ದೇವರ್‌ ದಯೆಗಿಡುವಂತಾ
ನೇವಿರಿಯಂ ತಂದೆನೆನ್ನ ಬಾೞ್ದಲೆಯಂ ನೀ
ನೋವದೆ ಕೊಳ್ಳೆಂದೆಱಗಿದೊ
ಡಾ ವಿಭು ಕರುಣಿಸುಗುಮಲ್ಲದಂದೇವಾರೞ್ವೇ ೭೧

ವ || ಅಂತಾತನಟ್ಟಿದ ಕರುಣಮುಂ ಪೇೞ್ದ ಬುದ್ಧಿಯುಮಂ ಕ್ಕೆಕೊಳ್ವದು ಕೊಳ್ಳದಂತಾವ ಬಲಗರ್ವಮಿಂತನಿಂ ಮುನ್ನಂ ನಂಬವೇಡ ನಂಬಿ ಬಂದೆಯಪ್ಪೊಡಂ ಮಾತಂ ಗಮನಿಸನಱೆಪಿದಪ್ಪೆಮೆಂದು ಕೇಳೆಲೆ ಬಲದೇವನೆಂಬಣ್ಣಲೆ

ಕಂ || ಕುಲಭೂಭೃತ್ಪತಿಯೊಳ್‌ ಮು
ನ್ನೆಲನಂ ಜೂಜಾಡಿ ಸೋಲ್ತುದಲ್ಲದೆ ಮತ್ತಂ
ನೆಲಸೋರ್ತಡಂಗಿ ಬರ್ದ
ಣ್ಣಲೆ ಪೇರೞಿಂ ನೀನುಮಿಱೆವ ಬಗೆಯಿಂ ಬಂದಾ ೭೩

ವ || ಎಂದು ನುಡಿದ ಪೆರ್ಗಡೆಯ ಮಾತಂ ಭೀಮಂ ಕೇಳ್ದು ಮುಸಗಲ್‌ ಬಗೆದು ಬಲದೇವಸ್ವಾಮಿಯ ಕಣ್ಣಱಿದು ಮಾಣೆ ಭೀಮನುಮನಿಂತೆಂದಂ

ಕಂ || ಪಿಡಿದ ಬಡಿ ತಿಣ್ಣಮಾಂ ಬ
ಲ್ದಡಿಗನೆನೆಂದಡ[ಱಿ]ವಂದೆ ಚಕ್ರೇಶ್ವರನೊಳ್
ಕಡುದೊಡ್ಡಿತಾದ ಮಸಕಮ
ದುಡುಗುಮೆ [ಸಲೆ] ಜಗದೊಳಿನ್ನವಣಕಮುಮೊಳವೇ ೭೪

ವ || ಎಂದಂತೆ ನೋೞ್ಪಿರ್ಜುನನಂ ಕಂಡಿಂತೆಂದಂ

ಕಂ || ಇವನೆಮ್ಮರಸಂಗಾಳ
ಪ್ಪವನಾಳಾಗಿರ್ದ ಕರ್ಣನೆಂಬಣ್ಣನ ಕೀ
ಳ್ವವ [ನ] ದೊರೆಯಲ್ಲ [ಮಿಂ]ತ
ಪ್ಪುವರ್ಗಳನೊಡಗೊಂಡು ಬಂದನೀ ಕಲಿಯಣ್ಣಂ ೭೫

ವ || ಅಂತರ್ಜುನನುಮನಲೆದಾತನ ಕೆಲದೊಳಿರ್ದ ನಕುಳನಂ ಕಂಡಿಂತೆಂದಂ

ಕಂ || ಏಳಿದ ಗಂಡರನಿವರಂ
ಕಾಳೆಗಕೆ ಸರ್ದೆಯ್ದಿದಿರ್ಚಿ ಬಿಡದಡೆ ಮತ್ತಂ ಗೋ
ಪಾಳಕ ನಿನಗಿದು ಪೊಲನೇ
ನಾಳಿದವಾಳ್ಗೊಂಡು ಕಾಳೆಗಂ ಗೆಲೆವಂದಾ (?) ೭೬

ವ || ಎಂದವರ ಪೆಱಗಿರ್ದ ಉಗ್ರಸೇನ ಮಹಾರಾಜನಂ ಕಂಡಿಂತೆಂದಂ

ಕಂ || ಅಸಿಪಂಜರದೊಳ್‌ ಮುನ್ನಂ
ಕುಸಿದಿರೆ ಸೆಱೆಯಿಟ್ಟು ನೆಲನನಾಳ್ದಂ ತನಯಂ
ನಿಸದಮೆ ಮಗನಂ ಕೊಂದಂ
ಗೊಸೆದಾಳಾದಣ್ಣ ನೀನುಮಿಱಿಯಲ್‌ ಬಂದಾ ೭೭

ವ || ಎಂತೀತಂಗೆ ತಲೆ ನೆರವಿಂಗವಂದೇಳಿದರನೆನಿತಂ ನುಡಿವುದೆನೆ ಹರಿಯೆಂದಂ ನಿನಗೆ ಮುಳಿವುದೆಮಗೆ ಪಾೞಿಯಲ್ಲದಿರ್ದೊಡೇಕೆ ಮಾಣ್ಬೆಯಿನ್ನುಂ ನುಡಿ ಬಾೞ್ದೊರಂ ಜಡಿಯಲಾಗೆನೆ ಪೆರ್ಗಡೆಯೆಂಗುಂ ನೀಂ ಮನದೊಳೇವಯ್ಸಿಯುಂ ಭಾಷೆಯೊಳೊತ್ತಿ ನುಡಿದಪೆಯೆಮ್ಮ ಪೇೞ್ದ ಕಜ್ಜಮನೊಲ್ಲದಂತಾವಳವಿನೊಳೊಲ್ಲೈ

ಕಂ || ನಿನಗೆತ್ತಣಳವೊ ಗೋವುಳಿ
ಗನ ಮಗನೈ ಪಚ್ಚಪಸಿಯ ಗೋವನೆಯಾಗಿ
ರ್ದೆನಿತಾನುಂ ನೀ [ಮೆನಿಸು]
ರ್ವಿನದೆಂದೇಳಿದನನಿಱಿವುದಧಿಕನನಿಱಿವಾ ೭೮

ವ || ಎನೆ ಸತ್ಯಕಂ ಮುಳಿಯಲ್‌ ಬಗೆದೊಡೆ ವಸುದೇವನೆಂದನೀತಂಗೆ ಮುಳಿವೆಯಿತನಾತನಾಗಿ ಜಡಿದಪ್ಪೊನಾತಂಗೆ ಗಜಱಲಿನ್ನೆಗಮೊಪ್ಪ[ದೇ]

ಕಂ || ಕರಿಪತಿಗಳೊಕ್ಕವೇ ಕೇ
ಸರಿಯ ಸರಂಗೇಳದೆಡೆಯೊಳಿರ್ದಡೆ ಧರಣೀ
ಶ್ವರನಪ್ಪ ಜರಾಸಂಧಂ
ಹರಿ ರಣದೊಳಿದಿರ್ಚದನ್ನೆಗಂ ಗರ್ಜಿಸವೇ ೭೯

ವ || ಎಂದ ಮಾತಂ ಹರಿ ಮನದೊಳೆ ಮೆಚ್ಚಿ ನೀಮಾರುಮೇನುವೆನವೇಡ ಕೇಳಲೆ ಪೆರ್ಗಡೆ ನೀನೆಂಬಂತಾಮೇವಿರಿಯೆವಮ್ಮ ಕಿಱುಕುಳರಪ್ಪುದನೆ ಬಗೆಯದೆ ಪದುಳಮಾಗಿ ಕಾದಲ್ವೇೞೆಂದವರನತಿಪ್ರಿಯಂಗೆಯ್ದು ಕಳಿಪಿ ನಾಳೆ ಕಾದುವಮೆಂದು ಸಮಕಟ್ಟಿ ರಣಭೂಮಿಯಂ ಸಮಱಲ್ವೇೞ್ದು ಸಂಗ್ರಾಮಭೇರಿಯಂ ಪೊಯ್ಸಿ ಇಷ್ಟದೇವತಾರ್ಚನ ಪುರಸ್ಸರಂ ಶಾರ್ಙ್ಗಾಯುಧಮಾದ್ಯನೇಕಾಯುಧಮಂ ಪೂಜಿಸುತ್ತಿರ್ದನತ್ತ ಜರಾಸಂಧನುಂ ಪೆರ್ಗಡೆಗಳ್‌ ಪೋಗಿ ಬಂದ ಮಾತಂ ಕೇಳ್ದು ಮುಳಿದು ವಿಜೃಂಭಿಸಿ ಕೇಳಿಮಿಂ ಪೆಱದು ಮಾತಿನೊಳೇಂ

