ಕಂ || ಶ್ರೀ ವಾಸುಪೂಜ್ಯಜಿನತೀ
ರ್ಥಾವಾಸದೊಳಿಂತು ವಿಮಳ ಧರ್ಮಾಮೃತಮಂ
ಸೇವಿಸುತಮಮಿತಬಲ ವಸು
ದೇವಂ ಶುಭಚರಿತನೆರ್ದು ವಿನಯಸಮೇತಂ ೧

ವ || ವಂದಿಸಿ ಪೊಱಮಟ್ಟು ನೋೞ್ಪೂಗಳಾ ಜಿನಾಲಯದ ಮುಂದಣ ವಿಶಾಲ ಪಟ್ಟಶಾಲೆಯೊಳ್ ವೀಣಾಶರೀರಮಂಬೆರಡುಂ ತೆಱದ ಗಾಂಧರ್ವವಿದ್ಯಾಭ್ಯಾಸಂಗೆಯ್ವ ಪಲರುಂ ಛಾತ್ರರ ನಡುವೆ ಸುಗ್ರೀವವೆಸರ ಗಾಂಧರ್ವಾಚಾರ್ಯರಿಂದಂ ಶೋಭೆವೆತ್ತಿರ್ದುದಂ ಕಂಡು ಪೋಪುದುಮವರೀತನ ಶುಭಲಕ್ಷಣಾಳಂಕೃತಮಪ್ಪ ಶರೀರಮಂ ಕಂಡು ಬಿಜಯಂಗೆಯ್ಯಿಮೆಂದು ಕೆಲದೊಳ್ ಕುಳ್ಳಿರಿಸೆ ಕುಳ್ಳಿರ್ದೀ ಪೊೞಲೊಳಗೆಲ್ಲೆಡೆಯೊಳಂ ವೀಣಾವಾದ್ಯಮಂ ಪಲರುಂ ಪಿಡಿದರ್ಪರಿದೇಕಾರಣಮೆಂದೊಡೀ ಪೊೞಲ ರಾಜಶ್ರೇಷ್ಠಿ ಚಾರುದತ್ತನೆಂಬೊನಾತನ ಮಗಳ್

ಕಂ || ಗಾಂಧರ್ವದತ್ತೆಯೆಂಬೊಳ್
ಗಾಂಧರ್ವಕಳಾವಿದಗ್ಧೆ ವೀಣೆಯೊಳೆನ್ನೊಳ್
ಗಾಂಧರ್ವದೇವರುಂ ವಿಷ
ಯಾಂಧರ್ ಸೋಲ್ವರೆನೆ ಪೆಱರು ಸೋಲದರೊಳರೇ ೨

ವ || ಅದಱಿಂ ವೀಣಾವಾದ್ಯದೊಳ್ ತನ್ನಂ ಗೆಲ್ವಂಗಲ್ಲದೆ ಪೆಂಡತಿಯೆನಾಗೆನೆಂದಿರ್ಪಳಿ ರ್ದೊಡವರಯ್ಯಂ ವೀಣಾವಾದ್ಯಮನಾರ್ ಬಲ್ಲವರ್‌ವಕ್ಕೆಂದು ತಿಂಗಳಿಗೊಮ್ಮೆ ವೀ[ಣಾ]ಸ್ವಯಂಬರಮಂ ಮಾೞ್ಪರೆಂದೊಡಂತೆ ಪರದರ ಮಗಳ್ಗಿಂತಪ್ಪ ಗಾಂಧರ್ವಮೇಕೆಂದೊಡಾ ಕೂಸು ವಿದ್ಯಾಧರರಾಜಂ ಸಾಗರಸೇನನೆಂಬೊನಾತನ ಮಗಳ್ ಚಾರುದತ್ತನನಾತಂ ಕರಂ ಪ್ರಿಯಸ[ಖನಾ]ಗಿ ತನ್ನ ವಿದ್ಯಾಧರಶ್ರೇಢಿಗೆ ತಿಳಕಮಾಗಿರ್ಪ ರಮ್ಯಪುರಮುಮನಾ ದೇಶಮುಮಂ ಸಮಸ್ತ ರಾಜ್ಯಮಂ ಕೊಟ್ಟೊಡಲ್ಲದೆ ಬರ್ಪಾಗಳೆನ್ನ ಮಗಳನೀ ಗಾಂಧರ್ವದತ್ತೆಯಂ ನೀನೊಯ್ದು ಭೂಮಿಗೋಚರಂಗೆ ಕುಡೆಂದೊಡಂತೆಗೆಯ್ವೆನೆಂದು ಬಂದನದಲ್ಲದೆಯುಂ ಚಾರುದತ್ತಂ ಪರದನೆನಲಾಗ ಸಾಹಸದೊಳಂ ಶೌರ್ಯದೊಳಮೀಗಳಾರುಂ ದೊರೆಯಿಲ್ಲರೆಂದೊಡೆಂತಾತನ ವೃತ್ತಾಂತಮಂ ಪೇೞಿ ಕೇಳಲೆನಗರ್ತಿಯಾಗಿರ್ಪುದೆಂದೊಂಡಂತೆಗೆಯ್ವಮೆಂದಾಗಳಾ ಗಾಂಧರ್ವಾ ಚಾರ್ಯರಿಂತೆಂದು ಪೇೞ್ದರ್

ಕಂ || ಈ ವಿಷಯಮಂಗವಿಷಯಂ
ಭೂವಿದಿತಂ ಚಂಪೆಯೆಂಬುದೀ ಪೊೞಲುದ್ಯತ್
ಶ್ರೀ ವಿಮಳವಾಹನಂ ನ[ಯ]
ಭಾವದಿನಿದನಾಳ್ಗು ಮಮಿತಗುಣಗಣ ನಿಳಯಂ ೩

ವ || ಭಾನುದತ್ತಸೆಟ್ಟಿಯೆಂಬೊನಿ[ಬ್ಬ]ಕುಳೋದ್ಭವನಾತನ ಭಾರ್ಯೆ ದೇವಿಲೆಯೆಂಬೊಳಂತವರಿರ್ವರುಮನ್ಯೋನ್ಯಾಸಕ್ತರುಮರ್ಹದ್ಭಕ್ತರುಮಾಗಿರ್ಪೊರಂತಿರ್ದು ಮೂವತ್ತೆರಡು ಕೋಟಿ ದ್ರವ್ಯಂ ಮನೆಯೊಳಿರ್ದುದಂ ಬಗೆಯದೆ ಪುತ್ರೋತ್ಪತ್ತಿ ಗೆಂಟಾದುದಕ್ಕೆ ಚಿಂತಿಸಿಯೊಂದುದಿವಸ ದೇವಿಲೆ

ಕಂ || ಸೂರಿಗಳನಖಿಳ ಗುಣಗಣ
ಧಾರಿಗಳಂ ದೋಷಹಾರಿಗಳನಪಥ ಯಶೋ
ಭೀರುಗಳಂ ಮುನಿವರರಂ
ಚಾರುಗಳಂ ಬೆಸಗೊಳಲ್ ಬಗೆದ[ಳ] ನುನಯದಿಂ ೪

