ವ || ಎಂದ ಮಾತಿಂಗೆ ಚಾರುದತ್ತನೆಂಗುಮಾನುಱುಮಾಱಱಿಯದಿಂತೆನೆ

ಕಂ || ನಿನ್ನಿಂದಗ್ಗಳಮಾಗಿ
ರ್ಪನ್ನಂ ಮನುಜೇಂದ್ರನೊಳನೆ ಜಗದೊಳಗದಱಿಂ
ನಿನ್ನೆಡಱೂಳೆನ್ನಮಿತ್ತ ಮ
ಹೋನ್ನತಿಗೀ ಮೂಱುಲೋಕಮುಂ ಬೆಲೆಯಲ್ಲೇ ೨೪

ವ || ಅದುವುಂ ಬೆಲೆಗೆವಾರದು ಮುನ್ನಂ ಲೇಸಲ್ತೆನ [ಲ]ಪ್ಪೊಡೆ ನೀನೆನ್ನಂ ಬಾೞಿ ಸಿದನಿತಱೊಳ್ ಮೂಱುಲೋಕದನಿತೆ ಬೆಲೆಯಾದುದಱಿಂದೆನ್ನಿ[ತ್ತು] ದೊಳ್ಳಿತ್ತೆ ತುದಿಯೊಳ್ ಬಾೞಿಸಿದಗ್ಗಳಿಕ್ಕೆ ನಿನಗಾದುದೆನೆ ವಿಕ್ರಮಾದಿತ್ಯನಿಂತೆಂದಂ

ಕಂ || ಇತ್ತೈ ಬಱಿಯೆಲುವಂ ನೀಂ
ಸತ್ಯಂ ಬೞಿಕಿನ್ನಳುಂಬಮಾಗುವ ಪೊಱೆಯಂ
ಪೊತ್ತಿರಲಾಱದೆ ಬಂದಾ
ನೆತ್ತಿದೆನೆನ್ನೊಂದು ದಿವ್ಯಶಕ್ತಿಯ ಬಲದಿಂ ೨೫

ವ || ನಿನಗಾಯುಷ್ಯಮುಳ್ಳುದನಱಿದು ದಿವ್ಯಶಕ್ತಿಯೊಳೆತ್ತಿದೆನ್ನ ಸಾಮರ್ಥ್ಯಮಕ್ಕುಂ ತಱಿಸಲಲಕ್ಕುಮೆ

ಕಂ || ವಸುಧಾತಳಮಂ ಕೈಯಾ
ನಿಸಿದಳವುಂ ಮಸುಳೆ ಬೇ[ಗಮದು ತಾಂ] ಕಯ್ಯಾ
ನಿಸಿದಳವ [ದುಮಿಂತಿದು] ಚಿಂ
ತಿಸುವೊ[ಡೆ] ಸಾಮಾನ್ಯದಳವೆ ವಣಿಜಕುಮಾರಾ ೨೬

ವ || ಇನ್ನು ಪೆಱದೇನುಮೆನ್ನದಿರ್ ನೀಂ ಮನುಷ್ಯಲೋಕದೊಳ್ ನೀನೆ ಗಂಡನೆಯೆಂದು ತನ್ನ ದಿವ್ಯರೂಪಂ ತೋಱಿ ಸುವರ್ಣವೃಷ್ಟಿಯಂ ಸುರಿದು ಪೋದನಾಗಳ್ ಪೊೞಲೆಲ್ಲಮಚ್ಚರಿವಟ್ಟು ಬಂದು ವಸುಧಾರೆಯ ಮಣಿಕನಕಂಗಳಂ ದೀನಾನಾಥ ಯಾಚಕ ಜನಕಿತ್ತು ಉೞಿದುದಾನಾ ಚೈತ್ಯಾಲಯದ ದಾನಮಭಿಷೇಕ ಪೂಜೆಗೆ ಕೊಟ್ಟು ಸುಖದಿನಿರ್ಪಿನಂ ಧನದತ್ತಂ ಬಂದು ತದುವೃತ್ತಾಂತಮೆಲ್ಲಮನಱಿದು ಬೆಕ್ಕಸಂಬಟ್ಟು ಮನೆಗೊಡಗೊಂಡು ಪೋದನಂತಲ್ಲಿ ಕೆಲವು ದಿವಸಮನಿರ್ದು ಧನದತ್ತನೊಡಂಬಡಿಸಿಯೊರ್ವನೆ ಪೋಗಿ ಹೇಮಾಂಗಮೆಂಬ ನಾಡ ರಾಜಪುರದ ಸಮೀಪದ ತಾಪಸಾವಳಿಯನೆಯ್ದಿರ್ಪುದುಂ ಪೂರ್ಣಾಕ್ಷಿಯೆಂಬ ತಾಪಸಂ ಕಂಡೆತ್ತಣಿಂ ಬಂದಿರೆನೆ ಚಂಪಾಪುರವಾಸನೆನರ್ಥೋಪಾರ್ಜನಾ ನಿಮಿತ್ತಂ ಬಂದೆನೆಂದೊಡಾ ಭಾನುಸೆಟ್ಟಿಯರೆಮಗಿಷ್ಟರಿಂ ನೀಮುಮೆಮಗಿಷ್ಟರಿಂ ನೀಮುಮೆಮಗವರಿಂ ಬಂಧುಗಳೆಂದತಿಪ್ರಿಯದಿಂ ಮನ್ನಿಸಿ ನಿನಗಿನ್ನು ಪೆಱದುದ್ಯೋಗಂ ಬೇಡ ನರೇಂದ್ರನಾದನುಂ ಕಲ್ವುದದಱೊಳಲ್ಲದರ್ಥಮಂ ಪಡೆಯಲುಬಾರದೆಂದು ಕಿಱೊದು ಪ್ರತ್ಯಯಮಂ ತೋಱಿ ನಂಬಿಸಿಯೊಂದು ದಿವಸಮೀ ಬೆಟ್ಟದೊಳೊಂದು ರಸದ ಕೂಪಮುಂಟು ನಾವುಂ ತಪ್ಪಬಾಯೆಂದಾತನನೊಡಗೊಂಡು ಬಿಲವಾದ ತಂತ್ರೋಪಕರಣಂಗಳಂ ಕೊಂಡು ಪೋಗಿ ಬಿಲಮನೆಯ್ದಿ ನೀನೀ ಬಿಲಂಬುಗಲ್ ಶಂಕಿಸುವೆಯಾನೀ ನೇಣಂ ಪಿಡಿದಿೞಿದಪ್ಪೆಂ ನೀನಿಲ್ಲಿರ್ದು ತೆಗೆದುಕೊಳ್ಳೆಂಬುದು [೦] ಶಂಕಿಸುವೆಯೆಂದುದಕ್ಕೆ ಚಲಂಬಟ್ಟಾನೆ ಪುಗುವೆನೆ ನಲಂತೆಗೆಯ್ಯೆಂದೊಸೆದು ಸಕಳಿಯನಿಟ್ಟು ಸೋರೆಯ ಗುಂಡಿಗೆಯಂ ಬೆನ್ನೊಳಟ್ಟ ಕೈಮುಟ್ಟದೀ ರಸಮಂ ತೀವಿಕೊಳ್ಳುದೆಂದೊಡೆ ಚಾರುದತ್ತನಿೞಿದು ತೀವಿಕೊಟ್ಟೊಡಾ ತಾಪಸಂ ರಸಮಂ ತೆಗೆದುಕೊಂಡು ಮಗುೞೆ ನೇಣನಿಱಿಯೆಬಿಡದಿರೆ ನಾಡೆಯುಂ ಪೊಕ್ಕು ನೇಣ ಬರವಂ ಪಾರ್ದಿರ್ದು ಬರವುಗಾಣದೆ ಬೇಸತ್ತಿಂತೆಂದಂ

