೧೨. ಧರ್ಮಾನುಪ್ರೇಕ್ಷೆ

ಕಂ || ಧರ್ಮಮನಾದಿಯಿನೊದವಿದ
ಕರ್ಮದ ಕೇಡಿಂಗೆ ಮೂಲಮದಱಿಂ ಜೀವ
ಕ್ಕಾರ್ಮಂ ಪೆಱದಾವುದೊ ಸಾ
ಸಿರ್ಮಡಿಯಾಗೊದವಿ ಸುಖಮನೀಗುಂ ಕಾಗುಂ ೧

ವ || ಬೆಳಸನಾಸೆವಡುವಂಗಾರಂಬಮೆ ಮೂಲಂ ಸುಖಮನಾಸೆವಡುವಂಗೆ ಧರ್ಮಮೆ ಮೂಲಮದು ತಾಂ

ಮ || ಎರಡುಂ ಮಾೞ್ಕೆಯ ಧರ್ಮಮಕ್ಕುಮದಱೊಳ್ ಮತ್ತಾರುಮಂತಾವುದಂ
ಭರದಿಂ ಕೆಯ್ಕೊಳಲಾರ್ಕುಮಂತದನೆ ತಾಂ ಕೆಯ್ಕೊಂಡು ಪೊಣ್ದೆಯ್ದೆ ಬಿ
ತ್ತರಿಸುತ್ತಿರ್ಪುದು ಕೆಮ್ಮನಿರ್ಪುದು ಕರಂ ಚೆಲ್ವಲ್ತು ಕರ್ಮಾರಿಯಂ
ನಿರಿವುದ್ಯೋಗಮದೀ ನಿಯೋಗಮೆನೆಯುಂ ಕೆಯ್ಕೊಳ್ಳದೇಕಿರ್ಪಿರೋ ೨

ವ || ಎರಡುಂ ಮಾೞ್ಕೆಯ ಧರ್ಮಮಾವುವೆಂದೊಡೆ ದಾನಂ ಪೂಜೆ ಶೀಲಂ ಉಪವಾಸಮೆಂಬೀ ನಾಲ್ಕುಂ ತೆಱದ ಶ್ರಾವಕಧರ್ಮಂ ಮತ್ತಮುತ್ತ ಮಕ್ಷಮಾಮಾರ್ದವಾರ್ಜವ ಸತ್ಯ ಶೌಚಸಂಯಮ ತಪಸ್ತ್ಯಾಗಾಕಿಂಚಿನ್ಯ ಬ್ರಹ್ಮಚರ್ಯಮೆಂದಿಂತು ದಶವಿಧಂ ಯತಿಧರ್ಮ ಮಂತೆರಡುಂ ಧರ್ಮಂಗಳೊಳಾವುದನಾರ್ಪನಿತು ಕೆಯ್ಕೊಂಡು ನೆಗೞ್ದೊಡಲ್ಲದೆ ಕರ್ಮಕ್ಷಯಂಗೆಯ್ಯಲುಂ ಸುಖದೊಳ್ ನಿಲಲುಂ ಕೂಡದು ಮಾಣ್ದಿರ್ಪ ಕಾರಣಮೇನೊ

ಕಂ || ಕಿಡುವ ಕಸವರಮನೆಂತುಂ
ಕಿಡುವೊಡಲಂ ಧರ್ಮದೊಳ್ ತಗುಳ್ಚಿದೊಡೆಂತುಂ
ಕಿಡದ ಗತಿಯಕ್ಕುಮೆಂದೊಡೆ
ಕಡೆಗಣಿಪುದೆ ಕುಡದೆ ಕೊಂಡ ಲೆಕ್ಕಂ ಕಾಣಾ ೩

ವ || ತೌಡಿನ ಮಾಱೊಳ್ ಮಾಣಿಕಂ ದೊರೆಕೊಂಡೊಡಂ ಕೆಮ್ಮಗೆ ಸಾರ್ದು ಬಂದ ನಿಧಿಯೆನ್ನದೆ ಮಾಱೆಂದು ಬಗೆವಾ

ಶಾ || ಪತ್ತಿರ್ದೀಗಡಿನುಳ್ಳ ಸೈಪನಱಿವೋ ಮುಂಗೆಯ್ದ ಸದ್ಧರ್ಮದಿಂ
ಪೆತ್ತೈ ಮತ್ತೆ ಬಿಸುೞ್ಪೆ ಧರ್ಮಮನದೇಂ ಮೇಗಣ್ಗೆ ಕೇಡೞ್ತಿಯೋ
ಬಿತ್ತಿಂದಂ ಬೆಳೆವೊಕ್ಕಲೆಂತು ಮಗುೞ್ದುಂ ಮುಂದಣ್ಗೆ ಧಾನ್ಯಂಗೊಳಲ್
ಬಿತ್ತಂ ಬಯ್ತಿಡುವಂತೆ ಧರ್ಮಮನೆ ನೀಂ ಕೆಯ್ಗಾವುದಿಂ ಜೀವನೇ ೪

ವ || ಅಂತೆ ಆರಂಬಂಗೆಯ್ವಾತಂ ಬಿತ್ತಿನ ಫಲಮನುಣುತಿರ್ದ ಮುಂದಣ್ಗೆ ಬಿತ್ತಂ ಬಯ್ತಂಗೆಯ್ಯದೊಡಂ ಪರತ್ರೆಯಂ ಬಯಸುವಾತಂ ಧರ್ಮದ ಫಲಮನುಣುತಿರ್ದು ಮತ್ತಂ ಧರ್ಮಂಗೆಯ್ಯದೊಡಮಾತಂಗೆ ಬೆಳಸನಾಸೆವಡಲುಮೀತಂಗೆ ಗತಿಯನಾಸೆವಡಲುಂ ಬಾರದುದಱಿಂ ಧರ್ಮಮನೆಂತುಮುದಾಸೀನಂಗೆಯ್ಯದಿರ್