ವ || ತನಗಿಷ್ಟೆಯರಪ್ಪ ಪಲರುಂ ಶ್ರಾವಕಿಯರಂ ಕೂಡಿಕೊಂಡು ತಾನುಮರ್ಚನೆಗಳಂಕೊಂಡು ಪೋಗಿ ಚಾರುಮುನೀಂದ್ರರಿರ್ದ ಜಿನಾಲಯಮಂ ಬಲಗೊಂಡೊಳಪೊಕ್ಕು ದೇವರಂ ಸ್ತುತಿಯಿಸಿ ಗಂಧಸೇಸೆಯಂ ಕೊಂಡು ಬೞಿಯಂ ಚಾರುಮುನೀಂದ್ರರ್ಗೆ ಕೈಗಳಂ ಮುಗಿದು

ಕಂ || ಎನಗಿಂತೆ ಮಕ್ಕಳಿಲ್ಲದೆ
ಮನುಜತ್ವಂ ವೃಥೆಗೆ ಸಂದುಪೋಕುಮೊ ಮತ್ತಂ
ತನಯರ್ಕಳಿನ್ನುಮಪ್ಪರೊ
ಮುನಿನಾಥಾ ಬೆಸಸಿಮೆಂದೊಡಾ ಮುನಿಮುಖ್ಯರ್ ೫

ವ || ನಿನಗೆ ಮಹಾಪುರುಷನಪ್ಪನೊರ್ವಂ ಸುಪುತ್ರನಕ್ಕುಮೆನೆ ಸಂತೋಷಂಬಟ್ಟು ಮುನಿವಾಕ್ಯಂ ತಪ್ಪದೆಂದು ಮನೆಗೆವಂದು ಕೆಲವು ದಿವಸದಿಂ ತಲೆನೀರ್ಮಿಂದು ಸೌಧಗೃಹದೊಳ್ ತಾನುಂ ನಿಜಪ್ರಿಯನುಂ ಸುಖನಿದ್ರಿತರಾಗಿರೆ ಸ್ವಪ್ನದೊಳ್ ಚಾರುಮುನೀಂದ್ರರ್ ದಿವ್ಯಮಪ್ಪ ಮಾಣಿಕಮನಿತ್ತುದುಂ ಕಂಡು ಬೆಳಗಪ್ಪ ಜಾವದೊಳ್ ಮುನ್ನಿದ್ರರಾಗಿ ಪ್ರಭಾತಕ್ರಿಯೆಯಂ ನಿರ್ವರ್ತಿಸಿ ನಿಜಪ್ರಿಯನಪ್ಪ ಭಾನುಸೆಟ್ಟಿಗೆ ಪೇೞ್ದು ಸಂತೋಷದಿನಿರೆ ಕೆಲವು ದಿವಸದಿಂ ಗರ್ಭಮಾಗಿ ನವಮಾಸಂ ನೆಱೆದು ಶುಭದಿನದೊಳ್ ಮಗನಂ ಪೆತ್ತಾಗಳ್ ನೆಂಟರೆಲ್ಲರುಮೊಸಗೆ ಮರುಳ್ಗೊಂಡು

ಚಂ || ಉದಯದೊಳೆಂತು ಭಾನು ಕಡುರಾಗದೊಳೊಂದುಗುಮಂತೆ ಪುತ್ರಲಾ
ಭದ ನೆಗೞ್ದುತ್ಸವೋದಯದೊಳಿಬ್ಬಕುಳೋದ್ಭವ ಭಾನು ತಾನುಮೊಂ
ದಿದ ಕಡುರಾಗದಿಂದೆಸೆದನೀ ಖಳಸಂಶ್ರುತಿ ಬಂಧಹೇತುವ
ಪ್ಪುದಱುದಯಂ ಮಹಾಪುರುಷರಪ್ಪರುಮಂ ಕಡುರಾಗ ಮಾಡುಗುಂ ೬

ವ || ಅಂತು ಜಾತೋತ್ಸವಮಂ ಮಾಡಿ ಪತ್ತನೆಯ ದಿವಸದಂದು ಚಾರುಗಳಾದೇಶದೊಳ್ ಪುಟ್ಟಿದನಪ್ಪುದಱಿಂ ಚಾರುದತ್ತನೆಂದು ನಡುಪುತ್ತಿರ್ದರಾತನ ಪುಟ್ಟಿದ ದಿವಸದೊಳಾ ವಿಮಳವಾಹನ ಮಹಾರಾಜನ ಮಂತ್ರಿಗಳಯ್ವರ್ಗಮೈವರು ಮಕ್ಕಳಾದೊಡವರ್ಗಳಂ ಭಾನುಸೆಟ್ಟಿಯೆನ್ನ ಮಗನೊಡವಳೆವರೆಂದು ಬೇಡಿಕೊಂಡು ಕೂಸುಗಳ್ಗೆ ಬೇಱೆವೇಱೆ ದಾದಿಯರನಿಟ್ಟು ನಾಮಕರಣಮನವರ್ಗೆ ಹರಿಸಖಂ ಗೋಮುಖಂ ವರಾಹಕಂ ಪರಂದಪಂ ಮರುಭೂತಿಯೆಂದು ಬೇಱೆವೇಱೆ ಪೆಸರನಿಟ್ಟು ಕೊಂಡಾಡಿದನಂತು ಚಾರುದತ್ತ ನಿಷ್ಟಮನೋಹರಾತಿ ಮುಗ್ಧನುಂ ಸಕಳಕಳಾವಿದಗ್ಧನುಮಾಗಿ ಯವ್ವನಪ್ರಾಪ್ತನಾಗಿರ್ದನಾ ಪೊೞಲ್ಗೆ ಕಿಱಿದಂತರದೊಳಮರಮಂದಿರಮೆಂಬ ಬೆಟ್ಟದೊಳ್

ಕಂ || ಯಮಧರ ಕೇವಳಿಗಳಿಗ
ಷ್ಟಮಳಕ್ಷಯಮಾದೊಡ[ಲ್ಲಿ ಯಾತ್ರೆಗೆ]ತೀರ್ಥೋ
ಪ[ಮ]ಮಾಯೆಡೆ[ಯೆ]ಲ್ಲಂ ಭ
ವ್ಯಮಯಂ ದಲ್ ಮಾರ್ಗಶಿರದ ಶುಕ್ಲಾಷ್ಟಮಿಯೊಳ್ ೭

ವ || ಆ ಮಹಿಮೆಯ ದೆವಸದೊಳರಸನೊಡನೆ ಸೇವ್ಯಜನಮುಂ ಭವ್ಯಜನಮುಂ ಭಾನುಸೆಟ್ಟಿಯುಂ ಪೋಗೆ ನಾಡೆಯಂತರಮಂ ಬೞಿಯಂ ತಗುಳ್ದು ಬರೆ ಚಾರುದತ್ತನಂ ಕಂಡು ನೀ ನಿನ್ನ ಸಖಾಯರನೊಡಗೊಂಡು ಪೋಗಿ ರಜತವಾಳುಕಮೆಂಬ ನದೀತೀರದೊಳ್ ಸುಗಂಧಮಪ್ಪ ಪುಷ್ಚಮೊಳವವಂ ಕೊಯ್ದೆಮ್ಮಲ್ಲಿಗಟ್ಟಿ ಮಗುೞೆ ಪುರಕೆ ಪೋಗೆಂಬುದುಮಂತೆಗೆಯ್ವೆನೆಂದಾ ನದಿಯ ತಡಿವಿಡಿದು ಬಂದು ನಾನಾವಿಧಮಪ್ಪ ಪುಷ್ಪರಾಶಿಯಂ ಕೊಯ್ದು ತಮ್ಮಯ್ಯನಲ್ಲಿಗಟ್ಟಿಯಾ ತೊಱೆಯಂ ಮೆಚ್ಚಿ ನೋಡುತ್ತಂ

