. ಅಶರಣಾನುಪ್ರೇಕ್ಷೆ

ಕಂ || ಶ್ರೀಯುಮಘವಶದೆ ಕಟ್ಟಿ
ರ್ದಾಯುಂ ಕಿಡುವಲ್ಲಿ ನಿನಗೆ ಶರಣಿಲ್ಲಾರುಂ
ಬಾಯಂ ಬಿಟ್ಟು ವಿಮೋಹದಿ
ನಾಯಾಸಂಬಟ್ಟು ಕೆಟ್ಟು ನೆಗೞಲ್ ಜೀವಾ ೧

ವ || ಈಯದುದನಱಿದು ಬೇಡುವೊಡಂ ಕಾಯದುದನಱಿದು ಮಱುಗುವೊಡಂ ಅೞಿ ಪಕ್ಕುಂ ಬಗೆವುದಕ್ಕುಮೆ

ಶಾ || ಬಲ್ಲಂ ಬಿದ್ಯೆಗಳೆಲ್ಲಮಂ ಭುವನದೊಳ್ ಮಿಕ್ಕಿರ್ದನೀತಂ ಕರಂ
ಬಲ್ಲಿತ್ತೀತನ ದುರ್ಗಮಾರ್ಗಮರಿಯಂ ವಿಕ್ರಾಂತದಿಂ ಮರ್ತ್ಯುದೊಳ್
ಬಲ್ಲಾಳೀತನೆನಲ್ಕೆ ತಕ್ಕ ಪುರುಷಂ ಮತ್ತನ್ಯರಂ ಕಾವ ಮ
ತ್ತೆಲ್ಲಂ ಬಿಟ್ಟು ಪೊಡರ್ಪುಗೆಟ್ಟು ಜವನಿಂ ಕೇಳ್ ತಾನುಮೞ್ಕಾಡಿದಂ ೨

ವ || ಮೊಲೆವಾಲೆ ನಂಜಪ್ಪೊಡಂ ಕಾವರೆ ಕಣೆಗಳ್ವೊಡಂ ಮೆೞ್ಪಡುವಿರೆಂಬುದೇಕೆ

ಕಂ || ಒಡಮೆಯುಮೊಡಲುಂ ನೆಟ್ಟನೆ
ಕಿಡದನ್ನೆಗಮಿರ್ಪವೆಂಬೆ ಜೀವಾ ನೀಂ ಮು
ನ್ನೊಡರಿಸಿದಘಮುಂ ಕಾಲಮು
ಮಡಸುವಿನಂ ಮೃತ್ಯುವಡಸೆ ಕಾವರುಮೊಳರೇ ೩

ವ || ಕರ್ಮವಡಸಿದೆಡಱುಮಂ ಮೃತ್ಯು ನೆಱೆದ ಸಾವುಮನಾರ್ಗಂ ಕಾಯಲಾಗ ದಂತುಮಲ್ಲದೆಯುಂ ನಿಮ್ಮಿರ್ದಿರವಂ ಬಗೆಯಿರೆ

ಉ || ಅಂತಕನೆಂಬ ಠಕ್ಕನತಿಭೀಕರ ಸಂಸ್ಕೃತಿಯೆಂಬ ಕಾನನಾ
ಭ್ಯಂತರದಲ್ಲಿಗೊಯ್ದಿರಿಸಿ ನೆಟ್ಟನೆ ನಂಬಿಸಿ ಮೋಹಮೆಂಬ ಸೊ
ರ್ಕಂ ತಡವಿಲ್ಲದಿಕ್ಕದೊಡೆ ಸೊರ್ಕಿದರಂ ಕೊಲೆ ತಳ್ವುದಾವುದೇ
ಮಂತಣಮಾವುದಾಸೆ ಪರಿರಕ್ಷಿಸುವರ್ ಪೆಱರಾರೊ ಜೀವನೇ ೪

ವ || ಅಡವಿಯ ನಡುವೆ ಠಕ್ಕನಿಕ್ಕಿದ ಸೊರ್ಕು ತಗುಳ್ವೊಡಂ ಸಂಸಾರದ ನಡುವೆ ಮೋಹಂ ತಗುಳ್ವೊಡಮಲ್ಲಿ ಠಕ್ಕನಿಕ್ಕಿದ ಕೊಲೆಯುಮನಿಲ್ಲಿ ಜವನ ಕೊಲೆಯುಮನಾರ್ ಕಾವರ್

ಕಂ || ಯಂತ್ರಂಗಳುಮಮಿತ ಮಹಾ
ಮಂತ್ರಂಗಳುಮನುಪಮಾನಮೆನಿಸಿದ ಪಲವುಂ
ತಂತ್ರಂಗಳುಮೇಂ ಕಾವುದೆ
ಸಂತ್ರಾಸಕರೋಗ್ರ ಮೃತ್ಯುರಾಜನ ಬರವಂ ೫

ವ || ಗಂಟಿಯಂ ಪುಗಲೀಯದಿಕ್ಕಿದ ಬೇಲಿ ಕಿಚ್ಚುಕೊಳೆ ಕಾಗುಮೆ ಸಂತವಣೆಗೆಂದು ಮಾಡಿದ ಮಂತ್ರತಂತ್ರಾದಿಗಳ್ ಮೃತ್ಯುವಂ ಕಾಯಲಾರ್ಕುಮೆ ಕಾಗುಮೆಂಬಾಸೆಯೊಳ್ ಮಾಡಿದಪಾಯಂಗಳೆಲ್ಲ ಮಪಾಯಂಗಳಾಗಿ ಮಗುೞ್ದುದನಿಲ್ಲಿಯೆ ಕಾಣಲಾಗಾ

ಉ || ಬಲ್ಲಿದರಪ್ಪವೆರ್ ನೆರೆದು ಪಟ್ಟಮೆನೊಪ್ಪಿರೆ ಕಟ್ಟಿ ಧಾತ್ರಿಗಂ
ವಲ್ಲಭನೀತನೆಂದು ಬಳಸಿರ್ದಸಿಪಂಜರದಂತೆ ಕೈದುಗೊಂ
ಡೆಲ್ಲರುಮಿರ್ದು ಕಾಯೆ ಸೊಡರಂತವರಾಯುವೆ ಪೋಗೆ ಕೇಳ ತ
ಳ್ವಿಲ್ಲದೆ ತಮ್ಮ ಚಾಮರದ ಗಾಳಿಯ ಪೊಯ್ಲೊಳೆ ಪೋಪ ಮಾೞ್ಕಿಯೊಳ್ ೬

