ಮುನ್ನಮೆ ಸಂಪಗೆಯಂ ಗೆ
ಲ್ವನ್ನವು ಲಕ್ಷಣದೊಳೊಂದಿ ಸೊಗಯಿಪ ಮಧುರಾ
ಸನ್ನುತೆಯ ಮೂಗಿನೊಳ್ಪುಮ
ನಿನ್ನಾನೇನೆಂದು ಪೊಗೞ್ವೆನುಪಮಾತೀತಂ ೪೧

ಆ ವಧುವಿನ ಕಿವಿಗಳೊಳೊ
ಳ್ಪಾವಗಮೆಂದಿರ್ದಡದುವೆ ನೋೞ್ವವರೆರ್ದೆಯಂ
ಪೌವನೆ ಪಾಱಿಸುಗುಂ ಪೆಱ
ದಾವುದೊ ಬಾೞಿಸುವ ವಸ್ತು ನರರ್ಗೀ ಜಗದೊಳ್ ೪೨

ಬಿಳಿಯವತಿಸ್ನಿಗ್ಧಂಗಳ್
ಪೊಳೆದೊಪ್ಪುವುವಾಯತಂಗಳದಱಿಂ ಮತ್ಸ್ಯಂ
ಗಳ ತೆಱದಿಂದಂ ಸೊಗಯಿಪು
ವಳಿಕುಳಕುಂತಳೆಯ ಪೊಳೆವ ನಿಡಿಯಲರ್ಗಣ್ಗಳ್ ೪೩

ತೊಳಗುವನಿತಿಲ್ಲ ಪಿರಿದ
ಪ್ಪಳವಿಯುಮಿಲ್ಲಮಭವಂಗಣಮಲ್ತಂತುಂ
ಮಿಳಿರ್ದಾಯಮೆಂಬನಿತ್ತಱೊ
ಳೊಳಕೆಯ್ದುವು ಪುರ್ವು ಜಯಮನಾ ಮಾನಿನಿ[ಯಾ] ೪೪

ನೀರೇಜಾಸ್ಯೆಯ ನೊಸಲುಂ
ಚಾರುತವರ್ದೊಂದುವಂ ಜಗತ್ಪ್ರಣುತೆ ನಿಜಾ
ಕಾರದೊಳಂ ತೊಳಪುದಱೊಳ
ಮೋರನ್ನವೆ ಬಗೆದು ನೋೞ್ಪಡಿಂತಾಯೆರಡುಂ ೪೫

ಕರಿಯವೆನಿಸಿರ್ದು ಪೊಳೆವುವು
ಸುರುಳ್ದು ಕುಸಿದಿರ್ದುವರಳುತಿಪ್ಪುವು ಬೇಱಾ
ನಿರುತಂ ಬಂಬಲೊ[ಳೊಪ್ಪುವ]
ಕುರುಳಂದಮಿದೇಂ ವಿರುದ್ಧಮೋ ಕಾಮಿನಿ[ಯಾ] ೪೬

ವಿಳಸದನೂನೈಶ್ಚರ್ಯಂ
ನೆಲಸೆ ಮಹಾದೇವಿಯಪ್ಪ ಪುಣ್ಯಕ್ಕೆಂದುಂ
ನೆಲೆಯಪ್ಪುದನಾ ಕನ್ನೆಯ
ನೆಲೆಯಳವಿಯೆ ಬುಧಜನಕ್ಕೆ ಪೇೞ್ಗುಂ ಪೆಱದೇಂ ೪೭

ಅತಿಮಧುರ ಗೀತ ಲಕ್ಷಣ
ಯುತಮಾಗುವ ಬಣ್ಣಮೆಸೆವ ತೆಱದೊಳ್ ಸುಸ್ನೇ
ಹತೆಯೊಡಗೂಡಿ ತಗುಳ್ದೆಸೆ
ದತಿಶಯಮಿದೆನಿ[ಪು]ದು ಬಣ್ಣ ಮಂಬುಜಮುಖಿ[ಯಾ] ೪೮

ನೋಡಿದ ಮನುಜಂಗೞಲಂ
ನೀಡಿಲ್ಲದೆ ಕೊಟ್ಟು ಗೆಲ್ಲಮಂಕೀರ್ತಿಯುಮಂ
ನಾಡೆಯುಮೆಸೆದಿರೆ ಕೊಂಡುದು
ಗಾಡಿ ಮಹೋತ್ತುಂಗ ವೃತ್ತಘನಕುಚಯುಗೆ[ಯಾ] ೪೯

ಸುಂದರಗಜೇಂದ್ರಗತಿ ಸತಿ
ಬಂದಾವನ ಮನೆಯೊಳಿಕ್ಕುಮಾತಂಗೆ ಕರಂ
ಸಂದಿರ್ದಾಯುಮ[ದೈಸಿರಿ]
ವೊಂದಿ ನಿರಂತರಮೆ ನಿಲ್ಕುಮೆಂಬುದನಱಿವೆಂ ೫೦

ಕೋಮಳಲತಾಂಗಿ ಗಜನಿಭ
ಗಾಮಿನಿ ಪೊಗೞ್ವಂಗಳುಂಬಮೆಂತುಂ ಪೊಗೞ್ವಂ
ದೇಮಾತಹಿಪತಿ ನೆಱೆಯಂ
ವ್ಯಾಮೋಹಿಗೆ ನೆಗೞಲಾಗವೆಂಬುವುಮೊಳವೇ ೫೧

ಏನಾನುಂ ನೆವದಿಂದಂ
[ಮೇ]ನಕೆ ಸುರಪತಿಗೆ ಮುಳಿದು ಸುರಗತಿಯಿಂದಂ
ತಾನಿೞಿದು ಬಂದಳಲ್ಲದೆ
ಮಾನಸರಿಂತಾಗರೆಂದು ಭಾವಿಸುತಿರ್ಪೆ[೦] ೫೨

