ಪೃಥ್ವಿ ||
ಅಡುರ್ತು ಪರಿದತ್ತಮಿತ್ತಮರಿಸೇನೆಯಂ ಕೋಪದಿಂ
ಸಿಡಿಲ್ಪೊಡೆ[ದ] ಮಾೞ್ಕೆಯಂತೆ ಪೊಡೆದಾಗಳಾ ಸಾಧನಂ
ಪಡಲ್ವಡೆ ಮನುಷ್ಯನಲ್ಲನಿವನೆಂ[ದುಮಾ ಘಾ]ತಿಯಿಂ
ಪೊಡರ್ಪುಡುಗಿ ಬೇಗಮೊಡ್ಡಳಿದು ಪೋಗಲಿರ್ದರ್‌ ಪಲ [ರ್‌] ೩೧

ಕಂ || ಏೞಿಸಿ ಪುಗದಿರಿಮಿ ಬ
ಲ್ಲಾಳ ತ[ಱಿದ ದನುಜನಂದನಮದು]ಮೆಂದಾಗಳ್‌
ಜೋಳಂಗೊಂಡವರೆಲ್ಲರ್‌
[ಮೇಳಂ] ಗೊಂಡರೆ ತಗುಳ್ದ ಭರವಶದಿಂದಂ ೩೨

ಪೃಥ್ವಿ || ಇವಂ ನೆಗೞ್ದ ಚಕ್ರಿಯಗ್ರಜನ ಮಾೞ್ಕೆಯಿಂದಲ್ತೆ ನಾ
ಮಿವಂಗೆ ಮುಳಿದಿಂ [ತುಮೆಂತು]ಮವನಲ್ಲನೀ ರೂಪದಿಂ
ಜವಂ ಮಸಗಿ ತಾನೆ ಬಂದನಿವನಾ ಭವಂಗೆಟ್ಟನೀ
ಭವಂಗಿದಿ[ನಿ]ಸೆಂದು ತಾಂ ಕಯವರಂ ಬಿಗುರ್ತೋಡಿದಂ ೩೩

ವ || ಆಗಳ್‌ ಬಲದೇವನಿದಿರ್ಚುವರಂ ಕಾಣದೆ ಮಗುೞ್ದು ತನ್ನೀಡಾಡಿದಲ್ಲಿಗೆ ಕೆಯ್ಯಂ ನೀಡಿ ಕೂೞಂ ಕೊಂಡು ಬಂದ ಬಟ್ಟೆಯಂ ತಗುಳ್ದು ಕಿಱಿದಾನುಮಂತರದೊಳ್‌ ಕಂಬಮನೀಡಾಡಿ ತಮ್ಮ ನಿರ್ದೆಡೆಯುಮನೆಯ್ದೆವಂದಾತನಂ ಕರೆದು ನೀರ ತಡಿಯ ಪಿರಿಯ ಕಲ್ಲ ಮೇಲೆ ಕುಳ್ಳಿರಿಸಿ ಪಿರಿಯವಪ್ಪೆಲೆಗಳಂ [ಕೊಂ]ಡು ಪಾಸಿ ಬಡಿಸಿದೊಡೆ ಹರಿಯುಣುತ್ತಿರೆ ತಾನಾಗಳೀ ನುಣ್ಬಳಿಯುಣಸಂ ಕಂಡು ಮನ್ಯುಕೆತ್ತು ಸೈರಿಸದಿನಿಸುಂ ಕೆಟ್ಟುವೋಗಿ

ಕಂ || ಅಕ್ಕಟ ಚಕ್ರೀಧರೆಯೊಳ್‌
ಮಿಕ್ಕ ಮಹಾಪುರುಷ ನೆಗೞ್ದ ಬಲ್ಲಾಳೈ ಭೈ
ಕ್ಷಕ್ಕೀ ಗುಱಿಯಾದ [ರ್‌] ಬಗಿ
ತಕ್ಕೆ ಸಮಂ ಬಾರದಂತುಟಾದುದೆ ನಿಮಗಂ ೩೪

ವ || ಭರತಾರ್ಧ ಶ್ರೀಖಂಡಧರಾತಳಮುಮಂ ನಾಲ್ವತ್ತೆರಡು ಲಕ್ಕೆ ಭದ್ರಹಸ್ತಿಯುಮಂ ಒಂಬತ್ತು ಕೋಟಿ ಜಾತ್ಯಂಶಗ[ಳುಮಂ] ನಾಲ್ವತ್ತೆಣ್ಭಾಸಿರಮರಸಿಯ[ರುಮಂ] ಚಕ್ರಂ ಮೊದಲಾಗೇಱುಂ ಮಹಾರತ್ನಂಗ[ಳುಮಂ]ನಾಲ್ಕುವರೆ ನಿಧಿಗುಳಮಂ ಪದಿನಾಱು ಸಾಸಿರ್ವರ್‌ ಮಕುಟಬದ್ಧರುಮಂ ಪದಿನಾಱು ಸಾಸಿರ್ವರ್‌ ಮೈಗಾಪಿನ ಗಣಬದ್ಧದೇವರುಮಂ ಪದಿನೆಂಟುಕೋಟಿ ಯಾದವರುಮಂ ಮಿತ್ರಬಲಮನುೞಿಯೆ ಪನ್ನೊಂದಕ್ಷೋಹಿಣಿ ನಿಜತಂತ್ರಮುಮನೊಡೆಯನಾಗಿ ರ್ದುಮೆಲ್ಲಂ ನೆಲೆಗೆಟ್ಟೊರ್ಮೆಯೆ ಬಂದಡವಿಯಂ ಪುಗುವಂತಾಯ್ತು ಕರುಮಾಡದೊಳಗಿರ್ಪ ನಿನಗೆ ಮರದಡಿಯ[ಲಿ] ರ್ಪಂತಾಯ್ತು ಮೃದುಶಯ್ಯೆಯೊಳ್‌ ಪಡುವಾತಗೆ ತಱುಬಿನೊಳ್‌ ಪಡುವನಿತಾಯ್ತು ಚಾಮರದ ಗಾಳಿಯಲ್ಲದಱಿಯದೊಂಗೆ ಸುಟ್ಟುರೆಗಾಳಿ ಕೊಳ್ವಂತಾಯ್ತು ಸಿಂಹಾಸನದ ಮೇಲೆಯಿರ್ಪನಿನಗೆ ಕಲ್ಲ ಮೇಗಿರ್ಪುದಾಯ್ತು ಮಹಾಸ್ಥಾಯಿಕೆಯೊಳಿರ್ಪಾತಂಗೆ ಮೃಗದ ನಡುವಿರ್ಪಂತಾಯ್ತು ವೀಣಾದಿ ಕಿನ್ನರ ಗೇಯಂಗಳಂ ಕೇಳ್ವ ನಿನಗೆ ಬಳ್ಳುಗಳ ಸರಂಗೇಳ್ವಂತಾಯ್ತು ದಿವ್ಯಾಹಾರಮಂ ಮಣಿಕನಕಮಯಮಪ್ಪ ಪರಿಯಾಣದೊಳುಣ್ಬ ನಿನಗೆ ಸೀರೆಯೊಳ್‌ ಕಟ್ಟಿ ತಂದ ಕೂೞಂ ಮಲ್ಲಮೇಲಿಕ್ಕಿಯುಣ್ಬಂತಾಯ್ತು ಹಾ ಹಾ ನಿನಗಮೆಲ್ಲಮಿನಿತಾಯ್ತೆಂದೊಡುೞಿದಂಗೆ ಆಳಾಪಂಗೆಯ್ದು ಬಂದಾತನಕ್ಕೆಗೆಱೆದು ಬೞಿಯಂ ತಾನುಮುಂಡು ತನ್ನ ಪೋದ ಬಂದ ವೃತ್ತಾಂತಮೆಲ್ಲಮಂ ಪೇೞ್ದಡಂತಪ್ಪೊಡಿಲ್ಲಿ ಕೂರದರ ಸಮಿಪದೊಳಿರ್ಪುದು ಕಜ್ಜಮಲ್ಲಂನಾಡತ್ತ ಪೋಪಂ ಬನ್ನಿಮೆಂದು ನಾರಾಯಣನೆರ್ದು ನಡೆಯೆ ಬಲದೇವಸ್ವಾಮಿಯುಂ ಬೞಿಯಂ ನಡೆದು ಪಯಣಂಬೋಗಿ ಕೌಶಂಬಿಯೆಂಬ ಪೇರಡವಿಯ ನಡುವೆ ಪೊಕ್ಕಲ್ಲಿ ಯೊಂದೆರಡುದಿನದೊಳ್‌

