೧೦. ನಿರ್ಜರಾನುಪ್ರೇಕ್ಷೆ

ಕಂ || ಎರಡುಂ ತೆಱದ ಪರಿಗ್ರಹ
ಭರಮಂ ಕಳೆದಿಕ್ಕಿ ತಾಳ್ದಿ ಸಂಯಮಮಂ ಪ
ನ್ನೆರಡುಂ ತೆಱದ ತಪಂಗಳ್
ಕರಮೊಪ್ಪಿರೆ ನೆಗೞೆ ಕರ್ಮನಿರ್ಜರೆಯಕ್ಕುಂ ೧

ವ || ಅಭ್ಯಂತರ ಬಾಹ್ಯಮೆಂಬೆರಡುಂ ತೆಱದ ಪರಿಗ್ರಹಮನೀಡಾಡಿ ಪ್ರಾಣಸಂಯಮ ಮಿಂದ್ರಿಯಸಂಯಮಮೆಂಬೆರಡುಂ ತೆಱದ ಸಂಯಮಮಂ ತಾಳ್ದಿ ಅನಶನಾದ ಮೋದರ್ಯ ವೃತ್ತಿಪರಿಸಂಖ್ಯಾನ ರಸಪರಿತ್ಯಾಗ ವಿವಿಕ್ತಶಯನಾಸನ ಕಾಯಕ್ಲೇಶ ಪ್ರಾಯಶ್ಚಿತ್ತ ವಿನಯ ವೈಯಾಪೃತ್ಯ ಸ್ವಾಧ್ಯಾಯ ವ್ಯುತ್ಸರ್ಗ ಧ್ಯಾನಮೆಂಬ ಪನ್ನೆರಡುಂ ತೆಱದ ತಪಂಗಳ್ ಸಲೆ ಶುದ್ಧಪರಿಣಾಮಂ ನಿಲೆ ಕರ್ಮ ನಿರ್ಜರೆಯಕ್ಕುಂ ಮತ್ತಂ

ಮ || ಅಱಿವಂ ತಾಳ್ದಿರವುಂ ಹಿತಾಭಿರುಚಿಯುಂ ಸಾವಧ್ಯದೂರತ್ವಮುಂ
ಪೆಱರ್ಗೊಳ್ಪುಂ ತನಗೊಳ್ಪುಮಪ್ಪ ನುಡಿಯುಂ ಸಂಸಾರಭೀರುತ್ವಮುಂ
ನೆಱೆದೊಪ್ಪಿರ್ದ ಮಹಾತಪಃಪ್ರಸರಮುಂದುಷ್ಕರ್ಮಬಂಧಗಳಂ
ಪಱಿದೀಡಾಡುಗುಮೊಯ್ಗುಮಕ್ಷಯ ಸುಖಾವಾಸಕ್ಕೆ ಕೇಳ್ ಜೀವನೇ ೨

ವ || ಬಿನ್ನಣಮುಂ ಸತ್ವಮುಮುಳ್ಳವಂಗಿದಿರ್ಚಿದವರ್ ಸೋಲ್ವಂತೆಯಱಿವುಂ ತತ್ವರುಚಿಯುಂ ನೆಗೞ್ತೆಯುಮುಳ್ಳಂಗೆ ಕರ್ಮಂಗಳ್ ಪೋಕುಂ

ಕಂ || ಮುಳಿಸು ಕಡುಲೋಭಮುಕ್ಕೆವ
ಮಳವಲ್ಲದ ಮಾನಗರ್ವಮೆಂಬ ಕಷಾಯಂ
ಗಳ ಬೇರನೊಡನೆ ಕಿೞ್ತೊಡೆ
ಗಳಿಯಿಸದೇಕಿರ್ಕುಮಯ್ಯ ಕರ್ಮಸಮೂಹಂ ೩

ವ || ಕೋಮಳಮಪ್ಪ ಸಸಿಯೆಡೆಯ ಕಸಮಂ ಕಳೆದೊಡಂ ಭವ್ಯನಪ್ಪನ ಬಗೆಯೊಳಗಣಕಷಾಯಂಗಳಂ ಕಳೆದೊಡಮಾ ಕೆಯ್ಯ ಫಲದೊಳಾತನೆಡಱ್ ಪೋಕುಮೀ ಗುಣದೊಳೀತನ ಕರ್ಮದ ತೊಡರ್ಪು ಪೋಕುಂ ಮತ್ತಮೆಂತೆಂಬಾ

ಉ || ಏನುಮನೊಲ್ಲೆನೀ ಭವದ ಮಚ್ಚುಗಳಂ ನುತ ಸಚ್ಚರಿತ್ರಸಂ
ತಾನಮನಪ್ಪುಕೆಯ್ವೆನಱಿವುಳ್ಳ ಮಹಾತಪದಿಂದಮಾದನು
ಷ್ಠಾನದೊಳಿರ್ಪೆನೆಂದು ನೆಗೞ್ವಂದಮನೆಯ್ದುವ ಮೆಚ್ಚಿನಿಂ ಶುಭ
ಧ್ಯಾನದ ಕಿರ್ಚಿನಿಂ ದುರಿತಬಂಧನಮಿಂಧನದಂತೆ ಬೇಯದೇ ೪

ವ || ಗಾಳಿಯೊಳ್ ಕೂಡಿರ್ದ ಕಿಚ್ಚು ಒಟ್ಟಿರ್ದ ಪುಳ್ಳಿಯಂ ಸುಡದಿರ್ಕುಮೆ? ಚಾರಿತ್ರಮುಳ್ಳ ತಪದೊಳ್ ಪುಟ್ಟಿದ ಶುಭಧ್ಯಾನಂ ಪತ್ತಿರ್ದ ಕರ್ಮಂಗಳಂ ಕಿಡಿಸದಿರ್ಕುಮೆ?

ಕಂ || ತೊಱೆದು ಪರಿಗ್ರಹಮಂ ಸಲೆ
ನಿಱಿಸೆ ಸಮತ್ವ ಪ್ರಭಾವಮಂ ತನ್ನೊಳಗಂ
ಪೊಱಗುಮನೊಳ್ಳಿತ್ತಾರ
ಯ್ದಱಿದಾಱಿದ ಬಗೆಯಿನಘಕುಳಂ ಗಳಿಯಿಸುಗುಂ ೫

ವ || ಕಾಯ್ದಾಱಿದ ಪಾಲೊಳ್ ಪಿತ್ತಂ ಪೋಕುಮಱಿದಾಱಿದ ಬಗೆಯೊಳ್ ಕರ್ಮಂ ಪೋಕುಮೆಂಬುದೇಂ ಸಂದೆಯಮೆ?

ಶಾ || ಅಂತಿಂತೆನ್ನದೆ ಕೇಳಿಮೊಂದೆ ಪಡೆವಾತೆಲ್ಲಂದದಿಂ ಪ್ರಾಣಿಗ
ಳ್ಗೆಂತುಂ ದುಃಖಮನಾಗಲೀಯದಿರಿಮಂತಿರ್ದಂದು ಕರ್ಮಂಗಳಂ
ಸಂತಂ ಸಾಧಿಸಿ ಗೆಲ್ದು ಸಿದ್ಧ ಸುಖಮಂ ಕೆಯ್ಕೊಳ್ವಿರೇಂ ಕೆಟ್ಟುದೆಂ
ಬಂತಂತಿರ್ದೊಡೆ ಮುಂದೆ ಕೇಡಡಸಿದಂಗೇಗೆಯ್ದು ಮೇಗೆಯ್ವಿರೋ ೬

ವ || ಕಿರ್ಚೆೞ್ದೂಗಳ್ ಬಾವಿಯಂ ತೋಡಲುದ್ಯೋಗಂಗೆಯ್ದೊಡಂ ಸಾವಡಸಿದಾಗಳ್ ಧರ್ಮಕ್ಕೊಡರ್ಚುವೊಡಮಲ್ಲಿಗವು ದೊರೆಕೊಳ್ಳವು ಮುನ್ನಮೆ ನೆಗೞ್ವುದು

ಕಂ || ಅಱಿಯದನನಂತಭವದೊಳ್
ನೆಱೆದುಱೆ ಪೆರ್ಚಿರ್ದ ಕರ್ಮಮಂ ಸಲೆ ಮಿಕ್ಕಿ
ರ್ದಱಿವಿಂ ಗುಪ್ತಿತ್ರಯದಿಂ
ನೆಱೆದಿರ್ದಂತರ್ಮುಹೂರ್ತದಿಂ ಪಿಂಗಿಸುವರ್ ೭

