ಕಂ || ಶ್ರೀಮದನಾಮಲ ತಾಡತ
ಭೂಮೀಶ ಜಗತ್ಸ್ವಾಮಿಯೆಸೆವ ದ್ವಾರಾವತಿ
ನಾಮಾ ಪುರವರದೊಳ್‌ ನಮಿ
ತಾಮರ ವಿರಚಿತದೊಳಿಂತು ಬಳೆವನ್ನೆವರಂ ೧

ವ || ಕಥಾಂತರಮಾವುದೆಂದೊಡಾದಿಬ್ರಹ್ಮಯುಗ ಕರ್ತಾರಂ ವೃಷಭಜಿನೇಂದ್ರಂ ಮೊದಲೊಳ್‌ ಕ್ಷತ್ರಿಯ ವಂಶಂಗಳಂ ಮಾೞ್ಪಿಂದು ಸೋಮಪ್ರಭನೆಂಬೊಂಗೆ ಕುರುವಂಶವಂ ಮಾಡಿದೊಡೆ ಆತಂ ಪಲಕಾಲಮರಸುಗೆಯ್ದು ಪೋದಿಂ ಬೞಿಯಮಾ ವಂಶದೊಳ್‌ ಹಸ್ತಿಯೆಂಬೊನರಸನಾದೊನಾಗಿ ಹಸ್ತಿನಪುರಮೆಂಬ ಪೊೞಲಂ ಮಾಡಿ ರಾಜ್ಯಂಗೆಯ್ದನಂತೆ ಮತ್ತಮಾ ಸಂತತಿಯೊಳ್‌ ಪಲರುಮರಸುಗಳ್‌ ಸಂದೊಡಾ ಕ್ರಮದೊಳ್ ಶಾಂತನುಮೆಂಬೊಂಪುಟ್ಟಿದನಾತಂಗಂ ಗಂಗೆಯೆಂಬರಸಿಗಂ ಗಾಂಗೇಯನೆಂಬ ಮಗಂ ಪುಟ್ಟಿ ವಿದ್ಯಾವಿದನುಂ ಪ್ರತಾಪಿಯುಮಾಗಿ ನೆಗೞೆ ಶಾಂತನುಮೊರ್ಮೆ ವನಕ್ರೀಡಾನಿಮಿತ್ತಂ ತೊೞಲುತ್ತೊಂದು ತಾಪಸಾಶ್ರಮದೊಳ್‌ ವಿಶ್ರಮಿಸಿರ್ದಲ್ಲಿ ವಸುಧೆಯೆಂಬ ರಾಜಋಷಿಯರ ಮಗಳ್‌ ಸತ್ಯವತಿಯೆಂಬಳಂ ಕಂಡು ಕಣ್ಬೇಟಂಗೊಂಡವರಯ್ಯನಪ್ಪ ತಾಪಸನಂ ಕೂಸುವೇಡಿದೊಡೆಕೊಳ್ವ ಗೊರವಂಗಲ್ಲದೆ ಕುಡೆನೆಂದೊಡೆ ಬೆಚ್ಚನೆ ಸುಯ್ದು ತನ್ನ ಪೊೞಲ್ಗೆ ವಂದು ವಿರಹಾವಸ್ಥೆಯೊಳಿರ್ದುದಂ ಕೇಳ್ದೆಮ್ಮಯ್ಯನ ವಿರಹಪರಿಶ್ರಮಮಂ ಕಳೆವೆನೆಂದಾ ತಾಪಸನಲ್ಲಿಗೆವ ವಂದು ನಿಮ್ಮ ಕೂಸನೆಮ್ಮಯ್ಯಂಗೀಯಿಮೆಂದೊಡಾ ತಾಪಸಾಧಿಪನಿಂತೆಂದಂ

ಕಂ || ಶಾಂತಂಗೆ ನಿನ್ನ ದೊರೆಯಂ
ಸಂತಾನಕ್ಕರ್ಹನಪ್ಪ ಮಗನೊಳಗಾಗಿ
ರ್ದಂತೆನ್ನ ಮಗಳನಾತಂ
ಗೆಂತೀವೆನೊ ಸಕಳ ಭೂತಳಭ್ರಾಜಿತೆಯಂ ೨

ವ || ಕಡೆಯೊಳ್‌ ಕೊಟ್ಟೊಡಾಕೆಯ ಗರ್ಭದಿಂ ಬಂದ ಮಕ್ಕಳ್‌ ಕಡೆಯಾಳ್ಗಳಾಗೆ ಬಾೞ್ವಂತಕ್ಕುಮದಱಿಂದೀಯನೆಂದೊಡಂತಪ್ಪೊಡಾನಿಂತೀ ಬ್ರಹ್ಮಚರ್ಯವ್ರತಮಂ ಕೈಕೊಂಡೆಂ ನಿಮ್ಮ ಮಗಳ್ಗೆ ಪುಟ್ಟಿದಾತಂ ರಾಜ್ಯಕ್ಕರ್ಹನೆನೆ ನೀನಿದನೇಕೆ ಪೂಣ್ದು ನುಡಿವೆ ಬೇಡೆನೆ ಗಾಂಗೇಯನಿಂತೆಂದಂ

ಕಂ || ನುಡಿದಾತನೆ ನಾನೆನ್ನೀ
ನುಡಿಯಂ ನೀಮಿರ್ದು ಕೇಳ್ದಿರದಱೆಂದಿನ್ನೇ
ಪಡೆಮಾತೊ ಕೂಸನೊಸೆದಿ
ತ್ತೊಡ[ಮೀಯದಿರ್ದೊ]ಡಮೆನ್ನ ನುಡಿ ತಪ್ಪುಗುಮೇ ೩

