. ಅಧ್ರುವಾನುಪ್ರೇಕ್ಷೆ

ಶಾ || ಶ್ರೀ ನಾರೀರಮಣೀಯಪಾದಕಮಲಂ ಶುದ್ಧಂ ಪ್ರಸಿದ್ಧಂ ಲಸತ್
ಜ್ಞಾನಕಾರನಪಾರ ದೃಗ್ಬಲುಸುಖಾಖ್ಯಾತಂ ವಿನೂತಂ ವಿನೇ
ಯಾನೀಕ ಪ್ರವಿರಾಜಿತಂ ತ್ರಿಭುವನಾಧೀಶಂ ಜಿನೇಶಂ ಸಮಾ
ಧಾನಪ್ರಾಪ್ತಿಯನೀಗೆ ಭವ್ಯನಿಕರಕ್ಕೌಚಿತ್ಯಮಂ ಸ್ತುತ್ಯಮಂ   ೧

ಮ || ಖಳಕರ್ಮಾಷ್ಟವಿಧೋಗ್ರಕಂಟಕಕುಳಪ್ರಧ್ವಂಸದಿಂದಂದ ನಿರಾ
ಕುಳರುಂ ನಿಷ್ಕಳರುಂ ವಿನಷ್ಟಮಳರುಂ ಪ್ರಖ್ಯಾಪಿತೋದ್ಯದ್ಗುಣೋ
ಜ್ವಳರುಂ ನಿಶ್ವಳರುಂ ಪ್ರಣೂತಬಳರುಂ ತಾಮಾಗಿ ಲೋಕಾಗ್ರದೊಳ್
ತೊಳಗುತ್ತಿರ್ಪ ವಿಶುದ್ಧಸಿದ್ಧರೆಮಗೀಗಾತ್ಮೋದಯಪ್ರಾಪ್ತಿಯಂ  ೨

ಶಾ || ಧೈರ್ಯಂ ಸರ್ವಪರಿಷಹಾನ್ವಯಜಯಂ ಚಾರಿತ್ರಭಾಸ್ವತ್ತಪಃ
ಕಾರ್ಯಂ ಷಡ್ವಿಧ ಜೀವರಾಶಿಹಿತವತ್ಕಾರುಣ್ಯಯಕ್ತೋದಿತೌ
ದಾರ್ಯಂ ಸುವ್ರತರತ್ನದಾಯಿಯೆನೆ ಮಿಕ್ಕಾಚಾರಶೌರ್ಯನ್ವಿತಾ
ಚಾರ್ಯರ್ ತಾಮೆಮಗೀವರಕ್ಕೆ ದುರಿತಪ್ರಧ್ವಂಸನೋಪಾಯಮಂ  ೩

ಉ || ಮಾನಿತ ಭವ್ಯಲೋಕಮನಿದಂ ಭುವನತ್ರಿತಯಾಗ್ರದಲ್ಲಿಗೊ
ಯ್ವಾ ನೆವದಿಂದಮಾಪ್ತಮುಖನಿರ್ಗತಮಂ ಗಣನಾಥನಿರ್ಮಿತಾ
ನೂನ ಸುವಸ್ತು ವಿಸ್ತರಮನಾಗಮಮಂ ಪ್ರತಿಬೋಧಿಪರ್ ಗುಣ
ಸ್ಥಾನಿಗಳಪ್ರಮತ್ತರುಪದೇಶಕರೀಗೆಮಗೊಳ್ಪಿನೋಳಿಯಂ   ೪

ಮೋಕ್ಷದ ಬಟ್ಟೆಗಟ್ಟೆ ಬಿಡದಾಱಡಿಗೊಳ್ವದುರಂತ ದುಷ್ಟಕ
ರ್ಮಕ್ಷುಭಿತೋಗ್ರ ತಸ್ಕರರ ದುಷ್ಟರ ದುಸ್ತರ ದುರ್ಧರೋರುದ
ರ್ಪಕ್ಷತಿ ಮಾಡಲಾರ್ಪ ತಪದೊಳ್ಪಿನ ತೆಳ್ಪಿನ ಸಾಧುವರ್ಗಮೀ
ಗಕ್ಷಯ ಸೌಖ್ಯಮಂ ಸಕಲ ಭವ್ಯಜನಕ್ಕೆ ಮನೋನುರಾಗದಿಂ  ೫

ಚಂ || ಅನುಪಮ ಕಾವ್ಯಧರ್ಮದಱಿವಿಲ್ಲದನಂ ಜಡನೆಂದು ಪಾಪಕ
ರ್ಮನ ದೆಸೆಯೊಲ್ಲೆನೆಂದು ಪುಸಿವಾತನನೇೞಿದನೆಂದು ಕಾವ್ಯಚೋ
ರನನುಱದೇವೆನೆಂದು ಮನಸಂದು ಸರಸ್ವತಿ ಬಂದು ಬಂಧುವ
ರ್ಮನ ಮುಖಪದ್ಮದೊಳ್ ನೆಲಸಿ ನಿಂದು ವಿರಾಜಿಸುತಿರ್ಕೆ ರಾಗದಿಂ  ೬

ಕಂ || ಅಱಿವಿಲ್ಲದೆ ತಕ್ಕೆಡೆಯೊಳ್
ತಱಿಸಲ್ಲದೆ ತೊಡರ್ದು ನಮೆವ ಜೀವಕ್ಕೆಲ್ಲಂ
ನೆಱೆಯೆ ಹಿತಮೆಂದು ಬಗೆದಿದ
ನಱಿಪುವೆನಱೆವಂತು ಜೀವಸಂಬೋಧನೆಯಂ    ೭