ಮ || ರಸಮಂ ಕೊಳ್ವೆಡೆಗೆನ್ನನಿಕ್ಕಿ ಗೊರವಂ ಕೊಂಡೊಯ್ದನಿನ್ನೇಕೆ ಚಿಂ
ತಿಸುವೆಂ ಮುನ್ನಿನ ಪೋದ ಬಂದೆಡೆಗಳೊಳ್ ಸಾವೆಯ್ದೆ ಬರ್ಪನ್ನಮು
ಬ್ಬಸದೊಳ್ ಬರ್ದೆನಿದರ್ಕುಪಾಯಮಣಮಿಲ್ಲೊಂದುಂಟು ದುರ್ಮೋಹಮಂ
ಬಿಸುಟೆಂ ದೇವರದೇವ ನೀನೆ ಶರಣೆಂದಿರ್ಪೆಂ ಮನಶ್ಶುದ್ಧಿಯಿಂ ೨೭

ವ || ಎಂಬುದುಮಲ್ಲಿರ್ದನೊರ್ವ ಪುರುಷಂ ಕೇಳ್ದು ನಿನಗೆ ಪೋಗಲುಪಾಯಮುಂಟು ಚಿಂತಿಸದಿರೆಂದೊಡೆನಗುಪಾಯಮಂ ಪೇೞ್ವ ನೀನಾರ್ಗಿಲ್ಲಿಯೇ [ಕಿ] ರ್ದೆಯೆಂದೊಡಾಂ ರಾಜಪುತ್ರನೆನರ್ಥದಿಂದಾನುಮೀ ಗೊರವನ ಗೋರಿಯೊಳ್ ಬಿರ್ದೆನೆನ್ನುಮಂ ಕೊಂಡು ಪೋದೋದೊಡಾಂ ತೃಷೆಯೊಳ್ ಸೈರಿಸದೆ ರಸಮಂ ನೀರೆಗೆತ್ತು ಕುಡಿಯಲೆಂದೆರೞ್ ಕೈಯೊಳಂ ಮೊಗೆವುದುಂ ಕೈಗಳ್ ಮುರುಂಟಿ ಕೊಳೆತುಪೋದುವದಱಿಂ ಪೋಗಲಱಿಯದಿರ್ದೆ ನಗವಸ್ಥೆಯಾದುದು ನಿನಗುಪಾಯಮಾವುದೆಂದೊಡಿಲ್ಲಿಗೆ ಪಿರಿದಪ್ಪುದೊಂ[ದುಡು]ಬಂದೀ ರಸಮನುಂಡು ಮೆಲ್ಲನೆ ಪೋಪಾಗಳದಱ ಬಾಲಮಂ ಪಿಡಿದೊಡದು ಕೊಂಡು ಪೋಕುಮೆನ [ಲು]ಡುವಂ ನೋೞ್ಪೆನೆಂದಿರ್ಪಿನಮಾತಂಗಂ ಪ್ರಾಣಾವಸ್ಥೆಯಾದೊಡೆ ಪಂಚನಮಸ್ಕಾರಮಂ ಪೇೞ್ದು ಸಮಾಧಿಯಂ ಕೂಡಿದನನ್ನೆಗಮುಡು ಬಂದು ರಸಮನುಂಡು ನೆಗೆಯಲದಱ ಬಾಲಮಂ ತಿಣ್ಣಂ ಪಿಡಿವುದುಂ ಕೊಂಡಡರ್ವಾಗ ಮೊನೆಕಲ್ಲ ಕೋಳ್ಗೆಸೈರಿಸುತ ಮಹಾಶ್ವಾಸಮಂ ತಿಣ್ಣಂ ಪಿಡಿದನೂರ್ಧ್ವಗತಿಗೆ ಸಲ್ವಂತೆ ಮೇಗಣ್ಣಡರ್ವುದುಂ ಬಿಲದಿಂ ಪೊಱಮಟ್ಟು ಸಮಭೂಮಿಯಲ್ಲಿ ಪರಿವಾಗಳ್ ಪತ್ತುವಿಟ್ಟಿರ್ದು ಕುಳ್ಳಿರ್ದು

ಕಂ || ಪೊಡವಿಯಡಿಯೆತ್ತ ಪೊಕ್ಕಘ
ಪಡುವುದಿದೆತ್ತೊರ್ಬನಿಂತುಟಂ ಪೇೞ್ವು [ದದೆ]
ತ್ತುಡು ಪಡಿದೊಡೆ ಕೊಂ
ಡಡರ್ವುದೆತ್ತೇಂ ವಿಚಿತ್ರವೋ ಸಂಸಾರಂ ೨೮

ವ || ಎಂದಲ್ಲಿಂದಮೆರ್ದು ಪೆರ್ಬುಲ್ಲೊಳಗಂ ಪುಗುತರಲಲ್ಲಿ ಪಟ್ಟ ಪೆರ್ವಾವಂ ಮಟ್ಟಿಪೋಪುದುಂ ಪೆಱಗಣೊಂದು ವನಮಹಿಷಂ ಸೊಕ್ಕಿ ಪರಿತಪ್ಪುದುಮದಱ ರಭಸಕ್ಕಾ ಪಾವೆರ್ದು ಬಾಯಂ ತೆಱೆದು

ಕಂ || ಎಂತು ಬರ್ದುಂಕುವೆನೆಂದು ಕೃ
ತಾಂತಂ ಬರ್ಪಂತೆ ಬರ್ಪ ಮಹಿಷಾಧಿಪನಂ
ನೋಂತರ ಪಗೆಗಳನೆತ್ತಿಱಿ
ದಂತಾಗವಯವದೆ ಬಂದು ನುಂಗಿತ್ತಾಗಳ್ ೨೯