ವ || ಎಂಬುದಂ ತಾಪಸಂ ಕೇಳ್ದಂಜಿದಲ್ಲಿಯೆ ಬೆಳಗಾದಂತೆ ಶಂಕೆಪೋಗೆ ನೀನೀತನೆಂದೈ ಕೂಸನಿತ್ತೆನೆಂದೊಡೆ ರಾಗದಿಂ ಶಾಂತಂಗೆ ಬೞಿಯಟ್ಟಿ ಬರಿಸಿ ಸತ್ಯವತಿಗಮಾತಂಗಂ ಮದುವೆಯಂ ಮಾಡಿ ಪೊೞಲ್ಗೊಡಗೊಂಡುಪೋದನಂತಾ ಸತ್ಯವತಿಗಂ ಶಾಂತನುಗಂ ಚಿತ್ರನು [ವಿಚಿತ್ರನು]ಮೆಂಬರಿರ್ವರ್‌ ಮಕ್ಕಳಾದರಲ್ಲಿ ಚಿತ್ರನೊಂದನುವರದೊಳ್‌ ಸತ್ತಂ ವಿಚಿತ್ರನುಂ ಗಾಂಗೇಯನುಂ ತಮ್ಮೊಳ್‌ ಕೂರ್ತು ನಡೆಯುತ್ತಿರ್ದು ಗಾಂಗೇಯ[೦] ತಮ್ಮಂಗೆ ಕಾಶಿದೇಶಾಧೀಶ್ವರನ ಮಗಳ್ದಿರನಂಬೆಯಂಬಿಕೆಯಂಬಾಲೆಯೆಂಬ ಮೂವರುಮಂ ಬೇಡಿಯಟ್ಟಿ ಪಡೆಯದೆ ಮೇಲೆರ್ದು ಕಾದಿ ಗೆಲ್ದು ಮೂವರುಮಂ ವಿಚಿತ್ರಂಗೆ ಮದುವೆಯಂ ಮಾಡಿಕೊಟ್ಟು ಬಂದಿರ್ದನಂತಾ ಭೀಷಣಾಜಿಯಂ ಗೆಲ್ದುದಱಿಂ ಭೀಷ್ಮರೆಂಬ ಪೆಸರೆಸೆಯೆ ತಮ್ಮಂಗೆ ರಾಜ್ಯಭರಮನೊಪ್ಪಿಸಿರ್ದನಿರೆ

ಕಂ || ನೇತ್ರಮನಃಪ್ರಿಯೆಯ ಮಹಾ
ರಾತ್ರಮತಿಶ್ರೇಯಮಾಗೆ ಸಲೆ ದಿವಸಂಗಳ್‌
ರಾತ್ರಿಯೊಳೊಸೆದೊಪ್ಪಿರ್ದ ವಿ
ಚಿತ್ರಂಗೆ ವಿಚಿತ್ರಮಾಯ್ತು ರಾಜ್ಯವಿಳಾಸಂ ೪

ವ || ಆ ವಿಚಿತ್ರಂಗಮಂಬೆಯೆಂಬರಸಿಗಂ ಪುಟ್ಟುಂಗುರುಡನಾಗಿ ಧೃತರಾಷ್ಟ್ರನೆಂಬ ಮಗಂ ಪುಟ್ಟಿದಿನಂಬಿಕೆಗೆ ಪಾಂಡುವೆಂಬ ಮಗನಾದನಂಬಾಲೆಗೆ ವಿದುರನೆಂಬೊಂ ಪುಟ್ಟಿದನಿಂತು ಮೂವರ್‌ ಮ್ಕಕಳುಮತ್ಯಂತ ಸುಖೋದಯದಿಂ ಬಳೆದು ಯವ್ವನಪ್ರಾಪ್ತರಾಗಿರೆ ಧೃತರಾಷ್ಟ್ರಂಗೆ ತನ್ನ ಮಗಳಂ ಗಾಂಧಾರಿಯೆಂಬೊಳಂ ಕುರುಡನಾದೊಡಂ ಕ್ರಮದಾತಂಗೆ ಕೊಟ್ಟು ಬೞಿಯ ಮಂಧಕವೃಷ್ಣಿಯ ಮಗಳ್ದಿರಪ್ಪ ಕೊಂತಿ ಮಾದ್ರಿಗಳಂ ಪಾಂಡುಗೆ ಬೇಡಿಯಟ್ಟಿದೊಡಮ ವರಯ್ಯನೆನ್ನ ಮಕ್ಕಳಂ ಪಾಂಡುರೋಗವುಳ್ಳಾತಂಗೆ ಕುಡೆನೆಂದಟ್ಟಿದೊಡೆ ಪಾಂಡುಕುಮಾರಂ

ಕಂ || ಕೊಂತಿಯ ಚೆಲ್ವಂ ಕೇಳ್ದು
ದ್ಭ್ರಾಂತಿಸಿ ಕಿವಿವೇಟದೞಲೊಳಿರುಳುಂ ಪಗಲುಂ
ಚಿಂತಿಸಿ ಸೈರಿಸದಾಕೆಯೊ
ಳೆಂತುಂ ಕೂಡದೊಡೆ ಚಾೞಿನೆಂಬುದ ಬಗೆಯಿಂ ೫

ವ || ಸಹಾಯರನೊಡಗೊಂಡು ಪೆಱರಾರುಮಱಿಯಂದಂತು ಪೋಗಿ ಸೂರ್ಯ ಪುರಮನೆಯ್ದಿ ನಂದನವನದೊಳ್‌ ವಿಶ್ರಮಿಸಿರ್ಪಿನಮಾ ಬನಕ್ಕೆ ಕೊಂತಿ ವನಕ್ರೀಡೆಗೆ ಸಖಿಯರೊಡನೆ ಬಂದಿರ್ದು ಪುಳಿನಸ್ಥಳದೊಳೆಯ್ದೆವಂದು ಕುಮಾರನಂ ಕಂಡು ಮನಂಗೊಂಡು ನೋಡುತ್ತಿರೆ ಕನ್ನೆಯಂ ತೊಟ್ಟನೆ ಕಂಡು ನಡೆನೋಡಿ

ಚಂ || ತೊಡರ್ದಿರೆ ದಿಟ್ಟಿ ಚೆಲ್ವಿನೆಡೆಯೊಳ್‌ ಕಡುಚೆಲ್ವಿನೊಳಾದ ಮೆಚ್ಚು ಮೆ
ಚ್ಚೊಡರಿಸಿ ನೋವನಾದ ಕಡುನೋವಿನೊಳಾದುದು ನಾಣಕೇಡು ನಾ
ಣ್ಗಿಡೆ ಪದವೆತ್ತನೆಂದಳಿಪಿ ಬಂದುದು ಬಂದಳಿಪಿಂದಮರ್ಕರೋ
ಗಡಿಸದೆ ಕೂಡಿರಲ್‌ ಪಡೆವುದಾಯ್ತವರಿರ್ವರ ಚಿತ್ತವೃತ್ತಿಯೊಳ್‌ ೬

