ಮ || ವಿಕಟಾಂಗೋಗ್ರ ವಿರೂಪ ನಿಷ್ಠುರ ಕರಕ್ರೂರಾತಿಶೀತೋಷ್ಣ ದು
ಷ್ಟ ಕುವಸ್ತುಸ್ಥಿತಿಯೆಂತುಟೆಂದಱಿಯನೇಕಿಂತಪ್ಪುವಂ ಪೇೞ್ವ ವಾ
ಚಕವೊಂದುಂ ಕಿವಿಯತ್ತ ಮುಟ್ಟದೆಡೆಯೊಳ್ ನಿಶ್ಚಿಂತಮಿರ್ಪಂದಲೀ
ಸುಕುಮಾರಂಬರಮಾರೊ ಗರ್ಭಸುಖಿಗಳ್ ಮರ್ತ್ಯರ್ಕಳೊಳ್ ದೇವರೊಳ್   ೩೮

ವ || ಎಂಬಿನಿತು ಪುಣ್ಯೋದಯದಿಂ ನವಾಣೂತ್ತರ ವಿಮಾನದೊಳಹಮಿಂದ್ರನಿರ್ಪಂ ತಿರ್ಪಿನಮಾ ಪೊೞಲೊಳೊಂದು ದೇವಸಂ ಸಜ್ಜಾಯಿಗಂ ಮಃಆಚೀನದಿಂ ಸಮೆದೊಂದು ರನ್ನಗಂಬಳಮಂ ಕೊಂಡುಬಂದಲ್ಲಿ ಪುರದೊಳಗೀ ವಸ್ತುವಂ ಮಾಱುಗೊಳ್ವನಿತು ಸಮರ್ಥರಾರೆಂದು ಪರದರ್ಗೆ ತೋಱದೆ ಅರಮನೆಗೆವಂದರಸಂಗೆ ತೋಱಿದೊಡೀ ವಸ್ತುವನಾಂ ಕೊಳಲ್ ನೆಱೆಯೆನೆನೆ ಸಜ್ಜಾಯಿಗಂ ಮಗೞ್ದುಬಂದು ಮತ್ತಮಿಲ್ಲಿಯಗ್ಗಳದ ಪದವಿಯ ಪರದರಳವಂ ನೋೞ್ಪೆನೆಂದು ಸುಕುಮಾನರ ಖ್ಯಾತಿಯಂ ಕೇಳ್ದಾತನ ಮನೆಯೆಡೆಯಂ ಬೆಸಗೊಂಡು ಬರೆ ಕೇಳ್ದು ಯಶೋಭದ್ರೆ ಕರೆಯಲ್ಪಟ್ಟಿದೊಡೆ ಸಜ್ಜಾಯಿಗಂ ಬಂದು ರನ್ನಗಂಬಳಮಂ ತೋಱಿದೊಡಾ ವಸ್ತುವಂ ನೋಡಿ ವಸ್ತುಪುರುಷರಿಂ ಬೆಲೆಯಿಡಿಸಿ ಲಕ್ಕೆ ಪೊನ್ನಂ ಕೊಟ್ಟು ಮಾಱುಗೊಂಡು ಮಾಡದ ಮೇಗಣ ನೆಲೆಯೊಳಿರ್ದ ತನ್ನ ಮಗನಲ್ಲಿಗಟ್ಟಿದೊಡೆ ಮಗಂ ನೋಡಿ

ಕಂ || ಇದುವೊಳ್ಳಿತು ವಸ್ತುವಿದಂ
ಪೊದೆದಂದುಮ್ಮಳಿಪೆನೊಲ್ಲೆನಾವೊಳ್ ತಾಂ ಮೆ
ಚ್ಚಿದ ಸೊಸೆಯಾಕೆಗೆ ಕುಡುಗೆಂ
ದದನಬ್ಬೆಗೆ ಮಗುೞೆ ಬೇಗಮಟ್ಟಿದನಾಗಳ್     ೩೯

ವ || ಅಟ್ಟುವುದುಂ ಯಶೋಭದ್ರೆ ತನ್ನ ಮನದೊಳ್ ಬಗೆದುನೋಡಿ ಸೊಸೆಯೊರ್ವಳ್ಗೆ ಕೊಟ್ಟೊಡೆ ಮತ್ತಿನವರೆಲ್ಲ ಮೇವಯ್ಸುವರೆಂದದನಿತುಮಂ ಬೇಱೆವೇಱೆ ಕೊಯ್ಸಿ ಮೂವತ್ತಿರ್ವರ್ ಸೊಸೆಯರ್ಗಂ ಚಮ್ಮಾವುಗೆಯಂ ಮಾಡಿಸಿಕೊಟ್ಟಳನ್ನೆಗಮರಸನಾ ರನ್ನಗಂಬಳಮನಿಲ್ಲಿ ಯಾರ್ ಕೊಳ್ಳುವರಂತಪ್ಪ ವಸ್ತುವೆಲ್ಲಿ ಯುಮಿಲ್ಲೆನಲ್ ಕೆಲದೊಳಿರ್ದೊರ್ವನೆಂದಂ ನಮ್ಮ ಪರದರ ಸುಕುಮಾರದ ತಾಯ್ ಯಶೋಭದ್ರೆಯೊಂದು ಲಕ್ಕೆ ಪೊಂಗೆ ಮಾರ್ಕೊಂಡು ತನ್ನ ಸೊಸೆವಿರ್ಗೆಲ್ಲಂ ಚಮ್ಮಾವುಗೆಯಂ ಮಾಡಿಸಿಕೊಟ್ಟಳೆಂದೊಡಿದೇಂ ಚೋದ್ಯಮೋ

ಕಂ || ಇಂತಪ್ಪ ನೆಗೞ್ತೆಯ ಸಿರಿ
ವಂತರ್ ಪರದರ್ಕಳೆನ್ನ ಪೊೞಲೊಳ್ ಸಲೆ ನಿ
ಶ್ಚಿಂತತೆಯಿಂದಿರ್ಪಂತೆ
ನ್ನಂತಾರ್ ಪೇೞ್ ಪುಣ್ಯವಂತರೆಂದು ನರೇಂದ್ರಂ    ೪೦

