ಕಂ || ಮಱಹಿಕ್ಕಿ ಪಿಡಿದು ಕಟ್ಟಿದ
ಮಱುಕಮ ನೀನೆಂತು ತೋರ್ಪೆಯಣ್ಮೆಲೆ ನೀನೀ
ನೆಱೆದ ಚತುರ್ವಲ ಸಹಿತಂ
ತಱಿಸಂದೆನ್ನಿದಿರೊಳಾಂತು ತೋರ್ಪುದು ಛಲಮಂ ೩೧

ವ || ಎಂದ ಮಾತಿಂಗೆ ಮೇಘರಥ [೦……ಕಿನಿ] ಸಿಕಯ್ದುಗೆಯ್ಯಲ್ ಬಗೆದಾಗಳಾ ತನ ಪಡೆ ಮಸಗಿ ತಮ್ಮಾಳ್ದನಂ ಪೆಱಗಿಕ್ಕಿ ನೂಂಕಲ್ ಬಗೆದಾಳರ್ಜುನಂ ಬಿಲ್ದೆಗೆ ದೆಚ್ಚೊಡಂಬಿನೊಳ್ ಪಡೆಯೆಲ್ಲಮೊಡನೆ [ಮ]ಮ್ಮೞಿಯಾ[ಗೆ] ಮೇಘರಥಂ ವಿದ್ಯೆಗಳು ಬೆಸಸಿದಾಗಳ್ ಪಾರ್ಥಂ ಪ್ರತಿವಿದ್ಯಗಳಂ ಭೇದಿಸಿ ಗೆಲೆ ಮೇಘರಥಂ ಬೆಳ್ಕುತ್ತ ಗಗನಮಾರ್ಗದಿನೋಡುವನನಿಂದ್ರರಥನೆಯ್ದಿ ಪಿಡಿದು ತನ್ನ ಕಟ್ಟಿದಂತಾತನಂ ಕಟ್ಟಿ ತಂದರ್ಜುನನ ಮುಂದಿಕ್ಕಿದೊಡರ್ಜುನಂ ಕಂಡು ಕರುಣಿಸಿ ಕಟ್ಟಂ ಬಿಡಿಸಿ ನೀನಿನ್ನೀತಂ ಗಂಜಿ ಬೆಸಕೆಯ್ದು ಬಾೞೆಂದು ಕಳುಪಿದನಾಗಳಿಂದ್ರರಥನರ್ಜುನನನತ್ಯಾಗ್ರಹಂಗೆಯ್ದು ವಿಮಾನಮನೇಱಿಸಿ ತನ್ನ ಪೊೞಲ್ಗೊಯ್ದು ಪಲವುಂ ವಸ್ತುಗಳಂ ವಿದ್ಯಗಳಂ ಕೊಟ್ಟು ಮಗುೞೆ ಕಳಿಪಿದೊಡರ್ಜುನ [೦] ನಾಡೆಯಿಂದಂ ಮಗುೞ್ದಣ್ಣನಲ್ಲಿಗೆವಂದೊಡಿನ್ನೆಗಮೆತ್ತ ಪೋದೆಯೇಕೆ ತಡೆದೆಯೆನೆ ತತ್ಪ್ರಪಂಚಮನಱಿಯೆಂಪೇೞೆ ತಮ್ಮನ ಸಾಹಸಮಂ ಮೆಚ್ಚಿ ನಚ್ಚಿ ಸಂತೋಷದೊಳಿರ್ದಲ್ಲಿಂದಮಮತೆ ಬಂದು ಮಹಾನದಿಯಂ ಪಾಯ್ದು ಶ್ರೀ ಪರ್ವತದಾಸನ್ನಪಥದೊಳ್ ಪಯಣಂಬೋಗಿ ಕಾಂಚಿಪುರದೊಳ್ ವಿಶ್ರಮಿಸಿರ್ದು ಕೆಲವು ದೆವಸದಿಂ ಪಶ್ಚಿಮಾಭಿಮುಖರಾಗಿ ಪಯಣಂ ಬಂದು ಬನವಾಸಿದೇಶದೊಳ್

ಚ || ಸುರಭಿತರ ಪ್ರಕೀರ್ಣ ವನರಾಜಿಗಳಿಂ ಕಮನೀಯ ಪದ್ಮಸುಂ
ದರ ಜಲಖಾತಿಕಾವಳಯದಿಂ ಕರಮುನ್ನತಮಪ್ಪ ಕೋಟೆಯಿಂ
[ಸುರಪ] ನರೇಂದ್ರ ನಿರ್ಮಿತ ಜಿನಾಲಯದಿಂ ಸೊಗಸಿಪ್ಪುದಂ ಮನೋ
ಹರತರಮಂ ವಿರಾಟಪುರಮಂ ಸುಖದಾಗರಮಂ ಸರಾಗದಿಂ ೩೨

ವ || ಪೊಕ್ಕು ತೀರ್ಥನಾಥ ಜಿನಾಲಯಮಂ ಕಂಡು ಬಲಗೊಂಡು ಜೀನೇಂದ್ರಂಗೆ ನೊಸಲೊಳ್ ಕೆಯ್ಯನಿಟ್ಟು ಪೊಡೆವಟ್ಟು ಕ್ರಿಯಾಪೂರ್ವಕಂ ಸ್ತುತಿಯಿಸಿ ಋಷಿಸಮುದಾಯಮಂ ಯಥಾಕ್ರಮಂ ಬಂದಿಸಿ ಕಿಱುದುಪೊತ್ತು ವಿಶ್ರಮಿಸಿರ್ದಿಂತಪ್ಪ ತೀರ್ಥಸ್ಥಾನದೊಳಿರ್ಪು ದೊಳ್ಳಿತೆಂದು ತಮ್ಮೊಳಾಳೋಚಿಸಿ ಪೆಱವು ಪೆಸರ್ಗಳಂ ತಮಗೆ ಮಾಡಿ ಬೇಱೆವೇಱೆ ನಿಯೋಗದೊಳ್ ಮನೆವನೆಗಂ ಕೈಕೊಂಡಿರ್ದರತ್ತ ದುರ್ಯೋಧನನಾಸ್ಥನಿಕೆಯೊಳ್ ಶಕುನಿ ಭಿನ್ನಪಮೆಂದಿಂತೆಂದಂ

ಕಂ || ಪನ್ನೆರಡು ವರ್ಷದವಧಿಯ
ದಿನ್ನೆವರಂ ನೆಱೆಗುಮವರ ವೃತ್ತಿಯನಾರ
ಯ್ವನ್ನವು ನೆಗೞ್ತೆವೇೞ್ಪುದು
ನನ್ನಿಗೆ ಮಾಣ್ದಿರ್ದರುಂತವರ್ ಮಾಣ್ದಪರೇ ೩೩

ವ || ಎನೆ ದುರ್ಯೋಧನನವರಿನ್ನೆಲ್ಲಿರ್ದುಮೇವರೆಂದುದ್ಧತನಾಗಿ ನುಡಿಯೆ ಭೀಷ್ಮನೆಂದಂ ಮೃಗಗಣಂ ಸಿಂಗಮನಱಸುವುದುಂ ಪಕ್ಷಿಗಳುಂ ಗರುಡನಂ ಬಗೆಯದುದಂ ಮಾನಸರ್ ಪಾಂಡವರನಿೞಿಸುವುದುಂ ಮರುಳ್ತನಮೆನೆ

ಕಂ || ಕೊರಲ ಸೆರೆ ಬೀಗಿ ಬೆಮರು
ತ್ತಿರೆ [ಮೈ] ಕಣ್ ಕೆಚ್ಚನಾಗೆ ಬಾಯಿರ್ಪೋಡು
ತ್ತಿರೆ ಪುರ್ವು ಕಿಱುಪೆ ಕಡುಬಂ
ಕುರುಪತಿ ಭೀಷ್ಮಂಗೆ ಕಿನಿಸಿ ಕಿಂಕಿಱಿವೋದಂ ೩೪

ವ || ಅಕ್ಕು ನೀಮಾಗಳಾದೊಡಮವರನೆ ಪಿರಿಯರುಮರಿಯರು ಮಾಡಿ ನುಡಿವಿರೆನ್ನ ಬೀಡಿನೊಳಾವಂಗೆ ಸಮನವರೆಂದಿಂತೆದಂ

