. ಅಶುಚಿತ್ವಾನುಪ್ರೇಕ್ಷೆ

ಕಂ || ಅೞಿವುದು ಪೊರ್ದಿದುಂ ಪೆಱ
ಗುೞಿವುದು ನೀಂ ಪೋಗೆ ದುಃಖಮಂ ನಿನಗೆಂತುಂ
ಘೞಿಯಿಸುವುದುಶುಚಿ ನೀನೀ
ಕೋೞೆಯೊಡಲಂ ಮುಚ್ಚಿದಂದಮಾವುದೊ ಜೀವಾ  ೧

ವ || ತೆಂಟುಮಾಡಲ್ಕೆ ತಕ್ಕ ಪೊಲ್ಲಮೆಗಳುಮನೇವಯ್ಸಲ್ಕೆ ನೆವಮಪ್ಪುಕೆಯ್ವುದುಮಂ ಮುಳಿಯಲ್ಕೆ ಕಾರಣಮಪ್ಪ ಪಗೆಯುಮಂ ಪೇಸುಗೆಯಂ ಮಾೞ್ಪ ಕಿಸುಗುಳಮುಮನೀ ಮೆಯ್ಯೊಳೊಂದಱೊಳಿನಿತುಮಂ ಕಂಡಗ್ಗಲಿಸಿಯೇೞಿಸಿ ಮೆಯ್ಮಱೆದಿರ್ಪಿರೆಂಬುದೇಕೆ

ಮ || ಅಱಿವಂ ಪೊರ್ದದ ಬಾಲಕಾಲಮೆ ಮೊದಲ್ ಸಂಕ್ಲೇಶ ಚಿಂತಾದಿಗಳ್
ತಱುಗಿರ್ದಲ್ಲಿಯ ಗಂಟುಗಳ್ ವಿಷಯಮಂ ಪೊರ್ದಿರ್ದ ಮುಪ್ಪುಗ್ರಮ
ಳ್ಳಿಱಿಯುತ್ತೊತ್ತುವ ಕುತ್ತಮೆಂಬ ಪುೞುಗಳ್ ಕೊಂಡಿರ್ದ ಮೆಯ್ಯೆಂಬ ಕ
ರ್ವಱಿವಂಗೀ ಭವಕಲ್ತು ಬಿತ್ತು ಮಱುಮೆಯ್ದಂತೇವುದೇ ಭಂಡಮೋ  ೨

ವ || ಪುೞಿತ ಕರ್ವಿನ ಮೊದಲ್ ತಿನಲೊಳ್ಳಿತಲ್ತು ಬಿತ್ತಿಂಗೊಳ್ಳಿತ್ತು ಮನುಷ್ಯರ ಮೆಯ್ ಸುಖದನುಭವಣೆಗೊಳ್ಳಿತಲ್ತು ಸುಗತಿವಡೆಯಲೊಳ್ಳಿತ್ತೆಂಬ ಬಗೆಯೊಳ್ ನೆಗೞ್ವುದಂತುಮಲ್ಲದೆಯುಂ ಮತ್ತಂ

ಕಂ || ಬರ್ದುವುದುಂ ಭವಜಳಧಿಯೊ
ಳರ್ದುವುದುಂ ದುಃಖದಿಂದೆ ನೆಗೆದುರಿಯುರಿಯಂ
ಪೊರ್ದುವುದುಂ ಮೆಯ್ಯಂ ಮ
ಚ್ಚಿರ್ದಿರವಿದು ಮುಚ್ಚುವಂತೆ ಕುಱಿ ತಿಂಬವರಂ  ೩

ವ || ತಿಂಬವರನಱಿಯದೆಯುಮವರ್ಗೆ ತಾಂ ನೆಱೆಯದೆಯುಂ ಮಚ್ಚಿರ್ದ ಕುಱಿಗದೇಂ ದೋಷಂ ಸುಖಮಂ ಮಾೞ್ಪ ನರನೆ ಕಿಡಿಸುವೀ ಮೆಯ್ಯ ಪೊಲ್ಲಮೆಯನಱಿದುಂ ನೆಱೆದುಂ ಮತ್ತದನೆ ಮುಚ್ಚುವ ಜೀವಾ ನಿನ್ನದಲ್ತೆ ದೋಷಂ

ಉ || ಪೊಲ್ಲಮೆಯೆಲ್ಲಮೊಂದುರುಳಿಗೊಂಡವೊಲಾದೊಡಲೊಳ್ ಕಡಂಗಿ ಪೆಂ
ಪೆಲ್ಲಮಡಂಗಿ ನಿನ್ನಿರವಿದೇ ಗೞ ಧರ್ಮದ ರಾಗಮೊಂದಿದಂ
ದೆಲ್ಲಿಗಮಗ್ಗಳಂ ನೆಗೞಿಮೆಂತೆನೆ ಕೞ್ತಲೆ ಪಿಂಗೆ ಸಂಜೆಯಾ
ದಲ್ಲಿಯ ರಾಗದೊಳ್ ಪೊರೆವ ಭಾಸ್ಕರನಂತೆ ಬೆಳಪ್ಪಿರೆಲ್ಲಿಗಂ  ೪

ವ || ಪೊಲ್ಲಮೆಯೊಳಡಂಗಿ ಕಿಡದೆ ಧರ್ಮಾನುರಾಗಿಯಪ್ಪುದಂತಾದೊಡೆ ಕೞ್ತಲೆಯ ಪೋಗಿನ ಕಿಸುಸಂಜೆಯೊಳೆ ರಾಗಿಯಾದಾದಿತ್ತಯನಂತೆ ಬೆಳಗುವಿರಂತಲ್ಲದೊಡೆ

ಕಂ || ಉಡುಗುತೆ ಬೆಳಗಂ ಸಂಜೆಯ
ಕಡುರಾಗದೊಳೊಂದಿ ಭಾನು ರಸೆಗಿೞಿವಂತೊ
ಳ್ಪೊಡವೞಿಯೆ ಪಾಪರಾಗದೊ
ಳೊಡಗೂಡಿದಾನಾೞ್ಗು ಮುಗ್ರ ನರಕಾರ್ಣವದೊಳ್  ೫

ವ || ಪಗಲ ಪೋಗಿನೊಳೆ ರಾಗಿಯಾಗಿ ರಸೆಗಿೞಿವಾದಿತ್ಯನಂತೆ ಗುಣದ ಕೇಡಿನೊಳ್
ಪಾಪನುರಾಗಿಯಾದಾತಂ ನರಕಕ್ಕಿೞಿಗುಮೆಂಬುದಂ ಬಗೆಯೆ ನೀಂ ವಿಪರೀತ ಚಿತ್ತನಾದೆಯಕ್ಕುಂ

