ಕಂ || ಶ್ರೀಧರನೆನೆ ವಿಶದಯಶ
ಶ್ಯ್ರೀಧರನೆನೆ ಭೀಕರೋಗ್ರ ರಣಮುಖವಿಜಯ
ಶ್ರೀದರನೆನೆ ಸಂಪೂರ್ಣ ಕ
ಳಾಧರನೆನೆ ಕೃಷ್ಣನಿಂತು ಸುಖದಿಂದಿರುತಂ ೧

ವ || ಒಂದು ದಿವಸಂ ದೇವೇಂದ್ರವಿಳಾಸದಿಂದೋಲಗಂಗೊಟ್ಟಿರ್ದು ರುಗ್ಮಿಣಿಗಂ ಸತ್ಯಭಾಮೆಗಂ ಬೞಿಯನಟ್ಟಿದೊಡೆ ರುಗ್ಮಿಣಿ ಮುನ್ನಂ ಬಂದರಸನ ಬಲದ ದೆಸೆಯೊಳ್‌ ಕುಳ್ಳಿರ್ದುದಂ ಕಂಡು ಬೞಿಕೆ ಬಂದು ಸತ್ಯಭಾಮೆ ಕುಳ್ಳಿರಲೊಲ್ಲದುದಂ ಹರಿ ಕಂಡು ಕುಳ್ಳಿರುಯೆಂದೊಡೆಲ್ಲಿ ಕುಳ್ಳಿರ್ಪೆನೆಂದ ಮಚ್ಚರದ ದರ್ಪಮನಱಿದು ರುಗ್ಮಿಣಿಮಹಾದೇವಿ ಪೆಂಡತಿಗೆ ಪುರುಷನೆಡಗೆಲದೊಳಿರ್ಪುದು ಪಾೞಿಯಲ್ಲೆಂದೆರ್ದು ಬಂದು ಬಲದ ದೆಸೆಯೊಳ್ ಕುಳ್ಳಿರ್ದಾಗಳ್ ಸತ್ಯಭಾಮೆ ಬಂದಾಕೆಯ ಮುನ್ನಮಿರ್ದಲ್ಲಿ ಕುಳ್ಳಿರ್ದುದಂ ಹರಿ ಕಂಡು ನೀಮಿರ್ವರುಂ ಪ್ರಭುತ್ವಕ್ಕೆ ಮಚ್ಚರಿಸಲ್ವೇಡಾ

ಕಂ || ಶ್ರೀವಧುನಾಥ ಸುಪುತ್ರನ
ನಾವಳ್ ಮುಂ ಪೆತ್ತಳಾಕೆ[ಯಾ]ಕೆಯ ಮಗನ
ಪ್ಪಾ ವಿಭುವೆ ಜ್ಯೇಷ್ಠರೆಂದೊಡೆ
ದೇವಿಯರಿರ್ವರುಮದಕ್ಕೊಡಂಬಟ್ಟಿರ್ದರ್ ೨

ವ || ಅದನೊಡಂಬಟ್ಟು ಕಣ್ಣಱಿದು ಮತ್ತಮಿಂತೆಂದಂ

ಕಂ || ಆವಳ ಮಗಂಗೆ ಮುನ್ನಂ
ಭೂವಿಶ್ರುತಮಾಗೆ ಮದುವೆಯಾಯ್ತಾಕೆ ಬೞಿ
ಕ್ಕಾವಧುವಿನ ತಲೆಯಂ ಕೊ
ಯ್ದೋವ[ದೆ]ತಂದಡಸಿ ಮೆಟ್ಟಿ ಮಿವಳ್ ಪೆಱದೇಂ ೩

ವ || ಎಂದೊಡದಕ್ಕಮಂತೆಯಕ್ಕೆಂದಿರ್ವರು[ಮ]೦ ಪೂಣಿಸಿರ್ಪಿನಂ ಕೆಲವಾನುಂ ದಿವಸಕ್ಕೆ ರುಗ್ಮಿಣಿಮಹಾದೇವಿ ನಾಲ್ಕುನೀರ್ಮಿಂದು ಮಂಗಳವಸದನಂಗೊಂಡು ಸೂೞ್ಗೆವಂದು ಸುಖನಿದ್ರಿತೆಯಾಗಿ ಬೆಳಗಪ್ಪ ಜಾವದೊಳ್ ಪೊಳೆವ ಬಾಳೆಮಿನುಮಂ ದಿವ್ಯವಿಮಾನಂಗಳುಮಂ ಸಮುದ್ರಮಂ ಶ್ರೀದೇವಿಯುಮಂ ಹಸ್ತಿಸಿಂಹಮುಮಂ ಕನಸಿನೊಳ್ ಕಂಡೆಚ್ಚತ್ತು ಮುಖಪ್ರಕ್ಷಾಳನಂಗೆಯ್ದು ಹರಿಗೆ ತನ್ನ ಕಂಡ ಕನಸುಗಳಂ ಪೇೞ್ದೊಡಾತನಿಂತೆಂದಂ

ಶಾ || ಮಿನಿಂ ಸರ್ವಸುಲಕ್ಷಣಾಂಗನಮರೇಂದ್ರಾವಾಸದಿಂ ಭೋಗಿಸಂ
ಶ್ರೀನಾರೀಕ್ಷಣದಿಂ ಪ್ರಸಿದ್ಧ ಸುಭಗಂ ವಾರಾಸಿಯಿಂದಂ ಪ್ರಭು
ಸ್ಥಾನೋಪೇತನನೇಕಹಾರಿಯನಘಪ್ರಧ್ವಂಸಿಯಪ್ಪನ್ನನಂ
ನೀನೊರ್ವಂ ಮಗನಂ ಲತಾಂಗಿ ಪಡೆವೌ ಶ್ರೀಸೇವ್ಯನಂ ಭವ್ಯನಂ  ೪

