ವರಾಂಗನ ಕಥೆ

ಕಂ || ಉತ್ತಮವಸ್ತುಗಳೊಳಮ
ತ್ಯತ್ತಮಮೊಪ್ಪುವುದಱೆಂದಮೆಲ್ಲಿಯುಮದು ತಾ
ನುತ್ತಮನಾಗಿರೆ ಪೆಸರಿಂ
ದುತ್ತಮಪುರಮೆಂಬುದಾದುದದನಾಳ್ವರಸಂ ೨೯

ವ || ಧರ್ಮಸೇನ ಮಹಾರಾಜಮನೆಂಬಾತಂ ಮಹಾಮಂಡಿಳಿಕಂ ಶ್ರೀಯೊಳ್ ಕೂಡಿದ ಪೆಂಪಂ ತನಗಾವಗಂ ಮಾಡಿ ಸುಖಮಿರ್ಪನಾತನ ಪಟ್ಟಮಹಾದೇವಿ ಗುಣವತಿಯೆಂಬಳಾಯಿರ್ವರ್ಗಂ ಪುಟ್ಟಿದೊಂ ವರಾಂಗನೆಂಬೊನಾತನತ್ಯಂತ ಸೌಂದರ್ಯ ವೀರ್ಯ ಶೌರ್ಯ ಪ್ರತಾಪಪರನಾಗಿರೆ ಬಂಧುವರ್ಗಮುಂ ತಳವರ್ಗಮುಂ ತನ್ನೊಳ್ ಕೂರ್ತು ನೆಗೞಿ ನೆಗೞ್ದು ಕೆಲದ ನೆಲದರಸುಗಳಂ ಪರಮಂಡಲಂಗಳುಮೞ್ಕವಂತು ವಿಕ್ರಮೋಪೇತನಾಗಿರ್ಪನ್ನೆಗಂ ಧರ್ಮಸೇನಮಹಾರಾಜನ ಕಿಱೆಯರಸಿಯ ಮಗಂ ಸುಷೇಣನೆಂಬಂ ವರಾಂಗನ ತೇಜಕ್ಕಂ ಶ್ರೀಗಂ ಬುದ್ಧಿಗಂ ಕಾಯ್ದು ತಾನುಂ ತಮ್ಮಬ್ಬೆಯುಂ ಆತಂಗಪಾಯಮಂ ಬಗೆದುಪಾಯದೊಳೆರಡು ಜಾತ್ಯಶ್ವದ ಮಱೆಗಳಂ ಕೊಂಡೊಂದು ರಾಜವಾಹನಮಾಗೆ ಸಮೆದೊಂದಂ ವಿಪರೀತ ಗತಿಯೊಳ್ ಸಮೆದುಂ ವರಾಂಗನ ಪೆರ್ಗಡೆಯೊಳ್ ಸಮಕಟ್ಟಿದೊಡೆ ಆ ಪೆರ್ಗಡೆ ವರಾಂಗನಲ್ಲಿಗೆ ವಂದು ದೇವಾ ಬಿನ್ನಪಂ ನಮ್ಮಿಡಿಗಳ್ಗೆ ಪರಮಂಡಳದಿಂ ಪಾಗುಡಂ ಬಂದುವೆಂದು ಪುಸಿದು ಕುದುರೆಗಳಂ ಮಣಿಕನಕಮಯಾಳುಕಾರಂ ಮಾಡಿ ತೋಱಿ ಬನ್ನಿಮಿ ವೈಹಾಳಿಯೊಳೇಱೆ ನೋೞ್ಪಮೆಂದೊಡಗೊಂಡುವರೆ ವರಾಂಗನತಿಶಯವಿಳಾಸಿದಿಂ ಪೊರಮಟ್ಟು

ಚಂ || ತುರಗಸಮೂಹಮಿರ್ಕೆಲದೊಳಂ ಬರೆ ಮುಂದೆ ಪತಾಕೆಗಳ್ ನಿರಂ
ತರಮೊಗದೋಳಿಗೊಂಡೆಸೆಯೆ ತೂರ್ಯರವಂ ಮಿಗೆ ಕೂಡೆ ತಳ್ವು ಸೀ
ಗರಿಗಳನೇಕಮೊಪ್ಪುತಿರೆ ಚಾಮರಮಿಕ್ಕೆ ತಗುಳ್ದು ಕೀರ್ತಿಸು
ತ್ತಿರೆ ಪಲರಿಂತು ಬಂದನತಿರಾಗದಿನಮರೇಂದ್ರನಂದದಿಂ ೩೦

ವ || ಅಂತು ಬಂದು ವಾಹಳಿಯಂ ಪೊಕ್ಕಾಗಳ್ ಪರಮಂಡಳದಿಂ ಪಾಗುಡಂ ಬಂದಾ ತುರಂಗರತ್ನಂಗಳನೇಱಿನೋೞ್ಪಮೆಂದು ಸಾಮಂತ ಮಹಾಸಾಮಂತ ಮಂಡಳಿಕ ಶ್ರೇಷ್ಠಿ ಸೇನಾಪತಿ ದಂಡನಾಯಕ ಮಂತ್ರಿ ಪುರೋಹಿತಾದಿಗಳ್ವೆರಸು ಕರಿ ತುರಗ ರಥ ಶಿವಿಕಾಂದೋಳಂಗಳನೇಱಿಬಂದು ಬಳಸಿಯುಮಿರ್ದ ನೋಡೆ ಪೆರ್ಗಡೆ ತಂದವಟಯ್ಸಿದ ಕುದುರೆಗಳನರಸಂ ನೋಡಿ ಮೆಚ್ಚಿ ನೀನೊಂದನೇಱೆಂದೊಡಾತಂ ಬೇಗಂ ಸುಶಿಕ್ಷಿತ ಮಪ್ಪ ಕುದುರೆಯ ಬೆಂಗೆವಾಯ್ದೊಡದು ಲಂಘನ ವಲ್ಗನ ನೀಚೈರ್ಗತಾದಿಗಳೊಳಪ್ಪ ಕ್ರಿಯೆಗಳೊಡಂಬಡೆ ಬಲ್ಲರಚ್ಚರಿವಡೆ ಪರಿದೊಡಲ್ಲರುಮದಂ ಪೊಗೞ್ದೊಡದಱಿ ನಿದೊಳ್ಳಿತೆನೆ ವರಾಂಗನದನಾನೇಱಿ ನೋೞ್ಪೆನೆಂದು ವಿಪರೀತ ಶಿಕ್ಷಿತಮಪ್ಪ ವಾಜಿಯ ಮೇಲೆವಾಯ್ವುದುಂ ಮುನ್ನಂ ಮೆಲ್ಪಿನೊಳ್ ಸ್ವಭಾವಮನಾರೈವೆನೆಂದು ಕೊಸೆಯುಂ ಬಲ್ಲಿತ್ತುವಿಡಿಯೆ ಬೆಚ್ಚಿ ಪಾಱಿ ಪರಿಯಲ್ ತಗುಳ್ದೊಡೆ ಹೋ ಹೋಯೆಂದೆನಿತೆನಿತು ಕೊಸೆಯಂ ಬಲ್ಲಿತ್ತುವಿಡಿಯ ಲನಿತನಿತೆ ಲಂಘನದೊಳ್ ಪರಿದು ವಾಹಳಿಯಂ ಪೊಱಮಟ್ಟುತ್ತಮ ಜವದಿಂ ಪೋಗಿ ನೆಲನುಂ ಪೊಲನುಮನುೞಿಯೆ ಪರಿದೊಂದು ಭೀಮಾಟವಿಯಂ ಪೊಕ್ಕು ಮರದುಱು ಗಲೆಡೆನೊಳ್ ಪರಿಯೆ ಮಕುಟ ಕೇಯೂರ ಹಾರಾದ್ಯಾಭರಣಂಗಳ್ ಮರದ ಕೊಂಬಿನೊಳ್ ತೊಡರ್ದುಪೋಗೆ ಮುಳ್ಗೊಂಬಿನ ಪೊಯ್ಲೊಳ್ ಮೆಯ್ಯೆಲ್ಲಂ ವ್ರಣಂಗಳಾಗೆ ಮತ್ತಂ ಕಿಱೆದೆಡೆಯಮ ಪರಿಯುತ್ತಂ ನಡುಪೞುವಿನೊಳೊಂದು ಪುರಾಣ ಕೂಪದೊಳ್ ಬಿೞ್ದು ಕುದುರೆ ಸತ್ತಾಗಳ್ ತಾನಡ್ಡಪರ್ವಿದ ಬಳ್ಳಿಗಳಂ ಪಿಡಿದಡರ್ದು ಬಾವಿಯಿಂ ಪೊಱಮಟ್ಟು ಪಥಶ್ರಮದೊಳ್ ಸೇದೆವಟ್ಟು ಬೞಲ್ದು ಬರುತ್ತು ಮಲ್ಲಿಯೊಂದು ಮರದ ನೆೞಲೊಳ್ ಕುಳ್ಳಿರ್ದು

ಶಾ || ಆ ನಾಡಾ ಪೊೞಲಾ ಮಹಾನಿಳಯಮಾ ಸ್ತ್ರೀಯರ್ಕಳಾ ತಂದೆ ಸಂ
ದಾ ನೆಂಟರ್ ನೆಗೞ್ದಾ ಮದೇಭ ಹಯಸಂತಾನಂಗಳರ್ದಂತೆ ಮ
ತ್ತೇನುಂ ಮಾಣದೆ ದುಷ್ಟ ವಾಜಿ ತರೆ ಬಂದೀ ಬಾವಿಯೊಳ್ ಬಿೞ್ದು ಬಂ
ದಾನಿಂತೊರ್ವನೆ ದುಃಖಭಾಜನನೆನಿಪ್ಪಂತಾಯ್ತದೇಂ ಕರ್ಮವೋ ೩೧

ವ || ಎಲ್ಲಿಯುಂ ಜೀವನೋರ್ವನೆಯೆಂಬುದೆನ್ನೊಳ್ ನನ್ನಿಯಾಯ್ತೆಂದು ಚಿಂತಿಸುತ್ತುಮಲ್ಲಿಂದಮೆೞ್ದು ಪೋಗಿ ದೆಸೆಗೆಟ್ಟು ತೊಳಲ್ವನನೊಂದು ಪೆರ್ವುಲಿ ಕಂಡು ಪಾಯಲ್ ಬಗೆದಾಗಳ್ ಬೇಗಮೊಂದು ಮೆನನೇಱಿದೊಡಾ ಪುಲಿ ಬಂದಾ ಮರನ ಪಣೆವರಂ ಪಾಯ್ದಾತನನೆಯ್ದಲಾಱದೆ ಮುಗುೞ್ದು ಬಿೞ್ದು ಮತ್ತಮಂತೆ ಲಂಘಿಸುತ್ತುಂ ಕಾಪುಗೊಂಡು ಪೋಗದಿರ್ದುದಂ ಕಂಡು ತುದಿಗೊಂಬನೇಱಿ ನಿದ್ರೆಯಾದೊಡೆ ಬೀೞ್ವೆನೆಂದೊಂದು ಬಳ್ಳಿಯಿಂ ತನ್ನ ನಡುವಂ ಮರದ ಕೊಂಬಿನೊಳಡಿಸಿ ಕಟ್ಟಿಕೊಂಡಿರುಗಳೆಲ್ಲಮುಂ ನಿದ್ರೆಯಿಲ್ಲದಿರೆಯುಂ ಜೀವನೆಂತಪ್ಪವ್ಯವಸ್ಥೆಯೊಳಮೊರ್ವ ನೆಯೆಂಬೇಕತ್ವಮಂ ಬಗೆಯುತ್ತಿರ್ದನೆನ್ನಗಂ ಸೇಸಱ್ ಮೂಡಿದಾಗಳ್ ಯೂಥಾಧಿಪತಿ ಯಪ್ಪುದೊಂದು ಮದಹಸ್ತಿ ಪೋಪದಂ ಕಂಡಲ್ಲಿರ್ದು ಸರಂದೋಱಿದೊಡಾ ಗಜಮೆಯ್ಯಪ್ಪುದಂ ಕಂಡಾಪುಲಿ ಮುನ್ನಂ ಕೋಳ್ದಪ್ಪಿದ ಮುನಿಸಿನೊಳಾನೆಯ ಕುಂಭಸ್ಥಳಕ್ಕೆ ಪಾಯ್ದೊಡದನಾನೆ ಪಿಡಿದುಕೊಂಡು ಮೆಟ್ಟಿ ಸೀಳ್ದೀಡಾಡಿಪೋದೊಡೆ ತನಗುಪಕಾರಂಗೆಯ್ದುದೆಂದಾ ಕರೀಂದ್ರಮನೆನಿತಾನುಂ ತೆಱದಿಂ ಪೊಗೞ್ದು ಮರದಿಂದಿೞಿದು ಕಿಱಿದು ಪೊೞ್ತು ವಿಶ್ರಮಿಸಿರ್ದು ಪಸಿವುಂ ನೀರೞ್ಕೆಯುಂ ತಿಣ್ಣಮಾಗೆ ದೆಸೆದೆಸೆಗಳಂ ನೋೞ್ಪಾಗಳ್

ಕಂ || ಜಳವಿಹಗಂಗಳ ಕಳರವ
ಮಿಳೇಗೀಶನ ಕಿವಿಗೆ ತೀಡೆ ಬೞಿಯುಂ ನೀರ್ವೂ
ಗಳ ಕಂಪನೆತ್ತಿ ಮಂದಾ
ನಿಳನೆಸಗೆ ಮನೋನುರಾಗದಿಂದಾ ದೆಸೆಯಂ ೩೨

ವ || ನೋಡಿ ನಡೆದು ಸರೋವರಮನತಿಮನೋಹರಮಂ ಕಂಡಲ್ಲಿ ಪಾದಪ್ರಕ್ಷಾಳನಂಗೆಯ್ದು ಅರ್ಹತ್ಪರಮೇಶ್ವರಂಗೆ ಭಕ್ತಿಪೂರ್ವಕಂ ಸ್ತುತಿಗಳಂ ಪೇೞ್ದು ಪೊಡೆವಟ್ಟು ಬೞಿಕ್ಕೆ ನಡುನೀರ್ವರಂ ಪೊಕ್ಕು ತಾವರೆಯೆಲೆಯೊಳ್ ನೀರಂ ಮೊಗೆದುಕೊಂಡು ಕುಡಿದು ಮಗುೞ್ದಾಗಳ್ ಕಾಲಂ ನೆಗೞ್ ಪಿಡಿದೊಡೆನಗಿಂ ಪೆಱದಾಸೆಯಿಲ್ಲೆಂದಿತೆಂದಂ

ಕಂ || ಆ ಪಿರಿಯ ಬಾವಿಯೊಳ್ ಬೞಿ
ಕಾ ಪುಲಿ ಪಾಯ್ವೆಡೆಯೊಳೆಂತು ಬರ್ದುಕಿದೆನೆನಗಿ
ನ್ನೀ ಪದದೊಳ್ ನೇಮಿಜಿನ
ಶ್ರೀಪದಮೆ ಸುಖಪ್ರದಂ ದಲೆಂದು ವರಾಂಗಂ ೩೩

ವ || ಶ್ರೀ ನೇಮಿಭಟ್ಟಾರಕರಂ ನೆನೆದು ಪಂಚನಮಸ್ಕಾರಮಂ ಜಪಿಸುತ್ತಿರೆ ಯಕ್ಷದೇವತೆ ತನಗಾಸನಕಂಪಮಾಗೆ ತನಗಮಾತಂಗಂ ವರದತ್ತಭಟ್ಟಾಕರರೊರ್ವರೆ ಗುರುಗಳಪ್ಪುದಱಿಂದಾತನುಪಸರ್ಗಮಂ ಮಾಣಿಸಲೆಂದು ಬಂದು ನೆಗೞಂ ಬಿಡಿಸಿದೊಡೆ ಮೆಲ್ಲನಲ್ಲಿಂ ಪೊಱಮಟ್ಟು ಬಂದು ಕೊಳದ ತಡಿಯೊಳ್ ಕುಳ್ಳಿರ್ದೊಡಾ ಯಕ್ಷದೇವತೆ ವರಾಂಗನ ಪುರುಷವ್ರತದಳವನಾರೆಯ್ವೆನೆಂದು ನವಯೌವನೆಯಪ್ಪ ಕುಮಾರಿಯಾಗಿ ಬಂದಿದಿರೊಳ್ ನಿಂದಿತೆಂದಳ್

ಕಂ || ಅರಸರ ಮಗಳೆಂ ಕನ್ನೆಯೆ
ನೆರೆದೊರ್ವ ನೃಪಾತ್ಮಜಂಗೆ ಕುಡಲಿರ್ಪೆಡೆಯೊಳ್
ನೆರೆದು ವನೇಚರರಿಱಿದೊಡೆ
ಪರೆದೋಡಿದರೆನ್ನ ಸಿವಿಗೆಯಂ ಬಿಸುಟೆಲ್ಲರ್ ೩೪

ವ || ಅಂತು ಪಲಂಬರೆಲ್ಲ ಮೋಡಿಪೋಗೆಯುಮೆಮ್ಮವರೆಲ್ಲಂ ಜವನ ಬಾರಿಗೆ ಸೋವತಮಾಗೆಯುಮಾಗಳಾನೊರ್ವಳೆ ಪೞುವಿನೊಳಗಾದೆನೀಗಳೆನ್ನ ಪುಣ್ಯದಿಂ ನಿಮ್ಮಲ್ಲಿ ಕಂಡೆಂ ನೀವೆನಗೆ ಗತಿಯುಂ ಪತಿಯುಮಪ್ಪೊಡಂ ನೀಮೆಯೆನ್ನಂ ಕೆಯ್ಕೊಳಲ್ವೇಳ್ಪುದೆಂದೆ ನಿತಾನುಂ ತೆಱದಿನಳಿಪಂ ತೋಱಿ ನುಡಿಯೆ ವರಾಂಗನಿಂತೆಂದೆಂ

ಕಂ || ಕುಲವಧುವನೀಯೆ ತರ್ಪುದು
ಬೆಲೆವೆಣ್ಣಂ ಬೆಲೆಗೆ ತರ್ಪುದಲ್ಲದೆ ಮಱೆವಾ
ೞೊಲಿವ ಕುಲವಧುಗೆ ಬಯಸಿದೊ
ಡಲಂಘ್ಯ ಪುರುಷವ್ರತಕ್ಕೆ ಬನ್ನಂ ಬರ್ಕುಂ ೩೫

ವ || ‘ಒಲ್ಲೆ’ ನೆನೆ ‘ನೀನೊಲ್ಲದೊಡನಮೋಘಂ ಸಾವೆ’ನೆನೆ ‘ಸತ್ತೊಡಂ ನಿನ್ನ ಪ್ರಾಣಮೊಂದ ೞಿಗುಂ ಶೌಚವ್ರತಮೆನಗೆ ಕೆಟ್ಟೊಡಂ ಪುರಷವ್ರತಮುಂ ಶ್ರುತಮುಂ ಶ್ರುತಮುಂ ಕುಲಮುಂ ಚಲಮುಂ ಮತಿಯುಂ ಗತಿಯುಂ ಕಿಡಿಗುಮಿಂತೆನಿತುಮಂ ಕಿಡಿಸಲಾಱೆಂ ನಿನ್ನನೆಂತುಮೊಲ್ಲೆಂ ಮೆೞ್ಪಡದಿರೆಂದಾಗಳ್ ಮೆಚ್ಚಿ ಯಕ್ಷದೇವತೆ ಗಗನತಳಕ್ಕೊಗೆದು ತನ್ನ ದಿವ್ಯಸ್ವರೂಪಮಂ ತೋಱಿ ವರಾಂಗಗಂಗಿಂತೆಂದಳ್ ನಿನ್ನ ಶೌಚವ್ರತದಳವನಾರಯ್ದು ಮೆಚ್ಚಿದೆ ನೀನುಮಾನುಂ ಸಧರ್ಮಿಗಳ್, ಎಂದಱಿಯೆ ಪೇೞ್ದದೃಶ್ಯೆಯಾಗಿ ಪೋದಡಲ್ಲಿಂದೆೞ್ದು ಮುನ್ನಿನಂತೊರ್ವನೆ ಮುಂದಂತೆ ನಡೆದು ಪಸಿದಾಗಳ್ ಪಣ್ಭಲಂಗಳಂ ತಿಂದು ನೀರಡಿಸಿದಾಗಳ್ ನಿರ್ಝರೋದಕಮಂ ಕುಡಿದು ಬೞಲ್ದಾಗಳ್ ರಮ್ಯಮಪ್ಪೆಡೆಗಳೊಳ್ ವಿಶ್ರಮಿಸುತ್ತುಂ ತೊೞಲ್ವನಂ

ಕಂ || ಕಾಡೆೞ್ದು ಕೂಡೆ ಕರ್ಗಿದ
ಕಾಡೆಯ್ತರ್ಪಂತೆ ಮಸಗಿ ಕವಿತಂದು ಪಲರ್
ಬೇಡರ ಪಡೆ ಕೊಲಲಂತಾ
ಬೇಡರಸಂ ಪರಕೆಗುಡುವಮಿತನನುಯ್ವಂ ೩೬

ವ || ಎಂದಡಸಿ ಪಿಡಿದು ಜಡಿದೊಡಗೊಂಡುವರೆ ಕರ್ಮದುದಯಮಿನ್ನುಮುಂಟದನೆಯ್ದೆ ನೋೞ್ಪೆನೆಂದು ಬಗೆದುಪೋದೊಡೆ ಆತನನೊಯ್ದುವಂದರೀತನಂ ತಂದೆವೆಂದು ತಮ್ಮ ರಸಂಗೆ ತೋಱಿದೊಡೆ ನಾಳೆ ಬಾವುದೆವಸದೊಳ್ ದೇವತೆಗೆ ಪರಕೆಗುಡುವ ಮಿತನನಿಂದಿನ ದೆವಸಂ ಕಾದಿರಿಮೆಂದೊಡೆಲ್ವಿನೊಳ್ ಮಾಡಿದ ಪಸಿಯ ತೊವಲೊಳ್ ಪೊದಯಿಸಿದ ಪಡುಕೆನಾರ್ಪ ಗುಡಿಸಿಲೊಳಿರಿಸಿದೊಡೆ ತೊವಲಕೊೞಿಯುಂ ಪುೞುಗಳುಂ ಮೇಲೆ ಸುರಿಯೆ ಪೊನ್ನೊೞಂಗಳ್ ಮೇಗೆ ಮುಸುಱಿ ಮೆಯ್ಯಂ ಕಡಿಯೆ ಮೂಗಂ ಮುಚ್ಚಿ ಕರಂ ಪೇಸಿಯೋಕರಿಸುತ್ತುಂ ಚಿಂತಿಸುತ್ತುಮಂದಿನಿರುಳೊಂದು ನರಕದೊಳಿರ್ದೊಂದು ಭವದಂತಾಗೆ ತನ್ನೊಳಿಂತೆಂದು ಬಗೆಗುಂ

ಉ || ಮುನ್ನಿನ ಸಾವನೆಯ್ದಿದೆಡೆಗಳ್ ಕಡುಲೇಸದಱಿಂ ಕನಿಷ್ಠಮ
ಲ್ಲಿನ್ನಿವು ದುಃಖಮಿಲ್ಲಿದು ಮಹಾದುರಿತೋದಯಮಕ್ಕುಮಾದೊಡೇ
ನಿನ್ನುಮವುಂಕಿ ಬರ್ಪುವೊಳವಪ್ಪೊಡೆ ಬರ್ಕೆನಗಾನೆ ನೆಟ್ಟನೆಂ
ದುನ್ನತ ಚಿತ್ತನದಿನಿತೊಂದುಪಸರ್ಗದೊಳಾ ನರಾಧಿಪಂ ೩೭

ವ || ಎಲ್ಲೆಡೆಯೊಳಮಾತ್ಮ ನೊರ್ವನೆಯೆಂಬೇಕೆತ್ವಮಂ ಭಾವಿಸುತ್ತಮಿರೆ ನೇಸಱ್ ಮೂಡಿದಿಂ ಬೞಿಯಮಾತನಂ ದೇವತೆಯ ಮುಂದಣ್ಗೆತರಿಸಿ ಕೊಲಲೆಂದಿರ್ಪನ್ನೆಗಂ ಆ ವ್ಯಾಧರಾಜನ ಮಗಂ ಕುಸುಂಬನೆಂಬವಂ ಬೇಂಟಗೆ ಪೋದಲ್ಲಿ ಪಾವು ಕೊಂಡುದೆಂದು ಪೊತ್ತುತಂದಿ ೞಿಪಿದೊಡವನಂ ಕಂಡು ತಮಗಾಗಳ್ ಪ್ರಳಯಂ ತಗುಳ್ದಂತೆ ಸಂಕಟಂಬಟ್ಟೆ ದರ್ಕಿನ್ನೇಗೆಯ್ವ ಮಾರ್ ಬಲ್ಲರೆನುತಿರ್ಪನ್ನೆಗಂ ದೇವತೆಯ ಮುಂದಿರ್ದ ವರಾಂಗನಂ ಬೆಸಗೊಂಡಡಾಂ ಬಲ್ಲೆನೆನೆ ಕರಮೊಳ್ಳಿತ್ತಾಯ್ತೆಂದು ಬೇಗಮಿದಂ ತೀರ್ಚಿಮೆಂದಾಗಳ್ ಕಟ್ಟಂ ಬಿಡೆ ಮಡುವಿನೊಳ್ ಮಿಂದು ದಾಷ್ಟಿಕನಂ ಶುಚಿಮಾಡಿರಿಸಿ ಮಂತ್ರವಿಧಿಯಿಂ ಸ್ತೋಭಂಗೊಳಿಸಿ ವಿಷಮಂ ಕಳೆದೆತ್ತಿದೊಡೆ

ಕಂ || ತೊಟ್ಟನೆ ರಾಗಂ ಮನದೊಳ್
ಪುಟ್ಟೆ ಕಿರಾತೇಶನೊಸೆದು ಪಲವುಂ ಪೊನ್ನಂ
ಕೊಟ್ಟಡವಂ ಕೊಳ್ಳದೆ ನಾ
ೞ್ಬಟ್ಟೆಯ ದೆಸೆದೋಱಲಟ್ಟಿಮೆನಗದೆ ಸಾಲ್ಗುಂ ೩೮

ವ || ಎಂದೊಡಿದೇಂ ಪಿರಿಯನೊ ಎಂದು ಮನದೊಳ್ ಬಗೆದು ಕಿರಾತರಾಜನಂದೊರ್ವನಂ ಕಳಿಪಲಟ್ಟಿದೊಡಾತನನೊಡಗೊಂಡು ನಾಡೆಯಂತರಂ ಪೋಪಾಗಳ್ ತಮ್ಮ ನಾಡ ದೆಸೆಯತ್ತಲ್ ಪೋಗಲೊಲ್ಲದೆ ಲಲಿತಪುರದತ್ತಣ ಬಟ್ಟೆಯಂ ಬೆಸಗೊಂಡದೆ ತೋಱೆ ಬೇಡಂ ಮಗುೞ್ದಾಗಳ್ ಬಟ್ಟೆವಿಡಿದು ಮುನ್ನಿನಂತೋರ್ವನೆ ನಡೆದು ನೇಸಱ್ ಪಟ್ಟಲ್ಲಿಯೆ ವಿಶ್ರಮಿಸಿ ಬಯ್ದಿರುಳೆೞ್ದು ಪಯಣಂಬೋಪಾತನಲ್ಲಿಯೊಂದು ಪಿರಿಯ ಸಾರ್ಥಂ ಬೀಡುವಿಟ್ಟಿರ್ದೊಡಾ ಬೀಡಿನ

ಕಂ || ಪೋಲಗಾಪಿನವರ್ ಕಾಣುತೆ
ಪಲರುಂ ಪರಿತಂದು ಬೇಹುಬಂದವನಿವನಂ
ಕೊಲೆಗೆಯ್ದಿಸಿಮಿನ್ನೆಂದೊಡೆ
ಕೆಲಬರ್ ಪಿಡಿದುಯ್ವಮೆಂಬ ಬಗೆಯಂ ತಂದರ್ ೩೯

ವ || ಎಂದಾತನಂ ಪಿಡಿದುಕೊಂಡು ತಮ್ಮ ಬೀಡಿಂಗೊಯ್ದು ಸಾಗರಬುದ್ಧಿಯೆಂಬ ಸೆಟ್ಟಿಗೆ ತೋಱಿದೊಡೆ ಸೆಟ್ಟಿಯಾತನ ಶುಭಲಕ್ಷಣಾಲಂಕೃತಮಪ್ಪ ರೂಪಂ ಕಂಡು ಮನದೆಗೊಂಡು ಸಾರೆ ಕರೆದು ನೀನಾರ್ಗೆತ್ತಣಿಂ ಬಂದಿರೆಲ್ಲಿಗೆ ಪೋದಪಿರೆನೆ ನಾಂ ದೇಸಾಂತರಿಗೆನೆಂ ಕಶ್ಚಿದ್ಭಟನೆಂಬೆಂ ತೀರ್ಥಯಾತ್ರೆಗೆ ಪೋದಪೆಂ ನಿಮ್ಮ ಬೀಡಿನೊಡನೆ ಬರ್ಪೆಂ ಎಂದುಸಾಮಾನ್ಯಮಂ ನುಡಿದೊಡಂತಕ್ಕುಮಿತಂ ಸಾಮಾನ್ಯನಲ್ಲನೆಂತುಂ ಮಹಾಪುರಷ ನಾಗಲೆವೆೞ್ಕಮೆಂದು ಕೆಯ್ಕೊಂಡಿರೆ ಬೀಡೆಲ್ಲಮಾತನ ತೇಜಕ್ಕಂ ಬುದ್ಧಿಗಂ ಮಚ್ಚಿ ಕೊಂಡಾಡುತ್ತಿರೆ ಕೆಲವು ದೆವಸದಿಂದಾ ಬೀಡನಿಱಿದು ಸೂಱೆಗೊಳಲೆಂದು

ಕಂ || ಕಾಳನುಮತ್ಯುಗ್ರ ಮಹಾ
ಕಾಳನುಮೆಂಬರ್ ಕಿರಾತರಾಜರ್ ತಮ್ಮು
ಳ್ಳಾಳುಮನುರ್ಕಾಳುಮನೊ
ಳ್ಳಾಡುಮನೊಡಗೊಡು ಬಂದು ತಾಗಿದರಾಗಳ್ ೪೦

ವ || ಆಗಳಾ ಸಾಗರಬುದ್ಧಿ ಕಂಡು ಸನ್ನಣಂಬೊಕ್ಕು ಬೀಡಿನಾಳೆಲ್ಲಮಂ ಕೂಡಿಕೊಂಡು ಕಶ್ಚಿದ್ಭಟನಂ ಸ್ತ್ರೀಜನಕ್ಕಂ ಬಿಡಿಗಂ ಕಾಪುವೇೞ್ದಿರಿಸಿ ಪೊಱಮಟ್ಟು ಕಾದಿ ಬೇಡರಸನಂಬಿನ ಕೋಳ್ಗೆ ನಿಲಲಾಱದೆ ಬೀಡಿನ ನೆರವಿ ಪರಿದೋಡಿಪೋಗೆ ಬೇಡರ್ ಸೂಱೆಗೊಳಲ್ ಕವಿದುಬಂದು ಪೆಂಡಿರುಡೆಯನುರ್ಚುವ ಬೇಡರಂ ಕಶ್ಚಿದ್ಭಟಂ ಕಂಡೊಂದು ಬಾಳನತ್ತಪರಮುಮಂ ಕೊಂಡಾಡಿದಿರ್ಚಿದರನೆರೞ್ಕಡಿಯಾಗಿ ಪೊಯ್ದುಮಿಱಿದುಂ ನಿಂದಿರ್ಪಿನಂ ಕಾಳನೆಂಬ ಬೇಡರಸ ಮಗನೆಯ್ದೆ ವಂದೊಡವನನಿಕ್ಕಿದೊಡೆ ತನ್ನ ಮಗನಂ

ಕಂ || ಕೊಂದೆತ್ತವುಗುವನವನಂ
ಕೊಂದಲ್ಲದೆ ಮಾಣೆನೆಂದು ತಱಿಸಂದುಱದೆ
ಯ್ತಂದ ಮಹಾಕಾಳನುಮಂ
ಕೊಂದು ಕರಂ ನೊಂದು ಬಿೞ್ದನಂದು ಕುಮಾರಂ ೪೧

ವ || ಅಗಳ್ ತಮ್ಮನಾಯಕರ್ ಸತ್ತುದನಱಿದು ಬೇಡವಡೆ ಪರೆದೋಡಿತ್ತದಂ ಸಾಗರಬುದ್ದಿ ಕಂಡು ತನ್ನ ಪೆೞಱಿ ಪೋದಾಳೆಲ್ಲಮಂ ಮಗುೞೆ ಕೂಡಿಕೊಂಡು ಬಂದು ಸತ್ತ ಬೇಡನಾಯಕರುಮಂ ನೊಂದು ಬಿೞ್ದಿರ್ದ ಕುಮಾರನುಮಂ ಕಂಡೊಸೆದಾತನನೆತ್ತಿಕೊಂಡು ಪುಣ್ಣನುಡಿಯಿಸಿ ಕೆಲವಾನುಂ ದೆವಸದಿಂ ಕುಮಾರಂಗಾಸೆಯಾದೊಡೆ ಬೀಡಿನ ಪ್ರಭುಗಳೆಲ್ಲರುಮಂ ನೆರಪಿ ಸೆಟ್ಟಿಯಿಂತೆಂದಂ

ಉ || ಈತನ ಕಾದಿ ಗೆಲ್ದನೆಡರ್ಗೀತನೆ ತಾಂ ನಮಗಾದನಾರ್ಗಮಿ
ನ್ನೀತನೆ ಮಿಕ್ಕಿನೊಳ್ಪಿನೆಡೆಗೀತನೆ ತಕ್ಕನನೂನ ವೃತ್ತಿಯಿಂ
ದೀತನೆ ಮಿತ್ರನೀತನೆ ಸುಪುತ್ರನುದಾತ್ತ ಗುಣಪ್ರಯುಕ್ತನಿಂ
ತೀತನೆ ಶೌರ್ಯಧಾರಿ ರಿಪುಹಾರಿ ನಿಜಾನ್ವಯಕಾರಿ ನಿಶ್ಚಯಂ ೪೨

ವ || ಎಂದು ಪೊಗೞ್ದೆನ್ನ ಪದವಿಗೀತನೆ ಜ್ಯೇಷ್ಠಪುತ್ರನೆಂದು ಮಾಡಿ ಕೊಂಡಾಡಿ ನಿಚ್ಛ ಪಯಣಂಬೋಗಿ ಲಲಿತಪುರಮಂ ಪೊಕ್ಕು ಮಹೋತ್ಸವದಿನಿರೆ ಕೆಲವು ದೆವಸದಿಂದಲ್ಲಿಯ ವೈಶ್ಯಪ್ರಭುಗಳ್ ನೆರೆದಾತನ ಬುದ್ಧಿಗಂ ಸಾಹಸಕ್ಕಂ ಮೆಚ್ಚಿ ಪೊೞಲೆಲ್ಲಂ ನೀನೆ ಸೆಟ್ಟಿಯಾಗಲ್ವೇೞ್ಕಮೆನೆ ಮುಗುಳ್ನಗೆ ನಕ್ಕು ತಾನವರ ಮೆಚ್ಚಿಂಗೊಡಂಬಟ್ಟು ಸೆಟ್ಟವಟ್ಟಮಂ ಕಟ್ಟಿಸಿಕೊಂಡಲ್ಲಿಯೇ ರಾಜಶ್ರೇಷ್ಠಿಯಾಗಿ ಸುಖದೊಳಿರ್ಪನ್ನೆಗಮಿತ್ತಂ ಉತ್ತಮಪುರದೊಳ್ ವರಾಂಗನೊಡನೆ ಪೊಱೆಮಟ್ಟ ರಾಜಭೃತ್ಯವರ್ಗಮೆಲ್ಲಂ ನಾಡೆಯಂತರಂ ಬಂದು ಕುದುರೆಯ ಬೞಿಯಂ ತಗುಳ್ದೆಯ್ದಲಾಱದೆ ಮುಗುೞ್ದು ಬಂದು ಧರ್ಮಸೇನಮಹಾರಾಜನಂ ಕಂಡಱೆಯೆ ಪೇೞೊಡೆಲ್ಲರುಂ ಚಿಂತಾಕ್ರಾಂತರಾಗಿರ್ದು

ಕಂ || ಸುರರಾನುಮಸುರರಾನುಂ
ತುರಗಾಕೃತಿಯಿಂದಮೊಯ್ದರೋ ನೆಟ್ಟನಿದಂ
ಭರದಿಂದಾರಯ್ಯದೆ ನಮ
ಗಿರಲಾಗೆಂದೆಲ್ಲ ದೆಸೆಗಮಟ್ಟಿದರಾಗಳ್ ೪೩

ವ || ಅಟ್ಟಿದೊಡೆ ಕೆಲಂಬರ್ ಪೋಗಿ ವರಾಂಗನ ಕುದುರೆಯ ಪೋದ ಬೞಿಯಂ ತಗುಳ್ದಡವಿಯಂ ಪೊಕ್ಕಱಸಿ ನೋೞ್ದಾಗಳ್ ಮರದಕೊಂಬುಗಳೊಳಂ ಸಿಡಿಂಬಿನೊಳಂ ತೊಡದ್ ಕಟಕ ಕಟಿಸೂತ್ರ ಕೇಯೂರ ಹಾರಾದ್ಯಾಭರಣಗಳಂ ಕಂಡಂತಂತೆ ನೋೞ್ಪಾಗಳೊಂದು ಪೞಿವಾವಿಯೊಳ್ ಪೊನ್ನಾಯುಗಂಗಳಂ ಕಂಡವೆಲ್ಲಮಂ ಕೊಂಡು ಬಂದು ವರಾಂಗನಮೋಘಂ ಸತ್ತನೆಂಬುದರಸಂಗಱೆಪಿಯಾತನ ತಾಯ್ ಗುಣವತಿದೇವಿಗಮನುಮತಿದೇವಿ ಮೊದಲಾದಾತನ ಪೆಂಡಿರ್ಗಂ ಬಂಧುವರ್ಗಕ್ಕಂ ಪೊೞಲ್ಗೆಲ್ಲಂ ಪೇೞ್ದವಂ ತೋಱೆದಾಗಳ್ ಪ್ರಳಯ ಪ್ರಕ್ಷೋಭಮಾದಂತಾಗೆ

ಕಂ || ಅಂತೆಯ್ದಿದ ದುಃಖಂ ಕಿ
ರ್ಚಂತೆಯ್ದೆ ತಗುಳ್ದು ತಾಯ್ವಿರಂ ತಂದೆಯುಮಂ
ತಂತಃಪುರಮಂ ಸುತ್ತಿರೆ
ತಂತಮ್ಮನೆ ಬಡಿದು ಪುಯ್ಯಲಿಟ್ಟುೞುತ್ತಿರ್ದರ್ ೪೪

ವ || ಅಂತಿರ್ದಾಗಳನುಮತೀದೇವಿ ಈ ಶೋಕಾಗ್ನಿಯೊಳ್ ಬೇಯಲಾಱೆಂ ಒರ್ಮೆಯೆ ಸತ್ತು ನೀಗುವೆಂ ಕಿರ್ಚಂ ದಯೆಗೆಯ್ಯಿಮೆಂದು ಮಾವನ ಕಾಲ್ಗಳಂ ಪಿಡಿದೊಡೆ ಧರ್ಮಸೇನಮಹಾರಾಜಂಗೆ ಮತ್ತಂ ದುಃಖಮಿರ್ಮಡಿಸೆ ಸೈರಿಸಿರ್ದು ಬನ್ನಿಂ ನಾವೆಲ್ಲರುಂ ಗುರುಗಳ್ ಪೇೞ್ದಂತೆ ನೆಗೞ್ವಮೆಂದು ಸೊಸೆವಿರೆಲ್ಲರುಮನೊಡಗೊಂಡು ಬಂದು ಯಮಧರರೆಂಬಾಚಾರ್ಯರಲ್ಲಿಗೆ ಪೋಗಿ ವಿನಯದಿಂ ಬಂದಿಸಿ ಧರ್ಮಮಂ ಕೇಳ್ದೆಲ್ಲಮನಱಿದು ಬೞಿಯಂ ಸ್ವಾಮಿ ವರಾಂಗನ ಶರೀರಮನಾರುಂ ಕಂಡಿರಿಲ್ಲೆಂದು ಧರ್ಮಸೇನಮಹಾರಾಜಂ ಗುರುಗಳಂ ಬೆಸಗೊಳೆ ನಿಮ್ಮ ಪುಣ್ಯದಿಂದಾತಂ ಬರ್ದುಂಕಿರಲಕ್ಕುಮೆಂದು ಪೇೞೊಡರಸಂ ಸೊಸೆವಿರೆಲ್ಲರುಮಂ ಸಂತೈಸಿ ಮನೆಗೊಡಗೊಂಡು ಬಂದು ದಾನ ಪೂಜೆ ಶೀಲಮುಪವಾಸಮೆಂಬ ನಾಲ್ಕುಂ ತೆಱದ ಧರ್ಮಮಂ ನಡೆಯಿಸುತ್ತುಮಿರ್ದರತ್ತಲ್ ಲಲಿತಪುರದೊಳ್ ವರಾಂಗಂ

ಮ || ಪುರವಿಂಗಂ ಪ್ರಭುವಪ್ಪುದೆನ್ನಳವಿಯೇ ಭೂಪಂಗಿಲ್ತೆಂದು ಕೊ
ಕ್ಕರಿಸುತ್ತುಂ ಸುಖದುಃಖಮೆಂಬೆರಡುಮಂ ತಾಳ್ದಿರ್ದು ಸಾಮಾನ್ಯ ಮ
ರ್ತ್ಯರವೋಲ್ ಮುನ್ನಿನ ಕರ್ಮದೊಂದುದಯದಿಂ ಪಿಂದಿಂದಗಲ್ದಿರ್ದ ಸಿಂ
ಧುರಮಿರ್ಪಂತಿರೆ ಕಾಲಮಂ ಕುಳಿಪುತುಂ ರಾಜೇಂದ್ರನಿರ್ಪನ್ನೆಗಂ ೪೫

ವ || ಆ ಪೊೞಲನಾಳ್ವ ದೇವಸೇನನಾನೆಯಂ ಬೇಡಿ ಪಡೆಯದಿಂದ್ರಸೇನನೆಂಬರಸಂ ಮೆಲೆತ್ತಿವಂದೊಡಾ ದೇವಸೇನನಾತನನಾವನೋರ್ವಂ ಕಾದಿ ಗೆಲ್ವನಾತಂಗೆ ತನ್ನ ಮಗಳುಮನರ್ಧರಾಜ್ಯಮುಮಂ ಕುಡುವೆನೆಂದು ದೇವಸೇನಂ ಗೋಸಣಿವಿಡಿಸೆ ಕಶ್ಚಿದ್ಭಟನಾ ಗೋಸಣಿಯಂ ಕೇಳ್ದು ಪಿಡಿದು ತಾನೊರ್ವನೆ ಯುದ್ದಸನ್ನದ್ಧನಾಗಿ ಪೊಱಮಟ್ಟೊಡರಸನುಂ ತನ್ನ ಚತುರಂಗಬಲಂಬೆರಸು ಆತನೊಳ್ ಕೂಡಿ ಪೋಗಿ ಕಾದೆ ವರಾಂಗನುಂ ತನ್ನ ಭುಜಬಲಕ್ಕಾ ಬಲಂ ಸಹಕಾರಿಯಾಗೆ ಕಾದಿ ಮಾರ್ಪಡೆಯುಂ ತವೆಯಿಱಿದಿಂದ್ರಸೇನನನೋಡಿಸಿ ಗೆಲ್ದು ಬಂದು ಮಹೋತ್ಸಾಹದಿಂ ಪೊೞಲಂ ಪೊಕ್ಕಿರೆ ದೇವಸೇನಂ ಮೆಚ್ಚಿ ತನ್ನ ಮಗಳುಮನರ್ಧರಾಜ್ಯಮುಮಂ ಕೊಟ್ಟೊಡೆ ಮನಾವಿಭೂತಿಯಿಂ ರಾಜ್ಯಂಗೆಯ್ಯುತ್ತಿರ್ದನನ್ನೆಗಮಿತ್ತಲ್

ಕಂ || ಅತ್ತ ದುರಶ್ಚದ ವಶದಿಂ
ಸತ್ತ ಮಹೀಪತಿ ವರಾಂಗನಿನ್ನೇನಂದು
ದ್ವೃತ್ತಪರ ಚಕ್ರನರಪರ್
ಮುತ್ತಿ ಕೊಳಲ್ ಮಸಗಿ ಬಂದುರುತ್ತ ಮಪುರಮಂ ೪೬

ವ || ಅಂತು ಬರೆ ಧರ್ಮಸೇನಮಹಾರಾಜನಿಂತಪ್ಪವ್ಯವಸ್ಥೆಯನೆನ್ನ ಮೆಯ್ದುನಂಗಱಿಯೆ ಪೇೞ್ದಟ್ಟುವೆನೆಂದು ಲಲಿತಪುರಾಧಿಪತಿಯಪ್ಪ ದೇವಸೇನಂಗಟ್ಟಿದೋಲೆಯಂ ಕಶ್ಚಿದ್ಭಟಂ ಕೇಳ್ದು ಕಣ್ಣ ನೀರಂ ನೆಗಪಿದೊಡೆಮ್ಮ ಭಾವನ ಮಗಂ ವರಾಂಗನೆಂಬನಂ ದುಷ್ಟಾಶ್ವಮೊಯ್ಯೆ ಸತ್ತನೆಂದು ಮುನ್ನೆ ಕೇಳ್ದನೆತ್ತಾನುಂ ನೀನಲ್ಲವೊಲಾಯೆಂದು ಕೀಱಿ ಬೆಸಗೊಂಡೊಡಿನ್ನುಂ ಪೇೞದಿರಲಾಗದೆಂದು ದೂಷಿತಮಪ್ಪ ವಾಜಿತೆರೆ ಬಂದಲ್ಲಿಂ ಮೊದಲಾಗೆ ಸಾಗರಬುದ್ಧಿಯಂ ಕಂಡಲ್ಲಿ ವರಮಾತ ವೃತ್ತಾಂತಮಂ ಪೇೞ್ದೊಡೊಸೆದು ದೇವಸೇನಂ ಮುನ್ನಮೆ ನಿನಗೆನ್ನ ಮಕ್ಕಳಂ ಕುಡಲಿರ್ದೆನೆಂದು ಮನೋರಮೆ ಮೊದಲಾಗೆ ನೂರ್ವರ್ ಕನ್ನೆಯರೆಂ ವಿವಾಹ ಮಹೋತ್ಸವದಿಂ ಕುಡೆ ಕೊಂಡು ತನ್ನ ಮಾವನುಮಂ ಸಾಗರಬುದ್ಧಿಯುಮನೊಡಗೊಂಡುತ್ತಮಪುರಕ್ಕೆ ಪಯಣಂಬೋಗಿ

