ಕಂ || ಏಂ ನೋಂಪಿ ನೋಂತಳೋ ಮು
ನ್ನೇನಂ ಸಲೆ [ದಾನ]ಮಿತ್ತಳೋ ಗೆಯ್ದ ತಪಂ
ತಾನೇನೋ ಜಿನಮಹಿಮೆಯ
ನೇನಂದದೊಳೀಕೆ ಭಕ್ತಿಯಂ ಮಾಡಿದಳೋ ೭೧

ವ || ಮತ್ತಂ ಕೆಲರಿಂತೆಂಬರ್‌

ಕಂ || ಅತಿಶಯಮಿ ಚೆಲ್ವಲ್ಲಿಯು
ಮತಿಶಯಮಿ ತೇಜಮಿ ವಿಳಾಸದ ಬರವಿಂ
ತತಿಶಯಮಾಗಿಯುಮೇನೀ
ಸತಿ ಮಾದಂಗಿತಿಯುಮೆಂಬುದೇಂ ವಿಸ್ಮಯಮೋ ೭೨

ಇಂತಪ್ಪ ವಿಭವದಂದಮು
ಮಿಂತಪ್ಪ ಕನಿಷ್ಟ ಜಾತಿಯೆಂಬುದಮಿದು ತಾ
ನೆಂತೊ ಪುರಾಕೃತಮೋ ಜ
ನ್ಮಾಂತರದುಚ್ಛಿಷ್ಟ ದಾನಫಲ ಸೂಚನೆಯೋ ೭೩

ವ || ಎಂದು ಬೀದಿವೀದಿಗಳೊಳೆಲ್ಲ[೦] ಚೋದ್ಯಮಾಗೆ ಬಂದು ವಿದ್ಯೆಗಳನುಮತದಿಂ ಕಾಮದೇವನ ಮನೆಯತ್ತ ಬರೆ ಕಂಡಾ ಮನೆಯ ಸೂಳೆಯೊರ್ವಳ್‌ ಪರಿತಂದು ತಮ್ಮರಸಿಯಪ್ಪ ರತಿಗಿಂತೆಂಗುಂ

ಕಂ || ಮೆಯ್ಯದು ದಿವ್ಯವಿಳಾಸಂ
ಕೆಯ್ಯದು ಪೊಸ ಬೀವು ಮಾಱುಗೊಳ್ಳಿಮೆನುತ್ತಂ
ತೊಯ್ಯನೆ ಬರೆ ಪೊೞಲೆಲ್ಲಂ
ಮೆಯ್ಯಱಿಯದೆ ನಿಂದು ನೋಡಿ ಬಂದಪಳಿತ್ತಲ್‌ ೭೪

ವ || ದೇವಿ ನೋಡಿರೆ ಚೋದ್ಯಮೇನೆಂದೊಡುದಧಿವೆರಸನಂಗನ ಪೆಂಡಿರೆಲ್ಲರುಮನೊಡಗೊಂಡು ರತಿ ಬಂದು ಬಾಗಿಲಲ್ಲಿ ನಿಂದು ನೋಡೆ ಮಾದೆಂಗಿತಿ ಸಾರವಂದು

ಕಂ || ಬೀವಂ ಮಾಱಿಪೆನೆಂದೊಡೆ
ಬೀವಿನ ಬೆಲೆವೇೞುಮೆಂದೊಡೆಂಗುಂ ಬೀವಿಂ
ಗೀವುದರಲಂಬನೆಂದ
ಳ್ಗಾ ವಧುವಿಂತೆಂದಳಿಂತು ಕೊಳಲಾಗದುವಂ ೭೫

ಅ[ಲರಂ]ಬಿನಾತನೆನ್ನಿಂ
ದಲರ್ಗಣೆ ನಡೆನೋಡಿದಾಗಳುಂ[ತಾಂ]ನೆಗೞ್ದ್ಯೆ
ದಲರಂ ಬೆನ್ನರ್ದೆಯೊಳ್‌ [ಮಿಗೆ]
ನೆಲಸುಗುಮೇಂ ಬೀವುಗೊಟ್ಟು ಕೊಳಲುಂ ಬಗೆದಾ ೭೬

ಎನೆ ಮಾದಂಗಿತಿಯೆಂಗುಂ
ವನಜಮುಖೀ ನಿಮಗವೆಂತು ಬಂದುವೊ ಬೆಸಸಿ
ನ್ನೆನಗೆನೆ ರತಿಯೆಂಗುಂ ಕೇಳ್‌
ಮನಮಂ ಕಾಮಂಗೆ ಕೊಟ್ಟೊಡವನೆಮಗಿತ್ತಂ ೭೭

ವ || ಅಂತು ಕೊಂಡೆವೆನೆ ಮಾದೆಂಗಿತಿಯೆಂಗುಂ ನೀಮಿಂತು ಕೊಂಡೊಡೆನಗೆಂತಾಗದು

ಉ || ಅಂ ಗಡಮೊಪ್ಪಿ [ಫುಲ್ಲ]ಶರನಂ ನಡೆನೋಡುವೆನಾಗಳೆನ್ನನಾ
ತಂ ಗಡಮೆಚ್ಚೊ [ಡಾನೆ]ಸುವೆ [ನ]ಯ್ದಲರಂಬುಗಳೋವೊ ಕರ್ಮಮಾ
ಪಾಂಗಿನ ಕಾಮನಯ್ದುಮಲರಂಬು[ಮನಾನದ]ನೊಲ್ಲೆನೆನ್ನ ಮಾ
ದೆಂಗನೆ ಕಾಮದೇವನೆನಗಾತನ ಕಣ್ಮಲರಂಬೆ ನಿಶ್ಚಯಂ ೭೮

ವ || ಎಂದು ಮಾತಿನೋಜೆಯಂ ಕೇಳ್ದುದಧಿಯಿಂತೆಂಗುಂ

ಕಂ || ಈ ತೇಜಮುಮಿ ರೂಪಮು
ಮಿ ತೆರಿದ ವಿಳಾಸದೊಳ್ಪುಮಿ ವಿಷಯಮುಮೇ
ಮಾತೋ ಕಿೞ್ಜಾತಿಯನೆ
ಮ್ಮಾತನ ಗೊಡ್ಡಂಗಳೆಂದು ನುಡಿವನ್ನೆವರಂ ೭೯

