ಸಗರ ಚಕ್ರವರ್ತಿಯ ಕಥೆ

ಕಂ || ಶ್ರೀಮದತಿಶಯ ವಿಶೇಷೋ
ದ್ದಾಮದೊಳಭಿರಾಮದೊಳ್ ವಿರಾಜಿಪಯೋಧ್ಯಾ
ನಾಮಪುರದೊಳೆ ಮಹಾಖಿಲ
ಭೂಮೀಶ್ವರನಿರ್ಪನೊಸೆದು ಸಗರನರೇಂದ್ರಂ ೪೧

ವ || ಶ್ರೀಮದಜಿತತೀರ್ಥಕರ ಸಂತಾನದೊಳ್ ಸಗರನೆಂಬೆರಡನೆಯ ಸಕಳ ಚಕ್ರವರ್ತಿಯೀ ಜಂಬೂದ್ವೀಪದ ಭರತಕ್ಷೇತ್ರದ ಕೌಸಲವಿಷಯಯೋಧ್ಯಾನಗರಮನಾಳ್ವ ಇಕ್ಷ್ವಾಕುವಂಶದರಸು ಸಮುದ್ರವಿಜಯಂಗಂ ವಸುಪಾಳಾದೇವಿಗಂ ಮಗನಾಗಿ ಪುಟ್ಟಿ ಸಪ್ತತಿಲಕ್ಷ ಪೂರ್ವೆ ಪರಮಾಯುಷ್ಯನುಂ ನಾನೊಱೈವತ್ತು ಬಿಲ್ನಿಡಿಯನುಂ ಚಾಮೀಕರಸುವರ್ಣನುಮೆನಿಸಿ ಪದಿನೆಂಟು ಲಕ್ಷ ಪೂರ್ವೆ ಕುಮಾರಕಾಲಂ ಪೋಗೆ ಮಹಾಮಾಂಡಳಿಕನಾಗಿ ಮತ್ತಂ ಪದಿನೆಂಟು ಲಕ್ಷ ಪೂರ್ವೆ ಪೂರ್ವೆಯಿಂ ಸಕಳ ಚಕ್ರವರ್ತಿಯಾಗಿರ್ದಂ ಆತನ ವಿಭವದ ಪೆಂಪೆಂತೆಂದೊಡೆ ಒಂದು ಕೋಟಿ ಗ್ರಾಮಂಗಳನಾಳ್ವಂ ಮಕುಟಬದ್ಧರಾಜಂ ಮಕುಟಬದ್ಧರಾಜರೈನೂರ್ವರಂ ಬೆಸಕೆಯ್ದಿದೊನಧಿರಾಜಂ ಸಾಸಿರ ಮಕುಟಬದ್ಧರಂ ಬೆಸಕೆಯ್ದಿದೊಂ ಮಹಾರಾಜಂ ನಾಲ್ಸಾಸಿರ್ವರ್ ಮಕುಟಬದ್ಧರಂ ಬೆಸಕೆಯ್ಸಿದೊಂ ಮಾಂಡಳಿಕಂ ಎಣ್ಫಾಸಿರ್ವರ್ ಮಕುಟಬದ್ಧರಂ ಬೆಸಕೆಯ್ಸಿದೊಂ ಮಹಾಮಂಡಳಿಕಂ ಪದಿನಾಱು ಸಾಸಿರ್ವರ್ ಮಕುಟಬದ್ಧರಂ ಬೆಸಕೆಯ್ಸಿದೊಂ ಅರ್ಧಚಕ್ರವರ್ತಿ ಸಗರಂ ಸಲಕ ಚಕ್ರವರ್ತಿಯಪ್ಪುದಱಿಂ ದಾತಂಗೆ ಮೂವತ್ತಿರ್ಛಾಸಿರ್ವರ್ ಮಕುಟಬದ್ಧರ್ ಬೆಸಕೆಯ್ವರ್ ಆಳ್ವ ಭೂಮಿ ಷಟ್ಖಂಡಪೃಥ್ವಿ ತೊಂಬತ್ತಾಱು ಸಾಸಿರ್ವರರಸಿಯರನಿತೆ ಮಕ್ಕಳುಮೆಂಬತ್ತುನಾಲ್ಕು ಲಕ್ಕೆ ಭದ್ರಹಸ್ತಿಯನಿತೆ ರಥಮುಂ ಪದಿನೆಂಟು ಕೋಟಿ ಜಾತ್ಯಶ್ವಮುಂ ಎಂಬತ್ತನಾಲ್ಕು ಕೋಟಿ ಪದಾತಿಗಳುಂ ಮೂಱುವರೆ ಕೋಟಿ ಬಂದುವರ್ಗಮುಂ ಪದಿನಾಱು ಸಾಸಿರ್ವರ್ ಮೆಯ್ಗಾಪಿನ ಗಣಬದ್ಧದೇವರುಂ ಮೂನೂಱಱುವದಿಂಬರ್ ಶರೀರವೈದ್ಯರುಂ ಮೂನೂಱಱುವದಿಂಬರ್ ಬಾಣಸಿಗರುಂ

ಚಂ || ಕರಿ ವೃಷ ಸಿಂಹ ಚಕ್ರ ಗರುಡಾಂಬರ ದರ್ಪಣ ಪದ್ಮ ಚಂದ್ರ ಭಾ
ಸ್ಕರ ಕಳಹಂಸ ಮತ್ಸ್ಯ ಮಕರೋನ್ನತ ಕುಂಭ ಮಯೂರನಾಮವಿ
ಸ್ಫುರಿತ ಮಹಾಪತಾಕೆಗಳುಮೊಪ್ಪುವ ಪಂಚಮಹಾನಕಂಗಳುಂ
ಸುರಚರಚಾಮರಪ್ರಕರಮುಂ ಧವಲಾತಪ ವಾರಣಂಗಳುಂ ೪೨

