ಕಂ || ಶ್ರೀಮತ್ಸಮುದ್ರವಿಜಯ
ಸ್ವಾಮಿ ಮನೋಮುದದಿನಂತು ಸುಖಮಿರ್ದು ಕರಂ
ಪ್ರೇಮದೆ ವಸುದೇವನನಭಿ
ರಾಮಗುಣಂ ಬರಿಸಿ ಹರ್ಷವಶಗತನಾದಂ ೧

ವ || ಅಂತು ನಿಜಾನುಜಂಗೆ ಸಿಂಹಾಸನಾರ್ಧೈಕಪ್ರದೇಶಮಂ ದಯೆಗೆಯ್ದು ಮುಖಾವಳೋಕನಂಗೆಯ್ದು

ಕಂ || ಕಂದಿದುದೊಪ್ಪುವ ಮೆಯ್ ಕರ
ಮೊಂದಿದುದೇಳಿದಿಕೆ ತೊೞಲುತಿರೆ ನಿನಗದಱಿಂ
ನಂದನವನದೊಳ್ ನಿನಗಾ
ನಂದಮುಮಪ್ಪಂತು ಸುಖದಿನಿರು ನಿಶ್ಚಿಂತಂ ೨

ವ || ಎಂದೊಡಂತೆಗೆಯ್ವೆಂ ದೇವ ನಿಮ್ಮಡಿಯ ಬೆಸಸಿದಲ್ಲಿಪ್ಪೆನೆನೆ ವನಪಾಲಕನಂ ಬರಿಸಿ ನಮ್ಮ ಮಾಡದ ಪೊಱಗಣ ವನದಂದಮಂ ಪೇೞೆಂದೊಡಾತನಿಂತೆಂದಂ

ಕಂ || ಕರಮೊದವಿದಲಂಪಿಂ ಪೆಂ
ಪೊ[ರೆದಿರೆ] ಕಣಿಯಿದುವೆ ಧರೆಯೊಳೆನಿಸುವ ತೆಱದಿಂ
ಮರನೆಲ್ಲಂ ಸೊಗಯಿಪ ಪೂ
ಮರನುಂ ಪಣ್ಮರನುಮಲ್ಲದಿಲ್ಲಾ ಬನದೊಳ್ ೩

ಕುಂದಲತಾನಿಕರಂಗಳ್
ಕುಂದವಶೋಕೆಗಳು ನೋೞ್ಪರಂ ಸೋಲಿಸುಗುಂ
ಚಂದನಮಾರ್ಗಂ ನಯನಾ
ನಂದಮಾಗಿರ್ಕುಮೆಂದುಮಾ ನಂದನದೊಳ್ ೪

ಚಂ || ತಳಿರ್ಗಳ ಕೆಂಪು ಸಂಪಗೆಯ ಕಂಪು ಮದಾಳಿಯಲಂಪು ಚೆಲ್ವಿನಿಂ
ಮಿಳಿರ್ವೆಳೆಗೊಂಬು [ದಂ]ಪತಿಗಳಿಂಬು ಮನೋಭವನನಂಬು ಪೂತ ಪೂ
ಗೊಳಗಳ[ತಣ್ಪು]ತೆಂಕಣೆಲರೊಳ್ವು ಲತಾಳಿಯ ತಳ್ಪು ಕಾಮುಕ
ರ್ಕಳಿಗಭಿವಂದನಂ ಬಗೆದು ನೋಡಲುಮಿಂತು ಮನೋನುಬಂಧನಂ ೫

ವ || ಪಲವು ಮಾತಿನೊಳೇನಾವಂಗವಾಂದನಂ ಮುಕ್ತಾಂಗನಾಸಕ್ತನಪ್ಪ ಯೋಗಿಯಂ ಮೆಚ್ಚಿಸುಗುಮೆಂದೊಡಿಂತಪ್ಪ ಭೋಗಿಯಂ ಮೆಚ್ಚಿಸುವುದನೆ ಪೇೞಲ್ವೆೞ್ಕು ಮೆಂದೊಡಂತಪ್ಪೊಡೀತನಲ್ಲಿರ್ದಪ್ಪಮಾವಾದ ವಿನೋದಮರ್ತಿಯಾದೊಡಮವನಲ್ಲಿಯೆ ನಡೆಯಿಸಿಮೆಂದು ಕುಮಾರನಂ ಪೋಗಲ್ವೇೞ್ದು ಬೞಿಯಂ ಪೊೞಲೊಳಗೆ ಪೊಱಮಡದಂತುಪಾಯದೊಳೆ ಕಾವುದೆಂದು ವನಪಾಲಕನನೋಜೆಗೊಳಿಸಿ ದಾರುಕವಲ್ಲಭಕನೆಂಬಿರ್ವರುಂ ನಂಬುಗೆಯವರನನುಚರಂಗೆ ಸಹಾಯ ಮಾಡಿರಿಸಿದನಂತು ಕೆಲವು ದಿವಸಂ ವಸುದೇವನಾ ಬನದೊಳ್ ಸುಖದಿನಿರ್ದನಿತ್ತಲೊಂದು ದಿವಸಂ ಸಮುದ್ರವಿಜಯನ ಮನೋವಲ್ಲಭೆಯಪ್ಪ ಮನೋರಮೆಗೆ ಚಂಪಕಮಾಲೆಯೆಂಬ ಪರಿಚಾರಕಿಯ ಕಯ್ಯೊಳ್ ಸಮುದ್ರವಿಜಯಂ ನರ್ತನ ಸುಗಂಧದ್ರವ್ಯಮನಟ್ಟಿದೊಡೆಯಾ ನಂದನದ ಕರುಮಾಡದ ಪೊಱಗನೆ ಪೋಪಳಂ ವಸುದೇವಂ ಕಂಡವಳ ಕೈಯಿಂದವಾ ಕರಂಡಕಮಂ ಕೊಂಡೊಡವಳಿಂತೆಂಬಳ್

ಕಂ || ತೊಂಡಿಕೆಯನೊಪ್ಪೆ ನಿನ್ನೊಳ್
ಕಂಡುದಱಿನುಪಾಯದಿಂ ವನಾಂತರದೊಳ್ ಭೂ
ಮಂಡಳಪತಿ ಸೆಱೆಯಿಟ್ಟುಂ
ತೊಂಡಾಟದೊಳಿರ್ದೆನೆಂದು ಬಗೆಯದೆ ಕಂಡಾ ೬