ಕಂ || ಸ್ವಾಂತರತಿಫಥಿಕ ಪಥವಿ
ಶ್ರಾಂತರುಮಂ ನೋಡೆ ನಾಡೆ ರಯ್ಯಮಿದಂ ನಾ
ಮೆಂತು ಗಳ ಬಿಸುಟು ನಗರಾ
ಭ್ಯಂತರದೊಳ್ ಕಟ್ಟಿಕೊಳ್ವ ಕಣಿಯೇನು ಗಡಿಂ ೮

ವ || ಆ ಪುರದೊಳ್ ಚಿಂತಾಮಣಿಯುಳ್ಳಡಂ ಕಲ್ಪವೃಕ್ಷಮುಳ್ಳಡಂ ತನಗಿಷ್ಟಮಿಲ್ಲದಂದವರೊಳೇನೆಂದು ತೊಱೆಯ ಶೋಭೆಯಂ ಕಂಡು ನೋಡಿ ಮೆಚ್ಚುತ್ತಂ ಬರ್ಪರೆರಡುಂ ತಡಿವಿಡಿದು ನೀರೊಳಲೆವ ಪಲವುಂ ತೆಱದ ಪೂಮರಂಗಳ ಮಿಳಿರ್ವ ಕೊಂಬುಮಂ ಪುಣಿಲ ಸ್ಥಳಂಗಳಿಂಬುಮಂ ಪರಿವ ಬಱಿವೊನಲ್ಗಳುಮಂ ಮಣಲ ತಿಂಟೆಯ ನುಣ್ಪುಮಂ ದರಿಯ ನೆೞಲ ತಣ್ಪುಮಂ ಮೆಲ್ಲನಪ್ಪಲರ ತೀಟಮುಮಂ ಕೂಡೆ ಪರದಲ್ಲೊಕ್ಕ ಪೂವಲಿಯ ಬೆಳ್ಪುಮಂ ಲತೆಯ ಜೊಂಪಮುಮಂ ಪರೆ[ದೊಗು]ವ ಮಕರಂದಮುಮಂ ಉಲಿವ ಜಲವಿಹಂಗ ನಾದಮುಮಂ ಕುಸುಮಾಮೋದಮುಮಂ ಕಂಡರ್ತಿಯೊಳ್ ನೋಡುತ್ತಂಬರೆ ಹರಿಸಖಂ ಪದ್ಮಪದದೊಳ್ ಪಣ್ಫಲಮಂ ತೀವಿ ನಡುನೀರೊಳ್ ಬಿಟ್ಟಡಲ್ಲಿ ಬಾಳೆಮೀನ್ ಪೊಳೆಯೆ ಕೆಡೆದೋಡಿದರಂತೆ ಗುಣದೊಳಧಿಕರಪ್ಪ ಋಷಿಯು ಪೆಣ್ಣೆಂಬ ಬಂಧನದಿಂ ಸಂಸಾರದೊಳಾೞ್ಗುಮೆಂದು ನುಡಿಯುತ್ತಂ ಬಪ್ಪನಾ ನೀರತಡಿಯೊಳ್ ಸಣ್ಣಮಪ್ಪ ಮಣಲ ತಿಂಟೆಯೊಳೊಂದಡಿವಜ್ಜೆಯಂ ಕಂಡಿದು ವಿಪರೀತಮೆಂದದಂ ಚಾರುದತ್ತನುಪಲಕ್ಷಿಸಿ ನೀರಿಂ ಪೊಱಮಡಲ್ ಬಂದು ಪೊಱಮಟ್ಟು ಮಗುೞ್ದು ಪೇೞೆ ಕೆಳೆಯರ್ ಬೆಕ್ಕಸಮಾಗಿರೆ ಚಾರುದತ್ತನೆಂಗುಂ ಭೂಮಿಗೋಚರ ಸಂಘಟ್ಟಣಮಿಲ್ಲದಲ್ಲಿ ರಮ್ಯಸ್ಥಾನದೊಳ್ ಮಿಥುನಮಿರ್ಕುಮೆಂದಿಂತೆಂದಂ

ಮ || ಎಡಗಾಲುಂ ಬಲಗಾಲ ಪೆರ್ದೊಡೆಯಮೇಲೂಱುತ್ತೆ ತನ್ನೋಪಳಂ
ಮಡಿದಿರ್ದಾ ತೊಡೆಯಲ್ಲಿ ಕುಳ್ಳಿರಿಸಿ ಮತ್ತಂತಂತೆ ತರ್ಕೈಸಿಕೊಂ
ಡೆಡಗಯ್ಯಿಂ ಬಲಗಯ್ಯೊಳಂತೆ ಪೆಱತೇಂ ತಾಂ ಬಾಗಿ ಕೊಂಡಾ ಖಗಂ
[ಬಿಡದಂ]ದೊಯ್ಯುತೆ ಬೇಗಮಂತೆ ನೆಗೆದಾಕಾಶಕ್ಯನಂ ಪಾರಿದಂ ೯

ವ || ಎಂದೊಡಿದೇಂ ಚೋದ್ಯಮೊ ನೀನೆಮ್ಮೊಡನೆಯ ಚಾರುದತ್ತನೆಂದು ಬಗೆದೆವಾ ವಿದ್ಯಾಧರನೊಡವಂದಾತನಪ್ಪುದನೀಗಳಱಿವೆನೆಂದು ಪೊಗಳುತ್ತಮಂತೆ ಪೋಪರೊಂದು ಜೊಂಪದ ಕೆಲದೊಳ್ ಮೂಱಡಿವಜ್ಜೆಯಂ ಕಂಡಿವರಂದಮಂ ಪೇೞೆನೆ ನೋಡಿ ಮುಂದಡಿಯೊಳಡಿ ಯೂಡಿದಲತಗೆಯ ರಸಂ ಪತ್ತಿರ್ದುದಂ ಕಂಡಿಂತೆಂದಂ

ಮ || ರತಿಸಂಪರ್ಕಮನಾಸೆವಟ್ಟು ಖಚರಂ ತನ್ನೋಪಳುಂ ತಾನುಮೀ
ಕ್ಷಿತಿಭಾಗಕ್ಕಿೞಿವಲ್ಲಿ ಮುಂದಿೞಿದು ತಾಂ ನಿಂದಿರ್ದನಂ ಪತ್ತಿ ತ
ತ್ಸತಿ ಮೆಲ್ಲಿತ್ತಿೞಿವುತ್ತಮೊಂದಡಿಯನಿಟ್ಟತ್ತಿತ್ತ ನೋಡುತ್ತೆ ದಂ
ಪತಿಯಂ ತೊಟ್ಟನೆ ಕಂಡು ಮತ್ತೆ ನೆಗೆದಂ ತನ್ನೋಪಳಂ ಕೊಂಡವಂ ೧೦

