುಡಿದು ಮುಳಿದಾ ಪೂಮಾಲೆಯ ಚೆಲ್ವಂ ಕಂಡು ಮೆಚ್ಚಿ ಪೇೞಿದನಾರ್ ಸಮೆದರೆಂದೊಡೆಮ್ಮತ್ತೆಯ ಮಗಂ ಬಂದಿರ್ದನಾತನಿದಂ ಸಮೆದ ನೆಂದೊಡಿಂತಪ್ಪ ಕುಶಲಂಗೆ ನಿನ್ನಂ ಕೊಟ್ಟೊಡೊಳ್ಳಿತ್ತೆಂದಾಮುಮೆಲ್ಲಂ ಬಯಸಿ ದಪ್ಪೆಮೆಂದೊಡಾಕೆಗೆ ಕೂರ್ಮೆಯಿಮ್ಮಡಿಸೆ ಮಗುೞ್ದು ಬಂದು ವಿರಹಪರಿತಾಪ ದಿಂದಿರ್ದೊಡವರಯ್ಯನುಮಾಕೆಯನಾತಂಗೆ ಕುಡುವ ಬಗೆಯೊಳಿರ್ದಂ ಮತ್ತಮಾ ಪೊೞಲ ಪ್ರಧಾನಶ್ರೇಷ್ಠಿ

ಕಂ || ಒಂದು ಪಣವಿನ ಮೊದಲ್ಗೊಂ
ಡಂದಿನ ದಿನದೊಳೆ ಸಹಸ್ರ ಪಣಮಂ ಪಡೆವಂ
ಗಿಂದುನಿಭಾಸ್ಯೆಯನಭಿನುತ
ಸೌಂದರಿ ಕನ್ನಿಕೆಯನೆನ್ನ ಮಗಳಂ ಕುಡುವೆಂ ೪೮

ವ || ಎಂಬ ಪ್ರತಿಜ್ಞೆಯಂ ಕೇಳ್ದಾತನಲ್ಲಿಗೆ ಪೋಗಿ ನಿಮ್ಮ ಕೂಸನಿತ್ತೊಡಮಕ್ಕು ಮೀಯದೊಡಮಕ್ಕುಮೆನ್ನ ಬುದ್ಧಿಯಂ ನೋಡಿಮೆಂದೊಂದು ಪಣಮನಧ್ಯಕ್ಷ ಸಹಿತಂ ಕೊಂಡುಪೋಗಿ ಪೂಗುಟ್ಟುವ ನಾರನಾ ಪಣವಿಂಗೆ ಮಾಱುಗೊಂಡು ತೋಂಟದ ಬಟ್ಟೆಗೊಯ್ದು ಒಂದು ನಾರನೊರ್ಪಿಡಿಪೂವಿಂಗೆ ಕೊಟ್ಟು ಪೂವಂ ಮಾಱುಗೊಂಡಾ ಪೂವಂ ಚಿತ್ರಮಾಲೆಗಟ್ಟಿ ವನಕ್ರೀಡೋತ್ಸವಕ್ಕೆ ಪೋಪ ರಾಜಕುಮಾರ ನೆರವಿಗೆ ತೋಱಿ ಮಾಱಿ ಸಾವಿರ ಪಣಮಂ ಮೇಣ್ ಮೊದಲೊಂದು ಪಣಮುಮನೊಯ್ದಡಾತನಂ ರಾಜಶ್ರೇಷ್ಠಿ ಮಚ್ಚಿ ತನ್ನ ಮಗಳನಾತಂಗೆ ಕುಡುವೆನೆಂದು ಕೊಂಡಾಡುತಿರ್ದಂ ಮತ್ತಮಲ್ಲಿಯೊರ್ವಂ ಸಾವನಿಗನ ಚಿತ್ರಮಂ ಬರೆದಂಗಡಿಗೆ ಪೋಗಿ ಕುಳ್ಳಿರ್ದೊಡಂದಾ ವಣಿಕ್ಪತಿಗೆ ಲಾಭಮಾದೊಡೀತಂ ಬಂದಲ್ಲಿ ಪಡೆದೆನೆಂದಾತನ ತೇಜಕ್ಕಂ ಬುದ್ಧಿಗಂ ಮೆಚ್ಚಿ ಕೂಸಂ ಕುಡಲೆಂದಿರ್ದಂ ಮತ್ತಂ ರಾಜ ಪ್ರಧಾನಮಂತ್ರಿಗೆ ಚಂದ್ರಕವೇಧ್ಯಮೆಂಬ ವಿದ್ಯೆಯಂ ಬೆಸಂದೋಱಿದೊಡಾತನೊಸೆದು ತನ್ನ ಮಗಳಂ ಕುಡಲಿರ್ದಂತಾತನ ವಿದ್ಯಾಪರಿಣತಿಗಂ ರೂಪಿನೊಳ್ಪಿಂಗಂ ಸೌಭಾಗ್ಯಕ್ಕಮರಸಂ ಪುರುಡಿಸಿ ಕಾಯ್ದುಪಾಯದಿಂ ಕೊಲಲ್ ಬಗೆದು