ವ || ಎಂಬುದಂ ಕೇಳ್ದಾ ಮಾತು ತನ್ನ ಮನಮಂ ನಡೆ ಕಯ್ಯದೊಂದು ಕಂಕಣಮನಾಕೆಗೆ ಲಂಚಂಗೊಟ್ಟು ಬೆಸಗೊಂಡು ಪೊೞಲ ಪ್ರಜೆಯ ಪುಯ್ಯಲಿಂದಾದ ವೃತ್ತಾಂತಮೆಲ್ಲ ಮನಱಿದು ಪೋಗವೇೞ್ದು ನಿಜಸಹಾಯರಂ ಬಂಚಿಸಿಯಾ ಬಲದೊಳಿರ್ದ ಲತಾಭವನದೊಳಮಿರ್ದು ಖೇದಮನಸ್ಕನಾಗಿ ತನ್ನೊಳಿಂತೆಂಗುಂ

ಮ || ಒಡನಾಂ ಪುಟ್ಟಿದೆನೆಂದು ಕೊಂಡಱಿವೆನೇ ತನ್ನೀಯದರ್ಥಂಗಳಂ
ಗೆಡೆಗೊಂಡಿರ್ದೆನೆ ತನ್ನ ಮೆಚ್ಚುವವರಂ ಮೈಮುಟ್ಟಿ ದುರ್ವೃತ್ತಿಯಿಂ
ನಡೆಯುತ್ತಿರ್ದೆನೆ ಕೆಮ್ಮನಿಂತು ಬನದೊಳ್ ತಂದಿಟ್ಟು ಕಾಯಲ್ ಕರಂ
ನಡೆಕಾಯಲ್ ಕಡುಗೂರ್ಮೆಯಿಂ ನಡುಪುತಿರ್ದಣ್ಣಂಗದೇಂ ತಕ್ಕುದೇ ೭

ವ || ಮತ್ತೆಯುಂ

ಉ || ತಂದೆಯ ಲೆಕ್ಕಮೆಂದುಳಿನಯಂಬೆರಸಾಂ ಬೆಸಕೆಯ್ವೆನಣ್ಣನಾ
ತಂದೆಯಿನಗ್ಗಳಂ ಪ್ರಿಯದೆ ಲಾಲಿಸಿ ಪಾಲಿಸುತಿರ್ದು ತನ್ನ ಕೂ
ರ್ತಂದಮಿದೆತ್ತ ಕೆಮ್ಮನೆ ದುರಾಚರಿತರ್ಕಳ ಮಾತುಗೇೞ್ದು ತಾಂ
ನಂದನದೊಳ್ ನಿಬಂಧದೊಳಿದೇಂ ತಿರಿಪಂದಮಿದೆತ್ತ ಚೋದ್ಯಮೋ ೮

ವ || ಅಕ್ಕುಮಿಂತಿರ್ಪೆೞಿದಂದದೊಳೊಂದಂ ಬಗೆದು ಸೆಱೆಯೊಳಿಸಿರಿದನಿಂತು ಕೊಂದವರಾರುಂ ಪಿರಿಯವಪ್ಪ ದೋಷಂಗಳನಿಟ್ಟೊಳವಿಟ್ಟು ಪೇೞ್ದೊಡೇಗೆಯ್ವರಿಂತು ವಿಚಾರಮಿಲ್ಲದಿಲ್ಲಿಪ್ಪ ಸುಖಮೊಳ್ಳಿತ್ತಲ್ಲ[೦] ದೇಶತ್ಯಾಗಮೊಳ್ಳಿತ್ತೆಂದು ಪೋಪ ಕಜ್ಜಮನೆ ಬಗೆಯುತ್ತುಮಿರೆಯಿರೆ

ಮ || ವಸುದೇವಂಗಮೆಡಂಬಡಪ್ಪ ಜನದಿಂ ಪೋಪಂತುಟಾಯ್ತಕ್ಕಟಾ
[ಪುಸಿ]ಯೇ ಲೋಕಮು ಪೊಲ್ಲಮಿನ್ನುಮಿರಲಾಗಿನ್ನೆಂದು ಬೇಸತ್ತು ಚಿಂ
ತಿಸಿ ಪೋಪಂತಿರೆ ಪೋದನಸ್ತಗಿರಿಯತ್ತಾದಿತ್ಯನುಂತುಂ ವಿಚಾ
ರಿಸಿದಲ್ಲಿ[ಪ್ಪರ] ಶುದ್ಧವೃತ್ತಿಯ ಮಹಾತ್ಮ್ಯರ್ಕಳ್ ಮನಸ್ತಾಪದಿಂ ೯

ಕಂ || ವಿಭವೋದಯದೊಳ್ ಕೆಲಬರ್
ಪ್ರಭುಗಳ್ ಕರಮೆಸೆದು ಕರ್ಮವಶರೞಿವಾಗಳ್
ಪ್ರಭೆಗೆಟ್ಟ[ಡಗುವ ತೆಱದಿಂ
ನಭದಿಂ ಗಮಿಸಿದನ]ಡಂಗಿದಂ ದಿವಸಕರಂ ೧೦

