ಕಥಾವ್ಯತ್ಯಾಸ:

ಹರಿವರ್ಷವೆಂಬ ದೇಶದಲ್ಲಿನ ಪ್ರಭಂಜನ ಮತ್ತು ಮೃಕಂಡು ದಂಪತಿಗಳಿಗೆ ಹುಟ್ಟಿದ ಮಗ ಸಿಂಹಕೇತುವೆಂದು ಉತ್ತರಪುರಾಣ ಮತ್ತು ಕರ್ಣಪಾರ್ಯನ ನೇಮಿನಾಥಪುರಾಣಗಳಲ್ಲಿದ್ದರೆ ಬಂಧುವರ್ಮನಲ್ಲಿ ಮಾರ್ಕಂಡೇಯನೆಂದಿದೆ.

ಸಿಂಹಕೇತುವನ್ನು ಅಪಹರಿಸಿದ ಚಿತ್ರಾಂಗದನು ಸೂರ್ಯಪ್ರಭದೇವನ ಆದೇಶದಂತೆ ಚಂಪಾಪುರ ಅರಣ್ಯದಲ್ಲಿ ಆತನನ್ನು ಬಿಟ್ಟು ಹೋಗುತ್ತಾನೆ. ಅಲ್ಲಿಂದ ಸಿಂಹಕೇತುವು ಆನೆಯ ಮೂಲಕ ಚಂದ್ರಕೀರ್ತಿಯರಾಜನನ್ನು ಸೇರುತ್ತಾನೆ ಎಂಬುದಾಗಿ ಗುಣಭದ್ರ ಮತ್ತು ಕರ್ಣಪಾರ್ಯರು ಹೇಳಿದ್ದರೆ ಬಂಧುವರ್ಮನು ಸೂರ್ಯಪ್ರಭದೇವನೇ ಮಾರ್ಕಂಡೇಯನನ್ನು ಚಂದ್ರಕೀರ್ತಿಗೆ ಒಪ್ಪಿಸಿದ್ದನೆಂದು ತಿಳಿಸುತ್ತಾನೆ.

ವಸುದೇವನ ರೂಪಿಗೆ ಪರಸ್ತ್ರಿಯರು ಮಾರುಹೋಗುವುದು, ಪುರಜನರ ದೂರು,ಅಣ್ಣ ಸಮುದ್ರವಿಜಯನು ವಸುದೇವನನ್ನು ಉಪಾಯದಿಂದ ಉದ್ಯಾನವನದಲ್ಲಿ ಕಟ್ಟಿನಲ್ಲಿರಿಸುವುದು ಮೊದಲಾದ ವಿವರಗಳಲ್ಲಿ ಈ ಮೂರು ಕೃತಿಗಳಲ್ಲಿಯೂ ಯಾವ ವ್ಯತ್ಯಾಸವೂ ಕಂಡುಬರುವುದಿಲ್ಲ. ಆದರೆ, ವಸುದೇವನು ದೇಶತ್ಯಾಗಮಾಡಲು ನಿಶ್ಚಯಿಸಿ ಶ್ಮಶಾನಭೂಮಿಯಲ್ಲಿ ಏಕಾಏಕಿಯಾಗಿ ‘ಅಪಕೀರ್ತಿಯ ಭಯವುಳ್ಳವನು ಮಹಾಜ್ವಾಲೆಯುಳ್ಳ ಬೆಂಕಿಯಲ್ಲಿ ಬಿದ್ದ’ ಎಂದು ತಾಯಿಗೆ ಕಾಗದವನ್ನು ಬರೆದು ಕುದುರೆಯ ಕೊರಳಲ್ಲಿ ಕಟ್ಟಿ ಹೆಣವನ್ನು ಸುಡುವ ಬೆಂಕಿಯ ಪ್ರದಕ್ಷಿಣೆ ಮಾಡಿ ಹೊರಟುಹೋದನೆಂದು ಉತ್ತರಪುರಾಣದಲ್ಲಿದೆ. ಕರ್ಣಪಾರ್ಯ ಮತ್ತು ಬಂದುವರ್ಮರಲ್ಲಿ ದೇಶತ್ಯಾಗ ಮಾಡಲು ನಿರ್ಧರಿಸಿದ ವಸುದೇವನು ದಾರುಕ ವಲ್ಲಭಕರುಗಳಿಂದ ವಿವಿಧಾರ್ಚನೆಯನ್ನು ತರಿಸಿ, ಶ್ಮಶಾನಭೂಮಿಗೆ ನಡೆದು ಮಂತ್ರವಿದ್ಯೆಯನ್ನು ಸಾಧಿಸುವೆನೆಂದು ಹೇಳಿ, ಜೊತೆಯವರನ್ನು ಬೇರೆ ನಿಲ್ಲಿಸಿ ತಾನು ಅಲಂಕಾರಗಳನ್ನು ಕಳೆದು, ಖಡ್ಗವನ್ನು ನೆಲದಲ್ಲಿಟ್ಟು, ‘ಅಣ್ಣನು ವಿಚಾರ ಮಾಡದೆ ತನ್ನನ್ನು ಸೆರೆಯಲ್ಲಿಟ್ಟನು. ಈ ದುಃಖದಿಂದ ತಾನು ಉರಿವ ಬೆಂಕಿಯಲ್ಲಿ ಬಿದ್ದೆನು’ ಎಂದು ಕೂಗಿ ಹೇಳಿ, ಉರಿಯಲ್ಲಿ ಹೊಕ್ಕಂತೆ ಮಾಡಿ ಅಡಗಿಕೊಂಡನು ಎಂದಿದೆ.

ಉತ್ತರ ಪುರಾಣದಲ್ಲಿ ತಾಯಿಗೆ ಕಾಗದ ಬರೆದ ಕುದುರೆಯ ಕೊರಳಲ್ಲಿ ಕಟ್ಟಿದನೆಂದಿದ್ದರೆ, ಕರ್ಣಪಾರ್ಯ ಮತ್ತು ಬಂಧುವರ್ಮರಲ್ಲಿ ದೊಡ್ಡ ದನಿಯಲ್ಲಿ ಕೂಗಿ ಹೇಳಿದನೆಂದಿದೆ. ಅಲ್ಲಿ ಬರೆದ ಮಾತುಗಳಿಗೂ ಇಲ್ಲಿ ಆಡಿದ ನುಡಿಗಳಿಗೂ ವ್ಯತ್ಯಾಸವಿದೆ. ಹೀಗೆ ಉತ್ತರಪುರಾಣದ ಕಥೆಯಿಂದ ಅಲ್ಪಸ್ವಲ್ಪ ವ್ಯತ್ಯಾಸಗಳನ್ನು ಮಾಡಿಕೊಂಡ ಕರ್ಣಪಾರ್ಯನನ್ನೇ ಬಂಧುವರ್ಮನೂ ಅನುಸರಿಸಿದ್ದಾನೆ ಎಂದು ಹೇಳಬಹುದಾಗಿದೆ. ಇಂತಹ ಅನುಸರಣೆಗಳನ್ನು ಕಾವ್ಯದುದ್ದಕ್ಕೂ ಗುರುತಿಸಬಹುದು. ಸಮುದ್ರವಿಜಯನು ತಮ್ಮ ವಸುದೇವನು ಬೆಂಕಿಗೆ ಬಿದ್ದನೆಂಬ ಸುದ್ದಿಯನ್ನು ಕೇಳುತ್ತಲೆ

ಏನಿಂದು ಸತ್ತುಪೋದನೆ
ಮಾನಿತನೆನ್ನನುಜನಣ್ಣ
ದಿಟಮೇ ಪೇೞಂ
ತಾನಿದೆನುತ್ತಂ
ಮತಿಗೆ
ಟ್ಟಾ
ನರಪತಿ ತೊಟ್ಟನಂದು ಮೂರ್ಛಿತನಾದಂ-೧೬೬

ಎಂದು ಕರ್ಣಪಾರ್ಯ ಹೇಳಿದರೆ, ಬಂಧುವರ್ಮನು

ಎಂತೆಂತೋ ವಸುದೇವಂ
ಭ್ರಾಂತಿಲ್ಲದೆ
ಕಿಚ್ಚುವೊಕ್ಕನೇ ಪೇೞ್ ಪೇೞೆಂ
ದಂತೆ
ನೃಪಂ ಮೂರ್ಛಿಸಿ ಮರ
ದಂತವ
ಧರಣಿಯೊಳು ಬೀೞೆ ಪರಿಜನಮೆಲ್ಲಂ-೨೧

ಎಂದು ವರ್ಣಿಸುತ್ತಾನೆ.