ಕಂ || ಧರ್ಮಮನೆ ಕೆಡಿಸಿ ಮೇಗಿನಿ
ಸಾರ್ಮಮಿದೆಂದೞಿಸುಖಕ್ಕೆ ನೀಂ ಮೋಹಿಸುವೈ
ಪೆರ್ಮರನಂ ಕಡಿದೋವದೆ
ನಿರ್ಮೂಲಂ ಮಾಡಿ ಪಣ್ದಿನಲ್ ಬಯಸುವವೋಲ್ ೫

ವ || ಪಿರಿದಪ್ಪ ಮರನಂ ಕಡಿದು ಪಣ್ದಿಂಬನಂತೆ ಧರ್ಮಮನೞಿದು ಮೆಯ್ಗಿಂಬಂ ಮಾಡುವವನಂ ಮರುಳನಲ್ಲದೇನೆಂಬುದಂತೇೞಿಸಿ ನೆಗೞ್ವಂತು ಧರ್ಮಮೇಂ ಕೇವಳಮೆ? ಲೋಕದೊಳೀವ ವಸ್ತುಗಳೊಳಂ ಕಲ್ಪವೃಕ್ಷಮುಂ ಚಿಂತಾಮಣಿಯುಮಗ್ಗಳಮೆಂಬಿವುಂ ಧರ್ಮದೊಳ್ ಸಮನೆ?

ಉ || ಆ ಮಹನೀಯ ಕಲ್ಪತರು ಬೇಡಿದೊಡಲ್ಲದೀಯದಂತೆ ಚಿಂ
ತಾಮಣಿ ಚಿಂತೆಯಂ ಬರಿಸದೀಯದಿವರ್ಕವು ದೋಷಮಲ್ಲವೇ
ಪ್ರೇಮದೆ ಬಂದು ಬೇಡಿಸದೆ ಚಿಂತಿಸಲೀಯದೆ ತಾನೆ ಮೊಕ್ಕಳಂ
ಕಾಮಿತ ವಸ್ತುವಂ ಕುಡುವ ಧರ್ಮದಿನಗ್ಗಳಮುಂಟೆ ಲೋಕದೊಳ್ ೬

ವ || ತನ್ನನಾಸೆವಟ್ಟು ಪೊರ್ದಿದರಂ ಕರ್ಮರಾಜನಿಂ ಕಾಡಲೀಯದೆ ಕಾವ ಪೆಂಪುಂ ಸುಖಮುಮಂ ಬೇಡಲೀಯದೀವ ಚಾಗದಳವುಂ ಧರ್ಮದೊಳಲ್ಲದೆ ಪೆಱತಱೊಳ್ ಕಾಣಲಕ್ಕುಮೆ? ನಿಮಗಿಂತಪ್ಪಗ್ಗಳಮಪ್ಪ ಧರ್ಮಮೆಂಬ ಸದ್ವಸ್ತು ದೊರೆಕೊಂಡೊಡದನೇಳಿಸುವಿರೆಂಬುದೇಕೆ?

ಕಂ || ನಿರತಿಶಯಮಪ್ಪ ಧರ್ಮಂ
ಕರಮಿೞಿದಱಿನೊದವಿ ಬಂದು ನಿನಗೀ ಮೆಯ್ಯೊಳ್
ದೊರೆಕೊಳ್ವೊಡೆ ನಿಧಿ ಮನೆಯೊಳ್
ದೊರೆಕೊಂಡೊಡೆ ನೆಗೞದಗುಲದಿರ್ಪುದೆ ಮರುಳೇ ೭

ವ || ಪೆಱರೆನ್ನಂ ಮರುಳೆಂದೊಡೆ ಮೇಗಾನದಱ ಬೇವಸಕ್ಕಾಱೆನೆಂದು ಬೞಲ್ದಿರ್ಪಂತು ಧರ್ಮಮೇನರಿದೇ?

ಮ || ಒಡೆಯಂಗಪ್ಪುದು ಕೇಳ ತನ್ನೊಡಮೆಯಂ ಧರ್ಮಕ್ಕೆ ಕೂರ್ತೀವೋಡಂ
ಬಡವಂಗಪ್ಪುದು ಮೆಯ್ಯನೊಕ್ಕು ಗುಣಮಂ ತರ್ಕೈಸುವಂಗೊಳ್ಳಿತಂ
ನುಡಿವಂಗಪ್ಪುದಿನಿತ್ತುಮಿಲ್ಲದೊಡೆ ಮೇಣಾ ಚಿತ್ತಸಂಶುದ್ಧಿಯಂ
ಪಡೆಯಲ್ಕಪ್ಪುದು ಕಾಣ ಧರ್ಮಮರಿದಲ್ತೇಕಂಜುವೈ ಜೀವನೇ ೮

ವ || ಈ ವೃತ್ತದರ್ಥಮೆಂತೆಂದೊಡೆ ತಕ್ಕೆಡೆಯನಱಿದೀಯಲಾರ್ಪೊಡೊಡೆಯಂಗಪ್ಪುದು ಒಡಮೆಯಿಲ್ಲದೊಡಂ ಗುಣಂಗಳ್ಗೆ ಮೆಯ್ಯನೊಡಂಬಡಿಸಿ ನೆಗೞಲಾರ್ಪೊಡೆ ಬಡವಂಗಪ್ಪುದುಮಿನಿತಲ್ಲದೊಡಂ ಮನಮಂ ಶುದ್ಧಿಮಾಡಿ ಶ್ರೀಭಗವದರ್ಹತ್ಪರಮೇಶ್ವರನ ಶ್ರೀಪಾದಪದ್ಮಂಗಳನಾವಾಗಳುಂ ನೆನೆಯುತಿರ್ಪುದು ಧರ್ಮಮರಿದೆಂದು ಬೆದರದಿರ್

ಕಂ || ಎನಿತಾನುಂ ಕಾಲಂ ಪೆಱ
ರ್ಗನುವಶನಾಗಿರ್ದು ನಮೆದು ನಡುಗಿದೊಡಮೇಂ
ನಿನಗೆ ಸುಖಮುಂಟೆ ಧರ್ಮದೊ
ಳಿನಿಸೊಳಪೊಕ್ಕನಿತಱಿಂದೆ ಸುಖಮಿರಲಾಗಾ ೯