ವ || ಜೀವದ್ರವ್ಯಮೆಂತಪ್ಪುದೆಂದೊಡೆ ಜ್ಞಾನ ದರ್ಶನ ಕರ್ತೃತ್ವ ಭೋಕ್ತೃತ್ವ ಸ್ವದೇಹಪರಿ ಮಾಣತ್ವ ಊರ್ಧ್ವಗತಿಸ್ವಭಾವಗುಣಮನಂತಮನಾದಿ ಮಧ್ಯಾ ವಸಾನಮಪ್ಪುದದು ತಾಂ ಮುಕ್ತಜೀವಂ ಸಂಸಾರಿಜೀವಂ ಎಂದೆರ್ತೆಱನಕ್ಕು. ಅಲ್ಲಿ ಜ್ಞಾನಾವರಣೀಯಂ ದರ್ಶನಾವರಣೀಯಂ ವೇದನೀಯಂ ಮೋಹನೀಯ ಆಯುಷ್ಯಂ ನಾಮ ಗೋತ್ರಂ ಅಂತರಾಯಂ ಎಂದಿಂತನಾದಿಕಾಲ ಸಂಬಂಧಿಯಪ್ಪಷ್ಟವಿಧ ಕರ್ಮಂಗಳಂ ನಿರ್ಮೂಲಂ ಮಾಡಿ ಮೂಱುಂ ಲೋಕದ ತುತ್ತತುದಿಯೊಳ್ ಸಿದ್ಧರಾಗಿರ್ಪ ಜೀವಂಗಳೆಲ್ಲಂ ಮುಕ್ತಜೀವಂಗಳೆಂಬುವಕ್ಕುಂ ಮತ್ತಂ ಗತೀಂದ್ರಿಯ ಕಾಯ ಯೋಗ ವೇದ ಕಷಾಯ ಜ್ಞಾನ ಸಂಯಮ ದರ್ಶನ ಲೇಶ್ಯಾಭವ್ಯ ಸಮ್ಯಕ್ ಸಂಜ್ಞಾಹಾರಿಗಳೆಂಬ ಚತುರ್ದಶ ಮಾರ್ಗಣೆಗಳೊಳಂ ಮಿಥ್ಯಾತ್ವಾದಿ ಬಂಧಹೇತುಗಳೊಳಂ ತೊಡರ್ದು ಚತುರ್ಗತಿಗಳೊಳಂ ಸುೞಿವ ಜೀವಂಗಳೆಲ್ಲಂ ಸಂಸಾರಿಜೀವಂಗಳೆಂಬುವಕ್ಕುಂ ಅವಱೊಳೆಂತಂದ ಪಾಷಾಣಂಗಳೊಳ್ ಸುವರ್ಣಪಾಷಾಣಮಿರ್ಪುದಂತಭವ್ಯರಾಶಿಯೊಳಗೆ ಭವ್ಯಜೀವಂಗಳೆಂಬಿವಿರ್ಕುಂ

ಕಂ || ಅವು ಲಬ್ಧಿಚತುಷ್ಟಯಮೆಂ
ಬಿವನೆಯ್ದದೆ ದುರಿತವಶದೆ ಬಹುವಿಧ ದುಃಖಾ
ರ್ಣವದೊಳಗೞ್ದಿರೆ ಬುಧರ
ಪ್ಪವರಿಂ ಸಂಬೋಧಿಸಲ್ಕೆವೇಡಿತ್ತದಱೆಂ ೮

ವ || ಜೀವಸಂಬೋಧನಾ ಗ್ರಂಥಾವತಾರಮೆಂತಪ್ಪುದೆಂದೊಡೆ ಸಂಬೋಧನಾಕ್ರಿಯೆ ಗಳಪ್ಪಾರಾಧನೆಗಳೊಳ್ ಕೂಡಿರ್ಪುದಱಿಂದಾದುವವಾವುವೆಂದೊಡೆ ಶಂಕಾದ್ಯಷ್ಟ ಮಲಂಗಳಂ ಕಳೆದು ನಿಶ್ಯಂಕಾದ್ಯಷ್ಟ ಗುಣಂಗಳಂ ಕೂಡುವುದು ದರ್ಶನರಾಧನೆ ಅಜ್ಞಾನಮಂ ಗೆಂಟುಮಾಡಿ ಸುಜ್ಞಾನಮನಾತ್ಮನೊಳುಂಟುಮಾಡುವುದು ಜ್ಞಾನಾರಾಧನೆ ಪ್ರಮಾದ ಪರಿಣಾಮಮನಾಗಲೀಯದೆ ಪಾಪಕ್ರಿಯೆಯಂ ನಿವೃತ್ತಿಮಾಡಿ ಶುಭಪರಿಣಾಮಮಂ ತನ್ನೊಳ್ ನಿಱಿಸುವುದು ಚಾರಿತ್ರಾರಾಧನೆ ಖ್ಯಾತಿ ಪೂಜಾ ಲಾಭ ಸತ್ಕಾರಾದಿಗಳೀ ತಪದಿಂದಕ್ಕುಮೆಂದು ಬಗೆಯದನಶನಾದಿ ತಪದೊಳ್ ನೆಗೞ್ವುದು ತಪಾರಾಧನೆ

ಕಂ || ಇಂತನುಪಮಮೆನಿಸಿದ ನಾ
ಲ್ಕುಂ ತೆಱದಾರಾಧನ ಮಹಾವಸ್ತುಗಳಂ
ನೀಂ ತಾಳ್ದಿರ್ದೊಡೆ ನೆಟ್ಟನ
ನಂತ ಸುಖಾಸ್ಪದಮನೆಯ್ದಿ ಶಾಶ್ವತನಪ್ಪೈ ೯

ವ || ಅಂತಿರಲ್ ಬಗೆದೊಡೆಲೆ ಜೀವಾ ನೀಂ ಧಾತುವಾದೋಪಾಧ್ಯಾಯನ ಕೆಯ್ಗೆವಂದ ಸುವರ್ಣಪಾಷಾಣಮೆಂತು ಪಿಂಡೀಬದ್ಧ ದಹನ ತಾಪನ ತಾಡನಕ್ರಿಯೆಗಳಿಂ ಶುದ್ಧಲೋಹಮಕ್ಕುಮಂತೆ ಭವ್ಯನುಂ ಮನಷ್ಯಭವಕ್ಕೆ ವಂದಲ್ಲಿ ಯುಕ್ತಾಚಾರರ ಪ್ಪಾಚಾಯ್ರು ಪೊರ್ದಿ ದಯಾಮೂಲಮಪ್ಪ ಧರ್ಮಮಂ ಕೇಳ್ದು ನಂಬಿ ತನ್ನಿರೂಪಿತಮಪ್ಪ ವೃತಶೀಲಾಚಾರಂಗಳಂ ಕೆಯ್ಕೊಂಡು ಮುನ್ನಂ ಶ್ರಾವಕನಪ್ಪುದು ಅಂತಾ ಲೋಹಮಾವರ್ತನ ರಸಮೂಲಿಕಾ ನಿಷೇಕದಿಂ ಮೃದುವಪ್ಪಂತೆ ಶ್ರಾವಕನುಮೇಕಾದಶ ಗುಣಸ್ಥಾನಕ್ರಮದಿಂ ನೆಗೞ್ದು ಬೞಿಯಂ ತಪೋನುಷ್ಠಾನಕ್ರಮದಿನಿಂದ್ರಿಯದರ್ಪ ಸಾಧನಂಗೆಯ್ದು ಆಗಮ ಭಾವನೆಯಿಂ ಜ್ಞಾನಿಯಪ್ಪುದು ಅಂತಾ ಮೃದುವಾದ ಲೋಹಮುಂ ಪತ್ರಪುಟದಗ್ಧಕ್ರಿಯೆಯಿಂ ಶುದ್ಧಹೇಮಪ್ಪಂತೆ ಸಮ್ಯಗ್ ಜ್ಞಾನಿಯುಂ ಚಾರಿತ್ರಸಂಪನ್ನನಾಗಿ ತುದಿಯೊಳ್ ಶುಭಧ್ಯಾನವಿಧಿಯಿಂ ಕರ್ಮಕಳಂಕಮಂ ಕಳೆದು ಶುದ್ಧಾತ್ಮನಪ್ಪುದು ಆದುಕಾರಣದಿಂ ಶುಭಧ್ಯಾನಮೂಲಮಪ್ಪ ಆಧ್ರುವಂ ಆಶರಣಂ ಬೋದಿದುರ್ಲಭಂ ಧರ್ಮಮೆಂಬೀಯನುಪ್ರೇಕ್ಷೆ ಪನ್ನಿರ್ತೆಱನಕ್ಕುಮಿದಱೊಳ್ ಅಧ್ರುವಾನುಪ್ರೇಕ್ಷಾ ನಿರೂಪಣಂಗೈವೆನದನವಧಾರಿಪುದು