ವ || ಅನಾದಿಕಾಲದೊಳನಂತಭವದೊಳ್ ಪತ್ತಿರ್ದ ಕರ್ಮಂಗಳೆಲ್ಲ ಮೇಕೆ ಪೋಕುಮೆಂಬ ಬೆರ್ಚಂ ಬಿಸುೞ್ಪುದು ಪಲವು ದೆವಸಂ ಕಡಿದು ತಂದೊಟ್ಟಿದ ಪುಳ್ಳಿಯ ರಾಶಿಯಂ ಕಿರ್ಚು ತಗುೞ್ದೊಡದೊಂದೆ ಘಳಿಗೆಯೊಳ್ ಬೇವಂತೆ ಸಮ್ಯಕ್ಚಾರಿತ್ರದೊಳ್ ಶುದ್ಧಧ್ಯಾನಂ ದೊರೆಕೊಂಡೊಡಾತಂಗಂರ್ಮುಹೂರ್ತದಿಂ ಕರ್ಮಕ್ಷಯಮಕ್ಕುಮೆಂದೊ ಡದರ್ಕೞ್ತಿವಡದೆಯುಮೊಡಂಬಡದೆಯುಮಿರ್ಪಿರೆಂಬುದೇ

ಚಂ || ಎಲೆ ಎಲೆ ಜೀವರಾಶಿಗಳಿರಾ ಮಱೆದಿನ್ನೆಗಮಿರ್ದು ಕೆಟ್ಟ ಗಾ
ವಿಲಿಕೆಯೆ ಸಾಲ್ಗುಮಿನ್ನಱಿದು ಬಂಧನಹೇತುಗಳಪ್ಪುವೆಲ್ಲಮಂ
ತೊಲಗಿಪುದಾರ್ತು ತಕ್ಕೆಡೆಯೊಳೀವುದು ಕಾವುದು ಸದ್ಗುಣಂಗಳಂ
ಸಲಿಸುವುದೀ ಮನುಷ್ಯಭವಮಂ ಪಡೆದುಂ ತಡೆದಿರ್ಪುದೊಳ್ಳಿತೇ ೮

ವ || ತೊಱೆಯಂ ಪಾಯ್ವಾತನೆನತ್ತಾನುಂ ಪಱುಗೋಲ್ ದೊರೆಕೊಂಡೊಡದಂ ಕೆಯ್ಕೊಂಡೇಱದೊಡಂ ಸುಗತಿಯಂ ಬಯಸುವವಂ ಮನುಷ್ಯಭವಂಬಡೆದಲ್ಲಿ ಗುಣಂಗಳಂ ಕೆಯ್ಕೊಂಡು ನೆಗೞದೊಡಮಾತನಾ ತಡಿಯನೆಯ್ದ ನೀತಂ ಸುಗತಿಯನೆಯ್ದನದಱಿಂ

ಕಂ || ಬೇಗಂ ಮನುಷ್ಯಜನ್ಮಂ
ಪೋಗದೆ ಕಿಡಿಸುವುದು ಕರ್ಮಮಂ ಪೋದ ಬೞಿ
ಕ್ಕೇಗೆಯ್ದುಂ ಕಿಡಿಸಲ್ ನಿಮ
ಗಾಗದು ಗಡ ಮರ್ತ್ಯಜನ್ಮಮೆನಿತಱೊಳಂ ೯

ವ || ಒಂದು ಪಾಲ ಕೊಡಂಬೆರಸು ಎಂಬತ್ತು ನಾಲ್ಕು ಲಕ್ಕೆ ಕಳ್ಳಕೊಡಂಗಳಿರ್ದಲ್ಲಿ ಜಾತ್ಯಂಧಕನ ಕೆಯ್ಯಿಂ ಮಾಣಿಕಮೊಂದನೀಡಾಡಿದೊಡದು ಕಾಕತಾಳನ್ಯಾಯದಿಂ ಪಾಲಕೊಡದೊಳ್ ಬೀೞ್ವಂತೆ ಜೀವನುಮೆಂಬತ್ತುನಾಲ್ಕು ಲಕ್ಕೆ ಯೋನಿಮುಖಂಗಳೊಳೊಂದು ಬಾರಿ ಮನುಷ್ಯಯೋನಿಯಲ್ಲಿ ಪುಟ್ಟಿಯುಮದಂ ವಿತೆಗಳೆದೊಡೆ ಪೆಱವು ಜನ್ಮಂಗ ಳೊಳೆಲ್ಲಿಯುಮಾ ಕರ್ಮಮಂ ಕಿಡಿಸಲ್ಬಾರದು ಮೆೞ್ಪಡದಿರಿಂ

ಉ || ಬಲ್ಲಿತು ಕರ್ಮಮೇವೆನೆನಲಕ್ಕುಮೆ ಸಂಯಮಮುಂ ತಪಂ ಕರಂ
ಬಲ್ಲಿತು ಪತ್ತಿ ಪತ್ತುವಿಡದಿರ್ದೊಡೆ ನಿರ್ಜರೆಯಕ್ಕುಮೆಂತು ತ
ಳ್ವಿಲ್ಲದೆ ಕೊಳ್ವ ಕಿರ್ಚು ನದಿಪುತ್ತರೆ ನಂದುಗುಮಂತು ಮತ್ತಮಂ
ತಲ್ಲದೆಯುಂ ಕರಂ ಬಯಸಿ ಮಾೞ್ಪೊಡೆ ಕಾಯ್ಗಳೆ ಪಣ್ಗಳಾಗವೇ ೧೦

ವ || ಕೞ್ತಲೆ ಪಿರಿದೆಂದು ಕೆಮ್ಮನಿರದೆ ಸೊಡರಂ ಪೊತ್ತಿಸಿ ಬಾೞ್ತೆಯಪ್ಪ ಕಾರ್ಯಮಂ ಕೊಂಬುದು ಕರ್ಮಂ ಬಲ್ಲಿತ್ತೇಗೆಯ್ವೆನೆನ್ನದೆ ತಪಮಂ ಪೊರ್ದಿ ಸದ್ಗುಣಂಗಳಂ ಕೆಯ್ಕೊಂಡು ನೆಗೞ್ವುದು

ಕಂ || ಇದು ಭೋಜ್ಯಮಭೋಜ್ಯಮುಮೆಂ
ದಿದುವುಂ ಪ್ರತಿಯಿಟ್ಟು ನೋಡಿ ನಿರ್ವೃತಿ ದೊರೆಯೆಂ
ಬುದನಱಿದವಧಾರಿಸಿಯ
ಪ್ಪುದಱಿಂ ನಿರ್ಜರಿಸದಿರ್ಕುಮೇ ಕರ್ಮರಜಂ ೧೧

ವ || ಸಾಧ್ಯಮಸಾಧ್ಯಮೆಂಬೆರಡಱೊಳಮಸಾಧ್ಯಮಂ ಬಿಸುಟ್ಟು ಸಾಧ್ಯಮಂ ಕೆಯ್ಕೊಂಡುಜ್ಜುಗಂ ಗೆಯ್ಯೆ ಕುತ್ತಂ ಪೋಪಂತೆಯಪ್ಪುದಾಗದೆಂಬೆರಡಱೊಳಮಾಗದುದಂ ಬಿಸುಟ್ಟಪ್ಪುದನಪ್ಪುಗೆಯ್ದು ನೆಗೞೆ ಕರ್ಮಂ ಪೋಕುಮೆಂದೊಡವಾವುಮೆಂಬಿರೇ

ಚಂ || ವ್ರತನಿಯಮಸ್ಥರಾಗಿ ಬಹಿರಂಗದ ಗುಪ್ತಿಯುಮಂತರಂಗಶು
ದ್ಧತೆಯುಮಳುರ್ಕೆವೆತ್ತು ನಿಲೆ ಗೆಲ್ದು ಪರೀಷಹಮೆಲ್ಲಮಂ ಮನೋ
ಗತ ಪರಮಾತ್ಮನಾತ್ಮನೊಡಗೊಡಿರೆ ನಿಶ್ಚಳಮಪ್ಪ ಚಿತ್ತದಿಂ
ದತಿನುತಮಾಗಿ ಚಿಂತಿಸಿದೊಡೇಂ ಕಿಡವೇ ದುರಿತಪ್ರಬಂಧನಂ ೧೨

ವ || ಕೆಯ್ವಡೆದೊಕ್ಕಲ್ ಶೋಧಿಸಿ ಪದದೊಳ್ ಬಿತ್ತಿ ಬೆಳಸಂ ಕೊಳ್ವಂತೆ ಭವ್ಯನುಪ ದೇಶಂಬಡೆದು ಗುಣದೊಳ್ ನೆಗೞ್ದು ದೋಷಂಗಳಂ ಶೋಧಿಸಿ ಮನದೊಳ್ ಶುದ್ಧಧ್ಯಾನಮಂ ನಿಱಿಸಿ ಕೇಡಿಲ್ಲದೆ ಶುಭಪರಿಣಾಮದೊಳ್ ನೆಗೞ್ವುದು ಕೆಮ್ಮಗಿರ್ದು ಮುನ್ನಂ ಕೆಟ್ಟುದಿಂತಲ್ತೆ