ವ || ಪೆಱರನೋಲಗಿಸಿ ಸುಖಮಂ ಪಡೆವೆಯಪ್ಪೊಡೆ ನಿನ್ನನೀಗಳಾಳ್ವರಸರ್ಕಳೂರನುಮುದಾರ ಶಕ್ತಿಹೀನರುಮಲ್ಲದಿಲ್ಲ ಬೆಸನಪ್ಪೊಡೇೞಿದಿಕೆಯುಂ ಪಾಪಮುಮಲ್ಲದಿಲ್ಲ ಮುಂತಾಗಿಯುಮಾ ಕ್ಲೇಶದೊಳೆ ಮುನ್ನುಳ್ಳುದುಮಂ ಮೆಯ್ಯುಮಂ ತವೆ ಪಲಕಾಲಂ ನಮೆದೊಡಲ್ಲದಿಲ್ಲಮೆತ್ತಾನುಂ ಪಡೆದೊಡಂ ಸ್ವಲ್ಪಮಲ್ಲದಿಲ್ಲ ಕೇಳಿಮಿಂ ಧರ್ಮಾರ್ಥಿಯಪ್ಪಾತನೋಲಗದಳವಂ ತನ್ನಾಳ್ದನಾವನೊಂದೊಡೆ ಸಕಳ ಜಗತ್ಸ್ವಾಮಿಯಪ್ಪ ಸರ್ವಜ್ಞಂ ಅವನ ಬೆಸದ ನಿಯೋಗಮಾವುದೆಂಬಾ ಪೆಂಪಿನೊಳ್ ಕೂಡಿದ ಧರ್ಮದ ನೆಗೞ್ತೆಕ್ಲೇಶದಾಪತ್ತುಮಾವುದೆಂದೊಡೆ ತ್ರಿಭುವನಸ್ವಾಮಿಯ ಶ್ರೀಪಾದಂಗಳಂ ನೆನೆದನಿತೆ ಅಷ್ಟವಿಧಕರ್ಮಂಗಳೆನಿತು ಕಾಲದಿಂ ಫಲಮಕ್ಕುಮೆಂದೊಡೆ ಶುಕ್ಲಧ್ಯಾನಂ ನಿಶ್ಚಲಮಾದನಿತು ಪೊೞ್ತೆ ಪಡೆವುದಾವುದೆಂದೊಡೆ ಶಾಶ್ವತಮಪ್ಪ ಸಿದ್ಧಸುಖಮಿಂತೆರಡ ಱೊಳಾವುದುೞಿ ಗುಮೆಂಬುದಂ ನೀಮಱಿದು ನೆಗೞಿಂ

ಮ || ಕುಲಮುಂ ರೂಪಮುಮಾಯುವಾರ್ಪು ಗುಣಮುಂ ಸೌಭಾಗ್ಯಮುಂಭಾಗ್ಯಮುಂ
ಬಲಮುಂ ತೇಜಮುಮಾಜ್ಞೆಯುಂ ವಿನಯಮುಂ ಚಾತುರ್ಯಮುಂ ಶೌರ್ಯಮುಂ
ನೆಲೆಯುಂ ವಿದ್ಯೆಗಳುಂ ಪ್ರಭುತ್ವಗುಣಮುಂ ಸೌಂದರ್ಯಮುಂ ಧೈರ್ಯಮುಂ
ವಿಲಸದ್ಧರ್ಮದಿನಕ್ಕುಮೆಂದು ಬಗೆ ನೀಂ ಧರ್ಮಕ್ಕೆ ಗೆಂಟಪ್ಪುದೇ ೧೦

ವ || ಇಂತು ನಿನ್ನ ಮಚ್ಚಾದುವೆಲ್ಲಂ ಧರ್ಮದಿಂದಕ್ಕುಮೆಂದೊಡೆ ಅದರ್ಕೊಲ್ಲದನುಂ ರಸಾಯನಂ ದೊರೆಕೊಂಡೆಡದನೊಲ್ಲದನುಮಿರ್ವರುಮಱಿವರಲ್ಲಮೆಂತಪ್ಪ ಸುಖಮಂ ಬಯಸುವರಂತಪ್ಪ ಸುಖಮೆಲ್ಲಂ ಧರ್ಮದಿನಕ್ಕುಮಲ್ತೆ

ಕಂ || ಕಡುವೇಟದ ಪೆಂಡಿರೊಳೋ
ತೊಡನಿರವುಂ ರಸ ರಸಾಯನಂಗಳ ಪಡೆಪುಂ
ತಡೆಯದೆ ಧರ್ಮದಿನಪ್ಪುದು
ಗಡಮಲ್ಲದೆ ಬಯಸಿದಂದವೇಂ ಕೂಡುಗುಮೇ ೧೧

ವ || ಪಯಣಂಬೋಪಾತಂ ಸಂಬಳಮಿಲ್ಲದುಣಲ್ ಬಯಸಿದೊಡಂ ಕಾಮಿಯಪ್ಪಾತಂ ತನ್ನ ಗೆಯ್ದ ಧರ್ಮಮಿಲ್ಲದೆ ಸುಖಮಂ ಬಯಸಿದೊಡಮಂತಿರ್ವರ ಬಯಕೆಯುಮೇಕೆ ಕೂಡುಗುಂ

ಶಾ || ಇಂದ್ರತ್ವಂ ಬಲದೇವರಾದಿ ಖಚರೇಂದ್ರೋತ್ಪತ್ತಿ ಷಟ್ಖಂಡಭೂ
ಪೇಂದ್ರತ್ವಂ ನಿರುಜತ್ವಮಂತೆ ವಿಜಿಗೀಷುತ್ವಂ ತಪೋಯೋಗಯೂ
ಥೇಂದ್ರತ್ವಂ ಬಹುಶಾಸ್ತ್ರಪಾರಗಗುಣಂ ತ್ರೈಲೋಕ್ಯಸಂಪೂಜ್ಯ ಜೈ
ನೇಂದ್ರ ಶ್ರೀಪದಮೆಂಬಿನಿತ್ತುಮೊಗೆಗುಂ ಸದ್ಧರ್ಮದಿಂ ಜೀವನೇ ೧೨