ಮ || ಮೊಲೆಯಂ ಪೊಂಗೊಡನೆಂದು ತಜ್ಜಘನಮಂ ಮತ್ತೆಭಕುಂಭಂಗಳೆಂ
ದಲರೆಂದಕ್ಷಿಯನಿಂದುವೆಂದು ಮೊಗಮಂ ಮೆಯ್ಯಂ ಲತಾವಲ್ಲಿಯೆಂ
ದೆಲೆ ನೀನಿಂತಬಲಾಂಗಮಂ ಶುಭಗುಣದ್ಯದ್ವಸ್ತುವಂ ಮಾಡಿಕೊಂ
ಡೊಲಿವೈ ಜೀವನೆ ಪೇೞನಂಗಮದದಿಂದಂ ಸೊರ್ಕಿದೈ ಮೊಕ್ಕಳಂ  ೬

ವ || ಮದ್ದುಗುಣಿಕೆಯಂ ತಿಂದು ಸೊರ್ಕಿದಾತಂಗೆ ಕಾಷ್ಠಲೋಷ್ಠಾದಿಗಳೆಲ್ಲಂ ಪೊಂಬಣ್ಣಮಾಗಿ ತೋರ್ಪಂತೆ ಕಾಮದೇವನ ಸೊರ್ಕುಕೊಂಡವರ್ಗಶುಭಂಗಳೆಲ್ಲಂ ಶುಭಂಗಳಾಗಿ ತೋರ್ಕುಮಾಗದೇ

ಕಂ || ಕಿಡುವುದು ತಾನುಂ ತನ್ನೊಳ್
ತೊಡರ್ದವರುಮನಂತೆ ಕಿಡಿಸುವೀಯೞಿಯೊಡಲಂ
ಕಡುಮೋಹದೆ ಮಚ್ಚಿರ್ದೊಡೆ
ಪಡೆವೈ ನೀಂ ಮಚ್ಚುವೆತ್ತ ಕಳ್ಳನ ಪಡೆಪಂ  ೭

ವ || ದುಃಖಮಂ ನಿನಗೆ ಮಾಡುವ ಮೆಯ್ಯಂ ಮುಚ್ಚುವುದುಂ ನಿನ್ನನೞಿಯಲೆಂದಿರ್ದುದಂ ಮಚ್ಚೆಂದು ಬಗೆದು ಬೇಗಂ ಬೆರ್ಚದೆಯುಂ ಗುಣಮನೊಡರ್ಚದೆಯುಮಿರ್ಪುದುಂ ಗಾವಿಲಿಕೆಯೆಂದಿಂತು ಮೆಯ್ಯ ಪೊಲ್ಲಮೆಯಂ ಪೇೞ್ದೆನದಱುಕ್ಕೆವಮಂ ಬಗೆಯಲಾಗದೆ

ಚಂ || ಒಡಲನೆ ಮುಚ್ಚಿ ಬೆರ್ಚಿ ಸುಗುಣಕ್ಕೆ ತೊಡರ್ಚಿ ಕಳತ್ರಬಂಧಮಂ
ಕಿಡಿಸಿ ನಿಜಸ್ವರೂಪದೞಿವಂ ಪಲವುಂ ಭವಮಿಂತು ಪೋದುವೆಂ
ದೊಡಲೊಡನೋಪೆನೆಂಬ ಬಗೆ ಬಂದುದೆ ಕೊರ್ಮೆಯೊಳೊರ್ಮೆ ಬೇಡ ಮೆ
ೞ್ಪಡದಿರು ನಂಬಿ ನೀ ಕಿಡದಿರುಕ್ಕೆವದಿಂ ಕಿಡಿಸಲ್ ತಗುಳ್ದದಂ  ೮

ವ || ಕಿರ್ಚಿನ ತಣ್ಪುಮಂ ಒಡಲ ನಣ್ಪುಮಂ ಒರ್ಮೆಯೊಪ್ಪೊಡಂ ಕಾಣದೆ ಬೇಳಾಗಿ ಮಚ್ಚುವೋ

ಕಂ || ಸಾವೆ ಪಿತೃ ಪುಟ್ಟೆ ತಾಯ್ ನಾ
ನಾ ವಿಧ ರುಜೆಗಳೆ ಸಹೋದರರ್ ಮುಪ್ಪೆಕರಂ
ಭಾವಿಸುವ ಕೆಳೆಯನಾಗಿರೆ
ಜೀವಾ ನೀಂ ನಚ್ಚಿ ಮಚ್ಚಿದೋ ನಿಜತನುವಂ   ೯

ವ || ಸಾವುಂ ಪುಟ್ಟುಂ ತಂದೆಯುಂ ತಾಯುಮಾಗೆ ಕುತ್ತಂಗಳ್ ಸಹೋದರರಾಗೆ ಮುಪ್ಪು ಕೆಳೆಯನಾಗೆ ಬಗೆದು ಮುಚ್ಚಿದೆಯಕ್ಕುಮಲ್ಲದೊಡೆ

ಉ || ತೊಟ್ಟನೆ ಪೋದ ಜವ್ವನದ ಪೋಗಿನೊಳಂ ಬಗೆದಿಲ್ಲ ಪೆಂಡಿರುಂ
ಪುಟ್ಟಿದ ಮಕ್ಕಳುಂ ನಿನಗೆ ಪೇಸಿದೊಡಂ ಮನದಲ್ಲಿ ಸಿಗ್ಗಣಂ
ಪುಟ್ಟಿದುದಿಲ್ಲ ಮೆಯ್ ಸಡಿಲೆ ಮೋಹದಳುರ್ಕೆ ಸಡಿಲ್ದುದಿಲ್ಲದೇಂ
ನೆಟ್ಟನೆ ಮಾಣ್ದುದೆಂದು ಬಗೆದೈ ಜವನಿಂ ಕೊನೆಯಿಂ ಜರಾವಿಳಾ  ೧೦