ವ || ಮುಯ್ವಂ ನೋಡಿ ರಾಗದಿನಾ ಪುಣ್ಯಪುರುಷನಂ ನೋೞ್ಪೆನೆಂದು ಮಱದೆವಸಂ ತೊಟ್ಟನರಸನವರ ಮನೆಗೆ ಪೋದೊಡೆ ಅರಸು ಬಂದನೆಂಬುದಂ ಕೇಳ್ದು ಯಶೋಭದ್ರೆ ಬೇಗಮಿದಿರ್ವಂದಿತ್ತಲೆೞ್ತನ್ನಿಯೆಂದು ಮಾಡದೊಳಗಣ್ಗೊಡಗೊಂಡುಯ್ದು ಪಂಚರತ್ನದಿಂ ಘಟಿಯಿಸಿದ ರಂಗವಲ್ಲಿಯ ಮೇಳೆ ದೇವಾಂಗವಸ್ತ್ರದ ಸುಖಾಸನಮನಿಕ್ಕಿಸಿದೊಡಲ್ಲಿ ಕುಳ್ಳಿರ್ದೆಮ್ಮ ತಮ್ಮ ನೆಲ್ಲಿದನೆನೆ ಮೇಗಣ ನೆಲೆಯೊಳಿರ್ದಪನೆಂದೊಡೆ ಬರವೇೞಿಮಾತನಂ ಕಂಡಱಿಯೆಂ ನೋೞ್ಪೆನೆಂದೊಡಬ್ಬೆ ಬರವೇೞಿಯೆಂದು ಪರಿಚಾರಕಿಯರನಟ್ಟಿದೊಡೆ ದೇವಲೋಕದೊಳಿರ್ಪ ದೇವಂ ಬರ್ಪಂತೆ ದಿವ್ಯ ಗಂಧಮಯಮಾಗಿ ಬಂದೊಡೆ ಅಬ್ಬೆಗಳ್ ನಮ್ಮಾಳ್ದಂ ಪರಮಸ್ವಾಮಿ ಬಂದಿರ್ದಂ ಪೊಡೆವಡುವುದೆನೆ ದೇವ ಜೀಯ ಪ್ರಸಾದಮೆಂಬುದಱೊಳೆಯರಸನೆೞ್ದಪ್ಪಿಕೊಂಡೊಂದೆ ಆಸನದೊಳ್ ಕುಳ್ಳಿರಿಸಿದಾಗಳ್ ಪೆಂಡಿರ್ ಬಂದು ಮಂಗಳದ್ರವ್ಯಮೆಂದು ಸಿದ್ಧಾರ್ಥಮೆಂಬ ಬಿಳಿಯ ಸಾಸಿವೆಗಳಂ ಸೇಸೆಯನಿಕ್ಕಿ ಪರಸೆ ಕುಳ್ಳಿರ್ದೆಲ್ಲ ರೋಲಗಿಸುತಿರ್ಪಿನಂ ಅಬ್ಬೆಗಳ್ ಬೋನಮಂ ತರಿಸಿ ನಿಮ್ಮ ತಮ್ಮನ ಗೋಷ್ಠಿಯೊಳಾರೋಗಿಸಲ್ವೇ ೞ್ದುಮೆಂದರಸನಂ ಪ್ರಾರ್ಥಿಸುವುದುಂ ಅಂತೆಗೆಯ್ವೆನೆಂದೊಡಾಗಳ್ ಕನಕಮಯಮಪ್ಪ ಪಿರಿಯ ಪರಿಯಾಣಮನರಸನ ಮಂದಿಟ್ಟದಱ ಸಮಾನಮಪ್ಪ ಬೇಱೊಂದು ಪರಿಯಾಣಮಂ ಸುಕುಮಾರನ ಮುಂದಿಟ್ಟು ಬೇಱೊಂದು ಸುಖಾಸನದೊಳ್ ಕುಳ್ಳಿರಿಸಿ ದಿವ್ಯಾಹಾರಮಂ ಬಡ್ಡಿ ಸಿದೊಡಗಳಾಯಿರ್ವರು ಮುಂಡು ಕೆಯ್ಗಟ್ಟಿಕೊಂಡು ಕುಳ್ಳಿರ್ದನಂತರಂ ಪೇೞಿಮೆಮ್ಮ ತಮ್ಮಂ ವ್ಯಾಧಿತನಾಗಿರ್ಕುಮೋ ಎಂದರಸನಿಂತೆಂದಂ

ಚಂ || ಸ್ಥಿರತರಮಾಗಿ ಕುಳ್ಳಿರದೆ ಸಂಚಳಿಪಾಸನಮುಣ್ಮಿ ಕಣ್ಣನೀರ್
ಸುರಿವುದುಮುಣ್ಬುದೊಂದಗುೞನೊಯ್ಯನೆ ನುಂಗುತುಮೊಂದನೇವದಿಂ
ದಿರದುಗುೞುತ್ತರೋಚಕದ ಮಾೞ್ಕೆಯಿನುಣ್ಬುದಿದೊಳ್ಳಿತ್ತಲ್ತು ಬ
ಲ್ಲರಿನಿರದಿಂದೆ ನೋಡಿಪುದು ಮಾಡಿಪುದೀ ರುಜೆ ಪಿಂಗುವಂತುಟಂ  ೪೧

ವ || ಎನ ಯಶೋಭದ್ರೆ ಮುಗುಳ್ನಗೆ ನಕ್ಕು ನಿಮಗಂತಾಗಿ ತೋಱಿತ್ತು ವ್ಯಾಧಿಯೇನು ಮಿತಂಗಿಲ್ಲಂ ನಿಮ್ಮ ತಮ್ಮನಂದಮಂ ಬಿನ್ನಪಂಗೆಯ್ವೆಂ ನಿಮ್ಮಡಿಯಿಂದ ಬಂದೊಸಗೆಯೊಳೆ ಮಂಗಳದ್ರವ್ಯಮೆಂದು ಸಿದ್ಧಾರ್ಥಮೆಂಬ ಬಿಳಿಯ ಸಾಸಿವೆಗಳಂ ನಿಮಗಮಾತಂಗಂ

ಕಂ || ಸೇಸೆಯನಿಕ್ಕಿದೊಡಲ್ಲಿಯ
ಸಾಸಿವೆಯೆತ್ತಾನುಮೊಂದು ಬಂದಿವನೊಸೆದಿ
ರ್ದಾಸನದೊಳಿರ್ದುವೊತ್ತೆ ಚ
ಳಾಸನನಾಗಿರ್ದ ಪಾಂಗಿದಲ್ತೆ ನರೇಂದ್ರಾ   ೪೨

ವ || ಮತ್ತಮಿತನ ಕಣ್ಣನೀರ್ ಸುರಿವಂದಮಂ ಬಿನ್ನವಿಪ್ಪೆನೆಂದು ಮಾಣಿಕದ ಬೆಳಗನಲ್ಲದೆ ಸೊಡರಬೆಳಗುಮನಾದಿತ್ಯನ ಬೆಳಗುಮಂ ಕಂಡಱಿಯನಿಂದು

ಕಂ || ನಿಮ್ಮಡಿಯೆೞ್ತರೆ ತುರಿಪದಿ
ನೆಮ್ಮವರ್ಗಳ್ ಬೆಳಗೆ ಸೊಡರ ಬೆಂಕಿಯ ಬೆಳಗಿಂ
ದುಮ್ಮಳಿಸಿ ಕಣ್ಣನೀರ್ ಸುರಿ
ಗುಮ್ಮತ್ತೆನ್ನಾತ್ಮಜಂಗೆ ರುಜೆಯಿಲ್ಲಿನಿಸುಂ  ೪೩

ವ || ಅರೋಚಕಮಾದಂತುಗುೞುತ್ತುಮಣ್ಬ ತೆಱನುಮಂ ಬಿನ್ನವಿಪ್ಪೆಂ ನಿಚ್ಚಮೀತನುಣ್ಬಲ್ಲಿ ಬಾಗುವೋಗರದಕ್ಕಿಯಂ ಮುನ್ನಿನ ದೆವಸಮೆಮ್ಮ ಪಿಂತಿಲ ಬನದೊಳಗಣ ಕೊಳನ ಪೊಂದಾವರೆಯ ಪೊಗಳೊಳಗೆ ಪೊಯ್ದು ನೊಲೊಳ್ ಸುತ್ತಿಟ್ಟಂತು ಪುಷ್ಪವಾಸನದ ಮೆಲ್ಪಿನ ಕಂಪಿನ ಸೊಂಪಿನೊಳಿರ್ದಕ್ಕಿಯಂ ಮಱುದೆವಸಂ ಕಳೆದುಕೊಂಡು ಬಾಗಿದೋಗರ ಮನುಣ್ಬನಿಂದು ನಿಮ್ಮಡಿಯಾರೋಗಿಪ್ಪಿರೆಂದವು ನೆಱೆಯವಾಗಿ ಪೆಱವಕ್ಕಿಯನವಱೊಳ್ ಪೊಯ್ದು ಬಾಗಿದರಪ್ಪು ದಱೆಂದಮಿತನುಮಿಗಳ್ ಕೂೞನುಣ್ಬಾಗಳ್

ಕಂ || ಪೂವಿನೊಳಾದಕ್ಕಿಯ ಕೂ
ೞಾವುದದಂ ನಯದಿನುಣ್ಗುಮಲ್ಲದುದಂ ಮ
ತ್ತೋವದೆ ತಾನುಗುೞ್ವಂ ರುಜೆ
ಯಾವುದುಮಣಮಿಲ್ಲ ನಿಮ್ಮ ತಮ್ಮಂಗೆಂದುಂ   ೪೪