ವ || ಎನೆ ಕೇಳ್ದತ್ಯಂತ ಸಂತುಷ್ಟಚಿತ್ತೆಯಾಗಿ ಮಾಡದೊಳಿರ್ದು ಕೆಲವು ದಿವಸಕ್ಕೆ ಗರ್ಭಚಿಹ್ನಂಗಳಾಗೆ ಭೂಲೋಕಾವಲೋಕನಾರ್ಥಂ ಗಗನವಿಹಾರಮಂ ಬಯಸಿದೊಡಾಕೆಯ ಬಯಕೆಯನುಪೇಂದ್ರನಱಿದಮರೇಂದ್ರನಂ ದರ್ಭಶಯನಸ್ಥನಾಗಿ ನೆನೆದೊಡಾತನಿತ್ತ ಕಾಮವಿಮಾನಮಂ ರುಗ್ಮಿಣಿಮಹಾದೇವಿಯುಂ ತಾನುಮೇಱಿ ನಭೋಭಾಗದೊಳ್ ಪೋಗಿ ಭೂಭಾಗಮೆಲ್ಲಮಂ ತೋಱೆ ನೋಡಿ ಮಗುೞ್ದು ಬಂದಿರ್ದರತ್ತ ಸತ್ಯಭಾಮೆಗಂ ಗರ್ಭೋತ್ಪತ್ತಿಯಾಯ್ತಂತಿರ್ವರುಂ ನವಮಾಸಂ ನೆಱೆಯ ಮುನ್ನಂ ರುಗ್ಮಿಣಿಮಹಾದೇವಿ ಮಗನಂ ಪೆತ್ತುಮರಸಂಗೆ ಪುತ್ರೋತ್ಸವಮಂ ಪೇೞ್ದಟ್ಟಿದೊಡೆ ಬೞಿಯಂ ಸತ್ಯಭಾಮೆ ಮಗನಂ ಪೆತ್ತು ಪೇೞ್ದಟ್ಟಿದೊಡಂತಿರ್ವರುಂ ಮಗಂಬಡೆದೊಸಗೆಯಂ ಹರಿ ಕೇಳ್ದುಮುನ್ನಂ ರುಗ್ಮಿಣಿಯ ಮನೆಗೆ ವಂದು ಜಾತಕರ್ಮದೊಸಗೆಯಂ ಮಾಡಿದಿಂ ಬೞಿಯಂ ಸತ್ಯಭಾಮೆಯ ಮನೆಯೊಳೊಸಗೆಯಂ ಮಾಡಿ ಪೋದನಿತ್ತ ಧೂಮಕೇತುವೆಂಬಸುರಂ ತನ್ನ ಪಗೆ ಪುಟ್ಟಿದುದನವಧಿಭೋಧದಿನಱಿದು ಮುನಿದು ಬಂದದೃಶ್ಯರೂಪನಾಗಿ ಪೊಕ್ಕು ರುಗ್ಮಿಣೀಯ ಮುಂದಣ ಕೂಸನೆತ್ತಿಕೊಂಡಾಕಾಶಕ್ಕೊಗೆದು ವಿಮಾನದೊಳಿಟ್ಟೊಯ್ದನಿತ್ತಲ್

ಶಾ || ಕೂಸಂ ಕಾಣದೆ ಬೆರ್ಚಿ ರುಗ್ಮಿಣಿ ಕರಂ ಬಾಯ್ವಿಟ್ಟು ದುಃಖೋದಯಾ
ಯಾಸಂಬಟ್ಟು ಪೊಡರ್ಪುಗೆಟ್ಟು ಮರವಟ್ಟಂತಂತೆ ತೆಪ್ಪರ್ತು ಮ
ತ್ತೀ ಸಂಸಾರದಳುರ್ಕೆ ಸಾರದುೞಿದಲ್ಲಿಂತಾದೊಡೇವಾೞ್ವೆನಿ
ನ್ನೇ ಸೈಪೇ ಮನೆವಾಳ ಮೋಹಮೆನಗೆಂದಾ ಕಾಂತೆ ಪುಯ್ಯಲ್ಚಿದಳ್ ೫

ವ || ಆಗಳ್ ಪರಿಚಾರಕಿಯರುಂ ಕಾಪಿನವರುಂ ಸಂಕಟಂಬಟ್ಟಲ್ಲಿಯೊರ್ವಳಿಂತಿ ರಲಾಗದರಸಂಗಱಿಪುವೆನೆಂದು ಪೋಗಿ ಪೇೞ್ದೊಡಮರಸನುಮಾಗಳೆ ಬಂದು ನಿಂದು ಕೂಸನದೃಶ್ಯರೂಪದಿನಾರಪ್ಪೊಡಮೊಯ್ದರೆಂಬುದನಱಿಯದಿಂತೆಂದಂ

ಕಂ || ಎನ್ನ ತನೂಜನನೊಯ್ದವ
ರೆನ್ನರೊ ಪೊಕ್ಕಾವ ನೆಲೆಯೊಳಿರ್ಪರ್ ಮತ್ತಾ
ಪನ್ನತರಳವೆನಿತಾದುದ
ದೆನ್ನೊಂದಳವಱಿಯದೊಯ್ದರಱಿವವರೊಯ್ಯರ್ ೬

ವ || ಎನೆ ರುಗ್ಮಿಣಿಯೆಂದಳಂತೆ ನಿನ್ನಳವನೞಿದೊನ[ಕ್ಕ]ಮಱಿಯದರಕ್ಕೆ

ಕಂ || ಕಿನ್ನರ ಖೇಚರ ದಾನವ
ಪನ್ನಗ ಗರುಡಾಮರರ್ಕರೊಳಗಾರಾನುಂ
ಮುನ್ನಿ[ನ] ರೋಷ ಭವತ್ಸಂ
ಪನ್ನತೆಯಿಂದೊಯ್ದರಕ್ಕುಮಾತ್ಮಾರ್ಭಕನಂ ೭

ವ || ಎಂದು ಗದ್ಗದಕಂಠೆಯಾಗಿ ನುಡಿಯೆ ಮಗುೞ್ದು ಕೃಷ್ಣನಿಂತೆಂದಂ

ಕಂ || ಎನ್ನಂ ಕಿಱಿಯಂ[ದ]ತಿಕೋ
ಪೋನ್ನತಿಯಿಂ ಕೊಲಲು ಬಂದು ಪತ್ತಿದ ದಿವ್ಯರ್
ಬನ್ನಂಬ[ಟೋ]ಡಿದರಿ
ನ್ನೆನ್ನನತಿಕ್ರಮಿಪೆವೆಂಬ ದಿವ್ಯರುಮೊಳರೇ ೮

ವ || ಎಂದು ಗಜಱಿ ಗರ್ಜಿಸುತ್ತಿರ್ದ ನಾರಾಯಣನುಗ್ರಕೋಪಮನಱಿದು ಬಂದೊಂದು ದಿವ್ಯಮಾಕಾಶದೊಳಿರ್ದೆಂ ರುಗ್ಮಿಣಿಮಹಾದೇವಿ ನೀನುಬ್ಬೆಗಂಬಡದಿರ್ ಕೃಷ್ಣರಾಜೆಂದ್ರ ನೀಂ ಮುಳಿಯದಿರ್ ನಿನ್ನ ಮಗಂ ವಿದ್ಯಾಧರಶ್ರೇಢಿಯೊಳ್ ಬಳೆದು ಪದಿನಾಱು ವರುಷದಂದಿಂಗೆ ಬಕ್ಕುಂ ಚಿಂತಿಸದಿರಿಮೆಂದು ಪೋಯ್ತದಂ ಕೇಳ್ದು ದಿವ್ಯವಚನಂ ತಪ್ಪದೆಂದರಸಂ ಸಂತೈಸಿ ಪೋದನಿತ್ತ ಧೂಮಕೇತು ಕೂಸನೊಯ್ದು ಬೆಳಗಾದಾಗಳ್ ಕೂಸಿನ ಮೊಗಂ ನೋಡಿ ಪೂರ್ವಭವಕ್ರೋಧೋ ದಯಮಾಗೆ ಬಾಳಂ ಕಿೞ್ತು ನಿಮಿರ್ದಿಂತೆಂದಂ

ಕಂ || ಎಲೆ ಮೊಲನೇ ನೀನೆನ್ನೀ
ಬಲಗರ್ವದಿನೆನ್ನ ಮೇಗೆ ಸುೞಿ ಸೋಕಿ ಕರಂ
ನಲಿನಲಿದು ಗೊಡ್ಡ ಮಾಡಿದ
ಪೊಲೆಯಾ ನೀಂ ಮಱೆದೊಡಾನದಂ ಮಱೆದಪೆನೇ ೯

