. ಏಕತ್ವಾನುಪ್ರೇಕ್ಷೆ

ಕಂ || ಒರ್ವನೆ ನರಕದೊಳಿರ್ದಂ
ದೋರ್ವನೆ ತಿರ್ಯಂಚನಾಗಿ ತಿರಿತರುತಿರ್ದಂ
ದೊರ್ವನೆ ಸಗ್ಗದೊಳಿರ್ದಂ
ದೋರ್ವನೆ ಮನಜತ್ವಮೆಯ್ದೆವಂದೆಯ್ದಲೊಡಂ ೧

ವ || ಎಲೆ ಜೀವಾ ನಿನ್ನಿಂದಾರ್ಜಿಸಲ್ಪಟ್ಟ ಪುಣ್ಯಪಾಪ ಫಲಾನುಭವಮಂ ಗೆಯ್ವಲ್ಲಿ ನೀನೋರ್ವನಲ್ಲದೆ ನಿನಗೆ ಸ್ವಕೀಯರಪ್ಪ ಕಳತ್ರ ಪುತ್ರಾದಿಗಳುಮನ್ಯರಪ್ಪ ಪರಿವಾರಜನಮುಂ ಸಹಾಯರಲ್ತೆಂದು ಬಗೆದು ತದ್ವ್ಯಾಮೋಹಮಂ ಬಿಟ್ಟೇಕತ್ವಮಂ ಭಾವಿಸಲ್ವೇೞ್ಕುಮೆಂಬೀ ಸೂತ್ರಾನುಸಾರಮಾದ ದೃಷ್ಟಾಂತಕಥಾ ನಿರೂಪಣಂಗೆಯ್ವೆನದೆಂತೆನೆ

ಉ || ಗರ್ವಮಡಂಗಿ ಗರ್ಭದೊಳಗೊರ್ವನೆ ದುಃಖಮನುಂಡೆನಂತೆ ಬಂ
ದೊರ್ವನೆ ತೊಟ್ಟಿಲೊಳ್ ಬಳಿದೆನೊರ್ವನೆ ಯೌವನನಾದೆನಾಗಿ ಮ
ತ್ತೊರ್ವನೆ ಮುಪ್ಪಿನೊಳ್ ನಮೆದೆನೊರ್ವನೆ ಸಾವೆಡೆಯಲ್ಲಿ ನೆಟ್ಟನಿಂ
ತೊರ್ವನೆ ಚಿಂತೆಗೆಯ್ ನಿನಗೆ ನೀನೆ ಪೆಱರ್ ನಿನಗಿಲ್ಲ ಜೀವನೇ ೨

ವ || ಇಂತು ನಾಲ್ಕುಂ ಗತಿಗಳೊಳೆಲ್ಲಿಯುಂ ಪುಟ್ಟುವಂದುಂ ಬಳೆವಂದುಂ ಸಾವಂದು ಮಾತ್ಮನೊರ್ವನೆಂಬುದಂ ಬಗೆವುದು ಪೆಱವು ಸಂಬಂಧದೊಳೇಂ ಪುಣ್ಯಬಂಧವೊಂದನೆ ಪಡೆವೆನೆಂಬೇಕತ್ವಮಂ ಭಾವಿಸುವುದು

ಕಂ || ಎನಗಾನೆ ಪಗೆವನೆಂ ಮ
ತ್ತೆನಗಾನೆ ಕಡಂಗಿ ಕೂರ್ಪ ಕಳೆಯನೆ ನಿನ್ನಿಂ
ದೆನಗೆ ಗುಣದೋಷಮೆರಡುಂ
ಜನಿಯಿಸುವುದಱಿಂದವೊರ್ವನಲ್ಲದೆ ಪೆಱರಾರ್ ೩

ಉ || ಒರ್ವನೆ ಮುನ್ನನಂತಭವದೊಳ್ ತಿರಿವಾಗಳದಲ್ಲದೀಗಳಾ
ನೊರ್ವನೆ ಬರ್ಪ ಕಾಲದ ಭವಾಂತರದೊಳ್ ಸಮಕಟ್ಟಿ ಪುಟ್ಟುವಂ
ದೊರ್ವನೆ ನೆಟ್ಟನೀ ತೆಱದಿನಾಗಳುಮೆಲ್ಲಿಯಮೆಲ್ಲ ಮಾೞ್ಕೆಯಿಂ
ದೊರ್ವನೆ ನಿಕ್ಕುವಂ ಪೆಱರೊಳೇನೆನಗೆಂಬುದು ಭವ್ಯಜೀವನೇ ೪

ವ || ಇಂತತೀನಾಗತ ವರ್ತಮಾನಮೆಂಬ ಮೂಱುಂ ಕಾಲದೊಳಮಾತ್ಮನೊರ್ವನೆಯೆಂಬುದು ನಿನ್ನೊಳೇಕ್ರಾಚಿತ್ತದಿಂ ಬಗೆದು ನೋಡಾ

ಕಂ || ಎನ್ನೊಳ್ ಪುದುವಾೞ್ವೀ ಮೆ
ಯೆನ್ನಿಂ ಗೆಂಟಪ್ಪುದೆಡಱೊಳೆಂದೊಡೆ ಪೆಱರಾರ್
ಇನ್ನೆನಗೆಲ್ಲಿಯಮೊರ್ವನೆ
ಸನ್ನುತ ಜಿನಧರ್ಮಮೊಂದೆ ನೆರಮೆನಗಕ್ಕುಂ ೫

ವ || ಬೇಱಿಲ್ಲದೆ ಬೆರಸಿರ್ದೀ ಮೆಯ್ಯಮೆನಗೆಡಱೊಳಾಗದು ಧರ್ಮವೊಂದೆ ಶರಣಕ್ಕುಮೆಂಬುದಂ ನಿಶ್ಚಯಿಸಿ ಮತ್ತಮಿಂತೆಂದು ಬಗೆವುದು

ಉ || ಮುನ್ನಿನ ಜನ್ಮದೊಳ್ ನೆಗೞ್ದ ದುಶ್ಚರಿಂತಂಗಳೊಳಾದ ಪಾಪದಿಂ
ದೆನ್ನನವುಂಕಿ ಬಂದಲೆವ ದುಃಖಮನಂದಿನ ನಂಟರಪ್ಪವರ್
ಬನ್ನಿಮಿವಂಗೆ ಸೇದೆಯಿದನೀಗಳೆ ನೆಟ್ಟನೆ ಪರ್ಚಿಕೊಳ್ವಮೆಂ
ಬನ್ನರನೆಲ್ಲಿಯುಂ ಪಡೆಯದೊರ್ವನೆ ದುಃಖಮನುಂಡು ಬರ್ದಿದೆಂ ೬

ವ || ಎಂಬುದು ಬಗೆದು ದುರ್ಮೋಹಮಿಲ್ಲದೆಯುಂ ಪಾಪಕ್ಕಲ್ಲದೆಯುಂ ನೆಗೞ್ದು ದಂತುಮಲ್ಲದೆಯುಂ

ಕಂ || ಓಡುವೊಡಮಣ್ಮಿ ಗೆಲ್ಲಂ
ಮಾಡುವೊಡಂ ಮೋಹಪಾಶಮಂ ಸಲೆ ಪಱಿದೀ
ಡಾಡುವೊಡಂ ಗುಣಗಣದೊಳ್
ಕೂಡುವೊಡಂ ನೆಟ್ಟನೊರ್ವನೆಂಬುದನೆನ್ನಾ ೭

ವ || ಅಂತೆನ್ನದುದ್ಧತರಾಗಿರ್ಪಿರೇಕಾಕಾಶಂ ಮೇಲೆ ಕವಿದೊಡೆ ಮರಳೆ ಕಾಲಲೊದೆವೆನೆಂದು ಕಾಲಂ ನೆಗಪಿರ್ಪ ತೀತಕಿಯಂತೆ ನಿಮ್ಮ ಬೆಸದಿರ್ಪುದಕ್ಕೆ ಜನವೞ್ಕುವನೆ ಮರುಳಾಗದಿರಿಂ

ಚಂ || ಎನಗೆನಗೆಂದು ಬಂದೊಡಮೆಯಂ ತಿನಲೆಂದೊಸೆದಿರ್ಪರರ್ಥಮು
ಳ್ಳಿನೆಗಮಡುರ್ತು ಬಂದು ತುದಿಯೊಳ್ ಜವನೆಂಬ ಮಹೋಗ್ರ ರಾಕ್ಷಸಂ
ತನಿಗನಿಸಪ್ಪೊಡಂ ಕರುಣಮಿಲ್ಲದೆ ಕೊಲ್ವೊಡೆ ನೋಡುತಿರ್ಪರೊ
ರ್ವನೆ ಮಡಿಗುಂ ದಲೆಂದು ಬಗೆದಿಂ ನಿನಗಪ್ಪುದನಪ್ಪುಗೆಯ್ ಗಡಾ ೮

ವ || ತನ್ನಂ ಕೊಲಲ್ ಪತ್ತಿದ ಮೃತ್ಯುವುಮಂ ದ್ರವ್ಯಂಗೊಳಲ್ ಮುತ್ತಿದ ನಂಟರುಮಂ ನಂಬಿದೊಡಿಂಬೞಿಯದಿರ್ಕುಮೆ

ಕಂ || ಒಂದೆ ಕಳತ್ತಂ ಕಿಡಿಸುಗು
ಮೊಂದೆ ಕರಂ ಪೊಲ್ಲಕೆಯ್ಗುಮಿ ಮೆಯ್ಯೆನಗಿ
ನ್ನೊಂದೆ ಜಿನಧರ್ಮಮಲ್ಲದೆ
ಯೊಂದುಂ ನೆರಮಲ್ಲಮೆಂದು ಬಗೆ ನೀಂ ಮನದೊಳ್ ೯

ವ || ಕಿಱಿದೆಡೆಯೊಳಂ ಬಟ್ಟೆಯೊಳೊಡವೋದರ್ ಮೊದಲಾಗಿಯುಮೆಲ್ಲ ಮಾದುದನಪ್ಪರ್ ನಿನ್ನೊಳ್ ಪತ್ತಿರ್ದ ಮೆಯ್ಯುಂ ಸುತ್ತಿರ್ದ ನಂಟರುಮಾಗದುದನಱಿದುಮತಿಮೋಹದಿಂದಾಸೆವಡುವುದೇಕೆ

ಮ || ಧನಮೊಂದಿಂದ್ರಿಯದರ್ಪಮೊಂದು ಮುಳಿಸೊಂದುತ್ಸಾಹಮೊಂದೀ ಸುಹೃ
ಜ್ಜನಸಂಬಂಧಮಿದೊಂದು ದುರ್ವ್ಯಸನವೊಂದುರ್ಕೊಂದು ಸೊರ್ಕೊಂದು ಬೆ
ಳ್ತನವೊಂದಿಂದಿನಿತೆಲ್ಲ ಮೆನ್ನನಱಿಯಲ್ಕೆಂದಿರ್ಪುವಾನೊರ್ವನಿ
ನ್ನೆನಸಂ ಮಾಣ್ದಿರಲಾಗದೆಂದು ತಱಿಸಲ್ ನೀಂ ಮೆೞ್ದಡಲ್ ಜೀವನೇ ೧೦

ವ || ಪಗೆವರ್ ಪಲರಪ್ಪು ದುಮಾನೊರ್ವನೆಯಪ್ಪುದುಮೊಳ್ಳಿತ್ತಾಯ್ತೆನ್ನಾರ್ಪಂ ತೋರ್ಪೆನೆ ನ್ನದೊಡಂ ಬಹುವಿಧದಿಂ ಗತಿಯನುೞಿಯಲಿರ್ದ ಸಂಸಾರಮಂ ಗೆಲಲಾನೊರ್ವನೆ ಸಾಲ್ವೆನೆನ್ನದೊಡಮಾತನಣ್ಮು ಮಿತನಱಿವುಮೆಂತೊಪ್ಪುಗುಂ

ಕಂ || ಆನೋರ್ವನೆಲ್ಲ ತೆಱದೊಳ
ಮೇನಿಂ ಪೆಱದೆನಗೆ ಕರ್ಮಮಂ ಕಿಡಿಸುವೆನೆಂ
ಬೀ ನೆಱೆ ಕಜ್ಜಮೆ ನೆಟ್ಟನೆ
ತಾನೊಂದೆ ದಲೆನ್ನ ನಿನ್ನ ಮನದೊಳ್ ಜೀವಾ ೧೦

ವ || ಸುರಿಗೆಗಾಳೆಗಂಗಾದುವಂಗೆ ಬಳಸಿಯುಂ ನೋೞ್ಪ ನೆರವಿ ತಾನೊರ್ವನೆ ದುಃಖಮನನುಭವಿಸುವಲ್ಲಿಯುಮದಂ ಕಿಡಿಸುವಲ್ಲಿಯುಂ ಬಳಸಿಯುಮಿರ್ದ ನಂಟರೆಲ್ಲಂ ನೆರಮೆ ತಾನೊರ್ವನೆಯೆಂಬುದುಮಂ ಭಾವಿಸಿ ಮತ್ತಂ ಮನದೊಳ್ ನೆಟ್ಟನಱಿದಿಂತು ಭಾವಿಸಿ ಸುಖಮಂ ಕೆಯ್ಕೊಳ್ಳಾ

ಮ || ತಱಿಸಂದೇಕವಿಹಾರಿಯಪ್ಪುದುಮನೇಕೈಶ್ಚರ್ಯಮಿ ಮೆಯ್ಯುಮಂ
ತೊಱೆದಿರ್ಪಂದಮೆ ಕಾರ್ಯಸಿದ್ಧಿ ಸಫಲಂ ದೇಹಂ ಮಲಕ್ಷೀಣದಿಂ
ನೆಱೆದಾಯುಷ್ಯದಿನೊಪ್ಪಿ ಸಾವಡಸೆ ಸರ್ವತ್ಯಾಗದೊಳ್ಪಿಂಗೆ ತಾಂ
ಗುಱಿ ಯಾಯ್ತೆಂದೊಸೆವಂಗೆರೞ್ ಭವದೊಳಂ ಸೌಖ್ಯಾವಹಂ ಜೀವನೇ ೧೨

ವ || ಶುದ್ಧಚಾರಿತ್ರದೊಳೊರ್ವನೆ ವಿಹಾರಿಸುವುದನೇಕ ರಾಜ್ಯಭೋಗಮೆಂದು ಬಗೆವೊಡಂ ನಿವೃತ್ತಿಯೇ ಕಾರ್ಯಸಿದ್ಧಿಯೆಂದುವೊಸೆವೊಡಂ ದುಃಖದ ಭರವಂ ಮುನ್ನಿವ ಭವದೊಳ್ ನೆಱಪಿನ ಫಲಮುಂಡುತಪ್ಪುದೆಂದು ಸೈರಿಸುವಡಂ ಸಾವೆಯ್ತಂದೊಡಂ ಸರ್ವ ತ್ಯಾಗಂಗೆಯ್ಯಲ್ಕೆಂತಾನುಂ ಪಡೆವೆನೆಂದು ಮೆಚ್ಚಿ ಪರಿಚ್ಛೇದಿಸಿ ಪದುಳಮಿರ್ಪೊಡಮಿಲ್ಲಿಯೆ ನೀಂ ಸುಖಿಯಪ್ಪೆ ಮೇಗಣ ಸುಖಮನೇವೇೞ್ವುದೊ

ಕಂ || ಮುಳಿಸೊಸಗೆಗಳಂ ನಿನ್ನಿಂ
ಕಳೆದು ಕರಂ ತಿಳಿದು ಮನಮನಾಱೆಸಿ ಗುಣಮಂ
ತಳೆದು ಸಖದೊಂದು ಬೆಳಸಂ
ಬೆಳೆದು ಮನೋಮುದದಿನಿರ್ಪುದೊಂದನೆ ಬಗೆಯಾ ೧೩

ವ || ಕೆಯ್ಯ ಮರಗಸಂ ಪುಲ್ಲಸಮೆಂಬೆರಡುಮಂ ಕಳೆದು ಪರದೊಳ್ ಬಿತ್ತದೊಡಂ ಮನದ ರಾಗದ್ವೇಷಮೆಂಬೆರಡುಮಂ ಕಳೆದು ಶುದ್ಧಚಾರಿತ್ರದೊಳ್ ಪತ್ರದೊಡಮಾತಂಗೆ ಬೆಳಸುಮಿತಂಗೆ ಸುಗತಿಯುಮೆಂತಕ್ಕುಮೆಂಬುದಂ ಬಗೆವುದು

ಮ || ಇವು ದೋಷಂಗಳಿನಪ್ಪ ದುಶ್ಚರಿತ ತಾಮಿಂತೆಂದವಂ ಪಿಂಗಿಸು
ತ್ತಿವು ಮಿಕ್ಕೊಳ್ಗುಣಮೀ ಗುಣಂಗಳಿವು ಸಚ್ಚಾರಿತ್ರದಿಂದಕ್ಕುಮೆಂ
ದವಱೊಳ್ ಕೂರ್ತೆಸೆದಾರ್ತು ಪತ್ತಿನೆಗೞಿಂ ನೀಂ ಬಲ್ಲೆ ನಿನ್ನಂ ಭವಾ
ರ್ಣವದಲ್ಲಿ ಕ್ಕುವೊಡಂ ಸುಖಾಂಬುನಿಧಿಯತ್ತಣ್ಗೊಯ್ವಡಂ ಜೀವನೇ ೧೪

ವ || ದುಷ್ಟನಿಗ್ರಹ ಶಿಷ್ಟಪ್ರತಿಪಾಲಕನಲ್ಲದನರಸುಗೆಯ್ವನುಂ ದೋಷವಿರಕ್ತನುಂ ಗುಣಾನುರಕ್ತನುಮಲ್ಲದೆ ಧರ್ಮಂಗೆಯ್ವನುಮೆಂತು ಪೆರ್ಚುಗುಮಂತೆ ಗುಣ ದೋಷಂಗಳ ಫಲಾಫಲಂಗಳನಿಲ್ಲಿಯೆ ಕಾಣಲಾಗಾ

ಕಂ || ಆಯುಂ ಸೊಗಯಿಪ ರೂಪುಂ
ಶ್ರೀಯುಂ ಪೇೞ್ದಪ್ಪುವಱಿಯೆ ಪುಣ್ಯಮನವು ಕೆ
ಟ್ಟಾಯಾಸಮಱಿಪೆ ಪಾಪಮ
ನೀಯೆರಡಂದಮನಱಿದುಮಱಿಯ್ಯೆ ಜೀವಾ ೧೫

ವ || ಸಿರಿವಂತರುಮಂ ಬೆಳೆದ ಕೆಯ್ಯಮುಂ ಕಂಡಿದು ಮುನ್ನಿನ ಧರ್ಮದ ಫಲಮಿದಾ ರಂಭದ ಫಲಮೆಂದು ನಂಬುವುದು ಕಿಸುಗುಳನಪ್ಪ ಬ್ಯೆಕುಂಗಳಿಯುಮಂ ಕಟ್ಟುಪಟ್ಟ ಕಳ್ಳನುಮಂ ಕಂಡಿದು ಮುನ್ನಿನ ಪಾಪದ ಫಲಮಿದೀಗಳಿನ ದೋಷದ ಫಲಮೆಂದಱಿದು ನೆಗೞ್ವುದು ಗಹನಮೆ ನೀನೊಳ್ಳಿತಪ್ಪ ನೆಗೆೞ್ತೆಗೇಕೆ ಬೆರ್ಚುವೈ ಜೀವಾ

ಚಂ || ಒಡಲೊಡಲೋಳಿಯಂ ಬರಿಸದಂತಿರೆ ತಪ್ಪುದೆ ತಪ್ಪುದಪ್ಪುದೇ
ತಡೆಯದೆ ಕುಂದುವಾಯುಗಳನಾಯುವೆ ಪೋದುದೆ ಪೋದುದಪ್ಪುವೇ
ತಡೆದಿರದಿಂತಿವಂ ಕಳೆವ ಕಜ್ಜಮನೊಂದನೆ ಮಚ್ಚಿ ಬೇಗದಿಣ
ದೊಡರಿಸು ಜೀವಾ ನೀನೆ ನಿನಗಲ್ಲದೆ ಪೇೞ್ ಪೆಱರಾರೊ ತಿರ್ದುವರ್ ೧೬

ವ || ಇದಿರೊಳಿರ್ದ ಪಗೆಯಂ ಗೆಲಲೆಂದೆಸುವಾತನ ಕೆಯ್ಯಂಬಿನ ಪೋಗುಮಂ ಪಿರಿದಪ್ಪ ಲಾಭಮಿವ ಮಾಱಿಂಗೆ ಕುಡುವಲ್ಪದ್ರವ್ಯದ ಪೋಗುಮಂ ಪೋದುದೆಂಬುದೇ ಧರ್ಮಮುಂಗೆಯ್ದು ತಪ್ಪೊಕ್ಕಲ ಬಡತನಮುಮಂ ತಪಂಗೆಯ್ದ ತಪ್ಪನ ಮೆಯ್ಯ ಬಡತನಮುಮಂ ಸನ್ಯಸನದೊಳ್ ಸತ್ತನ ಸಾವುಮಂ ತವಿಲುಂ ಬಡತನಮುಂ ಸಾವುಮೆಂಬುದೇ

ಕಂ || ಎನ್ನಯ್ದಮಿಂದ್ರೀಯಂಗಳಿ
ವೆನ್ನಂ ಬೆಸಕೆಯ್ಸೆ ನಮೆದೆನ್ನೆಗಮವನಿ
ನ್ನೆನ್ನ ವಶಮಾಗೆ ಮಾಡುವೆ
ನೆನ್ನದಿದೇಕಯ್ಯ ದುಃಖಮಂ ಮಚ್ಚಿದಿರೇ ೧೭

ವ || ಪ್ರಮಾಧಿಯಾಗಿ ಪಗೆವರಂ ಪೆರ್ಚಿಸುವಂತೆ ಅಜ್ಞಾನಿಯಾಗಿ ಪಾಪಮಂ ಪೆರ್ಚಿಸಿದೊಡಮೇಂ ತನಗೆ ಶಕ್ತಿ ದೊರೆಕೊಂಡೊಡೆ ಪಗೆಯಂ ಗೆಲ್ಲದೊಡಮಱಿವು ದೊರೆಕೊಂಡು ಮೆಯ್ಯಂ ಪಡೆದೊಡೆ ಕರ್ಮಮಂ ಗೆಲ್ಲದೊಡಮಾಯಿರ್ವರುಂ ತಂತಮ್ಮ ಕೇಡಂ ಬಯಸಿದರಕ್ಕುಮಲ್ಲದೊಡೆ

ಚಂ || ಗಿಡುಗಡಿದುೞ್ತು ಬಿತ್ತಿಯುಮಿಳೇಶ್ವರನಾಸೆಗೆ ಪೋಗಿ ಪತ್ತಿಯುಂ
ಬಿಡದೆ ತಗುಳ್ದು ಪೇಱಿಯುಮಸುಂಗೊಳೆ ಭೈತ್ರಮನೇಱಿಯುಂ ಧನಂ
ಬಡೆವೊಡೆ ಪುಣ್ಯಮಿಲ್ಲದೆ ಮೞಲ್ವಿೞಿವಂತುಯಿಗುಟ್ಟುವಂತೆ ನೀರ್ಗ
ಡೆವವರಂತೆ ಸೇದೆವಡುತಿರ್ಪುದು ಕಜ್ಜಮೆ ಭವ್ಯಜೀವನೇ ೧೮

ವ || ಕುದಿಱನೆನಿತೆನಿತು ಕರ್ಚುಮೊಡಮನಿತನಿತೆ ಕೆಸಱ್ ನೆಗೆವಂತೆ ಮೋಹದೊಳೆ ನಿತಾಯಾಸಂಬಟ್ಟೊಡಂ ಪುಣ್ಯಮಿಲ್ಲದಂಗನಿತೆ ದುಃಖಂ ಪೆರ್ಚುಗುಮೆಂಬುದೊಂದನೆ ಚಿಂತಿಸುವುದು ಮಱೆದಿರವೇಡಾ ನಿನ್ನೊಳಱಿಯಲಾಗಾ

ಕಂ || ಪೊಱಮಡುವ ಪುಗುವ ಸುಯ್ಗಳ
ತೆಱದಿಂದಿಂ ನಿನ್ನ ಪೋಗಿನಭ್ಯಾಸಮಿದೆಂ
ದಱಿಪುತ್ತಿರೆ ನಿನ್ನಂ ನೀಂ
ಮಱೆದಿರ್ದಪೆಯೆನ್ನ ಮಾತನುಱದುದು ಪಿರಿದೇ ೧೯

ವ || ನಿನಗೆ ನಿನ್ನಂದಮೆ ಪೇೞುತ್ತಿರೆಯುಂ ಬಗೆವೆಯಲ್ತೆಮ್ಮ ಪೇೞ್ದುದನೇಕೆ ಬಗೆಯೆಯಿನ್ನುಮಿರಲಾಱದೆ ಪೇೞ್ದಪೆನಿಂತು ಕೇಳ್ದು ಹಿತಮಂ ಕೆಯ್ಕೊಳ್ಳಾ

ಚಂ || ಬಿಸುಟು ಪರಿಗ್ರಹದ್ವಯಮನೇಕವಿಹಾರದ ವೃತ್ತಿಯಿಂ ತೊೞ
ಲ್ದೆಸೆಯೆ ಗುಣೋತ್ಕರಂ ತನುವೊಡಂಬಡೆ ಭಾವಿಸುತ್ತರೋತ್ತರಂ
ಪಸರಿಸಿ ಚಿತ್ತಮಾಱೆ ಗಿರಿ ಕಂದರ ಗಹ್ವರದಲ್ಲಿ ಪೊಕ್ಕು ಜಾ
ನಿಸುವುದು ಯೋಗಿಯಾಗಿ ದುರಿತಂ ಕಿಡುವನ್ನೆಗಮೇಕಚಿತ್ತದಿಂ ೨೦

ವ || ಭವ್ಯಕರ್ಮಂಗಳಂ ಕಡೆ ನೆಗೞಲ್ ಬಗೆವನಪ್ಪೊಡೆಂತು ಸುರಿಗೆವಿನ್ನಾಣಮನೊಳ್ಳಿತ್ತಾಗೆ ಕಲ್ವೆನೆಂಬಾತಂ ಮುನ್ನಂ ತನ್ನ ಕಳತ್ರಮಂ ನೆಂಟರುಮಂ ಬಿಸುಟ್ಟು ಪರದೇಶಕ್ಕೆ ಪೋಪನಂತೆ ಭವ್ಯನಪ್ಪಾತಂ ಅಭ್ಯಂತರಮುಂ ಬಾಹ್ಯಮುಮೆಂಬೆರಡುಂ ತೆಱದ ಪರಿಗ್ರಹಮುಮಂ ಬಿಸುಟ್ಟು ತಪಕ್ಕೆ ಪೋಪುದು, ಪೋಗಿಯವಂ ತೊವಲನುಡುವಂತೆ ದೆಸೆಗಳೆಂಬ ವಸ್ತ್ರಂಳನುಡುವುದು, ಉಟ್ಟು ಸುರಿಗೆಯೋಜನಂ ಸಾರ್ದಾತಂ ತೋಱಿದ ಸೂತ್ರದೊಳಾಡುವಂತೆ ದೀಕ್ಷೆಗೆಯ್ದಾಚಾರ್ಯರ ಪಕ್ಕದೆ ಸಂಯಮಾಚರಣೆಗಳನೊಳ್ಳಿತ್ತಾಗಿ ಕಲ್ವುದು ಕಲ್ತು ಮುನ್ನಿನೋಜನನಗಲ್ದು ದೇಶಾಂತರಂಗಳನೊರ್ವನೆ ತೊೞಲ್ದು ಸಂಗ್ರಾಮಿಕೋದ್ದೇಶಂಗಳಂ ಕಲ್ವಂತೆ ಕಲ್ತು ಗುರುವನಗಲ್ದೇಕವಿಹಾರಿಯಾಗಿ ಚಾರಿತ್ರಭಾವನೆಯುಮಂ ಜ್ಞಾನ ಭಾವನೆಯುಮಂ ಭಾವಿಸುತ್ತುಂ ಬಂದು ತನ್ನನಲೆವಂಕಕಾಱನೊಳ್ ಪೊಣರ್ದು ಕಳಂಬುಗುವಂತೆ ಮಳವಿನಾಶಮಂ ಮಾೞ್ದ ಸಲ್ಲೇಖನಾಕಾರ್ಯಮನೆತ್ತಿಕೊಂಡು ಗಿರಿಗಹ್ವರಂಗಳಂ ಪುಗುವುದು ಪೊಕ್ಕು ಸುರಿಗೆಗೊಂಡು ಬಿಗಿದು ನಿಲ್ವಂತೆ ಯೋಗಸ್ಥನಾಗಿರ್ಪುದು, ಆಗಿ ನೆಱನನಿರಿದಿದಿರ ರೂಪಂ ಗೆಲ್ವಂತೆ ಶುಕ್ಲಧ್ಯಾನದಿಂ ಕರ್ಮಂಗಳಂ ಗೆಲ್ವುದು, ಗೆಲ್ಲು ಸೇಸೆಗೊಳ್ವಂತೆ ಮೋಕ್ಷಮಂ ಕೆಯ್ಕೊಳ್ವುದು

ಕಂ || ಪೆಱರಿಂದೆ ಬರ್ಪ ಸುಖದಿಂ
ದುಱಗುಂ ತನ್ನಿಂದೆ ಬರ್ಪ ದುಃಖದ ಪೆಂಪಂ
ಮಱೆದು ಬೞಿಮೆಯ್ಗೆ ಸುಖದೊಳ್
ನಿಱಿಸುವ ತಪದೊಂದು ಬೇವಸಂ ಬೇವಸಮೇ ೨೧

ವ || ಕುತ್ತವುಳ್ಳಂ ಬೆಜ್ಜವಡೆದು ಕೈಪೆಗಂಜಿ ಮದ್ದುಗುಡಿಯದೊಡಂ ಭವ್ಯಂ ಮನುಷ್ಯಭವಮಂ ಪಡೆದು ತಪದ ದುಃಖಕ್ಕೞ್ಕಿ ಸಕಳವ್ರತಿಯಾಗದೊಡಂ ಆತನ ಕುತ್ತಮುಮೀತನ ಕರ್ಮಮುಂ ಪತ್ತುವಿಡದೆಂದು ನಿಶ್ಚೈಸುವುದು ತಪೋನುಷ್ಠಾನ ಮತ್ಯಂತ ಸುಖಮೆಂದು ಬಗೆಯಾ

ಚಂ || ತನುವಿನೊಳಾದ ಜಲ್ಲಮಲಮಾಭರಣಂ ಪುಲಿಯಿರ್ಪುದೊಂದು ಕಾ
ನನದ ಗುಹಾಂತರಂ ಮನೆ ಪರಲ್ಗಳನುಳ್ಳ ತಱಂಬು ಪಾಸು ಮ
ತ್ತನುಪಮ ಬೋಧಿಸರಧನಮುಗ್ರ ಮಲಕ್ಷತಿ ಕಾರ್ಯಮಾಗೆ ನೀಂ
ಮನಮೊಸೆದೊರ್ವನಿರ್ದಲೆಯ ಕರ್ಮಮನುಜ್ಜಳಮಪ್ಪ ಯೋಗದಿಂ ೨೨

ವ || ಏರ್ಪೆತ್ತಂ ಪುಣ್ಯನುಡಿದಲ್ಲಿಯ ನೋವಂ ನೋವೆಂದು ಬಗೆಯದಂತೆ ತಪಂಗೆಯ್ವಂ ಕಾಯಕ್ಲೇಶಮಂ ಕ್ಲೇಶಮೆಂದು ಬಗೆಯದೆ ಪಿರಿದೊಂದು ವಿಳಾಸದಂತಾಗಿ ನೆಗೞ್ದುದಲ್ಲದೊಡೆ ಸುಖಂಬಡೆಯಲಾಗದದೆಂತೆನೆ

ಕಂ || ಪುಟ್ಟುವುದು ಸೇದೆಯಿಂ ಸುಯ್
ನೆಟ್ಟನೆ ಸುಯ್ ಮೞ್ಗಿ ಸಾವು ಸುಖಮೆಲ್ಲಿತ್ತೋ
ನಿಟ್ಟಿಸಿ ಬಗೆದಱಿವಾಗಳ್
ಕಷ್ಟಮಿದೆಂಬೊಂದು ತತ್ವಮಂ ಬಗೆ ಜೀವಾ ೨೩

ವ || ಸುಯ್ವುದಂ ಸುಖಮೆಂಬೆಯಪ್ಪೊಡೆ ಸುಯ್ ಸೇದೆಯಿಂದಲ್ಲದಾಗದೆಂದೊಡೆ ಸುಖಮೆಂಬಾ ಸುಯ್ ಮರೞೆಸಾವು ನಿನಗಪ್ಪುದೀ ಮೆಯ್ಯೊಳೆಲ್ಲಿಯುಂ ಸುಖಮಿಲ್ಲಂ

ಮ || ಕಡುಗಿರ್ಚಂ ನದಿಪುತ್ತು ಮಿರ್ಪಿರವು ತಾನೆಂತಂತೆ ಕೇಳ್ ಮೂರ್ಛೆವೋ
ದೊಡೆ ನೀರಂ ತಳಿವಂತೆ ಬನ್ನದೞಲೊಳೆ ನೊಂದಾತನಂ ಸಂತಸಂ
ಬಡಿಸಲ್ ಕಾಲ್ವಿಡಿವಂತೆ ಜೀವ ಪೆಱತೇನೇಮಾತೊ ಪುಣ್ಣಲ್ಲಿಮ
ರ್ದಿಡುವಂತೆಯ್ದಿದ ದುಃಖಮಂ ಕಿಡಿಸುತಿರ್ಪಂದಂಗಳೇಂ ಸೌಖ್ಯಮೇ ೨೪

ವ || ಮನುಷ್ಯಲೋಕದ ಸುಖಮೆಲ್ಲಂ ದಾಹಕ್ಕೆ ಶೀತಲಕ್ರಿಯೆಗೆಯ್ವಂತೆ ನೋವನಾಱಿಸುವ ಸುಖಮದು ಸುಖಮೆ ?

ಕಂ || ಗತಿ ಮಗುೞ್ದು ಬಾರದಿರ್ಪುದೆ
ನುತ ಧರ್ಮಂ ಪಾಪಮಿಲ್ಲದಿರ್ಪುದೆ ವಿಪರೀ
ತತೆಯಿಲ್ಲದುದಱಿವಾಗಳ್
ಗತಿ ದುಃಖಂಗಾಣದಿರವೆ ತಾಂ ಸುಖಮಲ್ತೇ ೨೫

ವ || ಈಗಡಿನ ಮನುಷ್ಯರೊಳ್ ಸುಖಮಾವುದೊ ಮೂಱುಂ ಲೋಕದೊಳುಳ್ಳ ಸುಖಂ ದೇವೇಂದ್ರರ್ಕಳ ಚಕ್ರವಿರ್ತಗಳ ನಾಗೇಂದ್ರರ್ಕಳ ಸುಖಮೆಲ್ಲಮೊಂದಾಗಿಯುಂ ಸಿದ್ಧರ್ಕಳೊಂದು ಸಮಯದನಿತರ್ಕಂ ಸಮನಾಗದೆಂಬುದಂ ನೋಡಾ

ಉ || ಪೇಸುವುದಪ್ಪುದಿಂದ್ರಿಯಸುಖಕ್ಕೆ ದಯಾಪರನಪ್ಪುದೊಳ್ಳಿನ
ಭ್ಯಾಸದೊಳಪ್ಪುದೊಳ್ತಪದೊಳೞ್ತಿಗನಪ್ಪುದು ದುಷ್ಕಷಾಯಸಂ
ತ್ರಾಸಕನಪ್ಪುದತ್ಯಧಿಕ ಭಕ್ತಿ ಜೀನೆಂದ್ರನೊಳುಳ್ಳನಪ್ಪುದು
ದ್ಭಾಸಿತ ಮೋಕ್ಷಲಕ್ಷ್ಮಿ ಗಧಿನಾಯಕನಪ್ಪೊಡೆ ಭವ್ಯಜೀವನೇ ೨೬

ವ || ನಿಘರ್ಷಣಚ್ಛೇದನ ತಾಪನ ತಾಡನಾದಿ ಕ್ರಿಯೆಗೆಲ್ಲಂ ಬಂದೊಡೆ ಪೊನ್ನೊಳ್ಳಿತ್ತೇಂದಱಿವಂತೆ ಒಳ್ಳಿತ್ತಪ್ಪ ನೆಗೞ್ತೆಗೆವಂದಾತನನಾಸನ್ನ ಭವ್ಯನೆಂದಱೆವುದು ಮತ್ತಮಿನ್ನೊಂದು ಮಾತಂ ಕೇಳಾವುದೆಂಬೆಯಾ

ಕಂ || ಪಱಿದುಮಘಮಳಮನೋರ್ವೊದ
ಲಱಿದು ಜಗತ್ತಿತಯನಾಥನಾಗಿರ್ದಳವಂ
ಮೆಱೆದು ಗುಣಗಣದ ಪೆಂಪಂ
ನೆಱೆದು ವಿಶುದ್ಧಾತ್ಮನಾಗಿ ಸುಖಮಿರಲಾಗಾ ೨೭

ವ || ಪರದಂ ಲಾಭಮಿವ ಭಂಡಮಂ ಮಾಱುಗೊಳ್ಳದೊಡಂ ಭವ್ಯಂ ಸುಗತಿಯಿನೀವ ಗುಣಮಂ ಕೆಯ್ಕೊಳದೊಡಮಾತಂಗೀ ಭವದ ಸುಖಮುಮೀತಂಗೆ ಮಱುಭವದ ಸುಖಮುಮಾಗ ದದಱೆಂ ಪೆಱವಱೊಳೇಂ

ಉ || ಶ್ರಾವಕನಕ್ಕೆ ಮೇಣ್ ತವಸಿಯಕ್ಕೆ ಕಷಾಯಮನಾಗಲೀಯದಿ
ರ್ದೋವಿ ಗುಣಂಗಳಂ ವ್ರತಮನಾರ್ಪನಿತಂ ಸಲಿಸುತ್ತುಮೞ್ತಿಯೊಳ್
ಭಾವಿಸಿ ತತ್ವಮಂ ತುದಿಯೊಳೊಪ್ಪಿರೆ ಸರ್ವ ನಿವೃತ್ತಿಗೆಯ್ವುದೆಂ
ಬೀ ವಿಧಿಯಿಂ ಕರಂ ತಿಳಿಯೆ ಪೇೞ್ವ ಸುವೃತ್ತಮಿದೊಂದು ಸಾಲದೇ ೨೮

ವ || ಎನಿತಾನಂ ಮಾತುಗಳೊಳೇನಾವೊಂಗಮಿ ನೆಗೞ್ತೆಯೆ ಕರ್ಮಕ್ಷಯಮಂ ಮಾಡುಗುಮನಂತಸುಖದೊಳ್ ಕೂಡುಗುಂ ಮತ್ತಂ ಜೀವನೆಲ್ಲಿ ಯಮೊರ್ವನೆ ಕೇಳ್ದಱೆಯೆಯಪ್ಪೊಡಂ ಕೇಳಾ