ಕಂ || ಅಂತಂಗಜನುಂ ಖಗಪತಿ
ಯುಂ ತಮ್ಮೊಳ್ ಕಲಹಮುಮನುೞಿದು ಕೂಡಿರ್ದು ಬೞಿ
ಕಿಂತೆಂದಂ ನಾರದನ
ತ್ಯಂತ ಗುಣೋಪೇ[ತನೀ] ತನಲ್ಲಿಗೆ ವಂ[ದಂ] ೧

ವ || ಈತಂ ತ್ರಿಖಂಡಮಂಡಾಳಾಧಿಪತಿಯಪ್ಪ ನಾರಾಯಣಂಗಂ ರುಗ್ಮಿಣಿಮಹದೇವಿಗಂ ಪುಟ್ಟದಾಗಳೀತನ ಪೂರ್ವ ವೈರಿಯಪ್ಪ ಅಸುರನೆತ್ತಿಕೊಂಡು ಪೋದೊಡೆ ಕೂಸಂ ಕಾಣದೆ ತಾಯುಂ ತಂದೆಯುಂ ಮಱುಗುತಿರ್ದು ನಿಮ್ಮ ಕೂಸು ಸಾವನಲ್ಲನೆಂಬ ದಿವ್ಯಧ್ವನಿಯುಂ ಕೇಳ್ದು ಸಂತೈಸಿರ್ದುಮೆನ್ನನಱಸಲಟ್ಟಿದೊಡಂ ಪೋಗಿ ಪೂರ್ವವಿದೇಹದೊಳ್ ಸೀಮಂದರ ತೀರ್ಥಂಕರಂ ಬೆಸಗೊಂಡೊಡೆ ಕೂಸಂ ಧೂಮಕೇತುಮೆಂಬಸುರನೊಯ್ದು ಖದಿರವನದ ತಸ್ಕರಶಿಲೆಯ ಮೇಲಿಕ್ಕಿ ಪೋದೊಡೆ ಮೇಗಕೂಟದ ಕಾಳಸಂಬರನೆಂಬ ವಿದ್ಯಾಧರರಾಜಂ ಕಂಡು ಕೊಂಡು ನಡಪಿದಪ್ಪನಲ್ಲಿ ಬಳೆದು ವಿದ್ಯಾಪರಿಪೂರ್ಣನಾಗಿರ್ದನೆನೆ ಕೇಳ್ದು ಬಂದೆನೀತನನವರೊಳ್ ಕೂಡುವೆನೊಯ್ದಪೆನೆನೆ ಕಾಳಬಂಬರನಿಂತೆಂದಂ

ಕಂ || ಇಂತಪ್ಪ ಗುಣೋಪೇತನೊ
ಳಿಂತಾ ನೆಗೞ್ದಱಿ[ಯಮಿ]ಕ್ಕೆಗಂ ಪೆಱದಿ[ಲ್ಲೆಂ]
ತಾಂ ತೊತ್ತುವೆಸದೊಳಿಪ್ಪೆಂ
ಸಂತತಮಿನ್ನರಸುಗೆಯ್ಯುತಿರ್ಪುದು ಪೆಱದೇಂ ೨

ವ || ಎಂದ ಕಾಳಸಂಬರನಂ ಪಶ್ಚಾತ್ತಾಪದಿನಾದನುಕಂಪೆಯುಮಂ ಮುನ್ನಂ ನಾರದನ ಪೇೞ್ದ ಜನ್ಮ ಸಂಬಂಧಮುಮಂ ಕೇಳ್ದು ಕಾಮದೇವಂ ತಂದೆಂಗಿತೆಂದಂ

ಕಂ || ಅಡವಿಯೊಳಹಿತಂ ಬಿಸುಟೊಡೆ
ಮಡಿಮಡಿದತಿಶಯದೆ ನೀಮೆ ತಂದನುನಯದಿಂ
ನಡಪಿದೊಡೆ ಬರ್ದೆನಲ್ಲದೊ
ಡಡಂಗಿದೆಂ ಖಗದ ಮೃಗದ ಬಸಿಱೊಳಗಲ್ತೇ ೩

ವ || ಎನಗೀ ಭವಕ್ಕೆ ನೀಮೆ ತಾಯುಂ ತಂದೆಯುಮಲ್ಲದೆ ಪೆಱರಿಲ್ಲೀ ಕೃತಕಮನೆಂತು ನೀಗುವೆಂ ವಿಚಾರಿಸದೆ ನೀಮೆನಗೆ ಮುಳಿದು ಕೊಲ್ವುದಂ ಕಂಡು ಕಯ್ದುವಿಡಿದೆನದಕ್ಕಿಂತು ಮಿ[ಡುಕ]ದಿಪ್ಪುದು ನೀಮೆ ಸುಖದಿನರಸುಗೆಯ್ದುದೆನ್ನಂಬಿಡಿಮಾಂ ಪೋದೊಡಲ್ಲದವರ ನೋವಾಱದಿವರುಂ ಬಂದಿರ್ದರೆಂದೆನೆ ತಾನುಮೊಡಂಬಡಿಸಿ ಪೋಗಲೆಂದು ಸಮಕಟ್ಟಿದಾಗಳ್ ತಾಯರ್ಥಿಯಂ ನಾರದನಱಿದು ಗೋಶೀರ್ಷಚಂದನಮುಂ ರತ್ನಮಯಮಪ್ಪ ಪಲವುಂ ಪ್ರತಿಮೆಗಳನಲ್ಲಿ ಬೇಡಿಕೊಂಡು ಕಾಮವಿಮಾನಮಂ ನೆನೆವುದುಮಂತೆ ಬರಲದಱೊಳಗಿಟ್ಟು ತಾನುಂ ನಾರದನುಮೇಱಿ ತೆಂಕಮೊಗದೆ ಗಗನಮಾರ್ಗದಿಂ ಪಯಣಂ ಬರುತ್ತಂ ತನ್ನ ತಾಯುಂ ತಂದೆಯ ವಂಶಾವಳಿಯಂ ಬೆಸಗೊಂಡು ಕೇಳುತ್ತಂ ಬರೆ ವಿಮಾನಂ ಮೇಗಿನಿಸು ನೆಗೆದು ಪಾಱುವಾಗಳಧೋಭಾಗದ

ಕಂ || ಗಿರಿ ನದಿ ವಿಷಯಾಬ್ಧಿಗಳಂ
ಧರಿತ್ರಿಯೊಳ್ ನೋಡಿ ನೋಡಿ ಬೆಸಗೊಂಡಿರದಂ
ಬರದತ್ತ ನೋಡಿ ಜೋತಿ
ಷ್ಕರ ತೆಱನುಮನಂತೆ ಬೆಸಗೊಳುತ್ತಂ ಪೋದಂ ೪

ವ || ಪೋಗಿ ಖದಿರವನದಲ್ಲಿಯು ಬಪ್ಪಾಗಳಿದು ನೋಡು ನಿನ್ನ ಪಟ್ಟ ತಸ್ಕರಶಿಲೆಯೆಂದೊಡೆ ವಿಮಾನಮನಿನಿಸು ಸಮಿಪವರ್ತಿಯಾಗಿ ಮಾಡಿ ತೋಱುತ್ತಂ ಬಂದು ಹಸ್ತಿನಪುರದಲ್ಲಿ ಬಪ್ಪಾಗಳಿದಾವ ಪೊೞಲೆನೆ ನಾರದನಿಂತೆಂದಂ

ಕಂ || [ಕುರುಪತಿ ದು]ರಿಯೋಧನನೆಂ
ಬರಸಂ ಕೇಳ್ ನಿನಗೆ ಮಾ[ವ] ನಪ್ಪೊಂನೆಗೞ್ದೀ
ಪುರದಧಿಪತಿಯಿದು ಹಸ್ತಿನ
ಪುರಮೆಂಬುದು ಸಕಳ ಧಾರಿಣೀತಿಳಕನಿಭಂ ೫