ವ || ರುಗ್ಮಿಣಿಮಹಾದೇವಿಯ ಸೂಳೆಯೊರ್ವಳ್‌ ನೋಡಿ ಪೋಗಿ ತನ್ನರಸಿಗಿಂತೆಂದಳ್‌

ಕಂ || ಮಾದೆಂಗಿತಿಯೆಂ ಕೊಟ್ಟಪೆ
ನಾದರದಿಂ ಬೀವನೆಂದು ಬಂದಂ ಪೊಳವಳೆ
ನಾದೊರೆಯೊಳೆಂದೊಡಿಂದ್ರನ
ಮಾದೇವಿಗಮತ್ತಲಂತೆ ಲೇಸಾಗಿರ್ಕುಂ ೮೦

ವ || ಆಕೆಯಂ ನಿಮ್ಮಡಿಗಳ ಸೊಸೆವಿರೆಲ್ಲಂ ಕರೆಯಲಟ್ಟಿ ಬೀವನೇತಕ್ಕೆ ಮಾಱುವೆಯೆಂದೊಡರಲಬಿಂಗೆ ಕೊಟ್ಟಪೆನೆದೊಡಂತೆ ಪಡೆಯಲಾಗೆಂದು ನುಡಿಯುತ್ತಿರ್ದಪಿರೆನೆ ಬೇಗಮಾಕೆಯಂ ಕರೆದು ಬಾಯೆಂದೊಡೆ ಪಱಿದೊಡಗೊಂಡು ಬರೆ ಬಂದು ನಿಂದಳಂ ಕಂಡು ಮಗಂ ನುಡಿದು ಪೋದಂದದೊಳಮಾಕೆಯ ರೂಪಿನೊಳಂ ಸ್ನೇಹಮಿನಿಸು ಸಂದೇಹಮಾಗೆ ನೀನಾರ್ಗೆಂದೊಡಾಕೆಯಿಂತೆಂದಳ್‌

ಕಂ || ಬೀವಂ ಮಾಱಲ್‌ ಬಂದಳ
ನೇವೆಸಗೊಂಡಪ್ಪಿರಬ್ಬ ಮಾದೆಂಗಿತಿಯೆಂ
ದೇವೀ ಪೆಱತೇನೆನೆ ಸರ
ಭಾವದೊಳೆನಗೇಕೆ ಕರೆಯಲಾಗದೆ ಮಗಳೇ ೮೧

ವ || ಎಂದು ಮನ್ಯುಕೆತ್ತು ಭರಂಗೆಯ್ದು ಬೆಸಗೊಂಡೊಡೇಕೆ ಭರಂಗೆಯ್ದಪ್ಪಿರೆನಗೀ ಭವಮೆನ್ನ ತಂದ ಮಾದೆಂಗನೊಳೆ ಪೊಯ್ದೆಂದೊಡದುವೇ [ಡಮಂ]ಜದೆ ಪೇೞೆಂದೊಡಿಂತೆಂದಳ್‌

ಕಂ || ಅತಿನುತ ಕೂಂಡಿತನಪುರಕಧಿ
ಪತಿ ರುಗ್ಮಿಣನೆಂಬೊನಾ ನರೇಂದ್ರಂಗಂ ಶ್ರೀ
ಮತಿಗಂ ಪುಟ್ಟಿದೆನಾನ
ಪ್ರತಿಮಗುಣೇ ಪೆಸರೊಳಂ ವಿದರ್ಭೆಯೆನೆಂಬೆಂ ೮೨

ವ || ಎನ್ನನತಿಶಯರೂಪಂ ಯವ್ವನಾನ್ವಿತೆಯನೊರ್ವಂ ಮತ್ತೊರ್ಬನನೊಡಗೊಂಡು ಬಂದೆಮ್ಮಯ್ಯನಲ್ಲಿಗೆ ವಂದು ಮಾದೆಂಗರೆನಗೆ ನಿಮ್ಮ ಕೂಸನೀಯಿಮೆಂದೊಡೆಮ್ಮಯ್ಯಂ ನಕ್ಕು ತೆಗೞ್ದು ಕಳೆದೊಡೆನ್ನಲ್ಲಿಗುಪಾಯದೊಳ್ ಬಂದೆನ್ನನೆತ್ತಿಕೊಂಡಾಕಾಶಕ್ಕೊ[ಯ್ದು] ವಿಮಾನದೊಳಗಿಟ್ಟು ತಂದು ಬನಮಂ ಪೊಕ್ಕಿರ್ದು ನೀನೀ ಪೊೞಲೊಳ್‌ ಜೀವಂ ಮಾಱೆಂದೊಡಂತೆಗೆಯ್ವೆನೆಂದು ಬಂದೆನೆನೆ

ಕಂ || ತೊಟ್ಟನೆ ಕೊರಲ್ಗೆವಾಯ್ದೊಂ
ದಿಟ್ಟಳಮಮರ್ದಪ್ಪಿಕೊಂಡು ಚಿಂತಿಸಿ ಬಾಯಂ
ಬಿಟ್ಟರ್‌ ತಮ್ಮನ [ನೆನಲಾಂ]
ಮುಟ್ಟಿಂದುಕ್ಕವಿಸಿ ತಂದನೇವೆನೊ ಮಗಳೇ ೮೩