ಕಂ || ಎಂದೊಡರಸಂ ಬೆಕ್ಕಸಂಬಟ್ಟು ಸುಕುಮಾರನೆಂಬ ಪೆಸರೀತಂಗೆ ತಕ್ಕುದೆಂದು ಕಿಱಿದು ಪೊೞ್ತಿರ್ದು ತಮ್ಮಂಗೆ ನಿರೋಧಮಕ್ಕುಂ ಪೋಪೆನೆಂದಾಗಳ್ ಯಶೋಭದ್ರೆಯೆನಿತಾನು ಮಮೂಲ್ಯ ವಸ್ತುಗಳಂ ತರಿಸಿ ಮುಂದಿಟ್ಟೊಡಾಗಳೀ ವಸ್ತುಗಳೆಲ್ಲಮಿತಂಗೆ ತಕ್ಕುವೆಂದೊಂದುಮಂ ಕೊಳ್ಳದಾತನಂ ಪೂಜಿಸಿ ಪೋದಂ

ಕಂ || ಅಂತಪ್ಪ ಧನಾಢ್ಯಂ ಮ
ತ್ತಂತಪ್ಪತಿಶಯದ ಗರ್ಭಸುಖಿ ಸೆಲೆ ನೆಗೞ್ದಿ
ರ್ದಂತಪ್ಪ ರಾಜಪೂಜಿತ
ನಂತಾ ಸುಕುಮಾರನೊಸೆದು ಸುಖಮಿರ್ಪಿನೆಗಂ   ೪೫

ವ || ಆತನ ಮಾವಂದಿರಪ್ಪ ಯಶೋಭದ್ರರೆಂಬ ಋಷಿಯರಾತನ ಮಾಡದ ಪೆಱಗಣ ನಂದನವನದೊಳೊಂದು ನಿರ್ಜಂತಕಪ್ರದೇಶದೊಳ್ ಬಂದಿರ್ದಲ್ಲಿಯೆ ನಿಯಮಸ್ಥರಾಗಿರ್ದು ಬೈಗಿರುಳ್ ಗೌರಿ ಗಾಂಧಾರಿ ರಾಕ್ಷಸಿಯೆಂಬ ಮೂಱುಂ ಜಾವಂ ಪೋದ ಬೞಿಕ್ಕಂ ಮನೋಹರಿಯೆಂಬ ಬೆಳಗಪ್ಪ ಜಾವದಾಗಳ್ ತ್ರಿಲೋಕಪ್ರಜ್ಞಪ್ತಿಯೆಂಬಾಗಮಗ್ರಂಥಮಂ ಪರಿವಿಡಿಯೆಯ್ವಾಗಳ್ ಮಾಡದ ಮೇಗೆ ಪವಡಿಸಿರ್ದ ಸುಕುಮಾರನೆೞ್ಚಿತ್ತಾ ಧ್ವನಿಯ ನಾಲಿಸುತ್ತಿರ್ದು ನರಕತಿರ್ಯಙ್ಞನುಷ್ಯ ಲೋಕದ ಸ್ಥಿತಿಗಳುಮಂ ಕೇಳ್ದು ಬೞಿಯಂ ದೇವಲೋಕಸ್ಥಿತಿಗಳುಮಂ ಅವರವರ ವಿಮಾನಂಗಳು ಮನೋದುವಾಗಳ್ ಪದ್ಮಗಲ್ಮಮೆಂಬ ವಿಮಾನವ್ಯಾವರ್ಣನೆಯಂ ಪೆೞುತ್ತಮಿರೆ ಕೇಳುತ್ತೆ ಮುನ್ನಂ ತಾನಾ ವಿಮಾನದೊಳ್ ಪುಟ್ಟಿ ಬಂದನಪ್ಪುದಱಿಂ ಜಾತಿಸ್ಮರನಾಗಿ ಬಗೆದು ತನ್ನೊಳಿಂತೆಂದಂ

ಶಾ || ಅಂತಾಗಳ್ ಭುವನಂಗಳಿರ್ದ ತೆಱನಂ ಮಾನಪ್ರಮಾಣಂಗಳಂ
ಭ್ರಾಂತಿಂದಿಲ್ಲಿ ತೊೞಲ್ವ ಜೀವನಿಕರವ್ಯಾಪಾರಮಂ ನೆಟ್ಟನಿ
ನ್ನೆಂತುಂ ತಪ್ಪದ ಜೈನವಾಕ್ಯಮನಿದಂ ಮುಂ ಕೇಳದಾನಿಂತು ನಿ
ಶ್ಚಿಂತಂ ಮೇಯ್ಮಱೆದಿರ್ದು ಕೆಟ್ಟೆನಿನಿತುಂ ಕಾಲಂಗಳೇಂ ಕರ್ಮಮೋ   ೪೬

ವ || ಎಂದಾಗಳ್ ನಿರ್ವೇಗಂ ಪುಟ್ಟೆ ಮಾಡದ ಬಾಗಿಲಿಂದಿೞಿದು ಪೋಪಾಗಳ್ ಕಾಪಿನವಱಿದೊಡೆನ್ನ ಬಗೆಗೆ ವಿಘ್ನಮಕ್ಕುಮೆಂದನುಮಾನಿಸಿ ನೋಡಿ ಪಟ್ಟೀಸದ ಪುಡಿಕೆಯಂ ತೆಱೆದು ಪೞಿಯಂ ನೇತ್ರಮಂ ದುಕೂಲದ ಚಿತ್ರಾವಳಿಯ ವಸ್ತ್ರಂಗಳುಮಂ ತೆಗೆದೊಂದೊದಱೊಳ್ ತೊಡರ್ಚಿ ಕಟ್ಟಿ ಮೊದಲನೊಂದು ಕಂಭದೊಳ್ ಕಟ್ಟಿ ಮಾಡದ ಪೆರಗಣ್ಗದನಿೞಿಯೆ ಬಿಟ್ಟು ಆ ವಸ್ತ್ರಮಾಲೆಯಂ ಪಿಡಿದಿೞಿದು ಬನಮಂ ಪೊಕ್ಕಾ ಋಷಿಯರಿರ್ದ ದೆಸೆಯತ್ತ ಪೋಗಿ ಕಂಡು ಬಲಂಗೊಂಡು ಪೊಡೆವಟ್ಟು ದೀಕ್ಷಾಮಿಚ್ಛಾಮಿ ಭಟಾರಾಯೆನೆ ಭಟ್ಟಾರಕರ್ ಬರೆದು ನೋಡಿ ನಿನಗಿಂ ಮೂಱು ದೆವಸಮಾಯುಷ್ಯಮೊಳ್ಳಿತಂ ಬಗೆದೆಯೆಂದು ದೀಕ್ಷೆಯಂ ಕುಡೆ ಕೆಯ್ಕೊಂಡು ತಪಂಗೆಯ್ಯಲ್ಕೆಡೆಯಿಲ್ಲ ಸನ್ಯಸನ ಪ್ರತ್ಯಾಖ್ಯಾನಮನೀಯಿಮೆಂದು ಬೇಡಿಕೆಯ್ಕೊಂಡಾಗಳ್ ಪ್ರಾಯೋಪಗಮನಂಗೆಯ್ವ ಮಹಾಪುರುಷಂಗೆ ಪರ್ಯಷ್ಟಿಗೆಯ್ಯ ಲ್ವೇಡೆಂದು ಭಟಾರರಲ್ಲಿಂ ಬೆಳಗಾದಾಗಳೊಂದು ದೆಸೆಗೆ ಪೋದರಂತು ಸುಕುಮಾರ ಮುನಿಯಾ ಬನದಿಂ ಪೊಱಮಟ್ಟು ಮಹಾಕಾಳಮೆಂಬಡವಿಯಂ ಪೊಕ್ಕು ನಿರ್ಜಂತುಕ ಪ್ರದೇಶದೊಳ್ ಮೆಯ್ಯನಿಕ್ಕಿ ಧರ್ಮಧ್ಯಾನರೂಢನಾಗಿ

ಕಂ || ಉತ್ತಮ ಗುಣನಿಂತಿರ್ಪಿನ
ಮತ್ತಾತನ ಸೂೞ್ಗೆವಂದ ಪರದಿ ಘನೋದ್ಯ
ದ್ವೃತ್ತಕುಚೆ ನಿದ್ದೆದಿಳಿದೇ
ೞುತ್ತಾತನನಲ್ಲಿ ಕಾಣದತಿಭಯದಿಂದಂ   ೪೭

