ಕಂ || ಪಿರಿಯರಸಿಯ ಪೆರ್ಗಡೆಗಳ
ಬರವಿನ ಕಾರಣಮನಱಿದು ವಿಭವದೊಳಾರ್ಗ[೦]
ಪಿರಿ[ಯನವಂ ದಾನವರಿಂ
ಗರಿಯಂ ಮಿಗೆ] ಕರಿಯ ಹರಿಯ ರೂಪದೊನಾದಂ ೩೬

ವ || ಆಗಿರ್ಪಿನಂ ಪೆರ್ಗಡೆಗಳ್ ಬಂದುದನಿದಿರೊಳಿರ್ದ ಕೃತಕಹರಿಯಂ ಕಂಡವಂದಿರೆಮ್ಮರಸಿ ರುಗ್ಮಿಣಿಯ ಮುಂದಲೆಯ ಕುರುಳಂ ಬೇಡಿಯಟ್ಟಿದೊಡೆ ಬಂದೆವೆಂದೊಡವರ ಮುಂದಲೆಗೆಳಂ ಕೊಯ್ದವರ ಕಯ್ಯೊಳ್ ಕೊಟ್ಟಟ್ಟಿದೊಡವರ್ ಬಂದೆಂಬರರಸಂ ತನಿರ್ದೆಮ್ಮಂ ಪರಿಭವಿಸಿ [ಯ]ಟ್ಟಿದನೆನೆ ಸತ್ಯಭಾಮೆ ಮುಳಿದೆರ್ದರಸನರಮನೆಯೊಳಿರ್ದುದನಱಿದು ಬಂದಿಂತೆಂಗುಮಂದು ನಿನ್ನ ಮಾಡಿದ ಸೋಲಮಂ ಬೇಡಿಯಟ್ಟಿದೊಡೆ ನೀನಿರ್ದಿಂತು ನೆಗೞ್ವುದೆಂಬುದನೆಂದೊಡಾನಲ್ಲೆ ನೆನ್ನ ರೂಪುಗೊಂಡಿರ್ದ ಮಾಯಾವಿಯಕ್ಕುಮಾದೊಡೆ ನನ್ನವರನಟ್ಟಿ ಕುದಿಸುವೆನೆಂದು ತನ್ನ ಪೆರ್ಗಡೆಗಳನಟ್ಟಿದೊಡವರಂ ಪಿಡಿದುಡಿಯೆ ಕಟ್ಟಿ

ಕಂ || ತಲೆಕೆಳಗಾಗಿರೆ ವಿದ್ಯಾ
ಒಳದಿಂದಂ ಬಾಗಿಲಲ್ಲಿ ತೋರಣದಂತಾ
ಗಲಘುಭುಜಂ ನೆಱೆದುದದಂ
ಬಲಿರಿಪು ಕೇಳುತ್ತೆ ಕೆಳರ್ದು ಮುಳಿದಳಿ ರೌದ್ರಂ  ೩೭

ವ || ಮಸಗಿ ಬಲದೇವಸ್ವಾಮಿಯಂ ಬರಿಸಿ ನೀವು[೦] ಪೋಗಿ ತಂದುಕೊಡಿಮೆಂದಟ್ಟಿ ದೊಡೆ ಬಲದೇವಂ ಬರುತ್ತಿರೆ ಕಂಡೀ ಬರ್ಪರಾರ್ಗೆನೆಯರಸಿಯೆಂದಳ್ ನಿಮ್ಮ ಪಿರಿಯಯ್ಯಂ ಮಹಾಬಳ ಪರಾಕ್ರಮನೊಂದೊಂದು ಸಂದಿಯೊಲ್ ಸಾವಿರಸಿಂಹದ ಬಲಮುಳ್ಳೊಡೆಯನೆನೆ ನಿನ್ನೆಂದು ಸಿಂಹದ ಬಲಮಂ ನೋಡೆಂದು ಮುನ್ನಮೆ ಸಿಂಹದ ರೂಪಾಗಿರ್ದು ಬಂದಾಗಳಾತನಂ ತೊಟ್ಟನೆ ಮೇಲ್ವಾಯ್ದು ನುಂಗಿ ಮಾಡದ ಮೇಗಣ್ಗೆ ಲಂಘಿಸಿ ಕಳಶದ ಮೇಗಿರ್ದುದಂ ಪೊೞಲೆಲ್ಲಮಚ್ಚರಿವಟ್ಟು ನೋಡುವಿನಮಿರ್ದು

ಕಂ || ಹಳಧರನಂ ನುಂಗಿ ಮಹಾ
ಜಳಧರಮಂ ನೋಡಿ ಲಂಘಿಪಂತಿರ್ದು ಕರಂ
ಚಲದಿಂ ಚೌವಟದೊಳ್ ಪಾ
ಯ್ದಲಂಘ್ಯಬಲನಲ್ಲಿಯುಗುೞ್ದು ಬ[೦]ದಂ ಮದನಂ ೩೮

ವ || ಆಗಳ್ ಬಲದೇವಸ್ವಾಮಿ ಲೋಳೆವೊರೆದ ಮೆಯ್ಯಂ ದೂಳಿವೊರೆದ ಕಿಸುಗುಳನಾಗಿ ಪೋಗಿ ಹರಿಗೆ ತೋಱಿ ಪೇೞ್ದೊಡತಿಕುಪಿತನಾಗಿ ಬರಲ್ ಬಗೆದೊಡೆ ಪೆಱದಲ್ಲವಂ ಸಾಮಾನ್ಯನಲ್ಲಂ ನೆಱೆದು ಪೋಪುದೆನೆ ಸನ್ನಾಹಂಗೆಯ್ದು ಪೊಱಮಟ್ಟು ಪೊಱವೊೞಲೊಳ್ ಮದುವೆಗೆಂದು ಬಂದಿರ್ದ ಪಾಂಡವ ಕೌರವಬಲಮೆಲ್ಲಮಂ ಕೂಡಿಕೊಂಡಿರ್ದು ರುಗ್ಮಿಣಿಯ ಮನೆಯೊಳಿರ್ದ ಮಾಯಾವಿ ಕಾದಲ್ ನೆಱೆದೊಡೆ ಬರ್ಕೆಂದಟ್ಟಿದೊಡೆ ಕೇಳ್ಗಂಗಜನಬ್ಬ ನೀಮಿನಿ[ಸುಮಂ]ಜದೆ ಮಾಡಮನೇಱೆ ನೋಡುತ್ತಿರಿಮಾನೆನ್ನ ವಿದ್ಯಾಸಾಮರ್ಥ್ಯಮಂ ತೋಱಿ ಬೞಿಯಂ ಕಾಣ್ಬೆನೆಂದು ಪೊಱಮಟ್ಟು ಮಾಯಾಬಲಮಂ ವಿರ್ಗುವಿಸಿ ಚತುರಂಗಸೇನೆಯನಿಂಬಾಗೊಡ್ಡಿ ಕೆಯ್ಯಂ ಬೀಸಿದಾಗಳ್

ಕಂ || ಚತುರಂಗೋದ್ಧತ ಸೈನ್ಯಂ
ಚತುರಂಗಾತ್ಯುಗ್ರ ಸೈನ್ಯದೊಳ್ ತಾಗಿ ಮಹಾ
ದ್ಭುತಮಾಗೆ ಕಾದಿದಾಗಳ್
ಕೃತಕಬಲಂ ಸಾಯದೆನಿತು ಗೆಲೆ ಕಾದಿದೊಡಂ ೩೯