ವ || ಅಂತಾದಿತ್ಯನಸ್ತಮಾನಮಾದಾಗಳ್ ದಾರುಕು ವಲ್ಲಭಕರಾನುಚರರಪ್ಪರಱಸಿ ಕಂಡೀ ಲತಾಲಯದೊಳೊರ್ವನೆ[ಇಂತೇಕೆ]ಚಿಂತಿಸುತಿರ್ದಪ್ಪಯೆನೆ ತಾಂ ಸಹೋತ್ಪನ್ನ ಬುದ್ಧಿಯಪ್ಪು ದಱಿನಿಂತೆಂದಂ ನಮ್ಮ ಸುಖೋಪಾಧ್ಯಾಯರೆನಗೆ ರಾಜಪುತ್ರಯೋಗ್ಯಮೆಂದು ಶರಾವರೋಧಂ ಶಸ್ತ್ರಾವರೋಧಮೆಂಬೆರಡು ಮಂತ್ರಂಗಳಂ ಸಾಧನವಿಧಿಯಂ ಪೇೞ್ದಿತ್ತೊಡವಂ ಸಾಧಿಸುವಲ್ಲಿಗೆ ಸಹಾಯರಿಲ್ಲದೆ ತೀರದೆಂದು ಚಿಂತಿಸುತಿರ್ದೆನೆಂದಡವರ್ ನಾಮತ್ತೆ ಸಹಾಯರೆಂದು ಪೇೞ್ದೊಡಮಂತೆಗೆಯ್ವೆನೆಂದು ನಾಳೆ ಚವುದಿವಸಮೀ ಮಂತ್ರಂಗಳಂ ಸಾಧಸಿಲೊಳ್ಳಿತ್ತೆಂದು ಗಂಧಪುಷ್ಪದೀಪಧೂಪಂ ಚರುಕಾದ್ಯಕ್ಷತಾದಿ ಸಾಧನೋಪಕರಣಂಗಳಂ ಪಿಡಿಸಿಕೊಂಡು ಅರ್ಧರಾತ್ರದಾಗಳ್ ಕಾಪಿನವರಂ ಬಂಚಿಸಿ ಪೊೞಲಂ ಪೊಱಮಟ್ಟು ಪರೇತವನಭೂಮಿಯಲ್ಲಿಗೆಯ್ದಿ ತನಗಂ ತನ್ನೊಡನೆಯರ್ಗಂ ಸಕಳಿಯನಿಟ್ಟು ಶಂಕಿಸದೆ ಬನ್ನಿಮೆಂದು ಶ್ಮಶಾನಭೂಮಿಯಂ ಪೊಕ್ಕು ಪೆಣದ ಮೇಗಿರ್ದುರಿವ ಕೊಳ್ಳಿಯಂ ಕೊಂಡು ಕುಣಿವ ಮರುಳ ಕಯ್ಯ ಕೊಳ್ಳಿಗಳ ಬೆಳಗಿನೊಳ್ ನೋಡುತ್ತಂ ಪೋಪಾಗಳ್

ಕಂ || ಉರಿಯುಯ್ಯಲ ದೂಪೆಯಸ
ತ್ತರ ಕರುಳ್ಗಳನವರ ತಲೆಯ ತೋರಣದಿಂದಂ
ಕರಮಾಸುರದಿರ್ಪಾಲ[ದ]
ಮರದಿಂ ಭರದಿಂದ ಮಾೞ್ಪ ಬ[ಳ್ಳಿನ]ಸರದಿಂ ೧೧

ವ || ಅಲ್ಲಿ ಗುಡಿಗಟ್ಟಿದ ಸೀರೆಯಂತೆ ದಕ್ಕುಂದಲೆಗೆ ವಂದರುಂ ಮೆಚ್ಚುಕಯ್ವರಂತೆ ತೂಗುವ ತೂಗುಂದಲೆಗ[ಳುಮನ]ಱಸಿ ಕಾಣದೆ ಬಂದು ನುಡಿವರಂತೆ ಕಂಡಮಿಲ್ಲೆಂದು ಮಱುಗುವರಿಂ ಮುಳಿದಿರ್ದಂ ತಿಳಿಪಿ ಮುಂದೆ ಪೋಪಂತೆ ಕಾಲಂ ಪಿಡಿದು ಪೋಪ ರಕ್ಕಸರಿಂ ಪತ್ತಿದಂತೆ ಕಯ್ಯಂ ಪಿಡಿದು ಪೋಪರಗೊಟ್ಟಿಂಗರಿಂ ರಕ್ಕೆಯಿಡುವಂತೆ ತಲೆಯಂ ಪಿಡಿದಿಪ್ಪ ಭೇತಾಳರಿಂ ಕುಪ್ಪಸಮಂ ಪೋಲ್ವರಂತೆ ಕಯ್ಯುಮೆಯ್ಯುಮನರಿವ ಶಾಕಿನಿಯರಿಂ ಬಟ್ಟೆವೋಪರ್ ಪಸಿದೆಳೆಗೆಯ್ಯಂ ಪೊಕ್ಕಂತೆ ಪೊಟ್ಟೆಯನುರ್ಚಿ ತಿಂಬ ಪೇನಿಗಳುಂಡೊಡ…………. ರಾಕ್ಷಸರಿಂ ಕೊಂಡಿಕ್ಕುವ ಶಬರನಂತೆ ನೆತ್ತರಂ ಪೀರ್ವ ಪಿಶಾಚಂಗಳಿಂದಗುರ್ವಾಗಿರೆ

ಕಂ || ಕುಣಿದಾಡುವ ಪುಲ್ಮರುಳಿಂ
ತಣಿದಾಡುತಮಿಪ್ಪ ರಕ್ಕಸರ್ಕಳಿನಾಟಂ
ದಣಿಯರಮಾಡುವ ಶಾಕಿನಿ
ಗಣದಿಂ ಸುಳಿಸುಳಿದು ಬೇವ ಪೆಣದಿಂ ನೆಣದಿಂ ೧೨

ಪೋರ್ವ ನಿಶಾಚರರಿಂದೊಡ
ನಾರ್ವ ಪಿಶಾಚಿನಿಯರಿಂ ಕರಂ ಪಸಿದೆಲ್ವಂ
ಕಾ[ರ್ವ]ಮರುಳ್ಗಳಿನೊಯ್ಯನೆ
ಸಾರ್ವ ಮಹಾಭೂತನಿಕರದಿಂದತಿರೌದ್ರಂ ೧೩

ನೊಕ್ಕ ಕರುಳ್ಗಳಿನೊಡನೊಳ
ಪೊಕ್ಕ ಕವಿಲ್ಗಣ್ಣಗುರ್ವಿನಿಂ ಕೆಂದಲೆಯಿಂ
ದಕ್ಕುಳಿಸಿದ ಬಸುಱಿಂ ಕರ
[ಮಕ್ಕಿಱು] ಪಿದ ಮರುಳನವರ ಕಯ್ಗಳ ಕರುಳಂ ೧೪