ವ || ಮುನ್ನವಾನೆಮ್ಮಯ್ಯಂ ಮೊದಲಾಗುರ್ಳಳವರೆಲ್ಲರುಮಂ ಸಾವಂತು ಮಾಡಿ ಬಂದೆಂ ನೀನೀಗಳೆಮ್ಮಣ್ಣನೊರ್ವನುಮಂ ನೋವಂತು ಮಾಡಿ ಬಂದೆಯಿರ್ವರುಂ ತವರ್ಮನೆಯಂ ಸಂತೋಷಂಬಡಿಸಿ ಬಂದ ಮೋಹಿತಮನೆ ಗೆಯ್ಯಲಕ್ಕುಮೆಂದು ಸಂತೈಸಿರ್ದಾಗಳ್‌ ವಿಳಾಸಿನೀರೂಪದಿನೊಡವಂದ ವಿದ್ಯೆಗಳಗಲ್ದು ಪೋಗಿ ಕಾಮದೇವಂಗಱೆಪಿದೊಡಿರ್ವರುಂ ಬಂದಾಗಳಬ್ಬೆಯಂ ಕಂಡಾಗಳೇಂ ತಂದುಮೇನೆಮ್ಮಣ್ಣನುಮೆಮ್ಮತ್ತಿಗೆಯುಮ[೦] ಬೇಗಂ ಬರಿಸೆನೆ ಕಾಮಂ ನಾರದನಂ ಬರಿಸಿ ಕಾಮವಿಮಾನಮಂ ಕೊಟ್ಟೆಮ್ಮ ಮಾವನುಮನತ್ತೆಯುಮನೊಡಗೊಂಡು ಬನ್ನಿಮೆನೆ ಮನೋವೇಗದಿಂ ಪೋಗಿ ಕೂಂಡಿನಿಪುರಮಂ ಪೊಕ್ಕಾಗಳ್‌ ಪರಿವಾರ ಸಹಿತಂ ರುಗ್ಮಿಣನುಂ ಶ್ರೀಮತಿಯುಂ ದೆಸೆಗಳಂ ನೋಡಿ ವಿಪ್ರಳಾಪದಿಂ

ಕಂ || ಆರನಗಲ್ಚಿದೆನೋ ಮು
ನ್ನಾರಂ ಮಱುಗಿಸಿದೆನೋ ವಿಧಾತ್ರಾ ಪೇೞೆಂ
ದೋರಂತಿರ್ವರುಮೊದವಿದ
ಕಾರುಣ್ಯಸ್ವರದೆ ಪುಯ್ಯಲಿಡುತಿರ್ಪಾಗಳ್‌ ೮೪

ವ || ನಾರದನೆಯ್ದಿ ನೀವೇಕುಬ್ಬೆಗಂಬಡುವಿರ್‌ ನಾರಾಯಣಂಗಂ ರುಗ್ಮಿಣಿಗಂ ಪುಟ್ಟಿದ ಕಾಮದೇವಂ ಮುನ್ನ ಬೇಡಿಯಟ್ಟಿದೊಡೆ ತಮಗೀವುದಂ ಮಾದೆಗಂಗಪ್ಪಡ ಮಿವೆನೆಂದುದಕ್ಕಾತನೞಲ್ದು ಮಾದೆಂಗನೆನೆಂದುಪಾಯದಿನೊಯ್ದನದಕ್ಕೆ ನಾರಾಯಣನುಂ ತನ್ನ ಕಾಲಂ ಪಿಡಿದೆನೆಂದಟ್ಟಿದನೆಂದೆ ತಾನುಮಂ ನುಡದಾಱಿಸಿ ಬನ್ನಿಮೆಂದೊಡಗೊಡು ಬಂದು ಪೊಱವೊೞಲುದ್ಯಾನವನದೊಳಿರಿಸಿ ನಾರದಂ ಪೋಗಿ ನಾರಾಯಣಗಂ ರುಗ್ಮಿಣಿಮಹಾದೇವಿಗಂ ರುಗ್ಮಿಣನ ಬರವನಱಿಪಿದೊಡವರ್‌ ಪೊೞಲನಷ್ಟಶೋಭೆಗೆಯ್ಸಿ ಮಹೋತ್ಸಾಹದಿಂ ವಿಧರ್ಬೆಯನೊಡಗೊಂಡಿದಿರಂಪೋಗಿ ಕೂಸಂ ಮುಂದಿಟ್ಟುಕೊಂಡು ಸಂತೋಷಮಾಗೆ ನುಡಿದು ರುಗ್ಮಿಣನುಮಂ ಶ್ರೀಮತಿಯುಮಂ ವಿದರ್ಭೆಯುಮಂ ವಿದರ್ಭೆಯ ಮುಂದುಗೊಂಡು ನಾರಾಯಣನುಂ ರುಗ್ಮಿಣಿಮಹಾದೇವಿಯುಂ ಪೊೞಲಂ ಪೊಕ್ಕದುವೆ ಮುಹೂರ್ತಮೆಂದು ಕಾಮದೇವನುಮಂ ವಿದರ್ಭೆಯುಮಂ ಪಸೆಯೊಳಿರಿಸಿ ರುಗ್ಮಿಣಂ ಬಂದು ವಸ್ತುವಾಹನಂಗಳಂ ಪೇೞ್ದು ಕೈನೀರೆಱೆದು ಕೊಟ್ಟನಂತು

ಮ || ಪಿರಿದುಂ ನೋವಿನೊಳಾದ ವೈರಮೆರ್ದೆಯಂ ಗೆಂಟಾಗೆ ಕಂಡುತ್ಸವಾ
[ಕ]ರಮಂ ಸೋದರಮಂ ನಿಜಾತ್ಮಜೆಯುಮಂ ಕಂಡರ್ಕಱಿಂಕೂರ್ಮೆಗಳ್‌
ದೊರೆಕೊಂಡಲ್ಲಿಯ ಕೂಟದೊಂದು ಸುಕೃತಾತ್ಯಂತೋದಯಂ ಶ್ರೀಪೊದ
ೞ್ದುರೆ ಶೋಭಿಪ್ಪಭಿನೂತಶೋಭನಮನರ್‌ ವ್ಯಾವರ್ಣಿಸಲ್‌ ಬಲ್ಲರಾರ್‌ ೮೫

ಉ || ಮುಂ ಪಿರಿದಪ್ಪ ನೋವಡಸಿದಣ್ಣನ ಕೂಸನುಪಾಯದಿಂದೆ ತಂ
ದುಂ ಪೞಿಯಾಗದಣ್ಣ ನೊಸೆದಿತ್ತೊಡೆ ರುಗ್ಮಿಣಿದೇವಿ ಮೆಚ್ಚಿ ತಾ
ನುಂ ಪತಿಯುಂ ಮಹಾ [ವಿಭವ]ತೀಕರಮೊಪ್ಪಿರೆ ಮಾಡೆ ಕಾಮದೇ
ವಂ ಪಸೆಯೊಳ್‌ ಸುರೇಂದ್ರ ನವದಂಪತಿಯಿರ್ದವೊಲಿರ್ದನನ್ನೆಗಂ ೮೬