ಭಾನುದತ್ತಸೆಟ್ಟಿಯ ಹೆಂಡತಿ ದೇವಿಲೆಯು ಚಾರಣಮುನಿಗಳಲ್ಲಿಗೆ ಬಂದು ‘ಬಂದಿಸಿ ಬೆಸಸಿಮೆನಗೆ ತನಯರಿಲ್ಲದೀ ಜನನಿಮಿಂತೆ ಪೋಕುಮೊ ಮೇಣ್ ತನೂಭವರ್ ಜನಿಯಿಸುಗುಮೋ’ ಎಂದು ಕೇಳಿಕೊಳ್ಳುತ್ತಾಳೆಂದು ಕರ್ಣಪಾರ್ಯ ಹೇಳಿದರೆ, ಬಂಧುವರ್ಮನು

ಎನಗಿಂತೆ ಮಕ್ಕಳಿಲ್ಲದೆ
ಮನುಜತ್ವಂ
ವೃಥೆಗೆ ಸದು ಪೋಕುವೊ ಮತ್ತಂ
ತನಯರ್ಕಳಿನ್ನುಮಪ್ಪರೊ

ಮುನಿನಾಥಾ
ಬೆಸಸಿಮೆಂದೊಡಾ ಮುನಿಮುಖ್ಯರ್-೫

ಎಂದು ಹೇಳುತ್ತಾನೆ.

ಹೀಗೆ ಮೂಲದ ಭಾವವನ್ನು ಪದಗಳನ್ನೂ ಅನುಕರಿಸಿದ ರಚನೆಯನ್ನು ಕಾಣುವುದರ ಜತೆಗೆ, ಮೂಲದಿಂದ ಪ್ರೇರಿತನಾಗಿ ಮತ್ತು ಹೆಚ್ಚು ರಸಪೂರಿತವಾದ ವರ್ಣನೆಗಳನ್ನು ಮಾಡುವುದನ್ನೂ ನಾವು ಅಲ್ಲಲ್ಲಿಯೇ ಕಾಣುತ್ತೇವೆ.

ವಸುದೇವನು ಸತ್ತನೆಂಬ ಸುದ್ದಿಯನ್ನು ತಿಳಿದು ಮೂರ್ಛೆಗೊಂಡ ಸಮುದ್ರವಿಜಯನು ಶೀತಳಕ್ರಿಯೆಯಿಂದ ಎಚ್ಚೆತ್ತು ‘ಹಾ ವಸುದೇವಾ! ಹಾ ಮದೀಯಾ ಪ್ರಿಯಾನುಜಾ! ಎಂದು ವಿಪ್ರಳಾಂಪಂಗೆಯ್ಯೆ’ ಎಂದು ಕರ್ಣರ್ಪಾರ್ಯ ಹೇಳಿದರೆ, ಬಂಧುವರ್ಮನು ಅದನ್ನು ವಿಸ್ತರಿಸಿ

ಹಾಹಾ ಮದನಾಕಾರ
ಹಾಹಾ
ಗುಣಗಣದಶೇಷ ಭೂಷಣಭಾರಾ
ಹಾಹಾ
ಕೂರ್ತೆನ್ನುನುಜಾ
ಹಾಹಾ
ನೀಂ ಸಾಯೆ ಕೆಟ್ಟೆನನುಪಮತೇಜಾ-೨೨

ಎಂದು ವರ್ಣಿಸುತ್ತಾನೆ. ಮುಂದೆ ಕರ್ಣಪಾರ್ಯನು ಒಂದೆರಡು ಪದ್ಯಗಳಲ್ಲಿ ವರ್ಣಿಸಿರುವ ಸಮುದ್ರವಿಜಯನ ದುಃಖವನ್ನು ಬಂಧುವರ್ಮನು ನಾಲ್ಕಾರು ಪದ್ಯಗಳಲ್ಲಿ ಮನಮುಟ್ಟುವಂತೆ ಚಿತ್ರಿಸಿದ್ದಾನೆ; ಅಣ್ಣತಮ್ಮಂದಿರ ಪ್ರೀತಿಯ ಆಳವನ್ನು ಹೊರಗೆಡಹಿದ್ದಾನೆ.

ಅನಂತರ ಕರ್ಣಪಾರ್ಯನಲ್ಲಿ ಸಮುದ್ರವಿಜಯನು ಲೌಕಿಕಕ್ರಿಯೆಯನ್ನು ಮಾಡಿ ಮುಗಿಸುತ್ತಾನೆ. ಆದರೆ ಬಂಧುವರ್ಮನಲ್ಲಿ ಸಮುದ್ರವಿಜಯನು ತಮ್ಮನು ಸತ್ತ ಸ್ಥಳವನ್ನು ನೋಡಲು ಹೋಗಿ ಮಸುಳಿಸಿದ್ದ ಕೆಂಡವನ್ನೂ ಕೊಂಡವನ್ನೂ ಕಂಡು, ಎಲುಬುಗಳನ್ನೂ ಅಲ್ಲಿಯೇ ಬಿದ್ದಿದ್ದ ತಮ್ಮನ ಖಡ್ಗವನ್ನೂ ನೋಡಿ ಮೂರ್ಛಿತನಾಗುವ ದೃಶ್ಯ ಮಾನವ ಹೃದಯದ ಅರಿವನ್ನು ಕವಿ ಕಂಡಿರುವುದಕ್ಕೆ ಸಾಕ್ಷಿಯಾಗಿದೆ.

ಭಾನುದತ್ತನು ಜಿನಪೂಜೆಗಾಗಿ ರಜತವಾಳುಕ ನದೀತೀರದಲ್ಲಿರುವ ಸುರಭಿಹೂಗಳನ್ನು ಕಳುಹಿಸಿಕೊಟ್ಟು, ತಾನು ಪಟ್ಟಣ್ಣಕ್ಕೆ ಹಿಂದಿರುಗಬೇಕೆಂದು ಹೇಳಿ ಮಗ ಚಾರುದತ್ತನನ್ನು ಜೊತೆಯವರೊಡನೆ ಕಳುಹಿಸಿಕೊಡಲು, ನದಿತೀರವನ್ನು ಸೇರಿದ ಚಾರುದತ್ತನು ‘ಮಿಸುಪ ಸುಭಿಕುಸುಮಪ್ರತಾನಮನಾತ್ಮ ಜನಕಂಗಟ್ಟಿ ತಾನಾ ತಟನೀವಿಳಾಸಮನುತ್ಕಟಾಗಾರದಿ ನಿರೀಕ್ಷಿಸಿ’ ಎಂದು ವರ್ಣಿಸಿರುವ ಕರ್ಣಪಾರ್ಯನ ಭಾವಗಳನ್ನೇ ಅನುಸರಿಸಿದ ಬಂಧುವರ್ಮನು ಅದನ್ನು ಮತ್ತೂ ರಸವತ್ತಾಗಿ ಚಿತ್ರಿಸಿದ್ದಾನೆ. ಆತನು ನದಿಯ ತಡಿವಿಡಿದು ಬಂದು ನಾನಾ ವಿಧಮಪ್ಪ ಪುಷ್ಪರಾಶಿಯಂ ಕೊಯ್ದು ತಮ್ಮಯ್ಯನಲ್ಲಿಗಟ್ಟಿಯಾ ತೊಱೆಯಂ ಮೆಚ್ಚಿ ನೋಡುತ್ತಂ

