ಕಂ || ಅಂತು ಮುರವೈರಿ ಪಿರಿದುಂ
ಸಂತಸದಿಂದಿರೆ ಮನೋಜ[ನುಂ] ಹೃದ್ವಚನಂ
ಭ್ರಾಂತೇನೊ ತಪ್ಪದೆಂದಘ
ಸಂತತಿಯಂ ಕೆಡಿಪೆನೆಂಬ ಬಗೆಯಿಂದಾಗಳ್‌ ೧

ವ || ಒರ್ವನೆ ರುಗ್ಮಿಣಿಮಹಾದೇವಿಯಲ್ಲಿಗೆ ಬರ್ಪಾಗಳ್‌ ಗೆಂಟಱೊಳಮರಸಿ ಕಂಡೆಂದಿನಂತಲ್ಲದಿಂದೊರ್ವನೆ ಬಂದಪ್ಪನೆನೆಯನೆ ಬಂದು ಪೊಡೆವಟ್ಟನಂ ಏಱಲಿಕ್ಕಿಸಿದೊಡೆ ಮಹಾ ಪ್ರಸಾದಮೆಂದು ಕುಳ್ಳಿರ್ದೊನನರಸಿಯಿಂತೆಂದಳ್‌

ಕಂ || ಕೊಡೆಯಿಲ್ಲದಡಪಮಿಲ್ಲದೆ
ಮಡದಿಯರೊಡವಪ್ಪರಿಲ್ಲದಾಳಿಲ್ಲದೆ ನೀಂ
ನಡೆದೊರ್ವನೆ ಬಂದೆಯಿದೇಂ
ತೊ[ಡಕಿತೆ] ಮನೆವಾರ್ತೆ ಮುಳಿದೆಯೋ ಪೇೞ್‌ ಮಗನೇ ೨

ವ || ಎನೆ ಕಂದರ್ಪಂ ಕೆಯ್ಯಂ ಮುಗಿದು ದೇವಿ ಬಿನ್ನಪಂ ಜೀವನೆಲ್ಲಿಯುಮೊಂದೆ ಯೆಂದುಮೊರ್ವನೆಂಬುದನಱಿಪುವಂತೊರ್ವನೆ ಬಂದೆನಾಱುಂ ಬೆಳ್ಗೊಡೆಯ ನಡುವೆ ನಿಮಗಂ ಚಕ್ರಿಗಂ ಪುಟ್ಟಿದೆನಪ್ಪುದಱೆಂ ಮನೆವಾರ್ತೆಯ ತೊಡಂಕಿಲ್ಲ ಸಂಸಾರದ ತೊಡಂಕುಂಟು ನಿಮ್ಮ ಪ್ರಸಾದದಿಂದೆಮಗೆ ವಿದ್ಯಾಬಲಮುಂ ತೋಳ್ವಲ [ಮು]ಮುಂಟಪ್ಪುದಱೆಂ ಮಾನಸರ್‌ ಮ[ಲೆ]ಯಿಸುವರಿಲ್ಲೆಂಟುಂ ಕರ್ಮಕ್ಕೆ ಮುಳಿದೆಂ ನಿಮ್ಮಡಿಯಂ ಬಿೞ್ಕೊಂಡೆಂ ತಪಕ್ಕೆವೋಗಲ್‌ ಬಂದೆನಿಂ ಪೆಱದಂ ನುಡಿದೊ[ಡೊ] ಡಂಬಡೆನೆಂದು ಕೆಯ್ಯಂ ನೊಸಲೊಳಿಟ್ಟೆಱಗಿದಾಗಳಾ ದಂತೆಂಬುದೇನೆಂದು ಮೂರ್ಚೆವೋಗಿ ಬಿರ್ದಳನೆಂತಾನುಂ ಮೂರ್ಚೆಯಿಂದೆಚ್ಚಱಿಸಿ ನೀಮಿಂತೆನ್ನಗಲ್ಕೆಗಾಱದವರ್‌ ನೆಱೆಯೆ ಬಾೞಿಸಲಾರ್ಪೊಡೆಂತುಂ ನೆಱೆದಿರಿಲ್ಲ ಕೇಡುಂ ಸಾವುಮಾಗಿರ್ಪುದಲ್ತು ನಿಮ್ಮ ಕೂರ್ಮೆಗಮೆನ್ನೞಿವಿಂಗಂ ಮೆೞ್ಪಟ್ಟೊಡೆ

ಕಂ || ಕರಿಯಡಸಿ ಬಿರ್ದು ಕೂರ್ಪಾ
ತರದೊಳು ಪಿಡಿದಿರ್ದ ಬೆರಗಿಲ್ಲಿ ಕಡಿಯು
ತ್ತಿರೆ ಫಣಿ ಬಾಯ್ದೆಱೆದಿರೆ ಚೆಂ
ದೊರೆಕೊಳೆ ಬಾಯಂತು ನಿಂದ ಬೇಡನಂತವೊಲಪ್ಪೆಂ(?) ೩