ವ || ದೂದುವೋದನಱಿಪುವಂತೆ ಪಿರಿಯರಪ್ಪರಸುಗಳ್ ಮಾಡಿದ ಕಾಪು ಕಾಪಾದುವೆ ಕಾಯ್ಪಾದುವೆಂದೊಡಾವಂಗಾವನಪ್ಪಂ

ಕಂ || ನೆಱೆಯದ ಕಳೆಯಿಂ ಚಂದ್ರಂ
ಪೆಱೆಯಾಗಿರೆ ಕೂರ್ತು ತಲೆಯೊಳಿಟ್ಟೀಶ್ವರನುಂ
ನೆಱೆದನೊ ಪೆರ್ಚಿಸಲದಱಿಂ
ಪೆಱಂ ಪೆಱಂಗಾಗಲಾರ್ಪ ಮನುಜರುಮೊಳರೇ ೭
ವ || ದೇವನೆಂದು ಬೆಸೆದಿರ್ಪಾತನುಂ ತನ್ನ ತಲೆಯೊಳಿಟ್ಟಲ್ಲಿಯುಂ ಚಂದ್ರಂಗೆ ಪೆರ್ಚಂ ಮಾಡಲ್ ನೆಱೆದೊನಿಲ್ಲ ಮತ್ತಂ

ಚಂ || ತನುವಣಮಿಲ್ಲ ಕಷ್ಟನತಿ ದುಷ್ಟನಕಾರಣಮಪ್ಪ ರಾಹು ತಾಂ
ದಿನಕರನಂ ಪ್ರತಾಪಭರನಂ ವಿಳಸತ್ಕರನಂ ಪ್ರಕೋಪದು
ರ್ವಿನದೊಳೆ ನುಂಗುವಂ ಗಡವನಂ ತ್ರಿಜಗದ್ಭಯಕೃನ್ಮ ಹಾಂತಕಂ
ಮನುಜರನೆಯ್ದೆವಂದಡಸೆ ಕಾವವನಾವನೊ ಭವ್ಯಜೀವನೇ ೮

ವ || ಅಂತೇಱಿದನಪ್ಪ ರಾಹುವಿನ ಕೋೞ್ಗಂ ಪ್ರತಾಪಿಯಪ್ಪಾದಿತ್ಯಂ ಕಾಯಲಾರ್ತನಿಲ್ಲೆಂದೊಡೆ ಬಲ್ಲಿದನಪ್ಪ ಜವನ ಕೊಲೆಯನಲ್ಪಸತ್ವರಪ್ಪ ಮನುಷ್ಯರೆಂತುಂ ಕಾಯಲಾರ್ಪರೆ

ಕಂ || ಕರಮಸಿಯನಾದ ದೆವಸಂ
ಹರಿಣಧರಂ ದಿನಪನಲ್ಲಿ ಗಾಸೆಯೊಳಂದಂ
ತಿರೆ ತಾಂ ಪೋದಂ ಪೋದಂ
ತಿರೆ ಕೇಳ್ ಪೊಱಮಟ್ಟನಾವೊನಾವಂಗಪ್ಪಂ ೯

ವ || ಅಮಾವಾಸ್ಯೆಯಂದು ಚಂದ್ರಂ ಕರಂ ಕುಂದಿ ತನ್ನಿಂ ಕರಂ ಪ್ರಭುವಂ ಸಾರ್ವೆನೆಂದಾದಿತ್ಯ ಮಂಡಳದೊಳಗಂ ಪೊಕ್ಕಿರ್ದೊಡಮಾತನುಮಾತನಂ ಸಂಪೂರ್ಣಂ ಮಾಡಿ ಕಳಿಪಿದನಿಲ್ಲ ಮುನ್ನಂ ಬಂದ ವೇಳೆಯೊಳೆ ಪೊಱಮಡಿಸಿ ಕಲೆದನೆಂದೊಡುೞಿದವರಪ್ಪರೆಂಬೀ ಮಾತಂ ಮಱೆವುದಲ್ಲದೆಯುಂ

ಮ || ಅಡಿಯೊಳ್ ದುಷ್ಟರನಿಟ್ಟು ಮೇಗಮೃತಭುಗ್ವಾಸಂಗಳಂ ಮಾಡಿ ತಾಂ
ನಡುವಿಟ್ಟೀ ನರರಂ ಧರಾಬ್ಧಿಗಳಸಂಖ್ಯಾಕಂಗಳಂ ಸುತ್ತಿ ಮೇಣ್
ಪಡೆದಲ್ಲಿಂ ಪೊಱಗಂ ತ್ರಿವಾಯುಗಳನಿಟ್ಟಾಕಾಶದಿಂ ವೇಷ್ಟಿಸಿ
ರ್ದೊಡಮೇಂ ಪೇೞಲ್ ವಿಧಿ ಮಂತ್ರಿ ಚಕ್ರಿಯುಮನಿಂತೀ ಯಂತ್ರದಿಂ ಕಾವನೇ ೧೦

ವ || ವಿಧಾತ್ರನೆಂಬ ಮಂತ್ರವಾದಿ ಬರೆದೊಂ ಗಡೀ ಮಹಾಯಂತ್ರಮನದೆಂತೆಂದೊಡೆ ಕಾಪಿಂಗಾಸೆವಟ್ಟ ದೇವದತ್ತಂ ಯಂತ್ರದ ನಡುವೆ ತಂದಿರಿಸಿದಂತೀ ಮನುಷ್ಯಲೋಕ ದೊಳಗ್ಗಳಮಪ್ಪ ಚಕ್ರವರ್ತಿಯುಂ ವೈರಿವರ್ಗಮನಡಿಯೊಳಿಟ್ಟಂತೆ ನರಕಲೋಕಮಡಿಯೊಳಿರ್ದಮೃತಬೀಜಾಕ್ಷರಂಗಳಂ ಮೇಗಿಟ್ಟಂತೆ ಸ್ವರ್ಗಲೋಕಂ ಮೇಗಿರ್ದುದು ಪೃಥ್ವೀಮಂಡಲಮುಮಪ್ಪಾ ಮಂಡಲಮುಮಂ ಬಳಸಿ ಬರೆದಂತಸಂಖ್ಯಾತ ದ್ವೀಪ ಸಮುದ್ರಂಗಳುಂ ಬಳಸಿಯುಮಿರ್ದುವು ಪೊಱಗಂ ತ್ರಿವಾಯುಮಂಡಲಂಗಳಿಂ ವೇಷ್ಟಿಸಿದಂತೆ ಘನೋದಧಿ ಘನನಿಳಯ ತನುವಾತಮೆಂಬ ಮೂಱುಂ ಗಾಳಿಗಳುಂ ಸುತ್ತಿರ್ದುವಲ್ಲಿಂ ಪೊಱಗಂ ಗಗನಮಂಡಳಮಂ ಬಳಸಿ ಬರೆದಂತೆತ್ತ ನೋೞ್ಪೊಡ ಮನಂತಮಪ್ಪಾಕಾಶಮಿವೆಲ್ಲಮಂ ಪರಿವೃತಮಾಗಿರ್ದುದಿಂತಪ್ಪ ಲೋಕಮೆಂಬ ಮಹಾಯಂತ್ರ ದೊಳಗಿರ್ದ ಮನಸ್ಯೋತ್ತಮನಂ ವಿಧಾತ್ರನೆಂಬ ಮಹಾಮಂತ್ರವಾದಿಯುಂ ಕಾಯಲಾಱನೆಂದೊಡಿಂ ಕಾಪಿಂಗಾಸೆವಡುವುದೇಕೆ