ಕಂ || ಹರಿ ಕಂಡು ತನ್ನ ವಿದ್ಯಾ
ಧರರಂ ಬೆಸಸಿದೊಡೆ ಪೂಣ್ದ[ವರ್] ವಿದ್ಯೆಗಳಂ
ಸ್ಮರಿಯಿಸದನ್ನೆಗಮವರಂ
ಸುರಭಿಶರಂ ನಾಗಪಾಶದಿಂ ಕಟ್ಟಿಸಿದಂ

ವ || ಅದಂ ಹರಿ ಕಂಡು ಪಾಂಡವ ಕೌರವರತ್ತ ನೋಡೆ ನೋಡಿದಡವರ್ ನೂಂಕುವ ಸಮಸಕಮಂ ಕಂಡು

ಕಂ || ಬಿಸಸನಮುಖದಲ್ಲಿಗೆ ಮಾ
ಮಸಕಂ ಮಸಗುತ್ತಿದಿರ್ಚಲೆಯ್ತರೆ ಕಂಡೀ
ಮಸಕಮೆನಗುಗ್ರಹಸ್ತಿಗೆ
ಮಸಗುವ ಮಸಕಮನೆ ಪೋಲ್ತು ತೋಱಿದುದೆನಿತಂ ೪೧

ವ || ನಕ್ಕನಿಬರುಮನಂತೆ ಕೀಲಿಸಿದೊಡದುವನುಪೇಂದ್ರ[೦] ಕಂಡೆಯ್ದೆ ನೂಂಕುವಾಗಳಂಬರದೊಳಿರ್ದನಿಂತೆನ್ನ ಕಣ್ಣ ಪಸವೋಡವಂತು ಮಾಡಿದೊರನಿಂ ತಮ್ಮೊಳ್ ಕೂಡವಂತು ಮಾೞ್ಪೆನೆಂದು ಬೇಗಮಿೞಿತಂದು ಕಾಮದೇವನಂ ಮಾಣಿಸಿ ಬಂದು ನಾರಾಯಣನ ಮುಂದೆ ನಿಂದು ಮಾಣ್ ಮಾಣ್ ಎಂದಿಂತೆಂದಂ

ಕಂ || ಹರಿ ಕೇಳು ನಿನ್ನ ಮಗನಂ
ತಿರೆಗಱಸುತಮಂತೆ ಪೋಗಿ ಪೂರ್ವವಿದೇಹಾಂ
ತರದೊಳ್ ಸೀಮಂದರ ಜಿನ
ವರರಂ ಕಂಡೆನ್ನ ಬಗೆದುದಂ ಬೆಸಂಗೊಂಡೆಂ ೪೨

ವ || ಬೆಸಗೊಳ್ವುದುಂ ನಿನ್ನಱಸುವ ಕೂಸುನಿಂತೆಂಬಸುರನೊಯ್ದಿಂತೆಂದಲ್ಲಿ ಬಿಸುಟೊಡಿಂತೆಂಬ ವಿದ್ಯಾಧರಂ ಕಂಡು ಕೊಂಡುಪೋದನಿಂತೆಂಬ ಪೊೞಲೊಳಿಂತು ಸುಖದಿನಿರ್ದನೆಂದೊಡಂತೆ ಪೋಗಿ ಕಂಡೊಡಗೊಂಡು ಬಂದೆನೀತಂ ನಿಮ್ಮ ಮಗಂ ಕಾಮದೇವನೆಂಬೊನೆನ್ನ ವಿದ್ಯಾಗರ್ವಮನೆಮ್ಮಯ್ಯಂಗೆ ತೋಱಿ ಬೞಿಯಂ ಕಾಣ್ಬೆನನ್ನೆಗಂ ಪೇೞದಿರಿಮೆಂದೆನ್ನಂ ಮಾಣಿಸಿ ನೆಗೞ್ದಿನಿಂ ಕೆಯ್ಯುೞಿಗುಮೆಂದು ಬಂದೞಿಪಿದೆನೆಂದೊಡೊಸೆದು ರಥದಿಂದಮಿೞಿದುಬರೆ ಕಾಮದೇವನಿದಿರಂ ಬಂದೆಱಗಿ ಪೊಡೆವಟ್ಟನನಪ್ಪಿಕೊಂಡು ಪರಸಿ ಮಗನ ಮೊಗಮಂ ನೋಡಿ

ಕಂ || ಅಂತೊಯ್ದಂ[ತೀ]ಡಾಡಿದೊ
ಡಂತೊರ್ವಂ ಕಂಡು ನಡಪಿ ವಿದ್ಯೆಗಳಂ ಕ
ಲ್ತಂತಿರ್ದುಂ ಬಂದನನೆ
ನ್ನಂತೊರ್ವಂ ಪುಣ್ಯವಂತನುನ್ನತನೊಳನೇ ೪೩

ವ || ಎನೆ ಕಾಮದೇವಂ ತನ್ನ ಮಾಯಾಬಲಮನುಪಸಂಹರಿಸಿ ತಂದೆಯ ಪಡೆಯಲ್ಲಿರ್ದಿರ್ದರನೆತ್ತಿವರ ಪೆಸರಂ ಬಿಡಿಸಿ ಕೀಲಣೆಯಂ ಕಳೆದೊಡೆಲ್ಲರುಂ ಬೆಕ್ಕಸಂಬಟ್ಟು ನೋಡಲ್ ಬರೆ ನಾರದಂ ಮುಂದಿರ್ದವರ್ ನಮ್ಮಜ್ಜರಿವರ್ ಪಿರಿಯಯ್ಯಂಗಳಿವರ್ ಮಾವಂಗಳೆಂದು ಅವರಿವರ ಪೆಸರಂ ಪೇೞ್ದು ಪೊಡವಡಿಸಿ ಪೊಡವಟ್ಟು ನಮ್ಮರಸಿ ಮಹೋತ್ಸಾಹವಂತರಾಗಿ ಪೊೞಲನಂತಶೋಭೆಗೆಯ್ಯಲುವೇೞ್ದು ಮಗನಂ ಪಟ್ಟವರ್ಧನ ಮನೇಱಿಸಿ ಯಾದವರ ಪಾಂಡವ ಸಮಿತಿವೆರಸು ಮುಂದೆಗೊಂಡು ನಾರಾಯಣನಿಂದ್ರ ವಿಳಾಸದಿಂ ಪೊೞಲಂ ಪೊಕ್ಕು ಕರುಮಾಡದೊಳ್ ಸಿಂಹಾಸನದ ಮೇಲೆ ಕಾಮದೇವನ ನೊಡಗೊಂಡು ಕುಳ್ಳಿರ್ದು ತನ್ನರಸಿಯರ್ಗೆಲ್ಲಂ ಬೞಿಯನಟ್ಟಿದೊಡವರ್ಗೆ ಮದನಂ ಪೊಡೆವಟ್ಟಿಂಬೞಿಯಮೊಸಗೆವಱೆಯಂ ಪೊಯ್ಸಿ ಮಗಂಗೆ ರಾಜ್ಯಕಂಠಿಕೆಯಂ ಕಟ್ಟಿ ತನ್ನಿಮಿದುವೆ ಲಗ್ನಮುದಧಿಯನೀತಂಗೆ ಬಸಿರ್ಪೂಸಿ ಪೆತ್ತಳ್ ಮದುವೆ ಮಾಡುವೆನೆಂದೊಡಂಗಜಂ ಕೆಯ್ಯಂ ಮುಗಿದೆರ್ದು ಬಿನ್ನಪಮೆಂದಿಂತೆಂದಂ