ವ || ಇಂತು ಸ್ವಭಾವಾಖ್ಯಾನೋಪಮಾ [ರೂ]ಪಕ ದೀಪಕಾ[ಧಿಕಾ] ಕ್ಷೇಪಾರ್ಥಾಂತರನ್ಯಾಸ ವ್ಯತಿರೇಕ ವಿಭಾವನಾ ಸಮಾ [ಸೋಕ್ತ್ಯು]ತ್ಪ್ರೇಕ್ಷಾ ಹೇತು ಸೂಕ್ಷ್ಮ [ವಕ್ರೋಕ್ತಿ] ಪ್ರೇಯೋ ರಸವದೂರ್ಜಸ್ವಿ ಪರ್ಯಾಯೋಕ್ತಿ ಸಮಾಹಿತೋದಾತ್ತಾಪ [ಹ್ನುತಿ ಶ್ಲೇ]ಷ ವಿಶೇಷ ಸದೃಶೋಕ್ತಿ ವಿರೋಧ [ಅ] ಪ್ರಸ್ತುತಸ್ತೋತ್ರ [ವ್ಯಾಜ ವ್ಯಾಜನಿಂದೆ ವ್ಯಾ] ಜಸ್ತುತಿ ನಿ[ದರ್ಶ]ನ ಸಹೋಕ್ತಿ ಪರಿವೃ[ತ್ತಿ] ಸಂಕೀರ್ಣ ಭಾವಿಕಂಗಳೆಂಬ ಮೂವತ್ತೈದುಮರ್ಥಾಳಂಕಾರ ಭಿತ್ತಿಯೊಳ್ ಪೊಗೞೆ ಮೆಚ್ಚಿ ಪೇೞಿವಾಕೆಯನೆಂತು ತಪ್ಪುದೇಗೆಯ್ವುದೆಂದೊಡೆ ಯಮನ ಮಗನಪ್ಪ ಶಿಶುಪಾಲಂಗೆ ಪತ್ತೆಂಟು ದೆವಸದೊಳಗೆ ಕುಡಲ್ ಬಗೆದಿರ್ದರಂ ಬೇಗಂ ಕಯ್ಗೆ ಮಡಿಮೆಂತಪ್ಪೊಡಮೆಱೆದೊಡಂತೆಗೆಯ್ವೆ ಮೆಂದು ನಾರದನನತಿಪ್ರೀತಿಯಿಂದಂ ಮನ್ನಿಸಿ ಕಳಿಪಿ ತಾನುಂ ಬಲದೇವನುಮೇಕಾಂತದೊಳ್ ರುಗ್ಮಿಣಿಯಂ ತಪ್ಪ ಕಜ್ಜಮನಾಳೋಚಿಸಿ ಅರ್ಜುನಂಗೆ ಬೞಿಯನಟ್ಟಿ ಸತ್ಯ[ಕಿಯು] ಮರ್ಜುನನುಮನೊಡಗೊಂಡು ಪತ್ತೆಂಟು ರಥದೊಳ್ ಕಿಱಿದು ಸಾಮಗ್ರಿೞಿಂ ಪೊಱಮಟ್ಟು ತಮ್ಮ ಬಲಮಂ ಪೆಱಗನೆಯ್ದೆ ಬರವೇೞ್ದು ದಾೞಿಮಾರ್ಗದಿಂ ಕುಂಡಿನಪುರಮನೆಯ್ದಿ ಬಹಿರ್ಭಾಗದೊಳ್ ವಿಶ್ರಮಿಸಿರ್ದು ಸತ್ಯಕಿಯುಮರ್ಜುನನುಮಂ ಪೊೞಲಂ ಪೊಕ್ಕಾರೈದುಬನ್ನಿಮೆಂದಟ್ಟಿದೊಡವರಿರ್ವರುಂ ಪೋಗಿ ನೋೞ್ಪರಾ ಪೊೞಲ ಪೊಱಗೊಂದು ದೆಸೆಯೊಳ್

ಕಂ || ಇಂತೆಂಬುದೊಳವೆ ಪೆಂಪೆಂ
ಬಂತಿರೆ ನೋೞ್ಪವರ ನೋೞ್ಪ [ಕಂಗಳ್] ಕೋರೈ
ಪಂತಿರೆ ಚಿಂತಿಸಲಾಗೆಂ
ಬಂತಿರೆ ಬಿಟ್ಟಿರ್ದ ಪಿರಿಯ ಬೀಡಂ ಕಂಡರ್ ೫೩

ವ || ಕಂಡಲ್ಲಿಯೊರ್ವನನಿದಾರ ಬೀಡೆಂದೊಡಿದು ಮುಳಿವಂಗೆ ಜವನ ಕಣ್ಬೀಡುಪೆಱದಲ್ಲೀ ಪೊೞಲನಾಳ್ವರಸನ ಮಗಳಂ ಶಿಶುಪಾಲನೆಂಬೊಂಗೆ ಮದುವೆಗೊಳಲ್ ಬಂದಿರ್ದಂ ಯಮನೆಂಬ ಮಂಡಳಿಕನಾ ಶಿಶುಪಾಲನಳವದೆಂತೆಂದೊಡೆ

ಕಂ || ಬಲದ ಬಲಗರ್ವದಿಂ ತೋ
ಳ್ವಲದ ಕರಂ ಚಲದಳುರ್ಕೆ[ಯಿಂ] ಸುರರೊಳ್ ಮಾ
ರ್ಮಲೆವಂ ಖೇಚರರನಡು
ರ್ತಲೆವಂ [ ತ] ನಗೇಕಭೋಗಮಾಗಿರಲೊ[ಲೆ]ವಂ ೫೪

ವ || ಅಂತಪ್ಪ ಬಲ್ಲಾಳ್ಗೆ ನಾಡಿದು ಮದುವೆಯೆಂಬುದನಱಿದು ಪೊೞಲೊಳಗಂ ಪೊಕ್ಕು ರಾಜಾಲಯದ ಮುಂದಣದಲ್ಲಿದ್ದಾರಯ್ಯುತ್ತಿರ್ಪಿನಮಾ ರಾಜಕನ್ಯೆ ಜಿನಾಲಯದ ಯಕ್ಷನನರ್ಚಿಸಿ ಮಗುೞ್ದರಮನೆಗೆ ಬಪ್ಪುದಂ ಕಂಡಱಿದು ಕಾಪಿನವರನಿರಿದು ಬೆರ್ಚಿಸಿ ಕನ್ನೆಯನೆತ್ತಿಕೊಂಡು ಸತ್ಯ[ಕಿಯಂ] ಬೆಱಗಂ ಕಾದು ಬರವೇೞ್ದು ಅರ್ಜುನನಿಂತೆಂದು ಸಾಱುತ್ತಂ ಮಗುೞ್ದಂ

ಮ || ಕುಡಲೆಂದಿರ್ಪ ನರೇಂದ್ರನಕ್ಕೆ ಕೊಳಲೆಂದುತ್ಸಾಹದಿಂದಿರ್ದನ
ಪ್ಪಡಮಕ್ಕಿರ್ವರ ಬೀಡಿನಲ್ಲಿ ಛಲಮಂ ಕೊಂಡಾಡುವೊಲ್ ಗಂಡರು
ಳ್ಳಡಮಕ್ಕಮ್ಮು ವರಡ್ಡ ಮಾಗಿರೆಳೆಕೋಳ್ಗೊಂಡೊರ್ವನೊಯ್ದಪ್ಪೆನೇ
ಪಡೆಮಾತೆನ್ನಯ ಮೈದುನಂಗೆ ಕುಡಲೆಂದೀ ಕನ್ನೆಯಂ ಮಾನ್ಯೆಯಂ ೫೫

ವ || ಎನುತಮಂತೆ ಪೊೞಲ ಬೀದಿಯೊಳ್ ಬರ್ಪರ್ ಗಂಡರ್ ಬೆಕ್ಕಸಮಾಗಿರೆ ನಿಲೆ ಕಂಡವರಂ

ಕಂ || ಗಂಡರ ಮಿಸೆಯ ಮಾೞ್ಕೆಯೆ
ಗಂಡರಗಲ್ದುರಮೆ ಪಿಡಿದ ಕೈದುಗಳಿಂದಂ
ಗಂಡರ ಕೆಯ್ತಮೆ ಭಯದಿಂ
ಪೆಂಡಿರ ತೆಱದಿಂದ ನೋಡುತಿರ್ಪರದೆಂತೋ ೫೬