ಕಂ || ಕರ್ಣಂಗೆ ದಾನಗುಣ ಸಂ
ಪೂರ್ಣತೆಗೆ ವಿನೂತ ವಿಪುಳದವೊೞೆ ಯಶೋವಿ
ಸ್ತೀರ್ಣಂಗೆ ಬಗೆದು ನೋಡೆ ಮ
ಹಾರ್ಣವ ಪರ್ಯಂತ ಧೆರೆಯೊಳೇಂ ದೊರೆಯೊಳರೇ ೩೫

ವ || ಆತನಳವನೇವೇೞ್ವುದೀ ಕೃಪ ಕೃತವರ್ಮ ದ್ರೋಣಾಚಾರ್ಯ ಭಗದತ್ತ ಸೈಂಧವ ದುಶ್ಯಾಸನಾದ್ಯನೇಕ ರಾಜಕುಮಾರರನಾರಂ ಪೇೞ್ವುದೆಂದುಚ್ಛಾಟಿಸಿ ನುಡಿದಂ ಬೞಿಯಮಿನಿಸರಸಾಳ್ತನಮಂ ಬಗೆದು ಮತ್ತಂ ಭೀಷ್ಮನೆಂಗುಮಂತೆ ನಿನ್ನ ಪುರುಷ ಸಂಗ್ರಹದ ಬಲ್ಲಾಳ್ತನದಳವಳುಂಬಮಾದೊಡಂ ಮುದುಗಣ್ಗಳ ಮಾತಂ ಕೇಳ್ವುದಾರಯ್ವುದೆಂದಾಱೆ ನುಡಿದೊಡಂಬಡಿಸಿ ಚರರಿರ್ವರನೊಳ್ಳಿತ್ತಾರಯ್ದು ಬನ್ನಿ ಮೆಂದಟ್ಟಿದೊಡೆ ಕೆಲವು ದೆವಸದಿಂ ಬಂದಾ ಚಾರರೊಂದರಗಿನ ಮಾಡದಿಂ ಪೋಪು ಪಾಯಮಾದಿಯಾಗೆ ವಿರಾಟಪುರ ಪ್ರದೇಶಂಬರಮಾದಸ್ಥಾಂತರ ಮುಮನಲ್ಲಿಯೆ ಮೆಯ್ಗರೆದಿರ್ದುಪಾಯಮುಮನವದಿ[ರ್] ನೆರೆದೊಡೆ ಬರ್ಪೆಮೆಂಬುದುಮಂ ಬಂದ ಬಲ್ಲಾಳ್ತನಮುಮನೊಳ್ಳಿತ್ತಾರಯ್ದಱಿದು ಬಂದು ಬಿನ್ನಪಂಗೆಯ್ದಾಗಳೆ ಕುರುರಾಜಂ ತನ್ನಲ್ಲಿ ಬುದ್ಧಿ ಯುಳ್ಳರುಮಂ ಪ್ರತಾಪಮುಳ್ಳರು ಮನೊರ್ಬುಳಿಗೆದಂದು ಏಕಾಂತಮಿರ್ದಿನ್ನೇಗೆಯ್ವಮೆನೆ ಸುಶರ್ಮನೆಂಬ ಮಂತ್ರಿಯಿಂತೆದಂ

ಕಂ || ಅಱಿಯಲಣಮಾಗದಂತಿರೆ
ಮಱಸಿ ನಿಯೋಗದೊಳೆ ರೂಪುಗರೆದಿರ್ದೊಡಮೇಂ
ತುಱುಗೊಳೆ ಮಾಣ್ಬರೆ ಮಾಣರ್
ತಱಿಸಂದೆಯ್ತಪ್ಪರೆಯ್ದೆ ತಮ್ಮಂ ತೋರ್ಪರ್ ೩೬

ವ || ಅದಱಿಂದಲ್ಲಿಯ ತುಱುವಂ ನಮ್ಮ ಬಲಮೆಲ್ಲಮನಟ್ಟಿಕೊಳಿಸಿ ಪೊಱ ಮಟ್ಟೆಯ್ತಂದರನಿಕ್ಕಿ ನಿಶ್ಚಿಂತಂ ಮಾಡಿರ್ಪಮೆಂದೊಡಿದಪ್ಪುದೆಂದಾ ಕಜ್ಜಮನೆ ಕೆಯ್ಕೊಂಡು ಮಱುದೆವಸಂ ತನ್ನ ಸಮಸ್ತ ಸಾಧನಮಂ ವಿರಾಟಪುರದ ತುಱುಗೊಳಲಟ್ಟಿದೊಡಾ ನೆರವಿ ಪಯಣಂಬೋಗಿ ವಿರಾಟಪುರಮನೆಯ್ದಿ ತುಱುವಿನೇಳ್ಗೆಯೊಳೊಂದುಮಂ ಪೋಗಲೀಯದೆ ಪೊಲನೆಲ್ಲಮಂ ಬಳಸಿ ಕವಿದು ತುಱುವಂ ಕೈಕೊಳ್ವಾಗಳ್ ಗೋವರ್ ಕಂಡು

ಕಂ || ಇಂತೆಂಬುವೊಳವೆ ಕಣೆಗೊ
ಳ್ವಂತಪ್ಪ ಕಿರಾತಸೇನೆಯಲ್ಲಂಬುಧಿ ಪ
ರ್ಯಂತ ಧರೇಶನ ಚಾತು
ರ್ದಂತಬಲಂ ಮುತ್ತಿಕೊಂಡುದಾಡೊಮೇನೋ ೩೭

ಉತ್ಸಾಹ

ಎಂದು ಮಸಗಿ ಬಿಲ್ಲನೊತ್ತಿಕೊಂಡು ಮುಳಿದು ಸಾ
ರ್ತಂದು ನಿಂದು ಮಾಣದೆಚ್ಚೊಡವರ ಬಿಲ್ಲುಮೆ
ಯ್ತಂದು ಕುಣಿದು ಮಣಿಯದೆಚ್ಚೊಡಂಬು ಗಗನ ಭಾಗದೊಳ್
ಮಂದಮಾಗಿ ಪಾಱಿದವು ತಮಂಧಮಪ್ಪಿನಂ (?) ೩೮

ಕಂ || ನೆಱೆಗೊಂಡಂಬಿನ ಕೋಳಂ
ನೆಱೆಯೆ ಮನಂಗೊಂಡುಮಾರ್ಪು ಸಮನಿಸಿತೆಂತು [೦]
ತುಱುಗೊಳ್ ಸಾವೆಮಗೆಂತುಂ
ತೊಱದ ತಪಃಫಲಮೊ ಪೇೞಿಮೆನುತಂ ಬಿರ್ದರ್ ೩೯

ಕಂ || ಅಱಿಕೆಯ ಬಲ್ಲಾಳಪ್ಪರೊ
ಳಿಱಿವುದು ದೊರೆಕೊಂಡುದಣ್ಮಿ ಸಾವೆಡೆಯುಂ ತಾಂ
ತುಱುಗೊಳ್ವೆಡೆಯೆಂದೆಡೆ ಪೋ
ಪೆಱದೇಂಗಳ ನಮ್ಮ ಸಯ್ಪುಪೊಗೞಲಳುಂಬಂ ೪೦

ವ || ಎಂದೆಂದು ಪೊ[ಕ್ಕೆ] ಚ್ಚು ಪಾಯ್ದ ನೆತ್ತಱಿಂ ಬೞಲ್ದು ಬಿರ್ದರಂತು ಗೋವರ ನೆರವಿಯಂ ಮಾರ್ಪಡೆಯರ್ ಕಂಡವರ್ ಗೋವರುಂ ತುೞಿಲಾಳ್ಗಳುಂ ತಕ್ಕುದಂ ಬಗೆಯದೆ ಬೇಡರಂತೆ ತುಱುಗೊಳಲ್ ಬಂದ ನಾಮೆ ಗೋವನೆಂದೊಡೊರ್ವನೆಂದನಂತೇಕೆಂಬೆಯಾಳ್ದರ ಬೆಸದ ಪೊಲ್ಲಮೆ ನಮ್ಮ ದಲ್ಲಾಳ್ದನದೆಂದು ಪೊಕ್ಕು ಕಾದಿ ಸತ್ತರಂತು ಪಿರಿದು ಪೊತ್ತು ಕಾದಿ ಗೋವರಂ ತವೆ ಕೊಂದು ತುಱುವಂ ಕೈಕೊಂಡು ನಡೆವಮೆಂಬನ್ನೆಗಮೊರ್ವ ಗೋವಂ ಬರ್ದುಂಕಿ ಪೋಗಿ ಪುಯ್ಯಲಿಡುತಂ ಪೊೞಲಂ ಪೊಕ್ಕು ವಿರಾಟಂಗಿಂತೆಂದು ಬಿನ್ನಪಂಗೆಯ್ದಂ