ಯದುರಾಜನ ಪ್ರಭವದೊಳ್
ವಿಧುಮುಖಿ ಚಂದ್ರಾಭೆಯೆಂಬೊಳೆನ್ನಂಗನೆಯಂ
ವಧುವನೊಲಿದೆನ್ನ ಕೆಯ್ಯಿಂ
ದ[ಧ]ವಾ ನೀನೆೞೆದುದೊಂಡ ಪಾತಕನಲ್ತೇ ೧೦

ಆನ[೦]ದು ಮರುಳ್ಗೊಂಡೆಗೆ
ತಾನುಂ ಕಾಲಂ ಕನಲ್ದು ಪಳವಿಸಿ ಸತ್ತೆ
ತ್ತಾನುಂ ನಿನ್ನಂ ಕೂಡಿ
ನ್ನಾನೊರ್ಮೆಯೆ ಕೊಂದು ಬಿಸು [ಡದೇಂ] ತಣಿದಪೆನೇ ೧೧

ಮುಱಿವೆನೆ ಕೊರಳಂ ನೆರನರಿ
ದಿಱಿದಿಱಿದರಿದರಿದು ಪೋೞ್ದು ಸೀಳ್ದಿಕ್ಕುವೆನೋ
ಕಿಱಿಕಿಱಿಯವಾಗಿ ನಿನ್ನಂ
ತಱಿತಱಿದಡಗಿಂಡೆಯಂ ತಗುಳ್ದಾಡುವೆನೋ ೧೨

ಚಂ || ದೆಸೆವಲಿಗೆಯ್ವೆನೋ ಪಸಿದ ಭೂತಕಪಾಲದೊಳಿಕ್ಕಿಪೋಪೆನೋ
ಪೊ[ಸೆ]ಪೊಸೆದೆಲ್ವ ನುರ್ಗುವಿನೆಡಂಬಿಡದೊತ್ತಿ ಕಿ[ಮುೞ್ಚಿ]ಕೊಲ್ವೆನೋ
ಬಿಸುಡುವೆನೋ ಸಮುದ್ರದೊಳಗಣ್ಗೆ ಸಿಳಾತ[ಳಕಿಕ್ಕಿ] ಪೊಯ್ವೆನೋ
ಮಸಗಿದ ಕೆಂಡದೊಳ್ ಮಿಡುಕುವಂತಿರೆ[ಪೊಂ]ಗಿ ಪೊರಳ್ಚು[ತಿ]ರ್ಪೆನೋ ೧೩

ವ || ಎನುತಮಂತಂತೆ ಧರಾತಳಮಂ ನೋಡುತ್ತ ಬರ್ಪನ್ನೆಗಂ ಖದಿರವನಮೆಂಬ ಪೆರ್ವೞುವಂ ಕಂಡನಲ್ಲಿಯ ಮರಂಗಳೆಲ್ಲಂ ತಱಿಯ ಮರಂಗಳೆ ಕಲ್ಗಳೆಲ್ಲಂ ಮೊನೆಕಲ್ಗಳೆ ಮೃಗಂಗಳೆಲ್ಲಂ ಪುಲಿ ಕರಡಿಗಳೆ ಪಕ್ಕಿಗಳೆಲ್ಲಂ ಪರ್ದು ಕಾಗೆಗಳೆ ಪುಲ್ಲೆಲ್ಲಮೆ ಸುಂಕುಬುಲ್ಲೆ ಗಾಳಿಯೆಲ್ಲಂ ಸುಟ್ಟುರೆಗಾಳಿಯೆ ಗಿಡುವೆಲ್ಲಂ ಮುಳ್ಳುಗಿಡುಗಳೆ ಚರಿಯಿಸುವರೆಲ್ಲಂ ಕಿರಾತ ಗುಣಮುಂ[೦]ರಾಕ್ಷಸಗಣಮೆ ತಪ್ಪದಿದಪ್ಪುದೀತನಂ ನಿಗ್ರಹಿಸಲೆಡೆಯೆಂದಲ್ಲಿ ತಸ್ಕರಶೈಳಮೆಂಬುದೊಂದು ಶಿಲೆಯಂ ಕಂಡು ಕೂಸಂಗೊಂಡು ವಿಮಾನದಿನಿೞಿತಪ್ಪವನಂ ಬೇಗಂ ಕೊಂದೊಡೀತನ ಪುಣ್ಯಂ ತವದೆ ಮತ್ತಂ ಸುಗತಿಯೊಳಿಕ್ಕುಗುಮಿ ಕಾಯ್ದ ಕಲ್ಲ ಮೇಗಿಕ್ಕಿ ಪೋದೊಡೆ ಪಗಲೆಲ್ಲಂ ಬಿಸಿಲೊಳ್ ಗಾಳಿಯೊಳಂ ಶೀತದೊಳಂ ಬಿರಿದು ಪರ್ದುಂ ಕಾಗೆಯುಮಿಱಿಯೆ [ಕೋೞ್ಮಿಗ] ಮುಮಗಿಯೆ ರೌದ್ರಪರಿಣಾಮದಿಂ ಸತ್ತು ದುರ್ಗತಿಯೊಳ್ ಬೀೞುಗುಮನಿತನೆ ಮಾಡುವೆನೆಂಬ ಬಗೆಯಿಂದಾ ಕಲ್ಲಮೇಗಿಕ್ಕಿ ಪೋದನನ್ನೆಗಮಿತ್ತ ಮೇಘಕೂಟಮೆಂಬ ಪೊೞಲನಾಳ್ವಂ ಕಾಳಸಂಬರನೆಂಬ ವಿದ್ಯಾಧರಂ ಕಾಂಚನಮಾಲೆಯೆಂಬ ತನ್ನ ಮನೋನಯವಲ್ಲಭೆಯನೊಡಗೊಂಡು ವಿಮಾನಾರೂಢನಾಗಿ ರಮ್ಯಾಶ್ರಯವಿಶ್ರ ಮಕಾರ್ಯದಿಂ ಬಪ್ಪನಾ ಖದಿರವನದ ಮೇಗನೆ ಪೋಪನಲ್ಲಿ

ಪೃಥ್ವಿ ||
ಮ[ನಂ ಪ] ವನವೇಗದಿಂ ಖಚರ[ಯಾ] ನಮಕಾಶದೊ[ಳ್
ಪಿ] ನದ್ಧ ಮಣಿರಶ್ಮಿಯಿಂದೆಸೆದು ಪೋಗುತಂ ತಾನೆ ತೊ
ಟ್ಟನಂತೆ ನಿಲೆ ಕಂಡು ತಲ್ಲಣಿಸಿ ಬೆಕ್ಕಸಂಬ[ಟ್ಟನೇಂ]
ಮುನಿಪ್ರವರರಿರ್ದರೋ ಪಗೆವರಿರ್ದರೋ ಧಾತ್ರಿಯೊಳ್ ೧೪

