ವ || ಆ ಪಡೆಪುಮಂ ಕಂಡು ಬಿಗುರ್ತಂ ಕೂರ್ತಂತೊಂದೆಡೆಗೊಯ್ದು ಸ್ಫಟಿಕ ಶಿಲಾಗ್ರಮನೇಱಿದೊಡಪೂರ್ವಲಾಭಮೆನೆ

ಕಂ || ಸ್ಫಟಿಕಶಿಲಾಕೂಟಮನತಿ
ಚಟುಳತೆಯಿಂದಡರ್ದೊಡಾ ಗಜಾಸುರನಾಗಳ್
[ಘ]ಟಭೀಷಣೆ[ಯ ಬಿಸುಟು]ಸಂ
ಕಟದಿಂದಂ ಕಾಮಪಾಶಮಂ ತಂದಿತ್ತಂ ೪೧

ವ || ಅದಕ್ಕಮಚ್ಚರಿವಟ್ಟೊಯ್ದೊಂದು ವಿಷಮಪ್ರದೇಶಸ್ಥಿತ ವೃಷಭಾಕಾರದ ದಾನವನಂ ತೋರ್ಪುದುಂ

ಕಂ || ಅಸದೃಶಮಾಗಿಯೆ ಕೆಂಗೋ
ಲ್ಮಸಗಿದ ವೃಷಭಂಗೆ ಪೊಕ್ಕಡರಿಭಯದಿಂದಂ
ಬಸದಾಗಿ ಕಾಮಧೇನುವ
[ನೊಸೆದಿತ್ತನಶಂಕಿತಂಗೆ] ವೃಷಭಾಸು[ರನುಂ] ೪೨

ವ || ಅಂತಾ ದಾನವನಿತ್ತುದುಮನಾತನ ಪೆತ್ತುದುಮಂ ಕಂಡೊಡಗೊಂಡು ಪೋಗಿ ರಥಾವರ್ತಮೆಂಬುದೀ ಬೆಟ್ಟದ ಮೇಗೆ ಚೋದ್ಯಮುಂಟೆನೆ ಬೇಗಮವನಡರ್ದಾಗಳ್

ಕಂ || ಶಕಟಾಕಾರದಿ ಪರಿತರೆ
ಸಕಲುಷದೊಳೇಕಳಲ್ದು ಕೆಡೆದತಿಭಯದಿಂದಂ
ಶಕಟಾಸುರಪತಿ ಕೊಟ್ಟಂ
ಮಕರಧ್ವಜಸಹಿತಮಪ್ಪ ರಥಮಂ ನುತಮಂ ೪೩

ವ || ಕಾಣುತ್ತೆ ಬನ್ನಿಮಿನ್ನಾವುದುಮಸಾಧ್ಯಮಲ್ತೆಂ[ದು] ಬಳಾಹಕಗಿರಿ ಗೊಯ್ದಲ್ಲಿಯೊಂದು ಪುಲಿಯ ಬಿಲಮುಂಟಲ್ಲಿ ಪೊಕ್ಕಡೆ ಫಲಪ್ರಾಪ್ತಿಯಕ್ಕುಮೆಂದು ಗೆಂಟಱೊಳಿರ್ದು ಕುಮಾರನಾ ಬಿಲಮನೆಯ್ದಿದಾಗಳ್

ಕಂ || ಮಸಗಿ ಸರಭಸದಿ ಪುಲಿ ಗ
ರ್ಜಿಸುತಂ ತನ್ನಯ್ದು ಮಱಿಗಳುಂ ಬೆರಸಿ ಕರಂ
ಪರಿದ ಜವನಂತೆ ಮುಳಿಸಿಂ
ದಸದಳಮಪ್ಪಂತಗುರ್ವಿನೊಳ್ ಪಾಯ್ದಾಗಳ್ ೪೪

ಮ || ಚಲದಿಂದಾಂತೆಡಗಯ್ಯೊಳೊತ್ತಿ ಪಿಡಿದಂ ನುರ್ಗಪ್ಪಿನಂ ವ್ಯಾಘ್ರನಂ
ಬಲಗೈಯೊಳ್ ಮಱಿಯಯ್ದುಮಂ ಪಿಡಿದುಕೊಂಡೊತ್ತಿರ್ದನಿರ್ದಾಗಳಾ
ಪುಲಿಯುಂ ಭೀಕರರೂಪದಾ ಮಱಿಗಳುಂ ಬೆಂಬಿರ್ದು ಬೇಗಂ ಭಯಾ
ಕುಳದಿಂ ಕಬ್ಬಿನ ಬಿಲ್ಲುಮಯ್ದುವರಲಂಬಾಗಿರ್ದವೇಂ ಚೋದ್ಯಮೋ ೪೫

ವ || ಅಂತು ಬಿಲದೊಲ್ ಪುಲಿಯ ರೂಪಾಗಿರ್ದ ವಿದ್ಯಾದೇವತೆ ಸಾಧ್ಯಮಾದೊಡೆ ಕಬ್ಬಿನ ಬಿಲ್ಲುಮಯ್ದುವರಲಂಬುಮಂ ಪಿಡಿದುಬರ್ಪುದಂ ಕಂಡಣ್ಣಂಗಳ್ ವಿಸ್ಮಯಾಕುಳಿತರಾಗಿ ಬನ್ನಿಮಿನ್ನೊಂದಗೋಚರಸ್ಥಾನಮುಂಟೆಂದೊಯ್ದು ಜಯಂತಪರ್ವತದೊಳಿರ್ದಗಾಧಮಪ್ಪುದಱ ನಡುವಣ ವೈಜಯಂತಮೆಂಬ ವನಮಂ ತೋಱಿದಾಗಳ್ ಇದು ಪಾದಗಮನಕ್ಕಗೋಚರಮೆಂದ ಲಂಘ್ಯಮಾನಮೆಂಬ ವಿದ್ಯೆಯಿಂ ಲಂಘಿಸಿ ಪೋಗಿ ವನಮಂ ಪೊಕ್ಕು ಮುನ್ನಸಾಧ್ಯಮಾದ ವಿಜಯಶಂಖಮಂ ನೆನೆವುದುಂ ಕೆಯ್ಗೆವಂದೊಡದನೊತ್ತಿದೊಡಾ ಧ್ವನಿಗೆ ಬೆರ್ಚೆ ಬೆರ್ಚಿದೊಂಗೆ ಮಾಸನವಾಳಂ ಬೆರ್ಚಿಸಿಮೆಂದಾಱುಂ ಭೂತಂಗಳುಂ ಮುಳಿದು

ಕಂ || ಭೀಕರ ರಾಕ್ಷಸ ಭೇತಾ
ಳಾಕಾರದೊಳೆಸಗಿ ಮಸಗಿ ಗರ್ಜಿಸೆ ಕಂಡಿಂ
ತೇ[ಕ]ಲೆವಿರದೇಕೆ ಮಲೆವಿ
[ರೇ]ಕೆ ವಿಗುರ್ವಿಸುವಿರೇಕೆ ಗುರ್ವಿಸುತಿರ್ಪಿರ್ ೪೬