ವ || ಮುನ್ನಮಾದ ಪರ್ಯಾಯಂಗಳೞಿವಂ ಮುಪ್ಪಿನೊಳ್ ಕಂಡಾದೊಡಂ ನಂಬು ಜೀವಾ

ಕಂ || ಏಗೆಯ್ದೊಡಮೆಂತುಂ ನಿನ
ಗಾಗದುದುಮನೋದವಿನಿಂದ ಕರ್ಮದ ತೊಡರಂ
ನೀಗದುದುಮನಂತ್ಯದೊಳೊಡ
ವೋಗದುದುಮನಱಿದು ಮೆಯ್ಗೆ ನೀಂ ಮುಯ್ವಾಂಪಾ   ೧೧

ವ || ತನಗೆ ಮಗುೞ್ದಾಗದುದುಮನಱೆದುಮೇಗೆಯ್ದೊಡಮೊಳ್ಪನೊಲ್ಲದಿರೆ ಪಾಪಂ ನೀಗದುದುಮನೇಗೆಯ್ವೊಡಂ ನೀಮಱಿವಿರ್

ಚಂ || ಅೞಿನುಡಿಗೇಳದಿರ್ಪಿರವುವೋಲ್ ಕಿವಿಗೆಟ್ಟುವ ಮೆಯ್ಯ ಬಂಧಮಿಂ
ಬೞಿದಿರೆ ನೋಡೆವೆಂಬ ತೆಱದಿಂದಮೆ ಕಾಣವು ಕಣ್ [ಮಱಂ] ತಗು
ಳ್ದೞಿಯಲವುಂಕೆ ತಾಂ ನಡುಗುವಂತೆ ಶಿರಂ ನಡುಗುತ್ತುಮಿರ್ಪುದಿಂ
ತೞಿವಱಿವಾೞ್ಗೆ ಬೆರ್ಚದವೊಲಿರ್ಪುದು ಮೇಯ್ ನಿನಗಾದ ಮುಪ್ಪಿನೊಳ್  ೧೨

ವ || ತನಗೆ ತಾಂ ಪೇಸುವಂತಿರ್ಪ ಮುಪ್ಪಿನೊಳಪ್ಪೊಡಂ ಬೆರ್ಚಿ ನೆಗೞ್ದೆಯಿಲ್ಲ ಜೀವಾ ನೀನೇಂ ವಿಪರೀತಮಾದೆಯೋ

ಕಂ || ಕಿಚ್ಚಂ ಪೊರ್ದಿದ ನೀರ್ ಕಡು
ಬೆಚ್ಚನೆಯಾಗಿರ್ದು ಕುದಿವವೋಲೀ ಮೆಯ್ಯೊಳ್
ಮಚ್ಚಿರ್ದು ಕಾಯ್ವೆಯದ ನೀ
ನಿಚ್ಚೈಸಿ ನೆಗೞ್ದೊಡಾಱಿ ಸುಖದಿಂದರ್ಪಯ್  ೧೩

ವ || ಪುಳ್ಳಿವಿಡಿದು ಬರ್ಪ ಕಿರ್ಚಿನ ಬೆಂಕೆಯುಮಂ ಮೆಯ್ವಿಡಿದು ಬರ್ಪ ದುಃಖದ ಬೆಂಕೆಯುಮಂ ಕಂಡಾ ಪುಳ್ಳಿಯ ತಗುಳ್ಪುಮನೀ ಮೆಯ್ಯ ಧರ್ಮದೊಳ್ ತಗುಳ್ವುದಿದಂ ನಿಚ್ಚೈಸಿ ನೆಗೞ್ದಂದು ನಂದುಗುಮದಱಿಂ ನೀನೆಂತುಂ ಮೆಯ್ಯ ವಶನಾಗದಿರ್ ನಿನಗೆ ಮೆಯ್ ಪಗೆಯಪ್ಪುದಂ ನೀ ಬಗೆದೆಯಿಲ್ಲಾ

ಶಾ || ಮೆಯ್ಯಿಂಬಂ ಬಗೆದೇಕೆ ಸೇದೆವಡುವೈ ಪೇೞ್ ಜೀವ ನಿನ್ನಿಂಬನೀ
ಮೆಯ್ಯೊಂ ದಾಗಿಯುಮೊರ್ವೆ ಮೇಣ್ ಬಗೆಗುಮೇ ತತ್ಕೂರ್ಮೆಯಂ ಮೋಹದಿಂ
ಮೆಯ್ಯುಂ ಮೆಯ್ಯಳವುಳ್ಳೊಡಪ್ಪುದು ಮಹಾ ದುಃಖಾಬ್ಧಿಯತ್ತಣ್ಗೆ ಕೊಂ
ಡೊಯ್ಯಲ್ ಪಾಪಮನಪ್ಪುಕೆಯ್ಯಲೞಿಯಲ್ಕೆಂದಿರ್ಪುದಂ ಮಚ್ಚುವಾ   ೧೪

ವ || ಪಗೆಯಂಗಾಳಾಗಿ ಪೊಕ್ಕಿಱಿಯಲ್ ಬಂದು ಪತ್ತಿರ್ದನುಮಂ ಕರ್ಮಕ್ಕಾಳಾಗಿ ಕಿಡಿಸಲ್ ತಗುಳ್ದಿರ್ದ ಮೆಯ್ಯುಮಂ ನಂಬಿದೊಡಾತನೞಿದನೀತಂ ನರಕಕ್ಕಿೞಿದನೆಂಬುದುಂ ಪೆೞಲ್ವೇೞ್ದುಮೇ

ಕಂ || ಪೊರೆದನಿತಱಿಂದೆ ಜೀವಾ
ಪರಮಾತ್ಮ ಪದಸ್ಥನಪ್ಪ ಶಕ್ತಿಯ ನಿನ್ನಂ
ಪರಿಭವಿಸಿ ಕಿಡಿಸಿತೆಂದೊಡೆ
ಶರೀರಮಂ ಪೊರ್ದಿ ಕಿಡದ ವಸ್ತುಗಳೊಳವೇ   ೧೫

ವ || ಜ್ಞಾನದರ್ಶನಾದ್ಯನಂತಗುಣವಂತನಪ್ಪ ನಿನ್ನಂ ಮೇಳಿಸಿದನಿತಱೊಳೆ ಸಂಸಾರಸಮುದ್ರದೊಳಗಾೞಿಸಿತೆಂದೊಡುೞಿದ ವಸ್ತುಗಳನೇಗೆಯ್ಯದು