ವ || ಇಂತಪ್ಪ ಪದವಿಯಂ ಮಾೞ್ಪ ಧರ್ಮಮನೆಂತುಂ ಕೆಯ್ಕೊಳ್ವುದದೆಂತೆನೆ ಪಯನಪ್ಪ ಪಸುವಂ ತಣಿಪಿ ನಯದಿಂ ಕಱೆದು ಪಾಲಂ ಕೊಳ್ವಂತೆ ಭವ್ಯನುಂ ಗುಣವಂತರಪ್ಪಾಚಾರ್ಯರು ವಿನಯದಿಂ ಪೊರ್ದಿ ಧರ್ಮಮಂ ಕೇಳ್ದು ಬ್ರತಮಂ ಕೆಯ್ಕೊಳ್ವುದಂತು ಕೊಂಡ ಪಾಲನೊಲೆಯಮೇಲಿಟ್ಟು ಕಿಡಲೀಯದೆ ಕಾಸಿಯಾಱಿಸುವಂತೆ ಶ್ರಾವಕಧರ್ಮಮಂ ಕೆಯ್ಕೊಂಡಬೞಿಕ್ಕೆ ದೀಕ್ಷೆಯೊಳ್ ಮೆಯ್ಯಂ ತಗುಳ್ಚಿ ವಿಷಯಕಷಾಯಂಗಳಡಗುವಂತು ತಪಂಗೆಯ್ದು ಚಿತ್ತಮನಾಱಿಸುವುದಾ ಕಾಯ್ದಾಱಿದ ಪಾಲೊಳೆ ತುಪ್ಪಮಾಗದೆಂದು ಹೆಪ್ಪನೆಱೆದು ಬಯ್ತಿಟ್ಟು, ಮಱುದೆವಸಂ ಕಡೆವ ಮಡಕೆಯೊಳ್ ಸುರಿವಂತೆ ಸಂಯಮತನುಮೀ ಭವದೊಳ್ ಮುಕ್ತಿಯಾಗದೆಂದು ಮನಮಿಕ್ಕಿರದೆ ಶುಭಪರಿಣಾಮದೊಳ್ ಮುಡಿಪಿ ದೇವಲೋಕದೊಳ್ ಪುಟ್ಟಿ ಮಗುೞ್ದು ಬಂದೀ ಮನುಷ್ಯರೊಳುತ್ತಮನಾಗಿ ಪುಟ್ಟುಗುಮಂತಾ ಮಡಕೆಯೊಳ್ ಸುರಿದ ಮೊಸರೊಳ್ ಕಡೆಗೋಲನಿಕ್ಕಿ ಸುತ್ತಿರ್ದ ನೇಣಿನೆರಡುಂ ಕಡೆಯಂ ಪಿಡಿದು ಕಡೆಯೆ ಬೆಣ್ಣೆಯಪ್ಪಂತೆ ಮನುಷ್ಯೋತ್ತಮನಾಗಿ ಪುಟ್ಟಿದಾತಂ ಮಹಾವ್ರತಮಂ ಕೆಯ್ಕೊಂಡು ತಪಮುಂ ಚಾರಿತ್ರಮುಮೆಂಬೆರಡಱೊಳಮುತ್ತರೋತ್ತರಂ ನೆಗೞ್ದು ಋದ್ಧಿಪ್ರಾಪ್ತನಪ್ಪುದಾ ಬೆಣ್ಣೆಯಂ ಪದದೊಳ್ ಕಾಸಿದಾಗಳ್ ನೊರೆಯುಂ ಗಸಟುಂ ಪತ್ತುವಿಟ್ಟು ಪೋಗಿ ತಿಳಿದು ಕಂಪುಮಿಂಪುಮುಳ್ಳ ತುಪ್ಪಮಪ್ಪಂತೆ ಋದ್ಧಿಪ್ರಾಪ್ತನಾದ ಮುನಿಯುಂ ತನ್ನ ಶುಕ್ಲಧ್ಯಾನದೊಳ್ ಶುಭಾಶುಭ ಕರ್ಮಂಗಳಂ ಪಱಿಪಟ್ಟುಪೋಗಿರೆ ಜ್ಞಾನಾದಿ ಗುಣಂಗಳೊಳ್ ಕೂಡಿ ಪರಮಾತ್ಮನಕ್ಕುಮಿಂತು

ಕಂ || ಪಡೆವರ್ ಸುಖಮಂ ಧರ್ಮಮ
ನೊಡರಿಸೆ ಪಾಪದೊಳೆ ದುಃಖಮೆಂಬುದನಿದನಿಂ
ತೆಡೆವಿಡದೆ ಲೋಕಮಱಿವುದು
ಬಿಡದದನಾಮಱಿಪೆ ಕೇಳಿರೆಮ್ಮೊಳ್ ಛಲಮೇ ೧೩

ವ || ಪಿತ್ತವ್ಯಾಧಿಯುಳ್ಳಾತಂ ಪಾಲೊಳ್ ಸವಿಯುಳ್ಳುದನಱಿದು ಮರ್ದೆಂದು ಕುಡಿಸುವಾಗಳ್ ರುಚಿಗೆಟ್ಟೊಲ್ಲದೆ ಮಾಣ್ಬಂ ನೀಮುಂ ಧರ್ಮದೊಳ್ ಸುಖಮಪ್ಪುದನಱಿದುಮಱಿವರ್ ಕಲ್ಪಿಸುವಾಗಳ್ ಮನಂಗೆಟ್ಟೊಲ್ಲದೆ ಮಾಣ್ಬಿರಾ ಪಿತ್ತವ್ಯಾಧಿಯುಳ್ಳಾತಂಗೆ ಬೆಜ್ಜರೊಳ್ ಛಲಮೋ? ನಿಮಗಮಱಿವುಳ್ಳವರೊಳ್ ಛಲಮೋ? ಬೇಡ ನೀಮೆಂತುಂ ಧರ್ಮದೊಳ್ ನೆಗೞ್ವುದು