ಕಂ || ವಿದ್ಯಾಧರಲೋಕದೊಳಾ
ನುದ್ಯದನೂನಾತಿಶಯ ಗುಣಂಗಳ ಪಲವುಂ
ವಿದ್ಯೆಗಳಂ ಸಾಧಿಸುತಿರೆ
ಚೋದ್ಯಂ ಸ್ತ್ರೀರತ್ನಮೆನಗೆ ಸಮನಿಸಿತದಱೆಂ ೪೪

ವ || ಅನಾಕೆಯಂ ಮುನ್ನಂ ಮದುವೆನಿಂದಲ್ಲದೆ ಪೆಱರೊಳ್ ಮದುವೆ ನಿಲಲಾಗದೆಂದಯ್ಯಂ [ಗೊ]ಯ್ಯಿಮೆಂದೊಡಂತೆಗೆಯ್ವೆಂ ಬೇಗಂ ಬರಿಸೆನೆ ವಿದ್ಯೆಯಂ ನೆನೆದಾಗಳ್ ಬರಿಸಿ ವಿದ್ಯಾಧರಶ್ರೇಢಿಯೊಳ್ ಕಾಳಸಂಬರನುಮಂ ವಜ್ರದಾಡಾದಿಗಳಪ್ಪ ತಮ್ಮಣ್ಣಂಗ[ಳುಮಂ] ಸಮಸ್ತ ವಿದ್ಯಾದಿವಿದ್ಯೆಗಳುಮಂ ಕಬ್ಬಿನ ಬಿಲ್ಲುಮಲರಂಬುಗಳಂ ಕಾಪಿನ ವಸಂತಾದಿ ಋತುಗಳ್ವೆರಸು ರತಿಯನೊಡಗೊಂಡು ಬಾಯೆಂದೊಡಲ್ಲಿಂ ಮುನ್ನಮೆಯ್ದಿ ಕಾಳಸಂಬರಂ ಮೊದ[ಲಾ]ಗಿ ಪೇೞ್ದುದೆಲ್ಲಮಂ ತಂದು ಪೊಱವೊೞಲೊಳಿರಿಸಿ ಬಂದೆನೆಂದು ವಿದ್ಯೆ ಬಂದಱಿಪೆ ನಾರಾಯಣಂಗಿದಿರಂ ಪೋಗಿ ಕಾಳಸಂಬರನನುಚಿತ ಪ್ರತಿಪತ್ತಿಗಳಿಂ ಕಂಡೊಡಗೊಂಡೊಸಗೆವಱೆಯಂ ಬಾಜಿಸಲ್ವೇೞ್ದು ವಿವಾಹಕಾರ್ಯದಿನಳಂಕಾರದೊಳ್ ಕೂಡಿದ ಮಂಟಪದೊಳ್ ಪಸೆಯ ಮೇಗೆ ಕಾಮದೇವನುಂ ರತಿಯುಮನಿರಿಸಿ ಪಾಣಿಗ್ರಹಣಂಗೆಯ್ದು ಪರಸಿ ಸೇಸೆಯನಿಕ್ಕಿ ಬಂಧುಜನ ಪುರಜನ ಪರಿಜನಾದಿಗಳ್ಗ ಮೂಲ್ಯ ವಸ್ತ್ರಾಭರಣಂಗಳಂ ಬೀಯಂಗೆಯ್ದು ಮಾಡಿದೊಸಗೆಯಂ ಪೊೞಲಱಿಯೆ

ಮ || ಪ್ರತಿಯಿಲ್ಲೆಲ್ಲಿಯುಮೆಂಬನಿತ್ತುವರೆಗಂ ಸಂದಿರ್ದ ಲೋಕತ್ರಯ
ಸ್ಥಿತಿ ನಾರಾಯಣನಾತ್ಮ ಸೂನುಗೆ ವಿವಾಹೋ[ತ್ಸಾ]ಹಮಂ ವೈಭವೋ
ನ್ನತಿಯಪ್ಪಂತಿರೆ ಮಾಡಿದ ತ್ರಿಭುವನಖ್ಯಾತೋರ್ಜಿತಂ ಕಾಮನುಂ
ರತಿಯುಂ ಕೂಡಿದೊರೆಂದೊಡಾ ವಿಭವಮಂ ವ್ಯಾವರ್ಣಿಸಲ್ ಬಲ್ಲರಾರ್ ೪೫

ವ || ಆ ವಿವಾಹದಿಂ ಬೞಿಯಮುದಧಿವೆರಸೈನೂರ್ವರ್ ಕನ್ನೆಯರನಂಗಜಂಗೆ ವಿವಾಹವಿಧಿಯಿಂ ಕೊಟ್ಟೊಡಂತು ಬಿ……….. ನೂಱೆಣ್ಬರ್ ಪೆಂಡಿರಾದರಂದು ರುಗ್ಮಿಣಿ ಸತ್ಯಭಾಮೆಯಲ್ಲಿಗೆ ತನ್ನ ಸಾಲಮನೀವುದೆಂದಟ್ಟಿದಡೆ ತನಗೆಲ್ಲಿಯ ಮಗನೊರ್ವ ಖೇಚರ ಮಗನಂ ಮರುಳರಸಂ ನಂಬಿ ಮದುವೆಮಾಡಿದೊನೇಕೀವೆ ನೆಂದಟ್ಟಿದೊಡದನರಸಂಗೆ ಪೇೞ್ದೊಡಿಂತೆಂಬುದನೆಂದು ನಾರದನಂ ಬರಿಸಿ ಕಾಮದೇವಂ ರುಗ್ಮಿಣಿಯ ಮಗನಲ್ಲನೆಂದು ಸತ್ಯಭಾಮೆ ನುಡಿದಳ್ಗಡ[ದುವಂ] ತಿಳಿಪಿಬನ್ನಿಮೆಂದಟ್ಟಿ ದೊಡೆ ಪೋಗಿ ನಾರದನಿಂತೆಂದಂ

ಕಂ || ಸೀಮಂದರತೀರ್ಥಕ[ರ]
ಸ್ವಾಮಿಗಳೊಳ್ ತಿಳಿದೆನಾಂ ಭವಾಂತರಸಹಿತಂ
ಕಾಮಾವತಾರವಿಧಿಯಿಂ
ನೀಮದನಿನಿಸಾನುಮೇಕಚಿತ್ತದೆ ಕೇಳಿಂ ೪೬

ವ || ಈ ಭರತಕ್ಷೇತ್ರದ ಮಗಧೆಯೆಂಬ ನಾಡ ಶಾಳಿಗ್ರಾಮದೊಳ್ ಸೋಮಶರ್ಮನೆಂಬ ಪಾರ್ವಂಗಮಗ್ಗಿಲೆಯೆಂಬ ಪಾರ್ವಂತಿಗಮಗ್ನಿಭೂತಿ [ವಾಯುಭೂತಿ]ಯೆಂಬಮಳ್ಗಳಾಗಿ ಪುಟ್ಟಿ ಬಳೆದು ಶಾಸ್ತ್ರವಿದ್ಯಾಪರಿಣತರಾದ ಗರ್ವದೊಳೊರ್ವ ದಿಗಂಬರಾಚಾರ್ಯರೊಳ್ ಸಂಬೋಧನಾ ಲಕ್ಷಣೋಧರ್ಮಮೆಂಬ ತತ್ತ್ವದೆಡೆಯಂ ನುಡಿದು ಸೋಲ್ತವರಲ್ಲಿ ದೀಕ್ಷೆಯಂ ಕೈಕೊಂ[ಡು] ನೆಗೞ್ದು ಮುಡಿಪಿ ಸುರಲೋಕದೊಳ್ ದಿವ್ಯಸುಖಮನುಂಡಲ್ಲಿಂ ಬಂದು ಇವಾವಳೆಯೊಳರ್ಹದ್ದಾಸನೆಂಬ ಪರದಂಗ[೦] ವಿಪ್ರಶ್ರೀಯೆಂಬ ಪರದಿಗಂ ಪೂರ್ಣಭದ್ರ [ಮಣಿಭದ್ರ]ರೆಂಬ ಪೆಸರಮಳ್ಗಳಾಗಿ ಬಳೆದು ಪರಮ ಶ್ರಾವಕರಾಗಿ ಸಮಾಧಿ ಕೂಡೆ ಮುಡಿಪಿ ಸ್ವರ್ಗದೊಳ್ ಪುಟ್ಟಿ ಸುಖದಿನಿರ್ದಲ್ಲಿಂದಂ ಬಂದು