ಎಂದೊಡೆ ತೆಗಳೆಂದವುಮೆ
ಯ್ತಂದೊಡೆ ಕಂಡಾ ಕುಮಾರನೊಂದೊಂದಂ ಮುಳಿ
ದೊಂದೇ ಮೆಯ್ಯೊಳ್ ಕೆಡೆ[ದ
ತ್ತೆಂ] ದೊಡಱಿಯುಮೆಂ [ದಳಱಿಯೆ] ಪಳಱಿದವಾಗಳ್ ೪೭

ವ || ಅಂತು ಪೆರ್ಚಿ ಬಂದು ಬೆರ್ಚಿ ಪೋದ ಭೂತಂಗಳಂ ಕಂಡಂಜದಿರಿಮೆಂದವರ ನಾಯಕಿಯಪ್ಪ ಕಾಳರಾಕ್ಷಸಿಯ ಮೆಯ್ಯಂ ಪೆರ್ಚಿಸಿ ಕೋಪೋದ್ಧತೆಯಾಗಿ ಮಸಗಿ

ಮ || ನೆಲನಂ ಮುಟ್ಟಿದುದೊಂದು ದಾಡೆ ಪೆಱತೊಂದಾಕಾಶಮಂ ಮುಟ್ಟುತಿ
ರ್ಕೆಲನಂ ಕೈನಿಮಿರುತ್ತೆರೞ್ ದೆಸೆಯುಮಂ ಮುಟ್ಟಿರ್ದುಮುಗ್ರಾಕ್ಷಿ ನುಂ
ಗಲು ಬಿಟ್ಟಿರ್ದುವು ಪೆರ್ಚಿ ನಾಲಗೆ ಕರಂ ನೀಳ್ದತ್ತುರಂ ಪಾಸಿದಂ
ತೊಲೆದೆಯ್ತಂ[ದ]ಪುದೇಂ ವಿಜೃಂಭಣದ ಪಾಂಗತ್ಯುಗ್ರಮಾ ದೈತೆಯಾ ೪೮

ವ || ಅಂತದ್ಬುತಮಾಗೆ ಬಂದೀಯೆಡೆಯಂ ಪೊಕ್ಕೆನ್ನ ಕಾಪಿನ ಭೂತಂಗಳ ನೋಡಿಸಿ ನಿತ್ಯಂಕಿತನಾಗಿರ್ದನಿವನಕ್ಕುಮಾದಡಮೇನೊಮ್ಮೆ ನುಡಿಯಿಸಿ ಮನದ ಪೆಂಪಂ ನೋೞ್ಪೆನೆಂದಿಂತೆಂದಳ್

ಕಂ || ಪಾಱುವಡಂ ಪರಿವಡಮಣ
ವಾಱೆಂ ಪೋಗ[ಲ್ಕಮಾ] ವ ದೆಸೆ[ಯಿಲ್ಲ] ಳಿಪಿಂ
ತೋಱದಿರು ಜೋವೆಱ
ದಿರಾಂ ಮುಳಿಎತೆಮಪೂಸಲ್ನೆಱೆಯೆ (?) ೪೯

ವ || ಎನೆ ಕುಮಾರನೀಕೆ ಮುನಿದೊಡೆ ಮುನಿವೆಂ ನುಡಿವಡೆ ಮಱುಮಾತೀವೆ ನೆಂದಿಂತೆಂದಂ

ಕಂ || ವಸುಧೆಯ ನಭದೆಡೆಯುಮನಿ
ರ್ದೆಸೆಯುಮನೆೞೆಯಲ್ಕೆ ನಿಮಿರ್ದೆಯೆಂದಾಂ ಬಗೆದೆಂ
ಮಸಗಿ ನಿಮಿರ್ದೊಡಲಗುರ್ವಂ
ಜಿಸುಗುಂ ಬಂದಿವನನೆಂಬುದಂ ನೀಂ ಬಗೆದೋ ೫೦

ವ || ಎಂಬ ಭಾಷೆಯುಂ ತೆಗೞುಮಂ ಮನದ ಪೆಂಪುಮನಱಿದು ಮತ್ತೆಯುಂ ಮುಳಿದಾಲಿಯಂ ತಿರಿಪಿದಾಗಳ್ ಬಂಡಿಯ ಗಾಲಿಯ ತಿರಿಯದೊಡಂ ನಿನ್ನಾಲಿಯ ತಿರಿಯದೊಡಂ ನಿನ್ನ ನಚ್ಚುವ ಮರದ ಭಂಡಿಯಚ್ಚು ಮುಱಿಯದಿರದೆಂದೊಡವಕ್ಕಂ ಕನಿಸಿ ಮತ್ತೆ ನೀಮಿರಲ್ ಬಗೆದಾಗಳಿನ್ನಿರಲಾಗೆಂದು ಕಬ್ಬಿನ ಬಿಲ್ಲೊಳ[ಲ]ರಂಬಂ ತೊಟ್ಟು ತೆಗೆನೆಱೆದೆಚ್ಚೊಡಿನಿಸು ನಡುಕಮನಱಿದಯ್ದಂಬಿನೊಳಮೆಚ್ಚೊಡೆ ಬೞಲ್ವ ಕೆಯ್ತಮನಱಿದು ಕಬ್ಬಿಣ ಬಿಲ್ಲೊಳೆತ್ತಿಪೊಯ್ದಾಗಳ್ ಕಾಳರಾಕ್ಷಸಿ ತೊಟ್ಟನೆ

ಕಂ || ಮೂಱುಂ ಲೋಕದೊಳೀ ಕ್ರಿಯೆ
ತೋಱುವೊಡಂ ಪೆಱ[ತದಲ್ಲಿ ತೋಱಲ್ಕಕ್ಕುಂ]
ಮೂಱುಂ ಲೋಕಮುಮಲ್ಲದೆ
ಬೇಱುಳ್ಳಡಮದಱೊಳೆನ್ನರಿನ್ನ[ರು]ಮೊಳರೇ ೫೧