ಕಂ || ಅಸದಳಮಾಗಿರೆ ಪೆರ್ವಡೆ
ಮಸಗಿ ನೆಲಂ ಮೂರಿವಿಟ್ಟ ತೆಱದೊಳ್ ನಾಲ್ಕು
ದೆಸೆಯಂ ಕವಿತಂದೀಗಳ್
ಬಿಸಸನದೊಳ್ ಕೊಂದು ಗೋವರಂ ತುಱುಗೊಂಡರ್ ೪೧

ವ || ಇಂತಪ್ಪುದಂ ನೀವಱುವಿರೆನೆ ವಿರಾಟಂ ತ್ರಿಸ್ಥುಳಂ ಮಸಗಿ ಪುರಕ್ಷೋಭಮಾಗಿರ್ದು ಸಮಸ್ತ ಸಾಧನಸಹಿತಂ ನಡೆಯ ಮೆಯ್ಗರೆದಿರ್ದ ಪಾಂಡವರೊಂದೆಡೆಗೆವಂದು ನಾಮೇಗೆಯ್ವಮೆಂದಾಳೋಚಿಸುವಾಗಳರ್ಜುನನಿಂತೆದಂ

ಕಂ || ಏ ಪಡೆ ಮಾತಿದು ಕೌರವ
ಭೂಪತಿ ನಮ್ಮಿರವ[ನಾರಯಲ್ ನೆಗೞ್ದ ತೆಱಂ
ಭೂಪಾಳರೆಲ್ಲರಪ್ಪಡೆ
ಗೋಪಾಳರನಿಂತು ಕೊಂದು ಕೊಳ್ವರ ತುಱುವಂ ೪೨

ವ || ಇಂದು ಪೆಱದಲ್ತು ನಮ್ಮಿರವನಾರಯ್ಯಲ್ ನೆಗೞ್ದಂದಮಿದಕ್ಕೆ ಸೆರಗಂ ಬಗೆದು ತುಱುಗೊಳೆ ಮೆಯ್ದೆಗೆವುದು ತಕ್ಕುದಲ್ತೀಯೆರಡುಮಲ್ಲದೆಯುಮವಧಿಯ ದವಸಮುಂ ಪೋದುವು ನಾಮೀ ಪದದೊಳಡಂಗಿದೊಡಮೞಿಗೆಯ್ತಕ್ಕೆ ಕಡಂಗಿದೊಡಂ ನಮ್ಮಿಂದಂ ಕಷ್ಟರಿಲ್ಲೆಂಬ ಮಾತಂ ಧರ್ಮಜಂ ಮೆಚ್ಚಿ ನರನ ಕಜ್ಜಮೆನೆ ಕೆಯ್ಕೊಂಡು ಬೇಗಮೆರ್ದು ತಂತಮ್ಮಾಯುಧಂಗಳಂ ಕೊಂಡು ನಡೆಗೊಂಡು ಪುಯ್ಯಲಿಗರೊಡನೆ ಪೊಱಮಟ್ಟು ವಿರಾಟನ ಪೆಱಗಂ ಬರೆ ವಿರಾಟಂ ತುಱುವಿನ ಕೋಳ್ವಾಯನೆಯ್ದಿ ಮಿತ್ತುವಿನ ಬಾಯನೆಯ್ದಿದಂತೆ ತಲ್ಲೞಿಸಿಯುಂ ಪೋಬೞಿಯಂ ತಗುಳ್ದೆಯ್ದಿದಾಗಳ್ ಬಲದ ಪಡಿಬಲದವರ್ ಕಂಡು ಮಗುೞ್ದು ನಿಂದು ಕಾದೆ ವಿರಾಟನ ಬಲಂ ಪೇಸೇೞೆ ಸತ್ತುದಂ ಕಂಡು ಪೊಡರ್ಪುಗೆಟ್ಟುಗಿಯೆ ಗೋೞುಂಡೆಗೊಂಡು ನಿಂದು ನೋಡಿ ಪಾರ್ಥನಂಬಿನ ಮದಕಮುಮಂ ನಾಡಾಡಿಯಲ್ಲ ದೆಸೆಕಮುಮಂ ಕಂಡಿಂತೆಂಬರ್

ಕಂ || ಸುರನಿವನಸುರನಿವಂ ಖೇ
ಚರನಿವನಲ್ಲದೊಡೆ ಪಾಂಡುರಾಜನ ತನಯಂ
ನರನಿವನಾಗಲೇವೇೞ್ಪುದು
ಧುರದೊಳ್ ಪೆಱನಿಂತು ಕಾದನೆಂದರ್ ಪಲಬರ್ ೪೩

ಒಂದೆ ಸರಂ ತಿರುವಾಯಿಂ
ಬಂದರೆಬರನಿಕ್ಕಿದೊಡನೆ ರಿಪುಗಳೊಳೊರ್ವಂ
ಗೊಂದ ಸರಮಾಗೆ ನಡಯಿಸು
ವಂದಮನೊಡನೊಂದ ಸರದೊಳೆಲ್ಲಂ ಪೊಗೞ್ದರ್ ೪೪

ಜಾಣ್ಚದುರನೊದವಿಸುತ್ತಿರೆ
ನಾಣ್ಚಲಮಂ ಪಡೆಯೆ ನೆಗೞ್ದ ಗಂಡರನೆ ಕರಂ
ಪುಣ್ಚುವುವುೞಿದವರಂ ಕಡೆ
ಗಣ್ಚುವುವಂ ಬಾಯಮಱಿವುಮಿಂತರ್ಜುನನಂ ೪೫

ಅಭಿನವಸಂಭವನಪ್ಪನ
ನುಭಯ ಭವ ಭ್ರಷ್ಠನಂ [ಮಿಗೆ] ಬಂಚಿಸಿಂ ಬಂ
ದಭಯನನಧಟನನಂಕದ
ಸುಭಟನನಾಯ್ದಱಿದು ಕೊಳ್ವು [ದ] ರ್ಜುನನ ಶರಂ ೪೬

ವ || ಅಂತರ್ಜುನನಂಬಂದು ಕೊಳೆ ಪೊಡರ್ಪುಳ್ಳರೆಲ್ಲಂ ನೋವರುಂ ಸಾವರುಮಾಗೆ ಭಯಮುಳ್ಳರೆಲ್ಲ ಮಳ್ಳಾಡುವರುಮೋಡುವರುಮಾಗೆ ಕಾದಿ ಕೊಂಡ ತುಱುವಿನೊಳೊಂದು ಕರೆಗಱುವನಪ್ಪೊಡಂ ಪೋಗಲೀಯದೆ ಮಗುೞ್ದಿ ವಿರಾಟನಂ ಕೈಕೊಳಲ್ವೇೞ್ದು ಮತ್ತಮಿದಿರ್ಚಿ ನಿಂದಯ್ವರುಮಮ ಕುರುಬಲದೊಳ್ ಕೆಲರಿಂತೆಂಬರ್

ಕಂ || ಈತಂ ಪಾರ್ಥಂ ನಂಬಿ
ರ್ದಾತಂ ಧರ್ಮಜನಗುರ್ವು ಪರ್ವಿದ ಗದೆವಿಡಿ
ದಾತಂ ಭೀಮಂ ಪೆಱಗಿ
ರ್ದಾತಂಗಳ್ ನೆಗೞ್ದ ನಕುಳ ಸಹದೇವರ್ಕಳ್ ೪೭

