ದ್ವಾದಶಾನುಪ್ರೇಕ್ಷೆಗಳ ನಿರೂಪಣೆಯನ್ನೊಳಗೊಂಡ ಜೀವಸಂಬೋಧನಂ ಗ್ರಂಥವನ್ನೂ ಹರಿವಂಶಾಭ್ಯುದಯವೆಂಬ ಜೈನಪುರಾಣವನ್ನೂ ಚಂಪೂಶೈಲಿಯಲ್ಲಲಿ ರಚಿಸಿ ಪ್ರಸಿದ್ಧನಾಗಿರುವ ಬಂಧುವರ್ಮನು ಕ್ರಿ.ಶ. ಸು. ೧೨೦೦ರಲ್ಲಿದ್ದವನೆಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ಈಚೆಗೆ ಈತನ ಮೂರನೆಯ ಕೃತಿ ಸತಿಧರ್ಮಸಾರವೂ ದೊರತಿದೆ. ಈತನು ತನ್ನ ಪೂರ್ವಕವಿಗಳಾರನ್ನೂ ಸ್ತುತಿಸಿಲ್ಲ; ಅಲ್ಲದೆ ತನ್ನ ಬಗೆಗೆ ಯಾವು ವಿಷಯವನ್ನೂ ಹೇಳಿಕೊಂಡಿಲ್ಲ. ಜೀವಸಂಬೋಧನೆಯ ಕೊನೆಯಲ್ಲಿ ‘ನುತ ವೈಸ್ಯೋತ್ತಮ ಬಂಧುವರ್ಮ’ ಎಂದು ಹೇಳಿ ಕೊಳ್ಳುವುದರ ಹೊರತು ಈತನ ಬಗೆಗೆ ಉಳಿದ ಯಾವ ವಿಷಯಗಳೂ ತಿಳಿದುಬರುವುದಿಲ್ಲ. ಕೃತಿಗಳನ್ನು ಅಭ್ಯಸಿಸಿದವರಿಗೆ ಬಂಧುವರ್ಮನು ಪ್ರತಿಭಾನ್ವಿತ ಕವಿ ಎಂದು ಮನದಟ್ಟಾಗುವುದರಲ್ಲಿ ಸಂದೇಹವಿಲ್ಲ. ಬಂಧುವರ್ಮನನ್ನು ಮೆಚ್ಚಿಕೊಂಡಿರುವ ಈಚಿನ ಕೆಲವು ಕವಿಗಳು ಈತನನ್ನು ಬಹುವಾಗಿ ಸ್ತುತಿಸಿರುವುದುಂಟು.

ಹೀಗೆ ಸ್ತುತಿಸಿರುವ ಕವಿಗಳಲ್ಲಿ ಮೊದಲನೆಯವನೆಂದರೆ ಕ್ರಿ.ಶ.ಸು. ೧೨೩೫ ರಲ್ಲಿದ್ದ ಕಮಲಭವ. ಈತನು ತನ್ನ ಶಾಂತೀಶ್ವರ ಪುರಾಣದಲ್ಲಿ

ಜಿನಸಮಯ ಪ್ರಕಾಶಕೃತ ಸತ್ಕವಿ ಪಂಪನ ಪೆಂಪುವೆತ್ತ ಪೊ
ನ್ನನ
ಕವಿ ನಾಗಚಂದ್ರನ ನೆಗೞ್ತೆ ರನ್ನನ ಸಂದ ಬಂಧುವ
ರ್ಮನ
ಬುಧ ನೇಮಿಚಂದ್ರನ ಜಗನ್ನುತ ಜನ್ನರ ರಂಜಿಪಗ್ಗಳ
ಯ್ಯನ
ಕೃತಿ ಸೌಂದರೀಸುಭಗಮಾವನಮಿರ್ಕೆ ಮದೀಯ ಕಾವ್ಯದೊಳ್-೬೨

ಎಂದು ಪಂಪ ಪೊನ್ನಾದಿಗಳ ಸರಿಸಮಾನವಾಗಿ ಬಂಧುವರ್ಮನನ್ನು ಕಂಡಿದ್ದಾನೆ. ಮುಂದೆ ಕ್ರಿ.ಶ. ೧೩೩೧ರಲ್ಲಿದ್ದ ನಾಗರಾಜನು ತನ್ನ ಪ್ರಣ್ಯಾಸ್ರವದಲ್ಲಿ

ಕವಿಗಳೊಳೆ ಬಂಧುವರ್ಮಂ
ಕವಿಯಿವರ್ಗಳ
ಮುಂದೆ ಕವಿಗಳೆಂಬುವರೆಲ್ಲಂ
ಛವಿಗೆಟ್ಟಿರ್ಪರ್
ತೊಳಗುವ
ರವಿಯಂ
ಬಳಸಿರ್ದ ಬಹಳ ಭಗಣಂಗಳವೋಲ್-೬೨

ಎಂದು ಹೊಗಳಿದ್ದಾನೆ. ಹೀಗೆಯೇ ೧೫೦೮ರಲ್ಲಿದ್ದ ಮಂಗರಸನು ತನ್ನ ಕಾವ್ಯದಲ್ಲಿ ಬಂಧುವರ್ಮನನ್ನು ನೆಲೆನಿಲ್ಲಿಸಿದ್ದಾನೆ. ಸು ೧೧೪೦ರಲ್ಲಿದ್ದ ಕರ್ಣಪಾರ್ಯನ ನೇಮಿಥಪುರಾಣವನ್ನು ಅನುಸರಿಸಿರುವುದು ಹರಿವಂಶಾಭ್ಯುದಯದಲ್ಲಿ ಕಂಡುಬರುವುದರಿಂದ ಹಾಗೂ ೧೨೩೫ರಲ್ಲಿದ್ದ ಕಮಲಭವನು ನೆನೆಯುವುದರಿಂದ ಬಂಧವರ್ಮನು ೧೧೪೦ರಿಂದ ೧೨೩೫ರ ಒಳಗೆ ಎಂದರೆ ಸು ೧೨೦೦ರಲ್ಲಿ ಇದ್ದಿರಬಹುದೆಂದು ನಿರ್ಧರಿಸಲಾಗಿದೆ.

ಬಂಧುವರ್ಮನು ಇತರ ಕೆಲವು ಕವಿಗಳಂತೆ ಯಾವ ರಾಜರ ಆಶ್ರಯದಲ್ಲಿದ್ದುದೂ ಕಂಡುಬರುವುದಿಲ್ಲ. ಅಲ್ಲದೆ ಯಾರ ಹಂಗಿಗೂ ಒಳಗಾಗುವುದಿಲ್ಲ. ಹಾಗಾಗಿಯೇ ಯಾರನ್ನೂ ನೆನಯದೆ ನಿರ್ಲಿಪ್ತನಾಗಿದ್ದಾನೆ. ಆದರೆ ನೇನಿಜಿನೇಶರು ಸಿದ್ಧರು ಬುಧರು, ಸಾಧುಗಳು ಮತ್ತು ಯಕ್ಷ-ಯಕ್ಷಿಯರನ್ನು ಸ್ತುತಿಸಿ ‘ಮನಸಂದು ಸರಸ್ವತಿ ಬಂದು ಬಂಧುವರ್ಮನ ಮುಖಪದ್ಮದೊಳ್ ನೆಲಸಿನಿಂದು ವಿರಾಜಿಸುತಿರ್ಕೆ ರಾಗದಿಂ’ ಎಂದು ಜೀ.ಸಂ.ಯಲ್ಲಿ ಹೇಳಿ ‘ವಕ್ತಾಮಳಕೋಮಳಾಂಬುರುಹದೊಳ್ ನೆಲಸಿರ್ಕೆ ಮನೋನುರಾಗದಿಂ’ ಎಂದು ಹ.ವಂ.ದಲ್ಲಿ ಸರಸ್ವತಿಯನ್ನು ಬೇಡಿಕೊಳ್ಳುತ್ತಾನೆ. ಕಾವ್ಯಲಕ್ಷಣದೊಳೊಳ್ಪಳವಟ್ಟಿರೆ ಪೆೞ್ವುದಲ್ಲದೇಕಾರಣವಯ್ಯ ಕಬ್ಬುವ ಬಿಟ್ಟಿವೇೞ್ವುದೇ’ ‘ವಿರಸಮಪ್ಪ ಕಬ್ಬಂಬೇೞ್ದಾಲೋಲತೆಯಿಂದಂ ಬರೆಬರೆದೋಲೆಗಳಂ ಕಿಡಿಸುವಂತು ತಾೞೊಳು ಪಗೆಯೇ ‘ಸೊಪ್ಪುವಟ್ಟ’ ಬಗೆಯಿಂದೞೆಗನ್ನಡದೊಳ್ ತಗುಳ್ಚುವ ಬೆಸನೇಕೆ ಮಟ್ಟಿಮಿರಲಾಗದೆ’ ಮೊದಲಾದ ಮಾತುಗಳಿಂದ ಕುಕವಿಗಳನ್ನು ತೆಗಳಿದ್ದಾನೆ.