ವ || ಅಂತಲ್ಲದೆಲ್ಲಮಂ ಮಗುೞ್ದು ನೋಡುತ್ತಿರ್ದು ಕಂಡಾರುಮನಾಯುಷ್ಯಮೆ ಕಾಗು ತಾಂ ಕಾಯಲಾಱನೆಂದಂತೆ ಪೋಪನೊಂದು ತೊಱೆಯಂ ಕಂಡಲ್ಲಿ ಪಾದಪ್ರಕ್ಷಾಳ ನಂಗೆಯ್ದು ನೆೞಲೊಳ್ ವಿಶ್ರಮಿಸಿರ್ಪಿನಂ ರುದ್ರದತ್ತಂ ತನ್ನರಪ್ಪಯ್ವರ್ ಸಹಾಯರುಂ ತಾನುಂ ತೊಟ್ಟನೆಕೊಳೆ ಬಂದೊನಂ ಕಂಡಱಿದೆರ್ದಿಚ್ಛಾಕಾರಂಗೆಯ್ದಪ್ಪಿಕೊಂಡನಂ ಪರಸಿ ಕುಳ್ಳಿರ್ಪುದುಮಿಂತೇಕಾಯಾಸಂಬಡುವೆಯೆನೆ ಎನ್ನ ಬುದ್ಧಿಯೊಳ್ ನಮ್ಮೊಕ್ಕಲಂತಾ ದೊಡವಿಂತಾದೊಡಮೆಂತಿರ್ಪೆನೆನಲಾನುಂ ನಿನ್ನ ಲೋಕಮೆ ಲೋಕಮೆಂದು ಬಂದೆನೆಂಬುದುಮೆಮ್ಮಬ್ಬೆಗಳುಂ ನಿನ್ನ ಸೊಸೆಯುಂ ಬಲ್ಲಿದರೆ ಪೇೞೆನೆ ನಿನ್ನಂ ಕಾಣ್ಬೆಮೆಂಬಾಸೆಯೊಳ್ ಬಲ್ಲಿದರಲ್ಲದೆ[ಮ್ಮ]ವರ್ಗಾವಬಲಂ ವಸಂತತಿಳಕೆಯುಂ ನಿನ್ನನಗ[ಲ್ದು]ನಾಡೆ ಪೊತ್ತಿಂಗೆ ಸೊಕ್ಕು ತಿಳಿದು ತಮ್ಮಬ್ಬೆಗೆಯ್ದ ಯೋಗಮುಮಂ ನಿನ್ನ ದೇಶತ್ಯಾಗಮುಮನಱಿದೀ ಭವಕ್ಕೆ ಚಾರುದತ್ತನಲ್ಲದ ಗಂಡರ್ ಮೊಱೆಯಲ್ಲರೆಂದು

ಕಂ || ರಸವರ್ಧನಂಗಳಂ ಬಿಸು
ಟಸುವಱೆ ಪಿಣಿಲಿಱಿದು ಕೇಶಮಂ ಕಾಸೆಯನು
ಟ್ಟಿಸಿಧಾರವ್ರತಿಯಾಗಿ
ರ್ದಸಿಯಳ್ ಕರಮಸಿಯಳಾದಳಂದಿಂ ಬೞಿಯಂ ೩೦

ವ || ಎಂದ ಮಾತಿಂಗೆ ಚಾರುದತ್ತಂ ಮುಗುಳ್ಳಗೆ ನಕ್ಕಿಂತೆಂದಂ

ಕಂ || ಧನಮುಳ್ಳಿನೆಗಂ ವೇಶ್ಯಾಂ
ಗನೆ ಪ[ತ್ತು]ಗುಮಲ್ಲದಂದು ಮನದೊಳಗಿರಿಸಳ್
ಮನೆಗಂ ಬರಿಸಳ್ ಕೂರ್ತಂ
ಗೆನ[ಸುಂ ಮುಳಿವಳ್]ಕೆಲನಱಿಯೆ ಕೊಂಡುಕೊನೆಯಳ್ ೩೧

ವ || ಅದಱಿಂ ಸೂಳೆಗೆ ಮೇಳದಾಣ್ಮನಿಂದಗ್ಗಳಮಪ್ಪಾತಂ ದೊರೆಕೊಳದನ್ನೆಗ ಮಿತ್ತಣ್ಗಾಗಿರ್ಕುಮಾಕೆಯಂ ನಂಬಿ ನುಡಿಯಲಾಗೆನೆ ರುದ್ರದತ್ತನೆಂದಂ

ಕಂ || [ಇ]ನಿದನುಣಲರ್ಥಿಯುಳ್ಳಂ
ದಿನಿಯನ ಕೂಟ[ಕ್ಕ]ಮರ್ಥಿಯಕ್ಕುಂ ವೇಶ್ಯಾಂ
ಗನೆ ಸುಖಮಱಿಯಳ್ ತೀರ್ವಂ
ದಿನಿಯನಗಲ್ವಂದು ನುಂಗಲಾರ್ಕುಮೆ ವಿಷಮಂ ೩೨

ವ || ಭವ್ಯನಪ್ಪಂ ನಿರ್ದೋಷಿಯಪ್ಪ ಪರಮಾತ್ಮನಂ ಬಿಸುಟು ಪಾಪಿಯಪ್ಪುಗ್ರ ದೇವತೆಯನಾರಾಧಿಸಿ ಗತಿವಡೆಯದಂತೆ ಚದುರೆ ಚದುರನಪ್ಪ ಬೇಟದಾಣ್ಮನಂ ಬಿಸುಟಳಿದನ [ಪ್ಪೆನಗಂ] ಪೊರ್ದಿವಡೆ ಸುಖಂಬಡೆಯಳದಱಿಂದನಿಷ್ಟ ಸಂಯೋಗಂ ದುಃಖ ಸಂಯೋಗದಿಂ ವ್ರತದೊಳ್ ಕೂಡಿದ ದುಃಖವೊಳ್ಳಿತ್ತೇಕೆ ಮರುಳಾಗಿರ್ದಳಲ್ಲಳದಂ ಕಂಡು ನಂಬುವುದೆಂದ ಬೞಿಯಂ ಗೋಮುಖಾದಿ ಸಹಾಯರ ಸುಖವಾರ್ತೆಗಳಂ ಬೆಸಗೊಂಡೊಡವರ ಸಾಂತಮಮೆಲ್ಲಮನಱಿಯೇಪೇೞೆ ಕೇಳ್ದಂತಂತೆ ಪಯಣಂಬೋಗಿ ಶ್ರೀಪುರಮೆಂಬ ಪೊೞಲನೆಯ್ದಿಯಲ್ಲಿ ರುದ್ರದತ್ತನಂ ಪ್ರಿಯಮಿತ್ರನೆಂಬ ಸೆಟ್ಟಿ ಕಂಡತಿಪ್ರಿಯದಿಂದಿರಿಸಿ ಕೆಲವು ದಿವಸಮಿರ್ದಲ್ಲಿ ಚಾರುದತ್ತಂ ವಿದ್ಯೋಪದೇಶಂಗೆಯ್ಯೆ ಬಂದ ಮನ್ನಣೆಯೊಳ್ ಸಂಬಳಮಂ ಮಾಡಿಕೊಂಡಲ್ಲಿಂದಂ ಪೋಗಿ ಗಾಂಧಾರವಿಷಯದೊಳ್ ಕಾಚವಳಯಂಗಳಂ ಕೊಂಡು ವೇತ್ರಪರ್ವತದ ಶಿಳಾಭಿಧಾನಗುಹೆಯೊಳಗನುರ್ಚಿಪೋಗಿ ಹಿಮಕೂಟಾದ್ರಿತಟದ ಕಿರಾತಾಶ್ರಯದೊಳ್ ಮಣಿಖಂಡಮಂ ಮಾಱಿಯಾ ಸಂಬಳದಿಂ ಪೋಗಿ ರಜತಗರಿಯ ಮೊದಲ ಸಾರವಳ್ತಿಯನೆಯ್ದಿದಲ್ಲಿಯೊರ್ವಂ ಭಾಷೆಯಱಿವ ಬುದ್ಧಿಮಾನಸನಂ ಕಂಡು ರತ್ನದ್ವೀಪಕ್ಕೆಂತು ಪೋಪುದೆಂದೊಡೆ ಅಜಪಥದೊಳ್ ಪೋಪುದು ಕರಮರಿದೆಂತೆನೆ

