. ಸಂವರಾನುಪ್ರೇಕ್ಷೆ

ಕಂ || ಪರಿಣಾಮದ ಪೊಲ್ಲಮೆಗಳ್
ದೊರೆಕೊಳೆ ಬಿಡದೊದವಿ ಬರ್ಪ ಪಾಪಾಸ್ರವಮಂ
ಬರಲೀಯದೆ ಪದಿಮೂಱುಂ
ಚರಿತ್ರದಿಂ ನೆಗೆೞ್ವ ಮಾೞ್ಕೆ ಸಂವರೆಯಕ್ಕುಂ

ವ || ಅಂತು ಪಾಪಸ್ರವಕ್ಕೆ ಸಂವರೆಯಾಗಿದ್ ಪಂಚಮಹಾವ್ರತ ಪಂಚಸಮಿತಿ ತ್ರಿಗುಪ್ತಿಗಳೆಂಬೀ ತ್ರಯೋದಶವಿಧಮಪ್ಪ ಚಾರಿತ್ರಂಗಳನುಂಟುಮಾೞ್ಪುದದೆಂತೆನೆ

ಉ || ಕೊಲ್ಲದಸತ್ಯಮಂ ನುಡಿಯದೀಯದ ವಸ್ತುವನೀೞ್ದು ಕೊಳ್ಳದಾ
ಮೆಲ್ಲನೆ ಪೋಗದನ್ಯವನಿತಾಜನದಲ್ಲಿಗೆ ದುಷ್ಪರಿಗ್ರಹ
ಕ್ಕೊಲ್ಲದೆ ತನ್ನೊಳಿಂತೆಸೆವ ಪಂಚಮಹಾವ್ರತದಿಂದಮೊಪ್ಪೆ ತ
ಳ್ವಿಲ್ಲದೆ ಶುದ್ಧವೃತ್ತಿ ದೊರೆಕೊಂಡಿರೆ ಸಾರದು ಪಾಪಸಂಕುಳಂ

ವ || ಕಡಿತಲೆವಿಡಿದೊಂಗೆ ಪಲಗೆಯಿಲ್ಲದೊಡಂ ಗುಣಂಬಿಡಿದೊಂಗೆ ವ್ರತಮಿಲ್ಲದೊಡ ಮಾತಂಗಿದಿರ್ಷಿದ ಪಗೆಯನಾನಲುಮಿತಂಗೆ ಪಾಪದ ಬರವಂ ತಡೆಯಲುಮೆಂತು ತೀರ್ಗುಮೆಂಬುದಂ ಬಗೆಯ ಸಂವರೆಯೆಂಬ ಬಲ್ಗಾಪನಿಡುವುದು

ಕಂ || ನಡೆವ ನುಡಿವುಣ್ಬ ಕೋಳ್ವಿಡು
ವೆಡೆಯೊಳಮುತ್ಸರ್ಗದೆಡೆಯೊಳಂ ಪ್ರಾಣಿಗಳಂ
ತೊಡರ್ದೞಿಯದ ಸಮಿತಿಗಳ
ಯ್ದೊಡಗೊಡಿರೆ ಪುಗುವ ಪಾಪರಜಮಂ ತೆಗೆಗುಂ

ವ || ಪಡಿಯಱರುಳ್ಳ ಮನೆಯಂ ಪೊಲ್ಲಮಾನಸರ್ ಪುಗದಂತೆ ಪಂಚಸಮಿತಿಗಳುಳ್ಳ ಬಗೆಯಂ ಪಾಪಂ ಪುಗುವುದಲ್ತು ಮತ್ತಂ

ಮ || ಮನದೊಳ್ ಭಾಷೆಯೊಳಂಗದೊಳ್ ಪುಗುವ ದುಷ್ಕರ್ಮಂಗಳಂ ಭಾವಿಸ
ಲೈನಸುಂ ಕೂಡದ ಸಂಯಮಪ್ರಬಳನಪ್ಪಾತಂಗೆ ಮತ್ತೇತಱಿಂ
ನಿನಗಿನ್ನೊಂದನೆ ಪೇೞ್ದೆನಾತ್ಮನೆ ಮನೋವಾಕ್ಕಾಯಗುಪ್ತಿತ್ರಯಂ
ಘನಮಾಗಿರ್ದೊಡೆ ಬಾರವಲ್ಲದೊಡವಂ ತಾಂಗಲ್ ಸಮರ್ಥರ್ಕಳಾರ್  ೪

ವ || ದಾರವಂದಮುಂ ಪಡಿಯುಂ ಕೀಲುಮಿಂತಿವುಂಟಾದೊಡಂ ಬಾಗಿಲಂ ಕಿಱಿದಿರುಳ್ ಮಱೆ ದೊಱಗಿದೊಡೆ ಕಳ್ಳರ್ ಪುಗದಿರ್ಕುಮೆ? ಮೂಱುಂ ಗುಪ್ತಿಗಳಿಲ್ಲದೊಡೆ ಪಾಪಂ ಪುಗದಿರ್ಕುಮೆ? ಸಂವರೆಗೆ ಗುಪ್ತಿತ್ರಯಂಗಳೆ ಪ್ರಧಾನಮೆಂಬುದಂ ಬಗೆಯಿಮವು ಋಷಿಗಲ್ಲದೊಡಂಬಡವೆಂದು ಬೆರ್ಚಲ್ ಬೇಡಾ ಎಲೆ ಗೃಹಸ್ಥಾ ನಿನಗಮಣುವ್ರತಂಗಳ್ ಪೇೞ್ದುವಲ್ಲವೆ ನೀನುಂ ಯಥಾಶಕ್ತಿಯಿಂ

ಕಂ || ಪೞಿಯಂ ಬರಿಸದೆ ಪೆಱರಂ
ಪೞಿಯದೆ ತನ್ನಳವಿಯಿಂದಮೆಂತುಂ ಧರ್ಮ
ಕ್ಕೞಲದೆ ವಿಶುದ್ಧವೃತ್ತಿಗೆ
ಬೞಲದೆ ನಗೞ್ವನನಘಂಗಳೇಂ ಪೊರ್ದುಗುಮೇ  ೫

ವ || ಉಳ್ಳವಂ ತನ್ನ ಶಕ್ತಿಯಳವಿಯಂ ಮೆಱಸದೆ ಧರ್ಮಂಗೆಯ್ದೊಡಮಲ್ಲದೆ ಶರೀರಶಕ್ತಿಯುಳ್ಳವಂ ಕಳಿಪದೆ ವ್ರತದೊಳ್ ನೆಗೞ್ದೊಡಂ ಪಾಪಮೆಂತು ಸಾರ್ತರ್ಕುಂ

ಮ || ಕ್ಷಮೆಯಿಂ ಕ್ರೋಧಮನೊತ್ತಿ ತಾಂಗು ವಿನಯಪ್ರಾಗ್ಭಾರದಿಂ ಮಾನಗ
ರ್ವಮನೊಟ್ಟಯ್ಸು ತಗುಳ್ವ ಮಾಯೆವಗೆಯಂ ತೆಳ್ಪಿಂದೆ ಗೆಲ್ದಿಕ್ಕು ಲೋ
ಭಮುಮಂ ಸಂತಸದಿಂದಡಂಗಿಸು ಕರಂ ಮಿಥ್ಯಾತ್ವಮಂ ನೆಟ್ಟನು
ತ್ತಮ ಸಮ್ಯಕ್ತ್ವ ಶಿತಾಸಿಯಿಂದಮಿರಿ ನೀಂ ಮಾಣ್ದಂಜದಿರ್ ಜೀವನೇ  ೬

ವ || ಈ ಮರ್ದಿಂದೀ ಕುತ್ತಂ ಕಿಡುಗುಮೆಂದೊಡವಂ ಮಾಡದೊಡಮಿ ಗುಣದಿನೀ ದೋಷಂ ಕಿಡುಗುಮೆಂದೊಡದಂ ನೆಗೞದೊಡಮಾತನ ಕುತ್ಮೊತ್ತದೆಯುಮಿತನ ಪಾಪಂ ಪತ್ತದೆಯುಮೇಂ ಮಾಣ್ಗುಮೆ?

ಕಂ || ಮಿಕ್ಕಭಿಮಾನದೊಳಳಿಪಿನ
ತಕ್ಕಂ ಮಿಗೆ ಜಡಿದು ತಾಂಗ ಶೌಚದ್ವಿಪದಿಂ
ಮಿಕ್ಕು ಪುಗಲೀಯದಿದಿರಂ
ಪೊಕ್ಕಡ್ಡಂ ನಿಲಿಸ ಶೌಚಗುಣಮಂ ಜೀವಾ  ೭

ವ || ಕೞ್ತಲೆಯಂ ತೊಲಗಿಸುವ ಸೊಡರ್ ತನ್ನಿಂದಪ್ಪೊಡವಂ ಕೆಯ್ಕೊಳ್ಳದೆಯುಮಿರ್ದೊಡಾತನ ಕಣ್ಣಮಿತನೞಿವುಮನೇಗೆಯ್ವುದೋ? ಮತ್ತಂ

ಮ || ವಿಳಸತ್ ಜ್ಞಾನದಿನೊತ್ತಿ ತಾಂಗು ಪುಗದಂತಜ್ಞಾನಮಂ ಮರ್ದಿಸು
ಜ್ಜಳ ಸತ್ಯವ್ರತದಿಂದೆ ಸತ್ಯರಿಪುವಂ ಸತ್ಯಂಯಮೋದ್ಘಕ್ರಿಯಾ
ಬಳದಿಂದಿಂದ್ರಿಯಚೋರವರ್ಗಮನಡಂಗೊತ್ತಿಂ ದಯಾಮಾತ್ರದಿಂ
ಕೊಲೆಯಂ ಪಿಂಗಿಸು ರಾಗಮಂ ಕಳೆದು ಗೆಲ್ ವೈರಾಗ್ಯದಿಂ ಜೀವನೇ  ೮

ವ || ಮನೆಯಂ ತಗುಳ್ವ ಕಿರ್ಚಂ ನೀರಂ ಪೊಯ್ದು ನಂದಿಸದೊಡಂ ಬಗೆಯಂ ತಗುಳ್ದ ಪೊಲ್ಲಮೆಗಳಂ ಗುಣಂಗಳಿಂದಡಂಗಿಸದೊಡಮಾತಂ ಬೆಂದನೀತಂ ನೊಂದನೆಂಬುದೇಂ ಚೋದ್ಯಮೆ?

ಕಂ || ಕಡುಮೊಹಮೊತ್ತಿ ಪುಗಲೆಂ
ದೊಡರಿಸೆ ಪರಿಮಾಣಮೆಂಬ ಸುವ್ರತದೊಳ್ಪಂ
ಪಡಿಮಾಡಿ ಕಿೞ್ತು ನಿಲ್ವುದು
ಗಡಮಲ್ಲದೆ ಬರ್ದುಕಲಾಗ ಮೋಹದ್ವಿಪದಿಂ  ೯

ವ || ಸಿದ್ಧಾಯದಳವಿಯನಱಿದು ಸಮಕಟ್ಟಿ ನನ್ನಿಗೊಂಡು ಬಾೞದೊಕ್ಕಲುಮಿನಿತಱಿಂದಗ್ಗಳಂ ಮಾಡೆನೆಂಬ ಪರಿಮಾಣವ್ರತಮಂ ಕೆಯ್ಕೊಂಡು ನೆಗೞದಾತನ ಮೇಲೆಯುಂ ಭೂಮಿರಾಜನುಂ ಮೋಹರಾಜನುಂ ಪರಿಯದೇಕಿರ್ಪಂ

ಚಂ || ಭವಜಳರಾಶಿಯಂ ಕೞಿಯಲೆಂದೊಸೆದೇಱಿ ಜಿನೇಂದ್ರಧರ್ಮಮೆಂ
ಬವಿಕಳ ನಾವೆಯಂ ನಡೆಯಿಸುತ್ತಿರೆ ತೊಟ್ಟನೆ ದಲ್ ಪ್ರಮಾದಮೆಂ
ಬವಗುಣ ವೆಜ್ಜದಿಂ ಮಳಜಳಂ ಪುಗೆ ಶುದ್ಧ ಚರಿತ್ರಮೆಂಬುದೊಂ
ದವಿಚಳ ಬಂಧದಿಂ ಬಿಗಿಯದಿರ್ದೊಡೆ ದೇಹಿಗಳೞ್ದು ಪೋಗರೇ    ೧೦

ವ || ಭೈತ್ರಮನೇಱಿದರ್ ಸಡಿಲ್ದ ಬಂಧಂಗಳಂ ಬಿಗಿಯದಿರ್ದೊಡಮಱಿವನೊಳಕೊಂಡವರ ಪ್ರಮಾದಿಗಳಾಗದಿರ್ದೊಡಮವರ್ ಸಮುದ್ರದೊಳಗೞ್ದರಿವರ್ ಸಂಸಾರಸಮುದ್ರದೊಳಗೞ್ದರೆಂಬುದೇಂ ವಿಸ್ಮಯವೇ

ಕಂ || ನೆಱೆಯೆ ಗುಣಂಗಳ ಕಾಪಿಂ
ನಿಱಿಸಿಟ್ಟಾರಯ್ದು ನಡೆವ ಬುದ್ಧಿಯ ಬಲದಿಂ
ದಱಿಕೆಯ ಕಷಾಯಮೆಂಬೊಳ
ಗಿಱಿವರಿಯಂ ಕಾವುದೆಂಬುದರಿದಾವುದಱಿಂ  ೧೧

ವ || ಆರೈಕೆಯುಂ ಮೆಯ್ಗಾಪಿನಳ್ವಲಮುಮಿಲ್ಲದೆ ಪೊಕ್ಕಿಱಿವ ಪಗೆಯಂ ಕಾಯಲರಿದಱಿ ತಮುಂ ಚಾರಿತ್ರಬಲಮುಮಿಲ್ಲದೆ ಕಷಾಯಂಗಲಂ ಸೋಯಲರಿದು

ಚಂ || ದರುಶನಸುದ್ಧಿಯೆಂಬ ವನದುರ್ಗದಿನಗ್ಗಳಮಪ್ಪ ತತ್ಪದೊಳ್
ಪೊರೆದಱಿವೆಂಬುದೊಂದು ಜಳದುರ್ಗದಿನುದ್ಘ ಚರಿತ್ರಮೆಂಬುದೊಂ
ದುರು ಗಿರಿದುರ್ಗದಿಂದೊಳಗೆ ನೀನಿರೆ ತಾಂ ಪುಗುತರ್ಕುಮೆಂತು ಪಾ
ಯ್ತರಲೊಡರಿಕ್ಕುಮೆಂತಡರ್ಗುಮೆಂತು ಭವದ್ದುರಿತಾರಿ ಸಾಧನಂ   ೧೨

ವ || ಮೂಱುಂ ತೆಱದ ದುರ್ಗಂಗಳೊಳಿರ್ದನಂ ಪಗೆ ಮುಟ್ಟುಲಾಱದಂತೆ ಸಮ್ಯಗ್ದರ್ಶನ ಜ್ಞಾನ ಚಾರಿತ್ರಮೆಂಬ ಮೂಱುಂ ತೆಱದ ಗುಣಂಗಳ ಬಲಮನುಂಟುಮಾಡಿರ್ದಂಗೆ ಪಾಪಂಗಳ್ ಮುಟ್ಟಲಾಱವೆಂದಿಂತು ಪೇಱ್ದೊಡಮೇಕೆ ಮೋಹಿಸುವರ್ ತನಗಾದರ್ಥಮಂ ತಕ್ಕೆಡೆಗೀಯೆ ಮೋಹಮಡಂಗುಗುಮದಂ ಕಾಯೆ ಮೋಹಮಡಂಗುಗುಮೆ ಪೆರ್ಚುಗುಮೆಂಬುದಂ ಮತ್ತೆ ಪೇೞಲ್ವೇೞ್ಕುಮೆ?

ಕಂ || ಬಿಡದಾಸೆಯೆಂಬ ಕುೞಿ ಜಗ
ದೊಡಮೆಗಳೆನಿತೆನಿತನಿಕ್ಕನಿತ್ತುಂ ಕುಸಿಗುಂ
ತಡೆಯದಭಿಮಾನಿ ಮುನ್ನಿ
ರ್ದೊಡಮೆಗಳಂ ಕಳೆಯೆ ಪೊೞ್ದುಮೇಂ ವಿಸ್ಮಯಮೋ  ೧೩

ವ || ಅಳಿಪಿನ ಮೋಹಮೆಂಬ ಕುೞಿ ದ್ರವ್ಯ ಮನೆನಿತೆನಿತನಿಕ್ಕುಗುಮನಿತನಿತೆ ಕುೞಿಗುಮಭಿಮಾನಿ ಯಪ್ಪಾತನಾ ಕುೞಿಯೊಳ್ ಮುನ್ನಿರ್ದುವೆಲ್ಲಮಂ ಕಳೆಯುತ್ತಿರೆ ಪೂೞ್ಗುಮೇ ವಿಚಿತ್ರಮೋ ಮತ್ತಭಿಮಾನಿಯಪ್ಪಾತನ ಗುಣದಗ್ಗಳಿಕೆಯಂದಮಿಂತಲ್ತೆ

ಚಂ || ಒದವಿದ ಮೋಹದಿಂದಿಳಿಪಿ ಕೊಳ್ವನಧೋಗತನಕ್ಕುಮಿಯೆ ಕೊ
ಳ್ಳದ ಗುಣವಂತನೂರ್ಧ್ವಗತನೆಂಬುದನೊಯ್ಯನೆ ನೀರ್ಗೆ ಬಾಗುವೇ
ತದ ತೊಲೆ ಕೊಳ್ವ ಕೊಳ್ಳದೆರಡುಂ ಕಡೆಯುಂದಱಿಪುತ್ತು ಮಿರ್ಪುದ
ಪ್ಪುದಱಿನನೂನ ಭಾವದಭಿಮಾನಮನೊಪ್ಪಿರೆ ತಾಳ್ದು ಜೀವನೇ  ೧೪

ವ || ಏತದ ತೊಲೆ ನೀರಂ ಕೊಳ್ವಾಗಳಾ ದೆಸೆ ಕೆಳಗಿೞಿವುದುಮಂ ಕೊಳ್ಳದ ದೆಸೆ ಮೇಗಣ್ಗೆ ನೆಗೆದಿರ್ಪುದುಮಂ ಕಂಡಪ್ಪೊಡಮಳಿಪಿನ ಕನಿಷ್ಠತೆಯುಮನಭಿಮಾನದುನ್ನತಿಕ್ಕೆಯುಮಂ ಬಗೆವುದಲ್ತೆ ಮತ್ತಮವಱಂದಮನಿಲ್ಲಿಯೆ ಕಾಣಲಾಗಾ

ಕಂ || ಬೇಡಿದನ ಬಿಳ್ಪು ನೆಟ್ಟನೆ
ಕೂಡಿದುದಿತ್ತವನೊಳದಱಿನಿತ್ತನ ಪೆಂಪುಂ
ಬೇಡಿದನ ಬಲ್ಪುಮೆಲೆ ಮಾ
ಱಾಡಿದ ತೆಱದಿಂದಮಿರ್ದುದಂ ಕಂಡಱಿಯಾ  ೧೫

ವ || ಕಸವರಮಂ ಬೇಡಿಕೊಂಡಂ ಕೆಮ್ಮನೆ ಕೊಂಡನೆ? ತನ್ನ ಪೆಂಪನಾತಂಗೆ ಕೊಟ್ಟು ಕೊಂಡಂ ಈವನುಂ ಕೆಮ್ಮನಿತ್ತನೆ ಆತನ ಪೆಂಪಂ ಕೊಂಡಿತ್ತನಿಂತಾಯಿರ್ವರುಂ ಗೂಱುಮಾಱಾ ಳಿಗಳಾದರಾಯಿರ್ವರೊಳಗಾವಂ ಗೆಲ್ದನಾವಂ ಸೋಲ್ತನೆಂಬುದಂ ಕೊಳ್ವನ ಕೆಯ್ ಕೆಳಗಪ್ಪುದುಂ ಕುಸಿದೆಱಗಿರ್ಪುದುಮಾತನ ಸೋಲಮಂ ಪೇೞ್ದುಂ ಕುಡುವನ ಕೆಯ್ ಮೇಲಪ್ಪುದುಮುನ್ನತಮಪ್ಪುದುಮಾತನ ಗೆಲ್ಲಮನಱಿಪುಗುಮಪ್ಪುದಱಿಂದಭಿಮಾನಮೆ ಪಿರಿದದಱಿಂದಲ್ಲದೆ ಮೋಹಮಂ ಗೆಲಲ್ ಬಾರದದಂ ಮಱಿದಿರ್ಪಂತು ಮೋಹರಾ ಜನೇನಱಿಯನೆ?

ಚಂ || ಅಱಿವಿನ ಗರ್ವದಿಂದಿೞಿಸದೀ ತ್ರಿಜಗಂಗಳೊತ್ತಿ ಮೋಹಮೆಂ
ಬಱಿಕೆಯ ಸಂದ ಡಾವರಿಗನುಂ ಪಗೆ ತನ್ನೊಳಗಿರ್ದೊಡೆಂತುಮೇ
ತೆಱದೊಳಮೊಳ್ಳಿಕೆಯ್ಗುಮೆ ಮಹಾಂಬುಧಿ ತಾನೊಳಕೊಂಡು ಬಯ್ತಿರ
ಲ್ಕುಱೆ ಬಡಬಾನಳಂ ತವಿಸುತಿರ್ಪುದದಂ ಖಳನೊಳ್ಳಿಕೆಯ್ಗುಮೇ  ೧೬

ವ || ಸಮುದ್ರಂ ತನ್ನ ಪೆಂಪಿನ ಗರ್ವದಿಂ ಬಡಬಾನಳನಂ ತನ್ನೊಳಗಿರಿಸಿದೊಡದುವುಮದನೆ ತವಿಸುತಿರ್ಪಂತೆ ನೀನುಮೆಂತಾನುಮಱಿವಿನ ಗರ್ವದಿಂ ಮೋಹಮನೊಳಗಿರಿಸಿದೊಡದು ನಿನ್ನಂ ಕಿಡಿಸುತಿರ್ಕುಮೆಂತುಂ ಮೋಹಕ್ಕೆಡೆಗುಡದಿರ್

ಕಂ || ಕುಡಲಾರ್ಪೊಡೊಡೆಯಪ್ಪುದು
ಕುಡಲಾಱದೆ ಬೇಡಿದವರ್ಗಳಂ ಮಱುಗಿಸುತಿ
ರ್ಪೊಡಮೆಯಿನಾರ್ಗಂ ಮಱುಕಮ
ನೊಡರಿಸದಿರ್ಪೊಂದು ಬಡತನಂ ಲೇಸಲ್ತೇ  ೧೭

ವ || ಕಿರ್ಚಿಂಗೆ ಪುಳ್ಳಿ ದೊರೆಕೊಂಡೊಡುರಿದು ಕೆಲನನಳುರ್ವಂತೆ ಮೋಹಿತಂಗರ್ಥಂ ದೊರೆಕೊಂಡೊಡೆ ತನ್ನನಾಸೆವಟ್ಟು ಬೇಡುವವರನೞಲಿಸುತಿರ್ಕುಮದಱಿಂ ತಾನೞಲದಿದಿರನೞಲಿಸದಿರ್ಪವನ ಬಡತನಮೊಳ್ಳಿತ್ತೆಂದು ಗೃಹಸ್ಥರ್ಗೆ ಪೇೞ್ದೆವಿನ್ನು ಋಷಿಯರ್ಕಳಿರಾ ನೀಮುಮಿನಿಸಾನುಂ ಕೇಳಿಂ

ಮ || ಬಗೆಗೆಟ್ಟಾತ್ಮನನೊಪ್ಪಿಸಿರ್ದು ಬಸನಕ್ಕೊಳ್ಪೆಲ್ಲಮಂ ಸೂಸಿ ದೇ
ಸಿಗರಾಗಿರ್ದವರ್ಗೇನೊ ಕೊಟ್ಟಪುದವರ್ ಕೇಡಿಂಗದೇಕಂಜುವರ್
ನೆಗೞ್ದಿರ್ದಿಂದ್ರಿಯಚೋರರಿರ್ಪರದಱಿಂ ರತ್ನತ್ರಯಾಮೂಲ್ಯ ವ
ಸ್ತುಗಳಂ ತಾಳ್ದಿದ ಯೋಗಿ ನೀಂ ಮಱೆವುದೇಕೆೞ್ಚತ್ತು ನಿಲ್ ಚೆಚ್ಚರಂ  ೧೮

ವ || ಭಂಡಮಿಲ್ಲದಂ ಸುಂಕಕ್ಕಂಜದಂತೆ ಗುಣಮಿಲ್ಲದಂ ದೋಷಕ್ಕಂಜುವನೆ? ದರ್ಶನ ಜ್ಞಾನ ಚಾರಿತ್ರಂಗಳೆಂಬನರ್ಘ್ಯ ರತ್ನತ್ರಯಂಗಳನೊಡೆದು ತಪೋಧನಾ ನಿನ್ನ ಮನಮೆಂಬ ಮನೆಯಂ ದೋಷದೊಳ್ ಪುದಿದಿಂದ್ರಿಯತಸ್ಕರರ್ ಪುಗುವರ್ ಮಱೆದೊಱಗದೆೞ್ಚಿತ್ತಿರ್ಪು ನೀಮಿಂತೇಕೆ ಭರಂಗೆಯ್ದಱಿ ದಪಿರೆಂಬಾ

ಕಂ || ದುರಿತಭಯದಿಂ ಕಳತ್ರದ
ಪೊರೆಪಂ ಬಿಸುಟಿರ್ದ ಮುನಿಗೆ ಮತ್ತಂ ದೋಷಂ
ಪೊರೆವೊಡೆ ಮರ್ದಿಂದೞ್ಕಮೆ
ಕರಮಪ್ಪೊಡದರ್ಕೆ ಮರ್ದನಱಿವರುಮೊಳರೇ  ೧೯

ವ || ಕುತ್ತಮಂ ಕಿಡಿಸಲ್ ಕೊಂಡ ಮರ್ದಿಂದೞ್ಕಮೆಯಪ್ಪೊಡಂ ಕರ್ಮಮಂ ಕಿಡಿಸಲ್ ಕೊಂಡ
ತಪದೊಳ್ ಪಾಪಂ ಬರ್ಪೊಡಮದುರ್ಕುಪಾಯಮುಂಟೇ?

ಉ || ಮೋಹಮನೊಕ್ಕು ಗೆಲ್ದು ವಿಷಯಂಗಳನಿಕ್ಕಿ ಕಷಾಯಮಂ ಮಹೋ
ತ್ಸಾಹದಿನೊತ್ತು ತುಂ ಸಮಿತಿಯೊಳ್ ನೆಱೆದೊಪ್ಪಿ ತ್ರಿಗುಪ್ತಿಗಳ್ಗತಿ
ಸ್ನೇಹಿತನಾಗಿ ಮಿಕ್ಕಱಿವಿನೊಳ್ ಸಲೆ ತಾಳ್ದಿ ಮಹಾವ್ರತಂಗಳಂ
ದೇಹಮನೋವುದೋವು ಗುಣಮಂ ಪುಗಲೀಯದೆ ಪಾಪಚೋರರಂ  ೨೦

ವ || ತನಗೆ ಸಕಳಸತ್ವಮಿಲ್ಲದೆ ದುಷ್ಟಗ್ರಹಮನೊದಱಿಕಳೆಯಲ್ಬಾರದಂತೆರಡುಂ ತೆಱದ ಸಂಯಮಮೆಂಬ ಬಲ್ಗಾಪನಿಡದೆ ಕರ್ಮಮಂ ಕಳೆಯಲ್ಬಾರದು ಮತ್ತಂ

ಕಂ || ಮತಿ ಕಂಭಂ ಘನಮಾಗುವ
ಧೃತಿ ಕೇರ್ ಗುಪ್ತಿಗಳ್ ಪಡಿಗಳಾಗಿರ್ದ ಮಹಾ
ವ್ರತ ಗೃಹಮಿನಿಸುಂ ಛಿದ್ರಾ
ನ್ವಿತಮಾದೊಡೆ ವಸ್ತುವೆಲ್ಲಮಂ ಕೋಳ್ಪಡದೇ  ೨೧

ವ || ಪಣಮುಳ್ಳಾತಂ ತನ್ನ ಮನೆಯಂ ಬಲ್ಲಿತ್ತು ಮಾೞ್ಪಂ ಗುಣಧನಮುಳ್ಳ ತಪಸ್ವಿ ನೀಂ ನಿನ್ನ ಮನಮಂ ಬಲ್ಲಿತ್ತು ಮಾಡದಿರ್ಪುದೇಕೆ ನಿನ್ನಱಿವುಂ ಕಿಱಿದೇ?

ಉ || ಓಡಿಸಲಾರ್ಪನೇ ನೃಪಮುಖಂ ಸ್ಮರನೆಂಬ ಕಿರಾತರಾಜನೆ
ಚ್ಚೋಡಿಸಲಾರ್ಪನೇ ವನಿತೆಯತ್ತ ಪರಾಭವಧೂಳಿ ಪೊರ್ದಿ ತಾ
ನೋಡಿಸಲಾರ್ಪುದೇ ರುಸಿಯನೋ ಕಲಿ ಮೋಹಮನೊಳ್ಪಿನೋಳಿಯೊಳ್
ಕೂಡಿದನಂಗನೆಂದೊಡೆ ಪರತ್ರ ಸುಖಕ್ಕೞಿವುಂಟೆ ಸಂಯತಾ  ೨೨

ವ || ಸಸಿಯ ಕೋಮಳಿಕೆಯ ಮೇಲಪ್ಪ ಫಲಮಂ ಪೇೞ್ವಂತೆ ಋಷಿಗಿಲ್ಲಿಯ ಗುಣದಿನಗ್ಗಳಿಕೆಯೆ ಮೇಗಣ ಸುಖದೊಳ್ಪಂ ಪೇೞ್ದಪ್ಪುದದಱಿಂ ಗುಣಮಂ ಕಾಯದೆ ದೋಷಕ್ಕೆ ಮೆೞ್ಪಟ್ಟು ನೆಗಱ್ಪೊಡೊಳ್ಳಿತಲ್ತು

ಕಂ || ಸುರಲೋಕ ಭೋಗದಳಿಪಿನ
ಭರದೆ ತಪಂಗೆಯ್ವ ತವಸಿಯಿಂ ಸಂಸ್ಕೃತಿಯೊಂ
ದಿರವಿಂಗೇವಯಿಪ ಗುಣಾ
ಭರಣಂ ಶ್ರಾವಕನೆ ಲೇಸು ವೈರಾಗ್ಯಯುತಂ  ೨೩

ವ || ದ್ರವ್ಯ ಭಾವಮೆಂಬಿರ್ತೆಱದ ತಪದೊಳಂ ಭಾವತಮಗ್ಗಳಮಪ್ಪುದಱಿಂ ಗೃಹಸ್ಥನಕ್ಕೆ ತಪಸ್ವಿಯಕ್ಕೆ ವೈರಾಗ್ಯಭಾವನೆಯುಂ ನಿಷ್ಟರಿಗ್ರಹಭಾವನೆಗಳಲ್ಲದಾಗದೆಂದು ತಪಸ್ವಿಯುಮಪ್ಪುದಂತೆ ದೀಕ್ಷೆಯೇವುದೆಂಬೀ ನುಡಿಯ ಪರಿಭವಮನಪ್ಪೊಡಂಬಗೆದು

ಉ || ಆಗಳುಮೋದು ಕುಂದಿಸೊಡಲಂ ವಿಷಯಂಗಳಡಂಗುವಂತು ಮ
ತ್ತೀಗಡಿನೊಂದು ಮನ್ನಣೆಯನಾಸೆವಡಲ್ ಕಡುಮೆಲ್ಪನುಂಟುಮಾ
ಡಾಗಮಕಂ ತಪಕ್ಕಮಿದೆ ಸಾರಮಡುರ್ತು ಕಷಾಯವರ್ಗಮಂ
ಬೇಗದಿನಿಕ್ಕುವಂತೆ ನೆಗೞಲ್ಲದೊಡೇಂ ಮುನಿವಿಟ್ಟಿಯೇ ತಪಂ  ೨೪

ವ || ವೇಳೆಗೊಂಡು ಸಾವಿಗಂಜುವೊಡಂ ತಪಂಗೊಡನುಷ್ಠಾನಕ್ಕಂಜುವೊಡಮ ದೆಲ್ಲಿಯ ವೇಳೆಯದೆಲ್ಲಿಯ ತಪಮೆನಲೀಯದುತ್ತರೋತ್ತರಮಾಗಿ ನೆಗೞ್ವುದು

ಕಂ || ಸಂಸಾರಮೆಂಬ ಕುೞಿಯೊಳ್
ಹಿಂಸಾದಿಗಳೆಂಬ ಫಣಿಗಳಂ ಸಾರ್ದಿರುತುಂ
ನೀಂ ಸೈಪಿಂ ಪೊಱಮಟ್ಟಿ
ರ್ದಿಂ ಸಂಸಾರಕ್ಕೆ ಮಗುೞ್ದು ಪುಗದಿರ್ ಮುನಿಷಾ  ೨೫

ವ || ಇರುಳ್ ಬಿೞ್ದ ಕುೞಿಯೊಳ್ ಪಗಲೇಕೆ ಬೀೞ್ವರೆಂಬಂತೆ ಮೋಹದ ಕೞ್ತಲೆಯುಳ್ಳಂದು ಸಂಸಾರದೊಳಗಿರ್ದೆಯಿಗಳ್ ತಪಸ್ತಪನನ ಬೆಳಗಿನೊಳಿರ್ದು ಮತ್ತೊಳಗಪ್ಪುದೆಂಬು ದೇನೆಲೆ ತಪೋಧನಾ

ಮ || ಅರಸೇಂ ಬಂಡಮೊ ಪಾಪಹೇತು ತಪಮಂ ಕೆಯ್ಕೊಳ್ವೆನೆಂದಣ್ಮಿಬಂ
ದರಿದುಂ ಬಲ್ಲಿತ್ತುಮಪ್ಪುದೊಂದು ತಪಮಂ ಕೆಯ್ಕೊಂಡು ದೋಷಂಗಳಂ
ಬರಲಿತ್ತೊಳ್ದಪದಲ್ಲಿ ತಂದು ಕಿರಿಯಂ ನೀನಿಕ್ಕಿ ನಿನ್ನಂ ಸುಡಲ್
ಮರುಳೇ ಸೈರಿಸಿ ಪಾಪಮಂ ಕಿಡಿಸು ನೀಂ ಸದ್‌ಜ್ಞಾನದಿಂ ಧ್ಯಾನದಿಂ  ೨೬

ವ || ದ್ರವ್ಯಂಗೊಟ್ಟು ಕೆಯ್ಯಂ ಕೊಂಡಾತಂ ಆರಂಭಂಗೆಯ್ಯದೊಡಂ ಶ್ರೀಯಂ ಬಿಟ್ಟು ತಪಂಗೊಂಡಾತಂ ವ್ರತಂಗೆಯ್ಯದೊಡಮಾಯಿರ್ವರುಮಿಯೆರಡಱಿಂ ಕೆಟ್ಟರೆಂಬ ವರಂತಾಗದೆಲೆ ತಪೋಧನಾ ಕೇಳ್ದಿನ್ನಪ್ಪೊಡಂ ನೀನಱಿದು ನೆಗೞ್ವುದು ಗೃಹಸ್ಥರು ಮಿನ್ನೊಂದು ಮಾತನೊಳ್ಳಿತ್ತಾಗಿ ಕೇಳಿಂ

ಕಂ || ಸ್ನೇಹಂ ಕಳತ್ರದಿಂ ಕಡು
ಮೋಹಂ ಧನದಿಂದಗಲ್ದು ಬಂದೆಡೆವಿಡದಾ
ಸ್ನೇಹಂ ಗುಣದೊಳ್ ಗತಿಯೊಳ್
ಮೋಹಂ ಪತ್ತಿದೊಡೆ ಪೊರ್ದಲಾರ್ಕುಮೆ ಪಾಪಂ  ೨೭

ವ || ಗಾಳಿ ಧೂಳಿಯೊಳ್ ಕೂಡಿದೊಡೊಳ್ಳಿಕೆಯ್ಗುಮೆ? ಕಂಪಿನೊಳ್ ಕೂಡಿದೊಳ್ಳಿಕೆಯ್ಗುಂ ಪಾಲುಂ ಪುಳಿಯೊಳ್ ಬೆರಸಿದೊಡಿನಿದಕ್ಕುಮೆ? ಖಂಡಶರ್ಕರೆಯೊಳ್ ಬೆರಸಿದೊಡಿನಿದಕ್ಕುಮಂತೆ ನಿನ್ನ ಸ್ನೇಹಂ ಕಳತ್ರದೊಳ್ ಪತ್ತಿದೊಡೊಳ್ಳಿಕೆಯ್ಯದು ಗುಣದೊಳ್ ಪತ್ತಿದೊಡೊಳ್ಳಿಕೆಯ್ಗುಂ ಮೋಹಂ ದ್ರವ್ಯದೊಳ್ ಪತ್ತಿದೊಡೊಳ್ಳಿಕೆಯ್ಯದು ಗುಣದೊಳ್ ಪತ್ತಿದೊಡೊಳ್ಳಿಕೆಯ್ಗುಂ ಮೋಹಂ ದ್ರವ್ಯದೊಳ್ ಪತ್ತಿದೊಡೊಳ್ಳಿಕೆಯ್ಯದು ಸುಗತಿಯೊಳ್ ಪತ್ತಿದೊಡೊಳ್ಳಿಕೆಯ್ಗು ಮದಱಿನಾಯೆರಡುಮನಾಯೆರಡಱೊಳ್ ಪತ್ತಿಸದೀಯೆರಡಱೊಳ್ ಪತ್ತಿಸಿದೊಡೆ ಪಾಪಮೆಂತು ಪತ್ತುಗುಂ

ಉ || ಆರುಮನೆನ್ನನಾಂ ಬಗೆವವೊಲ್ ಬಗೆದೋವುವೆನೊಲ್ಲೆನುಗ್ರಸಂ
ಸಾರವಿಚಾರ ಹೇತುಗಳನುತ್ತಮಶೀಲ ವಿಶುದ್ಧವೃತ್ತಿಸಂ
ಧಾರಿಸನಪ್ಪೆನೆಂದು ನೆಗೞ್ಪೊೞ್ಪಿನ ತೆಳ್ಪಿನೊಳೊಪ್ಪಿ ತೋರ್ಪ ಸಂ
ಸಾರಮೆ ಪಾಪಮೆಂದಱಿವರಿರ್ದಱಿಪುತ್ತಿರೆ ತಪ್ಪುಗೇೞ್ಪುದೇ  ೨೮

ವ || ಇಂತು ಪೇೞಿಯುಂ ಕೇಳದೆ ಕೆಳಗಿವಿಗೆಯ್ದೊಡಮೇಂ ಮುನ್ನಂ ಸಂವರೆಯಂದಮಂ ದೃಷ್ಟಾಂತಮಂ ತೋಱಿ ತಿಳಿಪಿದವರ್ಗಳ ಕಥೆಯನಪ್ಪೊಡಂ ಕೇಳ್ದು ನಂಬಿಮದೆಂತೆನೆ

 

ನಾಗಿಲಗಾವುಂಡನ ಕಥೆ

ಕಂ || ನಿಂಬಗ್ರಾಮದ ನಾಗಿಲ
ನೆಂಬೊಂ ಗಾವುಂಡನಾತ್ಮಜರ್ ಮುಪ್ಪಿನೊಳೆ
ನ್ನಂ ಬಗೆಯರೆಂದು ಪೋಗಿ ತ
ಪಂಬಟ್ಟಂ ಋಷಿಯರಲ್ಲಿ ಜೈನಾಲಯದೊಳ್  ೨೯

ವ || ತಪಂಬಟ್ಟು ಕೆಲವು ದೆವಸದಿನವರ ಗುರುಗಳ್ ನೀನೋದಲ್ವೇೞ್ವುದು ಸುದ್ದಗೆಯಂ ಬರೆಯಿಮೆಂದೊಡಾನೀ ಕಿಱುಗೂಸುಗಳಂತೆ ಸುದ್ದಗೆಯಂ ಬರೆವೆಂ ಗಡ ನಾಂ ಪಲವು ಕಾಲದಾತನೆಂದೇವಯ್ಸಿ ಗುರುಗಳನಗಲ್ದು ಪೋಗಿ ಕಲ್ನೆಲೆ ಮರಮೊದಲ್ ಬೆಳ್ಳವಾಸಮೆಂಬಿವನಱಿವೆಂ ತಪಕ್ಕಿವೆ ಸಾಲ್ಗುಮೆಂದೊಂದೂರ್ಗೆವಂದಲ್ಲಿಯೊಂದು ಕೆಱಿಯ ಏಱಿಯಮೇಗಣ ಮರದ ಪೋೞಲೊಳಗಿರ್ದು ಮರದಮೊದಲಿರ್ದೆನೆಂದಿರ್ದು ನಿಚ್ಚಲುಮಾ ಕೊಕ್ಕಿನಿತು ಮಿನಂ ಪಿಡಿದುದು ನೀರ ಕೊಡಂಗಳಿನಿತುಂ ತುಂಬಿಪೋದುವೆಂಬುದೆ ತನಗೊಳವಾಗಿಯಂತಲ್ಲಿ ಮೂವತ್ತು ವರ್ಷಂ ಪೋದಂದವರ ಮುನ್ನಿನ ಭವದ ಕೆಳೆಯಂ ದೇವನಾಗಿ ಪುಟ್ಟಿರ್ದು ಬಗೆದಱಿದು ಎಲೆಯೆನ್ನ ಮುನ್ನಿನ ಭವದ ಕೆಳೆಯನೀಗಳ್ ಸಂಯಮವಿಲ್ಲದೆ ಮೂರ್ಖನಾಗಿ ತಪಂಗೆಯ್ದ ಪನವನಂ ತಿಳಿಪುವೆನೆಂದು ಮತ್ತೋರ್ವ ದೇವನನೊಡಗೊಂಡು ಬಂದು ಕಿತ್ತಡಿಗಳ ರೂಪುಗೊಂಡವನ ಮುಂದೆ ಕುಳ್ಳಿರ್ದು ಪೇೞಿಮಾಸ್ರವ ಸಂವರೆ ನಿರ್ಜರೆಗಳೆಂಬುವವೆಂತೆಂದೊಡೆಯಾ ಮುತ್ತಗೊರವಂ ಮುಳಿದು

ಶಾ || ಎನ್ನುಂಡುಪ್ಪಿನೊಳಾದ ಲೆಕ್ಕದನಿತುಂ ಕೂೞುಂಡುದಿಲ್ಲೆಂತು ನೀ
ಮೆನ್ನಂ ಕಾಡುವಿರೇಕೆ ಪೇೞ್ದೆನಿರವೇಡಿಂ ಪೋಗಿಮೆಂದಾಗಳಿ
ರ್ದಿನ್ನೀ ಮೂರ್ಖನನಾಗದಿಂತು ತಿಳಿಪಲ್ಕೆಂದಂತೆ ಬಂದಲ್ಲಿಗಾ
ಸನ್ನೋದ್ದೇಶದೊಳಿರ್ದು ತೊಟ್ಟನೆ ಗೃಹಸ್ಥಾಕಾರಮಂ ಕೊಂಡವರ್  ೩೦

ವ || ಆ ಮುತ್ತಗೊರವನ ಸಾರೆ ನೀರತಡಿಯೊಳ್ ಪಿರಿದಪ್ಪ ಮೞೆಯಂ ಪೊನಲ್ ಪುಗುವಂತಾಗಿ ಮಿಗುರ್ವಿಸಿಯಲ್ಲಿಯಾ ಕೆಱೆಯ ನೀರನೊರ್ವಂ ಮಾಣದೆ ತುಳುಂಕುತ್ತಿರೆಯುಮೊರ್ವನಱಿಯದಂತೆ ಬಂದಿದೇಕೆ ನೀರಂ ತುಳುಂಕಿದಪಿರೆಂದೊಡೆನ್ನ ಕೆಯ್ಯ ಮಾಣಿಕದುಂಗುರಮಿಲ್ಲಿ ಬಿೞ್ದೋಡೀ ನೀರಂ ತುಳುಂಕಿ ಕಳೆದಪೆನೆಂದೊಡೆಲೆ ಮರುಳೇ ಬರ್ಪ ಪೊನಲಂ ಕಟ್ಟಿ ದಿಂಬೞಿಯಮಿ ಕೆಱೆಯ ನೀರಂ ತೊಂಬನುರ್ಚಿ ಕಳೆದು ಕಿಱೆದಾನುಮುೞಿದ ನೀರಂ ತುಳುಂಕಿ ಕಳೆದೊಡೆ ನಿನ್ನಱಸುವುದಂ ಕಾಣಲಕ್ಕುಮಲ್ಲದೊಡೆ ಸೇದೆಗಿಡುವನಿತಲ್ಲದೆ ಪೆಱತಿಲ್ಲೆಂದೊಡಂತೆಗೆಯ್ವೆನೆಂದಿರ್ವರುಮಾ ಗೊರವರ್ ಕೇಳ್ವಂತಾಗಿ ನುಡಿದಲ್ಲಿಂ ತಳರ್ದು ಪೋಗಿ ಕೊಕ್ಕುಂ ನೀರ್ಗಾಗೆಯುಮಾಗಿ ಬಂದವರ ಸಮೀಪದ ನೀರ ತಡಿಯೊಳಿರ್ದು ಕೊಕ್ಕಂ ನೀರ್ಗಾಗೆ ಬೆಸಗೊಳ್ಗುಂ ಪೇೞಾ ಕೆಱೆಯ ತಡಿಯ ನೀರೆನಿತು ಗುಣ್ಪು ನಡುವೆನಿತು ಗುಣ್ಪೆಂದೊಡೆ ಕೊಕ್ಕುಂ ಇಂತೆಂಗುಮೆನಗಪ್ಪೊಡೆೞ್ಪತ್ತಿರ್ಛಾಸಿರ ಬರಿಸಮಾಯುಷ್ಯಮಾಂ ಪಲಕಾಲಂ ಬೞ್ದೆಂ ನೀಂ ಪನ್ನೆರಡು ಬರಿಸದಾತನೇನುಮನೆತ್ತಲಱೆವೆಯಾನಪ್ಪೊಡೆ ನಿಮ್ಮಜ್ಜ ಪಜ್ಜರನೆಲ್ಲರುಮನಱಿವೆಮಿ ನೀರಳವಿಯನಱೆಯೆನೆ ನೀನಿಂ ಬಲ್ಲೆಯಪ್ಪೊಡೆ ಪೇಱಿಂದೊಡಾ ನೀರ್ಗಾಗೆ ಬೇಗಮೆೞ್ದಾ ನೀರಂ

ಕಂ || ತಡಿಯೆಡೆಯೊಳೊರ್ಮೆ ಮುೞುಗುತೆ
ನಡುನೀರೊಳಗೊರ್ಮೆ ಮುೞುಗಿ ಬಂದಿನಿತಿನಿತೆಂ
ದೊಡೆ ಕೊಕ್ಕು ಬೆಕ್ಕಸಂಬಡೆ
ನುಡಿಗುಂ ನೀರ್ಗಾಗೆ ವಾಸಿಯಿಂದಂ ಮತ್ತಂ  ೩೧

ವ || ನೀನುಮಿಲ್ಲಿ ಮುನ್ನಂ ನೀರಂ ತುಳುಂಕುತಿರ್ದಾತನುಮಿ ಮರದ ಮೊದಲೊಳಗಿರ್ದ ಮುತ್ತ ಗೊರವನುಂ ಪಾಲಕಾಲದೆಂಬವರೆಂಬಿನಿತಲ್ಲದೆ ಮೂರ್ಖರೇನುಮನಱಿಯಿರೆಂದಾ ಗೊರವಂ ಕೇಳೆ ನುಡಿದು ದೇವರ್ಕಳುಂ ಪೋದಿಂಬೞಿಯಮಾ ಗೊರವನಿಂತು ಸಿಗ್ಗಾಗಿ ಮತ್ತೆ ಗುರುಗಳಲ್ಲಿಗೆ ಬಂದೋದಿಯಾಗಮಮಂ ಕಲ್ತು ಸಂಯಮದೊಳ್ ಕೂಡಿ ಸಂವರೆಯಂ ಮಾಡಿ ನೆಗೞ್ದು ಸುಗತಿಯಂ ಪಡೆದನೆಂಬುದಂ ಬಗೆದು ನಂಬಿ ನೆಗೞ್ವುದಲ್ತೆ ಕೆಮ್ಮನಿರಲ್ವೇಡಾ

ರಗಳೆ || ದಯೆ ತಳ್ತಿರೆ ಸಲೆ ನಿಚ್ಚಂ ನಡೆಯಿಂ | ಕ್ರಿಯೆದಪ್ಪದೆ ಶುಭಮತಿಯಂ ಪಡೆಯಿಂ ೧
ಸತ್ಯವ್ರತ ಸಂಯಮರಾಗುತಿರಿಂ | ನಿತ್ಯಂ ಮಳಕುಳಮಂ ನೀಗುತಿರಿಂ ೨
ಅಸ್ತೇಯಮಹಾವ್ರತಮಂ ಸಲಿಸಿಂ | ಪ್ರಸ್ತುತ್ಯರೆನಿಪ್ಪವರಂ ನಿಲಿಸಿಂ ೩
ಪರದಾರಮನೆಲ್ಲಿ ಯುಮೊಲ್ಲದಿರಿಂ | ಪರನಿಂದೆಯನೆಂತುಂ ಕಲ್ಲದಿರಿಂ ೪
ಪರಿಮಾಣದೊಳಾಳಿಂ ಕಸವರಮಂ | ಸೆರಗಿಲ್ಲದೆ ಕೇಳಿಂ ಹಿತಕರಮಂ ೫
ನಿಱಿಸಿಂ ಸಮ್ಯಕ್ತ್ವ ಗುಣೋನ್ನತಿಯಂ | ಮಱೆಯದಿರಿಂ ಕೊಂಡ ಗುಣವ್ರತವಂ ೬
ತ್ರಿಕರಣ ಪರಿಶುದ್ಧತೆಯೊಳೆ ನೆಗೞಿಂ | ಸಕಳೋತ್ತಮ ಗುಣಯುತರಂ ಪೊಗೞಿಂ ೭
ಕೆಡೆ ನೆಗೞದಿರಾಗಮಪದ್ಧತಿಯಂ | ಕಡೆಗಣಿಸದಿರಿಂ ಬುಧಸಂತತಿಯಂ ೮
ಅಱಿವಿಂದೊಗೆದೊಳ್ಪಂ ತಳ್ತಿರಿಸಿಂ | ಪೆಱದೇಂ ಮನದೊಳ್ ತೆಳ್ಪಂ ಬರಿಸಿಂ ೯
ಎಂತುಂ ಮಳಮಂ ಬರಲೀಯದಿರಿಂ | ಭ್ರಾಂತಿಂದವಗುಣದತ್ತೊಲೆಯದಿರಿಂ ೧೦ ೩೨

ಕಂ || ಈ ತೆಱದ ಕಲ್ಪಿಯಂ ಕೇ
ಳ್ದೀ ತೆಱದಿಂ ಮಾಣದಮಳಗುಣಚಾರಿತ್ರ
ಕ್ಕೋತೊಂದಿ ನೆಗೞೆ ದುರಿತ
ವ್ರಾತಂ ಪುಗವದಱಿನಾವುದುಂ ಬೞಿಕರಿದೇ ೩೩

ವ || ಬಲ್ಲಿತ್ತಾಗಿ ಸನ್ನಣಂದೊಟ್ಟವನಂ ಕೆಯ್ದುಗಳ್ ಮುಟ್ಟದಂತೆ ಸಂವರೆ ಬಲ್ಲಿತ್ತಾಗಿರ್ದೊನಂ ಕರ್ಮರಜಂಗಳ್ ಪೊರ್ದವದಱಿಂ ಭವ್ಯಜೀವಿಗಳಿರಾ

ಶಾ || ಚಾರಿತ್ರಾನ್ವಿತರಾಗಿಮುನ್ನತ ಗುಣಪ್ರಖ್ಯಾತ ಸರ್ವಜ್ಞಭಾ
ಭಾರ ಶ್ರೀಪದಭಕ್ತರಾಗಿಮಸುಭೃದ್ವರ್ಗಕ್ಕೆ ನೀಮಾಗಳುಂ
ಕಾರುಣ್ಯಾನ್ವಿತ ಚಿತ್ತರಾಗಿಮಿನಿತಾಗಿರ್ದಂದು ಕರ್ಮಂಗಳಂ
ಸಾರಲ್ಕೀಗುಮೆ ಸಂವರಕ್ರಿಯೆಗಳುಂ ಸಾಮಾನ್ಯಮೇ ಜೀವನೇ ೩೪

ಗದ್ಯ || ಇದು ಜಿನಶಾಸನ ಪ್ರಭಾಸನ ಶೀಲೋದಿತ ವಿದಿತ ಬಂಧುವರ್ಮ ನಿರ್ಮಿತಮಪ್ಪ ಜೀವಸಂಬೋಧನಾ ಗ್ರಂಥಾವತಾರದೊಳ್ ಸಂವರಾನುಪ್ರೇಕ್ಷಾನಿರೂಪಣಂ ನಾಗಿಲ ಗಾವುಂಡ ಕಥಾವರ್ಣನಂ

ನವಮಾಧಿಕಾರಂ