ವ || ಅದಱಿನೀ ಮೂಱಡಿವಜ್ಜೆಯುಮಿಂತಾದುವೆಂದೊಡಪ್ಪುದಪ್ಪುದು ನೀನತಿ ವಿದಗ್ಧನೈ ದಿವ್ಯಮಾನಸನೈಯೆಂದು ಪೊಗಳುತ್ತಂ ಬಪ್ಪವರ್ ಮತ್ತೊಂದೆಡೆಯೊಳ್ ಪೋದವೆಱಡು ಪಜ್ಜೆಯುಮನವಱ ಮುಂದೆ ಮೊಣಕಾಲ ಪಜ್ಜೆಯುಮಂ ಕಂಡಿದಱಂದಮೆಂತೆನೆ ಜಘನಭರದಿಂ ಪೆಱಗಿನಿಸಿರ್ದಿಮಿವು ಪೆಂಡತಿಯ ಪಜ್ಜೆಯ ಮುಂದಣ ಮೊಣಕಾಲ ಪಜ್ಜೆ ಗಂಡತನವೆಂದಿಂತೆದಂ

ಕಂ || ಮುಳಿದು ನಭದಿಂ[ದಲಿರ್ವರು]
ಮಿೞಿತಂದೆಡೆಯೊಳ್ ಭರದಿಂದ ತಿಳಿಪೆ ನಯದಿಂ
ತಿಳಿ[ಯಲ್]ಹರ್ಷದಿನಂಬರ
ತಳಕ್ಕೆ ತಳ್ತೊಡನೆ ನೆಗೆದು ಗಗನಕ್ಕೊಗೆದಂ ೧೧

ವ || ಎಂದೊಡಕ್ಕುಮಿನ್ನಾವುದನೇವೆಸಗೊಳ್ವುದೆಂದು ಮತ್ತಂತೆ ಪೋಪರೊಂದು ಕುಱುವದೆಡೆಯೊಳ್ ವನತರುಗಳ ತುಱುಗಲಿಂದೊಪ್ಪಿರ್ದರಣ್ಯಪ್ರದೇಶದೊಳ್ ಪಾಸಿದ ಪುಷ್ಪಶಯನಮುಮನುದಿರ್ದ ಕಸ್ತುರಿಯುಮನುಗುೞ್ದ ಕರ್ಪೂರದ ಪಳುಕಿನ ತಂಬುಲಮುಮಂ ಕೆದಱಿದ ಪೂಮಾಲೆಗಳುಮಂ ಕಂಡು ತಮ್ಮಿಚ್ಛೆಯೊಳಿರ್ದು ಮಿಥುನಂಗಳ್ ನಮ್ಮುಲಿಪಂ ಕೇಳ್ದುಮೀಗಳ್ ಪೋದರಕ್ಕಟಾ ನಾಮವರ್ಗೆ ವಿಘ್ನಂಮಾಡಿದೆವೆಂದು ನುಡಿಯುತ್ತಂ ಬರ್ಪಲ್ಲಿ ಒಂದು ಕದಂಬವೃಕ್ಷದ ಮೊದಲೊಳ್ ಕೀಲಿಸಿರ್ದ ವಿದ್ಯಾಧರನ ಪೆಣನುಗ್ರತೆಯ[ನೆ]ಮ್ಮ ಮುಂದೆ ಬರ್ಪ ಹರಿಸಖಾಯರ್ ಕಂಡು ಭಯಂಗೊಂಡು ನಿಂದಿರ್ದೊಂದು ಘಸಣಿಯ ಮೇಲೆ ಬಿರ್ದಮೆನೆ ಚಾರುದತ್ತಂ ನೋಡಿ ಶಂಕಿಸದೆ ಬನ್ನಿಮೀತಂ ಮುನ್ನಮನ್ವಿತ ಮಹಾಪುಣ್ಯನಂ ವಿದ್ಯಾಧರ ಜನಾಗ್ರಗಣ್ಯನುಮಾಗಲೆವೇೞ್ಕುಮೀತನಂ ಮೀತನಂ ಪಗೆವರಾರಾನುಮುಪಾಯದಿನಿಲ್ಲಿಗೆ ತಂದು ಛಿದ್ರಿಸಿ ವಿದ್ಯಾಛೇದನಂಗೆಯ್ದು ಕೀಲಿಸಿ ಪೋದರಕ್ಕುಮೆಂದು ಸಾರೆವಂದು ನೋಡಿ

ಮ || ಇದುವೇ ಪೌರುಷಮೆಂದು ಸುಟ್ಟಿ ನುಡಿವಂತಿರ್ದಪ್ಪುದೀ ವಾಮಹ
ಸ್ತದ ಪಾಂಗಿಂ ಬಲಗಯ್ಯ ಪಾಂದಿದಱಿವೆಂ ನಿಲ್ಲಣ್ಣಮೆಂದತ್ತಿದಂ
ದದೊಳಿರ್ದಪ್ಪದು ಕರ್ಚದೀಯವುಡ ಪಾಂಗಿನ್ನೆತ್ತ ಪೋದಪ್ಪೆಯಂ
ಬದಟಿಂದಂ ಪರಿದೆಯ್ದಿ ನುಂಗುವನಿತಾ [ಗಿ]ರ್ದಪ್ಪುವೀ ದೃಷ್ಟಿಗಳ್ ೧೨

ವ || ಈತನಂ ನಾಮಿಂತೆ ನೋಡುತ್ತಿರ್ಪಮೆ ಬಾೞ್ವಂತು ಮಾಡುತ್ತಿರ್ಪಮೀ ವಾ[ಮಾ]ದ್ರಿಯತ್ತಲೆ ನಾನುಮಾಗಧಿರದತ್ತ ನೋಡಿಮೆನೆಯವರ್ ನೋಡಿ ಪೊಳೆಯುತ್ತ ಮಿರ್ದ ಖೇಟಮಂ ಕಂಡು ವಿಚಾರಿಸಿ ನೋೞ್ಪೂಗಳಲ್ಲಿಯಮರ್ಚಿದ ಕೀಲೋತ್ಪಾಟಿಯುಂ ಬ್ರಣಾರೋಪಿಯುಂ ಸಂಜೀವನಿಯುಮೆಂಬ ಮೂಱುಂ ಗುಳಿಗೆಗಳಂ ಕಂಡು ತಾಂ ವಿದ್ಯಾಧರಾಗಮಮಂ ಬಲ್ಲನಪ್ಪುದಱಿಂ ಕೀಲೋತ್ಪಾಟಿನಿಯಂ ತೇದು ಪೂಸಿ ಕೀಲಣೆ ಕಳೆಯೆ ಕೆಲಕ್ಕೆ ಬೀೞೆ ಮೆಲ್ಲನೆ ಪಿಡಿದಿೞಿಪಿ ಜೞಿಯಂ ಬ್ರಣಾರೋಪಿಯಂ ಪೂಸೆ ಪುಣ್ ಕೆಟ್ಟೊಡೆ ಶುಚಿಮಾಡಿ ಸಂಜೀವನಿಯಂ ಪ್ರಯೋಗಿಸೆ ತಾಮೊಂದು ಕೆಲದೊಳಿರ್ದು ನೋಡುತ್ತಿರೆ