ಕಂ || ಲೀಲೋನ್ನತಿಯಂ ಪಚ್ಚೆಯ
ಶೈಲಮನನುಕರಿಸಿ ನೆೞಲ ತಣ್ಪಿಂ ಹಿಮ
ತ್ಕಾ [ಲ] ಮನೇಳಿಸಿ ಕುಳಿರ್ಕೊಳು
ವಾಲಮನತಿಶಯ ವಿಳಾಸಮಂ ಕಂಡವರ್ಗಳ್‌

ವ || ನೆೞಲ್ಗೆ ವಂದು ವಿಶ್ರಮಿಸಿರ್ಪಮೆಂದಿರ್ವರುಮಲ್ಲಿ ಪಟ್ಟಿರ್ದು ಕಿಱಿದು ಬೇಗದಿಂ ಹರಿಗೆ ಪರಿಶ್ರಮಮಡಂಗೆ ನೀರಡಸಿದೆಂ ಬೇಗಂ ನೀರಂ ತನ್ನಿಮೆಂದಾಗಳಂತೆಗೆಯ್ವೆನೆಂದು ಬಲದೇವಂ ತನ್ನ ತಂದ ರತ್ನಗಂಬಳಿಯಂ ಪೊದೆಯಿಸಿ ಪೋಗಿ ತೊೞಲ್ದಱಸುವಾಗಳ್‌ ಕೊಳರ್ವಕ್ಕಿಗಳ ಕಳಕಳಧ್ವನಿಯ ಪೆಂಪು ನೀರ್ವುಗಳ ತಣ್ಗಂಪು ತೀಡಿದೊಡಾ ದೆಸೆಯುತ್ತ ಪೋಗಿ ಸೊಗಯಿಸಿದ ಕೊಳದೊಳೆ ಪಾದಪ್ರಕ್ಷಾಳನಾನಂತರಮರ್ಹತ್‌ ಸರ್ವಜ್ಞರ್ಗೆ ನಮಸ್ಕಾರಂಗೆಯ್ದು ಪಿರಿದೊಂದು ತಾವರೆಯೆಲೆಯೊಳ್‌ ನೀರಂ ಮೊಗೆದು ಪೊಟ್ಟಳಂಗಟ್ಟಿ ಕೊಳದಿಂ ಪೊಱಮಟ್ಟು ತಮ್ಮನಲ್ಲಿಗೆ ಬರ್ಪಿನಂ ಮುನ್ನೆ ನೇಮಿನಾಥರಾದೇಶದಿಂದೆ ಪೊಱಮಟ್ಟು ಪೋಗಿ ಸಮುದ್ರತೀರದೊಳ್‌ ಮೆಲೇಚ್ಛರಾಜನಾಗಿರ್ದು ಅಲ್ಲಿಂ ಮುನ್ನೆ ಸಮುದ್ರದೊಳಗೆಚ್ಚಂಬನೊಂದು ಬಾಳೆಮಿನ್‌ ನುಂಗಿದೊಡಾ ಮಿ[ನುಂ] ದೋಣಿಯೇಱಿ ಬೀಸುವ ಜಾಲೆಗಾಱನ ಬಲೆಯೊಳ್‌ ಸಿಲ್ಕಿ ಬಂದು

ಕಂ || ಅರಿದಾಗಳಲ್ಲಿ ಬಂದಾ
ಸರಲಂ ಕರಮಿಂಬುಮಾಡಿ ಕೋಲೊಳುಮಟ್ಟಾ
ದರದಿಂ ಜವಂಗೆ ಪಾಪಾ
ಗರಮಂಗೊಟ್ಟಾಗಳಾತನಾ ಸರಲೊಳ್ಪಂ ೩೬

ವ || ಕಂಡು ಮೆಚ್ಚಿ ಪಿರಿಯವು ಮೃಗಂಗಳನಿಂತಪ್ಪಂಬಿನಿಂದೆಸೆದೆಂತಿಪ್ಪರೆಂದಾಗಳೆ ಬೇಟೆವೋಪಂ ಬನ್ನಿಮೆಂದು ಪಾಂಗಿನವರನೊಡಗೊಂಡು ಪೋಗಿ ಮಹಾಟವಿಯಂ ಪೊಕ್ಕು ಗಾಳಿಯ ಮೇಗಂ ಪಾರ್ದು ಬರ್ಪಾತನಾಲದ ಮರದಡಿಯೊಳೆ ಮಱಲ್ದುಪಟ್ಟೊಂದು ಕಾಲನೊಂದು ಕಾಲಮೇಲೆ ಅಡ್ಡಮಿಟ್ಟಿರ್ದನಂ ಹರಿಯೆಂದಱಿಯದೆ ಕಿವಿಗಳಂತಿರ್ದೊಂದು ಕಾಲ ಕೆಂದಳಮುಮನೆೞಲ್ವ ಸೆಱಂಗುಮಂ ಕಂಡು ಮೃಗಮೆಂದು ಬಗೆದು ಪೊಸತುವೊಂದಂಬಂ ತೆಗೆದು ತೊಟ್ಟೆಚ್ಚೊಡೆ

