. ಸಂಸಾರಾನುಪ್ರೆಕ್ಷೆ

ಕಂ || ಗತಿಗಳ್ ನಾಲ್ಕವಱೊಳಳಂ
ಕೃತದಿಂ ಪದಿನಾಲ್ಕು ತೆಱದಿನಿರ್ದುವನೇಕಾ
ಕೃತಿಯಾಗಿ ತಿರಿವ ಜೀವ
ಪ್ರತತಿಯ ತಿರಿತರುತುಮಿರ್ಪುದೇ ಸಂಸಾರಂ  ೧

ವ || ಅವಾವುವೆಂದಡೆ ಏಕೇಂದ್ರಿಯ ಬಾದರಪರ್ಯಾಪ್ತಕಾಪರ್ಯಾಪ್ತಕಂ ಸೂಕ್ಷ್ಮೇಂದ್ರಿಯ ಪರ್ಯಾಪ್ತಕಾಪ್ತಕಂ ದ್ವೀಂದ್ರಿಯ ಪರ್ಯಾಪ್ತಕಾಪರ್ಯಾಪ್ತಕಂ ತ್ರೀಂದ್ರಿಯ ಪರ್ಯಾಪ್ತಕಾಪರ್ಯಾಪ್ತಕಂ ಚತುರಿಂದ್ರಿಯ ಪರ್ಯಾಪ್ತಕಾಪರ್ಯಾಪ್ತಕಂ ಅಸಂಜ್ಞಿ ಪಂಚೇಂದ್ರಿಯ ಪಯಾಪ್ತಕಾಪರ್ಯಾಕ್ತಕಂ ಸಂಜ್ಞಿ ಪಂಚೇಂದ್ರಿಯ ಪರ್ಯಾಪ್ತಕಾಪರ್ಯಪ್ತಕಂ ಎಂದಿತು ಚತುರ್ದಶ ಭೇದ ಜೀವಸಮಾಸೆ ಮಾರ್ಗಣಾಭೇದಂಗಳೊಳಿರ್ದ ಜೀವರಾಶಿಯ ಚತುರ್ಗತಿಗಳೊಳ್ ತೊೞಲುತ್ತುಮಿರ್ಪುದು ಸಂಸಾರಮಾ ಸಂಸಾರದೊಳಗೆ ಪರಿಣಾಮವಶದಿಂ

ಉ || ಎಲ್ಲೆಡೆಯೊಳ್ ಚತುರ್ಗತಿಗಳೊಳ್ ಪರಮಾಣುಗಳೆಲ್ಲಮಂ ತಗು
ಳ್ದೆಲ್ಲವಱಾಯುವಂ ಪೆಸರ್ಗಳಾದುವನೆಲ್ಲಮನಂತೆ ಮತ್ತೆ ರೂ
ಪೆಲ್ಲಮನೆಲ್ಲ ಕಾಲ ಸಮಯಂಗಳನುದ್ಭವಮಾದ ಸಂಖ್ಯೆಯಂ
ತೆಲ್ಲಮನೆಯ್ದೆವಂದು ಪರಿವರ್ತಿಸುತಿರ್ಪುವು ಜೀವರಾಧಿಗಳ್  ೨

ವ || ಅದೆಂತೆಂದೊಡೆ ಒಂದೆಡೆಯೊಳ್ ಪುಟ್ಟಿಪೊಂದಿದ ಜೀವನೆನಿತಾನುಂ ಭವಂಗಳಂ ತೊೞಲ್ದುಬಂದಾ ಮುನ್ನಿನ ಪುಟ್ಟಿದೆಡೆಯ ಕೆಲದೊಳ್ ಪುಟ್ಟಿಯಂತಾ ಕ್ರಮದಿಂ ಚತುರ್ಗತಿಗಳೊಳಾದ ಕ್ಷೇತ್ರಮೆನಿತನಿತಱೊಳಂ ಕೂಡಿ ಪುಟ್ಟಿದೊಡೊಂದು ಕ್ಷೇತ್ರಪರಾವರ್ತನಂ ಒರ್ಮೆ ಶರೀರಮಂ ಕೆಯ್ಕೊಳ್ವಲ್ಲಿ ತೆಗೆದುಕೊಂಡ ಪರಮಾಣುಗಳಲ್ಲದೆ ಪೆಱಪೆಱವಂ ಕೊಂಡಂತೀ ಮೂಱುಂ ಲೋಕದೊಳುಳ್ಳ ಪರಮಾಣುಗಳೆಲ್ಲಮಂ ಕೂಡಿಕೊಂಡೊಡದೊಂದು ಪರಮಾಣು ಪರಾವರ್ತನಂ ಒಂದು ರೂಪಂ ಕೆಯ್ಕೊಂಡು ಬಿಸುಟ್ಟಂತೆ ಪೆಱಪೆಱವು ಕೊಂಡಂತೆ ಲೋಕದೊಳುಳ್ಳ ರೂಪೆಲ್ಲಮಂ ಕೂಡಿಕೊಂಡೊಡ ದೊಂದು ರೂಪಪರಾವರ್ತನಂ ಒಂದು ಪೆಸರನೊಮ್ಮೆ ಕೊಂಡು ಮತ್ತಂ ಪೆಸರ್ಗಳವೆನಿತು ಮನೆಯ್ದೆಕೊಂಡು ಮುನ್ನಿನ ಕೊಂಡ ಕೆಲದ ಪೆಸರಂ ಕೊಂಡೊಡದೊಂದು ನಾಮಪರಾವರ್ತನಂ. ಒರ್ಮೆಯೊಂದು ಸಮಯದ ಕಾಲದೊಳ್ ಪುಟ್ಟಿ ಸತ್ತು ತೊೞಲ್ದು ಬಂದಾ ಸಮಯದ ಕೆಲಸ ಸಮಯದೊಳ್ ಪುಟ್ಟಿ ಅನಂತಕಾಲ ಸಮಯಂಗಳೆನಿ ತೊಳವನಿತುಮಂ ಕೂಡಿ ಪುಟ್ಟಿದೊಡದೊಂದು ಕಾಲಪರಾವರ್ತನಂ. ಒಂದು ಪರಿಣಾಮಮಂ ಮಾಡಿ ಮತ್ತಂ ಪರಿಣಾಮವೆನಿತೊಳವನಿತುಮಂ ಕೊಂಡು ಮುನ್ನಿನ ಪರಿಣಾಮದ ಕೆಲಸ ಪರಿಣಾಮಮಂ ಕೊಂಡು ಮತ್ತಂ ನೆಱೆಯೆ ಕೊಂಡೊಡದೊಂದು ಪರಿಮಾಣ ಪರಾವರ್ತನಂ ಒಂದಾಯುಷ್ಯಮನೊರ್ಮೆ ಕಟ್ಟಿ ಮತ್ತಮಂತೆ ಪೆಱಪೆಱವಾಯುಷ್ಯಮೆಲ್ಲಮಂ ಕಟ್ಟಿ ಬಿಸುಟ್ಟು ಮುನ್ನಿನಾಯುಷ್ಯದ ಕೆಲದಾಯುಷ್ಯಮಂ ಕೂಡಿ ಕಟ್ಟಿಕೊಂಡೊಡದೊಂದಾಯುಷ್ಯ ಪರಾವರ್ತನಂ. ಇಂತಪ್ಪ ಸಪ್ತ ಪರಾವರ್ತನ ದೊಳೆಂಬತ್ತು ನಾಲ್ಕು ಲಕ್ಕೆ ಯೋನಿಮುಖದೊಳ್ ಪುಟ್ಟಿ ಕುದಿವ ಕೂೞಂತೆಲ್ಲಿಯುಂ ನಿಲ್ಲದೆ ತೊೞಲ್ವ ಸಂಸಾರಿಜೀವಂಗಳಂದಮಂ ಜೀವಾ ನೀಂ ಚಿಂತಿಸುವುದು.