ಎ || ಎಂಬಂತಪ್ಪ ರೂಪುಂ ಜವ್ವನದಳೂರ್ಕೆಯುಂ ಗಾಡಿಯುಂ ನೆಲೆಯುಂ ಬಣ್ಣಮುಂ ತನಗಿಟ್ಟಳಮೊಪ್ಪೆ ನಾಣನೊಳಕೆಯ್ದು ಕನ್ನೆಯಾಗಿರ್ದಾಗಳೊದಱಿದಾಱುಂ ಭೂತಂಗಳುಂ ವಸಂತ ನಿದಾಘ ವರ್ಷ ಶರತ್ ಹೇಮಂತ ಶಿಶಿರಂಗಳೆಂಬಾಱುಂ [ಋ]ತುಗಳೆದೀ ದೈವರೂಪದಿಂ ಬಂದು ವಸಂತರಿತುವಿನ ರೂಪಿನತಂ ಕುಮಾರನಿದಿಱೊಳ್ ನಿಂದು ಕೇಳಿಕೆ ರತಿಯೆಂಬೊಳಾ ಕನ್ನೆಯನಿಂತಗೋಚರಮಪ್ಪೆಡೆಯಳ್ ಇಂತಪ್ಪ ಕಾಪಿನೊಳಿಂದತಪ್ಪ ರೌದ್ರರೂಪಿನೊಳಿರ್ದೊಡಾವನೊರ್ವನಳ್ಕದೆ ಸಾಧಿಸಿದೊಂಗೀಕೆ ಪೆಂಡತಿಯಕ್ಕುಮೆಂಬಾದೇಶಂ ಕಾರಣಮಾಗಿಲ್ಲಿ ಕಾಳರಾಕ್ಷಸಿ ನಡೆ ನಾಮುಂ ಭೂತಂಗಳಾಗಿ ಕಾದಿರ್ದೆವೆಮ್ಮುಮನೀಕೆಯುಮಂ ಕೈಕೊಳ್ಳೆಂದೊಡಂತೆಗೆಯ್ವೆಂ ಕೈಕೊಂಡೆನೆನ್ನ ಬರಿಸಿದಾಗಳ್ ಬನ್ನಿಮೆಂದು ತನ್ನ ಪಡೆದ ವಸ್ತುಗಳುಮನಾಕೆಯ ಪಕ್ಕದಿರಿಸಿ ಮಗುೞ್ದುಬಂದಣ್ಣಂಗಳೊಳ್ ಕೂಡಿದಾಗಳೆಲ್ಲಿ ಗೊಯ್ದೊಡಮಿತಂಗಸಾಧ್ಯಮೆಂಬುದಿಲ್ಲೆಂದು ಪೊ[ೞ]ಲ್ಗೊಡಗೊಂಡು ಪೋಗಿ ಪೊಕ್ಕೆಂದಿನಂತೆ ಸುಖದಿನಿರ್ದು

ಉ || ಬಾಗೆಯ ಪೂವಿನೊಳ್ ನಯದಿನಿಟ್ಟಡೆ ಪುಣ್ಯವಿಹೀನಕಾಲದಂ
ದಾಗಳೆ ಸಾಯೆ ಕಂಡುಮಮರೇಂದ್ರನೆ ಕೋಪದೊಳಿಟ್ಟ ವಜ್ರಮಾ
ಬಾಗೆಯ ಪೂವಿನಂದದೊಳೆ ಮುಟ್ಟುಗುಮುನ್ನತ ಪುಣ್ಯಮುಳ್ಳೊಡಿಂ
ತಾಗದುಮಲ್ಲಿಯುಂ ವಿಪುಳಪುಣ್ಯರನೇಂ ಗೆಲಲಾರ್ಗಮಕ್ಕುಮೇ ೫೨

ವ || ಅಂತು ಪುಣ್ಯೋದಯದೊಳ್ ಪ್ರದ್ಯುಮ್ನಕುಮಾರಂಗೆ ಸಕಳವಿದ್ಯಾಸಂಯೋಗಮುಂ ಜನಾನುರಾಗಮುಮಾಗಿ ರೂಪಿನ ಪೊಗರ್ತೆಯುಂ ಸಹಜದ ನೆಗರ್ತೆಯುಮಂ ಕೇಳ್ದು ಕಂಡ ದಂಡಮಾ ಗಂಡವೇಟಂಗೊಂಡರ್ ಪೆಂಡಿರಾತನ ಕಾಣ್ಬಲ್ಲಿ ಸುಳಿವುದುಂ ಕಾಣದಲ್ಲಿ ನಾಣದಲ್ಲಿ ನಾಣಳಿವುದುಮಾಗೆ ಕೆಲರಾತಂ ಮನಮಂ ನೋಯಿಸುವನೆಂದು ಮನುಮಥನೆಂದರ್ ಕೆಲರ್ ಮೆಚ್ಚಿಂಗೀತನೆ ದೇವನೆಂದು ಕಾಮದೇವನೆಂದರ್ ಕೆಲರ್ ಮದಮಂ ಪೆರ್ಚಿಸುವನೆಂದು ಮದನನೆಂಬರ್ ಕೆಲರಾತನಿಂ ಕಾಮದರ್ಪಮಪ್ಪುದಱಿಂ ಕಂದರ್ಪನೆಂಬರ್ ಕೆಲರಾತಂ ತಮ್ಮ ಮನದೊಳ್ ಪುಟ್ಟುವುದಱಿಂ ಮನಸಿಜನೆಂಬರ್ ಕೆಲರಾತನನಾಗಳುಂ ನೆನೆವುದಪ್ಪುದಱಿಂ ಸ್ಮರನೆಂಬರ್ ಕೆಲರಾತಂ ತಂತಮ್ಮ ಕಣ್ಣೊಳ್ ತೊೞಲ್ವನಾಗಿಯುಮಿದಿರೊಳ್ ಕಾಣದೊಡನಂಗನೆಂಬರ್ ಕೆಲರಾತಂ ತಮ್ಮ ನೊಂಬತ್ತನೆಯ ವೇಗಮನೆಯ್ದಿಸುವನೆಂದು ಮಾರನೆಂಬರ್ ಕೆಲರಾತನೆಲ್ಲರ ಮೆಯ್ಯೊಳಿಪ್ಪುದಱಿಂದಂಗಜನೆಂಬರ್ ಕೆಲರಾತಂ ಕಬ್ಬಿಣ ಬಿಲ್ಲುಮರಲಂಬುಮುಳ್ಳುದಱಿಂ ಕುಸುಮಶರನುಮಿಕ್ಷುಚಾಪನುಮೆಂದರ್ ಕೆಲರ್ ಮಕರಪತಾಕೆಯಿಂದಂ ಮಕರಧ್ವಜನೆಂದರ್ ಮತ್ತಮಿಂತೆನಿತಾನುಂ ಪೆಸರನಿಟ್ಟು ಬಾಯಂಬಿಟ್ಟು ಕರೆದು ಭ್ರಾಂತುಗೊಳ್ವುದುಮಂ ಕೂಡಲ್ಪಡೆಯದೆ ವಿರಹದೊಳ್ ಪೊರಳ್ವುದುಮನಾತನ ತಾಯ್ ಕನಕಮಾಲೆ ಕೇಳ್ದು ಕಂಡು