ಕಂ || ಅಂಗಾಲೊಳ್‌ ನಟ್ಟ ಸರಲ್‌
[ಮುಂ]ಗಾಲೊಳ್‌ ಮೂಡೆ ಭೋಂಕನೆಚ್ಚತ್ತಾಗಳ್‌
ಸಿಂಗದ ಕಡುಮುಳಿದೆಸಕದ
ಪಾಂಗೆ ಕರಂ ಮುಳಿದು ಕಿತ್ತನಾ ನಟ್ಟಂಬಂ ೩೭

ವ || ಆಗಳ್‌ ಪರಿತಂದು ವಿಷ್ಣುವೆಂಬುದನಱಿದು ಜರತ್ಕುಮಾರಂ ಕಾಣುತ್ತೆ ತಮ್ಮಣ್ಣನಪ್ಪುದುಂ ಬಿಲ್ಲುಮಂಬುಮನೀಡಾಡಿ ಬಂದು ಮಹಾಪಾತಕನಾದೆನೆಂದು ತನ್ನ ಗೆಯ್ದ ದೋಷಕ್ಕಂಜಿಮೆಂ…… ನಂ ಜರತ್ಕುಮಾರನಪ್ಪುದನಱಿದೇೞೆಂದೆತ್ತಿ ಪೊಡೆವಟ್ಟೊನಂ ಪರಸಿಯಾನಿಂ ಬರ್ದೇವೆಂ ಸಾವೆನೆನೆ ನೀನೇವೆಯಂತುಟು ಸಮಕಟ್ಟೆಂದಾಱೆ ನುಡಿದು ಬಲದೇವಸ್ವಾಮಿ ಬಂದೆನ್ನನೊಂದು… ನಿನ್ನಂ ಕೊಲ್ಗುಂ ಬೇಗಂ ಪೋಗಿಮೆಂದು ಆತನಂ ಕಳೆದು ಮುನ್ನಂ ಪಟ್ಟಿರ್ದಲ್ಲಿಯೆ ಮೆಯ್ಯನಿಕ್ಕಿ ರತ್ನಗಂಬಳಂ ಪೊದೆದಿರ್ದೆನ್ನನೆಚ್ಚೊನಂ ಕೊಲಲಾಗದೆಡೆಯಾಯ್ತು ಪೆಱನಾದೊಡಿಂತಿಱಿವೆನೆಂದು ರೌದ್ರಧ್ಯಾನದೊಳ್‌ ಸತ್ತು ಅಧೋಗತಿಗೆ ಪೋದನನ್ನೆಗಂ ನೀರಂ ಕೊಂಡು ಬಲದೇವಂ ಬಂದು ನಿಂದು ಪಥಶ್ರಮದೊಳ್‌ ಪವಡಿಸಿದನೆಚ್ಚಱುವಿನಮಿರ್ಪೆನೆಂದು ಮರದ ಕೊಂಬಿನೊಳ್‌ ನೀರ ಪೊಟ್ಟಣಮನೇಱಿಟ್ಟು ಕೆಲದೊಳ್ ಕುಳ್ಳಿರ್ದು ಕಾಲತ್ತನೊಣಂ ಮುಸುಱೆ ತನ್ನ ಮೇಲುದಱೊಳ್‌ ಬೀಸುತ್ತಿರ್ದಂತಂತೆ ನೋೞ್ಪನನಲ್ಲಿ ಮೊಕ್ಕಳಮೊಕ್ಕ ನೆತ್ತರಂ ಕಂಡು ಬೆ[ಳ್ಕರ್ತೊ]ಯ್ಯನೆ ಕಂಬಳಮಂ ತೆಱೆದಂಗಾಲನುರ್ಚಿದ… ಕಂಡು ಬೇಗಂ ಮೊಗಮಂ ತೆಗೆದು ನೋೞ್ಪನ್ನೆಗಂ ಪ್ರಾಣವಿಲ್ಲೆಂದು ಮೂರ್ಚೆವೋಗಿ ಬಿರ್ದೆಂತಾನುಮೆಚ್ಚತ್ತು

ಉ || ಎನ್ನನುಜಾತನಂ ನೆಗೞ್ದ ಚಕ್ರಿಯನಂ ತವೆ ಕೊಂದನಾವನೋ
ಪನ್ನತಮೆಂದು ಬೇಗಮತಿಕೋಪದಿನೆರ್ದು ಮಹಾವಿಶಾಲಶಾ
ಖೋನ್ನತಮಾಗುವಾಲಮರನಂ ವಿಭು ತೊಟ್ಟನೆ ಕಿೞ್ತುಕೊಂಡು ಸ
ಚ್ಛನ್ನತರುಪ್ರದೇಶ ಗಹನಾಂತರದೊಳ್‌ ತಿರಿತಂದು ನೋಡಿದಂ ೩೮

ವ || ನೋಡಿ ಬಗೆಗಾಣದಾ ಮರನನೀಡಾಡಿ ಕರಂ ಮುಳಿದು ಮುಳಿಸು ಪೋಗದೆ ಮಗುೞೂ ಕಾಡಮರನೆಲ್ಲಮಂ ಕಿರ್ತೀಡಾಡುತ್ತಮಂತೆ ತಾಂ ಮುನ್ನಿನಲ್ಲಿಗೆ ವಂದು

ಉ || ಬಂದಿದುವೇನುಪೇಂದ್ರ ಮಱಲುಂದಿದೊಡೆಚ್ಚಱಲಿನ್ನುಮಾಗದೇ
ನಿಂದಿನ ನಿದ್ರೆಯಂದಮೆನಗೆಂದಿನ ಮಾೞ್ಕೆಯ [ದಂತುಮ]ಲ್ಲಿದೇ
ನಂದಮೊ ಚಕ್ರಿ ಪೇೞ್‌ ಮುಳಿದೆಯೋ ಮುಳಿವಂತವಮಾನ್ಯನಾಗಿ ತಾ
[ನಿಂದುದದೇನೊ] ಚಿಃ ನುಡಿಯದಿರ್ಪುದು ತಕ್ಕುದೆ ಕಂಡು ಕೂರ್ತರಂ ೩೯

ಕಂ || ಕೂರ್ತದನೇನೆಂಬೆನೊ ಶುಭ
ಕರ್ತಾರನ ನುಡಿಗೆ ಪುತ್ರ ಪೌತ್ರಾದಿಗಳಂ
ದಾರ್ತರ್ತಾಱೆನನಾನೇ
ನಾರ್ತನೆ ಪೇೞು ನಿನಗಲ್ಲದಿದುವಂ ಬಗೆಯಾ(?) ೪೦