ವ || ಎಂದೊಡೆ ವಿಮಾನಮನಿನಿಸು ಸಮಿಪವರ್ತಿಯಾಗಿ ಮಾಡಿ ತೋಱುತ್ತಂ ಪೊೞಲನರ್ತಿಯೊಳ್ ನೋಡುತ್ತಂ ಬರೆ ಪುರ ಬಹಿರಿಗೆಯೊಳ್ ಬಿಟ್ಟಿರ್ದ ಪಿರಿಯ ಬೀಡಂ ಕಂಡಿದೇನಾರ ಬೀಡುಮಿಲ್ಲಿಯೇಕೆ ಬಿಟ್ಟರ್ದುದೆಂದೊಡೀ ಪೊೞಲನಾಳ್ವ ದುರ್ಯೋಧನಂಗಂ ಜಯಧಿಯೆಂಬರಸಿಗಮುದಧಿ ಎಂಬ ಕುಮಾರಿ ಪುಟ್ಟಿದಳಾಕೆಯಂ ನಿನಗೆ ಬಸಿರ್ಪೂಸಿ ಪೆತ್ತು ನಿನ್ನಂ ಕಾಣದೀಗಳ್ ನಿಮ್ಮಮ್ಮನ ಪಿರಿಯರಸಿ ಸತ್ಯಭಾವೆಯೆಂಬಳಾಕೆಯ ಮಗಂ ಭಾನುಕುಮಾರಂಗೆ ಕುಡಲೆಂದು ಮಹಾ ವಿಭೂತಿಯೆಂದೊಯ್ದಪ್ಪೊರಾತಂಗೆ ಮದುವೆಯಾದೊಡೆ ನಿಮ್ಮಬ್ಬೆಯ ತಲೆಯಂ ಕೊಯ್ದುಕೊಂಡು ಪೋಗಿ ಸತ್ಯಭಾಮೆ ಮೆಟ್ಟಿ ಮಿವಳೆನೆ

ಕಂ || ಅಂತಪ್ಪೊಡೆ ನೀಮನ್ನೆಗೆ
ಮಿಂತಿರಿಮಾಂ ಪೋಗಿ ನೋಡಿ ಬಂದಪೆನಾ ಕೂ
ಸೆಂತುಟು ಸಿರಿಯೆಂತುಟು ಶೀ
ಲೆಂತುಟು ಪೆಂಪೆಂತುಟೆಂಬುದಂ ಮುನಿನಾಥಾ ೬

ವ || ಎಂದು ನಾರದನಂ ನೀರದಪಥದೊಳಿರಿಸಿ ವೃದ್ಧನಾವಿದನಾಗಿ ಕಳಾಚಾರಿಯೋಪಾಯದಿಂ ತೀವಿದ ಚೀರಮನಿಱಿಂಕಿ ಪೋಗಿ ದುರ್ಯೋಧ[ನನ] ಮನೆಯ ಬಾಗಿಲ್ಗೆ ವಂದು ನಾರಾಯಣನ ಮನೆಯ ಪಾೞನಾವಳಿಯೊಳ್ ಬಂದ ನಾವಿದನೆನೀ ವಿವಾಹಕಾರ್ಯಕ್ಕೆ ನೀನೆಯಪ್ಪುದು ಪೋಗೆಂದು ಎನ್ನನಟ್ಟಿದೊನಿದೆನ್ನ ಬಂದಂದಮೆಂದು ನಿಮ್ಮರಸಂಗೆ ಪೇೞಿಮೆಂದೊಡೆಪಡಿಯಱಂ ಪೋಗಿ ಪೇೞೆ ಬರವೇೞೆನೆ ಬಂದು ಕಂಡಾಗಳಾಹಾ ಭಾವನಟ್ಟಿದ ನಾವಿದನ ಸದ್ಭಾವವೊಳ್ಳಿತ್ತಾಯ್ತೆಂದು ತೆಗೞೆಂತಾದೊಡಮೇನೆಂದು ನಾವಿದನೊಡನೆ ಬೆಸಗೆಯ್ ಪೋಗೆಂದು ನಾಂದೀಮುಖದೊಸಗೆಗೆ ಕೆಯ್ಗೆಯ್ವುದೆಂದು ಮದುವಳಿಗೆಯಲ್ಲಿಗಟ್ಟಿದೊಡೆ ಕೂಸಂ ನೋಡಿ

ಕಂ || ಆವಳ್ ದೊರೆ ಭುವನದೊಳಿಂ
ತೀ ವಧುಗತಿವಿನುತಮಾಗುವೀ ರೂಪಿನೊಳೀ
ಹಾವದೊಳೀ ಭಾವದೊಳಿಂ
ತೀವಳೆ ವಿಳಾಸದೆಡೆಯೊ[ಳೆ] ವಿಭ್ರಮ[ದೆಡೆಯೊಳ್] ೭

ವ || ಎಂದು ಮೆಚ್ಚುತ್ತಿರೆ ಬಂದವರ ನಾವಿದಂ ಕನ್ನೆಯ ಪುರ್ವಂ ನೊಸಲುಮಂ ಸಮಱಿದಾಗಳಾ ಪುರ್ವಂ ಬೋೞಪುರ್ವಾಗೆ ನೊಸಲುಂ ತರಟ್ಟಿನಂತಾಗೆ ವಿದ್ಯೆಯಂ ಮಾಡಿದೊಡೆ ಕಂಡವರಿಂತಾರ್ ಮಾಡಿದರೆಂದು ತಂತಮಗೆ ನುಡಿಯುತ್ತಿರೆ ಅರಸನಱಿದು ತಮ್ಮ ನಾವಿದಂಗೆ ಮುಳಿದು ಭಾವನಟ್ಟಿದ ನಾವಿದನಂ ನೀಂ ಮಡಿಮೆನೆಯಾತಂ ಕಳೆದು ಕೊಂಡತಿಶಯಮಾಗೆ ಮಾಡಿ ಕಯ್ಗೆಯ್ಸಿದಾಗಳ್ ಮೆಚ್ಚಿ

ಕಂ || ಬಿದ ವದನಮೆಂಬ ಕಮಳಮ
ನುದಧಿಯ ಮೆಯ್ಯೆಂಬ ಕೊಳದೊಳಿಂಬಾಗಿರೆ ಪ
ಣ್ಣಿದ ಸರಲಂ ಮಾಱಂಬೊ
ಡ್ಡಿದ ತೆಱದಂ[ತು]ರ್ಚಿಪೋಯ್ತು ನಾವಿದನೆರ್ದೆಯಂ ೮

ವ || ಕನ್ನೆಯ ರೂಪಿನೊಳ್ಪಂತು ನಾವಿದನೆರ್ದೆಯನುರ್ಚಿ ಸೈರಿಸದೆ ಮಂಗಳ ಕಾರ್ಯದೊಳ್ ಶಾಸನದೇವತೆಗಳೆಲ್ಲಂ ಪೊಱಗಣಲ್ಲಿ… ಯ್ದು ಪೊಡೆ….. ಕನ್ನೆಯನ್ನೆತ್ತಿಕೊಂಡು ಪೊಱಮಟ್ಟೆಲ್ಲರುಂ ನೋಡೆ ನೋಡೆ ಬೇಗಮಾಕಾಶಕ್ಕೊಗೆದುಯ್ದು ವಿಮಾನ ದೊಳಗಿಟ್ಟಾಗಳಲ್ಲಿರ್ದ ನಾರದನಂ ಕಂಡು ಪೊಡೆವಟ್ಟೊಡೆ ಕಾಮದೇವನೇಳ್ ಕೂಡವೆಯಾಗೆಂದು ಪರಸಿದೊಡೆ

ಕಂ || ಓವೋವೆನ್ನಂ ಕುರುನೃಪ
ದೇವಿ ಬಸಿರ್ಪೂಸಿ ಪೆತ್ತೊಡಾಮತಂಗೇನು
ದ್ಭಾವೋಗ್ರ ದುರಿತ ಫಲದಿಂ
ದಾ ವಿಭು ಗೆಂಟಾದೊನಾಗೆ ಮಱುಗುತ್ತಿರ್ದೆಂ ೯

ಅಂತು ಮಱುಗುತ್ತಮಿರ್ದಳ
ನಂತಿರಿಸದೆ ಮತ್ತೆ ಸತ್ಯಭಾಮೆಯ ತನಯಂ
ಗಂತು ಕುಡಲುಯ್ಯೆ ನಾವಿದ
ನಿಂತೀತಂ ತಂದೊನೇವೆನೀಗಳೆ ಸಾವೆಂ ೧೦