ಕಂ || ಇನಿಸಿನಿಸಂ ಮಿಡುಕುತ್ತವ
ನಿನಿಸಿನಿಸಂ ಸುಯ್ಯುತಂ ಪೊರಳ್ದೇೞುತ್ತಂ
[ನೆನೆನೆನೆದುಂ ಪೆಱಪೆಱವಂ]
ಮುನಿಸನಿವಿಸೆ ಬೈದೊದಱಿ ಮಸಗಿ ದೆಸೆ[ವ]ರಿದಂ ೧೩

ವ || ಅಂತು ಪರಿದಾರುಮಂ ಕಾಣದೆ ಸೌಮ್ಯನಾಗಿ ಮಗುೞ್ದು ನೋಡಿ ಕೆಲದೊಳಿರ್ದವರಂ ಕಂಡು ನೀಮಾರ್ಗೆ ಖೇಟಮನೆಲ್ಲಿ ಕಂಡಿರಿ ವಿದ್ಯಾತಂತ್ರಘುಟಿಕಾಶ್ರಯಂಗಳನೆಂತು ಕಂಡಿರೆಂತಿವಂ ಪ್ರಯೋಗಿಸಿದಿರ್ ಪೇೞಿಮೆಂದೊಡಾಮೀ ಪೊೞಲಿಂಬಂದೆನೀತನಿಬ್ಬಕುಳೋದ್ಭವಂ ಚಾರುದತ್ತ ನೆಂಬೊಂ ನಿನ್ನಿರವಂ ಕಂಡಱಿದು ಕಾರುಣ್ಯದಿಂ ವಿದ್ಯಾಪ್ರಯೋಗಮಂ ಬಲ್ಲನಪ್ಪುದಱಿನೀ ಖೇಟಮನಱಸಿಯೀಯೌಷಧಿಯನೆತ್ತಿದನೆಂದಡೆ ನಿಮ್ಮ ಪ್ರಸಾದದಿಂ ಬರ್ದೆನೆಂಬುದುವಂತೇಕೆಯೆಂಬೆ ಯಾರುಮಂ ತಂತಮ್ಮ ಪುಣ್ಯಮೆ ಬಾೞಿಸುಗುಮಾನೇನಂ ಮಾಡಿಯೆ ನಿನ್ನ ಪುಣ್ಯಮೆ ಪ್ರಧಾನಮೆನೆ ನೀನೆನ್ನ ಪುಣ್ಯದ ರೂಪಾಗಿ ಬಂದೆನ್ನ ಪ್ರಾಣಮನಿತ್ತುಪಕಾರಕ್ಕೆ ಪ್ರತ್ಯುಪಕಾರಮೇಂ ನಿನಗೆ ಪ್ರಯೋಜನಮಾದ ಕಾಲಕ್ಕೆನ್ನಂ ನೆನೆವುದೆಂದು ಪೇೞ್ದು ನೀನೀ ಭವದೊಳೆನಗೆ ಪರಮಮಿತ್ರನೆಯೆನೆ ಹರಿಸಖನಿಂತೆಂದಂ

ಕಂ || ನೀನಾರ್ಗೆಲ್ಲಿರ್ಪೈ ಪೆಸ
ರೇನೆಂಬುದು ನಿನ್ನವಸ್ಥೆಯೇನೆವದಿಂ[ದಂ
ತಾನಾ] ದುದೊ ಪೇ[ೞೆನೆ] ಖಚ
[ರಂ]ನುಡಿದಂ ತಿಳಿಪಿ ತನ್ನ ತೆಱನನಿತನಿತಂ ೧೪

ವ || ವಿಜಯಾರ್ಧಪರ್ವತದ ಮೇಗಣ ಸಿದ್ಧಮಂದಿರಮೆಂಬ ಪೊೞಲನಾಳ್ವಂ ಮಹೇಂದ್ರವಿಕ್ರಮವೆಂಬ ವಿದ್ಯಾಧರಂಗಂ ಮತ್ಸ್ಯೆಯೆಂಬ ವಿದ್ಯಾಧರಿಗಂ ಪುಟ್ಟಿದೆನಮಿತಗತಿಯೆಂ ಬನೆನ್ನ ಪ್ರಾಣವೆಲ್ಲಭೆಗಾಟಿಸಿ ಗೌರಮುಂಡಮನುಂ ಮಾರುತಿಮುಂಡನುಮೆಂಬ ವಿದ್ಯಾಧರರೆನ್ನೊಳ್ ಸಖತ್ವಮಂ ತಾಳ್ದಿರ್ಪರೀಗಳಾಂ ವಾಸುಪೂಜ್ಯತೀರ್ಥವಂದನಾ ಭಕ್ತಿಗೆವಂದು ಪೋಗುತ್ತಮೀ ತೊಱೆಯ ರಮಣೀಯಮಂ ಕಂಡಾತ್ಮವಲ್ಲಭೆಯುಮಾನುಂ ವಿಶ್ರಮಿಸಲೆಂದಲ್ಲಿಗೆ ವಿಮಾನಮನಿೞಿಪಿದೆವನ್ನೆಗಮವಂದಿರೆನ್ನ ಬೆನ್ನನೆ ಬಂದು ಮಱವಟ್ಟಲ್ಲಿಯೆನ್ನಂ ಛಿದ್ರಿಸೆ ವಿದ್ಯಾಛೇದನಂ ಮಾಡಿ ಈ ಮರದೊಳ್ ಕೀಲಿಸಿಟ್ಟೆನ್ನ ವಲ್ಲಭೆಯಂ ಕೊಂಡುಪೋದರಿನ್ನೆನ್ನ ಸತ್ತನೆಂದೇ ಬಗೆದಾಕೆಯುಂ ಪ್ರಾಣತ್ಯಾಗಂಗೆಯ್ಯದಿನ್ನೆವರೆಗಂ ನಿಲ್ವಳಲ್ಲದಾದೊಡಂ ಶೀಘ್ರದಿಂ ಪೋಪೆನಿಲ್ಲಿಯೆನ್ನಂ ಛಿದ್ರಿಸಿದೊಡನಲ್ಲಿಯವರ್ಗಪ್ಪುದಂ ಮಾೞ್ಪೆನಾರಾನುಮೆನಗಿದಿರಪ್ಪರಿಲ್ಲೆಂ ದಮಿತಗತಿಯ ಖೇಟಮಂ ಕಂಡು ಪೊಡವಟ್ಟು ತನ್ನಾವಾಸಕ್ಕೆ ಪೋದನಾಗಳ್ ಚಾರುದತ್ತಂ ಮತ್ತಂ ತೊಱೆಯ ತಡಿವಿಡಿದು ಬರೆ ಹರಿಸಖಂ ಗೋಮುಖಂಗಿಂತೆಂದಂ

ಕಂ || ನೆಱೆಯೆ ಮನಂಗೊಳಿಸುವುದಿಂ
[ತಱಿಯಲ್ಕಿ]ದು ನಾಡೆ ಚೋದ್ಯ[ಮಂತ]ಪ್ಪುದಱಿಂ
ತೊಱೆಯಂ ನೋೞ್ಪುದನೀತಂ
[ತೊಱೆ]ಯಂ ನಾಮಾಗಿ ನಮಗೆ ಪೋಪುದೆ ಕಜ್ಜಂ ೧೫