ಕಂ || ಕರಮೇಳಿದರಂ ಕೊಲ್ವೆನೆ
ಕರುಣಿಪೆನೆಂದಟ್ಟಿ ನೋಡಿದೆಂ ಗೆಲ್ಲದೊ [ಳಿಂ]
ಹರಿವಂಶತರೂನ್ಮೂಳನ
ಕರನಪ್ಪೆಂ ನಾಳೆ ಕಾವ ಗಂಡರುಮೊಳರೇ ೮೦

ವ || ಎನೆ ಸಭಾಸದರೆಂದರ್‌ ದೇವ ನೀಂ ಮುಳಿವೊಡಂ ಗಾಳಿ ನಂಜಪ್ಪಡಮಾರ್‌ ಕಾವರಾರ್‌ ಬರ್ದುಂಕುವರೆನುತಿರ್ದಿಂ ಬೞಿಯಂ ದುರ್ಯೋಧನಂ ಮೊದಲಾಗೆ ತನ್ನ ಪಡೆಯೊಳುಳ್ಳರಸುಮಕ್ಕಳೆಲ್ಲರುಮಂ ಬರಿಸಿ ನಾಳೆ ಕಾದುವಮೆಂದು ಸಮಕಟ್ಟಿ ಕರ್ಣಂಗೆ ಸೇನಾಪತಿಪಟ್ಟಂಗಟ್ಟಿ ರಣಭೇರಿಯಂ ಪೊಯ್ಯಲ್ವೇೞ್ದು ಸಮರಭೂಮಿಯಂ ಸಮಱುವಂತಾಗಿ ನಿಯಮಿಸಿ ಕೆಲರಂ ತಟಿದ್ಘೋಷಣೆವಿಡಿಸಲ್ವೇೞ್ದು ಕೆಲರನಿರುಳೊಳ್‌ ಕೊಳ್ಳಿವೀಸಿಸಲ್ವೇೞ್ದು ಚಕ್ರಂ ಮೊದಲಾಗಾಯುಧ ವಾಹನಂಗಳನರ್ಚಿಸುತ್ತ ಮಿರ್ದರಂದಿನ ದೆವಸಮೆರಡುಂ ಪಡೆಯ ಸುಭಟರಿಷ್ಟದೇವತಾಯುಧಂಗಳಂ ಪೂಜಿಸುತ್ತಂ ದಾನ ಸನ್ಮಾನಂಗಳಂ ವಿರಾಜಿಸುತ್ತಮಿರ್ದರ್‌ ಕೆಲರಸನುವರಂಬಡೆದುದಕ್ಕೆ ರಾಗಿಸುತ್ತಂ ನಲ್ಲರೊಡನೆ ಭೋಗಿಸುತ್ತಮಿರ್ದರ್‌ ಕೆಲರ್‌ ನುಡಿವಳಿಗಳಂ ಪೊಗೞಿಸುತ್ತ [೦] ಮೆಚ್ಚವಣಿಗೆಯವರಂ ತೆಗೞಿಸುತ್ತಮಿರ್ದರ್‌ ಕೆಲರ್‌ ವೀರಸಂನ್ಯಾಸಿಗಳಾಗಲುಂ ರಿಣಮಂ ನೀಗಲುಮಿರ್ದರ್‌ ಕೆಲರ್‌ ಪೂಣ್ಕೆಯನೊಲ್ಲದೆಯುಮನುವರ ಚಿಂತೆಯಿಲ್ಲದೆಯುಮಿರ್ದಿಗಳಾಗಿದಿರೆ ರೂಪಗಂಡಡಂ ಕೆಯ್ದುಗೊಂಡಡಮಱಿಯಲಕ್ಕುಮೆ ನುತಿರ್ದರ್‌ ಕೆಲರ್‌ ಕರ್ಣನ ಬೀಡಿನಲ್ಲಿ ಕೆಲರ್‌ ತುೞಿಲಸಂದಿಕೆಯ ಪಸುಗೆಗಳಂ ಮುನ್ನಱಿಯದೆ ನೆಗೞ್ದೀಗಳಣ್ಮಿ ಸತ್ತೊಡೆ ಕಲಿಯಕ್ಕುಂ ತುೞಿಲಸಂದನಾಗಲಱಿಯರೆನುತಿರ್ದರದಂ ಕೇಳ್ದೊರ್ಬನೆಂದಂ ಸತ್ತೊಡೆ ತುೞಿಲಸಂದೊನಾಗಂ ಕಲಿಯಕ್ಕುಮೆಂಬೈ ಕಲಿತನಂ ತುೞಿಲಸಂದಿಕೆ ಯೊಳಗಲ್ತೆಯೆಂದೊಡೊಂದು ಗುಣಮಲ್ತದುವೆರಸಾಱುಂ ಗುಣಂಗಳಂ ನೆಱೆಯೆ ಕೈಕೊಂಡು ನೆಗೞ್ದವನಲ್ಲದೆ ತುೞಿಲಸಂದನೆಂಬ ಪೆಸರಂ ಪಡೆಯನದೆಂತೆನೆ

ಕಂ || ಕಲಿತನವಭಿಮಾನಂ ನಿ
ರ್ಮಳ ಧರ್ಮಂ ತ್ಯಾಗಮೆಸೆವ ಸತ್ಯಂ ಶೌಚಂ
ನೆಲಸಿರ್ದೀಗುಣ ಮೂಱುಂ
ನೆ[ಲೆ]ಯುಳ್ಳಂ ತುೞಿ [ಲಸಂದನಲ್ಲದ]ಡಲ್ಲಂ ೮೧

ಮ || ನೆಲನೆಂತೀ ಸಚರಾಚರಪ್ರತತಿ ನಿಂತಾಧಾರಮಂ ಮಾೞ್ಕೆಯಿಂ
ಕಲಿಯಪ್ಪೊಂದು ಗುಣಂ ಸಹಸ್ರಗುಣವಿಂಗಾಧಾರಮೆಂದೊಳ್ಪಿನ
ತ್ತೊಲೆದೊಪ್ಪಿರ್ದ ತಪೋಧನಂಗೆ ತುೞಿಲಾಳಪ್ಪೊಂಗೆ ಕೇಳಿ ಕರಂ
ಚಲದೆಂತುಂ ಕಲಿಯಾಗವೇೞ್ಕುಮದಱಿಂ ಶ್ರೀ ವೀರಸಿದ್ಧಾಂತದೊಳ್‌ ೮೨

ಕಂ || ಎಲ್ಲ ಗುಣಂಗಳ್‌ ಮಣ್ಣಿಂ
ದಲ್ಲದೆ ಕರಮೊದವಿಬಾರವದಱಿಂದಂ ಕೆ
ಚ್ಚಿಲ್ಲದ ಮರನುಂ ಕಲಿತನ
ವಿಲ್ಲದ ನರನುಂ ಭವಕ್ಕೆ ನಿತ್ತರಿಸುಗುಮೇ ೮೩