ವ || ಪರಿಚಾರಕಿಯರನಟ್ಟಿ ಬೇಗಮೆಮ್ಮತ್ತೆಗಳ್ಗಿದನಱಿಪಿಮೆಂದಟ್ಟಿದಾಗಳಲ್ಲಿ ಮುನ್ನಮೆ ತೊಟ್ಟನೆರ್ದೆಯುರಿಯುಂ ಪುಟ್ಟಿ ನಿದ್ರೆಗೆಟ್ಟೆಚ್ಚತ್ತಿರ್ದ ಯಶೋಭದ್ರೆಗಱಿಪಿದೊಡೆ ತಳವೆಳಗಾಗಿಯೆೞ್ದು ತಾನುಮಾಕೆಗಳುಂ ಮಾಡದೊಳಗೆಲ್ಲಂ ನೋಡಿ ಮಗನಂ ಕಾಣದುಮ್ಮಳಿಸುತ್ತಿರ್ದು ಬೆಳಗಾದಾಗಳ್ ಮೇಗಣ ನೆಲೆಯನೇಱಿ ಬಳಸಿಯುಂ ನೋೞ್ದಾಗಳ್ ಮಾಡದೆ ಪೆಱಗೆ ಸುಕುಮಾರಂ ಸಂಸಾರಮಂ ಗೆಲ್ದು ಪೞಯಿಗೆಯ ನೆತ್ತಿಸಿದಂತೆ ಮಿಳಿರ್ದು ಪೊಳೆವ ದುಕೂಲವಸ್ತ್ರಮಾಲೆಯಂ ಕಂಡಲ್ಲಿಂದಮಿೞಿದು ಪೋದನೆಂಬುದನಱಿದು ಬೆಚ್ಚನೆ ಸುಯ್ದು ಬಿದಿಯಂ ಬೈದು ಕಣ್ಣನೀರ್ ಸುರಿಯೆ ಮಾಡದಿಂದಿೞಿದು ಸೊಸೆವಿರ ಮಾಡಂಗಳೊಳೆಲ್ಲಂ ಪೊಕ್ಕರಸಿ ಕಾಣದೆಯಾಕೆಗಳ್ವೆರಸು ಕೊಳದಿಂ ಪೊಱಮಟ್ಟ ಹಂಸೆಗಳ ನೆರವಿಯಂತೆ ನಂದನವನಮಂ ಪೊಕ್ಕು ಮೆಲ್ಲಮೆಲ್ಲನೆ ನಡೆಯುತ್ತುಂ

ಕಂ || ಮಲ್ಲ ಗೆಯೇ ಮಾಮರನೇ
ಪಲ್ಲವದಿಂದೊಪ್ಪಿ ತೋರ್ಪಶೋಕೆಯ ಮರನೇ
ನಲ್ಲನ ಕಂಡಿರೆ ಪೇೞಿಂ
ಮೆಲ್ಲಡಿಗಳ್ ನೋಯೆ ಬಂದ ಮನಸಿಜನಿಭನಂ   ೪೮

ವ || ಎಂದು ವಿಕಳತೆಯಿಂ ಬೆಸಗೊಳುತ್ತುಂ ಬಳ್ಳಿಮಾವಿನ ನಾಗಸಂಪಗೆಯ ಸುರಹೊನ್ನೆಯ ಈೞೆಯ ಬಾೞೆಯ ತೆಂಗಿನ ಕೌಂಗಿನ ನಾರಂಗದ ಮಾದುಫಲದ ಮರಂಗಳ ಮಱೆಯೊಳಱಸುತ್ತುಂ ಸುತ್ತಲುಂ ಬಂದು ನೋಡುತ್ತುಂ ಅಶೋಕೆಯ ಮಲ್ಲಿಗೆಯ ಮಾಧವೀಲತೆಯ ಮಂಟಪಂಗಳೊಳಗೆ ಪೊಕ್ಕು ತೊೞಲ್ದಱಸಿಯೆಲ್ಲಿಯಂ ಕಾಣದೆ ಬೞಲ್ದು ಬೈಗಾದಾಗಳ್ ಮನೆಗೆ ವಂದು ಪಿರಿಯ ಮಾಡದೊಳಿರ್ದು ತೆಱಂಬಿನೊಳ್‌ಬಿೞ್ದ ಮಿನಂತೆ ಮಿಡಿ ಮಿಡ ಮಿಡುಕಿ ಪಱಿದಿಕ್ಕಿದೆಳಲತೆಯಂತೆ ಕೊಱಗಿ ಮಹಾರತ್ನಂ ಸಮುದ್ರದ ನಡುನೀರೊಳ್ ಬಿೞ್ದಂತೆ ಮಱುಗಿ ಬ್ರತಂಗೆಟ್ಟ ಕನ್ನೆಯಂತೆ ಕಂದಿ ದೋಷಂಬೊರ್ದಿದ ತುೞಿಲಸದನಂತೆ ಕುಂದಿ ಚಾರಿತ್ರಂಗೆಟ್ಟ ಋಷಿಯಂತೆ ಮೆಯ್ಯ ಱಿಯದೆ ಕೊಳ್ಪಟ್ಟರಂತೆ ಪುಯ್ಯಲಿಟ್ಟೊಳಱಿಯೞುತ್ತುಮಿರೆ ನೆಂಟರೆಲ್ಲಂ ಬಂದು ಸಂತೈಸುತ್ತಿರ್ದು ನೇಸಱ್ ಮೂಡಿದಾಗಳ್ ಬನ್ನಿಮಿನ್ನು ನಾವೆಲ್ಲ ಮಾತನನಱಸುವ ಮೆಂದೊಡಗೊಂಡು ಮನೆಯಂ ಪೊಱಮಟ್ಟು ಪೊೞಲೊಳಗೆ ತೊೞಲ್ದಱಸುತ್ತುಂ

ಕಂ || ಕಂಡಿರೆ ವಣಿಜೋತ್ತಮನಂ
ಕಂಡಿರೆ ಸುರಪತಿಸಮಾನ ಭೋಗಿಯನಿಂತೇಂ
ಕಂಡಿರೆ ಮನೋಜನಿಭನಂ
ಕಂಡಿರೆ ನೆಗೞ್ದಿಬ್ಬಕುಳನನತಿರ್ಮಳನಂ   ೪೯

ಉ || ಕಂಡಿರೆ ಗಾಳಿಯುಂ ಬಿಸಿಲುಮೆಂಬಿವವೆನ್ನವೊ ಪೇೞಿಮೆಂಬನಂ
ಕಂಡಿರೆ ಚಿಂತೆಯುಂ ಭಯಮುಮೆಂಬಿವುವೆನ್ನವೊ ಪೇೞಿಮೆಂಬನಂ
ಕಂಡಿರೆ ಸಗ್ಗದಿಂದಿೞಿದುಬಂದಮರೇಂದ್ರನ ತೇಜದನ್ನನಂ
ಕಂಡಿರೆ ಮಿಕ್ಕ ಗರ್ಭಸುಖಿಯಂ ಸುಕುಮಾರನನತ್ಯುದಾರನಂ   ೫೦

ವ || ಎಂದೆಲ್ಲರುಮಂ ಬೆಸಗೊಳುತ್ತುಂ ಮತ್ತಮೆಲ್ಲೆಡೆಯೊಳಂ ಪೊಕ್ಕಱಸಿ ನೋಡಿ ಕಾಣದೆ ಪೊೞಲೆಲ್ಲಮಂ ತೊೞಲ್ದು ಬೞಲ್ದು ಬೈಗಾದಾಗಳನಿಬರುಂ ಮಗುೞ್ದು ಬಂದು ಮಾಡಮಂ