ಕಂ || ಹಸ್ತಿನಪುರದೊಳ್ ನಿಜಕುಲ
ವಿಸ್ತಾರಕ ವಿಶ್ವಮಂದ್ರ ವಿಭುವಿಂಗಂ ಲೋ
ಕಸ್ತುತೆ ಶುಭವಿಕ್ಷಣಯುತೆ
ವಿಸ್ತೀರ್ಣ ವಿರಾಜಿತಾಂಗೆ ರೂಪಾವತಿಗಂ ೪೭

ವ || ಮಧುಕೈಟಭರೆಂಬಮಳ್ಗಳಾಗಿ ಪುಟ್ಟಿ ಬಳೆದನ್ಯೋನ್ಯಾಸಕ್ತರುಂ ರಾಜ್ಯನಿಯೋಗೋದ್ಯುಕ್ತರುಮಾಗಿ ಮಧುರಾಪತಿಯಪ್ಪ ವೀರಸೇನನ ಪೆಂಡತಿಯಂ ಚಂದ್ರಾಭೆಯೆಂಬೊಳ ರೂಪಿನೊಳ್ಪಿಂಗೆ ಸೋಲ್ತು ಮಧುವೆೞೆದುಕೊಂಡು ಬಾೞುತ್ತಿರೆ ಸಾಲಂಜಿ ವೀರಸೇನಂ

ಕಂ || ಪೆಂಡತಿಯನೆೞೆದು ಪಿಡಿಕೋ
ಳ್ಕೊಂಡೞಲುಂ ವಿರಹದೞಲುಮೊಡನೊಡನೆ ಮರು
ಳ್ಗೊಂಡು ಪೆಸರ್ಗೊಂಡು ಭೈಕ್ಷಂ
ಗೊಂಡು[ಮಲಸದೆ ಮಿಗೆ] ತಿರಿದನುರ್ವೀತಳಮಂ ೪೮

ವ || ತಿರಿತಂದಂತೆ ಮತ್ತಂ ಹಸ್ತಿನಪುರಕ್ಕೆ ವಂದು ಬೀಡುಗಳೊಳಮರಮನೆಯೊಳ ಮಿರ್ದು ಕಣ್ಣನೀರುಣ್ಮೆ ಶೋಕಂ ಪೊಣ್ಮೆ

ಕಂ || ಎಲೆ ಚಂದ್ರಾಭೇ ಹಾಹಾ
ಜಲಜದಳಾಯತ ವಿಳೋಳಲೋಚನೆ ಹಾ[ಹಾ]
ಲಲಿತ ಲತಾಂಗೀ ಹಾಹಾ
ಪೊಲೆಗೆಟ್ಟೆಂ ನಿನ್ನನಱಸಿ ಕಾಣದೆ ಹಾಹಾ ೪೯

ವ || ಎಂದಿಂತು ವಿಪ್ರಳಾಪಂಗೆಯ್ಯೆ ಕಂಡವರ್ ಪರಿತಂದು ಚಂದ್ರಾಭೆಮರುಳೆಂಬುದೊಂದು ಮರುಳಿಂದರ್ತಪ್ಪುದೆಂದು ಮಧುರಾಜಂಗೆ ಪೇೞೆ ಪಶ್ಚಾತ್ತಾಪದಿನಿರ್ವರುಂ ಸಂಸಾರವಿರಕ್ತರಾಗಿ ತಪಂಬಟ್ಟು ಸಮಾಧಿ ದೊರೆಕೊಳೆ ಮುಡಿಪಿ ದಿವಿಜೇಂದ್ರಲೋಕದೊಳ್ ಪುಟ್ಟಿ ಬಂದಾ ಮಧುರಾಜನಪ್ಪ ದೇವನಿಲ್ಲಿ ಹರಿಗಂ ರುಗ್ಮಿಣಿಗಂ ಮಗನಾಗಿ ಪುಟ್ಟಿದನಂತಾ ವೀರಸೇನಂ

ಕಂ || ಮಾನಿನಿಯಂ ಕೋಳ್ಪಟ್ಟೊಂ
ದೂನತೆಯಿಂ ತೊೞಲುತಿರ್ದುಮವನ[ಲ್ಲಿಯುಮ]
ಜ್ಞಾನತೆ[ಯುಂ]ದೊರೆಕೊಳೆ ನೆಗ
ೞ್ದಾ ನೆವದಿಂದಾದ ಮುಳಿಸು ಪೋಗದೆ ಸತ್ತಂ ೫೦

ವ || ಸತ್ತು ಧೂಮದೇತುವೆಂಬಸುರನಾಗಿ ಪುಟ್ಟಿ ತನ್ನ ಮುನ್ನಿನ ಪಗೆವಂ ಪುಟ್ಟಿದುದಂ ಬಗೆದಱಿದು ಮುಳಿದುಬಂದು ರುಗ್ಮಿಣಿಯ ಮುಂದಿರ್ದ ಕೂಸನೊಯ್ದು ಬೇಗಂ ಕೊಲ್ವೆನೆಂದು ಕೊಲ್ಲದೆಯು[೦] ತಸ್ಕರಶಿಲೆಯ ಮೇಲಿಕ್ಕಿಪೋದಡೆ ಕಾಳಸಂಬರಂ ಕಂಡು ಕೊಂಡುಪೋಗಿ ನಡುಪುತ್ತಿರ್ದನಾ ಚಂದ್ರಾಭೆಯುಂ ತೊಱೆದು ಸತ್ತನುಕ್ರಮದಿಂ ಕಾಂಚನಮಾಲೆಯಾದಳುಂ ಕೈಟಭದೇವನುಮಿಂತೆಂಬ ದೆವಸದೊಳ್ ಹರಿಗೆ ಪುಟ್ಟುವನೆಂದೆನಗಾ ಕೇವಳಿಗಳ್ ಪೇೞ್ವಡೆಯಾನಂತೆ ಪೋಗಿ ಕಂಡು ಕೊಂಡುಬಂದೆಂ ಕಾಮದೇವಂ ರುಗ್ಮಿಣಿಯ ಮಗಂ ತಪ್ಪಿಲ್ಲೆನೆ ಸತ್ಯಭಾಮೆ ನಂಬಿ ನಾರದನೊಡನೆ ಮುನ್ನಮೆ ಬಂದಿರ್ದ ಪರಿಚಾರಕಿಯರ ಕೆಯ್ಯೊಳ್ ತನ್ನ ಕುರುಳಂ ಕೊಯ್ದಟ್ಟಿದಡವರ್ ಕೊಂಡುಪೋಗಿ ರುಗ್ಮಿಣಿಮಹಾದೇವಿಗೆ ಕೊಟ್ಟೊಡವಂ ಮೆಟ್ಟಿ ಮಿಂದಳನ್ನೆಗಮಿತ್ತ ಮಧುಕೈಟಭದೇವಂ ಪುಟ್ಟುವಂದಿನ ಸೂೞಂ ಸತ್ಯಭಾಮೆ ಬೇಡಿಕೊಂಡಡದಂ ಕೇಳ್ದು ಕಾಮದೇವಂ ಪೂರ್ವಭವಸ್ನೇಹದಿಂ ತಮ್ಮಿಚ್ಛೆಯ ಕೆಳದಿಯಪ್ಪ ಜಂಭಾವತಿಗೆ ಪುಟ್ಟುವಂತು ಮಾೞ್ಪೆನೆಂದು ತನ್ನ ಕೆಯ್ಯ ವಿದ್ಯಾಮುದ್ರಿಕೆಯಂ…….ಯುಂಗುರಮನಿಟ್ಟಾಗಳೆ ಸತ್ಯಭಾಮೆಯ ರೂಪಾಗಿರ್ಪರಿರ್ದರಸನ ಸೂೞ್ಗೆ ಮುನ್ನಮೆ ಪೋಗೆಂದಟ್ಟಿದೊಡಂತೆ ಪೋಗಿ [ಕಂಡ]ಳದಂ ಸತ್ಯಭಾಮೆ ಕೇಳ್ದು