ಜೀವಸಂಬೋಧನಂ

ಹೆಸರೇ ಸೂಚಿಸುವಂತೆ ಜೀವವನ್ನು ಕುರಿತು ಬೋಧಿಸುವ ಜೈನ ದ್ವಾದಶಾನುಪ್ರೇಕ್ಷೆಗಳ ನಿರೂಪಣೆಯನ್ನೊಳಗೊಂಡಿರುವ ಈ ಕಾವ್ಯವು ಧರ್ಮಕ್ಕೆ ಧರ್ಮ ಕಾವ್ಯಕ್ಕೆ ಕಾವ್ಯ ಎಂಬ ಎರಡೂ ಸದ್ಗುಣಗಳನ್ನೊಳಗೊಂಡಿವೆ. ಅನುಪ್ರೇಕ್ಷೆಗಳ ನಿರೂಪಣೆಯಾದರೂ ಇದರಲ್ಲಿ ಜೈನಪ್ರಕ್ರಿಯೆಗಳಾವೂವೂ ಕಂಡುಬರುವುದಿಲ್ಲ; ಕಾಣುವುದು ಕೇಲವ ಮಾನವಧರ್ಮ. ಇದರಿಂದ ಎಲ್ಲ ವರ್ಗದ ಜನರು ಇದನ್ನು ಮೆಚ್ಚಿಕೊಳ್ಳುತ್ತಾರೆ. ಈ ಮೆಚ್ಚಿಕೆಗೆ ಮತ್ತೂ ಒಂದು ಕಾರಣವೆಂದರೆ ಪದಬಂಧವು ಲಲಿತವಾಗಿಯೂ ಸರಳವಾಗಿಯೂ ದೇಸೀಯ ಶಬ್ದಗಳಿಂದ ಕೂಡಿರುವುದೂ ಆಗಿದೆ. ಕೊಡುವ ಅನೇಕ ಉಪಮಾನಗಳು ನಿತ್ಯದ ಬದುಕಿನಲ್ಲಿ ಅನುಭವಿಸುವ ವಿಷಯಗಳೇ ಆಗಿವೆ. ನೀತಿವೈರಾಗ್ಯ ಬೋಧಕ ಕಥೆಗಳನ್ನು ತನ್ನ ಧರ್ಮಪ್ರತಿಪಾದನೆ ಬಳಸಿಕೊಂಡಿರುವುದು ತುಂಬ ಸೊಗಸಾಗಿದೆ. ಇಲ್ಲಿ ಕಥೆಗಳನ್ನು ವಿಸ್ತರಿಸ ಹೋಗಿರುವುದಿಲ್ಲ. ತನ್ನ ಉದ್ದೇಶ ಆ ಕಥೆಗಳ ಮೂಲಕ ಮನುಜರನ್ನು ಧರ್ಮದತ್ತ ಸೆಳೆಯುವುದು ಮಾತ್ರವಾಗಿದೆ. ಆದುದರಿಂದಲೇ ಆ ಉದ್ದೇಶಕ್ಕೆ ತಕ್ಕಂತೆ ಕಥೆಗಳಲ್ಲಿ ಯಾವ ವಿಧವಾದ ಹೆಚ್ಚಿನ ವರ್ಣನೆಗಳನ್ನೂ ತಾರದೆ ತಕ್ಕಷ್ಟನ್ನೂ ಚಿಕ್ಕ ಚಿಕ್ಕ ಕಥೆಗಳಲ್ಲಿ ಚೊಕ್ಕವಾಗಿ ನಿರ್ವಹಿಸಿದ್ದಾನೆ. ಇದರಲ್ಲಿ ಕವಿಯ ಸಾಮರ್ಥ್ಯ, ಪ್ರೌಢಿಮೆ, ಸರಳತೆ ಎದ್ದು ಕಾಣುತ್ತವೆ; ಕವಿಯ ಬಗೆಗೆ ಇರುವ ಗೌರವ ಅಧಿಕವಾಗುತ್ತದೆ.

ಜೀವಸಂಬೋಧನೆಯಲ್ಲಿ ಹನ್ನೆರಡು ಅನುಪ್ರೇಕ್ಷಗಳ ನಿರೂಪಣೆಯಿದೆ. ಇದರಲ್ಲಿ ಜೀವವನ್ನು ಕುರಿತು ಮಾಡುವ ಮನವಿಯಿಂದ ಈ ಕೃತಿಗೆ ‘ಜೀವಸಂಬೋಧನಂ’ ಎಂಬ ಹೆಸರು ಅನ್ವರ್ಥವಾಗಿದೆ. ಇದರಲ್ಲಿ ಕಂಡುಬರುವುದು ಕವಿಯ ಹೃದಯಪರಿಪಕ್ವತೆ; ಧರ್ಮದಲ್ಲಿ ನೆಲೆಗೊಂಡ ಆತನ ಮನಸ್ಸು ಜೈನತತ್ವ ನಿರೂಪಣೆಯಿದ್ದರೂ ಹೆಚ್ಚಾಗಿ ಕಂಡುಬರುವುದು ಮಾನವಧರ್ಮ. ಇದು ಮೇಲ್ನೋಟಕ್ಕೆ ಶಾಸ್ತ್ರಗ್ರಂಥವಾಗಿ ಕಂಡರೂ ಕಾವ್ಯಾಭ್ಯಾಸಿಗಳಿಗೆ ಉತ್ತಮ ಕಾವ್ಯವಾಗಿ ತತ್ತ್ವಚಿಂತಕರಿಗೆ ಬತ್ತದ ಸೆಲೆಯಾಗಿ ಕಂಡುಬರುತ್ತದೆ.

ಧ್ಯಾನಕ್ಕೆ ಅಥವಾ ಅನುಶೀಲನಕ್ಕೆ ಅಗತ್ಯವಾಗಿ ಬೇಕಾದ ಅನುಪ್ರೇಕ್ಷೆಗಳು ಹನ್ನೆರಡು ತೆರನಾಗಿವೆ. ಜೈನತತ್ವದ ಎಲ್ಲ ಬೋಧನೆಗಳನ್ನು ಒಳಗೊಂಡ ಇವು ಅನಿತ್ಯ ಅಶರಣ ಸಂಸಾರ ಏಕತ್ವ ಅನ್ಯತ್ವ ಅಶುಚಿ ಅಸ್ರವ ಸಂವರ ನಿರ್ಜರ ಲೋಕ ಬೋಧಿದುರ್ಲಭ ಧರ್ಮ ಎಂಬುದಾಗಿದೆ. ಧಾರ್ಮಿಕ ವಿಷಯಗಳನ್ನೊಳಗೊಂಡ ಈ ಹನ್ನೆರಡು ಅನುಪ್ರೇಕ್ಷೆಗಳು ವಿಷಯ ವಿಸ್ತಾರತೆಯನ್ನು ಹೊಂದಿವೆ.ಇವು ಜೀವನದಲ್ಲಿ ಮಹತ್ತರ ಪರಿಣಾಮಗಳನ್ನು ಬೀರುತ್ತವೆ. ಜೀವನದ ಆಗುಹೋಗುಗಳನ್ನು ತಿಳಿಸಿ, ಕರ್ಮನಾಶನಕ್ಕೆ ಮಾಡಬೇಕಾದ ಕಾರ್ಯಕ್ಕೆ ದಿಕ್ಸೂಚಿಯಾಗಿ ನಿಲ್ಲುತ್ತವೆ; ವ್ಯಕ್ತಿಯು ಮೋಕ್ಷದೆಡೆಗೆ ಹೋಗಲು ಅನುಸರಿಸಬೇಕಾದ ಮಾರ್ಗಗಳನ್ನು ಮನದಲ್ಲಿ ಅನುರಣಿಸುತ್ತವೆ.

ಈ ಹನ್ನೆರಡಯ ಅನುಪ್ರೇಕ್ಷೆಗಳಿಗೆ ಆಚಾರ್ಯ ಕುಂದುಕುಂದರ ಕೃತಿಗಳಲ್ಲಿ ನಿರೂಪಿತವಾಗಿರುವ ಕ್ರಮವೇ ಆಧಾರವಾಗಿ ಕಂಡುಬರುತ್ತವೆ. ಆದರೆ ಅಲ್ಲಲ್ಲಿ ಅನುಪ್ರೇಕ್ಷೆಗಳ ಆಯ್ಕೆಯಲ್ಲಿ ಕೆಲವು ಸಣ್ಣ ಪುಟ್ಟ ಬದಲಾವಣೆಗಳನ್ನು ಮಾಡಿಕೊಂಡಿದ್ದಾನೆ. ಬಂಧುವರ್ಮನು ತನ್ನ ಪೂರ್ವಿಕರಾದ ಉಮಾಸ್ವಾತಿ ಶಿವಾರ್ಯ ಪಟ್ಟಕೇರ ಕುಂದಕುಂದ ಕಾರ್ತಿಕೇಯರಿಂದ ಪ್ರಭಾವಿತನಾಗಿರುವುದನ್ನು ಕಾಣಬಹುದು. ಈತನು ಮೊದಲ ಹತ್ತಕ್ಕೆ ಶಿವಾರ್ಯ ಮತ್ತು ಇತರರನ್ನೂ ಕೊನೆಯ ಎರಡಕ್ಕೆ ಉಮಾಸ್ವಾತಿ ಮತ್ತು ಕಾರ್ತಿಕೇಯರನ್ನೂ ಅನುಸರಿಸಿದ್ದಾನೆ.