ಕಂ || ರಕ್ಕಸನ ಮಾಡದೊಳಗಂ
ಪೊಕ್ಕಾವಂ ಸುಖದಿನಿರ್ದನಾತಂಗೆ ಕರಂ
ತಕ್ಕಪ್ಪೆನ್ನಾತ್ಮಜೆಯಂ
ಮಿಕ್ಕಿರ್ದೆನ್ನರ್ಧರಾಜ್ಯಮಂ ನೆಱೆ ಕುಡುವೆಂ ೪೯

ವ || ಎಂದು ಗೋಸಣೆವಿಡಿಸಿದೊಡಾ ಗೋಸಣೆಯಂ ಧನ್ಯಕುಮಾರಂ ಕೇಳ್ದು ಪಿಡಿದೊಡರಸನ ಱಿದನ್ನ ಬಗೆದಂತಾಯ್ತೆಂದೊಸೆದುಪೋ ಬರವೇೞಿಮಾತನಂ ಮನೆಯಂ ಪುಗುವಂದಮಂ ನೋೞ್ಪೆನೆಂದಟ್ಟಿ ತಾನುಂ ತನ್ನರಸಿಯರ್ಕಳುಂ ತನ್ನ ಮಕ್ಕಳಪ್ಪ ಕನ್ಯಾಸಮೂಹಮುಂ ಪುರಪ್ರಧಾನರುಂ ಕಯ್ಗೆಯ್ದು ಬಂದು ಮತ್ತಂ ಪುರಜನಂಗಳೆಲ್ಲಂ ತಂತಮ್ಮ ವಿಳಾಸಂಗಳಂ ಮೆಱೆದು ಬಂದಾ ಮನೆಯಂ ಬಳಸಿರ್ದು ನೋಡುತ್ತಿರೆ ಧನ್ಯಕುಮಾರಂ ಕರಂ ಕೆಯ್ಗೆಯ್ದು ಪೊೞಲೊಳ್ ಬರ್ಪಾಗಳ್

ಉ || ಈ ನೆವದಿಂ ಕೊಲಲ್ ಬಗೆದನೀತನನೀ ನೃಪನೆಂದಪರ್ ಕೆಲರ್
ದಾನವನಂ ಗೆಲಲ್ ನೆಱೆಗುಮೀತನ ಪೌರುಷಮೆಂದಪರ್ ಕೆಲರ್
ಮಾನಿತ ಪುಣ್ಯದೇವತೆಗಳಳ್ಳೊಡೆ ಗೆಲ್ದಪನೆಂದಪರ್ ಕೆಲರ್
ತಾನುಱುಗುಂ ಪುರಾಕೃತಮದೇಕೆ ಪಲುಂಬುವಿರೆಂದಪರ್ ಕೆಲರ್ ೫೦