ವ || ಅದಲ್ಲದೊಡೆ ವಿಮಾನಮಿಂತು ನಿಲ್ಲದೆಂದು ಬಾಳಂ ಕಿೞ್ತುಕೊಂಡುಮತ್ತ ಪರಮುಮನುರದೊಳಮರ್ಚಿ ಧರಾಭಾಗಕ್ಕಿೞಿದು ಪೞುವ[ದ] ನಡುವಣ ತಸ್ಕರಶಿಲೆಯ ಮೇಗಿರ್ದ ಕೂಸಂ ಕಂಡು

ಕಂ || ಪುಟ್ಟಲೊಡಮಂತೆ ತಂದಿ
ಲ್ಲಿಟ್ಟೊಂ ತಾಯಿಂದಗಲ್ಚಿ ಮುನ್ನಿನ ಭವದೊಳ್
ತೊಟ್ಟರಿನರನೋ ಸುರನೋ
ಕಟ್ಟುರ್ಬಿನ ದುರಿತ ದನುಜನೋ ಖೇಚರನೋ ೧೫

ವನಲತಾ ||
ಆವೊನೆಂದುಮಱಿಯೆಂ ಕಡುಪಾಪಿಯ ಗೊಡ್ಡಂ
ದೇವಸನ್ನಿಭನಿವಂ ಶುಭಲಕ್ಷಣದಿಂದಂ
ತೀವಿದಂಗಮದಱಿಂ ಧರಣೀಶಮಹಾವಂ
ಶಾವತಾರ ಶಿಶು ನಿಕ್ಕುವಮಾಗಲೆವೇೞ್ಕುಂ ೧೬

ವ || ಎಂದು ಬಗೆದು ಬಾಳನೆಡದೆ ಕಯ್ಯೊಳ್ ಪಿಡಿದು ಬಾಳನನೆತ್ತಿಕೊಮಡಾಗಳ್ ವಿಮಾನಮನೆಯ್ದಿ ಪಿಡಿ ನಮಗೆ ಪುತ್ರಲಾಭಮಾದುದೀತನನೊಂದು ಪಿರಿಯ ಶಿಲೆಯ ಮೇಲೆ ಕಂಡೆಂ ಪೂರ್ವವೈರಿ ತಂದಿಕ್ಕಿ ಪೋದನಕ್ಕುಂ ಮಹಾಪುಣ್ಯಭಾಗಿಯಂ ಕೈಕೊಳ್ಳೆಂದಡೆ ಕನಕಮಾಲೆಯಿಂತೆಂದಳ್

ಪೃಥ್ವಿ ||
ಭವತ್ತನಯರಯ್ವದಿಂಬರೊಳರಾ ಕುಮಾರರ್ಕಳಿ
ರ್ದಿ[ವಂ] ನಡಪಿಕೊಂಡವಂ ಬಗೆವೊಡೇವೊನೇತಕ್ಕ [ನೆಂ]
ದವರ್ ನುಡಿಯೆ ದುಃಖಮಕ್ಕುಮೆನಗಂತುಟಂ [ತಕ್ಕು]ಮಾ
ೞ್ಪವಕ್ರಿಯೆಯನೊಲ್ಲೆನೊಯ್ದಿರಿಸು ಮುನ್ನಿ[ನಂತ]ಲ್ಲಿ ನೀಂ ೧೭

ವ || ಎನೆ ಕಾಳಸಂಬರನಿಂತೆಂದಂ

ಕಂ || ಅಂತನಿತನಾಗಲೀಯೆಂ
ಭ್ರಾಂತಿಸದರ್ ಗೂಢಗರ್ಭದೊಳ್ ಪುಟ್ಟಿದನೆಂ
ದಂತಃಪುರ ಪುರವಿಷಯ
ಕ್ಕೆಂತುಂ ಸಂದೇಹಮಿಲ್ಲದಂತಿರೆ ಮಾೞ್ಪೆಂ ೧೮

ಫಲಮಿಲ್ಲದ ಮರನುಂ ಮ
ಕ್ಕಳಿಲ್ಲದೊಂದರಸುಮೊಪ್ಪದದಱಿಂದೆನಗ
ಗ್ಗಳದ ಮಗನೆಂದೆ ನೀಂ ಕೈ
ಕೊಳಲಪ್ಪುದು ಶಂಕೆವೇಡ ವನರುಹವದನೇ ೧೯

ವ || ಪಿಡಿಯೆಂದು ಕೂಸಂ ಕೈಯೊಳ್ ಕೊಟ್ಟು ತನ್ನ ಕೊರಲ ಕಂಠಿಕೆಯನಾತನ ಕೊರಲೊಳ್ ಕಟ್ಟಿದೊಡೆ ರಾಗದಿಂ ಕೂಸಂ ಮೊಲೆಯತ್ತ ಸಾರ್ಚಿದಾಗಳ್

ಕಂ || ಬಾಲಕನ ಪುಣ್ಯದಿಂದಾ
ಲೋಲಾಕ್ಷಿಯ ಬಿಗಿದು ನೆಗೆದ ಮೊಲೆ ತೊರೆದೊಡೆ ಕಂ
ಡೀ ಲಲಿತಾಂಗಿಗೆ ಪೂರ್ವಭ
ವಾಲಗ್ನಸ್ನೇಹಮಕ್ಕುಮಾ ಬಾಲಕನೊಳ್ ೨೦

ವ || ಎಂದಂತೆ ಪೋಗಿ ತಮ್ಮ ಪುರದ ಬಹಿರೋದ್ಯಾನವನದೊಳಿರ್ದು ಗೂಢಗರ್ಭದೊಳರಿಸಿ ಮಗನಂ ಪೆತ್ತಳೆಂದು ವನಪಾಲಕನನಟ್ಟಿದೊಡಾತಂ ಪೋಗಿ ಸಾಱಿದಾಗಳೆಲ್ಲಂ ತಮತಮಗೊಸಗೆಯಾದಂತೆ ಕೈಗೆಯ್ದತಿಶಯ ವಿಳಾಸದಿಂ ಬಂದಿದಿರ್ಗೊಳೆ ಕಾಳಸಂಬರಂ ಪಟ್ಟವರ್ಧನ ಗಜೇಂದ್ರಮನೇಱಿ ಕಾಂಚನಮಾಲೆ ಕೂಸಂ ಮುಂದುಗೊಂಡು ಸಿವಿಗೆಯನೇಱಿ ಬರೆ ದೇವೇಂದ್ರವಿಭವದಿಂ ಪೊೞಲಂ ಪೊಕ್ಕರಮನೆಯೊಳ್ ಪಸೆಯ ಮೇಲಿರ್ದಾಗಳ್

ಕಂ || ಮಗನುಂ ತಾಯುಂ ತಂದೆಯು
ಮಗಲದೆ ಚಂದ್ರಾರ್ಕರುಳ್ಳಿನಂ ಸುಖದಿಂ[ದಂ]
ದಗಲದೆ ಬಾಱಿಂ ನೀಮೆಂ
ದೊಗೆದರ್ಥಿಯೊಳೆಲ್ಲಮೊಡನೆ ಪರಸಿದರಾಗಳ್  ೨೧