ಕಂ || ಮೆಚ್ಚಿಂ ರಾಗದ್ವೇಷಂ
ಮೆಚ್ಚಮೆಯಿಂದಾಗೆ ಕೆಟ್ಟರೀಯೆರಡಱೊಳಂ
ನಚ್ಚುವುದಾಸೀನಂ ತಾಂ
ಪೊಚ್ಚಂ ಭೋಗದೆ ತಗುೞ್ದೊಡಘಮೞಿಯದುದೇ ೧೩

ವ || ಶತ್ರು ಮಿತ್ರರಿರ್ದ ಸಭೆಯೊಳ್ ಬವರಂ ನೀಗದು ಮಧ್ಯಸ್ಥರಿಂದಲ್ಲದೆ ರಾಗದ್ವೇಷಂಗಳುಳ್ಳ ಬಗೆಯಿಂ ಕರ್ಮಂ ಪೋಗವುಮುದಾಸೀನಭಾವದೊಳಲ್ಲದೆ

ಶಾ || ಆದಂತಕ್ಕೆನಗೆಂದು ಸೈರಿಸದೆ ನೀಂ ದುರ್ಮೋಹದಿಂದಂ ಮನಃ
ಖೇದಂ ಪೆರ್ಚಿ ಕಡಂಗಿ ನಾಡೆ ಪಡೆದಾಂ ಬೀಯಂಗಳಂ ಮಾೞ್ಪೆನೆಂ
ದಾದೀ ಭ್ರಾಂತಿಯೊಳೇನೊ ಕರ್ಚಿ ಬಸುಡಲ್ಕಾಂ ಕೊಂಡೆನೆಂಬೆಗ್ಗಿನೊಳ್
ಬೋದಂ ಮೋದಗೆಗೊಂಡುದೆಂಬ ನಗೆಯಂ ನೀಂ ಮಾಡದಿರ್ ಜೀವನೇ ೧೪

ವ || ಒರ್ವಂ ಭೌತಿಕಂ ತಿರಿಯಲ್ ಪೋದಲ್ಲಿ ಲಡ್ಡುಗೆ ದೊರೆಕೊಂಡೊಡೆ ಪಿಡಿದು ಬರುತ್ತಿದ್ದಲ್ಲಿಯೊಂದು ಲಡ್ಡುಗೆ ಕೆಯ್ಯಿಂ ಜಗುೞ್ದು ಕಿಸುಕುಳದ ಮೇಲೆ ಬಿೞ್ದೊ ಡದನೆತ್ತಿಕೊಂಡೊಡೆ ಪೆಱಗೆ ಬರ್ಪಾತಂ ಕಂಡು ಚಿಃ ಅದನೇಕೆ ಕೊಂಡಿರೆನೆ ಮಗುೞ್ದು ನೋಡಿ ಕರ್ಚಿ ಬಿಸುಡಲ್ ಕೊಂಡೆನೆಂದು ನಗಿಸುವಂತೆ ಧರ್ಮಕ್ಕೆ ಬೀಯಂಗೆಯ್ವೆನೆಂದು ಪಾಪಂಬೆರಸಿರ್ಪರ್ಥಮಂ ಪಡೆಯಲುದ್ಯೋಗಂಗೆಯ್ದುಮಱಿವುಳ್ಳವರಂ ನಗಿಸುವಂತು ನೀನೀಗಳಾರ್ತಧ್ಯಾನದಿಂ ಮೂಡಲ್ ಪೋಪ ಬಾೞ್ದೆಗೆ ಪಡುವಲ್ ಪೋಗಿ ಸೇದೆಗಿಡುವನಿತೆಯಕ್ಕುಮಂತೆ ಪಡೆವ ಸಂಕ್ಲೇಶ ಪರಿಣಾಮದೊಳೇಂ

ಕಂ || ಆಗದುದಣಮಾಗದು ಮ
ತ್ತೇಗೆಯ್ದೊಡಮಪ್ಪುದಾಗದಿರದೆಂಬೀ ಸಂ
ವೇಗಾಮೃತಮಂ ಸೇವಿಸೆ
ನೀಗದುದೇಕಯ್ಯ ಚಿಂತೆಯೆಂಬತಿವಿಷಮಂ ೧೫

ವ || ಇರುಳಪ್ಪ ಪೊೞ್ತಱೊಳ್ ಬೆಳಕುಪೋಗಿಯಲ್ಲದಿರದು ಆದಿತ್ಯೋದಯಮಪ್ಪ ಪೊೞ್ತಱೊಳ್ ಕೞ್ತಲೆ ಪೋಗಿಯಲ್ಲದಿರದಿಂತು ನಿಶ್ಚಯಮಱಿವಂತು ಕೇಡಡಸುವಾಗಳರ್ಥಂ ಪೋಗಿಯಲ್ಲದಿರದು ಪುಣ್ಯೋದಯಮಪ್ಪಂದೆಡಱ್ ಪೋಗಿಯರ್ಥಮಾಗಿಯಲ್ಲ ದಿರದೆಂಬುದಂ ನಿಶ್ಚೈಸುವುದಮೃತಸೇವನೆಯೊಳ್ ವಿಷಂ ಪುಗದಿಂತೀ ಬಗೆಯೊಳ್ ಚಿಂತಾ ದುಃಖಮಾದಾಗಳ್ ಪಾಪಮೆಂಬುದನೆ ಬಗೆಯಾ

ಚಂ || ಬಡತನದೊಂದು ದುಃಖಮನಡಂಗಿಸಲರ್ಥಮನುಂಟುಮಾಡಲೆಂ
ದೊಡರಿಸುವಾಸೆ ದುಃಖಮನೆ ಪೆರ್ಚಿಸುಗುಂ ಬಿಸಿಲೞಿದಪ್ಪುದೆಂ
ದಡವಿಯ ಬೇವ ಪೆರ್ಮರನನಾಶ್ರಯಿಸಿರ್ದೊಡೆ ತಣ್ಣಿತಕ್ಕುಮೇಂ
ತೊಡರ್ದ ವಿಮೋಹಮಂ ಪಱಿದೊಡಲ್ಲದೆ ಪೋಕುಮೆ ದುಃಖಮಾತ್ಮನೇ ೧೬

ವ || ಪರದಂ ಮಾಱುವ ಭಂಡಮಂ ಪಸರಿಸದೊಡಂ ಭವ್ಯಂ ಕರ್ಮಮಂ ಕಿಡಿಸುವ ಮಹಾವ್ರತಂಗಳಂ ತನ್ನೊಳ್ ಪಸರಿಸದೊಡಮಾತಂಗೆ ಪಣಮಾಗದೀತಂಗೆ ಗುಣಮಾಗದಿರ್ವರುಂ ಲಾಭಮಂ ಸುಖಮನೇಕಾಸೆವಡುವರಿಂತುಮಪ್ಪುದೇ

ಮ || ಇನಿದೆಂಬಯ್ ವಿಷಮಪ್ಪ ದುರ್ವ್ಯಸನಮಂ ಧರ್ಮಾಮೃತಂ ಕೈಪೆಯೆಂ
ದೆನಸುಂ ಮೆಯ್ದರಲಾಱೆ ಯಾವ ತೆಱನೋ ನಿನ್ನೀ ಮರುಳ್ಗೆಯ್ತದು
ರ್ವಿನಮಕ್ಕುಂ ಬಗೆದಾ ವಿಮೋಹವಶದಿಂ ಪೆರ್ವೈತ್ತಿಕಂಗೊಂಡೆಯಿಂ
ಜಿನವಾಕ್ಯಾಮೃತಸೇವೆಯಿಂ ಕಿಡಿಸಿದಂ ಮೆಯ್ವಟ್ಟಿರಲ್ ಜೀವನೇ ೧೭

ವ || ಪಿತ್ತಪ್ರಕೋಪಂ ಮಧುರರಸದೊಳ್ ತೀರ್ವಂತೆ ವಿಪರೀತಮಾದ ಚಿತ್ತಂ ಜಿನೇಂದ್ರಾಗ ಮದೊಳ್ ತಿಳಿಗುಮಲ್ಲಿ ತಿಳಿದಾರ್ತು ನೆಗೞೆ ಮಳಂ ಪೋಗಿ ಶುದ್ಧನಕ್ಕುಂ

ಕಂ || ಕರಮೆರ್ದೆಯೊಳ್ ಶ್ಲೇಷ್ಮಂ ಮಿ
ಕ್ಕಿರೆ ಮರ್ದಿಂ ಹರಿಸಿದಾಗಳುರದಿಂ ಮೇಗೆಂ
ತಿರೆ ಶುದ್ಧಮಂತೆ ಮನದೊಳ
ಗಿರಿಸದೆ ಬಿಸುಡಾಸೆಯಂ ಭವದ್ಗತಿ ಶುದ್ಧಂ ೧೮