ತ್ರಿವಿದಿ ||
ಸಿರಿಯೊಡಗೂಡಿರ್ದ ಹರಿವಂಶದವರ್ಗೆಲ್ಲಂ
ಪಿರಿಯರ್‌ ಸಮುದ್ರವಿಜಯರ ಮಾದೇವಿ
ನಿರುಪಮರೂಪೆ ಶಿವದೇವಿ ೮೭

ಭೂಮಿಯೊಳ್‌ ಮಿ[ಕ್ಕ]ಳಾ ಭಾಮೆಯಾ ಗರ್ಭದೊಳ್‌
ನೇಮಿಯೆಂಬಮಳ ಜಿನನಾಥ ತ್ರಿಭುವನ
ಸ್ವಾಮಿ ನೆಲಸಲ್ಕೆ ಬರೆ ಮುನ್ನಂ ೮೮

ಭಾಸುರದೆ ದೇವೇಂದ್ರಗಾಸನಕಂಪಮಾ
ದಾ ಸಮಯದೊಳಗೆಮ್ಮವಧಿಯಿಂ
ದಾ ಸುರಧೀಶನಱಿಯುತ್ತಂ ೮೯

ಸನ್ನುತ ಗರ್ಭಮಪ್ಪನ್ನೆಗಂ ಸಾಧಿಸಲ್‌
ತನ್ನ ದೇವಿಯರನೊಸೆದಟ್ಟಿ ಸಾಧಿಸಿ
…… ಕೆಲವು ದಿವಸದಿಂ ೯೦

ಸುಂದರಿ ನಾಲ್ಕುನೀರ್ಮಿಂದು ಬೆಳ್ವಸದನ
ದಂದಮತ್ಯಂತ[೦] ಸೊಗಯಿಸೆ ತಾಂ ಸೂೞ್ಗೆ
ವಂದದೊಱಗಿ ಕನಸಿನೊಳ್‌ ೯೧

ಸ[ರಿ]ತಪ್ಪ ಮದವಿಂಗೆ ನೆರೆದ ಬಂದಳಿಗ[ಳು]
ನಿಱಿವಿಡಿದಂತೆ ಸೊಗಯಿಸೆ ನಿಂದಿಂದ್ರ
ಕ[ರಿ]ಯ ಭೂಪೇಂದ್ರಸತಿ ಕಂಡಳ್‌ ೯೨

ಕೆಲೆವುದಂ ದೆಸೆಗೆ ಮಾರ್ಮಲೆವುದಂ ಪೆಱವ ಬಂ
ದಲೆವುದಂ ಧವಳ ವೃಷಭಮಂ ವಿಕಸಿತೋ
ತ್ಪಳದಳ ನಯನಯುಗೆ ಕಂಡಳ್‌ ೯೩

ಗಿರಿಯಿಂದ ಪೆಱಗೊಂದು ಗಿರಿಗೆ ಲಂಘಿಸಿ ನಿಂದು
ಕರಿಯ ಪೆರ್ಮುಗಿಲ ಕರಿಗೆತ್ತು ಮುಳಿವ ಕೇ
ಸರಿಯ………………..ಗೆ ಕಂಡಳ್‌ ೯೪

ಕರಿವರಂ ಮಿಸಿಸೆ ತಾವರೆಯವೊಲೊಸೆದಿರ್ದು
ಸಿರಿಯಮಿಯಂ ಕಂಡಳು ಗುಣರತ್ನಭರ ನಿ
ರ್ಭ[ರ ಸ್ಮರ]ಹರನ ಬರವಿನಲೆ ೯೫

ಆಮೋದ ಪರಿಮಳ ವ್ಯಾಮೋಹ ಭೃಂಗಾಭಿ
[ರಾಮಕಂ ಕರಿಯೆರಡುಮ]ನುತ್ಕಟ ಮದ
ಸಾಮಜಸದೃಶಗತಿ ಕಂಡಳ್‌ ೯೬

ತೊಳಪುದಂ ಲೋಕಕ್ಕೆ ಬೆಳಪುದಂ ತಂಪಿನ
ಗ್ಗಳಿಕೆಯಂ ಮೆಱೆದು ಸೊಗಯಿಸೆ ನೆಱೆದ ತಿಂ
ಗಳನಂಬು[ಜ]ಮುಖಿ ಕಂಡಳ್‌ ೯೭

ಕರೆಯ ಪಕ್ಕಿಗಳೆಲ್ಲ ಮೊರೆಯೆ ತುಂಬಿಗಳೆಲ್ಲ
ಪರೆಯೆ ಮೆಯ್ಗರೆಯೆ ಖಳರೆಲ್ಲಮೊಗೆವ ಭಾ
ಸ್ಕರನ[ನಂಭೋಜ]ಮುಖಿ ಕಂಡಳ್‌ ೯೮

ಪೊಳೆಪೊಳೆದು [ರೋರೋ]ರ್ಮಿಳಿ[ರ್ದು]ಬಂದೊ [ಡನೊಡ]
ನೆಳಸಿ ಸೋಂಕಿರ್ದ ಪೊಳರ್ಮೀನನುತ್ಪಳ
ದಳ ನಿಭನಯನಯುಗೆ ಕಂಡಳ್‌ ೯೯

ಅಂಭಃಪೂರಣಂಗಳಂ ಶುಂಭದತ್ತಮ ಶಾತ
ಕುಂಭದ ಕುಂಭಯುಗಳಮನನುಪಮಿ
[ತಾಂಭೋಜ] ಸದೃಶಮುಖಿ ಕಂಡಳ್‌ ೧೦೦

ಸರಸಿಜದೋಳಿಯಂ ಮೊರೆವ ಭೃಂಗಾಳಿಯಂ
ಕರಮೆ ಚೆಲ್ವಾಗೆ ಸೊಗಯಿಪ್ಪ ಕೊಳನಂ ತಾಂ
ಸರಸಿಜ ಸದೃಶಮುಖಿ ಕಂಡಳ್‌ ೧೦೧