ವ || ಎನುತಂ ವಿಮಾನದಿಂ ತೊಟ್ಟನೆ ನೆಲಕ್ಕೆ ಮೆಯ್ಯನಿಕ್ಕಿದಾಗಳಂಗಜಂ ವಿದ್ಯಾಬಲದಿಂ ಪಿಡಿದುತಂದು ವಿಮಾನದೊಳಿರಿಸಿ ತನ್ನ ನಿಜಸ್ವರೂಪಮಂ ತೊಱಿದಾಗಳ್ ನಾರದನೆಂದನೀತಂ ನೋಡು ಕಾಮದೇವಂ ವಿದ್ಯಾಧರಶ್ರೇಢಿಯೊಳ್ ವಿದ್ಯಾಧರನಾಗಿರ್ದನನೊಡಗೊಂಡು ಬಂದೆನೆನೆ ಮೊೞಗಂ ಕೇಳ್ದ ನವಿಲಂತೆ ರಾಗಿಸಿ ಪಾವಂ ದಾಂಟಿದರಂತುಮ್ಮನೆ ಬೆಮರ್ತು ಸೋಲದ ಭರದಿಂದೆಱಗಿದರಂತೆ ತಲೆಯಂ ಬಾಗಿರೆ ಕಾಮದೇವನಿಂತೆಂದಂ

ಕಂ || ಮನ್ನಿಸಿ ತಾಯುಂ ತಂದೆಯು
ನಿನ್ನಂ ಬಗೆದೀಯೆ ಕೊಳ್ವೆನೆೞೆಕೋಳ್ಗೊಳ್ಳೆಂ
ಸನ್ನುತನುಯ್ವುತ್ತಿರೆ ತಂ
ದೆನ್ನಯ ದಿಟದಿಂದ ಬೇಗಮೊಪ್ಪಿಸಿ ಬನ್ನಿಂ ೧೧

ವ || ನೀನುಂ ಮಗುೞಿ ಕಳಿಪಿದೆನೆನ್ನನೆಂದು ಬಗೆಯದಿರೆಂತುಂ ತಪ್ಪೆನೆಂದು ಸಂತಯ್ಸಿದಾಗಳ್ ನಾರದನುದಧಿಯುಂ ಬೆರಸು ನೆಲ್ಲಕ್ಕಿೞಿತಪ್ಪೊಂ ಸ್ತ್ರೀಸಂಸರ್ಗದಿಂ ತಪಸ್ವಿಯಾದೊಡಮಧೋಗತಿ ಗಿೞಿಗುಮೆಂಬುದನಭಿನಯಿಸುವಂತೆ ದುರ್ಯೋಧನನ ಮನೆಯನೆಯ್ದೆ ವಪ್ಪಿನಂ ತಾಯುಂ ತಂದೆಯುಂ ಪುರಮುಮಂತಃಪುರಮುಂ ದೆಸೆಯುಮಾಕಾಶಮಂ ನೋಡುತ್ತಂ

ಕಂ || ಹಾ ಸರ[ಸಿಜ]ದಳನೇತ್ರೇ
ಹಾ ಸಕಳ ಕಳಾಸಮೇತ ಹಿಮಕರವಕ್ತ್ರೇ
ಹಾ ಸಲ್ಲಕ್ಷಣಗಾತ್ರೇ
ಹಾ ಸೌಂದರ್ಯಾಭಿಯುಕ್ತ ಪುಣ್ಯಪವಿತ್ರೇ ೧೨

ಚಂ || ದೊರೆಗೆವರಲ್ ಜಗತ್ರಯದೊಳಿಲ್ಲೆನಿಸಲ್ ನೆಱೆವಂಬುಜಾನನೇ
ಸ್ಮರಶರ ಶಕ್ತಿಯುಕ್ತ ನಯನಾಮೃತರೂಪಸಮೇತೆ ನಿನ್ನನೀ
ಧರಣಿಯೊಳಾರ್ಗಮಿಕೆ ಕುಡಲೀಯಮೊ ವಸ್ತುವನೆಂದು ಮೋಹದಿಂ
ಸುರವರರೊಯ್ದರೋ ದನುಜರೊಯ್ದರೊ [ಖೇಚರ] ರಾಜರೊಯ್ದರೋ ೧೩

ವ || ಎಂದಿಂತೆನಿತಾನುಂ ತೆಱದಿಂ ಪ್ರಳಾಪಂಗೆಯ್ಯುತ್ತಿರೆ ರಾಗರಸಮಹೋದಧಿ[ಯಂ] ತಂದು ಮುಂದಿರಿಸಿದಾಗಳ್ ಪೋದ ಪ್ರಾಣ ಮಗೞ್ದು ಬಂದಂತೆ ರಾಗದಿಂ ಕನ್ನೆಯಂ ತಂದ ನಾರದಂಗತಿಪ್ರಿಯಂಗೆಯ್ದು ಬೆಸಗೊಂಡೊಡಾನೊರ್ವಸುರಕುಮಾರನೊಯ್ಯೆ ಕಂಡು ನಯದಿನೊಡಂಬಡಿಸಿ ತಂದೆ ನೀಮಿಂ ಸುಖದಿನಿರಿಮೆನಗೆ ಮನೆವಾರ್ತೆ[ಯುಂಟೆಂ]ದು ಮಗುೞ್ದು ಕಾಮದೇವನುಂ ತಾನುಂ ಬರುತಮಿರೆಯಿರೆ ದುರ್ಯೋಧನನ ಪಡೆಯಿಂ ತಡೆಯಲೆಡೆಯಿಲ್ಲೆಂದಾಗಳ್ ದಾೞಾದಾೞಿಯಿಂ ಪಯಣಂಬೋಗೆ ವಿಮಾನದೊಳ್ ಪೋಪ ಮನ್ಮಥನಾ ಪಡೆಯಂ ಕಂಡೀಯಡವಿಯೊಳ್ ನಡೆವ ಪಡೆಯಾರದೆಂದೊಡೆ ಕೂಸನೊಡಗೊಂಡೊಯ್ವ ಕೌರವ ಪಾಂಡವರ ಪೆರ್ವಡೆ ತಮ್ಮ ಬಲ್ಲಾಳ್ತನದೊಳಂ ಮಾಯಾವಿಗಳ ದೆಸೆಯ ಬೆರ್ಚಿನೊಳಂ ಬೇಗಂ ಪೋದಪ್ಪರೆಂದೊಡವರ ಬಲ್ಲಾಳ್ತನಮುಮನೆನ್ನು ಮನಿನಿಸು ನೋಡುತ್ತಿರಿಮೆಂದು ವಿಮಾನದಿಂ ಧರಗಿೞಿದು

ಕಂ || ಮುಱಿದ ಬಿಲು ಪಱಿದ ಕೈ[ಪೊ]ಡೆ
ತಱಿದ ಸರಲ್ ತಪ್ಪ ನಾರಿ ತೇದೊಱೆ ಮುಕ್ಕಿಂ
ನೆಱೆದಲ[ಗು]ನೇಲ್ವ ಬಣರುಡೆ
ಕಿಱುವೀಲಯ ದಂಡೆ ಪಣೆಯೊಳಮರ್ದಿರೆ ಶಬರಂ ೧೪

ವ || ಅಂತು ಶಬರವೇಷಮಂ ಕೆಯ್ಕೊಂಡು ಮುಂದಣ್ಗೆ ಬಂದು ಬಟ್ಟೆಯೊಳಡಮಿರ್ದು ಸುಂಕಮಿಕ್ಕಿಮೀ ಪೞುವದ ಬಟ್ಟೆಯ ಸುಂಕಮನೆನಗೆ ನಾರಾಯಣನಿತ್ತ[೦]ಮೆಳ್ಪಡವೇಡಾ