ಕಂ || ಎರಡುಂ ಕೆಲದೊಳಗಾದಂ
ಕರಮೋರಂತೇಕಶಿಲೆಯ ಕ[ರಮಂತದು ತಾ
ನಿರದಾ]ದೂರಮೊಗೆದು [ನಾ]
ಲ್ವೆರಳಸಿ [ಧಾರೆಯದು]ಗಡಮೆಯಜಪಥದಗಲಂ ೩೩

ವ || ಎಂದು ಪೇೞ್ವಲ್ಲಿ ಚಾರುದತ್ತಂಗೆ ನಿದ್ರೆ ಬಪ್ಪುದುಂ ಅದು ಮನಸ್ವಿಯಲ್ಲದೊಂಗೆ ನೋಡಲಾಗದೆಂದೊಡೆ ನುಡಿಯಲೆಂತಪ್ಪುದಾ ಬೞಿಯ[ಮಾ]ಡಪೋ[ರಿ] ಯನೇಱಿ ಸಮಭೂಮಿಯೊಳಿೞಿದು ತಿದಿಯಂ ಪೊಕ್ಕಿರ್ದೊಡೆ ಭೇರುಂಡವಕ್ಕಿ ಬಂದು ಕೊಂಡುಪೋಗಿ ರತ್ನದ್ವೀಪದೊಳಿಕ್ಕುಗುಮಂತಲ್ಲದಗಮ್ಯಮಪ್ಪ ಸಾಹಸದೊಳಾರುಂ ನೆಗೞ್ದರಿಲ್ಲೆಂದೊಡದನಂತೆ ಕೇಳ್ದು ತಮ್ಮೊಳಾಳೋಚಿಸುವಲ್ಲಿ ಕೆಲ[ರ್] ಪ್ರಾಣಗೊಂಡಮಿಂದೆಂದೊಡೆ ಚಾರುದತ್ತನಿಂತೆಂದಂ

ಕಂ || ತನಗಾಯುಮುಳ್ಳೊಡೆನತು
ರ್ವಿನದ ನೆಗರ್ತೆಗಳುಮಳಿವು ತಾನಿಲ್ಲದೊಡಂ
ತೆನತುಪ್ಪಯೊಗಂಗೆಯ್ದೊಡ
ಮೆನಸುಂ ಕಾಯಲ್ಕೆ ಬಾರದಿದು ಪರಮಾರ್ಥಂ ೩೪

ವ || ಅದಱಿನಿದುವಂ ನೋೞ್ಪೆಮೆಂದಡೆಮಗೆ ಪೆಱದು ಬಗೆಯುಂಟೆ ನಿನ್ನಾದು ದನಪ್ಪೆಮೆಂದು ವಿಚ್ಛೇದಿಸಿ ತಮ್ಮ ಕಯ್ಯ ಸಂಬಳದ ಪಣವೆಲ್ಲಮಂ ಕೊಟ್ಟು ಸತ್ವಯುತಂಗಳಂ ಪಿರಿಯಪ್ಪೇೞು ಪಿರಿಯಾಡಪೋರಿಗಳಂ ಕೊಡು ಕೀೞಿಟ್ಟಲೆದು ಪಲ್ಲಣಂಗಟ್ಟಿ ನಡೆಯಿಸಿ ಬೞಿಯಮೇಱಿ ಕೆಲದಸಿಯ ಕಲ್ಗಳಮೇಲೆ ನಡೆಯಿಸಿ ಪರಘಾತಂಗೆಯ್ದು ನಾಮಿಂ ಪೋಪಮೆಂದೊಂದುದಿವಸ

ಕಂ || ಮೆಳ್ಬರುಮೇೞುಂ ಪಾಶ[೦]
ಗಳನೆಮ್ಮಿನಿಬಿರ ಪುಣ್ಯ ಪ್ರಭಾವಮೇಂ ಕೇವಳಮೇ? ೩೫

ವ || ಎಂದಡಕ್ಕುಮಿನ್ನಾವುದಱೊಳಮೇಂ ನಡೆಯಿಮೆಂದಜಪಥದೊಳ್ ಕುಳಿದು ಪೋಗಿ ಸಮಭೂಮಿಗಿೞಿದು ವಾಹನದಿನಿೞಿದು ವಿಶ್ರಮಿಸಿರ್ಪುದುಂ ಚಾರುದತ್ತಂ ಪಾದ ಪ್ರಕ್ಷಾಳನಾನಿಮಿತ್ತಂ ಜಲಾಶ್ರಯದತ್ತಪೋದನನ್ನೆಗಂ ರುದ್ರದತ್ತಂ ಪಾರಸಿಗನುಪದೇಶಮಂ ಬೇಱೆಯುಂ ಕೇಳ್ದನೆಪ್ಪುದಱಿಂ ತನ್ನ ಕಯ್ಯ ಕತ್ತಿಗೆಯಿಂದೇೞಾಡಪೋರಿಗಳಂ ತಲೆಯನರಿದು ತಿದಿಯುಗಿದು ಛಿದ್ರವಾದೆಡೆಗಳಂ ಪೊ[ಲಿದಿ]ರ್ದನಂ ಚಾರುದತ್ತಂ ಬಂದಿದೇಂ ಪೊಲ್ಲಕೆಯ್ದಿರಾಂ ರತ್ನದ್ವೀಪಮೆಯ್ದುವುದಂಕಾಣೆಂ ಪಾಪಮೆಯ್ದುವುದಂ ಕಂಡೆನೆತ್ತಾನುಂ ಪೞೆದೊಗಲ ತಿದಿಯೆಂದು ಬಗೆದೆಂ ಪ್ರಾಣವಧೆಗೆಯ್ದುದನಱಿಯೆನಾದೊಡಂ

ಕಂ || ಪೋಗಲರಿದಪ್ಪ ಬಟ್ಟೆಯೊ
ಳೀಗಳ್ ಪೊತ್ತಿರ್ದು ನಮ್ಮ ಸಾವಿನೊಳಿವು ತಂ
ದೀಗಳ್ ಗೆಯ್ದೀ ಯೋಗದ
ಪಾಂಗಿಂ[ನೀ]ಮಿಂತು ನೆಗೞಲಕ್ಕುಮೆ ಪೇೞಿಂ ೩೬