ವ || ಎಂದಲೆಯುತ್ತಮುರದೆ ಮಲೆಯುತ್ತಂ ಬರೆ ಕೆಲ[ರ್ ಕೆಳರ್ದು] ಮೇಲ್ವಾಯಲ್ ಬಂದರನೊಂದೆ ಕೈಯೊಳ್ ಪಿಡಿದೀಡಾಡುತ್ತಂ ಪೆಣಮಯಂ ಮಾಡುತ್ತಮಂತೆ ಬಂದು ವೀರಶ್ರೀಯಂ ತಂದುಕೊಡುವಂತೆ ರುಗ್ಮಿಣಿಯಂ ಹರಿಯ ರಥದೊಳಗಿರಿಸಿ ತಮ್ಮುಳ್ಳನಿಬರುಂ ಯುದ್ಧಸನ್ನದ್ಧರಾಗಿರ್ಪಿನಂ ಪೆಳಱಿದ ಕಾಪಿನವರ್ ಪೇೞೆ ವಿಶ್ವಾವಸುಮಹಾರಾಜಂ ಕೇಳ್ದು ಕೆಳ[ರ್ದಂ]ತೆ ಪರಿತರಲ್ ಬಗೆದೊಡೆ ಪೆರ್ಗಡೆಗಳ್ ಬೇಡಿದಂತೆ ಪರಿಯಲಾಗ ನಿಮ್ಮ ಮಗಳಪ್ಪುದುಮಂ ಬಲ್ಲಾಳಪ್ಪ ಶಿಶುಪಾಲಂಗೆ ಕುಡಲಿರ್ದುದನಱಿಯುತ್ತಮೆೞೆದುತರಿಸಿದಾತಂ ಸಾಮಾನ್ಯನಲ್ಲಂ

ಕಂ || ಏಪಡೆಮಾ[ತೊ] ವಿನೂತಮ
ಹಾಪರವಾರಿಧಿಯೊಳಮರರುಚಿತ ಲಸದ್ದ್ವಾ
ರಾವತಿ ಪುರಪತಿಯಾಗಿ(?)
ರ್ದಾ ಪರಮೇಶ್ವರನ ಗೊಡ್ಡ ಮಾಗಲೆವೇೞ್ಕುಂ ೫೭

ವ || ಅದಱಿನೀ ನೆಲದ ಕೆಲದ ಭೃತ್ಯವರ್ಗಮೆಲ್ಲಮಂ ಬರಿಸಿ ನಾಳೆ ಕಾದುವವರುಂ ಬೆನ್ನಂ ತಗುಳೆ ಪೋಪ ಗಂಡರಲ್ಲರೆನುತಮಿರೆ ಕನ್ನೆಯನೆೞೆದುಕೊಂಡು ಪೋದುದುಮಂ ಪುರಕ್ಷೋಭಮಾದುದುಮಂ ಶಿಶುಪಾಲಂ ಕೇಳ್ದು ಬಂದು ನೀಮಿದಕ್ಕೇನುಂ ಸಂಕಟಂ ಬಡದಿರಿಮಾತನೆನಿತಾದಡಮೇನಾಂ ಬರಲ್ ಗಂಡರೊಳರೆ ನೋಡುತ್ತಿರಿಮಿಗಳವನಂ ಕೊಂದು ಕನ್ನೆಯಂ ತಂದಪೆನೆಂದು ಪೊಱಮಡಲ್ ಬಗೆದೊಡಾಗದೆಂದೆಲ್ಲಮನೋಸರಿಸಿ ನೆರವಿಯಂ ಬರಿಸಿ ನಾಳೆ ಕಾದುವವೆಂದೊಡಂಬಡಿಸಿ ತಂತಮ್ಮ ಬೀಡಿಂಗೆ ಪೋಗಿ ಸನ್ನಾಹಂಗಳನಿಂಬುಮಾಡು[ತ] ಮಾಳಂ ನೋಡುತ್ತಮಧಿವಾಸದವರಂ ಬರಿಸುತ್ತಂ ನಯಂಗೆಯ್ದಿರಿಸುತ್ತಂ ದಾನಸನ್ಮಾನಾದಿಕ್ರಿಯೆ ಯೋಗದೊಳಂ ಸಮರೋದ್ಯೋಗದೊಳಮಿರ್ದರಿತ್ತ ನಾರಾಯಣನುಮವರ ಪೊಱಮಡುವುದಂ ಕಾಣದೆ ನಾಡೆ ಪೊತ್ತೊಡ್ಡಿ ನಿಂದಿರೆ ಪೋಪುದು ಪಾೞಿಯಲ್ತೆಂದು ಬೀಡಂ ಬಿಟ್ಟಿರ್ದನನ್ನೆಗಂ ಪೆಱಗಣ ಸಮಸ್ತಮುಳ್ಳ ಯಾದವರ ಸಾಧನಮೆಲ್ಲಂ ಬಂದು ಕೂಡೆ ಬಿಟ್ಟುಮಿರ್ದತ್ತಾಗಳ್

ಕಂ || ಕುಡುವನ ಕೊಳ್ವನ ಬಗೆಯಂ
ಪಡಲಿತ್ತು ಪೆಱಂಗೆ ಬಗೆದ ಬಿದಿಯಣಕ [ಕ್ಕಂ]
ಕಡುನಾಣ್ಚಿದಂತೆ ಭಾಸ್ಕರ
ನಡಂಗಿದಂ ಮೆಲ್ಲನಸ್ತಶೈಳದ ಮಱೆಯೊಳ್ ೫೮

ವ || ಅಂತಾದಿತ್ಯನಸ್ತಮಾನಮಾದಾಗಳುಂ ಎರಡುಂ ಪಡೆಯ ಸುಭಟರ್ ಸುಮರೋದ್ಯೋಗ ನಿಯೋಗದಿಂದಿರೆ ಪಲವುಂ ಪ್ರಾಣಿಗಳ್ಗೆ ಮಿತ್ತು ಮೂಡುವಂತೆ ನೇಸಱ್ ಮೂಡಿದೊಡೆ ವಿಶ್ವಾವಸು ಮಹಾರಾಜನುಂ ರುಗ್ಮಿಣಕುಮಾರನುಮೊಂದು ಮೊನೆಯಾಗಿ ಬಂದೊಡ್ಡಿದರ್ ಯಮನುಂ ಶಿಶುಪಾಲನುಮೊಂದು ಮೊನೆಯಾಗಿ ಬಂದೊಡ್ಡಿದರಿತ್ತ ನಾರಾಯಣನುಂ ಬಲದೇವನುಮರ್ಜುನನುಂ ಸತ್ಯಕಿಯುಮೊಂದಾಗಿ ತಮ್ಮ ಬಲಮೆಲ್ಲಮನಿಂಬುಮಾಡಿ ಪಸರಿಸಿ ಬಂದೊಡ್ಡಿ ನಿಂದರಂತೆರಡುಂ ಬಲಮೊಡನೆ ಪಱೆಯಂ ಪೊಯ್ಸಿ ಕೈವೀಸಿದಾಗಳಿರ್ವಲದ ಧನುರ್ಬಲಂ ಮಸಗಿ ತಾಗಿ

ಕಂ || ತಿರುವಾಯೊಳಂಬನಿಟ್ಟಿ
ರ್ದಿರದೊಡನೊಡನೆಚ್ಚೊಡೊಗೆದು ಪಾಱುವ ಸರಮುಂ
ಸರಲುಂ ರಣಭರಮುಂ ಭೀ
ಕರಮುಂ ನೋೞ್ಪವರ್ಗೆ ನಾಡೆ ಪಡೆದುದಗುರ್ವಂ ೫೯

ಬಿಲ್ವಡೆ ಚಲದಿಂದಂ ನೆ
ರ್ಗೊಲ್ವರೆ ಬೆಚ್ಚಗ್ಗಿ ತಗ್ಗಿ ಮರ್ಗಾಗಿ ಕರಂ
ಬಲ್ವಾತುಗಿಡದೆ ಸತ್ತು ಪ
ಡಲ್ವಟ್ಟ[ರಿ]ರೌದ್ರಮಾದುದಾ ರಣರಂಗಂ ೬೦