ಉ || ದಿಟ್ಟಿ ತೊಡಂಕೆ ರೂಪಿನ ಬೆಡಂಗಿನೊಳೊಪ್ಪುವ ರೂಪು ಚಿತ್ತದೊಳ್
ಪುಟ್ಟಿಸಿ ಸೋಲಮಂ ಕರಮೆ ಸೋಲ್ತ ಮನಂ ಕಡುರಾಗದಿಂದಲಂ
ಪಿಟ್ಟಳಮಪ್ಪ ಕೂಟಮನೆ ಚಿಂತಿಸಿ ಕೂಟದ ಚಿಂತೆ ನೋವುದಂ
ತೊಟ್ಟನೆ ಮಾಡೆ ನೋವು ಮದನಜ್ವರಮಂ ಪಡೆದತ್ತು ಕಾಂತೆಯೊಳ್ ೫೩

ಕಂ || ಆವಂಗೆ ಸೋಲ್ತಳಾತನೆ
ಪೂವಿನ ಸರದಿಂದಮೆಸುವೊನೆಂದೊಡೆ ಬೇಟ
ಕ್ಕಾವುದೊ ಸೆರಗಾವುದೊ ಬೆಱ
ಗಾವುದೊ ತಣ್ಪಾವುದಾಸೆಯಾವುದೊ ಪೆಱತೇಂ ೫೪

ಉ || ನೋಯಿಸಿ ಕುಂದದೆನ್ನೆರ್ದೆಯೊಳಂಗಜನಿರ್ದಪನೆನ್ನ ಚಿತ್ತಮಂ
ನೋಯಿಸೆ ಕಣ್ಗಳೊಳ್ ತೊೞಲುತಿರ್ದಪನಂಗಜನೈದುಮಂಬಿನೊಳ್
ನೋಯಿಸುತಿರ್ಪನುಂ ಬಗೆವೊಡಂಗಜನೋವಿದುವೇ ವಿಗುರ್ವಣೋ
ಪಾಯದಿನೆನ್ನೊಳಪ್ಪ ಪಗೆಯಿಂದವನೊರ್ವನೆ ಕಾಮರಾಜನೋ ೫೫

ಕಂ || ಎನ್ನೆರ್ದೆಯೊಳಿಪ್ಪನುಂ ತಾ
ನೆನ್ನೆರ್ದೆಯನೆ ಚಲದಿನೆಸುವನುಂ ತಾನೆಂತುಂ
ತನ್ನಂ ಬಂಚಿಸಿ ನನೆಯಂ
ಬೆನ್ನೆರ್ದೆಯನೆ ಕೊಳ್ವುವಿಂತು ಬಲ್ಲರುಮೊಳರೇ ೫೬

ವ || ಎಂದೆಂತಿನಿತಾನುಂ ತೆಱದಿಂ ಪಂಬಲಿಸಿ ಪಲುಂಬುತುಂ ತಾನಾತಂಗೆ ತಾಯೆಂಬುದಂ ಬಗೆದಳಿಲ್ಲ ಮಱೆಗೆ ತಾಯೆಂಬುದಂ ಬಗೆದಳ್ ಮೊಲೆಯೂಡಿದುದಂ ಬಗೆದಳಿಲ್ಲ ಮನಮಳ್ಳಾಡಿದುದನೆ ಬಗೆದಳ್ ಎತ್ತಿದುದುಂ ಬಗೆದಳಿಲ್ಲ ಮನಮೆತ್ತಿದುದನೆ ಬಗೆದಳ್ ಪಾಪಮಂ ಬಗೆದಳಿಲ್ಲ ಪರಿತಾಪಮನೆ ಬಗೆದಳ್ ಕುಲಮಂ ಬಗೆದಳಿಲ್ಲ ತನ್ನೊಂದೊಲವನೆ ಬಗೆದಳ್ ಮಗನೊಳಗಾಗದೆಂಬುದಂ ಬಗೆದಳಿಲ್ಲ ವಿರಹಂ ನೀಗದೆಂಬುದನೆ ಬಗೆದಳು ಮೊಳ್ಪಾವುದುಮಂ ಬಗೆಯದೆ ಕಾಂಚನಮಾಲೆ

ಕಂ || ಸ್ಮರಹತ ಪರಿತೋಷದೆ[ಯತಿ]
ಭರದಿಂದ[ಮವಳ]ೞಲುಣ್ಮಿ ಪೊ[ಣ್ಮಿರೆ ಮೇಣಾ]
ವಿರಹಜ್ವರ [ಮುಂ ಪೆರ್ಚಿರೆ]
ಮರಸಿಗೆ[ಯುಂ] ಪುಟ್ಟಿತೆಂಬುದಂ ಪ್ರಬಳಿಸಿದರ್ ೫೭

ವ || ಆರುಂ ದಾಹಜ್ವರಕ್ಕೆಂದು ಶೀತಳಕ್ರಿಯೆಯಂ ಮಾಡಿಯುಂ ಸೈರಿಸದೆ ನಂದನ ವನಮಂ ಪೊಕ್ಕೊಡಾತನಂ ಪಿತೃವನದಂತೆ ಭಯಮಂ ಮಾಡೆ ಬೆಚ್ಚಿ ಕೊಳನಂ ಪೊಕ್ಕಾಡಾ ಕೊಳಂ ಕೊಳ್ಳುಳದಂತೆ ಸಾವಂ ಮಾಡಿದೊಡಲ್ಲಿಂದಂ ಪೊಱಮಟ್ಟು ತಳಿರಂ ಪಾಸಿದೊಡಾ ತಱಗೆಲೆಯಂ ಪಾಸಿದಂತಾದುವು ಬೀಸುವ ಜಳವೆ ಕಾಮನೆ ಕೈವೀಸುವಂತಾದುವು ಪೂಸುವ ಚಂದನಂ ಪುಣ್ಣೊಳ್ ಪೂಸುವ ಸಾಸುವೆಯಂತಾಗೆ ತಳಿವಾಲಿನೀರ್ಗಳುಂ ಕಣ್ಣಾಲಿನೀರಂತೆ ಬಿಸುಪೇಱೆ ಬಿಸಿದಾಗೆ ಪರಿಚಾರಗಣಂ ರಾಕ್ಷ ಸಗಣದಂತೆಡೆ ಮಗುೞ್ದು ಬಂದು ತನ್ನ ಮಾಡದ ನೆಲೆಯೊಳ್ ಪೊರಳುತ್ತಿ[ರ್ದ]ವನೊಳಿಂತೆಂದು ಬಗೆಗುಂ

ಉ || ಆನೆರೆದಟ್ಟಿದಾಗಳಿದು ಪಿತ್ತವಿಕಾರದಿನಾದುದೆಂಗುಮೋ
ತಾನೆನಗಬ್ಬೆಯೆಂದು ಪುಸಿ ಶೌಚದೊಳಿನ್ನಣಮಗದೆಂಗುಮೋ
ಜೈನಮತಶ್ರುತಂಗೆ ಪರನಾರಿಯೊಲಾಗದು ಕೂಟಮೆಂಗುಮೋ
ಮಾನಿತಮಪ್ಪ ವಸ್ತುಗಳನಿತ್ತಡೆ ಮೋಹದಿನಕ್ಕುಮೆಂಗುಮೋ ೫೮