ಕಂ || ಇಕ್ಕುವುದು ಸುಂಕಮಂ ನೀ
ಮಿಕ್ಕದೆ ನಡೆವಾಗಳುಗ್ರ ಕೋಪದಿನಿದಿರಾಂ
ತಿಕ್ಕುವೆನಾನೀಗಳೆ ನೆಲ
ಕಿಕ್ಕುವವೊಲ್ ಕೆಯ್ಯ ಕೂಸನವಯವದಿಂದಂ ೧೫

ವ || ಎನೆ ಮುಂಗೋಳ ನಾಯಕರ್ ಬೆಕ್ಕಸಮಾಗಿ ತಲೆಯಂ ತೂಗಿ

ಕಂ || ಕುರುಪತಿ ತನ್ನಾತ್ಮಜೆಯಂ
ಸುರಪತಿನಿಭನಪ್ಪ ತನ್ನ ಪಿರಿಯ ಮಗಂಗಾ
ದರದಿಂ ಕುಡಲೆಂದೊಯ್ಯು
ತ್ತಿರೆ ಕಂಡೆಲೆ ಪುಳ್ಳಿವೇಡ ಸುಂಕಂ ಬೇೞ್ಪಾ ೧೬

ವ || ಎನೆ ಪುಳ್ಳಿವೇಡನೆಂಬುದೆನಗಪ್ಪುದು ಸಾಯಲಮ್ಮದವರಿನ್ನೆನಗಾಂತು ಸಾವರದಱಿಂದನವರತ ಪುಳ್ಳಿವೇೞ್ದ ಸೂೞು ನೀವೆಂದಂತೆ ವಲಮೆಂದಾತನಂ ಬಯ್ದುಮಾತಂಗೆ ಬಯ್ಗುಳಪ್ಪಂತು ಮಗುರ್ಚಿದ ತರ್ಕಮುಮಂ ಮನದ ದರ್ಪಮುಮನಱಿದೀತನಂ ಕಂಡಿೞಿಸಲಾಗಿದೇನಾನುಮೊಂದು ಕೌತುಕಮಾಗಲೆವೇೞ್ಗುಮೆಂದಂತೆ ಗೋೞುಂಡೆಗೊಂಡಿರ್ಪಿನಂ ಭೀಮಾರ್ಜುನ ನಕುಳ ಸಹದೇವರ್ಕಳೆಯ್ದೆವಂದರಿದೇನೆಂದಬುದು ಸುಂಕಮೆಂದನೆನೆ ಕೆಲರ್ ನಕ್ಕರ್ ಕೆಲರ್ ಮುಳಿದಿಱಿಯಲ್ ಬಗೆದರ್ ಕೆಲರ್ ಮರುಳಂ ನೂಂಕಿ ಕಳೆದು ನಡೆಯಿಮೆಂದರಂತವರೆಲ್ಲರಂ ಬಾರಿಸೆ ಸಾರೆವಂದರ್ಜುನನೇನನೀವುದು ಪೇೞೆನೆ ಕಿರಾತನಿಂತೆಂದಂ

ಕಂ || ಏನಂ ಪೇೞ್ವೆನು ಪಡೆಯೊಳ
ಗೇನೊಳ್ಳಿತ್ತದನೆನೆ ಬೆಱಗಾಗಿರ್ದೆನದ[ನಾ
ನೇನಱಿದಪೆ]ನೇ ವಿಷ್ಣುವ
ಸೂನುಗೆ ಕುಡಲುಯ್ದ ಕೂಸನುದಧಿಯನೀಯಿಂ ೧೭

ವ || ಎಂದೊಡೆ ಬಾಯೊಳ್ ಕೆಯ್ಯನಿಟ್ಟಿಂದೇಂ ಚೋದ್ಯಮೊ ಮೇಗಿಲ್ಲದ ನುಡಿಯೆಂದೆ ಬೆಱಗಾಗಿರ್ದರೆಲ್ಲರುಂ ಭೀಮನಾತನ ರೂಪಂ ನೋಡಿ ನಕ್ಕಿವನನುರುಳೆ ನೂಂಕಿನಡೆವಮೆಂದೊಡಾ ಮಾತು ಆವಾಗಳುಮುಂಟೆ ವಲಮೆಂದು ಮತ್ತಮರ್ಜುನಿಂತೆಂದಂ

ಕಂ || ಮದನಂ[ಗೆ ಬ]ಸಿರ್ಪೂಸಿ
ರ್ದದು ಕೂಡದೆ ಮತ್ತಮನ್ನಪ್ಪಂಗೆ ಕೊಡಲ್
ಪದೆದನುರಾಗದಿನಾಮು
ಯ್ದುದಱಿಂ ಬೇಡಂಗೆ ಕುಡುವುದಿದು ಲೇಸಲ್ತೇ ೧೮

ವ || ಎನೆ ನಿಮ್ಮಂ ತೆಗೆೞ್ವುದೆ ನನ್ನಿಯೆನ್ನುಮಂ ನಾರಾಯಣಂ ಮಗನೆಂದೆ ಕೆಯ್ಕೊಂಡಿರಿಸಿದನಾಂ ಸಲುಗೆಯ ಮಗನೆನಗೆ ಬೇಡಿತಿಯರ್ ಪಲರುಂ ಪೆಂಡಿರೊಳರಾದೊಡ ಮರಸರ ಮಗಳಂ ಕೊಳ್ವನಿತರ್ಥೀಯಾದುಧೆನೆ ಭೀಮಂ ಕಿನಿಸಿ ಪಿಶಾಚದ ಮಾತನೇಗೇೞ್ವುದು ಬಡಿದು ಪಿಡಿದೆೞೆದಿಕ್ಕಿ ನಡೆಯಿಮೆನೆ ಕಿರಾತಂ ಮಯಾಬಲಮಂ ವಿಗುರ್ವಿಸಿ

ಮಂದಾನಿಲ ರಗಳೆ ||
ಎಸೆದವು ಪಱೆಗಳು ಪಲವೊಡನೆ ಕರಂ
ಪಸತೊಡನೆ ಧನುರ್ಧರ [ನಿಕರ]ಕರಂ
ತೆರೆ ಕವಿವವೊಲಾದವು ತುರಗಬಲಂ
ತರತರದಿಂದೋಡಿತು ರಥದ ಬಲಂ
ಕವಿವದ್ರಿಯವೋಲಿಭಭಯ ಮಸಕಂ
ತವರದ ತೊಱೆ ಪರಿವವೊಲಣಿಯೆಸಕಂ
ಇಂತಾ ಪಡೆಗಿಮ್ಮಡಿ ಪಡೆಯೆಂದಂ
ಕಂತುವಿನವೊಲಮರೇಂದ್ರಂ ಪಡೆಯಂ
ಪಡೆಯುಂತೆ ಕೈವೀಸೆ ಮಹಾರವದಿಂ
ಪಡೆ ತಾಗಿದವೊಡನೊಡನತಿಜವದಿಂ
ಕಿಡಿಗುಟ್ಟುವ ತೆಱದೊಳೆ ಚತುರಂಗಂ
ಕಡಿಕೆಯ್ದಿಱಿಯುತ್ತಿರೆ ರಣರಂಗಂ
ಪಡಲಿಟ್ಟೆಡೆಯಂತಾದುದು ಪೆಣದಿಂ
ರೌದ್ರಮುಮಾದುದನತಿಭಯದಿಂದಂ
ತಣಿದವು ನಿಶಿಚರಗಣಮುಂ ಧುರದೊಳ್
ಕುಣಿದಂ ನಾರದನೊಸೆದಂಬರದೊಳ್ ೧೯

ಕಂ || ಪಾಂಡವ ಕೌರವಸೇನೆಯ
ಕೊಂಡಾಟದ ಸುಭಟರಂತು ಕೆಡೆದಂತಾಗಳ್
ಕಂಡಲ್ಲಿಯೆ ನರಪತಿಗಳ
ತಂಡಂ ಕಡಿಕೆಯ್ದು ಕಯ್ದುಕೆಯ್ದಿಂತೆಂದರ್ ೨೦