ಉ || ಜೀವನೆ ನೀನಿದಂ ಬಗೆದು ಕೇಳ್ ಧ್ರುವಮಧ್ರುವಮೆಂಬ ವಸ್ತುಸ
ದ್ಭಾವವಿಕಾರಮಿರ್ತೆಱದೆ ನಿನ್ನೊಡನಿರ್ದುವು ಬೇಱೆವೇಱೆ ನೋ
ಡಾವುವಿವೆಂಬ ಕಾಳ್ಬಱಿವ ನಿನ್ನ ನಿಜೋತ್ತಮ ಶಕ್ತಿಗಳ್ ಧ್ರುವಂ
ಭಾವಿಸಿ ನೋಡೆ ಕರ್ಮಕೃತ ದೇಹ ಕಳತ್ರ ಧನಂಗಳಧ್ರುವಂ ೧೦

ವ || ಅದೆಂತಪ್ಪವಱಿಂದಧ್ರುವಮಾದುದೆಂದೊಡೆ

ಕಂ || ದರಿಯ ಮರದಂತೆ ಮಂಜಿನ
ನೆರವಿಯ ತೆಱದಂತೆ ಪಣ್ತ ಮರದಂತೆ ಕರಂ
ಬೆರಸಿರ್ದ ನಿನ್ನ ತನುವುಂ
ಪರಿವೇಷ್ಟಿತ ಬಂಧುಜನಮುಮೆಯ್ದಿದ ಧನಮಂ ೧೧

ಚಂ || ಸುರಧನುವೆಂತುಟಂತೆ ವಿಳಸಜ್ಜಳಬುದ್ಭುದಮೆಂತುಟಂತೆ ಪೆ
ರ್ದೆರೆಯಿರವೆಂತುಟಂತೆ ಕಿಸುಸಂಜೆಯ ರಂಜನೆಯೆಂತುಟಂತೆ ಭೂ
ಧರನದಿಯೆಂತುಟಂತೆ ಮುಗಿಲೊಡ್ಡಣದಾಕೃತಿಯೆಂತುಟಂತೆ ಮ
ರ್ತ್ಯರ ತನುವಂ ಕಳತ್ರಜನಮುಂ ಧನಮುಂ ಬಗೆದೆಂತು ನೋೞ್ಪೊಡಂ ೧೨

ವ || ಇಂತು ಬೇಗಂ ಕಿಡುವ ಮಾನಸಬಾೞ್ಗೆ ಮಾರಿಯ ಮೇಲೆ ಪಸಮೆಂಬಂತೆ ಜವನೆಂಬ ಪಾತಕನಾಯುರವಸಾನಂಬರಮಿರಲೀಯದೆಡೆಯೊಳಿಱಿಮುಱಿಮುಱಿದುಯ್ವಂ

ಕಂ || ಅಱಿಯಱಿಯೆ ನೋಡೆ ನೋಡೆಯು
ಮಱಿವರುಮಾರ್ಪವರುವೊಡನೆ ಬಂದಿರೆಯಿರೆ ಕಿ
ಕ್ಕಿಱಿಗಿಱಿದು ಬಳಸಿ ನಂಟರ್
ಮೊಱೆಯಿಡೆಯಿಡೆ ಬಗೆಯದಸುವನಂತಕನುಯ್ವಂ ೧೩

ವ || ಅಂತು ನಿಲ್ಲದ ಮಾನಸವಾೞುಮಂ ಮೇಗಿಲ್ಲದ ಜವನ ಕೊಲೆಯುಮಂ ಕಂಡು ಮೆೞ್ಪಡುವುದುಮಘವಡುವುದುಮೇಕೆ? ಮತ್ತಮಿಂದು ಬಗೆಯಿರೆ?

ಮಲ್ಲಕಾ ||
ಅಯುಮಾಯವೊಡಲ್ ಕಿಡಲ್ ಗುಱಿ ನಂಟರಪ್ಪರೆ ಜೂಂಟರಿಂ
ಶ್ರೀಯ ಪೊರ್ದುಗೆಗುರ್ದು ಮಕ್ಕಳೆ ಠಕ್ಕರೋತನುಕೂಲದಿಂ
ಕಾಯಲಿರ್ದರೆ ಕಾಯಲಿರ್ದವರಾಗಿಯುಂ ಮತಿಗೆಟ್ಟು ಬಾ
ೞ್ವೀಯುಪಾಯಮಪಾಯಮೆಂದೊಡೆ ಕೇಳಿಮೇೞಿದಿರಿರ್ ಕರಂ ೧೪

ವ || ನಿಮ್ಮನಾಸೆವಡಿಸುವ ವಸ್ತುಗಳೆ ಬೇಗಮಘವಡಿಸುವಯದನಱಿದು ಮಱಿಯದರಂತು ಮೆಯ್ಯಱಿಯದೆ ನಿಶ್ಚಿಂತಮಿರ್ಪಿರೆಂಬುದೇಕೆ

ಕಂ || ಎಂದಿಂಗಮೆಮಗೆ ಸಾವಿ
ಲ್ಲೆಂದಿರ್ಪಜರಾಮರರ್ಕಳಂತಿರೆ ಬೆಸೆದಿ
ರ್ಪಂದಿಮಿದು ಪೊಲ್ಲ ತೊಟ್ಟನೆ
ಬಂದಡಸುವ ಜವನಿನವನಾಂ ಕಾವಂ ೧೫

ವ || ಕುತ್ತಂ ಪತ್ತಿನಿಲೆ ಮೆಚ್ಚುದಂತುಣ್ಬನುಂ ಜವಂ ಕೊಲಲೆಂದು ಗಂಟಲಂ ಮೆಟ್ಟಿನಿಲೆ ಮೆಚ್ಚಿದಂತೆ ನಡೆವನುಂ ಪ್ರಾಣದ ಪೋಗಿಂಗಂ ಗತಿಯ ಕೇಡಿಂಗಮೇನೞ್ತೆಗರೋ