ವ || ಎಂದು ಚಾರುದತ್ತಂಗೆ ನಾಡೆ ಪೊತ್ತು ಪೋಯ್ತು ನಾಮಿಂ ಪೊೞಲ್ಗೆ ಪೋಪಮೆನೆ ಮಗುೞ್ದು ಬಂದು ಪೊೞಲಂ ಪೊಕ್ಕೆದಿನಂತೆ ವಿದ್ಯಾಭ್ಯಾಸಂಗೆಯ್ಯುತ್ತಂ ಸುಖದಿನಿರ್ದನಿತ್ತ ದೇವಿಲೆ ಮಗಂಗೆ ಮದುವೆಯಂ ಮಾಡಲ್ ಬಗೆದು ಭಾನುದತ್ತಸೆಟ್ಟಿಯುಂ ತಾನುಂ ತಮ್ಮಣ್ಣನಪ್ಪ ಸಿದ್ಧಾರ್ಥಸೆಟ್ಟಿಗಂ ಸೌಮಿತ್ರಿಗಂ ಪುಟ್ಟಿದ ಮಿತ್ರಾವತಿಯಂ ಬೇಡಿ ಪಡೆದು ಮಹೋತ್ಸಾಹದಿಂ ಶುಭಮುಹೂರ್ತದೊಳ್ ಚಾರುದತ್ತಂಗಂ ಮಿತ್ರಾವತಿಗಂ ಪಾಣಿಗ್ರಹಣಂಗೆಯ್ದಿಷ್ಟಬಂಧುಜನಕ್ಕೆ ತುಡಲುಮುಡಲುಮುಣಲುಂ ಕುಡೆ

ಮ || ಇದು ಚಿಂತಾಮಣಿಯುಂಟೆ ಪೇೞ್ ಪಡುಕೆಯೊಳ್ ಪತ್ತುಂ ಮಹಾಕಲ್ಪವೃಕ್ಷಂ
ಗ[ದು]ಚೆಲ್ವಾಗಿರೆ ಪಿತ್ತಿಲತ್ತೊಗೆದುವೋ ಪುಣ್ಯಪ್ರಭಾವತ್ವದಿಂ
ನಿಧಿಗಳ್ ಸಾರ್ದುವೊಯೆಂತು ನೋೞ್ಪಡಮಚಿಂತ್ಯಂ ಬೀಯಮೆಂದಿಂತು ಸ
[ಗ್ಗದ]ರೆಲ್ಲಂ ಪೊಗೞ್ಪಂತು ನಾಡೆ ಭರದಿಂ ವೈಶ್ಯೋತ್ತಮಂ ಮಾಡಿದಂ ೧೬

ವ || ಅಂತು ಮಾಡಿ ವಿವಾಹಕಲ್ಯಾಣದೊಳ್ ಪೊೞಲೆಲ್ಲಂ ವಾಸುಪೂಜ್ಯಸ್ವಾಮಿಯ ಪರಿನಿರ್ವಾಣ ಕಲ್ಯಾಣುತ್ಸಾಹದಿಂದಮಗ್ಗಳಮಾಗೆ ಸುಖದಿಂ ಕೆಲವು ದಿವಸಂಗಳ್ ಪೋಗೆ ಚಾರುದತ್ತನಾಗಳುಂ ವಿದ್ಯಾಭ್ಯಾಸಂಗೆಯ್ಯುತ್ತಂ ನಿಜಸ್ತ್ರೀಯನೆನಸುಂ ಬಗೆಯದಿರೆ ಮಿತ್ರಾವತಿ ತವರ್ಮನೆಗೆ ಪೋದೊಡವರಬ್ಬೆ ಮಗಳ ಮೊಗಮಂ ನೋಡಿ ರಾಗಮಿಲ್ಲದಿರವಂ ಕಂಡಿಂತೆಂದಳ್

ಕಂ || ಎಂತೀ ಮುಡಿ ಮುನ್ನಂ ಮುಡಿ
ದಂತಿರ್ದುದು ನೊಸಲೊಳೊಪ್ಪಿ[ದ ಕತ್ತುರಿಯ]ಬೊ
ಟ್ಟಂತಿಟ್ಟಳ ಮಾೞ್ಕೆಯೊಳಿ
[ರ್ದಂತಿರ್ದು]ದು ಮಗಳೆ ಮುನಿದನೇ ನಿಜದಯಿತಂ ೧೭

ಪೂಸಿದ ಕಂಕುಮಮೆನಸುಂ
ಬೀಸರಮಾಗಿರದು ಮೊಲೆ ಪಳಂಕವು ಮೊಗಮು
ಮಾಸರಿಕೆಯತ್ತ ಪೊರ್ದದು
ರೋಸದೆ ಸತಿ ಪೋಗಿಕಳೆನೆ ಪೆಱಪೆಱತೆಡೆಯೊಳ್ ೧೮

ನೀನಾತಂಗಾತಂ ನಿನ
ಗೇನುಂ ತಪ್ಪಿಲ್ಲ ತಕ್ಕನೇ ಕೂಡಿದಿರಿಂ
ತೇನುಗಡ ತಪಸಿಯಂತಿರೆ
ಮೌನಧ್ಯಾನದೊಳೆ ಕಳೆದಿರೇ ನೀಮಿರುಳಂ ೧೯

ವ || ಎಂದು ಬೆಸಗೊಳೆ ತಲೆಯಂ ಬಾಗಿರೆ ನೀಂ ತಾಯ್ಗೆ ಪೇೞದೆ ಮತ್ತಾರ್ಗೆ ಪೇೞ್ವೆಯೆನೆ ಕಣ್ಣನೀರ್ಗಳಂ ಸಿಡಿಯುತ್ತ ಮತ್ತಮಿಂತೆಂದಳ್

ಕಂ || ಲತೆಗೇರದ ಮರದರ್ಪಂ
ಮತಿಯಿಲ್ಲದೆ ಮಾಡಿಸಿಟ್ಟು ಬೞಿಕಾ ಲತೆಗಿಂ
ಬಱಸಿದಡುಂಟೆ ಭರದಿಂ ಪಿ
ಶಾಚಪತಿ ಗಂಡನಾದೊಡಿಂಬಱಸುವುದೇ (?) ೨೦

[ಪಿರಿದೆ] ನಿಪ ರತ್ನಮಂ ಸಾ
ಗರದೊಳಗಿಕ್ಕಿ[ಸಿ] ಬೞಿಕಱದುವವೊಲ್ ನೀಮೆ
ಲ್ಲರುಮೆ[ನ್ನಂ ಭರದಿಂ]ಮು
ನ್ನರಿಕೆಯ ಮರುಳಂಗೆ ಕೊಟ್ಟು ಬೞಿಕಱಸುವುದೇ ೨೧

ವ || ಎನೆ ಪೇೞದೆಂತಪ್ಪ ಮರುಳೆನೆ ಮಿತ್ರಾವತಿ ಮತ್ತಮಿಂತೆಂಗುಂ

ಕಂ || ಮರದೊಳ್ ಕಟ್ಟಿದ ಸೊರೆಯಂ
ಸರಾಗದಿಂದುರದೊಳಿಟ್ಟು ಬೀವಿನ ನೇಣಂ
ಬೆರಲೊಳವನರ್ದಿ ಮಿಡಿಗುಂ
ಮೊರೆ[ಗುಂ ಬೞಿ] ಕೊರ್ಮೆ ಕರ್ಚುಗುಂ ಪೆರ್ವಿದಿರಂ ೨೨