ಚಂ || ತನುವಿನ ಪುಟ್ಟಿದಂದೊಡನೆ ಪುಟ್ಟಿದುವಿಂದ್ರಿಯಮಿಂದ್ರಿಯಂಗಳಿಂ
ಜನಿಯಿಸುಗುಂ ಮಹಾವ್ಯ ಸನಮಾ ವ್ಯಸನಂ ಮಿಗೆ ಬಂಧನಂತಮಾ
ಯ್ತೆನೆ ಕಡುಸೇದೆ ಸೇದೆಯೊಳೆ ದುಷ್ಪರಿಣಾಮಮದಾಗೆ ಪಾಪದು
ರ್ವಿನಮದಱಿಂದಿವಂ ಪಡೆವೊಡಲ್ಗೆಡೆಯಪ್ಪುದೆ ಭವ್ಯ ಜೀವನೇ   ೧೬

ವ || ಅಳಿಪುವಿಡಿಯೆ ಪರಿಭವಂ ಬರ್ಪಂತೊಡಲ್ವಿಡಿದು ಪಾಪಂ ಬರ್ಕುಮದು ಬರೆಕಿಡದವರುಂ ಪರಿಭವಂಬಡದವರುಮೊಳರೇ

ಕಂ || ಎಂತುಂ ಕಿಡುವುದು ದುಃಖಮ
ನೆಂತುಂ ಮಾಡುವುದದೆಂತುಮಶುಭಮೆ ದಲ್ ನೀ
ನೆಂತಳಿಪುವೆಯೆಂತಿರ್ದಪೆ
ಯೆಂತೞಿವೈ ಮರುಳೆ ಮುನ್ನಮೞಿದುದೆ ಸಾಲ್ಗುಂ   ೧೭

ವ || ಪಱಿದ ಪಱುಗೋಲನಱಿವುತ್ತಮೇಱುವುದುಂ ಪಗೆಯನಱಿದು ಮೆೞ್ಪಡುವುದುಮೊಳ್ಳಿತ್ತೆ

ಉ || ಧಾತು ಮಲಾದಿ ದೋಷ ಸಂಹಿತಂ ಪೋಱಗುಗ್ರದುರಂತಕರ್ಮಸಂ
ಘಾತವಿಭಾಗ ಮತ್ತೊಳಗೆ ಬೋಧದ ಭಾಗಮದೆತ್ತ ನೆಟ್ಟನಿಂ
ತೀ ತನುವಿತ್ತಣಿರ್ದೆರಡು ಭಾಗಮುಮಂ ಬಿಸುಟಂತರಂಗದೊಳ್
ಪ್ರೀತಿಯಿನಾತ್ಮನಂ ನಿಱಿಪುದಲ್ಲದೊಡೀ ತನುಮೊಳ್ಳಿಕೆಯ್ಗುಮೇ   ೧೮

ವ || ಮೆಯ್ಯ ಪೊರೆಗಳಿಂತ ಮೂಱು ಭಾಗಮಲ್ಲಿ ಪೊಱಗಣ ಭಾಗಂ ಧಾತು ಮಲಾದಿ ದೋಷಸಹಿತಂ ನಡುವಣ ಭಾಗಂ ಕರ್ಮಬಂಧಮದಱೊಳಗಣ ಭಾಗಂ ಜ್ಞಾನಮಯಮದಱಿಂ ಪೊಱಗಣೆರಡು ಭಾಗಮಂ ಗೆಂಟುಮಾಡಿ ಜ್ಞಾನಭಾಗಮಪ್ಪಂತರಂಗದೊಳಾತ್ಮನಂ ನಿಱಿಸುವುದಂತು ನಿಱಿಸಿದಂ ತನಗೆ ಕೇಡಿಲ್ಲದಂತು ಸಂತನಿಱಿಸಿದಂ

ಕಂ || ಮೆಯ್ಯೊಳೊಡಗೂಡಿ ನೀನುಂ
ಮೆಯ್ಯೆನಿಸಿದೆ ಜೀವ ದುರಿತವೈರಿಯ ವಶದಿಂ
ಪೊಯ್ಯೆ ಸುಡೆ ಕಡಿಯೆ ನೊಂದಪೆ
ಯಯ್ಯೋ ತಗದಲ್ಲಿ ಕೂಡಿ ನೋವುದು ಪಿರಿದೇ   ೧೯

ವ || ಜ್ಞಾನಮುಂ ಸುಖಮುಂ ಸಹಜಮಪ್ಪೆಲೆ ಜೀವಾ ನೀನೀ ದೇಹದೊಳ್ ಬೆರಸಿ ದೇಹಿಯೆನಿಸಿದೈ ದೇಹಿಯೆಂಬ ಮಾತು ನಿನ್ನೊಳಾದಂದೆ ನಿನ್ನ ಸುಖಂ ನಾಸ್ತಿಯಾಯ್ತು ತನು ಪಿಡಿದು ಬಂದ ನೋವೆಲ್ಲಮಂ ನಿನಗೆ ಮಾಡುತ್ತುಮಿರ್ಕುಮದಱಿಂ ಮೆಯ್ ನಿನಗೆ ಪಗೆಯೆಂಬುದಂತಾಗಿಯುಮದಶುಚಿಯೆಂಬುದಂ ನೀಂ ಬಗೆಯಾ

ಚಂ || ಅಡಗಿನ [ತೋಲ] ನೆತ್ತರ ಮಿದುಳ್ಗಳ ಶಲ್ಯದ ಪುಂಜಮೊತ್ತಿಬಂ
ದಡಸುವ ವಾತ ಪಿತ್ತ ಕಫದೋಷಸಮುಹದೆ ಪತ್ತಿ ನಿಲ್ವುದೆಂ
ದೊಡೆ ಪೆಱತೇಂ ಕ್ರಿಮಿವಜ್ರದ ಮೂತ್ರ ಪುರೀಷದ ಕೊಂಡಮೆಂದೊಡೀ
ಯೊಡಲಿದಱಂದಮಂ ಬಗೆದು ಭಾವಿಸಿ ಪೇಸದುದೇಕೆ ಜೀವನೇ  ೨೦

ವ || ಗೆಂಟಱೊಳೆ ಕಂಡು ಪೇಸುವ ಕಿಸುಗುಳದೊಳಗ್ಗಲಿಸಿರ್ದು ಪೇಸೆ ನೀಂ ಸಮ್ಮಗಾಱನ ಮೂಗಿನಂತಾದೆಯಾಗದೆ ವಾಸನಾ ದೋಷಮಪ್ಪುದು ನಿನ್ನನೇಕೞಿಯಲೀಗುಮಕ್ಕಟಾ