ವ || ವನದೊಳಗೆ ಪೂವಿನ ಪಸೆಯಂ ಪಾಸಿ ಕುಳ್ಳಿರಿಸಿ ಗಾಂಧರ್ವವಿವಾಹಮಂ ಮಾಡಿದಪ್ಪೆ ನೆಂದುಮೊಡಂಬಡಿಸಿ ಕೈನೀರೆಱೆದು ಕೂಡಿ ಗೆಂಟಾಗಿರ್ದಾಗಳ್‌ ನೆರೆದನ್ಯೋನ್ಯಾಸಕ್ತರಾಗಿ ನಾಡೆಯುಂ ಪೊತ್ತಿರೆ ಸಖಾಯರ್‌ ಸಾರೆವಂದು ನೀವೆಂತುಂ ಕೂಡಿದವರಿರಿನ್ನೆಂತುಂ ಕೂಡದಿ[ರ]ದು ತಲ್ಲಳಿಸದೆ ಬನ್ನಿಮೆಂದುಮವರಗಲ್ಚಿ ಪಾಂಡುಕುಮಾರನನೊಡಗೊಂಡು ಸಖಾಯರ್‌ ಹಸ್ತಿನಪುರಕ್ಕೆ ಪೋದರಿತ್ತ ಕೊಂತಿಯುಮಂತೆ ಬನದಿಂ ಪೊಱಮಟ್ಟು ಬಂದೆಂದಿನಂತೆ ತನ್ನ ಕನ್ಯಾಮಾಡದೊಳಿರ್ದು ಕೆಲವು ದಿವಸದಿಂ ಗರ್ಭಚಿಹ್ನಂಗಳಾಗೆ ಸಖಿಯರ್ಕಳಱಿದು ಪೆಱರಾರುಮಱಿಯದಂತುಂ ಗುಪ್ತದೊಳಿರಿಸಿ ನವಮಾಸಂ ನೆಱೆದು ಗಂಡುಗೂಸಂ ಪೆತ್ತಾಗಳೆ ಮುನ್ನಮಣಿದು ಸಮೆದಿರ್ದ ಮಂದಸಿನೊಳ್‌ ಕೂಸನಿಟ್ಟು ರತ್ನಂಗಳಂ ಪೊಯ್ದಿವಂ ಕೊಂಡೀ ಕೂಸಂ ನಡಪುಗೆಂದಕ್ಕರಂಗಳಂ ಬರೆದು ನಿಚ್ಛಿದ್ರಮಾಗೆ ಮುಚ್ಚಿ ಜಗುನೆಯೆಂಬ ತೊಱೆಯೊಳ್‌ ಬಿಟ್ಟು ಬಂದೊಡಾ ತೊಱೆಯೊಳ್‌ ಮಂದಸು ಪೋಗಿ ಚಂಪೆಯೆಂಬ ಪೊೞಲ ಸಾರೆಯಾದಾಗಳಂಬಿಗನದಂ ಕಂಡುಕೊಂಡು ಪೋಗಿ ತೆಱೆದು ನೊೞ್ಪಾಗಳ್‌

ಕಂ || ಕಿವಿ ಶಬ್ದಂಗಿಡುವಿನಮಿ
ಭುವನಂ ಪೊಗೞ್ವಂತು ನೆರೞ್ವೆನೆಂಬುದಱೊಂದಂ
ದ[ವನಂದ]ನುಕರಿಪಂತಿರೆ
ಕಿವಿಯೆರಡುನೆರಡು ಕೆಯ್ಯೊಳಂ ಪಿಡಿದಿರ್ದುಂ ೭

ವ || ಆಂತಿರ್ದ ಬಾಳಕನಂ ಕಂಡು ಕರ್ಣಧಾರನಾಗಿರ್ದನದಱಂ ಕರ್ಣನೆಂಬ ಪೆಸರಕ್ಕೆಂದು ಪೆಸರಿಟ್ಟೆತ್ತಿಕೊಂಡು ಪೋಗಿ ನಡಪುತ್ತಿರ್ದಡಾ ಪೊೞಲನಾಳ್ವ ಸೂರ್ಯನೆಂಬರಸನಾ ಕೂಸಿನ ಬಂದಂದಮಂ ಕೇಳ್ದು ತರಿಸಿನೋಡಿ ಕುಲಜನೆಂದಱಿದು ಮಕ್ಕಳಿಲ್ಲದಿರ್ದ ತನ್ನ ರಾಧೆಯೆಂಬರಸಿಗೆ ಕೈಕೊಟ್ಟು ನಡಪಿ ಸೂರ್ಯಪುತ್ರನಾದೊನಾಗೆ ರಾಧೆಯೆಂಬರಸಿಗಂ ಸೂರ್ಯಂಗಂ ಬೞಿಯಂ ಕರ್ಣನೆಂಬೊಂ ಮಗನಾದನಂತು ಕರ್ಣನಲ್ಲಿ ಬಳೆಯುತ್ತಿರ್ದನತ್ತ ಕೊಂತಿಯ ಗಾಂಧರ್ವ ವಿವಾಹಮನವರಯ್ಯಂ ಕೇಳ್ದಿಂ ಪೆಱದಂ ಬಗೆಯಲಾಗೆಂದು ಪಾಂಡುಕುಮಾರಂ [ಗಮೋಲೆ]ಯನಟ್ಟಿ ದೊಡಾತನಱೆದುಮಾಕೆಯ ತಂಗೆಯುಮನೀವುದೆಂದೊಡಂತೆಗೆಯ್ವೆನೆಂದಟ್ಟಿ ಬರಿಸಿ ಕೊಂತಿಯುಮಂ ಮದ್ರಿಯುಮಂ ವಿವಾಹ ವಿಭೂತಿಯಿಂ ಕೊಟ್ಟೊಡೆಕೊಂಡು ಕೆಲವು ದಿವಸದಿಂ ಮಗುೞ್ದು ಬಂದು ಪೊೞಲೊಳ್‌ ಸುಖಮಿರೆ ಶಾಂತನು ತಾಂ ಕಾರಣಮಾಗಿ ಬ್ರಹ್ಮಚರ್ಯವ್ರತಂ ಕೊಂಡು ಸಲಿಸುತ್ತಿರ್ದ ಮಹಾಧ್ಯೆರ್ಯಮಂ ಕಂಡು ಬಗೆದು ಮಗನ ಧೈರ್ಯಮಿಂತೆನ್ನೞಿಪಿಂಗೆಂದುಂ ಸಂಸಾರ ವಿರಕ್ತನಾಗಿ ತಪಸ್ಥನಾದಿಂ ಬೞಿಯಂ ವಿಚಿತ್ರನುಂ ಗಾಂಗೇಯಂ ಜ್ಯೇಷ್ಠನುಂ ಸಮರ್ಥನುಮಾಗಿಯುನ್ನತನಾಗೆ ರಾಜ್ಯ ಮನೊಪ್ಪಿಸಿದುಪಕಾರಕ್ಕಂ ಸವತಿಯ ಮಗನಾಗಿಯುಂ ಸ್ತ್ರೀಸಂಪರ್ಕವಿದೂರನಾಗಿ ಭವಮಂ ಕಳೆವುದಕ್ಕಂ ಕೊಕ್ಕರಿಸಿ ನಿರ್ವೇಗದಿನಣ್ಣನಲ್ಲಿಗೆವಂದಾಂ ಸಂಸಾರವಿರಕ್ತನಾದೆಂ ಧೃತರಾಷ್ಟ್ರಂ ಪಿರಿಯ ಮಗನಾಗಿಯುಮಂಧಕಂ ರಾಜ್ಯಯೋಗ್ಯನಲ್ಲಂ ಪಾಂಡು ಕಿಱಿಯ ಮಗನಾಗಿಯುಂ ತೇಜಸ್ವಿಯುಂ ಸಮರ್ಥನಾಗಿರ್ಪಂ ಕ್ರಮಮನಾತಂಗೆ ಮಾಡುವಮೆನೆ ನೀನಱೆವೆಯೆಂದ ಮಾತಿನೋಜೆಯೊಳಿರ್ಬರುಂ ಪಚ್ಚಾಳೆಂದು ಮಾಡಿ ತಂಪಬಟ್ಟು ಪೋದನಂತು ಪಾಂಡು ತನ್ನ ಭಾಗಕ್ಕರಸನಾಗಿ ಪರಿವಾರಮುಂ ಪ್ರಜೆಯುಮಂ ತನ್ನೊಳ್‌ ಪತ್ತಿಸಿ ಪೆರ್ಚೆ ನೆಗೞುತ್ತಿರ್ದನಿರೆಕೊಂತಿಗೆ ಗರ್ಭಮಾಯ್ತು ಪಾಂಡುರಾಜಂ ಮದ್ರಿಗತ್ಯಂತ ಸ್ನೇಹಿತನಾಗಿರ್ದೊಂದು ದಿವಸಂ ಮದ್ರಿಯನೊಡಗೊಂಡು ವನಕ್ರೀಡೆಗೆ ಪೋದಲ್ಲಿ ರಾಗೋದ್ರೇಕದಿನಿರ್ದಂತೆ ನಡಪಾಡುತ್ತಮಾ ಬನದ ಪೊಱಗಂ ಪಾಂಡುರಾಜಂ ದಿಶಾವಳೋಕನಂಗೆಯ್ಯೆ ಹರಿಣಿಮಿಥುನಂಗಳ ಸಂಪರ್ಕಮಂ ಕಂಡು ಬಿಲ್ಲಂಕೊಂಡು ರಾಗದಿನವರ ಸಮೀಪಕ್ಕೆ ನಡೆದೊಂದೆಸುಗೆಯೊಳೆರಡುಮಂ ಸಾಯೆಚ್ಚೊಡೆ ಮದ್ರಿಪರಿತಂದು ಕಂಡು