ಅಲವಲಿಸಿ ಮಸಗಿ ಪರಿಪರಿ
ದಲಸದೆ ತಿರಿದೆಱಗಿ ಪೆಣನದಂ ತಿಂದು ಕರಂ
ನಲಿನಲಿದು ತನ್ನೊಳುಂ ಪಲಿ
ಮಿಲಿ[ಕಿ ಮಿಲಿಕಿ]ಯೆಂದು ನುಡಿವ ಪೈಶಾಚಕರಿಂ ೧೫

ಕಾಡಿರ್ದಡೆ ಮೊರೆದೆಯ್ತಂ
ದಾಡಿವ ಜೋಗಿಣಿಯರೊಸೆದು ಪೆಣಗಳ ಕರುಳಂ
ತೋಡುವರಿಂದೇಳಿದರಂ
ಕಾಡುವರಿಂ ಬಲಿವಿಧಾ[ನಮಂ]ಬೇಡುವರಿಂ ೧೬

ಉ || ಎತ್ತಿದ ಕಯ್ಯ ಕತ್ತಿಗೆ ಭಯಂಗೊಳೆ ಬೆಚ್ಚನೆ ಬಿಟ್ಟು ಕಣ್ಣುಮಂ
ಸುತ್ತಿದ ಪೆರ್ಗರುಳ್ ತೆಱದಗುರ್ವಿಪಾ ಬಾ[ಯ್ ಕಡೆ]ದಾಡೆ ಕೂಡೆ ತ
ಳ್ತೊತ್ತಿದ ನೆತ್ತರರ್ವಿಸುವ ಪಂದಲೆಮಾಲೆಗಳಾರುಮಂ ತಗು
ಳ್ದೊತ್ತಲೆ ಬಪ್ಪ ಬತ್ತಲೆ ಮರುಳ್ಗಳ ತಂಡದಿನೇಂ ಮಹೋಗ್ರಮೋ ೧೭

ವ || ಅಂತು ಭಯಂಕರಾಕರಾರಮಪ್ಪುದಂ ನಿಶ್ಯಂಕೆಯಿಂ ನೋಡುತ್ತಂ ತನ್ನೊಡನೆಯವರ್ಗೆ ತಾನೆ ಬಲ್ಪಾಗಿ ಮಹಾದ್ಭುತ ಶ್ಮಶಾನದ ನಡುವಣ ಪೆರ್ಮೆಳೆಯ ಮೂಡಣ ಕೆಲದೊಳ್ ಪಿರಿದು ಸಂಸ್ಕಾರವಿಧಿಯಿಂ ಬೇಯುತ್ತಿರ್ದ ಪೆಣನಂ ಕಂಡು

ಹರಿಣಿ ||

ಅದಱ ಕೆಲದೊಳ್ ಮೂಱುಂ ಕೊಂಡಂಗಳಂ ಸಮೆದಲ್ಲಿ ತ
ದ್ವಿದಿತ ವಿಧಿಯಿಂ ಹೋಮಂಗೆಯ್ವುತ್ತಮರ್ಚಿಸುವೊಂದುಪಾ
ಯದೊಳೆ ನಯದಿಂ ಬೇಗಂ ನಿಂದಿರ್ದು ದಿಗ್ಬಲಿಗೆಯ್ಯಲೆಂ
ದೊದಱಿ ಬಲಿಯಂ ಸೂಸುತ್ತಿಂತೆಂಗುಮಾತ್ಮಸಖಾಯರಂ ೧೮

ವ || ಆನೊರ್ವನಿಲ್ಲಿರ್ದು ಮಂತ್ರಮಂ ಸಾಧಿಸಿದಪ್ಪೆಂ ನೀವೆಲ್ಲ [೦] ಮೂಡಣ ದೆಸೆಯೊಳೆಱವತ್ತನಾಲ್ಕೆಡೆಯಂತರದೊಳ್ ನಿಲ್ಲಿಮೆಂದವರಂ ನಿಲಿಸಿ ತಾಂ ಮಂತ್ರಮನೋದುತ್ತಂ ದಿಗ್ಬಲಿವಿಧಾನಂಗೆಯ್ವಂತೆ ಬಳಸಿಯುಂ ಬರುತ್ತಂ ಮತ್ತೊಂದರೆವೆಂದ ಪೆಣನಂ ತೆಗೆದು ತಂದಾ ಸೆ[ದ]ಗೆಯೊಳವರಂ ಕಾಣದಂತಿಕ್ಕೆಯ[ವರ್] ಕಾಣ್ಬಲ್ಲಿಯೊಂದು ಪೆಣನಂ ತೆಗೆದು ಪೊಱಗಿಕ್ಕಿ ಮತ್ತಂ ಪಲವುಂ ಪೞಿಗಳನಲ್ಲಿಯೊಟ್ಟಿದೊಡದಱುರಿಯುಂ ಪೊಗೆಯುಂ ತಳ್ತು ನೆಗೆವಾಗಳ್ ವಸುದೇವನದಱ……. ತೊಟ್ಟಾವರಣಂಗಳೆಲ್ಲಮಂ ಕಳೆದುರಿವ ಸೆ[ದಗೆ]ಯೊಳಿಕ್ಕಿ ಸುರಿಗೆಯಂ ಕೆಲದೊಳೊಂದು ಮರದಡಿಯೊಳಿಟ್ಟು ಸಖಾಯರ್ ಕೇಳೆ ಪಿರಿಯ ಸರದೊಳಿಂತೆಂದಂ

ಕಂ || ಅಱಿಯದೆ ನುಡಿವರ ಮಾತಿಂ
ಸೆಱೆಗೆಯ್ದಂ ಭೂಪನೆಂದು ವಸುದೇವಂ ಬೇ
ಸಱಿನೊಳ್ ಬಂದೀಯೆಡೆಯೊಳ್
ತಱಿಸಂದಗ್ನಿಪ್ರವೇಶದಿಂದಂ ಮಡಿದಂ ೧೯