ಕಂ || ಮುನ್ನೆ ಶುಚಿಯಪ್ಪುವೆಲ್ಲಂ
ತನ್ನಂ ಪೊರೆದನಿತಱಿಂದೆ ಮತ್ತಮಶುಚಿಯ
ಪ್ಪನ್ನವು ಮೆಯ್ಯೊಳ್ ಗುಣಮಿ
ಲ್ಲಿನ್ನಿದಱಿಂ ಕಷ್ಟಮುಂಟೆ ಪಱತೀ ಜಗದೊಳ್   ೨೧

ವ || ತುಱುಂಬಿ ಕಳೆದ ಪೂವುಮನುಟ್ಟು ಕಳೆದ ಸೀರೆಯುಮಂ ಪೂಸುವಲ್ಲಿ ಯುದಿರ್ದ ಕತ್ತುರಿಯುಮಂ ಮಿಂದ ನೀರುಮಂ ಉಂಡು ಮಿಕ್ಕ ತೞಿಗೆಯ ಕೂೞುಮಂ ನೀನೆ ಮುಗುೞ್ದು ಮುಟ್ಟಲ್ ಪೇಸುವೆಯೇಕೆ ಮೆಯ್ಯಂ ಮುಟ್ಟಿದುವೆಂಬನಿತಱೊಳೆ ಶುಚಿಯಪ್ಪ ವಸ್ತುಗಳೆಲ್ಲ ಮಶುಚಿಯಾದವಿಂತಪ್ಪ ಮೆಯ್ ಮತ್ತಮೆಂತಪ್ಪದೆಂದೊಡೆ

ಉ || ಮೂಳೆಯ ಕಂಭಮಲ್ಲಿ ನಿಡುಯೆಲ್ವಿನ ಬೆಮ್ಮರನಂತೆ ಪತ್ತಿಕೊಂ
ಡೋಳಿಯೆ ನೀಳ್ದು ನಿಂದ ಬಱಿಯೆಲ್ ಗೞೆಗಳ್ ಸೆರೆ ಪಂಜರಂ ತಗು
ಳ್ದೇಳಿದಮಪ್ಪ ತೋಲ್ ಪೊದಕೆ ಮಾಂಸಮೆ ಕೇರ್ಗಳಮೇಧ್ಯಪೂರ್ಣ ದೇ
ಹಾಳಯಮಿಂತಶುದ್ಧಮಿದನೇಂ ಶುಚಿಯೆಂಬುದೆ ಭವ್ಯಜೀವನೇ  ೨೨

ವ || ಅಂತುಮಲ್ಲದೆಯುಂ ಮನೆಯೊಳಗೊಂದು ಬೆರಳನಿತು ಶಲ್ಯಮಿರ್ದೊಡೇನಂ ಕೊಟ್ಟಾದೊಡದಂ ಕಳೆಯಿಸುವರ್ ಕಾಣ್ಬನಿತಱೊಳಮೇಧ್ಯಮಿರ್ದೊಡತ್ತಲ್ ನೋಡಲುಂ ಪೇಸಿ ತೊಲಗಿ ಪೋಪರಿಂತಪ್ಪರ್ ಮೆಯ್ಯೆಂಬ ಮನೆ ಶಲ್ಯದೊಳಂ ಪೊಲಸಿನೊಳಂ ಚರ್ಮದೊಳಂ ಸಮೆದಮೇಧ್ಯದೊಳಂ ಮೂತ್ರದೊಳಂ ತೀವಿರ್ದೊಡಲಿಂಗೆ ಪೇಸದಿದನೆ ಪ್ರಧಾನಂ ಮಾಡಿರ್ಪಯ್ ನಿನಗೆ ಸಾಲಮುಂ ಸೋಲಮುಮುಂಟಪ್ಟುದಾಗದೆ

ಕಂ || ದೋಷಂಗಳವೆನಿತನಿತಱ
ರಾಶಿಯನಗ್ಗದ ವಿನಾಶಿಯಂ ಕುತ್ಸಿತ ಸಂ
ವಾಸಿಯನೞಿಯೊಡಲಂ ಕೃತ
ನಾಸಿಯನಿದನೇಕೆ ನಂಬಿ ಗುಣಮಂ ಕೆಡಿಪೈ   ೨೩

ವ || ಸೂೞೆವೆಂಡಿರಂ ನಂಬಿ ನಿಜಾಂಗನೆಯರಂ ಬಿಡುವೆಗ್ಗರಂತೆ ಮೆಯ್ಯಂ ನಂಬಿ ಗುಣಮಂ ಕೆಡಿಸುವಿರೆಂಬುದೇನೊಳ್ಳಿತ್ತೆ

ಉ || ಪ್ರಾಣದ ಪೋಗಿನೊಳ್ ಪೆಣನಿದಂ ಕಳೆಯಿಂ ಸುಡಿಮೆಂದು ಪೇೞ್ವರಾ
ಪ್ರಾಣಮನೋವಿ ಸದ್ಗುಣಮನೊಕ್ಕೊಡೆ ಬಾೞ್ವೆಣನೆಂಬರುರ್ಕಿನೊಳ್
ಪ್ರಾಣಮುಮೊಳ್ಗುಣಂಗಳುಮವೊರ್ಮೆಯೆ ಪೋದೊಡೆ ನಾಯ ಬಾಯ್ಕೆ ತಾಂ
ಮಾಣದೆ ಬಂದೊಡಲ್ ಪಡುಕೆಯೆಂಬರಿದೇಂ ತನು ಕಷ್ಟಮಾದುದೋ   ೨೪

ವ || ಇಂತಾವೆಡೆಯೊಳಂ ಕಷ್ಟಮುಂ ನಿಕೃಷ್ಟಮುಮಪ್ಪ ಮೆಯ್ಯನೆಂತಮೇಧ್ಯಮಂ ಖರ್ಜೂರದ ಮರದ ಮೊದಲೊಳಗಿಕ್ಕಿ ತುದಿಯೊಳಾದ ಫಲಮಂ ಕೊಳ್ವರಂತಶುಚಿಯಪ್ಪೀ ಮೆಯ್ಯಂ ಧರ್ಮದೊಳ್ ತಗುಳ್ಚಿ ಪರತ್ರೆಯ ಫಲಮಂ ಕೊಳ್ವೊಡೊಳ್ಳಿತ್ತಲ್ಲದೊಡೆ ದುಃಖ ಕ್ಕೆಡೆಯಕ್ಕುಮೆಂಬಿನಿತಂ ಬಗೆವುದು