ವ || ಅಂತು ಪರಸಿ ಸೇಸೆಯನಿಕ್ಕಿ ಸಂತೋಷದಿನಿರ್ದೊಂದುದಿವಸಮಂತಃಪುರ ಪರಿವಾರಾದ್ಯನೇಕ ರಾಜಕುಮಾರ ಪರಿವೃತನಾಗಿರ್ದು ನಾಮಕರಣದೊಸಗೆಯಂ ಮಾಡಿ ಪ್ರದ್ಯುಮ್ನನೆಂದು ಪೆಸರನಿಟ್ಟು ಜ್ಯೇಷ್ಠಪದವಿಯಂ ಕೊಟ್ಟು ರಾಗದಿನಿರೆ ಬಾಲಕಂ ಬಾಲ ಚಂದ್ರನಂತಭಿವೃದ್ಧಿಗೆ ಗರ್ಭಾದ್ಯಷ್ಟಮದಿಂ ತಗುಳ್ದಕ್ಷರಾದಿ ಕಳೆಗಳೊಳತಿಪ್ರವೀಣನಾಗೆ

ಮ || ಸ್ರ || ಪ[ದೆದತ್ತಾದ]ಕ್ಷಗೀ ಭೂತಳದೊಳಗಿದು ಪರ್ವಿತ್ತು ಮೆಲ್ಪಿಂದೆ ತಾಂ ವೃ
ಕ್ಷದ ಕೊಂಬಂ ಪತ್ತಿ ಮತ್ತಾ ಮಧುಸಮಯದೊಳಿಂಬಾಗೆ ಪೂತತ್ತು ಪಣ್ತೊ
ಪ್ಪಿದುದುದ್ಯದ್ದಂಡ ನಿತ್ಯಗ್ರದೊಳನುನಯಸಂಯೋಗದಿಂ ಸರ್ವಲೋಕಾ
ಸ್ಪದಮಾಯ್ತಾ ಭೂಚರಧೀಶ್ವರಸುತ ನೃಪವಿದ್ಯಾಲತಾಲೀಢಮೆತ್ತಂ ೨೨

ವ || ಅಂತು ನಾಲ್ಕು ತೆಱದರಾದ ವಿದ್ಯಾಪುಂಜಿತನಾಗಿ ಯವ್ವನವಯಸದೊಳ್ ಮಹಾವಿದ್ಯಾಸಾಧನೋಪಕರಣಂಗಳಂ ಕೊಂಡು ಹಿಮವಂತ ಪರ್ವತದ ಸಿದ್ಧಕೂಟಕ್ಕೆ ಪೋಗಿ ಯಥೋಕ್ತವಿಧಾನದಿಂ ಯೋಗಸ್ಥನಾಗಿರ್ದಱುದಿಂಗಳ್ಗೆ ಗಗನಗಾಮಿನಿ ಮೊದಲಾಗಿ ಪಲವುಂ ವಿದ್ಯೆಗಳ್ ಸಾಧ್ಯಮಾದೊಡೆ ವಿದ್ಯಾಪೂಜೆಗೆಯ್ದುಮಿದಿ[ರ್ವೋ]ಗೆ ಬಂದು ಪೊೞಲಂ ಪೊಕ್ಕಿರೆ ಕಾಳಸಂಬರನುಂ ಕನಕಮಾಲೆಯುಂ ಮಗನ ರೂಪಿನೊಳ್ಪುಮಂ ತೇಜದಗ್ಗಳಿಕೆಯುಮಂ ವಿದ್ಯಾಮಹಾತ್ಮೆಯುಮಂ ಮನದ ಪೆಂಪುಮುಮಂ ನೋಡಿ ನೋಡಿ ಮುಯ್ವಂ ನೋಡಿ

ಕಂ || ಅಂತವರಿರೆ ಸುಖದಿಂ ಪ್ರ
ತ್ಯಂತದ ನೃಪನಗ್ನಿರಾಜನೆಂಬೊಂ ಮಲೆದಿ
ನ್ನೆಂತಳ್ಕಿಪೊರೆಂತೆಱಗಿಪೊ
ರೆಂತರ್ಥಂಗೊಳ್ವರುೞಿಗೆ ಮುನ್ನಿನ ಪಗೆಯಂ ೨೩

ವಿದ್ಯೆಗಳುಮಿಂದ್ರಜಾಲದ
ವಿದ್ಯೆಗಳುಂ ತನ್ನ ನೋಯಿಸಲುಮುೞಿಯಿಸಲಂ
ದುದ್ಯೋಗಕ್ಕಣಮಲ್ಲವ
ಭೇದ್ಯದನಾನೆಂದೊಡಿಱಿವೆನೆಂಬನುಮೊಳನೇ ೨೪

ಮುನ್ನಿನವರಿತ್ತ ಮೊಗ್ಗಿ
ನ್ನೆನ್ನೊಳ್ ಸಲಲಾಱದುೞಿವುದಂ ತಪ್ಪುದನೇ
ಕಿನ್ನುಂ ನಾಂ ತಮ್ಮಂ ಬೇ
ೞ್ಪುನ್ನತಿಕೆಯನುೞಿಯೆ ತಮಗದಗ್ಗಳಮಲ್ತೇ ೨೫

ವ || ಎಂದು ಬಂದು ಪೆರ್ಗಡೆಗಳನುರದೊತ್ತಿನುಡಿದೊಡೆ ಮಗುೞು ಪೆರ್ಗಡೆಗಳ ಮಾತಂ ಕೇಳ್ದು ಕಾಳಸಂಬರಂ ಮುಳಿದು ಮೇಲೇೞಲೆಂದು ಮಿತ್ರಬಲಮಂ ನಿಜಬಲಮುಮಂ ನೆರಪಿ ಕಯ್ದುಗಳಂ ಸ್ಯಂದನಂಗಳುಮನೋಸರಿಸುವುದುಂ ಪ್ರದ್ಯುಮ್ನಂ ಕಂಡಿದೇನೆಂದೊಡಗ್ನಿರಾಜನು ದ್ವೃತ್ತತೆಯಂ ಪೇೞ್ದಾಗಳೀ ಬೆಸನನೆನಗೆ ದಯಗೆಯ್ಯಿಮೆನೆ ನೀಂ ಕುಮಾರಂ ಕಿಱಿಯನೆನೆ ಪ್ರದ್ಯುಮ್ನಂ ತಂದೆಗಿಂತೆಂದಂ

ಮ || ಕಿಱಿದೆಂಬಂತಿರೆ ಸಿಂಗದೊಂದು ಮಱಿಯಂ ಕಿಚ್ಚಂ ಕರಂ ಸಲ್ವಮೆಂ
ದುಱದಿರ್ಪಂತಿರೆ ಪುತ್ರನನ್ನ ತಗುಳ್ದಿಂತೀ ಪ್ರಾಯಮಂ ಕಂಡು ನೀಂ
ಕಿಱಿಯಂ ಕೂಸಿವನೇವೊನೆಂದಿಳಿಸದಿರ್ ಮಾಱೂಂತರಂ ತಾಗಿ ತ
ಳ್ತಿಱಿವೆಂ ಮರ್ದಿಸಲಾರುಮಂ ನೆಱೆವೆನಾನೆಂಬೊಂದು ವಾರ್ತೋಕ್ತಿಯಂ ೨೬