ವಂ || ಅಲ್ಲಿಂ ಬೞಿಯಂ

ಕಂ || ಕುದುರೆ ಪರಿತಪ್ಪುದಂ ಕಂ
ಡಿದಿರರಿಸಾದನಡಕುದುರೆಗಳ್ ಮಸಗಿ ತಗು
ಳ್ದಿದಿರಾಂತು[೦] ಚಲದಿಂದೊ[ದ
ವಿದ] ಮುಳಿ [ಸಿಂದು]ಣ್ಮಿ ಪೊಣ್ಮಿ ತಟ್ಟುತ್ತಿಱಿದರ್ ೬೧

ವ || ದೞಮಾಂತಿಱಿದು ಕೆಡೆದಾಗಳ್

ಕಂ || ತೇರ್ತೇರೊಳ್ ಸರಭಸದಿಂ
ಮಾರ್ತಾಗೆ ಭಟರ್ಕಳಾರ್ದ ನರಪತಿಗೆ ಕರಂ
ಕೂರ್ತುದುಮಂ ಸಾಯಲ್ ತಾ
ಮಾರ್ತುದುಮಂ ಕಾದಿ ನೆರಪಿ ಮುಮ್ಮರಿಯಾದರ್ ೬೨

ವ || ಮತ್ತಂ

ಕಂ || [ಕಟ]ತಟ ಗಳಿತ ಮ[ದೋ] ತ್ಕಟ
ಘಟೆ ರೌದ್ರ ಪ್ರಕಟಕೋಪ ವಿ[ದ್ವಿ]ಟ್ಸೇನಾ
ಘಟೆಯೊಳತಿ ಚಟುಳ ರಣಲಂ
ಪಟ[ಭ]ಟರೋಳಿದಿರ್ಚಿ ನೂಂಕಿ ತಾಗಿದರಾಗಳ್ ೬೩

ವ || ತಾಗಿ ಬಹುವೇದ್ಯದಿನಿಱಿದು ಬೆಟ್ಟು ಕೆಡೆವಂತೆ ಕೆಡೆದಿಂಬೞಿಯಂ ಶಿಶು[ಪಾಲಂ ತ]ಮ್ಮ ಬಲಮರ್ಕಾಡುವುದುಮಂ ಅಂಜಿಯೋಡುವುದುಮಂ ಕಂಡು ಮನದೊಳೞಲುಣ್ಮೆ ಮುಳಿಸು ಕ[ಯ್ಗ]ಣ್ಮೆ ನರಾಯಣಂಗಿದಿರಂ ನೂಂಕಿ ಕಾದುತ್ತಿರ್ದಂ ವಿಶ್ವಾವಸುವರ್ಜುನನೊ ಳಿದಿರ್ಚಿದಂ ವೇಣುದಾರಿ ಬಲದೇವನನಾಂತಂ ಯಮಂ ವಸುದೇವನೊಳ್ ತಾಗಿದಂ ರುಗ್ಮಿಣಂ ಸತ್ಯಕನೊಳ್ ಪೊಣರ್ದು ಕಾದೆ ರುಗ್ಮಿಣಿ ಹರಿಯಲೀಯದೆಂತಪ್ಪಡಮೆಮ್ಮಣ್ಣನಂ ಪಿಡಿಗೆಂದು ಸತ್ಯಕನಲ್ಲಿಗಟ್ಟಿದಳದಂತವರ್ ದ್ವಂದ್ವಯುದ್ಧದೊಳ್ ಮಸಗಿ ಕಾದೆ ಶಿಶುಪಾಲಂ ತನ್ನ ಮುಂದಣ ಬಲಂ ಕಿಡೆ ಸತ್ತುದಕ್ಕೆ ಕಡುಮುಳಿದು ರಥಮನೈದೆನೂಂಕಿ ಹರಿಯನಿಂತೆಂದಂ

ಕಂ || ತುಱುಪಟ್ಟಿ ನಿನ್ನ ಪೆಳದೇಂ
ತುಱುಕಾಱಂ ನಿನ್ನ ತಂದೆ ತುಱುವನೆ ಕಾವೈ
ತುಱುಕಾರ್ತಿಯರೋಳ್ ಮಱೆವಾ
[ೞ್ವ]ಱಿಕೆಯ ಗೋವುಳಿಗ ನಿನಗೆ ಶೌರ್ಯಮೆ ಪೊಲನೇ ೬೪

ಮ || ಉಡಿದೈ ಬಂಡಿಯನೇನಗುರ್ವೊ ಮಗುೞ್ದುಂ ವಿಕ್ರಾಂತದಿಂ ಕಾಗೆಯಂ
ಪಿಡಿದೈ ಸಂಕಿಸದೆರ್ದು ಕತ್ತೆ ಬಡಗೂಂಟೆಂದಿಂತಿವಂ ನೋವಿನಿಂ
ಬಡಿದೈ ನೀರೊಳಗೊಳ್ಳೆಯಂ ಮಡಿಪಿದೈ ನೀಂ ಚೋದ್ಯಮೋ ಮತ್ತೆ[ದಂ]
ಡಿಡುವಂ ಮಾಣ್ದಿರದೊತ್ತಿದೈ ಗಡಮಿದೇನಾಶ್ಚರ್ಯಮೋ ಸಾಹಸಂ ೬೫

ಕಂ || ಒಲ್ಲದೆ ನಾಣಂ ಕೈದುಗ
ಳಿಲ್ಲದೆ ಕುಣಿದಳಿಪಿ ಕಡು[ಪೋರ್ವ ಮಲ್ಲರುಮಂ
ನಿಲ್ಲದೆಯೌಂ]ಕಿಯೆ ಗೆಲ್ದಾ
ಗೆಲ್ಲಂ ನಿನಗಾದೊಡಿಱಿವ ಗೆಲ್ಲದೊಳೇನೋ ೬೬

ಚಂ || ಬೞಲದೆ ಪೊತ್ತು ಕಲ್ಲನುಲುವಂಗೆಣೆಯಾದ ಮಹಾಪ್ರತಾಪಿ ನೀಂ
ಪೆೞಕನಡುರ್ತು ಕೊಂದ ಕಡುವಲ್ಕಣಿ ಮಾಣ್ದಿರದಣ್ಮಿ ಬಂದು ನಾ
ಯ್ನೊೞಲೆಯ ಮೇಲೆ ಪಟ್ಟ ಕಡುವೀರ ಕುಟುಂಬದಿನಗ್ಗಳಿಕ್ಕೆ ಕೈ
ಗೞಿದಿರೆ ಶಂಖಮೋ[ಗಡ] ಮಹಾತ್ಮ್ಯರಣಾಗ್ರದೊಳೇಡಗುಳ್ಳೆಯೋ ೬೭

ಕಂ || ತಾಯೊಡವುಟ್ಟಿದನಂ ಕೊಂ
ದಾಯತಿಯೊಪ್ಪಿರ್ದುದಕ್ಕೆ ನೀಂ ಬಿಸುಟು ಕುಲಾ
ಮ್ನಾಯಾದ ಪೊೞಲಂ ಭಯದಿಂ
ತೋಯಧಿಯೊಳಗುೞಿದೆ ಗಂಡರಾರ್ ನಿನ್ನನ್ನರ್ ೬೮

