. ಲೋಕಾನುಪ್ರೇಕ್ಷೆ

ಕಂ || ಅಡಿ ವೇತ್ರಾಸನದಂತಿರೆ
ನಡು ಝಲ್ಲರಿಯಂತೆ ಮೇಗು ಮುರಜದ ತೆಱದಿಂ
ದೆಡೆವಿಡದೆ ಮೂಱು ಮೋಕಮು
ಮೊಡನನಿಲತ್ರಯದೆ ಸುತ್ತಿ ನಿಂದತ್ತೆತ್ತಂ  ೧

ವ || ಅಂತಾಗಿರ್ದ ಮೂಱುಂ ಲೋಕಮುಂ ಚತುರ್ದಶ ರಜ್ಜು ಪ್ರಮಾಣೋತ್ಸೇಧಮುಂ ಸಪ್ತೈಕ ಪಂಚೈಕ ರಜ್ಜಯ ವಿಸ್ತಾರಮುಮಾದಲ್ಲಿ ಯಧೋಭಾಗಸ್ಥಿತಂ ನರಕಮಾ ನರಕದೊಳ್ ರತ್ನಪ್ರಭೆ ಶರ್ಕರಾಪ್ರಭೆ ವಾಳುಕಪ್ರಭೆ ಪಂಕಪ್ರಭೆ ಧೂಮಪ್ರಭೆ ತಮಃಪ್ರಭೆ ಮಹಾತಮಃ ಪ್ರಭೆಯೆಂಬೇೞುಂ ತೆಱದುಗ್ರಭೂಮಿಯ ಪಟಲಂಗಳೊಳಗೆ ತಲೆಕೆಳಗಾಗಿ ಪೆರ್ಜೇನ ಪುಟ್ಟಿಗಳಂತಿರ್ದ ಪುಟ್ಟಿಗಳೊಳ್ ಪುಟ್ಟಿ ಪಿರಿದು ಪಾಪಮಂ ನೆರಪಿ ಹಿಂಸಾನಂದ ಮೃಷಾನಂದ ಸ್ತೇಯಾನಂದ ಸಂರಕ್ಷಣಾನಂದಮೆಂದು ಚತುರ್ವಿಧಮಾಗಿರ್ಕುಮಲ್ಲಿ

ಚಂ || ಭರದೆ ತಗುಳ್ದ ರೌದ್ರಪರಿಣಾಮ ಮಹಾವಿಷಮಂತ್ಯಕಾಲದೊಳ್
ದೊರೆಕೊಳೆ ಸತ್ತವರ್ ನರಕಮಂ ಪುಗೆ ನಾರಕರಾಗಳೊರ್ವರೊ
ರ್ವರನತಿಕೋಪದಿಂ ಬಿಡದೆ ಛೇದನ ಭೇದನ ತಾಡನಾದಿ ನಿ
ಷ್ಠುರತರಮಪ್ಪ ದಂಡಣೆಯನೆಯ್ದಿಪರೆಂಬುದನೇನೊ ಕೇಳಿರೇ  ೨

ವ || ಕೇಳದಂತಲ್ಲಿಯ ದಂಡಣೆಗಳುಂ ದುಃಖಗಳುಂ ಸಾಮಾನ್ಯಮೆ ಪುಟ್ಟಿದಂದೆ ನಾರಕರ್ಕಳ್ ತಂತಮ್ಮ ಮುನ್ನಿನ ಭವದೊಳ್ ಗೆಯ್ದ ಪಾತಕಂಗಳಂ ವಿಭಂಗಜ್ಞಾನದಿಂದಱಿ ದೋರೊರ್ವರಂ ಮೂದಲಿಸಿಯಸಿ ಮುಸಲ ಕಣೆಯ ಕಂಪಣ ನಾರಾಚ ಪರಶು ತೋಮರ ಮುಸುಂಡಿ ಪಿಂಡಿವಾಳ ಮುಗ್ದರ ಗದಾ ಚಕ್ರ ತ್ರಿಶೂಲಾದಿ ಭಯಂಕರಮಪ್ಪ ಮೂವತ್ತೆರಡುಂ ತೆಱದಾಯುಧಂಗಳಿನೊರೋರ್ವರನಿಱಿದುಂ ತಱಿದುಂ ಕೊಱೆದುಂ ಮುಱಿದುಂ ಪಱದುಂ ಜಡಿದುಂ ಬಡಿದುಂ ಕಡಿದುಂ ತಿದಿಯುಗಿದುಂ ಸುಗಿದುಂ ಬಿಗಿದುಂ ಬಗಿದುಂ ನೂಂಕಿಯುಂ ಸೋಂಕಿಯುಂ ಅವುಂಕಿಯುಂ ಕಟ್ಟಿಯುಂ ಬೆಟ್ಟಿಯುಂ ಮೆಟ್ಟಿಯುಂ ಕುಟ್ಟಿಯುಂ ಸುರುಳ್ಚಿಯುಂ ಮರೞ್ಚಿಯುಂ ಪೊರಳ್ಚಿಯುಂ ಚುರ್ಚಿಯುಂ ಸೀೞ್ದುಂ ಪೋೞ್ದುಂ ಕಾದುಂ ಪೀರ್ದುಂ ಅರ್ದುಂ ಪಾರ್ದುಂ ನೇರ್ದುಂ ಕಿೞ್ತುಂ ನೆಗೞದುಮಿಂತನೇಕ ಪ್ರಕಾರದಿಂ ದಂಡಿಸೆ ಕನಲ್ದೊನಲ್ದು ಬೞಲ್ದೞಲ್ದು ಜೋಲ್ದು ನೇಲ್ದು ಸುಯ್ದು ಬಯ್ದು ಬೆಂದು ನೊಂದು ಕಂದಿ ಕಂದಿ ಬೇಸತ್ತಾ ಸತ್ತು ಮಮ್ಮಲಂಮಱುಗಿ ಸಹಜ ಶಾರೀರ ಮಾನಸಾಗಂತುಕಮೆಂಬ ನಾಲ್ಕು ತೆಱದ ಮಹಾದುಃಖಂಗಳ್ ಪೊೞ್ಮರನಂ ಕಿರ್ಚು ತಗಳ್ದಂತೆಯೆಡೆವಱೆಯದಳುರ್ದು ಕೊಳೆ ಕಣ್ಣೆವೆಯಿಕ್ಕುವನಿತು ಪೊೞ್ತಪ್ಪೊಡಂ ಸುಖಮನಱಿಯದುತ್ಕೃಷ್ಟದಿಂ ಮೂವತ್ತು ಮೂಱು ಸಾಗರೋಪಮಕಾಲಂಬರಂ ನಮೆವರಿಂತು ನರಕಲೋಕದ ವ್ಯವಸ್ಥೆಯಂ ಸಂಕ್ಷೇಪದಿಂ ಪೇೞ್ದೆನಿನ್ನು ಮಧ್ಯಮ ಲೋಕದಲ್ಲಿ.

ಕಂ || ಅಮಿತದ್ವೀಪ ಸಮುದ್ರಾಂ
ತ ಮಹಾಪ್ರಖ್ಯಾತಮಾ ಸ್ವಯಂಭೂರಮಣೋ
ತ್ತಮ ವಾರಿಧಿಪರ್ಯಂತಂ
ಸಮಸ್ತ ತಿರ್ಯಂಚಮಿರ್ಪ ತಿರ್ಯಗ್ಲೋಕಂ  ೩

ವ || ಅಲ್ಲಿ ಪುಟ್ಟಿದ ತಿರ್ಯಗ್ಜಾತಿಜೀವಂಗಳುಂ ತ್ರಸ ಸ್ಥಾವರಮೆಂದಿರ್ತೆಱನಕ್ಕುಮಾ ತ್ರಸಜೀವಂಗಳುಂ ದ್ವೀಂದ್ರಿಯಾದಿ ವಿಕಳೇಂದ್ರಿಯಂ ಷಡ್ವಿಧಂ ಸಕಳೇಂದ್ರಿಯಂ ಚತುರ್ವಿಧಮಂತು ದಶವಿಧಂ ಸ್ಥಾವರಂಗಳೊಳ್ ಪೃಥಿವ್ಯಪ್ತೇಜೋ ವಾಯು ಸಾಧಾರಣ ವನಸ್ಪತಿಕಾಯಂಗಳೊಂದೊಂದು ಚತುರ್ವಿರ್ಧಂ ಪ್ರತ್ಯೇಕ ವನಸ್ಪತಿ ದ್ವಿವಿಧಮಂತು ದ್ವಾವಿಂಶತಿ ಭೇದಮಕ್ಕುವಲ್ಲಿ

ಮ || ಮನದೊಳ್ ನೀಲಕಪೋತಲೇಶ್ಯೆ ತೋಡರ್ದಾರ್ತಧ್ಯಾನಮಂ ಮಾಡೆ ಸ
ತ್ತೆನಸುಂ ಮಾಣದನೇಕ ರೂಪಕದ ತಿರ್ಯಗ್ಹಾತಿಯೊಳ್ಪುಟ್ಟಿ ಮ
ತ್ತೆನಿತಾನುಂ ತೆಱದಿಂ ವಿಘಾತಿಸೆ ಮಹಾಸಂಕ್ಲೇಶದಿಂದಾವ ವೇ
ದನೆಯಿಂದಿರ್ಪುವು ಜೀವರಾಶಿ ಪಲವುಂ ಸಂತಾಪದಿಂ ಪಾಪದಿಂ  ೪

ವ || ಅಂತವು ಮುನ್ನಿನ ತಮ್ಮ ಮಾನ ಮಾಯಾಕಷಾಯೋದ್ರೇಕದೊಳಾದಶುಭ ಪರಿಣಾಮದಿಂ ಪುಟ್ಟಿ ನಮೆಯುತ್ತುಂ

ಕಂ || ಶೀತದಿನುಷ್ಣದಿನುತ್ಕಟ
ವಾತದಿನನ್ಯೋನ್ಯ ಘಾತದಿಂ ತೀವ್ರ ರುಜಾ
ವ್ರಾತದಿನತಿಕ್ಷುದಾ ತೃ
ಡ್ಜಾತದಿನಸುಸಮಿತಿ ಬಿಡದೆ ನೋಗುಂ ಸಾಗುಂ  ೫

ವ || ಮತ್ತಮಲ್ಲಿ ಪರವಶಮಾಗಿ ಕೆಲವು ಜೀವಂಗಳ್

ಉ || ಕಟ್ಟಿ ತೊಡಂಕೆ ನೂಂಕೆ ಸುಡೆ ಮರ್ದಿಡೆ ಬೆರ್ಚಿಸೆ ನೋಯೆ ಗಂಟಲಂ
ಮೆಟ್ಟೆ ಪೊರಳ್ಚೆ ಪೇಱೆ ಬಿಡದೇಱೆ ತಗುಳ್ದುಱೆ ಸುತ್ತೆ ಮುತ್ತೆ ಬೆ
ನ್ನಟ್ಟಿ ಬೞಲ್ಚೆ ಸಾರ್ದಿೞಿಸೆ ಪೋರಿಸೆ ಪಾಱಿಸೆ ಬಯ್ಯೆ ಪೊಯ್ಯೆ ಬಾ
ಯ್ವಿಟ್ಟತಿದುಃಖದೊಳ್ ನಮೆಯುತಿರ್ಪುವನಪ್ಪೊಡಮೇನೊ ಕಾಣಿರೇ  ೬

ವ || ಅಂತುಮಲ್ಲದೆಯುಂ

ಕಂ || ಎನಿತಾನುಂ ತೆಱದಿಂದಂ
ದನವರತಂ ಬೆಂದು ನೊಂದು ಬೆೞ್ದುರ್ತು ಕರಂ
ಕನಲುತ್ತಳಿಪುತ್ತೞಲು
ತ್ತೊನಲುತ್ತಗಿದಗಿದು ನಮೆಗುಮೀ ತಿರ್ಯಂಚಂ   ೭

ವ || ಈ ತೆಱದಿಂ ನಮೆವ ತಿರ್ಯಗ್ಲೋಕದ ಜೀವರಾಶಿಗಳೆಲ್ಲಮೆಲ್ಲಾ ಲೋಕದ ಜೀವ ರಾಶಿಗಳಂ ನೋಡೆ ಕರಂ ಪಲವೆಂದು ಕಿಱಿದಱೊಳೆ ಪೇೞ್ದೆನಿನ್ನಾ ಮನುಷ್ಯ ಗತಿಯೆಂಬುದದು ತಾಂ ಜಂಬೂದ್ವೀಪದ ಲವಣಸಮುದ್ರದ ಧಾತಕೀಷಂಡದ ಕಾಳೋದಕ ಸಮುದ್ರದ ಪುಷ್ಕರವರ ದ್ವೀಪಾರ್ಧಸ್ಥಿತ ಮಾನುಷೋತ್ತರ ಮಹೀಧರಾವಧಿಯಪ್ಪುದಲ್ಲಿ ಕರ್ಮಭೂಮಿ ಭೋಗಭೂಮಿಪ್ರಕಾರದಿಂ ದ್ವಿವಿಧಮಕ್ಕುಮಾ ಭೋಹಭೂಮಿಯೊಳ್

ಉಪಜಾತಿ || ಮದ್ಯಾಂಗ ತೂರ್ಯಾಂಗ ವಿಭೂಷಣಾಂಗಂ
ಜ್ಯೋತಿರ್ಗೃಹಾ ಭೋಜನ ಭಾಜನಾಂಗಂ
ಪ್ರದೀಪ ವಸ್ತ್ರಾಂಗ ವರಸ್ರಜಾಂಗಂ
ದಶಪ್ರಕಾರಂ ದ್ರುಮಮಸ್ತಿ ತತ್ರಾ  ೮

ವ || ಮದ್ಯಾಂಗ ತೂರ್ಯಾಂಗ ವಿಭೂಷಣಾಂಗ ಜ್ಯೋತಿರಾಂಗ ಗೃಹಾಂಗ ಭೋಜನಾಂಗ ಭಾಜನಾಂಗ ದೀಪಾಂಗ ವಸ್ತ್ರಾಂಗ ಮಾಲ್ಯಾಂಗಮೆಂಬ ದಶವಿಧ ಕಲ್ಪವೃಕ್ಷಂಗಳುಂ ಬಗೆದ ವಸ್ತುವನೀಯೆ ನಿರಂತರಂ ಭೋಗಭಾಗಿಗಳಪ್ಪುದಱಿಂ ಧರ್ಮಕಾರ್ಮಾನುಷ್ಠಾನಮಿಲ್ಲ. ಮ್ಲೇಚ್ಛಖಂಡಂಗಳೊಳಂ ಧರ್ಮವಿಲ್ಲ ವಿನೀತಾಖಂಡದೊಳುಂಟದಱೊಳ್

ಚಂ || ಸಮಸಮನಾಗೆ ಪಾಪಮುಮನೊಪ್ಪುವ ಧರ್ಮಮುಮಂ ನಿಜಕ್ರಮ
ಕ್ರಮದೊಳೊಡರ್ಚೆ ನೆಟ್ಟನೆ ಶುಭಾಶುಭಮೆಂಬೆರಡುಂ ವಿಚಿಂತೆಗಳ್
ಸಮನಿಸೆ ಪೊರ್ದಿ ದುಃಖಸುಖಮಿಶ್ರಿತಮಪ್ಪ ಮನುಷ್ಯಲೋಕದೊಳ್
ನಮೆವುತುಮಲ್ಪಮಪ್ಪ ಸುಖಮುಂ ಬೆರಸಿರ್ಪುವು ಜೀವರಾಶಿಗಳ್   ೯

ವ || ಮಹಾಸಮುದ್ರದ ಕೆಲದೊಳೊಂದೊಂದು ಕಿಱಿದಾನುಂ ಕೊಳಂಗಳಿರ್ಪಂತೆಲ್ಲಾ ಗತಿಗಳೊಳಂ ಕ್ಷೇತ್ರ ಪ್ರಮಾಣದಿಂ ಜೀವಸಮೂಹಂ ಪಿರಿಯವಪ್ಪೆಲ್ಲಾ ಗತಿಗಳ್ಗಂ ಮನುಷ್ಯಗತಿಯೇ ಕಿಱಿದಪ್ಪುದಱಿನದಂ ಬೇಗಮಱಿಯೆ ಪೇೞ್ದೆಂ ದೇವಲೋಕಮೆಂತೆನೆ ಮಂದರಮಹೀಧರರ ಕೆಳಗಣ ಚಿತ್ತೆಯೆಂಬ ನೆಲದಡಿಯ ವಜ್ರೆಯೆಂಬ ಭೂಮಿಯೊಳಗೆ ಅಸುರ ನಾಗ ವಿದ್ಯುತ್ ಸುಪರ್ಣಾಗ್ನಿ ವಾತ ಸ್ತನಿತೋದಧಿ ದ್ವೀಪ ದಿಕ್ಕುಮಾರಾಭಿಧಾನಕುಲ ವಿಕಲ್ಪದಿಂ ದಶವಿಧಮಾಗಿರ್ದ ಭವನವಾಸಿಗರಿಂದಂ ಅಸಂಖ್ಯಾತ ದ್ವೀಪ ಸಮುದ್ರಾಂತವರ್ತಿಗಳಪ್ಪ ರಮ್ಯ ಕ್ಷೇತ್ರಂಗಳೊಳ್ ವಸಿಯಿಸುವ ಕಿನ್ನರ ಕಿಂಪುರುಷ ಮಹೋರಗ ಗಂಧರ್ವ ಯಕ್ಷ ರಾಕ್ಷಸ ಭೂತ ಪಿಶಾಚಕುಲ ನಾಮಪ್ರಕಾರದಿಂದಷ್ಟ ವಿಧಮಪ್ಪ ವಾನವ್ಯಂತರಿಗರಿಂದೀ ನೆಲದ ಮೇಲೆ ನೂಱತೊಂಬತ್ತು ಯೋಜನಂ ನೆಗೆದಲ್ಲಿ ನೂಱಹತ್ತು ಯೋಜನ ಬಾಹುಳ್ಯಮಾಗಿ ಮೇರುವಿನ ಬಳಸಿಯುಮೊಂದು ರಜ್ಜುವಿನಗಲದಿಂ ಚಂದ್ರಾದಿತ್ಯ ಗ್ರಹ ನಕ್ಷತ್ರ ತಾರಾಕಾಭೇದದಿಂ ಪಂಚವಿಧಮಪ್ಪ ಜ್ಯೋತಿರ್ಲೋಕದ ದೇವರಿಂ ಮೇರುಶಿಖರದಿಂ ಮೇಗೇಕರಜ್ಜು ಪ್ರದೇಶದೊಳಗಷ್ಟ ಪಟಲಾಂತರಿತಮಪ್ಪ ಸೌಧರ್ಮೈಶಾನ ಸನತ್ಕುಮಾರ ಮಾಹೇಂದ್ರ ಬ್ರಹ್ಮ ಬ್ರಹ್ಮೋತ್ತರ ಲಾಂತವ ಕಾಷಿಷ್ಠ ಶುಕ್ತ ಮಹಾಶುಕ್ರ ಶತಾರ ಸಹಸ್ರಾರಾನತ ಪ್ರಾಣತಾರಣಾಚ್ಯುತ ವಿಕಲ್ಪದಿಂ ಷೋಡಶವಿಧ ವಿಮಾನಪಂಕ್ತಿಗಳೊಳಿರ್ಪ ಕಲ್ಪವಾಸಿಗರಿನಲ್ಲಿಂ ಮೇಲೆ ನವಗ್ರೈವೇಯಕ ನವಾಣೂತ್ತರೆ ಪಂಚಾಣೂತ್ತರೆಗಳೊಳಿರ್ಪಹಮಿಂದ್ರರ್ಕಳಿಂದೈದು ತೆಱನಕ್ಕುಮಂತಲ್ಲಿ ಪುಟ್ಟುವರೆಂತಪ್ಪರೆಂದೊಡೆ

ಕಂ || ಪಿರಿದಪ್ಪ ಧರ್ಮದಿಂದ ಕರ
ಮರಿದಪ್ಪ ತಪಂಗಳಿಂ ಸಮಾಧಿಯ ಫಲದಿಂ
ಸುರಲೋಕದಲ್ಲಿ ಪಾಸಿನ
ಪೊರೆಯೊಳ್ ಸಂಭವಿಸಿ ದಿವ್ಯದೇಹಿಗಳಪ್ಪರ್  ೧೦

ವ || ಅಂಡಜ ಪಿಂಡಜ ವಾಳಜ ವಲ್ಕಜ ರೋಮಜಮೆಂಬೈದುಂ ತೆಱದ ಪಾಸಿನ ಪೊರೆಯೊಳ್ ಪುಟ್ಟಿದಂತರ್ಮುಹೂರ್ತದಿಂ ಷೋಡಾಶಾಭರಣ ಭೂಷಿತರಾಗಿ ನವಯೌವನವಯಸ್ಕರಾಗಿರೆ ಪರಿವಾರದೇವರ್ಕಳ್ ಬಂದು ನಾನಾ ವಿಧಾತಿಶಯ ವಸ್ತುಗಳಿಂದೋಲಗಿಸೆ

ಉ || ನಚ್ಚುವ ರತ್ನದಿಂ ಸಮೆದ ಮಾಡದೊಳೊಪ್ಪುವ ದಿವ್ಯ ಶಯ್ಯೆಯೊಳ್
ಮೆಚ್ಚಿದ ವಸ್ತುಗಳ್ ತಮಗೊಡಂಬಡೆ ಬಂದಿರೆ ನಿಚ್ಚಮೞ್ತಿಯೊಳ್
ಮೆಚ್ಚಿದ ಮೆಚ್ಚ ನಿಶ್ಚಯಿಸುವಚ್ಚರಕನ್ನೆಯರೊಳ್ ಸರಾಗದಿಂ
ಬಿಚ್ಚತಮಾಗಿ ಕೂಡಿ ಸುಖಮಿರ್ಪರನಿಂದಿತ ದೇವಲೋಕದೊಳ್  ೧೧

ವ || ಅದಲ್ಲದೆಯುಂ

ಕಂ || ಕಲ್ಪಕುಜಸಮಿತಿ ತೊಳಗುವ
ನಲ್ಪ ಫಲಪ್ರಣುತ ನೂತ್ನ ಚಿಂತಾಮಣಿ ಸಂ

ಕಲ್ಪಮನೀಯುತ್ತಿರೆ ಸಲೆ
ಕಲ್ಪಾಯುವಿನೊಡೆಯರಾಗಿ ಸುಖದಿಂದಿರ್ಪರ್  ೧೨

ವ || ಅಂತವರ್ಗಳ್ ಅಣಿಮ ಮಹಿಮ ಲಘಿಮ ಪ್ರಾಪ್ತಿ ಪ್ರಾಕಾಮ್ಯ ಈಶಿತ್ವ ವಶಿತ್ವ ಕಾಮರೂಪಿತ್ವಮೆಂಬಷ್ಟೈಶ್ವರ್ಯದೊಳ್ ಕೂಡಿ ಸುಖಮಿರ್ಪರೆಂದು ದೇವಲೋಕದ ಸ್ಥಿತಿಯನಿನಿಸಾನುಮಱಿಯೆ ಪೇೞ್ದಿಂತಪ್ಪ ಮೂಱುಂ ಲೋಕದ ತುದಿಯೊಳ್ ನಾಲ್ವತ್ತೈದು ಲಕ್ಷ ಯೋಜನ ವಿಸ್ತಾರದಿನಷ್ಟ ಯೋಜನ ಬಾಹುಳ್ಯದಿಂ ಶುದ್ಧ ಸ್ಪಟಿಕಮಯಮಾಗಿರ್ದ ಸಿದ್ಧಕ್ಷೇತ್ರದಲ್ಲಿಗೆ

ಚಂ || ಪರಮ ತಪೋನಿಯೋಗಸಹಿತರ್ ಮಹಿತರ್ ನೆಗೞ್ದಿರ್ದ ಷೋಡಶೋ
ತ್ಕರತರ ಭಾವನಾನ್ವಿತರನಿಂದಿತರೂರ್ಜಿತರಾರ್ಜಿತವ್ರತರ್
ನಿರುಪಮ ಋದ್ಧಿ ಶುದ್ಧ ಪರಿಣಾಮವಿಶೇಷರಶೇಷ ಕರ್ಮದಿಂ
ವಿರಹಿತರಾಗಿ ಪೋಗಿ ನೆಲಸಿರ್ದರಸಂಚಳ ಸಿದ್ಧ ಭೂಮಿಯೊಳ್  ೧೩

ವ || ಕಿಂಚಿದೂನ ಚರಮ ಶರೀರಪ್ರಮಾಣದೊಳಶರೀರ ಜೀವ ಘನಾಕಾರಾದಿನನಂತ ಜ್ಞಾನಾನಂತದರ್ಶನಾನಂತವೀರ್ಯ ಸೂಕ್ಷ್ಮ ತ್ವಾವಗಾಹನಾಗುರುಲಘುತ್ವ ಕ್ಷಾಯಿಕ ಸಮ್ಯಕ್ತ್ವಾವ್ಯಾಬಾಧಮೆಂಟುಂ ಗುಣಂಗಳನುಳ್ಳ ಸಿದ್ಧ ಪರಮೇಷ್ಠಿಗಳಿರ್ಪ ಮೋಕ್ಷಪದವಿಯಂ ಪಡೆವ ಕರ್ಮಕ್ಷಯಂ ಕಾರ್ಯಮುಮಂ ಪೇೞ್ದು ಮೂಱುಂ ಲೋಕದೊಳಗೆ ಮಧ್ಯಮ ಲೋಕದೊಳಿರ್ದೀ ಮನುಷ್ಯಗತಿಯೊಳಲ್ಲದೆಲ್ಲಿಯುಂ ಸುಗತಿಯಿಲ್ಲಪ್ಪುದಱಿಂದೆಲ್ಲಾ ಗತಿಗಳ್ಗಂ ಮನುಷ್ಯಗತಿಯಗ್ಗಳಮಪ್ಪುದಲ್ಲಿಯುಂ

ಕಂ || ಕರಮಗ್ಗಳಮವು ವಸ್ತುಗ
ಳೆರಡೆರಡೆ ವಿಶುದ್ಧಮಪ್ಪ ತಪಮುಂ ಶ್ರುತಮುಂ
ಭರದಿನವಂ ತಾಳ್ದಿರ್ದಂ
ಗರಿದೆ ನೆಗೞ್ದಿಂದ್ರಗತಿಯುಮಾ ನಿರ್ವೃತಿಯುಂ   ೧೪

ವ || ಅಂತು ಮುಕ್ತಿಶ್ರೀಯಂ ಪಡೆಯಲಾರ್ಪ ತಪಮುಂ ಶ್ರುತಮುಮೀ ಮೆಯ್ಯೊಳ್ ದೊರೆಕೊಂಡು ನೆಗೞ್ವಂಗೆ ಜಯಶ್ರೀಯಂ ಪಡೆಯಲಾರ್ಪ ಕೆಯ್ದುಂ ಬಲಮುಂ ದೊರೆಕೊಂಡು ಪಗೆಯಂ ಸಾಧಿಸುವಂಗೆರಡುಂ ಶ್ರೀಗಳುಂ ಕೂಡಿ ಬರ್ಕುಂ ಮತ್ತಮೀ ಲೋಕದೊಳ್ ಪಾರತ್ರಿಕಮೈಹಿಕಮೆಂಬೆರಡುಂ ಕಾರ್ಯಂಗಳ್ಗೆ ಪ್ರಧಾನಕಾರಣಮಪ್ಪ

ಚಂ || ಅಱಿತದೊಳೊಂದಿದೊಂದು ತಪಮುಂ ಸುಜನತ್ವದೊಳೊಂದಿ ಪೆಂಪಿನೊಳ್
ನೆಱಿದರಸುಂ ಜಗಂಗಳೊಳಗಗ್ಗಳಮಿಂತೆರಡಲ್ಲಿ ರಾಜ್ಯಮಂ
ತೊಱಿದು ತಪಕ್ಕೆ ಬರ್ಪ ಬರುವುತ್ತಮಮೊಳ್ತಪಮಂ ಬಿಸುಟ್ಟು ಬಂ
ದಱಿಕೆಯ ರಾಜ್ಯದತ್ತೆಱಗುವಂದದು ಕಷ್ಟಮನಿಷ್ಟಮೆಲ್ಲಿಗಂ   ೧೫

ವ || ಮಱುಗಿಸಿದ ಪಾಲಂ ಖಂಡಶರ್ಕರೆಯುಮಂ ಬಿಸುಟ್ಟಳೆಗಾಸೆಗೆಯ್ವಂತೊಳ್ಳಿತಪ್ಪ ತಪಮುಮಂ ಶ್ರುತಮುಮಂ ಬಿಸುಟ್ಟು ರಾಜ್ಯಕ್ಕಳಿಪುವುದು ಮರುಳ್ತನಮಱಿ ವಿಂಗಮಳಿಪಿಂಗಮಾವುದಂತರಂ

ಕಂ || ಪರಮಾಣು ಕಿಱಿದು ಗಗನಂ
ಪಿರಿದೆಂಬರ್ ಕಂಡರಿಲ್ಲ ದೀನತೆ ಕಿಱಿದಾ
ಪರಮಾಣುಗೆ ಗಗನಕ್ಕುಂ
ಪಿರಿದಭಿಮಾನಮೆ ದಲೆಂದು ನುಡಿವರ್ ಕಂಡರ್   ೧೬

ವ || ಎಲ್ಲವಱಿಂ ಕಿಱಿದಪ್ಪ ಪರಮಾಣುವಿಂಗಮಾ ದೀನತೆ ಕಿಱಿದೆಲ್ಲವಱಿಂ ಪಿರಿ ದಪ್ಪಾಕಾಶಕ್ಕಭಿಮಾನಮೇ ಪಿರಿದೆಂದು ಬಗೆದಳಿಪಂ ತೊಱೆದು ಪೆಂಪಂ ತಳೆವುದಾತನೆನಸುಂ ದೋಷಮನಾಗಲೀಯದಿರ್ಪುದೇಕೆಂದೊಡೆ

ಮ || ಕಿಱಿದಾನುಂ ಕಱೆಯಿಂ ಕಳಂಕಿ ಶಶಿ ತಾನೆಂಗುಂ ಜನಂ ರಾಹು ಮೆಯ್
ನೆಱೆಯೆಲ್ಲಂ ಕರಿದಾಗೆಯುಂ ಕಱೆಯದರ್ಕುಂಟೆಂಬರೇ ಪಾಪದ
ತ್ತೆಱಗಿರ್ದಾತನ ದೋಷದುರ್ವಿನಮನಾರ್ ಕಾಣ್ಬರ್ ಗುಣಶ್ರೇಣಿಗಳ್
ತುಱುಗಿರ್ದಂಗಿನಿಸಾನು ದೋಷಮನದಂ ಬೆಟ್ಟಾಗೆ ಕಾಣ್ಗುಂ ಜನಂ   ೧೭

ವ || ಅದಱಿಂ ಗುಣದೊಳ್ ಪ್ರಭುವಪ್ಪಾತಂ ದೋಷಕ್ಕಂಜಿ ನೆಗೞ್ವುದು

ಕಂ || ತೊಱೆದು ಪರಿಗ್ರಹಮೆಲ್ಲಮ
ನಱಿದು ತಪಂಗೆಯ್ವನಗ್ಗಳಂ ತಪದೊಳ್ಪಂ
ತೊಱೆದು ಮತಿ ಮಱೆದು ಪೞಿಯಂ
ಮೆಱೆದು ಗುಣಂಗೆಟ್ಟ ದುಷ್ಟನವನೆ ಕನಿಷ್ಟಂ   ೧೮

ವ || ಪರವಿಯೊಳ್ ತೀವಿದ ಪಾಲೆಲ್ಲಮಿನಿಸಾನುಂ ಪುಳಿ ಪೊರ್ದಿದನಿತಱೊಳೆ ಮುನ್ನಿನ ಗುಣಮುಂ ಸವಿಯುಂ ಕಿಡುವಂತೆ ಪೊಲ್ಲಮೆ ಕಿಱಿದಾದೊಡಂ ಮುನ್ನುಳ್ಳ ಗುಣಮೆಲ್ಲ ಮನೞಿಗುಮೆಂದಂಜಿ ನೆಗೞ್ವುದೆಂದಿಂತು ಸಾಮಾನ್ಯ ಜೀವಿಂಗಳೆಲ್ಲಂ ಪೇೞ್ದು ತಪಂಗೆಯ್ದು ಬಿಡುವರ ಕೇಡಿಂಗಂ ಕರಮೞಲ್ದು ಮತ್ತಮಿಂತೆಂಗುಂ

ಮ || ನೆಲವಾಸಿಂ ನೆಲದತ್ತ ಬೀೞ್ವಳವಿಗಂ ಕೂಸಂಜುಗುಂ ನಾಡೆಯುಂ
ಫಲಮಂ ಪೂಣ್ದು ತಪಕ್ಕೆ ವಂದು ತಪದಿಂ ಮೇಲಾದ ಲೋಕಂಗಳೊಳ್
ನೆಲೆಯಪ್ಪಮತಿರೆ ಮಾಡದತ್ತಣಿನಧೋಭಾಗಕ್ಕೆ ಬಿೞ್ತಪ್ಪುದ
ರ್ಕೆಲೆ ನೀನಂಜಲೆಯಲ್ತೆಯೇಂ ಕಲಿಯೆಯೋ ದೀನಾತ್ಮ ಹೀನಕ್ತಿಯಾ   ೧೯

ವ || ಭಯಮನಱಿಯದ ಪಸುಗೂಸುಗಳುಂ ನೆಲವಾಸಿಂ ನೆಲಕ್ಕೆ ಬೀೞ್ವನಿತರ್ಕಂಜು ಗುಮೆಂದೊಡೆ ಸಂಸಾರಭಯಮನಱಿದು ತಪಂಗೊಂಡು ತಪದಿಂ ಮೇಲಾದ ಲೋಕದೊಳದ ದೀರ್ಘಾಯುಷ್ಯಮಂ ಕಟ್ಟಿರ್ದಗಾಧಮಪ್ಪಧೋಲೋಕಕ್ಕೆ ಬೀೞ್ತರ್ಪುದಕ್ಕಂಜುಂವೆಯೆಲೆ ತಪಸ್ವಿ ನಿನ್ನನ್ನರ್ ಕಲಿಗಳಾರೆಂದು ತೆಗೞ್ದು ಮತ್ತಮಿಂತೆಂಬರ್

ಕಂ || ಇಲ್ಲಿ ಸುಖಿಯಾಗೆ ಮಱುಭವ
ದಲ್ಲಿ ಸುಖಂ ಬಾೞ್ಗು ಮೞಲಿಗೞಲೆಯ್ದುಗುಮೆಂ
ಬಲ್ಲಿತೆ ತತ್ತ್ವಂ ಮೋಹಮ
ನೊಲ್ಲದವಂ ಸುಖಿ ವಿಮೋಹಿಯೞಲಿಗನದಱಿಂ   ೨೦

ವ || ಮಱುಕಮಂ ಬಿಸುಟ್ಟ ಋಷಿಗೆ ಸುಖಿಯೆಂಬ ಪೆಸರಾಯ್ತೆಂಬುದಂ ಬಗೆದು ನೀಂ ಪ್ರಮಾಧಿಯಾಗದಿರೆಲೆ ತಪೋಧನಾ ಕೇಳೀ ಕಾಲದ ಪೊಲ್ಲಮೆಯಂ

ಮ || ಕ್ರಮದೊಳ್ಪಿಂಗೆ ಗೃಹಸ್ಥರೀವರುಣಿಸಂತರ್ಕಂ ತಗುಳ್ದಿರ್ದ ಮೆ
ಯ್ಯೆಮದಲ್ತೆಂದವರೊಪ್ಪಿಕೊಳ್ವರದುವುಂ ಸರ್ವೋಪಕಾರಕ್ಕೆ ಸಂ
ಯಮಮಿಂತಪ್ಪೆಡೆಯಲ್ಲಿ ಪುಟ್ಟುವುದು ರಾಗದ್ವೇಷಮೇಂ ಪೆರ್ಚಿದ
ಕ್ರಮದಿಂ ಬಲ್ಲಿದನಾವನೋ ಕಲಿಯುಗಪ್ರಖ್ಯಾತ ರಾಜೇಶ್ವರಂ  ೨೧

ವ || ವಿಷಯಂಗಳೆಲ್ಲಮಂ ಗೆಲ್ದು ಗೆಲ್ಲಂಗೊಂಡಿರ್ದ ತಪಸ್ವಿಯೆಂಬ ಬಲ್ಲಾಳುಮಂ ಪೊರ್ದಿ ಕಲಿಕಾಲಮೆಂಬತಿಪರಾಕ್ರಮಿಯಿಂ ಬಸನಕ್ಕೆ ಸೋಲ್ತು ಪರಿಗ್ರಹ ಭರಾಕ್ರಾಂತರಾಗಿರ್ದೇಳಿ ದರನೇಗೆಯ್ಯನೆಂದು ಬಗೆದು ಗೃಹಸ್ಥರ್ ನಿಮ್ಮ ಗುಣದ ಕೇಡಿಂಗೆ ವೆರ್ಚದಿರ್ಪಿರೆಂಬುದೆಂತೋ

ಕಂ || ಕೇಡಿನೊಳಪ್ಪುದು ದುಃಖಂ
ನಾಡೆ ಸುಖಂ ಲಾಭದಿಂದಮೆಂಬುದನಱಿದುಂ
ನೋಡಿರೆ ಲಾಭಮನೊಲ್ಲದೆ
ಕೇಡೆಯ್ದಲ್ ಬಗೆವಿರಿದುವೆ ಚೋದ್ಯಂ ಜಗದೊಳ್   ೨೨

ವ || ಪಣದ ಕೇಡು ದುಃಖಮಂ ಮಾಡುಗುಮೆಂದೊಡೆ ಗುಣದ ಕೇಡಿಂದಪ್ಪ ದುಃಖಂ ಸಾಮಾನ್ಯಮಕ್ಕುಮೆ? ಕೆಮ್ಮನಾಲಸ್ಯಮಂ ಮಾಡಿ ಕೆಟ್ಟಪಿರಕ್ಕಟಾ ಕಲಿಯುಗದುಗ್ರತೆಯಂ ಬಗೆಯಿರಾಗದೆ

ಮ || ಬಿಸುಟೀ ಸಂಸೃತಿಹೇತುವಪ್ಪ ಪಲವುಂ ದೋಷಂಗಳಂ ಮೆಲ್ಪಿನಿಂ
ದೊಸೆದೊಪ್ಪಿರ್ದ ಮಹಾತಪೋಧನರೊಳಂ ತಂತಮ್ಮೊಳೊಂದೊರ್ವರೊಳ್
ನಿಸದಂ ಬೆಕ್ಕಿನ ಮೂಷಕಂಗಳೆಡೆಯೆಂತಂತಾಗೆ ಮಾಡಿರ್ಕುಮೇಂ
ಮುಸಗಿತ್ತೋ ಕಲಿಕಾಲರಾಜನ ಮಹಾತ್ಯುಗ್ರಪ್ರತಾಪಾನಳಂ   ೨೩

ವ || ತಪೋಧನರೆಂಬ ಮಹಾಸಮುದ್ರಮಂ ಶೋಷಿಸುವ ಕಲಿಕಾಲರಾಜನ ಮಹಾಪ್ರತಾಪಾಗ್ನಿ ಗೃಹಸ್ಥರೆಂಬ ಬೆಳ್ಗಂಡರುಮನುೞಿಯಲೀಗುಮೆ? ಬೇಗಮೀ ಕಲಿಕಾಲದೊಳ್ ಗುಣವಂತನಾಗಿರ್ಪುದೊಳ್ಳಿತ್ತೆನ್ನಾ

ಕಂ || ಮನೆಯೊಳಿರುಳ್ ಸೊಡರೆಸೆವಂ
ತನುಪಮ ಗುಣಮಿ ಮನುಷ್ಯಲೋಕದೊಳನಯಂ
ಘನಮಾಯ್ತೀ ಕಲಿಕಾಲದೊ
ಳನೂನಮಾಗೆಸೆವುದಿಲ್ಲಿ ತಡೆವುದು ಚದುರೇ   ೨೪

ವ || ಸೊಡರ್ ಬೆಳಗುವಾಗಳ್ ಕಿಱಿದಪ್ಪೋವರಿಯೊಳಂ ಕೞ್ತಲೆಯೊಳೊಳ್ಳಿತ್ತಾಗಿ ಬೆಳಗುಗುಂ ಗುಣಮೆಸೆವಾಗಳೀ ಮನುಷ್ಯಭವದೊಳಂ ಪೊಲ್ಲದಪ್ಪ ಕಲಿಕಾಲದೊಳಮೆಸೆಗುಗುಮದ ಱಿನೀಗಳೆ ಗುಣಂಗಳಂ ಕೆಯ್ಕೊಳ್ವುದಿೞಿಕೆಯ್ವಂತಾ ಗುಣಂಗಳಳಿಯವೆ

ಮ || ಅರಸರ್ ಪಾೞಿಗೆ ದಂಡಿಪರ್‌ಕಸವರಕ್ಕೆಂದಲ್ಲ ದಾಚಾರ್ಯರುಂ
ಕರುಣಂ ಕೆಯ್ಮಿಗೆ ಕಲ್ಪಿಪರ್ ಬೆಸಗೆಯಲ್ಕೆಂದಿರ್ಪವಂಗಲ್ಲದಿಂ
ತೆರಡುಂ ಲಕ್ಷ್ಮಿಗೆ ಕಾರಣಂ ಪ್ರಭುಗಳಾದೊಂದಂದಮಿಯಂದಮೇ
ನರಿದೋ ಪೇೞ್ ಕಲಿಕಾಲ ದೋಷರಹಿತ ಪ್ರಾರಂಭಶುಂಭದ್ಗುಣಂ   ೨೫

ವ || ಗೃಹಸ್ಥರೊಳ್ ಮಿಗಿಲಪ್ಪರಸರುಂ ಮುನ್ನಾದರ್ ತಪಸ್ಥರೊಳ್ ಮಿಗಿಲಪ್ಪಾಚಾರ್ಯರುಂ ಮುನ್ನಮಾದರ್ ಪರೋಪಕಾರಗುಣಮಿಗಳಾರೊಳಮಿಲ್ಲ ಬೇಗಮಱಿವು ದೊರೆ ಕೊಂಡಲ್ಲಿಯೆ ಗುಣಂಗಳಂ ಕೆಯ್ಕೊಂಡು ನೆಗೞಿಮೆಂದು ಕಲಿಕಾಲದ ಪೊಲ್ಲಮೆಯ ನಱಿಯೆ ಪೇೞ್ದು ಮತ್ತಂ ಪರಿಭಾಷೆಯೊಳಮಿಂತೆಂಬರ್

ಕಂ || ಒಡಲನೆ ಪೊರೆವಂ ಬಸನ
ಕ್ಕೊಡರಿಸುವಂ ಮುಚ್ಚಿದಂದದಿಂದಾಗದುದಂ
ಕಡೆಗಣಿಸದೆ ನೆಗೞ್ವನಿದೇಂ
ಕಡುಗಲಿಯೋ ದುಃಖದೆಡೆಗೆ ಬೆರ್ಚಿಲ್ಲದವಂ   ೨೬

ವ || ಈ ಲೋಕದೊಳ್ ಕಲಿ ಪೆಱನೊಳನೆ? ಮುಂದಣ ಕೇಡಿಂಗೞ್ಕದನೆ ಕಲಿ ಬಲ್ಲಾಳ್ ಪೆಱನೊಳನೆ? ಪಾಲಿಯೆ ಬಲ್ಲಾಳ್

ಉ || ನೆಟ್ಟನೆ ಸರ್ವಭಕ್ಷಿ ಭುವನತ್ರಯಮೆಲ್ಲಮನೇನೊ ನುಂಗನೇ
ತೊಟ್ಟನೆ ನುಂಗುಗುಂ ತನಗೆ ದೇಹದ ಪೆಂಪಿನಿತಿಲ್ಲದಿರ್ಪಿನಂ
ತಿಟ್ಟಳಮಲ್ತು ರಾಹು ತನುವಿಲ್ಲದೆ ತಾನುಗುೞ್ದಪ್ಪನೇಂ ಮನಂ
ಗೆಟ್ಟುಗುೞ್ದಪ್ಪನೇ ರವಿ ನಿಶಾಕರರಂತೆ ನಿವೃತ್ತಿಯಿಲ್ಲದೊಂ   ೨೭

ವ || ರಾಹುವಿಂಗೆ ಮೆಯ್ಯಿಲ್ಲದೆ ಚಂದ್ರಾದಿತ್ಯರುೞಿವಂತೆ ಪಾಪಕ್ಕೆ ಪೇಸದಂಗೞ್ಕಿಸ ಲಾರ್ಪನಿತುಂ ಮೆಯ್ಯಿಲ್ಲದೀ ಮೂಱುಂ ಮೋಕಮುೞಿದಪ್ಪುದಲ್ಲದೊಡವನ ಬಸಿಱೊಳಗೞ್ಕಿ ಕಿಡದೇಕಿರ್ಕುಮಂತಪ್ಪ ಮಹಾಪಾತಕಂಗಂಜಿ ಮಹಾವ್ರತಂಗಳಂ ತಾಳ್ದುವುದು

ಕಂ || ಮಾನಸಲೋಕಂ ಮಿಥ್ಯಾ
ಜ್ಞಾನಿಗೆ ಕಡುಪೊಲ್ಲಕೆಯ್ಗುಮೊಳ್ಳಿತು ಸಮ್ಯತ್
ಜ್ಞಾನಿಗಭಿಮಾನಿಗನುಪಮ
ದಾನಿಗೆ ಗುಣರತ್ನಮಿಲ್ಲಿ ದೊರೆಕೊಳ್ವುದಱೆಂ   ೨೮

ವ || ಆವೆಡೆಯೊಳಂ ಪರದಱೆಯದೊಂಗಂ ಸೋಂಬಂಗಮೇನೊಳ್ಳಿಕೆಯ್ಗುಮೆ ಲಾಭಮಱಿದು ಕ್ರಯ ವಿಕ್ರಯಂಗೆಯ್ವೊಂಗೊಳ್ಳಿಕೆಯ್ಗುಮಂತೆ ಮನುಷ್ಯ ಭವದಱಿವಿಲ್ಲದಂಗೊಳ್ಳಿ ತಲ್ತಱಿದಾರ್ತು ನೆಗೞ್ವೊಂಗೊಳ್ಳಿತ್ತೆಂದಿತು ಮೂಱುಂ ಲೋಕದ ವಿಭಾಗಸ್ಥಿತಿಗಳುಮಂ ಜೀವಾವಸ್ಥೆಗಳುಮಂ ಪೇೞ್ದೊಡಂ ತಿಳಿಯರದಂ ಕೇಳ್ದಾಗಳೆ ತಿಳಿದಣ್ಮಿ ನೆಗೞ್ದರ ಕಥೆಯಂ ಕೇಳಿಮದೆಂತೆನೆ.

 

ಸುಕುಮಾರನ ಕಥೆ

ಕಂ || ಶ್ರೀ ವಿಲಸಜ್ಜನದಿಂದಂ
ತೀವಿರ್ಪುದವಂತಿವಿಷಯಮೆಂಬುದು ವಿಷಯಂ
ಭೂವಿದಿತಮುದಿತಮಭಿನುತ
ಮಾ ವಿಷಯದ ರಾಜಧಾನಿಯುಜ್ಜೇನಿಪುರಂ   ೨೯

ವ || ಆ ಪೊೞಲಂ ವೃಷಭಾಂಕನೆಂಬರಸನಾಳುತ್ತಿರ್ಪನಾ ಕಾಲದೊಳ್

ಕಂ || ಲಕ್ಕವೞಯಿಗೆಯ ಕೋಟಿಯ
ಲೆಕ್ಕದ ಪೞಯಿಗೆಯ ತನ್ನ ಪಡೆದೊಡಮೆಗಳೀ
ಲೆಕ್ಕಮೆನುತಿರ್ಪ ಪರದರ
ತಕ್ಕೊಕ್ಕಲ ಪವಣನಱಿಯೆನಾ ಪುರವರದೊಳ್   ೩೦

ವ || ವ ಮಾೞ್ಕೆಯುಳ್ಳವರ್ಗಳಲ್ಲದೆ ವೈಧ್ಯಜಾತಿಯೊಳಗ್ಗಳಮಪ್ಪ ಮೂಱುಂ ಪದವಿಯ ವರ್ಗಳುವಿರ್ಪರವರೆಂತಪ್ಪರೆಂದೊಡೆ

ಕಂ || ಪೊನ್ನೆಲ್ಲ ಮನೊರ್ಬುಳಿವೊ
ಯ್ದುನ್ನತನೇೞಗನನೇಱಿ ನೋಡುತ್ತಿರೆಯಾ
ಪೊನ್ನಿಂದಾ ದೆಸೆಯವರಂ
ಸನ್ನಿದಮೆನೆ ಕಾಣದನಿತಱೊಡೆಯವನೇೞಂ   ೩೧

ಉತ್ತುಂಗ ವೃಷಭಂ ತಾ
ನುತ್ತಮನೇಱಿರ್ದು ಕನಕಮಂ ಪುಂಜಿಸಿ ನೋ
ಡುತ್ತಿರೆ ರಾಶಿಯ ಮಱೆಯಿಂ
ದತ್ತಣರಂ ಕಾಣದನಿತಱೊಡೆಯಂ ಗೌತಂ   ೩೨

ಇಭಪತಿಯನೇಱಿ ವೈಶ್ಯ
ಪ್ರಭು ಪೊನ್ನಂ ರಾಶಿಮಾಡಿ ರಾಗದೆ ನೋಡು
ತ್ತಭಿನುತನಾ ದೆಸೆಯವರ್ಗಳ
ನಭಯಂ ತಾಂ ಕಾಣದನಿತಱೊಡೆಯವನಿಬ್ಬಂ   ೩೩

ವ || ಇಂತಪ್ಪ ಮೂಱುಂ ಪದವಿಗಳೊಳ್ ಇಬ್ಬಪದವಿಯುಳ್ಳಾತಂ ಸೂರದತ್ತನೆಂಬಂ ಪರದನಾತನ ಭಾರ್ಯೆ ಯಶೋಭದ್ರೆಯೆಂಬಳಾಕೆ ಪತಿಯ ಕೂರ್ಮೆಯೊಳಂ ತನ್ನ ಪೆರ್ಮೆಯೊಳಂ ನೆಱೆದು ಸುಖದಿನಿರೆ

ಶಾ || ಅಂತಪ್ಪಾಕೆಗೆ ಮಕ್ಕಳಿಲ್ಲದೆ ಕರಂ ಸಂಕ್ಲೇಶದಿಂದಾಗಳುಂ
ಚಿಂತಾಕ್ರಾಂತೆಯುಮಾಗಿ ಪೋಗೆ ಪಲವುಂ ಕಾಲಂ ಬೞಿಕ್ಕಲ್ಲಿಗ
ತ್ಯಂತ ಜ್ಞಾನವಿಶೇಷರಪ್ಪ ಮುನಿಪರ್ ಬಂದಿರ್ದೊಡಾ ಕಾಂತೆ ಕೇ
ಳ್ದಂತಾಗಳ್ ವಿವಿಧಾರ್ಚನಾಸಹಿತದಿಂದಾ ಸಂಯಮೋದ್ಯುಕ್ತರಂ   ೩೪

ವ || ಬೆಸಗೊಳ್ವೆನೆಂದು ಬಂದು ದೇವರನರ್ಚಿಸಿ ಭಟಾರರಂ ಬಂದಿಸಿ ಮುಂದೆ ಕುಳ್ಳಿರ್ದು ಕೆಯ್ಗಳಂ ಮುಗಿದು ಭಟಾರಾ ಬೆಸಸಿಮೆಮಗೆ ಮಕ್ಕಳಿಲ್ಲದೀ ಭವಮಿಂತೆಪೋಕುಮೋ ಪುತ್ರೋತ್ಪತ್ತಿಯೆಂತಾಗಿಯುಮಕ್ಕುಮೋಯೆಂದು ಕೆಯ್ಯಂ ಮುಗಿದಿರ್ದು ಬೆಸಗೊಳೆ ಭಟಾರಕರೆಂದರೆ ನಿಮಗೊರ್ವಂಸುಪುತ್ರನಕ್ಕುಮಾದೊಡಂ

ಕಂ || ತಂದೆ ಮಗಂ ಪುಟ್ಟಿದನೆಂ
ದಂದೆ ತಪಂಬಡುಗುವೊರ್ವ ಋಷಿರೂಪಂ ಕಂ
ಡಂದೆ ತಪಂಬಡುಗುಂ ಮಗ
ನೆಂದಾಗಳೆ ಬಳೆದುದಿಲ್ಲ ಪುಟ್ಟಿದ ರಾಗಂ    ೩೫

ವ || ಅಂತು ಯಶೋಭದ್ರೆಗೆ ಸಂತೋಷಮುಂ ನೋವುಮೊಡನೊಡನಾಗೆ ಭಟಾರರಂ ಬಂದಿಸಿ ಮನೆಗೆವಂದಿರ್ದು ಕೆಲವಾನುಂ ದೆವಸದಿಂ ಗರ್ಭಮಾಗೆ ನವಮಾಸಂ ನೆಱೆದು ಮಗನಂ ಪೆತ್ತೊಸಗೆಯಂ ಮಾಡಿದಾಗಳದಂ ಕೃಳ್ದು ಸುತಂಬಡೆದೆನೆ ಪರತ್ರೆಗೆ ಹಿತಂಬಡೆದೆನೆಂದಾಗಳ್ ಸೂರದತ್ತಸೆಟ್ಟಿ ತಪಂಬಟ್ಟು ಪೋದಂ ಇತ್ತ ಯಶೋಭದ್ರೆ ಪುರುಷನಗಲ್ಕೆಯೊಳುಬ್ಬೆಗಂ ಬಟ್ಟಿರ್ದುಂ ಪುತ್ರಮೋಹದಿಂದೞಲಂ ಸೈರಿಸಿರ್ದು ಕೂಸಿಂಗೆ ಸುಕುಮಾರನೆಂದು ಪೆಸರನಿಟ್ಟು ನಡೆಪುತ್ತುಂ ಋಷಿಯರೆಂಬ ಪೆಸರೊಳ್ ಚಿತ್ರದ ರೂಪನಪ್ಪೊಡಂ ಕಾಣದಂತೆ ಕಾಪಂಮಾಡಿ ವಿನೋದಂಗಳೆಡೆಯಪ್ಪಂತು ಸರ್ವತೋಭದ್ರಮೆಂಬ ಮಣಿಮಾಡಮಂ ಮಾಡಿಸಿ ನೆಲೆಯ ಮೇಗಣಿಂದಾತನಿೞಿಯಲೀಯದಂತು ನಿಶ್ಚಿಂತಮಿರಿಸಿ ಯೌವನ ಪ್ರಾಪ್ತನಾದಂದು ಶ್ರೀ ಹ್ರೀ ಧೃತಿ ಕೀರ್ತಿ ಬುದ್ಧಿ ಲಕ್ಷ್ಮಿಯೆಂಬಿವರ್ಗೆ ಸಮಾನರುಮಪ್ಪ

ಚಂ || ಚತುರಿಕೆ ಹೇಮಮಾಲೆ ರತುನಾವಳಿ ರೋಹಿಣಿ ನಂದೆ ಪದ್ಮೆ ರೇ
ವತಿ ಜಿನದತ್ತೆ ಪದ್ಮಿನಿ ಶಶಿಪ್ರಭೆ ಲಕ್ಷ್ಮೀ ಸುಭಾಗೆ ರತ್ನೆ ಭಾ
ರತಿ ಮಣಿಮಾಳಿ ಸುಪ್ರಭೆ ಸುಲೋಚನೆ ಚಂದ್ರಿಕೆ ಚಂದ್ರೆ ಲಕ್ಷಣಾ
ವತಿ ರತಿಚಿತ್ರೆ ಭಾಮಿನಿ ಮನೋಹರಿ ಶೀತಳೆ ರಂಭೆ ಭದ್ರೆಯರ್   ೩೬

ಕಂ || ವಿಜಯೆ ಸುನಂದೆ ಸಮೇತಂ
ವಿಜಯಾವತಿ ಚಿತ್ರೆ ಲೀಲೆಯುಂ ಗೋಮಿನಿಯುಂ
ವಿಜಿತಾಮರಕನ್ನೆಯರಂ
ಗಹಗಮನೆಯರಂ ಮನೋಜಶರಸದೃಶೆಯರಂ     ೩೭

ವ || ಇಂತಿವರ್ ಮೂವತ್ತಿರ್ವರ್ ಪರದಿಯರಂ ವಿವಾಹವಿಧಿಯಿಂದಾತಂಗೆ ತಂದುಕೊಟ್ಟು ಮೂವತ್ತೆರಡು ಬಳ್ಳಿಮಾಡಂಗಳಂ ಮಾಡದೆ ಪೆಱಗೆ ನಂದನವನಮಂ ಮಾಡಿಸಿ ಮನೆವಾೞ್ತೆಯ ಚಿಂತೆಯನಾತನೆನಸುಂ ಮುಟ್ಟಲೀಯದೆ ನಡೆಪುತ್ತಿರೆ ಇಂತು ಸುಕುಮಾರಂ ಮಣಿಕುಟ್ಟಿಮಭೂಮಿಯನಲ್ಲದೆ ನೆಲನಂ ಮೆಟ್ಟಿಯಱಿಯಂ ಮಾಣಿಕದ ಬೆಳಗನಲ್ಲದೆ ಸೊಡರ ಬೆಳಗುಮನಾದಿತ್ಯನ ಬೆಳಗುಮಂ ಕಂಡಱಿಯಂ ಕರ್ಪೂರ ದೂಳಿನಲ್ಲದೆ ಪೆಱತು ದೂಳಿಯಂ ಕಂಡಱಿಯಂ ಚಾಮರದ ಗಳಿಯನಲ್ಲದೆ ಮತ್ತಿನ ಗಾಳಿಯನಱಿಯಂ ಒಕ್ಕ ಕತ್ತುರಿಯ ಕೊೞ್ಕೆಸಱನಲ್ಲದೆ ಮಿಕ್ಕ ಕೆಸಱ ಮೆಟ್ಟಿಯಱಿಯಂ ದಿವ್ಯಶಯ್ಯೆಯೊಳಲ್ಲದೆ ಪೆಱದು ಶಯ್ಯೆಯೊಳ್ ಪಟ್ಟಱಿಯಂ ಪುಷ್ಪವಾಸದಕ್ಕಿಯ ಕೂೞನಲ್ಲದೆ ಮತ್ತಿನಾಹಾರಮನುಂಡಱಿಯಂದುಕೂಲ ವಸ್ತ್ರಮನಲ್ಲದನ್ಯ ವಸ್ತ್ರಮನುಟ್ಟಱಿಯನಮೂಲ್ಯಾಭರಣಂಗಳನಲ್ಲ ದನ್ಯ ಭೂಷಣಗಳಂ ತೊಟ್ಟಱಿಯಂ ಕಾಳಾಗುರುವ ಧೂಪಮನಲ್ಲದೆ ಮತ್ತಿನ ಪೊಗೆಯನಱಿಯಂ ತನ್ನ ಪೆಂಡತಿಯರುಮಂ ಪರಿಚಾರಕಿಯರುಮಂ ತಾಯುಮನಲ್ಲದೆ ಮತ್ತಾವ ಮಾನಸರೊಳಂ ನುಡಿದಱಿಯಂ ಮಾಗ ಮೞೆಗಾಲಂ ಬೇಸಗೆ ಪಗಲಿರುಳೆಂಬೀ ಮಾತಂ ಕೇಳ್ದಱಿ ವನಲ್ಲದೆ ಕಂಡಱಿಯಂ