ಕಂ || ತನು ಕಿಸುಗುಳಮೆಂಬುದನಱಿ
ವನಿತಱಿವುಮದುಂ ಬಿಸುೞ್ಪ ಸಾಹಸದನಿತುಂ
ನಿನಗರಿದಾಯ್ತಕ್ಕಟ ಮಿ
ಕ್ಕನಂತಗುಣಮಿಂತಡಂಗೆ ಕೆಟ್ಟೈ ಜೀವಾ   ೨೫

ವ || ಮೂಱುಂ ಲೋಕದ ವಸ್ತುಸ್ಥಿತಿಗಳನೊರ್ಮೊದಲಱಿವ ಶಕ್ತಿಯನುಳ್ಳ ನೀನುಂ ನಿನ್ನ ಮೆಯ್ಯ ಕಿಸುಗುಳನಮಱಿಯದಂತಾಯ್ತೆ ನಿನ್ನೊಳಿರ್ದನಂತವೀರ್ಯಶಕ್ತಿಯುಂ ಪೊಲ್ಲಮೆಯುಂ ಬಿಸುಡಲಾಱದಂತಾಯ್ತೆ ಕಿಡುವೊಡಲಂ ನಚ್ಚಿ ಗುಣಮನಕ್ಕಟಾ ನಿರವಶೇಷಮಿಂತು ಕಿಡಿಸುವುದೇ

ಚಂ || ಬಸಿಱೊಳಗಿರ್ದು ತಾಯೊಳಗೆ ಕಾಱಿದುದಂ ತೆಗೆದುಂಡು ಕರ್ಮದಿಂ
ಮಸಕದಮೇಧ್ಯದೊಳ್ ನೆಲಸಿ ಜಂತುಗಳೊಳ್ ಪುದುವಾೞ್ದು ದಾಹಮುಂ
ಪಸಿವುಮೊಡರ್ಚೆ ಬರ್ದಿ ನಮೆದಿರ್ದಿರವಂ ಬಗೆದಿನ್ನು ಪುಟ್ಟದಂ
ತೆಸಗುವುದೆಂದು ಪೆೞ್ದೊಡಱಿಯಿರ್ ನಿಮಗೇಂ ಕಡುದುಃಖಮೞ್ತಿಯೋ   ೨೬

ವ || ಅಮೇಧ್ಯದೊಳ್ ಪುಟ್ಟಿದ ಪುೞುವುಂ ಬಸಿಱೊಳ್ ಪುಟ್ಟಿದ ಮೆಯ್ಯುಮೆಂತುಮಶುಚಿ ಯೆಂಬುದನಱಿದುಂ ಪೇಸದುದದು ವಾಸನೆಯ ಪೋಹಮಪ್ಪುದನೀ ಕಥೆಯಂ ಕೇಳ್ದು ನಂಬುವುದದೆಂತೆನೆ

 

ಸುಭೌಮರಾಜನ ಕಥೆ

ಕಂ || ಅತಿಶಯ ವಿದೇಹ ವಿಷಯಮ
ನತಿನುತನಾಳ್ಗುಂ ಸುಭೌಮನೆಂಬ ನರೇಂದ್ರಂ
ವಿತತ ಶ್ರೀಯುತನಾತಂ
ಗತಿನಿಪುಣಂ ಮಂತ್ರಿ ಸುಮತಿಯೆಂಬೊಂ ಪೆಸರಿಂ

ವ || ಆ ಪೆರ್ಗಡೆಯೊಂದು ದೆವಸಂ ಪೂರ್ವಾಹ್ನದೊಳರಸನನೊಲಗಿಸುವ ಪೊೞ್ತಂ ತಪ್ಪಿಸಿ ತಡೆದು ಬಂದೊಡರಸನಾತನದೇಕೆ ತಡೆದಿರೆಂದೊಡಾತಂ ಬಿನ್ನಪಮೆಂದಿಂತೆಂದಂ

ತಾ || ಅವ್ಯಾಬಾಧ ಸುಖಾಭಿಲಾಷಿಗಳನೂನೋದ್ಯದ್ದಯಾಭಾಷಿಗಳ್
ದಿವ್ಯಜ್ಞಾನಿಗಳೂರ್ಜಿತ ವ್ರತಲತಾಸಂಸ್ಥಾನಿಗಳ್ ಸಾಧುಸಂ
ಸೇವ್ಯರ್ ನಮ್ಮ ಪೊೞಲ್ಗೆ ವಂದೊಡವರಂ ಸದ್ಭಕ್ತಿಯಿಂ ಬಂದಿಸಲ್
ಭವ್ಯರ್ಕಳ್ ನೆರೆದೊಪ್ಪಿಪೋಗುತಿರೆ ಕಂಡಾನುಂ ಮನೋರಾಗದಿಂ   ೨೮

ವ || ಅವರೊಡನೆ ಪೋಗಿ ಕಂಡು ಮನಂಗೊಂಡು ನಾಡೆ ಪೊೞ್ತಿರ್ದೆನಪ್ಪುದಱಿಂ ತಡೆದೆನೆಂದೊಡೆ ಪೇೞವರ್ ದಿವ್ಯಜ್ಞಾನಿಗಳೆ ಮುಂತಪ್ಪುದನಿಂತಕ್ಕು ಮೆಂದಱಿವರಪ್ಪೊಡೆ ಪೋಗಿ ಬೆಸಗೊಳ್ವಂ ಬಾ ಎಂದಾತನನೊಡಗೊಂಡು ಪೋಗಿ ಭಟ್ಟಾರಕರಂ ಬಂಧಿಸಿ ಮುಂದೆ ಕುಳ್ಳಿರ್ದು ನಾನಿನ್ನೆತು ಕಾಲಂ ಬಾೞ್ವೆನೆಂದು ಕೀಱಿ ಬೆಸಗೊಳ್ವುದುಂ ಭಟ್ಟಾರರೆಂದರ್ ನಿನಗಿನ್ನೇೞುದೆವಸಮಾಯುಷ್ಯಮುಂಟೆಂದೊಡೆ ನಗೇತಱಿಂ ಸಾವಕ್ಕುಮೆನೆ ಸಿಡಿಲ್ ಪೊಡೆಯೆ ಸಾವಕ್ಕುಮೆಂದೊಡೆ ಮತ್ತೆಲ್ಲಿ ಪುಟ್ಟುವೆನೆನ ನಿನ್ನ ಮಜ್ಜನಂಬುಗವ ಪಚ್ಚವಡದ ಕೞಿಯೊಳಗೆ ಕರಿಯ ಪಿರಿಯ ನಿಡಿಯ ತಲೆಯ ಪುೞುವಾಗಿ ಪುಟ್ಟುವೆಯೆಂದೊಡರಸನದೆಂತು ನಂಬಲಕ್ಕುಮೆಂದೊಡಾಗಳ್ ಭಟ್ಟಾರಕರಿಂತೆಂದರ್