ವ || ಕಾಳಸಂಬರಂ ಮಗನದೊಂದುತ್ಸಾಹಮಂ ಕೇಳ್ದು ಮೆಚ್ಚಿ ನೀನಱಿವೆಯೆನೆ ಬೆಸನಂ ಪಡೆದುದಕ್ಕೆ ಸಂತೋಷಂಬಟ್ಟು ಪೊಡೆವಟ್ಟು ಪೊೞಲಿಂ ಪೊಱಮಟ್ಟು ಬಿಟ್ಟಿರ್ದನಾಗಳರಸಂ ತನ್ನ ಚಾತುರ್ದಂತಬಲಮಂ ಮಗನೊಡನೆ ಪೇೞ್ದೊಡೆ ಮಱುದಿವಸಂ ಪಯಣಂಬೋಗಿ ಕೆಲವು ದಿವಸದಿಂ ಶ್ರೀಪುರಮನೆಯ್ದಿ ಬಿಟ್ಟಿರ್ದುದನಗ್ನಿರಾಜಂ ಕೇಳ್ದು ತನ್ನ ಪೆಸರಂ ನನ್ನಿಮಾಡಿ ಕೋಪಾಗ್ನಿ ಪೆರ್ಚಿ ತನ್ನ ಸಮಸ್ತಬಲಂಬೆರಸು ಪೊಱಮಟ್ಟೊಡ್ಡಿದನಂತೆರಡುಂ ಪಡೆಗಳೊಡ್ಡಿ ಕೆಯ್ಯಂ ಬೀಸಿದಾಗಳ್ ಬಿಲ್ ಬಿಲ್ಲೊಳ್ ದೞಂ ದೞದೊಳ್ ತೇರ್ ತೇರೊಳಾನೆಯಾನೆಯೊಳಣಿ ಯಣಿಯೊಳ್ ತಾಗಿ ಕಾದಿದಾಗ [ಳ್] ತನ್ನ ಪಡಲ್ಪಟ್ಟುದನಗ್ನಿರಾಜಂ ಕಂಡು ವಿದ್ಯಾಯುದ್ಧಮಂ ಪೊಣರ್ಚಿದಾಗಳ್ ಪ್ರದ್ಯುಮ್ನಂ ಪ್ರತಿವಿದ್ಯೆಗಳಿಂ ಭೇದಿಸಿ ಗೆಲ್ದೆಯ್ದೆ ನೂಂಕಿದೊಡವಂ ತಡೆದೋಡಿಸಿ ನಿಂದುದಂ ಕುಮಾರಂ ಕಂಡು

ಕಂ || ಕಡುಮುಳಿದು ವಿರಥನಾಗೆ
ಚ್ಚೆಡೆಮಡಗದೆ ಪೊಯ್ದು ನೆಗೞ್ದ ರಿಪುಭೂಮಿಪನಂ
ಪಿಡಿದುಡಿಯೆ ಕಟ್ಟಿ ಚ್ಯೋದ್ಯ
ಬಡೆ ಪಡೆ ನಿಜವಿಜಯಭೇರಿವೊಯ್ಸಿ ಕುಮಾರಂ ೨೭

ವ || ಅಂತಾತನಂ ಕಟ್ಟಿ ಭೀತರನೆರ್ಬಟ್ಟಿ ಪೊಱಲಂ ಪೊಕ್ಕು ಸಾರವಸ್ತುಗಳಂ ಕೊಂಡು ಮಗುೞ್ದು ಪಯಣಂ ಬಂದು ಮೇಘಕೂಟಪುರಮನೆಯ್ದಿ ಕೂರ್ತರ್ ಮನಂಗೊಳೆ ಬಿಗುರ್ತರಸುಂಗೊಳೆ ಪುರಜನಮಿದಿರ್ಗೊ[ಳೆ] ಪೊೞಲಂ ಪೊಕ್ಕು ಕಾಳಸಂಬರನುಂ ಕಾಂಚನಮಾಲೆಯುಂ ಕಂಡು ಪೊಡೆವಟ್ಟಗ್ನಿರಾಜನ ಸೆಱೆಯನೊಪ್ಪುಗೊಳ್ಳಿಮೆಂದ ಮಗನ ಪರಾಕ್ರಮಕ್ಕೆ ರಾಜ್ಯಕ್ರಮದ ಕಂಠಿಕೆಯಂ ಪುಟ್ಟಿದಂದೆ ಕಟ್ಟಿದೆನಾದೊಡಂ ನೀಮೆಲ್ಲಮಱಿಯೆ ಕೊಟ್ಟಪೆನೀತಂ

ಕಂ || ಕಿಱಿಯನೆನವೇಡ ರಾಜ್ಯದ
ಪೊಱೆಯ ಭರಕ್ಕಾವನಾರ್ಕುಮಾತನೆ ಪಿರಿಯಂ
[ಪೆ]ಱದೇಂ ಪ್ರದ್ಯುಮ್ನಂ ಗಳ
ವಱಿದೊಂ ಯುವರಾಜಪದವಿಯಂ ಮಾಡಿದಪೆಂ ೨೮

ವ || ಎಂದೊಸಗೆವಱೆಯಂ ಪೊಯ್ಸಿ ಕಂಠಿಕೆಯಂ ಕಟ್ಟಿ ಕಟ್ಟಿತರೆ ಬಂದಗ್ನಿರಾಜನ ಸೆಱೆ ಮೊದಲಾಗೊಡೆಯ ಸೆಱೆಗಳಂ ಬಿಟ್ಟು ನಿಶ್ಚಿಂತಮಿರೆ ಕೆಲವು ದಿವಸದಿಂ ಕುಮಾರನ ಪೆರ್ಚಿಂಗಂ ಪ್ರಜೆಯ ಮಚ್ಚಿಂಗಂ ರೂಪಿನೊಳ್ಪಿಂಗಂ ಗುಣದ ತಣ್ಪಿಂಗಂ ಪ್ರತಾಪದುಗ್ರತೆಗಂ ಪುಣ್ಯದಗ್ರತೆಗಂ ಮನದ ಬಲ್ಪಿಂಗಂ ನುಡಿಯ ಮೇಲ್ಪಿಂಗಂ ತೇಜದಳುರ್ಕೆಗಂ ಸಿರಿಯ ನಿಮಿರ್ಕೆಗಂ ವೈಭೋಗಕ್ಕಂ ಶೌಚನಿಯೋಗಕ್ಕಂ ನೆಗೞ್ದಾಯಕ್ಕಂ ತಕ್ಕ ಬೀಯಕ್ಕಂ ವಿದ್ಯಾವಿಭೂಷಣಕ್ಕಂ ಸಮರವಿಭೀಷಣಕ್ಕಂ ಕಾಳಸಂಬದನ ಪಿರಿಯಮಕ್ಕಳ್ ವಜ್ರದಾಡಾದಿಗಳಪ್ಪಯ್ವದಿಂಬರುಂ ಕಾಯ್ದು ಛಿದ್ರಿಸಿ ಕೊಲ್ವ ಬಗೆಯಂ ಬಗೆದು ಕುಮಾರನೊಳ್ ಮೇಳಂಗೊಂಡು ಬಾ ನಾಮಿಂತಿರಲ್ವೇಡಂ ಗೋಚರಸ್ಥಾನಂಗಳ್ ವಿದ್ಯಾಲಾಭಮೊಳೆವಮಂ ಕೊಳ್ವಮೆಂದೊಡಗೊಂಡು ಪೋಗಿ ಸಿದ್ಧಕೂಟಮೆಂಬ ಪುರಾಣಚೈತ್ಯಾಲಯಮಂ ಬಲಗೊಂಡು ದೇವರಂ ಬಂದಿಸಿರ್ದದಱ ಮೇಗಣ ನೆಲೆಯೊಳ್ ದೃಷ್ಟಿವಿಷ ಮಹೋರಗರಕ್ಷಿತ ವಿದ್ಯೆಗಳೊಳವ[ವ]ಕ್ಕಳ್ಳದೆ ಪೊಕ್ಕಂಗೆ ಸಾಧ್ಯಮಕ್ಕುಮೆಲ್ಲಮಿಲ್ಲಿರಿಮಾಂ ಪುಗುವೆನೆಂದ ವಜ್ರದಾಡನ ಮಾತಂ ಕೇಳ್ದು ಕುಮಾರಂ ನಿಮ್ಮ ಬೆಸೆದೊಳಾಂ ಪೊಕ್ಕುನೋೞ್ಪೆನೆಂ[ದು]ರಿಬಾಗಿಲಂ ತೆಱೆದೊಡೆ