ಮಲ್ಲಿಕಾ || ಇಂದ್ರನಿಲ್ಲದ ಸಗ್ಗದಂತಸುವಿಲ್ಲದಿರ್ದೊಡಲಂತಿರುಳ್
ಚಂದ್ರನಿಲ್ಲದ ಪೊೞ್ತಿನಂಬರದಂತನರ್ಘ್ಯ ಲಸನ್ಮಹಾ
ರುಂದ್ರನಾಯಕರತ್ನಮಿಲ್ಲದದೊಂದು ಭೂಷಣದಂತೆ ಗ
ರ್ಭೇಂದ್ರನಿಲ್ಲದ ಮಾಡದೊಂದಿರವುಂ ಪಲರ್ ನೆರೆದಿರ್ದೊಡಂ   ೫೧

ವ || ಅಂತಲ್ಲಿಯೆಲ್ಲರುಂ ನೆರೆದಿರ್ದುಮ್ಮನೆ ಮನೆವಾೞ್ದೆ ಪಸಿವು ನಿದ್ದೆಯೆಂಬಿವನೊಂದುಮ ನಱಿಯದೆ ಚಿತ್ರದ ರೂಪಗಳಂತೆ ನಿಶ್ಚೇಷ್ಟಿತರಾಗಿರ್ಪಿನಮತ್ತ ಸುಕುಮಾರಂ ಮುನ್ನಿನ ಭವದತ್ತಿಗೆ ಕ್ರೋಧಕಷಾಯೋದ್ರೇಕದಿಂ ಸತ್ತು ಸಂಸಾರದೊಳ್ ಭ್ರಮಿಸುತ್ತೀ ಭವದೊಳ್ ನರಿಯಾಗಿ ಪುಟ್ಟಿ ತೊೞಲುತ್ತುಂ ಮಹಾಕಾಳಬನದೊಳಗೆ ಸುಕುಮಾರಂ ನಡೆದ ಪಜ್ಜೆಯೊಳ್ ಕಾಲೊಡೆದು ನೆತ್ತರ್ ಸುರಿದೊಡಾ ನೆತ್ತರ ಪೊಲಸಿನ ನಾತಕ್ಕೆ ಪಜ್ಜೆವಿಡಿದು ಬಂದಲ್ಲಿ ಪಟ್ಟಿರ್ದ ಋಷಿರೂಪಂ ಕಂಡು ಪೆಣನೆಂದು ಬಗೆದು ಸಾರ್ದು ತನ್ನೆರಡುಂ ಮಱಿಗೊಳೊಂದು ಕಾಲಂ ತಾನೊಂದು ಕಾಲಂ ಪತ್ತಿತಿಂಬಾಗಳಾ ಸುಕುಮಾರಮುನೀಂದ್ರಂ

ಕಂ || ಪೋದ ಭವಂಗಳೊಳೊಡಲಿಂ
ದಾದುದು ಕೇಡೆಂದು ಬಗೆದು ಮೆಯ್ಯ ಮಮತ್ವಂ
ಪೋದುದಱಿಂ ಶುಭಮತಿ ತನ
ಗಾದುದಱಿಂ ತಳದರಿರ್ದನುನ್ನತಚಿತ್ತಂ  ೫೨

ವ || ಅಂತಾ ನರಿಗಳ್ ಮೊೞಕಾಲ್ವರಮೊಂದು ದೆವಸಂ ತಿಂದು ಮಱುದೆವಸಮೆರಡು ತೊಡೆಗಳುಮಂ ತಿಂದು ಮೂಱನೆಯ ದೆವಸಂ ನಡುವಿರುಳಪ್ಪಾಗಳ್ ಬಸಿಱಂ ಪಱಿಯೆ ತಿಂದು ಕರುಳನುರ್ಚಿದಾಗಳ್ ಆ ತಿರಿಕೋಪಸರ್ಗಮಂ ಸೈರಿಸಿ ಧರ್ಮಧ್ಯಾನದಿಂ ನಿಶ್ಚಳಮನನಾಗಿ ಮುಡಿಪಿ ಪಂಚಾಣೂತ್ತರೆಗಳ ನಡುವಣ ಸರ್ವಾರ್ಥಸಿದ್ಧಿಯ ನೆಯ್ದಿದಾಗಳ್ ಕಿನ್ನರ ಕಿಂಪುರುಷಾದಿ ದೇವರ್ಕಳಾಸನಕಂಪದಿಂದಱಿದು ಕೃತಾರ್ಥನಾದ ಮಹಾಪುರುಷನ ಶರೀರಮಂ ಪೂಜಿಸಿ ಬರ್ಪಂ ಬನ್ನಿಮೆಂದು ಪೊಱಮಟ್ಟು ಬಂದು ಮಹಾಕಾಳದತ್ತಭಿಮುಖಮಾಗಿ ದೇವನಿಕಾಯಮಾಕಾಶದೊಳ್ ಪೋಪಾಗಳಾ ಯಶೋಭದ್ರೆಯೊರ್ವಳೆ ಮಾಡದ ಮೇಗಣ ನೆಲೆಯನೇಱಿ ಮಾನಸರಾರುಮೆನ್ನ ಮಗನ ಪೋದ ದೆಸೆಯಂ ಪೇೞ್ದರಿಲ್ಲಿಂ ದಿಶಾದೇವತೆಗಳಪ್ಪೊಡಂ ಪೇೞ್ದೊಡೊಳಿತ್ತುಮೆಂದು ಚಿಂತಿಸಿ ಮೆಯ್ಯನಿಕ್ಕಿರ್ದಾಗಳಾಕೆಗೆ ದಿವ್ಯಗಂಧಮಯಮಪ್ಪೆಲರ ತೀಟದಿಂ ಸುಕುಮಾರಂ ಬಂದಂತೆ ರಾಗಮಾಗೆರ್ದು ನೋೞ್ಪಾಗಳುಂ ಶಂಖ ಕಹಳಾರವಂಗಳಂ ಕೇಳ್ದು ಸುಯ್ದು ನಿಂದಾಲಿಸುವಾಗಳ್

ಕಂ || ನಲ್ಲವೊ ಸುಕುಮಾರಾ ನೀ
ನಲ್ಲದರಾರ್ ತೊಟ್ಟನಿಂತು ದೀಕ್ಷಿತರಾದರ್
ಎಲ್ಲ ತಪಂಬಟ್ಟವರೊಳ
ಗೆಲ್ಲಂ ಪ್ರಾಯೋಗಮನಮಿಂತಾರ್ಗಾಯ್ತೋ   ೫೩

ಶಾ || ಇಂತಾವಂ ತಿರಿಕೋಪಸರ್ಗಮನಿವಂ ಸೈರಿಪ್ಪ ಗಂಡಂ ತಗು
ಳ್ದಿಂತಾವೊಂ ಪರಿಣಾಮಮಂ ನಿಱಿಸಿದೊಂ ನಿನ್ನಂತವಷ್ಟಂಭದಿಂ
ದಿಂತಾವಂ ನೆಗೞ್ದಿರ್ದನುತ್ತರ ವಿಮಾನೋತ್ಪನ್ನನಾದೊಂ ನರಂ
ಗಿಂತಾವೊಂಗೆರಡುಂ ಭವಂ ಸಫಲಮಾಯ್ತುತ್ಕೃಷ್ಟ ಪುಣ್ಯಾರ್ಜಿತಂ  ೫೪

ಕಂ || ಧೀರಾ ನಮೋಸ್ತು ಗುಣಗಣ
ಧಾರಾ ರಾಜಿತ ತಪಃಕ್ರಮೋದಿತ ಶೂರಾ
ವೀರಾ ನಮೋಸ್ತು ವಿಳಸ
ದ್ಧಾರಾ ಸಂಯತಿ ವಿನೂತ್ನ ರತ್ನಾಧಾರಾ   ೫೫