ಕಂ || ……………………….
……………………….ಣದನಪ್ಪುದಂ
ತೋಱಿದೆಯಂ ನಿನ್ನಯ ಪೆಂಪೆನೆ(?)
ಮುರರಿಪು ಬೆಱಗಾಗಿ ನಿಡಱಿಂದಿಂತೆಂದಳ್ ೫೧

ವ || ಆನುಂ ನೀನೆಯೆಂದು ಬಗೆದಾಕೆಯ ಕೆ[ಯ್ಯುಂಗುರ]ದೊಳ್ಪಂ ಕಳೆದುನೋೞ್ಪೆನನ್ನೆಗಂ ಜಂಭಾವತಿಯಗಿರ್ದಳದುವುಂ ನಿನ್ನ ಮಗನ ಗೊಡ್ಡ ಮೆನೆಯಾನುಂ ಬರುತಂ ಪೆಂಡಿರೊಳ್ ನೆರೆದಿರ್ದನೆಂಬುದಂ ಕೇಳ್ದು ಮುಳಿದು ಬಂದೆನಿಲ್ಲೆಂದೊಡೆನ್ನಿಂದಮಾದೊಡೇಂ ನಿನ್ನಿಂದ ಮಾದೊಡೇನೆಂದು ನಂಬೆ ನುಡಿದು ಕಳೆದೆನಂತು ಜಂಭಾವತಿಗೆ ಗರ್ಭಮಾಗಿ ನವಮಾಸಂ ನೆಱೆದು ಮಗನಂ ಪೆತ್ತೊಡಾತಂಗೆ ಶಂಭುಕುಮಾರನೆಂಬ ಪೆಸರಾಗಿ ಬಳೆದೊಡಾತನೊಳ್ ಭವಾಂತರ ಸ್ನೇಹದಿನಂಗಜ[೦] ಕೂರ್ತು ಪಲವುಂ ವಿದ್ಯೆಗಳಂ ಕೊಂಡಾಡಿ ನಡೆಯುತ್ತಿರ್ದೊನಿರೆ

ಕಂ || ಅಂತು ನೆಗೞ್ದಿರ್ದ ಪುರುಷನು
ಮಂತತಿಶಯ ಗುಣದಿನೆಸೆವ ಮಗನಂ ಪೆತ್ತಿ
ರ್ದಂತೊಪ್ಪಿರಲುಂ ತನಗ
ತ್ಯಂತಂ ಸಂತಸಮನೀಯೆ ರುಗ್ಮಿಣಿ ತಣಿದಳ್ ೫೨

ವ || ತಣಿದವರ್ ತವರಂ ಮಱೆದರೆಂಬುದು ಪಾೞಿಯಾದೊಡಂ ಪ್ರಭುವಿಂಗಪ್ಪ ಪಸುಗೆ ಮೆಯ್ಮಱೆಯಲಾಗೆಂದು ತವರ್ಮನೆಯಂ ನೆನೆದೆನ್ನ ನೆವದೊಳಂತು ನೊಂದು ಗೆಂಟಾದ ನಣ್ಪಿನಣ್ಣನ ಕೂಸಂ ಬೇಡಿಯಟ್ಟಿ ಮಗಂಗೆ ತಂದು ಸಾರೆಮಾಡುವೆನೆಂದು ಕೂಸವೇಡೆ ಪೆರ್ಗಡೆಗಳನಟ್ಟಿದೊಡವರ್ ಪೋಗಿ ತಮ್ಮ ತಂದನರ್ಘ್ಯ ವಸ್ತುಗಳಂ ಮುಂದಿಟ್ಟು ರುಗ್ಮಿಣನಂ ಕಂಡು ಕಾಮದೇವನ ಪುಟ್ಟಿ ಪೋದ ಬಂದ ವೃತ್ತಾಂತಮೆಲ್ಲಮಂ ಬಿನ್ನಪಂಗೆಯ್ದು ನಾರಾಯಣನುಂ ರುಗ್ಮಿಣಿಮಹಾದೇವಿಯಂ ಕಾಮದೇವಂಗೆ ನಿಮ್ಮ ಮಗಳಂ ಬೇಡಿಯಟ್ಟಿದರೆಂದಡೆ ರುಗ್ಮಿಣನಿಂತೆಂದಂ

ಕಂ || ಅವರಿವರೆನ್ನದೆ ಮುಳಿದೆ
ಮ್ಮವರೆಲ್ಲ[ರು]ಮನೊಡನೆ ಮಸಗಿ ಹರಿಮುಖದೊಳು[೦]
[ಜಿ]ವುಳಿದುೞಿದೆಡೆಯ ರುಧಿರ
ಪ್ರವಾಹಮೋ ಕುಡಿಯದೆಂತು ಬಂದರೊ ಪೇೞ್ ನೀಂ ೫೩

ವ || ಎಂದ ಭಾಷೆಯ ನೋವನಱಿದು ಪೆರ್ಗಡೆಗಳಿಂತೆಂದರ್

ಕಂ || ಆವಂ ಮನ್ನಿಸಿ ನಡೆ[ಯೆಂ
ದಾವಂ ತಿಂಬ ಜವನೆನ್ನದೆ ಜವನ]ಬೆಸದಿ
ರ್ಪಾವರೊಳರೆ ಮುನ್ನಿನ ಭವ
ಭವಮಂ ಮಱೆವಂತು ಮಱೆವುದಾ ಪರಿಭವಮಂ ೫೪

ವ || ಎನೆ ರುಗ್ಮಿಣನೆಂಗುಮೆಪ್ಪುದವನುಂ ಜವನುಮಾ [ಮಾ]ತೊಪ್ಪಿಯದೆಂತೆನೆ

ಚಂ || ಕಲಹದೊಳೆನ್ನ ತಂದೆವೆರಸೆನ್ನವರೆಲ್ಲರುಮಂ ಮುರಾಂತಕಂ
ತಲೆಯರಿದಲ್ಲಿ ನೆತ್ತರಣಮಾಱದು ಬರ್ದರ ಮೆಯ್ಯ ಪುಣ್ಣ ಕೆಂ
ಗಲೆ ಕಿಡದೞ್ದ ಪೆಂಡಿರುಲಿ ಮಗ್ಗದು ಬೆಚ್ಚನೆ ಸುಯ್ದ ನೋವುಗಳ್
ತೊಲಗಿದುದಿಲ್ಲ ಮತ್ತೆ ಪುಳಿನೆತ್ತರನೇಂ ಕಳೆಯಲ್ಕೆ ಬೇೞ್ಪನೇ ೫೫