ವ || ಮತ್ತಂ ಭೇರಿ ಮೃದಂಗ ಸಿಂಹಾಸನಾದಿ ಸಾರ್ವಭೌಮ ರಾಜ್ಯಚಿಹ್ನೆಂಗಳುಂ ಕಾಳ ಮಹಾಕಾಳ ಪಾಂಡುಕ ಮಾಣವಕ ನೈಸರ್ಪ ಪದ್ಮಪಿಂಗಳ ಸರ್ವರತ್ನಮಯಮೆಂಬ ನವನಿಧಿಗಳುಮಾಳ್ದಂ ಬೆಸದೋಱೆದೊಡೆಂತಪ್ಪ ಪಗೆವನ ತಲೆಯುಮಂ ಕೊಳಲಾರ್ಪ ಚಕ್ರರತ್ನಮುಂ ಮೇಗಣಿಂ ದೇವಾಸುರರ್ಕಳ್ ಮಾೞ್ಪ ಮಹೋಪಸರ್ಗಂಗಳಂ ಪೊರ್ದಲೀಯದೆ ನಾಲ್ವತ್ತೆಣ್ಗಾವುದಳವಿಯೊಳೆಲ್ಲಮಂ ಕಾಯಲಾರ್ಪ ಛತ್ರರತ್ನಮುಂ ಬಾೞೆದೊಂಗೆ ಮುನಿದು ತನ್ನತ್ತಲ್ ನೋಡಿದೊಡೆ ಸಾಧ್ಯಂಮಾಡುವಸಿರತ್ನಮುಂ ಕರಮುರಿಯುವುಂ ಪಿರಯುವುಮಪ್ಪ ಬೆಟ್ಟಂ ಕುೞಿಗಳುಮಂ ಸಮತಳಂ ಮಾಡುವ ಶಕ್ತಿಯುಳ್ಳ ದಂಡರತ್ನಮುಂ ಬಗೆದಂತಪ್ಪ ವಸ್ತುಗಳನ್ನೆಲ್ಲ ಮನೀವ ಚಿಂತಾಮಣಿರತ್ನಮುಂ ಜಳಸ್ಥಳಮೆಂಬೆರಡೆಡೆಯೊಳಧೋಭಾಗದಿಂ ಬರ್ಪುಪಸರ್ಗಂಗಳನಾರ್ ಮಾಡಿದೊಡಂ ಪಡೆಯೆಲ್ಲಮಂ ಕಾವ ಚರ್ಮರತ್ನಮುಮೆಂತಪ್ಪ ಕೞ್ತಲೆಯೊಳಂ ಚಂದ್ರಾದಿತ್ಯರ ಬೆಳಗಿನೊಳಾವ ಬೆಳಗಂ ಬಯಸಿ ಬಗೆದೊಡಾ ಬೆಳಗಂ ಪಡೆಯಲಾರ್ಪ ಕಾಕಿಣೀರತ್ನಮುಮೆಂಬಿವು

ಕಂ || ಜಗದೊಳ್ ವಿಸ್ಮಯಮಪ್ಪಂ
ತೊಗೆದತಿಶಯ ಸುಕೃತಫಲಮನೆಯ್ದಿಪ ಗುಣಯು
ಕ್ತಿಗಳಿಂ ವರಶಕ್ತಿಗಳಿಂ
ನೆಗೞ್ದಿರ್ದುವು ಜೀವರತ್ನಮಿಂತೀಯೇೞುಂ ೪೩

ವ || ಮತ್ತಂ ಮಣಿಕನಕ ವಸ್ತುಗಳನೆನಿತೆನಿತಂ ಬೀಯಂಗೆಯ್ದೊಡಂ ತವಿಸದಿರ್ಪ ಸಾಮರ್ಥ್ಯ ಮನುಳ್ಳ ಗೃಹಪತಿರತ್ನಮುಂ ಆವ ದಿಶಾಭಾಗಕಟ್ಟಿದೊಡಾ ದೆಸೆಯೊಳೆಂತಪ್ಪ ಬಲ್ಲಾಳುಮಂ ಸಾಧ್ಯಂಮಾಡಿ ತರ್ಪ ಸೇನಾಪತಿರತ್ನಮುಂ ಚಕ್ರವರ್ತಿಯನೆಯ್ದಲೀಯದೆ ರಾಜ್ಯತಂತ್ರ ಮೆಲ್ಲಮಂ ಸಂತೈಸಿ ನಡೆಯಿಸುವ ಪುರೋಹಿತರತ್ನಮುಂ ಹಸ್ತಿಸಾಧನಮೆನಿತನಿಱೊಳಂ ಸಾದ್ಯಮಾಗದ ಬಲಮುಳ್ಳೊಡದಂ ತನ್ನ ಬಗೆದಾಗಳೆ ಸಾದ್ಯಂ ಮಾಡಲಾರ್ಪ ಗಜಪತಿ ರತ್ನಮುಂ ಪನ್ನೆರಡು ಯೋಜನಮಂ ಲಂಘಿಸಿ ಬೆಸನಂ ಸಾಧಿಸಿ ಬರ್ಪಶ್ವರತ್ನಮುಂ ಬಗೆದಾಗಳೆ ಪಡೆಗೆಲ್ಲಂ ಮಾಟ ಕೂಟ ಪ್ರಾಸಾದಂಗಳಂ ಸಮೆದುತರ್ಪ ವಿಶ್ವಕರ್ಮ ರತ್ನಮುಂ ತೊಂಬತ್ತಱುಸಾಸಿರ್ವರನುಪಮ ಸ್ತ್ರೀಯರೊಳಮೆಯ್ದದ ಸುಖದಳುರ್ಕೆಯಂ ತನ್ನೊಳೆಯ್ದಿಸುವಂತಪ್ಪ ಶಕ್ತಿಯನುಳ್ಳ ಸ್ತ್ರೀರತ್ನಮುಮೆಂಬೀಯೇೞುಂ ಜೀವರತ್ನಂಗಳಿಂತು ಪದಿನಾಲ್ಕುಂ ಮಹಾರತ್ನಂಗಳುಮನೊಂದೊಂದಂ ಸಾಸಿರ್ವರ್ ಯಕ್ಷಕುಮಾರರ್ ಕಾದಿರ್ಪರಿಂತಪ್ಪ ವಿಭವಮನೊಡೆಯನಪ್ಪುದಱಿಂ

ಉ || ಶ್ರೀಗೆಣೆಯಿಲ್ಲ ವಿಕ್ರಮದಳುರ್ಕೆ೯ಯೊಳೆಲ್ಲಿಯುಮಾ ನರೇಂದ್ರನಿಂ
ಮೇಗಣಮಿಲ್ಲ ಪೆಂಪಿನೆಡೆಯೊಳ್ ದೊರೆಯಪ್ಪವರಿಲ್ಲ ಮಾನಸರ್
ಭೋಗಿಗಳನ್ನರಿಲ್ಲ ಗುಣದೊಳ್ಪಿನೊಳೊಂದಿದರಾತನೊಳ್ ಸಮಂ
ಭೂಗಧಿನಾಥರಿಲ್ಲ ಪೆಱರುತ್ತಮ ಭೂಚರ ಖೇಚರರ್ಕಳೊಳ್ ೪೪