ವ || ಆದೊಡಂ ನೀಮೇವಿರಾನೆನ್ನ ಸಾಹಸದ ಲಂಪಳಿಯೊಳಿಂತಪ್ಪಂದನಾರಯ್ಯದೆ ನೆಗೞ್ದೆನಿದೆಲ್ಲಮೆನ್ನ ದೋಷಮೆಂದೆ ಕೊಕ್ಕರಿಸುತ್ತಿರೆ ರುದ್ರದತ್ತಂ ಮುನ್ನೆ ನಮ್ಮೊಕ್ಕಲಂ ಕೆಡಿಸಿದ ಪೞಿಯುಮೀಗಳಿನಪಾಯಮುಮೆನ್ನದಲ್ಲದೆ ಪೆಱರ್ಗಿಲ್ಲಿನ್ನೆತ್ತಲುಂ ಪೋಗಲುಂ ಪಾಂಗಿಲ್ಲದನಱಿವೆಯೆಂದಾಗಳ್ ಪ್ರಾರಬ್ಧಸ್ಯಾಂತಗಮನಂ ಮಹಾಪುರುಷಸ್ಯಲಕ್ಷಣಮೆಂದಿಂ ಕುಸಿಯಲಾಗದೆಂದು ಖಂಡಂ ಪೊಱಗಾಗೆ ಮಗುರ್ಚಿದೇೞುಂ ತಿದಿಯುಮನೇೞುಂ ಪಕ್ಕಿ ಕೊಂಡು ನೆಗೆದು ಒಂದಕ್ಕೆ ದೊರೆಕೊಳ್ಳದೆಯವಱ ಬೞಿಯನೆ ಬರುತ್ತಂ ಚಾರುದತ್ತನಿರ್ದ ತಿದಿಯಂ ಪಿಡಿದು ಪಾಱುವ ಪಕ್ಕಿಯೊಂದು ಕಣ್ಕುರುಡ [ಪ್ಪು]ದಱಿಂದಾ ಕುರುಡಗಣ್ಣನಿಱಿಯುತ್ತಮದು ಬರೆ ಮೇಗೆ ನೆಗೆದಾ [ತಿದಿ]ಯಂ ಬಿಸುಟ ಪಕ್ಕಿಯನೆರ್ಬಟ್ಟಿ ತಿದಿಯಂ ನೀರಂ ಮುಟ್ಟಲೀಯದೆಱಗಿ ಪಿಡಿದುಕೊಂಡು ಪೋಕುಮದು ಮತ್ತೆ ಬಂದಾ ಕಣ್ಣನಿಱಿಗುಮಿಱಿದಾಗಳ್ ಮತ್ತೆಯುಮದಂ ಬಿಸುಟರೆರ್ವಟ್ಟಿ ಬಂದದಂ ಪಿಡಿದುಕೊಳಲುಮಂತು ಪಲವು ಸೂೞ್ ಬಿಡುತ್ತಂ ಕೊಳುತ್ತಂ ಪೋಗೆ ಬೞಲ್ದು ಪೋಪಲ್ಲಿ ಮತ್ತೆ ಬರೆ ತಿದಿಯಂ ಬಿಸುಟರೆರ್ಬಟ್ಟಿ ಮೆಲ್ಲನೆ ಬಂದೆಱಗುವಿನಮೊಂದು ಕುಱುವದ ಕೆಲದೊಳ್ ಬಿರ್ದತ್ತಾಗಳ್ ತಿದಿಯಂ ಪೊರ್ದು ಪೊಱಮಡುವುದನಾ ಪಕ್ಕಿ ಕಂಡು ಪ್ರಾಣಮುಂ [ಟೆಂ]ದು ಪೋಯ್ತಾತನಲ್ಲಿಯಾ ಕುಱುವದ ಜಲಾಶ್ರಯದೊಳ್ ಮಿಂದುಟ್ಟುದನೊಗೆದುಮೊಂದು ಶಿಲೆಯ ಮೇಲೆ ಕುಳ್ಳಿರ್ದಿಂತೆಂದಂ

ಮ || ತಿದಿಯಂ ಪೊಕ್ಕಿರವೆತ್ತ ಪಕ್ಕಿ ಪಿಡಿದೊಯ್ದು [ಯ್ವಂ] ದಮೆತ್ತೀ ಸಮು
ದ್ರದ ಮೇಗೆತ್ತೊಗೆದಲ್ಲಿ ಪೋಱೆ ಪೆಱದೊಂದೆಯ್ತಂದೊಡೆನ್ನಂ ಬಿಸು
ರ್ಪುದಿದೆತ್ತಂತದನಟ್ಟಿ ಮತ್ತೆ ಪಿಡಿದುಂ ಬಿಟ್ಟಿಕ್ಕಿಯುಂ ಕೊಂಡುಮೊ
ಯ್ವುದದೆತ್ತಿಲ್ಲಿ ಬಿಸುರ್ಪುದೆತ್ತನುಚರರ್ ತಾಮೆತ್ತಿದೇಂ ಚೋದ್ಯಮೊ ೩೭

ವ || ಸಾವಂತಪ್ಪ ಗೊಡ್ಡಮನಾಡಿದೊಡಂ ಬಾೞ್ವರ್ವಾೞ್ವನ್ನಪಯೋಗದೊಳ್ ನಡೆವರುಂ ಸಾವರಿಂತಿದೇಂ ಚಿತ್ರಮೊ ಸಂಸಾರಮುಮಿದೆನ್ನ ಕರ್ಮವಿಕಾರದಿಂದಾದ ಪೊರಳ್ಕೆಯೆಂದಂತೆ ನೋೞ್ಪೆನೆಂದುನ್ನತಮಪ್ಪ ಬೆಟ್ಟಮಂ ಕಂಡಿನ್ನೇಕಿರ್ಪೆಂ ಬೆಟ್ಟೇಱಿ ಮೃತ್ಯುಗರೆವೆನೆಂಬಂತೆ ಬೆಟ್ಟಮನಡರ್ದೇಱಿ ಬೆಟ್ಟದ ಶಿಖರದ ಮೇಲೆ ಕಾಯೋತ್ಸರ್ಗದಿನಿರ್ದ ಚಾರಣಋಷಿಯರಂ ಕಂಡಿದು ಸಫಲಮೆಂದೈದೆವಂದು ಬಲಗೊಂಡು ಕ್ರಿಯೆಸಹಿತಂ ಬಂದಿಸಿ ಕುಳ್ಳಿರ್ದು ಕಿಱಿದು ಪ್ತೊತ್ತೇಱಿಯಾ ತಪಸ್ವಿಗೆ ಯೋಗಿನ ಪೊತ್ತು ನೆಱೆದು ಕೈಯನೆತ್ತಿಕೊಂಡು ಪರಸಿ ಕುಳ್ಳಿರ್ಪುದುಂ ದಿವ್ಯಜ್ಞಾನಿಗಳಪ್ಪುದಱಿನಾತನ ತೆಱನನಱಿದು ಭಾನುಸೆಟ್ಟಿ ತಪಸ್ಥರಾದುದಕ್ಕಂ ನಿನಗಿಂತಪ್ಪವಸ್ಥೆಯಾದುದ [ಕ್ಕಮುಬ್ಬೆ] ಗಂ ಪಡಲ್ವೇಡ ಸಂಸಾರಸ್ಥಿತಿಯೇಕಾಕಾರಮಲ್ತೆಂದನಿತ್ಯತೆಯಂ ಪೇೞ್ದುಂಬೞಿಯಂ ಭಟ್ಟಾರಾ ನಿಮ್ಮ ಪೂರ್ವಾಶ್ರಮದ ನಾಮಮೇನೆಂದೊಡಾಮಮಿತಗತಿಯೆಂಬ ವಿದ್ಯಾಧರರೆ ನಾಮು [೦] ನಿನ್ನಿಂದಂ ಕೃತಾರ್ಥರಾಗಿ ಪೋಗಿ ಪಗೆವರಂ ಗೆಲ್ದು ರಾಜ್ಯಂಗೆಯ್ವುತ್ತಿರ್ದು ನಿರ್ವೇಗಮಾಗಿ ತಪಂಬಟ್ಟೆವೆನೆ ಚಾರುದತ್ತನಿಂತೆಂದಂ