ವ || ಎಂದ ಮಾತಿನೊಳ್ ನೊಂದ ಬಗೆಯುಮಂ ಬೇಸಱುಮನಱಿದು ಮತ್ತಂ ಪೆರ್ಗಡೆಗಳಿಂತೆಂಬರ್

ಕಂ || ಓವದೆ ಹರಿ ಕೊಂದಂದಿನ
ನೋವಿನ್ನುಂ ಪೋಗದಪ್ಪೊಡಾತನ ಮಾತಿ
[ನ್ನೇವುದೊ ಬೞಿಯ] ಕ್ಕಾವುದೊ
ದೇವಿಗೆ ಮಱುಮಾತೊ ಪೇೞು ರುಗ್ಮಿಣರಾಜಾ ೫೬

ವ || ಎನೆ ರುಗ್ಮಿಣನೆಂಗುಂ

ಕಂ || ಒಡವುಟ್ಟಿ ತಂದೆಗೊಂದವ
ನೊಡವರ್ದಂದದೊಳೆ ಪೋಯ್ತು ಮತ್ತಂ ಮಗುೞ್ದೆ
ನ್ನೊಡವುಟ್ಟಿದನೆಂದಟ್ಟುವ
ಪಡೆಮಾತಂ ಬಿಸುಡವೇೞಿಮೇೞಿಂ ಬೇಗಂ ೫೭

ವ || ಎಂದೊಡಾಮಾಗಳುಂ ಪೋದಪೆವು ನೀನಿನ್ನುಮೊಂದು ಮಾತಂ ಕೇಳೆಂದಿಂತೆಂದಂ

ಕಂ || ತಂಗೆ ನಿನಗೆತುಮಾ ಕೂ
ಸಿಂಗೆಱೆಯಂ ಪೆಱರ್ಗೆ ಕುಡುವಡಂ ಕುಡಲೀಯಂ
ತಾಂಗುಗುಮೆನೆ ರುಗ್ಮಿಣನಾ
ತಂಗಳ ಮಾತಿಂಗೆ ಮುಳಿದು ತಲೆಯೊಲೆದೆಂಗುಂ ೫೮

ಶಾ || ತಾಂಗಲ್ಕಪ್ಪುದು ಮುನ್ನಮೆನ್ನ ಪಿತೃಗಳ್ ತನ್ನಾಣ್ಮನುಂ ಸಾಯೆ ಸ
[ತ್ತಂ]ಗೆಂಟಾಯ್ತದು ಕೂಸನೆಂತುಮೆೞೆದುಯ್ವಾಗಳ್ಕದಂ ಕೊಲ್ವೆನಾಂ
ಪಾಂಗಾಗೆಂದೊಡೆ ದೀಕ್ಷೆಗೆಯ್ಸುವೆನದಕ್ಕಿಳ್ಕಿರ್ದಡಂ ತೊನ್ನ ಮಾ
ದೆಂಗಂಗಪ್ಪಡಮಿವೆನೆನ್ನ ಮಗಳಂ ತನ್ನಾತ್ಮಜಂಗೀವೆನೇ ೫೯

ವ || ಮೇೞ್ಪಡವೇಡ ನಿಮ್ಮ ತಂದೀ ಪಾಗುಡಮನಿಂತೆ ಕೊಂಡುಪೋಗಿಮೆಂದೊಡವರ್ ಪಾಗುಡಮಂ ಕೊಂಡು ಮಗುೞ್ದು ಬಂದು ರುಗ್ಮಿಣಿಮಹಾದೇವಿಗೆ ಬಿನ್ನಪಂಗಯ್ವಾಗಳ್ ತಮ್ಮವ ರೆಲ್ಲಮಂದು ಸತ್ತಂತೆ ದುಃಖಗೆಯ್ದು ಬಿನ್ನನಾಗಿಪ್ಪಿನಂ ಕಾಮದೇವನುಂ ಶಂಭುಕುಮಾರನುಂ ಬಂದು ಕಂಡಿದೇನಬ್ಬ ಬಿನ್ನನಿರ್ದಿರಿ

ಕಂ || ಎಮ್ಮನ್ನರಪ್ಪ ಮಕ್ಕಳ್
ನಿಮ್ಮಡಿಗೊಳರಾಗೆ ಚಿಂತಿಸಿಪ್ಪಿರಿದೇಂ ಪೇ
ೞಿಮ್ಮೂಱುಂ ಲೋಕಂಗಳೊ
ಳೆಮ್ಮಿಂದಂ ಸಾಧ್ಯಮಾಗದನ್ನವುಮೊಳವೇ ೬೦

ವ || ಎಂದು ಕೀಱಿ ಬೆಸಗೊಂಡೊಡೆಂಗು ರುಗ್ಮಿಣನೆಂಬೊನೆಮ್ಮಣ್ಣಂ ತಮ್ಮವರೆಲ್ಲಮಂ ನಿಮ್ಮಯ್ಯಂ ತಲೆವಂದಿಂ ಗೆಂಟಾಗಿರ್ಪಿನಾ ನಣ್ಪಂ ನಿನ್ನಿಂದಂ ಸಾರೆ ಮಾಡುವೆನೆಂದು ನಿನಗಾತನ ಕೂಸಂ ಬೇಡಿಯಟ್ಟಿದೊಡೆ ತನ್ನ ಮಗಂಗೀವುದಱಿಂ ತೊನ್ನ ಮಾದೆಗಂಗಪ್ಪಡಮಿವೆನೆಂದಂತೆನ್ನ ತವರ್ಮನೆ ಗೆಂಟಾದುದಕ್ಕುಬ್ಬೆಗಂಬಟ್ಟಿರ್ದೆನೆಂದೊಡಂಗಜನಿಂತೆಂದನುಬ್ಬೆಗಂಬಡದಿರಿಮಾ ಕೂಸಂ

ಕಂ || ಮಾದೆಂಗರಾಗಿಯುಂ ತಂ
ದಾದರಮಂ ನಿಮಗೆ ಮಾೞ್ಪೆಮಲ್ಲಂ ದೊಡಾಮುಂ
ಮಾದೆಂಗಱಿಂದ ಕಷ್ಟರೆ
ಮಾದೆಮಿದಂ ನಂಬಿ ಚಿಂತಿಸಿರದಿರಿಮಬ್ಬಾ ೬೧

ವ || ಎಂದಾಗಳ್‌ ಪೊಱಮಟ್ಟು ಕಾಮವಿಮಾನಮನಿರ್ಬರುಮೇಱಿ ಮನೋವೇಗದಿಂ ಕೂಂಡಿನಪುರಮನೆಯ್ದಿ ನಭೋಭಾಗದೊಳ್‌ ವಿಮಾನಮನಿರಿಸಿ

ಕಂ || ಇಳೆಗಿೞಿತಂದಮರೇಂದ್ರನ
[ಕಳೆಯ]ನುಕರಿಸಿರ್ಪ ರೂಪುಮಂ ತಿದಿಯುಂ ಸೆ
ಬಳಿಗೋಲು[೦] ಕೆಂಪು ಪೊಸ
ಮಿಳಿಯುಂ ಬೆರಸಂತೆ ಬಂದು ಪೋೞಲಂ ಪೊಕ್ಕರ್‌ ೬೨