ಈ ಹನ್ನೆರಡಯ ಅನಪ್ರೇಕ್ಷೆಗಳಲ್ಲಿ ಅಡಗಿರುವ ತತ್ವವನ್ನು ಹೀಗೆ ಸಂಹ್ರಹಿಸಬಹುದಾಗಿದೆ. ಹೆಂಡತಿ ಮಕ್ಕಳು ಸಂಪತ್ತು ಶರೀರಾದಿಗಳೆಲ್ಲವೂ ಕ್ಷಣಿಕವಾದುವು.ಏನೇ ಆದರೂ ಎಂತೇ ಇದ್ದರೂ ಒಂದಲ್ಲ ಒಂದು ದಿನ ಇವೆಲ್ಲವನ್ನೂ ಬಿಟ್ಟು ಹೋಗುವುದು ಶತಸ್ಸಿದ್ಧವಲ್ಲವೆ? ಸಾಯುವಾಗ ಪತ್ನಿ ಮಕ್ಕಳು ಹಣ ಈಯಾವುದಾದರೂ ನೆರವಿಗೆ ಬರುತ್ತವೆಯೆ? ಮದ್ದು ಮಂತ್ರ ತಂತ್ರಗಳಾವುವೂ ಸಾವನ್ನ ತಡೆಯಲು ಸಾಧ್ಯವಿಲ್ಲವೆಂದಮೇಲೆ ಅವುಗಳನ್ನು ನಂಬಿರುವುದು ಸರಿಯೆ? ನರಕ ಸ್ವರ್ಗ ಮೊದಲಾದೆಲ್ಲೆಡೆಗಳಲ್ಲಿಯೂ ನೀನೊಬ್ಬನೇ ಇರುವುದಿಲ್ಲದೆ ಬೇರಾರೂ ಜೊತೆಯಲ್ಲಿರುವುದಿಲ್ಲ. ಪೂರ್ವಾರ್ಜಿತ ಪುಣ್ಯಫಲದಿಂದ ಜೀವಿಗಳಲ್ಲಿಯೇ ಉತ್ತಮವಾದ ಮಾನವಜನ್ಮವನ್ನು ಪಡೆದೂ ಮೈಮರೆತು ಪಾಪಕರ್ಮಗಳಲ್ಲಿ ನಿರತನಾದರೆ ಮತ್ತೆ ನರಕಾರ್ಣವದಲ್ಲಿ ಬೀಳುವುದಿಲ್ಲವೆ? ಮೋಹಪಾಶದಿಂದ ಮುಕ್ತನಾಗುವುದಾದಲ್ಲಿ ಅನುಸರಿಸಬೇಕಾದ ಮಾರ್ಗವನ್ನು ತಿಳಿದುಕೊ. ಈ ಕಾರ್ಯದಲ್ಲಿ ಮುಂದುವರಿಯಬೇಕಾದವನು ನೀನೊಬ್ಬನೇ ಎಂಬುದನ್ನು ತಿಳಿದು ನಡೆ.ತನು ಧನ ಮೊದಲಾದೆಲ್ಲವನ್ನೂ ಬಿಟ್ಟು ನಡೆಯುವ ಎಲೆ ಜೀವನೇ ಎಂದಿದ್ದರೂ ಈ ಎಲ್ಲ ವಸ್ತುಗಳೂ ನಿನ್ನಿಂದ ಬೇರೆಂದು ಭಾವಿಸದಿರುವುದು ಎಗ್ಗತನವಲ್ಲವೆ?

ಹಲವಾರು ಅವಸ್ಥಾಂತರಗಳನ್ನು ಹೊಂದಿ ತಿರುಗುವ ಎಲೈ ಜೀವನೇ ಸಂಸಾರಚಕ್ರದ ಸ್ಥಿತಿಯನ್ನು ಅರಿತಿರುವೆಯಾ? ತಾಯಿ ಹಾಗೂ ಅಕ್ಕತಂಗಿಯರೇ ಪತ್ನಿಯರಾಗುವ, ತಂದೆ ಹಾಗೂ ಅಣ್ಣ ತಮ್ಮಂದಿರೇ ಗಂಡಂದಿರಾಗುವಂತಹ ಸಂಸಾರದ ವಿಚಿತ್ರ ಪರಿಸ್ಥಿತಯನ್ನರಿತೂ ‘ಸಂಸಾರ ಸಂಸಾರ’ ಎಂದು ಅದರಲ್ಲಿಯೇ ತಲ್ಲೀನನಾಗುವ ಹುಚ್ಚುತನವನ್ನು ಮೊದಲು ಬಿಡು. ನರಕಲೋಕ ತಿರ್ಯಕ್ ಲೋಕ ಸ್ವರ್ಗಲೋಕಗಳ ಸ್ವರೂಪವನ್ನು ಮೊದಲು ತಿಳಿದುಕೊ. ಪಾಪಕರ್ಮ ಮಾಡಿ ನರಕಲೋಕವನ್ನು ಸೇರಿ ಅನುಭವಿಸುವ ಘೋರ ಕ್ರೂರ ಹಿಂಸೆಗಳನ್ನು ನೋಡು. ಶುಭಾಶುಭ ಕರ್ಮಗಳಿಂದಾಗುವ ಸುಖ ದುಃಖಗಳ ಬಗೆಗೆ ಚಿಂತಿಸು. ಎಲ್ಲ ದುಃಖದಿಂದ ಮುಕ್ತನಾಗಿ ಸುಖವನ್ನು ಪಡೆಯಬೇಕಾದರೆ ಧರ್ಮದತ್ತ ಮನಗೊಡು. ಧಾತುಮಲಾದಿ ದೋಷಗಳಿಂದ ಕೂಡಿದ ಈ ಶರೀರವನ್ನು ನಚ್ಚಿ ಮರೆವುದುಂಡೆ? ಈ ಶರೀರಸಂಪರ್ಕ ಪಡೆದೆಲ್ಲ ವಸ್ತುಗಳೂ ಕೆಡುತ್ತವಲ್ಲವೆ? ಈ ಶರೀರವು ಸುಗತಿ ಪಡೆಯಲು ಸಾಧನವಾಗಿದೆಯೆ ಹೊರತು ಮತ್ತಾವುದಕ್ಕೂ ಪ್ರಯೋಜನವಿಲ್ಲದ ವಸ್ತುವಾಗಿದೆ.

ಹಿಂಸೆ ಅನ್ಯತಾದಿ ಹಲವು ವಿಧ ವ್ಯಸನಗಳಿಂದ ಪಾಪಕರ್ಮವುಂಟಾಗಿ ಕೆಡುವ ಕೇಡಿಗೆ ಅಂಜದೆ ಅಳುಕದೆ ನಡೆಯುವುದು ಸರಿಯೆ? ತಪಸ್ವಿಗಳನ್ನೇ ಕಾಡುವ ಪಾಪಸ್ರವವು ಗೃಹಸ್ಥರನ್ನೂ ಬಿಡುವುದುಂಟೆ? ಈ ಪಾಪಸ್ರವವು ಬರದಂತಿರಬೇಕಾದರೆ ಉತ್ತಮ ಚಾರಿತ್ರದಿಂದ ನಡೆದುಕೊಳ್ಳಬೇಕು. ಕೊಲೆ ಸುಳ್ಳು ಮೊದಲಾದೆಲ್ಲ ಹದಿಮೂರು ವಿಧವಾದದ ದುರ್ಗುಣದಿಂದ ದೂರನಾಗಬೇಕು. ಕ್ರೋಧ ಲೋಭ ಮೋಹ ಮದ ಮಾತ್ಸರರ್ಯಾದಿಗಳನ್ನು ತ್ಯಜಿಸಿ ಮಾನವಜನ್ಮದಲ್ಲಿದ್ದಾಗಲೆ ತಪೋನಿರತನಾಗಿ ಕರ್ಮನಿವಾರಣೆ ಮಾಡಿಕೊಂಡರೆ ಎಲೆ ಜೀವನೇ ನೀನು ದಿವ್ಯಸುಖವನ್ನು ಪಡೆಯಲಾರೆಯಾ? ಸಮ್ಯಗ್ದರ್ಶನ ಜ್ಞಾನ ಚಾರಿತ್ರಗಳ ಪರಿಪೂರ್ಣತೆಯಿಂದ ಮೋಕ್ಷವನ್ನು ಪಡೆಯಬಹುದು. ಒದಗಿಬಂದ ಪೂರ್ವಕರ್ಮವನ್ನು ಧರ್ಮದಿಂದ ನಿವಾರಿಸಿಕೊಳ್ಳಬಹುದೆಂಬುದನ್ನು ತಿಳಿದುಕೊ. ಶ್ರಾವಕನಾಗಲಿ ಯತಿಯಾಗಲಿ ಅವರವರ ಧರ್ಮವನ್ನು ಅವರು ಆಚರಿಸದಿದ್ದರೆ ಸುಖಸಂತೋಷದ ನೆಲೆಯನ್ನು ಪಡೆಯಲು ಸಾಧ್ಯವಾಗುವುದೆ? ಪೂರ್ವಾರ್ಜಿತ ಪುಣ್ಯದಿಂದ ಸುಖವಾಗಿರುವಾಗಲೂ ಮುಂದಣ ಉತ್ತಮ ಫಲಕ್ಕಾಗಿ ಧರ್ಮದಿಂದಲೇ ಮುಂದುವರಿಯಬೇಕೆಂಬುದನ್ನು ಜೀವವೇ ನೀನು ಅರಿತು ನಡೆಯಬೇಕು.