ಕಂ || ಎನಗೆ ದರಿದ್ರ [ತೆಯುಮನದ]
ನನುಭವಿಸುತಮಿಂತೆ ಪೋಕುಮಾ ಭವಮಿನ್ನುಂ
ಘನಮಪ್ಪ ಪುಣ್ಯಮುಂಟೋ
ಮುನಿನಾಥಾ ಬೆಸಸಿಮೆರಡಱಿಂ ಕಿಡಲಾಱೆಂ ೩೮

ವ || ಎನೆ ನಿನಗಿನ್ನು ಪುಣ್ಯೋದಯಮಕ್ಕುಂ ಬೇಸಱದಿರೆಂದು ನುಡಿಯುತ್ತಿಪ್ಪಿನಂ ಭಟ್ಟಾರರ ಮಗನ ಮಗನಪ್ಪ ಸಿಂಹಗ್ರೀವನೆಂಬಂ ತನ್ನೊಡವುಟ್ಟಿದರ್ವೆರಸು ಭಟ್ಟಾರರಂ ಬಂದಿಸಲ್ ವಿಮಾನಾರೂಢರಾಗಿ ಬಲಗೊಂಡು ಬಂದಿಸಿ ಮುಂದೆ ಕುಳ್ಳಿರ್ದಿವರಾರ್ಗೆನೆ ನಿಮಗಯ್ಯನಪ್ಪೊ [ನೆ]ಮ್ಮಿಂ ಕಿಱಿಯನೆಮಗುಪಕಾರಂಗೆಯ್ದು ಚಾರುದತ್ತನೆಂಬೊನೀತನೀತಂಗೆ ನಿಮ್ಮ ರಾಜ್ಯಮನೊಪ್ಪಿಸಿ ಬೆಸಕೆಯ್ದು ಬಾೞ್ವುದೆಂದೊಡಂತೆಗೆಯ್ವೆಂ ಮೇಲಂ ನಿಮ್ಮಿಂದಗ್ಗಳಮಪ್ಪ ತಂದೆಯಂ ಪಡೆದೆಯೆಂದು ನುಡಿಯುತ್ತಿರ್ಪಿನಂ ಕುಸುಮಶರನೆಂಬ ದೇವಂ ತನ್ನ ಪರಿವಾರಸಹಿತಂ ವಂದನಾಭಕ್ತಿಗೆ ವಂದು ವಿಮಾನದಿಂದಿೞಿದು ಭಟ್ಟಾರರಂ ಬಲಗೊಂಡು ಬರುತಂ ಚಾರುದತ್ತನಂ ಕಂಡಿಚ್ಛಾಪೂರ್ವಕಂ ಪೊಡವಟ್ಟು ಬೞಿಯಂ ಭಟ್ಟಾರರಂ ಬಂದಿಸಿ ಕುಳ್ಳಿರ್ದುದಂ ಕಂಡು ಸಿಂಹಗ್ರೀವನಿಂತೆಂದಂ

ಕಂ || ವರ ಮುನಿಪುಂಗವರಿರ್ದಂ
ತಿರೆ ಮುನ್ನಂ ಶ್ರಾವಕಂಗೆ ನ[ಯದಿಂದಂ ಬಂ
ದಿರ] ದೆಱಗುವುದೇನುಚಿತಮೆ
ಪರಿವಿಡಿಯೇ ಸಹಜರಾಗಮೊದವಿದುದಕ್ಕುಂ ೩೯

ವ || ಎಂಬುದಮಾ ಪೋದ ಭವದೊಳೊಂದು ಬಿಲದೊಳಗೆ ಸಿಲ್ಲಿರ್ದೆನಲ್ಲಿಗೀ ಮಹಾನುಭಾವನುಂ ಪುರವರದೊಳಲ್ಲಿಗೆವಂದೆನ್ನಂ ಕಂಡು ಕರುಣಿಸಿ ಜೀವಿತಾಂತ್ಯದೊಳೆನಗೆ ಪಂಚನಮಸ್ಕಾರಮಂ ಪೇೞ್ದು ಸಮಾಧಿಯಂ ಕೂಡಿದಮಾ ಸಮಾಧಿಯ ಫಲದೊಳೆನಗಿನಿತು ವಿಭವಮಾದುದಾಕೃತಮನಱಿದೆಱಗಿದೆನೆಂದು ಪೇೞ್ದು ನೀಂ ಬಾ ಮಹೈಶ್ವರ್ಯಮಂ ಮಾಡಿ ನಿನ್ನ ಪೊೞಲಂ ಪುಗಿಸುವೆನೆನೆ ಸಿಂಹಗ್ರೀವನೆಂದನನ್ನೆಗಂ ಎಮ್ಮ ಪೊೞಲ್ಗೊಡಗೊಂಡು ಪೋಪೆಮೀ ಭಟ್ಟಾರರ ಬೆಸನಂತುಟೆಂದೊಡಂತಪ್ಪಡೆ ನೀಮೀತನಂ ಸುಯಿಧಾನದಿನಗಲಲೀಯದೆ ಕೆಲವು ದಿವನಮಿರಿಸಿ ಕಳಿಪುವುದೆಂದು ಮತ್ತಂ ಚಾರುದತ್ತಾ ನೀಂ ಪೋಪ ಕಾಲಕ್ಕೆನ್ನಂ ನೆನೆವುದೆಂದಾ ದೇವಂ ಪೋದನಾಗಳ್ ಸಿಂಹಗ್ರೀವಂಗೆಂದನೆನಗುಳ್ಳದಂ ಪೇೞ್ವೆನೆನ್ನಂ ಸಾಯಲೀಯದೆ ಕಾಯಲಾರ್ಪಿರಪ್ಪೊಡೆ ಬಪ್ಪೆನಲ್ಲದೊಡಿವರಾದುದನಪ್ಪೆನೆನ ಸಮಸ್ತ ಭರಭಾರಮೆಲ್ಲಮಂ ಮಾಡಲಾರ್ಪೆಮೆಂಬುದವರ ಮಾತಂ ಮೀಱಲಱಿಯದಂತೆಗೆಯ್ವೆನೆಂದಾಗಳೆಲ್ಲರುಂ ಭಟ್ಟಾರರಂ ಬಂದಿಸಿ ವಿಮಾನಂಗಳನೇಱಿ ಚಾರುದತ್ತಂ ಬೆರಸು ವಿದ್ಯಾಧರಶ್ರೇಢಿಯನೆಯ್ದಿ ಮಂದಿರಮೆಂಬ ಪೊೞಲನೆಯ್ದುವುದುಂ