ಕಂ || ಪುಲ್ಲಂ ಕಚ್ಚಿದ ನರನಂ
ಕೊಲ್ಲಂ ಭಟನಿವರ ಬಾಯೊಳುಂ ಬಸಿಱೊಳಗುಂ
ಪುಲ್ಲೆ ಗಡ ಬಗೆವಡದಱಿಂ
ಪುಲ್ಲೆಗಳೆನಿಸಿರ್ದುವಕ್ಕಟವನೇಕೆಚ್ಚೈ ೮

ಉ || ಕಾವವರಾರುಮಿಲ್ಲ ಧನಮೆಂಬುದು ಸೀರನಿತಿಲ್ಲ ದೋಷಮೆ
ಬಾವುದುಮಿಲ್ಲ ಬೆಚ್ಚುವುದು ಮೆಯ್‌ ಮುಳಿಸಿಲ್ಲದ ಮೂಗುಜಾತಿಗಳ್‌
ಮೇವುದು ಪುಲ್‌ ಜಲಂ ಕುಡಿವುದಿರ್ಪೆಡೆಯುಂ ಪೞುವಂತುಮಿಷ್ಟಸಂ
ಸೇವನೆಯಲ್ಲಿ ಮೆಯ್ಯಱಿಯದಿರ್ದವನೇಂ ಗಳ ಕೊಲ್ವುದೊಳ್ಳಿತೇ ೯

ವ || ಎಂಬುದಂ ಕೇಳುತ್ತೆ ಪಾಪಚಿತ್ತಂ ಪೋಗೆ ವೈರಾಗ್ಯಭಾವಮಾಗೆ ಬಿಲ್ಲುಮಂಬುಮ ನೀಡಾಡಿ ಪೊಲ್ಲದಾಯ್ತೆಂದು ಚಿಂತಿಸಿಮಾ ಬನಮಂ ಪೊಕ್ಕಲ್ಲಿ ಸುವ್ರತಸ್ವಾಮಿಗಳೆಂಬಾಚಾರ್ಯರ್‌ ಸಮುದಾಯಂಬೆರಸು ಬಂದಿರ್ದರೆಂದು ವನಪಾಲಕಂ ಬಿನನಪಂಗೆಯ್ಯೆರಾಗದಿನಲ್ಲಿ ನಡೆದು ಋಷಿಸಮೂಹಮಂ ಬಲಗೊಂಡು ಬಂದು ಗುರುಪರಿವಿಡಿಯಿಂ ಬಂದಿಸಿ ಭಟಾರಾ ಪಾಪಮೆಂಬು ದೆಂತುಟದಱ ಫಲಮೆಂತುಮೆನೆ ಧರ್ಮಮೆಂಬುದೇನದಱ ಫಲಮೆಂತುಮೆನೆ ಭಟಾರರೆಂದರ್‌ ಕೊಲೆ ಪುಸಿ ಕಳವು ಪರದಾರಂ ಪರಿಗ್ರಹಮೆಂಬಯ್ದಱೊಳಮರ್ಥಿವಟ್ಟು ಮೆಯ್ವಿಟ್ಟು ನೆಗೞ್ದರನೆಂತುಂ ಆನೆ ತನ್ನ ಮೆಯ್ಯೊಳ್‌ ದೂಳಿಯನೊಟ್ಟಿ ಕೊಂಡಾಡೆ ಮಲಂ ಪತ್ತುಗುಂ ಮಿಳಿಯಂ ತಾನೆ ಕೊಟ್ಟು ಕಟ್ಟುಪಡುಗುಮಂತೆ ಪಾಪಳಮಳಂ ಪತ್ತಿ ಬಂಧಸ್ಥನಕ್ಕುಮಂತೆ ಪಾಪಬಂಧದಿಂ ಚತುರ್ಗತಿಗಳೊಳೆಲ್ಲಿ ಪುಟ್ಟಿದೊರಲ್ಲಿಯಲ್ಲಿಯೆ ದುಃಖಮನುಣ್ಬರದೆಂತೆನೆ