ಕಂ || ಮನದೊಳೊಗೆದ ಶುಭಮತಿಯೆಂ
ಬನಿಲನಘನಮೆಂಬ ವಹ್ನಿ ಕೊಳೆ ಸಂಸೃತಿಯೆಂ
ಬನವರತಮುರಿವ ಕಾೞ್ಕಿ
ರ್ಚಿನ ಕೋಳ್ಗೊಳಗಾಯ್ತು ಭುವನಜೀವ ಮೃಗೌಘಂ  ೩

ವ || ಕಾೞ್ಕಿರ್ಚಿನ ನಡುವಾದ ಮೃಗಕ್ಕಂ ಸಂಸಾರದೊಳಗಾದ ಜೀವಕ್ಕಂ ಮಱುಕಂ ಸಾಮಾನ್ಯಮಕ್ಕುಮೇ

ಮ || ಪಲವುಂ ಜನ್ಮಮೆ ವೃಕ್ಷಜಾತಿ ವಿಷಯವ್ಯಾಬಾಧೆಗಳ್ ವ್ಯಾಧಿಸಂ
ಕುಲಮತ್ಯುಗ್ರಕಷಾಯಸಂತತಿ ಮೃಗವ್ರಾತಂ ಮಳಂಗಳ್ ಮಹಾ
ಚಲಮಾಗುತ್ತಿರೆ ರೌದ್ರಮಾಗೆ ನೆಗೞ್ದೀ ಸಂಸಾರಕಾಂತಾರದೊಳ್
ಪೊಲಗೆಟ್ಟಕ್ಕಟ ಸೇದೆವಟ್ಟು ತಿರಿಗುಂ ಮಿಥ್ಯಾತ್ವಜೀವೋತ್ಕರಂ  ೪

ವ || ಸಂಸಾರದೊಳ್ ಮಿಥ್ಯಾದೃಷ್ಟಿಯಪ್ಪ ಜೀವಂ ಸುೞಿವ ಬೇವಸಕ್ಕಂ ಕಾಂತಾರದೊಳ್ ಪೊಲಂಬುಗೆಟ್ಟು ಸೇದೆವಟ್ಟು ತಿರುಗುವ ಕುರುಡನಾಪತ್ತಿಂಗಮಳವಿಯುಂಟೇ

ಕಂ || ನೆರಪುವಳಿವಘ ವಿಕಾರಂ
ತಿರಿಪೆ ಭವಾಂಬುಧಿಯ ನಡುವೆ ಸೂೞ್ ಸೂೞ್ ಕಡೆನೇ
ಣ್ಬರವೆಡಬಲದೊಳ್ ತಿರಿಪು
ತ್ತಿರೆ ಕಡೆಗೋಲೆಂತು ತಿರಿಗುಮಂತಿರೆ ತಿರಿಗುಂ  ೫

ವ || ಕಡೆವ ಕಡೆಗೋಲ ನೇಣೆರಡುಂ ಕಡೆಯುವೊಂದು ಸುತ್ತುವಾಗಳೊಂದೞಿವಂತೆ ಶುಭಾಶುಭ ಕರ್ಮಂಗಳೊಂದು ತಗುಳ್ವಾಗಳೊಂದೞಿವಂತೆ ಸಂಸಾರದೊಳ್ ತಿರಿವರ್ ಮತ್ತಂ ನಿಮ್ಮಿರ್ದೀ ಸಂಸಾರಸಮುದ್ರಮಿಂತಲ್ತೆ

ಮ || ದುರಿತಂ ನೀರ್ ಬಹುದುಃಖಮುಗ್ರ ಮಕರಗ್ರಾಹಾದಿಗಳ್ ಚಿಂತೆಗಳ್
ತೆರೆಗಳ್ ಹಿಂಸೆ ಮಹೋಗ್ರ ಬಾಡಬಮುಖಂ ಮಿಥ್ಯಾತ್ವ ಸಂಯೋಗ ದು
ಷ್ಪರಿಣಾಮಂಗಳಗಾಧಮಪ್ಪ ಸುೞಿಗಳ್ ತಾಮಾಗಿ ಘೂರ್ಣಿಪ್ಪದು
ಸ್ತರಸಂಸಾರಸಮುದ್ರದಲ್ಲಿ ಸುೞಿಗುಂ ಜೀವಂಗಳಜ್ಞಾನದಿಂ  ೬

ವ || ಸಂಸಾರೊಳಗಿರ್ದನ ಕೇಡಿಂಗಂ ಸಮುದ್ರದೊಳೞ್ದನ ಸಾವಿಂಗಮೇಂ ಸಂದೆಯಮೆ? ಅದಱಿನಿಲ್ಲಿ ಸುಳಮಿಲ್ಲಂ

ಕಂ || ಒಂದಿಂದ್ರಿಯದೊಳಗೆಳ್ಳನಿ
ತೊಂದೆಡೆಯದೆ ಸುಖಮದೆನಿಸು ಬೇಗಮದರ್ಕಿಂ
ತೊಂದಿಪ ಮೆಯ್ಯೆಲ್ಲಮನೊ
ಕ್ಕೆಂದುಂ ನಮೆಯುತ್ತುಮಿರ್ಪುದುಱುಗುಮೆ ಜೀವಾ  ೭

ವ || ಅಂತೆ ಸಂಸಾರಸುಖಮೆಲ್ಲ ಮಿಂದ್ರಿಯಂಗಳ ದೆಸೆಯಿಂದಿಂದ್ರಿಯಂಗಳೊಳಮೆಳ್ಳನಿತು ಪ್ರದೇಶದಲ್ಲಿಂದತ್ತದುವುಂ ಕ್ಷಣಮಾತ್ರದನಿತಕ್ಕೆ ಮೆಯ್ಯೆಲ್ಲಮಂ ನೋವಿಂಗೊಡ್ಡಿ ನಮೆವುದಾವುದುಱುಗುಮೆಲೆ ಜೀವಾ ನಿನ್ನಿರ್ದಿರವಂ ನೋಡಾ

ಉ || ತೀವಿದ ಮೋಹಮೆಂಬ ತೊಱೆ ಕೊಂಡೆಱೆದರ್ಪುದು ನಿನ್ನನೀಗಳಿಂ
ಜೀವನಿವೃತ್ತಿಯೆಂಬ ಭುಜಗರ್ವದಿನೀಸಿ ಬರ್ದುಂಕಿಪೋಗು ಮ
ತ್ತಾವುದುಮಾಸೆಯಿಲ್ಲ ಸುೞಿಯಲ್ ಕಡುವೇಗದೆ ಪೋಗಿ ಮೃತ್ಯುವೆಂ
ಬೋವದೆ ನುಂಗುವೊಂದು ನೆಗೞಳ್ಳ ಭವಾಬ್ಧಿಯನೆಯ್ದದನ್ನೆಗಂ  ೮

ವ || ತೊಱೆಯೊಳ್ ಪೋಪಾತಂ ಸಮುದ್ರಮನೆಯ್ದದನ್ನೆಗಂ ಪೊಡರ್ಪುಗೆಯ್ದಿಸುವುದು ಸಂಸಾರದೊಳಗಾದಾತಂ ಸಾವೆಯ್ದದನ್ನೆಗಂ ಬೇಗಮಱಿದು ನೆಗೞ್ವುದು

ಕಂ || ಪತ್ತಿರ್ದನಂತಭವಮುಮ
ನಿತ್ತೈದುಂ ವಿಷಯ ವೈರಿಗಳ್ಗ ೞಿದೈನೀಂ
ಮತ್ತೆಲ್ಲ ಪರತ್ರಕ್ಕೆ ನಿ
ಮಿತ್ತಂ ನಿನಗೊಂದು ಭವಮನೀಯಲ್ಕಾಗಾ  ೯

ವ || ಮುಂ ಪೋದನಂತಭವಮೆಲ್ಲಮಂ ಬಸನಕ್ಕೆ ಕೊಟ್ಟು ಕೆಟ್ಟೆಯಿನ್ನಪ್ಪೊಡಂ ನಿನಗೊಂದು ಭವಮಂ ಕುಡೆ ಕೊಂಡು ಬೞಿಯಂ ಸುಖಮಿರಲಾಗಾ

ಚಂ || ಕುದಿಯಿಸುವಿಂದ್ರಿಂಗಳಿನೞಲ್ದು ಬೞಲ್ದು ಮನಕ್ಕೆವಂದುದೆ
ಯ್ದದೆಕಡುನೊಂದು ಬೆಂದು ಮಱುಗುತ್ತೞಿದಕ್ಕಟ ಸೇದೆವಟ್ಟು ಬ
ರ್ದಿದೆಯೞಿನೀರ್ಗೆ ನೀರಡಸಿ ಬೇಸಗೆಯೊಳ್ ಬಡಗೊಂದೆ ಬಂದು ತಾಂ
ಪಡೆದಱುನೀರನೆಯ್ದ ದೆಯುಮಲ್ಲಿಯ ಕೊೞ್ಕೆಸಱಲ್ಲಿ ಬೀೞ್ವವೋಲ್  ೧೦