ಕಂ || ಅಮಿತಗತಿಗೆಂತು ಪೂರ್ವ
ಕ್ರಮದೊಳ್ ಬೆಸಗೆಯ್ದುಮಂತೆ ಸಿಂಹಗ್ರೀವೋ
ತ್ತಮ ಖಚರಂ ಪಲಕಾಲಂ
ಬೆಸಕೆಯ್ಯೆ ಪೊದಳ್ದೊಂದನುನಯದಿನುಚಿತ ಖೇಚರಲೋಕಂ (?) ೪೦

ವ || ಅಮಿತಗತಿಯನೆತ್ತಿದ ಚಾರುದತ್ತನೆಂಬೊನೀತನೀ ಮಹಾವಿದ್ಯಾತ್ಮಕನುಂ ಪ್ರತಾಪ ವಂತನುಮೆಂದಂಜಿ ಪಲರುಂ ವಿದ್ಯಾಧರರ್ವಂದು ಕಂಡು ಮನಂಗೊಂಡು ತಂತಮ್ಮ ಕೂಸುಗಳಂ ಕೊಡಲಂತು ಪದಿನಱುವರ್ ವಿದ್ಯಾಧರಕನ್ನೆಯರಂ ಮದುವೆಯನಿಂದು ಸಾರ ವಸ್ತುಗಳಂಕೈಕೊಂಡು ಮೀಱಿದರನೊತ್ತಿ ಕಪ್ಪಂಗೊಂಡು ನಿಧಿಪತಿಯುಂ ಖಚರಪತಿಯುಮಾಗಿ ಕೆಲದಿವಸಮಿರ್ದು ಸಿಂಹಗ್ರೀವಂಗೆ ಪೋಪ ಬಗೆಯಂ ಪೇೞ್ದುದಮಾಮಲ್ಲಿರ್ದರೆಲ್ಲರುಮನಿಲ್ಲಿಗೆ ತಪ್ಪೆಮೆಂದುಮಿಂತೆಂದಂ

ಚಂ || ಜನನಿಯ ಜನ್ಮಭೂಮಿಯ ಮಹಾತ್ಮ್ಯತೆ ಮತ್ತೆನಿಸಲ್ಪಮಾದೊಡಂ
ನೆನೆಯದರಿಲ್ಲ ಪುಣ್ಯನಿಚಯೋದಯಮಾದೊಡೆ ಪೋಗದಿರ್ಪರಿ
[ಲ್ಲೆ]ನೆ ಖಚರಾಧಿಪಂ ಮನೆಯೊಳುಳ್ಳನಿತಾನುಮಮೂಲ್ಯವಸ್ತುವಂ
ಮನಮೊಸೆದರ್ತಿಯಿಂ ತರಿಸಿ ಮುಂದಿಡೆ ನೋಡಿ ವಣಿಕ್ಕುಲಾಧಿಪಂ ೪೧

ವ || ನಿನ್ನ ಪಡೆದ ವಸ್ತುವೆಮ್ಮೊಡಮೆಯದಂ ಬಗೆದಾಗಳೆಲ್ಲಂ ಕೊಳಲುಂಟೆಂದೀ ಗಳೊಲ್ಲೆನೆಂಬುದುವೆನ್ನ ಮ[ಗ]ಳ್ ಗಾಂಧರ್ವದತ್ತೆಗೀ ವಿದ್ಯಾಧರಲೋಕದೊಳ್ ಯೋಗ್ಯರಪ್ಪರಿಲ್ಲ ನೀಂ ಭೂಮಿಗೋಚರರೊಳ್ ಸತ್ಪುರುಷನಱಿದು ವಿವಾಹಕಲ್ಯಾಣಮಂ ಮಾೞ್ಪು ದೆಂದೊಡಂತೆಗೆಯ್ವೆನೆಂದಾಕೆಗಟ್ಟುವ ವಸ್ತುವಾಹನಂಗಳುಮಂ ಕೊಳಲೊಲ್ಲದಾನೆ ಸಾಲ್ವೆನೆಂದು ಕೈಕೊಂಡು ಪಯಣ [ಸಾಮಗ್ರಿ]ಯಿಂ ತನ್ನ ಭಂಡಾರಸಹಿತಂ ಸ್ತ್ರೀಯರ್ಕಳುವೆರಸು ಗಾಂಧರ್ವದತ್ತೆಯುಮುಂ ತಾ[ನುಮೀ] ವಿಮಾನಂಗಳ ನೇಱಿಪೊಱಮಟ್ಟುಬರೆ ಸಿಂಹಗ್ರೀವಾದಿ ವಿದ್ಯಾಧರರಾಜರುಂ ತಂತಮ್ಮ ವಿಳಾಸಂಗಳಂ ಮೆಱೆಯುತ್ತಮೊಡವರೆ ನೀಂ ಪೋಪಂದೆನ್ನಂ ನೆನೆವುದೆಂದು ಕುಸುಮಶೇಖರದೇವನಂ ನೆನೆವುದುಮಿಂದ್ರಂ ಬರ್ಪಂತೆ ಬಂದು ಕಂಡೊಡವರೆ ನಭೋಭಾಗದೊಳ್ ಪಯಣಂ ಬಂದು ಚಂಪಾಪುರಮನೆಯ್ದಿ ಪುರ ಬಹಿರಿಗೆಯೊಳ್ ಬೀಡಂ ಬಿಟ್ಟಿರ್ದು

ಕಂ || ಪುರದಧಿಪತಿಗಂತಾಯಂ
ಸುರಪ್ರಧಾನಾತ್ಮಜಾತಿ ಸಮುದಾಯಕ್ಕಂ
ಬರವಂ ಪೇೞ್ದಟ್ಟದೊಡಾ
ದರದಿಂದಂ ಪೊಱಲೊಳೊಸಗೆ ಮಸಗೆ ಸಮಸ್ತಂ ೪೨೨