ಕಂ || ಎನಿತೊಳವು ಕಾವುಪಾಯಮ
ನನಿತಱೊಳಂ ನೆಟ್ಟನನ್ಯರಿಂ ತನ್ನಿಂದಂ
ತನುವಂ ಕಾಯಲ್ ಬಾರದು
ನಿನಗಾಗ್ರಹಮೇಕೆ ಪೇೞ ಮೆಯ್ಯೊಳ್ ಜೀವಾ ೧೧

ವ || ಬಲೆಯೊಳ್ ತೊಡರ್ದ ಪಕ್ಕಿಗೆ ಬರ್ದುಂಕುವಾಸೆಯಿಲ್ಲದಂತೆ ಮೋಹದೊಳ್ ತೊಡರ್ದ ಮನಷ್ಯಂಗೆ ಆವುದಾಸೆ ಸರ್ವಸಂಗಪರಿತ್ಯಾಗಂಗೆಯ್ದ ಮಹರ್ಷಿಯಾದೊಡಂ

ಮ || ನಿಱಿಸಲ್ವೇೞ್ಪುದು ಮೇಯ್ಯನೀ ತಪದ ಪೆರ್ಚಿಂತಲ್ಲದಂತಾಗದೇಂ
ನೆಱೆದೋಷಂಗಳನೆಲ್ಲಮಂ ಕಳೆದು ಬಂದಾಹಾರಮಂ ಕೊಳ್ವುದ
ರ್ಕೆಱಗಲ್ ಕೊಕ್ಕರಿಪಂದಮಂ ಮನಿಪರೊಳ್ ಕಂಡಲ್ಲಿ ಸಂಸಾರದೊಳ್
ಮಱುಗುತ್ತಿರ್ಪೆಲೆ ಜೀವ ನೀಂ ಮರುಳೆಯೋ ಪೇೞ್ ಕಾವರಂ ನಂಬಿದೋ ೧೨

ವ || ಮಡುವಿಂದಂ ಪೊಱಮಟ್ಟು ಬಿಸಿಲೊಳಿರ್ದ ಶೀತಕ್ಕೞ್ಕಿ ನಡುಗುಗಂ ಮಡುವಿನೊಳಗಿರ್ದಾತಂ ನಡುಗದಂತೆ ಸಂಸಾರವ್ಯಾಪಾರಕ್ಕೆ ಪೊಱಗಾದ ಮಹರ್ಷಿಯರ್ಕಳು ಮಹಾರಂಗೊಳ್ವನಿತರ್ಕೆ ಬೆರ್ಚುವರ್ ಸರ್ವಾವಸ್ಥನಾಗಿರ್ಪ ಜೀವಾಂ ನೀಂ ಬೆರ್ಚದಿರ್ಪು ದಾವುದಾಸೆ ಪೇೞೆಂದು ಗೃಹಸ್ಥರನಲೆದಿನಿಸಾನುಮಱಿಪಿ ನೆಗೞ್ವ ಮಹರ್ಷಿಗಂ ಕಿಱಿ ದನಱಿಪುವೆನದೆಂತೆಂದೊಡೆ

ಕಂ || ಪೊಲ್ಲಮೆಗಳೆಯ್ದೆವಂದೊಡ
ವೆಲ್ಲಂ ತಪದಿಂದೆ ಕಿಡುಗುಮೆಂದೊಳ್ತಪದಿಂ
ಗೆಲ್ಲಂಗೊಂಡುಂ ಸೋಲ್ವಂ
ಗಿಲ್ಲ ಶರಣ್ ಬಗೆವೊಡದಱಿನಳಿಪಲ್ ಮುನಿಪಾ ೧೩

ವ || ಪಗೆವರೆಲ್ಲರುಮನಿಕ್ಕೆ ಕೊಳುಗುಳಂ ಕೊಳ್ವನಿತು ಪೊೞ್ತಿನಲ್ಲಿ ನಿಲಲಾಱದೋಡಿಪೋಗಿ ಸೋಲಮಂ ಮಾಡಿಕೊಳ್ವಂತೆ ಪರಿಗ್ರಹಮನೆಲ್ಲ ಮನೀಡಾಡಿ ಬಂದಗ್ಗಳಮಪ್ಪ ತಪಮಂ ಕೆಯ್ಕೊಂಡು ನೆಗೞುತ್ತಿರ್ದು ಕೆಲವಾನುಂ ದೆವಸಕ್ಕೆ ಸೈರಿಸಲಾಱದೞಿಪಿ ನಿನಗೆ ಸೋಲಮನೇಕೆ ಮಾೞ್ಪಯ್

ಉ || ನೋಡ ಗೃಹಸ್ಥರುಂ ಕರಮೆ ನಲ್ಲಳ ದೋಷಮನೊರ್ಮೆ ಕೇಳ್ದೊಡಂ
ನೀಡಿರಲೀಯದಂದೆ ಕಳೆವರ್ ಕಡುಗೂರ್ತರುಮಂ ತಪಸ್ವಿ ನೀಂ
ನೋಡುತುಮಿರ್ಪ ನಿನ್ನ ಕಡುದೋಷಮನೋವದೆ ಬೆರ್ಚಿ ಬೇಗಮೀ
ಡಾಡದೆ ನೀನದಂ ಪಿಡದಘಂಬಡೆ ನೆಟ್ಟನೆ ಕಾವನಾವನೋ ೧೪