ಸ್ವಾಂತರತಿಪಥಿಕ ಪಥವಿ
ಶ್ರಾಂತುರುಮಂ
ನೋಡೆ ನಾಡೆ ರಯ್ಯಮಿದಂ ನಾ
ಮೆಂತು
ಗಳ ಬಿಸುಟು ನಗರಾ
ಭ್ಯಂತರದೊಳ್
ಕಟ್ಟಿಕೊಳ್ವ ಕಣಿಯೇನು ಗಡಿಂ-೮

|| ಆ ಪುರದೊಳ್ ಚಿಂತಾಮಣಿಯುಳ್ಳಡಂ ಕಲ್ಪವೃಕ್ಷಮುಳ್ಳಡಂ ತನಗಿಷ್ಟಮಿಲ್ಲ ದಂದವರೊಳೇ ತೊಱೆಯಶೋಭೆಯಂ ಕಂಡು ನೋಡಿ ಮೆಚ್ಚುತ್ತಂ ಬರ್ಪ ….” ಮೊದಲಾದ ಬಂಧುವರ್ಮನವರ್ಣನೆಯಲ್ಲಿ ಕವಿಯ ಮನೋಭೀಷ್ಟತೆಯನ್ನು ಮನಗಾಣಬಹುದಾಗಿದೆ. ಪ್ರಕೃತಿಯಲ್ಲಿ ಕವಿಗಿರುವ ಆಸಕ್ತಿ, ನಗರಜೀವನದಲ್ಲಿನ ಬೇಸರ ಚಾರುದತ್ತನ ಮೂಲಕ ಹೊರಹೊಮ್ಮಿದೆ.

ಹೀಗೆ ಮೂಲದಿಂದ ಪ್ರೇರಿತನಾಗಿ ವಿಶಿಷ್ಟ ರೀತಿಯ ವರ್ಣನೆಗಳ ಮೂಲಕ ಸಹೃದಯರನ್ನು ಸೆರೆಹಿಡಿಯುವ ಕಲಾವಂತಿಕೆಯನ್ನು ಬಂಧುವರ್ಮನಲ್ಲಿ ಕಾಣಬಹುದಾಗಿದೆ. ಅದರಲ್ಲಿಯೂ ಚಾರುದತ್ತನ ವಿವಾಹ ಮತ್ತು ಶಾಸ್ತ್ರಾಭ್ಯಾಸಗಳಲ್ಲಿ ಆತನಿಗಿರುವ ತನ್ಮಯತೆಯನ್ನು ಅತ್ಯಂತ ರಸವತ್ತಾಗಿ ಚಿತ್ರಿಸಿದ್ದಾನೆ. ಕರ್ಣಪಾರ್ಯನು

ನುತನಪ್ಪಾ ಚಾರುದತ್ತಂ ಸತತಮತುಳ ವಿದ್ಯಾಗಮಾಭ್ಯಾಸದೊಳ್ ಸಂ
ಯುತನಾಗಿರ್ದಾತ್ಮ
ಕಾಂತಾರತಿಯೊಳ್ ಮತಿಯಂ ತಾರದೋರಂತಿರಲ್ಕಾ
ಸತಿ
ಖೇದಂದಾಳ್ದಿ ರಲ್ಕಾಕೆಯ ಜನನಿ ಸಮಿತ್ರಾಖ್ಯೆ ಕಂಡಕ್ಕ ನಿನ್ನೀ
ನುತವಕ್ತ್ರಂ
ಕುಂದಿ ಕುಂದಿರ್ದಪುರದಿದನಱಿಪೆಂದಾಗ್ರಹಂಗೆಯ್ಯೆ ಪೇೞ್ಗು-೪೦

ಎಂದು ಹೇಳಿದರೆ, ಬಂಧುವರ್ಮನು ಮದುವೆಯಾದ “ಚಾರುದತ್ತನಾಗಳುಂ ವಿದ್ಯಾಭ್ಯಾಸಂಗೆಯ್ಯುತ್ತಂ ನಿಜಸ್ತ್ರೀಯನೆನಸುಂ ಬಗೆಯದಿರೆ ಮಿತ್ರಾವತಿ ತನರ್ಮನೆಗೆ ಪೋದೊಡವರಬ್ಬೆ ಮಗಳ ಮೊಗಮಂ ನೋಡಿ ರಾಗಮಿಲ್ಲದಿರವಂ ಕಂಡಿತೆಂದಳ್

ಎಂತೀ ಮುಡಿ ಮುನ್ನಂ ಮುಡಿ
ದಂತಿರ್ದುದು
ನೊಸಲೊಳೊಪ್ಪಿದ ಕತ್ತುರಿಯ ಬೊ
ಟ್ಟಂತಿಟ್ಟಳ
ಮಾೞ್ಕೆಯೊಳಿ
ರ್ದಂತಿರ್ದುದು
ಮಗಳೆ ಮುನಿದನೇ ನಿಜದಯಿತಂ-೧೭

ಪೂಸಿದ ಕುಂಕುಮಮೆನಸುಂ
ಬೀಸರಮಾಗಿರದು
ಮೊಲೆ ಪಳಂಕವು ಮೊಗಮು
ಮ್ಮಾಸರಿಕೆಯತ್ತ
ಪೊರ್ದುದು
ರೋಸದೆ
ಸತಿ ಪೋಗಿಕಳನೆ ಪೆಱಪೆಱತೆಡೆಯೊಳ್-೧೮

ನೀನಾತಂಗಾತಂ ನಿನ
ಗೇನುಂ
ತಪ್ಪಿಲ್ಲ ತಕ್ಕನೇ ಕೂಡಿದಿರಿಂ
ತೇನು
ಗಡ ತಪಸಿಯಂತಿರೆ
ಮೌನಧ್ಯಾನದೊಳೆ
ಕಳೆದಿರೇ ನೀಮಿರುಳಂ-೧೯