ಚಂ || ಅಱಿವೆಡೆಯಲ್ಲಿ ತಕ್ಕುದಱಿದೀವೆಡೆಯಲ್ಲಿ ನಿಜಾಭಿಮಾನಂ
ಪೆಱದೆಡೆಯಲ್ಲಿ ಶೌಚಗುಣಮಂ ಸಲೆ ಕಾವೆಡೆಯಲ್ಲಿ ನನ್ನಿಯಂ
ನಿಱಿಪೆಡೆಯಲ್ಲಿ ಧರ್ಮದೊದವಿಂದೆ ಕುಸಂಸೃತಿ ಬಂಧಮೆಲ್ಲಮಂ
ಪಱಿವೆಡೆಯಲ್ಲಿ ಚಾರುಭಟನಣ್ಮುವುದಣ್ಮು ಗುಣಂಗಳಾಶ್ರಯಂ ೮೪

ವ || ಇಂತೆಲ್ಲಾ ಗುಣಕ್ಕಮಧಿಷ್ಠಾನಮಾಗಿರ್ಪ ಕಲಿತನಮಂ ಮುನ್ನಮುಂಟು ಮಾಡುವುದು [೦] ಬೞಿಯಂ

ಕಂ || ಅಭಿಮಾನದಿಂದೆ ಮನುಜಂ
ವಿಭು ಕಲಿಯಾದೊಡಮೊಳಗೆ [ನೆ] ನೃಪರೊಳ್‌ ಪೆಱರೊಳ್‌
ವಿಭವದೊಳೆಡರಱೊಳ್‌ ಕಾವುದೆ
ಸುಭಟಗುಣಂ ದೀನವೃತ್ತಿ ತುೞಿಲಾಳ್ತನಮೇ ೮೫

ಮ || ಎಡಱಾದಂದಳಿಪುಣ್ಮಿ ಪೋಗಿ ಪೆಱರಂ ದ್ರವ್ಯಂಗಳಂ ಬೇಡಿಕೊಂ
ಡಡೆ ಮಿಕ್ಕಿರ್ದಭಿಮಾನಮೋಡುಗುಮದೇನೋ ದೋಷಮಲ್ತೇ ಗುಣ
ಕ್ಕೆಡೆಯಾದೊಳ್ತುೞಿಲಾಳ್ದದೊಳ್ದವಸಿಂಗಂ ಮುಂ ಭೃಕ್ಷಮಂ ಬೇಡಿಕೊ
ಳ್ವಡೆ ಕೊಳ್ಗರ್ಥದ ಬೇಟಮಾದೊಡೞಿಗುಂ ನಾಣ್ಮತ್ತೆಯುಂ ಗಂಡರೇ ೮೬

ಕಂ || ಜ್ಞಾನಂ ತಪಸಿಗೆ ಲಸದಭಿ
ಮಾನಂ ತುೞಿಲಾಳ್ಗೆ ಸಾರಮಪ್ಪುದಱಿಂದ
ಜ್ಞಾನಿ ತಪಸ್ವಿಯೆನೆಂದುಂ
ದೀನಂ ತುೞಿಲಾಳೆನೆಂದುಮೆಸೆವರ್‌ ಜಗದೊಳ್‌ ೮೭

ಉ || ಕೇಳಿಕದಲ್ಲಿ ಸೂಳೆಮನೆಯಲ್ಲಿ ನಿಜಾಲಯದಲ್ಲಿ ಭೂಪನಾ
ರ್ತೀವೆಡೆಯಲ್ಲಿ ಜೂದಿನೆಡೆಯಲ್ಲಿ ಕರಂ ಪಸಿದಲ್ಲಿ ಪಣ್ಫಲಂ
ತೀವಿದ ತೋಟದಲ್ಲಿ ಬೆಳೆದೊಪ್ಪುವ ಕೆಯ್ವೊಲದಲ್ಲಿ ಪೊರ್ದಿ ನಿಂ
ದಾವಗಮಾಗೆ ಕಾವುದಭಿಮಾನಮನೊಳ್ತುೞಿಲಾಳ್‌ ನಿರಂತರಂ ೮೮

ವ || ಅಂತಭಿಮಾನಮೆಂಬ ಗುಣಮನೆಲ್ಲೆಡೆಯೊಳಂ ಕಾವುದಲ್ಲಿಂ ಬೞಿಯಂ

ಕಂ || ತನಗೆ ಮುಳಿದಿಱಿಯಲೆಯ್ತ
ಪ್ಪನನಲ್ಲದೆ ಕೆಮ್ಮ ನಿರ್ದು ಬಾಳ್ವಿ ಸು[ಗುಣನಂ]
ಮುನಿದು ಕೊಲಲಾಗದೆಂಬುದಿ
ದನುಪಮ ಗುಣಗಣ [ಮೆ] ತುೞಿಲಸಂದರ ಧರ್ಮಂ ೮೯

ಶಾ || ಬೆನ್ನಿತ್ತಾತನನಳ್ಕಿ ಕೈಮುಗಿದು ಬಾಯ್ವಿಟ್ಟಿರ್ದೊನಂ ತನ್ನೊಳಿಂ
ಬನ್ನಂ ಕೆಯ್ಮಿಗೆ ಪುತ್ತನೇಱಿದವನಂ ಪುಲ್ಗಚ್ಚಿ ನಿಂದಾತನಂ
ತನ್ನಾಯಂಗಿಡೆ ಬೆರ್ಚಿ ಪೋಗಿ ಜಲಮಂ ಪೊಕ್ಕಾತನಂ ಶೌರ್ಯಸಂ
ಪನ್ನಂಗೊಳ್ತುೞಿಲಾಳ್ಗೆ ಕೊಲ್ಲದುದೆ ತಾಂ ಧರ್ಮಂ ಬಲಂ ವೀರರಂ ೯೦

ಕಂ || ಬ[ಱುಬ]ನನೇಳಿದನಂ ಮೆ
ಯ್ಯಱಿಯದೊನಂ ಬೆರಲನಳಿಪಿ ಕರ್ಚಿದೊನಂ ಕಾ
ಲ್ಗೆಱಗಿದನನಿಱಿಯಲಾಗದಿ
ದಱಿಕೆಯ ಕಡು ತುೞಿಲಸಂದರಪ್ಪರ ಧರ್ಮಂ ೯೧

ಚಂ || ಅಱೆಯಿಱಿಯಲ್ಕೞಲ್‌ ಪರಿದು ಮುತ್ತಿಕೊಳಲ್‌ ಬಿಡದಾನಪ್ಪೊಡಂ
ಸೆಱೆಯಿಡಲುಂ ಪಿಸುಣ್ನುಡಿಯಲುಡ್ಡಿಸಿ ಸೂಱೆಗೊಳಲ್‌ ವಿಶಿಷ್ಟರಂ
ಮಱುಗಿಸಲೆಂತು ಮುಕ್ಕಲಱೆಯೇಱಿಱಿಯಲ್‌ ಕರಮೇಳಿದರ್ಕಳಂ
ಪಱಿಪಡೆ ಬಗ್ಗಿ ಸಲ್ಕಣಮುಮಾಗದು ಕೇಳ್‌ ತುೞಿಲಾಳ ಧರ್ಮಮಂ ೯೨

ವ || ಧರ್ಮಮೆಂಬ ಗುಣಮನಿಂತು ಸಲಿಸುವೊಂದು ತುಱಿಲಸಂದನದಲ್ಲದೆಯುಂ

ಕಂ || ಕುಡಲಿಲ್ಲ ತಕ್ಕುದೆಂಬೊಂ
ದೆಡೆಯೊಳ್‌ ತನ್ನಳವಿಯಿಂದಮಿಯಾದ ಲೋಭಂ
ಕಡುವಂದೆಯ ಲೆಕ್ಕಮದೇ
ಪಡೆಮಾತೆಂದಱಿದುದಾರನಪ್ಪೊಂ ತುೞಿಲಾಳ್‌ ೯೩