ವ || ವಮನಕ್ರಿಯೆಯಿಂ ಮೇಗಣ ಶ್ಲೇಷ್ಮದೋಷಮಂ ಸೋದಿಸುವಂತೆ ನಿವೃತ್ತಿಕ್ರಿಯೆಯಿಂ ಕರ್ಮಮಂ ಕಳೆದು ಶುದ್ಧಂ ಮಾಡುಗುಂ ಬೇಗಂ ಕ್ರಿಯಾಸಹಿತನಪ್ಪುದು

ಮ || ಬೆಳಗುಂ ಬೆಂಕೆಯುಮೊಂದಿ ತನ್ನೊಳೊಡಗೂಡಿರ್ದಂದದೊಳ್ಪಿಂ ಸೊಡರ್ ಕಳೆಯುತ್ತಿರ್ಪುದು ತನ್ನ ಕಾಡಿಗೆಯನೆಂತೆಂತಲ್ಲಿ ಭವ್ಯಂ ಮಹೋ
ಜ್ವಳಮಾಗಿರ್ದಱಿತಂ ನೆಗೞ್ತೆಯೊಡಗೂಡಿರ್ದಂದು ದುಷ್ಕರ್ಮಮಂ
ಕಳೆಯುತ್ತಿರ್ಪುದು ನೆಟ್ಟನಿಂತಱಿಪೆಯುಂ ಮಾಣ್ದಿರ್ಪುದೇ ಜೀವನೇ ೧೯

ವ || ಅಂತಾ ಸೊಡರ ಬೆಳಗುಂ ಬೆಂಕೆಯುಮೋದಿ ತನ್ನೊಳಡಂಗಿರ್ದ ಕಾಡಿಗೆಯಂ ಪೊಱಮಡಿಸಿ ಕಳೆವಂತೆ ಜೀವನುಂ ತನ್ನಱಿತದಿಂ ನೆಗೞ್ತೆಯಿಂ ಕರ್ಮಮಂ ಕಳೆದುಪದೇಶಂಬಡೆವುದು ತಡೆವುದೇಕೆ?

ಕಂ || ರಾಗದ್ವೇಷಂಗಳನುೞಿ
ದಾಗಳುಮಱಿದಾರ್ತು ನೆಗೞ್ವ ತಪದೊಂದು ಮಹೋ
ದ್ಯೋಗದ ಸುಧ್ಯಾನಂ ನಿಂ
ದಾಗಡೆ ಸೋರಲ್ ತಗುಳ್ಗು ಮಘವಿಷಯಂಗಳ್ ೨೦

ವ || ಪೂರ್ವಾಹ್ನಂ ಮಧ್ಯಾಹ್ನಮೆಂಬೆರಡುಂ ಪೊೞ್ತುಗಳಂ ಕಳೆದಿೞಿಯುಂಬೊೞ್ತಱೊಳ್ ವೈದ್ಯಕ್ರಿಯೆಯಿಂ ಬೆಜ್ಜಂ ದೋಷರಕ್ತಮಂ ಕಳೆವಂತೆ ರಾಗದ್ವೇಷಮೆಂಬೆರಡುಮಂ ಕಳೆದು ಸಲ್ಲೇಖನಾಕಾಲದೊಳ್ ಶುದ್ಧಧ್ಯಾನಕ್ರಿಯೆಯಿಂ ತಪಸ್ವಿ ಕರ್ಮಕಳಂಕಪಂಕಮಂ ಕಳೆವುದಿರವೇಡಾ

ಮ || ನೆಲೆವಾೞ್ ಜೀವಧನಂ ಸುವರ್ಣನಿಕರಂ ರತ್ನವ್ರಜಂ ಧ್ಯಾನಸಂ
ಕುಲಮಿಷ್ಟರ್ ಸಹಜರ್ ಸುತರ್ ಮನಿತೆಯರ್ ತಾಯ್ ತಂದೆಯೆಂದಿಂತು ಕೇಳ್
ಪಲವುಂ ಬಂಧಪರಿಗ್ರಹಾಗ್ರವಿನಿರ್ಮುಕ್ತಂಗೆ ಚಾರಿತ್ರದೋ
ರ್ವಲಯುಕ್ತಂಗೆ ದುರಷ್ಟಕರ್ಮರಿಪುಗಳ್ ತೂಳ್ದೋಡದೇಂ ನಿಲ್ವುವೇ ೨೧

ವ || ಪೆಱರಱಿದು ತನ್ನ ಸಾಲಂಗೊಟ್ಟೊಡಂ ತಾನಱಿದು ಸಂಸಾರಮೋಹಂಗೆಟ್ಟೊಡಮಾತನ ತಗಪುಮೀತನ ಕರ್ಮದ ಬಿಗಿಪುಂ ಪತ್ತುವಿಡುಗುಮಿಂತೆಂದು ತಡೆದಿರವೇಡಾ

ಕಂ || ವರಕಾಲಲಬ್ಧಿ ದೊರೆಕೊಳೆ
ದುರಿತಂಗಳಡಂಗಿ ಬರುತುಮಿರೆಯುಂ ತಮ್ಮಿಂ
ದರಿಗಳೞಿಯಲ್ಕೆ ಬಗೆಯೆಯು
ಮಿರಲೆ ಕಿಡೆ ನೆಗೞ್ವುದಘಮನೞಿಯಲ್ ಬಗೆಯಿಂ ೨೨

ವ || ತನಗೆ ಸಾಮರ್ಥ್ಯಮುಳ್ಳಂದು ಪಗೆವನಸಿಯನಾದಂದು ಬೇಗಂ ಕಿಡಿಸದೊಡಂ ಭವ್ಯಂಗೆ ಕಾಲಲಬ್ಧಿ ದೊರೆಕೊಂಡಲ್ಲಿ ದುಷ್ಕರ್ಮಮಾಸನ್ನಮಾಗಿರೆ ಶುದ್ಧಾನುಷ್ಠಾನದೊಳ್ ನೆಗೞದೊಡಮಾತನ ಪಗೆಯುಮೀತನ ಕರ್ಮಮುಮೆಂದುಂ ಕಿಡವು ಪೆಱವು ನೆಗೞ್ತೆಯೊಳೇಂ

ಮ || ನೆಱೆದತ್ಯುಗ್ರ ತಪಂಗಳೆಂಬ ಬೆಳಗಿಂದಾ ತತ್ವಮಂ ಕಂಡು ಮ
ತ್ತಱಿದಿರ್ದಾಱಿದ ಚಿತ್ತದಿಂದಡವಿಯಂ ಪೊಕ್ಕಿರ್ದು ಕೆಲ್ಲಯ್ಸಿ ಬೆ
ೞ್ಕುಱದಿರ್ದೊಯ್ಯನೆ ಪುಲ್ಲೆಗಳ್ ಪೊಳೆವ ಕಣ್ಣಿಂ ನೋಡೆ ನಿಶ್ಚಿಂತಮೀ
ತೆಱದಾಶ್ಚರ್ಯದಿನಿರ್ದು ಪೋಗೆ ದೆವಸಂ ಕರ್ಮಂಗಳೇಂ ಪೋಗವೇ ೨೩

ವ || ಪದನಱಿದು ಕಾಸಿದ ಪಾಲೊಳ್ ಸವಿ ಪುಟ್ಟುಗುಂ ತತ್ವಮನಱಿದು ನೆಗೞ್ಚ ತಪದೊಳ್ ಧ್ಯಾನಂ ನಿಲ್ಕುಮಾ ಸವಿ ನಾಲಗೆಯನೆಯ್ದಿದೊಡಮೀ ಧ್ಯಾನಂ ಮೋಕ್ಷಮನೆಯ್ದಿದೊಡಂ ಸುಖಮಾಗದಿರ್ಕುಮೆ?

ಕಂ || ಆವೊಂಗೆ ಪುಣ್ಯ ಪಾಪಂ
ತೀವುವುದಡಗಿರ್ಕುಮಿರ್ದುದುಂ ಸೋರ್ಗುಂ ಮ
ತ್ತಾ ವಿಭು ವಿಯೋಗಿ ಮುಕ್ತಿಯು
ಮಾವಗಮಾತಂಗೆ ತಡೆಯದಿರ್ಕುಂ ಜೀವಾ ೨೪

ವ || ಉದಾರಶಕ್ತಿಯೊಳ್ ದ್ರವ್ಯಂ ಪೋಗೆ ಚಾಗಿಯಕ್ಕುಂ ತಪದ ಶಕ್ತಿಯೊಳ್ ಕರ್ಮಂ ಪೋಗೆ ಪರಮಯೋಗಿಯಕ್ಕುಮಾ ಚಾಗಿ ಪೊಗೞ್ತೆಯನೆಯ್ದುಗುಮೀ ಯೋಗಿ ಮುಕ್ತಿಯನೆಯ್ದುಗುಮೆಂಬುದಂ ಬಗೆಯದೆ ಕೆಮ್ಮನಿರ್ಪುದೆ?