ವ || ಪೊಕ್ಕೊಡೀ ರೂಪುಮೀ ವೇಷಮುಮಘಮಾನಮೆಂದು ಕಂಡ ಗಂಡರ್‌ ಬೆಕ್ಕಸಮಾದರ್‌ ಪೆಂಡಿರ ವೇಷಮಂ ಬಗೆಯದೆ ರೂಪಿನೊಳ್ಪುಮನೆ ಬಗೆದು ದಿಟ್ಟಿ ನಟ್ಟು ಬಾಯಂ ಬಿಟ್ಟು ಬೞಿಯಂ ತಗುಳ್ದರ್‌ ಕೆಲರೀ ರೂಪನೆ ನೋಂತು ಪಡೆವರಾವ ತಪಂ ಗೆಯ್ದರಾವ ಲೋಕದಿಂ ಬಂದೆರೆನುತಂ ಕಂಪಿಂಗೆ ಸುಳಿವ ತುಂಬಿಯಂತೆ ಬಳಸಿಬರೆಪೊೞಲೆಲ್ಲಮುದ್ಭ್ರಾಂತುಗೊಂಡು ನೋಡೆ ಬಂದರಮನೆಯಂ ಪುಗೆ ಕಾಪಿನವರ್‌ ನೀಮಾರ್ಗೆನಲುಂ ಕೋಲಿಡಲುಂ ಮಱೆದು ನಿಲೆ ಪೊಕ್ಕರಸನಂ ಕಂಡುಪೊಡೆವಟ್ಟರಂ ನೀಮಾರ್ಗೆಲ್ಲಿಂಬಂದಿರೆನೆ ದೇವ ಬಿನ್ನಪಮೆಂದಿಂತೆಂಬರ್‌

ಕಂ || ಯಾದವರಾಜನ ಪುರವಿನ
ಮಾದೆಂಗರೆ ತಾವಧೀಶ ನಿಮ್ಮಾತ್ಮಜೆಯಂ
ಮಾದೆಂಗರಿಗಿತ್ತಪಿರೆಂ
ದಾದರದಿಂ ಕೇಳ್ದು ಬಂದೆವೀವುದು ಕೂಸಂ ೬೩

ಎಂದೊಡೆ ರುಗ್ಮಿಣವಿಭು ಬಗೆ
ದೆಂದಂ ಕೂರದರ್ಗೆ ಕುಡುವುದುಂ ನಿಮಗೊಸೆದಿ
ತ್ತಂದೇಂ ದೋಷಮೆ ಪರಿಭವ
ದಿಂದಂ ಲೇಸಲ್ತೆ ಕುಲದ ಕೇಡುಂ ಸಾವುಂ ೬೪

ವ || ನಿಮ್ಮ ರೂಪಿನೊಳ್ಪುಂ ತೇಜಮುಂ ಮಾದೆಂಗರೆಂಬುದಂ ಸಂದೇಹಂ ಮಾಡಿ ದಪ್ಪುದವಱಿನೀಯಲಱಿಯದಿರ್ದೆನೆಂದೊಡವರಿಂತೆಂಬರ್‌

ಕಂ || ಹರಿಯ ಪುರವರದ ಬಾಗಿಲ
ಭರದೆಡೆಯಂ ಕಾವೆವದಂ ನಿಮ್ಮಂದಯೆಯಿಂ
ಸಿರಿಯೊಡೆಯರ್‌ ಮಾಡೊದೊಡೆ
ಮ್ಮಿರವಿನ ತೇಜಕ್ಕೆ ನಂಬಿರೇ ಕೀೞ್ಗುಲಮಂ ೬೫

ವ || ಎಂದ[ವ]ರ್‌ ತೊನ್ನಮಾದೆಂಗಂಗೀ [ಮಾ]ತಱಿವಿರೆಮ್ಮಂ ನಂಬ[ದೆಯಿರಲ]ಕ್ಕುಮೆಂದು ಪೊಱಮಟ್ಟು ಬಂದು ವಿದರ್ಭೆಯು ಕನ್ಯಾಮಾಡದ ಮುಂದನೆ ಬಪ್ಪಾಗಳಾಕೆಯ ದಿಟ್ಟಿ ನಟ್ಟುದಂ ಕಂಡು ಕೆಲದೊಳಿ[ರ್ದ]ವರ್‌ ನೋಡು ನಮ್ಮ ಪೊೞಲನುದ್ಭ್ರಾಂತುಗೊಳಿಸಿ ಪೊಕ್ಕವರೆಂದೊಡಿಂತಪ್ಪವರಾರಾದೊಡಮೇನೆಂದು ಬೆಚ್ಚನೆ ಸುಯ್ದುಮ್ಮನೆ ಬೆಮರ್ತು ನೋಡೆ ಕಾಮನುಂ ಮಗುೞ್ದು ನೋಡೆ ಸೋಲ್ತು ಬೇಗಂ ಪ್ರಜ್ಞಪ್ತಿವಿದ್ಯೆಯಂ ಬರಿಸಿ ನಿನ್ನೆರ್ದೆಯನೆಂದು ಮಾದಂಗಿತಿಯಾಗಿ ರತ್ನಂಗಳಂ ಕೊಂಡು ಪೋಗಿ ಬೇಡು ಮೋಹದೊಳಮಪ್ಪಡಮೊಡಂಬಡಿಸಿ ನೋೞ್ಪಮೆಂದಟ್ಟಿದೊಡೆ ವಿದ್ಯೆ ಜಾತಿ ಮಾದೆಂಗಿತಿಯಾಗಿ ಪೊನ್ನ ತಳಿಗೆಯೊಳ್‌ ಮಾಣಿಕಂಗಳಂ ಪೊಯ್ದು ಪಿಡಿದು ಬಂದು ರುಗ್ಮಿಣನಂ ಕಂಡು ಮುಂದಿಟ್ಟು ಪೊಡೆವಟ್ಟು

ಕಂ || ಮುನ್ನಂ ಬಂದಿರ್ದವರಿವ
ರೆನ್ನ [ಸು]ತರ್‌ ದೇವ ನೆಗೞ್ದ ಮಾದಂಗಿತಿಯೆಂ
ಬಿನ್ನಪಮಿವನಾಂ ತಂದೊಡ
ಮೆನ್ನಂ ಬಗೆದೀವುದರಸ ನಿಮ್ಮಾತ್ಮಜೆಯಂ ೬೬

ವ || [ಎನೆ] ಬೆಕ್ಕಸಂಬಟ್ಟು ರುಗ್ಮಿ[ಣ]ನೆಂಗುಂ

ಕಂ || ಅವರಂದಮುಮೀಕೆಯ ತಂ
ದವಱಂದಮು ಮಿನ್ನವಪ್ಪ ಮಾತುಗಳುಂ ಕೇ
ಳ್ವರ್ಗಘಟಮಾನಮಾಗಿ
ರ್ಪುವು [ಪೋ ಕೊಳ್ಕೊಡೆಗೆ ತಕ್ಕೆನೆಂದಾಂ]ಬಗೆದೆಂ ೬೭