ವ || ಕರ್ಮವಶದಿಂ ಸೇದೆಗಟ್ಟಜೀವನಿಂದ್ರಿಯಸುಖಕ್ಕಾಸೆವಟ್ಟು ನೆಗೞ್ವೊಡಂ ಬಡಗೊಂದೆ ಕೆಸಱ ನಡುವಣ ನೀರ್ಗಾಸೆವಟ್ಟು ಪುಗುವೊಡಮಾತಂ ಸುಖಮೆನೆಯ್ದದೆ ದುಃಖದೊಳಾೞ್ದುಮದು ನೀರನೆಯ್ದಲಾಱದೆ ಕೆಸಱೊಳಾೞ್ಗುಮಪ್ಪುದಱಿನಲ್ಪ ಸುಖಕ್ಕಾಸೆವಟ್ಟೊಡೊಳ್ಳಿತಕ್ಕುಮೆ

ಕಂ || ಕಡುದುಃಖಮೆಂಬ ಕಿರ್ಚಿಂ
ಕಡುಗಾಯ್ದೀ ಜೀವನೆಂಬ ಲೋಹದ ಗುಂಡು
ಕುಡುಗುಮೆ ಸುಖ ಶೀಕರದಿಂ
ದಡಂಗುಗುಂ ನಿನ್ನ ಕ್ಪು ಮುಕ್ತ್ಯಂಬುಧಿಯೊಳ್ ೧೧

ವ || ಕರಂ ಕಾಯ್ದ ಕರ್ಬೊನ್ನ ಬೆಟ್ಟ ಸೀವರದ ಪನಿಯೊಳಾಱುಗುಮೆ? ಸಮುದ್ರದೊಳಿಕ್ಕಿದೊಡಾಱುಗುಮಂತೆ ನಿನ್ನೊಳನಾದಿಯಪ್ಪಷ್ಟವಿಧ ಕರ್ಮೋದಯದಿನಾದ ಮಹಾದುಃಖಮಲ್ಪಸುಖದೊಳಾಱುಗುಮೆ? ಮುಕ್ತ್ಯಂಬುಧಿಯೊಳಾಱುಗುಮೆಂಬುದಂ ಬಗೆವುದು ಜೀವಾ ನಿನ್ನಿರ್ದಿರವಿಂತಲ್ತೆ

ಉ || ನಿನ್ನೊಡವುಟ್ಟಿದಳ್ಳಱಿತಮಂ ಮಿಗಿಲಾಗುವನಂತಸೌಖ್ಯಮಂ
ತನ್ನ ಮಹತ್ವದಿಂ ಕಿಡಿಸಿ ಪೊಲ್ಲುಣಿಸಂ ಪೊಱಗಿಕ್ಕಿ ಕಾವವೋಲ್
ನಿನ್ನಯಶೇಷದಿಂದ್ರಿಯಸುಖಂಗಳನೂಡಿ ತೊಡರ್ಚಲಂದು ನೀಂ
ಬನ್ನಮನೇನುಮಂ ಬಗೆಯದಿರ್ಪುದೆ ನಾಣಿಲಿಯಾಗಿ ಜೀವನೇ  ೧೨

ವ || ಸೆಱೆಯೊಳಿರ್ದನಾಹಾರಂಗೊಳ್ವನಿತರ್ಕೆ ಮೆಯ್ಮಱೆದೊಡಂ ಸಂಸಾರದೊಳಗಿರ್ದ ನಿಂದ್ರಿಯಸುಖಮನೋರೊರ್ಮೆ ದೊರೆಕೊಳ್ವನಿತರ್ಕೆ ಧರ್ಮಮಂ ಮಱೆ ದೊಡಮಾತನ ಸೆಱೆಯುಮೀತನ ಕರ್ಮಮುಮೆಂತುಂ ಪತ್ತುವಿಡವು ಮತ್ತಂ ನಿನ್ನರವಿಂತು ನೋಡಾ

ಕಂ || ಮನೆ ಸೆಱೆವನೆ ಧನಮಿಂಧನ
ಮನುಕೂಲದ ತನಯವರ್ಗಮನಯಂ ಪೆಱತೇಂ
ವನಿತೆ ಕರಂ ಪಾಪಂ ನೆರೆ
ವನಿತೆ ಮಹಾಮೋಹಬಂಧನಂ ಬಂಧುಜನಂ  ೧೩

ವ || ಎಂದು ಬಗೆದು ಭಯಸ್ಥನಾಗಿ ನೆಗೞ್ವುದಲ್ಲದೆ ಮಱೆದಿರ್ಪುದೇಕೆ

ಮ || ನೆಱನಂ ದುಷ್ಕೃತಮೆಂಬ ಜೇನನೊೞಮೇಂ ಪಾಯ್ದೂಱವೇ ಬಂದು ಬೆ
ಳ್ಕುಱೆ ದುಃಖಜ್ವಲನಾರ್ಚಿಗಳ್ ಬಳಸಿಯುಂ ತಳ್ತೞ್ವಿವೇ ಪೊಯ್ವ ಸಾ
ವಱೆಗಳ್ ಬೆರ್ಚದೆ ತೀಡವೇ ಕಿವಿಗಳೊಳ್ ದುರ್ಮೋಹ ನಿದ್ರಾಪ್ತಿಯಿಂ
ದೊಱಗಿರ್ದುಂ ಮಗುೞ್ದಿನ್ನು ಮೆೞ್ವುಱದುದೇನೊಳ್ಳಿತ್ತೆ ಪೇೞ್ ಜೀವನೇ  ೧೪

ವ || ದುಃಖಾವಸ್ಥೆಗಳಂ ಬಗೆಯದೆ ದುರ್ಮೋಹದೊಳಿರ್ಪೊಡಮೆಂತುಮೆೞ್ಚಱದ ನಿದ್ರೆಯೊಳಿರ್ಪೊಡಮದಂ ಕೇಡೆನ್ನದೆಯುಮಿದಂ ಸಾವೆನ್ನದೆಯುಂ ಪೆಱತೇನೆಂಬುದೋ

ಕಂ || ಎನಿತಂ ವಸ್ತುಗಳಂ ನೀ
ನನುಭವಿಸಿದೆಯಕ್ಕುಮಪ್ಪೊಡಂ ತಣಿವುಂಟೇ
ಘನ ಮೋಹರಿಪುವನೋಡಿಸಿ
ವಿನುತ ಜಯಧ್ವಜಮನೆೞೆದುಕೊಳ್ಳದೊಡಿಲ್ಲಂ  ೧೫

ವ || ಎನಿತು ಪರಬಲಮನಿಱಿದೊಡಂ ನಾಯಕನನಿಕ್ಕಿದೊಡಲ್ಲದೆ ಗೆಲ್ಲಮಿಲ್ಲದಂತೆನಿತು ವಸ್ತುಗಳನನುಭವಿಸಿದೊಡಂ ಮೋಹಮಂ ಬಿಸುಡಲ್ಲದೆ ತಣಿವಿಲ್ಲಮೇಕೆನೆ

ಚಂ || ಬಡತನಮುಳ್ಳವರ್ ಮಱುಗುವರ್ ಧನಮಂ ಪಡೆಯಲ್ಕೆ ಸೇದೆಯಿಂ
ಪಡೆದವರುಂ ಕರಂ ಮಱುಗುವರ್ ತಣಿವಿಲ್ಲದೆ ನೆಟ್ಟನುಳ್ಳರುಂ
ಬಡವರುಮಲ್ಲದಿಲ್ಲ ಮನುಜರ್ ಸುಖಮಾರೊಳಮೆಂತುವಿಲ್ಲ ಮೆ
ೞ್ಪಡದಿರಿಮೊಳ್ಳಿಕೆಯ್ದು ಪಡೆಯಿಂ ಸುಖಮಂ ಪೆಱತೇಂ ಪರತ್ರೆಯೊಳ್  ೧೬