ವ || ಇಂತಪ್ಪ ಸಗರಚಕ್ರವರ್ತಿಗಱುವತ್ತು ಸಾಸಿರ್ವರ್ ಮಕ್ಕಳ ಪುಟ್ಟಿಬಳೆದು ನವಯೌವನಪ್ರಾಪ್ತರಾದಂದು ವಿದ್ಯಾಬಲಗರ್ವಮುಂ ಶ್ರೀಯು ಮದಮುಂ ಪೆರ್ಚೆ ತಮ್ಮಯ್ಯನೋಲಗಕ್ಕೆವಂದು ಪೋಪಾಗಳೊಂದು ದೆವಸಂ ಬೆಸನಂ ಬೇಡಿದೊಡಂ ನೀಮುಂ ಬೆಸಕೆಯ್ವನಿತುವರಮಾ ಮನುಷ್ಯಲೋಕದೊಳೆನಗರಿದುಂ ಬಲ್ಲಿತ್ತು ಮಿಲ್ಲಮಾವ ಬೆಸನಂ ನಿಮಗೆ ಪೇೞ್ವೆಮೆನೆಯುಂ ನಿಚ್ಚಲುಂ ಕೀಱಿ ಕೀಱಿ ಬೆಸನಂ ಬೇಡುತ್ತುಮಿರೆ ಚಕ್ರವರ್ತಿ ತನ್ನೊಳೆ ಬಗೆದೊಂದು ದೆವಸಮಂತಪ್ಪಿಡೆ ಭರತೇಶ್ವರಂ ಮಣಿಕನಕಮಯಮಪ್ಪ ಚೈತ್ಯಾಲಯಂಗಳುಮಂ ಕೈಲಾಸಪರ್ವತ ಮೇಲೆ ಮಾಡಿಸಿದನಾತನ ಮಗನರ್ಕಕೀರ್ತಿಯದನಷ್ಟಾಪದಮಯಮಾಗಿ ಮಾಡಿಸಿದಂ ನೀಮಿಂ ಪೋಗಿ ಭೂಮಿಗೋಚರರ್ಗಗೋಚರಮಪ್ಪಂತದಱ ಬಳಸಿಯುಂ ಕೂಡೆ ನೀರ್ಗಾದಿಗೆಯಂ ಮಾಡಿಮೆನೆ ಮಹಾಪ್ರಸಾದಮೆಂದು ಪೊಡೆವಟ್ಟು.

ಕಂ || ಬೆಸನಂ ಕೆಯ್ಕೊಂಡನಿಬರು
ಮೊಸೆದಾಗಳೆ ದಂಡರತ್ನಮಂ ಕೊಂಡು ಕರಂ
ಬೆಸೆದು ಬಲಗರ್ವದೊದವಿಂ
ದೆಸೆದು ತದಷ್ಟಾಪದಾದ್ರಿಯಲ್ಲಿಗೆ ವಂದರ್ ೪೫

ವ || ಅಂತು ಚಕ್ರವರ್ತಿಯ ಬೆಸಮೆಂದು ದಂಡರತ್ನಮನಿಕ್ಕಿದೊಡದು ನೆಲನನುರ್ಚಿಪೋಗಿ ನಾಗರಾಜನ ನಿಜಭವನದ ಕಳಶಮಂ ತಾಗಿ ಮಗುೞ್ದದಂ ಕೊಂಡದಱಿಂದಮಾ ಪರ್ವತದ ಬಳಸಿಯುಂ ಕೂಡೆ ನೀರ್ಗಾದಿಗೆಯಂ ಸಮೆದು ಬೞಿಯಂ ತಮ್ಮ ನಿಬರಿಂ ಪಿರಿಯ ಜಾಹ್ನವಿಯ ಮಗನಪ್ಪ ಭಗೀರಥನಂ ಕರೆದು ನೀಂ ಪೋಗಿ ಗಂಗೆಯ ನೀರಂ ಕೈಲಾಸಪರ್ವತಕ್ಕೆ ಬರೆ ತಿರ್ದಿ ಪರಿಯಿಸಿ ತಾಯೆಂದುಯ ದಂಡರತ್ನಮಂ ಕೊಟ್ಟಟ್ಟಿ ತಾಮೆಲ್ಲರುಮಲ್ಲಿರ್ಪನ್ನೆಗಂ ನಾಗರಾಜಂ ನಿಜಭವನಾಗ್ರಮಂ ದಂಡರತ್ನಂ ತಾಗಿದ ರಭಸಕ್ಕೆ ಬೆರ್ಚಿ ಸಭಾಕ್ಷೋಭಮಾಗೆ ತನ್ನೊಲಗಶಾಲೆಯಿಂದಮೆೞ್ದು ನೀಡುಂ ಬಗೆದಱೆದು ಪೊಱಮಟ್ಟು ಬಂದು ಸಗರಪುತ್ರರಂ ಕಂಡು ಇದೇಂ ಗಳಾ ನಿಮ್ಮಮ್ಮನಪ್ಪ ಸಗರಚಕ್ರವರ್ತಿಗೆ ಚಿತ್ತೆಯೆಂಬ ನೆಲದಿಂ ಕೆಳಗೆ ಸಾಮ್ಯಮುಂಟೆ ಕರಮುರ್ಕಿದಿರ್ ನಿಮಗೆ ಮೇಗಿಲ್ಲೆಂದು ಕೆಳಗನತಿಕ್ರಮಿಸಿದೊಡೆ ಕೆಳಗುಂ ನಿಮ್ಮಂ ತಲೆಕೆಳಗುಮಾಡುಗುಮೆಂದೊದಱಿ ನುಡಿದೊಡಮವರ್ ಮುನಿದಿಂತೆಂದರ್

ಕಂ || ಸಂತತ ಲವಣಾಂಬುಧಿಪ
ರ್ಯಂತಂ ಧರೆ ಬೀಡು ಭವನವಾಸಿಗ ವಾನ
ವ್ಯಂತರಲೋಕಂಗಳಿವೇ
ನೆಂತುಂ ಬೆಸಗೆಯ್ವುದುಂಟು ಚಕ್ರಿಗೆ ಬಗೆಯಾ ೪೬