ವ || ಎಂದಚ್ಚರಿವಟ್ಟು ಪೊೞಲೆಲ್ಲಂ ನೋಡುತ್ತಿರೆ ರಕ್ಕಸನ ಮಾಡಮನೆಯ್ದೆವಂದು ಪಂಚನಮಸ್ಕಾರಮಂ ಮನದೊಳವಧಾರಿಸಿ ನಿಶ್ಯಂಕೆಯಿಂ ತನ್ನ ಮನೆಯಂ ಪುಗುವಂತೆ ಪುಗುವಾಗಳ್ ರಕ್ಕಸಂ ಮಾಡದಿಂ ಪೊಱಮಟ್ಟು ಭಯಂಕರಾಕಾರಮಂ ತೋಱಿದೊಡೆ ಮುಗುಳ್ನಗೆ ನಕ್ಕೆಮ್ಮಂ ನೀಂ ಮಚ್ಚಿಸಲಕ್ಕುಂ ಬೆರ್ಚಿಸಲಕ್ಕುಮೆಯೆಂದಿದಿರ್ಚಿದೊಡೆ ರಕ್ಕಸನುಗ್ರಭಾವಂಗೆಟ್ಟು ಕುಮಾರನ ಮನದ ಪೆಂಪಿಂಗಚ್ಚರಿವಟ್ಟು ಸೌಮ್ಯನಾಗಿ ಬೆಳ್ಳಿಯ ಕಳಶಮಂ ಕನ್ನಡಿಯುಮಂ ಪಿಡಿದಿದಿಗೊಂಡಿತ್ತೆೞ್ತನ್ನಿಮೆಂದು ಕುಮಾರನಂ ಮಾಡದೊಳಗಣ್ಗುಯ್ದು ಸಿಂಹಾಸನದ ಮೇಲಿರಿಸಿ ಪರಸಿ ಸೇಸೆಯನಿಕ್ಕಿ ನೀನೀ ನಿಧಿಗಳಂ ಮನೆಯುಮಂ ಕೆಯ್ಕೊಂಡು ಸುಖಮಿರ್ಪುದಾಂ ಪೆಱತೊಂದಾಶ್ರಯಕ್ಕೆ ಪೋದಪ್ಪೆನೆಂದು ರಕ್ಕಸಂ ಪೊಱಮಟ್ಟು ಪೋಪುದುಂ ಪೊಱಗೆ ನೋಡುತ್ತಿರ್ದರಸನುಂ ಮಂತ್ರಿಯುಂ ಪ್ರಧಾನರುಂ ಸಾರೆವಂದು ರಕ್ಕಸನುಗ್ರಭಾವಂಗೆಟ್ಟು ನಿಧಿಗಳುಮಂ ಮನೆಯುಮನಾತಂಗೊಪ್ಪುಗೊಟ್ಟು ಪೋದುದುಮಂ ಕಂಡೆನಿತಾನುಂ ತೆಱದಿಂ ಕುಮಾರನಂ ಪೊಗೞ್ದರಸನಾ ಮಚ್ಚಿನೊಳಾಗಳ್

ಕಂ || ತನ್ನ ನೆಗೞ್ದಿರ್ದ ಸುತೆಯಂ
ಸನ್ನುತೆಯಂ ರೂಪವತಿಯನತ್ಯುತ್ಸವ ಸಂ
ಪನ್ನುತೆಯಂ ಕೊಟ್ಟೊಡೆ ಕೊಂ
ಡುನ್ನತನಾಗಿರ್ದನಂದು ಧನ್ಯಕುಮಾರಂ ೫೧

ವ || ಅಂತತಿಶಯಮಪ್ಪ ಪುಣ್ಯಫಲಮುಮಂ ಮನದ ಬಳಮುಮಂ ಶಾಳಿಭದ್ರಂ ಮಚ್ಚಿ ಮಾವನ ಮಗೆನಂದಱಿದು ತನ್ನ ತಂಗಿಯಪ್ಪ ಸುಭದ್ರೆಯಂ ಮಹಾವಿಭವದಿಂದಾತಂಗೆ ಕೊಟ್ಟನಂತಂತೆ ಮುನ್ನೆ ಕುಡುವೆನೆಂದಿರ್ದವರೆಲ್ಲರುಂ ತಂತಮ್ಮ ಕೂಸುಗಳಂ ವಿವಾಹವಿಧಿಯಿಂ ತಂದು ಕೊಟ್ಟರಂತು ಪುಷ್ಪವತಿವೆರಸು ಪದಿನಱುವರುಮಂ ಮದುವೆನಿಂದವರ್ಗೆ ಪದಿನಾಱು ಮಾಡಂಗಳಂ ತನ್ನ ಮಾಡದ ಬಳಸಿಯುಂ ಮಾಡಿಸಿಕೊಟ್ಟು ಚಂದ್ರೋದಯದೊಳ್ ಸಮುದ್ರಂ ಪೆರ್ಚುವಂತೆ ಪುಣ್ಯೋದಯದೊಳ್ ಶ್ರೀ ಪೆರ್ಚೆ ಧನ್ಯಕುಮಾರಂ ಸುಖದಿನಿರ್ಪನ್ನೆಗಮತ್ತಲುಜ್ಜೈನಿಯೊಳವರಯ್ಯ ನುಮಬ್ಬೆಯುಂ ಪೋದ ಮಗನನೆಲ್ಲಿ ಯಮಱಸಿ ಕಾಣದೆ

ಕಂ || ಎತ್ತಾನುಂ ಪೋಗಿ ಮಗಂ
ಸತ್ತಂ ಹಾ ಕೆಟ್ಟೆವೆಂದು ದುಃಖಾಗ್ನಿ ಕರಂ
ಪೊತ್ತಿ ಸುಡೆ ಬೆಂದು ನೊಂದಾ
ಪತ್ತಿಂದಿರೆ ಬೞಿಕೆ ಸೈಪು ತೊಲಗಿತ್ತವರಂ ೫೨