ಮ || ನೆನೆದೀ ಸಂಸೃತಿಯಂದಮಂ ನಡುಗುತುಂ ಬೆೞ್ಕುರ್ತು ಮತ್ತಾವಗಂ
ಮನದೊಳ್ ಮೋಹಮನುಂಟುಮಾಡದೆ ಕರಂ ಬೇಱಾಗಿ ಮಾಡಿರ್ದ ಮ
ತ್ತನುವಂ ತಮ್ಮೊಳಡಂಗುವಂತಿರೆ ಕೞಲ್ದಿರ್ಪಂದಮಂ ಮಾಡುವಾ
ಮುನಿಪಂ ಮಾಡುಗುಮುಗ್ರ ಕರ್ಮದೞಿವಂ ತಾಂ ಮುಕ್ತಿಯೊಳ್ ಕೂಡುಗುಂ ೨೫

ವ || ಬಟ್ಟೆಯೊಳ್ ಭಯಮುಳ್ಳುದನಱಿದಂಜಿ ಕೆಯ್ದುವನೋಸರಿಸಿಕೊಂಡು ಪದುಳಿಗನಾಗಿ ನಡೆವಾತಂ ತನ್ನುದ್ದೇಶಿಸಿದೆಡೆಯಂ ಬೇಗಮೆಯ್ದುವಂತೆ ಸಂಸಾರಭಯಕ್ಕಂಜಿ ಮಹಾವ್ರತಂಗಳಂ ಕೆಯ್ಕೊಂಡು ಮೆಯ್ಯಂ ತನ್ನೊಳಡಂಗಿಸಿ ನಡೆವಾತಂ ಬೇಗಂ ಮುಕ್ತಿಯನೆಯ್ದುಗುಮೆಂಬಿದಂ ಕಂಡು ನಂಬಿರೇ

ಕಂ || ಚಾರಿತ್ರಮುಮೊಳ್ತಪಮುನು
ನೋರಂತೊಡನೊಡನೆ ಪೆರ್ಚಿ ಶುಭಪರಿಣಾಮಂ
ನೇರಿತ್ತಾಗಿರೆ ನಿಲೆ ಸಂ
ಸಾರವಿಷದ್ರುಮದ ಬೇರ್ಗಳಂ ಪಱಿಯದುವೇ ೨೬

ವ || ಚತುರಂಗಬಲಮುಂ ಬುದ್ಧಿಬಲಮುಂ ತಿಣ್ಣಮಾಗಿ ಪದುಳಮಿರ್ಪ ಮನಂ ಕೂರಿತ್ತಾಗೆ ನಡೆವಾತಂ ಪಗೆಯಂ ಗೆಲ್ವಂತೆ ಅಱಿವುಳ್ಳ ನೆಗೞ್ತೆಯುಂ ತಪಮುಂ ಪೆರ್ಚಿದಲ್ಲಿ ನಿಶ್ಚಳಮಪ್ಪ ಶುದ್ಧಧ್ಯಾನಂ ನಿಲೆ ಕರ್ಮವೈರಿಯಂ ಗೆಲ್ಗುಮೆಲೆ ಜೀವಾ ನೀನುದ್ಯೋಗಂಗೆಯ್ಯದೇಕಿರ್ಪೆಯೆಂದಿಂತವಿಪಾಕನಿರ್ಜರೆ ಸವಿಪಾಕ ನಿರ್ಜರೆಯೆಂಬೆರಡುಂ ತೆಱದ ನಿರ್ಜರೋಪಾಯಮಂ ಪೇೞ್ದು ತೋಱಿ ಕಲ್ಪಿಸಿಯುಮೇಂ ತಿಳಿಯಿರಿಂ ತಮ್ಮಿಂ ತಾಮೆ ತಿಳಿದು ಬೇಗಂ ನಿವೃತ್ತಿಗೆಯ್ದ ಮಹಾಪುರುಷರ ಕಥೆಯನಪ್ಪೊಡಂ ಕೇಳಿಮದೆಂತೆನೆ

 

ಸುವರ್ಣಭದ್ರನೆಂಬ ಖಚರನ ಕಥೆ

ಕಂ || ಭಾನುಪುರಮೆಂಬ ಪುರಮಂ
ಭೂನುತನಾಳ್ಗುಂ ಸುವರ್ಣಭದ್ರಂ ನಿಜವಿ
ಜ್ಞಾನಿ ವರದಾನಿ ಲಸದಭಿ
ಮಾನಿ ಗುಣಸ್ಥಾನಿ ಖಚರನಿಕರಾಧೀಶಂ ೨೭

ವ || ಆತಂಗೆ ನೈಸರ್ಗಿಕಮಪ್ಪ ಸಮ್ಯಗ್ದರ್ಶನ ಸಮ್ಯಜ್ಞಾನ ಸಮ್ಯಕ್ಚಾರಿತ್ರಂಗಳುದಯಮಾಗೆ ಬಂಧಹೇತುಗಳ್ ಪೋಗೆ ಪುಣ್ಯಕರ್ಮದ ಫಲಂ ಸಫಲಮಾಗನುಭವಿಸುತ್ತಿರೆ ಸುರಲೋಕದ ದೇವಂ ವಿಮಳವಾಹನನೆಂಬಂ ಸಮ್ಯಗ್ದೃಷ್ಟಿ ಚೈತ್ಯಾಲಯವಂದನಾನಿಮಿತ್ತಂ ತೊೞಲುತ್ತುಮಾ ಪೊೞಲ್ಗೆವಂದಲ್ಲಿಯ ರತ್ನರಚಿತಾತಿಶಯಮಪ್ಪ ಚೈತ್ಯಾಲಯಮಂ ಬಂದಿಸುತ್ತುಂ ಪೂಜಿಸುತ್ತುಮಿರ್ಪಲ್ಲಿ ಸುವರ್ಣಭದ್ರನುಂ ದೇವರಂ ಬಂದಿಸಲ್ ಬಂದಾ ದೇವನಂ ಕಂಡಾತನೊಳಪ್ರೀತಿಯಾಗೆ ಧರ್ಮನುರಾಗದಿಂದಾತನಂ ಬನ್ನಿ ನೀಮುಮಾಮುಂ ನಂದೀಶ್ವರದ್ವೀಪದ ಚೈತ್ಯಾಲಯಂಗಳಂ ಬಂದಿಸಿ ಬರ್ಪಮೆಂ ದೊಡಂತೆಗೆಯ್ವಮೆಂದಿರ್ವರುಂ ತಂತಮ್ಮ ವಿಮಾನಂಗಳನೇಱಿಕೊಂಡು ಪೋಗೆವೋಗೆ ಮಾನುಷೋತ್ತರಪರ್ವತದಲ್ಲಿ ಸುವರ್ಣಭದ್ರನ ವಿಮಾನಂ ಕೀಲಿಸಿದಂತೆ ಪೋಗದೆ ನಿಲೆಯಾ ದೇವನಱಿದಂತೆಂದಂ

ಚಂ || ಎಲೆ ಬಗೆಯಿಲ್ಲದೆನ್ನೊಡನೆ ತಂದೆನನಿಂದಿತ ಮಾನುಷೋತ್ತರಾ
ಚಲಮಿದು ನಿನ್ನ ಸಲ್ವಳಿಯಲ್ತು ಬರಲ್ ನಿನಗಾಗದಾಯ್ತು ನಿ
ರ್ಮಲಗುಣರತ್ನ ಮುಕ್ತಿಪದಭಕ್ತ ಕಳಂಕವಿರಕ್ತ ನೀಂ ಮನಃ
ಸ್ಖಲಿತನೆಯಾಗದಿರ್ ಮಗುೞೆ ಪೋಗು ಶುಭೋದಯನಾಗು ಖೇಚರಾ ೨೮

ವ || ಎಂದಾ ದೇವಂ ಪೋಗೆಯಾಗಳ್ ಸುವರ್ಣಭದ್ರಂ ಪೋಗಲ್ ಪಡೆಯದ ಸಿಗ್ಗಿನೊಳಂ ಬಗೆಯದೆ ಬಂದೆಗ್ಗಿನೊಳಂ ತನಗೆ ವೈರಾಗ್ಯಂ ಪುಟ್ಟೆ ಪೊೞಲ್ಗೆ ಪೋಗಲೊಲ್ಲದೆ ಚಂಪಾಗಿರಿಯ ಕೆಲದ ವಿಶಾಲೆಯೆಂಬ ತೊಱೆಯ ತಡಿಗೆ ಬಂದು ವಿಮಾನಮಂ ಬಿಸುಟ್ಟು ನಿರ್ಜಂತುಕ ಪ್ರದೇಶದೊಳಿರ್ದುಭಯ ಪರಿಗ್ರಹನಿವೃತ್ತಿಗೆಯ್ದು ನಮಸ್ಸಿದ್ಧೇಭ್ಯಃ ಎಂದು ಪಂಚಮುಷ್ಟಿಯಿಂ ಕುಂತಳಮಂ ಪಱಿದೀಡಾಡಿ ಸಕಳ ವ್ರತಿಯಾಗಿರ್ದದಲ್ಲಿಯೆ ತಾಂ ಪ್ರತಿಮಾಯೋಗದೊಳಿರ್ಪನ್ನೆಗಂ