ವ || ಎಂಬುದನೆನ್ನಿಮೆಂದು ಬೇಗಮವರ್ಗಲ್ಲಿ ಪಾಯ್ದಂತಾಗೆ ನೆಗೆದುರಿಯ ಮೊದಲೊಳ್ ಲಂಘಿಸಿ ಮೆಳೆಯ ಮಱೆಯನೆ ಪರಿದತ್ತಣದೊಂದು ಮರನನೇಱಿರ್ದನಾಗಳಾ ನುಡಿಯಂ ಕೇಳುತ್ತೆ ದಾರುಕ ವಲ್ಲಭರ್ಕಳ್ ಹಾಹಾ ನಾಥಾ ಹಾಹಾ ಇನ್ನೆಮಗಾರ್ ಶರಣೆನುತ್ತಂ ಪರಿತಂದು ಕೆಲದೊಳೆಳೆದಿಕ್ಕಿದ ಪೆಣನುಮನಾತಂ ಪಾಯ್ದಲ್ಲಿ ಬೇಯುತ್ತಿರ್ದ ಪೆಣನುಮಂ ಕಂಡು ಬೆರ್ಚಿ ಬೆಱಗಾಗಿ ಪೊೞಲ್ಗೆ ಪರಿತಂದು ನಾಮಲ್ಲಿ ಸಾಯಲಂಜಿ ಬಂದುದುಮೇನೆಂದು ಸಾವಂ ಪೇೞ್ವಮಂದು ಚಿಂತಿಸುತಿರ್ದು ಬೆಳಗಾದಿಂಬೞಿಯಂ ಪೇೞದಿರ್ಪುದು ಪೊಲ್ಲೆಂದು ಸಮುದ್ರವಿಜಯ ಮಹಾರಾಜನಂ ಕಂಡು ದೇವಾ ಬಿನ್ನಪಮೆಂದು

ಚಂ || ಪುರದವರೆನ್ನ ರೂಪುಮನೆ ಕಂಡು ಪರೀಕ್ಷಿಸದಾತ್ಮಶೌಚಮಂ
ನರಪತಿಗೆಯ್ದೆ [ಪೇೞಲವನಿಂ ವನದೊಳ್ ಸೆಱೆಗೆಯ್ದು ನಾ]ನುಮಿ
ಪರಿಭವದೊ[ಳ್ ಮುೞುಂಗಿ ನಮೆವಂದಕೆ ಸಾವುದೆ]ನುತ್ತು ಪಾಯಮಂ
ಧರಿಯಿಸಿ ಕಿಚ್ಚುವೊಕ್ಕು ಮಡಿದಂ ವಸುದೇವಕುಮಾರನೆಂಬುದುಂ ೨೦

ಕಂ || ಎಂತೆಂತೋ ವಸುದೇವಂ
ಭ್ರಾಂತಿಲ್ಲದೆ ಕಿಚ್ಚುವೊಕ್ಕನೇ ಪೇೞ್ ಪೇೞೆಂ
ದಂತೆ ನೃಪಂ ಮೂರ್ಛಿಸಿ [ಮರ
ದಂತ ಧ]ರಣಿಯೊಳು ಬೀೞೆ ಪರಿಜನಮೆಲ್ಲಂ ೨೧

ವ || ಪರಿತಂದು ಶೀತಳಕ್ರಿಯೆಯಿನೆೞ್ಚಱಿಸಿ ಮೂರ್ಛೆಯಿಂದೆೞ್ಚತ್ತು ವಿಪ್ರಳಾಪಂಗೆಯ್ದು

ಕಂ || ಹಾಹಾ ಮದನಾಕಾರಾ
ಹಾಹಾ ಗುಣಗಣದಶೇಷ ಭೂಷಣಭಾರಾ
ಹಾಹಾ ಕೂರ್ತೆನ್ನನುಜಾ
ಹಾಹಾ ನೀಂ ಸಾಯೆ ಕೆಟ್ಟೆನನುಪಮತೇಜಾ ೨೨

ಉ || ಹಾ ವಸುದೇವ ನಿನ್ನನವಿಚಾರದಿನಾಂ ಸೆಱೆಯಿಟ್ಟೆನೆಂಬುದಂ
ಭಾವಿಸಿ ಕೀೞ್ತನಂ ವಿನಯದಿನ್ನಳವಂ ನೆಗೞಿರ್ದ ಶೌಚಸ
ದ್ಭಾವಮನಣ್ಣನಂ ನಯದಿನಂಜಿಪೆನೆನ್ನದೆ ಮೂರ್ಖವೃತ್ತಿಯೊಳ್
ಕಾವುದೆ ನಿನ್ನ ಚಿಂತೆಯನೆ ತಿರ್ದಿದೆಯಿಂತೞಿದೆನ್ನನರ್ದಿದೈ ೨೩

ಉ || ಏವುದೊ ರಾಜ್ಯವಿನ್ನೆನಗೆ ನಿನ್ನ ಪರೋಕ್ಷದೊಳೆಂತು ಬಾೞ್ವೆನಿ
ನ್ನಾವುದು ಮೋಹಮಾವುದು ಸುಖಾವಹಮಾವುದು ಪೆಂಪು ನೆಟ್ಟನಿ
ನ್ನಾವನೊ ಕೂರ್ಪನಾವನೆಡರ್ಗಪ್ಪನ ಸಂಭ್ರಮದಣ್ಣ ಧಾತ್ರಿಯಂ
ಕಾವುದು ತಕ್ಕುದಿಂತು ಕಿಡೆ ಸಾವುದು ತಕ್ಕುದೆ ಕೂರ್ತ ತಮ್ಮನೇ ೨೪

ವ || ಎನುತ್ತಿಂತು ವಿಕಳನಾಗಿ ನುಡಿವುದುಮನಱಿವುಗಿಡುವುದುಮಂ ಕಂಡು ನಂಟರುಂ ಪರಿವಾರಮುಂ ಶೋಕಂಗೆಯ್ದು ಬೞಿಯಮರಸನಂ ಸಂತೈಸಿ ಪೇೞ್ದವರಂ ಮತ್ತೆಮತ್ತೆಯುಂ ಬೆಸಗೊಂಡವರಾತನ ಪೊಱಮಟ್ಟುಪಾಯಮುಮಂ ಕಿಚ್ಚುವಾಯ್ದು ಸತ್ತಪಾಯಮುಮಂ ತಿಳಿಯೆ ಪೇೞ್ದಾಗಳ್