ಚಂ || ಅವರಿವರನ್ನರಿನ್ನರಿನಿಸೋವುವೆನ್ನದೆ ರೌದ್ರಕೋಪದಿಂ
ಜವನಿರದುಣ್ಮಿ ತಾಂ ಮಸಗಿ ಗರ್ಭದೊಳಂ ಕೊಲೆ ಮುನ್ನೆ ಕಟ್ಟಿದೊಂ
ದವಧಿಯನೆಯ್ದೆ ನಿಟ್ಟಿಸಿರಲಾಗದೆ ಮಾನಸವಾೞ್ಗೆ ನಾಡೆ ಜೋ
ಕುವರನ ಬಾೞ್ಕೆ ಲೇಸು ಗಡಮೇಕದು ನಿಟ್ಟಿಸಲಪ್ಪ ದೂಸಱಿಂ ೧೬

ವ || ಇಂತಾದೊಡಿಂತಕ್ಕುಮೆಂದು ನಿನಗಂತಪ್ಪುದಂ ಬಗೆಯದೆ ಶಾಶ್ವತಮಿರ್ಪಂತಪ್ಪುದಂ ಬಗೆದು ಕಸವರಮಂ ಪೂೞ್ದು ಬಾೞ್ವೊಡದಱಂದಮಂ ಬಗೆದುನೋಡಾ

ಕಂ || ನಿಲ್ಲದುದಮನೆಂತಂ ನಿ
ಗಲ್ಲದುದುಮನೋವಿ ಕಾವೊಡೀ ಕಾಲದೊಳಿಂ
ಬಲ್ಲದುದುಮನಂತ್ಯದೊಳೊಡ
ಸಲ್ಲದುದಮನಱಿದು ಧನಮನೆನಗೆನುತಿರ್ಪಾ ೧೭

ವ || ಆಯುವಿಲ್ಲದ ಮಾನಸವಾೞ್ಗೆ ಮೆೞ್ಪಟ್ಟೊಡಂ ಸೈಪಿಲ್ಲದರ್ಥಕ್ಕಾಸೆವಟ್ಟೊಡಮೇಕೆ ನಿಲ್ಕುಂ ಅಯುಂ ಸೈಪುಮುಳ್ಳಿನಮೇಕೆ ಸಾವಮೇಕೆ ತವುದಮೆಂಬುದಂ ಬಗೆವುದು ಮತ್ತಮಿಂತಪ್ಪದು

ಚಂ || ಪೞಿಯ ಮೊದಲ್ ಪರಾಭವದ ಮೊತ್ತಮೊದಲ್ ಖಳಮೋಹರಾಜನೆಂ
ಬೞಿಪಿನ ಬಾೞ್ಮೊದಲ್ ಬಳೆವ ಕರ್ಮದ ಬಿಳ್ತು ಮೊದಲ್ ನಿತಾಂತಮಂ
ತೞಿಪುವ ಕಾವ ಪೆರ್ಚಿಸುವ ಚಿಂತೆಯನರ್ಥದೊಳುಂಟುಮಾಡದೊ
ಳ್ಪೞಿಯದೆ ಮೋಹಮಂ ಬಿಸುಟ ಮಾನಸರಿಲ್ಲಿಯ ದೇವರಲ್ಲರೇ ೧೮

ವ || ಕಸವು ಮನೆಯೊಳಿರ್ದೊಡೊಳ್ಳಿಕೆಯ್ಯದೆಂದದಂ ಕಳೆದೊಯ್ದು ಕರಿಯಕೆಯ್ಯೊಳಿಕ್ಕಿ ಬಿತ್ತಿ ಬೆಳಸಂ ಕೊಳ್ವಂತೆ ಕಸವರಮಂ ಬಯ್ತೊಡೊಳ್ಳಿಕೆಯ್ಯದೆಂದದಂ ಧರ್ಮದೊಳ್ ತವಿಸಿ ಪುಣ್ಯಮಂ ಕೆಯ್ಕೊಳ್ವುದುಂ ಮೆೞ್ವಟ್ಟುಮಿರಲಾಗದೇಕೆಂದೊಡೆ

ಕಂ || ಸಾರಂ ಸಂಸಾರಕ್ಕಾ
ಧಾರಂ ಸಲೆ ದೇಹಿಗೆಂತುಮೋರೊಂದೆಡೆಯೊಳ್
ನೀರುಂ ಕೂೞುಂ ಕೊಲ್ವೊಡೆ
ಬಾರಿಪರಾರಾನೆಗೊಲೆಯನುಗ್ರಾಂತಕನಾ ೧೯

ವ || ಕಾವರೆ ಕಣೆಗೊಳ್ವೊಡಂ ಬಾಳೞಿಸುವ ವಸ್ತುಗಳೆ ಕೊಲ್ವೊಡಂ ಕಳ್ಳಂ ಕೊಳ್ಳದೆಯುಂ ಜವಂ ಕೊಲ್ಲದೆಯೆಮೇಕೆ ಮಾಣ್ಗುಮದಱಿಂ ಮಾನಸವಾೞ್ಗೆ ಬೆರ್ಚಲುಂ ಧರ್ಮಮಂ ಮೆಚ್ಚಲುಂ ಬೇೞ್ಪದೆಂತುಂ ತಡೆದುಂ ಪಡೆವುಮೊಳ್ಪಿನೊಳ್ ನೆಗೞ್ಗೆನೆಂದು ಮಾನಲ್ವೇಡಮದೆಂತೆನೆ

ಚಂ || ಒಡವೆಯನುಂಟುಮಾಡಿ ಬೞಿಕೊಯ್ಯನೆ ಧಾರ್ಮಿಕನಪ್ಪೆನಿಲ್ಲದೆಂ
ತೊಡರಿಪೆನೀಗಳೆಂಬ ಬಗೆ ಪೊಲ್ಲದು ಸಲ್ಲದು ಮ್ಯತ್ಯುವೆಂಬವಂ
ಪಡೆವಿನಮಿರ್ಪನಲ್ಲನೆಡೆಯೊಳ್ ಪೊಡೆದಿಕ್ಕುಗುಮುಳ್ಳ ಪಾಂಗಿನೊಳ್
ತಡೆಯದೆ ಧರ್ಮದೊಳ್ ನೆಗಱಿಮೆಂಬುದು ಗೋಸಣೆ ಜೈನಮಾರ್ಗದೊಳ್ ೨೦