ವ || ಎಂದು ಬಗೆಬಗೆದು ಪಲುಂಬುತ್ತಿರ್ಪಿನಮಬ್ಬೆಗೆ ದಾಹಜ್ವರಮಾದುದೆಂಬುದಂ ಕಾಮದೇವಂ ಕೇಳ್ದಾರಯ್ಯಲೆಂದು ಬಂದಾಗಳ್ ಮುನ್ನ ನಡುಕಂ ಪೊಣ್ಮೆ ಬೆಮರುಣ್ಮೆ ಕಿಱಿದುಬೇಗದಿನೆಂತಾನುಂ ಬರೆಯಿತ್ತಬಾಯೆಂದು ಸಾರೆ ಕುಳ್ಳಿರಿಸಿ ತೋಱುಕೆಯ್ಯನೆಂದಾತನ ಕೆಯ್ಯಂ ತನ್ನೆರ್ದೆಯೊಳ್ ಸಾರ್ಚಿ ನಡುಕಮಂ ತೋಱಿ ಬೆಂಕೆಯಂ ನೋಡೆಂದು ಕೆಯ್ಯಂ ಮೊಲೆಯಮೇಗಿಟ್ಟು ಪಿಡಿದಿರ್ದು ಕೆಲದೊಳಿರ್ದವರಂ ಕೇಳದಿಂತೆಂಗುಂ

ಕಂ || ಇಂತೆನಗೊದವಿದುದಸು ಪೋ
ಪಂತಪ್ಪನಿತೊಂದವಸ್ಥೆ ಪೆಱತೊಂದಿದು ತಾ
ನೆಂತುಂ ಕಿಡದಂಗಜನಿಂ
ಭ್ರಾಂತಿಸದೆನ್ನೊಡನೆ ಕೂಡಿ ಬಾೞಿಸು ಪೆಱದೇಂ ೫೯

ವ || ಎನೆ ತೊಟ್ಟನೆ ಬೇಳ್ಕುತ್ತ ಬೆಟ್ಟನೆವೋಗಿ ತನ್ನ ಕೆಯ್ಯಂ ಬೇಗಮುಡಿಗಿಕೊಂಡು ಇದು ನಿಮಗೆನಿತು ಪೈತ್ತಿಕಜ್ವರಮಾದೊಡಮಿಂತೆನಲಕ್ಕುಮೆ

ಕಂ || ಎನೆ ಕನಕಮಾಲೆಯ ನುಡಿಗುಂ
ಮನಸಿಜ ಕೇಳ್ ಖದಿರವನದ ತಸ್ಕರಶಿಲೆ ತಾಯ್
ನಿನ[ಗಾನಲ್ಲೆಂ] ನಿನ್ನಂ
ಜನಪತಿ ಕಂಡೆನಗೆ ತಂದು ನಡಪೆಂದಿತ್ತಂ ೬೦

ಉ || ಇತ್ತಡೆ ನಿನ್ನನಾಂ ನಡಪಿದೆಂ ಮೊರೆಯಾಗದುದೆಲ್ಲಿವಂದುದೋ
ಚಿತ್ತಜ ನಿನ್ನನೊಲ್ದು ಮೊರೆಯಿಟ್ಟಪೆ ನೀನೆನಗಕ್ಕಟೆಂಬುದಾ
ಪತ್ತಿನೊಳಪ್ಪಡಂ ಫಲಮನುಣ್ಣದೆ ಸಾವರೆ ಪಂಚವಳ್ಳಿಯಂ
ಪಿತ್ತಿಲೊಳಿಟ್ಟರುಂ ಮರನನೆಟ್ಟರುಮೇಂ ಫಲಮುಂಬರಲ್ಲರೋ ೬೧

ಅಂತೇಕೆಂಬಿರ್ ನವಮಾ
ಸಾಂತಂಬರ ಪೊ[ತ್ತು] ಪೆತ್ತ ತಾಯ್ವಿರ್ಗಿನ್ನೆಂ
ದಿಂತಿನಿತು ಕಾಲಮೆಲ್ಲಂ
ಸಂತಸದಿಂ ನಡ[ಪೆ] ನಿಮ್ಮೊಳುೞಿದ[ರ್] ಸಮನೇ ೬೨

ಚಂ || ನಡಪಿದೆನರ್ತಿಯಿಂ ಫಲಮನುಂಬನಿತಾಗಲೆವೇೞ್ಕುಮೆಂಬಿರ
ಪ್ಪಡೆ ಬೆಸವೇೞಿಯಾಂತ ರಿಪುವಂ ಗೆಲೆ ಕಾ[ದು] ವೆನಂತುಮಲ್ಲದೀ
ಯೆಡೆಯೊಳಮೂಲ್ಯವಸ್ತುವೊಳವೆನ್ನಿರೆ ತಂದವನೀವೆನೆಲ್ಲಿಯಾ
ದೊಡಮೆನೆ ಗರ್ವಮಾದವರ್ಗೆ ಲೋಕದೊಳೇನರಿದೇನೊ ಗೋಚರಂ ೬೩

ವ || ಎಂಬುದೆಲ್ಲಮಂ ಕೇಳ್ದು ಬೆಚ್ಚನೆ ಸುಯ್ದು ಮನದೊಳಿಂತೆಂಗುಮಿವಂಗೆ ತಾಯೆಂಬತ್ತಂ ಪೋಗದೇಗೆಯ್ವೆಂ ಮೋಹಮಂ ತೋಱೆ ನಡೆವೆನೆಂದೆಂಗುಂ ನೀನೆನಗೆ ಬೆಸಕೆಯ್ದುದಂ ಕಂಡು ನಂಬುವುದಂತಪ್ಪಂದುಂ ಕೆಯ್ಕೊಳೆನ್ನನೊಳಕೊಂದು ವಿದ್ಯಾಧರ ಶ್ರೀಯನಾವಗಂ ಕೆಯ್ಕೊಂಡು ಸುಖಮಿಪ್ಪಂದುಂ ಬಗೆದುದನಲ್ಲದೀಗಳಿನಳಿಪನೆ ಬಗೆದೆನಲ್ಲೆನೆನೆ ಕಾಮಂ ವಿದ್ಯಾಲಾಭಮುಮರ್ಥಲಾಭಮುಮಿನಿಸು ದೋಷಂಬೆರಸಿಯಲ್ಲದಾಗವೆನ್ನ ಬಗೆಯೆ ಬಗೆಯಾಗಿ ವಿದ್ಯೆಯಂ ಕೊಳ್ವೆನೆಂದಿಂತೆಂದಂ