ಮಕರಾದಿ ಜಲಪ್ರಕರದಿಂ ವಿಪುಳೋರ್ಮಿ
ನಿಕರ[ಲ್ಹಾರ]ರಮಣೀಯ ಜಳಧಿಯ
ನಕಳಂಕ ಚಂದ್ರಮುಖಿ ಕಂಡಳ್‌ ೧೦೨

ಅಮಿತರತ್ನಂಗ[ಳಿಂ] ಸಮೆ[ದ] ಸಿಂಗಂಗಳಂ
ಕ್ರಮದೆ ಪೋಲ್ತಿರ್ದೊಡೆಸೆದಿರ್ದ ಸಿಂಹವಿಷ್ಟ
ರಮನಭಿನೂತಗಣ್ಣೆ ಕಂಡಳ್‌ ೧೦೩

ಹಾಟಕ ಮಣಿಮಯ ಕೂಟದೆ ಸೊಗಯಿಸು
ವಾಟದ ಸುರರ ಭವನಮಂ ವಿಕಸಿತ
ಪಾಟಳ ಗಂಧಯುತೆ ಕಂಡಳ್‌ ೧೦೪

ಮಣಿಗಳ ರಾಗದಿಂ ಫಣಿಗಳ ಭೋಗದಿಂ
ದೆಣೆಯಿಲ್ಲದುರಗಭವನಮಂ ನೆಗೞ್ದ ಧಾ
ರಿಣಿಗಧಿಪತಿಯ ಸತಿ ಕಂಡಳ್‌ ೧೦೫

ತೊಳ[ಪ]ರಶ್ಮಿಗಳ್‌ ಬಳೆದಿಂದ್ರವನಮನ
ಗ್ಗಳಿಕೆಯಂ ಮಿಗುತಲಿರೆ ರತ್ನರಾಶಿಯಂ
ಜಳರುಹನೇತ್ರಮುಖಿ ಕಂಡಳ್‌ ೧೦೬

ಪೊಗೆಯಿಲ್ಲದುರಿದು ತಳ್ತೊಗೆದು ನೀಳ್ದೊಂದೊಂದ
ಮಿಗುವಂತೆ ತೋರ್ಪ ದಹನಮಂ ನೋಡಿದಳ್‌
ಮೃಗಶಿಶುನಯನೆ ನಯದಿಂದಂ ೧೦೭

ಪಂಚಮಾ ಶಬ್ದದಿಂದಂ ಬೇಗಮೆಚ್ಚತ್ತು
ಮಂಚದಿನೆರ್ದು ಬೆಳಗಾಗಿ ಕೆಯ್ಗೆಯ್ದು
ಕಾಂಚನಕುಂಭಕುಚೆ ಕಂಡಳ್‌ ೧೦೮

ಜನಪತಿಯೊಡನಿರ್ದು ವನಜಾಸ್ಯೆ ಪರಿನಾಱು
ಕನಸುಮನಱಿಪೆ ನರನಾಥಂ ಕೇಳುತ್ತೆ
ಕನಸಿನ ಫಲಮಂ ಬೆಸಸುಗುಂ ೧೦೯

ಭುವನತ್ರಯೇಶನಾಗುವನೊರ್ವನಾತ್ಮಜಂ
ದಿವಿಜೇಂದ್ರಗತಿಯಿನಿೞಿತಂದು ನಿನಗೆ ಪು
ಟ್ಟುವನೆಂದೊಡೊಸೆದು ಸುಖಮಿರ್ದಳ್‌ ೧೧೦

ದೇವರ ದೇವಂಗೆ ದೇವಿಯಪ್ಪಾ ಶಿವ
ದೇವಿಯ ಬಸಿಱೊಳ್‌ ನೆಲಸಿದನೆಂಬುದಂ
ದೇವರ್ಕಳೆಲ್ಲಮಱಿಯುತ್ತೆ ೧೧೧

ನೆರೆದುಬಂದೆಲ್ಲ ಮಾದರದಿಂದಂ ಗರ್ಭಾವ
ತರಣದೊಳೊಪ್ಪುವೊಸಗೆಯಂ ಮಾಡೆ ತ
ತ್ಪುರಮಿಂದ್ರಪುರದ ತೆಱನಾಯ್ತು ೧೧೨