ರೂಪು ಅಯು ಗುಣ ಸೌಭಾಗ್ಯ ಶಕ್ತಿ ತೇಜಸ್ಸು ವಿನಯ ಚಾತುರ್ಯ ಶೌರ್ಯ ವಿದ್ಯೆ ಸೌಂದರ್ಯ ಧೈರ್ಯ ಈ ಎಲ್ಲವೂ ಧರ್ಮದಿಂದಲ್ಲದೆ ಒದಗಲಾರವೆಂಬುದನ್ನು ಮನನಮಾಡು. ಪತ್ನಿಯನ್ನು ಪಡೆಯಬಹುದು, ಮಕ್ಲಳನ್ನು ಹಡೆಯಬಹುದು,ಧನವನ್ನು ಕೂಡಿಸಬಹುದು. ಆದರೆ ಇದಷ್ಟರಿಂದಲೇ ಸುಖ ಲಭಿಸಬಾರದು. ಮದುವೆಯಾಗಿಯೂ ಮಕ್ಕಳನ್ನು ಪಡೆದೂ ಸಂಪತ್ತನ್ನು ಹೊಂದಿಯೂ ಎಷ್ಟೆಷ್ಟೊ ಕಷ್ಟ ನಷ್ಟಗಳಿಂದ ಕುಂದಿ ಕುಂದಿ ಬಸವಳಿದು ನರಳುವ ಮನಜರನ್ನು ನೋಡಿಲ್ಲವೆ? ಇದೆಲ್ಲವನ್ನೂ ಕಂಡೂ ಕಾಣದಂತೆ ನಡೆದುಕೊಳ್ಳುವುದು ಸರಿಯೆ? ನಿಮ್ಮ ಸುತ್ತಮುತ್ತಣ ಜನರನ್ನು ಎಚ್ಚರಿಕೆಯಿಂದ ಗಮನಿಸಿ, ಧರ್ಮದಿಂದ ನಡೆದುಕೊಳ್ಳಿ, ಭವರೋಗದಿಂದ ಮುಕ್ತರಾಗಿ, ಶಾಶ್ವತ ಸುಖದತ್ತ ನಡೆಯಿರಿ ಎಂಬುದೇ ಬಂಧುವರ್ಮನ ಜೀವಸಂಬೋಧನೆಯ ಸಾರಾಂಶವಾಗಿದೆ.

ಇಂತಹ ಒಂದು ಕೃತಿಯ ನಿರ್ಮಾಣಕ್ಕೆ ಬಂಧುವರ್ಮನು ತನ್ನ ಹಿಂದಣ ಹಲವಾರು ಕೃತಿಗಳನ್ನು ಆಶ್ರಯಿಸಿರಬಹುದು. ದ್ವಾದಶಾನುಪ್ರೇಕ್ಷೆಗಳಿಗನುಸಾರಿವಾಗಿಯೇ ನಿರೂಪಣೆಗೊಂಡಿರುವ ಯಾವುದೇ ಕೃತಿ ಮೊದಲು ಕನ್ನಡದಲ್ಲಿ ದೊರೆತಿರುವುದಿಲ್ಲ. ತಮಿಳು ಭಾಷೆಯಲ್ಲಿಯೂ ಇದೇ ವಿಷಯವನ್ನೊಳಗೊಂಡ ‘ಜೀವಸಂಬೋಧನೆ’ ಎಂಬ ಕೃತಿಯಿರುವುದಾಗಿ ಪಂಡಿತ ಎಚ್. ಶೇಷಯ್ಯಂಗಾರ್ ಅವರು ತಿಳಿಸಿರುತ್ತಾರೆ. ಅದರಲ್ಲೂ ಗದ್ಯ ಪದ್ಯಗಳು ಸಮಾನವಾಗಿರುವುದಲ್ಲದೆ ಗದ್ಯವು ಪದ್ಯದ ವ್ಯಾಖ್ಯಾನವೆಂಬ ಪ್ರತೀತಿಯೂ ಉಂಟು. ಇವರೆಡಕ್ಕೂ ಈ ಬಗೆಯ ಸಾಮ್ಯವೊಂದಲ್ಲದೆ ಎಲ್ಲಾ ಬಗೆಯಲ್ಲೂ ವಿಶೇಷ ಸಾಮ್ಯವುಂಟು ಎಂದು ಕೆಲವು ಉದಾಹರಣೆಗಳನ್ನು ನೀಡಿದ್ದಾರೆ. ಕೊನೆಗೆ “ಆದರೆ ದ್ರಾವಿಡ ಭಾಷಾ ಸಾಹಿತ್ಯ ಶಾಸ್ತ್ರಗ್ರಂಥಗಳಿಗೆ ಸಾಮಾನ್ಯವಾಗಿ ಸಂಸ್ಕೃತ ಪ್ರಾಕೃತ ಗ್ರಂಥಗಳೇ ಆಧಾರವಾಗಿರುವುದರಿಂದ ಇವೆರಡಕ್ಕೂ ಮೂಲಭೂತವಾದ ಸಂಸ್ಕೃತದ ಅಥವಾ ಪ್ರಾಕೃತದ ಜೀವಸಂಬೋಧನೆ ಎಂಬ ಗ್ರಂಥವೊಂದಿದ್ದಿರಬಹುದೆಂಬ ಶಂಕೆಗೂ ಅವಕಾಶವುಂಟು” ಎಂಬ ನಿರ್ಣಯಕ್ಕೆ ಬಂದಿದ್ದಾರೆ. ಅಂತೆಯೇ ತತ್ವಾರ್ಥಸೂತ್ರ ಉತ್ತರಾಧ್ಯಯನಸೂತ್ರ ಕಾರ್ತಿಕೇಯಾನುಪ್ರೇಕ್ಷಾ ಮೊದಲಾದ ಗ್ರಂಥಗಳು ಇದಕ್ಕೆಮೂಲವಾಗಿರುವುದನ್ನು ಗುರುತಿಸಬಹುದು.

ಕುಂದಕುಂದರ ‘ಬಾರಹ ಅನುವೆಕ್ಬಾ’ ಗ್ರಂಥದ ಅಧ್ರುವಾನುಪ್ರೇಕ್ಷೆಯಲ್ಲಿ ಬರುವು

ಸಾಮಗ್ಗಿಂದಿಯ ರೂವಂ ಆರೋಗ್ಗಂ ಜೊವ್ವಣಂ ಬಲಂ ತೇಜಂ
ಸೋಹಗ್ಗಂ
ಲಾವಣ್ಣಂ ಸುರಧನುಮಿವ ಸಸ್ಸಯಂ ಹವೇ

(ಸಮಸ್ತ ಇಂದಿಯ ರೂಪ ಆರೋಗ್ಯ ಯೌವನ ಬಲ ತೇಜಸ್ಸು ಸೌಭಾಗ್ಯ ಲಾವಣ್ಯ ಇವೆಲ್ಲವೂ ಕಾಮನಬಿಲ್ಲಿನಂತೆ ಕ್ಷಣಿಕವಾದುವು.

ಜಲ ಬುಬ್ಬುವ–ಸಕ್ಕಧಣು-ಖಣರುಚಿ ಧಣಸೋಹಮಿವರ್ಥಿರಂ ಹವೇ
ಅಹಮಿಂದಟ್ಠಾಣಾಇಂ
ಬಲದೇವಪ್ಪಹುದಿ ಪಜ್ಜಾಯಾ

(ನೀರ ಮೇಲಣ ಗುಳ್ಳೆಯಂತೆ ಇಂದ್ರನ ಧನುಸ್ಸಿನಂತೆ ಮಿಂಚಿನಂತೆ ಮೋಡಗಳ ಶೋಭೆಯಂತೆ ಇಂದ್ರ ಬಲದೇವ ಮೊದಲಾದ ದೇವತೆಗಳ ಸ್ಥಾನಗಳ ಇವು ಯಾವುವೂ ಸ್ಥಿರವಾಗಿರುವುದಿಲ್ಲ)

ಈ ಮೇಲಣ ಎರಡು ಗಾಹೆಗಳಲ್ಲಿ ಬರುವ ವಿಷಯವನ್ನು ಬಂಧುವರ್ಮನ ಜೀವಸಂಬೋಧನೆಯ

ಸುರಧನುವೆಂತುಟಂತೆ ವಿಳಸಜ್ಜಳ ಬುದ್ವುದಮೆಂತುಟಂತೆ ಪೆ
ರ್ದೆರೆಯಿರವೆಂತುಟಂತೆ
ಕಿಸುಸಂಜೆಯ ರಂಜನೆಯೆಂತುಟಂತೆ ಭೂ
ಧರನದಿಯೆಂತುಟಂತೆ
ಮುಗಿಲೊಡ್ಡಣದಾಕೃತಿಯೆಂತುಟಂತೆ
ರ್ತ್ಯರ
ತನುವುಂ ಕಳತ್ರಜನಮುಂ ಧನಮುಜಂ ಬಗೆದೆಂತು ನೋೞೊಡಂ  -೧೨