ಅಪ್ಪರ್ ಪಾಂಡವರಲ್ಲದ
ರ್ಗೊಪ್ಪದು ನಮ್ಮಿ ಸಮಸ್ತ ಬಲಮಂ ಗೆಲ್ವಂ
ತಪ್ಪ ಪರಾಕ್ರಮಮಿ [ಲ್ಲಿಂ]
ತಪ್ಪುದನಾಳ್ದಂಗ ಪೋಗಿ ಪೇೞ್ವುದೆಕಜ್ಜಂ ೪೮

ವ || ಎಂದು ದಂಡನಾಯಕರುಂ ಪಲರ್ ನಾಯಕರುಮೊಂದೆಡೆಗೆ ವಂದೆಲ್ಲಿಯು ಮೊಳ್ಳಿದರಪ್ಪ ತುೞಿಲಸಂದರ್ ತುಱುಗೊಳಲ್ ಪೋಗಿ ಸತ್ತರೆಂಬುದೊಂದಯಶಮಂ ಮಾಡದೆ ಪೋಪಂ ಬನ್ನಿಮೆಂದು ಮಗುೞ್ದು ಪಯಣಂಬೋದರಿತ್ತ ಪಾಂಡವರ್ ಗೆಲ್ಲಂಗೊಂಡು ವಿರಾಟನಂ ಕೈಕೊಂಡು ತುಱುವಂ ಮುಂದೆಗೊಂಡು ಮಗುೞ್ವಾಗಳ್ ವಿರಾಟನುಮುತ್ತರನುಂ ಪಾಂಡವರಪ್ಪುದನಱಿದು ತಮ್ಮ ರಥಂಗಳಿಂದಿೞಿದು ಬಂದೆಱಗಿ ಬಿನ್ನಪ[೦] ಮೆಯ್ಗರೆದಿರ್ಪು ದೇನೆನ್ನಂ ಬೆಸಕೆಯ್ಸಿಕೊಂಡು ನೀಮಿಲ್ಲಿರ್ದರಸುಗೆಯ್ವುದೆಂದತಿ ಭಕ್ತಿಯಿಂ ಹಸ್ತ್ಯಶ್ವರಥಂಗಳನೇಱಿಸಿ ಮಹಾಮಹಿಮೆಯಿಂ ಪೊೞಲಂ ಪೊಕ್ಕು ತನ್ನ ಮಾಡಮಂ ಪೊೞಲುಮನವರ್ಗೊಪ್ಪಿಸಿ ಸರ್ವಪ್ರಿಯದಿಂ ವಿನಯಮನುಂಟುಮಾಡಿ ಬೆಸಕೆಯ್ಯುತ್ತಿರೆ ಪಾಂಡವರಲ್ಲಿರೆ ಮಹಾವಿಭೂತಿಯುಂ ಖ್ಯಾತಿಯುಂ ಪರ್ಚೆ ಶೌರ್ಯಮುಮೌದಾರ್ಯಮುಂ ನೆಗೞೆ ಸುಖದಿನಿರ್ದರಂತಿರ್ದರುಮಂ ಕೌರವನಗೆಯ್ದ ಯೋಗಮುಮಂ ದ್ವಾರಾವತಿಯೊಳಿರ್ದ ನಾರಾಯಣನುಂ ಬಲದೇವನುಂ ಕೇಳ್ದು ಪಾಂಡವರ ನಲ್ಲಿರಿಸಲಾಗದೆಂದಾಳೋಚಿಸಿ ಸತ್ಯಕನನವರನೊಡಗೊಂಡು ಬಾಯೆಂದಟ್ಟಿದೊಡಾತಂ ಬಂದು ಪಾಂಡವರಂ ಕಂಡು ಪಲದೆವಸಂ ಕಂಡಱಿಯೆಮಾಗಿ ಕರಂ ನೆನೆವೆವು ಬರ್ಕೆಂದು ನಿಮ್ಮ ಮಾವಂಗಳು[೦] ಮಯ್ದುನರ್ಕಳುಂ ಬೞಿಯನಟ್ಟಿದರೆಂದತ್ಯಾಗ್ರಹಂಗೆಯ್ದು ವಿರಾಟಸಹಿತಮೆಲ್ಲರುಮ ನೊಡಗೊಂಡು ಪೋಗಿ ದ್ವಾರಾವತಿಯೊಳ್ ನಾರಾಯಣಂ ಮೊದಲಾಗೆ ಬಂಧುಗಳೆಲ್ಲರುಮಂ ಕಂಡು ನಿಶ್ಚಿಂತಮಿರ್ದರಂತಾ ಸ್ವಜನ ಸುಜನ ಸಂಪರ್ಕದಿಂ

ಕಂ || ಆತಿಶಯ ವಿಭವದಿನಮರಾ
ವತಿಯೊಳ್ ದಿವಿಜೇಂದ್ರನಿಪ್ಪ ತೆಱದಿಂ ದ್ವಾರಾ
ವತಿಯೊಳುಪೇಂಧ್ರಂ ವಿಭವೋ
ನ್ನತನುಂ ಮಹಿನುತನುಮಾಗಿ ಸುಖದಿಂದಿರ್ದಂ ೪೯

ವ || ಅಂತಿರ್ಪಿನಮಲ್ಲಿಗೆ ಪಿರಿಯನೊರ್ವಂ ವಣಿಕ್ಕುಲಾಧಿಪತಿಯ ಬಹಿತ್ರಂ ಗಾಳಿಯ ವಶದಿಂ ಸಾರ್ತಂದೊಡೆ ಮಱೆವಾರದೊಳ್ ಬಹಿತ್ರಮನಿರಿಸಿ ವಣಿಕ್ಪತಿಗಳ್ ಪೊೞಲಂ ಪೊಕ್ಕು ತಮ್ಮ ತಂದ ಸಾರವಸ್ತುಗಳಂ ನಾರಾಯಣಂಗೊಪ್ಪಿಸಿದೊಡಾತನುಮವರ್ಗೆ ದಾರಿದ್ರಮೋಕ್ಷಮಪ್ಪಂತು ಕೊಟ್ಟಡೆ ಕೆಲವು ದೆವಸಮಿರ್ದುಮಲ್ಲಿಂದಂ ಪಯಣಂ ಬಂದು ಮಗಧವಿಷಯಮನೆಯ್ದಿ ರಾಜಗೃಹಮಂ ಪೊಕ್ಕು ಈ ವಸ್ತುಗಳ್ಗಿಲ್ಲಿ ಪೆಱರಾರುಂ ಗ್ರಾಹಕರಿಲ್ಲೆಂದು ಜರಾಸಂಧಚಕ್ರವರ್ತಿಗೆ ತಂದ ರತ್ನಂಗಳಂ ತೋಱಿದಾಗಳ್ ನೋಡಿ ಚೋದ್ಯಮೆಂದು ನಾಡೆಯುಂ ಬೇಗದಿನಿಂತೆಂದಂ

ಕಂ || ಇಂತಪ್ಪ ರತ್ನಜಾತಿಗ
ಳೆಂತುಮಗೋಚರದೊಳಿಲ್ಲದಿರವದಱಿಂ ನೀ
ಮೆಂತೆಯ್ದಿದಿರೆಂ [ತು ತಂದಿ]
ರೆಂತಿವು ದೊರೆಕೊಂಡು[ವೆಂತು ಬಂ] ದಿರೊ ಪೇ[ೞಿಂ] ೫೦