ವ || ಅಂತೞಲುಮುಬ್ಬೆಗಮುಮೆಡಱುಮಡಸಿದಡೆ ಧನಪಾಳಶೆಟ್ಟಿಯರ್ ಕಣ್ಗೆಟ್ಟು ಮುಂದುಗೆಟ್ಟು ಬಾೞುತ್ತಿರಲಾಱದೆ ರಾಜಗೃಹದೊಳಿರ್ದ ತಂಗಿಯಮಗಂ ಶಾಲಿಭದ್ರನಂ ಕಂಡುಬರ್ಪೆನೆಂದು ಕಪ್ಪಡಮನುಟ್ಟು ಪೊಱಮಟ್ಟು ಬಂದು ರಾಜಗೃಹಮಂ ಪೊಕ್ಕು ಧನ್ಯಕುಮಾರನ ಮಾಡದ ಮುಂದಣ ಬೀದಿಯನೆಯ್ದಿ ಮೆಲ್ಲಮೆಲ್ಲನೆ ಮುಪ್ಪುಂ ಬಡತನಮುಂ ಪಯಣಮುಮೆಂಬ ಮೂಱುಂ ತೆಱದಿನಾದ ಪರಿಶ್ರಮಮಡಸೆ ಬೞಲ್ದು ಬರ್ಪನಂ

ಕಂ || ತೆರೆದ ಮೊಗಂ ಬಾಗಿದ ಬೆನ್
ನರೆತ ಸಿರಂ ಕವಿದ ಪುರ್ವುಗಳ್ ಸಂಸೃತಿಯೆಂ
ಬುರು ಜಲಧಿಯ ನೆಲೆ ನೋೞ್ಪವೊ
ಲಿರದೂಱುವ ದಂಡುವೆರಸು ಬರ್ಪನನಾಗಳ್ ೫೩

ವ || ಮಾಡದ ಮೇಗಣ ನೆಲೆಯಲ್ಲಿ ವಿನೋದಿಗಳುಂ ವಿದ್ಯಾವಂತರುಂ ಶ್ರೀಮಂತರುಂ ರಸಿಕರ್ಕಳುಂ ತನ್ನನೋಲಗಿಸೆ ಮಹೈಶ್ವರ್ಯದಿನಿರ್ದು ತೊಟ್ಟನೆ ಬೀದಿಯತ್ತಲ್ ನೋಡಿ ಕಂಡು ತಂದೆಯಪ್ಪುದನಱಿದು ಬೇಗಮೆೞ್ದು ಮೇಲುದನಪ್ಪೊಡಂ ಕೊಳ್ಳದಲ್ಲಿ ನೆರೆದಿರ್ದ ಸಭೆಯೆಲ್ಲಮಚ್ಚರಿವಡೆ

ಕಂ || ಸುರಪತಿಯಾನುಂ ವಿದ್ಯಾ
ಧರಪತಿಯಾನುಂ ನಭೋವಿಭಾಗದಿನಿೞಿದೀ
ಧರೆಗತಿರಾಗದೆ ಬರ್ಪಂ
ತಿರೆ ಮಾಡದಿನಿೞಿದು ಬಂದು ಧನ್ಯಕುಮಾರಂ ೫೪

ವ || ತಂದೆಗಿದಿರಂ ನಡೆದು ಮೆಯ್ಕಿಕ್ಕಿ ಪೊಡೆವಟ್ಟು ಬನ್ನಿಮಿತ್ತೆೞ್ತನ್ನಿಮೆಂದು ಕೆಯ್ಯಂ ಪಿಡಿದು ಮಾಡದೊಳಗಣ್ಗುಯ್ದುಚಿತಾಸನದೊಳ್ ಕುಳ್ಳಿರಿಸಿ ಕಾಲಂ ಕರ್ಚಿ ತಾನೆ ಕಾಲ್ಗಳನೊತ್ತುವಾಗಳ್ ಬೆಕ್ಕಸಂಬಟ್ಟಯ್ಯನಿಂತೆಂಗುಂ

ಉ || ರಾಜಕುಮಾರ ಕೇಳ್ ನಿನಗೆ ಭಕ್ತಿಯೊಳಾಮೆಱಗುತ್ತುಮಿರ್ಪುದೊಂ
ದೋಜೆಯೆ ಪಾೞಿ ನೀನೆಱಗೆ ಬೆರ್ಚಿದೆನೆಂದೊಡೆ ಬೆರ್ಚವೇಡ ವಿ
ಭ್ರಾಜಿತನೆಂ ಭವತ್ತನಯನೆಂ ನುತ ಧನ್ಯಕುಮಾರನೆಂ ಧರಾ
ಪೂಜಿತಮಪ್ಪ ಪುಣ್ಯಮೆನಗಾದುದು ನಿಮ್ಮ ಮಹಾಪ್ರಸಾದದಿಂ ೫೫