ವ || ಆ ಪಟ್ಟಣದರಸಂ ವಿಮಳವಾಹನಂ ಬರ್ಪುದುಮಿದಿರೆರ್ದುಚಿತಾಸನದೊಳಿರಿಸಿ ವಿಶೇಷ ಭೂಷಣಂಗಳಂ ಕೊಟ್ಟು ಮನ್ನಿಸಿ ಕಳಿಪಿದನತ್ತ ರುದ್ರದತ್ತಾದಿಗಳಂ ಪಕ್ಕಿಗಳ್ ಕೊಂಡುಪೋಗಿ ರತ್ನದ್ವೀಪದೊಳಿಕ್ಕೆ ತಿದಿಯಂ ಕೊಯ್ದು ಪೊಱಮಟ್ಟು ಚಾರುದತ್ತನಂ ಕಾಣದೆ ಮಹಾದುಃಖದಿಂ ಪಡೆವ ಮೋಹಮನುೞಿದು ತನ್ನಿಂ ಮುನ್ನಮೆ ಬಂದಿರ್ದರೀ ಸುದ್ದಿಗೇಳಲೊಡಂ ಪರಿತಪ್ಪುದುಂ ಪೊಡವಟ್ಟಪ್ಪಿಕೊಂಡವರ ಬಂದ ವೃತ್ತಾಂತಮಂ ಬೆಸಗೊಂಡಱಿದಾತನಂ ತಮ್ಮಯ್ಯನಿಂದಗ್ಗಳಮಾಗಿ ಕೊಂಡಾಡಿ ಬೞಿಯಂ ತನ್ನ ಮನೆಯುಂ ಕೊಂಡಾತಂಗೆ ಬೇಡಿದನಿತಂ ಕೊಟ್ಟಟ್ಟಿ ಬಂದಿಸಿ ತಮ್ಮಬ್ಬೆಯುಮಂ ಮಿತ್ರಾವತಿಯುಮಲ್ಲಿರವೇೞ್ದು ಮಱುದಿವಸಂ ಪೊೞಲನಷ್ಟಶೋಭೆಗೆಯಿಸಿ ಪುರಜನಮಿದಿರ್ಗೊಳೆ ಗಜೇಂದ್ರಮನೇಱಿ ಛತ್ರಚಾಮರಾದಿ ಚಿಹ್ನಂಗಳ್ವೆರಸು ಮೇಗೆ ವಿದ್ಯಾಧರನಿಕರಮಲ್ಲಿಂ ಮೇಗಮರ ಸಮಿತಿ ನೆಲದೊಳ್ ಭೂಮಿಗೋಚರ ಸೈನ್ಯಮಿಂತು ಜಗತ್ರಯಮೊಡವರೆ ವಾಸುಪೂಜ್ಯಭಟ್ಟಾರಕರ ಮಹಾಕಲ್ಯಾಣದಂತಾಗೆ ಪೊೞಲಂ ಪೊಕ್ಕು ತನ್ನ ಮನೆಯನೆಯ್ದಿ ತಾ[ಯ್ಗಂ] ಮಾಂವಗಂ ಪೊಡೆವಟ್ಟು ಮಿತ್ರಾವತಿಯುಂ ತಾನುಮೊಂದು ಪಸೆಯೊಳಿರ್ದು ಸೇಸೆಯುಂ ಪರಕೆಯುಮನಾಂತುಕೊಳುತಂ ಕಿಱಿದುಪೊತ್ತಿರ್ದೊಡವಂದ ಕುಸುಮ ಶೇಖರದೇವಂ ಪೊೞಲೊಳಗೆ ಸುಮವರ್ಣವೃಷ್ಟಿಯಂ ಸುರಿದು ತನ್ನ ನಿಜ ನಿವಾಸಕ್ಕೆ ಪೋದಂ ಸಿಂಹಗ್ರೀವಾದಿ ವಿದ್ಯಾಧರಸಮಿತಿಯೆಲ್ಲ ಮನತಿಪ್ರಿಯದಿಂ ತಣಿಪಿ ಮಱುದಿವಸಂ ಕಳಿಪಿದಿಂ ಬೞಿಯಂ ವಸಂತತಿಳಕೆಯುಂ ಕೂರ್ತುದುಮನೆಲ್ಲರುಂ ಪೇೞೆ ಕೇಳ್ದ

ಕಂ || ತನ್ನೆರ್ದೆಯೊಳಹೋರಾತ್ರಂ
ತನ್ನನೆ ನಿಱಿಸಿರ್ದು ನೆಗೞ್ದ ಬೆಟ್ಟಿದ ಭರದಿಂ
ತ[ನ್ನಂ] ಬಗೆಯದೆ ನೆಟ್ಟನೆ
ತನ್ನನೆ ಬಗೆಯುತ್ತಮಿರ್ದ ನಲ್ಲಳನಾಗಳ್ ೪೩

ವ || ಬರಿಸಿ ಕಂಡು ಮನಂಗೊಂಡು ಕಯ್ಕೊಂಡು ಜೆಡೆಗೊಂಡ ಪಿಣಿಲಂ ತಾನೆ ಬಿಡಿ[ಸಿ] ಕಾಸೆಯಂ ಕಳೆಯಿಸಿದಾಗಳ್ ಮಜ್ಜನಂಬುಗಿಸಿ ಕೈಗೆಯ್ದು ಸುಖಮಿರಿಸಿ ಮಱುದಿವಸಮಾ ಮನೆಯೊಳೆಡೆಯಿಲ್ಲೆಂದು ಪುರಬಹಿರಾಂತರದೊಳ್ ತನಗೆ ಪಿರಿದೊಂದು ಮಾಡಮಂ ಮಾಡಿಸಿ ವಿದ್ಯಾಧರಶ್ರೇಢಿಯಿಂ ತಂದ ಪದಿಱುವರ್ ಪೆಂಡಿರ್ಗಂ ಮಿತ್ರಾವತಿಗಂ ವಸಂತತಿಳಕೆಗಮಂತು ಪದಿನೆಣ್ಬರ್ಗಂ ತನ್ನ ಮಾಡದ ಪೆಱಗೆ ಪದಿನೆಂಟು ಬಳ್ಳಿಮಡಂಗಳಂ ಮಾಡಿಸಿಕೊಟ್ಟು ಮುನ್ನಂ ಕನ್ಯಾಮಾಡಮಂ ಮಾಡಿಸಿ ಗಾಂಧರ್ವದತ್ತೆಯನಿರಿಸಿ ಮಹೋತ್ಸವದೊಳಿರೆ

ಚಂ || ವಿದಿತ ಮಹೋಜ್ವಳೋತ್ತಮ ಗು[ಣಾಢ್ಯ] ಕಳಾಢ್ಯನಿಂದ್ಯಶುದ್ಧವೃ
ತ್ಯುದಮಿತ ಸಾಹಸೋನ್ನತನಶೇಷ ಜಗನ್ನುತನಾಗಿ ಪೆಂಪುವೆ
ತ್ತೊದವಿದ ಚಾರುದತ್ತನಭಿನೂತ ಸುಚಿತ್ತನುದಾತ್ತ ಲಕ್ಷಣಾ
ಭ್ಯುದಯ ಸುಖಪ್ರಯೋಗದಿನನಾಕುಳಮಿರ್ದನನೂನ ಭೋಗದಿಂ ೪೪

ಗದ್ಯ || ಇದರ್ಹತ್ಸರ್ವಜ್ಞ ಪಾದಪದ್ಮವಿರಾಜಿತೋತ್ತಮಾಂಗ ಶ್ರೀ ಬಂಧುವರ್ಮ ನಿರ್ಮಿತಮಪ್ಪ ಹರಿವಂಶಾಭ್ಯುದಯದೊಳ್ ಚಾರುದತ್ತವಿಹಾರವರ್ಣನಂ

ಚತುರ್ಥಾಶ್ವಾಸಂ