ವ || ಅಂತೆಯ್ದೆವಪ್ಪ ನಾಯಕರ ಬಲವಂ ಕಾಮದೇವಂ ಕಂಡು ಸ್ತಂಭಿನಿಯೆಂಬ ವಿದ್ಯೆಯಂ ಬೆಸಸಿದಾಗಳ್ ಬೀಮಸೇನನ ನಿಮಿರ್ದ ಗದೆ ಕಾಲ್ಗೆಟ್ಟರ ಪಜ್ಜೆಯಂತಳ್ಳಾಡದಿರೆ ನಚ್ಚುವರ್ಜುನನ ತೊಟ್ಟಂಬುಂಗುರದೊಡ್ಡಂ[ತೆ]ಬೆರಲಿಂ ಪೋಗದಿರೆ ನಕುಳಕೊಂತಂ ದಿಗ್ದಂತಿದಂತದಂತೆ ತಳರದಿರೆ ಸಹದೇವನ ಪಿಡಿದ ಬಾಳ್ ಮರದೊಳ್ ತೆತ್ತಿಸಿದ ಬಾಳಂತೆ ಮಸಗದಿರೆ ಕರ್ಣನಂಬಿಗೆ ನೀಡಿದ ಕೆಯ್ ಲೋಭಂಗೆ ನೀಡಿದ ಕೆಯ್ಯಂತೆ ತೆಗೆಯಲಾಱದಿರೆ ವಿಕರ್ಣನಾಕರ್ಣಂಬರಂ ತೆಗೆದ ಬಿಲ್ ಕೆನ್ನೆಯೊಳ್ ತೊಡರ್ದು ಪತ್ತಿರೆ ಶಲ್ಯನಖಲ್ಯನಂತೆ ತೊಡರದಿರೆ ಮುಳಿದು ರಥಮನೇಱಿದ ಶಕುನಿ ಕೇಂಪೇಱಿದ ಶಕುನಿಯಂತೆ ತೂಂಕಡಿಸುತ್ತಿರೆ ದುಶ್ಯಾಸನಂ ನಿಶ್ಯಾಸನಮಪ್ಪಗ್ರಶ್ರಮಂ ಭೂರಿಶ್ರ[ಮ] ಮಾದಂತೆ ಮಿಡುಕದಿರೆ ದ್ರುಪದಂ ಕಾಲುಡಿದ ಚತುಷ್ಟಾದದಂತೆ ನಿಲಲಾಱದಿರೆ ಧೃಷ್ಟದ್ಯುಮ್ನಂ ವಿನಮ್ರನಾದಂತೆ ತಲೆಯೆಱಗದಿರೆ ಘಟೋತ್ಕಚನರ್ಜುನವೃಕ್ಷದಂತೆ ಮರನಾಗಿರೆ ಅಭಿಮನ್ಯು ಮಂಜುಪಾಯದ ತಾವರೆಯಂತೆ ಸುಕ್ಕಿರೆ ಮತ್ತಂತೆ ಪಡೆಯೆಲ್ಲಮುಂ ಚಿತ್ರಸಭಾಸದ ಸಭೆಯಂತೆ ನಿಶ್ಚೇಷ್ಟಿತರಾಗೆ ಕಿಸಿಸಿದೊಡೆ ದುರ್ಯೋಧನನ ಸಾರಿರ್ದ ಭೀಷ್ಮರುಂ ದ್ರೋಣಾಚಾರ್ಯರುಂ ಕುರುಪತಿಗಂ ಧರ್ಮಜಂಗಮಿಂತೆಂದರ್

ಅಕ್ಕರ ||
ಮೂಱಪ್ಪಂತು ಕೀಲಿಪ ವಿದ್ಯೆಯಂ ಬಲ್ಲನೊಳ್ ಕಡಿಕೆಯ್ದು ಮೆಲ್ವಾಯ್ದುಯೆ
ಗ್ಗರಪ್ಪವೊಡೆಗುಲಂ ಬೇವಾಗಳೆರ್ದ ಕಿಚ್ಚುಗಂಡು ಅಗ್ನಿದೇವನಂ ಮಾದೇವನು”
ಮಱಿಗುಮಿಂದಲ್ಲಿಂ ಪೊಱಮಟ್ಟು ಧರ್ಮಿಯಂತೆ ಸಿಗ್ಗಿದೇನಯ್ಯ ನಮಗಿಲ್ಲಿ
ಮಾಯಾವಿಯಪ್ಪನುಂ ಕೃಷ್ಣನುಂ ತಾವಱಿವರೇ(?) ೨೧

ವ || ನಾಮಿ ಕಜ್ಜಮಂ ನಾರಾಯಣನ ಮೇಗಿಕ್ಕಿ ನೆಗೞ್ವಮೆಂದು ದುಯೋಧನನನೊಡಂ ಬಂದಿರ್ವರುಂ ತಮ್ಮ ಪಡಲ್ವಟ್ಟ ಪಡೆಯುಮನಘಪಟ್ಟ ನಾಯಕರುಮಂ ನೋಡುತ್ತಂ ಪೋಗಿ ಕಿರಾತವೇಷದ ನಾಯಕನಲ್ಲಿಗೆ ವಂದಪೆಮೆಂದಟ್ಟಿ ಮಾಯಾವಡೆಯೊಳಗನೆ ಪೋಗಿ ಕಂಡಿಂತೆಂಬರ್

ಕಂ || ಹರಿಯಾಳೈ ನೀಮಾಮುಂ
ಹರಿಯಲ್ಲಿಯೆ ನಿನ್ನ ಕೊಳ್ವ ಸುಂಕಮನೀಯಲ್
ತ್ವರಿತದೆ ಬಂದಪೆಮೆಂದಡೆ
ಕರಮೊಳ್ಳಿತ್ತದುವೆ ಸಾಲ್ಗುಮೆಂದ ಕಿರಾತಂ ೨೨

ವ || ಮಾಯಾವಡೆಯನುಪಸಂಹರಿಸಿ ಬಿರ್ದರನೆತ್ತಿ ನಾಯಕರ ಕೀಲಣೆಯಂ ಕಳೆದು ಪೋಗಿಮಿಂದಾಕಾಶಕ್ಕೊಗೆದು ಪೞೆಯ ರೂಪಾಗಿ ಬಂದು ನಾರದನಂ ಕಂಡೆನ್ನಂಗೆ[ಯ್ದಯೋ]ಗಮಂ ಕಂಡಿರೊರಪ್ಪೊಡೇನೆಂದು ಪೇೞ್ವೆನೆನೆ ಕಂಡೆ[೦] ಕಣ್ಬೆತ್ತ ಫಲಮನುಂಡೆಂ ತಣಿದೆಂರಾಗದಿಂ ಕುಣಿದೆನೆಂದಂತೆ ಪೋಗಿ

ಕಂ || ದ್ವಾರಾವತಿಯಂ ಪರಿವೃತ
ವಾರಿಧಿಯಂ ಸೌಖ್ಯಕಾರಿಯಂ ನಯನಮನೋ
ಹಾರಿಯನಿಂದ್ರಾಸ್ಪದದನು
ಸಾರಿಯನೆಯ್ತಂದನನುಪಮಾಂಗನನಂಗಂ ೨೩

ವ || ಆಗಳ್ ನಾರದನಿದು ನೋಡು ಸಮುದ್ರಪರಿವೃತಂ ನಿಮ್ಮಯ್ಯನ ಪೊೞಲಿಲ್ಲಿ ವಿಮಾನದೊಳಿನಿಸಾನುಂ ಬೇಗಮಿಪ್ಪುದಾಂ ಪೋಗಿ ನಿನ್ನ ಬರವನಱಿಪಿ ಪೊೞಲೊಳಷ್ಟ ಶೋಭೆಗೆಯ್ಸಿ ಪಲರುಮಿದಿರ್ಗೊಳ್ವಂತು ಮಡಿದಪ್ಪೆನೆಂದೊಡಂತಾಗದು ನೀವೆನ್ನಬರವ ನಾರ್ಗಮಱಿಪದಿಲ್ಲಿರಿಮಾಂ ಪೋಗಿ ಕೆಲವತಿಶಯಂ ಮಾಡುತ್ತಂ ಕಾಡುತ್ತಂ ಪೊಕ್ಕಪ್ಪೆನೆಂದು ನಾರದನನಿರಿಸಿ ಮದನಂ ಬಂದು