ವ || ಎಂದು ಪೊಗೞುತ್ತುಂ ಪೊಡೆವಡುತ್ತುಂ ಪೋಪಾಗಳಾ ಧ್ವನಿಯಿಂದಮೆನ್ನ ಮಗಂ ತಪಂಬಡುತುಮೆ ಪ್ರಾಯೋಪಗಮನವಿಧಿಯಂ ಕೆಯ್ಕೊಂಡು ತಿರಿಕೋಪಸರ್ಗದಿಂ ಮುಡಿಪಿ ಸರ್ವಾರ್ಥಸಿದ್ಧಿಯನೆಯ್ದಿದನೆಂದು ನಿಶ್ಚೈಸಿ ತನ್ನಂತಾನೆ ಸಂತೈಸಿ ಸೈರಿಸಿರ್ದು ಬೆಳಗಾದಾಗಳ್ ಮಾಡದಿಂದಿೞಿದು ಬಂದು ಬಂಧುಗಳುಮಂ ಸೊಸೆವಿರುಮಂ ಬರಿಸಿ ಸುಕುಮಾರನೊಪ್ಪೊಡೆ ಮುನಿದು ಪೋಗಿರ್ದಂ ನೀವೆಲ್ಲಂ ಮಿವುದುಣ್ಬುದು ತಂಬುಲಂಗೊಳ್ವುದು ಚಿಂತಿಸಲ್ವೇಡೆಂದಾಱೆ ನುಡಿದು ಬೞಿಯಂ ಸೊಸೆವಿರ ಮೊಗಮಂ ನೋಡಿ ಬೇಗಂ ಕೆಯ್ಗೆಯ್ದು ಬನ್ನಿಂ ತಿಳಿಪಿ ತರ್ಪಮೆನೆ ಮೊಗಮಿನಿಸಲರ್ದು ಕೆಲಬರಿದೆಂತಪ್ಪಮಾತೆಂದು ವಿಸ್ಮಯಂಬಡುತ್ತಂ ತಂತಮ್ಮ ಮಾಡಂಗಳ್ಗೆ ಪೋಗಿರ್ದೊರ್ವರೊರ್ವರಲ್ಲಿಗೆ ವಂದಿತೆಂದರ್

ಕಂ || ಎನ್ನಂ ಪತಿ ಕಂಡಲ್ಲಿಂ
ಮುನ್ನಮೆ ತಾಂ ಬಾರದಂದು ನಿನಗೆ ಸಹಸ್ರಂ
ಪೊನ್ನನಿರದೀವೆನೆಂದೊಡೆ
ಭಿನ್ನಾಂಬುಜವದನೆ ನುಡಿಗುಮಾಕೆಗೆ ನಯದಿಂ   ೫೬

ವ || ಕಂಡನಿತಱೊಳೆ ಬರ್ಕುಮೆಂಬ ಪೂಣ್ಕೆಯನಱಿಯೆನಬ್ಬಾ

ಕಂ || ಆಂ ಪೋಗಿ ನುಡಿದೆನಪ್ಪೊಡೆ
ತಾಂ ಪಿರಿದನುರಾಗಮಾಗಿ ಬಾರದೆ ಮಾಣ್ದಂ
ದೇಂ ಪಡೆವಾತೊ ನಿನಗೀ
ವೆಂ ಪೊನ್ನಂ ಲಕ್ಕಲೆಕ್ಕದಿಂ ಕಮಳಮುಖೀ  ೫೭

ವ || ಎಂಬ ಮಾತಂ ಕೇಳ್ದು ಮತ್ತೊರ್ವಳಲ್ಲಿಗೆ ಬಂದು ನುಡಿದಾಗಳೆ ಬರ್ಕುಮೆಂಬಗ್ಗಳಿಕೆಯ
ಮಾತನಱಿಯೆನಬ್ಬಾ

ಕಂ || ಆಂ ಕಾಲ್ವಿಡಿದೊಡೆ ಮತ್ಪತಿ
ತಾಂ ಕಡೆಗಣಿಸಿರ್ದೊಡೆನ್ನ ಸರ್ವಸ್ವಮುಮಂ
ನೀ ಕವರ್ವುದೆಂದು ನಚ್ಚಿದ
ಪೊಂಕಂ ಬೞಿಕೇವುದಂದೆ ಸಾವುದು ಪೆಱತೇಂ   ೫೮

ವ || ಎಂದೊಡೊರ್ವಳಿಂತೆಂದಳಿಂತಪ್ಪ ಗಣಿದಮುಮಂ ಪಣಿದಮುಮನಱಿಯೆನಬ್ಬಾ

ಕಂ || ಈ ಮುಳಿಸು ತಿಳಿವ ಮುಳಿಸ
ಲ್ತೇ ಮಾತೆನ್ನೆರ್ದೆಯ ಮಱುಕದಂದಮೆ ಪೇೞ್ದುಂ
ನೀಮೆಲ್ಲಂ ಸುಕುಮಾರ
ಸ್ವಾಮಿಗೆ ಬೞಿವೋಗೆ ಬಾರದಿರ್ಪೆನೆ ಬರ್ಪೆಂ   ೫೯

ವ || ಎಂದು ತನ್ನೆರ್ದೆಯ ಮಱುಕಕ್ಕೆ ಭಯಸ್ಥೆಯಾಗಿ ನುಡಿಯುತ್ತಿರೆ ಮತ್ತೊರ್ವ್ ಳಂತಿಂತೆಂಬವರ ಮಾತಿನೊಳೇನೋ

ಕಂ || ಪೋಗಲೆವೆೞ್ಪುದು ತಡೆಯದೆ
ಬೇಗಂ ಕೆಯ್ಗೆಯ್ವೆನೆಂದು ಕನ್ನಡಿಯಂ ಕೊಂ
ಡಾಗಳೆ ನೊಸಲೊಳ್ ಬೊಟ್ಟಂ
ಬೇಗದಿನಿಡುವಾಕೆಯಿಟ್ಟಳಾ ಕನ್ನಡಿಯೊಳ್   ೬೦

ವ || ಮತ್ತೊರ್ವಳುಂ ಸಂಕಟಂಬಟ್ಟು

ಕಂ || ಉಡೆಯೊಳ್ ತಗುಳ್ಚಿ ಹಾರಮ
ನುಡೆನೊಲಂ ಕಟ್ಟಿ ಕೊರಳೊಳಿನ್ನೇಕಿರ್ಪಂ
ತಡೆಯದೆ ಬನ್ನಿಂ ಬೇಗಂ
ಕಡುಮುಳಿಸಿಂ ಪೋದ ನಲ್ಲನಂ ತರವೋಪಂ   ೬೧

ವ || ಎಂದು ಬಂದು ನಿಂದಾಕೆಯ ಕೆಲದೊಳ್ ಮತ್ತೊರ್ವಳ್

ಕಂ || ಅಂದುಗೆಯಂ ಗಗ್ಗರಮುಮ
ನಿಂದುನಿಭಾನನೆ ತಗುಳ್ಚಿ ಕೆಯ್ಯೊಳ್ ಕೊರಲೊಳ್
ತಂದೆಸೆವ ರತ್ನಹಾರಮ
ನಂದಂಬಡೆ ಕಟ್ಟಿ ತುರಿಪದಿಂ ಪರಿತಂದಳ್   ೬೨

ವ || ಪೆಱತೊರ್ವಳ್ ತನ್ನ ರೂಪುಮಂ ಚದುರಮಂ ಮೆಚ್ಚುವಾಕೆಯಿಂತೆಂದಳ್

ಕಂ || ರೂಪಿನ ಚೆಲ್ವಂ ಮಱಸುಗು
ಮಿ ಪಸದನಮಕ್ಕ ಸತಿಗೆ ಪತಿಯೆ ಕರಂ ಕೂ
ರ್ತಾ ಪೊೞ್ತುಮಂಜುವಂಜಮೆ
ಕೋಪಮನುಡುಗಿಸಲಿಂದೊಂದೆ ಸಾಲದೆ ಬನ್ನಿಂ   ೬೩

ವ || ಎಂದಿಂತು ಮೂವತ್ತಿರ್ವರ್ ಕುಲಸ್ತ್ರೀಯರ್ಕಳುಮಪ್ಪ ಸೊಸೆವಿರೊಂದಾಗಿ ಪೆಱಗೆವರೆಯಲ್ಲಿಂ ಪೊಱಗೆ ಸಮಸ್ತ ಬಂಧುಜನಂಗಳೆಲ್ಲಂ ನೆರೆದು ಬರೆಯೆನ್ನ ಬೞಿಯನೆ ಬನ್ನಿಮೆಂದು ಯಶೋಭದ್ರೆ ಮುಂದೆ ನಡೆದು ಮಹಾಕಾಳದ ಬಟ್ಟೆಯಂ ತಗುಳ್ದು ನಡೆವಾಗಳಲತಗೆಯ ರಸಂ ಪತ್ತಿದಡಿವಜ್ಜೆಯಂತೆ ಕಾಲೊಡೆದು ನೆತ್ತರ್ ಪತ್ತಿದಡಿವಜ್ಜೆಗಳಂ ಕಂಡು ನೋಡಿಂ ನಿಮ್ಮೆಱೆಯನ ಪೋದ ಪಜ್ಜೆಗಳೆಂದು ತೋಱುತ್ತುಂ ಪೋಪನ್ನೆಗಂ ದೇವರ್ಕಳ್ ಶರೀರಪೂಜೆಗೆಯ್ದು ಪೋದಲ್ಲಿಯ ದಿವ್ಯಪುಷ್ಪಗಂಧಂ ತೀಡೆ ಪಿರಿದುಂ ರಾಗಮಾಗಿ ಬಱಿಯಂ ಪೊಲಸುನಾರ್ಪಾಗಳ್ ಬೆಕ್ಕಸಂಬುಟ್ಟು ಮತ್ತಮೆಯ್ದೆವರ್ಪನ್ನೆಗಂ ಏಕಪಾರ್ಶ್ವದೊಳಿರ್ದ ಋಷಿರೂಪಕದ ಮೃತಕಂ ಕಂಡು ಮುಚ್ಚೆವೋಗಿ ಬಿೞ್ದು ನೀಡಱಿಂದೆೞ್ಚರ್ತು ಸೊಸೆವಿರಂ ಕರೆದು ನಿಮ್ಮ ಸ್ವಾಮಿಯೀಯಿರ್ದನೆ ತಿಳಿಪೆ ಬನ್ನಿಮೆಂದು ಬಸಿಱಂ ಪೊಯ್ದುಕೊಳ್ವಾಗಳವರೆಲ್ಲರುಮೆಯ್ದೆವಂದು ನೋಡಿ ತಮ್ಮಂ ತಾವೇ ಬಡಿದೞುತಿರೆ ತಾಯ್ ತಲೆದೆಸೆಗೆ ವಂದು ನಿಂದು

ಕಂ || ಹಾ ಸುಕುಮಾರಾ ಧೀರಾ
ಹಾ ಸುಕೃತಫಲಪ್ರಣೂತ ರಾಶೀ ಭಾಸೀ
ಹಾ ಸುಖಭಾಗೀ ಭೋಗೀ
ಹಾ ಸಕಳ ಧರಾತಳ ಪ್ರಸಿದ್ಧಾ ಶುದ್ಧಾ   ೬೪

ಹಾ ಎನ್ನೊಪ್ಪುವ ಮಱಿಯೇ
ಹಾ ಎನ್ನುತ್ತಮ ಪದಸ್ಥನೆನಿಸಿದ ಕಱುವೇ
ಹಾ ತನ್ನ ಕುಲಪತಾಕಾ
ಹಾ ಎನ್ನರ್ದೆಯಂ ಸುಡಲ್ಕೆ ತಕ್ಕುದೆ ಮಗನೇ   ೬೫

ಆಗಳಱಿದೈ ಸುಧರ್ಮಮ
ನಾಗಳ್ ತಲೆವಱಿದೆಯಾಗಳೆಮ್ಮಂ ತೊಱೆದೈ
ಆಗಳ್ ಮತಿಯಂ ನಿಱಿಸಿದೆ
ಆಗಳ್ ಸಗ್ಗಕ್ಕೆವೋದೆಯೋ ಪೇಱ್ ಮಗನೇ   ೬೬

ವ || ಎಂದಿಂತು ತಾಯ್ ಪಳಯಿಸುವಾಗಳ್ ಮೂವತ್ತಿರ್ವರ್ ಪೆಂಡಿರುಂ ಬಂದೊಂದೊಂದು ದೆಸೆಯೊಳೆಣ್ಬರೆಣ್ಬರಾಗಿ ನಾಲ್ದೆಸೆಯೊಳೋಳಿವಟ್ಟಿರ್ದೊಂದು ಕೆಯ್ಯಂ ತಮ್ಮ ತಲೆಯೊಳ್ ಪೊಯ್ದುಕೊಳುತ್ತುಂವೊಂದು ಕೆಯ್ಯಂ ತಮ್ಮ ಸ್ವಾಮಿಯತ್ತಲ್ ನೀಡಿ ನೀಡಿ