ವ || ಎಂದೊಡಾಮಪ್ಪಡೆ ವಣಿಗ್ವಂಶಜರ್ಕಳುಮರ್ಥೋಪಾರ್ಜನಾ ನಿಮಿತ್ತದಿಂ ಜಲಯಾತ್ರೆಯೊಳ್ ಪೋಗಿ ಚೀನ ಮಹಾಚೀನಂಗಳಂ ಪೊಕ್ಕು ಚಕ್ರವರ್ತಿಗೆ ಯೋಗ್ಯಮಪ್ಪ ಪಟ್ಟಿಸ ಭಂಡಾರಮಂ ಕೊಡು ಮಗುೞ್ದು ಬಪ್ಪಾಗಳೆಮ್ಮ ಬಹಿತ್ರಂ ಸಮುದ್ರದೊಳಗೆ ನಾಲ್ವತ್ತೆಣ್ಗಾವುದದಿಂ ದೇವನಿರ್ಮಿತಮಾಗಿರ್ದ ದ್ವಾರಾವತಿಯೆಂಬ ಪೊೞಲಂ ಪೊಕ್ಕದಂ ದೇವಲೋಕಮೆ ಗೆತ್ತುಮದಱ ನಡುವಣ ಕರುಮಾಡಮಂ ರಿತುವಿಮಾನಮೆಗೆತ್ತಲ್ಲಿಗಧಿಪತಿಯಪ್ಪ ನಾರಾಯಣನಂ ದೇವೇಂದ್ರನೆಗೆತ್ತು ಪೋಗಿ ಕಂಡೆಮ್ಮ ತಂದ ಸಾರವಸ್ತುಗಳೀತಂಗೆ ತಕ್ಕುವೆಂದಾತಂಗಮೋಲಗಿಸಿದೊಡಾತನವಂ ಕೈಕೊಂಡು ಮಱುದೆವಸಂ ತನ್ನ ಕೊಂಡವಕ್ಕಂ ನೂರ್ಮಡಿಯಕ್ಕುಮೆಂದಿವನಿತ್ತೊಡಲ್ಲಿ ಕೆಲವು ದೆವಸಮರ್ಥಿಯೊಳಿರ್ದಲ್ಲಿಂದಮಿತ್ತ ಬಂದೆವು

ಕಂ || ಜಲನಿಧಿಭಂಡಾರಮವಂ
ಗಲಂಘ್ಯಮಪ್ಪೆಡೆಯಾಂಪ ಪಡೆಯುಂಗಾಣಂ
ಬೆಲೆ ಕೆಲಕೆಗುಡುವದನಮಾ
ಗಿರ್ಪ ವಸ್ತುಗಣೆಣೆಯೊಳವೇ (?) ೫೧

ವ || ಎನೆ ಕೇಳ್ದಕ್ಕುಂ ಸಾಲ್ಗು ಮಾತನಾಕಾರ (?) ಕುಲ [ವಾ] ತನಾರ ಮಗನೆನೆ ಹರಿವಂಶದ ಸಮುದ್ರವಿಜಯಾದಿಗಳೊಂಬದಿಂಬರಿಂ ಕಿಱಿಯ ವಸುದೇವನೆಂಬೊನಾತನ ಮಗನೊರ್ವಂ ಬಲದೇವನೆಂಬೊನಚಿಂತ್ಯ ಬಲಪರಾಕ್ರಮನಾತಂ ಕಿಱಿಯಂ ನಾರಾಯಣನೆಂಬಂ ವಾಸುದೇವ ಸಾಹಸದೊಳ್ ನೆಗೞ್ದು ಪಾಂಡವರ್ ಮೊದಲಾಗನೇಕ ರಾಜಕುಮಾರ ಪರಿವೇಷ್ಠಿತನಾಗಿ ರಾಜ್ಯಂಗೆಯ್ಯುತ್ತಿರ್ದನೆಂದಾಗಳ್

ಕಂ || ಎಂತೆಂತೋ ನೀಮೆಂಬುದು
ಭ್ರಾಂತಾಗಿರ್ದಪುದು ಯಾದವರ್ ಕಿಚ್ಚಂ ಪಾ
ಯ್ದಂತಕಮುಖಮೆಯ್ದಿದ ಮಾ
ತಿಂತಾಯ್ತೇ ಜಲಧಿಯೊಳಗೆ ನೆಲಸಿರ್ದಪರೇ ೫೨

ವ || ಎನೆ ದೇವ ತಪ್ಪಿಲ್ಲೆಂದೊಡರಸಂ ಮುನಿದು

ಕಂ || ಈ ಮಹಿಯೊಳ್ ತಲೆದೋಱದೆ
ಭೀಮ ಮಹಾಂಬುಧಿಯೊಳುೞಿದಡಾನಲ್ಲಿಗೆವಂ
ದೇಮಾತದಱೊಳಗಣ ಬಡ
ವಾಮುಖಮಂ ತಮಗೆ ಯಮಮುಖಂ ಮಾಡದಿರೆಂ ೫೩

ವ || ಎಂದು ಗರ್ಜಿಸಿ ನುಡಿವರಿತ್ತ ರತ್ನಂಗಳ್ಗೆ ತಕ್ಕ ಬೆಲೆಯಂ ಕೊಟ್ಟು ಕಳುಪಿ ತನಗಾಗಿ ನೆಗೞ್ವ ಪಲರುಂ ಮಂಡಳಿಕರ್ಗಂ ಕುಱುಂಬ ನಿಕರಕ್ಕಮಾಟವಿಕರ ಬಲಕ್ಕಂ ಬೞಿಯಟ್ಟಿಬರಿಸಿ ಸನ್ನಣಂಗಳನೋಸರಿಸಿ ನಿಜತಂತ್ರಕೆಲ್ಲಂ ಪೇೞ್ದಲ್ಲಿ ಯುದ್ಧಮಂ ಸಮ ಕಟ್ಟಿ ಸಂಗ್ರಾಮಭೇರಿಯಂ ಪೊಯಿಸಿ ಪೊಱಮಟ್ಟಿರ್ದುದಂ ವಾಚಸ್ಪತಿಯೆಂಬ ಮಂತ್ರಿ ಕಂಡೀ ಕಜ್ಜಮನಾರಾಳೋಚಿಸಿ ನೆಗೞ್ದನೆಂದುಮಱಿಯೆನೆನಗೇಂ ಕೆಮ್ಮಂಗಿರಲಾಗದಿದ ನಾರಯ್ಯವೇೞ್ಪುದೆಂದರಸನಲ್ಲಿಗೆ ವಂದೇಕಾಂತಮಂ ದಯೆಗೆಯ್ಯಮೆಂದಾಗಳಂತೆಗೆಯ್ವೆ ಮೆಂದು ಮತಿವಂತನೆಂಬ ಪೆರ್ಗಡೆಯಂ ಬರಿಸಿ ಮಂತಣಮಿರ್ದಲ್ಲಿ ವಾಚಸ್ಪತಿಯೆಂಗು ಪೇೞಿ ನೀಮಿಗಳ್ ನಾರಾಯಣನೊಳೇನೆಂಬುದಂ ಕೇಳ್ದುಮೇವೇೞಲ್ ಬಗೆದಿರಾತಂಗಂ ಮನಗಮಾರ್ಗೆ ದೈವಬಲಮುಂಟೆಂಬುದಂ ಮುನ್ನಮಾರಯ್ವುದೆಂದಡೆ ನೀನೆ ಪೇೞಿಂ ದೊಡಾತನಿಂತೆಂದಂ

ಕಂ || ಒರ್ವನೆ ಕಂಸನನಿಕ್ಕಿದ
ಗುರ್ವುಂ ನೀನಟ್ಟಿದಮಿತ ಸಾಧನಮೆಂದೋ
ಗರ್ವದ ಗೆಲ್ದೊಂದಳವುಂ
ಪೂರ್ವಾರ್ಜಿತ ಪುಣ್ಯದಳವನೇಂ ಸೂಚಿಸವೇ ೫೪

ದೇವೇಂದ್ರಸನ್ನಿಭಂ ವಸು
ದೇವಂ ತಾಂ ತಂದೆ ನೆಗೞ್ದ ಬಲದೇವಂ ಮ
ತ್ತಾ ವಿಭುವಿಂಗಣ್ಣಂ [ತಾಂ]
ದೇವರ ದೇವಂಗೆ ದೇವನೆಂಬುದ ಬಗೆಯಾ ೫೫

ಇಂಬಿನೊಳಿರಲ್ಕೆ ಪೆಱದೆಡೆ
ಯಿಂಬಲ್ಲೆಂದಿಂದ್ರನೊಂದು ಪುರಮಂ ತಾನಮ
ದಂಬುಧುಯೊಳ್ ಸಮೆದಿರಿಸಿದು
ದಂ ಬಗೆವುದು ಹರಿಯ ಪಿರಿಯ ಸುಕೃತೋದಯಮಂ ೫೬

ಗಂಡುಗುಣದಗ್ಗಳಿಕ್ಕೆಯ
ಪಾಂಡವರೇಕೈಕ ವೀರರಯ್ವ [ರ] ನಣ್ಪಂ
ಕೊಂಡಾಡಿ ನಯದೆ ಚಿತ್ತಂ
ಗೊಂಡೋಲಗಿಪುದುವೆ ದೈವಬಲಮಂ ಪೇೞ್ಗುಂ ೫೭