ವ || ಅಂತೆ ಪೊಲ್ಲಮೆಯೊಳ್ ತೀವಿರ್ದ ಗೃಹಸ್ಥರೆಲ್ಲಂ ಕಣ್ಣೆವೆ ಮಱೆಯಾದೊಡೆ ಬಾೞದನಿತಂ ಮಾೞ್ಪ ಸ್ನೇಹದ ಪ್ರಾಣವಲ್ಲಭಯುಮಂ ದೋಷಂಗೆಯ್ದಳೆಂಬುದಂ ಕೇಳ್ದ ನಿತಱೊಳೆ ಪೊಱಮಡಿಸಿ ಕಳೆವರೆಲೆ ತಪಸ್ವಿ ನೀಂ ಪೊಲ್ಲಮೆಗೆ ಕರಂ ಗೆಂಟಾಗಿರ್ದುಂ ನಿನ್ನ ದೋಷಮಂ ಕಂಡುಮೇಕೆ ಕಳೆಯದಿರ್ಪಯ್ ಬೇಗಂ ಕಳೆಯಲಾಱದೊಡೆ ಸೂಜಿಯ ಬೞಿಯ ದಾರದಂತೆ ದೋಷದ ಬೞಿಯನೆ ಪಾಪಂ ತಗುಳ್ದು ಬರ್ಕುಮದಱಿಂ ನೀಂ ಕರಂ ಪ್ರಯತ್ನಪರನಪ್ಪುದು

ಕಂ || ಪೊಲ್ಲರ ಸಮೀಪದೆಡೆಯೊಳ್
ನಿಲ್ಲದು ತಪಮೂರ್ಗೆವಂದ ಪುಲ್ಲೆಯ ತೆಱದಿಂ
ಬಲ್ಲಂದದಿನೆಂತುಂ ತ
ಕ್ಕಲ್ಲಿರ್ಪುದು ಕಾವೆನೆಂಬವರ್ ಗುಣಗಣಮಂ ೧೫

ವ || ಗೇಹಾಶ್ರಮಧೊಳ್ ಪಣಮಂ ಕಾಯಲಾಗದೆಂದೊಡೆ ಗುಣಮಂ ಕಾಯಲಾರ್ಕುಮೆ ಅದಱಿಂ ಗೇಹಾಶ್ರಮಮೇವುದತ್ತ ನೋಡದಿರೆಲೆ ತಪಸ್ವಿಯದಱಿಂ ನಿನಗೆ ಮನೆವಾೞ್ತೆ ಪೊಲ್ಲ

ಚಂ || ದೆಸೆಗಳನುಟ್ಟು ತೊಟ್ಟು ಗುಣಭೂಷಣಮಂ ತಪದೊಂದು ಪೆರ್ಚನುಂ
ಡೊಸೆದು ಗುಹಾಗೃಹಾಂತರದೊಳಿರ್ದು ಚರಿತ್ರ ಕಳತ್ರದಲ್ಲಿ ಮೇ
ಳಿಸಿ ನಿಲೆ ಸೌಖ್ಯಮಂ ಪಡೆವಯಿ ಮನೆವಾೞ್ತೆ ಯನೊಲ್ಲದೊಳ್ಪನೊ
ಕೈಸೆವ ಗೃಹಾಶ್ರಮಂ ಸುಖಮನೀಗುಮೆ ಕಾಗುಮೆ ಪೇೞ್ ತಪೋಧನಾ ೧೬

ವ || ದ್ರವ್ಯಂಗೊಂಡೊರ್ವನೆ ಬೇಡವಳ್ಳಿಗೆ ಪೋದೊಡಂ ತಪಂಗೊಂಡೊರ್ವನೆ ಮೋಹದೊಳ್ ಮನೆಯೊಳಿರ್ದೊಡಮಾಯಿರ್ವರ ಕೇಡಿಂಗಂ ಮಱುಗಲ್ವೇಡ ಮತ್ತಮೊಂದು ಮಾತಂ ಕೇಳಿಮದಾವುದೆಂಬಾ

ಕಂ || ಪರಹಿತದೆ ನೆಗೞ್ವೆನಾನಿಂ
ಪರತ್ರೆಯಂ ಪಡೆವೆನೆಂಬ ಮುನಿಪಾ ನೀಂ ಮ
ಚ್ಚರಮಂ ಚಿತ್ತದೊಳಿನಿತುಮ
ನಿರಲೀಯದಿರಿತ್ತೊಡದುಮೆ ಕಿಡಿಕುಂ ನಿನ್ನಂ ೧೭

ವ || ಕೋಟೆವೊಕ್ಕಂಗಂತಃಕ್ಷೋಭಮಾದೊಡಂ ತಪದ ಮಱೆವೊಕ್ಕಂಗೆ ಮಾತ್ಸರ್ಯ ಮಾದೊಡಮಾತನ ಕೋಟೆಯುಮಿತನ ತಪಮುಂ ಕಜ್ಜ ಮಲ್ಲೆಂಬುದನಱಿದು ನೆಗೞ್ವುದೆ ತ್ತಾನುಮೀ ಭವದ ಮನ್ನಣೆಗಾಸೆವಡುವುದೇಕೆ

ಮ || ಪಲವೋದಂ ನೆಱೆಯೋದಿ ಪೂಣ್ದು ಪಲವುಂಕಾಲಂ ತಪಂಗೆಯ್ಯುತಿ
ರ್ದೆಲೆ ನೀಂ ಖ್ಯಾತಿಗಮಿಲ್ಲಿ ಮಾಡುವಿನಿಸಾನುಂ ಪೊಜೆಗಂ ಮೆೞ್ಪಿನಿಂ
ದೊಲಿವಾ ಕೇಳ್ ಮರನಿಟ್ಟು ಕಾದು ಪಲವುಂ ಪೂಗೊಯ್ದು ಕಾದಿರ್ಪ ಗಾ
ವಿನಂತಪ್ಪುದೆ ಸೈರಿಸಿರ್ದು ಮುನಿಪಾ ಕೆಯ್ಕೊಳ್ ಮಹಾಸೌಖ್ಯಮಂ ೧೮

ವ || ತೀವಿ ಕಱೆದೊಡಾವೊದೆವಂತೆ ಪಲವು ದೆವಸಂ ತಪಂಗೆಯ್ದು ಕೆಲವುದೆವಸಂ ಸೈ ರಿಸದಿಲ್ಲಯೆ ಮನ್ನಣೆಗಾಸೆವಟ್ಟು ಮುಂದಣ ಫಲಮುಂ ಕಿಡಿಸದಿರಿಮೆಂದು ತಪಂಗೆಯ್ವರ್ಗೆ ಪೇೞ್ದೆನಿನ್ನುಮೆಲ್ಲತೆಱದೊಳಂ ಮೆಯ್ಮಱೆದು ನೆಗೞ್ವ ಜೀವಂಗಳೇ ಅಣಮೆ ಕೇಳಿಂ