ವ || ಬಡವನೊಡೆಯನೆಂಬಿರ್ವರೊಳಂ ಸುಖಮಿಲ್ಲದೊಡಂ ಆಸಡಿ ಸುಗ್ಗಿಯೆಂಬೆರಡುಂ ಕಾಲದೊಳಮೊಕ್ಕಲ್ಗುಣಲಿಲ್ಲದೊಡಮೇಕಲ್ಲಿ ಸುಖಮನಾಸೆವಡುವುದೇಕಾರಣ ಮಾರಂಬಂಗೆಯ್ವುದು ಮತ್ತಮಿಂತು

ಕಂ || ಒಡೆಯಂ ತಣಿಯದೆ ಮಱುಗುವ
ನೊಡೆಯನನಳಿಪೊದವೆ ಬೇಡುವಂ ಪಡೆಯದೆ ತಾಂ
ಕಡುನೋವನಿರ್ವರಲ್ಲಿಯು
ಮಡರಿಸಿತೞಲರ್ಥಮೇವುದೆಂಬರ್ ಸುಖಿಗಳ್  ೧೭

ವ || ಪುಟ್ಟಿದೆಡೆಯುಮಂ ಪೊರ್ದಿದೆಡೆಯುಮಂ ಸುಡುವ ಕಿಚ್ಚಂ ಗೆಂಟುಮಾಡುವಂತರ್ಥಮಂ ಗೆಂಟುಮಾಡಿದನೆ ಸುಖಿ ನೀಮೆಂತುಮಿಲ್ಲಿ ಮೆೞ್ಪಡದಿರಿಂ

ಚಂ || ಮನಸಿಜನೆಂಬ ಬೇಡರಸನೀ ಖಳಸಂಸೃತಿಯೆಂಬುದೊಂದು ಕಾ
ಪಿನೊಳಬಳಾಂಗಮೆಂಬುೞಿಯೊಳಿರ್ದಖಿಳೇಂದ್ರಿಯಮೆಂಬ ಬೇಡರಿಂ
ಮನದೞಲೆಂಬ ಕಿರ್ಚನಿಡಿಸುತ್ತಿರದಾರ್ದಿಸುವಾಗಳೀ ಜಗ
ಜ್ಜನತತಿಯೆಂಬ ಬೆಳ್ಮಿಗವೇಂ ಗೞ ಸಾಯದೆ ಪೋಗಲಾರ್ಕುಮೇ  ೧೮

ವ || ಕಿರಾತರಾಜನ ಬೇಂಟೆಗೊಳಗಾದ ಬೆಳ್ಮಿಗಮುಂ ಕಾಮದೇವನ ಬಸಮಾದ ಮಾನಸರುಮಾತನ ಮೊನೆಯಂಬು ತಾಂಗೆಯುಮಿತನ ನನೆಯಂಬು ತಾಂಗೆಯುಂ ಸತ್ತವು ಕೆಟ್ಟರೆಂಬುದೇವಿರಿದದೇಕೆ ಮೋಹಿಸುತಿರ್ಪೈ ಮೋಹಾಗ್ನಿಯಳವಮಿನ್ನುಮಱಿಯಾ

ಕಂ || ಪೆರ್ಚುವುದು ಪುಳ್ಳಿಯಿಂದಂ
ಬರ್ಚುವುದದು ಕುಂದೆ ಕಿರ್ಚು ಮೋಹಾಗ್ನಿ ಕರಂ
ಪೆರ್ಚುವುದರ್ಥಂ ಬರೆಯುಂ
ಪೆರ್ಚುವುದದು ಬಾರದಿರೆಯುಮೇಂ ವಿಸ್ಮಯಮೋ   ೧೯

ವ || ಕಿರ್ಚಿಂಗಂ ಮೋಹಾಗ್ನಿಗಮಾವುದಂತರಮೆಂಬೆಯಾ ಕಿರ್ಚು ಪುಳ್ಳಿಯುಳ್ಳಾಗಳ್ ಪೆರ್ಚುವುದದಿಲ್ಲದಡೆ ಕುಂದುವುದು ಮೋಹಾಗ್ನಿ ಧನಮುಳ್ಳೊಡಂ ಪೆರ್ಚುವುದದಿಲ್ಲದೊಡಂ ಪೆರ್ಚುವುದೆಂದತಿಮೋಹಮಂ ಬಿಸುಟ್ಟುದಾರ ಶಕ್ತಿಯೊಳ್ ನೆಗೞ್ವ ವಸ್ತುಪುರುಷರಿಂ ವಸ್ತುಗಳೇನಗ್ಗಳಮೆ

ಮ || ಪ್ರಿಯದೊಳ್ ಕೂಡಿದ ದಾನಿಯಿಂ ಮಿಗಿಲೆ ಪೇೞ್ ಕಲ್ಪಾಂಘ್ರಿಪಂ ಚಂದನಂ
ದಯೆಯಿಂ ತಣ್ಣಿತೆ ತಕ್ಕನಿಂದಮೃತಮೇಂ ಲೇಸೇ ವಿಷಂ ದುಷ್ಟನಾ
ಶ್ರಯದಿಂದುಗ್ರಮೆ ಬೇಡಿ ಬಾೞ್ವ ನರನಿಂ ಪುಲ್ ನೊಚ್ಚಿತೇ ಮಾನುಷ
ಕ್ರಿಯೆಯಿಂದಪ್ಪ ಮಹೇಂದ್ರಜಾಲಮದುವೀ ಸಂಸಾರದಿಂ ಚೋದ್ಯಮೇ  ೨೦

ವ || ಈ ವಸ್ತುವಿಂದಂ ಮಾಡುಗುಮಿ ವಸ್ತುವಿಂದಂ ಕಿಡಿಸುಗುಮೆಂದೆರಡಱಂತರಮನಱಿದು ನೆಗೞ್ವುದು ಕೆಮ್ಮನಿರವೇಡಾ

ಕಂ || ಏಕಱನನುಱದೆ ನೆಗೞ್ದಪೆ
ಯೇಕೆಱಗುವೆಯೞಿಸುಖಕ್ಕೆ ಶಾಶ್ವತಮಿರ್ಪಂ
ತೇಕೆ ಬೆಸೆದಿರ್ಪೆಯಾರುಮ
ನೇಕೞಲಿಪೆಯೇಕೆ ನಂಬುವಯ್ ಸಂಸೃತಿಯಂ  ೨೧

ವ || ಠಕ್ಕನಂ ನಂಬಿ ಬಟ್ಟೆವೋಪೊಡಂ ಸಂಸಾರಮಂ ನಂಬಿ ಮೆಚ್ಚಿದಂತೆ ಪಾಪದೊಳ್ ನೆಗೞ್ದೊಡಮಾತಂಗಮಿತಂಗಮೊಳ್ಳಿತ್ತಾಗದೆಂದು ಬಗೆದೊಳ್ಗುಣಂಗಳನೆ ಕೆಯ್ಕೊಂಡು ನೆಗೞ್ವುದಿಂ ಭ್ರಾಂತಿಸಲ್ವೇಡಾ

ಚಂ || ಅಱಿಯಮೆಯಾಯ್ತು ಕೂಸುತನದೊಳ್ ಪೊಸ ಜವ್ವನದಲ್ಲಿ ಪೆಂಡಿರ
ತ್ತೆಱಗುವುದಾಯ್ತು ಮಧ್ಯಮದೊಳರ್ಥಮನಾರ್ಜಿಪುದಾಯ್ತು ಮುಪ್ಪಿನೊಳ್
ನೆಱೆಯದ ಶಕ್ತಿಯಾಯ್ತು ಮನುಜತ್ವದೊಳೆಲ್ಲಿ ಯುಮೊಳ್ಳಿತಪ್ಪುದೊಂ
ರಱೆಕೆಯನಪ್ಪುಕೆಯ್ಯಲೆಡೆಯಿಲ್ಲೆ ಮಗೆಂದೊಡೆ ಕೆಟ್ಟುಪೋಗರೇ  ೨೨