ವ || ಎಂದಾಗಳ್ ಮನಮೊಸೆದಿರ್ದು ಕಂಡು ಸಂತಸದಿಂ ತೆಗೆದಪ್ಪಿಕೊಂಡು ಪರಸಿದಾಗಳ್ ಎಮ್ಮಬ್ಬೆಯುಮಣ್ಣಂಗಳುಂ ಸುಖಮಿರ್ದರೆ ಪೇೞಿಮೆಂದೊಡವರೆಲ್ಲರುಂ ಪ್ರಾಣದೊಳೊಳರೆಂಬನಿತೆ ನೀಂ ಪೋದಿಂದೞಿಯಮಾ ಮನೆಯ ದೇವತೆಯೆಮ್ಮ ಪುಣ್ಯದೇವತೆಯನೆೞ್ಬಟ್ಟಕಳೆಯೆ ಕಡುನಿರ್ಧನರಾಗಿ ಬಾೞುತಿರ್ದಲ್ಲಿಯೆನ್ನ ತಂಗೆಯ ಮಗಂ ಶಾಲಿಭದ್ರನೆಂಬನಿಲ್ಲಿರ್ದನಾತನನಾಸೆವಟ್ಟು ಬಂದೆನೆನೆ ಶಾಲಿಭದ್ರನ ತಂಗೆ ಮೊದಲಾಗೆ ನಿಮ್ಮ ಸೊಸೆವಿರ್ ಪದಿನಱುವರಾದರೆಂದವರಂ ಬರಿಸಿ ಪೊಡೆವಡಿಸಿ ತಮ್ಮಣ್ಣಂಗಳ್ ಮಾಡಿದಪಾಯಂ ಮೊದಲಾಗಿಂದುವರಮಾದ ವೃತ್ತಾಂತಮೆಲ್ಲಮಂ ತಿಳಿಯೆ ಪೇೞ್ದು ಅಬ್ಬೆಗಮಣ್ಣಂಗಳ್ಗಮಂದಳಮುಮನಟ್ಟಿ ಬರಿಸಿ ಬರ್ಪಾಗಳ್‌ ತಾನಿದಿರಾಗಿ ಪೋಗಿ ಪೊಡೆವಟ್ಟೊಡಣ್ಣಂಗಳ್ಗೆ ಪರಸುವನಿತರ್ಕಂ ನಾಲಗೆ ಪೊರಳದೆ ತಲೆಯಂ ಬಾಗಿರೆ ತಾಯೆಂದಳಿವರ್ ತಮ್ಮ ಮಾಡಿದ ದೋಷಕ್ಕೆ ಸಿಗ್ಗಾಗಿರ್ಪರ್ ಪಾಪಕರ್ಮರೆಂದೊಡಂತೇ ಕೆಂಬಿರಿಂದಪ್ಪೈಶ್ವರ್ಯಮವರ ನಿಮ್ಮ ಪ್ರಸಾದದಿಂ ನೆಗೞ್ದುದೆಂದವರಂ ವಿನಯದಿಂ ಮನ್ನಿಸಿರ್ದು ಮಱುದೆವಸಮೆಣ್ಬರ್ಗಮೆಣ್ ಮಾಡಂಗಳಂ ಮಾಡಿಸಿಕೊಟ್ಟು ಮಹಾದ್ರವ್ಯಪತಿಗಳಂ ಮಾಡಿ ತಾಯ್ಗಂ ತಂದೆಗಂ ಬೆಸಕೆಯ್ವುತ್ತುಮಾ ಪೊೞಲೊಳಾರ್ಗ ಮಗ್ಗಳಮಪ್ಪ ಪುಣ್ಯದಿಂ ಮಹಾಶ್ರೀಮಂತನುಂ ಗುಣವಂತನುಮಾಗಿ

ಚಂ || ಪರದಿನ ದಾನಧರ್ಮದ ನಿಯೋಗದ ಚಾಗದ ನಿಟ್ಟೆಯಿಂ ನಿರಂ
ತರಮೆಸೆದಿರ್ದು ವೃತ್ತಿಯ ವಿಭೂತಿಯ ರಂಜನೆ ಶಬ್ದಶಾಸ್ತ್ರದಂ
ತಿರೆ ಬುಧರಪ್ಪವರ್ ಬಳಸಿ ಬಂದಿರೆ ಸಂದಿರೆ ಪೆಂಪು ಧಾತ್ರಿಯೊಳ್
ನಿರತಿಶಯಂ ಸಮಸ್ತಮಯಮಾಯ್ತೆನೆ ಧನ್ಯಕುಮಾರನೊಪ್ಪಿದಂ ೫೬