ವ || ಅಂತು ಗರ್ಭಾವತರಣದೊಸಗೆಯನಿಂದ್ರಾದಿಗಳ್‌ ಮಾಡಿ ಪೋದಿಂಬೞಿಯಂ ಶಿವದೇವಿಗೆ ಗರ್ಭಂ ಬಳೆದು ನವಮಾಸಂ ನೆಱೆದು ವೈಶಾಖ ಶುದ್ಧ ದ್ವಾದಶಿಯಂದರಿಷ್ಟನೇಮಿ ದಿವಾಕರನುದಯಂಗೆಯ್ದ ನಾಗಳ್‌ ದೆಸೆಗಳ್‌ ಪ್ರಸನ್ನಮಾದವು ತರುಗುಲ್ಮಲತಾದಿಗಳುಮಂಕುರಿತ ಪಲ್ಲವಿತ ಕುಸುಮಿತ ಫಲಿತ ಭರಿತಂಗಳಾದವು ಮೃದು ಸುಗಂಧಮಾರುತನೆಸಗಿತ್ತಾ ಸಕಳ ಜನಮನೋರಾಗ[ಮೊ]ರ್ಮೊದಲಾಯ್ತಾಗಳಿಂದ್ರಂಗಾಸನ ಕಂಪಮಾದೊಡವಧಿಜ್ಞಾನ ದಿನರಿಷ್ಟನೇಮಿ ಸರ್ವಜ್ಞನುದಯವನಱಿದತ್ತ ಲೇೞಡಿಯಂ ನಡೆದು ಸಾಷ್ಟಾಂಗಪ್ರಣತನಾಗಿ ಜನ್ಮಾಭಿಷೇ …..ವನಿಕಾಯಂ ತಮಗೆ ತಾಮೆ ಸನ್ನೆಗೆಯ್ವಂತೆ ಘಂಟಾರವದಿಂ ಕಲ್ಪವಾಗಿಹ ದೇವರೆಲ್ಲಮಱಿದು ಪರವಾರಸಹಿತಂ ಬಂದರ್‌ ಸಿಂಹನಾದಮಂ ಕೇಳ್ದು ಜ್ಯೋತಿರ್ಲೋಕದ ದೇವಸಮಿತಿ ಬಂದತ್ತು ಶಂಖಧ್ವನಿಯಿಂ ಭವನವಾಸಿಗ ದೇವಸಮೂಹಂ ಬಂದತ್ತು ಕಹಳಾರವದಿಂ ವಾನವ್ಯಂತರ ದೇವರ್ವಂದರ್‌ ಚತುರ್ನಿಕಾಯಾಮರಸಮೂಹಮುಂ ಮೂವತ್ತಿರ್ವರುಮಿಂದ್ರರುಂ ಮಾನುಷೋತ್ತರ ಪರ್ವತದಲ್ಲಿ ನೆರೆದು ಯಾನ ವಿಮಾನ ಸಿಂಹ ವ್ಯಾ ವ್ಯಾಘ್ರಖರಕರ ಕರಿ ತುರಗ ಮಹಿಷ ವೃಷಭ ಕರಿಮಕರ ಮತ್ಸ್ಯನಕ್ರ ಶಿ[೦]ಶುಮಾರ ಕೂರ್ಮ ಶುಕ ಸಾರಸ ಕ್ರೌಂಚ ಗರುಡಾದ್ಯನೇಕವಿಧ ವಿಗುರ್ವಣ ವಾಹನಾರೂಢರಾಗಿ ಮೃದಂಗ ಮದ್ದಳೆ ಪಟುಪಟಹ ಪೞಹ [ಝಲ್ಲರಿ]ತಾಳ ವೇಣು ವೀಣಾ ಶಂಖ ಕಾಹಳಾದಿ ಪಂಚವಿಧಾತೋದ್ಯ ವಾದ್ಯ ನೃತ್ಯ ಗೇಯ ಸ್ತುತಿಶತಾನೇಕವಿಧ ವಿಳಾಸಸಮೇತ ಸುರಸಮಿತಿ ಗಗ[ನ]ಭಾಗಮೆಲ್ಲಮಂ ತೀವಿ ಚಿತ್ರಪ[ಟಂ]ಗೆದಱಿದಂತೆ ಬರ್ಪ ಪಡೆಯ ನಡುವೆ ಮಂದರಪರ್ವತನಿಭೋತ್ತುಂಗ ಐರಾವತಗಜಕ್ಕೆ ಮೂವತ್ತೆರಡು ಮೊಗಮೊಂದು ಮೊಗದೊಳೆಂಟು ಕೋಡು ಕೋಡಿನೊಳೊಂದೊಂದು ಕೊಳವೊಂದೊಂದು ಕೊಳದೊಳ್‌ ಮೂವತ್ತೆರಡು ತಾವರೆಯ ಪೂಗಳೊಂದೊಂದು ಪೂವಿನೊಳ್‌ ಮೂವತ್ತೆರಡಡೆಸೞ್‌ ಒಂದೆಸೞ ಮೇಲೆ ವಾದ್ಯಗೇಯ ಸಹಿತಮಚ್ಚರಸಿಯರೊರ್ವರೊರ್ವರಾಡುವಂತಿರೆ ವಿಗುರ್ವಿಸಿದ ಮಹಾಗಜೇಂದ್ರಮಂ ಸೌಧಮೇಂದ್ರನೇಱಿ ಶಚೀಮಹಾದೇವಿಯಂ ಪೆಱಗನೇಱಿಸಿಕೊಂಡು ಬರೆ

ಕಂ || ಎನಿತಗಲಿತು ಗಗನಸ್ಥಳ
ಮನಿತಱೊಳಂ ಸುರರ ನರರ ವನಿತೆಯರ ತಗು
ಳ್ದನುಪಮ ವಾದ್ಯದ ಗೇಯದ
ವಿನೂತ ನವರಸಸಮೇತ ನಾಟಕದ ಮಯಂ ೧೧೩

ಮದದ ಮೃಗಮದದ ಪಾ (?)
ಳದ ಸಾಂದಿನ ಕುಸುಮಚಯದ ನೆಗೞ್ದಗರುವ ಧೂ
ಪದ ಕಂಪುಗಳನೆ ತರ್ಕ
ಯ್ಸಿದ ಮಂದಾನಿಳನ ನೆರವಿಯೊಳಗುಂ ಪೊಱಗುಂ ೧೧೪

ಜಯ ಭುವನತ್ರಯನಾಥಾ
ಜಯ ಜಯ [ದು]ಷ್ಟಾಷ್ಟಕರ್ಮ ನಿರ್ಮೂಳಕರಾ
ಜಯಜಯ ನೇಮಿಸ್ವಾಮಿ
ಜಯಜಯ ಶುದ್ಧೇದ್ಧ ವಿಪುಳ ಗುಣಗ[ಣ]ನಿಳಯಾ ೧೧೫