ಕಂ || ಕಡುದುಃಖದಿನಾತನ ಸ
ತ್ತೆಡೆಯಂ ನೋಡಲ್ಕೆ ಪೋಗಿ ಬಳಸಿದ ಬಲಿಗೊ
ಟ್ಟೆಡೆಯಂ ಹೋಮಕ್ರಿಯೆಗೆ
ಯ್ದೆಡೆಯೊಳ್ ಮಸುಳಿರ್ದ ಕೆಂಡಮುಂ ಕೊಂಡಮುಮಂ ೨೫

ವ || ಕಂಡಾತನ ಪಾಯ್ದಲ್ಲಿ ಎಲ್ವುಗಳ್ ಮುಂಬೆಂದರೆಗರಿದ ಭೂಪರ ನೆಣಂಗಳುಮಂ ಚಯದಲ್ಲಿ ಸಾರ್ಚಿರ್ದ ಸುರಿಗೆಯುಮಂ ಕಂಡು ಸಮುದ್ರವಿಜಯಂ

ಉ || ಮತ್ತೆ ಮಹೋಗ್ರ ದುಃಖದಹನಂ ಕೊಳೆ ಮೂ[ರ್ಛೆಯ] ತಣ್ಪುಗೆಯ್ದೊಡೆ
ಚ್ಚತ್ತನನಲ್ಲಿ ಕಂಡಿರದೆ ಬಂಧುಗಳೊಯ್ದೊಡಗೊಂಡು ಮಿಂದವರ್
[ತತ್ತ]ನಿಯೋಗದೊಳ್ [ವಿರಹಜಾನಳ ದಂ]ದಹ್ಯಶರೀರನಾಗಿರ್ದನಿ
[ತ್ತತ್ತ] ವಸುದೇವಂ ಮರದ ಪ[ರ್ಣೆ]ಯೊಳಿರ್ದು ಬೆಳ[ರ್ಪ] ಜಾವ[ದೊಳ್] (?) ೨೪

ವ || ಮರದಿಂದಮಿೞಿದು ನಡೆದೊಂದು ನಾಡಬಟ್ಟೆಯಂ ತಗುಳ್ದು ಪಯಣಂಬೋಗಿ ಕುಕ್ಕುಟಗ್ರಾಮವೆಂಬುದನೆಯ್ತಂದಾ ಪುರದ[ವೊಂ]ದು ಕುಂಭ[ಕಾಱ]ನ ಶಾಲೆಯಂ ಪೊಕ್ಕು ವಿಶ್ರಮಿಸಿ[ಪ್ಪುದುಮಾ]ಕುಂಭಕಾಱನೆತ್ತಣಿಂ ಬಂದಿರೆಲ್ಲಿಗೆ ಪೋಪಿರೆಸೆ ವಸುದೇವನಿಂತೆಂದಂ

ಕಂ || ಜಾತಿಯೊಳಾಂ ಬ್ರಾಹ್ಮಣನೆಂ
ಗೋತನು ಮಿತ್ರಜನೆನಪರಿಮೆ[ತ]ವಿದಿತಂ ತಾ
ಸ್ತ್ರಾರ್ಥ [ವಿದಂ] ಭೂಮಂಡಳ
ಮಂ ತೊೞಲುತಿರ್ಪು[ದಿಂದೆ]ನಗೆ ವಿನೋದಂ ೨೭

ವ || ಎಂದಾತನೊಳ್ ನಾಡೆಯುಂ ಪೊತ್ತು ನುಡಿಯುತಿರ್ಪುದುಮಾ ಕುಂಭಕಾಱಂ ಪರಿದು ತನಗಿಷ್ಟರಪ್ಪ ಪಾರ್ವರ ಮನೆಯಿಂ ಬೋನಮಂ ತರಿಸಿ ಕರಮತಿಪ್ರೀತಿ ಯಿಂಮಿಯಲೆಱದುಣಲಿಕ್ಕಿ ಪಥಪರಿಶ್ರಮಮಂ ಕ್ಷುಧಾಪರಿಶ್ರಮ ಮುಮನಾಱಿಸಿರ್ಪಿನಮಾ ಪೊೞಲ್ಗೆ ಸೂರ್ಯಪುರದಿಂ ಬಂದ ಬ್ರಾಹ್ಮಣನೊರ್ವನಂ ಕಂಡು ನೀಮಾರ್ಗೆಲ್ಲಿಂ ಬಂದಿರೆಂದು ಬೆಸಗೊಳೆ ಸೂರ್ಯಪುರದಿಂ ಬಂದೆನಲ್ಲಿ ವಸುದೇವಂ ತಮ್ಮ ಪಿರಿಯಣ್ಣಂ ಸಮುದ್ರವಿಜಯಮಹಾರಾಜಂಗೆ ಮುಳಿದಗ್ನಿಪ್ರವೇಶಂಗೆಯ್ದನೆಂಬ ಮಾತಂ ಪೇೞೆ ಕೇಳ್ದು ತನ್ನ ಮನದೊಳ್ ಸಂತೋಷಂಬಟ್ಟು ದೇಶತ್ಯಾಗಕ್ಕೆ ನಿಶ್ಚಿಂತಮಾಯ್ತೆಂದು ಇರುಳಲ್ಲಿಯೆ ವಿಶ್ರಮಿಸಿ ಬೆಳಗಪ್ಪುದು[೦]ಪಯಣಂ ಬೋಗಿ ನಾಡುಮಂ ಪಳ್ಳಮುಮಂ ಕೊಳ್ಳಮುಮಂ ಕೆಱೆಗಳುಮಂ ತೊಱೆಗಳುಮಂ ಕೞಿದುಬಂದು ವಿಜಯಖೇಡಮೆಂಬ ಪೊೞಲನೆಯ್ದೆವಂದದಱ ಪೊಱವೊೞಲೊಳ್

ಚಂ || ತಳಿರ್ಗಳ ಗೊಂಚಲಿಂಬು ನಯದಿಂ ಮಿಳಿರ್ದೊಪ್ಪುವ ಕೊಂಬು ಸುತ್ತಲುಂ
ಗಿಳಿಗಳ ಪಿಡು ಮರ್ಕಟ ಚಯಂಗಳ ತೊಂಡುಮುದಾತ್ತಚಿತ್ತಮ
ಪ್ಪಳಿಗೋಳ ಗಾವರಂ ಸ್ಮರನ ಡಾಮರಮಿಂತತಿಶೋಭೆಯಿಂ ಮನಂ
ಗೊಳಿಸುವುದೊಂದು ನಂದನಮನತ್ಯಭಿನಂದನಮಂ ಮನೋಜ್ಞಮಂ ೨೮