ಕಂ || ಬೆಜ್ಜುಂ ಪಂದೆಯ ಪೇೞ್ವೞಿ
ಗಜ್ಜಂಗಳುಮಾಸೆವಡಿಪ ಕುಹಕದ ಫಲಮುಂ
ಬಿಜ್ಜೆಗಳುಮೆಮಗೆ ಕಾಪೆಂ
ಬುಜ್ಜುಗಮೞಿಪೞಿವು ಕಾಯಲಾಕುರ್ಮೆ ನರರಂ ೧೯

ವ || ಬಾಡುಂ ಬೆಂಜನಮುಂ ಕೂೞಂ ರುಚಿಮಾಡುವನಿತಲ್ಲದೆ ತಾಮೆ ಬೇಱೆ ತಣಿಪಲ್ ನೆಱೆಗುಮೆ ಬೆಜ್ಜುಂ ಕಲ್ಲುಮಮಾಯುಗೆ ನೆರಮಲ್ಲದೆ ತಾಮೆ ಬಾೞಿಸಲ್ ನೆಱೆಗುಮೆ ಮೆೞ್ಪಡಲೇಕೆ ಕಾಲರಾಜನೆಯ್ಯಂದೊಡವನುಮಿಲ್ಲಯುಮೆಂತುಂ ಕಾಯಲಾಱಂ

ಕಂ || ಅಣಿಮಾದೈಶ್ವರ್ಯಂಗಳ್
ಪೆಣಿದಿರೆ ನೆಲೆ ಸಗ್ಗಮಮೃತಮವನಾಹಾರಂ
ಪ್ರಣುತ ಸುರಸಮಿತಿಯೆಲ್ಲಂ
ಮಣಿದೋಲಗಿಸಿರ್ಪುದಾಯುಧಂ ವರವಜ್ರಂ ೨೦

ಮ || ಅರಿದಿಲ್ಲೞ್ಕದರಿಲ್ಲವಂಗೆ ಬಲದೊಳ್ ಸೌಂದರ್ಯದೊಳ್ ಧೈರ್ಯದೊಳ್
ದೊರೆಯಿಲ್ಲಗ್ಗಳಮಪ್ಪರಿಲ್ಲೆನೆ ಕರಂ ಮಿಕ್ಕಿಂದ್ರನುಂ ಲೋಕಮಂ
ಪರಿರಕ್ಷಿಪ್ಪದದಿರ್ಕೆ ಕಾಲವಶದಿಂ ಬೀೞ್ತರ್ಕುಮಿನ್ನೆಂದೊಡೀ
ನರರಂ ತುಚ್ಛರನಂತಕಂ ಮುಳಿಯೆ ಪೇೞ್ ಕೆಯ್ಕೊಳ್ವರಾರ್ ಕಾವರಾರ್ ೨೧

ವ || ದೈವದೆಸರಂ ತುಡುಕುವಾತಂ ಮುಂದಿೞುಪಿದ ಮೊಸಱಕೂೞನುೞಿಯಲೀಗುಮೆ ಈ ಲೋಕದೊಳ್ ಕರಂ ಪಿರಿಯರುಂ ಕರಮರಿಯರುಮಪ್ಪ ಸಕಲ ಚಕ್ರವರ್ತಿಗಳುಮಮಾ ದೇವೇಂದ್ರರ್ಕಳುಮನೞಿವ ಜವನೀಗಳಿನೇೞಿದರಂ ಕೊಲೆ ಕಾವರಾರ್ ಕಾಪುಂಟೆಂಬೀ ಭ್ರಾಂತಿಯನುೞಿವುದೆಂದೊಡೆಂತುಂ ಕೇಳಿಂ ಮುನ್ನೆಗೞ್ದರ ಕಥೆಯನಪ್ಪಡಂ ಕೇಳ್ದು ನಂಬುವುದೆಂತೆನೆ

 

ಮುಂಡಕೌಶಿಕನ ಕಥೆ

ಕಂ || ವಸುಧಾಭೂಷಣಮಪ್ಪುದು
ವಸುನಿಧಿಯೆಂಬಗ್ರಹಾರಮದಱೊಳ್ ವೇದ
ಪ್ರಸರವಿದನಾಗಿ ಪಾರ್ವರೊ
ಳೆಸೆದಿರ್ಪಂ ನೆಗೞ್ದ ಮುಂಡಕೌಶಿಕನೆಂಬಂ ೨೨

ವ || ಆ ಪಾರ್ವಂಗೆ ಮಕ್ಕಳಿಲ್ಲದಿರೆ ಪೆಂಡತಿಯುಂ ತಾನುಂ ನಿಚ್ಛನಿಚ್ಛಲುಂ ಚಿಂತಾಕ್ರಾಂತರಾಗಿರ್ದೊಂದು ದೆವಸಂ ತಮ್ಮೂರು ಕೆಲಸ ಬೆಟ್ಟದೊಳಗತಿಪ್ರಸಿದ್ಧೆಯಾಗಿರ್ಪ ಗಿರಿನಿ ವಾಸಿನಿಯೆಂಬುಗ್ರದೇವತೆಯಲ್ಲಿಗಿರ್ವರುಂ ಶುಚುರ್ಭೂತರಾಗಿ ಪೋಗಿ ಪೊಡೆವಟ್ಟರ್ಚಿಸಿ ಮಗಂಬಡೆವವಕ್ಕೆಂದು ಪರಸಿ ಬಂದು ಮನೆಯೊಳಿರ್ದು ಕೆಲವಾನುಂ ದೆವಸಿದಿನಾ ಪಾರ್ವಂತಿಗೆ ಗರ್ಭಮಾಗೆ ನವಮಾಸಂ ನೆಱೆದು ಗಂಡುಗೂಸಂ ಪಡೆವುದುಮಾ ಕೂಸಂ ಚಂಡಕೌಶಿಕನೆಂದು ಪೆಸರಿಟ್ಟುಮೞ್ಕಱೊಳ್ ನಡೆಪಿ ನವ ಯೌವನನಾದಂದು ಮಗಂಗೆ ಮದುವೆಯಂ ಮಾೞ್ಪೆನೆಂದಲ್ಲಿಯ ಪ್ರಭುವಪ್ಪ ಪಾರ್ವನ ಕೂಸಂ ಬೇಡಿ ಪಡೆದು ಮದುವೆಗಪ್ಪ ಸಾಮಾಗ್ರಿಯೆಲ್ಲಮಂ ನೆರಪಿ ಕೆಲಬಲದೂರ್ಗಳೊಳಿರ್ದ ತನ್ನ ನಂಟರೆಲ್ಲರುಮಂ ಬರಿಸಿ ನಾಳೆ ಲಗ್ನಮೆಂದಿರ್ಪನ್ನೆಗಂ