ಮ || ಮನುಜಂಗರ್ಥಮೆ ತಳ್ತು ಪತ್ತಿದ ಬಹಿಃಪ್ರಾಣಂ ಬಹಿಃಪ್ರಾಣಮಂ
ಮನದೊಳ್‌ ಚಿಂತಿಸದೀವನಲ್ಲದೆ ನಿಜಾಂತಃಪ್ರಾಣಮಂ ನೆಟ್ಟನೀ
ವನೆ ಮತ್ತಂತಱಿ [ದೀ]ವೆನೆಂಬ ಗುಣಮಂ ಕೆಯ್ಕೊಂಡು ತಳ್ತಿರ್ದೊಡಾ
ತನೆ ವೀರಂ ರಣಮಾರನಾತನೆ ಜಯೋದಾರಂ ಮನುಷ್ಯರ್ಕಳೊಳ್‌ ೯೪

ಕಂ || ರಾಗಂ ಪ್ರಿಯತಂಗೆ ಧನ
ತ್ಯಾಗಂ ತುೞಿಲಾಳ್ಗೆ ಯೋಗಮೊಳ್ದಪಸಿಗೆ ಮ
ತ್ತಾಗಲೆವೇೞ್ಪುದದಲ್ಲದೊ
ಡೇಗೆಯ್ವದೊ ಗೆಯ್ಯದಣ್ಮುತ ಪಮೆಂಬಿನಿತಂ ೯೫

ಶಾ || ಇಂತೊಂಗಲ್ಲದೆ ಧರ್ಮದೊಳ್ಪೆಸೆಗುಮೇ ತಕ್ಕಲ್ಲಿ ಗೆಲ್ಲಂ ತಗು
ಳ್ದೀತಂಗಲ್ಲದೆ ಕೀರ್ತಿ ತಾಂ ಪರೆಗುಮೇ ಮೋಹಂ ಭಯಂದಕ್ಕುಮೆಂ
ದಿತ್ತಂಗಲ್ಲದೆ ಗಂಡವಾತೆಸೆಗುಮೇ ಧರ್ಮಂ ಯಶಂಗಂಡು ಮೇ
ಯ್ವತ್ತಿರ್ಪೊಂತೆಸೆಪೊಂದುದಾರಗುಣಮಂ ತಾಳ್ದಿರ್ಪುದಂತಂಬರಂ ೬೯

ವ || ತ್ಯಾಗಮೆಂಬ ಗುಣಂ ತುೞಿಲಾಳ್ಗಮೋಘಂ ಬೇೞ್ಪುದೆಂದು ಮತ್ತ ಮಿಂತೆಂದಂ

ಕಂ || ಸತ್ಯಗುಣಮಾಱುಗುಣದೊಳ
ಮತ್ಯಂತ ಮಹಾವ್ರತಂಗಳೆಂಬಯ್ದಱೊಳಂ
ಸ್ತುತ್ಯಮದುಂಟಾದಂದೌ
ಚಿತ್ಯಾಳಂಕಾರಮೆರಡು ಭವಕಂ ಸಾರಂ ೯೭

ಮ || ನುಡಿಯಂ ತಪ್ದಿದವಂಗೆ ತಪ್ಪುಗುಮೆ ಪೇೞ್‌ ಸಾವೆಂತುಮಾ ತಪ್ಪಿನೊಳ್‌
ಪಡೆದಂದಾ ಧನಮಂತೆ ನಿಂದಪುದೆ ಕೇಳೆತ್ತಾನುಮಂತೋಡಿ ನಿಂ
ದಡಮೇಂ ದುರ್ಗತಿಯಾಗದಿರ್ದಪುದೆ ಪೇೞ್‌ ಮತ್ತೇತಱಿಂ ನನ್ನಿಯಂ
ಕಿಡೆವರ್ದಾಂತಿಱಿವಾಣ್ಮನೆಂತು ತುೞಿಲಾಳಕ್ಕುಂ ಮಹಾಪಾತಕಂ ೯೮

ಕಂ || ಪುಸಿದವನುಂ ರಣಮುಖದೊಳ್
ಪುಸಿದವನುಂ ಕೇಡಿನೊಳ್‌ ಸಮಂ ಬಲಮೆನಲಿಂ
ಕುಸಿದವನೊರ್ವನೆ ಕೆಡುಗುಂ
ಪುಸಿದೊನ ನಂಬಿದನ ಕೇಡದಿಮ್ಮಡಿಯಲ್ತೇ ೯೯

ಉ || ಸ್ನೇಹದಿನಕ್ಕೆ ಬಲ್ಲಿದರಿನಪ್ಪ ಭಯಾಕುಳದಿಂದಮಕ್ಕೆದು
ರ್ಮೋಹದಿನಕ್ಕೆ ನಂಬಿದೆಡೆಯೊಳ್‌ ಪುಸಿ ಪೊರ್ದಿದನಂತೆ ತನ್ನ ಮಿ
ಕ್ಕೈಹಿಕಮಂ ಪರತ್ರೆಯುಮನರ್ದಿದನಾ ಕಡುಪಾತಕಂ ಮಹೋ
ಗ್ರಾಹವದ್ಲಿ ತಳ್ತಿಱಿದೊಡೇಂ ತುೞಿಲಾಳ್ಗಳ ಲೆಕ್ಕಮಕ್ಕುಮೇ ೧೦೦

ವ || ಅದಱಿಂ ಸತ್ಯಮೆಂಬ ಗುಣಂ ತುೞಿಲಾಳ್ಗಮೋಘಂ ಬೇೞ್ಕು[೦] ಮತ್ತಂ

ಕಂ || ಪರಧನಮಂ ಕರಮೊಪ್ಪುವ
ಪರವನಿತಾಜನಮನಳಿಪಿ ಕಳಲುಂ ಕೊಳಲುಂ
ದೊರೆಗಾಗದೆಂಬ ಶೌಚದ
ಭರಮುಂ ತಾಳ್ದಿದನೆ ತುೞಿಲಸಂದಂ ಜಗದೊಳ್‌ ೧೦೧

ಚಂ || ಪರವಧುಗೊಲ್ದು ವೀರಸಿರಿಗೊಳ್ವನುಮನ್ಯಧನಂಗೊಳಲ್ಕೆ ಕೊ
ಕ್ಕರಿಸದೆ ಕೊಂಡಮೊಳ್ಪುಗೊಳಲಿರ್ಪನುಮೇಂ ಜಗದೊಳ್‌ ಮರುಳ್ಗಳೋ
ತ್ವರಿತದೆ ಮೂಡಪೋಗಿ ಪಡುವೆಯ್ದುವೆನೆಂಬವನಂತೆ ಶೌಚಮಂ
ಪರಿಹರಿಸಿರ್ದು ಬರ್ದಿಱಿಯಲಿರ್ಪಳಿಯಾಳ್‌ ತುೞಿಲಾಳ ಲೆಕ್ಕಮೇ ೧೦೨

ಕಂ || ಒತ್ತೆಗೊಳಲಿಪ್ಪಳುಂ ಪೆಱ
ಳಿತ್ತ ಕುಲಾಂಗನೆಯುಮಲ್ಲದುೞಿದವರೆಲ್ಲಂ
ಪೆತ್ತರ್‌ ಸೋ[ದರರೆ]ನಗೆಂ
ಬುತ್ತಮ ಗುಣಮಿಲ್ಲದಾತನುಂ ತುೞಿಲಾಳೇ ೧೦೩

ಉ || ಓಡಿದನೊಳ್‌ಪರಾಂಗನೆಯೊಳೋತೊಡಗೂಡಿದನೊಳ್‌ ಸರಾಗದಿಂ
ಕೂಡುವಳೆಂಬ ಡೊಂಬೆಸಿರಿ ಪಾತಕಿ ನಾಣಿಲಿ ಕೆಟ್ಟ ಬೂತು ನಾ
ೞ್ಡೋಡೆಯವಳ್ಗದಕ್ಕುಮುೞಿದಾವಳುಮೊಲ್ವಕೆ ಕೀರ್ತಿಯೆಂಬವಳ್‌
ನೋಡಳು ನಿಂದು ಬೀರಸಿರಿ ಕೇಳಳವಂದಿರ ಮಾತನಪ್ಪಡಂ ೧೦೪