ವ || ಎಂದಿಂತನೇಕವಿಧದಿಂ ಸ್ತುತಿಯಿಸುವ ಸರಮಂ ನೊಸಲೊಳಿಟ್ಟ ಕರಮುಂ ಬೆರಸು ದೇವನಿಕಾಯಮಂತೆ ಬಂದು ದ್ವಾರಾವತಿಯನೆಯ್ದಿ ಪೊೞಲೊಳಗುಂ ಪೊಱಗುಂ ದಿವ್ಯಮಯಮಾಗೆ ದೇವೇಂದ್ರಗಜವಿಗುರ್ವಣ ಪವ[ಣ್ಗೆ] ವಂದು ಧರೆಗಿೞಿತಂದು ಪೊೞಲಂ ಪೊಕ್ಕು ಸಮುದ್ರವಿಜಯ ಮಹಾರಾಜನ ರಾಜಾಂಗಣದೊಳಾನೆಯಂ ನಿಱಿಸಿ ಶಚಿಮಹಾದೇವಿವೆರಸೆಣಬರ್‌ ದೇವಿಯರೆಮ್ಮ ನೇಮಿಸ್ವಾಮಿಯಂ ತನ್ನಿಮೆಂದಟ್ಟಿದೊಡೆ ದೇವಿಯರಷ್ಟವಿಧಾರ್ಚನಾಸಹಿತಂ ಬಂದುದಯಾದಿತ್ಯನಂ ಮುಂದೆಗೊಂಡಿರ್ದ ಪೂರ್ವದಿಶಾಂಗನೆಯಿರ್ಪಂತೆ ತೊಳಗಿ ಬೆಳಗುವ ಬಾಳಕನಂ ಮುಂದಿಟ್ಟಿರ್ದ ಶಿವದೇವಿಯಂ ಕಂಡು ಬಲಗೊಂಡು ಭದ್ರಾಸನದೊಳಿರಿಸಿ ಪಾ[ಲ್ಗ]ಡಲ ನೀರಿಂದಭಿಷೇಕಂಗೆಯ್ದು ದಿವ್ಯಾಭರಣ ವಸ್ತ್ರಮಾಲ್ಯಂಗಳಿಂ ಕಯ್ಗೆಯ್ಸಿ ಪೂಜಿಸಿ ಸಮುದ್ರವಿಜಯ[ನಂ] ಮನ್ನಿಸಿರ್ದಿಂತೆಂಬರ್‌

ಕಂ || ಈ ನಿಮ್ಮ ಮಗಂ ಸಕಳ
ಜ್ಞಾನೋದಯವಾಗಿ ಮೂಱು ಲೋಕಂಗ[ಳೊಳುಂ]
ತಾನಧಿಕನಪ್ಪುದಂವಿ
ಜ್ಞಾನದಿನಱಿದಮರಸಮಿತಿವೆರಸಮರೇಂದ್ರಂ ೧೧೬

ಬಂದೊಸೆದೀತನನೊಯ್ದತಿ
ಸುಂದರ ಮಂದರಗಿರೀಂದ್ರ ಶಿಖರದೊಳಿಟ್ಟಾ
ನಂದದೆ ದುಗ್ದಾಬ್ಧಿಯ ಜಳ
ದಿಂದಂ ಜನಮಾಭಿಷೇಕಮಂ ಮಾಡಿದಪೊಂ ೧೧೭

ವ || ಎಂದಱಿಯೆ ಪೇೞ್ದು ಶಿವದೇವಿಯ ಮುಂದಿರ್ದ ಕೂಸಿಂಗೆ ಪೊಡೆವಟ್ಟೆತ್ತಿ ಕೊಂಡಾಗಳ್‌ ತ್ರಿಭುವನಸ್ವಾಮಿಯಂ ತನ್ನಿಮೆಂದಾನಿಲ್ಲಿರ್ಪುದು ವಿನಯಮಲ್ಲೆಂದು ಐರಾವತದಿನಿೞಿದಿಂದ್ರಂ ಮುಗಿದ ಕೈವೆರಸು ಜಯಜಯಧ್ವನಿಯಿಂ ಜಗತ್ತ್ರಯಸ್ವಾಮಿ ಶರಣಾಗೆಂದೆಱಗಿ ಕೂಸನೆತ್ತಿಕೊಂಡೈರಾವಣ ಗಜೇಂದ್ರಮನಾತನ ಮುಂದೆಗೊಂಡೇಱಿಗಗನಮಾರ್ಗದಿಂದುತ್ತರಾಭಿಮುಖವಾಗಿ ಪೋಪಾಗಳ್‌ ದೇವದುಂದುಭಿರವಮೊಗೆಯೆ ಮಹಾಧ್ವಜಕೋಟಿಗಳ್‌ ನೆಗೆಯೆ ಚಾಮರಸಹಸ್ರಂಗಳ್‌ ಬೀಸೆ ಪುಷ್ಟಾಂಜಲಿ ಸೂಸೆ ಬರ್ಪ ದೇವರ್ಕಳೆಲ್ಲಾ ದೆಸೆಯೊಳಂ ಜಯಜಯ ಶಬ್ದಂ ನೆಗೞೆ ಮಂದಾನಿಳನೆಸಗೆ ದಿವ್ಯ ಗಂಧಂ ಮಸಗೆ ಅಚ್ಚರಸಿಯರ್‌ ಪಾಡೆ ಕಿನ್ನರರ್‌ ಪೊಗೞೆ ಮುಂದೆ ನಡೆವ ಕಳಶದರ್ಪಣಂಗಳ್‌ ತೊಳಗೆ ಮಕುಟಾಭರಣಂಗಳ್‌ ಬೆಳಗೆ [ಕ]ಲದಾಕಾಶದೆಡೆಯೆಲ್ಲಂ ದಿವ್ಯಮಯಮಾಗೆ ಪೋಗಿ ಸುರಗಿರಿಶಿಖರದಲ್ಲಿ ಪಾಂಡುಕಶಿಲೆಯ ಮೇಲೆ ರತ್ನಮಯ ಸಿಂಹಾಸನದೊಳ್‌ ಶ್ರೀಪೀಠಪ್ರಕ್ಷಾಳನ [ಪುಷ್ಪೋವ]ಹಾರ ವಿ[ಧಾನಾದಿ] ಸಾಷ್ಟಾಂಗ ಸಾಭ್ಯಂಗನಾ[ಕ್ರಿ]ಯೆಯಿಂ ಬೞಿಯಂ ಭಗವನಂ ಪೀಠದ ಮೇಗಿರಿಸಿ ಪತ್ತುಂ ದೆಸೆಯೊಳಂ ಪ[ದಿಂಬ]ರ್‌ ಲೋಕಪಾಳರ ಸಹಿತಮೋಲಗಿಸುತ್ತಲಿರೆ ನೂಱೆಂಟು ಕನಕಕಳಶಂಗಳಿಂ ಕ್ಷೀರಸಮುದ್ರಜಲಮಂ ದೇವರ್ಕಳಿಂ ತರಿಸಿ ಮೂವತ್ತಿರ್ವರಿಂದ್ರರಿಂದಮಭಿಷೇಕಂಗೆಯ್ದರಿಷ್ಟನೇಮಿಭಟ್ಟಾರಕನೆಂದು ಪೆಸರಿಟ್ಟುಮರ್ಚಿಸಿ ನಾಲ್ಕು[೦] ತೆಱದ ಸ್ತುತಿಗಳಿಂ ಸ್ತುತಿಯಿಸಿ ಸುರರಾಜನೆರಡು[೦] ಕಣ್ಣೊಳ್‌ ನೋಡಿ ತಣಿಯದೆನಗೆ ಸಾವಿರಕಣ್ಣಾಗೆ ಮಾಡಿ ನೋಡಿ ರಾಗದೊಳ್‌ ಸೈರಿಸದೆರ್ದು ಸಾವಿರತೋಳಂ ತನಗೆ ವಿಗುರ್ವಿಸಿ ಬಾಲನ ಮುಂದೆ