ವ || ಕಿರ್ಚು ತಗುಳ್ದ ಮನೆಯೊಳ್ ಕೆಯ್ಗೆ ದೊರೆಕೊಂಡುದನೆ ಕೊಂಡು ಪೊಱಮಡದೆಲ್ಲಮಂ ಪೊಱಮಡಿಪ್ಪೆನೆಂದು ಮೆೞ್ಪಟ್ಟು ಮಾಣ್ದೊಡಂ ಪುಟ್ಟಿದಂದೆ ಮ್ರತ್ಯು ತಗುಳ್ದ ಮಾನಸವಾೞೊಳ್ ನೆಱೆಯೆ ಪಡೆದೊಡಲ್ಲದೆ ಧರ್ಮಂಗೆಯ್ಯೆನೆಂದಿರ್ದೊಡಮಾತಂಗೆ ಸಾವುಮೀತಂಗೆ ಕೇಡುಮಾಗದಿರದೆಂದು ನಿಚ್ಚಮಱಿವರರ್ದು ಸಾಱಿಯುಂ ಕೇಳದಿರ್ಪರೆಂಬುದೇಂ ಜವಂ ಪೆಱವು ಗತಿಗಳೊಳೇನುದ್ದೇಶಮೀ ಮನುಷ್ಯಗತಿಯೊಳ್ ಪುಟ್ಟಿದವರ್ಗೆ ಕರಂ ಮುನಿದಪತಿವರ್ತಿಯಾಗಿ ಕೊಲಲ್ ಮಸುಗುವಂ

ಕಂ || ಮುತ್ತನಿವಂ ಕೂಸಿವನು
ದ್ವೃತ್ತನಿವಂ ತಕ್ಕನಿವನಿವಂ ಖಳನಿವನ
ತ್ಯುತ್ತಮನೆಂದಿಂತು ಮದೋ
ನ್ಮತ್ತಂ ಬಗೆದಪನೆ ಬಗೆಯನಂತಕರಾಜಂ ೨೧

ಶಾ || ಪಟ್ಟಂಗಟ್ಟಿದನೆಂಗುಮೋ ಬಡವ ನೀಂ ಪೋ ಬೞ್ದು ಮಾಣೆಂಗುಮೋ
ಕಟ್ಟಾಳೆಂಗುಮೊ ಪಂದೆಯೆಂದು ಕಡೆಗಣ್ಚುತ್ತಿರ್ಕುಮೋ ಲೋ[ಭಿನೀಂ]
ಮುಟ್ಟಿಂದಿರ್ಕುವೊ ಚಾಗಿ ಮೆಚ್ಚಿದೆನಿವಂ ಬಾೞ್ಗೆಂಗುಮೋ ಕೆಮ್ಮನೇ
ಗೆಟ್ಟಿತ್ತೆಂಬವೊಲಟ್ಟಿಕೊಂದಪನಿವಂ ಮಾಯ್ದಂತಕಂ ಪಾತಕಂ ೨೨

ವ || ಸೊರ್ಕಿದಾನೆ ಮೇಗಿಲ್ಲದೆ ಪರಿತಂದು ಮಸಗಿಕೊಲ್ವುದಂ ಕಂಡೋಟಂಗೊಳ್ಳದೊಡಂ ವಿವೇಕಜ್ಞನುಂ ಕೃತಜ್ಞನುಮಲ್ಲದೆ ಕರುಣಮಿಲ್ಲದ ಜವಂ ಕೊಲ್ವುದಂ ಕಂಡು ಧರ್ಮಂಗೊಳ್ಳದೊಡಮವಂ ಸತ್ತನಿವಂ ದುರ್ಗತಿವೆತ್ತನೆಂಬುದೇವಿರಿದಿಂ ತಡೆಯಲೆಡೆಯಿಲ್ಲಂ

ಕಂ || ಮರದಿಂ ಪಣ್ ಪೆಱಿದಂದದು
ಧರೆಯಂ ಮುಟ್ಟುವುದದೆನಿತು ನೀಡಱದದಱಂ
ತರದನಿತೆ ಪುಟ್ಟು ಮರಣಂ
ದೊರೆಕೊಳ್ವೊಡೆ ನಿನಗೆ ತಡೆದಿಲ್ಕೆಡೆಯುಂಟೇ ೨೩

ವ || ಸಸಿ ಪುಟ್ಟಿದಂದೆ ಪುಲ್ಲುಂ ತಗುಳ್ದ ಕೆಯ್ಯುಮಂ ಜೀವಂ ಪುಟ್ಟದಂದೆ ಸಾವು ತಗುಳ್ವ ಮೆಯ್ಯುಮನಱಿದಾ ಕೆಯ್ಯಂ ಬೇಗಂ ಮಗುೞ್ದುೞ್ತು ಬಿತ್ತಿಸುವುದೀ ಮೆಯ್ಯುಮಂ ಬೇಗಂ ಧರ್ಮದೊಳ್ ಪತ್ತಿಸುವುದಲ್ಲದೊಡೊಕ್ಕಲ್ತನದ ಬುದ್ಧಿಯುಮಱಿವಿನ ವೃದ್ಧಿಯುಮೆಂತೆ ಸೆಯಲಾರ್ಕುಂ

ಶಾ || ನೋವಂ ಮಾಡಿದಿರಾರ್ಗಮೊಳ್ಪನೊಳಕೊಳ್ ಮೆೞ್ವಟ್ಟೊಡೇ ನಿನ್ನನಾರ್
ಕಾವರ್ ನೀಂ ಜವನೆಂಬ ರಕ್ಕಸನ ಪೆರ್ವಾಯೊಳ್ ಮಹೋಗ್ರಾಗ್ರಮೊಳ್
ಸಾವರ್ ಪುಟ್ಟುವರೆಂಬ ದಾಡೆಯೆಡೆಯೊಳ್ ಸಿಲ್ಕಿರ್ದೆಯಂತಿರ್ದು ಮೇಣ್
ಜೀವಾ ನೆಟ್ಟನೆ ಮೆಟ್ಟದನ್ನೆವರೆಗಂ ಬೇಗಂ ನೆಗೞ್ ಧರ್ಮದೊಳ್ ೨೪

ವ || ಉರಿವ ಕೊಂಡಕ್ಕೆ ವಂದ ವೇಳೆವಡಿಚಂಗಂ ಮನುಷ್ಯಭವಕ್ಕೆ ವಂದ ಜೀವಕ್ಕಂ ಗತಿಯಂ ಬಗೆಯಲಲ್ಲದೆ ಪೆಱತು ಮೋಹದೊಳ್ ನೆಗೞಲೆಡೆಯಿಲ್ಲಂ ಮುನ್ನಂ ಮಱೆದು ನೆಗೞ್ದು ಕೆಟ್ಟುದಿಂತಲ್ತೆ

ಕಂ || ಇದು ಪೊಲ್ಲದಿದೊಳ್ಳಿತ್ತೆಂ
ಬುಧನಱಿಯದೆ ನೆಗೞ್ದು ಕೆಟ್ಟೆ ಮುಂ ನೀಂ ನಿನಗ
ಪ್ಪುದನಱಿದೊಳ್ಪಂ ಮಾೞ್ಪುದು
ಪುದಿದಂತಕಜಠರದಹನನುಳುರದೆ ಬೇಗಂ ೨೫