ವ || ಸಮುದ್ರದೊಳ್ ಮಿಯಲೆಂದು ಪೋಪಾತಂ ತೆರೆಯಡಂಗಿದಾಗಳ್ ಮಿವೆನೆಂದಿ ರ್ದೊಡಂ ಸಂಸಾರದೊಳಗಿರ್ದಾತನಾಪತ್ತಿಲ್ಲದೆ ಪದುಳಮಾಗಿರ್ದಾಗಳ್ ಧರ್ಮಂಗೆಯ್ವೆ ನೆಂದಿರ್ದೊಡಂ ಆತಂಗೆ ಮಿವುದಿಲ್ಲ ಮಿತಂಗೆ ಧರ್ಮಂಗೆಯ್ವುದುಮಿಲ್ಲದೆ ತಡೆದಿರ್ಪಂತು ಸಂಸಾರಮೇಕಸ್ಥಿತಿಯೆ

ಕಂ || ಕಡುಗೆಳೆಯನೊಂದು ಭವದೊಳ್
ಕಡುವಗೆಯುಂ ತಾನೆಯಾಗಿ ಕೊಲಲೆಂದಿರ್ಕುಂ
ಕಡುಚೆಲ್ವನುಮೊಂದೆಡೆಯೊಳ್
ಕಡುಕಿಸುಗುಳನಾಗಿ ಪುಟ್ಟುಗುಂ ಸಂಸೃತಿಯೊಳ್  ೨೩

ವ || ಅಂತುಮಲ್ಲದೆಯುಂ

ಉ || ನಾರಕನಪ್ಪುದೊಂದೆಡೆಯೊಳೊಂದೆಡೆಯೊಳ್ ಕೃತಪುಣ್ಯಬಂಧದಿಂ
ಚಾರುಗುಣಾಮರಾಧಿಪತಿಯಪ್ಪುದು ದೇಸಿಗನಪ್ಪುದೊಂದು ಸೂೞ್
ಧಾರಿಣಿಗೀಶನಪ್ಪುದಿರದೊಂದೆಡೆಯೊಳ್ ಮಗುೞ್ದೊರ್ಮೆ ಕರ್ಮದಿಂ
ಕಾರುಗನಪ್ಪುದೊಂದೆಡೆಯೊಳುತ್ತಮ ಜಾತಿಯುಮಾಗಿ ಪುಟ್ಟುಗುಂ  ೨೪

ವ || ಅಂತಾಗಿಯುಮಿರದೆ

ಕಂ || ಮಗನಕ್ಕುಮೊಂದು ಭವದೊಳ್
ಮಗನುಂ ಬೞಿಕೊರ್ಮೆ ತಂದೆಯಕ್ಕುಂ ಮತ್ತಂ
ಮಗನಕ್ಕುಮೊರ್ಮೆ ಮಗಳುಂ
ಮಗುೞ್ದು ಭವಾಂತರದೊಳೊರ್ಮೆ ಪೆಂಡತಿಯಕ್ಕುಂ   ೨೫

ವ || ಇಂತಪ್ಪವಸ್ಥಾಂತರದೊಳ್ ನಿಲ್ಲದೆ ಮತ್ತಂ

ಚಂ || ಮದಕರಿಯಪ್ಪುದೊಂದೆಡೆಯೊಳೊಂದೆಡೆಯೊಳ್ ನರಿಯಪ್ಪುದೊಂದು ಜ
ನ್ಮ ದೊಳೞಿನಾಯುಮಪ್ಪುದಿರದೊಂದೆಡೆಯೊಳ್ ಮೃಗರಾಜರೂಪನ
ಪ್ಪುದು ತೃಣಮಪ್ಪುದೊಂದೆಡೆಯೊಳೊಂದೆಡೆಯೊಳ್ ಕ್ರಿಮಿಯಪ್ಪುದಿಂತು ಪಾ
ಪದ ಫಲದಿಂ ತೊೞಲ್ತರುತುಮಿರ್ಪುದು ಜೀವನನೇಕರೂಪದಿಂ  ೨೬

ವ || ಮತ್ತಮೆಂತುಂ ಮಾಣದೆಯುಂ
ಕಂ || ಒಂದೆಡೆಯೊಳ್ ಮರುಳಾಗಿಯು
ವೊಂದೆಡೆಯೊಳ್ ಬುದ್ಧಿಗೊಡೆಯನಾಗಿಯುವಿರದೋ
ರೊಂದೆಡೆಯೊಳ್ ಕಲಿಯಾಗಿಯು
ಮೊಂದೆಡೆತೊಳ್ ಪಂದೆಯಾಗಿಯುಂ ತಿರಿತರ್ಕುಂ  ೨೭

ವ || ಇಂತು ಭವಾಂತರದೊಳೆಂತಪ್ಪವರುಮಂತಾಗದೊಂದೇ ಭವದೊಳ್ ವಿಪರೀತ ಸಂಬಂಧಮಾದ ಕಥೆಯಂ ಪೇೞ್ವೆನದೆಂತೆನೆ

 

ವಸಂತತಿಲಕೆಯೆಂಬ ವೇಶ್ಯೆಯ ಕಥೆ

ಕಂ || ಅಲಘುತರ ವಸ್ತು ವಿಸ್ತೃತ
ಮಲಂಘ್ಯಮುಜ್ಜೇನಿಯೆಂಬ ಪೊೞಲಾ ಪೊೞಲೊಳ್
ವಿಲಸತ್ ಶ್ರೀಯುತ ಗಣಿಕಾ
ಕುಲತಿಲಕೆ ವಸಂತತಿಲಕೆಯೆಂಬಳ್ ಪೆಸರಿಂ  ೨೮

ವ || ಆಕೆಗೆ ನವಯವ್ವನದ ಭಾಗ್ಯದ ಗರ್ವದ ಮೇಲೆ ಗರ್ಭಮಾದಾಗಳಾಗರ್ಭದೊಳ್ ಗರ್ವಂಗೆಟ್ಟು ಬಡಪಟ್ಟು ಕಂದಿಕುಂದಿ ಕೆರಂಕುಂ ತುಱಿಯುಮಾಗೆ ವಿಳಾಸಂ ಪೋಗೆ ಮೆಯ್ ಪೊಲಸುನಾಱೆ ಸೊಬಗು ಪಾಱೆ ಕಂಡರ್ ಪೇಸುವಂತಾದೊಡೀ ಬಸಿಱ ಕೊಸೆನ್ನ ಪಗೆಯಕ್ಕುಮಾದೊಡಮೇನೆಂದಿರ್ದು ನವಮಾಸಂ ನೆಱೆದು ಗಂಡು ಪೆಣ್ಣುಮಪ್ಪಮಳ್ಗಳಂ ಪೆತ್ತಾರಳಿವರ್ವರ್ ತೊೞ್ತಿರಂ ಕತೆದು ನೀಮಿರ್ಬರುಮಿಯೆರಡು ಕೂಸುಗಳನೆರಡುಂ ದೆಸೆಯೊಳೀಡಾಡಿ ಬನ್ನಿಮೆಂದೊಡವಂದಿರಂತೆಗೆಯ್ವುಮೆಂದು ಕೊಂಡುಪೋಗಿ ಪೊೞಲ ಪೊಱಗೆ ಮೂಡಣ ದೆಸೆಯೊಳೊಂದಂ ಪಡುವಣ ದೆಸೆಯೊಳೊಂದಂ ಬಿಸುಟ್ಟು ಬಂದರನ್ನೆಗಂ

ಉ || ತೆಂಕಣಿನಾ ಪುರಕ್ಕೆ ಪರದರ್ ನರದೇವ ಕುಬೇರಕಾಂತ ನಾ
ಮಾಂಕಿತರೞ್ತಿಯಿಂ ಪರದುವಂದು ಮಹಾಧನರಾಗಿ ಮತ್ತೆಯುಂ
ತೆಂಕಲೆ ಪೋಗಲಿರ್ದರುಮೆರೞ್ದೆಸೆಯೊಳ್ ಪೊಱವೀಡುವಿಟ್ಟು ತ
ಮ್ಮಂ ಕರಮಾಸೆವಟ್ಟೊಡನೆ ಬರ್ಪರುಮಿರ್ಪಿನಮಿರ್ದರಿರ್ಪಿನಂ  ೨೯