ವ || ಅಂತು ಪಲವುಕಾಲಂ ಧರ್ಮಾರ್ಥಕಾಮ ಭೋಗಂಗಳೆಂಬೀ ಶ್ರಾವಕ ಮಾರ್ಗಂ ಗಳನುತ್ತರೋತ್ತರಂ ನಡೆಯಿಸುತ್ತಿರ್ಪಿನಂ ತನ್ನ ಮೆಯ್ದುನಂ ಶಾಲಿಭದ್ರಂ ತಪಂಬಡುವೆನೆಂದು ಮೆಯ್ಯನೊಡಂಬಡಿಸಲ್ ಮನೆಯೊಳಿರ್ದು ಭಾವಿಸಿದಪ್ಪ ನೆಂಬುದಂ ಧನ್ಯಕುಮಾರಂ ಕೇಳ್ದು ಸುಭದ್ರೆಗಾ ಮಾತಂ ಪೇೞ್ದು ಬಾ ನಿಮ್ಮಣ್ಣ ನಂದಮಂ ನೋೞ್ಪೆಮೆಂದಿರ್ವರುಂ ಶಾಲಿಭದ್ರನ ಮನೆಗೆ ಪೋಗಿ ಸತ್‌ ಪ್ರಿಯದಿಂ ಸಂತೋಷಂಬಟ್ಟು ಕುಳ್ಳಿರ್ದಿಂತೇಕೆ ಬಡವಾದಿರೆನೆ ಶಾಳಿಭದ್ರನೆಂಗುಮೀ ಶರೀರದಂದಮಂ ನೀಂ ಬಗೆಯಿರೆ

ಕಂ || ಪೂರಿಸುವುದೊರ್ಮೆ ವಿಗತಾ
ಹಾರದೆ ಗಳಿಯಿಸುವುದೊರ್ಮೆ ತಾನೀ ಮೆಯ್ಯೊಳ್
ಸಾರದ ಬಾರದ ದುಃಖಾ
ಕಾರದ ಮೊದಲಪ್ಪ ತೆಱನನನಿತಂ ಬಗೆಯಾ ೫೭

ವ || ಎಂದ ಮಾತು ತನ್ನಂ ಮೂದಲಿಸಿದಂತಾಗೆ ಧನ್ಯಕುಮಾರನಿಂತೆಂದಂ

ಚಂ || ತನು ಮಳಧಾರಿ ನಿರ್ಗುಣ ವಿಕಾರಿ ಬಹುಕ್ರಿಮಿಧಾರಿ ಪೊರ್ದಿದೀ ಧನಮವಿಶೇಷಿ ಸರ್ವಜನರೋಪಿ ಸಮುದ್ಭವದೋಷಿ ಪತ್ತಿದೀ
ಮನಮವಿಶುದ್ಧಿ ದುಃಖಚಯವೃದ್ಧಿ ಕಳಂಕಿ ನಿಬದ್ಧಿಯೆಂಬುದೊಂ
ದನುಪಮ ಬೋಧಿ ಪುಟ್ಟಿದೊಡೆ ಪೇೞ್ ಮನೆಯೊಳ್ ತೊಡರ್ದಿಂತು ನಿಲ್ವುದೇ ೫೮

ವ || ಎಂಬ ಮಾತಂ ಶಾಳಿಭದ್ರಂ ಕೇಳ್ದು ಮತ್ತಮಿಂತೆಂದಂ

ಕಂ || ಅಱಿವಾದೊಡಮೇಂ ಬಂಧಂ
ಪಱಿಪಡುಗುಮೆ ಕಾಲಲಬ್ಧಿ ದೊರೆಕೊಳ್ವಿನೆಗಂ
ತೊಱೆಯಲ್ ತಪದನುಭವಣೆಗೆ
ನೆಱೆಯಲೊಡಂಬಡಿಪುದೊಳ್ಪು ಮನೆಯೊಳ್ ಮೆಯ್ಯಂ ೫೯

ವ || ಎಂದಾಗಳ್ ಧನ್ಯಕುಮಾರಂ ಮುಗುಳ್ನಗೆ ನಕ್ಕು ಅಱಿವುಳ್ಳಂ ಮನೆಯೊಳಿರ್ದಾಗಳ್ ಮುಳ್ಳಮೊನೆಯೊಳಿರ್ದಂತೆ ನೋವುಮಿಲ್ಲದ ಸಾವುಮಕ್ಕುಮೆಂದಿಂತೆಂದಂ

ರಗಳೆ || ತನು ನಿಲ್ಲದು ಪೊಲ್ಲದು ತಾನೆಂತುಂ
ಧನಮೋತೊಡವಾರದು ಕೇಳೆಂತುಂ ೧

ಮನೆಯೆಂಬುದು ತಾಂ ಸೆಱೆವನೆಯಂದಂ
ತನಯರ್ ಸೆಱೆವಿಡಿದಿರ್ದವರಂದಂ ೨

ಬಲೆಯಂದಂ ಪೆಂಡಿರ ತೊಡರ್ವಂದಂ
ಕೊಲೆಯಂದಂ ಬಂಧುಗಳೊಂದಂದಂ ೩

ಭೋಗಂಗಳೆ ವಿಷಧರಬೋಗನಿಭಂ
ರಾಗಂ ಬಗೆವಂದದು ಮೇಗಶುಭಂ ೪

ಮೋಹಂ ಸಂಸಾರದ ಬೇರ ತೆಱಂ
ಸ್ನೇಹಂ ಭವಜಲಧಿಯ ನೀರತೆಱಂ ೫

ಎಸೆದೊಪ್ಪುವ ಸಿರಿ ಪೆರ್ಮುಗಿಲ ತೆಱಂ
ಪೊಸ ಜವ್ವನಮುಂ ಗಿರಿ ನದಿಯ ತೆಱಂ ೬

ಇಂತೆಂತುಂ ಪೊಲ್ಲದು ನರರ ಭವಂ
ಸಂತಸಮಂ ಪುಟ್ಟಿಸದೀ ವಿಭವಂ ೭

ಅದಱಿಂ ಮೆಯ್ಯಱಿಯದೆ ನಡೆದು ಕರಂ
ಮುದದಿಂದಿರೆ ಪೊರ್ದುವುದಘನಿಕರಂ ೮

ಅಱಿವವರಿಂತೆಂತುಂ ಮೆೞ್ಪಡಲಿಂ
ತೊಱೆಯಿಂ ಮೋಹಂಗಳನೀ ಕಡಲಿಂ ೯

ನೆಱೆದೊಪ್ಪಿರೆ ಪುಟ್ಟಿದ ಬೋಧಿಫಳಂ
ತಱಿಸಂದು ಮಹಾತಪದಿಂ ಸಫಳಂ ೧೦ ೬೦

ಕಂ || ಬಡವಂ ನಿಧಾನಮಂ ಮು
ಪ್ಪಡಸಿದನಮರ್ದಂ ಸರೋಗಿ ಮರ್ದಂ ಭವದೊಳ್
ತೊಡರ್ದಂ ಬೋಧಿಯನೊಪ್ಪಿರೆ
ಪಡೆದೊಡೆ ಕಡೆಗಣಿಸಿ ತಡೆಯೆ ಸುಖಮೆಂತಕ್ಕುಂ ೬೧

ವ || ಎನೆ ಶಾಲಿಭದ್ರನಿಂತೆಂದಂ ಮನಮನೊಡಂಬಡಿಸದೆ ವೇಳೆಗೊಂಡೊಂಡಂ ತನುವನೊಡಂಬಡಿಸದೆ ತಪಂಗೊಂಡೊಡಂ ಪುಟ್ಟಿದೊಡೇಗೆಯ್ಯಲಕ್ಕುಮೆನೆ ಧನ್ಯಕುಮಾನಿಂತೆಂದಂ

ಚಂ || ಮಡುವಿನೊಳೞ್ದವಂ ಪೊಱಡಲೊಲ್ಲದೆ ಮೆೞ್ಪಡನುಂಟುಮಾಡಿ ಕೊಂ
ಡೊಡೆ ಪುಗುಗುಂ ಜಳಂ ತನುವಿನೊಳ್ ಪಿಡಿಗುಂ ನೆಗೞಲ್ಲಿ ಬಂಧದೊಳ್
ತೊಡರ್ದವರಿಲ್ಲಿ ಮಾಣೆ ಮನಮಂ ಪುಗುಗುಂ ಕಡುಮೋಹಮಂತೆ ಬಂ
ದಡಸುಗುಮಂತಕಂ ಬೞಿಯಮೆಂತು ತಪೋವನದತ್ತ ಪೋದಪಂ ೬೨