ಎಂಬುದರಲ್ಲಿ ಕಾಣಬಹುದಾಗಿದೆ ಮೂಲದಲ್ಲಿನ ಕೆಲವೇ ಹೋಲಿಕೆಗಳ ಬಂದುವರ್ಮದಲ್ಲಿ ಮತ್ತೂ ಕೆಲವರೊಡನೆ ಸೇರಿ ತುಂಬಾ ಸೊಗಸಾದ ಚಿತ್ರಣ ರೂಪಗೊಂಡಿದೆ.ಮೂಲದಲ್ಲಿಲ್ಲದ ಕಿಸುಸಂಜೆಯ ರಂಜನೆ, ಭೂಧರನದಿ ಮೊದಲಾದುವು ಹೊಸ ಸೇರ್ಪಡೆಯಾಗಿವೆ. ಇದರಂತೆಯೇ ಇನ್ನೂ ಹಲವೆಡೆಗಳಲ್ಲಿ ಸಂಸ್ಕೃತ ಪ್ರಾಕೃತ ಗ್ರಂಥಗಳಿಂದ ಉಪಕೃತನಾಗಿರಬಹುದು. ಹಾಗೆಯೇ ಕನ್ನಡ ಗ್ರಂಥಗಳಿಂದಲೂ ಸಹಾಯ ಪಡೆದಿರುವುದನ್ನು ಗುರುತಿಸಬಹುದು. ಉದಾಹರಣೆಗೆ ಆಸ್ರವಾನುಪ್ರೇಕ್ಷೆಗೆ ದೃಷ್ಟಾಂತವಾಗಿ ಬರುವ ಸಗರನ ಕಥೆಯನ್ನೇ ನೋಡಬಹುದು. ಇದರಲ್ಲಿ ರನ್ನನ ಅಜಿತಪುರಾಣ ವರ್ಣನಾಭಾಗಗಳನ್ನು ಅನುಕರಿಸಿರುವುದನ್ನು ಕಾಣಬಹುದು. ಅಜಿತದಲ್ಲಿನ ‘ಕೃತಕ ಧರಾಮರವೇಷಧರನಾಗಿ ಮಣಿಕೇತು ಅಯೋಧ್ಯೆಗೆ ಬಂದು’ (೧೦-೧೦ವ) ಅಂತು ಕೆಯ್ಯ ತೊವಲ್ವೆರಸು ಮೆಯ್ಯಱೆಯದೆ ಪುಯ್ಯಲಿಡುವ ಪಾರ್ವನ ಪುಯ್ಯಲು ಆಸ್ಥಾನಮಂಟಪದೊಳೋಲಗಂಗೊಟ್ಟಿರ್ದರಸಂಕೇಳ್ದು’ (೧೦-೧೧ವ) ಎಂಬುದು ಜೀವಸಂಬೋಧನೆಯಲ್ಲಿ ‘ಪಾರ್ವನಾಗಿ ಸಗರರಾಜನ ಮನೆಯ ಬಾಗಿಲೊಳ್ ನಿಂದು ಕೆಯ್ಯೊಳ್ ತೊವಲಂ ಪಿಡಿದನ್ಯಾಯಮನ್ಯಾಯಮೆಂದುಗ್ಘಡಿಸಿ ಪುಯ್ಯಲಿಡುವುದುಮಾ ಪುಯ್ಯಲನರಸಂ ಕೇಳ್ದು’(೧-೩೭ವ) ಎಂದು ಬಂದಿರುವುದನ್ನು ನೋಡಿದಾಗ ಬಂಧುವರ್ಮನು ರನ್ನನನ್ನು ಹೇಗೆ ಅನುಸರಿಸಿದ್ದಾನೆಂಬುದು ವ್ಯಕ್ತವಾಗುತ್ತದೆ.

ಹಾಗೆಂದಮಾತ್ರಕ್ಕೆ ಬಂಧುವರ್ಮನಲ್ಲಿ ಸ್ವತಂತ್ರತೆಯಿಲ್ಲವೆಂದರ್ಥವಲ್ಲ. ಬಂಧುವರ್ಮನು ಬಹುಪ್ರತಿಭಾವಂತನಾಗಿ ಮಹಾಕವಿಯೆನಿಸಿದಿದ್ಧರೂ ಮನಃಪರಿಪಕ್ವತೆಯನ್ನು ಪಡೆದ ಸತ್ಯವಿಯೆಂಬ ಹೆಗ್ಗಳಿಕೆ ಪಾತ್ರನಾಗಿದ್ದಾನೆ. ಈತನ ವರ್ಣನೆಗಳಲ್ಲಿ ಸರಳತೆ ಎದ್ದು ಕಾಣುತ್ತದೆ. ಇತರ ಚಂಪೂಕಾವ್ಯಗಳಲ್ಲಿ ಕಂಡುಬರುವ ಸಂಸ್ಕೃತಭೂಯಿಷ್ಠತೆಯಾಗಲಿ, ವರ್ಣನಾಡಂಬರವಾಗಲಿ ಇರುವುದಿಲ್ಲ. ಸಂಸಾರ ನಶ್ವರ, ಸಾವನ್ನು ತಪ್ಪಿಸಲು ಯಾರಿದಂಲೂ ಸಾಧ್ಯವಿಲ್ಲ ಎಂಬುದನ್ನು

ಯಂತ್ರಂಗಳುಮಮಿತ ಮಹಾ
ಮಂತ್ರಗಳುಮನುಪಮಾನಮೆನಿಸಿದ
ಪಲವುಂ
ತಂತ್ರಂಗಳುಮೇಂ
ಕಾವುವೆ
ಸಂತ್ರಸಕರೋಗ್ರ
ಮೃತ್ಯುರಾಜನ ಬರವಂ-೫

ಎಂದು ಬಹು ಸರಳ ಸುಂದರನಾಗಿ ನಿರೂಪಿಸಿದ್ದಾನೆ. ಜೀವನು ಜನ್ಮ ಜನ್ಮಾಂತರಗಳನ್ನು ಹೊಂದಿ ಹುಟ್ಟುವಾಗ ಮಗನೇ ತಂದೆಯಾಗುವ, ಮಗಳೇ ಹೆಂಡತಿಯಾಗುವ ವಿಚಿತ್ರ ಸನ್ನಿವೇಶಗಳ ಚಿತ್ರಣವನ್ನು ವಸಂತತಿಲಕೆಯ ಕಥೆಯಲ್ಲಿ ಹೃದಯಂಗಮವಾಗಿ ವಿವರಿಸಿದ್ದಾನೆ. ಇಲ್ಲಿ ಆತನು ಸಹೃದಯರನ್ನು ಸಮ್ಮೋಹನಗೊಳಿಸಿ ಅವರು ಬಾಹ್ಯವನ್ನು ಮರೆಯುವಂತಹ ಸನ್ನಿವೇಶವನ್ನು ಯಶಸ್ವಿಯಾಗಿ ನೀಡುತ್ತಾನೆ, ಕಮಳೆಯು ಮಗುವನ್ನು ತೂಗುತ್ತಾ.

ಜೋ ನೀಂ ಮಗನೇ ತಮ್ಮನೆ
ಜೋ
ನೀನಳಿಯಮ್ಮ ಮೆಯ್ದುನಾ ಕೆಱೆಯಮ್ಮಾ
ಜೋ
ನಿಮ್ಮಬ್ಬೆಗೆ ಮೊಮ್ಮನೆ
ಜೋ
ನಿಮ್ಮಮ್ಮಂಗೆ ತಮ್ಮನಪ್ಪನೆ ಜೋ ಜೋ-೩೩

ಜೋ ನಿನಗಾದ ತಾಯೆನಗೆ ತಾಯ್ವಿರುಮಕ್ಕನುಮತ್ತೆಯುಂ ದುರ
ಜ್ಞಾನದಿನೊಂದಿದತ್ತಿಗೆಯುಮಾದಳಿದಬ್ಬೆಯ
ಪಾಪದೋಳಿ ಜೋ
ಜೋ
ನಿನಗಾದ ತಂದೆಯೆನಗಣ್ಣನುಮಾಣ್ಮನುಮಯ್ಯನಾದನಿಂ
ತಾನೆಯಿದಣ್ಣ
ನಮ್ಮ ಕಡುಪಾಪದ ಬಂಧನಮಲ್ತೆ ಬಾಲಕಾ-೩೪

ಎಂಬ ವರ್ಣನೆಯಿಂದ ಕಥಾಸನ್ನೆವೇಶವನ್ನು ಬಲ್ಲ ಯಾರಾದರೂ ತಲ್ಲಣಗೊಳ್ಳುತ್ತಾರೆ.

ವಿಷಯ ನಿರೂಪಣೆಗೆ ಸಹಾಯಕವಾಗಿ ಕುರುಡಂ ಲಾವುಗೆ ಮೆಟ್ಟುದಂತೆ, ಮೆಚ್ಚುವಂತೆ ಕುಱೆ ತಿಂಬವರಂ, ಮೞೆಯ ನೀರಂ ನಂಬಿ ಡೊಣೆಯ ನೀರಂ ತುಳುಂಕುವವನಂತೆ, ಸೂಜಿಯ ಬೞಿಯ ದಾರದಂತೆ’ ಎಂಬಿವೇ ಮೊದಲಾದ ಉಪಮೆಗಳನ್ನೂ ಗಾದೆಮಾತುಗಳನ್ನು ಧಾರಾಳವಾಗಿ ಬಳಸಿದ್ದಾನೆ. ಮಾನವನು ಮೋಕ್ಷವನ್ನು ಪಡೆಯಲು ಅನುಸರಿಸಬೇಕಾದ ಮಾರ್ಗವನ್ನು ಹಸುವಿನ ಹಾಲು ತುಪ್ಪವಾಗುವ ವಿವಿಧ ಘಟ್ಟಗಳಿಗೆ ಹೋಲಿಸಿರುವುದು (೧೨೧೨ವ) ಅಂತೆಯೇ ಕರ್ಮನಿವಾರಣೆಯಿಂದ ಮೋಕ್ಷವನ್ನು ಪಡೆಯಬೇಕೆನ್ನುವ ಭವ್ಯನ ಶಿಕ್ಷಭ್ಯಾಸವನ್ನು ಸುರಿಗೆಕಾಳೆಗ ಕಲಿತ ವೀರನಿಗೆ ಹೋಲಿಸಿರುವುದು (೩-೨೦ವ) ಧರ್ಮವನ್ನು ಕೈಗೊಳ್ಳುವವನು ಕರೆವ ಹಸುವನ್ನು ಆಹಾರದಿಂದ ತಣಿಸಿ ನಯದಿಂದ ಹಾಲನ್ನು ಕರೆದುಕೊಳ್ಳುವಂತೆ ಭವ್ಯನು ಗುಣವಂತರಾದ ಆಚಾರ್ಯರನ್ನು ಶಿಷ್ಯನಾಗಿ ಸೇರಿ ವ್ರತವನ್ನು ಕೈಗೊಳ್ಳಬೇಕು. ಕರೆದ ಹಾಲನ್ನು ಒಲೆಯಮೇಲಿಟ್ಟು ಕೆಡದಂತೆ ಕಾಯಿಸಿ ಆರಿಸುವಂತೆ ಶ್ರಾವಕಧರ್ಮವನ್ನು ಕೈಗೊಂಡ ಬಳಿಕ ದೀಕ್ಷೆಯಿಂದ ಶರೀರವನ್ನು ವಶಮಾಡಿಕೊಂಡು ವಿಷಯಕಷಾಯಗಳು ಅಡಗುವಂತೆ ತಪಸ್ಸು ಮಾಡಿ ಎಂಬಿವು ಬಹು ಮನೋಹರವಾಗಿವೆ.