ವ || ಮೂಡಣ ದೆಸೆಯೊಳ್ ಬಿಟ್ಟಿರ್ದ ಕುಬೇರಕಾಂತನ ತೊೞ್ತಿರತ್ತಿತ್ತ ಪೋಪರೊಂದು ಗಿಡುವಿನಡಿಯೊಳ್ ಪೆಣ್ಗೂಸಂ ಕಡೆತ್ತಿಕೊಂಡು ಪೋಗಿ ತಮ್ಮ ಸೆಟ್ಟಿಗೆ ತೋಱಿ ದೊಡರ್ತಿಯೊಳೆತ್ತಿಕೊಂಡು ಕಮಳೆಯೆಂದು ಪೆಸರಿಟ್ಟು ನಡೆಪುತ್ತುಂ ಪಯಣಂಬೋದರಿತ್ತ ಪಡುವಣ ದೆಸೆಯೊಳ್ ಬಿಟ್ಟಿರ್ದ ನರದೇವನ ಮನೆಯ ದಾಸಿಯೊರ್ವಳಾ ಗಂಡುಗೂಸಂ ಕಂಡೆತ್ತಿಕೊಂಡುಪೋಗಿ ತಮ್ಮ ಸೆಟ್ಟಿಗೆ ಕೊಟ್ಟೊಡರ್ತಿಯೊಳ್ ಧನದೇವನೆಂದು ಪೆಸರನಿಟ್ಟು ನಡೆಪುತ್ತುಂ ಪಯಣಂಬೋಗಿ ದಕ್ಷಿಣ ಮಧುರೆಯನೆಯ್ದಿ ಸುಖಮಿರ್ದನಾ ಕುಬೇರಕಾಂತನುಂ ಪಲದೆವಸಕ್ಕಾ ಪೊೞಲ್ಗೆವಂದಿರ್ದನಂತಿರ್ದು ಕೆಲವಾನುದೆವಸದಿಂ ನರದೇವಂ ತನ್ನ ಮಗನಪ್ಪ ಧನದೇವಂ ಯೌವನನಾದೊಡಾತಂಗೆ

ಕಂ || ಅನುಪಮ ಕುಬೇರಕಾಂತನ
ತನೂಜೆಯಂ ಕಮಳೆಯೆಂಬಳಂ ಬೇಡಿ ಕರಂ
ಮನಮೊಸೆದು ಮಾಡಿ ಮದುವೆಯ
ನನುನಯದಿನವರ್ಗೆ ಬೇಱೆ ಮೊದಲಂ ಕೊಟ್ಟಂ  ೩೦

ವ || ಅಂತು ಕೊಟ್ಟ ಬೇಱೊಂದು ಮನೆಯೊಳಿರಿಸಿ ತಾಂ ಜಲಯಾತ್ರೆ ಪೋದಡೆ ಧನದೇವಂ ಕಮಳೆಯೊಡನತಿಸ್ನೇಹಿತನಾಗಿ ಪುರುವಾೞುತ್ತುಮಿರ್ದೊಂದು ದೆವಸಮೆಮ್ಮಯ್ಯನಿತ್ತುದ ನಾನೆನಿತುಕಾಲಮನುಭವಿಸುವೆನಾನುಂ ಪರದುಪೋದಪೆನೆಂದು ಆಕೆಯನಿರಿಸಿ ಬಡಗಲ್ ಮಾಱುವಂತಪ್ಪ ಬಂಡಮಂ ಕೊಂಡುತ್ತ ರಾಪಥಕ್ಕೆವಂದಂತೆ ತೊೞಲುತ್ತುಮುಜ್ಜೇನಿಯಂ ಪೊಕ್ಕು ಬಂಡಮಂ ಮಾಱಿ ಲಾಭಮಾದೊಡೆ ಮನದ ಪೆರ್ಚಿನೊಳಲ್ಲಿನ ಸೂೞೆ ಗೇರಿಯಂ ಪೊಕ್ಕು ನೋಡಿ ಮುನ್ನಿನಂತೆ ವಿಳಾಸಂಬೆತ್ತಿರ್ದ ವಸಂತತಿಳಕೆಯಂ ಕಂಡೊತ್ತೆಗೊಟ್ಟುನಿಂದು ವಲ್ಲಭನಾಗಿ ಪತ್ತಿ ಪತ್ತುವಿಡದೆ ಮಚ್ಚಿರ್ದನನ್ನೆಗಂ

ಕಂ || ಇತ್ತಲ್ ಕಮಳೆಯ ಗೃಹಕ
ತ್ಯುತ್ತಮ ಮುನಿ ಚರಿಗೆವಂದೊಡಾದರದಿಂದಾ
ವೃತ್ತ ಕುಚೆ ನಿಲಿಸಿದಾಗಳು
ದಾತ್ತಾವಧಿಬೋಧರಱಿದರಾಕೆಯ ತೆಱನಂ  ೩೧

ವ || ಅಱೆದು ನಿಲಲೊಲ್ಲದೆ ಮಗುೞ್ದುಪೋದೊಡೆ ಕಮಳೆ ಸಿಗ್ಗಾಗಿ ತನ್ನ ದೇಹಾರದೊಳಿರ್ದ ಕಂತಿಯಂ ಬೆಸಗೊಂಡೊಡೆ ಬಾ ನಾಮುಮವರನೆ ಪೋಗಿ ಬೆಸಗೊಳ್ವಮೆಂದೊಡ ಗೊಂಡುಪೋಗಿ ಭಟ್ಟಾರಕರಂ ಬಂಧಿಸಿ ಮುಂದೆ ಕುಳ್ಳಿರ್ದು ಭಟ್ಟಾರಾ ನಿಮ್ಮಡಿಯನಿಂದು ಕಮಳೆ ನಿಱಿಸಿದೊಡೇಕೆ ನಿಂದಿರಿಲ್ಲ ದನಮೊಘಂ ಬೆಸಸಿಮೆಂದೊಡೆ ಭಟ್ಟಾರಕರೆಂದರ್ ಈಯಬ್ಬೆಯುಮಿಯಬ್ಬೆಯಾಣ್ಮನುಮೊಡವುಟ್ಟಿದರಂತಾಗಿಯುಮಿಗಳಾಂತಂ ಪೋಗಿಯಜ್ಜೇನಿಯೊಳ್ ತಮ್ಮಬ್ಬೆಯಪ್ಪ ವಸಂತತಿಳಕೆಯೊಳಱಿಯದೆ ಪುದುವಾೞುತ್ತಿರ್ಪನಿಂತುಟಿವರ ಪಾಪದ ಫಲಮೆಂದಱಿದು ನಿಂದೆನಿಲ್ಲೆಂದು ತತ್‌ಪ್ರಪಂಚ ಮೆಲ್ಲಮಂ ತಿಳಿಯೆ ಪೆೞ್ದೊಡೆ ಕಮಳೆ ಬೆಱಗಾಗಿ ನಿರ್ವೇಗದಿಂದಮಾಗಳಂತೆ ತೊಱೆ ವೆನೆಂದೊಡೀಗಳ್ ಬೇಡ ನೀನುಮದಂ ಕರಂ ಕಂಡು ನಂಬಿದಿಂ ಬೞಿಯಂ ನಿಮ್ಮ ಬಗೆದುದಂ ಬಗೆಯಿಮೆನೆ ಈ ಮಾತಿಂಗೊಡಂಬಟ್ಟು ಮನೆಗೆವಂದು

ಚಂ || ತಲೆಗಿರಿದುಟ್ಟು ಕಾಸೆಯನೊಡಲ್ ಕುಸಿವಂತಿರೆ ನೋಂತು ಚಿತ್ತದೊಳ್
ಚಲಮನೊಡರ್ಚಿ ನೆಟ್ಟನೆನಗೆಯ್ದುದ ಪಾಪಮುಮಂ ಪ್ರಣೂತ ನಿ
ರ್ಮಲ ಮುನಿವಾಕ್ಯದಂದಮುಮನಾರಯದಿಂತಿರಲಾಗದೆಂ ಪೋ
ಗಲೆ ಸಮಕಟ್ಟಿ ಕಟ್ಟಿ ಮಣಿಯಂ ಗೊರವಬ್ಬೆಯ ವೇಷದೋಜೆಯಂ  ೩೨