ವ || ಇರುಳ್ ಬಿೞ್ದ ಕುೞಿಯೊಳ್ ಪಗಲೇಕೆ ಬೀೞ್ವೆಯಱಿವಿಲ್ಲದಂದಿನ ನೆಗೞ್ತೆಯಿಂದಿಂತಪ್ಪವಸ್ಥೆಯನೆಯ್ದಿದೆಯಿನ್ನಱಿದುಮೇಕೆ ಪಾಪಿಯಪ್ಪೈನೀಂ ನಿನ್ನಿರ್ದಿರವನಱಿಯಾ

ಮ || ತಿರಿದೀ ಸಂಸ್ಕೃತಿಯೆಂಬ ಪೇರಡವಿಯೊಳ್ ದುಃಖಾಗ್ನಿ ನಿನ್ನಂ ನಿರಂ
ತರಮೞ್ವುತ್ತಿರೆ ಬೆಂದು ನೊಂದು ನಮೆಯುತ್ತೆತ್ತಾನುಮೋರೊರ್ಮೆ ನೀಂ
ಕುರುಡಂ ಲಾವಗೆ ಮೆಟ್ಟಿದಂತೆ ದೊರೆಕೊಂಡಿರ್ದಲ್ಪಸೌಖ್ಯಕ್ಕೆ ಮ
ಚ್ಚಿರದಿರ್ ಮೆೞ್ಪಡದಿರ್ ತೊಡಂಕಿ ಕಿಡದಿರ್ ದುರ್ಮೋಹದಿಂ ಜೀವನೇ ೨೬

ವ || ಮಿಂಚಿನ ಬೆಳಗಂ ನಂಬಿ ಕೞ್ತಲೆಯೊಳ್ ಪೊಱಮಡುವನಂತೆ ಅಲ್ಪಸುಖದಾಸೆಯಿಂ ಪಾಪಮಂ ಪೆರ್ಚಿಸಿಕೊಳ್ವುದೇನೊಳ್ಳಿತ್ತೆ

ಕಂ || ಗುೞಿ ನೆಱೆವಿನೆಗಂ ಸಯ್ತಿರ
ಲಱಿಯದೆ ಕೊಲುತಿರ್ಪ ಜವನನಱಿದುಂ ಪಾಪ
ಕ್ಕೆಱಗಿ ನೆೞ್ವಂದಮೇಂ ತಿನ
ಲಱಸುವ ದೈವಕ್ಕೆ ಪೋಗಿ ಪಾೞಂಬುಡುವಾ ೨೭

ವ || ಅಂತು ನೆಗೞ್ವಾಗಳಾರ್ದು ಕರಡಿಯಂ ಮೇಲೆದರಲ್ ಬಗೆವಂತಾಗಿರ್ಕು
ಮಂತುಮಲ್ಲದೆಯುಂ

ಮ || ತಿನಲಾಡಂ ಪಿಡಿದೊರ್ವನೊಯ್ದಡವಿಯೊಳ್ ಬಾಳಿಲ್ಲದಂ ಛೇದಿಸ
ಲ್ಕೆನುತರ್ಪನ್ನೆಗಮಾಡು ತಾಂ ಬೆಱಟುತುಂ ಬಾಳ್ದೋಱಿತೆಂಬಂತೆ ಮ
ತ್ತೆನಸುಂ ಮಾಣದೆ ಕೊಲ್ವ ಮೃತ್ಯಗೆ ನೆರಂ ನಿಮ್ಮೊಂದು ದುಷ್ಪಾಪದು
ರ್ವಿನಮೇಕಯ್ಯ ಕಿಡಲ್ಕೆ ನೀಂ ಬಯಸಿದೋ ಮುಂ ಕೆಟ್ಟುದೇಂ ಸಾಲದೇ ೨೮

ವ || ಉಂತೆಯಾಡುವಂಗೆಱೆಯಪನಾದೊಡಂ ಉಂತೆಕೊಲ್ವ ಜವಂಗೆ ಪಾಪಂ ನೆರಮಾದೊಡಂ ಆತನಾಡದೆಯುಮಿತಂ ಸಾವಂ ಮಾಡದೆಯುಂ ಸೆಡೆದುಂ ತಡೆದುಮಿರ್ಪರಲ್ಲರೆಂಬುದಂ ಬಗೆಯದೊಡಮಿದಂ ಬಗೆದು ನೋಡಾ

ಕಂ || ಮುಂದಿರ್ದಾಯುವ ದೆವಸಂ
ಬಂದುವು ಪೆಱಗಪ್ಪುವಂತೆ ಪೆಱಗಣ ದೆವಸಂ
ಮುಂದಣ್ಗೆವಾರದಿರ್ಪುದ
ಱಿಂದಂ ಮತ್ತಱಿಯಲಾಗ ಕೇಡಡಸುವುದಂ ೨೯

ವ || ಮೞೆಯನೀರು ನಂಬಿ ದೊಣೆಯ ನೀರಂ ಬಿಡದೆ ತುಳುಂಕುವ ಮರುಳನಂತೆ ಮಾನಸೞೊಳ್ ದೆವಸಂಗಳ ಪೋಗಿನೊಡನಾಯುಷ್ಯಂ ತವುವುದನಱಿದುಂ ಶರೀರಮಂ ನಂಬಿ ಮೋಹದೊಳಿರ್ಪೊಡಮಾ ನೀರುಮನೀ ಮಾನಸವಾೞುಮನಾಸೆವಟ್ಟು ನಿಲಲಕ್ಕುಮೆ

ಚಂ || ದೆವಸದ ಕುಂದೆ ಕುಂದಿಸುಗುಮಾಯುನಾಯುಗೆ ವೇಳೆಗೊಂಡುದೆಂ
ಬವೊಲೞಿಗುಂ ಶರೀರಮಿದನಿಂತಿರೆ ನೆಟ್ಟನೆ ಕಂಡು ನಂಬಿ ನೀ
ನವಯವದಿರ್ಪುದಾವ ತೆಱನೋ ಬಗೆದಂ ಪೆಱದಲ್ತಿದಾಗಳುಂ
ಭವಭವದೊಳ್ ತಗುಳ್ದುಬರೆ ಮಚ್ಚಿದೆ ನೀಂ ಸಲೆ ಮೃತ್ಯುರಾಜನಂ ೩೦

ವ || ಕುಱಿ ತನ್ನಂ ತಿಂಬವರನೆ ಮಚ್ಚುವುದಂ ಕಂಡಲ್ಲಿ ನೀಂ ಕಲ್ತೆಯೊ ಮೇಣ್ ಕುಱಿಗಳ್ ನಿನ್ನಲ್ಲಿ ಕಲ್ತುವೋ ಪೇೞ್ ಜೀವಾ ನಿನಗೆ ಸಾವೆನಿತು ವಾಸನೆಯಾದೊಡಂ ಬೇಗಮದರ್ಕಂಜದುದು ಮೇಯ್ಗುಣಮದುವಂ ಬಿಸುಡೋ