ವ || ಇದು ಶೌಚಗುಣದೊಳ್ಪದಱಿಂತಾಱುಗುಣಮಿಲ್ಲದೊಂ ತುೞಿಲಸಂದನಾಗನಿಂತಿಪ್ಪತ್ತೆಂಟು ಮೂಲಗುಣಮಿಲ್ಲದೊಂ ತಪಸ್ವಿಯಾಗನೆಂಬುದು ವೀರಸಿದ್ಧಾಂತಮಂತಪ್ಪ ಗುಣಂಗಳನುಳ್ಳಾತಂ ಮೇಗರಸನಕ್ಕೆ ಕೆಳಗೆ ಪೊಲೆಯನಕ್ಕಾವ ಕುಲಮಾದೊಡಂ ತುೞಿಲ ಸಂದನೆಂಬೊನಕ್ಕುಮಂತಪ್ಪಾತಂ ಕಿಱುಕುಳನುಂ ಕಡ್ಡನುಮಾಗಲಾಗ ಧರ್ಯವಂತನಪ್ಪುದೆನೆ

ಕಂ || ಅಳಿಪಿ ಕಿಱಿದಕ್ಕೆ ಕೆಮ್ಮನೆ
ಗಳಗಳಿಸುತ್ತೇಳಿದರ್ಕಳೊಳ್‌ ಬಿಡದೆ ತಗು
ಳ್ದಳಿಪಳಿಯಾಡುವ [ನೆಂತುಂ]
ತುಳಿಯಕ್ಕುಂ ತುೞಿಲಸಂದನಕ್ಕುಮೆ ಧರೆಯೊಳ್‌ ೧೦೫

ಚಂ || ಅರಸರ ಪಾಱುವೆಂಡಿರೊಳಡಂಗದ ರಾಜಸುತರ್ಕಳೊಳ್‌ ಬೞಿ
ಕ್ಕರಸುಗೆಯಲ್ಕೆ ಪಾರ್ವ ಕಡುಜೂಂಟರೊಳೊಂದದೆ ಮಿಕ್ಕ ನಂಟರೊಳ್‌
ಪೊರೆದುಮುಪಾಯಳದೊಳ್‌ ನಡೆವ ದೈತ್ಯರೊಳುದ್ಧತರಪ್ಪ ಭೃತ್ಯರೊಳ್‌
ಕರಮೆ ತಗುಳ್ದು ಪತ್ತಿ ತುೞಿಲಾಳ್ಗೆಡೆಗೊಂಡಡೆ ದೋಷಮೆಯ್ದದೇ ೧೦೬

ವ || ಅದಱಿಂ ತಪಸ್ವಿ ಪಾಪಕ್ಕಂಜಿ ನಡೆವುದು ತುೞಿಲಸಂದಂ ದೋಷಕ್ಕಂಜಿ ನಡೆವೆದೆಂಬುದಾಗಮಮಾಗಿಯುಂ ತಪಸ್ವಿ ಪಾಪಪ್ರಮಾದಮಾದೊಡಂ ಪ್ರಾಯಶ್ಚಿತ್ತದಿಂ ಕಳೆಗುಂ ತುೞಿಲಸಂದಂಗೆ ದೋಷಮೆನಿಸು ಬಂದು ಮುಟ್ಟಿದೊಡಂ ಪುಳಿ ಮುಟ್ಟಿದ ಪಾಲ್ ಮಗುೞೆ ಪಾಲಾಗದಂತಾತನಣ್ಮಿ ಸತ್ತೊಡಂ ತುೞಿಲಸಂದನಾಗನಣ್ಮು ಪಂದಿಗಂ ಪುಲಿಗಮುಂಟವರೊಳಂ ಪಸುಗೆಯಱಿವ ನೆಗೞ್ತಿಯುಂ ತೊಲಗೆ ದೋಷಮೆಂಬುದುಮುಂಟಾ ಸುಭಟನದಱಿಂದಸಿ ಧಾರಾವ್ತತಿಯಾದನಂತಾರ್ಪಾತನನುವರದೊಳ್ ಕುದುರೆಯೇಱಿದಾತನಾನೆಯೇ ಱಲಕ್ಕುಮಾನೆಯನೇಱಿದಾತಂ ಕುದುರೆಯೇಱಲಾಗ ಬಿಲ್ವಿಡಿದಾತನನಡ್ಡಗಯ್ದುವಿಡಿಯಲಕ್ಕು [ಮ]ಡ್ಡಗಯ್ದುವಿಡಿದಾತಂ ಬಿಲ್ವಿಡಿಯಲಾಗ ಬಿಲ್ವಿಡಿದೊನುಗಿವೊಡೆ ಬಿಲ್ವಡೆಯಾಗ ತಗರುಗಿವಂತುಗಿವಿದು ಬೆನ್ನಿತ್ತುಗಿಯಲಾಗ ಘೋಳಾ[ಯಿಲ] ನುಲ್ಲಟೊಸುವಲ್ಲಿ ತನ್ನಾಯುಧ [ಮುಂ] ತುರಗಮುಂ ಬೀೞೆ ಬರಲಾಗಾನೆಯೇಱಿದೊನಾನೆ ಬೆರ್ಚಿ ಬೆದಱಿ ಪರಿವೊಡಾನೆಯಂ ಕೊಂದು ಮಿಱಿರ್ದುಂ ನಿಲಲೆವೇೞ್ಪುದಡ್ಡಗೆಯ್ದುವಿನ ಕಾಲಾಳ ಪೆಱಗಡಿಯಿಡಲಾಗ ಕೊಳ್ಗೊಳದೊಳ್ ಬೀೞ್ವಾತಂ ಮೆಯ್ಯಱಿಯದೆ ಬೀೞ್ವಾಗಳಾಳ್ದನಲ್ಲಿ ಸತ್ತೊಡಾಳೆಂತು ಬಾೞಲಾಗದೆಂ ದಿಂತು ವೀರಸಿದ್ಧಾಂತದ ಪಸುಗೆಯಂ ಕಿಱಿದಱೊಳೆ ನುಡಿಯುತ್ತಿರ್ದುದಂ ಕೇಳ್ದು ಮೆಚ್ಚಿ ಕೆಲರ್ ಮುನ್ನಱಿಯದೊಡಮಿನ್ನಱಿದು ನೆಗೞ್ವಮೆಂದು ಜೋಳದ ಪಾೞಿಗಂ ನುಡಿವಳಿಗಂ ಯಶಕ್ಕಂ ಗತಿಗಂ ತಕ್ಕ ಸಾವಾವುವವಱೊಳಾವುದಾವುದನಾರ್ ಮೆಚ್ಚುವಂದಮದನೆ ಪರಿಚ್ಛೇದಿಸಿ ನುಡಿಯುತ್ತಿರೆಯಿರೆ

ಕಂ || ಹರಿಗನುಪಮ ವಿಕ್ರಮ ಕೇ
ಸರಿಗೆ ಜಯೋದಯಮನಭಿನವಿಪ್ಪವೊಲಾಗಳ್
ಪರೆಯೆ ತಮಂ ಕರೆಯೆ ಮೃಗಂ
ಮೊರೆಯೆ ಮಧುಔರಮರನರ್ಕನುದಯಂಗೆಯ್ದಂ ೧೦೭