ಕಂ || ಗಜ ತುರಗ ರಥ ಪದಾತಿ
ಧ್ವಜಿನಿಯನೊರ್ಮೊದಲೆ ಪಡೆದು ಕುರುಕುಳರಾಜಾ
ತ್ಮಜೆಯನೊಡಗೊಂಡು ಬಂದಂ
ತಜೇಯಗತಮಾ ತ್ರಿರೂಪವಂ ಕೈಕೊಂಡಂ ೨೪

ವ || ಕೈಕೊಂಡು ದುರ್ಯೋಧನನ ಪೆರ್ಗಡೆಯಂ ಕೂಸನೊಡಗೊಂಡು ಬಂದೆನೆಂದು ಸತ್ಯಭಾಮೆಗೆ ಪೇೞ್ದಟ್ಟಿಯಾಕೆಯ ನಂದನವನದೊಳ್ ಬೀಡೆಲ್ಲದುಂ ಬಿಡಿಸಿ ನೀರವಶೇಷಂ ಬನಮೆಲ್ಲಮಂ ಕಿಡಿಸಿ ಪಡೆಯನುಪಸಂಹರಿಸಿ ವಿರೂಪನಪ್ಪ ತಪಸ್ವಿಯ ರೂಪಾಗಿ ಪೂಗೊಂಡು ಸತ್ಯಭಾಮೆಯ ಬಾವಿಯಂ ಕಂಡು ಪೊಕ್ಕು ಪಾದಪ್ರಕ್ಷಾಳನಂಗೆಯ್ದು ಬಾವಿಯ ನೀರನೆನಸುಮುೞಿಯಲೀಯದೆ ಗುಂಡಿಗೆಯೊಳ್ ತೀವಿಕೊಂಡು ಪೊಱಮಡೆ ನೀರ್ಗೆವಂದ ಪೆಂಡಿರಿಮತೆಂಬುದೊಳವೆ ಬಾವಿಯ ನೀರನೆಲ್ಲಮನೀ ಗೊರವಂ ಕೊಂಡುಪೋದಪ್ಪೊನೆಂದು ಬೞಿಯಂ ತಗುಳೆ ಪೊೞಲ ನಡುವಣಲ್ಲಿ ಕೊಳ್ಳಿಂ ನಿಮ್ಮ ಬಾವಿಯ ನೀರನೆಂದು ಗುಂಡಿಗೆಯಂ ಬಾಗಿ ಸುರಿದಾಗಳ್

ಕಂ || ಒಡೆದುದೊ ಪೆರ್ಗೆಱೆ ಬೆಳ್ಳಂ
ಗೆಡೆದುದೊ ತೊಱೆ ಜಲಧಿ[ಯುಣ್ಮಿ]ಪೊಣ್ಮೆದುದೋ[ಮೇಣ್]
ತಡೆಯದೆ ಮನುಷ್ಯಲೋಕಂ
ಗಿಡಿಸಲ್ ನೀರ್ ಪ್ರಳಯಮಾದ ತೆಱನೇತೆಱನೋ ೨೫

ವ || ಎಂದಾಯೆಡೆಯ ಜನಂಗಳ್ ಬೆರ್ಚಿ ಬೇಗಂ ಮದಿಲುಮಂ ಮನೆಗಳುಮಂ ನೆಱೆನೋಡುತ್ತಿರೆ ಗೊರವನ ರೂಪುಮನಾ ನೀರುಮನುಪಸಂಹರಿಸಿ ಗುಜ್ಜನುಂ ಪೊಱಂಡನು[೦] ಮುರುಡನುಮಾಡಿ ಬರೆ ಕಂಡ[ವರ್ ನಗೆ] ಪೆಂಡಿರೊಳ್ ಕೆಲರಾನೆಯ ಕೆಯ್ಯಂತೆ ಮೂಗಂ ಕೆಲರ್ಗೆ ಕುಱಿಯ ನಾಯ ಮೊಗಂಗಳಂತೆ ಮೊಗಂಗಳುಮಂ ಕೆಲರ್ ಪೆಂಡಿರ್ಗೆ ಗಡ್ಡಮಿಸೆಗಳುಮಂ ಮಾಡುತ್ತಂ ಮತ್ತಂ ಪೊೞಲ ಮೂಕಾಂಧ ಬಧಿ[ರಾ]ದಿಗಳ್ಗ ಮೊಳಿತರ್ಕೆಂದಾಗಳ್

ಮ || ಕಿವುಡರ್ ಕೇಳ್ದರಪೂರ್ವಮಾಗೆ ನುಡಿದರ್ ಮೂಗರ್ ಪೊಱಂಡರ್ಕಳ
ಪ್ಪವರ್ಗಿಂ ಬಾದುವು ಮೆಯ್ ಪವಣ್ಗೆ ನಿಮಿರ್ದರ್ ಗುಜ್ಜರ್ ಕರಂ ಕೂಂಟರ
ಪ್ಪವರ್ಗಂ ಕೆಟ್ಟುವು ಕೊಂಟು ಮತ್ತೆ ಕುರುಡರ್ ಮಹಾವ್ಯಾಧಿಕೆ
ಟ್ಟ[ವಿ]ದೇಂ ಚೋದ್ಯಮೊ ಪುಣ್ಯವಂತರೊಸೆದಾರ್ ಪೇೞಿಲ್ಲಿಗೆೞ್ತಂದರೋ ೨೬

ವ || ಎಂದಿಂತೆಲ್ಲಿಯುಂ ನೆಗೞ್ವತಿಶಯಂಗಳ್ಗೆ ಪೊೞಲುದ್ಭ್ರಾಂತುಗೊಳ್ವಾಗಳದು ವನುಪಸಂಹರಿಸಿ ಶ್ರೋತ್ರಿಯನಪ್ಪ ಬ್ರಾಹ್ಮಣನ ವೇಷಮಂ ಕೈಕೊಂಡು ಪೋಗಿ ಸತ್ಯಭಾಮೆಯಂ ಕಂಡು ರುಚಿಯಂ ಪೇ[ೞ್ದು] ಪರಿಸಿ ಸೇಸೆಯೆಂದು ದೂರ್ವಾಂಕು[ರ]ಮಂ ಕೊಟ್ಟು ಚತುರ್ವೇದಪಾರಗನೆಂ ತೀರ್ಥಯಾತ್ರೆಗೆಯ್ಯುತ್ತುಂ ನಿಮ್ಮ ಮಹಾದಾನಮಂ ಕೇಳ್ದು ಬಂದೆನಗ್ರಾ[ಸನ]ದೊಳುಣಲೀವುದೆಂದೊಡಿತ್ತೆನೆಂದಾಗಳೀತಂಗೆ ತಣಿಯುಣಲಿಕ್ಕಿಮೆನೆ

ಕಂ || ಪನ್ನಿರ್ಚ್ಛಾಸಿರ ಪಾರ್ವ[ರು
ಮೆ]ನ್ನ ಗೃಹಾಂತರದೊಳಮೃತಸನ್ನಿಭಮಂ ಮೃ
ಷ್ಟಾನ್ನಮನುಂಡಪುದೊ[ರ್ಮೆ]ಯೆ
ನಿನ್ನಂ ತಣಿಯೂಡದಿರ್ಪೆನೇನುಂ ಮರುಳೇ ೨೭

ವ || ಎಂದ ಮಾತಿಂಗೆ ಪಾರ್ವನಿನಿತೆ ಸಾಲ್ಗುಂ ಸ್ವಸ್ತಿಯೆಂದಿರ್ಪನ್ನೆಗಂ ಪಾರ್ವರ ನೆರವಿ ಕವಿತಂದುದಂ ಕಂಡೆನೆನಗ್ರಾಸನಮನಿತ್ತರೆಂದು ಸತ್ಯಭಾಮೆಯ ಕೆಯ್ಯೊಳ್ ಕಾಲಂ ಕರ್ಚಿಸಿಕೊಂಡು ಅಗ್ರಾಸನದೊಳ್ ಕುಳ್ಳಿರ್ದಾಗಳ್ ಪಂ[ತಿ]ಯೊಳಿರ್ದ ಪಾರ್ವರೆಲ್ಲಮೇನುಮಲ್ಲದೊನನಗ್ರಾಸನ ದೊಳಿರಿಸುವುದೆಂಬುದೇನೆಂದು ಮುಳಿದೆರ್ದು ಪೋಗಲ್ ಬಗೆದೊಡೆ ಪೋಗದಂತೆಲ್ಲರುಮಂ ಸ್ತಂಬಿಸಿದೊಡೆನಿತಾನುಂ ಭಕ್ಷ್ಯ ರೂಪಸಹಿತಂ ಬಡ್ಡಿಸಿದೊಡಾಪೋಶನಂಗೊಂಡುಣಲ್ ಬಗೆವಾಗಳ್ ಅನಿಬರ ಮುಂದಣ ಕೂೞೆಲ್ಲಮನಪಹಾರಂಗೆಯ್ದು ತನ್ನ ತಳಿಗೆಯ ಕೂೞುಮನುಂಡು ಬಡ್ಡಿಸಿಮೆಂದಿರ್ದುದಂ ಕಂಡು ಮತ್ತಂ ಬಡ್ಡಿಸಿ