ಚಂ || ನೆರಪುವುದೊಪ್ಪೆ ಪುಣ್ಯಮನದುಳ್ಳೊಡೆ ಬರ್ಪುಪಸರ್ಗಮೆಲ್ಲಮಂ
ಬರಲಣಮೀಗುಮೇ ಬಿಡದೆ ಪೋಗು ಮನಂಗೊಳೆ ಕಾಗು ಚೆಲ್ವಿನಿಂ
ದಿರಿಸುಗುಮೊಳ್ಳಿತಂ ಬರಿಸುಗುಂ ರವಿ ಬೆಟ್ಟಿದನಾರ್ಗಮೇಕೆ ತಾ
ವರೆಯನಲುರ್ಚುಗುಂ ಸುಕೃತಮುಳ್ಳರನಾರ್ ಕಿಡಿಸಲ್ ಸಮರ್ಥರೋ ೧೪

ವ || ಈ ಜಗದೊಳುಳ್ಳ ಜೀವಂಗಳೆಲ್ಲಮಂ ನೋಯಿಸುವಾದಿತ್ಯನ ಕಿರಣಂಗಳ ಬೆಂಕೆ ತಾವರೆಯಂ ನೋಯಿಸಲಾರ್ತುದಿಲ್ಲಂತುಟವಱ ಪುಣ್ಯಸಾಮರ್ಥ್ಯಮಿರ್ಪುದಱಿಂ ಸುಕೃತಮುಳ್ಳರನಾರುಂ ಕಿಡಿಸಲ್ಬಾರದೆಂಬುದನಱಿದು ಧರ್ಮದೊಳ್ ನೆಗೞ್ವುದು

ಕಂ || ಭ್ರಾಂತೇಂ ಸುಖಿಗಂ ದುಃಖಿಗ
ಮೆಂತುಂ ಧರ್ಮದೊಳೆ ನೆಗೞವೇೞ್ವುದು ಸುಖಮ
ತ್ಯಂತಂ ಪೆರ್ಚಲ್ ಕಡು ದುಃ
ಖಂ ತನಗಂ ಪೊರ್ದದಿರಲೆ ಪೇೞ್ವುದಱಿಂದಂ ೧೫

ವ || ಒಡೆಯಂ ದ್ರವ್ಯಮಂ ಕಾಯಲೆವೇೞ್ಪುದು ಬಡವಂ ತನ್ನೆಡಱಂ ನೀಗಲೇವೇೞ್ಪುದದಱಿಂ ನೀಮಿರ್ವರುಂ ಬುದ್ಧಿಯೊಡೆಯರಾಗಲೆವೇೞ್ಪುದಂತೆ ಸುಖಿಯುಮನಂತಸುಖಮನೆ ಪೆರ್ಚಿಸಲ್ವೇೞ್ಪುದು ದುಃಖಿಯುಂ ಮೇಗೆ ದುಃಖ ಮನಾಗಲೀಯದಿರವೇೞ್ಪುದಂತಿರ್ವರುಂ ಧರ್ಮಮಂ ನೆಗೞವೇೞ್ಪುದೇಕೆ ತಡೆದಿರ್ಪಿರ್

ಚಂ || ಎನಿತೆನಿತಗ್ಗಳಂ ನೆಗೞ್ಗುಮುತ್ತಮಧರ್ಮದೊಳಾತ್ಮಶುದ್ಧಿಯಿಂ
ದನಿತನಿತೀ ಜಗತ್ರಯದೊಳಗ್ಗಳಮಕ್ಕುಮನೂನಭಾವದಿಂ
ದೆನುತಿರೆ ನಂಬದಿರ್ಪಿರವು ಕಾಣದ ಶಂಕೆಯಿನಾದುದಪ್ಪೊಡೀ
ವಿನುತ ಗುಣಾಢ್ಯರಂ ವಿನಯದಿ‌ಲ್ಲಿಯೆ ಪೂಜಿಸಿ ಕಂಡು ನಂಬಿರೇ ೧೬

ವ || ಧರ್ಮದೊಳ್ ಫಲಮುಳ್ಳುದಂ ಕಾಣಲಾಗದೆಂಬಾಶಂಕೆಯುಳ್ಳೊಡೆಂತುಂ ಮೞೆಯ ಬರವಂ ತಂಗಾಳಿ ಬೀಸಲಱಿವಂತೆ ಧರ್ಮದ ಫಲಮನಿಲ್ಲಿಯೆ ಧರ್ಮಾರ್ಥಿಗಳಂ ಲೋಕಂ ಪೂಜಿಸುವುದಱಿನಿಲ್ಲಿಯೆ ಕಾಣಲ್ಬಂದುದಿಂತನುಮಾನದೊಳಂ ಪ್ರತ್ಯಕ್ಷಫಲ ಮುಂಟೆಂಬುದಂ ನಿಶ್ಚೈಸುವುದು

ಕಂ || ಒಡಮೆ ಪುರಾಕೃತ ಪುಣ್ಯದಿ
ನೆಡಱುಂ ದುಷ್ಕೃತದಿನಕ್ಕುಮದಱಿಂದೆಡಱಂ
ಕಿಡಿಸುವ ಪುಣ್ಯದ ಪೆರ್ಚಂ
ಪಡೆವರ್ಗುಪದೇಶಮಲ್ತೆ ಸೈಪುಂ ಕೇಡುಂ ೧೭