ಮಂದಾನಿಲ ರಗಳೆ ||
ಪಿರಿದಾದಘವಶದೊಳ್‌
ನರಕಕ್ಕಿಳಿವರ್‌ ದುಸ್ಥಿತಿಯೊಳ್‌ (?)
ಇದುವಿದಱ ಫಲಂ ನಿಮಗೆಂದಾಗಳ್‌
ಪದೆದೊರ್ಬರನೊರ್ಬರ್‌ವಂದಾಗಳ್‌
ಕುಱಿದಱಿದೊಡನೊಡನೊಟ್ಟುತ್ತಿರೆಯುಂ
ಕಿಱಿಕಿಱಿದೊಡನೊಡನೊಟ್ಟುತ್ತಿರೆಯುಂ
ಅರಿದೆಡೆಯೊಳ್‌ ಮೆಣಸಂ ತಂದಿಡೆಯುಂ
ಸೆರಗಿಲ್ಲದೆ ಮುಮ್ಮುರಿಯೊಳು[ಮಿ]ಡೆಯುಂ
ಕರಗಸದೊಳ್‌ ಬಿಡದರಿಯುತ್ತಿರೆಯುಂ
ಪಿರಿಯಸುವೆಯೊಳಿರದರೆಯುತ್ತಿರೆಯುಂ
ಪಿಡಿಪಿಡಿದಡ್ಡಂಗಾಸುತ್ತಿರೆಯುಂ
ಕಡಿಕಡಿದೆತ್ತಂ ಸೂಸುತ್ತಿರೆಯುಂ
ಅಡಿಯಿಂದಂ ತಿದಿಯುಗಿಯುತ್ತಿರೆಯುಂ
ನಡೆಯಿಱಿದೆರ್ದೆಯುಂ ಬಗಿಯುತ್ತಿರೆಯುಂ
ಕಡುಗಾಸಿದ ರೂಪಂ ಪತ್ತಿಸೆಯುಂ
ಕಡುಪಿಂ ಗುಗ್ಗುಳಮಂ ಪೊತ್ತಿಸೆಯುಂ
ಶ್ರಮಮಾಗಿರೆ ಗಿರಿಗಳನಡರಿಸೆಯುಂ
ಹಿಮದೆಡೆಯೊಳ್‌ ಬಿಬ್ಬರ ಬಿರಿಯಿಸೆಯುಂ
ಅಸಿಪತ್ರದ ಮರಗಳನೇಱೆಸಿಯುಂ
ದಸಿಯೊಳ್‌ ನೆಱೆದೆಡೆಗಳನೂಱಿಸೆಯುಂ
ನಮೆದೀ ತೆಱದಿಂ ದುರ್ಗತಿಯೊಳ್‌
ಕ್ರಮದಿಂ ಪುಗುತಿರೆ ತಿರ್ಯಗ್ಗತಿಯೊಳ್‌
ಇಱಿಮುಱಿದಿಕ್ಕುತ್ತೇ ಕಟ್ಟಿಸೆಯುಂ
ಬರೆಯಿ[ದ್ದೆ]ಸೆಯುಮುಳಿಯೊಳ್‌ ಬೆಟ್ಟಿಸೆಯುಂ
ಎಡೆವುಡುಗದೆ ಸಲೆ ಪೇಱುತ್ತಿರೆಯುಂ
ನಿಡುವಯಣದೊಳಿರದೇಱುತ್ತಿರೆಯುಂ
ಒಡಗೂಡಲು ಸಾರ್ತರೆ ಮುಳಿದೆಸೆಯುಂ
ನಡೆನೋಡುತಮಿರ್ಪವನುೞಿದೆಸೆಯುಂ
ಆಱುನೀರ್ಗಱುತೆಯ್ತರೆ ಪಾಯ್ದಿಸೆಯುಂ
ಮಱಿಗಳ್‌ ಬಸಿರೇಂದುಗೆ ಸಾರ್ದೆಸೆಯುಂ
ಚಲದಟ್ಟುತ ಕರ್ಕಡೆಯಿಂದಡೆಯುಂ
ಬಲೆ ಪಿಡಿದೆಂದುಂ ಸೆಱೆಯೊಳೆಯಿಡೆಯುಂ
ಆನಿ[ಲಾ]ಗ್ನಿ ಜಲಂಗಳ ಪುಟ್ಟಿಸೆಯುಂ
ತಿನಲೊಂದೊಂದಂ ಪಱಿ[ಪಱದಿ]ಡೆಯುಂ
ತಿರಿಕಾನ್ವಯದೊಳ್‌ ನಮೆದಿಂ ಬೞಿಯಂ
ನನರಾದೊಡಮಘತತಿ ಬರೆ ಬಳೆಯುಂ
ಎಳೆಯೆಳೆಕೊಳೆ ನಾರ್ಪವನಿವನೆನೆಯುಂ
ಅಳೆ ಅ[ಳೆ] ನಾಣ್ಗೆಟ್ಟವನಿವನೆನೆಯುಂ
ಕಡು ಕಿಸುಗುಳನಂ ಕಳೆಕಳೆ[ಯೆ]ನೆಯುಂ
ಬಿಡದೆಂಜ[ಲ ಪಾ]ಯ್ದ ವನಿವನೆನೆಯುಂ
ಪೞಿ ಪೊರ್ದಿರೆ ಬಾೞ್ವಿವನಿವನೆನೆಯುಂ
ಅಱಿದಿರ್ದೞಿಮೆಯ್ಯವನಾಗಿರೆಯುಂ
ಪೆಱವುಂ ಜಾತ್ಯಂಧನುಮಾಗಿರೆಯುಂ
ಪಲವುಂ ಕಾಲಂ ಸೆಱೆವಿಡಿದಿರೆಯುಂ
ಕುಲಮುಂ ನಾಣುಂ ತಮಗೞಿದಿರೆಯುಂ
ಪರಿಭವದೊಳುಮೆರ್ದೆಗೊಳೆಯುತ್ತಿರೆ[ಯುಂ]
ಕರಮೊ[ತ್ತಿ]ಕುತ್ತಮದರ್ವಿಸುತಿರೆಯುಂ
ಅಳಿವೆಯ್ತರೆ ಕೋಳ್ಗುದಿಗೊಳುತಿರೆಯುಂ
ಸುಳಿಸುಳಿದಳಿಪಿಂ ಕಡುಗೊಳುತಿರೆಯುಂ
ನರಲೋಕಮುಮಾಯ ಫಲಂ (?)
ಸುರಲೋಕದೊಳಂ ಬರೆ ಪಾಪಫಲಂ
ಸುರರೊಳ್‌ ಮಿಗಿಲಪ್ಪವರ್ಗೆಱಗಿರೆಯುಂ
ಬಸಮಲ್ಲದ ಕಿಲ್ಬಿಷರಾಗಿರೆಯುಂ
ಬೆಸಕೆಯ್ಯಲೆ ಕಿಂಕರಮಾಗಿರೆಯುಂ
ಸಾವೆಯ್ತರೆವರಲಿರ್ದಾಯೆಡೆಯೊಳ್‌
ಓವೋವಿಂ ಪುಟ್ಟುವೆನಾವೆಡೆಯೊಳ್‌
ಕೊಳೆವಸಿಱೊಳಗಿರ್ಪಂತಾದಪುದೋ
ಅಸುಖಂ ಮಿಗೆ ಪುಟ್ಟುವುದಾದಪುದೋ
ಒಸೆದೊರ್ಮೊಲೆಯುಂಬಂತಾದಪುದೋ
ಉರುಗುರದೊಳ್‌ ಪೊಱೆದಿರವಾದಪುದೋ
ಪರವಸದೊಳ್‌ ಬಾೞ್ವುದುಮಾದಪುದೋ
ಎನುತಂ ನವಚ್ಚಿತ್ತ ಕ್ಷಿತಿಯೊಳ್‌ (?)
ಘನ ದುರಿತದಿನಿಂತೀ ಚತುರ್ಗತಿಯೊಳ್‌
ಪಲವುಂ ಭವದೊಳ್‌ ದುಃಖಜ್ವಳನೆಯ
ಸುಡೆಬೆಂದುಂ ನೊಂದುಂ ತಿರಿತಂದುಂ
ಪಲವುಂ ಭವಮಂ ಪಾಪದ ಫಲದಿಂ
ನವೆಯುತಮಿರ್ಪೀ ಸಂಶ್ರುತಿಯೊಳ್‌ ೧೦