ಚಂ || ಬಗೆಯದೊಡೆನ್ನನಾವೆಡರ್ಗಮಾಗುವ ಸೋದರ ಮೈದುನರ್ಕಳಂ
ಗಗನದೊಳೆಲ್ಲಿಗಂ ನೆಗೞ್ದ ಪಾಂಡವರಂ ನಿನಗಮ್ಮ ಕೂರ್ಪರಂ
ಬಗೆದವರ್ಗಪ್ಪ ಮಾತುಗಳನಟ್ಟಿದೆ ಕೆ [ಮ್ಮ] ಗಿರಲ್ಕೆ ತಕ್ಕುದೇ
ತಗದು ಮುರಾರಿ ನಿನ್ನ ಪುರುಷೋತ್ತಮನಪ್ಪಳವಿಂತುಟಾದುದೇ ೪೧

ಕಂ || ಅಳವ[ಟ್ಟು ತಳ್ತು ಪೋಗದೆ]
ಖಳ ಕಂಸನನಿಕ್ಕಿ ಬೞಿ[ಕೆ] ನೆಗೞ್ದಿರ್ದ ಮಹಾ
ಬಳ ಸಹಿತ ಜರಾಸಂಧನ
ನೆಳೆ ಪೊಗೞ್ವಂತಿರ್ಕಿ ಗೆಲ್ದುದೇಂ ಕೇವಳಮೇ ೪೨

ಉ || ಕೇವಳಮಲ್ತು ನಿನ್ನ ವಿಭವಂ ನರಲೋಕದೊಳಿಂದ್ರವೈಭವಂ
ಕೇವಳಮಲ್ತು ಸಗ್ಗದೊಳೆ ನಿಂತಮರೇಂದ್ರ ಸಮಾನನಪ್ಪ ನೀ
ನೀಗಳರಣ್ಯದೊಳ್‌ ಪ [ಡು]ವನೀ ಧರ [ಣೀಶ್ವರನೆತ್ತ] ಕೆಟ್ಟನೋ (?)
ವೋವೊ ವಿಧಾತ್ರ ನೀನೆಮಗಮಿಂತಿರೆ ಮಾೞ್ಪುದಿದೇನೊ ತಕ್ಕುದೇ ೪೩

ಕಂ || ತಕ್ಕುದಱಿ ಬಿದಿಯೆ ಚೆಲ್ವಿನ
ಮಿಕ್ಕ ಪೊೞಲ್‌ ಬೇಯೆಯಿಂತು ತಂದೀತನನಿ
ಲ್ಲಿಕ್ಕಿದೊಡೆ ಮತ್ತೆಯುಂ ಕೊಂ
ದಿಕ್ಕಿದನಿನ್ನೇವೆ[ನೆಂದು ದುಗುಡದೆ ಪೊರಳ್ದಳ್‌] ೪೪

ಉ || ಬಿರ್ದು ಪೊರಳ್ದು ಪುಯ್ಯಲಿಡುತಂ ತಲೆಯಂ ಬಡಿದತ್ತು ನೋಡಲೆಂ
ದೆರ್ದಿರಲಾಱದಪ್ಪಿ ಪೆಣನಂ ಮೊಗಮಂ ಕೊರಲಲ್ಲಿ ಸಾರ್ಚಿ ನೀ
ಡಿರ್ದು ಕನಲ್ದೊನಲ್ದು ಬೆಗೞುತ್ತು ಬೆಗೞ್‌ ಮಿಗೆ ಮತ್ತ [ಮಂತೆ ಸಾ
ರಿದು] ಮುರಾರಿ ಹಾ ಸರಸಿಜೋದರ ಹಾ ನೆಗೞ್ದಿರ್ದ ಚಕ್ರಿ ಹಾ ೪೫

ಕಂ || ಹಾಹಾ ಕಂಸಧ್ವಂಸೀ
ಹಾಹಾ ಭರತಾರ್ಧಧರಣಿನಾಥಾ ನೂತಾ
ಹಾಹಾ ಹರಿಕುಲತಿಲಕಾ
ಹಾಹಾ ನಿನಗೆಂತುಟಾಯ್ತು ವಿಷ್ಣುವೆ ಹಾಹಾ ೪೬

ಶಾ || ಹಾ ವಿಕ್ರಾಂತಸಮನ್ವಿತಾ ನರಪತೀ ಹಾ ದುಷ್ಟಶತ್ರುಕ್ಷಯಾ
ಹಾ ವಿಖ್ಯಾತಗುಣಾಶ್ರಯಾ ಜನನುತಾ ಹಾ ದೀನಕಲ್ಪದ್ರುಮಾ
ಹಾ ವಿಸ್ತಾರಯಶೋದಯಾ ಪರಿಹತಾ ಹಾ ಕೃಷ್ಣಭೂಪಾಲಕಾ
ಹಾ ವಿದ್ವಜ್ಜನಪೂಜಿತಾ ಮಹಿಧರಾ ಹಾ ಶ್ರೀಪತೀವಲ್ಲಭಾ ೪೭

ವ || ಇಂತೆನಿತಾನುಂ ತೆಱದಿಂದಮೆ ಮರಗಳೆಲ್ಲಂ ಕೇಳ್ದು ಮರವಟ್ಟಂತೆ ಬಿನ್ನನೆ ಶೋಭೆಗೆಟ್ಟಿರೆ ಪಕ್ಷಿಗಳೆಲ್ಲಮೊಡನೆ ಮರವಟ್ಟಂತಿರೆ ಬಳಸಿಯುಲಿಯುತ್ತಮಿರೆ ಮೃಗಂಗಳೆಲ್ಲಂ ಶೋಕಗೆಟ್ಟಿರೆ ಪಕ್ಷಿಗಳೆಲ್ಲಮೊಡನೆ ಮರವಟ್ಟಂತಿರೆ ಬಳಸಿಯುಲಿಯುತ್ತಮಿರೆ ಮೃಗಂಗಳೆಲ್ಲಂ ಶೋಕರಸಮೆರ್ದೆಯಂ ಕೊಂಡಾಗಳ್‌ ಗೋರಿಗೊಂಡಂತೆ ಸುೞಿಸುೞಿದು ಕೆಲಗೆಲದೊಳಿರೆ ವಿಪ್ರಳಾಪಂಗೆಯ್ಯುತ್ತಂ ಮುಂದೆಲ್ಲಮಿರ್ದು ಕಣ್ಗಳ್‌ ದಕ್ಕಾಲಿಬಿರ್ದು ನೇಸಱ್‌ ಮೂಡಿದಾಗಳೆರ್ದು ಚಕ್ರಿಯಿನ್ನು ಮುಪ್ಪವಡಿಸನೆಂದು ಮೆಲ್ಲನೆ ಕಾಲನೊತ್ತುತ್ತಿರ್ದು ಸೈರಿಸದೆ ಮತ್ತಂ ನೆಲನೊತ್ತೆ ಪಟ್ಟಿಪ್ಪನೆಯೆಂದುಮೆತ್ತಿ ಪೆಗಲೊಳಿಟ್ಟುಕೊಂಡು ಮರಮರಂದಪ್ಪದೆ ಪೋಗಿ ವನದೇವತೆಗಳಿರಾ ಮೇಗಿಲ್ಲದೆ ನೆಗೞ್ದ ಬಲ್ಲಾಳೀತನಿಂತೇಕಿರ್ದಪನೆಂದು ತೊೞಲುತ್ತಂ ಕೆಲವು ದೆವಸಂ ಪೋಗಿ ತೊಱೆವಿಡಿದು ನಡೆದು ಜಲದೇವತೆಗಳಿರಾ ಕಿನ್ನರ ಖೇಚರಾದಿಗಳಿರಾ ಚಕ್ರವರ್ತಿಯ ಮೆಯ್ಯಿಂತೊಣಗುವುದೆಂಬುದೇನೆನುತಂ ಕೆಲವು ದೆವಸಂ ಪೋದೊಡೆ ಬೆಟ್ಟುಗಳನಡರ್ದಲ್ಲಿ ಪಸಿಯಿಸಿರ್ಪ ರಾಕ್ಷಸಾದಿಗಳಿರಾ ಎನ್ನ ತಮ್ಮನೆನ್ನೊಳ್‌ ನುಡಿಯದ ಕಾರಣಮೇನೆಂದು ಪಲವಾಡುತ್ತಮಱುದಿಂಗಳುವರಂ ಬಲದೇವಸ್ವಾಮಿ ದಿವ್ಯಶಕ್ತಿ ಸಂಪನ್ನಪ್ಪುದಱೆಂ ಬಲದೇವನ ತೋಳಲಿರ್ದಂ ಮುನ್ನಿನ ಭವದ ಸ್ನೇಹದೊಳ್‌ ಬೆಸಕೆಯ್ದು ಬರ್ದು ಸಿದ್ಧ ಸಮಾಧಿ ಕೂಡೆ ನೈಗಮದೇವನಾಗಿ ಪುಟ್ಟಿರ್ದವಧಿಜ್ಞಾನದಿಂ

ಕಂ || ಬಲದೇವಂ ದುಃಖಾಗ್ರ
ಜ್ವಲನಾಹತನಾಗಿ ಪೊತ್ತು ತಮ್ಮನ ಪೆಣನಂ
ಪಲವಾಡುತ್ತ ತೊೞಲ್ದಪೊ
ನಲಂಘ್ಯತರ ಗಹನದಲ್ಲಿಯೆಂಬುದನಱಿದಂ ೪೮

ವ || ಅಱಿದಾತನ ದುಃಖಮನಾಱಿಸುವೆನೆಂದು ದೇವಲೋಕದಿಂ ಬಂದು ಮನುಷ್ಯರ ರೂಪುಗೊಂಡು ಮಹಾರಣ್ಯದೊಳ್‌ ಪೆಣನಂ ಪೊತ್ತು ತೊೞಲ್ವ ಬಲದೇವನಿದಿರೊಳೊಂದು ಅಱೆಯ ಮೇಲೆ ತಾವರೆಯಂ ತಂದು ನಡಪುವೆನೆಂದು ನೀರಂ ತಂದೆಱೆಯುತ್ತಿರೆ ಬಲದೇವಂ ಕಂಡು ನಕ್ಕುಯಿದೇಂ ಮರುಳೆ ತಾವರೆಯಂತದು ಕೊಳದೊಳಂ ಕೆಱೆಯೊಳಂ ಬಾೞ್ವವು ಅಱೆಯಮೇಗೆಂತು ಬಾೞ್ಗುಮೆಂದೊಡಾ ದೇವನೆಂದನೀ ಸಿಲೆಯ ಮೇಲೆ ತಾವರೆಯಂ ಬಾೞಿಸುವೊಡಂ ಬಾೞಿಸುವೆಮಿ ಪೆಣನಂ ಬಾೞ್ಗುಮೆಂಬ ಮೋಹದೊಳ್‌ ಪೊತ್ತು ತೊೞಲುತ್ತಿರ್ದೆನ್ನಂ ನಗುವೆನೆಂಬುದೇನೆಂದೊಡೆನ್ನ ತಮ್ಮನಂ ಚಕ್ರವರ್ತಿಯಂ ಪೆಣನೆಂದಪನೆಂದು ನೆಲದೊಳಿೞಿಪಿ ಮುಳಿದೆಯ್ದುವಾಗಳಾ ದೇವನ ದೃಶ್ಯಮಾದೊಡೆ ಕಾಣದೆ ಮಗುೞ್ದು ಪೆಣನನೆತ್ತಿ ಪೊತ್ತು ತೊೞಲುತ್ತಿರೆ ಮತ್ತಮಾ ದೇವಂ ಮುಂದೆ ಬಂದು

ಕಂ || ಪಿರಿದೊಂದು ಗಾಣದೊಳ್‌ ತಂ
ದೆರಡೆತ್ತಂ ಪೂಡಿಕೊಂಡು ಮಣಲಂ ಪೊಯ್ದೋ
ದರದ ಪಿೞಿಯುತ್ತವೊಂದಣ
ದಿರವಂ ಕಂಡಿನ್ನವಣಕಮೆಂಬುದುಮೊಳವೇ ೪೯

ವ || ಎಂದು ನಗುತ್ತಮಿದೇನೆಂದೊಡೆ ತೆಲ್ಲಿಗನನೆಣ್ಣೆಗೆಂದು ಗಾಣಂಬಡಿಯುತ್ತಿದ್ದೊಡಿದೇಕೆಂಬುದನೆಂದೊಡದುಣಲ್‌ ಪಿೞಿದೆಣ್ಣೆಗಾಪತ್ತುವಡುವ ಮರುಳ್ತನಕೆ ನಗೆಯಾಗಿ ಬೆಸಗೊಂಡಪೆನೆಂದೊಡೆ ಬಲ್ಲೆತ್ತಿನೊಳೆತ್ತಿ ಪಿೞಿದೊಡೆ ಮಣಲೊಳಗೆಣ್ಣೆಯಪ್ಪುದುಮಕ್ಕು ನಿನ್ನ ಪೊಕ್ಕ ಪೆಣದಲ್‌ ಪ್ರಾಣಮೆಂತಕ್ಕುಮದಂ ಬಗೆದೆನ್ನಂ ನಗುವರೆಂಬುದನೆನೆ ಪೆಗಲ ಪೆಣನಂ ನೆಲದೊಳಿೞಿಪಿ ಪೆಣನಂತಾದೊಡಮೆನ್ನ ತಮ್ಮನ ಪೆಣನನಗಲಲಾಱೆನೆಂದೆತ್ತಿಕೊಂಡು ಪೋಗೆ ಮತ್ತೊಂದೆಡೆಯೊಳೋಡಿ ಪರಿದಿದಿರ್ಗೆ ವಂದು

ಕಂ || ಮುಱಿದಿರ್ದೊಂದಾಲದ [ಬಱ]
ಕೊಱಡಂ [ತಾಂ] ತಂದು ನಟ್ಟು ನಡಪಲ್‌ ನೀರ್ದಂ
ದೆಱೆಯು[ತಿ]ರೆ ಕಂಡು ನಕ್ಕೀ
ತೆಱದ ಮರುಳ್ಗಂಡೆನಿಲ್ಲ ಧಾತ್ರಿಯೊಳೆಂದುಂ ೫೦

