. ಅನ್ಯತ್ವಾನೆಪ್ರೇಕ್ಷೆ

ಕಂ || ಧನಮುಂ ಕಳತ್ರಜನಮುಂ
ತನುವುಂ ತಪದಗಲದೞಿಯದಿರವದಱಿದಂ
ಮನದೊಳವರ್ಕಾಟಿಸಿ ಕೆ
ಮ್ಮನೆ ಮಱುಗದಿರನ್ಯವಸ್ತು ನಿನಗೆಂತಕ್ಕು ೧

ವ || ದ್ರವ್ಯಮುಂ ಕಳತ್ರಮುಂ ತನುವುಂ ಜೀವಾ ನಿನಗೆ ಕೂರ್ತು ನಿಲ್ವುವಲ್ಲವು ಅವುಂ ಬೇಱೆನೀಂ ಬೇಱೆಯೆಂಬನ್ಯತ್ವಮಂ ಭಾವಿಸುವುದು ಅವುಂ ನಿನಗೆಂದು ಬಗೆವಂಗೊಳಿತ್ತಾಗದು ಬಿಸಿಲ್ಗುದುರೆಯಂ ನೀರೆಂದಾಸೆವಟ್ಟು ಪರಿವ ಮೃಗಮುಂ ಸಂಸಾರದೊಳ್ ತನಗಲ್ಲದುದರ್ಕಾಟಿಸಿ ಪಡೆವ ನರನುಂ ಸೇದೆವಡುಗುಂ

ಮ || ತೊಱೆ ಬರ್ಪಂದು ಕಲಂಕಿ ಮುಂ ಕದಡುನೀರ್ ಬರ್ಪಂತೆ ಸಂಕ್ಲೇಶದಿಂ
ಮಱಕಂ ಕೆಯ್ಮಿಗೆ ಚಿತ್ತಮಂ ಕದಡುತುಂ ಬರ್ಕುಂ ಧನಂ ಬರ್ಪೊಡೆ
ಳ್ಳಿಱಿಯುತ್ತಿರ್ಪುದು ಕಾವ ಬೇವಸದೊಳೋತಿರ್ಪುಂದು ಪೋಪಂದು ಬೆ
ೞ್ಕುಱೆ ಪೋಕುಂ ಧನಮೆನ್ನದೆಂಬುದೆ ವಿನೋಹಧಾರಿಯಂ ವೈರಿಯಂ ೨

ವ || ಅಂತು ಬರ್ಪೆಡೆಯೊಳಮಿರ್ಪೆಡೆಯೊಳಂ ಪೋಪೆಡೆಯೊಳಂ ಚಿಂತೆಯನೆ ಪಡೆವ ಕಸವರಮನೆನಗೆಂಬುದೇಕೆ ಮತ್ತಂ ಮೆಯ್ಯ ಬಾೞ್ವೆಗಾಗಿ ಸುಖಮಂ ಮಾಡುಗು ಮೆಂಬೆಯಪ್ಪೊಡದಱಿಂ ಸುಖಮಾಗದೆಂಬುದನಾರಯ್ದು ನೋಡಾ

ಕಂ || ಪೋದುದು ನಿನ್ನಿಂ ಗೆಂಟಿ
ನ್ನಾದಪುದೆಂಬುದುಮದೆಯ್ದೆವಾರದು ನಿನ್ನಿಂ
ಪೋದುದಱಿರ್ಪುದಱೆಡೆಯಿನಿ
ತಾದಪುದತಿಸೂಕ್ಷ್ಮಮಲ್ಲಿ ನಿಲ್ಲದು ಸೌಖ್ಯಂ ೩

ವ || ವಸ್ತುವಿನ ಬರವಿನಿರವಿನ ಪೋಗಿನೆಡೆಯೊಳ್ ಸುಖಮಾಗದುದುಮಂ ಕೇಳ್ದೆತ್ತಾನುಮಿನಿ ದಪ್ಪಾಹಾರಂ ದೊರೆಕೊಂಡೊಡಂ ಮಡಕೆಯೊಳಿರ್ದಲ್ಲಿ ಸವಿಯಣಮಿಲ್ಲ ಮುಂದೆ ತಳಿಗೆಯೊಳ್ ತಂದಿಕ್ಕಿದಲ್ಲಿಯುಂ ಸವಿ ಪೊರ್ದಿದುದಿಲ್ಲ ಕೆಯ್ಗೆವಂದೊಡಮಱೆಯಲಾಯ್ತಿಲ್ಲ ಬಾಯ್ಗೆವಂದೊಡಂ ಸವಿ ನೆಟ್ಟನಱಿಯಲಾಯ್ತಿಲ್ಲ ಇಂತತೀತಾನಾಗತ ವರ್ತಮಾನ ಕಾಲದೊಳೆಲ್ಲಿಯುಂ ಸವಿ ಪುಟ್ಟಿತ್ತಿಲ್ಲ ಸವಿಯನಱಿವ ನಾಲಗೆಯ ಮೊದಲನೆಯ್ದಿದಾಗಳ್ ಕ್ಷಣಮಾತ್ರಮಲ್ಲಿ ನಿಲ್ಲದೆ ಬಸಿಱತ್ತ ಪೋಯ್ತಿಂತು ವರ್ತಮಾನ ಕಾಲದೊಳಂ ಸುಖಂ ನೆಲಸಿದುದಿಲ್ಲ ಬಸಿಱತ್ತ; ಪೋದಲ್ಲಿಯುಂ ಸವಿಯನು ಭವಣೆಯಿಲ್ಲದುದಱಿನತೀತಾನಾಗತ ವರ್ತಮಾನ ಕಾಲದೊಳಂ ಸುಖಮಿಲ್ಲೇತರ್ಕಳಿಪುವೈ ದ್ರವ್ಯಮಿಂತು ನಿನಗಿಲ್ಲದೊಡಂ ಪೆಂಡಿರ್ಗೆಂದು ಬಗೆವೆಯಪ್ಪೊ ಡಮವರಿಂ ಸುಖಮಕ್ಕುಮೆಂಬೆಯೆಂದೊಡವರ್ ನಿನಗಪ್ಪರೇ

ಮಂ || ನುಡಿ ನೀರಾನನಮಬ್ಜಯಕ್ಷಯುಗಳಂ ಮಿನ್ಗಳ್ ಕರಂ ಭಾವಕಂ
ಕಡುಗುಣ್ಪಾಗಿರೆ ಪೆಂಡಿರಂ ಕೊಳನೆಗೆತ್ತೆಯ್ತಂದು ಪೊಕ್ಕಿರ್ದೊಡಾ
ಯೆಡೆಯೊಳ್ ಪುತ್ರವಿಮೋಹಮೆಂಬ ನೆಗಱೆಂತುಂ ನುಂಗೆ ದುಃಖಂಗಳೊಳ್
ತೊಡರ್ವೈ ನೀಂ ನಿನಗೆಂಬ ಸಂಸರಣವಲ್ಯಾಕ್ರಾಂತೆಯಂ ಕಾಂತೆಯಂ ೬

ವ || ಪಿರದಪ್ಪ ಕೊಳನ ಶೋಭೆಗಂ ತಣ್ಪಿಂಗಂ ಸೋಲ್ತು ಸೈರಿಸಲಾಱದೆ ನಡುನೀರಂ ಪೊಕ್ಕವನಂ ನೆಗೞ್ ಪಿಡಿವಂತೆ ಪೆಂಡಿರೊಳಾದಲ್ಪಸುಖಸೆಯಡೆಗಲಸಿ ಪತ್ತಿರ್ದೊಡೆ ಪುತ್ರವಿಮೋಹಿಂ ತಗುಳ್ಗುಮದು ತಗುಳೆ ದುಃಖಂ ತಗುಳ್ಗುಮಂತವರಂ ನಿನಗೆಂಬಯ್

ಕಂ || ಕಡುಮುಳಿದು ನೋಡಿ ಕೊಲ್ವದು
ಗಡ ದೃಷ್ಟಿವಿಷಾಹಿಯೆಂಬರದು ಪುಸಿ ಪೆಂಡಿರ್
ಕಡೆಗಣ್ಣೋಟದೆ ಕೊಲ್ವರ್
ನಡೆನೋಡಿದೊಡಱಿಯದಿರ್ಪ ಗಂಡುರುಮೊಳರೇ ೫

ವ || ನೋಟಂ ವಿಷಮಪ್ಪ ಪಾವನಾರ್ ಕಂಡರ್ ನೆಱನಂ ಕೋಂಡಂಬಿನಂತೆ ನಡೆನೋಡೆ ದೊಡಾರಱಿಯರ್ ಗಱಿಸೋಂಕಿನಂಬಿನಂತಪ್ಪ ಕಡೆಗಣ್ಣೋಟದಿನಱಿಯಲಾರ್ಪ ಪೆಂಡಿರೆಂಬ ದೃಷ್ಟಿವಿಷದ ಪಾವಂ ಮೆಚ್ಚುವಿರಿದೆಂತೋ

ಚಂ || ಮುಳಿಯದೆ ಕಾಲಮಲ್ಲದಿರೆ ಕೊಳ್ಳವು ಪಾಪುಗಳಾ ವಿಷಕ್ಕೆ ಮ
ರ್ದೊಳವಬಲೋಗ್ರ ಸರ್ಪ ಮರೆನೋಡಿಯುಮಂತವರೊಲ್ದು ನೋಡಿಯುಂ
ಮುಳಿದೊಸೆದೆಂತುಮಿರ್ದಳರೆ ಕೊಳ್ವುದು ಕೋಳ್ವಡೆದೊಂಗೆರೞ್ ಭವಂ
ಗಳುಮೞಿದೞ್ದುಗುಂ ಲಲನೆಯೆಂಬ ವಿಷೋರಗಮೇಂ ಮಹೋಗ್ರಮೋ ೬

ವ || ಪಾವೆನಿತು ಸಾರೆಯಾದೊಡಂ ಮುಳಿದೊಡಲ್ಲದೆ ಕೊಳ್ಳದು ಸ್ತ್ರೀಯೆಂಬ ಪಾವಿನ ವಿಷಂ ಮುಳಿದುಮೊಸೆದುಮೆಂತುಂ ಕೊಲ್ವುದಾ ವಿಷಕ್ಕೆ ಮರ್ದುಂಟೀ ವಿಷಕ್ಕೆ ಮರ್ದಿಲ್ಲದಱಿಂ ಸ್ತ್ರೀಯ ವಿಷದಿಂದುಗ್ರಮಾದ ವಿಷಮಾವುದುಮಿಲ್ಲ

ಕಂ || ಕೊರಲೊಳಗೆ ಕಾಲಕೂಟಮ
ನಿರಿಸಿದೊಡಾ ಹರನನಾ ವಿಷಂ ಕೊಂದುದೆ ಪೆಂ
ಡಿರ ನೋಟಮೆಂಬ ವಿಷಮಾ
ಹರನುಮನಱಿದತ್ತು ಯುವತಿವಿಷಮೇಂ ವಿಷಮೋ ೬

ವ || ಕಾಳಕೂಟಮೆಂಬ ವಿಷಮಂ ಗೆಲ್ದೀಶ್ವರನುಮಂ ಪೆಣ್ಣೆಂಬ ವಿಷಂ ಕೊಂಡುದು ಇಂತುಗ್ರಮಪ್ಪ ಪೆಂಡಿರ ರೂಪಂ ಸುಖದ ರೂಪೆಂಬುದೇ

ಶಾ || ಎಂದಿರ್ದುಂ ನಿನಗಲ್ಲರಿನ್ನವರ್ಗೆ ಲ್ಲೈಗೆಲ
ಲ್ಕೆಂದೀ ಪುತ್ರ ಕಳತ್ರ ಮಿತ್ರ ಸಹಜಾನೀಕಂ ತಗುಳ್ದುರ್ಪುದಿಂ
ತೊಂದುಂ ನಿನ್ನೊಡವಾರವಂತ್ಯದೊಳವರ್ ಪೋಪಂದು ನೀಂ ಪೋಗೆಯೇ
ನೊಂದುಂ ಕಾರಣಮಿಲ್ಲದೆನ್ನವರೆನುತಿರ್ಪಂದಮಾವಂದಮೋ ೮

ವ || ತನಗಲ್ಲದರಂ ನಂಬಿ ಬಟ್ಟೆಯೊಳೊಡವೋದರ್ ಕಿಡುವರೆಂದೊಡೆ ಭವಮೆಲ್ಲಮಂ ತಪ್ಪಿ ನೆಗೞ್ದವರೇಂ ಕಿಡರೇ

ಕಂ || ಎನಿತೆನಿತು ಭವದ ನಂಟರ
ನೆನಗೆಂಬೈ ಬಿಸುಟು ಬಂದ ತನುಗಳ್ಗೋರಂ
ತೆನಿತೆನಿತಿರ್ಕುಮವಂ ನೆನೆ
ನೆನೆದಳಿಪಲ್ ಬಂಧುಜನದ ಮುಯ್ಗುಂ ಮೆಯ್ಗಂ ೯

ವ || ಕೇಡಿಂಗಪ್ಪ ನಂಟರಾದೊಡಂ ನಿಟ್ಟಗಪ್ಪ ಮೆಯ್ಯಾದೊಡಂ ಸ್ನೇಹಮಂ ಮೋಹಮಂ ತಗುಳ್ಚಲಕ್ಕುಮಾವ ಭವದೊಳಮಾಗದೆ ಪೋಪ ಮಾಯ್ಗಮೞಿವ ಮೆಯ್ಗಮೇತರ್ಕೆ ಮೆೞ್ಪಡುವಯ್

ಶಾ || ಕೆಯ್ವಾರಂ ನಿನಗಲ್ಲದನ್ಯರೊಳದೇಂ ಸ್ವರ್ಗಾಪವರ್ಗಂಗಳ
ತ್ತುಯ್ವಾ ಧರ್ಮಮನಾರ್ಮಮೆನ್ನದೆ ಕರಂ ದುರ್ಮೋಹದಿಂ ಸ್ನೇಹದಿಂ
ಮೆಯ್ವೆರ್ಚಿರ್ದುಱದುರ್ಕಿ ಸೊರ್ಕಿ ಮತಿಗೆಟ್ಟಂತಂತೆ ಮೆೞ್ಪಟ್ಟು ನೀಂ
ನಾಯ್ವಾಲಂ ಪಿಡಿದೇಕೆ ನಚ್ಚಿ ತೊಱೆಯಂ ಪಾಯ್ದೞ್ದಪೈ ಜೀವನೇ ೧೦

ವ || ಉರಿಯ ನೆೞಲಂ ನೆೞಲೆಂದಾಸೆವಟ್ಟು ಪೊರ್ದಿದೊಡಂ ಮೆಯ್ವಿಡಿದಾ ನಂಟರಂ ನಂಬಿ ಮೋಹದೊಳ್ ತೊಡರ್ದೊಡಮಾತಂಗೆ[ತಣ್ಪು ಕೂಡದೀತಂಗೆ ಸುಖಮಮಾಗದು]

ಕಂ || ಕೂರದರುಮನಂತ್ಯದೊಳೊಡ
ವಾರದರುಮನಿಲ್ಲದಂದು ನಿನ್ನಯ ದೆಸೆಯಂ
ಸಾರದರುಮನವರಿಂ ಗತಿ
ಬಾರದುದುಮನಱಿದು ನಂಟಿರಿವರೆನಗೆಂಬಾ ೧೧

ವ || ನಿನಗಾವೆಡೆಯೊಳಮಲ್ಲದ ಜೂಂಟರಂ ನಂಟರೆಂದು ನಂಬಿ ಮೋಹಮನಂಟುಮಾಡಲುಂ ಧರ್ಮಮಂ ಗೆಂಟುಮಾಡಲುಂ ಬೇಡಾ

ಉ || ಎನ್ನವರೆಂದು ಪುತ್ರ ಪಿತೃ ಮಿತ್ರ ಕಳತ್ರರ ಸಾವು ನಾಡೆ ನೋ
ವಂ ನಿನಗುಂಟುಮಾಡೆ ಬಿಡದೞ್ತತಿದುಃಖದೊಳೞ್ದು ಬರ್ದುವಯ್
ನಿನ್ನಱಿವೆಯ್ದೆವಂದಪುರದದರ್ಕಿನಿತೊಂದೞದಿರ್ಪೆಯಿ
ನ್ನಿನ್ನಿರವಿಂತಿದಾವುದೊ ಜರಾಮರಣಂಗಳವಾಗವೆಂಬುದೋ ೧೨

ವ || ಎಲೆ ಜೀವಾ ನಿನ್ನಂ ನಿನ್ನಂದಮನೆಯ್ದಲೀಡುವ ನಂಟರಂ ಎನ್ನವರೆಂದವರ ಸಾವಿನೊಳತಿದುಃಖಗೆಯ್ವೆ ಸಾರೆವರ್ಪ ನಿನ್ನ ಸಾವಿಂಗಂ ಕೇಡಿಂಗಮೞಲ್ವೆಯಲ್ಲಿದೇಂ ವಿಪರೀತನಾದೆಯೋ

ಕಂ || ತನಗತ್ಯಂತ ಸುಖಂ ಮಾ
ೞ್ಪನೆ ನಂಟಂ ದುಃಖಮೆಯ್ದಿದನೆ ಪಗೆಯದಱಿಂ
ತನಗತಿದುಃಖಂ ಮಿಗೆ ಸ
ತ್ತ ನಂಟರಂ ಪಗೆವರೆಂದು ಸೈರಿಸು ಜೀವಾ ೧೩

ವ || ಕುತ್ತಮಂ ಕಿಡಿಸುವುದೆ ಮರ್ದು ನೋವಂ ಮಾಡದನೆ ನಂಟಂ ನೋಯಿಸುವನೆ ಪಗೆವರೆಂಬುದು

ಉ || ಇಂಬೞಿವಂದು ಬೇಸಱುವ ಪೆಂಡಿರ ಮಾೞ್ಕಿಯುಮಾತ್ಮ ಮೋಹದಾ
ಳಂಬನಮಪ್ಪ ಮಕ್ಕಳೆಡರ್ಗಾಗದುದಂ ಧನಮುಳ್ಳಿನಂ ಕರಂ
ಡೊಂಬಿಸಿ ತಿಂಬರಿಲ್ಲದೊಡೆ ಪೊರ್ದನ ನಂಟರ ಪಾಂಗುಮಿಂತಿವೇಂ
ನಂಬಿಸಲಾರ್ಪುವೇ ಬಗೆಯ ಪೇೞಲೆವೇೞ್ಪುದೆ ಬೇಱೆಯಪ್ಪುದಂ ೧೪

ವ || ಬಟ್ಟೆಯೊಳ್ ಭಯಮುಳ್ಳುದನಱಿದು ದ್ರವ್ಯಂಗೊಂಡೊರ್ವನೆ ಕೈದುವಿಲ್ಲದೆ ಪಯಣಂಬೋಪಾತಂಗಂ ಪೆಂಡಿರ್ ಮಕ್ಕಳಂ ನಂಟರೆಂಬಿವರ್ ತನಗಾಗದುದನಱಿದುಂ ಮೆೞ್ಪಡುವಂಗಮೇನೆಂದು ಪೇೞ್ದುದೋ

ಕಂ || ತಂದೆ ಮಗನಂ ಮಗಂ ತಾಂ
ತಂದೆಯುಮಂ ಮೋಹವಶದಿನತಿಸಂಧಿಸುವೀ
ಯಂದಮೆ ಬೇಱಪ್ಪುದಱೊಂ
ದಂದಮನಱಿಪುತ್ತುಮಿರೆಯುಮೆನ್ನವರೆಂಬಾ ೧೫

ನ || ನೆರಂ ಬಂದವರಿಂಬಲ್ಲದೆಡೆಯೊಳ್ ಭಯವಶದಿನಾಗದುದುಮಂ ಬಸಿಱೊಳ್ ಬಂದವನರ್ಥದೆಡೆಯೊಳ್ ಮೋಹವಶದಿನಾಗದುದುಮನಱೆದುಮಾಯಿ ರ್ಬರುಮೆನೆನಗೆಂದಾಸೆವಡುವೆನೆಂಬುದೇಂ

ಶಾ || ಆಯುಷ್ಯಸ್ಥಿತಿ ಬೇಱೆ ಬಂದಗತಿ ಬೇಱೀ ಜನ್ಮದಲ್ಲಿರ್ಪಭಿ
ಪ್ರಾಯಂ ಬೇಱೆ ಬೞಿಕ್ಕೆ ಪೋಪ ಬೇಱಿರ್ಪೋಜೆ ಬೇಱಣ್ಮುಬೇ
ಱಾಯುಂ ಬೇಱೆ ಪೊಡರ್ಪು ಬೇಱೆ ಬೆಸನಂ ಬೇಱೇಕೆ ಮೆೞ್ಪಟ್ಟು ನೀಂ
ಬಾಯಂ ಬಿಟ್ಟು ಕಳತ್ರದಲ್ಲಿ ತೊಡರ್ವೈ ನಿಷ್ಕಾರಣಮ ಜೀವನೇ ೧೬

ವ || ಅವೆಡೆಯೊಳಮೆಂತುಂ ಬೇಱಪ್ಪವರನೆನಗೆನ್ನದಿರು ಪೊಲ್ಲಮೆಯಂ ಮಾಡದಿರ್ಪರೆ ನಿನ್ನವರ್

ಕಂ || ಅಱಿದುಂ ಕಂಡುಂ ನಂಟರ್
ಮಱೆಸುವರೆಂತಪ್ಪ ತಪ್ಪುಮಂ ಸಾಮಾನ್ಯರ್
ಮಱೆಸದಿರೆ ಬೆರ್ಚಿ ನಡೆವಯ್
ಮಱಸೆ ಮನಂ ಪೆರ್ಚಿ ತಪ್ಪಿ ನರಕಂಬುಗವಯ್ ೧೭

ವ || ಎಂತುಂ ನಿನ್ನ ದೋಷಮಂ ಪೇೞದೆ ಮಱೆಯಿಸಿ ನಿನಗೆ ಪಾಪಮಂ ಬರಿಸುವ ನಂಟರಂ ಪೆಱರ್ ಮಾಡಿ ನಿನ್ನ ದೋಷಮಂ ಮಱೆಯಿಸದ ಪೆಱರಂ ನಂಟರೆಂದು ಮಾಡಿ ಬಗೆವುದೆಲೆ ಭವ್ಯ ಜೀವಾ ಕೇಳಿನ್ನುಂ ನಿನ್ನ ಮೆಯ್ ಬೇಱೆ ನೀಂ ಬೇಱೆಂಬುದಿಂತಲ್ತೆ

ಮ || ಕಿಡಲೆಂದಿರ್ಪುದು ದೇಹಮೆಲ್ಲ ತೆಱದಿಂ ಕೇಡಿಲ್ಲ ಜೀವಕ್ಕೆ ಮ
ತ್ತೊಡಲಜ್ಞಾನ ಸುಬೋಧದೃಷ್ಟಿಗಳೆ ಮೆಯ್ ಜೀವಕ್ಕೆ ದೋಷಂಗಳಿ
ರ್ಪಡೆ ‘ದೇಹಂ ಗುಣರತ್ನಮಿರ್ಪ ನಿಳಯಂ ಜೀವಂ ದಲೆಂತೆಂತು ನೋ
ೞ್ಪೊಡಮನ್ಯೋನ್ಯ ವಿರುದ್ಧಮೆಂತು ತನುವಂ ನೀಂ ಮೆಚ್ಚಿದೋ ಜೀವನೇ ೧೨

ವ || ಒಂದೊಂದಕ್ಕೆ ವಿರುದ್ಧಮಪ್ಪ ಇರುಳು ಪಗಲಿನ ಸಂದಿನೆಡೆಯಾ ಪೊೞ್ತು ಕೆಱಿ ದಪ್ಪಂತೆ ಕಿಡುವ ಮೆಯ್ ಕಿಡದ ಜೀವನ ಪುದುವಾೞ್ವ ದೆವಸಮೆನಿತಾದಪ್ಪು ದಂತಾಗಿಯುಂ ಮೆಯ್ ನಿನಗೊಳ್ಳಿಕೆಯ್ಯಲಿರ್ದುಪುದಲ್ತೆ

ಕಂ || ಕಟ್ಟಿ ದುರಿತಂಗಳಿಂ ಸೆಱೆ
ಯಿಟ್ಟುಂತಾದಪುದು ನಿನ್ನನೀ ಮೆಯ್ ನೀಂ ಮೆ
ೞ್ಪಟ್ಟು ಮತಿಗೆಟ್ಟು ಚಿಃ ಬಾ
ಯ್ವಿಟ್ಟು ಶರೀರಮನೆ ನಂಬಿ ಕಿಡದಿರ್ ಜೀವಾ ೧೯

ವ || ಕಳ್ಳರೊಳ್ ಮೆಚ್ಚಿದಂತೆ ರಕ್ಕಸಿಯಂ ಪಿಡಿದೞೆದಾಳ್ದಂತೆ ತನ್ನ ವಶಂ ಮಾಡಿದ ಕರ್ಮಮಂ ಪೆರ್ಚಿಸಿ ನಿನ್ನಂ ಕಿಡಿಸಲಿರ್ಪ ಮೆಯ್ಯ ವಶವಾಗಲ್ವೇಡಾ

ಚಂ || ಎಡೆವಿಡಿದಿನ್ನೆಗಂ ಕಳೆದನಂತ ಭವಾಂತರದೊಳ್ ಶರೀರಮಂ
ಬಿಡದೆ ಕಡಂಗಿ ಪೊೞ್ತು ತಿರಿತಂದುದನಂದಿನ ನಿನ್ನ ನೊಂದುದಂ
ತಡೆಯದೆ ಚಿಂತೆಗೆಯ್ದು ನಿನಗೀ ಭವದೊಳ್ ಪಗೆ ಕೆಯ್ಗೆವಂದುದಂ
ಕಡೆಗಣಿಸಲ್ ತಪಃಕ್ರಮದೆ ನೋಂತು ಕೞಲ್ದೊಡಲೆಂಬ ವೈರಿಯಂ ೨೦

ವ || ಮುನ್ನಂ ತನ್ನನಾಪತ್ತು ವಡಿಸಿದ ಪಗೆ ಕೆಯ್ಗೆವಂದೊಡಾ ಪಗೆಗೆಯ್ದೆ ಮುಳಿಯದೆಯುಂ ಮೆಯ್ವಿಡಿದು ಕೆಟ್ಟ ಕೇಡನಱಿದುಂ ಬಗೆಗೆವಂದೊಡೀ ಮೆಯ್ಯಂ ವ್ರತದೊಳ್ ದಂಡಿಸದೆಯುಮಿರ್ದೊಡೆ ಬೞಿಕ್ಕೆ ಪಱೆಪಡಿಸಲ್ ಬರ್ಕುಮೆ

ಕಂ || ಎನಿಗಿದುವಾನುಮಿದರ್ಕೆಂ
ಬಿನಿತಂ ಬಗೆದಿರ್ದು ಕೆಟ್ಟೆನಿನ್ನಗಮದಱಿಂ
ನಿನಗೀ ಮೆಯ್ಯೊಳ್ ಕೂರ್ಮೆಯಿ
ದೆನಗೆತ್ತನಲಾಗ ನಿನ್ನ ಮನದೊಳ್ ಜೀವಾ ೨೧

ವ || ತನಗಲ್ಲದ ಸೂೞೆವೆಂಡತಿಯಂ ನಂಬಿ ಬಗೆಯಿಲ್ಲದುಳ್ಳುದೆಲ್ಲಮಂ ಕೊಟ್ಟು ಕೆಡುವಂತೆ ಮುನ್ನಮೆ ನಿನಗಲ್ಲದ ಮೆಯ್ಯಂ ನಿನಗೆಂದು ನಂಬಿ ಕೂರ್ತು ಕೆಟ್ಟೆಯಿನ್ನಾದೊಡ ಮೊಳ್ವಿಕೆಯ್ವುದು

ಶಾ || ನಂಟರ್ ದ್ರವ್ಯದಿನಲ್ಲದಾಗಿ ನೆಗೞರ್ ದ್ರವ್ಯಂಗಳುಂ ಪುಣ್ಯಮೊಂ
ದುಂಟಾಗಿರ್ದೊಡೆ ಬರ್ಕುಮಲ್ಲದೆನಿತುಂ ಮೆೞ್ಪಟ್ಟೊಡಂ ಬರ್ಕುಮೇ
ಗೆಂಟಾದರ್ಥ ಕಳತ್ರ ಬಂದುಗಳುಮಂತಿರ್ಕನ್ನೆಗಂ ನಿನ್ನೊಳೇ
ನುಂಟೆಂಬಂತಿರೆ ತನ್ನ ಕಾರ್ಯವಶದಿಂ ಮೆಯ್ಯಿರ್ಪುದಂತಿರ್ಪುದೇ ೨೨

ವ || ಬಸಿರ್ಕೂೞಿಂಗಿರ್ದ ಬಂಟನೊಂದು ಪೊೞ್ತಿನೊಳ್ ಕೂೞ್ ತಪ್ಪಿದೊಡಮಗಲ್ವಂತೆ ಯಾಹಾರಮಿಲ್ಲದೊಡಿನಿತುಬೇಗಂ ಕುಂದಿದೊಡೞಿವ ಮೆಯ್ಯಂ ನಿನಗೆಂದು ನೆಗೞ್ವುದೆ

ಕಂ || ಎನ್ನಿಂ ಬೇಱಪ್ಪುದನಾ
ನೆನ್ನಯ ರೂಪೆಂದು ಮೆಯ್ಗೆ ಕೂರ್ತುಱಿಯದೆ ಮ
ತ್ತಿನಾಂ ಮೆೞ್ಪಡಲನ್ಯರ
ಚೆನ್ನೆಗೆ ಬಳೆದೊಡಿಸುವಂದಮಂ ಪೋಲ್ತಿರ್ಕುಂ ೨೩

ವ || ಎಂದಿಂತು ತನ್ನಂ ತಾಂ ತನಗೆ ಮಾಡಿ ಪೆಱದಂ ಪೆಱದಾಗಿ ಮಾಡಿ ಭಾವಿಸುವುದು

ಉ || ಎತ್ತಣ ನಂಟರಾವ ಭವದೊಳ್ ತೊಡರ್ದಿರ್ದೊಡವಾರರೀ ಧನಂ
ಪತ್ತಿದೊಡಾರ್ಗೆ ನಿಂದಪುದು ಮುನ್ನಿನ ಮೋಹದೇ ನಿನ್ನ ಕೊಂಡೆ ಪೆ
ರ್ಗುತ್ತಮೆ ಸಾಲ್ಗುಮಿಗಳದು ತಿರ್ದುದ ಬಟ್ಟೆಗೆವಂದುದಿಂ ಕರಂ
ಮತ್ತೆ ತೊಡಂಕಿನಿಂ ಮೆಱುಕಣಿಪ್ಪೊಡದುಂ ಕಿಡಿಸಲ್ಕೆ ಬಲ್ಲರಾರ್ ೨೪

ವ || ಕುತ್ತಮುಳ್ಳವಂ ಮರ್ದುವಡೆದವಕ್ರಿಯೆಯೊಳ್ ನೆಗೞ್ವೊಡಂ ಕರ್ಮಮುಳ್ಳಂ ಮನುಷ್ಯಭವಂಬಡೆದು ಧರ್ಮಮಂ ಮಱೆದು ನೆಗಱ್ವೊಡಂ ಬೆಜ್ಜುವೇೞಲ್ ಬಲ್ಲರುಂ ಧರ್ಮಂಬೇೞರ್ ಬಲ್ಲರುಮೇಗೆಯ್ವರ್

ಕಂ || ಮತಿಗಿಡದೇತಱಿನಾರಿಂ
ಗತಿಗಿಡದಾವುದು ಮಹಾವ್ರತಕ್ಕೆಡೆಯದೆ ಸ
ನ್ನುತ ವಸ್ತುವರರೆ ನಂಟರ್
ನಿತಾಂತಮದೆ ಮೆಯ್ ವಿಶುದ್ಧ ಚಿತ್ತಂಗೆಂದುಂ ೨೫

ವ || ತನಗುಣಲಿಲ್ಲದುದಂ ಪಸವೆನ್ನದೊಡಂ ತನ್ನಂ ಕೋೞ್ಪಟ್ಟುದಂ ಡಾಮರಮೆನ್ನದೊಡಂ ಸಾವಡಸಿದುದಂ ಮಾರಿಯೆನ್ನದೊಡಂ ಮತಿಗೆಡಿಸುವರ್ಥಮಂ ವಿಷಮೆನ್ನದೊಡಂ ಗತಿಗೆಡಿಸುವ ನಂಟರಂ ಪಗೆವರೆನ್ನದೊಡಂ ಬಂಧಹೇತುಗಳಂ ಪೆರ್ಚಿಸುವ ಮೆಯ್ಯಂ ಪಾಪದ ರೂಪೆನ್ನದೊಡಂ ನೀಮೞಿವಿರ್

ಉ || ಪತ್ತಿದ ಸೈಪುಮೆಯ್ದಿದತಿದುಃಖಮುಮೆನ್ನ ಪುರಾಕೃತಾರ್ಥ ಸ
ದ್ವೃತ್ತಿಯ ದುಶ್ಚರಿತ್ರದ ತಗುಳ್ವಿನೊಳಾದ ಶುಭಾಶುಭಂಗಳಿಂ
ದೆತ್ತಮಿವಾದುವೆಂದೊಸೆಗೆಯಂ ಕರಮುಬ್ಬೆಗಮಂ ವಿಮೋಹದಿಂ
ಚಿತ್ತದೊಳಾಗಲೀಯದೆ ಸಮತ್ವದೊಳಿರ್ದೊಡೆ ದುಃಖಿಯಕ್ಕುಮೇ ೨೬

ವ || ಬೆಂಕೆ ಕಿರ್ಚಿಂದ ತಣ್ಪು ನೀರಿಂದಮೆಂಬಂತೆ ದುಃಖಂ ಪಾಪದಿಂ ಸುಖಂ ಧರ್ಮದಿನೆಂಬುದಂ ನಿಶ್ಚೈಸಿ ರಾಗದ್ವೇಷಂಗಳನಿತುಮಂ ಗೆಂಟುಮಾಡುವಱಿತಮಂ ನಿನಗೆಂಬುದು ಬಂಧಕಾರಣಂಗಳಪ್ಪ ಕಳತ್ರಶರೀರಂಗಳಂ ನಿನಗೆನ್ನದಿರೆನೆಯುಂ ಬಗೆಯೈ ತನ್ನ ವಸ್ತುಗಳುಂ ತನ್ನ ಪೆಂಡಿತುಂ ತನ್ನವರುಂ ತನ್ನ ಮೆಯ್ಯುಂ ತನಗಾಗದುದಂ ಪ್ರಸಿದ್ಧಪುರುಷರೊಳಾದ ಕಥೆಯಂ ಜೀವಾ ನೀಂ ಕೇಳೇಕಾಗ್ರಚಿತ್ತದಿಂ

 

ರಾವಣನ ಚರಿತ್ರಂ

ಕಂ || ಬನಮೇೞುಂ ವನದುರ್ಗಂ
ವಿನೂತ ವಿಳಸತ್ತ್ರಿಕೂಟಗಿರಿ ಗಿರಿದುರ್ಗಂ
ವನಧಿಜಳದುರ್ಗಮಾಗಿ
ರ್ದನುಪಮ ಸುರರಚಿತಮಪ್ಪ ಲಂಕಾಪುರಮಂ ೨೭

ವ || ಅದನಾಳ್ವಂ ರಾಕ್ಷಸವಂಶದ ಮೊದಲಿಗನಂ ವಿದ್ಯಾಧರಚಕ್ರವರ್ತಿ ರಾವಣನೆಂಬ ಮಹಾಬಳಪರಾಕ್ರಮನಾತಂಗೆ ನಭೋಗಾಮಿನೀವಿದ್ಯೆ ಅಗ್ನಿವಿದ್ಯ ಪನ್ನಗವಿದ್ಯೆ ಪಾತಾಳವಿದ್ಯೆ ಭೇತಾಳವಿದ್ಯೆ ತಮೋವಿದ್ಯೆ ಭಾಸ್ಕರವಿದ್ಯೆ ಗಿರಿವಿದ್ಯೆ ಕಾಮರೂಪಿಣೀವಿದ್ಯೆ ಬಹು ರೂಪಿನೀವಿದ್ಯೆ ಎಂದಿಂತಿವು ಮೊದಲಾಗೆ ಮತ್ತಮೆನಿತಾನುಂ ತೆಱದ ಮಹಾವಿದ್ಯೆಗಳ್ ಬೆಸನಂ ಪಾರುತ್ತುಮಿರ್ಪುವು ಮಂಡೋದರಿ ಮೊದಲಾಗೆನಿಬರಾನುಮತಿಶಯಮಪ್ಪಂತಃಪುರಮಂ ಸರ್ವರತ್ನಮಯಮಪ್ಪ ನಿವನಿಧಿಗಳುಂ ತ್ರಿಜಗದ್ಭೂಷಣಂ ಮೊದಲಾಗೆನಿತಾನುಂ ತೆಱದ ಭದ್ರಹಸ್ತಿಗಳುಂ ಬಹುಕೋಟಿ ಜಾತ್ಯಶ್ವಂಗಳುಂ ಮನೆಯೊಳಿರ್ಪುವು ಭೂಚರ ಖೇಚರರೆಂಬಿರ್ತೆಱದ ಕಲಿಗಳುಂ ಬಲ್ಲಾಳ್ಗಳುಂ ತನಗಾಳಾಗೆ ಶಕ್ತಿತ್ರಯಸಂಪನ್ನನಾಗಿ ಸುಖದಿನಿರೆ ವಿಜಯಾರ್ಧಪರ್ವತದ ಮೇಗಣ ವಿದ್ಯಾಧರಶ್ರೇಣಿಗಳುಮಂ ರಥನೂಪುರ ಚಕ್ರವಾಳಮೆಂಬ ಪೊೞಲುಮನಾಳ್ವಂ ವಿಕ್ರಾಂತ ಪರಾಕ್ರಮನಿಂದ್ರನೆಂಬಂ ವಿದ್ಯಾಧರಂ ತನ್ನ ನಾಡುಂ ಪೊೞಲಂ ಮೊದಲಾಗೆ ರಾಜ್ಯತಂತ್ರಮೆಲ್ಲತಂತ್ರಾಭಿಧಾನಂ ಮಾಡಿಮುಯ್ಯಂ ನೋಡಿಯೈಶ್ವರ್ಯಮದದಿಂ ಪೆಱರಾರೀ ಲೋಕದೊಳಾನೆ ದೇವೇಂದ್ರನೆಂದಿರ್ದುರ್ವಿನ ಮಾತಾತಂಗೆ ಸಂದುದುಮಂ ತಮ್ಮಜ್ಜನಪ್ಪ ಮಹಾಬಲಿಯಂ ಕೊಂದುದುಮಂ ರಾವಣಂ ಕೇಳ್ದು ಮುನಿದು ಮೇಲೆತ್ತಿ ಕಾದಿ ಪಿಡಿದುತಂದಿಂ ಬೞಿಯಮಾತನಳವುಮನೇವೇೞ್ಪುದೋ

ಮ || ಧರೆಯುಂ ವಾರಿಧಿಯುಂ ಮಹಾನದಿಗಳುಂ ದಿಗ್ಧಂತಿಯುಂ ಕಾಲಮುಂ
ಗಿರಿಯುಂ ನಿಲ್ವುವು ರಾವಣಂ ಮುಳಿಯೆನೆಂದಿರ್ಪುನ್ನೆಗಂ ಕ್ರೋಧನಿ
ರ್ಭರನಾದಂದವು ನಿಲ್ಲವೆಂಬಿನಿತುದಗ್ರೋಗ್ರ ಪ್ರತಾಪಂಗಳಾರ್
ದೊರೆಯಾರ್ ಮೀಱುವರಾರಿದಿರ್ಚುವವರಾರ್ ವಿಕ್ರಾಂತ ಸಂಪನ್ನನೊಳ್ ೨೮

ವ || ಅಂತುಗುರ್ವು ಪರ್ವಿನಿಲೆ ಕಿನ್ನರ ಕಿಂಪುರುಷ ಗುರುಡ ಗಂಧರ್ವ ಯಕ್ಷ ರಾಕ್ಷಸ ಭೂತ ಪಿಶಾಚಪ್ರಭೃತಿಗಳೆಲ್ಲರುಮಾತಮಗಳ್ಕಿಬಳ್ಕಿ ನಯಮನೆ ಮುಂದಿಟ್ಟಿದುರ್ಪುರಪ್ಪುದಱಿಂ

ರಗಳೆ || ಧರೆಯೊಳ್ ಪೆಱರವನವೊಲಾರರಿಯಲ್ | ಸಿರಿಯೊಳ್ ಪೆಱರವನವೊಲಾರ್ ಪಿರಿಯರ್
ಚಕ್ರಿಗಳವನಂದದಿನಾರುಗ್ರರ್ | ವಿಕ್ರಮದಿಂದಾರನ್ನರುದಗ್ರರ್
ಕಲಿತನದಿಂದವನಂತಾರಾದರ್ | ಚಲಮಂ ಪೆಱರವನಂತಾರ್ ಕಾದರ್
ವಿದ್ಯಾಬಲದಿಂದಂತಾರೆಸೆದರ್ | ಚೋದ್ಯಂ ಮಿಗೆ ಪೆಱರಂತಾರ್ ಬೆಸೆದರ್
ದುರ್ಗಂಗಳಿನವನಂತಾರ್ ನೆಱೆದರ್ | ಸ್ವರ್ಗಾಧಿಪರವನಂತಾರ್ ಮೆಱೆದರ್
ಸುರರಿಂದವನಂತಾರ್ ಸಂಪನ್ನರ್ | ಹಿತಬಲದಿಂದಾವಮ ಪೆಱರನ್ನರ್
ದೆಸೆಯೆಲ್ಲಮನಂತಾರಂಜಿಸಿದರ್ | ಜಸದಿಂದಿಂತಾರ್ ಮಿಗೆ ರಂಜಿಸಿದರ್
ಕೈಲಾಸಮನಂತಾರೆತ್ತಿದವರ್ | ಮೇಲಂತಾರ್ ಭುವನಮನೊತ್ತಿದವರ್
ಭೂಚರರಂತಾರ್ ಧಾತ್ರಿಯನಲೆದರ್ | ಖೇಚರರಂತಾರ್ ಜಗದೊಳ್ ಮಲೆದರ್
ಮೇಗಿಲ್ಲೆಂದಂತಾವನೊ ಸಂದಂ | ಭೋಗಂಗಳಂತಾವನೊ ನಿಂದಂ
ಅಂತಿಂದ್ರಾಂಕನನಿಱೆದಾರ್ ಪಿಡಿದರ್ | ಇಂತಾರ್ ಬಲ್ಲಾಳ್ತನದೊಳ್ ನಡೆದರ್
ಭೀಕರಮಿಂತವನೊಂದಾ ಸುಕರಂ | ಲೋಕಕ್ಕವನಳವುಮಗುರ್ವ ಕರಂ ೨೯

ಕಂ || ಪೆಂಪಿಗುರ್ವಪ್ಪುದನೇ
ನಂ ಪೇೞ್ವೆಂ ಮೆಱೆಯಲೆಂದು ಬವಣಿಗೆಗೆ ದಶಾ
ಸ್ಯಂ ಪೊಱಮಟ್ಟೊಡೆ ಗದಗದ
ಗಂಪಂಗೊಳುತಿರ್ಪುದಂದು ಧರಣೀಚಕ್ರಂ ೩೦

ವ || ಅಂತಪ್ಪ ರಾವಣಂ ಸೀತಾದೇವಿಯಂತಂದೊಡೆ ರಾಮಸ್ವಾಮಿ ಭರಂಗೆಯ್ದಾರಯ್ದಱಿದು ನೆಱೆಯೆ ಮೇಲೆರ್ದು ಸಮುದ್ರಮಂ ಪಾಯ್ದು ಲಂಕೆಯುಂ ಬಳಸಿ ಕಾದುವುದುಂ ರಾವಣದ ವಂಶದೊಳ್ ಮುನ್ನಂ ಧವಳಕೀರ್ತಿಯ ಕಾಲದೊಳಾತಂಗೆ ಶ್ರೀಕಂಠನೆಂಬ ವಾನರವಂಶದ ಮೊದಲಿಗನಂ ಮಿತ್ರನಾಗಿ ನಡೆದಂತೆ ಪಾರಂಪರ್ಯಂ ಬಂದ ಸುಗ್ರೀವಂ ಮೊದಲಾಗೊಡೆಯ ವಾನರರಾಜರೆಲ್ಲಂ ರಾಮಸ್ವಾಮಿಯೊಳ್ ಕೂಡಿ ಬಂದು ಕಾದಿದೊಡವರೊಡವುಟ್ಟಿದ ವಿಭೀಷಣನುಮಣ್ಣನಂ ಬಿಸುಟ್ಟು ರಾಮನೊಳ್ ಕೂಡಿ ಬಂದಿಱೆದಂ ಅವನ ವಿದ್ಯಾದೇವತೆಗಳುಂ ಸೋಲ್ತಗಲ್ದು ತೊಲಗಿಪೋದುವು ದುರ್ಗಂಗಳುಂ ನವನಿಧಿಗಳುಂ ಸಹಾಯಮಾದುದಿಲ್ಲ ಭದ್ರಹಸ್ತಿಗಳುಂ ಜಾತ್ಯಶ್ವಂಗಳುಂ ವೀರಭಟಸೇನೆಗಳುಂ ನೆಱೆದು ನಿಂದುವಿಲ್ಲ. ತನ್ನ ಮನೆಯೊಳ್ ಪುಟ್ಟಿದ ನೆಚ್ಚಿನ ಚಕ್ರರತ್ನಮುಂ ಪಗೆವನ ಕೈಗೆ ಪೋಗಿ ಮಗುೞ್ದು ತನ್ನದೆ ಕೊಂದತ್ತು ಕೈಲಾಸಮನೆತ್ತಿದ ಬಲಮನುಳ್ಳ ಮೆಯ್ಯೊಂದಾಯುಧದೊಳೆ ಕೆಡೆದತ್ತುಂ ಇಂತು ತನಗೆಂದಿರ್ದುವೆನಿತನಿತುಂ ತನಗಾಗದಿರೆ ರಾವಣಂ ಸತ್ತು ನರಕಕ್ಕೆ ಪೋದನೆಂಬೀ ಕಥೆಯುಂ ಕೇಳ್ದನ್ಯತ್ವಮಂ ಭಾವಿಸುವುದೆಲೆ ಜೀವಾ ನಿನಗಂ ದ್ರವ್ಯಮುಂ ಕಳತ್ರಮುಂ ಶರೀರಮುಮೆಂಬಿವರ್ಕಂ ಸಂಬಂಧಮಪ್ಪಂತಾವುದಂತರಂ

ಚಂ || ಕಸವರಮೆತ್ತನಂತ ಗುಣಮೆತ್ತ ಕಳತ್ರಸಿರ್ಕಿದೆತ್ತ ನಿ
ನ್ನಸದೃಶ ರೂಪದೂರ್ಧ್ವಗತಿ ಭಾವಮಿದೆತ್ತ ಕರಂ ವಿಮೋಹದಿಂ
ಕಿಸುಗಳಮಪ್ಪ ಮೆಯ್ಯೊಳಿರವೆತ್ತಿದು ನಿಷ್ಕಲನಪ್ಪುದೆತ್ತ ಚಿಃ
ಬಿಸುಡು ವಿರುದ್ಧದೊಳ್ ತೊಡರ್ದು ನಿಲ್ವುದು ಪಾೞಿಯದಲ್ತು ಜೀವನೇ ೩೨

ಗದ್ಯ || ಇದು ಜಿನಾಶನ ಪ್ರಭಾಸನ ಶೀಲೋದಿತ ವಿದಿತ ಬಂಧುವರ್ಮ ನಿರ್ಮಿತಮಪ್ಪ ಜೀವ ಸಂಬೋಧನಾ ಗ್ರಂಥವತಾರದೊಳ್ ಅನ್ಯತ್ವಾನುಪ್ರೇಕ್ಷಾನಿರೂಪಣಂ ರಾವಣ ಕಥಾವರ್ಣನಂ

ಚತುರ್ಥಾಧಿಕಾರಂ