ವ || ಕೆಯ್ಕೊಂಡು ಸೆಜ್ಜೆಯಂ ಪಿಡಿದು ಪೊೞಲಂ ಪೊಱಮಟ್ಟು ಕೆಲವಾನುಂ ದೆವಸದಿಂದುಜ್ಜೇನಿಯನೆಯ್ದಿ ವಸಂತತಿಲಕೆಯರಮನೆಯಂ ಬೆಸಗೊಂಡು ಪೋಗಿ ಮನೆಯಂ ಪೊಕ್ಕು ನೋೞ್ಪಾಗಳಾ ವಸಂತತಿಲಕೆಯುಂ ಧನದೇವನುಮೊಂದೆ ಮಂಚದೊಳ್ ಕುಳ್ಳಿರ್ದು ಎಲೆ ಗೊರವಬ್ಬಾಯೆಲ್ಲಿರ್ದು ಬಂದಿರೆಂದೊಡೆ ದೇಶಾಂತರದಿಂ ತೀರ್ಥಯಾತ್ರೆಗೆವಂದಿಲ್ಲಿ ನಿಮ್ಮ ಶ್ರೀಯ ಪೆಂಪಂ ಕೇಳ್ದೞ್ತಿಯಿಂ ನಿಮ್ಮಂ ನೋಡಲ್ ಬಂದೆನೆಂದೊಡೆ ಬನ್ನಿಂ ಕುಳ್ಳಿರಿಮೆಂದು ಮಣೆಯನಿಕ್ಕಿಸೆ ಕುಳ್ಳಿರ್ದಾ ಕಮಳೆಯಂ ಧನದೇವಂ ನೋಡಿ ಚೋದ್ಯಂಬಟ್ಟು ತಲೆಯಂ ತೂಗಿ ಕದಪಿನೊಳ್ ಕೆಯ್ಯಿಟ್ಟು ಬಾಯಂಬಿಟ್ಟು ಬೆಱಗಾಗಿರ್ಪನ್ನೆಗಮಾಯಿರ್ವರ್ಗಂ ಪುಟ್ಟಿರ್ದ ಗಂಡುಗೂಸವರ ಮುಂದೆ ತೊಟ್ಟಿಲೊಳ್ ಪಟ್ಟಿರ್ದೞುತ್ತುಮಿರೆ ಕಮಳೆ ಸೈರಿಸಲಾಱದೆೞ್ದುನಿಂದಾ ಕೂಸಂ ತೂಗುತ್ತುಮಿಂತೆಂದು ಪಾಡಿದಳ್

ಕಂ || ಜೋ ನೀಂ ಮಗನೇ ತಮ್ಮನೆ
ಜೀ ನೀನಳಿಯಮ್ಮ ಬೆಯ್ದುನಾ ಕಿಱಿಯಮ್ಮಾ
ಜೋ ನಿಮ್ಮಬ್ಬೆಗೆ ಮೊಮ್ಮನೆ
ಜೀ ನಿಮ್ಮಂಗೆ ತಮ್ಮನಪ್ಪನೆ ಜೋ ಜೋ  ೩೩

ಉ || ಜೋ ನಿನಗಾದ ತಾಯೆನಗೆ ತಾಯ್ವಿರುಮಕ್ಕನುಮತ್ತೆಯುಂ ದುರ
ಜ್ಞಾನದಿನೊಂದಿದತ್ತಿಗೆಯಮಾದಳಿದಬ್ಬೆಯ ಪಾಪದೊಳಿ ಜೋ
ಜೋ ನಿನಗಾದ ತಂದೆಯನಗಣ್ಣನುಮಾಣ್ಮನುಮಯ್ಯನಾದನಿಂ
ತಾನೆಯಿದಣ್ಣ ನಮ್ಮ ಕಡುಪಾಪದ ಬಂಧನಮಾಲ್ತೆ ಬಾಲಕಾ  ೩೪

ವ || ಎಂಬುದಂ ಕೇಳ್ದು ವಸಂತತಿಳಕೆಯುಂ ಧನದೇವನುಂ ಬೆಕ್ಕಸಮಾಗಿರ್ದಿರಲಾಱದೆ ಮಂಚದಿಂದಿೞಿದುಬಂದೆಲೆ ಗೊರವಬ್ಬಾ ಪೇೞಿದರಂತಮದೇನೆನೆ ನಿನ್ನ ಗರ್ಭಮಾದಂದು ಮೊದಲಿಂದುವರಮಾದವಸ್ಥಾಂತರಮನೆಲ್ಲ ಮನೆನಗೊರ್ವರ್ ದಿವ್ಯಜ್ಞಾನಿಗಳ್ ಪೇೞೆ ಕೇಳ್ದೆನಂತೆ ನಿಮ್ಮಲ್ಲಿಯುಂ ಕಂಡೆಂ ನೀಮೆಮ್ಮಬ್ಬೆ ವಸಂತತಿಳಕೆಯಯ್ ಆಂ ನಿಮ್ಮ ಮಗಳ್ ಕಮಳೆಯೆಮಿಯಿರ್ದ ಧನದೇವಂ ನಿಮ್ಮ ಮಗನೆಮ್ಮಣ್ಮನೀಗಳೆನಗಂ ನಿಮಗಮಾಣ್ಮನಾದನಿಂತಾಯ್ತು ನಮ್ಮ ಪಾಪದ ಫಲಮೆಂದೞ್ವುದಂ ಕಂಡವರುಂ ತಮ್ಮುಳ್ಳರ್ಥಮೆಲ್ಲಮಂ ದಾನಂಗೆಯ್ದು ಪೊಱಮಟ್ಟು ಬಂದು ಪೊೞಲೊಳಗಿರ್ದ ದಿವ್ಯಜ್ಞಾನಿಗಳ್ಗೆ ನಮೋಸ್ತು ಭಟ್ಟಾರಕಾ ಬೆಸಸಿಮೆಮಗೀ ಜನ್ಮದೊಳಿಂತಾದುದಾವ ಭವದ ಪಾತಕದ ಫಲಮೆನೆ ಭಟ್ಟಾರಕರಿಂತೆಂದರ್

ಕಂ || ಮುನ್ನಿನ ಭವದೊಳ್ ನೀಂ ವಿ
ಪ್ರೊನ್ನತ ಚೌವೇದನಾದೆಯಿವರ್ದಳುಮಂದುಂ
ನಿನ್ನ ತನಯರ್ಕಳಾಗಿ
ರ್ಪನ್ನೆವರಂ ಬಡಗನಾಡ ಮಧುರಾಪುರದೊಳ್  ೩೫

ವ || ವೈಶ್ಯಕುಲಪ್ರಧಾನಂ ಜಿನದತ್ತನೆಂಬಂ ಶ್ರಾವಕನಾತಂ ತನ್ನ ಮಗಂ ತಪಂಬಟ್ಟೊಡೆ ತಾನುಂ ತಪಂಬಟ್ಟಿರ್ವರುಂ ತೀರ್ಥಯಾತ್ರೆಗೆ ಪೋದೊಡಾತನ ಸೆಟ್ಟಿತಿಯುಂ ಸೊಸೆಯುಮಿರ್ವರುಂ ತಪಂಬಟ್ಟು ಪೋಗಿ ವಿಹಾರಿಸುತ್ತುಂ ಒಂದೂರೊಳೊಂದು ಬಸದಿಯೊಳಾ ರಿಷಿಯರಂ ಕಂಡು ವಂದಿಸಿ ಕುಳ್ಳಿರ್ದು ತಮ್ಮ ಮಗನಪ್ಪ ಕಿತ್ತಿಯ್ಯಂಗಳಂ ಸಾರೆ ಮುತ್ತಕಂತಿಯರ್ ಪೋಗಿ ಕ್ಷೇಮಕುಶಲಂಗಳಂ ನುಡಿಯುತ್ತು ಮಿರೆ ಸೊಸೆಯಪ್ಪೆಳವಜ್ಜಿಗಳುಂ ಮಾವಂಗಳಪ್ಪ ಮುತ್ತಭಟ್ಟಾರಕ ಸಾರೆಯಿರ್ದು ವಿನಯದಿನಾಳೋಚಿಸುತ್ತಿರೆಯುಂ ಮುಂ ಪೇೞ್ದ ಚೌವೇದನೆಂಬ ಪಾರ್ವಂ ತನ್ನ ಮಕ್ಕಳಪ್ಪಿರ್ವರ್ ಮಾಣಿಗಳುಂ ತಾನುಂ ವಾದಾರ್ಥದಿಂ ತೊೞಲುತ್ತಲ್ಲಿಗೆವಂದು ಋಷಿಯರ್ಕಳುಮಂ ಅಜ್ಜಿಯರ್ಕಳುಮಂ ಕಂಡು