ಉ || ಇನ್ನವು ಸಾಹಸಂಗಳೊಳವಾಗಿರೆ ಕೆಮ್ಮನೆ ಸಂ[ತಸಿ] ಕ್ಕೆಯಿಂ
ದನ್ನಯವಂತನಾಗಿರದಿದೇನೆನಗಲ್ಲದ ಮರ್ತ್ಯರಾರ್ಗಮಿ
ಸನ್ನುತೆಯಪ್ಪ ಕನ್ನೆ ವಿಷಕನ್ನೆ ಬರ್ದುಂಕುವ ಕೊಂಡು ಬೇಡ[ನೀ]
ನೆನ್ನೊಳಿದಿರ್ಚಿ ಸತ್ತು ಕಿಡದಿರ್ ಬಿಡು ಮೆೞ್ಪಡದಿರ್ ಲತಾಂಗಿಯೊಳ್ ೬೯

ಕಂ || ಬಡಕಳ್ಳಂ ಸಾಯದೆ ಪೋ
ಪಡೆ ಲೇಸೆಂಬಂತೆ ನಿನಗದುಂತಾಗಿಯುಮಿ
ನ್ನುಡುವಿನೊಳೇಂ ಕೈ ಪೋತಂ
ದಡೆ ಸಾಲ್ಗುಂ ಸತಿಯೊಳೇನೊ ಪೋಪುದೆ ಗೆಲ್ಲಂ ೭೦

ವ || ಎಂಬಂತೆನಿತಾನುಂ ತೆಱದ ಭಾಷೆಯೊಳ್ ಬೈದುದಂ ಹರಿ ಕೇಳ್ದುಮವರಬ್ಬೆ ಮೂಱು ಪೊಲ್ಲಮೆಯನೀತಂಗೆ ಸೈರಿಸುವುದೆಂದೆನಗೆ ಕೈಯೊಡ್ಡಿ ಬೇಡಿದೊಡಾಂ ನೂಱುವರಂ ಸೈರಿಸುವೆನೆಂದೆನೆಂದು ತನ್ನೆಂದುದಂ ನೆನೆದು ನೂಱುವರಂ ಕೇಳುತ್ತಿರ್ದನತ್ತ ಬಲದೇವಂ ಹಳಾಯುಧದಿಂ ವಿಶ್ವಾವಸುವಿನ ತಲೆಯನೊಡೆಪೊಯ್ದು ಕೊಂದಂ ಅರ್ಜುನನುಂ ತನಗಾಂತ ವೇಣುಧಾರಿಯಂ ಕೊಂದಂ ಸತ್ಯ[ಕನುಂ] ರುಗ್ಮಿಣನಂ ವಿರಥನಾಗೆಚ್ಚು ಪಿಡಿದು ತನ್ನ ರಥದೊಳಗಿಟ್ಟುಕೊಂಡು ಬಂದನನ್ನೆಗಂ ನರಾಯಣಂ ಶಿಶುಪಾಲನ ಬಯ್ಗಳ್ ನೂಱು ನೆಱೆದಾಗಳ್ ಅಮೋಘಾಸ್ತ್ರದಿನೆಚ್ಚು ಕೊಂದು ವಿಜಯಪಟಹಮಂ ಪೊಯ್ಸಿ ಕೊಳ್ಕೊ [ಡೆಯಂ] ಬೆಳಸಿ ಬೀಡಂಬಿಟ್ಟಿರ್ದು ವಿಶ್ವಾವಸು ಮೊದಲಾಗೆ ಸತ್ತ ನಾಯಕರಂ [ ದಾಹಿ] ಸವೇೞ್ದು ರುಗ್ಮಿಣಕುಮಾ[ರನುಮಂ]ಕನ್ನೆಯುಮುನಾಱೆ ನುಡಿದು ರುಗ್ಮಿಣಂಗಾ ಪದವಿಯಂ ಮಾಡಿ

ಚಂ || ನೆರಪಿದನೇಕ ಜೀವಮರುಣಾಗ್ರರಣಾಹತಮಾದುದಾಗಿಯುಂ
ಹರಿಬಲ ಶೌರ್ಯಸಂಚರಣಮಿಂದುಕುಲೋದ್ಧರಣಾ ಸುಖಪ್ರಸಂ
ಸರಣ ಸಮತ್ಕ್ರಿ ಯಾವರಣಮಕ್ಕುಮನಿಂದಿತ ರೂಪ ರುಗ್ಮಿಣೀ
ಹರಣಮುಪೇಂದ್ರಚಿತ್ತಹರಣಂ ಜಯ ಸಿಂಹರಣಕ್ಕೆ ಕಾರಣಂ ೭೧

ವ || ಆದಱಿಂದುತ್ಸಾಹವಂತನಾಗಿ ಕನ್ನೆಯನೊಡಗೊಂಡು ಪಯಣಂ ಬಂದು ಕೆಲವು ದಿವಸದಿಂ ದ್ವಾರಾವತಿಯನೆಯ್ದಿ ದೇವತೋದ್ಯಾನವನದ ಕೆಲದೊಳ್ ಬಿಟ್ಟಿರ್ದು ಬಂಧುಜನ ಪುರಜನ ಪರಿಜನಾದಿಗಳ್ಗೆ ಪೇೞ್ದಟ್ಟಿ ಬರಿಸಿ ಬೀಡಿನೊಳ್ ತನಗಂ ರುಗ್ಮಿಣಿಗಂ ವಿವಾಹಮಂ ಮಾಡಿ ಕೂಡಿರ್ದುದಂ ಸತ್ಯಭಾಮೆ ಕೇಳ್ದು ನೋೞ್ಪೆನೆಂದು ಬರುತ್ತಿರ್ದುದಂ ಹರಿ ಕೇಳ್ದು ಸತ್ಯಭಾಮೆ ಮೊದಲಾಗೆಲ್ಲರುಂ ನಿನಗೆಱಗುವಂತು ಮಾಡಿದಪ್ಪೆನೆಂದು ರುಗ್ಮಿಣಿಯನೊಡಂಬಡಿಸಿ ದಿವ್ಯವಿದ್ಧಮಾಗೆ ಕಯ್ಗೆಯಿಸಿ ಬನದೊಳಗಣಶೋಕವೃಕ್ಷದ ಮೊದಲೊಳ್ ಸ್ಫಟಿಕದ ಜಗಲಿಯ ಮೇಲಿರಿಸಿ ನೀನುಸಿರದೆ ಕಿಱಿದುಪೊತ್ತನಿರೆಂದು ಕೆಲದೊಳೋಜೆ ಸೂಳೆವೆಂಡಿರಂ ದೇವತೆಯನರ್ಚಿಸುತ್ತಂ ಪೊಡೆವಡುತ್ತವರಂ ಬೇಡುತ್ತಮಿರ್ಪಂತುಮಾಡಿ ಬೀಡಿಂಗೆವೋಗಿರ್ದನನ್ನೆಗಂ ಸತ್ಯಭಾಮೆ

ಕಂ || ಚಾಮಿಕರ ಕಳಶಧ್ವನಿ
ಚಾಮರ ಧವಳಾತಪತ್ರ ಪಡಡಕ್ಕಾದಿ
ಶ್ರೀಮದ್ವಿಭವಯುತಂ ಪೌ
ಲೋಮಿಯೆ ಬರ್ಪಂದದಂತೆ ಪೊೞಲಿಂ ಬಂದಳ್ ೭೨

ವ || ಬಂದಾಕೆಯಿರ್ದಲ್ಲಿಗೆ ಪೋಗೆನೆಂಬ ಗರ್ವದಿನೀ ಬನದೊಳಿರ್ದಪೆನೆನ್ನಲ್ಲಿಗೆ ತನ್ನ ತಂದೆ ಪೆಂಡತಿಯನಟ್ಟುಗೆ ನೋೞ್ಪೆನೆಂದು ಹರಿಯಲ್ಲಿಗಟ್ಟಿದೊಡೆ ಅಂತೆಗೆಯ್ವೆನೆಂದಟ್ಟಿ ಬೇಗಂ ಬನದೊಳುಳಿದಿರ್ದಂ ಸತ್ಯಭಾಮೆಯುಂ ಬಂದು ಬನಮಂ ಪೊಕ್ಕು ಸೊಗಯಿಸುವ ಬನಮನರ್ಥಿಯೊಳ್ ನೋಡುತ್ತುಮಂತೆ ಪೋಪಳಿದರಂ ಬರ್ಪಾಕೆಗಳುಮಂ [ಕಂಡಿದೇ] ಕಿತ್ತಬಂದಿರೆಂದೊಡೆ ಇಲ್ಲಿ ವನದೇವತೆಯುಂಟು ಕರಂ ಸನ್ನಹಿತ[ಮಾಗದ]ನರ್ಚಿಸಿ ವರಂಬಡೆದು ಪೋದಪೆಮೆನೆ ಮನಂಗೊಂಡು ಪೋಗಿ ದೇವತೆಯಂ ಕಂಡು ಚೋದ್ಯಂಬಟ್ಟು ತಾನುಮರ್ಚನೆಯಂ ತರಿಸಿ ವಿನಯದಿನರ್ಚಿಸಿ

ಮ || ಹರಿ ಮಾಱಾಂತರನಿಕ್ಕೆ ವೀರಸಿರಿಯಂ ತಪ್ಪಂತೆ ಬಿಂಬೋಪಮಾ
ಧರೆಯಂ ರುಗ್ಮಿಣಿಯೆಂಬನಿಂದ್ಯವಧುವಂ ತಂದಾತನಿನ್ನಾ ತಳೋ
ದರಿಯಂ ತಾನಣಮೊಲ್ಲದಿರ್ಪನಿತ ನೀಂ ಮಾಡಬ್ಬ ಮಾಡಿ[ತ್ತೊ]ಡಾ
ದರದಿಂ ಪಟ್ಟಮನೀವೆನೆಂದೆಱಗಿದಳ್ ಕಾಲ್ಗಾಗಳಷ್ಟಾಂಗದಿಂ ೭೩

ವ || ಅಂತೆಱಗಿ ಪೊಡೆವಡುವುದಂ ಹರಿ ಕಂಡಿದೇಂ ರುಗ್ಮಿಣಿಯಂ ನೋಡಲ್ ಬಂದಮೆಯ್ದೆವಾರದೆ ಬರಿಸಿ ನೋೞ್ವೆನೆಂಬ ಗರ್ವಮಿಗಳ್ ಕಯ್ಯಂ ಮುಗಿದಾಕೆಯಡಿಗೆಱಗಿ ವರಂಬಡುವನಿತಾಯ್ತೆ ನಿನಗೆಂಧು ನಗುವುದಂ ಕಂದು ಸಿಗ್ಗಾಗಿ ಮುಳಿದೆದ್ದು

ಕಂ || ಮೊದಲೊಳ್ ಗೋವನೆಯೆಂದೊಡೆ
ಪದವಿಯ ಪೆಂಪಿಂಗದೆಂತುಟಂತಾಗದಿದೆಂ
ಬುದನಣಮಱಿಯದಿದಂ ಮಾ
ಡಿದೊ[ಡಮದೇ]ನಾಕೆಗಪ್ಪ ಜಾಣಂ ಬಲ್ಲೆಂ ೭೪

ವ || ಎಂದು ತಾನುಂ ತನ್ನೊಡನೆಯ ಪರಿಚಾರಕಿಯರುಮಾಕೆಯ ಮೇಲ್ವಾಯ್ದುಡೆಯನುರ್ಚಿ ಮಾಲ್ಯಾಭರಣಂಗಳನೆೞೆದುಕೊಂಡೊಡೆ ಮತ್ತಂ ಪೞೆಯಂದದಿಂದಿಟ್ಟುಂ ತೊಟ್ಟಂದದಿನಿರೆ ಮತ್ತೆಯುಮೆೞೆದುಕೊಳೆ ಮುನ್ನಿನ ಪಸದನದಂದದೊಳಿಕ್ಕುಮದೆಂತೆನೆ

ಕಂ || ಪ[ಱಿವಲೆಯಂ]ಪ[ಱುಗೋಲಂ]
ಮ[ಱೆ]ಮಾಡಿ ಮುನೀಶ್ವರಂಗೆ ಮುನ್ನಿನ ಭವದೊಳ್
ಪಱಿಪಡೆ ಚಿಕ್ಕುಟುಮಂ ಗುಂ
ಗುಱುಮಂ ನೆಱೆ ಸೋವುತಿರ್ದ ಭಕ್ತಿಯ ಭರದಿಂ ೭೫

ವ || ಬನ್ನಂ ಬಂದಡೆಯುಮಪ[ಪ್ರಥೆ]ಯುಮಿರೆ ನಿಶ್ಚಯಮೆ ದೇವತೆಗೆತ್ತು ಭಯಮುಂ ಸಿಗ್ಗುಮಾಗೆ ಮಗ್ಗೞ್ದುಪೋಗಿ ರತ್ಮ ಮಾಡಮಂ ಪೊಕ್ಕಳಿತ್ತ ರುಗ್ಮಿಣಿಯುಂ ತನ್ನನತಿಕ್ರಮಿಸಿದುದಕ್ಕೆ ಚಿಂತಿಸುತಿರ್ದುದಂ ಕೃಷ್ಣನಱಿದು ಸಾರೆವಂದು ಕಾಲಂಪಿಡಿದು ಸಂತಯ್ಸಿ ಬೀಡಿಂಗೆ ಕೊಂಡುಪೋಗಿ ಸಾಮಂತ ಮಹಾಸಾಮಂತ ಪ್ರಧಾನರಂ ಬರಿಸಿ ರುಗ್ಮಿಣಿಯಂ ತನ್ನೊಡನೆ ಸಿಂಹಾಸನದೊಳಿರಿಸಿ ಮಹಾದೇವಿಪಟ್ಟಂಗಟ್ಟಿ ಪಿರಿದುಮೊಸಗೆಯಂ ಮಾಡಿ ತಾನುಮಾಕೆಯುಂ ಪಟ್ಟವರ್ಧನಮನೇಱಿ ರಾಜ್ಯಚಿಹ್ನಂಗಳ್ವೆರಸು ಮಹಾವಿಭೂತಿಯಿಂ ಪೊೞಲಂ ಪೊಕ್ಕು ಕರುಮಾಡದೊಳ್ ಪಸೆಯಮೇಗಿರ್ದು ಪರಕೆಯುಂ ಸೇಸೆಯುಮನಾಂತು ಸುಖದಿನಿರ್ದತಿಸ್ನೇಹಿತರಾಗಿ ನಿಚ್ಚಮಾಕೆಯೊಳತ್ಯಂತ ಕಾಮಭೋಗನುರಾಗದಿಂ