ವ || ಅದಱಿಂ ಕಿಡಲೆಂದಿರ್ದ ಮಾನಸವಾೞ್ಗೆ ಕೇಡಿಲ್ಲದ ಮುಕ್ತಿಶ್ರೀಯಂ ಕಂಡಿರ್ಪುದುಂ ಮಾಲ್ಗೆ ಮಣಿಯನೊಡೆವುದುಂ ಕೀಲಿಂಗ ದೇಗುಲಮನೞಿವುದುಮಿದಾವುದು ಬುದ್ಧಿಯನೆ ಮಗುೞ್ದುಂ ರುಗ್ಮಿಣಿಮಹಾದೇವಿಯಿಂತೆಂದಳ್

ಕಂ || ಬಾಳಕ್ರೀಡೆಯೊಳಪ್ಪೊಡ
ಮಾಳೋಕಿಸುವನಿತು ಪುಣ್ಯಮಿಲ್ಲದೆ ಪೋದೆಂ
ಲೀಲೆಯ ದೆವಸದೊಳದುವಂ
ಪಾಲಿಸಿ ನೀಂ ತಪಕೆವೋದಡೆಂತಾಂ ಬಾೞ್ವೆಂ ೪

ವ || ಎಂದೊಡಂಗಜನಿಂತೆಂದಂಲೀಲೆಯ ತಪದಿಂದಮಪ್ಪುದನಱಿದುಂಮ…….. ಬೆಳಸುಮಂ ಮೇಗಣ ಲೀಲೆಯುಮಂ ಕಿಡದೆ ನೆಗೞಲಾಗದಲ್ತೆಲೆಯವ್ವಾ

ಕಂ || ನೀಮಿಸಿಸಂ ಬಗೆಯಿರೆ ಲ
ಕ್ಷ್ಮೀಮತಿಯಪ್ಪಂದಿನೊಂದು ಮುನಿವರರಂ ಕಂ
ಡೇವಯ್ಸಿ ಬಯ್ದು ಫಲದಿಂ
ಭೀಮಾದ್ಭು……..ದೊಳಗೆ ಮುೞುಗಿದಿರಲ್ತೇ ೫

ಒಂದಿರುಳು ಪಱಿದ ಬಲೆಯುಮ
ನೊಂದೞಿವಱುಗುಲಮನೊಡ್ಡಿ ಮಱೆಮಾಡಿ ಜಗ
ದ್ವಂದಿತ ಮುನಿಯಂ ಕಾದಿ
ರ್ದಂದಿನ ಫಲಮ[ಲ್ತೆ] ತಾಯೆ ಮಱೆದಿರೆ ಪೇೞಿಂ ೬

ವ || ಎಂಬುದುಂ ಕೇಳುತ್ತೆ ತೆರ್ಪತ್ತು ತನಗಂ ವೈರಾಗ್ಯಂ ಪುಟ್ಟಿ ನೀನಱಿದೆ ಯೆಂದಿರ್ಪಿನಮುದಧಿದೇೞ ಚಲ್ಲ[೦]ಬೀಱಿದ ಕಣ್ ಪೊಳೆಯ ಮೊಗದ ರಸಭಾವಂ ತುಳುಂಕೆ ನಿಱಿಲ ಸೋರ್ಮುಡಿ ಬೆನ್ನೊಳಲೆಯೆ ಬಿಗಿದೊಗದೆ ಮೊಲೆಗಳಲುಗೆ ಅಸಿದಪ್ಪ ನಡು ನಡುಗೆ ಜಘನಭರದಿಂ ಕಾ[ಲ್ದ]ಡದಡಿಸಿ ಮೇಲುದು ತೊಲಗೆ ಹಾರಂ ಮಿಳಿರೆ ನೂಲ ತೊಂಗಲ್ ಘಲ್ಕುಘಲ್ಕೆನೆ ಪರಿತಂದು ಕಾಮದೇವನಿದಿರೊಳ್ ನಿಂದು ಕೇಳೆಂದಿಂತೆಂದಳ್

ಮ || ಎಡೆಯೊಳ್ ಕೂಡಿದ ನಣ್ಪೆ ಮುನ್ನಮೆ ಬಸಿಱ್ ಪೂಸಿರ್ದು ಕಾ[ಪಿಂದಮಿ]
ತ್ತೊಡೆ [ಮುಂದುಂ]ದೊರೆಕೊಳ್ಳದಿ[ರ್ದುದನೆ] ಕೊಂಡೈ ಪುಣ್ಯದಿಂದಾ [ದೊ]ಡಂ
ಬಡಿನೊಳ್ ಕೂರ್ತನೆ ತಳ್ತ ತೋಳ್ ಸಡಿಲೆ ಸಾವರ್ಪಾಕೆಯಿನ್ನೀ ತಪಂ
ಬಡೆ ಬದ್ದಿಪ್ಪೆನೆ ಮನ್ಮಥಾ ಬಗೆದು ನೋಡೆನ್ನಂ ