ಸೋಮಿಲನ ಕಥೆ – ೧ ದಾನದ ಫಲಂ

ಕಂ || ವರ ಸಿಂಧುನಗರದೊಳ್ ವ್ರತ
ನಿರತಂ ತಾಪಸತಪಸ್ವಿ ಸೋಮಿಲನೆಂಬಂ
ಸ್ಥಿರಧೈರ್ಯಂ ಭೈಕ್ಷಾರ್ಥದೆ
ತಿರಿದು ಯಥಾಲಾಭದಿಂದೆ ಮಗುೞ್ವಂ ನಿಚ್ಚಂ ೩೦

ವ || ಒಂದು ದೆವಸಂ ಭೈಕ್ಷಕ್ಕೆ ಪೋದಲ್ಲಿ ಬಱಿಯ ತವುಡಂ ಪಡೆದು ಬಂದದಂ ಪುರಿದು ಸಣ್ಣಮಾಗಿ ಪಿಟ್ಟುಗುಟ್ಟಿ ತನಗಂ ತನ್ನ ಗೃಹಚಾರಿಣಿಗಮಭ್ಯಾಗತಂಗಂ ಮೂಱುಂಡೆಯಂ ಮಾಡಿಟ್ಟು ಶುಚಿರ್ಭೂತನಾಗಿರ್ದು ಮಧ್ಯಾಹ್ನಕಾಳದೊಳತಿಥಿಯ ಬರವಂ ಪಾರುತ್ತಿರ್ಪನ್ನೆಗಮೊರ್ವ ಋಷಿಯರ್ ಚರಿಗೆವಂದೊಡೆ ಕಂಡು

ಶ್ಲೋಕ || ಶತಂ ಬ್ರಾಹ್ಮಣ ಮೂರ್ಖೇಭ್ಯಃವರಮೇಕೋಗ್ನಿಹೋತ್ರಿಕಃ
ಅಗ್ನಿಹೋತ್ರಿ ಸಹಸ್ರೇಭ್ಯೋ ವರಮೇಕೋ ಜಿತೇಂದ್ರಿಯಃ
ಜಿತೇಂದ್ರಿಯ ಸಮಂ ಪಾತ್ರಂ ನ ಭೂತೋ ನ ಭವಿಷ್ಯತಿ ೩೧

ವ || ಎಂಬ ಸೂತ್ರಮಂ ನೆನೆದು ಅತಿಥಿಯನತಿಪ್ರೀತಿಯಿಂ ನಿಲಿಸಿ ಪೆಂಡತಿಯಿಂ ಕಾಲಂ ಕರ್ಚಿಸಿ ಮನೆಯೊಳಿರಿಸಿ ವಿಶಿಷ್ಟಕ್ರಿಯಾಭಾವದಿಂದಭಾಗ್ಯತಂಗೆಂದಿರ್ದುಡೆಯಂ ತಂದಿಕ್ಕಿದಾಗಳ್ ಮೆದ್ದಾಗಳದು ನೆಱೆಯದೆನೆ ಮತ್ತೊಂದುಂಡೆಯಂ ತಂದಿಕ್ಕಿ ಭಕ್ತಿಯುಂ ಶ್ರದ್ಧೆಯುಂ ತಿಣ್ಣಮಾಗೆ ರಾಗದಿಂದಾ ತಾಪಸನ ಕ್ಷುಧಾಶ್ರಮಮಿಂತಲ್ಲದೆ ಪೋಗದೆಂದು ಮೂಱನೆಯುಂಡೆಯುಮಂ ತಂದಿಕ್ಕಿ ತಣಿಪಿ ವಿನಯದಿಂ ಕೆಯ್ಗೆಱೆದು ಕಳಿಪಿದಾಗಳ್ ಅಕ್ಷಯಂ ದಾನಮಕ್ಕೆಂದು ಭಟಾರರ್ ಪರಸಿ ಪೋದಾಗಳಾತನ ಮನೆಯೊಳ್ ಪಂಚಾಶ್ಚರ್ಯಸಮೇತಂ ಸುವರ್ಣವೃಷ್ಟಿಯುಂ ಕಱೆದತ್ತಾ ತಾಪಸಂ ತವುಡಿನುಂಡೆಯ ದಾನದ ಫಲದಿಂದಂತಪ್ಪೈಶ್ವರ್ಯಮನೆಯ್ದಿದನೆಂಬುದಂ ಬಗೆವುದು ಮತ್ತಂ

 

ಧನಪತಿಯ ಕಥೆ – ೨ ಪೂಜೆಯ ಫಲಂ

ಕಂ || ಅನುಪಮಮತರ್ಕ್ಯಮತಿಶಯ
ಮನಿಂದಿತಂ ತಗರೆಯೆಂಬ ಪುರಮಾ ಪುರದೊಳ್
ಜನವಿನುತ ವಣಿಗ್ಜನಪತಿ
ಧನಪತಿಯೆಂಬೊಂ ಧನಾಢ್ಯನಮಿತ ಗುಣಾಢ್ಯಂ

ವ || ಆ ಪರದನೆರ್ಮೆಯ ಕಾವ ಗೋವನೊಂದು ದೆವಸಮೊಂದೆಡೆಯೊಳೆರ್ಮೆಯಂ ಮೇಯಿಸಲ್ ಪೋದಲ್ಲಿ ಒಂದು ಪಿರಿಯ ಕೊಳನಂ ಕಂಡಲ್ಲಿ ಎರ್ಮೆಗಳಂ ನೀರೂಡುತಿರ್ದು ಕೊಳನ ನಡುವೆ ಸಹಸ್ರದಲಮಪ್ಪುದೊಂದು ಪೂವಿರ್ದುದನಾ ಗೋವಂ ಕಂಡು ಕೊಳದ ನಡುವಣ್ಗೀಸಿಪೋಗಿಯಾ ಪೂವಂ ಕೊಯ್ದುಕೊಂಡು ಬರ್ಪಾಗಳಲ್ಲಿಯ ಜಲದೇವತೆಯೆಂದಳ್ ನೀನೀ ಪೂವನಗ್ಗಳನಪ್ಪವಂಗೆ ಕುಡುವುದೆಂದೊಡಾ ಧ್ವನಿಯ ನಾಲಿಸಿ ಕೇಳ್ದೆಲ್ಲಾ ದೆಸೆಯೊಳಾರುಮಂ ಕಾಣದೆ ಅಂತೆಗೆಯ್ವೆನೆಂದೆರ್ಮೆಯನೂರ್ಗಟ್ಟಿಕೊಂಡು ಬಂದಿರ್ದು ಮನೆಯಂ ಪುಗಿಸಿ

ಕಂ || ಎನಗೆಮ್ಮ ಸೆಟ್ಟಿ ವೆಗ್ಗಳ
ನನುನಯದಾತಂಗೆ ಕುಡುವೆನೆಂಬಾ ಬಗೆಯಿಂ
ಮನೆಯಂ ಪೊಕ್ಕೊಯ್ಯನೆ ನೋ
ೞ್ಪಿನಮಾತನಮರಸುಗಾಣಲೆಂದೊಸೆದಾಗಳ್ ೩೩

ವ || ಪುಟ್ಟಿಗೆಯುಮಂ ಪೂವುಮಂ ತಳಿಗೆಯೊಳಿಟ್ಟುಕೊಂಡು ಪೋಪುದಂ ಕಂಡೀತನಿಂದರಸು ವೆಗ್ಗಳನೆಂದು ಸೆ‌ಟ್ಟಿಯ ಬೞಿಯನೆ ಪೋಗಿ ನೋೞ್ಪನ್ನೆಗಂ ಸೆಟ್ಟಿ ತನ್ನ ತಂದ ದರುಶನಮ ನರಸಂಗೆ ಕೊಟ್ಟು ಪೊಡೆವಟ್ಟು ಕುಳ್ಳಿರ್ಪುದುಂ

ಮ || ಅರಸಂ ಬಾ ಮುನಿನಾಥರೊರ್ವರಮಳಾನುಷ್ಠಾನಿಗಳ್ ಜ್ಞಾನಿಗಳ್
ಪರಮಾತ್ಮಾಲಯದೊಳ್ ಕಳಂಕರಹಿತರ್ ಬಂದಿರ್ದರೆಂದಾ ಮುನೀ
ಶ್ವರರಂ ಬಂದಿಸಿ ಬರ್ಪಮೆಂದು ಮುದದಿಂ ಪೋಗುತ್ತುಮಿರ್ದಾಗಳೀ
ಧರಣೀಶಂಗವರಗ್ಗಳಿಕ್ಕೆ ಪಿರಿದಾಯ್ತೆಂದಿಂತು ಗೋಪಾಲಕಂ ೩೪

ವ || ಎಂದು ತನ್ನೊಳೆ ಬಗೆದವರೊಡನೆ ಪೋಗಿ ನೋೞ್ಪಾಗಳರಸಂ ಬಸದಿಯಂ ಬಲಗೊಂಡು ದೇವರ್ಗೆ ಪೊಡೆವಟ್ಟು ಬಂದಾ ಮುನಿವರರ್ಗೆಱಗಿ ಪೊಡೆವಟ್ಟಿರ್ಪಿನಮಾ ಋಷಿಯರ್ ದೇವರ್ಗೆ ಪೊಡೆವಡುತಿರ್ದುದುಮನಂತೆ ನೋಡುತ್ತಿರ್ದೆಲ್ಲ ರ್ಗಮೊಳಗಿ ರ್ದಾತನಗ್ಗಳನೆಂದು ನಿಶ್ಚೈಸಿ ಸಾರೆಪೋಗಿ ಪೂವಂ ನಿನಗಿತ್ತೆಂ ಕೊಳ್ ದೇವಾಯೆಂದು ದೇವರ ಮುಂದೆ ಪೂವನೀಡಾಡಿ ಪೋದನಂತಾ ಗೋವನೊಂದು ಪೂವಂ ದೇವರ ಮುಂದಿಕ್ಕಿ ಪೋದ ಪೂಜೆಯ ಫಲದಿಂದಾ ಪೊೞಲನಾಳ್ವರಸಂಗೆ ಕಱೆಕಂಠನೆಂಬ ಮಗನಾಗಿ ಪುಟ್ಟಿ ಮಹಾಮಂಡಲಿಕನಾಗಿ ರಾಜ್ಯಂಗೆಯ್ದನಪ್ಪೊಡಂ ನಂಬಿ ಪೂಜಾಧರ್ಮ ದೊಳೞ್ತಿಗನಪ್ಪುದು

 

ಉದ್ದಾಯನನ (ಪ್ರಭಾವತಿ) ಕಥೆ ಶೀಲದ ಫಲಂ

ಕಂ || ರೋರುಗಪುರಪತಿ ರಿಪುಸಂ
ಹಾರಕನುದ್ದಾಯನಾಂಕನೃಪನಖಿಳ ಗುಣಾ
ಧಾರನುದಾರನನಂಗಾ
ಕಾರಂ ದುಶ್ಚರಿತದೂರನಚಳಿತ ಧೀರಂ ೩೫