ಕಂ || ಅವರ ಕುಲಕ್ಕೆ ಹಿತಾರ್ಥ
ಪ್ರವರ ಗುಣಂ ಮಾಣಿಭದ್ರನೆಂಬಂ ದೇವಂ
ಪ್ರವಿದಿತ ಸುವರ್ಣಭದ್ರನ
ನವಧಾರಿಸಿ ಮಿತ್ರನೀಗಳಿಂತಾಗಿರ್ದಂ ೨೯

ವ || ಎಂದು ನೋಡಿ ಮಾನಭಂಗದೇವದೊಳಂ ತಾನೆ ದೀಕ್ಷೆಗೊಂಡಿರ್ದನೆಂಬುದನಱಿ ದಾಯಿರವಿನೊಳ್ ಪದುಳನೊ ಪದುಳನಲ್ಲನೊ ಪರೀಕ್ಷಿಸುವೆನೆಂದು ಬಂದು ವಿಗುರ್ವಣೆಯೊಳೆಂತಪ್ಪುಪಸರ್ಗಂಗಳಂ ಮಾಡಿದಪನೆಂದೊಡೆ

ಕಂ || ಸರಸಿಜಮುಖಿಯೊರ್ವಳ್ ತ
ಸ್ಕರರಿಂ ಕೋೞ್ಪಟ್ಟು ನಾಡೆ ಕಾಣ್ಗೆಟ್ಟು ಭಯ
ಜ್ವರದ ನಡುಕದೊಳೆ ಮುನಿಪತಿ
ಯರ ಕಾಳ್ಗೆಱಗಲ್ಕೆ ಪೋಗಿ ಶರಣೆಂದೆಂಗುಂ ೩೦

ವ || ಆನಪ್ಪೊಡೆ ರಾಜಪುತ್ರಿಯೆಮೆಮ್ಮ ವರೆನ್ನಂ ಧರ್ಮಮನಱಿದವರ್ಗಲ್ಲದೆ ಕುಡೆವೆಂದಿರ್ದೀಗಳಿಂ ತೊಂದಾ ನಾಡೊಳೊಯ್ದು ಕುಡುವೆವೆಂದೆನ್ನನೊಯ್ದು ತರ್ಪಲ್ಲಿ ಕಳ್ಳರೀಯಡವಿಯೊಳಾಱಡಿ ಗೊಂಡೊಡೆಮ್ಮ ವರೆಲ್ಲಂ ಸತ್ತು ಕೆಟ್ಟು ಯಥಾಯಥಮಾದೊಡಮಾನೊರ್ವಳೆ ಬರ್ದುಂಕಿ ಪೞುವಿನೊಳ್ ಪೊಲಗೆಟ್ಟು ತೊೞಲುತ್ತುಂ ಬಂದು ನಿಮ್ಮಂ ಕಂಡೆಮನಥೆ ಯೆನೆನ್ನನೊಳಕೊಳ್ವುದು ನಿಮಗೆ ಬೆಸಕೆಯ್ದು ಬಾೞ್ವೆಮೆಂದು ಕರುಣಸ್ವರದೊಳಂ ಶೃಂಗಾರವಿಕಾರದೊಳಂ ನಾಡೆಯುಂ ಕಾಡೆಯುಮಾ ಮುನಿಯ ಚಿತ್ತಂ ಚಳಿಯಿಸಿದಿರೆ ಕರ್ಮಂ ಗೞಿಯಿಸುತ್ತಿರಲನ್ನೆವರಮಾ ದೇವನಾಕೆಯಾಣ್ಮರ ರೂಪುಗೊಂಡು ಮುನಿದು ಬಂದು

ಕಂ || ಓಡಿದೊಡೆನ್ನೀ ವಧುವಂ
ಕಾಡೊಳಗತಿಭಯದೆ ಬಂದಳಂ ನೀನಳಿಪಿಂ
ಕೂಡಿರ್ದ ಫಲಮನಾನಿರ
ದೂಡುವೆನೆಂದೆಯ್ದೆವಂದು ನಿಮಿರ್ದಿಱಿವಾಗಳ್ ೩೧

ವ || ಆಕೆ ಬೇಗಂ ಬಂದಿಱಿವನ ಕೆಯ್ಯಂ ಪಿಡಿದೆಂಗುಮಾಂ ಪೊಲ್ಲೆನಲ್ಲೆನಿವರಂ ಮಾನ್ಯರಂ ನೀಂ ಪರೀಕ್ಷಿಸದೆ ಕೊಲ್ಲದಿರೆಂದೊಡಿಱಿವುದುಮನುೞಿದು ನೀಂ ಪೊಲ್ಲೆಯಲ್ತೆಯೆಂದೊಡೆ ಸೂರುಳೆಂದೊಡಿವರಿಂದಗ್ಗಳಮಾರುಮಿಲ್ಲಮೆಂದೊಡಿವರಂ ನಂಬೆನೆಂದೊಡೆ ಋಷಿಯರಡಿಯಾಣೆಯೆಂದೊಡಾತನಿಂತೆಂದಂ

ಕಂ || ಏನೋ ಪೇೞಿಮಿದೀಗಳ್
ಮೌನಂಗೊಂಡಿರ್ದನೆಂದೊಡೇನೊಳ್ಳಿದನೇ
ಏನೆಂಬೆಯೀತನಿಂ ಮ
ತ್ತಾ ನಿಂದ ಮಹೋಗ್ರತಾಪಸಂ ಲೇಸಲ್ತೇ ೩೨

ವ || ಎಂದಿಂತವರಂ ನಿರಾಕರಿಸುತ್ತುಂ ಪರಸಮಯದ ತಾಪಸರಂ ಪೊಗೞುತ್ತು ಮೆನ್ನೆಂದುದ ನೆಂಬೆಯಪ್ಪೊಡಾ ಮಹಾತಪಸ್ವಿಯಡಿಯಾಣೆಯೆಂದೊಡಾ ತಾಪಸರಡಿಯದಾಗಳ್ ಭಸ್ಮಮಾಗಿರ್ದೊಡದಂ ಕಂಡಿನ್ನರಾಗವೇಡಾ ತಪಸ್ವಿಗಳೆಂದವರಂ ಪೊಗೞ್ದುಮಿವರಂ ತೆಗೞ್ದುಂ ನಾನಾ ವಿಧದಿಂ ದಂಡಿಸುವೆನೆಂದಿರ್ಪನ್ನೆಗಂ

ಕಂ || ತಡೆಯದೆ ತಳ್ತೊಂದೊಂದಱೊ
ಳೊಡನೊಡನೊಗೆವುರಿಯ ಬಂಬಲಿಂ ಕಾೞ್ಕಿರ್ಚೆ
ೞ್ದೆಡೆಯುಡುಗದೆ ಬಳಸಿ ತಗು
ಳ್ದೊಡಮಾ ಮುನಿಪತಿಯ ಚಿತ್ತಮದಿರದು ಮತ್ತಂ ೩೩

ವ || ಅಂತಪ್ಪಗ್ನಿಭಯದೊಳಂ ಚಿತ್ತಮದಿರದೆ ಕರ್ಮಮದಿರುತ್ತಿರೆಯಾಗಳ್ ಬಟ್ಟೆವೋಪರಂತಾಗಿ ಬಂದು ಬೆಳಗಿನೊಳಾ ಋಷಿಯರಂ ಕಂಡು ಕಿರ್ಚಂ ನದಿಪುತ್ತು ಮಿರೆಯವರ್ ತಾಯ್ವಿರಂದದೊಳೊರ್ವಳುಮೊರ್ವಳ್ ಪೆಂಡತಿಯಂದದೊಳಮೊರ್ವಂ ಮಗನಾದಂತಾಗಿಯುಂ ವಿಗುರ್ವಿಸಿ ಭಟಾರರ ಕಾಲಂ ಪತ್ತಿಯೞುತ್ತಿರ್ಪನ್ನೆಗಮೊಡನೆ ವಂದವರ್ ನಿಮ್ಮ ರಸುವರಂ ಕಂಡಿರೆ ಆವಿಂ ಪೋದಪ್ಪೆವೆಂದವರ್ ಪೋದಿಂ ಬೞಿಯಂ ಮತ್ತಮೆನಿತಾನುಂ ಸ್ನೇಹಬಂಧಗಳಂ ತೋಱಿ ದುಃಖಂಗೆಯ್ಯುತ್ತಿರೆ ಕಳ್ಳರ್ ಬಂದು