ವ || ಆರಂಭದ ಫಲಮುಂಟೆಂಬುದಂ ಪಡೆದ ಧ್ಯಾನರಾಶಿ ಪೇೞ್ವಂತೆ ಧರ್ಮದ ಫಲಮನೆಯ್ದಿದೀ ಸಂಪತ್ತೆ ಪೇೞ್ದಪ್ಪುದದಱೊಳ್ ನೀಂ ಬಗೆದು ನೋಡಿ ನೆಗೞ್ವುದೆಂಬೀಯೋಜೆಯನೀ ನೆಗೞ್ತೆಯುಂ ಪೆಱವುೞಿಯಕ್ಕುಮೆಂದು ಭ್ರಾಂತಿಸದಿರು

ಚಂ || ಪರಮತದತ್ತ ಪೊಕ್ಕಱಿವನೊಕ್ಕು ವಿಶುದ್ಧ ತಪೋಗ್ನಿಯಿಂದೆ ಬೆಂ
ದರೆಗರಿದಿರ್ದಲಾಗಿ ಕಡುಬೆಂದೊಡೆ ಬೂದಿಯುಮಾಗಿ ಮಾದುದೇ
ವಿರಿದೊ ಜಿನೋಪದೇಶ ಸಚರಿತ್ರಮಹಾಗ್ನಿಯೊಳೊಂದಿದೊಂದು ಭಾ
ಸುರತರಮಾಗಿ ಕಿರ್ಚಿೞಿದ ಮಾಣಿಕದಂತಿರೆ ಶುದ್ಧಮಾಗಿರೇ ೧೮

ವ || ಮಾಣಿಕಚಟ್ಟಂ ಮಾಣಿಕಮನಗ್ನಿಕಾರ್ಯದಿಂ ಶುದ್ಧಂ ಮಾಡುಗುಂ ಪೆಱವು ಮಾಡುಗುಮೆ? ಜಿನೇಂದ್ರಧರ್ಮಮೆ ಕರ್ಮಬಂಧನಮಪ್ಪ ಜೀವನಂ ಶುದ್ಧಮಂ ಮಾಡುಗುಂ ಪೆಱವು ಧರ್ಮಂಗಳ್ ಮಾಡಲಕ್ಕುಮೆ?

ಕಂ || ಪುಟ್ಟುಂ ಸ್ಥಿತಿಯುಂ ಕೇಡುಂ
ನೆಟ್ಟನೆವೊಡನೊಂದೆ ವಸ್ತು ನೆಗೞ್ದಪುದೆಂ
ದಟ್ಟುಂಬರಿಗೊಳೆ ನಂಬಿಯೆ
ಕೆಟ್ಟುದಱಿಂ ಸಾಲ್ಗುಮುೞಿಯಿಮನ್ಯರ ಮತಮಂ ೧೯

ವ || ಒಂದೆ ವಸ್ತುವಿನೊಳೊಂದು ಪರ್ಯಾಯಮುತ್ಪತ್ತಿಯಾದಾಗಳೊಂದು ಪರ್ಯಾಯಂ ನಾಶಮಕ್ಕುಮಾ ಪುಟ್ಟಿದ ಪರ್ಯಾಯಂ ನಿಲ್ವ ಕಾಲಂ ಸ್ಥಿತಿಯಕ್ಕುಮಿಂತೊಂದಱೊಳುತ್ಪತ್ತಿ ಸ್ಥಿತಿ ಪ್ರಳಯಂಗಳ್ ನೆಗೞ್ಗುಮೆಂದಿಂತು ವಿಚಾರಾಸಹಮಪ್ಪ ಧರ್ಮಮಂ ಕೇಳ್ದು ಕೆಟ್ಟ ಕೇಡಿನ್ನುಂ ಸಾಲದೆ?

ಉ || ಅನ್ಯ ಮತಂಗಳೇವುವವು ಪೊಲ್ಲವು ಸಲ್ಲವು ನಿಲ್ಲವೆಂದು ನೀಂ
ಮಾನ್ಯ ಲಸಜ್ಜಿನೇಂದ್ರಮತದೊಳ್ ನುತದೊಳ್ ಹಿತದೊಳ್ ತಗುಳ್ದು ಸಾ
ಮಾನ್ಯ ದಯಾಮಯಪ್ರಸರದೊಳ್ ಜಿನಧರ್ಮದೊಳೞ್ತಿವಟ್ಟುದು
ರ್ಮಾನ್ಯ ಗತಿಪ್ರಕಾರಿಯನಘಾರಿಯನೋಡಿಸು ಭವ್ಯಜೀವನೇ ೨೦

ವ || ಆನೆಗಂಡಿಡಿಯನಱಸುವಂತೆ ದಯಾಮೂಲಮಪ್ಪ ಜಿನೇಂದ್ರಧರ್ಮಮಂ ಕಂಡು ಪೆಱವಂ ನೀನಱಸದಿರು ಮತ್ತ ಮೆಂತಾನುಮೀಗಡಿನ ಸುಖಮಿರ್ಪುದಂ ಧರ್ಮಂ ಬರಿಸುವುದೆಂದು ನಂಬುವುದು ಬೆರ್ಚಲ್ವೇಡಾ

ಕಂ || ಅನುಭವಿಪ ಸುಖದಿನಾಗದು
ಘನ ದುರಿತಂ ಧರ್ಮಮೞಿದೊಡಕ್ಕುಂ ಪೆಱತೇ
ನಿನಿದುಣಲೞ್ಕಮೆಯಕ್ಕುಮೆ
ತನುವಿಂಗೆ ವಿರುದ್ಧಮುಂಡೊಡೞ್ಕಮೆಯಕ್ಕುಂ ೨೧

ವ || ಇನಿದುಂಡೊಡೞ್ಕಮೆಯಕ್ಕುಮೆ? ವಿರುದ್ಧಾಹಾರಮನಧಿಕಮುಂಡೊಡೞ್ಕ ಮೆಯಕ್ಕುಂ ಪೆಱವು ಜೀವಂಗಳಂ ನೋಯಿಸದೆ ಸುಖಮನನುಭವಿಸೆ ಪಾಪಮಕ್ಕುಮೆಂಬುದುಂಟೆ ? ಧರ್ಮಮನೞಿದೊಡಕ್ಕುಮದಂೞ್ಕದೆ ಧರ್ಮಧರನಪ್ಪುದು ಧರ್ಮದಿನಲ್ಲದೆ ಪುಣ್ಯಮಾಗದು ಪುಣ್ಯಮಿಲ್ಲದಂಗೆನಿ ತುದ್ಯೋಗಂಗೆಯ್ದೊಡಮೇವುದೊ