ವ || ಆತನರಸಿ ಪ್ರಭಾವತಿಯೆಂಬೊಳಾಕೆಯನಾ ಪೊೞಲೊಳಿರಿಸಿ ಪಿಪುವರ್ಗ ಸಾಧನೆಯೆ ಕಾರಣಮಾಗೆ ಪರದೇಶಕ್ಕುದ್ದಾಯನಮಹಾರಾಜಂ ಪೋದಿಂದೞಿಯಮಾಕೆಯ ರೂಪು ಲಾವಣ್ಯ ಹಾವಭಾವ ವಿಳಾಸವಿಭ್ರಮಂಗಳೊಳ್ಪಂ ಕೇಳ್ದು ಚಂಡಪ್ರದ್ಯೋತನೆಂಬರಸಂ ಆಕೆಯನೆೞೆದುಕೊಳ್ವೆನೆಂದು ಮಹಾಬಳಪರಾಕ್ರಮನಾಗಿ ಮೇಲೆತ್ತಿವಂದು ಪೊೞಲಂ ಮೂವಳಸಾಗಿ ಮುತ್ತಿಕೊಂಡಿರ್ದು ತನ್ನ ಪೆರ್ಗಡೆಗಳಂ ಡಾಳೆಯರಪ್ಪ ಸಬ್ಬವದ ಪೆಂಡಿರುಮಂ ಪ್ರಭಾವತಿಯಲ್ಲಿಗಟ್ಟಿ ತನ್ನನೆಂತುಂ ಕೊಂಡುಪೋದಪೆಂ ಸಮಕಟ್ಟಿನೊಳಿರ್ಪುದೆಂದು ಪೇೞ್ದು ಬನ್ನಿಮೆಂದಟ್ಟಿದೊಡವರ್ ಬಂದು ಭಯಸ್ಥರಾಗಿ ಕಾಪಿನವರುಮಂ ಪ್ರಭುಗಳುಮನೊಡಂಬಡಿಸಿ ಪೊೞಲಂ ಪೊಕ್ಕು ಪ್ರಭಾವತೀ ಮಹಾದೇವಿಯಂ ಕಂಡು ತಮ್ಮ ರಸನ ರೂಪಂ ಶ್ರೀಯುಮಂ ಕಲಿತನಮುಮನೆನಿತಾನುಂ ತೆಱದಿಂ ಪೊಗೞ್ದುಯಿಂ ಪೆಱತಂ ಬಗೆಯಲ್ವೇಡೆಮ್ಮೊಡನೆ ಬರ್ಪ ಸಮಕಟ್ಟನೆ ಬಗೆವುದೆಂದೊಡಾಕೆಯಿಂತೆಂದಳ್

ಕಂ || ಎನ್ನಾಣ್ಮನಲ್ಲದಂ ಪೆಱ
ನೆನ್ನಂ ಕೊಂಡುಯ್ವನಾದೊಡೆಂತುಂ ಪೋಗೆಂ
ಸನ್ನುತ ಶೀಲಮನೞಿವೆನೆ
ಪೊನ್ನಂ ಬೆನ್ನೀರೊಳೆಚ್ಚಿ ಕಿಡಿಸುವ ತೆಱದಿಂ ೩೬

ವ || ಎಂದೊಡಾ ಪೆರ್ಗಡೆಗಳಿಂತೆಂದರ್

ಕಂ || ಶೀಲದ ಫಲಮೇಂ ಶ್ರೀಯೊಳ್
ಮೇಲಪ್ಪನಿತೆ ವಲಮದುವುಮಿಂ ಮಱುಭವದೊಳ್
ಕಾಲಕ್ಷೇಪಮದಾವುದೊ
ಲೀಲೆಯನೀ ಭವದೊಳಿಪ್ಪ ಸಿರಿಯದು ಪೊಲ್ಲಾ ೩೭

ವ || ಎಂಬುದಂ ಕೇಳ್ದು ಪ್ರಭಾವತಿಯಿಂತೆಂಗುಂ

ಶಾ || ಆಯಂಗೆಟ್ಟು ಪ್ರತಿವ್ರತಕ್ಕೆಯಳವಂ ತಾಂ ಸುಟ್ಟು ದುಮೋರ್ಹಹದಿಂ
ಬಾಯಂಬಿಟ್ಟು ಪರತ್ರೆಗೆಟ್ಟು ಪೞಿಯಂ ಮುಂದಿಟ್ಟು ತನ್ನಿಂ ಗುಣಾ
ಮ್ನಾಯಂ ಪೋಗೆ ಕಳಂಕಮಾಗೆ ಕುಲಮುಂ ಪೋದಂದದೇನೊಳ್ಳಿತೇ
ಶ್ರೀಯುಂ ರೂಪುಮದೇವುದಯ್ಯ ಸಿರಿಗಂ ಶೀಲಕ್ಕಮೇನಂತರಂ ೩೮

ವ || ಮತ್ತಂ

ಕಂ || ಮರಣಕ್ಕಂಜದೆ ಗುಣಮಂ
ಪರಿಹರಿಸದೆ ಶೀಲರತ್ನಮಂ ರಕ್ಷಿಸಿ ಸ
ತ್ತರೆ ಸಾವೇ ಕೇಳ್ ಶೀಲಮ
ನುರವಣೆಯಂ ಬಿಟ್ಟ ಬಳಿಕ ಬಾೞುಂ ಬಾೞೇ ೩೯

ವ || ಎಂದೊಡಾ ಪೆರ್ಗಡೆಗಳಿಂತೆಂದರ್

ಕಂ || ಆರ್ಕಾವೊಡುಯ್ಯದೇಂ ಮಾ
ಣ್ದಿರ್ಕುಮೆ ಕೊಂಡೊಯ್ಗುಮದಱಿನೞಿವಿರವುಮದ
ರ್ಕಿರ್ಕುಳಿಗೊಳ್ವಂಗೆರವಂ
ಮಾರ್ಕೊಳ್ಳದಿರೆಂಬ ಲೋಕವಾದವನಱಿಯಾ ೪೦

ವ || ಎನೆ ಪ್ರಭಾವತಿಯೆಂಗುಮೆೞೆದುಯ್ಯೆ ಗೆಲ್ಲಂ ಸೆಂಡಿನೊಳಕ್ಕುಂ ಪೆಂಡಿರೊಳಕ್ಕುಮೆ ಮತ್ತಂ

ಮ || ಕುಲವೆಣ್ಗೊರ್ವನೆ ಗಂಡನೊಂದು ಭವದೊಳ್ ಮತ್ತೊರ್ವನಂ ಸೋಲ್ತು ನೋ
ಡಲುಮಾಗೆಂದೊಡೆ ಕೂಡಲಕ್ಕುಮೆ ಬಿಗುರ್ತೆಯ್ತಂದೊಡಂ ಕೋಪದಿಂ
ಕೊಲಲಕ್ಕುಂ ಗೆಲಲಕ್ಕುಮೀ ಧರಣಿಯಂ ತಾನಾಳಲಕ್ಕುಂ ಕರಂ
ಬಲಮಂ ನಚ್ಚಿದೊಡೆನ್ನ ಶೀಲದಳವಂ ಕೇಡೆಯ್ದಿಸಲ್ ಬರ್ಕುಮೇ ೪೧

ವ || ಎನೆ ಪೆರ್ಗಡೆಗಳ್ ಮತ್ತಮಿಂತೆಂದರ್

ಕಂ || ಎಂತುಮೆೞೆದೊಯ್ದಪಂ ನೀ
ನಿಂತೇನಂ ಬಗೆವೆಯೇನನೆಂದಪೆಯದು ತಾ
ನೆಂತುಂ ಕೂಡದು ಕೆಮ್ಮನೆ
ಸಂತಮೊಡಂಬಡುವುದುೞಿವುದೞಿವಾತುಗಳಂ ೪೨

ವ || ನೀಮೆಮ್ಮ ರಸನನೊಲ್ಲದೊಡೆ ಪಲಂಬರಂ ಕೊಲ್ಲದೆ ಸೈರಿಸನಾತನತ್ತ ನಿನ್ನ ಮನಂ ಪರಿಯದೊಡಿಲ್ಲಿ ನೆತ್ತರಪೊನಲ್ ಪರಿಗುಮದಱಿಂ ನಿನಗಾದ ಶೀಲಂ ಪಲರ್ಗಂತ್ಯ ಕಾಲಮಂ ಮಾಡುಗುಮಿನ್ನುಂ ನಿಮ್ಮಲ್ಲಿ ಬುದ್ಧಿಯೊಡೆಯರನಾಳೋಚಿಸಿ ನೆಗೞಿ ಮಿಂದಿಂಗೆ ಡೆಯನಿತ್ತೆವೆಂದು ಪೆರ್ಗಡೆಗಳ್ ಪೋದಾಗಳ್ ಪ್ರಭಾವತಿಯಿದರ್ಕಾನೆ ಬಲ್ಲೆನೀಯುಪಸರ್ಗಂ ಪಿಂಗುವಿನಮಾಹಾರಶರೀರನಿವೃತ್ತಿಯೆಂದು ಕಾಯೋತ್ಸರ್ಗ ದೊಳಿರ್ದಳನ್ನೆಗಮೊರ್ವಂ ವ್ಯಂತರದೇವಂ ಆಕಾಶದೊಳ್ ಪೋಗಲಾ ವಿಮಾನಮಾ ಪೊೞಲ ಮೇಲೆ ಬರ್ಪಾಗಳ್ ತೊಟ್ಟನೆ ಕೀಲಿಸಿದಂತೆ ನಿಂದೊಡಾ ದೇವ ನವಧಿಜ್ಞಾನದೊಳಱಿದು

ಚಂ || ಅತಿಶಯ ಶೀಲವಂತೆಯನನಿಂದಿತೆ ಕಾಂತೆಯನೊರ್ವನಿಂತು ದು
ಷ್ಕೃತಮತಿ ತನ್ನದೊಂದು ಬಲಗರ್ವದಿನುಯ್ಯಲೆ ಬಂದೊಡೀ ಪತಿ
ವ್ರತೆಗುಪಸರ್ಗಮಾಯ್ತದೆನಗಾಗದುಪೇಕ್ಷಿಲೆಂದು ನಿಂದುದ
ಪ್ರತಿಮ ವಿಮಾನಮೆಂದು ಮುನಿಸಿಂ ಕರಮಾಸುರನಾದನಾ ಸುರಂ ೪೩

ವ || ಅಂತು ಮಸಗಿ ವಿಮಾನಮನಿೞಿದು ಬಂದು ಚಂಡಪ್ರದ್ಯೋತಕ ಪಡೆಯೆಲ್ಲ ಮನೊರ್ಮೊದಲೆ ನೆಗಪಿಕೊಂಡು ಸಮುದ್ರದೊಳಿಕ್ಕಲ್ ಬಗೆದು ನೋಡಿ ಪಾಪಚಿಂತೆ ಯನುೞಿದವನ ಪಡೆಯೆಲ್ಲಮನವನ ನಾಡತ್ತಲೀಡಾಡಿ ಬಂದಾ ಪ್ರಭಾವತಿ ಮಹಾಸತಿಯಂ ಕಂಡು ಪೂಜಿಸಿ ನಿಮ್ಮು ಪಸರ್ಗಂ ಪಿಂಗಿದುದು ಕೆಯ್ಯನೆತ್ತಿಕೊಳ್ಳಿಮೆಂದಾ ದೇವಂ ಪೇೞ್ದುಪೋದನಾಕೆಯ ಶೀಲಮಾ ಭವದೊಳೆ ಸಫಲಮಾದೊಡೆ ಕೆಯ್ಯನೆತ್ತಿಕೊಂಡು ಮಹೋತ್ಸಾಹದಿಂ ಶಾಂತಿಪೂಜೆಗಳಂ ಮಾಡಿಸುತ್ತುಮಿರ್ದು ಕೆಲವು ದೆವಸದಿಂ ತನ್ನ ಭರ್ತಾರಂ ಬಂದೊಡೆ ಕೂಡಿ ಸುಖಮಿರ್ದಳೆಂಬುದಂ ಕೇಳ್ದೞಿದು ಶೀಲವಂತರಾಗಿಂ ವ್ರತಪರೀಕ್ಷಣಮಪ್ಪ ಶೀಲಮಂ ಕಾದೊರ್ಗರಿದುಂಟೆ?

 

ಧನದತ್ತನ ಕಥೆ ವ್ರತದ ಫಲಂ

ಕಂ || ವರ ವೀತಶೋಕೆಯೆಂಬುದು
ಪುರಮದಱೊಳ್ ಕೀರ್ತಿವಡೆದ ಪರದಂ ತ್ರಿಜಗ
ದ್ಗುರುಪದಯುಗಚಿತ್ತಂ ಭಾ
ಸುರವಿತ್ತಂ ಪೆಸರೊಳೊಪ್ಪೆ ತಾಂ ಧನದತ್ತಂ ೪೪

ವ || ಆತನ ಸೆಟ್ಟಿತಿ ಪ್ರಭಾವತಿಯೆಂಬೊಳಾಯಿರ್ವರ್ಗಂ ಪುಟ್ಟಿದ ಮಗಂ ನಾಗದತ್ತನೆಂಬನಾತನ ಪೆಂಡಿತಿ ನಾಗವಸುವೆಂಬಳಾಯಿರ್ವರುಮನ್ಯೋನ್ಯಾಸಕ್ತಚಿತ್ತರಾಗಿ ಸುಖಂ ಬಾೞುತ್ತುಮಿರೆ

ಚಂ || ಧನಮಿನಿತುಂಟವುಂ ತವುಗುಮೆಂಬಭಿಶಂಕೆಯ ಚಿಂತೆ ಚಿತ್ತದ
ತ್ತಿನಿಸುಮದೆಯ್ದದಪ್ರತಿಮ ಚಾಗದ ಭೋಗದುಳುರ್ಕೆ ಪೆಂಪುವೆ
ತ್ತನವರತಂ ಪ್ರಭಾವಿಸುತುಮಿರ್ದನವದ್ಯ ಮಹೋದ್ಯನೆಂಬುದೊಂ
ದನಿತು ಪೊಗೞ್ತೆ ತನ್ನೊಳೊಡಗೂಡಿರೆ ವೈಶ್ಯಕುಮಾರನೊಪ್ಪಿದಂ ೪೫

ವ || ಅಂತು ನಾಗದತ್ತನುದಾತ್ತಗುಣಸಂಪನ್ನನಾಗಿರ್ಪಿನಮಾ ಪೊೞಲ್ಗೆ ಮುನಿಗುಪ್ತಾಚಾರ್ಯರೆಂಬಾಚಾರ್ಯರ್ ಬಂದಿರ್ದೊಡೆ ವಂದನಾಭಕ್ತಿಗರಸನುಂ ಪುರಜನಮುಂ ಪೋಗೆ ನಾಗದತ್ತನುಮೊಡನೆ ಪೋಗಿ ಬಂದಿಸಿ ಮುಂದೆ ಕುಳ್ಳಿರ್ದು ಧರ್ಮಶ್ರವಣಮಂ ಕೇಳ್ದೆಲ್ಲರುಂ ಶ್ರೀಪಂಚಮಿಯ ನೋಂಪಿಯಂ ಕೆಯ್ಕೊಳ್ವಾಗಳ್ ತಾನುಮೊಡನೆ ಕೆಯ್ಕೊಂಡೆನೆಂದು ಭಟ್ಟಾರರಂ ಬಂದಿಸಿ ಮನೆಗೆ ಬಂದಿರ್ದು ಫಾಲ್ಗುಣಮಾಸದ ಶುಕ್ಲಪಕ್ಷದ ಪಂಚಮಿಯಂದುಪವಾಸಂಗೆಯ್ದು ಮುನ್ನೆಂದುಂ ಪಸಿದೊಂದು ಗೞಿಗೆಯುಮಿರ್ದಱಿಯದಾಗರ್ಭಸುಖಿ ಪಗಲೆಲ್ಲಂ ದೇವತಾರ್ಚನಾಸ್ತವನ ಕ್ರಿಯೆಯಿಂದೆನಸುಂ ಸೈರಿಸಿರ್ದು ನೇಸಱ್ ಪಟ್ಟಾಗಳ್ ಪ್ರಾಣಸಂಕಟಮಾಗೆ

ಕಂ || ತಂದೆವಿರುಂ ತಾಯುಂ ಕರ
ಮೊಂದಿದ ಬಂಧುಗಳುಮಿಷ್ಟವನಿತೆಯುಮೋವೋ
ಎಂದು ಪರಿತಂದು ಕೆಲದೊಳ್
ನಿಂದು ಕರಂ ನೊಂದು ಬೆಂದು ಮಱುಗುತ್ತಿರ್ದರ್ ೪೬

ಮ || ಇರ್ದಿದರ್ಕೇಗೆಯ್ವಮಾವುದುಪಾಯಂ ಪೆೞಿಮೆನುತ್ತಿರೆ ತಂದೆ ಸಾರೆವಂದಿಂತೆಂದಂ

ತ್ರಿಪದಿ || ಎನಿತಾನು ಕೋಟಿಯುಂ ಮನೆದೀವಿ ಧನಮಿರ್ದು
ದನಿತುಮಂ ದಾನಗುಡು ನೋಂಪಿಯೊಂದಱೊ
ಳೆನಿತಕ್ಕು ಮಗನೆ ಬಿಸುಡಿದಂ ೪೭

ಧರೆಗೆಲ್ಲ ಚೋದ್ಯಮಾಗಿರೆ ಜಿನಮಹಿಮೆಯಂ
ಪಿರಿದನಾಂ ಮಾಡಿ ನಿನಗೀವೆನಿದೇ
ವಿರಿದುಪವಾಸ ಬಿಸುಡಿದಂ ೪೮

ಕನಕದಿಂ ರತ್ನದಿಂ ಜಿನಭವನಂಗಳಂ
ನಿನಗೆ ಮಾಡಿಸುವೆನುಪವಾಸಮೊಂದಱೊ
ಳಿನಿತನೇಕೞಿವೆ ಬಿಸುಡಿದಂ ೪೯

ವ || ಎನೆ ನಾಗದತ್ತನಿಂತೆಂದಂ

ತ್ರಿಪದಿ || ಅತಿಶಯ ದಾನಮುಮತಿಶಯ ಪೂಜೆಯುಂ
ಪ್ರತಿಯಿಲ್ಲದರ್ಹದ್ಭವನಮುಮೇವುದೋ
ವ್ರತಭಂಗಂಗೆಯ್ದು ಮನುಜಂಗೆ ೫೦

ವ || ಎಂದೊಡಾ ಮಾತಿಂಗೆ ತಂದೆ ಮಾಣ್ದುಸಿರದೆ ತಾಯ್ ಮಱುಗಿ ಬಂದಿಂತೆಂದಳ್

ತ್ರಿಪದಿ || ಪಲವಪ್ಪ ನೋಂಪಿಯಂ ಸಲೆ ಮಹಾತಿಥಿಗಳಂ
ಪಲಕಾಲ ನೋಂತು ನಿನಗೀವೆನೊಂದಱ
ಫಲಮೆನಿಸುಂಟು ಬಿಸುಡಿದಂ ೫೧

ಅಷ್ಟೋಪವಾಸಮರ್ಧಾಷ್ಟಮೀಯೆಂಬಿನ
ನಷ್ಟಮೀ ಬಾವು ದಿವಸಮಂ ನೋಂತೀವೆ
ಜ್ಯೇಷ್ಠಪುತ್ರಕನೆ ಬಿಸುಡಿದಂ ೫೨

ಸರ್ವಾನುಕೂಲಮಂ ಸರ್ವತೋಭದ್ರನು
ನೊರ್ವಳೆ ನೋಂತು ನಿನಗೀವೆನಿದುವೇನ
ಪೂರ್ವಮೇ ಮಗನೆ ಬಿಸುಡಿದಂ ೫೩

ಪರಮ ಚಾಂದ್ರಾಯಣ ಮುರಜಮಧ್ಯಾದಿ ಮಂ
ದರಪಂಕ್ತಿಯೆಂದು ನೆಗೞ್ದಿವಂ ನೋಂತೀವೆ
ನಿರವೇಡ ಮಗನೆ ಬಿಸುಡಿದಂ ೫೪

ವ || ಎಂದೊಡಬ್ಬಾ ಕೇಳಿಮೆಂದು ನಾಗದತ್ತನಿಂತೆಂದಂ

ತ್ರಿಪದಿ || ಎನಿತಾನು ನೋಂಪಿಯುಂ ನಿನಗೀವೆನೆಂದೊಡೀ
ಮುನಿಯಿತ್ತ ವ್ರತಮನೞಿದೊಡೆ ನೀಮಿತ್ತು
ದೆನಗೇಕೆ ಮತ್ತೆ ಫಲಮಕ್ಕುಂ ೫೫

ವ || ಎಂದೊಡಬ್ಬೆಯುಂ ಪೋಗೆ ಬೞಿಕ್ಕೆ ನಾಗವಸು ಬಂದಿಂತೆಂದಳ್

ತ್ರಿಪದಿ || ಏಂ ಪೇೞಿಯಱಿಯಿರೇ ನೋಂಪುದುಂ ಋಷಿಯರ
ನಾಂಪುದುಮೆನಗೆ ಬೆಸನೆಂದುಯದಱಿನೀ
ನೋಂಪಿಯಂ ನಾನೆ ಸಲಿಸುವೆಂ ೫೬

ಊನಮಿಲ್ಲದ ನಿಮ್ಮ ದಾನಕ್ಕೆ ಧರ್ಮಕ್ಕೆ
ಯಾನೞ್ತಿವಟ್ಟು ಬೆಸಕೆಯ್ವೆನೆನ್ನನಿ
ನ್ನೀ ನೋಂಪಿವಿಡಿದು ಕೆಡಿಪಿರೇ ೫೭

ಒಂದುಮಂ ಕಡೆಗಣಿಯಿಸದೊಂದು ಚಿತ್ತದೊ
ಳೊಂದಿದಂತಱಿದು ಬೆಸಕೆಯ್ವೆನೀ ನೋಂಪಿ
ಯೊಂದಱಿಂದೆನ್ನನೞಿವಿರೇ ೫೮

ಇನ್ನೆಗಂ ಕೂರ್ಮೆಯಿಂ ನಿನ್ನ ಮೆಚ್ಚನೆ ಮೆಚ್ಚಿ
ದೆನ್ನನಿಂತುೞಿಯೆ ಬಿಸುಟೊಂದು ಪಾಪಮಂ
ನೀನ್ನೋಂತ ನೋಂಪಿ ಕಿಡಿಕುಮೇ ೫೯

ವ || ಎನೆ ನಾಗದತ್ತನಾ ಮಾತಂ ಕೇಳ್ದಿಂತೆಂದಂ

ತ್ರಿಪದಿ || ನಿನ್ನ ಕೇಡಿಂಗೞಲ್ದೆನ್ನನಿಂತೆಂದಪೈ
ಸನ್ನುತ ವ್ರತಮನೞಿದೊಡೆ ಕಿಡುವೆನಿಂ
ತೆನ್ನ ಕೇಡಿಂಗೆ ಬಯಸುವೋ ೬೦

ವ || ಎಂಬುದಂ ಕೇಳ್ದು ಮಱುಮಾತಿಂಗಾಸೆಗಾಣದೆ ಮುಚ್ಚೆವೋಗಿ ಬಿೞ್ದಾಗಳಾಕೆಯಂ ಪಿಡಿದೊಂದು ದೆಸೆಗುಯ್ದು ತಣ್ಪುಗೆಯ್ಯುತ್ತಿರೆ ಬಂಧುಗಳಪ್ಪವರೊಳಗೊರ್ವ ಕುಶಲನಪ್ಪಾತನಾ ಮನೆಯ ಮೇಲಂ ಛಿದ್ರಂ ಮಾಡಿ ಕನ್ನಡಿಯನಮರ್ಚಿ ಬೆಳಗುವ ಮಾಣಿಕಂಗಳಂ ಬಯಸಿಯುಂ ಪತ್ತಿಸಿಟ್ಟು ನೇಸರ್ಮೂಡಿತಿನ್ನೇಕಿರ್ಪಿರ್ ಪಾಲ್ಗಂಜಿಯಂ ಕುಡಿವಿರೇೞಿಮೆನೆ ಪೊೞ್ತಿನಳವಿಯನಱಿದು ಕೃತಕಮಿದುಮೀ ಗಳೆನ್ನ ಪ್ರಾಣಂ ಪೋದೊಡಂ ಪೋಕೆ ಆನಳಿಪುವೆನಲ್ಲೆಂ ನೀಮೆಲ್ಲ ಮಗುೞ್ದುಸಿರದಿರಿಂ ಆರಾನುಂ ಪೋದೊಡಂ ಪೋಕೆ ಆನಳಿಪುವೆನಲ್ಲೆಂ ನೀಮೆಲ್ಲ ಮಗುೞ್ದುಸಿರದಿರಿಂ ಆರಾನುಂ ಸೈರಣೆಯುಳ್ಳವರ್ ವಂದೆನ್ನ ಕೆಲದೊಳಿರ್ದು ಅವಸ್ಥಾಂತರಮನಱಿದು ಪಂಚ ನಮಸ್ಕಾರಮನೋದುತ್ತುಮಿರಿಮೆಂದು ಪೇೞ್ದು ತಾನುಂ ಪರಮಾತ್ಮ ಧ್ಯಾಣದೊಳ್ ಮುಡಿಪಿ ಸೌಧರ್ಮಕಲ್ಪದೊಳ್ ರತ್ನಮಯಮಪ್ಪ ವಿಮಾನದೊಳಗೆ ಪಾಸಿನ ಪೊರೆಯೊಳ್ ಪುಟ್ಟಿದೆರಡು ಘೞಿಗೆಯೊಳ್ ನವಯೌವನನುಂ ಷೋಡಶಾಭರಣ ಭೂಷಿತನುಮಾಗಿ ದಿವ್ಯ ವಿಳಾಸದಿನಿರ್ದನಲ್ಲಿ