ಕಂ || ಉ[೦]ತುಂ ಬೆಸಕೆಯ್ವೆಂ ನಿಮ
ಗೆಂತು ಭರಂಗೆಯ್ಯೆ ಕೂರ್ಮೆಯುಂ ಕಜ್ಜಮುಮಂ
ಭ್ರಾಂತಿಸವೇಡೆನಲೀವುದು
[ಮಂ] ತೋಱಿದೊ[ಡೆಂ]ತು ದಾಂಟುವೆನೊ ಬೆಸಸಿಮದಂ ೬೪

ವ || ಎನ್ನ ನೇಹಕ್ಕಡ್ಡಂಬಂದಂ ತನ್ನ ಮೋಹಕ್ಕೆ ಮನಂದಂದನೆಂದು ನಂಬಿ ಪ್ರಜ್ಞಪ್ತಿವಿದ್ಯೆಯಂ ತ್ರಿಶುದ್ಧಿಯಿನಿತ್ತೆಂ ಸಂಜಯಂತಭಟ್ಟಾರರ್ ಮೋಕ್ಷವೋದಲ್ಲಿಯ ಸಿದ್ಧಕೂಟದ ಚೈತ್ಯಾಲಯದೊಳ್ ನೀಂ ಸಾಧಿಸಿಕೊಳ್ಳೆಂದು ಮಂತ್ರಪದಂಗಳಂ ಪೇೞ್ದೊಪ್ಪಿಸಿದೊಡೆಕೆಯ್ಕೊಂಡು ಪೊಱಮಟ್ಟು ಬಂದರ್ಚನಾಸಹಿತಂ ಪೋಗಿ ಸಿದ್ಧಕೂಟಮಂ ಬಲಗೊಂಡು ದೇವರಂ ಬಂದಿಸಿ ಮತ್ರವಿಧಿಯಿಂದಾರಾಧನೆಗೆಯ್ಯೆ ವಿದ್ಯೆ ಸಾಧ್ಯಮಾಗಿ ಬೆಸನೇನೆಂದೊಡದಂ ಪೂಜಿಸಿರ್ಪಿನಮಲ್ಲಿಗೆ

ಕಂ || ಯಮ ನಿಯಮ ಸ್ವಾಧ್ಯಾಯ
ಕ್ರಮಯುತರಹಿತತ ವಿಶ್ರುತ ವಿಪುಳೋತ್ತಮರ್ ಗು(?)
ಣಮಣಿಗಳುಂ ಗುಣಭೂಷಣ
ವಿಮಳಮತಿಗಳೆಂಬ ಚಾರಣ[ರ್] ಋಷಿ[ಯುಗಳರ್] ೬೫

ವ || ಇರ್ವರ್ವಂದೊಡವರಂ ಬಂದಿಸಿ ಮುಂದೆ ಕುಳ್ಳಿರ್ದು ಧರ್ಮಮಂ ಕೇಳ್ದಿಂ ಬೞಿಯಂ ವಿದ್ಯೆಯಂ ಕಾಳಸಂಬಂರಕುಲದ ಗಂಡರ್ಗೆ ಬೆಸಕೆಯ್ಯದ ಕಾರಣಮಂ ಬೆಸಗೊಂಡು ತಿಳಿದು ಭಟ್ಟಾರರು ಬಂದಿಸಿ ಮಗುೞ್ದು ಬಂದು ತನ್ನೆಂದಿನಿರ್ಪಂತೆ ಕಾಮದೇವನಿರೆ

ಕಂ || ವಿದ್ಯೆ [ಯುಮಂ] ಸಾಧಿಸಿ ಬಂ
ದಿರ್ದ[ನದಂ] ಕೇಳ್ದು ಕನಕಮಾಲೆ [ಯುಮಂತಿ
ರ್ದುದ]ನಂಬಿ[ಯೆ] ವಿದ್ಯೆಯನೊಸೆ
[ದಿರ್ದಿ]ತ್ತೆಂ ಕೊಂಡುಮಿಂತು ಪುಸಿವುದನಱಿಯೆಂ ೬೬

ವ || ಎನೆ ಕಾಮದೇವನಿಂತೆಂದಂ

ಕಂ || ಪುಸಿಯಲಣಮಾಗ ರಣದೊಳ್
ಕುಸಿಯಲುಮಣಮಾಗದಬ್ಬ [ನೀಂ] ಮುನ್ನೆಂದೆಂ
ಬೆಸಕೆಯ್ದೆನೆಂದೆನಿನ್ನುಂ
ಬೆಸಸಿರೆ ತಕ್ಕೊಂದು ಬೆಸನನರ್ಥಿಯೆ ಗೆಯ್ವೆಂ ೬೭

ವ || ಎಂಬದಂ ಕೇಳ್ದು ಮದನಾಗ್ನಿಯುಮೊಂದಾಗೆ ತಳ್ತುರಿದೊಡೆರ್ದು ಕುಳ್ಳಿರ್ದಿಂತೆಂದಳ್

ಕಂ || ತಕ್ಕನ ತೆಱದಿಂ ನೀನುಱ
ದುಕ್ಕಲಿಸಿದೆಯಕ್ಕುಮಾದೊಡಿ[ರದಿ]ನ್ನುಂ [ನೀಂ]
ಪೊಕ್ಕಿರ್ದಮರೇಂದ್ರನ ಮಱೆ
ವೊಕ್ಕಡಮಾಂ ಕೊಲಿಪೆನೆನ್ನ ಮುಳಿಸನೆ ಸಲಿಪೆಂ ೬೮

ವ || ಎಂತು ಬರ್ದುಂಕುವೆಯೆನೆ ಮನಸಿಜನಿಂತೆಂದಂ

ಕಂ || ನಿಮ್ಮ ಮಗನೆಂದು ಬರ್ದುಕುವೆ
ನುಮ್ಮಡಿಸೆ[ನ] ದೆಂತುಮಬ್ಬ ಕೊಂದಡೆ ಪಾಪಂ
ನಿಮ್ಮನೆ ಸಾರ್ಗುಂ ತಾಯ್ ಮುಳಿ
[ಸಿಮ್ಮ]ಗನಂ ಕೊಂದಳೆಂಬುದೆಲ್ಲಿ ಯುಮುಂಟೇ ೬೯

ವ || ಆವುದುಮಂ ನೀಮಱಿವಿರೆನಗೆ ಪಾಪಂ ಮೆಯ್ವೆತ್ತಡೊಳ್ಳಿತ್ತೆಂದೆರ್ದು ಪೋದಂ ಪೋದಾಗಳೆ ಕನಕಮಾಲೆ ತನ್ನ ಮೆಯ್ಯಂ ಕಿಡಿಸುವಂತೆ ಮೆಯ್ಯ[೦] ಕಿಡಿಸಿ ಕೃತಕಭಾವಮಂ ತನ್ನೊಳುಮೊಡಂಬಡಿಸಿ ಖಿನ್ನನಾಗಿರ್ದಳಿರ್ಪಿನಂ ಕಾಳಸಂಬಂರಂ ಬಂದಿಂತೇಕೆಯಿದೆಯೆನೆ ಶೋಕರಸಮಂ ಭಾವಿಸಿ ಮೆಯ್ಯನಿಕ್ಕಿ ಕಣ್ಣನೀರಂ ನೆಗಪಿ ನೊಂದ ಮೆಯ್ಯಂ ತೋಱಿ ಬಿಡದಿಂತುಮೊಳ[ಱು]ತ್ತಮಿಂತೆಂಗುಂ