ಕಂ || ಪೆಡೆಗಳೆನಿತನಿತುಮಂ ಕೊ
ಳ್ವೆಡೆಗೆಯ್ದೊಡನೊಡನೆ ಬಿಡದೆ ಕಿಡಿಗಳನುಗುೞು
ತ್ತಡಿಗಡಿಗೆ ನಿಮಿರ್ದು[೦] ಬರೆ
ತಡೆಯದೆ ಫಣಿಯಂತೆ ಪಾಱಿ ಬಿರ್ದತ್ತಾಗಳ್ ೨೯

ವ || ಅಂತು ಬಿರ್ದು ನಾಗರಾಜನಾಗಿ ಬಂದು ನಿಂದು ನಿನಗೆ ಸಾಧ್ಯಮಾದುದೀ ವಿದ್ಯೆಗಳಂ ಕೈಕೊಳ್ಳೆಂದು ಸಮವಿದ್ಯೆಯುಮನತಿವಿದ್ಯೆಯುಮಂ ಕಾಮಚಾಂಡಾಳಿಯುಮಂ ವಿಷ್ಟರಚಾಮರಂಗಳುಮಂ ಆತಪತ್ರಮುಂ ಪಾವುಗೆಗಳುಮಂ ತೋಱಿ ಮುನ್ನಿಂತೊರ್ಬ ವಿದ್ಯಾಧರನಿದಂ ಸಾಧಿಸಿ ತಪಕ್ಕೆ ಪೋಗುತಿಂತಪ್ಪೆಡೆಯೊಳಿವಂ ಕಾದಿರ್ದುಮಿಂತಳ್ಕದೆ ಪಾಯ್ದೊಂಗೊಪ್ಪಿಸೆಂದಿರಿಸಿಪೋದಂ ಕೈಕೊಳ್ಳೆಂದೊಡಂತೆಗೆಯ್ವೆನೆನ್ನ ಬಗೆದಾಗಳ್ ಬಕ್ಕೆಂದಿರಿಸಿ ಪೊಱಮಟ್ಟುಬಂದನದಂ ಕಂಡು ಅಚ್ಚರಿವಟ್ಟು ವಜ್ರದಾಡಾದಿಗಳೊಡಗೊಂಡು ಪೋಗಿ ನಂದದುರಿಯುತ್ತಿರ್ದ ಪಿರಿದೊಂದು ಕೊಂಡಮಂ ತೋಱುವುದುಂ

ಕಂ || ಧಗಧಗಿಸಿ ಮಸಗಿ ದಳ್ಳುರಿ
ನೆಗೆತರೆ ಪಾಯಂಗೆ ಮೆಚ್ಚಿ ತಣ್ಣಿದನಾ[ಗಿ]ತೊ
ಳಗಿದಗ್ನಿದೇವ ನನ್ನಿಯೊ
ಳೊಗೆದವಿವೆಂದಿತ್ತನುಚಿತ ಪೀತಾಂಬರಮಂ ೩೦

ವ || ಅಂತು ಪಡೆದು ಪೊಱಮಡೆ ಮನದೊಳ್ ಕಟ್ಟುಕಡೆದೆರ್ದೆಯೊಡೆದು ಮತ್ತಮೊಡಗೊಂಡುಪೋಗಿ ತಗರರೂಪಿನ ಶಿಲೆಯಂದದೊಂದೊಂದಂ ಪಾಯುತ್ತಿರ್ಪುವಿ ವರ ನಡುವಂ ಪೊಕ್ಕು ಸಾಧಿಸಿದೊಂಗೆ ಫಲಮಕ್ಕುಮೆಂದು ಮೇಷಯಂತ್ರಮಂ ತೋಱಿದಾಗಳ್

ಕಂ || ಸಂಕಿಸದೆ ಪೊಕ್ಕು ಪೊಯ್ವೆರ
ಡುಂ ಕಲ್ಗಳನೆರಡುಂ ಕೆಯ್ಯೊಳ್ ಪೊಯ್ಯೆ ಸಿಡಿ
[ಲ್ದಂ]ಕದ ಮೇಷಪುರಂ ಪೋ
ಲ್ತಂಕದ ತೆಱನಾಗಿ ಕಂಡಲಂಗಳನಿತ್ತಂ ೩೧

ವ || ಅಂತಲ್ಲಿ ಪಡೆದ ಮಕರಕುಂಡಲಂಗಳಂ ಪೆತ್ತ ಸಾಹಸಮಂ ಕಂಡು ಮತ್ತಮೊಯ್ದು ಭಯಂಕರಮಾಗಿರ್ದ ಸೂಕರಶೈಲಮಂ ತೋಱಿದೊಡೆ ಕುಮಾರಂ

ಕಂ || ಭೀಕರಮಂ ಶೈಲಮಹಾ
ಸೂಕರಮಂ ಕಂಡು ಪೊಕ್ಕು ಪೊಯ್ದಡೆ ಭಯದಿಂ
ದೇಕೆನೆಗೆ ಮುನಿದೆಯೆಂದೆ
ರ್ದಾಕುಳದಿಂ ವಿಜಯಘೋಷ ಶಂ[ಖ]ಮನಿತ್ತಂ ೩೨

ವ || ಅದಂ ಕಂಡು ಚೋದ್ಯಂಬಟ್ಟು ನಿನಗಾವುದುಂ ಸಾಧ್ಯಮಲ್ಲದುದಿಲ್ಲೆಂದು [ನಿಶ್ಚೈಸಿ] ದ್ವೀಪಾಂತರಕ್ಕೆ ಬಂದಾಯತಗುಹೆಯಂ ತೋಱಿದಾಗಳ್

ಕಂ || ಪಿರಿದು ಕರಂ ಕತ್ತಲೆಯಿಂ
ಕರಿದು ಪುಗಲ್ಕರಿದು ಗುಹೆಯಿದೆನ್ನದೆ ಪೊಕ್ಕಂ
ಗೆರಡಿಲ್ಲದಂಜಿ ಗದೆಯಂ
ಕರಯುಗಮಂ ಮುಗಿದು ಕಾಳರಾಕ್ಷಸನಿತ್ತಂ ೩೩