ಮ || ಕುಡಿಯಲ್ ನೀರ್ಗಗುೞುತ್ತುಮೊರ್ವನಡಿಯೊಳ್ ಪರ್ವಿರ್ದ ಕಲ್ಗಂಡೊಡಂ
ಬಿಡದೆಲ್ಲಂದದೊಳಂ ತಗುಳ್ದೊಡೆದು ಪಾರಾಳಂಬರಂ ತೋಡಿದಂ
ಗಡಿಯೊಳ್ ಪುಟ್ಟಿದುದುಪ್ಪುನೀರ್ ಕಿಱಿದದುಂ ಪೂತಿಕ್ರಿಮಿಚ್ಛನ್ನಮಾ
ಗಡೆ ಬತ್ತಿತ್ತದು ಪುಣ್ಯಮಿಲ್ಲದ ನರಂಗುದ್ಯೋಗದಿಂದಕ್ಕುಮೇ ೨೨

ವ || ಆಯುವಿಲ್ಲದವಂತೆ ಬೆಜ್ಜುಗೆಯ್ದೊಡಂ ಪುಣ್ಯಮಿಲ್ಲದವನುದ್ಯೋಗಂಗೆಯ್ದೊಡಮಾತನ
ಬೆಜ್ಜಿನೊಳಮೀತನುದ್ಯೋಗದೊಳಂ ಫಲಮಿಲ್ಲಂ

ಕಂ || ಏನೀ ಬೆಸನದ ಮೋಹಂ
ಸಾನಂದದೆ ಧರ್ಮಮೆಂಬುದೊಂದಾರವೆಯಂ
ನೀನಿಟ್ಟು ಕಾದು ಸುಖಸಂ
ತಾನಫಲಂಗಳನೆ ನಡೆದು ಸೇವಿಸಲಾಗಾ ೨೩

ವ || ಒಂದು ಸಣ್ಣ ಸವಿಯಂ ಕಂಡಾತಂ ಪಿರಿದಪ್ಪಾರವೆಯನಿಟ್ಟು ಕಾದು ಪಣ್ಗಳಂ ಸೇವಿಸುವಂತೆ ಕಿಱಿದಪ್ಪ ಬೆಸಕ್ಕಾಸೆವಡುವರ್ ಪಿರಿದಪ್ಪ ಧರ್ಮದೊಳ್ ನೆಗೞ್ದು ಮೇಗತ್ಯಂತ ಸುಖಮನನುಭವಿಸುವುದೀ ಕಜ್ಜಮನೆ ಬಗೆದು ಮನುಜಂ ಮೆಯ್ಯಂ ದ್ರವ್ಯಮುಮಂ ಧರ್ಮದೊಳ್ ತವಿಸುವುದು

ಮ || ಮಿಡಿಯಂ ಮಾಡಿ ಬೞಿಕ್ಕೆ ಪೂವಿನ ಕೞಲ್ದೊಂದಂದಮುಂ ಕಾಯಲಿ
ಟ್ಟೆಡೆಯೊಳ್ ಪಾಲಿರೆ ನೀರ ತಪ್ಪ ತವಿಲುಂ ಸಂಶುದ್ಧ ಸುಕ್ಷೇತ್ರಮ
ಪ್ಪೆಡೆಯೊಳ್ ಬಿತ್ತಿದ ಬೀಜದೊಂದು ತವಿಲುಂ ಪುಣ್ಯಾಸ್ರವಂ ಮಾಡಿತ
ಪ್ಪೊಡಲುಂ ತಕ್ಕೆಡೆಗೀಯೆ ತಪ್ಪ ಧನಮುಂ ಪೇೞ್ ತಪ್ಪುವೇ ಜೀವನೇ ೨೪

ವ || ಪ್ರಿಯದೊಳ್ ಮಾಱುವ ಭಂಡದ ತವಿಲಿಂಗೆ ಪರದನಾಱದೊಡಂ ಧರ್ಮದೊಳ್ ಕುಡುವ ಸ್ವಲ್ಪದ್ರವ್ಯದ ತವಿಲ್ಗೆ ಅಱಿವುಳ್ಳನಾಱದೊಡಂ ಪಿರಿದಪ್ಪ ಸುಖಮನೀವ ಧರ್ಮಕ್ಕೆ ತವುವ ಮೆಯ್ಗಮಱಿವುಳ್ಳಾತನಾಱದೊಡಮಾತಂಗೆ ಲಾಭಮಾಗದೀತಂಗೆ ಪುಣ್ಯಮಾಗದದಱಿಂ ಧರ್ಮಕ್ಕೆ ತಪ್ಪುದಕ್ಕೞ್ಕದಿರಿಂ

ಕಂ || ಈಗಡಿನ ಸುಖಂ ಧರ್ಮದಿ
ನೋಗಡಿಸುಗುಮೆಂದು ಬೆರ್ಚಿ ಮೊಗಮಂ ತಿರಿಪ
ಲ್ಕಾಗದು ಧರ್ಮಮೆ ಸುಖದೊಂ
ದಾಗರಮಾಗಿರ್ದುದಱಿನಂಜಲ್ ಜೀವಾ ೨೫

ವ || ಖಂಡಶರ್ಕರೆ ಮರ್ದಾದಂತೆ ಧರ್ಮಮೀಗಳುಮೊಳ್ಳಿತ್ತು ಮೇಗೆಯುಮೊಳ್ಳಿತ್ತು ನಿಷ್ಕಾರಣಂ ಕುಸಿಯದಿರ್

ಶಾ || ದಾನಂಗೆಯ್ಯೆ ಸುಪಾತ್ರದಲ್ಲಿಗೆ ಧನಂ ಪೋದಂದದೇಂ ಪೋದುದೇ
ಜ್ಞಾನಂ ತಳ್ತಿರೆ ಯೌವನಂ ತಪದೊಳಂ ಪೋದಂದದೇಂ ಪೋದುದೇ
ಧ್ಯಾನಂ ನಿಶ್ಚಳಮಾಗೆ ಜೀವನೊಡಲಿಂ ಪೋದಂದದೇಂ ಪೋದುದೇ
ನೀನಿಂತಪ್ಪುವನಿಂತಗಲ್ಚುವೆಡೆಯೊಳ್ ಮಾಣ್ದಿರ್ಪುದೇ ಜೀವನೇ ೨೬

ವ || ನಿಧಾನಂ ಕೊಳ್ವೆಡೆಯೊಳ್ ಬಲಿಗೆಯ್ವ ಬೀಯಕ್ಕಾಱದೊಡಂ ದಯಾಮೂಲಮಪ್ಪ ಧರ್ಮಂ ದೊರೆಕೊಳ್ವೆಡೆಯೊಳ್ ಮೆಯ್ಯ ಕಸವರದ ತವಿಲಿಂಗಮಾಱದೊಡಮಾತಂಗೆ ನಿಧಾನಮುಮೀತಂಗೆ ಪುಣ್ಯಮುಮೆಂತು ಸಾರ್ಗುಂ?

ಕಂ || ವರಧರ್ಮಮೆಂಬ ಕೆಱೆಯೊಳ್
ನಿರುಪಮ ಗುಣರತ್ನಮೆಂಬ ನೀರುಳ್ಳುದನೋ
ತಿರದೊಡೆದು ಪಾೞಿಗೆಟ್ಟೊಡೆ
ಮರುಳೇ ಸುಖಮೆಂಬ ಬೆಳಸನಱಸಲ್ ಬಗೆವಾ ೨೭

ವ || ಗೞ್ದೆಯ ಪಾೞಿಯನೞಿದು ಬೆಳೆವೆನೆಂಬನುಂ ಧರ್ಮದ ಪಾೞಿಯನೞಿದು ಸುಖಮಂ ಪಡೆವೆನೆಂಬನುಂ ಬೇಳಪ್ಪರ್ ಬುದ್ಧಿಯೊಡೆಯನಾಗನದಱಿನೆಡೆಯುಡುಗದೆ ಧರ್ಮಧರನಪ್ಪುದು

ಮ || ವರ ಧರ್ಮಾನ್ವಿತನಕ್ಕುಮೊರ್ಮೆ ಬೞಿಯಂ ಮತ್ತೊರ್ಮೆ ಪಾಪಕ್ರಿಯಾ
ಪರನಾಗಿರ್ಕುಮದೆಂತುಟೆಂಬ ಮದಹಸ್ತಿಸ್ನಾನಮೆಂತಂತೆ ದಲ್
ಕುರುಡಂ ನೇಣ್ಪೊಸೆದಂತೆ ದಲ್ ಕಿಡುಗುಮಾದೊಂದೊಳ್ಳು ಧರ್ಮಂ ನಿರಂ
ತರಮಂತೆಯ್ದದೊಡೊಳ್ಪನೀಗುಮೆ ಮದೋನ್ಮತ್ತಂಗೆ ಗೇಹಾಶ್ರಮಂ ೨೮

ವ || ಪರದಂ ಕೊಟ್ಟು ಕೊಂಡ ಭಂಡಮುಂ ಮೊದಲ್ಗೆ ಸಮನಪ್ಪೊಡಾವುದು ಲಾಭಂ ಗೃಹಸ್ಥಂ ನೆಗೞ್ದ ಧರ್ಮಮುಂ ಪಾಪಮುಂ ಸಮನಪ್ಪುದಱಿನಾವುದಗ್ಗಳಿಕೆ?ಪಾಪಮನೆ ಪುಗಲೀಯದೆ ಧರ್ಮಮನೆ ಪೆರ್ಚಿಸುವುದೆ ಬುದ್ಧಿ

ಕಂ || ಬಗೆಯೊಳಗೆ ಪುಟ್ಟಿ ಧರ್ಮದ
ನೆಗೞ್ತೆವಿಡಿದಂತನೆಯ್ದೆ ಬಗೆವಂತಾದಂ
ದಗಲದೆ ಶುದ್ಧಧ್ಯಾನದೊ
ಳೊಗೆದೊಪ್ಪಿರೆ ಸಫಲಮಕ್ಕುಮಂತಿರೆ ನೆಗೞಿಂ ೨೫

ವ || ಅವಾವುವೆಂದೊಡೆ ಆಜ್ಞಾವಿಚಯಮಪಾಕವಿಚಯಂ ವಿಪಾಕವಿಚಯಂ ಸಂಸ್ಥಾನವಿಚಯಮೆಂಬ ಧರ್ಮಧ್ಯಾನದ ನಾಲ್ಕುಂ ತೆಱನಂ ನಿಶ್ಚಳಮಾಗಿ ನಿನ್ನೊಳೆ ನಿಱಿಸುವುದು ನಿಱಿಸಿದೊಡೆಂತುಂ ತುದಿಯೊಳ್ ಪರಮ ಸುಖಿಯಾಗಿರ್ಪೆ ಜೀವಾ ನಿನಗೆ ಯತಿಧರ್ಮದಗ್ಗಳಿಕೆಯನೇವೇೞ್ಪುದೋ ದಾನಂ ಪೂಜೆ ಶೀಲಮುಪವಾಸಮೆಂಬ ನಾಲ್ಕುಂ ತೆಱದ ಶ್ರಾವಕಧರ್ಮದೊಳ್ ಸ್ವಲ್ಪಮಪ್ಪ ನೆಗೞ್ತೆಯಿಂ ಪಿರಿದಪ್ಪ ಫಲಂಗಳಂ ಪಡೆದವರ ಕಥೆಯಂ ಕೇಳದೆಂತೆಂಬಾ