ವ || ಎಂಬುದನಾತಂ ಕೇಳ್ದಾಂ ಗಡ ಮರುಳೆನೀ ಕೊಱಡು ಕೊನರ್ಪಡಂ ಕೊನರುಗುಮಿ ನಿನ್ನ ಪೆಗಲ ಪೆಣನೆನಿತು ಕಾಲಮಿರ್ದೊಡಂ ಬಾೞದುದನರಿದಾಸೆಯೊಳ್‌ ಪೊತ್ತಱುದಿಂಗಳ್‌ ತೊೞಲ್ವ ನೀಂ ಮರುಳಾಯೆನುತೆ ಮಾಯಮಾದಾಗಳ್‌ ಪೆಣನಂ ನೆಲದೊಳಿಕ್ಕಿ ನಿಂದು ನೋಡಿ ತೆರ್ಪತ್ತು ಬೞಿಯಂ ತ್ರಯಾ [ಣಾ] ಮೇಕ ವಾಕ್ಯಂ ಸಂಪ್ರತ್ಯಯಃ ಎಂಬುದಿಂತು ಮೂಱೆಡೆಯೊಳಮಿ ಮಾತನೆ ಕೇಳ್ದೆನಿನ್ನಿರಲಾಗದೀತನನಾರುಂ ಜಾಮಿಸದೆಡೆಯೊಳ್‌ ಜಾಮಿಸುವೆನೆಂದು ಮತ್ತಂ ಪೊತ್ತುಕೊಂಡು ಪೋಗಿ ತುಂಗಿಯೆಂಬ ಬೆಟ್ಟಮನಡರ್ದೇಱಿ ಶಿಖರದಲ್ಲಿ ಶುದ್ಧಮಪ್ಪೆಡೆಯೊಳಿರಿಸಿ ಚಂದನದ ಪುಳ್ಳಿಗಳಂ ತಂದೊಟ್ಟಿ ಜಾಮಿಸಲಿರ್ದಾಗಳ್‌

ಕಂ || ಈತನನೀಯೆಡೆಯೊಳ್‌ ತಂ
ದೀ ತೆಱದಿಂದಿಪ್ಪತೇೞು ಸೂ [ೞ್‌] ಭ್ರಾಂತಿಸವೇ
ಡೇತಱೊಳಮೆಂದೊಣರ್ದುದು
ಭೂತಧ್ವನಿ ನಭದೊಳಂತದಂ ಕೇಳ್ದಾತಂ ೫೧

ವ || ದೆಸೆಗಳಂ ನೋಡಿ ಯಾರುಮಂ ಕಾಣದೆ ದಿವ್ಯವಚನಮೆಂದಱಿದಾ [ನಿನ್ನಾ]ಗಮಜ್ಞಾನಿಯೆನಾದೆನಿನ್ನೆನಗಪ್ಪ ಕಜ್ಜದೊಳ್‌ ನೆಗೞ್ವೆನೆಂದು ತಮ್ಮನ…..ಶ್ರಯದೊಳ್‌ ನಿಂದು ನಿರ್ವೇಗಪರಾಯಣನಾಗಿ ಪೋಗುತ್ತುಂ ಚಾರಣಋಷಿಯರಂ ಕಂಡು ಬಂದಿಸಿ ದೀಕ್ಷೆಯಂ ಬೇಡಿ ಪಡೆದು ಕೈಕೊಂಡು ಸಕಳವ್ರತಿಯಾಗಿ ವಿಷಯ ಕಷಾಯಂಗ… ನೆಗೞ್ದು ವಿಹಾರಿಸಿ ಮಗುೞ್ದು ತುಂಗಿಗಿರಿಶಿಖರದೊಳ್‌ ಧರ್ಮಧಾನ್ಯಮಂ ನಿಱಿಸಿ ಮುಡಿಪಿ ಬ್ರಹ್ಮಕಲ್ಪದೊಳ್‌ ಪುಟ್ಟಿದನಂತು ನಿರವಶೇಷಂ ದ್ವಾರಾವತಿ ಬೆಂದುದುಮಂ ಬಲದೇವ ವಾಸುದೇವರಿಬ್ಬರೆ ಪೊಱಮಟ್ಟುದುಮಂ ಕೌಶಂಬಾಟವಿಯೊಳ್‌ ವಾಸುದೇವಂ ಸತ್ತುದುಮಂ ಬಲದೇವಂ ತಪಸ್ಥನಾದುದುಮಂ ಮಧುರೆಯೊಳ್‌ ರಾಜ್ಯಂಗೆಯ್ಯುತಿರ್ದ ಪಾಂಡವರ್‌ ಕೇಳ್ದು ದುಃಖಂಗೆಯ್ದು ಲೌಕಿಕಕ್ರಿಯೆಯಂ ಮಾಡಿ ಬಂದು

ಚಂ || ಸುರವರ ನಿರ್ಮಿತಂ ಪುರವರಂ ಮಹದಂಬುಧಿವಾರಿಖಾತಮಾ
ಸುರ ಮುರವೈರಿನಾಥನಭಿರಕ್ಷಿಸು[ವಾ] ಬಲದೇವನಂತುಮಾ
ಪುರಮೞಿದತ್ತವರ್‌ ಮಡಿದರೆಂದೊಡೆ ಮರ್ತಿನಮಾತ್ಯರೆಂಬರೇ
ವಿರಿಯರವೆಂದಿರಂ ತೆಡೆಯದಿಕ್ಕುಗುಮಂತಕನುರ್ಚಿ ಮುಕ್ಕುಗುಂ ೫೨