ಒಟ್ಟಿನಲ್ಲಿ ಇದು ಒಂದು ಶಾಸ್ತ್ರಗ್ರಂಥವಾಗಿರದೆ ಕಾವ್ಯವಾಗಿ ರೂಪುಗೊಂಡಿದೆ. ಇದನ್ನು ಓದುತ್ತಾ ಹೋದಂತೆ ಸಹೃದಯನ ಮನಸ್ಸು ಅದರಲ್ಲೇ ಲೀನವಾಗುವಂತಹ ಉತ್ಕೃಷ್ಟ ರೀತಿಯ ವರ್ಣನೆಯನ್ನು ಇಲ್ಲಿ ಕಾಣಬಹುದು. ಇಂತಹ ಕೃತಿ ಜನತೆಗೆ ದೊರೆಯಲೆಂಬ ಬಯಕೆಯಿಂದ ಇದನ್ನು ಸಂಪಾದಿಸಿದೆನು. ನನ್ನ ಉದ್ದೇಶಕ್ಕೆ ತಕ್ಕಂತೆ ಪ್ರಾಚೀನವೂ ಶುದ್ಧವೂ ಆದ ಎರಡು ಹಸ್ತಪ್ರತಿಗಳನ್ನೂ, ಅವಕ್ಕೆ ಹತ್ತಿರವೆಂದು ಕಂಡುಬಂದ ಮತ್ತೆರಡು ಪ್ರತಿಗಳನ್ನೂ ಸಂಪದನಾ ಕಾರ್ಯಕ್ಕೆ ಬಳಸಿದ್ದೇನೆ.

ಹರಿವಂಶಾಭ್ಯುದಯಂ

ಈಗ ದೊರೆತಿರುವ ಕನ್ನಡ ನೇಮಿನಾಥಪುರಾಣಗಳಲ್ಲಿ ‘ಹರಿವಂಶಾಭ್ಯುದಯ’ ಎಂಬ ಹೆಸರನ್ನು ಹೊತ್ತಿರುವ ಕೃತಿಯೆಂದರೆ ಬಂಧವರ್ಮನದೇ ಆಗಿದೆ. ಕರ್ಣಪಾರ್ಯ ನೇಮಿಚಂದ್ರರು ತಮ್ಮ ಕೃತಿಗಳಿಗೆ ನೇಮಿನಾಥಪುರಾಣ ಎಂದು ಹೆಸರಿಟ್ಟರೂ ಅದನ್ನನುಸರಿಸದ ಬಂಧುವರ್ಮನು ತನ್ನ ಹೆಸರಿನಲ್ಲಿ ವೈಶಿಷ್ಯ್ಟತೆಯನ್ನು ಮೆರೆದಿದ್ದಾನೆ. ನೇಮಿನಾಥನು ಹರಿವಂಶೋದ್ಭವನಾದುದರಿಂದಲೇ ಈ ಕಾವ್ಯಕ್ಕೆ ಹರಿವಂಶಾಭ್ಯುದಯ ಎಂಬ ಹೆಸರಿಟ್ಟಿರುವಂತೆ ತೋರುತ್ತದೆ. ಅಲ್ಲದೆ ಮೊದಲೆಯ ಗುಣವರ್ಮನು ರಚಿಸಿರುವನೆಂದು ಹೇಳುವ ‘ಹರಿವಂಶ ಹೆಸರೂ’ ಇದಕ್ಕೆ ಪ್ರೇರಕವಾಗಿರಬಹುದು.

ಈ ಕೃತಿಯು ಚಂಪೂಕೃತಿಯಾಗಿದ್ದು ೧೪ ಆಶ್ವಾಸಗಳನ್ನೊಳಗೊಂಡಿದೆ. ಈ ಕೃತಿಯಲ್ಲಿ ಕವಿ ಗದ್ಯಪದ್ಯಗಳನ್ನು ಸಮಸಮನಾಗಿ ಉಪಯೋಗಿಸಿ ಉತ್ತಮ ವರ್ಣನೆಗಳಿಂದ ಹಲವಾರು ಉಪಮಾನಗಳಂದ ಕಾವ್ಯದ ಸೊಗಸನ್ನು ಹೆಚ್ಚಿಸಿದ್ದಾನೆ. ಇದರಲ್ಲಿ ಕಂಡುಬುರುವ ನೇಮಿನಾಥನ ಕಥಾಭಾಗ ಸ್ವಲ್ಪವಾದರೂ ಪೂರ್ವಭಾವಿಯಾಗಿ ಬರುವ ಹರಿವಂಶ ಕುರುವಂಶಗಳ ಹಾಗೂ ಚಾರುದತ್ತ ಪ್ರಕರಣದ ನಿರೂಪಣೆಯಲ್ಲಿ ಕಂಡುಬರುವು ಸೊಗಸು ಮನನೀಯವಾಗಿದೆ.

ಕಥಾಸಾರ:

ಸಕಲಸಂಪದ್ಭರಿತವಾದ ರಾಜಗೃಹವೆಂಬ ಪಟ್ಟಣದಲ್ಲಿ ಶ್ರೇಣಿಕ ಮಹಾರಾಜನಿದ್ದನು. ಆತನ ಮನವಿಯ ಮೇರೆಗೆ ವರ್ಧಮಾನ ಭಟ್ಟಾರಕನು ಈ ಕಥೆಯನ್ನು ಹೇಳಿದರು. ಇಕ್ಷ್ವಾಕು ಉಗ್ರ ಕುರು ನಾಥ ಭೋಜ ಎಂಬ ಐದು ಕ್ಷತ್ರಿಯ ವಂಶಗಳಲ್ಲಿ ಹರಿವಂಶವೆಂಬ ಪಟ್ಟಣದ ಪ್ರಭಂಜನರಾಜನಿಗೂ ಮೃಕಂಡುವೆಂಬ ಅರಸಿಗೂ ಮಾರ್ಕಂಡೇಯನು ಹುಟ್ಟಿದನು. ಮಾರ್ಕಂಡೇಯನು ಖೇಚರನ ಮಗಳದ ವಿದ್ಯುನ್ಮಾಲೆಯನ್ನು ಮದುವೆಯಾದನು. ಚಿತ್ರಾಂಗದನೆಂಬ ಪೂರ್ವಭವವೈರಿಯಾದ ಚಿತ್ರಾಂಗದೇವನು ಮಾರ್ಕಂಡೇಯನನ್ನು ಹೊತ್ತುಕೊಂಡುಹೋಗಿ ಸೂರ್ಯಪ್ರಭದೇವನಿಗೊಪ್ಪಿಸಿದನು.

ಭೋಜವಂಶದ ಚಂದ್ರಕೀರ್ತಿಯೆಂಬ ರಾಜನಿಗೆ ಮಕ್ಕಳಿಲ್ಲದಿರಲು ಆತನು ಮಾರ್ಕಂಡೇಯ ಮತ್ತು ವಿದ್ಯುನ್ಮಾಲೆಯರನ್ನು ಹಿರಯ ಮಗ ಮತ್ತು ಹಿರಿಯ ಸೊಸೆಯರೆಂದು ಒಪ್ಪಿ ಅವರಿಗೆ ರಾಜ್ಯವನ್ನೊಪ್ಪಿಸಿ ತಾನು ತಪಸ್ಸಿಗೆ ನಡೆದನು.

ಹರಿವಂಶದವನಾದ ಮಾರ್ಕಂಡೇಯನು ಭೋಜವಂಶಕ್ಕೆ ಉತ್ತರಾಧಿಕಾರಿಯಾಗಿ ವಿದ್ಯುನ್ಮಾಲೆಯ ಮಗನಿಗೆ ಹರಿ ಎಂಬ ಹೆಸರಿಟ್ಟನು. ಮುಂದೆ ಈ ವಂಶದಲ್ಲಿ ಮಹಾಗಿರಿ ಹಿಮಗಿರಿ ಮೊದಲಾದ ಅನೇಕ ರಾಜರು ರಾಜ್ಯವಾಳಿದರೂ ಈ ವಂಶದಲ್ಲಿ ಬಂದ ಅಂಧಕ ವೃಷ್ಣಿಗೆ ಸುಭದ್ರೆ ಎಂಬ ಪತ್ನಿಯಲ್ಲಿ ಸಮುದ್ರವಿಜಯ ಮೊದಲಾದ ಹತ್ತು ಜನ ಗಂಡುಮಕ್ಕಳೂ ಕೊಂತಿ ಮಾದ್ರಿ ಎಂಬ ಹೆಣ್ಣುಮಕ್ಕಳೂ ಜನಿಸಿದರು. ಅಂಧಕವೃಷ್ಣಿಯು ಸಮುದ್ರವಿಜಯನಿಗೆ ರಾಜ್ಯವನೊಪ್ಪಿಸಿ ತಾನು ದೀಕ್ಷಾಬದ್ಧನಾದನು. ಎಲ್ಲರಿಗಿಂತ ಕಿರಿಯನಾದ ವಸುದೇವನು ಅಕ್ಷರಕಲಾಭ್ಯಾಸಾದಿ ಚತುಷ್ಷಷ್ಟಿ ಕಲೆಗಳಲ್ಲಿ ಪರಿಣತನಾಗಿ ಪರಾಕ್ರಮಿಯೂ ಸುಂದರನೂ ಆಗಿ ಶೋಭಿಸಿದನು. ಆತನನ್ನು ನೋಡಿದ ಕಣ್ಣುಗಳು ಸಫಲವೆನ್ನುವಂತಿದ್ದು ಆತನ ರೂಪುಸೊಬಗುಗಳಿಗೆ ಪರಸ್ತ್ರೀಯರು ಮಾರುಹೋಗಿ ತಮ್ಮ ಗಂಡಂದಿರನ್ನೇ ಮರೆಯುವಂತಾದರು. ಇದರಿಂದ ನೊಂದ ಪುರಜನರು ಸಮುದ್ರವಿಜಯನಿಗೆ ದೂರಿತ್ತರು. ಸಮುದ್ರವಿಜಯನು ಉಪಾಯದಿಂದ ವಸುದೇವನನ್ನು ಹೊರಗೆಲ್ಲಿಯೂ ಹೋಗದಂತೆ ನಂದನವನದಲ್ಲಿರಿಸಿದನು.