ಎಂದು ಕೇಳುವ ತಾಯಿಗೆ ಮಗಳು ನಾಚಿ ತಲೆತಗ್ಗಿಸಿರುವುದೂ, ಮತ್ತೆ ‘ಮಗಳಾದವಳು ತಾಯಿಗೆ ಹೇಳದೆ ಮತ್ತಾರಿಗೆ ಹೇಳುವುದೆಂ’ದು ತಾಯಿ ಹೇಳುವುದೂ ಆಗ ಮಿತ್ರಾವತಿಯು ತಾನು ಕಂಡ ಸನ್ನಿವೇಶವನ್ನು ವಿಸ್ತರಿಸುವುದೂ ಬಹಳ ಸೊಗಸಾಗಿದೆ. ಮಿತ್ರಾವತಿಯ ಉತ್ತರದಲ್ಲಿ ಆಕೆಯ ಮುಗ್ಧತೆ, ಕರುಣಾಪೂರಿತ ಸನ್ನಿವೇಶ, ಚಾರುದತ್ತನ ಶಾಸ್ತ್ರಾಭ್ಯಾಸ ತಲ್ಲೀನತೆ ಈ ಮೂರು ಮುಪ್ಪುರಿಗೊಂಡು ನಿರೂಪಿತವಾಗಿರುವ ಈ ಚಿತ್ರಣ ಬಂಧುವರ್ಮನ ಕವಿಪ್ರತಿಭೆಯ ಸಂಕೇತವಾಗಿದೆ. ಚಾರುದತ್ತನು ಶಾಸ್ತ್ರಾಭ್ಯಾಸಕ್ಕುಪಯೋಗಿಸುವ ಪ್ರತಿಯೊಂದು ವಸ್ತುವೂ ಮಿತ್ರಾವತಿಯ ಮುಗ್ಧ ಮನಸ್ಸಿಗೆ ಕಂಡ ರೀತಿಯನ್ನೂ, ಅದರಲ್ಲಿ ಆಕೆಯ ಮನಸ್ಸಿಗಾದ ಆಗಾಧ ನೋವನ್ನೂ

ಮರದೊಳ್ ಕಟ್ಟಿದ ಸೊರೆಯಂ
ಸರಾಗದಿಂದುರುದೊಳಿಟ್ಟು
ಬೀವಿನ ನೇಣಂ
ಬೆರಲೊಳವನರ್ದಿ
ಮಿಡಿಗುಂ
ಮೊರೆಗುಂ
ಬೞಿಕೊರ್ಮೆ ಕರ್ಚುಗುಂ ಪೆರ್ವಿದಿರಂ-೨೨

ತೋಲೊಳ್ ಮುಚ್ಚಿದ ಮಾೞ್ಕೆಯ
ಕೇವಲ
ಮುಂದಿಟ್ಟು ಬಡಿವುತಿರ್ದು ಪಲರಂ
ಸೋಲಿಸುತೆ
ಬೞಿಕೆ ತೊಡೆಗಳ
ಮೇಲಡ್ಡಂ
ಕೊಱಡನಿಟ್ಟು ರಾಗದೆ ಬಡಿಗುಂ-೨೩

ಪಾಡುಗುಮಡುರ್ತುಮೊಗುಮಿಗೆ
ನೋಡುಗುಮಭಿನಯಿಸಿ
ಪಲವು ರಸಭಾವನೆಯಿಂ
ದಾಡುಗುಮಾಗದೆ
ಕಬ್ಬಂ
ಮಾಡುಗಮೋಲೆಗಳನಣಮೆ
ಬರೆಯುತ್ತಿರ್ಕುಂ-೨೪

ನೆಲನಂ ಬರೆಗುಂ ಮತ್ತಂ
ಪಲಗೆಗಳೊಳ್
ಪಲವು ತೆಱದ ವರ್ಣಕ್ರಮದಿಂ
ಪಲವುಂ
ರೂಪಂ ಬರೆಗುಂ
ಪಲವಾಡುವವನಂತೆ
ತಾನೆ ತನ್ನೊಳ್ ನುಡಿಗುಂ-೨೫

ಸುರಿಗೆಯಿನಾಡುಗುಮಂತಾ
ಮರವಾಳಂ
ಕೊಂಡು ಬೀಸುತಿರ್ಕುಂ ಪೆಱತೇ
ನಿರುಳೆಲ್ಲಮಿಂತೆ
ಪೋಪುದು
ಮರುಳಪ್ಪಂಗೇನೊ
ಪೇೞ ಕೋಡೊಂದುೞಿಯಲ್-೨೬

ಎಂಬೀ ಪದ್ಯಗಳಲ್ಲಿ ಬಂಧುವರ್ಮನು ಮಿತ್ರಾವತಿಯ ಮುಗ್ಧತೆಯನ್ನು ಅತ್ಯಂತ ಚಾಣಾಕ್ಷತನದಿಂದ ಹಿಡಿದಿರಿಸಿದ್ದಾನೆ. ಇಲ್ಲಿ ಚಾರುದತ್ತ ಆದರ್ಶ ವಿದ್ಯಾರ್ಥಿಯಾಗಿ ಮೆರೆದಿದ್ದಾನೆ.

ಹೀಗೆ ಶಾಸ್ತ್ರಾಭ್ಯಾಸದಲ್ಲಿ ತೊಡಗಿ, ಕೈಹಿಡಿದವಳನ್ನು ಕಡೆಗಣಿಸಿದ ಚಾರುದತ್ತನನ್ನು ರತಿಸುಖಾಭಿಲಾಷಿಯಪ್ಪಂತೆ ಮಾಡಲು ದೇವಿಲೆಯು ರುದ್ರದತ್ತನಿಗೆ ಹೇಳಿದಳು. ರುದ್ರದತ್ತನು ಆತನನ್ನು ನಿತ್ಯವೂ ವಿನೋದವಿಹರಣಕ್ಕಾಗಿ ಕರೆದೊಯ್ದು ಸ್ತ್ರೀಯರನ್ನು ತೋರುವುದು ಕರ್ಣಪಾರ್ಯನ ಒಂದು ಪದ್ಯದಲ್ಲಿ ಮುಗಿದರೆ, ಬಂಧುವರ್ಮನು ೩೫ ಪದ್ಯಗಳಲ್ಲಿ ವಿವಿಧ ರೀತಿಯ ವಿಳಾಸಿನೀಜರನ್ನು ವರ್ಣಿಸಿ, ಆ ಪದ್ಯಗಳಲ್ಲಿ ಅಲಂಕಾರಗಳ ಹೆಸರುಗಳನ್ನೂ ಹೇಳಿದ್ದಾನೆ. ರುಗ್ನಿಣಿಯ ಸೌಂದರ್ಯ ವರ್ಣನೆಯಲ್ಲಿ, ಶಿಶುಪಾಲನು ಕೃಷ್ಣನನ್ನು ಹೀಯಾಳಿಸಿದ ಭಾಗದಲ್ಲಿ ಸಹಜವಾದ ಕವಿವಾಣಿಯನ್ನೂ,ದೇಸೀಯ ಪದಗಳ ಮೇಲೆ ಕವಿಯ ಹಿಡಿತವನ್ನೂ ಕಾಣಬಹುದಾಗಿದೆ. ಧೂಮಕೇತುವು ಕೊಲ್ಲಬಯಸಿ ತಂದ ಮಗುವನ್ನು ತಸ್ಕರಶಿಲೆಯ ಮೇಲೆ ಇರಿಸಿ ಹೋದುದು ‘ವ್ಯಂತರಪ್ರೇರಣೆಯಿಂದ’ ಎಂದು ಮಾತ್ರ ಕರ್ಣಪಾರ್ಯ ಹೇಳಿದರೆ,ಬಂಧುವರ್ಮನು ಧೂಮಕೇತುವಿನ ಮನದ ಹೊಯ್ದಾಟವನ್ನು ಅತ್ಯಂತ ಸೊಗಸಾಗಿ ಚಿತ್ರಸಿದ್ದಾನೆ. ಲಲಿತವಾದ ಶೈಲಿಯಲ್ಲಿ ಚಿತ್ರಿಸಿರುವ ಈ ಭಾಗ ಸಹೃದಯರೆಲ್ಲರನ್ನೂ ಅಕರ್ಷಿಸುತ್ತದೆ.ಮಾತಂಗಿಯ ವರ್ಣನೆಯಲ್ಲಿ, ಕಾಂಚನ ಮಾಲೆ ಸಾಕಿದ ಮಗ ಪ್ರದ್ಯುಮ್ನನನ್ನೇ ಬಯಸುವಲ್ಲಿ ಬಂಧುವರ್ಮನ ಮಿಂಚಿಬರುವ ಪ್ರತಿಭೆಯನ್ನು ಕಾಣುತ್ತೇವೆ.