ವ || ಇನಿತುಮಿರಲಾಗೆಂದರ್ಜುನನ ಮಗಂ ಪರೋಕ್ಷಿಗೆ ಪಟ್ಟಂಗಟ್ಟಿ ಧರ್ಮಪುತ್ರ ಭೀಮಾರ್ಜುನ ನಕುಲ ಸಹದೇವರ್ಕಳೈವರುಂ ಪೊಱಮಟ್ಟು ಬಂದು ವರದತ್ತಗಣ ಧರಸ್ವಾಮಿಳಲ್ಲಿ ದೀಕ್ಷೆಯಂ ಕೊಂಡಹಿಂಸಾ ಸತ್ಯಮಸ್ತೇಯಾ ಬ್ರಹ್ಮ [ಆ]ಕಿಂಚನ್ಯಮೆಂಬಯ್ದುಂ ಮಹಾವ್ರತಂಗಳನೇಱಿಸಿಕೊಂಡು ಕಣ್‌ ಕಿವಿ ಮೂಗು ನಾಲಗೆ ಮೆಯ್ಯಂಬಯ್ದುಮಿಂದ್ರಿಯಂಗಳಂ ನಿರೋಧಂಗೆಯ್ದು ಈ [ರ್ಯಾ] ಭಾಷೇಷಣಾದಾನನಿಕ್ಷೇಪಣ ವ್ಯುತ್ಸರ್ಗ ಮೆಂಬಯ್ದುಂ ಸಮಿ[ತಿ]ಗಳನುಂಟು ಮಾಡಿ ಸಾಮಾಯಿಕ ಚತುರ್ವಿಂಶತಿಸ್ತವನ ವಂದನ ಪರಿಕ್ರಮಣ ಪ್ರತ್ಯಾ[ಖಾ]ನ ಕಾಯೋತ್ಸರ್ಗಗಳೆಂಬಾಱುಮಾವಶ್ಯಕಂಗಳಂ ಕುಂದಿಸದೆ ಲೋಚಾ[ಚೇ]ಲ [ಅಸ್ನಾನ ಕ್ಷಿತಿಶಯನ ಅದಂತಧಾವನ ಸ್ಥಿತಿಭೋಜನೇಕಭು]ಕ್ತಂಗಳೆಂದೀಯೆೞಱೊಳಂ ನೆರೆಯುತ್ತಿರ್ಪತ್ತೆಂಟು ಮೂಲಗುಣಂಗಳಂ ಮನೋವಾಕ್ಕಾಯಂಗಳೆಂಬೀ ಮೂಱುಂ ಕ್ಲೇಶಗುಪ್ತಿಗಳಂ ತಾಳ್ದಿ ಉತ್ತಮಕ್ಷಮಾ ಮಾರ್ದವಾ[ರ್ಜವ] ಸತ್ಯ ಶೌಚ ಸಂಯಮ ತಪ[ಸ್ತ್ಯಾಗಾ]ಕಿಂಚನ್ಯ ಬ್ರಹ್ಮಚರ್ಯಮೆಂಬ ದಶಕುಶಧರ್ಮದೊಳ್‌ ನೆಗೞ್ದು ಅನಶ[ನಾವಮೌ]ದರ್ಯ ವೃತ್ತಿಪರಿಸಂಖ್ಯಾನ ರಸಪರಿತ್ಯಾಗ [ಏಕಶಯ್ಯಾಸನ] ಕಾಯಕ್ಲೇಶ ಪ್ರಾಯಶ್ಚಿತ್ತ ವಿನಯ ವೈಯ್ಯಾಪೃತ್ಯ ಸ್ವಾಧ್ಯಾಯ ಧ್ಯಾನ ಉತ್ಸರ್ಗಮೆಂಬ ಪನ್ನೆರಡುಂ ತೆಱದ ತಪಮಂ ಕೈಕೊಂಡಿತು

ಕಂ || ವ್ರತಗುಣ ಸಂಯಮ ಶೀಲೋ
[ನ್ನ] ತ ನಯಮಾಳೋಚನ ಕ್ರಿಯಾಮಿರ್ಯಾ [ದಿ]
ಪ್ರತತಿಗಳಂ [ಕಂಡಿಂತೀ]
ಸ್ಥಿತಿಯಿಂದಂ ಗ್ರಹಣಕಾಲ ಪೋದಿಂ ಬೞಿಯಂ ೫೩

ವ || ಆಚಾರ ಸೂತ್ರಕೃತಸ್ಥಾನ ಸಮವಾಯ ವ್ಯಾ[ಖ್ಯಾ] ಪ್ರಜ್ಞಪ್ತಿ ಜ್ಞಾ [ತೃಧರ್ಮಕಥಾ ಉ]ಪಾಸಕಾಧ್ಯಾಯನಾಂತಕೃದ್ಧಶಾನು[ತ್ತರೌಪಾತಿಕ] ಪ್ರಶ್ನವ್ಯಾಕರಣ ವಿಪಾಕಸೂತ್ರ ದೃಷ್ಟಿವಾದಮೆಂಬ ಪನ್ನೆರಡಂಗಮುಂ [ಉತ್ಪಾ]ದಪೂರ್ವಾಗ್ರಾಯಣೀಯ ವೀರ್ಯಾನು[ಪ್ರ]ವಾದ [ಅಸ್ತಿ]ನಾಸ್ಥಿಪ್ರವಾದ ಆತ್ಮ [ಪ್ರವಾದ ಸತ್ಯಪ್ರವಾದ ಜ್ಞಾನಪ್ರವಾದ] ಪ್ರತ್ಯಾಖ್ಯಾನ ನಾಮಧೇಯ ವಿದ್ಯಾನುವಾದ ಕಲ್ಯಾಣನಾಮಧೇಯ ಪ್ರಾಣವಾ[ದ] ಕ್ರಿಯಾವಿಶಾಲ ಲೋಕ ಬಿಂದುಸಾರಮೆಂಬ ಪರಿನಾಲ್ಕುಂ ಪುಲ್ಬಂಗಳುಮಂ ನೆಱೆಯೆ…….ತೂ

ಕಂ || ಓದೆನಿತನಿತುಮನೆಡೆವಿಡ
ದೋದುತ್ತಂ ತಮ್ಮ ಕಲ್ತುದಂ ಪೆಱರಂ ತಾ
ವೋದಿಸುತಂತವರಂ ದೃಢ
ಮೋದಿಸುತಂ ನಡೆಯೆ ಪೋಯ್ತು ಶಿಕ್ಷಾಕಾಲಂ ೫೪

ವ || ಆ ಕಾಲದಿಂ [ದಿಂತು] ಭವ್ಯಜನಕ್ಕೆ ಧರ್ಮೋಪದೇಶಂಗೆಯ್ಯಲ್‌ ಚಾತುರ್ವರ್ಣ ಶ್ರವಣಸಂಘಮೆಲ್ಲಮನವರವರ್ಗೆ ತಕ್ಕ ಕ್ರಿಯೆಯೊಳ್‌ ನಡಪುತ್ತಂ ಯೋಗಕ್ಷೇಮಂಗಳ ನಾರಯ್ವುತ್ತಂ ದರ್ಶನಜ್ಞಾನ ಚಾರಿತ್ರಂಗಳ[೦] ಅವಿಘ್ನದಿಂದ ನಡೆಯಿಸುತ್ತಂ ಗಣಪೋಷಣ ಕಾಲಮಂ ಕೞಿಪಿ ತದನಂತರಂ ಜೀವಾಜೀವ ಪುಣ್ಯ ಪಾಪಸ್ರವ ಸಂವರ [ಬಂಧ] ನಿರ್ಜರ ಮೋಕ್ಷಮೆಂಬ ನವತತ್ತ್ವಭಾವನೆಯಂ ಭಾವಿಸುತ್ತಂ ದ್ವಾದಶಾನುಪ್ರೇಕ್ಷಾಸ್ಮರಣೋದ್ಯುಕ್ತಚಿತ್ತರಾಗಿ ಜ್ಞಾನಭಾವನೆಯಿಂದಾತ್ಮ ಸಂಸ್ಕಾರ ಕಾಲಾಂತರದೊಳ್‌ ಶತ್ರುಂಜಯಪರ್ವತಕ್ಕೆ ಬಂದು ಯೋಗನಿರೋಧದೊಳಿರ್ದುದಂ ದುರ್ಯೋಧನ[ನ] ಮೊಮ್ಮಂ ಕಯವರಂ ತಮ್ಮಜ್ಜನ ಪಗೆವರಪ್ಪ ಪಾಂಡವರೆಂಬುದನಱಿದವರಿರ್ದಲ್ಲಿಗೆ ವಂದು