ಕಂ || ಆರ ಮಗನೆಂದು [ಮ]ಱಿಯದೆ
ಧೀರಾ ನೀನೀಯೆ ಕೊಂಡು ನಡಪಿದೆನೆನ್ನಂ
ಕ್ರೂರಸುತವೇಷ ದುರ್ವಾ
ಚಾರಂ ಮೇಲ್ವಾಯ್ದನಿಂತಧೋಗತಿಗೊಯ್ದಂ ೭೦

ವ || ಎಂದು ಮತ್ತಮೆನಿತಾನುಮಿಟ್ಟಳಂಗಳುಮಂ ಪುಸಿ ಪೊಟ್ಟಣಂಗಳುಮಂ ನುಡಿಯೆ

ಕಂ || ಅಂಬರಚರಪತಿ ಬೇಗಂ
ನಂಬಿದನಂಗನೆಯ ನುಡಿಯನೆಂತಪ್ಪುವರುಂ
ನಂಬುವರಿವರಿಂ ಮದಮಂ
ತುಂಬುವರಿವು ಚೋದ್ಯವಲ್ಲವೆಂದಂ ಜಗದೊಳ್ ೭೧

ವ || ಪೆಂಡತಿಯ ಮಾತನಂತು ನಂಬಿ ಕಾಳಸಂಬರಂ ಮುಳಿದೀಗಳೆ ಕೊಲ್ವೆನೆಂದು ಪೊಱಮಟ್ಟಂತೆ ಬಂದು ಮಸಗಿ ತನ್ನಯ್ವದಿಂಬರುಮಂ ಪೇೞ್ದೊಡುಂತೆಯಾಡುವಂಗೆಱೆಯಪನಾದಂತೆ ಸನ್ನರ್ದರಾಗಿ ಕಾಮದೇವನಿರ್ದೆಡೆಗೆ ನಡುಗುತಂ ವಿದ್ಯುದ್ದಾಡನಿಂತು ಕೊಲಲಾಗಮುಪಾಯದಿಂ ಕೊಲ್ವಮೆಂದು ಪೊೞಲ ಪೊಱಗೊಂದಡವಿಗೊಯ್ದು ವಿದ್ಯೆಯಿಂದೊಂದು ಅಗಾ[ಧ]ಮಪ್ಪ ಕೂಪಮ್ಮ ಸಮೆದಲ್ಲಿ ಪೊಕ್ಕಡತಿಶಯ ವಸ್ತು ಸಮನಿಸುಗುಮೆನೆ ಕೃತಕಮೆಂದಱಿದು ಕಾಮದೇವಂ ತನ್ನಂದದೊಳೊಂದು ವಿದ್ಯೆಯನಲ್ಲಿ ಪುಗಿಸಿ ಬೇಗಮದೃಶ್ಯನಾಗಿ ನೋಡಿತ್ತಿರ್ದನವರೆಲ್ಲಮಿವನನೀಗಳೆ ಪೂೞ್ದು ಕೊಲ್ವಮೆಂದು

ಮ || ಮರನುಂ ಕಲ್ಲುಮನೊಟ್ಟಿದಂದು ಪಲವುಂ ಸೂೞೆಲ್ಲಮಾ ಕುಯ್ಯಲಂ
ಭರದಿಂ ಪೂೞ್ವಿನವೊಟ್ಟುತಿರ್ಪುದನನಂಗಂ ಕಂಡು ಪೋತಪ್ಪುದಾ
ದೊರೆಯಾಯ್ತಬ್ಬೆಯ ಚಿತ್ತವೃತ್ತಿಯೊಳಹಂ ವಿದ್ವೇಷಮಂ ನೆಟ್ಟ ನೀ
ದೊರೆಯಾಯ್ತೆನ್ನಯ ಸೋದರಂಗಳು ಕರಂ ಕೂರ್ತಂದಮೇಂ ಚೊದ್ಯಮೋ ೭೨

ವ || ಎನುತೆ ನಿಜರೂಪದೊಳ್ ಬಂದೊದಱಿ ಪೊಕ್ಕಿವರೆನ್ನನೆಂತು ಕೊಲ್ಪಡಮಾನಿವರಂ ಕೊಲ್ವೆನೆಂದನಿಬರುಮಂ ನಾಗಪಾಶದಿಂ ಪಿಡಿದುಡಿಯೆ ಕಟ್ಟಿಕ್ಕಿ ಪೋ ನಿಮ್ಮರಸಂಗೆ ಪೇೞೆಂದೊರ್ವನನಟ್ಟಿದೊಡವಂ

ಕಂ || ಪೊಡವಿಪನನೆಯ್ದಿ ಬೇಗಂ
ನುಡಿಗುಂ ನಿಮ್ಮೈವದಿಂಬರುಂ ಸುತರನಡು
ರ್ತೊಡನಡಸಿ ಪಿಡಿದು ದರ್ಪಂ
ಗಿಡೆ ಕೋಡಗಗಟ್ಟುಗಟ್ಟಿದಂ ಕುಸುಮಶರಂ ೭೩

ವ || ಎನೆ ಮತ್ತಂ ಮುಳಿದು ಸರ್ವಸನ್ನಣಂಗೆಯ್ದು ಚಾತುರ್ದಂತಬಲಂಬೆರಸು ಪಱೆಯಂ ಪೊಯಿಸಿ ಪೊಱಮಟ್ಟು ಬಂದಂದು ಕಾಮದೇವನಿರ್ದೆಡೆಯನೆಯ್ದಿದಾಗಳಾ ಪಡೆಗಿಮ್ಮಡಿಯಗಿ ಮಾಯಾ ಚಾತುರಂಗಬಲಮಂ ಪಡೆದಿದಿರೊಳೊಡ್ಡಿರ್ದುದಂ ಕಂಡು ಕಾಳಸಂಬರಂ ಕೆಯ್ವೀಸಿದೊನಂಗಜನುಂ ಬೆಸಸೆ ಮಾಯಾವಡೆ ಪಿರಿದು ಪೊತ್ತು ಕಾದಿದಲ್ಲಿ ತನ್ನ ನೊಂದು ಕೞಲ್ದು ಕೆಡೆವುದುದುಮನಿದಿರ ಮಾಯಾವಡೆ ಡೆಗೆಲೆಯಿಱಿವುದುಮಂ ಖೇಚರಪತಿ ಕಂಡು ವಿದ್ಯೆಗಳಂ ಬೆಸಸಿದೊಡರ್ಕೆನಗಂ ಪ್ರತಿವಿದ್ಯೆಗಳಂ ಬೆಸಸಿ ಭೇದಿಸಿ ಗೆಲ್ದಾಗಳ್ ಕಾಳಸಂಬರಂಗಾಕಂಠಂಬರ ಮೞಲೊಗೆಯೆ ಪೆಱಗಂ ನೋಡಿ ಕಾಯ್ಪಿನೊಳ್ ಸೈರಿಸದೆ ನೋಡಲ್ ಬಂದ ಕನಕಮಾಲೆಯಂ ಕಂಡು ಸಾರೆ ಕರೆದು ನಿನ್ನ ಪ್ರಜ್ಞಪ್ತಿವಿದ್ಯೆಯಂ