ವ || ಇಂತು ಪಾಪದ ಬರುವುಮಂ ಬಂದ ದುಃಖದ ಘಲಮುಮಂ ಪೇೞ್ದಿಂ ಧರ್ಮಮೆಂಬುದು ದಾನ ಪೂಜೆ ಶೀಲಮುಪವಾಸಮೆಂದು ನಾಲ್ಕುಂ ತೆಱನಲ್ಲಿಯಾಹಾರದಾನಮಭಯದಾನ ಶಾಸ್ತ್ರದಾನ ಭೈಷಜ್ಯದಾನಮೆಂಬಿವು ಪಾತ್ರವಿಶೇಷಮಱಿದು ಕುಡುವುದು ದಾನಮೆಂಬುದಕ್ಕುಂ ದೇವಗುರುಗಳನಷ್ಟ ವಿಧಾರ್ಚನೆಯಿನರ್ಚಿಸುವುದು ಜಿನಮಹಾಮಹಿಮೆಯಂ ಮಾಡುವುದು ಪೂಜಾಧರ್ಮಮೆಂಬುದು ಬ್ರತಪರಿರಕ್ಷಣಂ ಮಾೞ್ಪುದು ಶೀಲಮೆಂಬುದು ತಿಂಗಳ ನಾಲ್ಕುಂ ಪರ್ವದೊಳಂ ಯಥಾಶಕ್ತಿಯಿಂ ನೋಂಪುದುಪವಾಸಮೆಂಬುದಿಂತು ಚತುರ್ವಿ[ಧ]ಧರ್ಮದೊಳಮಯ್ದಣುಬ್ರತಂಗಳಂ ಕೂಡಿ ಪನ್ನೊಂದು ನೆಲೆವರಮುತ್ತರೋತ್ತರಂ ನೆಗೞ್ವುದಿಂತುಮಿದು ತಾಂ ಶ್ರಾವಕಧರ್ಮಮುತ್ತಮಕ್ಷಮಾ ಮಾರ್ದ[ವ ಆರ್ಜವ] ಸತ್ಯ ಶೌಚಃ ಸಂಯಮ ತಪ[ಸ್ಸು ತ್ಯಾಗ ಆ] ಕಿಂಚನ್ಯ ಬ್ರಹ್ಮಚರ್ಯಮೆಂಬ ಪತ್ತುಂ ತೆಱದ ಧರ್ಮದೊಳಂಸಾ…. ಭೀರುವಾಗಿ ತತ್ತ್ವರುಚಿಯೊಳ್‌ ನೆಗೞ್ವುದು ಯತಿಧರ್ಮಮಿಂತೀಯೆರಡುಂ ಧರ್ಮದೊಳಾವುದಂ ಕೈಕೊಳಲಾರ್ಕುಮದಂ ಕೈಕೊಂಡು ನೆಗೞ್ವುದು ಯತಿಧರ್ಮಮಿಂತೀಯೆರಡುಂ ಧರ್ಮದೊಳಾವುದಂ ಕೈಕೊಳಲಾರ್ಕುಮದಂ ಕೈಕೊಂಡು ನೆಗೞ್ವುದು ಮೇಗಳ ಭವಂಗಳೊಳ್‌ ಚಕ್ರವರ್ತಿತ್ವಮುಮಂ ಪಡೆದನುಕ್ರಮದಿಂ ದೀಕ್ಷೆಗೆಯ್ದು ಭುವನತ್ರಯಸ್ವಾಮಿಯಾಗಿರ್ದನಂತಜ್ಞಾನಮನಂತದರ್ಶನಮನಂತವೀರ್ಯಮನಂತಸುಖಮೆಂಬನಂತಚತುಷ್ಟಯದೊಳ್‌ ಕೂಡಿ ಶಾವತಮಪ್ಪ ಮೋಕ್ಷಪದದಲ್ಲಿಪ್ಪರೆಂದು ಪೇೞೆ ಕೇಳ್ದು ಪಾಂಡುರಾಜನೆಂಗುಂ ಭಟ್ಟಾರಾ ನಿಮ್ಮಡಿಯ ಬೆಸಸಿದಂತೆ ಧರ್ಮಂಗೆಯ್ದ ಪರಿಭವದೊಳ್‌ ಸತ್ತು ಮೇಗಣ ಭವದೊಳ್‌ ಮತ್ತೊಂದು ರೂಪುಗೊಂಡು ಪುಟ್ಟಿ ತನ್ನ ಮುನ್ನಿನ ಗೆಯ್ದ ಧರ್ಮದ ಫಲಮಂ ಪಡೆಗುಮೆಂಬುದನೆಂತು ನೆಂಬುವುದು ಮೆಯ್ಯಪ್‌ಒಒಡೆಲ್ಲಿಯೞಿದುೞಿದು ಪೋಪುದು ಜೀವನೆಂತು ಪೋದಪುದಿಂತೆಂಬೆಡೆಯೊಳೆಂತು ಪುಟ್ಟಿದಪುದೆಂಬುದಂ ಕಾಣಲುಮಱಿಯಲುಮಾಗದೀಯೆಡೆಯಂ ತಿಳಿಯೆ ಬೆಸಸಿಮೆನೆ ಭಟ್ಟಾರರಿಂತೆಂದರ್‌