ಕಂ || ಈಗಳ್ ಗೃಹಕ್ಕೆ ನೀಂ ಪೋಂ
ಪಾಗಳ್ ಬಿೞ್ತರ್ಕುಮುರುಗುರಂ ನಿನ್ನ ಶಿರೋ
ಭಾಗದೊಳದು ದಿಟಮಾದೊಡ
ನಾಗತಮಂ ನಂಬು ಪಲವು ಮಾತಿನೊಳೇನೋ   ೨೯

ವ || ಎನೆ ಕೇಳ್ದರಸನವರ ಮಾತೆಂತುಟಕ್ಕುಮೋ ನೋೞ್ಪೆನೆಂದಲ್ಲಿಂದಮೆೞ್ದು ನಿಂದು ತನ್ನಾಳೆಲ್ಲಮಂ ಕರೆದು ತನ್ನರಮನೆಯನೆಯ್ದುವ ಬೀದಿಯೊಳಾದ ಕಸವು ಮೊದಲಾದ ಮೇಧ್ಯಮೆಲ್ಲ ಮನುಡುಗಿಸಿ ಕಳೆಯಿಸಿದಿಂ ಬೞಿಯಂ ತಾನಾನೆಯನೇಱಿ ಮೇಲೆ ಸತ್ತಿಗೆಡಿಯಿಸಿ ಪೋಪಾಗಳೊಂದೆಡೆಯೊಳ್ ಬೀದಿಯ ಕೆಲಸ ಪಿರಿಯ ಮದಿಲ ಮಱೆಯೊಳಗಿರ್ದೊರ್ವಳ್ ಕೂಸಿನುರುಗುರಮಂ ಸಗಣದಿಂ ಮುದುಡಿ ಪೊಱಗೀಡಾಡಿದೊಡದು ಮೇಗಣಿಂ ನೆಗೆದು ಬಂದರಸನ ತಲೆಯ ಮೇಲೆ ಬಿರ್ದೊಡೆ ಕಂಡಾಗಳಂತೆ ಪೋಗಿ ಮನೆಯಂ ಪೊಕ್ಕು ಮಜ್ಜನಂ ಮಾಡಿ ಸವಣೋ ಅಮೋಘವಯಣೋ

ಕಂ || ಎಂಬುದು ಋಷಿವಾಕ್ಯವಿದಂ
ನಂಬಿರ್ದುದು ಲೋಕಮೆಲ್ಲದಱಿಂದಾನುಂ
ನಂಬುವೆನೆಂದಾಗಳೆ ಮಗ
ನಂ ಬರಿಸಿ ಸಮಂತು ಮುಂದೆ ಕುಳ್ಳರಿಸಿ ನೃಪಂ   ೩೦

ವ || ಮಗನೆ ಕೇಳಾನಿಂದಿಗೇೞನೆಯ ದೆವಸದಂದಿಗೆ ಸಿಡಿಲ್ ಪೊಡೆಯೆ ಸತ್ತೆನ್ನ ಪಚ್ಚವಡದ ಕುೞಿಯೊಳ್ ಕರಿಯ ನಿಡಿಯ ಪಿರಿಯ ಪುೞುವಾಗಿ ಪುಟ್ಟುವೆಂ ಗಡ ಪುಟ್ಟಿದೊಡೆನ್ನ ನಮೆಯಲೀಯದೆ ನೀಂ ಬೇಗಂ ಬಂದೆಚ್ಚು ಕೊಂದೆನಗಿನಿತುಮೊಳ್ಳಿಕೆಯ್ಯೆಂದಾತ ನುಮನೊಡಂಬಡಿಸಿ ತನ್ನ ಸಾವಂ ನಂಬಿಯುಂ ಶ್ರೀಯಂ ಬಿಸುಡಲಾಱದೆಯುಂ ಮೋಹಿಸುತ್ತಿರ್ಪನ್ನೆಗಂ

ಮ || ಮಗನುಂ ಪೆರ್ಗಡೆಯುಂ ನರೇಂದ್ರನೞಿವಂ ಕಾವೊಂದಭಿಪ್ರಾಯದಿಂ
ಬಗೆದಿರ್ದಾಗಳೆ ಮಂದಸಂ ಸಮಯವೇೞ್ದಾ ಪೇೞ್ದ ಪೊೞ್ತೆಯ್ದುವ
ನ್ನೆಗಮಾ ಮಂದಸಿನಲ್ಲಿ ಭೂಮಿಪತಿಯಂ ತಂದಿಟ್ಟು ಮತ್ತಂತೆ ನೀರ್
ಪುಗದಂತಾಗಿರೆ ಮಾಡಿ ಪೆರ್ಮಡುವಿನೊಳ್ ತಂದಿಕ್ಕಿದರ್ ಮಂದಸಂ  ೩೧