ವ || ಅಂತಾದಿತ್ಯನುದಯಂಗೆಯ್ದಾಗಳ್ ಜರಾಸಂಧಂ ಕೆಯ್ಗೆಯ್ದು ಪಟ್ಟವರ್ಧನ ಮನೇಱಿ ನಾನಾವಿಧ ಛತ್ರ ಚಾಮರ ಧ್ವಜ ಶಂಖ ಕಹಳಾದಿ ರಾಜಚಿಹ್ನಂಗಳ್ವೆರಸು ತನ್ನ ಸಮಸ್ತ ಸಾಧನಮಂ ಮುಂದೆಗೊಂಡತಿ ಕ್ರೋಧೋದ್ಧತನಾಗಿ ಬೀಡಿಂ ಪೊಱಮಟ್ಟು ಬಂದು ಸಮರಭೂಮಿಯೊಳ್ ನಿಂದು ಸೇನಾನಾಯಕನಪ್ಪ ಕರ್ಣಂಗೆ ಪಡೆಯನಿಂಬಾಗೊಡ್ಡೆಂದು ಬೆಸನಂ ಪೇೞ್ದಾಗಳಂತೆಗ ಯ್ವೆನೆಂದು ಭೀಷ್ಮ ಭೂರಿಶ್ರವ ಶಲ್ಯ ಯಶೋವರ್ಮ ಕೃಪ ಕೃತವರ್ಮ ವೀರಧ್ವಜ ಹೇಮಧ್ವಜ ನಾಗಧ್ವಜ ವೃಷಭಸೇನ ಇಂದ್ರಸೇನ ಭಗದತ್ತ ಜಯದತ್ತ ತಾರಕ ಅಶ್ವತ್ಥಾಮ ಹೇಮಪ್ರಭ ದುರ್ಯೋಧನ ದುಶ್ಯಾಸನ ದ್ರೋಣ ಬಾಣಾಸುಎ ಜಯಂತ ದುಂದುಭಿ ಜಯದ್ರಥ ಕನಕವರ್ಮ ಅರಿವಾಹ ಸೈಂಧ ವಾದ್ಯನೇಕ ರಾಜೇಂದ್ರರ್ಕಳಂ ಕರೆದು ಪದ್ಮವ್ಯೂಹಮಾಗೊಡ್ಡಿದಪ್ಪೆ ನೀವಱವಿರಿ ಎಸೞೊಳ್ ನಿಮ್ಮ ನಮ್ಮ ಚಾತುರ್ದಂತ ಬಲಮುಂ ಬೆರಸೋಡಿ ನಿಲ್ಲಿಮೆಂದಿರಿಸಿ ಬೞಿಯಮಪರಾಜಿತ ಅಜಿತಂಜಯ ಸಿಂಹಕೇತು ಸಿಂಹರಥ ಕಾಳಯಮ ಭಾನುಮಿತ್ರಾದಿ ಬಂಧುರಾಯಿಕ ತಂತ್ರಮೆಲ್ಲಮುಂ ಸರ್ವಸನ್ನಣಂಗೆಯ್ದು ಬರಿಸಿ ಪದ್ಮಕೇಸರಂಗಳಾಗಿರಿಸಿ ಕೇಸರದೆಡೆಯೆಡೆಯೊಳ್ ವೀರಭಟಸೇನೆಯಂ ಬಳಸಿಯುಮಿರಿಸಿ ನಡುವೆ ಗಜೇಂದ್ರಘಟೆಯಂ ಸುತ್ತಾಗಿರಿಸಿಯಲ್ಲಿಂದೊಳಗೆ ಧವಳಾತಪತ್ರ ಮಹಾಧ್ವಜ ಚಾಮರಾನ್ವಿತಂ ಪಟ್ಟವರ್ಧನ ಮಹಾಗಜೇಂದ್ರಮನೇಱಿ ಜರಾಸಂಧ ಚಕ್ರವರ್ತಿಯಂ ಕರ್ಣಿಕೆಯಾಗಿರಿಸಿ ನಭೋಭಾಗದೊಳ್ ವಿದ್ಯುತ್ಪ್ರಭ ವಿದ್ಯುದ್ರಥ ವಿದ್ಯುದ್ಗತಿ ನಳಿನಧ್ವಜ ರೌದ್ರಕೇಶ ನೀಳಕಂಧರ ಅದ್ರಿನಿಭ ಅಶನಿವೇಗ ಅಂಗಾರಕುದಯಾರ್ಪಕ ಅಸಹ್ಯರೂಪ ಅಪ್ರತಿಮನೆಂದು ಮತ್ತಮೆನಿಬರಾನುಂ ವಿದ್ಯಾಧರರಾಜಂ ನಿಮ್ಮ ನಿಮ್ಮ ಸಮಸ್ಯ ಬಲಸಹಿತಂ ಚಕ್ರರತ್ನಮುಂ ಬಳಸಿಯುಮೊಡ್ಡಿ ನಿಲ್ಲಿಮೆಂದಿರಿಸಿದನಿಂತು ಕರ್ಣಂ ಸೇನಾಪತಿಯಾಗಿ ಜರಾಸಂಧನ ಪಡೆಯೆಲ್ಲಮಂ ಪದ್ಮವ್ಯೂಹದೊಳೊಡ್ಡಿದುದಂ ನಾರಾಯಣಂ ಕೇಳ್ದರ್ಜುನಂಗೆ ಸೇನಾಪತಿಪಟ್ಟಮಂ ಕಟ್ಟಿ ನಮ್ಮ ಪಡೆಯಂ ಬೀಡಿಂ ಪೊಱಮಡಿಸಿ ನಡೆಯಿಮೆಂದು ತಾಂ ಮಜ್ಜನಂಬೊಕ್ಕು ಕೆಯ್ಗೆಯ್ದು ಅರ್ಹತ್ಸರ್ವಜ್ಞನನರ್ಚಿಸಿ ನೇಮಿನಾಥನಂ ನೆನೆದೆಱಗಿ ಸೇಸೆಯುಂ ಪರಕೆಯುಮನಾಂತು ವಿಜಯಹಸ್ತಿಯನೇಱಿ ರಾಜಚಿಹ್ನೆಂಗಳ್ವೆರಸು ಪದನೆಂಟಕ್ಷೋಹಿಣೀ ಬಲಮುಂ ಮುಂದೆಗೊಂಡು ಪೊಱಮಟ್ಟು ರಣಭೂಮಿಯಲ್ಲಿಗೆವಂದರ್ಜುನನಂ ಕರೆದು ಪಡೆಯನಿಂಬಾಗೊಡ್ಡಿ ಮೆಂದೊಡಂತೆಗೆಯ್ವೆನೆಂದು ಗರುಡವ್ಯೂಹಮಾಗೊಡ್ಡಲ್ ಬಗೆದು ಅಕ್ಷೋಭ ವಿಜಯ ದ್ರುಪದಾದಿ ನರೇಂದ್ರವರ್ಗಮನವರವರ ಸಮಸ್ತ ಸೇನೆವೆರಸು ಗರುಡನ ಬಲದೆಱಂಕೆಯಾಗೊಡ್ಡಿ ನಿಱಿಸಿದಂ ಧರ್ಮಪುತ್ರಂ ಭೀಮಸೇನಂ ನಕುಳಂ ಸಹದೇವಂ ಸುಮುಖಂದಟ್ಟಾರ್ಜುನ ಮಲಯಧ್ವಜ ಘಟೋತ್ಕಚ ಅಭಿಮನ್ಯು ರಾಷ್ಟ್ರವರ್ಧನ ಹಿರಣ್ಯವರ್ಮ ವಿರಾಟದಿ ಭೂಪಾಳರನೆಡದೆಱಂಕೆಯಾಕಾರದೊಳೊಡ್ಡಿ ನಿಱಿಸಿದಂ ದೃಢರಥ ಪೌಷ್ಟ್ರ ನಿಳಕುಮಾರ ಜರಾವಿಷ್ಣು ಚಿತ್ರಭಾನು ಸಾಗರಚಂದ್ರಾದಿ ರಾಜಕುಮಾರರ್ಕಳಂ ತಂಡಮಾಗಿ ನಿಲಿಸಿ ತಾನುಮನಾ ದೃಷ್ಟಿಕುಮಾರನನುಂ ಕಣ್ಗಳಾಗಿದ್ದು ಮಣಿಮಿತ್ರ ಸೋಮದೇವ ವಸುದೇವ ಅಂಶುಮಾಲಿ ಭಗ್ನಸೇನ ಮೇಷಮುಖಾದಿಗಳ್ ಕಾಲಾಗಿ ನಿಂದರ್ ಉಗ್ರಸೇನ ದೇವಸೇನ ಕೀರ್ತಿಧ್ವಜ ಸಿಂಹಕೇತು ದೀಪಾಯನಾದಿ ಬಂಧುಜನ ಸಹಿತಂ ಗಜಾರೂಢರಾಗಿ ರಾಜಚಿಹ್ನಂಗಳ್ವೆರಸು ಪುಂಛಪ್ರದೇಶದೊಳ್ ನಾರಾಯಣಂ ಬಲದೇವನುಮಿರ್ದರಶನಿವೇಗ ಸಿಂಹದಾಡ ಮಾನಸವೇಗ ಅರುಣಚಂದ್ರ ರಣಚಂದ್ರ ದಥಿಮುಖ ಅಕಂಪನ ವರಾಹಕಂಧರ ಪಿಂಗಳ ಜಯವರ್ಮ ವೈರಿದಾಡ ಅರಿಮರ್ದನಾದಿ ವಿದ್ಯಾಧರರಾಜರ್ ತಂತಮ್ಮ ಪಡೆವೆರಸು ಬಲದೇವ ವಾಸುದೇವರಾಗ್ರ ಪ್ರದೇಶಾಗ್ರಂಬರ ದೊಳ್ಳೊಡ್ಡಿನಿಂದರಿಂತು ಹರಿಸೇನ ಗರುಡವ್ಯೂಹಮಾಗೊಡ್ಡಿದರಂತೆರಡುಂ ಬಲಮೊಡನೆ ಪಱೆಯಂ ಪೊಯ್ಸಿ ಕೈವೀಸಿದಾಗಳ್