ಉ || ಅಲ್ಲಿಗೆ ಮುನ್ನೆ ಬಂದಡಸಿ ನಿಂದ ಗುಹಾಮುಖನೆಂಬ ರಕ್ಕಸಂ
ಪಿಲ್ಲಿಸಿ ಕನ್ನೆಗಂಡರನೆ ನುಂಗುತುಮಿರ್ದೊಡೆ ಬಾರಿಗಟ್ಟಿಮೆಂ
ದೆಲ್ಲರುಮಿರ್ದು ಮಾಡಿದೊಡೆ ಮಾಡಿದ ಬಾರಿಯ ಸೂೞ್ ನಿಯೋಗದಿಂ
ದಲ್ಲಿಯುಮಂತೆ ಬಂದು ಬೞಿಕಾ ಮನೆಯಲ್ಲಿಗೆ ಬಂದುದೆಂಬುದುಂ ೨೩

ವ || ಬಾರಿಕಂ ಬಂದು ಪಾರ್ವನಂ ಕಾಣದೆ ಅಬ್ಬಾ ನಿಮ್ಮ ಮನೆಗೆ ಬಾರಿ ಬಂದುದು ನಾಳೆ ರಕ್ಕಸನಲ್ಲಿಗಟ್ಟಿಮೆಂದು ಪೇೞ್ದುಪೋದಾಗಳಾ ಪಾರ್ವಂತಿ ಮುಚ್ಚೆವೋಗಿ ಬಿೞ್ದು ನೀಡಱಿಂದೆೞ್ಚತ್ತು ಬಾಯಂ ಬಿಟ್ಟೊಳಱಿಯೞುತ್ತಿರ್ಪಿನಮನ್ನೆಗಮಾ ಪಾರ್ವಂ ವಿವಾಹಕಾರ್ಯಕ್ಕೆ ವಸ್ತ್ರತಾಂಬೂಲಾದಿ ಮಂಗಳದ್ರವ್ಯಂಗಳಂ ಮಾಱುಗೊಂಡು ಪೊತ್ತು ಬಂದು ಮನೆಯಂ ಪುಗುವಾಗಳಿದಿರಂ ಬಂದು ಬಸಿಱಂ ಪೊಯ್ದು ಕೊಂಡು ಪೊರಳ್ದೞ್ವಳಂ ಪಾರ್ವಂ ಕಂಡು ಬೆಱಗಾಗಿ ಪೊಱೆಯನಿೞಿಪಿ ಕುಳ್ಳಿರ್ದಿದೇನೆನೆ ಪಾರ್ವಂತಿಯೆಂಗುಂ

ಕಂ || ನಮ್ಮ ಮನೆಗೂಸಗೆ ಪಿರಿದದ
ಱೆಮ್ಮಿಗೆ ಪೆಱದಾವುದೆಂದು ರಾಗದಿನುತ್ಸಾ
ಹಮ್ಮಾಡಲ್ ನಾಮಿರ್ದೊಡೆ
ನೆಮ್ಮೊಕ್ಕಲ್ ಮಾರಿ ಬಾರಿ ಬಂದುದು ಕಾಣಾ ೨೪

ವ || ಎನೆ ಪಾರ್ವನೆರ್ದೆಯೊಳ್ ಕಿರ್ಚು ಬಿೞ್ದಂತಾಗೆ ಜೋಗಂಬೋಗಿ ತಲೆಯಂ ಬಾಗಿ ಮನ್ಯುಮಿಕ್ಕು ಬಿಗುೞುತ್ತುಂ ಕಿಱೆದುಂ ಬೇಗದಿನೞ್ವ ಪಾರ್ವಂತಿಯಂ ಸಂತೈಸಿ ಕೇಳಿಮೆಂದಿಂತೆಂದಂ

ಕಂ || ಮಗನಂ ಕೊಟ್ಟೇವಾೞ್ವೆಂ
ಮೃಗನಯನೇ ಕುಡುವೆನೆನ್ನನೆನ್ನಿಂ ಬಱೆಕು
ಬ್ಬೆಗದೆ ಕೆಲವಾನುದೆವಸಂ
ಮಗಂಗೆ ನೀಂ ಮದುವೆಮಾಡು ಕಿಡಿಸದೆ ಮನೆಯಂ ೨೫

ವ || ಎಂಬುದುಮಾ ಮಾತಿಂಗೆ ಪಾರ್ವಂತಿ ಮತ್ತೆ ಬೆರ್ಚಿ ನಿಮ್ಮಗಲ್ಕೆಯೊಳಾದ ದುಃಖ ಸಮುದ್ರಮನೆಂತೀಸುವೆನೆಂದಿಂತೆಂದಳ್

ಕಂ || ಪಲವುಂ ಕಾಲಂ ಪೋದುದು
ಕುಲಮೞಿದುದು ಮಕ್ಕಳಿಲ್ಲಮೆಂದು ಕರಂ ಮ
ಮ್ಮಲಮಱುಗಿ ಬೞಿಕೆ ದೈವ
ಕ್ಕೊಲಿದಾಂ ಪೊಡೆವಟ್ಟು ಪರಸಿ ಪಡೆದೆಂ ಸುತನಂ ೨೬

ಸುತನಂ ಕೊಟ್ಟೊಡೆ ಬಾೞೆಂ
ಪತಿ ನಿನ್ನಂ ಕೊಟ್ಟೆನಪ್ಪೊಡೆಂತುಂ ಬಾೞೆಂ
ಪತಿಯುಂ ಸುತನುಂ ನಿಲೆ ಸಂ
ತತಿ ನಿಲ್ಕುಂ ಪೆಣ್ಣ ಬೞ್ದುದೇಂ ಬಾೞದುದೇಂ ೨೭

ವ || ಆಂ ಪೋಪೊನೆಂಬುದಂ ಕೇಳುತ್ತಮಿರ್ದ ಮಗಂ ಬಂದಿಂತೆಂದಂ

ಕಂ || ನಿಮ್ಮಿರ್ವರುಮುಳ್ಳೊಡೆ ಮ
ತ್ತಮ್ಮಕ್ಕಳ್ ಪಡೆವಿರಾನೆ ಪೋಪೆಂ ನೀಮಿಂ
ಕೆಮ್ಮಗಿರಿಮೆಂದೊಡಾಗಳ್
ತಮ್ಮಂ ಪ್ರಚುರಾಗ್ನಿ ಕೊಂಡ ತೆಱದಿಂದೞ್ತರ್ ೨೮

ವ || ಅಂತೞ್ತು ಮತ್ತಮಿರ್ವರುಂ ಚೇತರಿಸಿರ್ದಿಲ್ಲಿಗೇಗೆಯ್ವಮೆಂದಾಳೋಚಿಸುತ್ತಿರೆ ಪಾರ್ವಂತಿಯಿಂತೆಂಗುಂ ಎಲೆ ಪಾರ್ವಾ ನಾಮಲ್ತೆ ದೈವಕ್ಕೆ ಪರಸಿ ಪಡೆದೆವೀತನನಾ ದೇವತೆ ತಾನೆ ಕಾಗುಮಾ ದೇವತೆಗೊಪ್ಪಿಸುವಂ ಬನ್ನಿಮೆಂಬ ಬಾರಿಯ ನೀಗುವ ನಿಯೋಗದೊಳ್ ಪೊಱಮಟ್ಟುಪೋಗಿ ದೇವಗೃಹಮಂ ಪೊಕ್ಕು ಬಳಾರಿ ನೀನಿತ್ತ ಕೂಸಂ ನಾಳೆ ರಕ್ಕಸಂ ಕೊಲ್ವೆನೆಂದಿರ್ದಪಂ ಆತನನಾಂ ಕಾಯಕಾರ್ಪೆಮೇ ಮತ್ತಮುಂ ನೀನೆ ಕಾವುದೆಂದು ದೇವತೆಗೆ ಸುತನನೊಪ್ಪಿಸಿ ಬಂದು ಬಂಧುಗಳೆಲ್ಲಮಱೆಯೆ ಪೇೞ್ದು ಮತ್ತೆಮೆಮ್ಮುಳ್ಳರ್ಥ ಮೆಲ್ಲಮಂ ತವಿಸುವೆಂ ನೀಮೆಲ್ಲಂ ಸಹಾಯರಾಗಿ ಬನ್ನಿಮೀಯುಪದ್ರದ ವಿನಾಶನಮು ಮಾಯುಷ್ಯವರ್ಧನಮುಮೆಂಬ ಹೋಮಂಗಳಂ ಮಾಡುತಿರ್ಪಮೆಂದು ಗುಣವಂತರುಂ ವಿದ್ಯಾವಂತರುಮಂ ನೆರಪುತಿರ್ದನನ್ನೆಗಮಾ ದೇವತೆ ಸನ್ನಹಿತೆಯಾಗಿ

ಕಂ || ಎನಗೆ ಪೊಡೆವಟ್ಟು ಪಡೆದಾ
ತನೂಜನಂ ಮಱೆಗೆ ವಂದನಂ ನೆಱೆಯೆ ಜಗ
ಜ್ಜನಮಱಿಯೆ ಬಂದು ಕೊಲಲಿ
ರ್ದನನುಂತುಂ ಕೊಲ್ವೆನೆಂತುಮಿವನಂ ಕಾವೆಂ ೨೯

ವ || ಎಂದು ದೇವತೆ ರಕ್ಕಸಂಗೆ ಮುಳಿದು ದೆಸೆದೆಸಗೆ ಮಸಗಿ ಮಾಣಿಯನಾ ಬೆಟ್ಟದಡಿಯೊಳಿರ್ದ ಪಿರಿಯ ಬಿಲದೊಳಗೊಯ್ದಿರಿಸಿ ಬಿಲದ ಬಾಗಿಲೊಳ್ ಪಿರಿಯದೊಂದು ಶಿಲೆಯಂ ಕವಿದಿರಿಸಿ ನಿಶ್ಛಿದ್ರಮಾಗಿ ಮುಚ್ಚಿ ಪೆಱಗಣ್ಗೆ ತನ್ನ ದಿವ್ಯ ಗಣದೇವತೆಗಳಂ ಕಾಪುವೇೞ್ದು ದೇವತೆ ತನ್ನ ಮಾಯಬಲಮಂ ವಿಗುರ್ವಿಸಿ ರಕ್ಕಸನೊಳ್ ಕಾದಲೆಂದು ಪೋದಳಿತ್ತ ಪಾರ್ವಂ ಬಲ್ಲರೆಲ್ಲರುಮನೊಡಗೊಂಡು ಬಂದು ಮಗನಿರ್ದ ಬಲದ ಪೊಱಗೆ ಬಳಸಿಯುಮಿರ್ದ

ರಗಳೆ || ಕೆಲರ್ ಶಾಂತಿಯಂ ಮಾಡುವುದ್ಯೋಗದಿರ್ದರ್
ಕೆಲರ್ ಪೌಷ್ಟಿಕಾರಂಭ ಸಂಯೋಗದಿರ್ದರ್
ಕೆಲರ್ ಮಂತ್ರದಿಂ ರಕ್ಷೆಯಂ ಮಾಡುತಿರ್ದರ್
ಕೆಲರ್ ತಂತ್ರಸಾಮರ್ಥ್ಯಮಂ ಮಾಡುತಿರ್ದರ್
ಕೆಲರ್ ಹೋಮಕಾರ್ಯೋತ್ತಮಕ್ರಮದಿನಿರ್ದರ್
ಕೆಲರ್ ಧ್ಯಾನವಿಧಿಯಂ ನಚ್ಚಿ ಕಾಯಲಿರ್ದರ್
ಕೆಲರ್ ಜಪಸಮಾಧಿ ಕ್ರಿಯೋದ್ಯಮದಿನಿರ್ದರ್
ಕೆಲರ್ ದೇವತಾರಾಧನಾ ವಿಧಿಯಿನಿರ್ದರ್
ಕೆಲರ್ ನಚ್ಚುವಾಶೀರ್ವಚೋರವದಿನಿರ್ದರ್
ಕೆಲರ್ ಜಳದೊಳಘಮರ್ಷಣಂಗೆಯ್ವುತಿರ್ದರ್
ಕೆಲರ್ ಬಲಿವಿಧಾನಂಗಳಂ ಮಾಡುತಿರ್ದರ್
ಕೆಲರ್ ಮಿಕ್ಕ ಸಕಲೀಕರಣದಿಂದನಮಿರ್ದರ್
ಕೆಲರ್ ದಶದಿಶಾಬಂಧನ ವಿಧಾನದಿನಿರ್ದರ್
ಕೆಲರ್ ಮೋನದಿಂ ಸಾಧಿಸುವ ಬಗೆಯೊಳಿರ್ದರ್
ಕೆಲರ್ ವೈರಿಗುಚ್ಚಾಟನಂ ಮಾಡುತಿರ್ದರ್
ಕೆಲರ್ ಪೂಣ್ದು ವಿದ್ವೇಷಣಂ ಮಾಡುತಿರ್ದರ್
ಕೆಲರ್ ಸ್ತಂಭನದ ಯಂತ್ರಮಂ ಬರೆಯುತಿರ್ದರ್
ಕೆಲರ್ ಮೋಹನದ ಯಂತ್ರಮಂ ಬರೆಯುತಿರ್ದರ್
ಕೆಲರ್ ಶತ್ರುಬಲಮಾರಣಕ್ರಿಯೆಯೊಳಿರ್ದರ್
ಕೆಲರ್ ವಶ್ಯಕರ್ಮಂಗಳನೆ ಮಾಡುತಿರ್ದರ್ ೩೦