ರಗಳೆ || ಎತ್ತಲುಂ ಜಯ ಜಯ ನಿನಾದಮೆ | ಎತ್ತಲುಂ ಚಿತ್ತಕ್ಕೆ ಸಂಹ್ಲಾದಮೆ ೧
ಎತ್ತ ನೋಡುವೊಡಮೊಸೆದಾಟಮೆ | ಎತ್ತ ಕೇಳ್ವೊಡಮೆಸೆವ ಪಾಟಮೆ ೨
ಎತ್ತಲುಂ ತೀಡುವೊಡಮೊಳ್ಗಂಧಮೆ | ಎತ್ತಲುಂ ಮಣಿಮಯ ಸುಬಂಧಮೆ ೩
ಎಲ್ಲ ದೆಸೆಯುಂ ಕರಮೆ ರಮ್ಯಮೆ | ಎಲ್ಲ ನೆಲನುಂ ಮನಕ್ಕೆ ರಮ್ಯಮೆ ೪
ಎಲ್ಲ ಕಾಲಮುಮವರ್ಗೆ ಭೋಗಮೆ | ಎಲ್ಲ ಮಾೞ್ಕೆಯೊಳಮನುರಾಗಮೆ ೫
ಎಲ್ಲರೋರೊರ್ವರೊಳ್ ಕೂರ್ಪರೇ | ಎಲ್ಲರುಂ ಸುಖದಿಂದಮಿರ್ಪರೇ ೬
ಆಗಳುಂ ವಿಪುಳ ಸಂಪ್ರೀತಿಯೇ | ಆಗಳುಂ ಬಹುವಿಧದ ಭೂತಿಯೇ ೭
ಆಗಳುಂ ಚಿತ್ತಸಂತೋಷಮೇ | ಆಗಳುಂ ಶೋಭನ ವಿಶೇಷಮೇ ೮
ಆಗಳುಂ ಮಿತ್ರಸಂಯೋಗಮೇ | ಆಗಳುಂ ಕ್ರೀಡನೋದ್ಯೋಗಮೇ ೯
ಆಯು ಮಿಕ್ಕಿರ್ದ ಕಲ್ಪಾಯುವೇ | ಶ್ರೀಯಾಯುಮುಳ್ಳಿನಂ ಸ್ಥಾಯುವೇ ೧೦ ೬೧

ಕಂ || ಅನವರತ ಭೋಗದಿಂದಂ
ತನುಪಮಮಾಗಿರ್ದ ಸಗ್ಗದೊಳ್ ಸುಖಮಂ ತಾ
ನನುಭವಿಸಿ ಬಂದು ಬೞಿಯಿಂ
ಮನುಷ್ಯಗತಿಯೊಳ್ ಪ್ರಸಿದ್ಧ ರಾಜಾನ್ವಯದೊಳ್ ೬೨

ವ || ಜಯಂಧರ ಮಹಾರಾಜಂಗಂ ಶ್ರೀಪೃಥ್ವೀಪತಿ ಮಹಾದೇವಿಗಂ ನಾಗಕುಮಾರನೆಂಬ ಮಗನಾಗಿ ಪುಟ್ಟಿ ಮಹಾಮಂಡಳಿಕಶ್ರೀಯಂ ತಾಳ್ದಿ ರಾಜ್ಯಂಗೆಯ್ದು ತುದಿಯೊಳ್ ದೀಕ್ಷೆಯಂ ಕೊಂಡು ಕರ್ಮಕ್ಷಯಂಗೆಯ್ದು ನಿಂದು

ಚಂ || ಪರಮಸುಖಂ ಮಲಕ್ಷಯದಿನುಗ್ರಮಲಕ್ಷಯಮಾತ್ಮಶುದ್ಧಿಯಿಂ
ನಿರುಪಮಿತಾತ್ಮಶುದ್ಧಿ ಸುಚರಿತ್ರದಿನಿರ್ದ ಚರಿತ್ರದೋಜೆ ಭಾ
ಸುರತರ ಧರ್ಮದಿಂದೊಗೆಗುಮೆಂದೊಡೆ ಧರ್ಮಮೆ ಮೂಲಮುತ್ತಮಾ
ಚರಣೆಗಮಾತ್ಮ ಶುದ್ಧಿಗೆ ಮಲಕ್ಷಯಕಂ ವರಸೌಖ್ಯರಾಶಿಗಂ ೬೩

ಮ || ನುತ ವೈಶ್ಯೋತ್ತಮ ಬಂಧುವರ್ಮ ರಚಿತಂ ಶ್ರೀ ಜೀವಸಂಬೋಧನೋ
ನ್ನತ ನಾಮಪ್ರವಿರಾಜಿತಂ ನೆಗೞ್ದನುಪ್ರೇಕ್ಷಾಧಿಕಾರಾಭ್ಯುಪಾ
ಶ್ರಿತಮಂ ಭಾವಿಸೆ ಬೋಧಿ ನಿಲ್ಕುಮದಱಿಂದಷ್ಟಾಘ ಸಂಬಂಧನ
ಕ್ಷತಿಯಂ ನೆಟ್ಟನೆ ಮಾಡಿ ಗೆಲ್ದು ಪಡೆವರ್ ಸಂಶುದ್ಧಿಯಿಂ ಸಿದ್ಧಿಯಂ ೬೪

ಗದ್ಯ || ಇದು ಜಿನಶಾಸನ ಪ್ರಭಾಸನ ಶೀಲೋದಿತ ವಿದಿತ ಬಂಧುವರ್ಮನಿರ್ಮಿತಮಪ್ಪ ಜೀವಸಂಬೋಧನಾ ಗ್ರಂಥಾವತಾರದೊಳ್ ಧರ್ಮಾನುಪ್ರೇಕ್ಷಾನಿರೂಪಣಂ ನಾಗದತ್ತಚರಿತಂ

ದ್ವಾದಶಾಧಿಕಾರಂ