ಕರಮರಿಯರಪ್ಪ ವಿದ್ಯಾ
ಧರರನಡುರ್ತೆಯ್ದಿ ಜಡಿದು ನುಡಿದಾಹವದೊಳ್
ನೆರೆದೆೞೆದುಕೊಂಡ ಕನ್ಯಾ
ಹರಣಂಗಳ್ ಪುಣ್ಯದಳವನೇಂ ಪ್ರಕಟಿಸವೇ ೫೮

ವ || ಇಂತು ದೈವಬಲಮಾತಂಗುಂಟಾಗಿ ತೋಱಿದಪ್ಪುದಾವ ಬಲದಿಂ ದೈವ ಬಲಮೆ ಬಲಮಾಗಿ ನೆಗೞ್ವುದೆಂದು ನುಡಿದೆತ್ತಾನುಮಾ ನುಡಿಗೇವಯ್ಸುಗುಮೆಂದುಂ [ಯುಕು] ಯಿಯುಮಂ ಬಗೆದು ನೋಡೆ ತುೞಿಲಸಂದಂಗ ಕಿಱಿದೊಂದು ನೀರಂ ಪೊಕ್ಕಂಗೆ ಮುಳಿಯಲಾಗೆಂದೊಡೆ ಸಮುದ್ರದೊಳಗಿರ್ದೊಂಗೆಂತು ಮುಳಿಯಲಪ್ಪುದೆಂದು ಗೆಲ್ಲದ ನಯಮಂ ತೋಱಿ ನುಡಿಯೆ ನೀನೇನನೆಂದಪೆಯೆಂದು ಮತಿವಂತನಂ ಬೆಸಗೊಂಡೊ ಡಾತನಿಂತೆಂದಂ

ಕಂ || ವಿಕ್ರಾಂತಮುೞಿದು ಧರಣೀ
ಚಕ್ರಂ ಬೆಸಕೆಯ್ದವಲ್ಲದೀತನ ಮನೆಯೊಳ್
ಚಕ್ರಂ ಪುಟ್ಟಿದುದೆಂದೊಡ
ತಿಕ್ರಮಿಸಲ್ಕೀಗಳಾರ್ಗೆ ತೀರ್ಗುಮೆ ಮರುಳೇ ೫೯

ನಾಡಾಡಿಯಲ್ತು ಪವಣೆಸೆ
ವೇಡೀತನ ಪಡೆಯನೊಯ್ಯನಿಂ ಚಿಂತಿಸಿ ನೀಂ
ನೋಡ ಧರಾತಳಮನಿತುಂ
ಬೀಡುವಿಡಲ್ ನೆಱೆಯವಿಱಿಯಲಾವಂ ನೆಱೆವೊಂ ೬೦

ವ || ಇಂತಪ್ಪ ಬಲ್ಲಾ [ಳ್ತನ] ವನಾತನಱಿದುಮುಱದೆ

ಕಂ || ಕೊಂದಂ ನೃಪನಳಿಯನನಾ
ಟಂದಂ ನೃಪನಳಿಯನನಾ
ನೆಂದು ಕಡೆಗಣಿಪರಾಯತಿ
ಕುಂದೆ ಕರಂ ಬನ್ನಮೊಂದೆ ಬಾೞ್ವುದೆ ಗಂಡರ್ ೬೧

ವ || ಈತನ ಬಲ್ಲಾಳ್ತನದ ಪೆಂಪಿನಿವಿರಿದು ಬನ್ನದ ಪೆಂಪಿನಿವಿರಿದು ಪೆರ್ಗಡೆ ಕೂರ್ಪಡೆ ಪ್ರಾಣಕ್ಕೆ ಕೂರ್ಪುದೊ ನಾಣ್ಗೆ ಕೂರ್ಪುದೆಂದಾಗಳ್ ಜರಾಸಂಧನುಮದನೆ ಮೆಚ್ಚಿ ಸಮರೋದ್ಯೋಗ ಕಾರ್ಯಮನೆತ್ತಿಕೊಂಡಾಯೆಡೆಯಿಂದಮೆರ್ದುಪೋಗಿ ನಯದೊಳಂ ಬಲಂ ತನಗೆ ನಿಜಬಲಮಾಗೆ ಮನಂ ಪೆರ್ಚಿ ಮಸಗಿ ನಡೆವಾಗಳ್‌

ಪೃಥ್ವಿ || ತರುಪ್ರಕರ[ವಾ]ಳನಂ ಘನತರಾಯುಧಜ್ಞಾಳನಂ
ಮರುತ್ವಥ ಮಳೀಮಸಂ ಜನಿತ ಸರ್ವದಿಕ್ಕಾಮನಂ
ಕರೀಂದ್ರಚಯಮಾದನಂ ಕನಕ ಕುಂಭೀ ನಿರ್ಭೇಧದನಂ
ಧರಿತ್ರಿತಳ ಗರ್ಜನಂ ದಿನಪರಶ್ಮಿವೈ ಸಜ್ಜನಂ (?) ೬೨

ವ || ಇಂತಾದುತ್ಬಾತಂಗಳಂ ಬಗೆಯದೆ ಪರಿಭವಘಾತಂಗಳಂ ಬಗೆದು ಪಯಣಂ ಬೋಗಿ ಹಸ್ತಿನಪುರದೊಳ್‌ ಪಾಂಡುವರ್ಗೆ ಬಿಗುರ್ತುರಿಯುತ್ತಿರ್ದ ದುರಿಯೋಧನಂ ಜರಾ ಸಂಧನ ಬಂದ ಕಾರ್ಯಸ್ಥಿತಿಯನಱಿದು ಉಂತೆಯಾಡುವಂಗೆಱೆಯಪನಾದಂತೆ ಮಸಗಿ ಪನ್ನೊಂದಕ್ಷೋ[ಹಿ]ಣಿ ಬಲಂಬೆರಸುಮಿದಿರಂ ನಡೆದು ಪೋಗಿ ಕಂಡು ದೇವ ನೀಂ ಮುಳಿದೆಯ್ತಂಪ್ಪಂತವರೇವಿರಿಯರಾ ಯಾದವರ್ಗಂ ಪಾಂಡವರ್ಗಮಾನೆ ಸಾಲ್ವೆನೆಂದೊಡಂತೆ ನಿನ್ನಳವಾದೊರೆಯಾದೊಡಮೆನ್ನ ಮುಳಿಸಿಂತಲ್ಲದಡಂಗದೆಂದಾತಂಗತಿಪ್ರಿಯಂ ಗೆಯ್ಯೆ ಸಂತೋಷಂಬಟ್ಟು ಕೂಡೆ ಬಿಟ್ಟಿರ್ದಂ ಮತ್ತ ಮಂತೆ ಕೂಡಿದ ಸಮ[ವಾ]ಯಿಗಳಪ್ಪರಸುಗಳುಂ ಮ್ಲೇಚ್ಛರಾಜರುಂ ಮುನ್ನೆ ವಸುದೇವನೊಳಂ ನಾರಾಯಣನೊಳಮಘಪಟ್ಟು ಮುಟ್ಟುಗೆಟ್ಟು ಬಾೞುತ್ತಿರ್ದ ವಿದ್ಯಾಧರರೆಲ್ಲಂ ಬಂದು ಕೂಡಿಕೊಂಡಂತಲ್ಲಿ ನೆರೆದ ಪೆರ್ವಡೆ ಪಯಣಂ ಬೋಪಾಗಳೆಲೆಯಿಕ್ಕಿದ ಬಿಂಜಮೆ ನಡೆವಂತೆ ಧನುರ್ಬಲಂ ನಡೆಯೆ ತಮದ ತೊಱೆಯುಕ್ಕುವಂತೆಯೆಣೆಬಲಂ ನಡೆಯೆ ಸಮುದ್ರದ ತೆರೆಗಳಂತೆ ತರತರದೋಳಿವಟ್ಟು ರಥ[೦] ನಡೆಯೆ ಚತುರ್ವಿದ ದೇವನಿಕಾಯ ವಿಮಾನ ಪಙ್ತಿಗಳೆಲ್ಲಮೊಡನೆ ನಡೆವಂತೆ ರಥಸಮೂಹಂ ನಡೆಯೆ ಲೋಕದ ಬೆಟ್ಟುಗಳೆಲ್ಲಮೊಡನೆ ನಡೆವಂತೆ ಪಡೆ ನಡೆಯ ಪಡೆಯ ಮುಂದಾದ ಬೆಟ್ಟುಂ ಘಟ್ಟಂಗಳ್‌ ಸಮಭೂಮಿಯಾದವು ಪೆಱಗಣವರ್ಗಾ ಸಮಭೂಮಿಯೆಲ್ಲಂ ದರಿವಿರ್ದು ಪರಿವಿರ್ದು ಪಳ್ಳಮುಂ ಕೊಳ್ಳಮುಮಾದೊಡೆಲ್ಲಂ ಬತ್ತಿದ ಮಹಾಸಮುದ್ರದಂತೆ ನೇರಿ[ತ್ತಗುೞಿ]ದು ಮಳಲು ನೆಲನಾಯ್ತಲ್ಲಿಂ ಪೆಱಗಣ ನೆರವಿಗಾ ಮಣಲೆಲ್ಲಂ ಪುಡಿವಿಟ್ಟು ಪಾಱಿತಂತು ಪುಲ್ಲಕಲ್ಲ ನೀರ ಮರಂಗಳನೇವೇೞಲುವೇೞ್ಪುದಂತರಿಕ್ಷಕ್ಕೆ ನೆಗೆದ ಪಕ್ಷಿಜಾತಿಗಳೆಲ್ಲಮಾ ಪಡೆಯ ಕಡೆಗಾಣದೆ ಮಗುೞ್ದು ಪೞಯಿಗೆಗಳೊಳಮಾಯುಧಾಗ್ರಂಗಳೊಳಂ ಪಾಯ್ದೊಡನೆ ಪೋದವಿಂತು ನೆಲಂ ಮೂರಿವಿಟ್ಟಂತೆ ಪೋದ ದೆಸೆಯ ನಾಡುಂ ಕಾಡುಮುೞಿಯದೆ ಪಯಣಂಬೋಗಿ ಕುರುಕ್ಷೇತ್ರಮನೆಯ್ದು ಬಿಟ್ಟಿರ್ದಾ ನೆಲಂ ಕಾಳೆಗಕ್ಕಿಂಬಾಗಿರ್ದುದೆಂದು ಬಗೆಯುತ್ತಿರ್ಪಿನಮಲ್ಲಿಗೆ ನಾರದನಾಕಾಶದಿನಿೞಿತರೆ