ಇದನ್ನರಿತ ವಸುದೇವನು ಅಣ್ಣನ ಕಾರ್ಯದಿಂದ ಮನನೊಂದು ದೇಶತ್ಯಾಗ ಮಾಡಿದನು. ಆತನು ವಿಜಯಖೇಡವೆಂಬ ಪಟ್ಟಣಕ್ಕೆ ಬಂದು ಜಿತಶತ್ರುಮಹಾರಾಜನ ಮಕ್ಕಳಾದ ವಿಜಯೆ ಮತ್ತು ಜಯಸೇನೆಯರ ಸ್ವಯಂವರವಾರ್ತೆಯನ್ನು ಕೇಳಿ ಅಲ್ಲಿ ಹೋಗಿ ಗೀತನಾಟ್ಯಗಳಿಂದ ಗೆದ್ದು ಅವರನ್ನು ವರಿಸಿ ರಾಜನ ಘೋಷಣೆಯಂತೆ ಅರ್ಧರಾಜ್ಯವನ್ನು ಪಡೆದನು. ಮುಂದೆ ಆತನು ಶಾಲ್ಮಲಿದತ್ತೆಯನ್ನು ಮದುವೆಯಾದನು. ಮತ್ತೆ ಚಂಪಾಪುರಕ್ಕೆ ಬಂದ ವಸುದೇವನು ಚಾರುದತ್ತನ ಮಗಳನ್ನು ವಿವಾಹವಾದನು.

ವಸುದೇವನು ಕೂತೂಹಲದಿಂದ ಚಾರುದತ್ತನ ವೃತ್ತಾಂತವನ್ನು ತಿಳಿಸಬೇಕೆಂದು ಗಾಂಧರ್ವಾಚಾರ್ಯರನ್ನು ಕೇಳಿಕೊಂಡನು. ಅವರು ಚಾರದತ್ತನ ವೃತ್ತಾಂತವನ್ನು ನಿರೂಪಿಸಿದರು.

ಚಾರುಗಳ ಆದೇಶದಂತೆ ಹುಟ್ಟಿದ ಮಗನಿಗೆ ಚಾರುದತ್ತನೆಂದು ಹೆಸರಿಟ್ಟನು. ಚಾರುದತ್ತನು ಗಳಿಸಿದ ವಿದ್ಯೆ ಅಪಾರವಾದುದು. ಮದುವೆಯಾದರೂ ಪತ್ನಿಯನ್ನು ಮರೆತು ವಿದ್ಯಾಭ್ಯಾಸದಲ್ಲಿ ನಿರತನಾದ ಆದರ್ಶಶಾಸ್ತ್ರಾಭ್ಯಾಸಿಯಾದ ಆತನನ್ನು ಪತ್ನಿಯ ಕಡೆಗೆ ಮನವೊಲಿಸಲು ತಾಯಿಯು ರುದ್ರದತ್ತನೆಂಬುವನನ್ನು ಮಗನ ಜೊತೆಗೆ ಸೇರಿಸಿದಳು. ಚಾರುದತ್ತನು ವಸಂತತಿಳಕೆ ಎಂಬ ವೇಶ್ಯೆಯೊಡನೆ ಕೂಡಿ ಮನೆಯ ಹಣವನ್ನೆಲ್ಲಾ ಕಳೆದನು. ಹಣವಿಲ್ಲದಾದಾಗ ವೇಶ್ಯೆಯ ಮನೆಯಿಂದ ಹೊರದೂಡಿದಾಗ ಚಾರುದತ್ತನಿಗೆ ಜ್ಞಾನೋದಯವಾಗಿದೆ ವ್ಯಾಪಾರದಿಂದ ಹಣವನ್ನು ಗಳಿಸಬೇಕೆಂಬ ಛಲದಿಂದ ಹೊರಟು ಹಲವು ಅಪಾಯಗಳನ್ನು ಎದುರಿಸಿಯೂ ಗುರಿಸಾಧಿಸುವುದರಲ್ಲಿ ಯಶಸ್ವಿಯಾದನು. ಕೊನೆಯಲ್ಲಿ ಪಟ್ಟಣಕ್ಕೆ ಹಿಂದಿರುಗಿದ ಚಾರುದತ್ತನು ಪತ್ನಿ ಮಿತ್ರಾವತಿ ಮತ್ತು ತಾಯಿ ದೇವಿಲೆಯೊಡನೆ ಸುಖವಾಗಿದ್ದನು.

ಇತ್ತ ಸಮುದ್ರವಿಜಯ ತಮ್ಮನಾದ ವಸುದೇವನು ದೇಶಾಂತರ ಹೋಗಿ ತನ್ನ ಶೌರ್ಯವೀರ್ಯಗಳಿಂದ ಹಲವು ಸ್ಪರ್ಧೆಗಳಲ್ಲಿ ಜಯಶೀಲನಾಗಿ ಗಾಂಧರ್ವದತ್ತೆ ಕೇತುಮತಿ ಪ್ರಭಾವತಿ ಮೊದಲಾದ ಹಲವರನ್ನು ಮದುವೆಯಾಗಿ ಅಂತ್ಯದಲ್ಲಿ ಅಣ್ಣ ಸಮುದ್ರವಿಜಯನೊಡನೆ ಕೂಡಿ ಸುಖವಾಗಿದ್ದನು.

ವಸುದೇವನು ಪತ್ನಿ ದೇವಕಿಯ ಗರ್ಭದಲ್ಲಿ ಹುಟ್ಟಿದ ಮಗನಿಂದ ಕಂಸನ ವಧೆಯಾಗುವುದೆಂದು ತಿಳಿದ ಕಂಸನು ಆಕೆಯನ್ನು ತನ್ನ ಮನೆಯಲ್ಲಿರಿಸಿಕೊಂಡನು. ದೇವಕಿಗೆ ಹುಟ್ಟಿದ ಮಕ್ಕಳನ್ನೆಲ್ಲಾ ಕೊಲ್ಲಲು ಕಂಸನು ನಿಶ್ಚಯಿಸಿದುದರಿಂದ ನೈಗಮದೇವನು ಮಾಯಾಶಿಶುಗಳನ್ನು ಅಲ್ಲಿರಿಸಿ ನಿಜಶಿಶುಗಳನ್ನು ಬೇರೆಡೆಗೆ ಕೊಂಡೊಯ್ಯುತ್ತಿದ್ದನು. ಹಾಗೆಯೇ ಕೃಷ್ಣನು ನಂದಗೋಕುಲದಲ್ಲಿ ಬೆಳೆದನು. ಇದನ್ನು ತಿಳಿದ ಕಂಸನು ಆತನನ್ನು ಕೊಲ್ಲಲು ಕಳುಹಿಸಿದ ಎಲ್ಲರನ್ನೂ ಸಂಹರಿಸಿದನು. ಕೊನೆಗೆ ಕಂಸನೂ ಆತನಿಂದ ಹತನಾದನು.

ಇಂದ್ರನ ಅಣತಿಯಂತೆ ದ್ವಾರಾವತಿ ಪಟ್ಟಣ ನಿರ್ಮಾಣವಾಯಿತು. ಅವರಲ್ಲಿ ಕೃಷ್ಣನು ರುಕ್ಮಿಣಿ ಸತ್ಯಭಾಮೆಯರೊಡನೆ ಸುಖವಾಗಿದ್ದನು. ಹರವಂಶದ ಹಿರಿಯ ಮಗನಾದ ಸಮುದ್ರ ವಿಜಯನಿಗೆ ರಾಣಿ ಶಿವದೇವಿಯ ಗರ್ಭದಲ್ಲಿ ನೇನಿಜಿನನಾಥನು ಜನಿಸಿದನು. ದೇವೇಂದ್ರಾದಿಗಳು ಜಿನಶಿಶುವನ್ನು ಪೂಜಿಸಿ ಹಿಂದಿರುಗಿದರು.