[ತೋ]ಲೊಳ್ ಮುಚ್ಚಿದ ಮಾೞ್ಕೆಯ
[ಕೇಲವ]ಮುಂದಿಟ್ಟು ಬಡಿವುತಿರ್ದಂ ಪಲರಂ
ಸೋಲಿಸುತೆ ಬೞಿಕೆ ತೊಡೆಗಳ
ಮೇಲಡ್ಡಂ ಕೊರಡನಿಟ್ಟು ರಾಗದೆ ಬಡಿಗುಂ ೨೩

ಪಾಡುಗುಮಡುರ್ತುಪೋಗೆ[ಮಿ]ಗೆ
ನೋಡುಗು[ಮ]ಭಿನಯಿಸಿ ಪಲವು ರಸಭಾವನೆಯಿಂ
[ದಾಡು]ಗುಮಾಗದೆ ಕಬ್ಬಂ
ಮಾಡುಗುಮೋಲೆಗಳನಣಮೆ ಬ[ರೆ]ಯುತ್ತಿರ್ಕುಂ ೨೪

ನೆಲನಂ ಬರೆಗುಂ ಮತ್ತಂ
ಪಲಗೆಗಳೊಳ್ ಪಲವು ತೆಱದ ವರ್ಣಕ್ರಮದಿಂ
ಪಲ[ವಂ]ರೂಪಂ ಬರೆಗುಂ
ಪಲವಾಡುವನಂತೆ ತಾನೆ ತನ್ನೊಳ್ ನುಡಿಗುಂ ೨೫

ಸುರಿಗೆ[ಯಿ]ನಾಡು [ಗುಮಂತಾ]
ಮರವಾಳಂ ಕೊಂಡು ಬೀಸುತಿರ್ಕುಂ ಪೆಱತೇ
ನಿರುಳೆಲ್ಲಮಿಂತೆ ಪೋಪುದು
ಮರುಳಪ್ಪಂಗೇನೊ ಪೇೞ ಕೋ [ಡೊಂದುೞಿಯಲ್] ೨೬

ವ || ಎಂಬುದುಂ ತಾಯ್ ಬಸಿಱಂ ಬಡಿದುಕೊಂಡೞ್ತು ನಿಮ್ಮತ್ತೆಯಪ್ಪ ಪಾಪಕರ್ಮೆಯೆನ್ನನಾಱಡಿಗೊಂಡಳ್ ನೀನಿಂತಿರೆಂದು ಪರಿತಂದು

ಕಂ || ನಿನ್ನ ಮಗಂ ಮರುಳ[ನ]ಪ್ಪು
ದಿನ್ನುಂ ಪೆಱರಾರುಮಱಿಯದನ್ನೆಗಮೀ ಕೂ
ಸಂ ಮದುವೆಮಾೞ್ಪೆನೆಂಬು
ಕ್ಕೆವದಿಂ ನಡುನೀರೊಳಂತು ಹಱುಗಲ ಕೊಯ್ದೈ (?) ೨೭

ಎನ್ನನ[ರೆ]ಯಿಱಿದಡೇನೋ
ನಿನ್ನೊಡವುಟ್ಟಿದನ ಮಗಳ [ತಂದೀ ಪಾಪಮಿ
ದಿನ್ನೆನ] ಗಸದಳಮಾಯ್ತದ
ನಿನ್ನಾವುದೊ ತೆಱದಿ ನೀಗುವೌ ಪೇೞ್ ಪೊಲತೀ ೨೮

ವ || ಎಂಬ ಮಾತಂ ಕೇಳ್ದಿದೇನೆನೆ ನಿನ್ನ ಮಗೆನಮ್ಮಳಿಯಂ ಚಾರುದತ್ತಂ ಪಿರದುಂ ಬುದ್ಧಿ ಯೊಡೆಯನಾಗಿರ್ಪನೆನೆ ಪೇೞದೆಂತು ಮರುಳಾದನೆನೆ [ಯ]ದಂ ಪೇೞ್ದು ಬೞಿಕ್ಕ[೦] ಬಯ್ವುತ್ತಿ[ರ] ಲಾಗದೆಮಾತಂ ಮರುಳಾದೊಡೀ ಲೋಕದೊಳ್ ಪುರುಷರತ್ನಮಾರೆಂದೊಡಕ್ಕುಂ ನಿನಗಿಂದಿನಿರುಳ್ ತೋರ್ಪೆನದಂ ಕಂಡು ನಂ[ಬೆಂ]ದು ಪೇೞ್ದು ಮನೆಗೆವಂದು ಮಗಳ್ಗೆ ತಕ್ಕುಪಚಾರಮಂ ಮೆಱೆದು ಚಾರುದತ್ತನ ಮನೆಗೆ ಕಳುಪಿ ನಡುವಿರುಳಪ್ಪಾಗಳ್ ಸುಮಿತ್ರೆ ದೇವಿಲೆಯಲ್ಲಿಗೆ ಬಂದು ನೋೞ್ಪಂ ಬಾಯೆಂದಾಕೆಯನೊಡಗೊಂಡು ಪೋಗಿ ಚಾರುದತ್ತೆನ ಸುಸಿಲಮನೆಯ ಗವಾಕ್ಷಜಾಳಮಂ ಹತ್ತಿ ನೋೞ್ಪಾಗಳೆಂದಿನಂತಾತಂ ವಿದ್ಯಾಭ್ಯಾಸಂಗೆಯ್ವು ತ್ತಿರ್ದುದಂ ಕಂಡು ನೋಡು ನಿನ್ನ ಮಗನ ಮರುಳಾಟಮನೆಂದೊಡತ್ತಿಗೆಯಂ ದೇವಿಲೆ ಬೇಱೆ ತೆಗೆದಿಂತೆಂದಳ್

ಕಂ || ಈತಂಗೆ ಸಕಲ ವಿದ್ಯಾ
ವ್ರಾತ[ದ] ಚಿಂತೆ[ಯ]ವಱೊಳತಿಕುಶಲಂ ರತಿಸಂ
ಪ್ರೀತಗೆ ಪೊನಲ [ಪ್ಪನುಮಂ
ತಾತಂ] ನೋೞ್ಪವರ್ಗೆ ಶಾಸ್ತ್ರಜಡನಾಗಿರ್ಪಂ ೨೯

ವ || ಆ ಜಡತ್ವಂ ಕೆಲವುದಿವಸದಿಂದ ಪೋಕುಮಂಜದಿರೆಂದತ್ತಿಗೆಯಂ ಸಂತೈಸಿದಿಂಬೞಿಯಮಂತದುವೆ ಚಿಂತೆಯಾಗಿರ್ದು ತಮ್ಮ ಸೆಟ್ಟಿಯ ತಮ್ಮ ರುದ್ರದತ್ತನೆಂಬೊಂ ಕರಂ ವ್ಯಾಳನುಂ ಸೂಳೆಯನುಮಾಗಿಪ್ಪೊನಾತಂ ಕರೆದಿಂತೆಂದಳ್