ಕರ್ಣಪಾರ್ಯನಲ್ಲಿ ಸಂಸ್ಕೃತಪದ ಪ್ರಯೋಗಗಳನ್ನೂ ಕ್ಲಿಷ್ಟತೆಯನ್ನೂ ಕಂಡರೆ, ಬಂಧುವರ್ಮನಲ್ಲಿ ದೇಸೀಪದಗಳನ್ನೂ ಸರಳತೆಯನ್ನೂ ಕಾಣುತ್ತೇವೆ. ಇದಕ್ಕೆಈ ಹಿಂದಣ ಉದಾಹರಣ ಪದ್ಯಗಳಲ್ಲಲ್ಲದೆ ಕರ್ಣಪಾರ್ಯನ ೪-೯೬ ವಚನದಲ್ಲಿ “ಶ್ರೀ-ಪುರಮನೆಯ್ದಿ ಪೊಕ್ಕಿರಲವರನಲ್ಲಿಯ ಪರದಂ ಪ್ರಿಯಮಿತ್ರನೆಂಬನಱಿದಿರಿಸಲಿರೆ ಚಾರುದತ್ತದನನೇಕ ವಿದ್ಯಾಚಯೋಪಾಧ್ಯಾಯನಾಗೆ ಮನ್ನಣೆಯಿನಾದೇನಾನುಂ ಸಂದ ಗಾಂಧಾರಿವಿಷಯದೊಳ್ ಕಚವಳಯನಿಚಯಮಂ ಸ್ವೀಕರಿಸಿ ಪೋಗಿ ವೇತ್ರಗಿರಿಯ ವೇತ್ರಲತಾಪ್ರತಾನದಿನವ್ಯವ ಚ್ಚಿನ್ನಮಾದಚ್ಛಿನ್ನ ಶಿಳಾಭಿಧಾನ ಗುಹಾಭ್ಯಂತರದಿನುರ್ಚಿಪೋಗಿ” ಎಂಬ ವರ್ಣನೆಯನ್ನು ಕಂಡರೆ ಬಂಧುವರ್ಮನಲ್ಲಿ”……. ಶ್ರೀಪುರಮೆಂಬ ಪೊೞಲನೆಯ್ದಿ ಕೆಲವು ದಿವಸಮಿರ್ದಲ್ಲಿ ಚಾರುದತ್ತಂ ವಿದ್ಯೋಪದೇಶಂಗೆಯ್ಯೆ ಬಂದ ಮನ್ನಣೆಯೊಳ್ ಸಂಬಳಮುಂ ಮಾಡಿಕೊಂಡಲ್ಲಿಂದಂ ಪೋಗಿ ಗಾಂಧಾರವಿಷಯದೊಳ್ ಕಾಚವಳಯಂಗಳಂ ಕೊಂಡು ವೇತ್ರಪರ್ವತದ ಸಿಳಾಭಿಧಾನಗುಹೆಯೊಳಗನುರ್ಚಿ ಪೋಗಿ” ಎಂಬ ನಿರೂಪಣೆಯನ್ನು ಕಾಣುತ್ತೇವೆ.ಅಲ್ಲಿನ ‘ವಿದ್ಯಾಚಯೋಪಾಧ್ಯಾಯ’, ದೀನಾರದಿನಂದು ಸಂದ’ ಮತ್ತು ‘ಕಾಚವಳಯನಿಚಯ’ ಎಂಬಿವು ಕ್ರಮವಾಗಿ ಇಲ್ಲಿ ‘ವಿದ್ಯೋಪದೇಶಂಗೆಯ್ಯೆ, ‘ಸಂಬಳಮಂ ಮಾಡಿಕೊಂಡು’ ಮತ್ತು ‘ಕಾಚವಳಯಂಗಳಂ’ ಎಂದಾಗಿದೆ.

ಹೀಗೆಯೇ ಕರ್ಣಪಾರ್ಯನು
ಝಷದಿನಶೇಷಸಂಸ್ತುತ
ಸುಲಕ್ಷಣಪಾತ್ರಪವಿತ್ರಗಾತ್ರನಾ
ವೃಷನ
ವಿಮಾನದಿಂದನುಪಮಾನ ಸುಖಾಸ್ಪದನಬ್ಧಿಜಾತೆಯಿಂ
ವಿಷಧಿಪರೀತಧಾತ್ರಿಪತಿ
ವಾರಿಧಿಯಿಂ ಮಹಿಮಾಳಯಂ ಗಜ
ದ್ವಿಷದಿನಘೋರಭೂರಿಭುಜನನ್ನನನಿಂ
ಪಡೆವೈ ತನೂದರೀ-೧೦೮

ಎಂದು ವರ್ಣಿಸಿದರೆ, ಬಂಧುವರ್ಮನು

ಮೀನಿಂ ಸರ್ವಸುಲಕ್ಷಣಾಂಗನಮರೇಂದ್ರಾವಾಸದಿಂ ಭೋಗಿಸಂ
ಶ್ರೀನಾರೀಕ್ಷಣದಿಂ
ಪ್ರಸಿದ್ಧ ಸುಭಗಂ ವಾರಾಸಿಯಿಂದಂ ಪ್ರಭು
ಸ್ಥಾನೋಪೇತನನೇಕ
ಹಾರಿಯನಘಪ್ರಧ್ವಂಸಿಯಪ್ಪನ್ನನಂ
ನೀನೊರ್ವಂ
ಮಗನಂ ಲತಾಂಗಿ ಪಡೆವೌ ಸ್ರೀಸೇವ್ಯನಂ ಭವ್ಯನಂ-೪

ಎಂದು ಹೇಳುತ್ತಾನೆ. ಮುಂದೆ ಕರ್ಣಪಾರ್ಯನು “ಎಂಬುದುಮಾ ನಿತಂಬಿನೀ ಪ್ರಧಾನ ಕರಮೊಸೆದಾತ್ಮೀಯ ಮಣಿಭವನದೊಳಿರೆ ಗರ್ಭಚಿಹ್ನಮೊದವೆ ತತ್ಸುದತಿ ಲೋಕಾವಳೋಕ ನಾರ್ಥಂ ವಿಯನ್ಮಾರ್ಗವಿಹಾರಮಂ ಬಯಸಲನನಱಿದಬ್ಜೋದರಂ….” (೭-೧೦೮ವ) ಎಂದೆಲ್ಲಾ ಹೇಳಿದರೆ, ಬಂಧುವರ್ಮನು “ಎನೆ ಕೇಳ್ದತ್ಯಂತ ಸಂತುಷ್ಟಚಿತ್ತೆಯಾಗಿ ಮಾಡದೊಳಿರ್ದು ಕೆಲವು ದಿವಸಕ್ಕೆ ಗರ್ಭಚಿಹ್ನಂಗಳಾಗೆ ಭೂಲೋಕಾವನಾರ್ಥಂ ಗಗನವಿಹಾರಮಂ ಬಯಸಿದೊಡಾಕೆಯ ಬಯಕೆಯನುಪ್ರೇಂದ್ರನಱೆದು….” (೮-೪ವ) ಎಂದು ಮೊದಲಾಗಿ ಕರ್ಣಪಾರ್ಯನನ್ನೇ ಅನುಸರಿಸಿ ಸಂಸ್ಕೃತವನ್ನು ಕನ್ನಡಿಸಿರುವುದನ್ನು ಕಾಣಬಹುದಾಗಿದೆ.