ಕಂ || ನಿಚ್ಚಲಿನ ನಿದ್ರೆ ಸಾವುದ
ನೆಚ್ಚಱಿಪುದು ಪುಟ್ಟನಭಿನಯಿಪ್ಪವೊಲಿರೆಯುಂ
ಮಚ್ಚಿದ ತೆಱದಿಂ ನೆಗೞ್ವಯಿ
ದಚ್ಚರಿ ನಿನ್ನಱಿವಿನಂದಮಾರ್ಗಂ ಜೀವಾ ೩೧

ವ || ಮೊೞಗುಂ ಮಿಂಚುಂ ಮೞೆಯ ಬರವನಱಿಪುವಂತೆ ನಿದ್ರೆಯುಮೆೞ್ಚಱುವುದುಂ ಸಾವಂ
ಪುಟ್ಟುಮನಭಿಯಿಪ್ಪಂತಿರೆಯಿಯಂದಮಂ ಕಂಡು ಮಱಿಯಿರಿದೇಂ ಚೋದ್ಯಮೋ

ಚಂ || ಅಡಿಗಡಿಗಾಯು ಕುಂದದುದೊ ಪತ್ತಿದದೊಂದೞಿಸೈಪು ನೆಟ್ಟನೇಂ
ಕಿಡದುದೊ ಪಾೞಿಗೆಟ್ಟ ಬಸನಂಗಳಿವೆತ್ತಣಿನೊಳ್ಳಿತಪ್ಪುವಂ
ಪಡೆಗುಮೊ ಮೆಯ್ಯ ತಕ್ಕೞಿಯೆ ಕೂರ್ತರೆ ಪೇಸೆ ಕಡಂಗಿ ಬಂದು ಮು
ಪ್ಪಡಸಿರೆ ಧರ್ಮಮಂ ಮಱೆವ ಗರ್ವಮಿದಾವುದೊ ಭವ್ಯಜೀವವೇ ೩೨

ವ || ಪಡೆಗಂಡು ಕೆಯ್ದುವಂ ಮಱೆವೊಡಂ ಕೇಡುಗಂಡು ಧರ್ಮಮಂ ಮಱೆವೊಡಮಾತನ ವೊಡಮಾತನ ಸಾವಿಂಗಮೀತನ ನೋವಿಂಗಮೇಕೞಲ್ವುದೊ ನೀಂ ದ್ರವ್ಯಮಂ ಪಡೆವಾಸೆಯೊಳಿರ್ಪೊಡಮದೀ ಕಾಲದೊಳೇನೊಳ್ಳಿತ್ತೆ

ಕಂ || ನ್ಯಾಯದೆ ಪಡೆದೊಡಮೆಯನ
ನ್ಯಾಯದೆ ಕೊಳಲಿರ್ಪರೆಲ್ಲರದನೊಡೆಯಾತಂ
ಕಾಯಲೆ ಕುದಿಗುಮವಂಗಂ
ಕಾಯಲ್ ಕುದಿಗುಂ ಜವಂ ಧನಂ ಪೊಲ್ಲದಱಿಂ ೩೩

ವ || ಓಲೆಗಳದವರಂ ಪಸದನಂಗೊಂಡರುಮನೞಸಗುಮಂತೆ ಕಲಿಕಾಲದೊಳಾದ ಕಸವರಮುಳ್ಳರುಮನೞಲಿಸುಗುಮಿಲ್ಲದರುಮನೞಸುಗುಮದು ಕಾರಣದಿಂ

ಚಂ || ಒಡಮೆಯೊಳೆಂತುಮಾತ್ಮ ಸುಖಮಾಗದು ತೆಕ್ಕೆಡೆಗೊಳ್ಳಿತರ್ಥಮಂ
ಕುಡೆ ಸುಖಮಕ್ಕುಮಲ್ಲದೊಡಮಿಲ್ಲದೊಡಂ ಸಮಚಿತ್ತವೃತ್ತಿಯೊಳ್
ನಡೆಯೆ ಸುಖಂ ಕರಂ ಕಸವರಂ ಕಲಿಕಾಲದೊಳೊಳ್ಳಿಕೆಯ್ಯದೆಂ
ದೊಡೆ ವಿಷಮಪ್ಪವೋಲಮೃತಮುಂ ಕುಳಿಕೋದಯದೊಂದು ಪೊೞ್ತಱೊಳ್ ೩೪

ವ || ಕಿರ್ಚು ಸಾರ್ದಂಗೆ ಮಾಗೆಯೊಳ್ಳಿಕೆಯ್ವಂತೆ ಬೇಸಗೆಯೊಳ್ಳಿಕೆಯ್ಗುಮೆ ಕಸವರಂ ಕೃತಯುಗದೊಳೊಳ್ಳಿಕೆಯ್ವಂತೆಯೀ ಕಲಿಯುಗದೊಳೊಳ್ಳಿಕೆಯ್ಗುಮೆ ನೋವನೆ ಮಾಡುತ್ತುಮಿರ್ಕುಮೆಂತೆಂಬಾ

ಕಂ || ಇಲ್ಲದೊಡೆ ಬಡವನೆಂಬಿನಿ
ತಲ್ಲದೆ ಪೆಱತಿಲ್ಲಮರ್ಥಮುಳ್ಳರನೆಯ್ತಂ
ದೆಲ್ಲೆಲ್ಲ ತೆಱದೊಳಂ ದೆಸೆ
ಯೆಲ್ಲಂ ಪಿಡಿದಡಸಿ ನುಂಗುವಂತಾಗಿರ್ಕುಂ ೩೫

ವ || ಒಂದೆ ಪುಲ್ಲೆ ಬೇಂಟೆಗರ ಕೈಯೊಳಾದಂತೀಗಳಂ ದ್ರವ್ಯಮುಳ್ಳನಾರಾರ ಕೈಯೊಳಗೆ ಬರ್ದುಂಕುವನೆಂಬುದನಱಿದುಂ ಕಡುಲೋಭಮೇಕೆ

ಮ || ಪಿರಿದಾಪತ್ತಿನೊಳಲ್ಲದರ್ಥನಿಚಯಂ ಕೆಯ್ಸಾರ್ಗುಮೇ ಸಾರ್ದೊಡಂ
ಸ್ಥಿರಮಾಗಿರ್ಕುಮೆ ಪೋಕುಮೆಲ್ಲದೆಸೆಯಿಂದೆತ್ತಾನುಮಿರ್ದಂದು ತಾ
ನಿರದೀ ಕಾಲದೊಳೀ ಮನಷ್ಯಭವದೊಳ್ ನೋೞ್ಪಾಗಳೆಂತುಂ ಧನೋ
ತ್ಕರಮುಂ ಮೆಯ್ಯರವುಂ ಕಳತ್ರಭರಮುಂ ಸಂಕ್ಲೆಶಮಂ ಮಾಡುಗಂ ೩೬