ಕಂ || ಮನದೊಳೊಗೆದೞ್ಕಱುಂ ಸುಖ
ದನುಭವಣೆಗಳೆನಿತವನಿತುಮೊಡಗೂಡಿದೊಡಂ
ತನುಭವಿಸುತ್ತಿರ್ದನುದಿನ
ಮನಪಮಿತ ಸುರೇಂದ್ರನಂದದಿಂದಮುಪೇಂದ್ರಂ ೭೬

ವ || ಆ ಮಾೞ್ಕೆಯೊಳಿರ್ದು ಕೆಲವು ದಿವಸದಿಂ ಮತ್ತಂ ನಾರದಂ ಬಂದೊಡತಿ ಪ್ರಿಯಂಗೆಯ್ದಿರಿಸಿ ನಿಮ್ಮಿಂದಂ ಸ್ತ್ರೀರತ್ನಮೆನಗೆ ದೊರೆಕೊಂಡುದಿನ್ನುಮೊಂದು ಕನ್ಯಾರತ್ನ ಮನಾರಯ್ಯಿಮೆಂದೊಡೊಂದೆಡೆಯೊಳ್ ಕಂಡುಬಂದೆಂ ರಜತಗಿರಿಯ ದಕ್ಷಿಣಶ್ರೇಢಿಯ ಜಂಬೂಪುರಮನಾಳ್ವ ಜಂಭಾಂಬರ ಮಹಾರಾಜಂಗಂ ಜಂಬುಸೇನೆಗಂ ಪುಟ್ಟಿದ ಜಂಭಾವತಿಯೆಂಬ ಕನ್ನೆಯ ರೂಪಿನೊಳ್ಪುಮಂ ಗಾಡಿಯಂದಮುಮಂ ಕೌಶಲಮುಮಂ ಬಣ್ಣಿಸಲಱಿಯೆನಾಕೆಗೆ ವರನಾಗಲ್ಕೆ ನೀನುಂ ಯೋಗ್ಯನಲ್ಲೆಯೆಂಬಂತಾಗಿಕ್ಕುಮೆಂದೊಡನಿತು ಸಾಲ್ಗುಮಿನ್ನೇವೊಗ[ೞ್ವೆ ಬಿ]ಜಯಂಗೆಯ್ಯಿಮೆಂದು ನಾರದನಂ ಕಳಿಪಿ ತಾನುಂ ಬಲ ದೇವನುಮೇಕಾಂತಮಿರ್ದೇಗೆಯ್ವಂ ನಾರದನ ಪೇೞ್ದ ಕನ್ನೆ ಯನೆಂತು ತಪ್ಪಂ ಬಲಸಹಿತಂ ಭೂಮಿವಿಹಾರಂಗೆಯ್ವುತ್ತಂ ಪೋಪೆಡೆಯೊಳೊಳ್ಪಕ್ಕುವಾಕಾಶಗಮನಂ ನಮಗೆ ಪೊಲವಲ್ತೇಕೆಂದೊಡೆ ನಿಮ್ಮಣ್ಣನಪ್ಪನಾ ವಿದ್ದಕುಮಾರನೆಂಬೊಂ ಶಾಲ್ಮಲಿದತ್ತೆಯ ಮಗಂ

ಕಂ || ಬಳೆದಂ ಖೇಚರಲೋಕದೊ
ಳಳುಂಬಮೆನಲಖಿಳ ಖೇಚ[ರರೊಳಂ]ವಿದ್ಯಾ
ಬಲಗರ್ವಮಧಿಕಮಾತನ
ತೊಳಪ ವಿಮಾನಂಗಳೊಳ್ ನರೇಶ್ವರ ಪೋಪಂ ೭೭

ವ || ಎಂದಾತನೊಡಂಬಡಿಸಿ ಬಲಸಹಿತಂ ವಿಮಾನಾರೂಢರಾಗಿ ಶಾಲ್ಮಲಿದತ್ತೆಯ ಮಗಳಯ್ಯನ ಪೊೞಲೊಳ್ ಬಿಟ್ಟಿರ್ದು ಮುನ್ನಂ ಸಾಮಮಂ ಪೊಣರ್ಚುವಮೆಂದು ಪೆರ್ಗಡೆಗಳನಟ್ಟಿದೊಡವರ್ ಪೋಗಿ ಜಂಭಾಂಬರ ಮಹಾರಾಜನ[೦] ಕಂಡಿಂತೆಂಬರ್

ಕಂ || ದ್ವಾರಾವತಿ ಪುರನಾಮಂ
ವಾರಿಜನಾಭಂ ಸುರೇಂದ್ರ ಸೌಂದರ್ಯಾಭಂ
ವಾರಿಧಿ ಪರ್ಯಂತ ಧರಾ
ಭಾರಮನಾನಲ್ಕೆ ನೆಱೆವೊನಧಟನೆ ಮೆಱೆವೊಂ ೭೮

ವ || ಅಂತಪ್ಪ ಪುರುಷೋತ್ತಮಂ ನಿಮಗಳಿಯನಾಗಲ್ ಬಗೆದು ಕೂಸಂ ಬೇಡಿಯಟ್ಟಿದಂ ಪೆಱದೊಂದುಮಂ ಬಗೆಯದೀವುದೆನೆ ವಿದ್ಯಾಧರರಾಜನಿಂತೆಂದಂ

ಮ || ಸುರರಾಜಂ ವರನಪ್ಪಡಕ್ಕುಮುೞಿದಂದೀ ಲೋಕದೊಳ್ ಮತ್ಸುತಾ
ದರನಾಗಲ್ದೊರೆಯಿಲ್ಲ ನೆಟ್ಟನಮರೇಂದ್ರಾಭ ಪ್ರಸಿದ್ಧೇದ್ಧ ಖೇ
ಚರರಾಜರ್ ನುಡಿದಟ್ಟಲಣ್ಮರಿದನೇಂ ಪೇೞ್ ಕೇಳನೇ ಭೂಮಿಗೋ
ಚರನೆನ್ನಂಗದ ಕುಸುವೇಡುವನಿದೇನೀ ಮೇಳವೇಕಾದುದೋ ೭೯

ವ || ನೀಮೆನ್ನಳವುಮನೆನ್ನ ಮಗಳ ರೂಪಿ[ನ] ನಾಣ್ಗಾಪಿನ ಸೌಭಾಗ್ಯದ ಭಾಗ್ಯದತಿಶಯಮಂ ಕೇಳ್ದಱಿಯಿರಪ್ಪೊಡೆ ಚೋದ್ಯಮೆಂದು ನೋಡಲ್ ಬರ್ಪುದು ನಿಮಗೆ ವಿನಯಮಲ್ತೆಂದೊಡದರ್ಕೇವಯ್ಸಿ ಪೆರ್ಗಡೆಗಳಿಂತೆಂಬರಾತಂ ಬೇಡಿ

ಕಂ || ಅಟ್ಟಿದೊಡೀವುದು ಹರಿ ಬೆ
ನ್ನಟ್ಟಿ ತಗುಳ್ವಾಗಳೆಂದು[ಮಿ]ತ್ತಪಿರಾತಂ
ಗೊಟ್ಟಿಕಿಲಂ ನುಡಿದೊನ ತಲೆ
ಯಟ್ಟೆಯ ಮೇಗೆಂತು ನಿಲ್ಕುಮೆಂಬುದನಱಿಯಾ ೮೦