ಕಂ || ಎನಿತೆನಿತಂ ಬಡ್ಡಿಸಿದೊಡ
ಮನಿತುಮನಣಮುೞಿಯಲೀಯದಂತುಂಡಡೆ ಮಾ
ಜನಕೆಂದಟ್ಟುದು ತಪ್ಪಡೆ
ಮನೆಗೆಂದಟ್ಟುದುಮನಂತೆ ತವೆ ಬಡ್ಡಿಸಿದರ್ ೨೮

ವ || ಅಂತು ಮನೆಗಟ್ಟಿ ಬಾಣಸಿನ ಕೂೞೆಲ್ಲಮನುಂಡುಮವ್ವಾ ಪಸಿವು ಪೋಗದೆಂದಡರಸಿ ಚೋದ್ಯಂಬಟ್ಟು ಪಾರ್ವನ ಬೇಡಿದಾಗಡಿನ ನುಡಿಯಂ ಬಗೆ[ದಿ]ರಲಕ್ಕು ಮಾದೊಡೇನಿನ್ನುಂ ನೋೞ್ಪೆನೆಂದು

ಕಂ || ಪಾಂಡವ ಕೌರವ ನೃಪರೊಡ
ಗೊಂಡುದಧಿಯನಿಂದು ಬಪ್ಪರೆಂದಡಿಸಿದುದಂ
ಕೊಂಡಿಕ್ಕಿದೊಡಂತೆರಡುಂ
ತಂಡದ ಪಡೆಗಂದಿನಟ್ಟುದೆಲ್ಲಮನುಂಡಂ ೨೯

ವ || ಉಂಡುಮಬ್ಬಾ ನೀಮಪ್ಪಡೆ ಚಕ್ರವರ್ತಿಯ ಪಿರಿಯ ಮಹಾದೇವಿಯರಿದು ಪೆಸರಪ್ಪೊಡೆ ಸತ್ಯಭಾಮೆಯೆಂಬ ಪೆಂಪಿನ ಪೆಸರಿನ ಮಹಾದೇವಿಯೊರ್ವಂಗೆ ತಣಿಯುಣಲಿಕ್ಕಿಮೆಂದು ನುಡಿದು ಮಾಣಲಕ್ಕುಮೇಂ ತನ್ನಿಂ ಬಡ್ಡಿಸಿಮೆಂದಾಗಳ್ ಸತ್ಯಭಾಮೆ ಮುಳಿದು ಪಾರ್ವನಲ್ಲಂ ಮಾಯಾವಿ ಬೇಗಮಿತನಂ ಪೊಱಮಡಿಸಿ ಕಳೆಯಿಮೆನೆ

ಮ || ಪುಸಿವಂತುಂ ಮುಳಿವಂತು ಮಾಡಿದುಣಿ[ಸೇಮಿಂ] ತಬ್ಬ ನೋಡಲ್ಕೆ ಕೊೞ್
ಬಸವೇಂ ಕೊಳ್ಳಿರಿ ನಿಮ್ಮ ಕೂೞನೆನುತಂ ಕೆಯ್ಯಿಂ [ದಮೆರ್ದತ್ತ] ಛ
ರ್ದಿಸಿದಾಗಳ್ ಮೆನ ಪೊೞ್ ಕೂೞ್ ಕವಿವುದಂ ಕಂಡಳ್ಕಿಬೆಳ್ಕುತ್ತ ಬಾ
ಣಸಿಗಂ ಮಾಡಮನಾ ನರೇಂದ್ರವಧುವಂ ತಕ್ಕಯ್ಸಿಕೊಂಡೇಱಿದಂ ೩೦

ವ || ಅನಿತಂ ಮಾಡಿ ಕಾಮದೇವನಲ್ಲಿಮದಂ ಬಂದಾ ರೂಪಂ ಪಲ್ಲಟಿಸಿ ಕೆರಕುಂ ತುಱಿಯುಂ ಬೋೞದಲೆಯುಂ ಪಱಿದ ಕಪ್ಪಡಮುಂ ಬಡಮೆಯ್ಯುಂ ಕೋಲು ಕರಂಕೆಯುಂ ಬೆರಸು ಗಂಡುವೇಷಂ ತನಗಮರೆ ಬಂದು ರುಗ್ಮಿಣಿಮಹಾದೇವಿಯ ಮಾಡಮಂ ಪೊಕ್ಕನಾಗಳರಸಿ ಮುನ್ನಮೆ ತನ್ನೊಳಿಂತೆನುತಿರ್ದಳ್

ಕಂ || ಮೂಕಾಂಧ ಬಧಿರ ಕುಬ್ಬಾ
ನೀಕಕ್ಕಿಂಬಾದುವಿಂದೆ ಕುಸುಮಫಳಂಗಳ್
ಪ್ರಾಕಟಮಾದವು ಮರಂಗ
[ಳೇಕೋಯಿಂ]ದೆನ್ನ ಪುತ್ರಕಂ ಬಂದಪನೋ ೩೧

ವ || ಎನುತಮಿದಿರೊಳಿರ್ದು ನೋಡುತ್ತಂ ಬರವುಗಾಣದಿಂತೆಂದಳ್

ಕಂ || ಈಗಳೆನಿತಾನುಮತಿಶಯ
ಮಾಗಿರ್ದುವು ಮೂಗುವಡುವ ದೆವಸಂಗಳೊಳಂ
ಕೋಗಿಲೆಗಳೆಲ್ಲ ದೆಸೆಯೊ[ಳ್]
ಕೂ]ಗಿದವೋವೋ ಕುಮಾರನಿನ್ನುಂ ಬಾರಂ ೩೨

ವ || ಎಂಬನ್ನೆಗಂ ಬರ್ಪ [ಗುಂ]ಡನ ಬರವಂ ಕಂಡು ಧರ್ಮವಾತ್ಸಲ್ಯಕ್ಕೆ ದೇಶವ್ರತಿಗಮಿದಿರೇೞಲ್ವೇೞ್ಕುಮೆಂದು ರುಗ್ಮಿಣಿಮಹಾದೇವಿ ಬೇಗಮಿದಿರೆರ್ದಿಚ್ಛಾಕಾರನಿತ್ತಂ ಬನ್ನಿಮೆಂದೇಱಲಿಕ್ಕಿ ಕಾಲಂ ಕರ್ಚಿಸಿ ಕರಂಕೆಯುಮಂ ಕೋಲುಮಂ ಕೊಂಡು ಕೆಲದೊಳ್ ಸಾರ್ಚಿಟ್ಟು ಮೇಲೆ ಪಾಯ್ವ ನೊಣಮಂ ಬೀಸಿ ಕೆರಕಿನ ರಸಿಗೆಯಂ ತಾನೀಂಟ್ಟುತ್ತಮಿರ್ದು ಬೋನಮಂ ತನ್ನಿಮೆಂದೊಡಂತು ತಂದುದನುಣ್ಬೆನಲ್ಲೆನಿಂದೆ ಬಿತ್ತಿದೊಡಿಂದೆ ಬೆಳೆದ ಕೞವೆಯಕ್ಕಿಯಂ ಸುರಭಿಯ ಪಾಲೊಳ್ ತುಯ್ಯಲನಾಧಿತ್ಯನ ಕಿರಣದ ಬೆಂಕೆಯೊಳಟ್ಟುದನಲ್ಲದೆ ಉಣ್ಪೆನುಮ[ಲ್ಲ]ಮಂತಿಕ್ಕಲ್ ತೀರ್ವೊಡಿಕ್ಕಿಮೆಂದೊಡದುವಂ ನೋೞ್ಪೆನೆಂದು ಕೞವೆಯ ಬಿತ್ತಂ ತರಿಸಿ ಮನೆಯ ಮುಂದಣೆಡೆಯೊಳಗೞಿಸಿ ಪೊಕ್ಕು ಬಿತ್ತಂ ಪಿಡಿದು ನಿಂದು