ವ || ನೀನಾತನಾಳ್ಕೆಯಳವಿನಿತೆಂಬುದು ನಿನ್ನ ಬಾೞ್ವೆಯೊಳಾದಿನಿತೆಯೆಂದು ನುಡಿದೆಯಕ್ಕುಮೆನೆ ನಾಗರಾಜಂ ಕಡುಮುಳಿದುವಂದಿರ ಗರ್ವಮಿಂತಲ್ಲ ದುಡಿಯದೆಂದು ತನ್ನ ದೃಷ್ಟಿವಿಷದಿಂದಱುವತ್ತು ಸಾಸಿರ್ವರುಮನೊರ್ಮೊದಲೆ ಭಸ್ಮ ಮಪ್ಪಂತು ಮಾಡಿಪೋದನಿತ್ತ ಸಗರರಾಜಂ ಮುನ್ನ ತನ್ನ ಬಾಣಸಿಗನೊರ್ವಂಗವಸಾನಕಾಲದೊಳ್ ಪಂಚನಮಸ್ಕಾರಮಂ ಪೇೞ್ದು ಸಮಾಧಿಯಂ ಕೂಡಿದೊಡಮಾ ಫಲದಿಂ ಸ್ವರ್ಗದೊಳ್ ಸುಪ್ರಭನೆಂಬ ದೇವನಾಗಿಪುಟ್ಟಿರ್ದವಧಿಜ್ಞಾನದಿಂ ತನ್ನ ಮುನ್ನಿನ ಭವದಂದಮುಮಂ ಸಗರಂಗೆಯ್ದು ಪಕಾರ ದಂದಮುಮನಱಿದಾತಂಗೆ ಪ್ರತ್ಯುಪಕಾರಮಂ ಮಾೞ್ಪೆನೆಂದು ಬಗೆದಱಿದೀಗಳಾತಂಗೆ ಮಕ್ಕಳ ಸಾವಿನೊಳ್ ಮಹಾದುಃಖಮೆಯ್ದಿದಪ್ಪುದಱಿನೀಯವಸರದೊಳಾತನಂ ಪ್ರತಿಬೋಧಿಸಿ ದುಃಖಮನಾಱಿಸುವೆನೆಂದು ದೇವಲೋಕದಿಂಬಂದು ಪಾರ್ವನಾಗಿ ಸಗರರಾಜನ ಮನೆಯ ಬಾಗಿಲೊಳ್ ನಿಂದು ಕೆಯ್ಯೊಳ್ ತೊವಲಂ ಪಿಡಿದನ್ಯಾಯಮನ್ಯಾಯಮೆಂದುಗ್ಘಡಿಸಿ ಪುಯ್ಯಲಿಡುತಿರ್ದೊಡರಸಂ ಕೇಳ್ದಾತನಂ ಬರಿಸಿದೊಡೆ ಬಂದು ಮುಂದೆ ನಿಂರ್ದಿನಮಿದೇನ್ಯಾಯಮೆನೆ ನೀನಾರಯ್ಯಲಾರ್ಪೊಡೆನ್ನ ಪುಯ್ಯಲಂ ಪೇೞ್ವೆನೆನೆ ಅನಾರಯ್ಯಲಾಱೆನೆಂಬಂತೆನಗರಿದುಂ ಪಿರಿದುಮಿಲ್ಲಂಜದೆ ಪೇೞ್ದಾರಯ್ದು ಕೊಟ್ಟ ಪೆನೆಂದೊಡಾ ಪಾರ್ವನಿಂತೆಂದಂ

ಚಂ || ಬಿಡದತಿಭಕ್ತಿಯಿಂ ಪರಿಸಿ ದೇವತೆಗಳ್ಗನಿತಾನುಮಂದದಿಂ
ಪಡೆದೆನಪೂರ್ವನಂ ಮಗನನೋರ್ವನನಾಂ ಕರವೊಂದಿದೞ್ಕಱಿಂ
ನಡೆಪಿದೆನಾತನಂ ಮಡಿಪಿದಂ ಜವನಿಂ ಪೆಱತೇನೊ ಚಕ್ರಿ ನೀಂ
ತಡೆದಿರದೆನ್ನ ಪುತ್ರನಸುವಂ ಪಡೆದೀವುದು ನೆಟಟನೆಂಬುದುಂ ೪೭

ವ || ಕೇಳ್ದು ತಾನಾರಯ್ವೆನೆಂದುದರ್ಕಮಾತನ ಬೇಡಿದನಾಚಾರಕ್ಕಮರಸಂ ಬೆಕ್ಕಸಂಬಟ್ಟು ನಿಲೆ ಚಿತ್ರವಿದನೆಂಬ ಪೆರ್ಗಡೆಯೆಂಗುಂ ಎಲೆ ಪಾರ್ವಾ ಕೇಳ್ ನನ್ನ ಮಗನ ಪ್ರಾಣಮಂ ನಾವು ಬೇಳ್ದಾದೊಡಂ ಪಡೆದಿತ್ತಪೆವು ಕರಮರಿಯವುಂ ಪಿರಿಯವುಮಪ್ಪ ಹೋಮದ್ರವ್ಯಂಗಳೆಲ್ಲಮೆಮ್ಮಲ್ಲಿಯೊಳವು ಉೞಿಕೆಯ್ಪುವನಿನ್ನೊಂದೆರಡನಾಗುಮಾಡಿ ತರ್ಪುದೆಂದೊಡವಾವುವೆಂದೊಡೆ ಎಂದುಂ ತಮ್ಮೊಕ್ಕಲೊಳಗಾರುಂ ಸಾಯದರ ಮನೆಯ ಪುಲ್ಲಂ ಕಿರ್ಚುಮಮ ತರ್ಪುದೆಂದೊಡಾ ಮಾತಿನಂದಮನಱಿದಂತೆಗೆಯ್ವೆನೆಂದು ಪೋಗಿ ಪೊೞಲೊಳಗೆಲ್ಲ ಮಾರೈದು ಬಂದೆನಂತಪ್ಪುವನೆಲ್ಲಿಯುಂ ಪಡೆಯೆನೆಂದೊಡೆ ಅರಸನೆಂಗುಂ ಎಲೆ ಪಾರ್ವಾ ಒರ್ವರುಂ ಸಾಯದೊಕ್ಕಲಮನೆಯ ಪುಲ್ಲಂ ಕಿರ್ಚುಮನೆಂತು ಪಡೆಯಲ್ಬಾರದಂತೆ ಪೋದ ಪ್ರಾಣಮನಾರ್ಗಂ ಪಡೆಯಲ್ಬಾರದೆಂಬುದನೆ ಬಗೆವೆಯಲ್ಲಾ

ಕಂ || ಪುಟ್ಟಿದೊಡೆ ಸಾವುಮಂತೊಡ
ವುಟ್ಟಿ ತಗುಳ್ದೊಡನೆ ನಡೆಯಲಿರ್ದಪುದದು ತಾಂ
ಮುಟ್ಟುವುದುಂ ಚೋದ್ಯಮೆ ಬಾ
ಯ್ವಿಟ್ಟು ಮೞಲ್ದಱಿವುಗೆಟ್ಟು ದುಃಖಂಬಡದಿರ್ ೪೮

ವ || ಎಂದೊಡಾ ಪಾರ್ವನೆಂಗುಂ ದುಃಖಮುಂ ಕುತ್ತಮುಂ ತಮ್ಮನೆಯ್ದದನ್ನೆವರಂ ಸೈರಿಸುವರೈದಿದೊಡಾರ್ ಸೈರಿಸುವರೆಂದೊಡರಸನಿಂತೆಂದು

ಪಿರಿಯಕ್ಕರ ||

ಅಱಿವು ದುಃಖದೊಳ್ ಸೈರಿಸಲಾರ್ಪುದೆ ಶೌಚದ ಪೆಂಪ ತಾಂ ಪರವಧುವಿಂ
ಗೆಱಗದಿರ್ಪುದೆ ಕಲಿತನಂ ಪೊಣರ್ದು ಕುಸಿಯದಿರ್ಪುದೆ ಪಾೞಿಯೊಳ್ಪಂ
ನೆಱೆಯಲಾರ್ಪುದೆ ದುಃಖಮುಂ ಪೆಱರ ಪೆಂಡಿರುಂ ಪೊಣರ್ದಲ್ಲಿ ಕಜ್ಜಮುಮಿಲ್ಲದಂ
ದಱಿವಿನೊಳ್ಪುಂ ಶೌಚದ ಪೆಂಪು ಕಲಿತನದಳವುಮೆಂತೆಸೆಯಲಾರ್ಕುಂ ೪೯

ವ || ಎಂದು ಮತ್ತಮೆನಿತಾನುಂ ತೆಱದ ಗುಣದಗ್ಗಳಿಕೆಯುಮಂ ಅಧ್ರುಮಮಪ್ಪ ಮನುಷ್ಯಭವದೇೞಿದಿಕೆಯುಮನರಸಂ ಪೇೞುತ್ತುಮಿರೆ ಪಾರ್ವನೆಂಗುಂ ದುಃಖದೊಳ್ ಸೈರಿಸುವುದೆಂದು ನಿಮ್ಮ ಪೇೞ್ದ ಧರ್ಮಶ್ರಣಮೆನಗೆಯೊ ನಿಮಗುಮಕ್ಕುಮೊ ಪೇೞಿಮೆಂದೊಡರಸನೆನಗೆ ಮುನ್ನಮೆನೆಯಂತುಪ್ಪೊಡಿಂದು ನಿನ್ನ ಱುವತ್ತು ಸಾಸಿರ್ವರ್ ಮಕ್ಕಳೆಲ್ಲ ವೊರ್ಮೊದಲೆ ಸತ್ತರೆನೆ ಸಂಸಾರದಂದಮಂತೆಯಕ್ಕುಮದೇಂ ಚೋದ್ಯಮೆಂದು ಮತ್ತಮನಿತ್ಯತೆಯಂ ಪೇೞುತ್ತುಮಿರ್ಪನ್ನೆಗಂ ಇತ್ತ ಭಗೀರಥಂ ಗಂಗೆಯನೀರಂ ಕೈಲಾಸಪರ್ವತಕ್ಕೆ ಬರೆ ತಿರ್ದಿ ಪರಿಯಿಸಿತಂದಲ್ಲಿ ತಮ್ಮಯ್ಯಂಗಳ ಸತ್ತ ಪ್ರಪಂಚಮೆಲ್ಲ ಮನಱಿದು ದುಃಖೋದ್ರೆಕದಿಂ ಮಗುೞ್ದು ಬಂದು ಪೊೞಲನೆಯ್ದಿ ವಾಹನದಿನಿೞಿದು ಮುಸುಕಿಟ್ಟು ಕಣ್ಣನೀರ್ ನೆಗೆಯೆ ಶೋಕರಸಮೊಗೆಯ ಪಾಲ್ಕೊಳ್ವ ಕೆಯ್ಗೆ ಜೆಟ್ಟಿಯ ಗಾಳಿ ಬರ್ಪಂತಾನುಂ ತಾವರೆಗೊಳಕ್ಕೆ ಮಂಜು ಬರ್ಪಂತಾನುಂ ಕಣ್ಗೆ ಪೊಗೆ ಬರ್ಪಂತಾನುಂ ತಳಿರ್ತ ಮರಕ್ಕೆ ಕಾೞ್ಕಿರ್ಚು ಬರ್ಪಂತಾನುಂ ಬಂದು ಪೊೞಲಂ ಪೊಕ್ಕು ತಮ್ಮಯ್ಯಂಗಳ ಸಾವನಱಿಪುತ್ತುಂ ಚಕ್ರವರ್ತಿಯ ಸಮಸ್ತ ಪರಿವಾರಜನಂಗಳ ನೆರವಿಯ ಮನಂಗಳೆಂಬ ಮನೆಗಳಂ ದುಃಖಮೆಂಬುರಿವ ಕೊಳ್ಳಿಯೊಳಂ ಸುಡುತ್ತುಂ ಪುಯ್ಯಲಿಡುತ್ತಮರಮನೆಗೆ ಬಂದು ಸಭಾಮಧ್ಯದೊಳ್ ಸಿಂಹಾಸನಾ ರೂಢನಾಗಿರ್ದವಷ್ಟಂಭದಿಂ ಪಾರ್ವಂಗೆ ಧರ್ಮಶ್ರವಣಮಂ ಪೇೞುತ್ತುಮಿರ್ದ ಚಕ್ರವರ್ತಿಯನೆಯಯ್ದೆವಂದು ದೇವಾ ಬಿನ್ನಪಂ ನಾಗರಾಜನಿಂದಂ ನಿನ್ನಱುವತ್ತು ಸಾಸಿರ್ವರ್ ಮಕ್ಕಳುಮೊಡನೆ ಬೆಸಂದಪ್ಪಿದರಾನವರ ಬೆಸದಿಂ ಪೋಗಿ ಬರ್ದುಂಕಿದೆನೆಂದು ಮೆಯ್ಯನಿಕ್ಕಿ ಶೋಕಂಗೆಯ್ಯತ್ತಿರೆ