ವ || ಮುನ್ನಱಿಯದೊಡಮಿನ್ನಱಿವಿರೆಂದು ಪೆರ್ಗಡೆಗಳ್ ಮಗುೞ್ದು ಬಂದು ನಾರಾಯಣಂಗಱಿಪಿದೊಡೆ ವೀರಶ್ರೀಯೊಡನಲ್ಲದೊರ್ಬಳೆ ಭಾರಳೆಂದು ಮಱುದಿವಸಮಾ ಪೊೞಲಂ ಸಾರ್ಚಿ ಬೀಡಂಬಿಟ್ಟೊಡ್ಡಿ ಪಱೆಯಂ ಪೊಯ್ಸಿದಾಗಳ್ ಜಂಭಾಂಬರ ಮಹಾರಾಜನಱಿದು ತನ್ನ ಸಮಸ್ತಸಾಧನಂಬೆರಸು ಪೊಱಮಟ್ಟೊಡ್ಡಿ ಕೆಯ್ಯಂ ಬೀಸಿದೊಡೆ ರಡುಂ ಬಲದ ಚಾತುರ್ದಂತಂ ಕ್ರಮಕ್ರಮದೊಳ್ ತಾಗಿ ಕಿಡಿಗುಟ್ಟಿದಂತೆ ಮುಮ್ಮೞಿಯಾದಿಂಬೞಿಯಂ ಜಂಭಾಂಬರಮಹಾರಾಜಂ ವಿದ್ಯೆಗಳಂ ಬೆಸಸಿದೊಡಾನಾ ದೃಷ್ಟಿಕುಮಾರಂ ಪ್ರತಿವಿದ್ಯೆಯಿಂ ಛೇದಿಸಿ ಹರಿಯೆಯ್ದೆವಂದಾಂತ ಬಲಮಂ ತವೆಯಿಱಿದು ಖೇಚರಪತಿಯನಿಕ್ಕಿ ನಿಂದಾಗಳ್

ಕಂ || ವಿಜಯಪಟಹಸ್ವನಂಗಳ್
ನಿಜಬಲದೊಳ್ ನೆಗೞೆ ಪೊಗೞೆ ಪಲವೊಗೆಯೆ ಜ[ಯ]
ಧ್ವಜಮನುರಾಗದೆ ಬೇಗಂ
ವಿಜಯಶ್ರೀ ಬಂದು ನೆರೆದಳಬ್ಜೋದರನೊಳ್ ೮೧

ವ || ಅಂತು ನಾರಾಯಣ…… ರಸ್ತ್ರೀಯಂ ಕೈಕೊಂಡು ಕೋಳ್ಗುಳಂಗೊಂಡು ಮಾವನೊಡಲಂ ಸಂಸ್ಕಾರಿಸಲ್ವೇೞ್ದು ಪೊೞಲಂ ಪೊಕ್ಕು ಕನ್ನೆಯನಱಸಿ ಕಾ[ಣ]ದನಾ ದೃಷ್ಟಿ ಕುಮಾರನ ಮೊಗಮಂ ನೋಡಿದೊಡಾ[ತನಂತರ್ಧಾ]ನವಿದ್ಯೆಯಿಂ ಮಱಸಿರ್ದಳೆಂಬುದಾಕೆಯ ವಿದ್ಯೆಯಂ ಛೇದಿಸಿ ಕನ್ನೆಯರ ಕಂಡು ಕೊಂಡುಬಂದು ಹರಿಗೆ ತೋಱಿದೊಡೆ ನಿಮ್ಮಮ್ಮನ ದರ್ಪದಿನಿಂತಾಯ್ತುಬ್ಬೆಗಂಬಡದಿರೆಂದಾಱೆನುಡಿದುಮವರಣ್ಣಂಗಾ ಪದವಿಯಂ ಮಾಡಿ ಸಾರವಸ್ತುಗಳಂ ಕೊಂಡು ಕನ್ನೆಯನೊಡಗೊಂಡು ಮಗುೞ್ದು ಬಂದು ತನ್ನ ಪೊೞಲಂ ಪೊಕ್ಕು ಜಂಭಾವತಿಯೊಳ್ ಮದುವೆನಿಂದಲ್ಲಿಯ ಸಭಾಸದರ್

ಮ || ಸಿರಿಯೊಳ್ ಪೆರ್ಚಿದ ಭೂಮಿಗೋಚರ ಮಹಾಭೂಪಾಲವರ್ಗಕ್ಕಗೋ
ಚರಮಾಗಿರ್ದೆಡೆಯೊಳ್ ವಿರಾಜಿಸಿ ಕರಂ ಸಂದಿರ್ದ ಜಂಭಾಸತೀ
ಹರಣಂ ಖೇಚರವರ್ಗವಿಗ್ರಹ ಮಹಾತೋದ್ಯಜ್ಜಯಶ್ರೀಸತೀ
ಹರಣಂ ಮಾಡಿತು ಕೃಷ್ಣನಾವ ತಪಮಂ ಮುಂಗೈದನೋ ವಿಸ್ಮಯಂ ೮೨

ವ || ಎಂದು ಪೋಗೞುತ್ತಿರ್ದರಂತು ಹರಿ ಸುಖದಿನಿರೆ ಕೆಲವು ದಿವಸದಿಂ ಗಿರಿ ನಗರಾಧಿಪತಿಯಪ್ಪ ರಾಷ್ಟ್ರಸಿದ್ಧಿಯ ಮಗಂ ಮಹಾರಾಜಂಗಂ ಜ್ಯೇಷ್ಠಾದೇವಿಗಂ ಪುಟ್ಟಿದ ಸುಖಮೆಯೆಂಬ ಕನ್ನೆಯಂ ನಾರದಂ ಪೇೞ್ದೊಡಱಿದು ಪೋಗಿ ಯುದ್ಧಜಯದೊಳ್ ಮಧುವೆನಿಂದಂ ಮತ್ತಮೆಲ್ಲಿಯೆ[ಲ್ಲಿ]ಯೊಳ್ವೆಂಡಿರೊಳರಲ್ಲಿಗಲ್ಲಿ ಗಮಟ್ಟಿತರಿಸಿ ಕೊಂಡಿಷ್ಟ ವಿಷಯಸುಖಮನನುಭವಿಸುತ್ತಂ

ಮ || ಹರಿವಂಶಾಂಬರ ಪದ್ಮ ಷಂಡಹಿತಕೃತದ್ವಿದ್ವಿಷ್ಟಸೇನೋದ್ಧತೋ
ತ್ಕ[ರ]ಭಗ್ನೀಕೃತ ಶಕ್ತಿಯುಕ್ತ [ಹತ ಭೋಗಾಂತೋ] ಪಭೋಗೋತ್ತರೋ
ತ್ತರ ಸೌಂದರ್ಯವಿಳಾಸಯುಕ್ತ ಬಳಭೃತ್ಸಂಕ್ರಾಂತವಿಕ್ರಾಂತಕೇ
ಸರಿ ಕೃಷ್ಣಂ ಸುಖದಿಂದಮಿರ್ದನಮಿತೋದೈಶ್ವರ್ಯದಿಂ ಶೌರ್ಯದಿಂ ೮೩

ಗದ್ಯ || ಇದರ್ಹತ್ಸರ್ವಜ್ಞ ಪಾದಪದ್ಮ ವಿರಾಜಿತೋತ್ತಮಾಂಗ ಶ್ರೀ ಬಂಧುವರ್ಮ ನಿರ್ಮಿತಮಪ್ಪ ಹರಿವಂಶಾಭ್ಯುದಯೊದಳ್ ರುಗ್ಮಿಣೀ ವಿವಾಹವರ್ಣನಂ

ಸಪ್ತಮಾಶ್ವಾಸಂ