ಪೃಥ್ವಿ ||
ಪತಿವ್ರತೆಯುಮಾನಪ್ಪೊಡಂ ಜಿನಮತ್ತೊಕ್ತ ಸ
ಮ್ಯಕ್ತ್ವಸಿದ್ಧಿಯೆನಗುಳ್ಳಡಂ ಪ್ರಕಟಶಾಸನದೇ(?)
ವತಾನಿಕರಮಿಗಳೆನ್ನ ಬಗೆ[ದಂ]ದಮಂ ಮಾಡಿಮೆಂ
ದತರ್ಕ್ಯಗುಣಯುಕ್ತೆ ಶುದ್ಧತರಭಾವದಿಂ ಬಿ[ತ್ತಿ]ದಳ್ ೩೩

ವ || ಬಿತ್ತಿದಾಗಳಲ್ಲಿಗಪ್ಪನಿತೆ ಮೞೆಕೊಂಡು ಕೆಸಱಾಗಿ ನಾಂಟಿ ಬೆಳದೆಱಗಿರ್ದಡಾಗಳ್ ಗುಂಡನೊಡೆಕೊಯ್ದು ಮೆಟ್ಟಿ ಪಲಂಬರಂ ಕರೆದು ಉಗುರೊಳ್ ಸುಲಿದಕ್ಕಿಯಂ ತಂದು ಮುಂದಿರ್ದ ಸುರಭಿಯಂ ಕಱೆದಾ ಪಾಲುಮುಕ್ಕಿಯಂ ಪೊನ್ನ ಮಡಕೆಯೊಳ್ ಪೊಯಿದಾದಿತ್ಯತ ಕಿರಣಂ ಕೊಳುವೆಡೆಯೊಳಿಟ್ಟಡೆ ಕುದಿದು ಬೆಂದ ತುಯ್ಯಲಂ ತಂದಾಱಿಸಿ ಪೊನ್ನ ತಳಿಗೆಯೊಳ್ ಬಡಿಸಿದೊಡುಂಡು ಕಾಱುವಾಗಳರಸಿ ಕೆಯ್ಯೊಳಾಂತುಕೊಂಡು ಕಳೆದು ಕೆಯ್ಯೆಱೆಯಿಸಿ ತಾನೆ ಮೆಯ್ಯಂ ಕರ್ಚಿ ಕರಂ ಶ್ರಮಂಬಟ್ಟಿರೆಂದು ಬೀಸುತಿರ್ದುದಂ ನೋಡಿ

ಕಂ || ಇಂತಪ್ಪ ಪತಿವ್ರತೆ ಮ
ತ್ತಿಂತ[ಪ್ಪ] ವಿಶುದ್ಧದರ್ಶನಾನ್ವಿತೆಯಂ ಕಂ
ಡಿಂತೆನಿತಂ ಕಾಡುವೆನಾ
ನೀಂ ತೋಱುವೆನೆನ್ನನೆಂಬ ಬಗೆಯಂ ಬಗೆದುಂ ೩೪

ವ || ಬಗೆದಾಗಳೆ ವಿದ್ಯೆಯಂ ನೆನೆದಟ್ಟಿ ನಾರದನಂ ಬರಿಸಿ ಕಂಡೇಱಲಿಕ್ಕಿ ಕುಳ್ಳಿರ್ದೊನನೆನ್ನ ಮಗನಂ ತ[ಪ್ಪೆ]ನೆಂದು ಪೋ[ದಿ]ರೆಲ್ಲಿದನೆಂದು ಕಣ್ಣನೀರಂ ನೆಗಪಿದಾಗಳಾ ಕಣ್ಣನೀ[ರ್] ದುಃಖ ಸಮುದ್ರದ ನೀರೋಳಾೞಲೀಯದೆ ನೆಗಪುವೆನೆಂಬಂತೆ ವಿದ್ಯಾಧರಲೋಕದೊಳಿದ್ದಾತನಂ ತಂದೆನೀಯಿರ್ದನೆಯೆನೆ ತೋಱಿಮೆಂಬಲ್ಲಿಂ ಮುನ್ನಂ ದೇವಲೋಕದ ದೇವನಂತಾಗಿ ಕಾಮದೇವಂ ಕೆಯ್ಯ[೦]ಮುಗಿದು ಮೆಯ್ಯನಿಕ್ಕಿ ಪೊಡವಟ್ಟೊನನಿರ್ದಪ್ಪಿಕೊಂಡು ಮತ್ತಂ ಮತ್ತಮಪ್ಪಿಕೊಂಡು ತೊಡಯಮೇಲಿರಿಸಿ ನೋಡಿ ನಿನ್ನ ಬಾಲಕ್ರೀಡೆಯಂ ಕಾಣಲ್ಪಡೆದೆನಿಲ್ಲೆಂದದಂ ನೆನೆದು ಮ[ನ್ಯು]ಮಿಕ್ಕೊಡದೇವಿರಿದಬ್ಬ ತೋರ್ಪೆನೆಂದು

ಉ || ಬಾಳಕನಾದೊಡೆತ್ತಿಕೊಳೆ ಪೆರ್ಮೊಲೆಯಂ ತೆಗೆದುಂಡು ರಾಗದಿಂ
ದಾ ಲಲಿತಾಂಗಿ ತೊಟ್ಟಿಲೊಳಗಿಟ್ಟಡೆ ಪಾಡಿಸುತಿರ್ದು ಮತ್ತೆಯುಂ
ಲೀಲೆಯೊಳಂ ಬೞಿಕ್ಕೆ ನಲಿದಾಡಿ ತಳರ್ನಡೆಯಿಟ್ಟು ಮೆಚ್ಚಿ ತಾ
ಯಾಲಿಸೆ ಮುದ್ದಿನೊಳ್ ನುಡಿಯುತಂ ಪರಿದಾಡುತುಮಿರ್ದನಂಗಜಂ ೩೫

ವ || ಅಂತು ಪಿರಿದು ಪೊತ್ತು ಬಾಳಕ್ರೀಡೆಯಂ ತೋಱಿ ತಾಯಂ ಸಂತೋಷಂಬಡಿಸಿ ಮುನ್ನಿನಂತೆ ನವಯವ್ವನನಾಗಿ ಬಂದಬ್ಬೆಯ ಮುಂದೆ ಕುಳ್ಳಿರ್ದೊನನೞ್ಕಱೊಳ್ ನೋಡಿ ಮಗಂ ಬಂದುದಕ್ಕಂ ಸಕಲವಿದ್ಯಾಧರನಾಗಿ ಸಂದುದಕ್ಕಂ ಗೋಶೀರ್ಷರತ್ನಮಯಂಗಳ್ ಸುಂದರಾಕಾಂಗಳಪ್ಪ ಪಲವುಂ ಪ್ರತಿಮಗಳಂ ತಂದುಕೊಟ್ಟುದಕ್ಕಂ ತನ್ನರ್ಥಿ ಕೂ[ಡಿದು]ದಕ್ಕಂ ಮುಯ್ವಂ ನೋಡಿ ರಾಗಿಸಲ್ ಬಗೆದುದನಱಿದಬ್ಬ ನೀವೆನ್ನ ಬಂದುದನಾರ್ಗಮಱಿಪದಿರಿಮೆಮ್ಮಯ್ಯಂಗೆನ್ನ ಪ್ರತಾಪಮುಮನೊಡನೆ ತೋರ್ಪೆನೆಂದೋಜೆಗೊಳಿಸಿ ಮದನಂ