ಕಂ || ಅರಸಿಯರುಂ ಪರಿಜನಮುಂ
ಪುರಜನಮುಂ ಬಂಧುವರ್ಗಮುಂ ಕೇಳ್ದು ಕರಂ
ಪಿರಿದುಂ ದುಃಖಂಗೆಯ್ಯು
ತ್ತಿರೆ ಪೊೞಲೊಳಗೊಗೆದುದಲ್ಲಕಲ್ಲೋಲರವಂ ೫೦

ಅಳವಲ್ಲದೊಗೆದ ದುಃಖಾ
ನಳನಿಂದಂ ಬೆಂದು ನೊಂದು ಬಂದು ಧರಿತ್ರೀ
ತಳನಾಥನ ಬಳಸಿಯುಮಿ
ರ್ದೊಳಱಿ ಸುಖಂ ಪೆೞಱಿಪೋಗೆ ದುಃಖಂಗೆಯ್ದರ್ ೫೧

ಹಾ ಸಕಳ ಚಕ್ರವರ್ತೀ
ಭಾಸುರ ಕೀರ್ತೀ ದಿನೇಶಮೂರ್ತೀ ದಿವ್ಯಾ
ಭಾಸರ್ ನಿನ್ನಾತ್ಮಜರಿಂ
ತೀ ಸಾವೆಯ್ದಲ್ಕೆ ತಕ್ಕುದೇ ಮನಜಪತೀ ೫೨

ಹಾ ನವನಿಧಿಗಧಿನಾಥಾ
ಭಾನುನಿಭಾ ನಿನಗೆ ಪುಟ್ಟಿಯುಂ ದುಷ್ಟ ಕೃತಾಂ
ತಾನನಮನೆಯ್ದಿದರ್ ಪೆೞ
ತೇನೆಂಬುದೊ ಮಾರಿ ಕಣ್ಗೆ ಮಾನಸವಾೞಂ ೫೩

ಹಾ ವಿಖ್ಯಾತ ನರೇಂದ್ರಾ
ದೇವರ್ ಮೆಯ್ಗಾಪು ನಿನಗೆ ಪುಟ್ಟಿದರಂ ನೀಂ
ಕಾವುದು ತಕ್ಕುದವಂದಿರ್
ಸಾವುದುಮಾಮಿಂತು ನೋವುದುಂ ತಕ್ಕುದೆ ಪೇೞ್ ೫೪

ವ || ಎಂದರಸನಂ ಮೂದಲಿಸುತ್ತುಮರಸಿಯರೆಲ್ಲಂ ತಂತಮ್ಮ ಮಕ್ಕಳಂದಚಂದಂಗಳಂ ನೆನೆನೆನೆದು.

ರಗಳೆ || ಹಾ ನಯನ ಮನೋಹರ ರೂಪರಿರಾ | ಹಾ ನರಪಕುಲೋಜ್ವಲದೀಪರಿರಾ ೧
ಹಾ ನಿರತಿಶಯೋತ್ತಮ ತೇಜರಿರಾ | ಹಾ ನಿರುಪಮ ಗುಣವಿಭ್ರಾಜರಿರಾ ೨
ಹಾ ಸಿಂಹಪರಾಕ್ರಯುಕ್ರರಿರಾ | ಹಾ ಸಿಂಹ ಸುವಿಷ್ಟರ ಭಕ್ತರಿರಾ ೩
ಹಾ ದಿವಿಜಯಕುಮಾರ ವಿಳಾಸರಿರಾ | ಹಾ ದನುಜರಿಪುಪ್ರತಿಭಾಸರಿರಾ ೪
ಹಾ ವಿಸ್ಮಯಕರ ಭುಜಶೌರ್ಯರಿರಾ | ಹಾ ವಿಜಯಕರೋನ್ನತ ವೀರ್ಯರಿರಾ ೫
ಹಾ ಸಮ್ಯಗ್ಧರ್ಶನಯುಕ್ತರಿರಾ | ಹಾ ಜಿಪದಕಮಳ ಸುಭಕ್ತರಿರಾ ೬
ಹಾ ಚಕ್ರಿಗೆ ಕರಮೆ ವಿನೀತರಿರಾ | ಹಾ ಚತುರಸ್ತ್ರೀಜನ ನೂತರಿರಾ ೭
ಹಾ ಸಕಲ ಧರೇಶನ ಪುತ್ರರಿರಾ | ಹಾ ಸರಸಿಜದಲನಿಭನೇತ್ರರಿರಾ ೮
ಹಾ ಸರ್ವ ಧರಾವರ ಸೇವ್ಯರಿರಾ | ಹಾ ಸುಜನ ಮನೋಹರ ಭವ್ಯರಿರಾ ೯
ಹಾ ವಿಕ್ರಮಗರ್ವವ್ಯಾಳರಿರಾ | ಹಾ ವಿಸ್ತೃತ ಶಾಸ್ತ್ರಕ್ರಿಯಾಳರಿರಾ ೧೦
ಹ ನೃಪಕುಲ ವಿದಿತ ಸುವೃತ್ತರಿರಾ | ಹಾ ನಗವರ ಸನ್ನಿಭ ಚಿತ್ತರಿರಾ ೧೧
ಹಾ ಸೊಗಯಿಪ ರೂಪಿನ ಕಲಿಗಳಿರಾ | ಹಾ ಸಕಳೋರ್ವಿಗೆ ಬಲ್ಲಾಳ್ಗಳಿರಾ ೧೨
ಹಾ ಸುರಸುಂದರಸನ್ನಿಭ ವಪುಗಳಿರಾ | ಹಾ ಸಂತತ ಶೌರ್ಯಹತ ರಿಪುಗಳಿರಾ ೧೩