ರಗಳೆ || ಹಾ ವಿಳಸದಿಬ್ಬಕುಳಪದವಿಯೊಳ್ ನಿಂದನೇ
ಹಾ ವಣಿಕ್ಪತಿಯಾಗಿ ಧರಿಯೊಳ್ ಸಂದನೇ   ೧

ಹಾ ವಿಪುಳಗುಣ ಪುರುಷರತ್ನ ಮಾಗಿರ್ದನೇ
ಹಾ ವಿನುತ ಗರ್ಭಸುಖಿಯಾಗಿ ಸಲೆ ಬರ್ದನೇ   ೨

ಹಾ ಎನ್ನ ರಾಜಪೂಜಿತನಾಗಿ ಮಿಕ್ಕನೇ
ಹಾ ಎನ್ನ ಮಚ್ಚಱಿದು ಚಿತ್ತದೊಳ್ ಪೊಕ್ಕನೇ   ೩

ಹಾ ಕೂರ್ತ ವನಿತೆಯರನಾಱಿಸಲ್ ಬಲ್ಲನೇ
ಹಾ ಕೆಟ್ಟೆನೀ ಮುಳಿಸಿನಂದಮೇಂ ನಲ್ಲನೇ   ೪

ಹಾ ನಿನ್ನ ಕಣ್ಣಱಿಯದುಱದೆ ಮೇಣ್ ನಡೆದೆಮೇ
ಹಾ ನಿನ್ನ ರಸಮಱಿಯದುರ್ಕಿ ಮೇಣ್ ನುಡಿದೆಮೇ  ೫

ಹಾ ನಿನ್ನ ಬರಿಸದಂದೇನೊ ಕೆಯ್ದೆಯ್ದೆಮೇ
ಹಾ ನಿನ್ನ ನೊಲಿಸುವಂತೇನಮೇಗೆಯ್ದಮೇ   ೬

ಹಾ ನಿನ್ನ ಮಚ್ಚಿಂಗೆ ಬೇಗಮೇಂ ಬಾರೆಮೇ
ಹಾ ನಿನಗೆ ಸಲೆ ಮನದೊಳೇನೊ ಪೇೞ್ ಕೊರೆಮೇ  ೭

ಹಾ ಎನಗೆ ಕೂರ್ತು ನೀಂ ತಿಳಿಯದಿಂತಿರ್ಪುದೇ
ಹಾ ಎನಗೆ ಪಿರಿದೊಂದು ಮಱುಕಮಂ ತರ್ಪುದೇ   ೮

ಹಾ ಪೊೞಲ ನಡುವಗ್ಗಳಿಕೆವೆರಸಿದಿರವೆತ್ತ
ಹಾ ಪಿರಿಯ ಮಸಣದೊಳಗಿಂತು ಪೊಕ್ಕಿರವೆತ್ತ   ೯

ಹಾ ಸರ್ವತೋಭದ್ರ ಮಾಡದೊಳಗಿರವೆತ್ತ
ಹಾ ಸುರ್ವುಗೊಂಡಿರ್ದ ಪೆರ್ಮೆಳೆಯ ಕೆಳಗೆತ್ತ   ೧೦

ಹಾ ಪೊಳೆವ ಮಾಣೀಕದ ಸೊಗಯಿಪ್ಪ ಬೆಳಗೆತ್ತ
ಹಾ ಪರ್ವಿ ಪಸರಿಸಿದ ಕಾಯ್ವ ಕಡುವಿಸಿಲೆತ್ತ   ೧೧

ಹಾ ಮದನನಂತಪ್ಪ ರೂಪಿನೊಳ್ಪಿದುವೆತ್ತ
ಹಾ ಮರುಳತೆಱನಪ್ಪ ಋಷಿರೂಪಮಿದುವೆತ್ತ   ೧೨

ಹಾ ರತ್ನಭೂಮಿಯೊಳ್ ನಡೆವೊಂದು ನಯವೆತ್ತ
ಹಾ ರೌದ್ರಮಪ್ಪೆಡೆಗೆ ನಡೆವ ನಿರ್ಭರಮೆತ್ತ   ೧೩

ಹಾ ಪಂಚಶಯ್ಯೆಯೊಳಗೊಱಗುವಿಂಬದುವೆತ್ತ
ಹಾ ಪರಲಮೊನೆಯೊತ್ತೆ ನೆಲವಕ್ಕೆಯಿದುವೆತ್ತ   ೧೪

ಹಾ ನಲ್ಲರೊಳ್ ನಲಿದು ತಳ್ತೊಪ್ಪುವಿರವೆತ್ತ
ಹಾ ನರಿಗಳುಗಿದಗಿದು ತಿಂಬ ಪೋರ್ಕುಳಿಯೆತ್ತ   ೧೫

ಹಾ ಮನೋಹರಮಪ್ಪ ಸುರತಸುಖದೊಳ್ಪೆತ್ತ
ಹಾ ಮಸಗಿ ನರಿ ಪಾಯ್ದು ತಿಂಬ ವೇದನೆಯೆತ್ತ   ೧೬

ಹಾ ಎಂತು ಸೈರಿಸಿದೆಯಿ ಪರಿಯ ನೋವಿನೊಳ್
ಹಾ ಎಲ್ಲಿ ಪುಟ್ಟಿದೈ ಸ್ವಾಮಿಯೀ ಸಾವಿನೊಳ್   ೧೭ ೬೭

ಕಂ || ಎಂದೊಡನೊಡನನಿಬರುಮಿರ
ದೊಂದಿ ಕರಂ ಪಳಯಿಸುತ್ತುಮಿರೆ ಬಂಧುಜನಂ
ಬಂದು ಕಡುದುಃಖಂಗೆಯ್ದಿಂ
ತೆಂದರ್ ಬೞಿಕಿಂತು ದುಃಖಮೞಿಯದು ಕೇಳಿಂ   ೬೮

ವ || ನಿಮ್ಮ ಬಸಿಱಂ ಪೊಯ್ದು ಕೊಂಡೊಡೆ ನೀಗದಱಿವು ಕೆಯ್ಕೊಂಡೊಡೆ ನೀಗುಗಂ ಕಣ್ಣನೀರ್ ಸುರಿದೊಡೆ ಪೋಗದು ಧರ್ಮದತ್ತಲ್ ಮನಂ ಪರಿದಡೆ ಪೋಕುಂ ಬಾಯಂ ಬಿಟ್ಟಲ್ಲಿ ತೊಲಗದು ತಪಂಬಟ್ಟಲ್ಲಿ ತೊಲಗುಗುಂ ಒಡನೆ ಸತ್ತಲ್ಲಿ ಕಿಡದು ಸುಗತಿವೆತ್ತಲ್ಲಿ ಕಿಡುಗು ಮೆಂದಿಂತಾಱೆ ನುಡಿದವರನಲ್ಲಿಂ ತೊಲಗಿಸಿ ಬಂದು ಶ್ರೀಖಂಡ ತಾಮುಮವರುಂ ನೀರತಡಿಗೆ ವಂದಲ್ಲಿ ಮೂವತ್ತಿರ್ವರ್ ಪೆಂಡಿರುಂ ಲೌಕಿಕಕ್ರಿಯೆಯೊಳೆ ತಂತಮ್ಮ ಕರ್ಣ ಪತ್ರಂಗಳ್ವೆರಸಾಭರಣಂಗಳೆಲ್ಲಮಂ ಕಳೆದು ನೀರಿೞಿದು ಬಂದು ಪೊೞಲಂ ಪೊಕ್ಕು ನಡೆವಾಗಳ್

ಕಂ || ಅತ್ತೆಯುಮಾ ಸೊಸಿವಿರುಮಿ
ನ್ನಿತ್ತ ಜಿನಾಲಯದೊಳಲ್ಲ ದೆಮ್ಮಾಲಯದೊಳ್
ಮತ್ತೆಂತುಮಿರ್ಪೆವಲ್ಲಮೆ
ನುತ್ತಾಗಳೆ ಮುಗುೞ್ದು ಬಂದು ಬಸದಿಯೊಳಿರ್ದರ್   ೬೯

ವ || ಇರುತ್ತುಂ ತಮ್ಮ ಮನೆಯಂ ಕ್ರಮದವರ್ಗೆ ಕೊಟ್ಟುಳ್ಳುದೆಲ್ಲಮಂ ದಾನಂಗೆಯ್ದು ಯಶೋಭದ್ರರೆಂಬಾಚಾರ್ಯರಲ್ಲಿಗೆ ವಂದು ದೀಕ್ಷೆಯಂ ಕೆಯ್ಕೊಂಡು ತಪಂಗೆಯ್ದು ಕಡೆಯೊಳ್ ಸುಗತಿಯನೆಯ್ದಿದರಿಂತಪ್ಪ ಸುಕುಮಾರಸ್ವಾಮಿ ತೊಟ್ಟನೊರ್ಮೆಯೆ ಲೋಕವಿಭಾಗಸ್ಥಿತಿಯಂ ಕೇಳ್ದಾಗಳೆ ನಿರ್ವೇಗದಿಂ ಪೊಱಮಟ್ಟು ಬಂದು ತಪಮಂ ಕೈಗೊಂಡು ತಿರಿಕೋಪಸರ್ಗಮಂ ಸೈರಿಸಿ ಸರ್ವಾರ್ಥಸಿದ್ಧಿಯಂ ಪಡೆದನೆಂಬುದಂ ಕೇಳ್ದವ ಧಾರಿಸಿಯಾದೊಡಮಱಿದು ನೆಗೞ್ವುದೀ ಮೆಯ್ಯೊಳ್ ಮೋಕ್ಷಗತಿವಡೆವುದೆಂತೆಂಬಾ

ಮ || ಅಱಿತಂ ಮುಂಬಯಣಂ ಲಸದ್ಗುಣಗಣಂ ಮೆಯ್ಗಾಪಿನಾಳ್ ಕೊರ್ಮೆಯ
ೞ್ಕಱಿನೊಳ್ ತಳ್ತೊಡವರ್ಪ ಕಾಂತೆ ನೆಗೞುತ್ತಿರ್ದೊಳ್ತಪಂ ಸಂಬಳಂ
ನೆಱೆದಿರ್ದುತ್ತಮ ಸಂಯಮಂ ಸಿವಿಗೆಯಾಗಿ ಮಾೞ್ಕೆಯಿಂ ಪೋಪುದೇ
ತೆಱದಿಂ ಬೆರ್ಚದೆ ಮೋಕ್ಷದಲ್ಲಿಗೆ ನಯಂ ಮಾಣ್ದಿರ್ಪುದೇ ಜೀವನೇ   ೭೦

ಗದ್ಯ || ಇದು ಜಿನಶಾಸನ ಪ್ರಭಾಸಲ ಶೀಲೋದಿತ ವಿಧಿತ ಬಂಧುವರ್ಮನಿರ್ಮಿತಮಪ್ಪ ಜೀವಸಂಭೋಧನಾ ಗ್ರಂಥಾವತಾರದೊಳ್ ಲೋಕಾನುಪ್ರೇಕ್ಷಾ ನಿರೂಪಣಂ ಸುಕುಮಾರ ಸ್ವಾಮಿ ಕಥಾನುವರ್ಣನಂ

ಷಷ್ಠಾಧಿಕಾರಂ