ಉ || ಒಂದು ಸಮುದ್ರ ಮುಮ್ಮುರಿ[ದ]ದೊರ್ಮೊದಲೆೞ್ತರೆ ಮೇರೆದಪ್ಪಿಮ
ತ್ತೊಂದು ಮಹಾಸಮುದ್ರಮದನಾಂಪವೊಲಾಗೆರಡುಂ ಬಲಂಗಳೊಂ
ದೊಂದಱೊಳುಣ್ಮಿದಂ ಮಸಗಿ ತಾಗಿ ಭಯಂಕರಮಾಗೆ ತೂರ್ಯನಾ
ದಂ ದಿವಿಜರ್ಕಳಲ್ಲಿವರಮೆಯ್ದಿತು ಭೋಂಕನೆ ಬೆರ್ಚುವನ್ನೆಗಂ

ವ || ಅಂತು ತಾಗಿದಾಗಳೆರಡುಂ ಪಡೆಯ ಧನುರ್ವಲಂ ೧೦೮

ಚಂ || ಸರಭಸದಾರ್ದು ಪೊಕ್ಕು ಕುಣಿದಾರ್ದೆಸೆ ಸಂತತಮತ್ತಮಿತ್ತಲುಂ
ಶರನಿಕರಂ ಕರಂ ಬಿಡದೆ ಪಾಱೆನಭಸ್ಥಳದೊಳ್ ನಿರಂತರಂ
ಬಱಿನೆೞಲಾಯ್ತು ಮುನ್ನಮದಱಿಂದೆ ಬೞಿ[ಕ್ಕದೆೞಲ್ದ] ಜೊಂಪಮಾ
[ಯ್ತುಱೆ] ಕಣೆಪಂಜ [ರಂ] ತಗುಳ್ದು ಕತ್ತಲೆಯಾಯ್ತು ರಣಾಗ್ರಭೂತಳಂ ೧೦೯

ಕಂ || ತೋಡುಡುಗದೆಸುತಮಿರೆ ಮಾ
ರ್ಪಡೆಯ [ರುಮವ] ರವಯವಂಗಳೆನಿತಱೊಳಂ
ಕೂಡೆ ನಡೆ ಮೆಯ್ಗಳಂಬಿನ
ಮೂಡಿಗೆಯೆನೆ ಪೋಲ್ತು ಕೆಡೆದರುಗ್ರಾಹವದೊಳ್ ೧೧೦

ಮ || ಬಯಲಿಲ್ಲಂಬರದಲ್ಲಿ ಪಾಱುವಿಸುಗಳ್ಗೆಂಬನ್ನೆಗಂ ನಾಂಟಲೆ
ಲ್ಲಿಯುಮಂಬಿಂಗೆಡೆಯಿಲ್ಲ ಭೂತಳದೊಳಿನ್ನೆಂಬನ್ನೆಗಂ ಪಾಱೆ ವಿ
ಸ್ಮಯಮಪ್ಪಂತಿರೆ ನಾಂಟಿ ಬಾಣಮಯಮಾಯ್ತು ಲೋಕಮಂತಲ್ಲದೀ
ಕ್ರಿಯೆ ದಾನುಷ್ಕರಿನಾದುದಲ್ತೆನಿಸುಗುಂ ನೋೞ್ಪಂಗೆ ಬಿಲ್ಗಾಳೆಗಂ ೧೧೧

ವ || ಅಂತಗುರ್ವಾಗಿ ಕಾದಿ ಬೊಲ್ವಡೆ ಪಡಲ್ವಡಮಪ್ಪುದಂ ಕಂಡು ದೞಿಂದೞದ ನಾಯಕರ್

ಕಂ || ತಮ್ಮ ಬಲಮಿಱಿವಿನಂ ಕರ
ಮುಮ್ಮಳಿಸಿ ಕಡಂಗಿ ಕಾದಲವ್ವಳಿಸಿ [ದೞಂ]
ದೊಮ್ಮಳಿಸುತ್ತೆ ಕರಂ ಮುಳಿ
ಸಿಮ್ಮಸಗಿ [ಸುತಮಿರೆ] ತಾಗಿ ತಟ್ಟುತ್ತಿಱಿದರ್ ೧೧೨

ವ || ಅಂತು ದೞಂ ಮಮ್ಮೞಿಯಾದಿಂ ಬೞಿಯಂ

ಕಂ || ತಡೆದಿರದೆ ಬೇಗಮೆರಡುಂ
ಪಡೆಯ ರಥಂ ರಥದೊಳಾಂತು ಕಾದಿ ಹಯಂಗಳ್
ಕೆಡೆಯೆ ರಥ ಮುಱಿಯೆ ಸಾರಥಿ
ಮಡಿಯೆ ಕೆಲರ್ ಸುರಗಿಗಿೞ್ತು ಪಾಯ್ದುಱದಿಱಿದರ್ ೧೧೩

ವ || ಅಂತು ರಥ ಯುದ್ಧಮಾದಿಂ ಬೞಿಯಂ

ಕಂ || ಕಟ್ಟಾಳ್ಗಳಪ್ಪ ಜೋದರ
ನೊಟ್ಟೈಸುತೆ ಬೆಟ್ಟು ಬೆಟ್ಟದೊಳ್ ತಾಗುವವೊಲ್
ನೆಟ್ಟನೆ ಬೆಟ್ಟನೆ ತಾಗಿದು
ದಿಟ್ಟೆಡೆಯಪ್ಪಿನೆಗಮೆರಡು ಪಡೆಗಳ ಘಟೆಗಳ್ ೧೧೪

ವ || ಅಂತೆರಡುಂ ಬಲದ ಘಟೆಗಳ್ ತಾಗಿ ಕಾದೆ ಜೋದರ್ ಕಾರ್ಮುಗಿಲ ಪೆರ್ಮೞೆ ಕಱೆವಂತೆ ಶರವರ್ಷಂಗಳಂ ಕಱೆದು ಪಿಂಡಿವಾಳದಿಂ ಪಾಱುಂಬಳೆಗಳಿಂ ತಾಮಿರ್ದೊಂದೊರ್ವರ ಕಾಲ್ಗಾಪಿನಾಳಂ ತವೆಯಿಱಿದೆಯ್ದೆ ನೂಂಕಿದಾಗಳ್

ಕಂ || ಕಾಲಾಳಿಱಿವೈದೇಱಿಂ
ಬಾಲದ ನಾಲ್ಕೇಱಿನೆಂಟು ಕೈಯೇಱುಗಳಿಂ
ಕಾಲಿನ ಮುಳಿದಿಱಿವೇಱಿಂ
ಮೇಲಪ್ಪೊಂಬತ್ತುತೆಱದ ಕೋಡೇಱುಗಳಿಂ ೧೧೫