ವ || ಎಂದಿಂತು ವಿಪ್ರಳಾಪಂಗೆಯ್ವರುಂ ಮೂರ್ಛೆವೋದರುಂ ದೆಸೆಯಂ ನೋೞ್ಪರುಂ ವಿಕಳರಾದರುಂ ಪುಯ್ಯಲಿಡುವರುಂ ಬಾಯಂಬಿಡುವರುಂ ದುಃಖಂಬಡುವರುಂ ತಮ್ಮಂತಾವೆ ಪೊಯ್ದೞ್ವರುಂ ಬಿದಿಯಂ ಬಯ್ವರುಂ ಬೞಲ್ದು ಬೀೞ್ವರುಂ ಬಿೞ್ದು ಪೊರಳ್ವರುಂ ಚಕ್ರಿಯ ಕಾಲಮೇಲೆ ಕವಿದೞ್ವರುಂ ಸಾವಂ ಬೇೞ್ಪರುಮಾಗಿ ಸುಜಾತಿಯಪ್ಪ ಮಾಣಿಕ್ಯಮೆಂತುಂ ಕಿರ್ಚಿನೊಳಗಿರ್ದುಂ ಬೆಳಗುವಂತೆ ತನ್ನಂ ಬಳಸಿಯುಂ ಬಂದು ದುಃಖಂಗೆಯ್ವರ ನಡುವಿರ್ದುಂ ಧರ್ಮಕಥಾಶ್ರವಣದಿಂ ನಿಶ್ಚಳನಾಗಿರ್ದೊಡಿದೇನರಸಂ ಮರವಾನಿಸನೊ ಮೇಣ್ ಲೆಪ್ಪದರಸನೊ ಪೇೞಿಮಿಂತಪ್ಪ ಮಹಾ ದುಃಖದೊಳಮಿಂತುಸಿರದಿರ್ಪಿರ ವಿದೇನೆಂದು ಸಭೆಯೊಳಿರ್ದವರ್ ನುಡಿಯುತ್ತುಮಿರೆ ಚಿತ್ರವಿದನೆಂಬ ಪೆರ್ಗಡೆ ಕೇಳ್ದರಸನ ದುಃಖದಳವಿಯಂ ನಿಮಗೆ ತೋಱೆದಪೆಂ ನೋಡಿಮೆಂದು ಸಿದ್ಧಾರ್ಥಮೆಂಬ ಬಿಳಿಯ ಸಾಸಿವೆಗಳಂ ತರಿಸಿಯರಸನ ಮೆಯ್ಯ ಮೇಗಣಿಂದಿೞಿಯೆ ಸುರಿಯೆ ಕಾಯ್ದೋಡಿನೊಳಿಕ್ಕಿ ಬೆಳ್ಳಿನಂತೆ ಛಿಳಿಛಿಳಿಲೆಂದರಲ್ದು ಸಿಡಿದು ಪೋಗೆ ಕಂಡಿರೆ ದುಃಖಾಗ್ನಿಯೊಳಿರ್ದ ಮೆಯ್ಯ ಬೆಂಕೆ ಮತ್ತಮರಸಿಯರ್ಗೋರೋರ್ವ ಮಕ್ಕಳ ದುಃಖಮರಸಂಗಱುವತ್ತು ಸಾಸಿರ್ವರ್ ಮಕ್ಕಳ ದುಃಖವೊರ್ವಂಗೆ ಸಾಮಾನ್ಯಮಲ್ತಱಿವಿನ ಪೆಂಪಿನೊಳ್ ಸೈರಿಸರ್ದನೆಂದೂಡವರೆಲ್ಲಂ ಚೋದ್ಯಂಬಟ್ಟು ಕದಪಿನೊಳ್ ಕೆಯ್ಯನಿಟ್ಟು ಬೆಱಗಾಗಿರ್ಪಿನಮಾ ಪಾರ್ವಂ

ಕಂ || ಇನ್ನಿರಲಾಗದು ತೋಱುವೆ
ನ್ನೆನ್ನಂದಮನೆಂದು ಕಟಕ ಕಟಿಸೂತ್ರಾದ್ಯ
ತ್ಯುನ್ನತ ದಿವ್ಯಾಭರಣಯು
ತೋನ್ನತ ಸುರರೂಪನಾಗಿ ಸೊಗಯಿಸಿ ನಿಂದಂ

ವ || ನಿಂದು ಚಕ್ರಿ ಕೇಳಾ ನಿನ್ನ ಮುನ್ನಿನ ಬಲವರ್ಧನನೆಂಬ ಬಾಣಸಿಗನೆನಾನ್ ಎನ್ನಂತ್ಯ ಕಾಲದೊಳ್ ನೀಂ ಪೇೞ್ದ ಪಂಚನಮಸ್ಕಾರಮಂ ಕೇಳ್ದು ಕೆಯ್ಕೊಂಡ ಸಮಾಧಿಯ ಫಲದಿಂ ಕೂಡಿದೆಯಪ್ಪುದಱಿಂದಾನುಮಾ ದೇವಲೋಕದೊಳ್ ಸುಪ್ರಭನೆಂಬ ದೇವನಾಗಿ ಪುಟ್ಟಿರ್ದು ನಿನಗಿಂತಪ್ಪ ದುಃಖಮಾದುದನವಧಿಯಿನಱಿದವನಾಱಿಸುವೆನೆಂದು ಬಂದೆನಿನ್ನುಪಾಯಮುಮಂ ಸಂಸಾರದಪಾಯಮುಮಂ ನಿನ್ನಱಿವಿನ ಬಲ್ಮೆಯುಮಂ ಧೈರ್ಯದೊಳಾದ ನಣ್ಕಿಯುಮಂ ಕಂಡೆನಿನ್ನು ಪಲವು ಮಾತುನೊಳೇಂ ಇವರೆಲ್ಲರ ಮನದ ದುಃಖಮನಾಱೆಸುವುದು ಬೞಿಯಂ ಕರ್ಮದಪೊಟ್ಟಂ ಪಾಱೆಸುವುದೆಂದಾ ದೇವಂ ದೇವಲೋಕಕ್ಕೆ ಪೋಪಾಗಳರಸನರಸಿಯರುಮಂ ಬಂಧುವರ್ಗಮುಮಂ ಕರೆಸಿ ಕೇಳಮೆಂದಿಂತೆಂದಂ

ಚಂ || ತನುಬಳಮುಂ ವಿಳಾಸದಳವುಂ ಧನಸಂಕುಳಮುಂ ವಿನೂತ ಯೌ
ವನಭರಮುಂ ಕಳತ್ರದಿರವುಂ ಸುತರಾದರಮುಂ ಸುರಾಗಿಯ
ಪ್ಪನ ತಪಮುಂ ಲತಾಂಗಿಯೊಲವುಯಂ ಸಿರಿಯೊಳ್ ನಿಲವುಂ ನಿತಾಂತಮಿಂ
ತಿನಿತುಮನಿತ್ಯಮಪ್ಪಿವಱಗಲ್ಕೆಗೆ ದುಃಖಿಗಳಾಗಲಕ್ಕುಮೇ ೫೭