ಕಂ || ಅಂತಂದಿನ ದೆವಸಂ ಪಲ
ರುಂ ತಂತಮ್ಮಱಿವ ಮಾೞ್ಕೆಯಿಂದಂ ಪೂಣ್ದೋ
ರಂತೆ ಮಹಾಯತ್ನದಿನ
ತ್ಯಂತಂ ರಕ್ಷಿಸುತುಮಿರ್ದರಿರ್ಪನ್ನೆವರಂ ೩೧

ವ || ದೇವತೆ ರಕ್ಕಸನೊಳನುವರಮಂಗೆಯ್ವೊಂದು ದಿನಸಮೆಲ್ಲಂ ಕಾದಿ ಮಱುದಿವಸಮಾತನನೋಡಿಸಿ ಗೆಲ್ದು ಬಂದು ಆ ಪಾರ್ವಂಗಂ ನೆರದ ನೆರವಿಗಂ ರಕ್ಕಸವನೋಡಿಸಿದ ಸಾಹಸಮನಱಿಯೆ ಪೇೞೊಡವರೆಲ್ಲರ್ ಚೋದ್ಯಂಬಟ್ಟು ಒಸೆದೊಸಗೆಯಂ ಕೊಂಡಾಡಿದಾಗಳಾ ದೇವತೆ ನೀಮಿಂ ನಿಮ್ಮ ಮಗನನೊಪ್ಪುಗೊಳ್ಳಿಮೆಂದಾ ಬಿಲದ ಬಾಗಿಲೊಳ್ ಕವಿದಿರ್ದ ಶಿಲೆಯಂ ತೆಗೆದದಱೊಳಗಂ ಪೊಕ್ಕು ನೋೞ್ಪಿನಮನ್ನೆಗೆಮಾ ಕುಮಾರನಂ ಪೆರ್ನಾವು ನುಂಗಿ ಸುಯ್ಯುತ್ತಿರ್ದುದಂ ಕಂಡು ಬೆರ್ಚಿ ಮಗೞ್ದು ಬಂದು ಎಲೆ ದೇವತೆ ಪುಲಿಗಂಜಿ ಪುತ್ರಮನೇಱಿದೊಡದಲ್ಲಿಯು ಮರವಾವು ಕೊಂಡುದೆಂಬಂತೆ ರಕ್ಕಸಂಗೞ್ಕಿ ನಿನ್ನ ಮಱೆವೊಕ್ಕೆನಿತು ಕಪುವೆರಸಿರ್ದೊಡಮೆನ್ನ ಮಗನಂ ಪೆರ್ವಾವು ನುಂಗಿ ಸುಯ್ಯುತ್ತಿರ್ದುದೆಂದು ಪುಯ್ಯಲಿಟ್ಟೞೆ ನಿಯತಿಃಕೇ ನ ಲಂಘ್ಯತೇಯೆಂಬುದುಂ ಮೃತ್ಯುವೆಯ್ದೆವಂದೊಡಾರ್ಗಂ ಕಾಯಲರಿದೆಂದು ದೇವತೆ ಪಾರ್ವನಂ ಪಾರ್ವಂತಿಯುಮಂ ಸಂತೈಸಿ ಪೋದಳೆಂಬೀ ಕಥೆಯಂ ಜೀವಾ ನೀನವಧಾರಿಸುವುದು

ಕಂ || ಮರಣಂ ಸಾರ್ಚಿದ ದೆವಸಂ
ಶರಣುಂ ನಿನಗಾರುಮಿಲ್ಲ ಕೇಳ್ ನಿನ್ನಂತಃ
ಕರಣದೊಳಿರ್ದ ಜಿನೇಶ್ವರ
ಚರಣಮೆ ಶರಣಂ ಮಹೋಗ್ರಮಘಕುಲಹರಣಂ ೩೨

ವ || ಮತ್ತಂ ಮರನನೇಱಿ ಕೆಯ್ವಿಟ್ಟಂಗೆ ನೆಲನೆ ಶರಣ್ ಎಂಬಂತೆ ಮನುಷ್ಯಗತಿಯೊಳ್ ಪುಟ್ಟಿದವರ್ಗೆ ಸದ್ಭರ್ಮಮೊಂದೆ ಶರಣಕ್ಕುಂ ಪೆಱತಾವುದುಂ ಶರಣೆಲ್ಲೆಂಬುದಂ ಬಗೆದು ನೋಡಾ

ಉ || ಕಾವುವೆ ಮರ್ದುಗಳ್ ನೆಗೞ್ದ ಮಂತ್ರಪದಂಗಳುಮೇನೊ ಕಾವುವೇ
ಕಾವುವೆ ರೌದ್ರದೇವತೆಗಳಶ್ವ ಗಜೇಂದ್ರ ಪದಾತಿವರ್ಗಮೇಂ
ಕಾವುವೆ ಕೋಂಟೆಗಳ್ ಭಯದೆ ಪೊಕ್ಕುರೆ ನೆಟ್ಟನೆ ಕಾಯಲಾರ್ಪುವೇ
ಜೀವನೆ ಕಾಯಲಾಗ ಜವನೆಂಬವನೆಯ್ತರೆ ಮೆೞ್ಪಡಲ್ ಗಡಾ ೩೩

ಗದ್ಯಂ || ಇದು ಜಿನಶಾನದ ಪ್ರಭಾಸನ ಶೀಲೋದಿತ ವಿದಿತ ಬಂಧುವರ್ಮ ನಿರ್ಮಿತಮಪ್ಪ ಜೀನಸಂಬೋಧನಾ ಗ್ರಂಥಾವತಾರದೊಳ್ ಅಶರಣಾನುಪ್ರೇಕ್ಷಾ ನಿರೂಪಣಂ ಮುಂಡಕೌಶಿಕ ಕಥಾವರ್ಣನಂ.

ದ್ವೀತಿಯಾಧಿಕಾರಂ