ವ || ಕಂಡಾ ಬನದ ಸಮಿಪಸ್ಥಮಪ್ಪತ್ಥವೃಕ್ಷದ ಮೊದಲೊಳ್ ವಿಶ್ರಮಿಸಲೆಂದು ಕುಳ್ಳಿರ್ದಾಗಳ್ ವನಪಾಲಕನುಂ ನಂದನಕನುಮೆಂಬ [ಘ]ಟ್ಟಿವಳ್ಳನುಮಲ್ಲಿಗೆ ಬಂದು ವಸುದೇವನಂ ಕಂಡು ನೀಮಾರ್ಗೆಲ್ಲಿಂಬಂದಿರೆತ್ತ ಪೋದಪಿರೆನೆ ಕುಕ್ಕುಟಗ್ರಾಮದಿಂಬಂದೆವೀ ನಿಮ್ಮ ವಿಜಯ ಖೇಡಪುರದೊಳಧ್ಯಯನರ್ಥದಿಂದೋದಲ್ ಬಂದೆವೆಂದು ನುಡಿಯುತ್ತಿರ್ದರನ್ನೆಗಮತ್ತಲುತ್ತರ ದಿಗ್ಬಾಗದೊಳ್ ಧ್ವಜತೋರಣ ಮಾಳಾಳಂಕೃತ ವಿಶಾಳಮಪ್ಪ ಮಂಡಪಮಂ ಕಂಡಿದೇಕಾರಣ ಮಿದಾವುದೆಂದು ಬೆಸಗೊಂಡದೀ ಪೊೞಲನಾಳ್ವ ಜಿತಶತ್ರುವೆಂಬರಸ ಮಕ್ಕಳ್ ವಿಜಯಿಯುಂ ಜಯಸೇನೆಯುಮೆಂಬರ್ ಶ್ರೀಗಂ ಸರಸ್ವತಿಗಂ ರೂಪು ಸೌಭಾಗ್ಯದಿಂ ಮಿಗಿಲಿಂತಪ್ಪ ಕುಮಾರಿಯಲ್ಲಿ ಪಿರಿಯಾಕೆ ಗೀತಪ್ರವೀಣೆ ಕಿಱಿಯಾಕೆ ನಾಟ್ಯವಿದಗ್ಧೆಯರಂತಿರ್ವರುಂ ತಮ್ಮನೀ ಸ್ವಯಂಬರದೊಳ್ ಜಿತಶತ್ರುಮಹಾರಾಜನುಮಂ ಸಭೆಯುಮಂ ತಮ್ಮುಮನೀ ಗೀತನಾಟ್ಯದಿಂ ಗೆಲ್ವಂಗಲ್ಲದೆ ಪೆಂಡರಾಗೆವೆಂದಿರ್ದೊಡವರಮ್ಮ ನುವಾಕೆಗಳ ವಿದ್ಯಾಬಲಮಂ ನಚ್ಚಿ

ಕಂ || ಎನ್ನ ಕುಮಾರಿಯರಂ ವಾ
ಗ್ಸನ್ನಿಧಿರೂಪೆಯರ ನಾಟ್ಯ ಗೀತೆ ವಿದಗ್ಧವ್ಯಾಳೆಯರಂ
ಸುಲಲಿತ ವಿದ್ಯಾನಿಪುಣಿಕೆಯಿಂ
ಗೆಲ್ವಂಗಲ್ಲದೀಯೆನೆಂದತಿ ಮುದದಿಂದಂ(?) ೨೯

ವ || ಎಂದಿಂತು ನಾಲ್ಕು ತಿಂಗಳಿಗೆ ವಿದ್ಯಾಸ್ವಯಂಬರಮಂ ಶಾಲೆಯೆಂದೊಡೆ ಚೋದ್ಯಮೆಂದುಸಿರದಿರೆ ವನಪಾಲನು ನಂದನಕನುಮೆಂಬರಿಂದೆಮಗೆ ಬಿರ್ದಿನರಪ್ಪುದು ಬನ್ನಿಮೆಂದು ಭರಂಗೆಯ್ದು ಮನೆಗೊಡಗೊಂಡು ಪೋಗಿ ಸ್ನಾನಾನ್ನಪಾನದಿಂ ತಣಿಸಿಪ್ಪುದುಮಲ್ಲಿ ಪುಟ್ಟುವರಂ ಕಂಡು ತಾನುಮವರ ಕೆಲದೊಳ್ ಕುಳ್ಳಿರ್ದು ನೂಲಿನಗ್ರ ಗ್ರಂಥಿಮ[ವೇಢಿಮ] ವೇಧಿಮ ಸಂಪೂರಿ[ಮ ಸಂಘಾಯಿಮ] ಮೆಂಬಯ್ದುಂ ತೆಱದ ಪುಷ್ಪಮಾಲೆಗಳಂ ಸಮೆದಾಗಳ್ ಮಾಲೆಗಾಱರ ಕೂಸುಗಳ್ ಚೋದ್ಯಂಬಟ್ಟು ಪುಷ್ಪದ ಬಂಧದೊಳ್ಪುಮನಾ ಕುಮಾರನೊಳ್ಪುಮಂ ನಮ್ಮರಸರ ಮಕ್ಕಳ್ಗೆ ತೋರ್ಪಮೆಂದು ಮೇಳಂಗೊಂಡಾತನನೊಡಗೊಂಡು ಪೋಗಿ ವಿಜಯಿಗಂ ಜಯಸೇನೆಗಂ ತೋಱಿದಾಗಳ್

ಕಂ || ಕುಸುಮಾಲೆಗಳೊಳ್ಪಂ
ಕುಸುಮಾಸ್ತ್ರೋಪಮ ಕುಮಾರನಾಕೃತಿಯೊ[ಳ್ಪಂ]
ಕುಸುಮಶರಂಗಳ್ ಮಾಡಿಯೆ
ಕುಸುಮಾಸ್ತ್ರೇಕ್ಷಣೆಯರೆರ್ದೆಯನುರ್ಚಿಸುತಿರ್ದಂ ೩೦