ವ || ಆದಂ ಕಂಡು ಪೊಱಮಟ್ಟು ಬಂದುದಂ ಕಂಡು ನಮ್ಮ ಬಗೆದಪಾಯಮೀತಂಗೆ ಲಾಭೋಪಾಯಮಪ್ಪುದೆಂದು ಬಗೆದು ಕೃತಕೋಕ್ತಿಗಳಿಂ ನಂಬಿಸಿಕೊಂಡು ಪೋಗಿ ತಮ್ಮೊಳ್ ಪೂರ್ವ ಮಲ್ಲಗಿರಿಗಳಂ ತೋಱಿದೊಡೆ

ಕಂ || ಮಲ್ಲರ್ ಪೋರ್ವಂತಿರೆ ಪೋ
ರ್ವಲ್ಲಿಗೆ ಪಾಯ್ದೆಡೆಯೊಳಿರ್ದು ನೂಂಕಿದೊಡೆರಡುಂ
ತಲ್ಲಣಿಸಿ ಕೆಡೆಯೆ ಭಯದಿಂ
ಮಲ್ಲಾಸುರನುಪಮೆಗೞಿದ ಹಾರಮನಿತ್ತಂ ೩೪

ವ || ಅಸುರನಂತು ಬೇೞುತ್ತಮಾ ವನದಮೂಲ್ಯಮಪ್ಪ ಹಾರಮನಿತ್ತುದುಮಂ ಕಂಡು ಬೆಕ್ಕಸಂಬಟ್ಟಿನ್ನೇಕಿಪ್ಪೆಮೆಲ್ಲಿರ್ದ ವಸ್ತುಗಳುಂ ನಿನ[ಗ]ಸಾಧ್ಯಮಾಗದುವಿಲ್ಲಕೊಳ್ವಂ ಬಾಯೆಂದೊಯ್ದು ಮರ್ಕಟಶಿಲೆಯೆಂಬುದಂ ತೊರ್ಪುದೆಂದಡದಂ ಕಂಡು ಪೋಗಿ

ಕಂ || ಕೋಡಗರೂಪದ ದಾನವ
ನೇಡಿಸುವನಿತಲ್ಲದೇವನೆಂದನಿತಱೊಳ
ಲ್ಲಾಡಿಪೆ ಮನದಿಂ ಬೇಗಂ
ಕ್ರೋಡಾಸುರನುಪಮೆಗೞಿದ ಮಕುಟಮನಿತ್ತಂ ೩೫

ವ || ಅಲ್ಲಿಯುಮಪೂರ್ವಲಾಭಮಂ ಕಂಡೆಲ್ಲಿಯುಂ ನಿನಗೆ ಬಿರ್ದಮಿಲ್ಲ ಬಾಯೆಂ[ದೆೞೆ]ದೊಯ್ದು ಪೊಂಬಣ್ಣದ ಮತ್ತಿಯಮರದ ಮೇಗಿರ್ದುದು ವಿಷಧರಮದಂ ಸಾಧಿಸಿದೊಡೆ ಫಲಸಿದ್ದಿಯೆನೆ ಕುಮಾರನಾ ಮರನನಡರ್ದೇಱಿದಾಗಳ್

ಕಂ || ಏಱಿದೊನೆ ಮರನನೆನ್ನಂ
ಮಿಱಿದನುಱದಡಸಿ ಪಿಡಿದು ಪೇರಿದನಧಟಂ
ತೋಱಿದನೊಡೆವ[೦]ಮೂಗಿ
ಟ್ಟೇಱಿದನೆಂದಳ್ಕಿ ಬಾಳನಹಿಪತಿಯಿತ್ತಂ ೩೬

ವ || ಅದಂ ಕೊಂಡು ಮರದಿಂದಮಿೞಿದುಬರೆ ಬೆಕ್ಕಸಂಬಟ್ಟು ಬಾಯಂಬಿಟ್ಟು ಮತ್ತೊಂದೆಡೆಗೊಯ್ದು ಪಿರಿದೊಂದು ನಾಗಭವನಮಂ ತೋಱಿದೊಡಮದಂ ನೋಡಿ

ಕಂ || ಆ ನಾಗಭವನಮಂ ಪೊ
ಕ್ಕೇನುಂ ಸಂಕಿಸದೆ ನಿಂದುದಕ್ಕಹಿರಾಜಂ
ಕಾಮವಿಮಾನಮುಮಂ ಕ
ಚ್ಛಮಹಾಖ್ಯಮಂ ಬೀಣೆಯುಮಂತದುಮಿತ್ತನತ್ಯುತ್ಸವದಿಂ(?) ೩೭

ವ || ಅಂತಿತ್ತೊಡವಂ ಕೊಂಡುಬಂದುದಕ್ಕೆ ಮೆಚ್ಚದೆಯುಂ ಮೆಚ್ಚಿ ಮತ್ತೊಂದೆಡೆಯೊಳತಿಶಯ ಲಾಭಮುಂಟೆಂದೊಯ್ವಶ್ವಶೈಳಮಂ ತೋರ್ಪುದುಂ

ಕಂ || ತುರಗಾಕಾರದ ಶೈಳಮ
ನಿರದಡರ್ದೇಱಿದೊಡೆ ಬೆಚ್ಚಿ ನಡುಕದಿನಾಗಳ್
ತುರಗಾಶ್ರಮನುಚ್ಚೈಶ್ರವ
ತುರಗೋಪಮನಿತ್ತುದೊಂದು ತುರಗಮನಿತ್ತಂ ೩೮

ವ || ಅಲ್ಲಿ ತುರಗಲಾಭಮವರ್ಗಾತುರ ಕಜ್ಜಮಂ ಬರಿಸೆ ಬೇಗಮೊಯ್ದು ಕರೀಂದ್ರ ಶೈಳಮೆಂಬುದೊಂದು ಪರ್ವತಮೆಂದೊಡೆ ಕುಮಾರಂ

ಕಂ || ಕರಿಗಿರಿಶಿಖರಕ್ಕಾಗಳ್
ಹರಿ ಕುಂಭಸ್ಥಳಕೆ ಲಂಘಿಪ ತೆಱ[ನದಾ]ದಂ
ತಿರಿ ಲಂಘಿಸೆ ಭಯದಿಂ ದಿ
ಕ್ಕರಿಗಿಭಕರಿಯಂ ಕರೀಂದ್ರ ದಾನವನಿತ್ತಂ ೩೯

ವ || ಆ ಕರೀಂದ್ರಲಾಭಕ್ಕೆ ವಿಸ್ಮಯಂಬಟ್ಟಂದಮೊಯೊಂದು ಕೊಳನಂ ಸುಟ್ಟಿತೋಱೆ ಬಂದು

ಕಂ || ತೊಟ್ಟನೆ ಕೊಳೆ ಪಾಯ್ದೊಡೆ ಬಾ
ಯ್ವಿಟ್ಟು ಜಲಾಸುರನಳುರ್ಕೆ ಕರಂ ಬಾ
ಯ್ವಿಟ್ಟು ನಿಲಲಣ್ಮಿದಾಗಳೆ
ಕೊಟ್ಟಂ ಜನವಿನುತ ಕಾಮಚಕ್ರಮನೊಂದಂ ೪೦