ಕಂ || ಎನ್ನ ಮಗಂ ಯವ್ವನೆ ಸಂ
ಪನ್ನಂ ರೂಪಸ್ವಿ ಮದುವೆಯಾಗಿರ್ದುಂ ತಾ
ನಿನ್ನುಂ ಶಾಸ್ತ್ರಜಡತ್ವಂ
ತನ್ನಿಂದುಂ ಪೋಗದಿರ್ದುದಂ ಕಂಡವರ್ಗಳ್ ೩೦

ವ || ಮರುಳೆಂದು ಬಗೆದವರತ್ತೆಮಾವಂದಿರೆನ್ನ ಬೆಳ್ಮಾಡುತಿರ್ದೊರಾತನಂ ರತಿ ಸುಖಾಭಿಲಾಷೆಯಂತೆ ಮಾಡೆಂದೊಡಂತೆಗೆಯ್ವೆನೆಂದು ಬೀಯಕ್ಕೆನಿತಾನುಂ ದ್ರವ್ಯಮಂ ಕುಡೆ ಕೊಂಡು ಧೂರ್ತವಿಟಕುಮಾರರಂ ಸಮಕಟ್ಟಿ ಚಾರುದತ್ತಂಗೆ ವಿದ್ಯೋಪದೇಶಂಗೆಯ್ವುಪಾಧ್ಯಾಯರ ಸಮೀಪಕ್ಕೆವಂದು ವಿನಯದಿನಾನುಮೋದುವೆನೆಂದು ಕೆಲವು ದಿವಸಮಭ್ಯಾಸಂಗೆಯ್ದುಮಾತನೊಳ್ ಮೇಳಮಂ ಮಾಡಿಕೊಂಡು ನಿಚ್ಚಲುಮುಪವನಮಂ ನೋೞ್ಪಂತೊಯ್ದಲ್ಲಿರ್ದೋಜೆಯ ವಿಳಾಸನೀಜನದಿಂ

ಕಂ || ನೋಡಿ ಸಲೆ ನುಡಿದು ಚದುರಿಂ
[ದೇಡಿ]ಸಿ ಪಿಡಿದೊಯ್ದು ಸೋಂಕಿ ಕುಳ್ಳಿರ್ದುಂ ಮುಂ
[ಗೂಡಿಯೆ ಪಲತೆಱದಿಂದ
ಲ್ಲಾಡಿಯೆ]ಲೀಲೆಯನೊಡರ್ಚಿನಿರ್ಕುಳಿಗೊಂಡರ್ ೩೧

ವ || ಅಂತಾತನಂ ಮೇಳಿಸುತ್ತಮಂಗಡಿಗಳೊಳಮರಮನೆಗಳೊಳಮಾಟಪಾಟದೆಡೆಗಳೊಳಂ ಪರಿಚಯದಿಂ ಶೃಂಗಾರಕಥಾರಸದೊಳಂ ಗೋಷ್ಠಿಗೆಯ್ಯುತ್ತಮೊಂದುದಿವಸಂ ರುದ್ರದತ್ತನೆಂದಂ ಚಾರುದತ್ತ ನಿನ್ನ ವೈಶಿಕದ ಕಳೆಯ ಕೆಳೆಯ ಬಲ್ಮೆಯನೆಮಗೆ ತೋಱೆಂದು ಸೂಳಗೇರಿಯೊಳಗಂ ಪೊಕ್ಕು ನೋೞ್ಪಾಗಳಲ್ಲಿಯೊಂದು ವಿಶಾಲಮಂಟಪದೊಳ್ ನೆರೆದಿರ್ದಚ್ಚ[ರ]ಗಣಿಕೆಯರಂತಪ್ಪರಂ ಕಂಡು

ಕಂ || ತಂತಮ್ಮ ಚದುರಿನೆಣಿಕೆಯ
ಕಾಂತೆಯರುಂ ಪಲರುಮೊಂದಿ ನೆರೆದಿರೆ ಪಿರಿದುಂ
ಭ್ರಾ[ತಿಂ]ನೆರೆದರ್ [ಕೂಂ]ಟಣಿ
ಯರ್ತಂತಮ್ಮಿಚ್ಛೆಯಿಂದಮಿಂತಿಂತೆಂಬರ್ (?) ೩೨

ಮ || ಜಗದಂತಂಬರಮಂ ಧರಾತಳಮುಮಂ ಪೋಲ್ವುಗ್ರಪಾತಾಳ ಸೂ
ಚಿಗಳಂ ಗರ್ಜಿಪ ಭೇರಿ ತಾಟಕಿಯರಂ ಮೇಗಿಲ್ಲದಾಕಾಶಗಂ
ಟೆಗಳಂ ವಿಸ್ಮಯಮಾಗೆ ಬಂಚಿಪ ಕೃತಾಕೃತ್ಯತ್ವದಿಂ ಸಂ[ಗದಾ]
ಳುಗಳಂ ಕೂಂಟಣಿಯರ್ಕಳಂ ಪಲರುಮಂ ಕಂ[ಡರ್ ವ]ಣಿಙ್ನಂದ[ನರ್] ೩೩

ವ || ಕಂ[ಡಿಂ]ತಪ್ಪವರ್ ತಮ್ಮ ಜಾತಿಸ್ವಭಾವಂಗಳಳಂಕಾರದೊಳ್ ಕೂಡಿರ್ದರಂತೆ ನೋೞ್ಪರೊಂದೆಡೆಯೊಳ್

ಮ || ಚದುರೊಳ್ ಜವ್ವನದೊಳ್ ವಿಳಾಸದೆಡೆಯೊಳ್ ಮತ್ತೊರ್ವಳೆನ್ನನ್ನಳಿ
ಲ್ಲದಲೇನಿಂದ್ರನೊಳಾದ ಬಾೞ್ ಸವತಿವಾೞೀ ಪೊಲ್ಲದಾನೊಲ್ಲೆನೀ
ಪುದುವಾೞೀ ನರಲೋಕದಲ್ಲಿಗಿೞಿದಾನೆನ್ನಿಚ್ಛೆಯಿಂದೊತ್ತೆಗೊ
ಳ್ವುದು ಲೇಸೆಂದಿೞಿತಂದ ರಂಭೆಯೆನೆ ಪೋಲ್ತಿಂತೊತ್ತೆಗೆಂದಿರ್ದಳಂ ೩೪

ವ || ಕಂಡಂತಪ್ಪುಪಮೆಗೆ ತಕ್ಕಳೆಂದು ನೋಡುತ್ತಂ ಬರ್ಪರೊಂದು ರಮ್ಯ ಹರ್ಮ್ಯದ ಮುಂದೆ

ಚಂ || ಕುರುಳಳಿಗಳ್ ಮೊಗಂ ಸರಸಿಜಂ ನಯನಂಗಳ್ ಬಾಳೆಮೀನ್ ಪಯೋ
ಧರಯುಗಳಂ ರಥಾಂಗಯುಗಳಂ ರಸಭಾವಮನೀಕೆಯರ್ ನಯಂ
ಬೆರಸಿದ ಮಾತಿನೊಳ್ಪು ಕೊಳರ್ವಕ್ಕಿಯ ಮೆಲ್ಲುಲಿಯಾಗಿ ನಿಂದಳಂ
ವಿರಹಿಗೆ ಸೇದೆಯಂ ಕಳೆವ ಶಕ್ತಿಯ ಪೂಗೊಳನೆಂದೆ ನೋಡಿದಂ ೩೫