ವ || ಅಂತವರ್ ತಂದ ಕುಸುಮಾಲೆಯುಮಂ ಕುಮಾರನಾಕಾರಮುಂ ಮನಂಗೊಳೆ ಪೇೞಿವನಾರ್ ಸವೆದರೆಂದೊಡೆಮ್ಮ ಮಾವನ ಮಗನೀತಂ ಸಮೆದನೆಂದೊಡಲ್ಲ ನೀತೆನಮ್ಮ ಮಾವನ ಮಗನಂತಾಗಿರ್ಕುಮೆಂದು ಮನದೊಳೆ ಬಗೆದೀತಂಗಂ ನಿಮಗಂ ನಾಮೆಲ್ಲ ಮಿರ್ದು ಮದುವೆಯಂ ಮಾಡಿದಪ್ಪಮನ್ನೆಗಂ ಪೋಗಲೀಯದಿರಿಮೆಂದು ತಮ್ಮ ಸ್ವಯಂಬರದ ದೆವಸಮನೆ ಪಾರುತಿರ್ದರನ್ನೆಗಮಾಗಳ್ ಗೋಸನೆವಿಡಿ[ಯಲಾ]ಗಳ್ ಪೊೞಲೆಲ್ಲಾ ಕೈಗೆಯ್ದು ಮಹಾವಿಭೂತಿಗಳಿಂ ಬಂದು ತಂತಮ್ಮ ಚೌಪಳಿಕೆಗಳ ಮೇಲೆ ಲೀಲೆಯಿಂದಿರ್ದರಿರ್ಪಿನಮಾ ಕುಮಾರಿಯರಂ ಕಯ್ಗೆಯ್ದು ಸ್ವಯಂಬರಶಾಲೆಯಂ ಪೊಕ್ಕುಚಿತ ಸ್ಥಾನದೊಳಿರ್ದರಿತ್ತ ವಸುದೇವಂ ಕುಸುಮಸಾಯಕ ಸಹಾಯನಾಗಿ ಬಂದು ಪಲರುಂ ರಾಜಕುಮಾರರ ನಡುವಿರ್ದನಾಗಳ್ ವಿಜಯರಂಗದ ನಡುವೆ ವೀಣೆಯಂ ಮುಂದಿಟ್ಟು ಕುಳ್ಳಿರೆ ಜಯಸೇನೆ ಜವನಿಕೆಯೊಳಿರೆ ರಂಗೋಪಕಂಠ[ವ]ಬಳಸಿಯುಂ ವಿಳಾಸಿನೀಜನಮಿರೆ ನಾಟ್ಯಗೀತಕಳಾಕುಶಲರೆಲ್ಲಮರಸನ ಕೆಲದೊಳಿರೆ ಪಲವುಂ ದೇಶಾದೀಶಕುಮಾರರ ನಡುವಣಿಂ ವಸುದೇವಕುಮಾರಂ

ಕಂ || ಉಪಮಾತೀತಂ ವಿದ್ಯಾ
ನಿಪುಣತೆ ರೂಪಿ[ದುಮಭಿನವ ಜವ್ವನಮಿಂದೀ]
ನೃಪಕನ್ನೆಯರ್ಗಮದಱಿಂ
[ದ]ಪಮಾನಂ ಪೊರ್ದೆ ಗೆಲ್ವೆನೆಂದವಯವದಿಂ ೩೧

ವ || ಬಂದು ಪಾದಪ ನಂದನರ್ಕಳುಂ ತನಗೆ ಸಹಾಯವಾಗಿ ರಂಗಮಂ ಪುಗೆ ಕುಮಾರನ ಭದ್ರಾಕಾರಿಮುಮಂ ತೇಜಮುಮಂ ಕಂಡು ಭದ್ರಾಸನಮಿಕ್ಕಿ ಎವಿಳಾಸದಿಂ ಕುಳ್ಳಿರ್ದಾಗಳ್ ವಿಜಯವೀಣೆಯಂ ಕೊಂಡು ಮೇಳಮಂ [ಮು]ರಿದು ತಂತ್ರಿಯಂ ಬಿಗಿದುರದೊಳ್ ಸಾರ್ಚಿ ಮಿಡಿದುನೋಡಿ ಮನಂಗೊಂಡು ಮೃದುಮಧುರ ಧ್ವನಿಗಳೊಳೆಸೆಯೆ ಬಾಜಿಸಿದೊಡಾ ಸಭಾಸದರಾರಾನುಮೀಕೆಯನೀ ವಿದ್ಯೆಯಿಂ ಗೆಲ್ವನ್ನನೊಳನಪ್ಪಡೆ ಬಪ್ಪುದೆನೆ ವಸುದೇವಂ ನಾಮಿನಿಸಾನುಮೆಮ್ಮ ಗೀತಕಳಾಭ್ಯಾಸಮಂ ತೋರ್ಪೆಮೆಂದು ವಿಜಯಿಯ ಮನಮನಿರ್ಕುಳಿಗೊಳ್ವಂತಾಕೆಯ ಕೈಯೊಳಿರ್ದ ವೀಣೆಯಂ ಕೊಂಡು ಮುನ್ನಂ ಸರಸ್ವತಿ ಗ್ರಾಮ ಶ್ರುತಿ ಮೂರ್ಚನೆ ಆನನಂ ಸ್ಥಾನ ವೃತ್ತಿ ಶುಷ್ಕು ಸಾಧಾರಣ ಜಾತಿ ವರ್ಣ ಅಳಂಕಾರಮೆಂಬೀ ದ್ವಾದಶವಿಧಮಪ್ಪ ಸ್ವರಗತದೊಳಂ ನಾಮಾಖ್ಯಾತ ಉಪಸರ್ಗ ನಿಪಾತ ತದ್ಧಿತ ಸಮಾಸ ಕೃತ್ಯೋಪೇತ ವ್ಯಾಕರಣ ಸಿದ್ದಾಂತಾದಿ ಪರಿಕಳ್ಪಿತ ವಿಧಾನಕ್ಕ ಮವಿರುದ್ಧಮಪ್ಪ ಪದಗತದೊಳಂ ಬಹುಲಮಪ್ಪುದಂ ವೀಣಾಶಾರೀರಮೆಂಬೆರಡಱೊಳಂ ತೋಱಿ