ಕಂ || ಸುರಪಿತ ಪೆರ್ಚಿದ ರಾಗದೆ
ಭರದಿಂದಾನಂದನೃತ್ಯ ಮಾಡಿದೊಡೆ ಬೃಹ
ದ್ಗಿರಿಗಗನದೊಳವನಿಯೊಳಾ
ಕರಿಗಳೊಳಂಬರದೊಳಗಮವತಿಶಯಮಾಗಳ್‌ ೧೧೮

ವ || ಅಂತು ಭುವನತ್ರಯಕ್ಕಾಶ್ಚರ್ಯ[ಮ]ಪ್ಪಿನಮಾಡಿದ ನಾಟಕ[ಸ]ಮಾಪ್ತಿಯೊಳ್ ಗರ್ಭಾವತರಣ ಕಲ್ಯಾಣಭಾಗಿ ಭವತು ಜನ್ಮಾಭಿಷೇಕ ಕಲ್ಯಾಣಭಾಗಿ ಭವತು ಭಗವದಾರ್ಹಂತ್ಯ ಕಲ್ಯಾಣಭಾಗಿ ಭವತು ನಿರ್ವಾಣಕಲ್ಯಾಣಭಾಗಿ ಭವತೆಂದಭಿಮಂತ್ರಿಸಿ ಭಗವನನೆತ್ತಿಕೊಂಡೈರಾವಣ ಗಜೇಂದ್ರಮನೇಱಿ ದೇವನಿಕಾಯಸಹಿತಂ ಮಗುೞ್ದು ಬಂದು ದ್ವಾರಾವತಿಯಂ ಪುಗುವಾಗಳ್‌

ಕಂ || ಚಾಮರಮಯಂ ವಿಳಾಸಯು
ತಾಮರಮಯಮಾತಪತ್ರಮಯಮಮಿತ ಗುಣೋ
ದ್ದಾಮದ್ಯುತಿಮಯಮೆ[ನಲಾ
ಭೂಮಿ] ತಳಾಂಬರತಳಂಗಳೆಡೆಯೆನಿತನಿತಂ ೧೧೯

ದೇವನಿಕಾಯ ಸಮೇತಂ
ದೇವೇಂದ್ರಂ ತ್ರಿಭುವನೇಶ ಜನ್ಮೋತ್ಸವಮಂ
ಭಾವಿಸಿ ಶಕ್ರನೆ ಮಾಡಿದೊ
ಡಾ ವಿ[ನು]ತ ವಿಳಾಸದಳವನೇನಂ ಪೇೞ್ವೆಂ ೧೨೦

ವ || ಅಂತಾಶ್ಚರ್ಯಮಾಗೆ ಪೊೞಲಂ ಪೊಕ್ಕು ಸಮುದ್ರವಿಜಯ[ನ] ಮಾಡದೊಳ್‌ ಕೂಸಿನ ತಾಯುಂ ತಂದೆಯುಮಂ ಭದ್ರಾಸನದೊಳಿರಿಸಿ ಮತ್ತಂ ಕ್ಷೀರಸಮುದ್ರಜಲದೊಳಭಿಷೇಕಂಗೆಯ್ದು ದಿವ್ಯವಸ್ತುಗಳಿಂ ಕಯ್ಗೆಯ್ಸಿ ಮನ್ನಿಸಿದಿರ್ವರ ಮುಂದೆ ಸಿಂಹಾಸನದೊಳ್‌ ಕೂಸನಿರಿಸಿ ಪೂಜಿಸಿ ನಾಲ್ವರ್‌ ಲೋಕಪಾಳರಂ ನೀಮೆ ಕಾಪಾಗಿ ನೇಮಿನಾಥನನೋಲಗಿಸಿಮೆಂದಿರಿಸಿ ದೇವೇಂದ್ರಾದಿಗಳ್‌ ತಂತಮ್ಮ ಲೋಕಂಗಳಿಗೆ ಪೋದಿಂಬೞಿಯಂ

ಚಂ || ಮೃದುಕರ ಯುಕ್ತಿಯಿಂದತಿಮನೋಹರಶಕ್ತಿಯಿನುತ್ತರೋತ್ತರಾ
ಭ್ಯುದಯ ವಿಕಾಸದಿಂದತಿಶಯಾಂಗವಿಳಾಸದಿನಾರ್ಗಮೊಪ್ಪಿತೋ
ರ್ಪುದಱಿನನೂನಮಪ್ಪ ನಯದಿಂ ನಯನಪ್ರಿಯದಿಂ ಪೊದೞ್ದ ಜೊ
ನ್ನದ ಶಶಿಯಂತೆ ನೇಮಿ ಬಳೆಯುತ್ತಮನಿಂದಿತನಿರ್ದನಚ್ಯುತಂ ೧೨೧

ಗದ್ಯ || ಇದರ್ಹತ್ಸವಜ್ಞ ಪಾದಪದ್ಮ ವಿರಾಜಿತೋತ್ತಮಾಂಗ ಶ್ರೀ ಬಂಧುವರ್ಮ ನಿರ್ಮಿತಮಪ್ಪ ಹರಿವಂಶಾಭ್ಯುದಯದೊಳ್‌ ನೇಮಿಭಟ್ಟಾರಕಾಭ್ಯುದಯ ವರ್ಣನಂ

ನವಮಾಶ್ವಾಸಂ