ವ || ಆ ಮಂದಸಮಂತು ನೀರೊಳಿರ್ದಂದು ಪಿರಿಯದೊಂದು ಮಿನ ಬೆನ್ನ ತಾಗಿ ನಿಂದಿನಿಸಾನುಂ ಬೇಗದಿಂದಾ ಪೊೞ್ತಱೊಳಾ ಮಿನ್ ಪೊಳೆದೊಡೆ ಮೇಗೆ ನೆಗೆದ ಮಂದಸಂ ಸಿಡಿಲ್ ಬಡಿಯೆ ಸುಭೌಮಂ ಸತ್ತು ತನ್ನ ಪಚ್ಚವಡದ ಕುೞಿಯೊಳ್ ಕರಿಯ ಪಿರಿಯ ನಿಡಿಯ ಪುೞುವಾಗಿ ಪುಟ್ಟಿದನಾಗಳಾತನ ಪುತ್ರ ಮಿತ್ರ ಕಳತ್ರಾದಿಗಳ್ ಕಂಡು ದುಃಖಂಗೆಯ್ದು ನಿಯತಿಃ ಕೇನ್ ಲಂಘ್ಯತೇಯೆಂಬುದು ತಪ್ಪದೆಂದು ಲೌಕಿಕಕ್ರಿಯೆಗಳಂ ಮಾಡಿ ಬಂದು ಕೆಲವು ದೆವಸದಿಂದಾತನ ಮಗನೆಮ್ಮಯ್ಯಂ ತನ್ನ ಪುಟ್ಟುವೆಡೆಯಂ ಪೇೞ್ದನಾಯೆಡೆ ಯೊಳಂತೆ ಕಂಡೊಡೆಮ್ಮಯ್ಯಂ ಪೇೞ್ದಂತೆ ನೆಗೞ್ವೆನೆಂದು ಬಿಲ್ಲಂ ಮಿಂಟೆಯುಮಂ ಕೊಂಡು ಪೋಗಿ ಪಚ್ಚವಡದ ಕುೞಿಯಂ ನೋೞ್ಪನ್ನೆಗಂ ಕರಿಯ ತಲೆಯ ಪಿರಿಯ ಪುೞು ನೆಗೆದು ತೋಱಿದೊಡೆ ಮಿಂಟೆಯಂ ತೊಟ್ಟ ತೆಗೆದಿಸುವಾಗಳಾ ಪುೞು ಕೆಲದ ಮಱೆಯತ್ತಲೋಡಿ ಪೊಕ್ಕೊಡಾತಂ ಮತ್ತಿನಿತು ಬೇಗಂ ಪೊರ್ದಿರ್ದು ನೆಗೆದಾಗಳಿಸಲ್ ಬಗೆದೊಡೆ ಬೇಗಂ ಮುೞುಂಗಿದುದಂ ಕಂಡಿದರ್ಕಿಲ್ಲಿರ್ಪುದೇ ಮೆಚ್ಚಾದುದೆಂದು ತಾಂ ಮಗುೞ್ದುಪೋದನಂತೆ ಜೀವನೆಲ್ಲಿ ಪುಟ್ಟಿದೊಡಮಲ್ಲಿಯೇ ಮಚ್ಚಾಗುಗುಮಾ ಮಚ್ಚು ಕರ್ಮವಶದಿನಕ್ಕುಮದಱಿನದಂ ಮಿಱಿ ನೀನಱಿವಿನ ವಶದೊಳ್ ನೆಗೞ್ವುದು ಮತ್ತಮಿ ಮೆಯ್ಯಶುಚಿತ್ವಮಿಂತುಟಲ್ತೆ

ರಗಳೆ || ಅೞಿವಿಂಗೆ ಬಿತ್ತಾಗಿ ಪುೞುವಿಂಗೆ ತುತ್ತಾಗಿ
ಕುತ್ತದಾಗರಮಾಗಿ ನೆತ್ತರಾಶ್ರಯಮಾಗಿ  ೧

ಪಲವೆಲ್ವೆ ಬಲಮಾಗಿ ಪೊಲಸೆ ತಾಂ ಮೆಯ್ಯಾಗಿ
ಉರುಗುರಂ ನಡುವಾಗಿ ನರವುಗಳೆ ಸುತ್ತಾಗಿ  ೨

ಪಾಪಕ್ಕೆ ಮನೆಯಾಗಿ ಕೋಪಕ್ಕೆ ಗುಱಿಯಾಗಿ
ತಪ್ಪಿಂಗೆ ಮೊದಲಾಗಿ ಮುಪ್ಪಿಂಗೆ ನೆಲೆಯಾಗಿ  ೩

ನೋವಿನಿರ್ಪೆಡೆಯಾಗಿ ಸಾವು ಬರ್ಪೆಡೆಯಾಗಿ
ಪೆಣನೆಂಬ ಪೆಸರಾಗಿ ಅಣಮಿರಿಸದಂತಾಗಿ  ೪

ಮೊಡೆನಾತಕೆಡೆಯಾಗಿ ಪಡುಕೆಯೆಂಬುದು ಮಾಗಿ
ಕಿಡಲಿರ್ಪುದಿದುವೆಂತು ಒಡಲ ರುಚಿ ತಾನೆಂತು  ೫ ೩೨

ಕಂ || ಇಂತಪ್ಪುದು ಮೆಯ್ ನಿನಗಿರ
ಲೆಂತಪ್ಪುದು ಸುಖಮಡುರ್ತು ನಿನ್ನಂ ಕಿಡಲ್
ಮುಂತಪ್ಪುದು ನೀನೞಿದೊಡೆ
ಪಿಂತಪ್ಪುದು ಕೆಮ್ಮನೇಕೆ ಮೋಹಿಸುತಿರ್ಪಯ್   ೩೩

ವ || ಊರೞಿವನಱಿದು ಬಿಣ್ಪುವೆರಸಿರ್ದೊಕ್ಕಲುಂ ಮೆಯ್ಯೞಿವನಱಿದು ಪಾಪಂ ಬೆರಸಿರ್ಪ ಜೀವನುಂ ಕಿಡದಿರ್ಕುಮೆ

ಚಂ || ಬಗೆ ಗಡ ಗರ್ಭದೊಳ್ ನಮೆವುದಂ ಬಗೆ ಪುಟ್ಟುವ ದುಃಖದಂದಮಂ
ಬಗೆ ಬಳೆವಂದಿನೇೞಿದಿಕೆಯಂ ಬಗೆ ಕುತ್ತದೊಳಿರ್ಪವಸ್ಥೆಯಂ
ಬಗೆ ಕಡುಮುಪ್ಪವುಂಕುವೆಡೆಯಂ ಬಗೆ ಸಾವಿನೊಳಪ್ಪ ಸೇದೆಯಂ
ಬಗೆದೊಡಲೇವುದೆಂದು ನೆಗೞಲ್ಲದೊಡೆಲ್ಲಿಯ ಮಾತೊ ಜೀವನೇ  ೩೪

ಗದ್ಯ || ಇದು ಜಿನಶಾಸನ ಪ್ರಭಾಸನ ಶೀಲೋದಿತ ವಿದಿತ ಬಂಧುವರ್ಮ ನಿರ್ಮಿತಮಪ್ಪ ಜೀವನಸಂಬೋಧನಾ ಗ್ರಂಥಾವತಾರದೊಳಶುಚಿತ್ವಾನುಪ್ರೇಕ್ಷಾ ನಿರೂಪಣಂ ಸುಭೌಮ ಕಥಾನುವರ್ಣನಂ

ಸಪ್ತಮಾಧಿಕಾರಂ