ವ || ಎಂಬ ಭಾಷೆಯಂದಮನಱಿದು ಸುಭದ್ರೆ ಸೈರಿಸಲಾಱದಿಂತೆಂದಳ್

ಕಂ || ಎಮ್ಮಣ್ಣನಱಿದು ಮನೆಯೊಳ್
ತಾಮ್ಮುನ್ನಂ ಭಾವಿಸುತ್ತುಮಿರ್ಪುದೆ ಪೇೞ್ಗುಂ
ತಮ್ಮಿರ್ದಿರವಂ ಬಗೆಯದೆ
ಕೆಮ್ಮನೆ ಭಾಷೆಯೊಳೆ ತೆಗೞಲಕ್ಕುಮೆ ಪೇಱರಂ ೬೩

ವ || ಎಂಬ ಮಾತಂ ಕೇಳ್ದು ಧನ್ಯಕುಮಾರಂ ನೀನೆಂದಂತು ಪೆಱರನೇನೆಂಬುದೊ ಕೇಳ್ ತುೞಿಲಸಂದಂಗನುವರಂ ಮುಟ್ಟಿದೊಡಂ ಶ್ರಾವಕಂಗೆ ಬೋಧಿ ಪುಟ್ಟಿದೊಡಮಾತಂ ತೊವಲ ನೇಱಿಸಿಕೊಂಡನುವರಕೆ ನಡೆವುದುಮೀತಂ ಮಹಾವ್ರತಂಗಳನೇಱಿಸಿಕೊಂಡು ತಪೋವನಕ್ಕೆ ನಡೆವುದುಮಿಂತಿರ್ವರುಂ ಮನೆಯಂ ಪೊಕ್ಕಿರಲಾಗದೆಂಬುದಕ್ಕೆಂದೇನಾರುಮಂ ನುಡಿವುದಱೊಳೇನೀ ಮಾತುಮೆನಗೆ ನುಡಿದನೆಂದಾಗಳೆ ತನ್ನ ಮನೆಗೆ ವಂದು ಜ್ಯೇಷ್ಠಪುತ್ರನಂ ಕರೆದು ತನ್ನ ಪದವಿಯನೆಲ್ಲಮಂ ಕೊಟ್ಟುಳ್ಳುದಂ ಮಹಾದಾನಂಗೆಯ್ದು ಪೊಱಮಟ್ಟು ದೀಕ್ಷೆಯಂ ಕೆಯ್ಕೊಂಡುತ್ತರೋತ್ತರಂ ನೆಗೞ್ದು ತಪಮಂ ಚಾರಿತ್ರಮುಮಂ ಸಂಪೂರ್ಣಂ ಮಾಡಿಯೊಂಬತ್ತು ತಿಂಗಳಿಂಗೆ ಸಲ್ಲೇಖನಕಾಲದೊಳುತ್ತಮಸ್ಥಾನ ಪ್ರಾಪ್ತ್ಯಭಿಪ್ರಾಯದಿಂ ಪ್ರಾಯೋಪಗಮನಂಗೆಯ್ದು ಪರೀಷಹಂಗಳಂ ಸೈರಿಸಿ ಧರ್ಮಧ್ಯಾನದೊಳ್ ಮುಡಿಪಿ ಸರ್ವಾರ್ಥಸಿದ್ಧಿಯನೆಯ್ದಿದನೆಂಬೀ ಕಥೆಯಂ ಬಗೆದು ತಱಿಸಲ್ವುದು ಮುಕ್ತಿಶ್ರೀಯಂ ಕೂಡಲಾರ್ಪ ಬೋಧಿರತ್ನಮನೆಂತಪ್ಪ ಭಾವನೆಯಿಂ ಪಡೆಯಲಕ್ಕುಮೆಂದೊಡೆ ಅಧ್ರುವಾನುಪ್ರೇಕ್ಷಾನೈರಂತರ್ಯ ಭಾವನೆಯಂ ಭಾವಿಸೆ ಬೋಧಿ ನಿಲ್ಕುಮದಱಿಂ ತಡೆಯದೆ ಮುಕ್ತಿಯಕ್ಕುಂ

ಗದ್ಯ || ಇದು ಜಿನಶಾಸನ ಪ್ರಭಾಸನ ಶೀಲೋದಿತ ವಿದಿತ ಬಂಧುವರ್ಮ ನಿರ್ಮಿತಮಪ್ಪ ಜೀವಸಂಬೋಧನಾ ಗ್ರಂಥಾವತಾರದೊಳ್ ಬೋಧಿದುರ್ಲಭಾನುಪ್ರೇಕ್ಷಾ ನಿರೂಪಣಂ ಧನ್ಯಕುಮಾರ ಕಥಾವರ್ಣನಂ

ಏಕಾದಶಾಧಿಕಾರಂ