ಮ || ಪದದೊಳ್‌ ಬಿತ್ತಿದ ಬೀಜದೊಳ್‌ ಮೊಳೆ ಪೊದೞ್ದಾ ಬೀಜಮಂ ಪತ್ತುವಿ
[ಟ್ಟುದು] ಮತ್ತೊಪ್ಪಿರೆ ಪುಟ್ಟಿ ಪೆರ್ಚಿ ಫಲಮಂ ಪೊಂದಂದಮಂತಂತೆ ಧ
ರ್ಮದೊಳಾತ್ಮಂ ಪೊರೆದಂದು ಮುನ್ನಿನೊಡಲಿಂ ಗೆಂಟಾಗಿ ದಿವ್ಯಸ್ವರೂ
ಪದೊಳೆಂದುಂ ಸುಖಿಯಕ್ಕುಮೆಂಬುದನದಂ ಕಂಡಪ್ಪಡಂ ನಂಬಿರೇ ೧೧

ವ || ಅಂತೆಂಬುದಾವುದೆಂದೊಡಾರಂಭಂಗೆಯ್ವಂ ಮುನ್ನ ಕೆಯ್ಯ ಕಸವಂ ಸೋದಿಸಿ ಪದದೊಳ್‌ ಬಿತ್ತುವಂ ಧರ್ಮಂಗೆಯ್ವಂ ಮನ್ನಂ ಬಗೆಯ ಪೊಲ್ಲಮೆಯಂ ಸೋದಿಸಿ ಧರ್ಮಮಂ ಪತ್ತುವೊಡಾತನಂ ಬೀಜದೊಳಡಿಯೊಳ್‌ ಬೇರುಚ್ಚಿ ನಿಲ್ವುದುಮಂ ಬಗೆ ಮೊಳೆ ಪೊಱಮಟ್ಟು ಪೆಚ್ಚಿ ಫಲಮಪ್ಪುದುಮಂ ಕಾಣಲಪ್ಪಂತೆ ಧರ್ಮಮುಂ ಪತ್ತಿದೊಂಗಿರ[ದ]ಲ್ಲಿ ಯಶಂ ನಿಲ್ವುದಕ್ಕಂಮೇಗೆ ಸುಖಿಯಪ್ಪುದಕ್ಕಂ ಸಂದೆಯಂಬಡವೇಡ ಧರ್ಮದ ಮೇಗಪ್ಪ ಫಲಮನಿಲ್ಲಿಯುಂ ಕಾಣಲಕ್ಕುಮೆಂತೆನೆ

ಕಂ || ಬಡವಂ ಸುಭೂಮಿಯೊಳ್‌ ಪದ
ವಡೆದರ್ಥಿಯೆ ಬಿತ್ತಿದಂತೆ ನಂಬುಗೆವಡೆದಂ
ತೊಡರಿಸಿದ ಧರ್ಮದಿಂದಾ
ಗಡೆ ಮನ್ನಣೆವಡೆವುದಱಿಯೆ ಪೇೞಿದೆ ಫಲಮಂ ೧೨

ವ || ಮಳೆಯಪ್ಪಾಗಳ್‌ ಮುನ್ನಮೆ ಮೊೞಗುಂ ತಣ್ಗಾಳಿಯುಮಪ್ಪಂತೆ ಧರ್ಮಂಗೆಯ್ವನ ಫಲಮನಿಲ್ಲಿಯ ಮನ್ನಣೆಯುಮಂ ಮಹಿಮೆಯನಱಿಪುತಿರ್ಪುದನೊಳ್ಳಿತ್ತು ಬಗೆದು ಭಾವಿಸಿ ನೋೞ್ಪುದು

ಉ || ಧರ್ಮದರಾಗೆ ಮೇಗೆ ಸುಖಿಯಪ್ಪುದು ಸಂದೆಯಮೆಂದು ಗೆಯ್ಯದಿ
[ರ್ಪೊರ್ಮೆ]ಮರುಳ್ತನಂ ತಗುಳ್ದವಂದಿರನಾ ಕೃತಿಯಂದದಿಂ ಸಮಾ
[ನರ್ಮ]ನುಜರ್ಕಳೇಕೆ ಸಮನಾಗರೊ ಸಯ್ಪಿನೊಳಾದ ಸಯ್ಪು ತಾಂ
ಧರ್ಮದಿನುಗ್ರದುಃಖಮದು ಪಾಪದಿನಲ್ಲದೆ ಕೆಮ್ಮನಪ್ಪುದೇ ೧೩

ವ || ಅಂತವಯವದೊಳಮಾಕಾರದೊಳಮೋರನ್ನರಪ್ಪ ಮಾನಸರೊಳ್‌ ಕೆಲರ್‌ ಶ್ರೀಮಂತರಪ್ಪುದಂ ಧರ್ಮದ ಫಲಮೆಂದು ಬಗೆ ಕೆಲರ್‌ ದುಃಖಿಗಳಪ್ಪುದಂ ಪಾಪದ ಫಲಮೆಂದು ಬಗೆವುದೆಂತೆನೆ ತಾನು ಹೇತುಗಳಿಂ ತೋಱಿದಾಗಳ್‌ ಪಾಂಡುರಾಜಂ ತಿಳಿದೆಂ ನಂಬಿದೆಂ ಶ್ರಾವಕವ್ರತಂಗಳನೇಱಿಸಿಮೆಂದು ಕೆಯ್ಕೊಂಡು ಭಟ್ಟಾರರಂ ಬಂದಿಸಿ ತಾನುಂ ಮದ್ರಿಯುಂ ಪೊೞಲಂ ಪೊಕ್ಕಿರ್ದರಸಂಗಿರುಳುಂ ಪಗಲುಂ ಧರ್ಮಮೆ ರುಚಿಯಾಗೆ ನೆಗೞುತ್ತಿರ್ಪಿನಂ ಕೊಂತಿ ನವಮಾಸಂ ನೆಱೆದು ಮಗನಂ ಪೆತ್ತಾಗಳೊಸಗೆಯಂ ಮಾಡಿ ಪತ್ತನೆಯ ದಿವಸದಂದು ಯುಧಿಷ್ಠಿರನೆಂದು ಪೆಸರನಿಟ್ಟು ಸುಖದಿಂ ಬಳೆದುದಂ ಕಂಡು ವಿದಗ್ಧಜನಂಗಳೆಲ್ಲಮರ್ತಿವಟ್ಟು ನೋಡೆ