ವ || ಎಂಬಿದನಱೆದುಂ ಸಾಗುದುರೆಗೆ ಪುಲ್ಲನಡಕುವಂತೆ ನಿಷ್ಠೆಯಿಲ್ಲದ ಮಾನಸವಾೞ್ಗ
ಮರ್ಥಕ್ಕಂ ಭಯಮುಂ ಲೋಭಮುಂ ಕೆಲವುಂ ಜೀವಕ್ಕೇಂ ತಿಣ್ಣಮೋ

ಕಂ || ಬಿಡದಾರೞಿವುಂ ನೋವಂ
ಪಡೆಯದುದೇ ಪಡೆಗುಮೆಂತುಮಱಿವನ ಮನಮುಂ
ಕಡುಲೋಭನ ಧನದಱಿವುಂ
ಕಡುವಂದೆಯ ಸಾವುಮಗ್ಗಳಂ ನೋಯಿಸುಗುಂ ೩೭

ವ || ನಂಟರಗಲ್ಕೆಯಂ ನೋಡೆ ನಲ್ಲರಗಲ್ಕೆ ತಿಣ್ಣ ಮೞಲಂ ಪಡೆವಂತೆ ಜೀವಂಗಳಿವುಮೞಿವನ ಮನಮಂ ನೋಯಿಸುವುದಾಗಿಯುಂ ಲೋಭನ ಧನದ ಕೇಡಂ ಪಂದೆಯ ಸಾವುಂ ಕರಂ ನೋಯಿಸುಗುಮಂತು ಪೆಱರಂ ನೋಯಿಸುವರ ಮೇಗಣ ನೋವನೇವೇೞ್ಕುಮದಱಿಂ

ಉ || ಪೊಲ್ಲದು ಮೆಯ್ ರುಜಾಬಹುಳಮಾಯುವನಿತ್ಯಮಳುರ್ಕೆವೆತ್ತಣಂ
ನಿಲ್ಲದು ಸೈಪು ದುಃಖಮೊಡವುಟ್ಟುದುದುಂ ಸುಖಮಾವುದಾಸೆಯುಂ
ಟಲ್ಲಿಯ ಬಾೞ್ಗೆ ಮೆೞ್ಪಡುವಿರೇ ಬಗೆಯಿಲ್ಲದೆ ಸಿಲ್ಕವೇಡ ತ
ಳ್ವಿಲ್ಲದೊಡರ್ಚಿಯಿಂ ಪಲವು ಮಾತನೊಳೇಂ ಗತಿಯಪ್ಪ ಕಜ್ಜಮಂ ೩೮

ವ || ಮೆಯ್ಯಪ್ಪೊಡೆ-ಪೊಲ್ಲದಾಯುವಪ್ಪೊಡೆ ನಿಲ್ಲದು ಸುಖದನುಭವಣೆಯಪ್ಪೊಡೆ ಸಲ್ಲದು ನೀಂ ಬೇಗಮನಂತಸುಖಿಯಪ್ಪ ಕಜ್ಜದೊಳ್ ನೆಗೞ್ವುದಾ ಕಜ್ಜಮುಂ ಮೋಹಕ್ಷಯದಿಂದಲ್ಲದಾಗದು

ಕಂ || ಬಿತ್ತಿಂ ಬೇರುಂ ಮೊಳಯುಂ
ಮತ್ತೆಂತೊಡನಕ್ಕುಮಂತೆ ಮೋಹೋದಯದಿಂ
ದೆತ್ತಂ ರಾಗದ್ವೇಷೋ
ತ್ಪತ್ತಿ ವಿನೋಹಮನೆ ಕೆಡಿಸು ಕಡಿಸುವೊಡಘಮಂ ೩೯

ವ || ಅಂಕುರಮುಂ ಬೇರುಂ ಬಿತ್ತಿಂದಪ್ಪಂತೆ ರಾಗದ್ವೇಷಂಗಳೆರಡುಂ ಮೋಹದಿಂದಕ್ಕುಮಾ ಮೋಹಮಂ ಕೆಡಿಸಿದೊಡೆ ಕರ್ಮಂಗಳೆಲ್ಲ ಕೆಡುಗುಂ ಕರ್ಮಂಗಳ್ ಕೆಟ್ಟೊಡೆ ಶಾಶ್ವತಮಪ್ಪ ಸುಖಮಂ ಪಡೆವಿರೆಂದು ಪೇೞ್ವೊಡಿದಂ ಬಗೆಯಿರೆ ಬಗೆಯದಿಂತು ಸುಖಕ್ಕಳುಪದರೊಳರೇ

ಉ || ಎಲ್ಲರುಮಾಟಿಪರ್ ಸುಖಮಿರಲ್ ಸುಖಮೆಂಬುದು ಕರ್ಮದೊಂದು ಕೇ
ಡಿಲ್ಲದೊಡಾಗದಂತದಱ ಕೇಡು ವಿಶುದ್ಧಚರಿತ್ರಮಿಲ್ಲದಂ
ದಿಲ್ಲ ಚರಿತ್ರಮಕ್ಕುಮಱಿವಿಂದಱಿವಾಗಮದಿಂದಮಾಗಮಂ
ಪೊಲ್ಲಮೆಯಿಲ್ಲದಿರ್ಪ ಪರಮಾತ್ಮನಿನಾತನೆ ಸೌಖ್ಯಕಾರಣಂ ೪೦

ವ || ರಸಂ ಪೊರ್ದಿ ಕ್ರಿಯೆವಡೆದ ಲೋಹದಂತೆ ನಿರ್ದೊಷಿಯಪ್ಪ ಪರಮಾತ್ಮನಂ ಪೊರ್ದಿ ಸಮ್ಯಗ್ಧರ್ಶನಜ್ಞಾನಚಾರಿತ್ರಂಗಳೆಂಬ ರತ್ನತ್ರಯಮಂ ಪಡೆದ ಜೀವಂ ಕರ್ಮಕ್ಷಯಂ ಗೆಯ್ದು ಸುಖಿಯಕ್ಕುಮಿವನಱಿದುಮೇಕೆ ಮಾಣ್ದಪಿರೊ ಮನುಷ್ಯಭವಮಧ್ರುವಮಪ್ಪುದಱಿನೀಗಳಿದೇೞಿದರನೇವೇೞ್ವುದೊ ಮುನ್ನಂ ಸಂದ ಮಹಾಪುರಷರ್ ನೆಗೞ್ದರೆಂಬೀ ಕಥೆಯಂ ಕೇಳ್ದಱಿದಾರ್ತು ನೆಗೞ್ವುದುಮದೆಂತೆನೆ