ವ || [ಎನೆ] ಮತ್ತಮೆಂದಳ್‌ ನೀಮಿಯದಡೆ ಕೂಸಱಿಯವಲ್ಲವೆಂದದಂ ಕೊಂಡು ಪೊಱಮಟ್ಟು ಬಂದು ಪೇೞ್ದೊಡಂ ಮಾದೆಗಂ ನಕ್ಕಂತೆ ಕೊಱವಜ್ಜಿಯ ರೂಪುಗೊಂಡಿರ್ವರುಮಱಿತು ಬೇೞ್ಪಮೆನುತಮಂತಂತೆ ವಿದರ್ಭೆಯಲ್ಲಿಗೆ ವಂದು ಬಗೆದುದಂ ಪೇೞ್ವೆಮೆಂದೊಡಾಕೆಯಾಕೆಗಳನೇಕಾಂತಕ್ಕೊಯ್ದು ಕುಳ್ಳಿರಿಸಿ ತಂಬುಲಮಂ ಕೊಡಿಸಿದಾಗಳ್ ಕೊಱವಜ್ಜಿಯು ತಾನಾಕೆಯಂ ಪಾಣಿಗ್ರಹಣಕ್ಕೆ ಕೆಯ್ಯನೊಡ್ಡುವಂತೆ ಕೆಯ್ಯನೊಡ್ಡಿ ಬಗೆದುಮೊಯ್ಯನೆ ಸೋಲ್ತು. ಬಕ್ಕುಡಿಗೆಯ್ದೊಯ್ವಂತೆ ಕೆಯ್ಯಂ ಪೊಯ್ದೊಡೆ ನಿನ್ನೆರ್ದೆಯೊಳಾನಿರ್ದೆನಿರೆನೆಂಬಂದಂ ನೋಡಿ ಪೊಯ್ಯೆಂಬಂತಾ ಕೆಯ್ಯಾನಾಕೆಯುರದೊಳ್‌ ಸಾರ್ಚಿರ್ದು ಗಂಡರಂ ಬಿಗಿದೆ ಗಂಡರೊಳಮಿ ಬಂದಲ್ಲಿಗೆ ಮಾದೆಂಗರೆಮೆಂದು ಬಂದಿರ್ದರೊಳಮೊರ್ವನನೆ ಬಗೆದೆಯನೆ ನಗುತಂ ಪುಸಿದೆಯೆನೆ

ಕಂ || ಆನೆತ್ತಱಿವೆನೊ ಪು[ಸಿ] ಬಲು
ಭಾನುವನೆಳೆಗಿಱಿಪಲಾರ್ಪನೆಳೆಯುಮನೊಯ್ದಂ
ತಾನಾಗಸದೊಳ್‌ ಪೋಲ್ವೆಂ
ಮಾನಿನಿ ಕೇಳ್‌ ನೀರೊಳೊಪ್ಪಿ ರೂಪಂ ಬರೆವೆಂ ೬೮

ವ || ಲೋಕದೊಳೆನ್ನ ಸಲ್ಲದಡೆ ಇಲ್ಲಕಲ್ಲದ ವಿದ್ಯೆಯಿಲ್ಲೊಳ್ಳಿತನೆ ಬಗೆದೈ ಪುಸಿಯಲ್ತೆಂದೊದಱಿದಿಂಬೞಿಕ್ಕಿನ್ನೇತಕ್ಕುಮೊ ಆಗದೆಡೆಯೊಳಾದುದೆಂದಡೆ ನಲುಮೆ ಪುಟ್ಟಿದೆಡೆಯೊಳಪ್ಪುದಾನಲ್ಮೆ ತಾನೆ ಮಾಡುಗುಮಂಜದಿರೆಂದೆದ್ದುಪೋದೊಡೆ ಬೆಚ್ಚನೆ ಸುಯ್ದುಳ್‌ ಕೊಱವಜ್ಜಿಯ ರೂಪುಮಂತೆ ಪೋಗಿ ಮುನ್ನಿನ ಮಾಂದೆಂಗರಾಗಿ ಬಂದೊರ್ವಳೆ ಚಿಂತಿಸುತಿರ್ದುದಂ ಕಂಡೆಂ ಬೀವಂ ಮಿಳಿಯುಮಂ ಮಾಱಿಕೊಳಾರ್ಪಡೆ ಬಾಯೆಂದಡೆನ್ನನಗಲ್ಚದಿರ್ಪಂತೆ ಸಾಲ್ದುದೆಂತಪ್ಪೊಡಂ ನಡಪೆಂದೆರ್ದಾಗಳೆತ್ತಿಕೊಂಡಾಕಾಶಕ್ಕೊಗೆದಿರ್ವರುಮೊಯ್ದು ವಿಮಾನದೊಳಗಿರಿಸಿಕೊಂಡು ಪೋಗುತ್ತಂ ವಿದ್ಯೆ[ಯಿಂ] ದಿವ್ಯಾಭರಣ ವಸ್ತ್ರಮಾಲ್ಯಾದಿಗಳಂ ತರಿಸಿ ಕೆಯ್ಗೆಯ್ಸುತ್ತಂ ಪೋಗೀಗೆಮ್ಮ ಪೊೞನೆಯ್ದಿ ವಿಮಾನದಿಂದಿೞಿದು ಪೊಱಗಣ ಬನಮಂ ಪೋಗಿರ್ದಾಕೆಗಿಂತೆಂಬರ್‌

ಕಂ || ಸರಸೀರುಹಾಸ್ಯೆ ನೀನೀ
ಪುರದೊಳ್‌ ಮಾಱುವಿನ [ಮಿಂತು] ನಾಮಿ ಬನದೊಳ್‌
ಪರಿಪಾಱುತಮಿರ್ದಪೆಮೆನೆ
ಕರಮೊಳ್ಳಿತ್ತಂತೆಗೆಯ್ವೆನೆದೊಸೆದೆರ್ದಳ್‌ ೬೯

ವ || ಆಗಳಾ ಮಾದೇವಂ ತನ್ನ ಕೊರಳ ರತ್ನಮಾಲೆಯಂ ಕಳೆದದಂ ಬೀವಾಗೆ ವಿಗುರ್ವಿಸಿ ಪಿಡಿಯೆಂದು ಕೊಟ್ಟೊಡದಂ ಕೊಂಡೀ ಜೀವನೇತಕ್ಕೆ ಮಾಱರುವುದೆಂದೊಡೆ

ಕಂ || ಅ[ಲರಂ]ಬಯ್ದುಮನಿತ್ತಡೆ
ಲಲಿತಾಂಗಿ[ಗೆ] ಕೊಟ್ಟು ಕೊಂಡು ಪೋಗೆನೆ [ತಾ]ಕೇ
ಳ್ದೊಲೆದಿರದೆ ಪೋಗಿ ಪೊೞಲಂ
ಜಳಜಾನನೆ ಬೀವುಗೊಳ್ಳಿಮೆನುತಂ ಪೊಕ್ಕಳ್‌ ೭೦

ವ || ಅಂತು ಪೊೞಲಂ ಪುಗುವಾಗಳ್‌ ಕಾಮದೇವನಟ್ಟಿದ ವಿದ್ಯಾದೇವತೆಗಳ್‌ ಬಂದು [ಸೀಗುರಿ]ಗಳಂ ಪಿಡಿದು ನಡೆದರ್‌ ಕೆಲರ್‌ ಚಾಮರಮನಿಕ್ಕುತಂ ನಡೆದರ್‌ ಕೆಲರ್‌ ಪರಿಚಾರಕಿಯರಾಗಿ ಬಳಸಿಯುಂ ನಡೆದರ್‌ ಕೆಲರ್‌ ಪಾಠಕರಾಗಿ ಪಾಡುತಂ ನಡೆದರ್‌ ಕೆಲರ್‌ ಬಪ್ಪವರಾಗಿ ಮುಂದೆ ನಡೆದರಂತತಿಶಯ ವಿಳಾಸದಿಂದವಂ ಪಿಡಿದು ಬೀವುಗೊಳ್ಳಿಮೆನುತಂ ಪೋಗೆ ಪೊೞಲೆಲ್ಲಂ ಚೋದ್ಯಂಬಟ್ಟು ಬಾಯಂ ಬಿಟ್ಟು ನೋಡುತ್ತಮೆತ್ತೆತ್ತ ಪೋಕುಮಂತಂತೆಯೆ ಬರುತಂ ಕೆಲರಿಂತೆಂಬರ್‌