ಉ || ಧರ್ಮಮಹಾತ್ಮದಿಂದೊಗೆದ ಪುಣ್ಯಮೆ ಮಾನಸರೂಪುಗೊಂಡು ಸ
ದ್ಧರ್ಮಪರಂಗೆ ಪುಟ್ಟಿದೊನ ನಾಮಮನೇಂ ಪೆಱದೊಂದನೆಂಬುದೇ
ಕೂರ್ಮೆಯೊಳೊರ್ಮೆ ಧರ್ಮವೆಸರಾಗಲೆವೇೞ್ಪುದು ನೆಟ್ಟನೆಂದು ಮಾ
ನ್ಯರ್‌ ಮನಮೊಲ್ದು ಮಾಡಿದ ಪೆಸರ್‌ ನೆಗೞ್ದತ್ತು ಧರಾತಳಾಗ್ರದೊಳ್‌ ೧೪

ವ || ಯಧಿಷ್ಠಿರಂಗಂದು ಧರ್ಮಪುತ್ರವೆಸರ್‌ ನೆಗೞೆ ಮತ್ತಂ ಕೊಂತಿಗೆ ಗರ್ಭಮಾಗಿ ಮಗನಂ ಪೆತ್ತೊಡೆ ಮೂಲದೊಳ್‌ ಪುಟ್ಟಿದನೆಂದು ಮಾಡಿ ಶ್ಮಶಾನದೊಳ್‌ ಬಿಸುಟುಬಂದೊಡೆ ಕೂಸಂ ಸುಟ್ಟುರೆಗಾಳಿ ಬಳಸಿಯುಂ ಸುತ್ತಿಕೊಂಡು ನೇಸಱ್‌ ಮೂಡುವಿನಂ ಭೂತ ಪಿಶಾಚಂಗಳಂ ಸಾರಲೀಯದೆ ಕಾದೊಡೆ ಬಯ್ಗಿರುಳ್‌ ಪೋಗಿ ನೋಡಿ ಕೂಸಿನಿರವಂ ಕಂಡುಕೊಂಡುಬಂದು ವಾಯುರಕ್ಷಿತನೀತಂ ನಮ್ಮ ಮಗನಲ್ಲಂ ವಾಯುಪುತ್ರನೆಂದು ಕೈಕೊಂಡು ಭೀಮನೆಂದು ಪೆಸರನಿಟ್ಟು ನಡುಪುತ್ತಿರ್ದು ಬೞಿಯಂ ಮತ್ತಂ ಗರ್ಭಮಾಗಿ ಪೊತ್ತು ನೆಱೆದಿಂದ್ರೋತ್ಸವದ ದಿವಸದಂದು ಪುಟ್ಟಿದ ಮಗನೀತನಿಂದ್ರನ ಮಗನೆಂದು ಮಾಡಿಯರ್ಜುನನೆಂದು ಪೆಸರನಿಟ್ಟು ಕೊಂಡಾಡೆ ಬಳೆದಂದು ಧರ್ಮಪುತ್ರ ಭೀಮಾರ್ಜುನರೆಂಬ ಮೂವರ್‌ ಮಕ್ಕಳಾದಿಂಬೞಿಯಂ ಮದ್ರಿಗೆ ನಕುಳ ಸಹದೇವರೆಂಬ ಮಕ್ಕಳ್‌ ಪುಟ್ಟಿದರಂತು

ಕಂ || ಪರಮಷ್ಠಿಗಳೈವರಿನಂ
ತರುಹನ್ಮ ತಮೆಸಗುಮಂತೆ ಗುಣಯುತರಪ್ಪೈ
ವರುಮಾತ್ಮಜರಿಂ[ದಂ]ಪಾಂ
ಡುರಾಜಸಾಮ್ರಾಜ್ಯಮೆಸೆದುದವನೀತಳದೊಳ್‌ ೧೫

ವ || ಅಂತು ಪಾಂಡುರಾಜನಿಂ ಪಿರಿಯ ಧೃತರಾಷ್ಟ್ರನೆಂಬ ಕುರುಡರಸಂಗೆ ದುರ್ಯೋಧನನುಂ ದುಶ್ಯಾಸನನುಮಾದಿಯಾಗಿ ನೂರ್ವರ್‌ ಮಗಂದಿರುಂ ದುಶ್ಯಲೆಯೆಂಬ ಮಗ[ಳುಮಾ]ಗಿ ಬಳೆಯುತ್ತಿರ್ದರಂತು ತಮ್ಮುತಿರ್ವರ ಮಕ್ಕಳೆಲ್ಲಮುಪಾಧ್ಯಾಯಾಂತ್ಯದೊಳಕ್ಷರಾದ್ಯನೇಕ ಕಳಾಪರಿಣತರಾಗಿ ನವಯವ್ವನ ವಯಸ್ಸರಾಗಿರ್ಪನ್ನೆಗ[೦] ಮುಂ ಪೊ[ೞಲ್ಗೆ]ಮುನ್ನಿನ ಸುವ್ರತಸ್ವಾಮಿಗಳೆಂಬಾಚಾರ್ಯರ್‌ ಬಂದೊಡವರಂ ಬಂದಿಸಲ್‌ ಪಾಂಡುರಾಜಂ ಪೋಗಿ ದೇವರಂ ಸ್ತುತಿಸಹಿತಂ ಕಂಡು ಗುರುಪರಿವಿಡಿಯಿಂ ಬಂದಿಸಿ ಭಟ್ಟಾರರ ಮುಂದೆ ಕುಳ್ಳಿರ್ದು ಧರ್ಮಶ್ರವಣಮಂ ಕೇಳ್ದು ನಿರ್ವೇಗಮಾಗಿ ದೀಕ್ಷೆಯಂ ದಯೆಗೆಯ್ಯಿಮೆನೆ ಭಟ್ಟಾರರ್‌ ಬಗೆದು ನೋಡಿ ನಿನಗಿಂ ಪದಿಮೂಱು ದೆವಸಮಾಯುಷ್ಯಮೊಳ್ಳಿತ್ತಂ ಬಗೆದೆಯೆನೆಯದಕ್ಕೆ ತಕ್ಕುದಂ ಬಲ್ಲೆನೆಂದು ಭಟ್ಟಾರರಂ ಬಂದಿಸಿ ಮನೆಗೆವಂದು ಗಾಂಗೇಯಾದಿ ಬಂಧುಗಳುಮಂ ತಮ್ಮಣ್ಣನ ಮಕ್ಕಳಂ ಮಿತ್ರಮಾತ್ಯ ಭೃತ್ಯರ್ಕಳುಮಂ ಪರಿವಾರಜನಂಗಳುಮಂ ಕೇಳಿಮೆಂದಿಂತೆಂದಂ