ಕಂ || ಆ ಮುನಿಯ ನೋಡೆ ನೋಡ
ಲ್ಕೇಮಾತೆಂದವರ್ಗಳುಟ್ಟುದಂ ಮೇಲುದುಮಂ
ತಾಮೆೞೆದುಕೊಂಡು ಪಿರಿದುಂ
ತಾಮಸದಿಂ ಬಯ್ದು ಪೊಯ್ದು ಪಿಡಿದೆೞೆದುಯ್ವರ್ ೩೪

ವ || ಅಂತವರನೆೞೆದುಕೊಂಡುಯ್ವಾಗಳೊಂದೆಡೆಯೊಳೊಂದು ಕಾಡಾನೆ ಬಂದೆೞ್ಪಟ್ಟೆ ಕಳ್ಳರುಮವರುಮೋರೊರ್ವರೊಳ್ ನೆರೆಯದೋಡಿಪೋದಲ್ಲಿಯಾ ಕೂಸೊಂದೆಯಂತಂತೆ ಬಂದು ಋಷಿಯರ ಕಾಲಮೊದಲೊಳ್ ಬಿೞ್ದೞುತ್ತಿರ್ಪನ್ನೆಗಮೊಂದು ಪಾವು ಬಂದಾ ಕೂಸಂ ಕೊಂಡೊಡವರ ಮುಂದಾ ಕೂಸುಂ ಮಿಡುಮಿಡುಕಾಡುತ್ತುಂ ಬಿೞ್ದು ಸತ್ತಾಗಳ್

ಕುಂ || ಆ ಪಾವು ಪೋಗದೆಯ್ತಂ
ದಾ ಪರಮ ತಪೋಧನರೊಡನಡರ್ದು ತಳ್ತಿ
ರ್ದಾ ಪದದೊಳ್ ವರಮುಕ್ತಿ
ಶ್ರೀಪದಮನೆ ಬಗೆಗುಮಹಿಯನೆನಸುಂ ಬಗೆಯಂ ೩೫

ವ || ಆಗಳುಮವರಬ್ಬೆಯುಮಾ ಭಯದೊಳ್ ಮಗುೞ್ದುಮವರಿರ್ದಲ್ಲಿಗೆ ವಂದು ಮೊಮ್ಮನ ಪೆಣನನೆತ್ತಿಕೊಂಡುಮವರ ಮೊಗಮಂ ನೋಡಿ ಮಗನೇ ನಿನ್ನಿಂದೆ ಕೆಟ್ಟೆಂ ಮತ್ತೆ ನಿನ್ನ ಮಗನಂ ನಡಪಿ ಬಾೞ್ವೆನಪ್ಪೊಡೀತನುಮಂ ಪಾವು ಕೊಳೆ ಸತ್ತನಿನ್ನೇವಾೞ್ವೆ ನೆಂದು ಪುಯ್ಯಲಿಟ್ಟೊಳಱಿಯೞುವಾಗಳಾಕೆಯಂ ಪುಲಿ ಪಾಯ್ದವರ ಮುಂದೊಂದು ಭಾಗಮುೞಿಯೆ ತಿಂದು ಪೋಯ್ತಂತೆಯವರ ಪೆಂಡತಿಯಪ್ಪಾಕೆ ಬಂದತ್ತೆಯ ಪೆಣನುಮಂ ಕಂಡು ಮೂರ್ಛೆವೋಗಿ ಬಿೞ್ದೆೞ್ಚತ್ತು ಮಗನ ಪೆಣನನೆತ್ತಿಕೊಂಡವರತ್ತಲ್ ಕೆಯ್ಯಂ ನೀಡಿ

ಕಂ || ಹಾಯೆನ್ನನೆಂತು ಕೊಲ್ವ್ಯೆ
ಹಾಯೆನ್ನಂ ಕೊಂದೊಡೆಂತು ಸುಗತಿಗೆ ಸಲ್ವೈ
ಹಾಯೆನ್ನನಿದೇಕಳುರ್ವೈ
ಹಾಯೆನ್ನನಿದೇಕೆ ಬಿಸುಟು ದುರ್ಗತಿಗಿೞಿವೈ ೩೬

ಹಾಯೆನ್ನನೇಕೆ ತೊಱೆವೈ
ಹಾಯೆನ್ನನಿದೇಕೆ ತೊಱೆದು ಪೞಿಯಂ ಬೆಱೆವೈ
ಹಾಯೆನ್ನನೇಕೆ ಸುಡುವೈ
ಹಾಯೆನ್ನಯ ಬೇರೊಳೇಕೆ ಕುಡುಗೋಲಿಡುವೈ ೩೭

ವ || ಇನ್ನೆನ್ನ ನೋವುಮಂ ನಿನ್ನ ಮಗನ ಸಾವುಮಂ ಬಗೆಯದೆ ತಪಂಗೆಯ್ದೊಡೀ ತಪದೊಳಂ ನಿನಗೆ ದುರ್ಗತಿಯಲ್ಲದೆ ಸುಗತಿಯಾಗದೆನೆಯುಂ ಕೇಳದಂತಿರ್ದೊಡಕ್ಕುಮಾದೊಡಂ ನಿನಗೆ ಬೊಮ್ಮೇತಿಯಾಗೆ ಸಾವೆನೆಂದವರ ಕಾಣ್ಬಲ್ಲಿಯೊಂದು ಮರದೊಳ್ ಬಳ್ಳಿಯಂ ಕಟ್ಟಿ ಕೊರಲೊಳ್ ಸುತ್ತಿ ನೇಲ್ದು ಸತ್ತಳಿಂತು ಬಂಧುವಿಯೋಗಂಗಳನಿತುಮವರ ಮನಮ ನೆನಸುಂ ತಳರ್ಚಲಾರ್ತುವಿಲ್ಲ ಮತ್ತಂ

ಕಂ || ಕರಿಯವು ಪಿರಿಯವು ಪವಣಿಸ
ಲರಿಯವು ಬಹುವಿಧದಿನಾದ ಕಟ್ಟಿಱುಪೆ ತಗು
ಳ್ದಿರದಡಿಯಿಂದಡರ್ದು ಸಿರಂ
ಬರೆಗಂ ಮುಸುಱಿರ್ದು ಕಡಿಯೆಯುಂ ಸೈರಿಸಿದಂ ೩೮

ಒಡನಡಿಯಿಂದಾ ಮಸ್ತಕ
ದೆಡೆವರೆಗಂ ಜೇನನೊೞವುಗಳ್ ಪಾಯ್ದುಂ ತಗು
ಳ್ದೆಡೆವಿಡದೂಱುತ್ತಿರೆಯುಂ
ದೃಢಮಾಗಿರ್ದತ್ತು ಚಿತ್ತಮಾ ಮುನಿಪತಿಯಾ ೩೯

ವ || ಅದಲ್ಲದೆಯುಂ

ಕಂ || ಅಳುರ್ದೊಗೆವುರಿನಾಲಗೆಗಳ
ಬಳಗಂಗಳ ಕೆದಱಿ ಮಿಸುಪ ಕೆಂಡಂಗಳ ಗೊಂ
ದಳವುಂ ವಿಷದುರುಳಿಯ ಗೊಂ
ದಳವುಂ ಮಿಕ್ಕಿರ್ದು ಮಿಡಿವ ಕೆಂದೇೞ್ ಪಲವುಂ ೪೦

ವ || ಅವಂತು ತಮ್ಮಂ ಕಡಿಯೆ ತಾಂ ದುರಿತವೃಕ್ಷದ ಬೇರಂ ಧರ್ಮಧ್ಯಾನಮೆಂಬ ಕುಠಾರದಿಂ ಕಡಿಯುತ್ತಿರೆ ಮತ್ತಮಿನ್ನುಮೆಂತಪ್ಪುಪಸರ್ಗಂಗಳಂ ಮಾಡಿದಪ್ಪನೆಂದೊಡೆ

ಕಂ || ಸಿಡಿಲುಂ ಮಿಂಚುಂ ಮೊೞಗುಂ
ಕಡುಗಾಳಿಯುಮೊದವಿದೈಕಿಲುಂ ಬೆರಸಿ ತಗು
ಳ್ದೆಡೆವಿಡದೆ ಪೊಯ್ವವೋಲಂ
ತಡಸಿ ಕರಂ ಕೊಳ್ವ ಮೞೆಯನೆನಸುಂ ಬಗೆಯಂ ೪೧

ವ || ಅಂತು ಬಗೆಯದಿರ್ದುದಂ ಕಂಡು ಮತ್ತೆಯುಂ ಮಾಣದೆ

ಕಂ || ತರತರದೆ ನೆಗೆದು ಬೇಗಂ
ನೊರೆವೆರಸೊದೊಂದನಟ್ಟುತುಂ ಬಂದು ಕರಂ
ತೆರೆ ಪೊಯ್ಯೆ ಮಸಗಿ ತೊಱೆ ಕಾ
ೞ್ಪುರಮಾಗಿಲೆ ಬಂದವುಂಕೆಯುಂ ಮುನಿಪತಿಯುಂ ೪೨