ಮ || ಇವ[ರುಂ] ಮುನ್ನೆ ಬಿಗು [ರ್ತು] ಯುದ್ಧದೊಳಡುರ್ತೆಮ್ಮಜ್ಜ [ರಂ ತಾಗುತಿ]
ಪ್ಪವರಂ ಕೊಂಡೆನಿತೊಂದು ರಾಜ್ಯಪದಮಂ ಕೆಯ್ಕೊಂಡು ಮಿಕ್ಕಿರ್ದ ಪಾಂ
ಡವರಪ್ಪಯ್ವರುಮಾದೊಡೇನಿವರ್ಗತಿಸ್ನೇಹಾರ್ತದಿಂ ಬಿರ್ದನಿ
ಕ್ಕುವೆನೆಂದಾಗಡೆ ಕೋಪದಿಂ ತರಿಸಿದಂ ದಂಡಪ್ರಯೋಗಂಗಳಂ ೫೫

ವ || ತನ್ನಿಮೆಂದು ಕಾಸಿದ ಕಾರ್ಬೊನ್ನ ಮಣೆಗೊಳೊಳೈವರುಮಂ ಕುಳ್ಳಿರಿಸಿ ಮಿಯಲೆಱೆಯಿಮೆಂದು ಕರಗಿಸಿದ ಲೋಹರಸಮಂ ಮೇಗಿೞಿಯ ಸುರಿಯಿಸಿ ಬೇಗಂ ತಂದುಪ್ಪಟಮನುಡಿಸಿಮೆಂದು ಎಣ್ಣೆಯೊಳ್‌ ನಾಂದಿದ ಘಟ್ಟಿಗಳಂ ತರಿಸಿ ತಿದಿಯಂ ಸುತ್ತಿಯುರಿಯಂ ತಗುಳ್ಚಿ ಭೂಷಣಂಗಳಂ ತುಡಿಸಿಮೆಂದು ಕರ್ವೊನ್ನ ಕಾಸಿದಾಭರಣಂಗಳಂ ತುಡಿಸಿ ಪಿರಿಯಾತಂಗೆ ಪಟ್ಟಂ ಭೀಮಂಗೆ ಯುವರಾಜಪಟ್ಟಮರ್ಜುನಂಗೆ [ವೀರ] ಪಟ್ಟವೆಂದು ಕಾಯ್ದ ಕರ್ವೋನ್ನ ಪಟ್ಟಂಗಳಂ ನೊಸದೊಳ್ ಕಟ್ಟಿ ಚಾಮರಮೆಂದುರಿಯ ಪೊಟ್ಟಣಂಗಳಂ ಬೀಸವೇೞುತ್ತಂ ಪಲತೆಱದಿಂ ನಿಗ್ರಹಂಗೆಯ್ಯೆ ಸೈರಿಸಿ

ಶಾ || ಇಂತಾಗಿರ್ದ ಮ[ಹೋಪ] ಸಗರ್ಭರದೊಳ್‌ ನಿಂದಂದದಿಂ ಮೂವರುಂ
ಕೌಂತೇಯವ್ರತಿಗಳ್‌ ವಿಶೇಷಮತಿಗಳ್‌ ಶುದ್ಧೇದ್ಧ ಸವ್ಯಾನದಿಂ
[ಸಾಂತರ್‌ ಸಾಂ]ತ ರಸೋದಯರ್ಕಳತಿಬದ್ಧಾನಾದಿ ಕ[ರ್ಮಾರಿಗಳ್‌
ಸಂತಂ ತಾಂ ಸು] ಮಹೋನ್ನತೋಜ್ವಳಗುಣೋದ್ಯುನ್ಮುಕ್ತಿಯೊಳ್‌ ಕೂಡಿದರ್‌ ೫೬

ವ || ಮತ್ತೀತ ನಿರ್ವೃತಮಿತನಲ್ಲಂ ನಮ್ಮಂ ನಿಗ್ರಹಿಸುವಂತಾಯ್ತೆಂದಿನಿಸು ತಳೆದ ಬಗೆಯಿಂ ಮುಡಿಪಿ ಸರ್ವಾರ್ಥಸಿದ್ಧಿಯ….. ನೇಮಿಭಟ್ಟಾರಕ ಸಮವಸರಣಂ ವಿಹಾರಿಸುತ್ತಂ ಭವ್ಯಜನ ಸಸ್ಯಾಸಮೂಹಕ್ಕನುರಾಗಮಾಗೆ ಧರ್ಮಾಮೃತ ವೃಷ್ಟಿಯಂ ಸುರಿವುತ್ತಮಂತೆ ಬಂದು ಜಯಂತಗಿರಿಯಮೇಗಿಟ್ಟು…. ಜ್ಜ ಸಮಾನಮಾಗಿರ್ದುತ್ತರ ಪ್ರಕೃತಿಗಳಂ ನಿರವಶೇಷಂ ಮಾಡುವುದಱಿಂ

ಉ || ಯೋಗ ನಿರೋಧದಿಂದುೞಿದ ನಾಲ್ಕು ಮಘಾ[ತಿ ಚತುಷ್ಟಯಂ]ಗಳಂ
ಬೇ[ಗ]ದಿನಿಕ್ಕಿ ಗೆಲ್ದು ಭುವನತ್ರಯದಗ್ಗ [ಳಮಾ]ದ ಭೂತಳ
ಕ್ಕಾಗಳೆ ಪೋಗಿ ಸಿದ್ಧಗುಣಮೆಂಬವಱೊಳ್‌ ನೆಲಸಿರ್ದ ನಿರ್ವೃತಿ
ಶ್ರೀಗಧಿನಾಥನಾಗಿ ನೆಲಸಿರ್ದನನಂತಚತುಷ್ಟಯೋದಯಂ ೫೭

ಗದ್ಯ || ಇದರ್ಹತ್ಸರ್ವಜ್ಞ ಪಾದಪದ್ಮ ವಿರಾಜಿತೋತ್ತಮಾಂಗ ಶ್ರೀ ಬಂಧುವರ್ಮ ನಿರ್ಮಿತಮಪ್ಪ ಹರಿವಂಶಾಭ್ಯುದಯದೊಳ್‌

ಚತುರ್ದಶಾಶ್ವಾಸಂ

-ಸಂಪೂರ್ಣಂ