ಕಂ || ನೋಡ ವಿಧಾತ್ರನ ಗೊಡ್ಡಮ
ನಾಡಿದುದಂ ಮುದು ಸವಣ್ತಿಯೊಳ್ ಕಿತ್ತಯಂ
ಕೂಡಿದನೆಳವಜ್ಜಿಯೊಳಂ
ಕೂಡಿದನಾ ಮುತ್ತ ಸವಣನುಂ ತಾನೆನುತುಂ  ೩೬

ವ || ಅಂತಾ ಮೂವರು ಮೇಡಿಸಿ ನಗುತ್ತುಂ ಪೋಗೆ ಕೆಲವಾನುಂ ದೆವಸದಿಂದ ಪಾರ್ವಂಗೆ ಕುಷ್ಠವ್ಯಾಧಿ ಪೆರ್ಷೆ ಸತ್ತಾ ಪಾಪದ ಫಲದಿಂ ನೀಂ ವಸಂತತಿಲಕೆಯಾಗಿ ಪುಟ್ಟಿದಯ್ ಆ ಮಾಣಿಯರಿರ್ವರುಮೊಂದು ತೊಱೆಯಂ ಪಾಯ್ವಲ್ಲಿ ಪಱುಗೋಲೞ್ದು ಸತ್ತು ನಿನಗೆ ಗಂಡು ಪೆಣ್ಣುಮಪ್ಪಮಳ್ಗಳಾಗಿ ಪುಟ್ಟಿದಂದಿರ್ವರುಮಂ ನೀಂ ಬಿಸುಟ್ಟೊಡಿರ್ವರ್ ಪರದರ್ ಕೊಂದು ಪೋಗಿ ಧನದೇವನುಂ ಕಮಳೆಯುಮೆಂದು ಪೆಸರನಿಟ್ಟು ನಡಪುತ್ತುಂ ಬೇಱೆ ವೇಱೆ ಪಯಣಂಬೋಗಿ ತೆಂಕನಾಡೊಳೊರ್ಬುಳಿಯಾಗಿರ್ದೆಡೆಯೊಳಿರ್ವರ್ಗಂ ಮದುವೆಯಂ ಮಾಡಿದರೀತನುಂ ಪರದುವಂದು ನಿಮ್ಮೊಳಱಿಯದೆ ಪುದು ವಾೞ್ವಂತಾಯ್ತಿಂತೀ ಮೂವರುಂ ಮುನ್ನಿನ ಭವದೊಳ್ ಮಹಾಗುಣವಂತಂ ಪೞಿದ ಪಾಪದ ಫಲದಿನಿಂತಾದರೆನೆ ಕೇಳ್ದು ವಸಂತತಿಳಕೆಯುಮವಧಿಜ್ಞಾನಿಗಳ ವಚನಮಂ ತಮ್ಮ ನೆಗೞ್ತೆಯಂದಮುಮೊಂದಾದುದಂ ಕಂಡು ನಂಬಿ ಮನೆಯುಮಂ ಶಿಶುವುಮಂ ಕ್ರಮದವರ್ಗೆ ಕೊಟ್ಟು ಬೇಱೆವೇಱೆ ಪೋಗಿ ತಪಂಬಟ್ಟು ಶುಭಧ್ಯಾನದಿಂ ಮುಡಿಪಿ ಸುಗತಿವಡೆದರೆಂಬೀ ಕಥೆಯಂ ಜೀವಾ ನೀನವಧಾರಿಸಿ ಸಂಸಾರಕ್ಕೆ ಬೆರ್ಚಿ ಶುಭಪರಿಣಾಮದೊಳ್ ನೆಗೞ್ವುದು

ರಗಳೆ || ಒಂದೆ ಭವದೊಳಗಿಂತು | ಬಂದುದಘಮೇಂ ಭ್ರಾಂತು
ಪರಿಣಾಮವಶಮಾಗಿ | ನೆರಪಿದಘದಿಂ ಪೋಗಿ
ಪುಟ್ಟಿದ ಭವಾಂತರದ | ಕಟ್ಟಿಸಿದ ಮಹಾಂತರದ
ಯೋನಿಫಲವಾದುವಂ | ಸ್ಥಾನದ ವಿಭೇದವಂ
ಎಸಕದುದ್ರೇಕಮಂ | ಪೆಸರ್ಗಳನನೇಕಮಂ
ಗೋತ್ರಭೇದಂಗಳಂ | ಕ್ಷೇತ್ರ ಭೇದಂಗಳಂ
ಮೊಱೆಯ ವಿಪರೀತಮಂ | ಅಱಿವಿನ ವಿಘಾತಮಂ
ಕೀೞೆ ಮೇಲುಪ್ಪುದುಂ | ಪಾೞಿ ಪಗೆಯಪ್ಪುದುಂ
ಕುಲಮಕುಲಮಪ್ಪುದುಂ | ಬಲಮಬಲಮಪ್ಪುದುಂ
ಒಡೆಯರೞಿವಂದಮಂ | ಬಡವರೊಗೆವಂದಮಂ
ಕಳೆಯೆ ಪಗೆಯಪ್ಪುದುಂ | ಮುಳಿಸೊಸಗೆಯಪ್ಪುದುಂ
ಕೇಡೆ ಪೆರ್ಚಪ್ಪುದುಂ | ಮುಳಿಸೊಸಗೆಯಪ್ಪುದುಂ
ಅರಸಿ ತೊೞ್ತಪ್ಪುದುಂ | ಸುರುಳಿ ಸುಖಿಯಪ್ಪುದುಂ
ನೆನೆದೊಡೀ ಸಂಸಾರ | ಮೆನಿತಾನುಮಾಕಾರಂ  ೩೭

ಕಂ || ಸಾರಮಣಮಿಲ್ಲದೀ ಸಂ
ಸಾರದೊಳತಿಘೋರದೊಳ್ ಗಭೀರದೊಳುಗ್ರಾ
ಕಾರದೊಳುಂಟೊಂದೆನಗಾ
ಧಾರಂ ಜಿನಧರ್ಮವೊಂದೆ ಬಗೆ ನೀಂ ಜೀವಾ  ೩೮

ವ || ಮಹಾಸಮುದ್ರದೊಳಗಾದಾತಂಗೆ ಭೈತ್ರಂ ದೊರೆಕೊಂಡೊಡಂ ಮನುಷ್ಯ
ಲೋಕದೊಳೆಂತಾನುಂ ಧರ್ಮಂ ದೊರೆಕೊಂಡೊಡಮದನುದಾಸೀನಂಗೆಯ್ಯದಿರಿಂ ಮತ್ತಂ

ಚಂ || ನರಕದೊಳುಂಟೆ ದಿವ್ಯ ನಿಳಯಂಗಳೊಳುಂಟೆ ಬಹುಪ್ರಕಾರದಿಂ
ತಿರಿಕದೊಳುಂಟೆ ಕುತ್ಸಿಕ ಕುಭೂಮಿಯೊಳುಂಟೆ ಕುಮಾನುಷಾಲಯಾಂ
ತರದೊಳಗುಂಟೆ ಪಾಪಹರಮಾಗುವ ಧರ್ಮಮದಿಲ್ಲಿ ಸೈಪಿನಿಂ
ದೊರೆಕೊಳೆ ಗೆಂಟುಮಾಡಿದೊಡೆ ಜೀವನೆ ಮತ್ತಮದೇಂ ಸುಸಾಧ್ಯಮೇ  ೩೯

ಗದ್ಯ || ಇದು ಜಿನಶಾಸನ ಪ್ರಭಾಸನ ಶೀಲೋದಿತ ವಿದಿತ ಬಂಧುವರ್ಮ ನಿರ್ಮಿತಮಪ್ಪ ಜೀವಸಂಭೋದನಾ ಗ್ರಂಥಾವತಾರದೊಳ್ ಸಂಸಾರಾನುಪ್ರೇಕ್ಷಾನಿರೂಪಣಂ ವಸಂತತಿಲಕಾ ಕಥಾವರ್ಣನಂ

ಪಂಚಮಾಧಿಕಾರಂ