ಕಂ || ಬೆಸಸೆನೆ ಮೂದಲೆಯಾದೊಡೆ
ಪಿಸುಣೀ ತಲೆವಾಗುವಂತೆ ತಲೆಯಂ ಬಾಗಿ
ರ್ದ ಸದಾಚರಿತೆಯನಾ ಕಾ
ಳಸಂಬರಂ ಕ[೦]ಡು ಮುಳಿಸನೊಳಕೊಂಡು ಕರಂ ೭೪

ವ || ಮಸಗಿ ಮುನ್ನಮಿವನಂ ಕೊಂದಲ್ಲದೆ ನಿನಗೆ ತಕ್ಕುದಂ ಮಾಡೆನೆಂದು ರಥದಿಂ ನೆಲಕ್ಕೆವಾಯ್ದು ಬಾಳುಮತ್ತಪರಮುಮಂ ಕೊಂಡು ನಡೆವುದನಂಗಜಂ ಕಂಡು ಖಳ್ಗಹಸ್ತನಾಗಿ ನಡೆಯೆ ಗಗನದೊಳಿರ್ದು ನೋೞ್ಪ ನಾರದಂ ಕಂಡಿನ್ನಿರಲಾಗದೆಂದಿರ್ವರೆಡೆಗೆವಂದು ಕಾಳಸಂಬರನತ್ತ ನೋಡಿ ಮಾಣ್ ಮಾಣ್ ಎಂದಿಂತೆಂದಂ

ಕಂ || ಆಗದು ಮುಳಿಯಲ್ಕೆ ದಿಟಂ
ಬೇಗಂ ಸ್ತ್ರೀಜನದ ಮಾತಿನೊಳ್ ನಿನ್ನ ಮಗಂ
ಗಾಗದುದಂ ನೆಗೞ್ವಿನಿತಣ
ಮಾಗದು ನೀನಿಂತುಮೊಳ್ಳಿತಾರಯ್ ನೃಪತೀ ೭೫

ವ || ಎಂದಾತನನೊಳ್ಳಿತ್ತಾಱೆ ನುಡಿದು ತರಿಸಿ ಕಾಮದೇವನತ್ತ ಬಮದು ನಿಮ್ಮಯ್ಯನ ನೋವನಾಱಿಸುವುದಿಂತು ತಂದೆಯಂ ಪಟ್ಟಿದಿಂ ಪಾಱಿಸುವುದಾವುದು ಧರ್ಮಮೆಂದು ಕೆಯ್ಯಂ ಪಿಡಿದೊಡಗೊಂಡು ಬಂದಾಗಳಂಗಜನಿಂತೆಂದಂ

ಕಂ || ಪೆಱಱಾರ ಪೆಂಡಿರಾದೊಡ
ಮಱಿವುಳ್ಳಂಗೆಱಗಿ ನೋಡಲಾಗೆಂದೊಡೆ ತಾ
ಯ್ಗೆಱಗುವರೆಂಬುದುಮಂ ಕೇ
ಳ್ದಱಿದಿರೆ ಬೇಡರ್ಕಳ[ೞ]ಲಿಯುಂ ಪೊಲೆಯರೊಳಂ ೭೬

ವ || ಅದುವನೆನಲಾಗದೆನ್ನೆಡೆಯ ಮಾತನೆಮ್ಮಬ್ಬೆಯನೆ ಬೆಸಗೊಳ್ಳಿಮೆನೆ ಕಾಳಸಂಬರಂ ಮತ್ತೆ ಕನಕಮಾಲೆಯಂ ಕರೆದು ಪುಸಿಯದಿರಱಿದೊ[ಡು]ಕ್ಕೆವಮೇವುದೆನೆ

ಕಂ || ಏನಂ ಪೇೞ್ವೆನೊ ಪಾಪಮ
ನಾನೀತನನಿಂತೆ ಕೊಲಲು ಪಣ್ಣಿದೆನೞಲಿಂ
ದಾನೆ ಕೊಲೆಗೆಯ್ದಿದೆಂ ಪೆಱ
ದೇನೆನ್ನಂ ಕೊಲ್ಲದಂದು ತಪದೊಳ್ ನಿಲ್ವೆಂ ೭೭

ವ || ಎನೆ ಕಾಳಸಂಬರನಿದಪ್ಪುದೆ ಪೆಂಡತಿಯನಿದೆ ಕೊಲ್ವುದಂ ತಪಕ್ಕೆ ಪೋಗೆಂದೊಡಾಕೆ ಪೋದಡೆ ಕಟ್ಟಿದಯ್ವದಿಂಬರುಮಂ ಕಟ್ಟಂ ಬಿಡಿಸಿತಂದುಕೊಟ್ಟಂತು

ಉ || ತಾಯಳಿಪಿಂದಮಪ್ಪ ಪೞಿಯುಂ ಕೃತಕೋಕ್ತಿಗೆ ನಂಬಿ ಕೊಲ್ವಭಿ
ಪ್ರಾಯದಳುರ್ಕೆಯಿಂದಿಱಿವ ತಂದೆಯನಿಕ್ಕುವ ಪಾಪಮುಂ ಪರೀ
[ಕ್ಷಾಯತ] ಶುದ್ಧಿಯಿಂ ತೊಲಗಿಪೋದೊಡೆ ರಾಗಿಸಿ ಮನ್ಮಥಂ ಸುಖೋ
ಪಾಯದಿನಿರ್ದನೇ ಗುಣದ ಪೆಂಪಿನೊಳಕ್ಕುಮೆ ಪಾಪಬಂಧನಂ ೭೮

ಗದ್ಯ || ಇದರ್ಹತ್ಸರ್ವಜ್ಞ ಪಾದಪದ್ಮ ವಿರಾಜಿತೋತ್ತಮಾಂಗ ಶ್ರೀ ಬಂಧುವರ್ಮ ನಿರ್ಮಿತಮಪ್ಪ ಹರಿವಂಶಾಭ್ಯುದಯದೊಳ್ ಕಾಮದೇವನುತ್ಸವಂ

ಅಷ್ಟಮಾಶ್ವಾಸಂ