ಉ || ಮುಂದೆ ಪೊೞಲ್ಗೆ ತನ್ನ ಬರವಂ ತಡವಾರದೆ ಬೇಗಮಟ್ಟಿ ತಾಂ
ಬಂದು ಮಹೋತ್ಸವಂಬೆರಸು ತತ್ಪುರಮಂ ವಿಭು ಪೊಕ್ಕು ತಾಯುಮಂ
ತಂದೆಯುಮಂ ಮನೋಮುದದೆ ಕಂಡೊಸೆದಿರ್ದು ವಿರೋಧಿವರ್ಗಮೆ
ಯ್ತಂದಿರೆ ಮಾಣದಂದು ಚತುರಂಗಬಲಾನ್ವಿತನಾಗಿ ಕೋಪದಿಂ ೪೭

ವ || ಪೋಗಿ ಪಗೆವರೆಲ್ಲರುಮನೋಡಿಸಿ ಗೆಲ್ದು ಬಂದು ತನಗಪಕಾರಂಗೆಯ್ದುದಂ ಬಗೆಯದೆ ತನ್ನ ಪೆಂಪನೆ ಬಗೆದು ಸುಷೇಣಂಗೆ ನಾಡುಮನುತ್ತಮಪುರಮಂ ಕೊಟ್ಟು ತಮ್ಮಯ್ಯನುಮಂ ಸಾಗರಬುದ್ಧಿಯಮನೊಡಗೊಂಡು ಪೋಗಿ ಪೆಱತೊಂದು ಮಂಡಲಮನೊತ್ತಿಕೊಂಡು ಸಾಗರಬುದ್ಧಿಗೆ ವಿದರ್ಭೆಯೆಂಬ ನಾಡಂ ಕೊಟ್ಟು ತಾನೊಂದು ಪೊೞಲಂ ಮಾಡಿ ಮಹಾಮಂಡಲಿಕನಾಗಿ ಪಲವು ಕಾಲಂ ರಾಜ್ಯಂಗೆಯ್ದು ಸಂಸಾರ ನಿರ್ವೇಗಪರನಾಗಿ ತಪಂಬಟ್ಟುಗೋಗ್ರತಪದೊಳ್ ಪರಿಹಂಗಳಂ ಗೆಲ್ದು ಶುಭಧ್ಯಾನದಿಂಮುಡಿಪಿ ಸರ್ವಾರ್ಥಸಿದ್ಧಿಯುಮನೆಯ್ದಿದನಿಂತು

ರಗಳೆ || ತುರಗಮೆೞೆದುಯ್ವಲ್ಲಿ ಪಿರಯಡಿವಿಯೊಕ್ಕಲ್ಲಿ
ಬಾವಿಯೊಳ್ ಬಿೞ್ದಲ್ಲಿ ನೋವುವೆರಸಿರ್ದಲ್ಲಿ
ಪುಲಿವಾಯೊಳಿರ್ದಲ್ಲಿ ಜಲಚರಂ ಪಿಡವಲ್ಲಿ
ಬೇಡವಡೆ ಕಂಡಲ್ಲಿ ನಾಡ ಜಡಿದೊಯ್ವಲ್ಲಿ
ಪರಕೆಗುಡದಲಿರ್ದಲ್ಲಿ ಪರದರಾಳ್ ಪಿಡಿವಲ್ಲಿ
ವನಚರರನಿಱಿವಲ್ಲಿ ಜನವಿನುತನಾದಲ್ಲಿ
ಪಗೆವರಂ ಗೆಲ್ವಲ್ಲಿ ಮಗುೞ್ದರಸನಪ್ಪಲ್ಲಿ
ಪರಭೂಮಿವಡೆದಲ್ಲಿ ಧರಣಿಪತಿಯಪ್ಪಲ್ಲಿ
ಯತಿನಾಥನಪ್ಪಲ್ಲಿ ಗತಿಗೆ ತಾಂ ಸಲ್ವಲ್ಲಿ
ಒರ್ವನ ನರೇಶ್ವರಂ ಸರ್ವಜನ ಹಿತಕರಂ ೪೮

ಕಂ || ಅಂತಪ್ಪೈಶ್ವರ್ಯಂ ನೆಗ
ೞ್ದಂತಪ್ಪನುಕೂಲ ಬಂಧುವರ್ಗಂ ತನಗುಂ
ಳ್ವಂತೆ ಪರವಶದೆ ಪೊಱಮ
ಟ್ಟಂತೆಯಲ್ಲಿಯುವೊರ್ವನಾದನೇಂ ವಿಸ್ಮಯವೋ ೪೯

ಉ || ಇಂತು ವರಾಂಗನೆಂಬಂ ಧರಣೀಶ್ವರನಾತ್ಮ ಪರಿಗ್ರಹಂಗಳಿ
ರ್ದಂತೆ ದುರಶ್ಚಮೊಯ್ಯೆ ಬಹುಮೃತ್ಯುಮುಖಂಗಳನೊರ್ವನೆಯ್ದಿ ಬ
ೞ್ದಂತೆ ಬಱಿಕ್ಕೆ ವಿಕ್ರಮದಿನೊರ್ವನೆ ತಾಂ ಸುಖಿಯಾಗಿ ಮತ್ತೆ ಲೋ
ಕಾಂತಿಕನಾದನೆಂಬ ಕತೆಯಂ ಬಗೆದಪ್ಪೊಡಮೆಯ್ದೆ ನಂಬಿರೇ ೫೦

ಗದ್ಯ || ಇದು ಜಿನಶಾಸನ ಪ್ರಭಾಸನ ಶೀಲೋದಿತ ವಿದಿತ ಬಂಧುವರ್ಮ ನಿರ್ಮಿತಮಪ್ಪ ಜೀವಸಂಭೋದನಾ ಗ್ರಂಥಾವತಾರದೊಳ್ ಏಕತ್ವಾನುಪ್ರೇಕ್ಷಾನಿರೂಪಣಂ ವರಾಂಗಕಥಾವರ್ಣನಂ

ತೃತಿಯಾಧಿಕಾರಂ