ವ || ಅದರ್ಕಮಂತೞ್ಕಾಡದಿರೆ

ಕಂ || ಕಡುಗಾಳಿಯ ಪೊಯ್ಲಿಂದಂ
ತಡೆಯದೆ ಬೇರ್ವೆರಸು ಕಿೞ್ತು ಪೆರ್ಮರಂಗಳ್ ಬಂ
ದೊಡನೊಡನೆ ಮೇಗೆ ಪಲವುಂ
ಕೆಡೆದಿರೆಯುಂ ಧ್ಯಾನಮಚಲಿತಂ ತನ್ಮುನಿಯಾ ೪೩

ವ || ಅಂತು ಪರಿಣಾಮಂ ತೊಲಗದಿರ್ದುದನಱಿದು ಮತ್ತಮಾರಯ್ವೆನೆಂದು

ಕಂ || ಕೆಂಡಂಗಳನುಗುೞುತ್ತುಂ
ಖಂಡಂಗಳನರಿದು ತಿನಲೆ ಕೂರ್ಗತ್ತಿಗೆಯಂ
ಕೊಂಡದ್ಭುತ ರಾಕ್ಷಸಿಯರ
ತಂಡಂ ಬರೆ ಮಂದರಾದ್ರಿಗೆಣೆಯಾಯ್ತು ಮನಂ ೪೪

ವ || ಅಂತಗುರ್ವಾಗೆ ವಿಗುರ್ವಿಸಿದ ವಿಗುರ್ವಣೆಗೞ್ಕದಿರ್ದುದಂಕಂಡು ಮತ್ತಿಂದ್ರಂ ಮಚ್ಚಿ ತನ್ನಿಂದ್ರನಟ್ಟಿದಂ ಬನ್ನಿಮೀ ವಿಮಾನಮನೇಱಿಮೆಂದು

ಕಂ || ಅನುಪಮ ವಿಮಾನಮೊಂದಂ
ವಿನಯದಿನವಟಯ್ಸಿ ಮುಂದೆ ಬಂದಿರ್ದ ಸುರರ್
ನಿನಗೆ ಬೞಿಸಂದೆವೆನೆಯುಂ
ಮುನಿ ಕುರುಡಂ ಕಿವುಡನಂತೆ ಕಾಡಂ ಕೇಳಂ ೪೫

ವ || ಅಂತತಿಸ್ನೇಹದ ಮೋಹದ ಭಯದ ನಯದ ತಮಗೂನದ ಕರಮಪಮಾನದ ನೋವಿನ ಸಾವಿನ ಕಾರಣಂಗಳನುಂಟುಮಾಡಿ

ಕಂ || ಎಂತುಂ ಸೈರಿಸಲಾಗೆಂ
ಬಂತಾಗೆ ಪರಾಭವಕ್ಕೆ ಮುಂತಾಗೆ ಗುಣ
ಕ್ಕಿಂತಾಗೆ ಬಂದ ಪದಿನಾ
ಲ್ಕುಂ ತೆಱದುಪಸರ್ಗಮೆಲ್ಲಮಂ ಮುನಿ ಗೆಲ್ದಂ ೪೬

ವ || ಅಂತು ಗೆಲ್ದ ಗೆಲ್ಲದೊಳಂ ದ್ವಾದಶಾನುಪ್ರೇಕ್ಷಾದ್ಯನುಪಮ ಧರ್ಮಧ್ಯಾನದೊಳ್ ಮುನ್ನಮೆ ದೇಶನಿರ್ಜರೆಯಾಗುತ್ತುಂ ಬಂದು ಶುಕ್ಲಧ್ಯಾನಂ ಸಂಪೂರ್ಣತೆಯೊಳ್ ಸಕಲ ಕರ್ಮನಿರ್ಜರೆಯಾಗಿ ಕೇವಲಜ್ಞಾನಮೊಗೆದಾಗಳ್ ವಂದನಾಭಕ್ತಿಗೆ ಚತುರ್ನಿಕಾಯಾಮರದೇವರ್ಕಳ್ ಬಂದು ಬಲಗೊಂಡರ್ಚಿಸಿ ಪೊಡವಡುತ್ತಮಿಂತೆಂದು ಸ್ತುತಿಯಿಸಿದರ್

ರಗಳೆ || ಜಯ ವಿಬುಧಪತಿವಂದ್ಯ-ಜಯ ವಿಳಸದಭಿನಂದ್ಯ ೧
ಜಯ ಕರ್ನಾನಿರ್ನಾಶ-ಜಯ ಮುಕ್ತಿ ಪದವೀಶ ೨
ಜಯ ದುಷ್ಟಮಳವಿಳಯ-ಜಯ ವಿಪುಳ ಸುಖನಿಳಯ ೩
ಜಯ ಶಿಷ್ಯಗುಣನೂತ- ಜಯ ಭವ್ಯಜನಪೂತ ೪
ಜಯ ಪರಮಪದರಾಜ-ಜಯ ಲೋಕವಿಭ್ರಾಜ ೫
ಜಯ ಗುಣಗಣಾಭರಣ-ಜಯ ದುರಿತಗಣ ಹರಣ ೬
ಜಯ ಸರ್ವಗುಣಮೂರ್ತಿ-ಜಯ ಧವಳತರಕೀರ್ತಿ ೭
ಜಯ ದೋಷ ಭಯರಹಿತ- ಜಯ ಪರಮಪದ ಸಹಿತ ೮
ಜಯ ಭುವನ ನುತ ಶೌರ್ಯ-ಜಯ ವಿಗತ ಮಳಕಾರ್ಯ ೯
ಜಯ ವಿಶ್ವವರ ಬೋಧ-ಜಯ ವಿದಿತ ನಿಷ್‌ಕ್ರೋಧ ೧೦
ಜಯ ಶುಭದ ಪದಕಮಳ-ಜಯ ಸಕಳ ಜಗದಮಳ ೧೧
ಜಯ ಸತತ ಸಂಶುದ್ಧ-ಜಯ ಜೀವಹಿತಸಿದ್ಧ ೧೨ ೪೭

ಕಂ || ಸುರರೀ ತೆಱದಿಂ ಸ್ತುತಿಯಿಸು
ತಿರೆ ವಿನಯದೆ ಬಂದು ಮಾಣಿಭದ್ರಂ ಬೇಗಂ
ಕರಯುಗಮಂ ಮುಗಿದಾಗಳ್
ಪರಮೇಶ್ವರನಡಿಗೆ ಬಾಗಿ ಪೊಡೆವಡುತಿರ್ದಂ ೪೮

ವ || ಅಂತು ಸುವರ್ಣಭದ್ರಸ್ವಾಮಿ ತನಗೆ ತಾನೇ ದೀಕ್ಷೆಗೆಯ್ದೊಂದೆ ದೆವಸದೊಳುಪಸರ್ಗಂ ಗಳುಮಂ ಸೈರಿಸಿರ್ದು ಗೆಲ್ದು ಶುಭಧ್ಯಾನದಿಂ ಕರ್ಮಕಳಂಕಮಂ ನಿರ್ಜರಿಸಿ ಕೇವಳಿಯಾಗಿ ಕೆಲವು ದೆವಸದಿಂ ಮುಕ್ತಿಯನೆಯ್ದಿದನೆಂಬ ಕಥೆಯನಪ್ಪೊಡಂ ನೀಂ ಕೇಳ್ದೆೞ್ತಿವಡಲಾಗದೆ

ಮ || ಮಳವಿಧ್ವಂಸನಕಾರ್ಯಮಂ ನೆಗೞದಿಂ ನಿಮ್ಮಿರ್ಪ ಪಾಂಗೇನೊ ದು
ರ್ಮಳನಾಗಿರ್ದೊಡಮೆಂತು ಭೇದಿಸುಗುಮೆಂದಿರ್ಪುದೇ ಬೇಡದಂ
ಕಳೆಯಿಂ ಮೋಹಮನಿಕ್ಕು ಮಿಕ್ಕು ತಪಮಂ ಕೆಯ್ಕೊಂಡು ಸುಜ್ಞಾನದಿಂ
ತಿಳಿದಿರ್ದಾಱಿದ ಚಿತ್ತಮೊಂದೆ ದುರಿತಪ್ರಧ್ವಂಸಮಂ ಮಾಡದೇ ೪೯

ಗದ್ಯ || ಇದು ಜಿನಶಾಸನಪ್ರಭಾಸನ ಶೀಲೋದಿತ ವಿದಿತ ಬಂಧುವರ್ಮ ನಿರ್ಮಿತಮಪ್ಪ ಜೀವಸಂಬೋಧನಾ ಗ್ರಂಥಾವತಾರದೊಳ್ ನಿರ್ಜರಾನುಪ್ರೇಕ್ಷಾ ನಿರೂಪಣಂ ಸುವರ್ಣಭದ್ರ ಕಥಾವರ್ಣನಂ

ದಶಮಾಧಿಕಾರಂ