ವೃಷಭಜಿನೇಂದ್ರನಿಂದ ಉತ್ಪತ್ತಿಯಾದ ಕ್ಷತ್ರಿಯ ವಂಶಗಳಲ್ಲಿ ಒಂದಾದ ಕುರುವಂಶದಲ್ಲಿ ಸೋಮಪ್ರಭನೆಂಬ ರಾಜನು ಹಲವು ಕಾಲ ರಾಜ್ಯವಾಳಿದನು. ಆ ವಂಶದಲ್ಲಿ ಹಸ್ತಿಯೆಂಬುವವನು ಹಸ್ತಿನಾಪುರದಲ್ಲಿ ರಾಜ್ಯಭಾರಮಾಡಿದ್ದು ಆ ಸಂತತಿಯಲ್ಲಿ ಜನಿಸಿದ ಗಾಂಗೇಯನು ಬ್ರಹ್ಮಚರ್ಯವ್ರತವನ್ನು ಸ್ವೀಕರಿಸಲು ಶಾಂತನುಮಹಾರಾಜನು ಸತ್ಯವತಿಯನ್ನು ಮದುವೆಯಾದನು. ಮುಂದೆ ವಿಚಿತ್ರ ಎಂಬುವವನಿಗೆ ಅಂಬೆ ಅಂಬಿಕೆ ಅಂಬಾಲೆಯರಲ್ಲಿ ದೃತರಾಷ್ಟ್ರ ಪಾಂಡು ವಿದುರರೆಂಬ ಮಕ್ಕಳಾದರು. ಪಾಂಡುರಾಜನಿಗೆ ಕುಂತಿ ಎಂಬ ರಾಣಿಯಲ್ಲಿ ಕರ್ಣ ಯುದಿಷ್ಠಿರ ಮೊದಲಾದ ಆರು ಜನ ಮಕ್ಕಳಾದರು. ವಿವಾಹಕ್ಕೆ ಪೂರ್ವದಲ್ಲಿಯೇ ಹುಟ್ಟಿದ ಕರ್ಣನನ್ನು ನದಿಯಲ್ಲಿ. ಬಿಟ್ಟುದರಿಂದ ಆ ಮಗುವು ರಾಧೆಯೆಂಬುವಳಲ್ಲಿ ಬೆಳೆದು ರಾಧೇಯನಾದನು.

ದೃತರಾಷ್ಟ್ರನು ಕುರುವಂಶಕ್ಕೆ ಹಿರಿಯನಾದುದರಿಂದ ಆತನ ಮಕ್ಕಳು ಕೌರವರಾದರು. ಪಾಂಡುರಾಜನ ಮಕ್ಕಳು ಪಾಂಡರಾದರು. ದಾಯಾದಿ ಮಾತ್ಸರ್ಯದಿಂದ ಈ ಇಬ್ಬರೂ ಬೇರೆ ಬೇರೆಯಾದರು. ಅತ್ಯಂದಲ್ಲಿ ಯುದ್ಧವಾಗಿ ಕೌರವಪಡೆಯು ನಾಶವಾಯಿತು. ದುರ್ಯೋಧನನು ಇಹಲೋಕವನ್ನು ತ್ಯಜಿಸಿದನು.

ಶ್ರೀಕೃಷ್ಣನು ತನ್ನ ವೈರಿಗಳಾಗಿದ್ದ ಜರಾಸಂಧಾದಿಗಳನ್ನು ಕೊಂದು ಪಟ್ಟಾಭಿಷಕ್ತನಾದನು. ಬಲರಾಮನು ನೇಮಿಕುಮಾರನಿಗೆ ಮದುವೆಮಾಡಲು ನಿಶ್ಷಯಿಸಿ ಅದಕ್ಕೆ ರಾಜೀಮತಿ ಮೊದಲಾದ ಐನೂರು ಜನ ಕನ್ಯೆಯರನ್ನು ಗೊತ್ತುಮಾಡಿದರು. ವಿವಾಹಸಂದರ್ಭದ ಔತಣಕೂಟಕ್ಕಾಗಿ ಹಲವಾರು ಪ್ರಾಣಿಗಳನ್ನು ಕೂಡಿಹಾಕಿದ್ದುದನ್ನು ತಿಳಿದ ನೇಮಿಕುಮಾರನು ವೈರಾಗ್ಯ ಪರನಾದನು. ದೇವೇಂದ್ರಾದಿಗಳು ಕುಮಾರನಿಗೆ ಪರಿನಿಷ್ಕ್ರಮಣ ಕಲ್ಯಾಣವನ್ನು ನೆರವೇರಿಸಿದರು. ಅವರು ಕುಮಾರನನ್ನು ಸಿವಿಗೆಯನ್ನೇರಿಸಿ ಕೊಂಡೊಯ್ದು ಪೂಜಿಸಿದರಯ. ದೀಕ್ಷೆಯನ್ನು ಕೈಗೊಂಡ ನೇಮಿಯು ಶುಕ್ಲಧ್ಯಾನ ಸಂಪೂರ್ಣತೆಯಿಂದ ಕೇವಲಜ್ಞಾನೋದಯವನ್ನು ಪಡೆದನು.

ಇತ್ತ ಕೆಲವು ಕಾಲಾನಂತರ ದ್ವಾರಾವತಿ ಹತ್ತಿಉರಿಯಿತು. ಕೃಷ್ಣ ಬಲರಾಮರು ಮಡಿದರು. ಮಧುರೆಯಲ್ಲಿ ರಾಜ್ಯವಾಳುತ್ತಿದ್ದ ಪಾಂಡವರ ಇದೆಲ್ಲವನ್ನು ಕೇಳಿ ದುಃಖಿತರಾಗಿ ಲೌಕಿಕ ಕ್ರಿಯೆಯನ್ನು ಮಾಡಿದರು. ದುರ್ಯೋಧನನ ಮೊಮ್ಮಗನಾದ ಕಯವರನಿಂದ ಹತರಾದ ಪಾಂಡವರು ಮುಕ್ತಿಯನ್ನು ಪಡೆದರು.

ಶ್ರೀನೇಮಿಭಟ್ಟಾರಕರ ಸಮವಸರಣವು ವಿಹಾರಿಸುತ್ತಾ ಧರ್ಮಾಮೃತವೃಷ್ಣಿಯನ್ನು ಕರೆಯುತ್ತಾ ಜಯಂತಗಿರಿಯನ್ನು ಸೇರಿತು. ಅಲ್ಲಿ ನೇಮಿಭಟ್ಟಾರಕರು ಮೋಕ್ಷಲಕ್ಷ್ಮಿಗೆ ಒಡೆಯರಾದರು.

ಆಕರ:

ಬಂಧುವರ್ಮನ ಈ ಕಥೆಗೆ ಮೂಲವಾವುದೆಂಬುದನ್ನು ನೋಡುವುದಾದರೆ ಈತನಿಗಿಂತ ಮೊದಲಿದ್ದ ಕೆಲವು ಪುರಾಣಗಳನ್ನು ಪರಿಶೀಲಿಸಬೇಕಾಗುತ್ತದೆ.ಸಂಸ್ಕೃತದಲ್ಲಿ ಗುಣಭದ್ರನ ಉತ್ತರಪುರಾಣದ ಕಥೆ ಕನ್ನಡ ಪುರಾಣಗಳಿಗೆ ಮೂಲವಾಗಿರುವಂತೆ ಬಂದುವರ್ಮನ ಹರಿವಂಶಾಭ್ಯುದಯಕ್ಕೂ ಆಕರವಾಗಿರಬಹುದು. ಆದರೆ, ಇಲ್ಲಿ ನೇಮಿನಾಥ ತೀರ್ಥಂಕರ ಕಥೆಯ ಮೊದಲಲ್ಲಿ ಬರುವ ಅರ್ಹದ್ದಾಸ, ಅಪರಾಜಿತ-ಮೊದಲಾದವರ ಕಥೆ ಹರಿವಂಶಾಭ್ಯುದಯದಲ್ಲಿ ಕಂಡುಬರುವುದಿಲ್ಲ. ಉ.ಪು.ದಲ್ಲಿ ಸ್ವಲ್ಪಕಥಾಭಾಗವನ್ನು ಕಳೆದು ಮುಂದೆ ಬರುವ ಪ್ರಭಂಜನ ಮತ್ತು ಮೃಕಂಡು ದಂಪತಿಗಳ ಕಥೆಯಿಂದ ಇಲ್ಲಿ ಕಥೆ ಪ್ರಾರಂಭವಾಗುತ್ತದೆ. ಕರ್ಣಪಾರ್ಯ ಮತ್ತು ನೇಮಿಚಂದ್ರರು ತಮ್ಮ ನೇಮಿನಾಥ ಪುರಾಣಗಳಲ್ಲಿ ಉತ್ತರಪುರಾಣದ ಕಥೆಯನ್ನೇ ಅನುಸರಿಸಿದ್ದಾರೆ.

ಕರ್ಣಪಾರ್ಯನ ನೇಮಿನಾಥಪುರಾಣ ಮತ್ತು ಬಂಧುವರ್ಮನ ಹರಿವಂಶಾಭ್ಯುದಯಲ್ಲಿ ಕಂಡುಬರುವ ಚಾರುದತ್ತ ಉತ್ತರಪುರಾಣದಲ್ಲಿ ಕಂಡುಬರುವುದಿಲ್ಲ.ಈ ಕಥೆಯನ್ನು ಇಬ್ಬರೂ ಜಿನಸೇನಾಚಾರ್ಯರ ಹರಿವಂಶದಿಂದ ತೆಗೆದುಕೊಂಡಿರುವಂತೆ ತೋರುತ್ತದೆ. ಸದ್ಯಕ್ಕೆ ನಿರ್ಣಯವಾಗಿರುವಂತೆ ಬಂಧುವರ್ಮನು ಕರ್ಣಪಾರ್ಯನಿಗಿಂತ ಈಚಿನವನಾದುದರಿಂದ ಗುಣಬದ್ರ ಮತ್ತು ಕರ್ಣಪಾರ್ಯರಿಬ್ಬರ ಕಾವ್ಯಗಳಿಂದಲೂ ತನ್ನ ಗ್ರಂಥಕ್ಕೆ ಉಪಯೋಗ ಪಡೆದಿರಬಹುದು. ಅದರಲ್ಲಿಯೂ ಕಾವ್ಯದುದ್ದಕೂ ಕರ್ಣಷಾರ್ಯನನ್ನೇ ಅನುಸರಿಸಿರಿವುದು ಕಂಡುಬರುತ್ತದೆ.