ವರ್ಣನೆಗಳು :

ಶಿಶುಪಾಲನು ಕೃಷ್ಣನನ್ನು ಹೀಯಾಳಿಸುವಲ್ಲಿ
ತುಱುಕಾಱಂ
ನಿನ್ನ ಪೆಳದೇಂ
ತುಱುಕಾಱಂ
ನಿನ್ನತಂದೆ ತುಱುವನೆ ಕಾವೈ
ತುಱುಕಾರ್ತಿಯರೊಳ್
ಮಱೆವಾ
ೞ್ವಱಿಕೆಯ
ಗೋವುಗಳಿಗ ನಿನಗೆ ಶೌರ್ಯಮೆ ಪೊಲನೇ-೬೪

ಉಡಿದೈ ಬಂಡಿಯನೇನಗುರ್ವೊ ಮಗುೞ್ದುಂ ವಿಕ್ರಾಂತದಿಂ ಕಾಗೆಯಂ
ಪಿಡಿದೈ
ಸಂಕಿಸದೆರ್ದು ಕತ್ತೆ ಬಡಗೂಂಟೆಂದಿತಿವಂ ನೋವಿನಿಂ
ಬಡಿದೈ
ನೀರೊಳಗೊಳ್ಳೆಯಂ ಮಡಿಪಿದೈ ನೀಂ ಚೋದ್ಯಮೋ ಮತ್ತೆ ದಂ
ಡಿಡುವಂ
ಮಾಣ್ದಿರದೊತ್ತಿದೈ ಗಡಮಿದೇನಾಶ್ಚರ್ಯಮೋ ಸಾಹಸಂ-೬೫

ಎಂಬಿವೇ ಮೊದಲಾದ ಪದ್ಯಗಳಲ್ಲಿ ಬಂಧುವರ್ಮನ ಲಲಿತಶೈಲಿಯನ್ನು ನೋಡಬಹುದಾಗಿದೆ. ಹೀಗೆಯೇ ಮಗನನ್ನೇ ಕೂಡಬಯಸಿದ ಕಾಂಚನಮಾಲೆಯ ಇಚ್ಛೆಯನ್ನು ತಿರಸ್ಕರಿಸಿದ ಪ್ರದ್ಯುಮ್ನನನ್ನು ಕುರಿತು ಆಕೆಯು

ತಕ್ಕನ ತೆಱದಿಂ ನೀನುರ
ದುಕ್ಕಲಿಸಿದೆಯಕ್ಕುಮಾದೊಡಿರದಿನ್ನುಂ
ನೀಂ
ಪೊಕ್ಕಿರ್ದಮರೇಂದ್ರನ
ಮಱೆ
ಪೊಕ್ಕಡಮಾಂ
ಕೊಲಿಪೆನೆನ್ನ ಮುಳಿಸನೆ ಸಲಿಪೆಂ-೬೮

ಎಂದು ಹೇಳಿದರೆ,ಆತನು

ನಿಮ್ಮ ಮಗನೆಂದು ಬರ್ದುಕುವೆ
ನುಮ್ಮಡಿಸೆನದೆಂತುಮಬ್ಬ
ಕೊಂದಡೆ ಪಾಪಂ
ನಿಮ್ಮನೆ
ಸಾರ್ಗುಂ ತಾಯ್ ಮುಳಿ
ಸಿಂ
ಮಗನಂ ಕೊಂದಳೆಂಬುದೆಲ್ಲಿಯಮುಂಟೇ-೬೯

ಎಂದು ಮೊದಲಾಗಿ ಬರುವ ವರ್ಣನೆಗಳಲ್ಲಿ ಸರಳತೆಯ ಜತೆಗೆ ನಾಟಕೀಯತೆಯನ್ನೂ ಗುರುತಿಸಬಹುದು. ಈ ಸಂದರ್ಭ ಕುಮಾರರಾಮನ ಕಥೆಯನ್ನು ನೆನಪಿಗೆ ತರುತ್ತದೆ. ಕುಮಾರರಾಮನು ಸವತಿಯ ಮಗನಾದರೆ, ಪ್ರದ್ಯುಮ್ನನು ಸಾಕಿದ ಮಗನಾಗಿದ್ದಾನೆ. ಬಯಕೆ ಇಬ್ಬರದೂ ಒಂದೇ ರೀತಿಯದಾಗಿದ್ದು ಕೃತಕಭಾವದಿಂದ ಇಬ್ಬರೂ ಮಕ್ಕಳಮೇಲೆ ಗಂಡಂದಿರಿಗೆ ದೂರೀಯುತ್ತಾರೆ.

ರುಗ್ಮಿಣಿಯ ಸೌಂದರ್ಯೋನ್ನತಿಯನ್ನು ಮಾಡುವಲ್ಲಿ ಬಂಧುವರ್ಮನು ೭ನೆಯ ಆಶ್ವಾಸದಲ್ಲಿ ೩೩ ಕಂದಪದ್ಯಗಳನ್ನು ಬಳಸಿದ್ದಾನೆ. ಅವುಗಳಲ್ಲಿ

ಮದನನಿಧಾನಮನೊಳಕೆ
ಯ್ದುದಱಿಂ
ಕನ್ನೆಯ ನಿತಂಬಮುನ್ನತಿಕೆಯಿನೊ
ಪ್ಪಿದುದಂತೆಯುಮಲ್ತೆ
ನಿಧಾ
ನದ
ಮೇಗಿರ್ದಡವನಾವನುನ್ನತನಾಗಂ-೨೭

ಎನ್ನಂ ನೋಡಲ್ ಮಾಱು
ತ್ಪನ್ನತಿಕೆಯನುಂಟುಮಾಡಿ
ನೋಡಿದರೆರ್ದೆಯುಂ
ಭಿನ್ನಂ
ಮಾಡುವೆನೆಂಬಂ
ತುನ್ನತಕುಚಯುಗೆಯ
ಬಾಯ್ ಕರಂ ಸೊಗಯಿಸುಗುಂ-೩೯

ಎಂಬಂತಹ ಅಪೂರ್ವ ವರ್ಣನೆಗಳೂ ಸೇರಿವೆ.

ಬಂಧುವರ್ಮನು ಕರ್ಣಪಾರ್ಯನ ಕಥೆಯನ್ನನುಸರಿಸಿ, ಆತನ ಪದಪ್ರಯೋಗಗಳನ್ನೂ ವರ್ಣನೆಗಳನ್ನೂ ಬಳಸಿ ತನ್ನ ಕಾವ್ಯರಚನೆ ಮಾಡಿಕೊಂಡಿದ್ದರೂ, ಸ್ವಪ್ರತಿಭೆಯಿಂದ ನಿರ್ಮಿಸಿರುವ ಕೆಲವು ರಸದಾಣಗಳನ್ನೂ ಕವಿತಾಚಾರ್ಯವನ್ನೂ ಈ ಮೇಲಣ ಕೆಲವು ಉದಾಹರಣೆಗಳಿಂದ ತಿಳಿಯಬಹುದಾಗಿದೆ.

ಸನ್ನಿವೇಶವನ್ನು ಸಂಕ್ಷಿಪ್ತವಾಗಿ ಗದ್ಯದಲ್ಲಿ ನಿರೂಪಿಸುವುದನ್ನು “ಇಂತೆಲ್ಲರುಮಾ ಕೊಳದ ತೀರ್ಥೊದಕದೊಳ್ ಮಿಂದು ಕೈಗೈದು ಬಂದು ಪಲವುಮರ್ಚನೆಗಳಂ ತಂದು ತೀರ್ಥಜಿನಾಲಯದ ದೇವರಂ ಬಂದಿಸಿ ಮಗುೞ್ದು ಬಂದಾ ಕೊಳದ ತಡಿಯೊಳ್ ಗೋಷ್ಠಿಯಾಗಿರ್ದು ತಾವರೆಯೆಲೆಯಂ ಪಾಸಿ ರಸಾಯನಮಪ್ಪ ದಿವ್ಯಾಹರಮನುಂಡು ತಂಬುಲಂಗೊಂಡು ತಮ್ಮ ಮೆಚ್ಚಿನ ಲತಾಭವನಂಗಳೊಳಮದಿರ್ಮುತ್ತೆಯ ಜೊಂಪಂಗಳೊಳಂ ಪಲವುಂ ಪ್ರಾಣವಲ್ಲಭರಿರೆ ವಸುದೇವನುಂ ಗಾಂಧರ್ವದತ್ತೆಯುವೊಂದು ಮಾಧವೀಗೃಹದೊಳಗೆ ಪುಱ್ಪಶಯನದೊಳ್ ಸ್ವೇಚ್ಛೆಯಿನಿರ್ದಿನಿಸು ಬೇಗದಿನಲ್ಲಿಂದುಮೆರ್ದು ….” (೫-೬ವ) ಎಂಬ ಗದ್ಯದಲ್ಲಿ ಕಾಣಬಹುದಾಗಿದೆ. ಇಂತಹ ಸಂಕ್ಷಿಪ್ತಚಿತ್ರಣ ಬಂಧುವರ್ಮನ ವೈಶಿಷ್ಟವಾಗಿದೆ.

ಈ ವರ್ಣನೆಗಳಲ್ಲಿ ಅಂದಿನ ಸಾಮಾಜಿಕ ರೀತಿನೀತಿಗಳನ್ನು ಮನಗಾಣಬಹುದಾಗಿದೆ. ಮೇಲಣ ಗದ್ಯದಲ್ಲಿ ಬರುವ “ಲತಾಭವನಂಗಳೊಳಮದಿರ್ಮುತ್ತೆಯ ಜೊಂಪಂಗಳೊಳಂ ಪಲವುಂ ಪ್ರಾಣವಲ್ಲಭರಿರೆ ಎನ್ನುವಲ್ಲಿ ಅಂದಿನ ಕಾಲದಲ್ಲಿ ಸಾರ್ವಜನಿಕ ಉದ್ಯಾನವನಗಳಿದ್ದುವೆಂದೂ, ಅದರಲ್ಲಿ ಹಲವು ದಂಪತಿಗಳು ಸ್ವೇಚ್ಛೆಯಾಗಿ ವಿಹರಿಸುತ್ತಿದ್ದರೆಂದೂ ತಿಳಿಯಬಹುದಾಗಿದೆ. ಹಾಗೆಯೆ ಪ್ರದ್ಯುಮ್ನನು ವೃದ್ಧನಾವಿದನಾಗಿ ಮದುವೆಯಾಗಲಿದ್ದ ಉದಧಿಯೆಂಬ “ಕನ್ನೆಯ ಪುರ್ವಂ ನೊಸಲುಮಂ ಸಮಱಿದಾಗಳ್ ” ಎಂಬ ವರ್ಣನೆಯಿಂದ ಅಂದಿನ ಕಾಲದಲ್ಲಿ ಮದುವೆಯಾಗಲಿರುವ ಕನ್ನೆಗೆ ನಾವಿದನಿಂದ ಮುಖಾಲಂಕಾರ ನಡೆಯುತ್ತಿದ್ದಿತು ಎಂದೂ ಅರ್ಥವಾಗುತ್ತದೆ. ಅಂತೆಯೇ ಜಾತಿಗಳು, ವರ್ಣಗಳು ಮೊದಲಾದ ಹಲವಾರು ಪ್ರಯೋಗಗಳನ್ನು ಕಾವ್ಯದುದ್ದಕ್ಕೂ ಕಾಣಬಹುದಾಗಿದೆ.

ಕವಿಯು ತನ್ನ ಕಥಾವರ್ಣನೆಯ ಮನರಂಜನೆಗೆ ಇಂಬಾಗಿ ಮೊೞಗಂ ಕೇಳ್ದ ನವಿಲಂತೆ ರಾಗಿಸಿ, ಪಾವಂ ದಾಂಟಿದರಂತುಮ್ಮನೆ ಬೆಮರ್ತು, ಸೋಲದ ಭರದಿಂದೆಱಗಿದಂತೆ (೯-೧೯ವ), ಸ್ತ್ರೀಸಂಸರ್ಗದಿಂ ತಪಸ್ವಿಯಾದೊಡಮಧೋಗತಿಗಿೞಿಗುಮೆಂಬುದನಭಿನಯಿಸುವಂತೆ (೯-೧೧ವ), ಕಂಪಿಂಗೆ ಸುಳಿವ ತುಂಬಿಯಂತೆ (೬-೬೨), ತಣಿದವರ್ ತವರಂ ಮಱೆದರೆಂಬುದು ಪಾೞಿ (೯-೫೨ವ) ಎಂಬಿವೇ ಮೊದಲಾದ ಹಲವಾರು ಉಪಮೆಗಳನ್ನು ಉಪಯೋಗಿಸಿದ್ದಾನೆ. ಜೊತೆಗೆ ‘ಗುಡಿಗಟ್ಟಿದ ಸೀರೆಯಂತೆ ದಕ್ಕುಂದಲೆಗೆ ವಂದರುಂ ….. ರಾಕ್ಷಸರಿಂ ಕೊಂಡಿಕ್ಕುವ ಶಬರನಂತೆ ನೆತ್ತರಂ ಪೀರ್ವ ಪಿಶಾಚಂಗಳಿಂದ’ (೨-೧೧ವ), ‘ಮಹೇಶ್ವರಾಲಯದಂತೆ ಗೊರವು, ಮನೆಗಳಂತೆ ಕೇರು’ (೨-೩೮ವ) ಎಂಬಿವೇ ಮೊದಲಾದ ವರ್ಣನೆಗಳಲ್ಲಿ ಕವಿಯು ನಯಸೇನನಿಂದ ಪ್ರಭಾವಿತನಾಗಿರುವುದು ಕಂಡುಬರುತ್ತದೆ.

ಬಂಧುವರ್ಮನು ನೇಮಿತೀರ್ಥಂಕರ ಚರಿತೆಯ ವರ್ಣನೆಯಲ್ಲಿ ತೊಡಗಿದ್ದರೂ ಆತನ ಮನಸ್ಸು ಮಾನವಧರ್ಮದೆಡೆಗೆ ಸದಾ ಹರಿದಂತೆ ಕಂಡುಬರುತ್ತದೆ.