ಕಂ || ಶಾರದ ನೀರದದೊಳ್‌ ಮಱೆ
ಸಾರೆ ತನುಚ್ಛವಿ[ಪಡುವಣ]ದಿಂದಿೞಿತಪ್ಪಾ
ಕಾರದ ನಾರದನಂದಮ
ನಾರದನಭಿವರ್ಣಿಸಲ್ಕೆ ಬಲ್ಲರ್‌ ಜಗದೊಳ್‌ ೬೩

ವ || ಎಂಬಂತಿರೆ ತೊಳಗಿ ಬೆಳಗಿ ಧರೆಗಿೞಿತಂದು ಬಂದು ಜರಾಸಂಧಚಕ್ರವರ್ತಿಯಂ ಕಂಡಾಗಳೇಱಲಿಕ್ಕಿ ಕುಳ್ಳಿರ್ದೊರನೊಳ್ಳಿತು ಪ್ರಸ್ಥಾವದೊಳಾದಿನಾರಾಯಣನಲ್ಲಿಗೆ ಬೇಗಂ ಪೋಗಿ ನೀಮಿಂತೆನ್ನಿಂ

ಶಿಖರಿಣಿ ||
ಜರಾಸಂಧಂ ಬಂದಂ ಮುಳಿದ ಜನವನೆಯ್ತಪ್ಪ ತೆಱದಿಂ
ಕುರುಕ್ಷೇತ್ರಂ ಸೂತ್ರಂಬಿಡಿದ ಸಮರಿಟ್ಟಂದದ ಕಳಂ
[ಧುರಕ್ಕೊಳ್ಳಿತ್ತೆಂದತ್ತಿ]ಱಿಯಲಿದಿರಂ ಬಂದನನಿಸಲ್‌
ಬರ [ಲ್ವೇ] ೞಿಂ ಪೇೞ್ [ಕು]ಸಿದು ಬದುಕಲ್ಕಾ [ಗ] ಮನುಜಂ ೬೪

ವ || ಎಂದ ಮಾತಂ ಕೇಳ್ದು ನೀಮಿಂತೆನೆ ಮಾಣ್ಬ ಗಂಡನಲ್ಲೆನೆಂದಾಗಳೆ ನಭಸ್ಥಳಕ್ಕೊಗೆದು ಮಹಾಯುದ್ಧಮಂ ಕಾಣಲ್ಪಡೆದ ರಾಗದೊಳ್‌ ಪವನವೇಗದೊಳ್‌ ಪೋಗಿ ದ್ವಾರಾವತಿಯನೆಯ್ದಿ ಕೃಷ್ಣರಾಜೇಂದ್ರನಂ ಕಂಡೊಡಾತನತಿಪ್ರಿಯದಿನೇಱಲಿಕ್ಕಿ ಕುಳ್ಳಿರ್ದೊನನೇನುಂ ಸ್ತ್ರೀರತ್ನಮುಳ್ಳೆಡೆಯನಱಿದು ಬಂದೊಡೆ ಪೇೞುಮೆನೆ ನಾರದನಿಂತೆಂದಂ

ಕಂ || ವನಿತಾರತ್ನಂಗಳವೇಂ
ನಿನಗಱಿಯವೆ ಮೂಱು ಲೋಕದಿಂ ಪೊಗೞಿಸುತಿ
[ರ್ಪನಂತು] ವೀರಶ್ರೀಯಂ
ನಿನಗೊಲ್ವಂತಾಗಿ ಮಾಡಿ ಕೂಡಲ್‌ ಬಂದೆಂ ೬೫

ವ || ಎನೆ ರಾಗಿಸಿ ಪೇೞಿಮದಾವುದೆನೆ ಜರಾಸಂಧಂ ನಿನ್ನಿರವಂ ಕೇಳಿ ಮುಳಿದು ಪಯಣಂಬಂದು ಕುರುಕ್ಷೇತ್ರದೊಳ್‌ ಬಿಟ್ಟಿರ್ದೆನ್ನಂ ನೀಮುಂ ಪೋಗಿ ನಾರಾಯಣಂ ಗಿಂತೆಂಬುದು ಜರಾಸಂಧಂ ಮುಳಿದು ಕುರುಕ್ಷೇತ್ರಂ ತನಗಮೆನಗಂಕದ ಕಳನಣ್ಮುವಡೆ ಬಕ್ಕೆಯಣ್ಮದೊಡೆಲ್ಲಿ ಪೊಕ್ಕಡಂ ತಲೆಯಂ ಕೊಳ್ವೆನೆಂದಟ್ಟಿದ ನಿನ್ನಪ್ಪಡಂ ನಿಮಱಿವಿರೆಂದೊಡಪ್ಪುದಿನ್ನಪ್ಪುದನಾವಱೆವೆಂ ನೀಮೆನ್ನ ವೀರಶ್ರೀಯ ಮದುವೆಯನಾಕಾಶದೊಳಿರ್ದು ನೋಡುತ್ತಿರಿಮೆಂದೊಡಂತೆಗೆಯ್ವೆನೆಂದು ನಾರದಂ ಪೋದ ಬೞಿಯಮಾ ಪಡೆಮಾತಂ ಬಲದೇವಂಗಱಿಸಿಪಿದೊಡಾತಂ ಬಾ ನಾಮಿ ಮಾತಂ ಸಮುದ್ರವಿಜಯಂಗವಱಿಪಿ ನೆಗೞ್ವಮಲ್ಲದೆ ನೆಗೞ್ವಂದು ನಮ್ಮ ವಿನಯಕ್ಕೆ ದೋಷ ಮೆಂದೊಡಕ್ಕುಮದುವಂ ಕೇಳ್ದಡೇನೆಂದಲ್ಲಿಗೆ ಪೋಗಿ ಸಮುದ್ರವಿಜಯರುಂ ಪಾಂಡವರುಮುಗ್ರಸೇನಾದಿ ರಾಜಪುತ್ರರುಮಂ ಬರಿಸಿ ತನ್ನಲ್ಲಿಗೆ ಜರಾಸಂಧನಟ್ಟಿದ ಪಡೆಮಾತಂ ಪೇೞ್ದದಕ್ಕೆ ನಿಮ್ಮ ಡಿಯೇನೆಂದಪಿರೆನೆ ಸಮುದ್ರವಿಜಯ ಮಹಾರಾಜನಿಂತೆಂದಂ