ವ || ಕಿಡುವುದಱ ಕೇಡಿಂಗೞಲ್ದು ಕಿಡದುದಂ ಕಿಡಿಸುವುದಾವ ಕಜ್ಜಂ

ಕಂ || ಕೞಿಯೆ ಬಸಮೞಿಯೆ ಬೆಳರು
ತ್ತೞಲುಂ ಬಿಡದೞಲುಮಾಗದೇಕೞಿವಿರ್ ನೀ
ಮೞಿಯಲ್ ಬೇಗಂ ದುರ್ಗತಿ
ಗಿೞಿಯಲ್ ಸಂಸಾರದೊಳಗೆ ಸುೞಿಯಲ್ ಬಗೆವಿರ್ ೫೮

ವ || ಎಂದು ಮತ್ತಮಿಗಳೆನಗೆ ಪುಟ್ಟಿದ ಮಕ್ಕಳೆಲ್ಲಮೊಡನೞಿದ ಕರ್ಮದಳವುಮಂ ಎನ್ನ ಬಾಣಸಿಗನಿಂದಾದ ಧರ್ಮದಳವುಮನಿಲ್ಲಿಯೆ ಕಂಡಿದರಱೆಂ ಧರ್ಮಮನೆ ಬಗೆದು ನೆಗೞಿಮೆಂದರಸನರಸಿಯರಂ ಬಂಧುವರ್ಗಮಂ ಸಂತೈಸಿ ಲೌಕಿಕಕ್ರಿಯೆಯಂ ನೆಗೞ್ದು ಬೞಿಯಿಂ ಜಿನಮಹಾಮಹಿಮೆಗಳಂ ಮಾಡಿಸುತ್ತನುಕ್ರಮದಿಂ ತಱಿಸಂದು ಸಗರ ಚಕ್ರಿವರ್ತಿಯಱುವತ್ತು ಸಾಸಿರ್ವರ್ ಮಕ್ಕಳ್ವೆರಸು ವೀರಸ್ವಾಮಿಗಳೆಂಬನಗಾರ ಕೇವಲಿಗಳ ಪಕ್ಕದೆ ತಪಮಂ ಕೆಯ್ಕೊಂಡು ತಪಶ್ರೀಯೊಳೊಲ್ದು ಕ್ರೀಡಿಸುತ್ತುಂ ಪರೀಷಹಂಗಳನೋಡಿಸುತ್ತುಂ ಕರ್ಮವೈರಿಗಳನೋಡಿಸುತ್ತುಮಿರ್ದ ಕಡೆಯೊಳ್ ಶುದ್ಧಧ್ಯಾನದಿಂ ಮುಕ್ತಿಶ್ರೀಯುಂ ಪಡೆದನರಸಂ ಅರಸಿಯರುಂ ಬಂಧುಜನಂಗಳುಂ ಪರಿಜನಮುಂ ಚಕ್ರವರ್ತಿಯ ಮಕ್ಕಳುಮೞ್ಕಾಡಿದರೆಂಬ ಕಥೆಯಂ ಜೀವಾ ನೀಂ ಬಗೆವುದು

ಕುಂ || ತಡೆಯಲೆಡೆಯಿಲ್ಲ ಚಚ್ಚರ
ಮೊಡರ್ಚು ನಿನಗಾರ್ಮಮಪ್ಪ ಧರ್ಮಮನೞಿಪಿಂ
ತೊಡಱದಿರು ಮೋಹಪಾಶದ
ತೊಡರ್ಪು ಬೞಿಯಂ ಪೊಡರ್ಪುಗಿಡಿಸೊದೊಡೇವೈ ೫೯

ವ || ಫಲಮನಾಸೆಪಟ್ಟೊಕ್ಕಲಿಗಂ ಪದನಱಿದುೞ್ತು ಬಿತ್ತದೊಡಂ ಗೆಲ್ಲಮನಾಸೆವಟ್ಟರಸಂ ಬಲಂಬಡೆದು ಪಗೆಯಂ ಮುತ್ತದೊಡಂ ಸುಗತಿಗಾಸೆವಟ್ಟನೆಱಿವುವಡೆದು ಧರ್ಮಮಂ ಪತ್ತದೊಡಮಾತನ ಫಲಮುಂ ಈತನ ಪಗೆಯುಂ ಆತನ ಕರ್ಮಬಂಧಮುಂ ಬೞಿಕ್ಕೆಂತುಂ ಕಿಡಿಸಲ್ ಬಾರದೆಂಬುದನೆ ಜೀವಾ ನೀಂ ಬಗೆವುದು

ಉ || ಮೋಹಮನೆಯ್ದೆ ನೀಂ ಬಿಡುವುದರ್ಥಚಯಂಗಳೊಳಾಸೆವಟ್ಟತಿ
ಸ್ನೇಹಿತನಾಗದಿರ್ ಕಿಡಿಸಲಿರ್ಪ ಕಳತ್ರದೊಳೊಳ್ಳಿತಲ್ಲದೀ
ದೇಹದೊಳಪ್ಪಗೆಯ್ದು ನೆಗೞಲ್ ಗತಿ ದುರ್ಮತೋಕ್ತಿಯ
ಪ್ಪೈಹಿಕಸೌಖ್ಯಮಂ ಬಿಸುಟು ಮಾಣ್ದಿರಲಾಗದೆ ಭವ್ಯಜೀವವೇ ೬೦

ಗದ್ಯ || ಇದು ಜಿನಶಾಸನ ಪ್ರಭಾಸನ ಶೀಲೋದಿತ ವಿದಿತ ಬಂಧುವರ್ಮ ನಿರ್ಮಿತಮಪ್ಪ ಜೀವಸಂಬೋಧನಾ ಗ್ರಂಥಾವತಾರದೊಳ್ ಅಧ್ರುವಾನುಪ್ರೇಕ್ಷಾ ನಿರೂಪಣಂ ಸಗರ ಚಕ್ರವರ್ತಿಯ ಕಥಾವರ್ಣನಂ

ಪ್ರಥಮಾಧಿಕಾರಂ