ವ || ಇಱಿಯಿಸಿ ತಟ್ಟುತ್ತು[೦] ಕಾದಿ ವಾರಣ [೦] ಮಮ್ಮೞಿಯಾದಿಂ ಬೞಿಯಂ

ಕಂ || ಅವಸರಮಱಿದ್ದಾಂಗಿಱಿ
ವವಸರದೊಳ್‌ ಮಾಣಲಾಗದೆಂದಣಿಯಣಿಯೊಳ್‌
ತವದ ಮುಳಿಸಿಂದಮೆಯ್ತಂ
ದವಯವದಿಂ ತಾಗಿ ತಳ್ತು ಕಾದಿದುತ್ತೆಂ ೧೧೬

ವ || ಅಲ್ಲಿಯೊರ್ವ ವೀರಭಟಂ ತನ್ನೊಳಿದಿರ್ಚಿ ನಿತ್ತರಿಸಲಾಱದೋಡುವನಂ ಕಡಿಂತೆಂದಂ

ಕಂ || ಕೆಲನಂ ನೋಡಿದೊಡಂ ಚಿಃ
ನೆಲನಂ ನೋಡಿದೊಡಮಿಱಿಯೆನೆನಗಿಸಾನುಂ
ತೊಲಗಿದಡೆ ಸಾಲದೇ ನೀಂ
ತಲೆ ಪರೆದಿರೆ ಪರಿದು ಸೇದೆಗಿಡದಿರು ಮರುಳೇ

ವ || ಎನುತಮಂತಂತೆ ನಡೆದೊಂ ಮತ್ತೊರ್ವ ವೀರಭಟಂ

ಚಂ || ನೆಗೞ್ವಿನಮುಂಡ ಜೋಳದ ರಿಣಂ ಶ್ರಮಮಂ ಕಳೆಯಲ್‌ ಮಹಾರಣ
ಕ್ಕಗಿಯದೆ ಪೊಕ್ಕು ತಳ್ತಿಱಿವ ಸದ್ಭಟನಂ ಕಲಿ ಪಾಯ್ದಗುರ್ವು ಕೆ
ಯ್ಮಿಗೆ ಮೊಗಮಿಕ್ಕೆ ಪೇರುರಮನಗ್ಗಳಿವೋಗಿಱಿದಂತೆ ಕೋಪದಿಂ
ನೆಗಪಿದೊಡಂ ಭಟಂ ಗಜದ ಕೊಂಬಿನೊಳುಯ್ಯಲನಾಡಿ ನೀಡಿದಂ ೧೧೮

ವ || ಅಂತೆನಿಬರಾನುಂ ವೀರಭಟರಾಯದ ಪಸುಗೆಗಳಂ ಮೆಱೆವ ಶೌರ್ಯ ವೀರ್ಯ ಪರಾಕ್ರಮದಿಂ ನೆಱೆದೊತ್ತಿರಂತಂದಿನ ತುಮುಳ ಯುದ್ಧದೊಳ್‌

ಲಲಿತ ರಗಳೆ ||
ಪಱಿದಿರ್ದ ಕೆಯ್ಗಳಿಂ ಸುರಿದ ಪುಣ್ಮೆಯ್ಗಳಿಂ
ಪುಂಜಿಸಿದ ನೆಣಗಳಿಂ ರಂಜಿಸುವ ಪೆಣಗಳಿಂ
ಮುಱಿದ ಪೆರ್ದೊಡೆಗಳಿಂ ಮಿಱುಪ ಬಾಳುಡಿಗಳಿಂ
ನೆತ್ತರ ಕಡಲ್ಗಳಿಂ ಸುತ್ತಿಱೆದೊಡಲ್ಗಳಿಂ
ಬಿರ್ದೆಸೆವ ಖಂಡದಿಂ ಪರ್ದುಗಳ ತಂಡದಿಂ
ಕೆಡೆದಿಭಪ್ರಕರದಿಂದುಡಿದ ರಥನಿಕರದಿಂ
ಮಡಿದಿರ್ದ ಹರಿಗಳಿಂ ಬಿಡಮಾೞ್ಪ ನರಿಗಳಿಂ
ಉಳಿವ ಶಾಕಿನಿಯರಿಂ ನಲಿವ ಡಾಕಿನಿಯರಿಂ
ಪುಳು ಮರುಳ್ಗಳಾಟದಿಂ ಹಲವಟ್ಟೆಯಾಟದಿಂ ೧೧೯

ಕಂ || ಅತಿ ರೌದ್ರ [ಮ] ತಿಭಯಂಕರ
ಮತಿವಿಷ್ಮ ಯಮತ್ಯುದಗ್ರಮತಿತೀಕ್ಷ್ಣತಮ
[ಮ್ಮ] ತ್ಯಾಸುರಮತ್ಯದ್ಭುತ
ಮತಿ ವಿಭವತ್ಸುರಸಮತ್ಯಪೂರ್ವಂಯುದ್ಧಂ ೧೨೦

ವ || ಇಂತಂದಿನ ಕಾಳಗದೊಳ್‌ ಜರಾಸಂಧನ ಪಡೆಯೊಳೆರಡಕ್ಷೋಹಿಣಿ ಬಲಂ ಸತ್ತತ್ತು ನಾರಾಯಣನ ಬಲದೊಳೊಂದಕ್ಷೋಹಿಣಿ ಬಲಂ ಸತ್ತತ್ತಾಗಳಾದಿತ್ಯನಸ್ತಮಾನಕ್ಕೆ ಸಂದನಂತೆರಡುಂ ಪಡೆಯೊಳ್‌

ಕಂ || ಧುರದೊಳತಿಕ್ರೋಧದೆ ನಿ
ರ್ಭರದೊಳ್‌ ಕಡುವೀರರಿಱಿಯುತಿರೆ ನೆತ್ತರ ಸು
ಟ್ಟುರೆ ನೆಗೆದಿನನಂ ಪೊರ್ದಿದೊ
ಡರುಣಚ್ಛವಿಯಾದನೆನಿಸಿ ಪಡುವಣ[ಕಿ]ೞಿದಂ ೧೨೧

ವ || ಆಗಳೆರಡುಂ ಬಲದ ಸೇನಾಪತಿಗಳುಂ ತುೞಿಲಸಂದರುಳ್ಳ ನೆರವಿಗಿರುಳಿಱಿ ಯಲಾಗೆಂದೊಡ್ಡಣಮನುಡುಗಿದೊಡಿರ್ವರರಸುಗಳುಂ ತಂತಮ್ಮ ಬೀಡಂ ಪೊಕ್ಕು

ಹರಿಣಿ ||

ತುಮುಳಸಮರಂ ಬೇಡಿಂ ದ್ವಂದ್ವಾಜಿಯಪ್ಪುದು ನಮ್ಮ ಗಂ
ಡುಮಳು[ಮದಂ ತೋರ್ಪಮಾ] ಮೆಂದೆರೞ್‌ ಬಲದಲ್ಲಿಯು
ತ್ತಮದ ಸುಭಟರ್‌ ತಾಮಂದೊಂದೊರ್ವರೊಳ್‌ ಸಮಕಟ್ಟಿ ವಿ
ಕ್ರಮಗುಣಯುತರ್‌ ಪಾರುತ್ತಿರ್ದರ್‌ ಸುಖಂ ಬೆಳಗಪ್ಪುದಂ ೧೨೨

ಗದ್ಯ || ಇದರ್ಹತ್ಸರ್ವಜ್ಞ ಪಾದಪದ್ಮ ವಿರಾಜಿತೋತ್ತಮಾಂಗ ಶ್ರೀ ಬಂಧುವರ್ಮ ನಿರ್ಮಿತಮಪ್ಪ ಹರಿವಂಶಾಭ್ಯುದಯದೊಳ್‌ ಜರಾಸಂಧ ಪ್ರಯಾಣ ವರ್ಣನಂ

ಏಕಾದಶಾಶ್ವಾಸಂ