ಕಂ || ಬಲದೇವನೀತ ನೀನುಂ
ವಿಳಸತ್‌ ಶ್ರೀವಾಸುದೇವ ಪದವಿಯೊಳೊಸೆದಿ
ರ್ದೊಲೆದೀ ಮೂಱುಂ ಖಂಡದ
ನೆಲನಂ ಸುಖದಾಳ್ದು ಚಕ್ರವರ್ತಿಯೆಯಪ್ಪೆಐ ೬೬

ವ || ಎಂಬಾಗಮಂ ತಪ್ಪಲಾಗಂತಪ್ಪಭ್ಯುದಯಕ್ಕಿದು ಕಾಲುಮೆಂದೊಡುಂತೆ ಕುಣಿವಂಗೆ ಪಱೆವಡೆದಂತೆ ಹರಿ ರಾಗೋದಯದಿಂ ಪೊಱಮಟ್ಟಾಗಳವಂಗೆ ನಿಮ್ಮಡಿವೇಡಾಮೆ ಸಾಲ್ವೆಮೆಂದ ಪಾಂಡವರ ಮಾತಂ ಮೆಚ್ಚಿ ನಿಮ್ಮಳವಾದೊರಂತೆ ದಲಮಾದೊಡಮೆನಗೆ ಮಾಣಲಾಗದೆಂದು ಮತ್ತಂ ಸಮುದ್ರವಿಜಯಮಹಾರಾಜಂಗೆ ಕೆಯ್ಯಂ ಮುಗಿದಿಂತೆಂದಂ

ಕಂ || ನೇಮೀಶ್ವರನುಂ ತ್ರಿಜಗ
ತ್ಸ್ವಾಮಿಯನೋಲಗಿಸುತಿರ್ಪುದೀ ಪುರವರಮಂ
ನೀಮಭಿರಕ್ಷಿಪುದಿನಿತಂ
ಸ್ವಾಮಿ ದಯಂಗೆಯ್ವುದೆಂದು ಬಾಗಿದೊಡಾಗಳ್‌ ೬೭

ವ || ನಿಮಗೆ ಸಾಧ್ಯಮಪ್ಪ ಕಾರ್ಯಮನಱಿದಿರ್ದೆಮಿದನೇಕೆ ಮಾರ್ಕೊಳ್ವಮಂತೆಗೆಯ್ವೆಮೆನೆ ಪ್ರಸಾದಮೆಂದು ಬಂದು ಕರುಮಾಡದೊಳಿರ್ದಾಗಳ್‌ ಪ್ರಯಾಣಭೇರಿಯಂ ಪೊಯ್ಸಿದಾಗಳೆಲ್ಲರುಂ ತಂತಮ್ಮಾಯುಧಂಗಳುಮಂ ವಾಹನಂಗಳುಮಂ ಸನ್ನಣಂಗಳುಮನಿಂಬುಮಾಡಿ ನಡೆವ ಸಾಮಗ್ರಿಯೊಳಿರ್ದರ್‌ ನಾರಾಯಣನುಂ ವಿದ್ಯಾಧರರೊಳಂ ಭೂಮಿಗೋಚರರೊಳಂ ತನಗಪ್ಪ ನೆರವಿಗೆಲ್ಲಂ ಬೞಿಯಟ್ಟಿ ಬರಿಸಿ ಶುಭದಿನದೊಳ್‌ ಸೇನೆಯುಮುಂ ಪರಕೆಯುಮನಾಂತು ಪಟ್ಟವರ್ಧನಮನೇಱಿ ಶುಭಶಕುನಂಗಳಾಗೆ ನಾನಾವಿಧ ತೂರ್ಯರವಂಗೆಳೆಸೆಯೆ ಪೞಯಿಗೆಗಳ್‌ ಮಿಳಿರೆ ಹಿಮವಂತಶಿಖರಿ ಸರೋವರದಿಂ ಪೊಱಮಟ್ಟ ಗಂಗಾಪ್ರವಾಹದಂತೆ ಪೊೞಲಿಂ ಪೊಱಮಟ್ಟು ಕಿಱಿದಂತರದೊಳ್‌ ಬೀಡಂ ಬಿಟ್ಟಿರ್ದು ಕಳಿಪುತಂ ಬಂದ ಸಮುದ್ರವಿಜಯಾದಿಗಳುಮಂ ಸ್ತ್ರೀಜನಮುಮಂ ಮಗುೞೆ ಮಱುದೆವಸಂ ಪಡೆ ನಡೆಯುವೆಡೆಯೊಳೋಜೆಯಿಂ ಸಮಕಟ್ಟಿ ನಿಚ್ಚವಯಣಂಬೋಗಿ ಕುರುಭೂಮಿಯನೆಯ್ದಿ ಜರಾಸಂಧನ ಬೀಡಿಂಗೈದುಯೋಜನದೊಳ್‌ ಬಿಟ್ಟಿರ್ದನಂತು ಹರಿ ಬಂದು ಬಿಟ್ಟುದಂ ಜರಾಸಂಧಂ ಕೇಳ್ದು ಮತಿವಂತನುಮನಾಗತಮತಿಯುಮೆಂಬ ಪೆರ್ಗಡೆಗಳಂ ಕರೆದು ನೀಮುಂ ಹರಿಯಲ್ಲಿಗೆವೋಗಿ ನಿನಗೆ ಜರಾಸಂಧಂ ಕರುಣಿಸುವಂತು ಸ್ವಾಮಿ ಕೊಲ್ಲದಿರು ಬಾೞ್ದಲೆವಂದನೆಂದು ಕಾಣೆಂಬುದಂ ನುಡಿದು ಜಡಿದು ಪೇೞ್ದು ಬನ್ನಿಮೆಂದಟ್ಟಿದೊಡವರ್‌ ಬಂದು ನಾರಾಯಣನಂ ಕಂಡೊಡೇಱಲಿಕ್ಕಿ ಕುಳ್ಳಿರ್ದು ಜರಾಸಂಧಚಕ್ರವರ್ತಿ ನಿಮಗಿಂತೆಂದು ಬೆಸಸಿಯಟ್ಟಿದೊಂ

ಚಂ || ಅಱಿಯದೆ ಮುನ್ನ ಗೆಯ್ದ ಕಡುದೋಷದಳುರ್ಕೆಗೆ ಬೆಚ್ಚಿ ಬಂದೆನೆಂ
ದಱೆಯಮೆಗಕ್ಕಟೆಂದು ಕರುಣಿಪ್ಪುದು ಕಾವುದು ನೀನೆ ಕಾಯೆ ಮೆ
ಯ್ಯಱಿಯದೆ ಬರ್ದೆನಿಂತು ಕಡುದೋಷದಿನೆಯ್ದೆ ರಸಾತಳದತ್ತ ಪೊಕ್ಕಡಂ
ನೆಱೆವೆನೆ ಬಾೞಲೆಂದೆಱಪುದೊಳ್ಳಿತು ಸಾವುದುಮೆಂತುಮೊಳ್ಳಿತೇ ೬೮

ಊನನಧಿಕಂಗೆ ಮುಳಿದ ಸ
ಮಾನಂ ವಿಗ್ರಹಮನೊಡರಿಸಲ್ಕಕ್ಕುಮೆ ಪೇೞ್‌
ನೀನವನೊಳಿಱೆದು ಸಾಯದಿ
ರಾನೆಯೊಳೊಡೆಕೊಂಡಮಾಡಿ ಗೆಲ್ದವರೊಳಳೇ (?) ೭೦