ಬಡವಂ ಸುಭೂಮಿಯೊಳ್ ಪದ
ವಡೆದರ್ಥಿಯೆ
ಬಿತ್ತದಂತೆ ನಂಬುಗೆವಡೆದಂ
ತೊಡರಿಸಿದ
ಧರ್ಮದಿಂದಾ
ಗಡೆ
ಮನ್ನಣೆವಡೆವುದಱಿಯೆ ಪೇೞದೆ ಫಲಮಂ ೧೦-೧೨

ಬಸವಮನುಂಟುಮಾಡದಿರು ಮಾನ್ಯರೊಳೊಪ್ಪೆ ವಿನೀತನಾಗು ಬೆ
ರ್ಚಿಸದಿರು
ಬಂಧುವರ್ಗಮನಡಂಗಿಸು ಬೆರ್ಚಿದೊರಂ ಸುದಾನದಿಂ
ಪಸರಿಸು
ಭೃತ್ಯರಂ ನಯದಿನಾಳ್ ಪ್ರಜೆಯಂ ಬೞಿಯಿಂದೆ ಬಪ್ಪುದಂ
ಬಿಸುಡು
ನಿರಂತರಂ ತಕ್ಕರ ಮಿಕ್ಕರ ಸಂವಿವಾದಮಂ ೧೦-೧೯

ಎಂಬಿವೇ ಮೊದಲಾದ ಪದ್ಯಗಳಲ್ಲಿ ಧರ್ಮಸ್ವರೂಪವನ್ನು ನಿರೂಪಿಸುತ್ತಾನೆ. ಹಾಗೆಯೇ ಸ್ತ್ರೀಧರ್ಮ, ತುಳಿಲಧರ್ಮಗಳು ಎಂತಹವು? ಅವು ಹೇಗಿರಬೇಕು? ಎಂಬುದೆಲ್ಲವನ್ನು ವಿವರವಾಗಿ ಮನಮುಟ್ಟುವಂತೆ ಚಿತ್ರಿಸುತ್ತಾನೆ.

ಪತಿ ಕಾಗುಮೆ ಪೆಂಡತಿಯಂ
ಸತಿ
ತನಂ ತಾನೆ ಕಾಗುಮುತ್ತಮ ಜಾತಿ
ಸ್ಥಿತಿಯಿಂ
ಗುಣಸಂತತಿಯಂ
ಗತಿಯಂ
ತಾಂ ಬಗೆದು ನೆಗೞೆ ಪೞಿ ಪೊರ್ದುಗುಮೇ ೧೦-೨೮

ಎಂಬಂತಹ ಮತ್ತೂ ಕೆಲವು ಪದ್ಯಗಳಲ್ಲಿ ಸ್ತ್ರೀಧರ್ಮನಿರೂಪಣೆಯನ್ನು ಕಾಣಬಹುದು.

ಕಲಿತನಭಿಮಾನಂ ನಿ
ರ್ಮಳ
ಧರ್ಮಂ ತ್ಯಾಗಮೆಸೆವ ಸತ್ಯಂ ಶೌಚಂ
ನೆಲಸಿರ್ದೀ
ಗುಣ ಮೂಱುಂ
ನೆಲೆಯುಳ್ಳಂ
ತುೞಿಲಸಂದನಲ್ಲದಡಲ್ಲಂ ೧೧-೮೧

ಕೇಳಿಕದಲ್ಲಿ ಸೂಳೆಮನೆಯಲ್ಲಿ ನಿಜಾಲಯದಲ್ಲಿ ಭೂಪನಾ
ರ್ತೀವೆಡೆಯಲ್ಲಿ
ಜೂದಿನೆಡೆಯಲ್ಲಿ ಕರಂ ಪಸಿದಲ್ಲಿ ಪಣ್ಫಲಂ
ತೀವಿದ
ತೋಟದಲ್ಲಿ ಬೆಳೆದೊಪ್ಪುವ ಕೆಯ್ವೊಲದಲ್ಲಿ ಪೊರ್ದಿನಿಂ
ದಾ
ವನಮಾಗೆ ಕಾವುದಭಿಮಾನಮನೊಳ್ತುೞಿಲಾಳ್ ನಿರಂತರಂ ೧೧-೮೮

ಮೊದಲಾದ ಹಲವಾರು ಪದ್ಯಗಳಲ್ಲಿ ಯುದ್ಧವೀರನ ಧರ್ಮವನ್ನು ಸೊಗಸಾಗಿ ಚಿತ್ರಿಸಿದ್ದಾನೆ. ಮೇಲಣ ಪದ್ಯದಲ್ಲಿ ಪಂಪನ ಪ್ರಭಾವವು ಕವಿಯ ಮೇಲಾಗಿರುವುದನ್ನು ಕಾಣಬಹುದಾಗಿದೆ.

ಇದಲ್ಲದೆ ವೈದಿಕಮತಾನುಸಾರಿಯಾದ ಪುರಾಣಕಥೆಯ ವಿಡಂಬನೆ “ವಿಷ್ಣುವಂ ಸರ್ವಜ್ಞಂ ಸರ್ವವ್ಯಾಪಿ ಭುವನತ್ರಯಪತಿಯೆಂದು ಲೋಕಂ ತಾಮೆ ಕೊಂಡಾಡುವುದೆತ್ತಾತಂ ಅರ್ಜುನಂಗೆ ರಥಮನೆಸಗಿದನೆಂಬುದೆತ್ತದಲ್ಲದೆಯುಂ ಜ್ಯೋತಿರ್ಲೋಕದ ದೇನಪ್ಪಾದಿತ್ಯದೇವನೆತ್ತ ಕೊಂತಿಯೆತ್ತ ಕೊಂತಿ ತಲೆನೀರ್ಮಿಂದು ಆದಿತ್ಯನಂ ಬಯಸಿದೊಡೆ ಗರ್ಭಮಪ್ಪುದೆತ್ತ ಗರ್ಭಮಾಗಿ ಕಿವಿಯೊಳ್ ಕರ್ಣನಂ ಪೆತ್ತಳೆಂಬುದೆತ್ತ…. ಅಭಿಮನ್ಯು ಬಸಿಱೊಳಿರ್ದು ಚಕ್ರಬ್ಯೂಹಮಂ ಕೇಳ್ವುದೆತ್ತ ನೆಱೆಯೆ ಕೇಳದೆ ತಾನೆ ಪೊಱಮಟ್ಟ ನೆಂಬುದೆತ್ತ” (೧-೨೯ವ) ಎಂಬಿವೇ ಮೊದಲಾದ ವರ್ಣನೆಗಳಲ್ಲಿ ವ್ಯಕ್ತವಾಗುತ್ತದೆ.

ಒಟ್ಟಿನಲ್ಲಿ ಬಂಧುವರ್ಮ ಒಬ್ಬ ಉತ್ತಮ ಕವಿ: ಆತನ ಕಾವ್ಯ ಸತ್ಕಾವ್ಯ ಎನ್ನುವುದರಲ್ಲಿ ಸಂದೇಹವಿಲ್ಲ.

ಈ ಕೃತಿಯ ಸಂಪಾದನೆಗೆ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ದೊರೆಯುವ ಏಕೈಕ ಕೆ೪ ಓಲೆ ಹಸ್ತಪ್ರತಿಯನ್ನು ಒಳಸಿಕೊಳ್ಳಲಾಗಿದೆ. ಮತ್ತೊಂದು ಹಸ್ತಪ್ರತಿ ಕೆಎ೪೯ ಎಂಬ ಹಸ್ತ ಪ್ರತಿ ದೊರೆತರೂ ಇದು ಓಲೆಪ್ರತಿಯ ನಕಲಾಗಿ ತೋರುತ್ತದೆ. ಉತ್ತಮ ಕಾವ್ಯವೊಂದು ಹೊರಬಂದುದು ಸಂತಸದಾಯಕವಾಗಿದೆ.

ಇಲ್ಲಿ ಬಂಧುವರ್ಮನ ಎರಡೈ ಗ್ರಂಥಗಳಿಗೆ ಅರ್ಥಕೋಶಗಳನ್ನು ಬೇರೆ ಬೇರೆಯಾಗಿ ಕೊಡಲಾಗಿದೆ. ಅಲ್ಲದೆ ಹರಿವಂಶಾಭ್ಯುದಯದಲ್ಲಿ ಬರುವ ಪಾರಾಭಾಷಿಕ ಪದಗಳಿಗೆ ವಿವರಣೆಯನ್ನು ನೀಡಲಾಗಿದೆ.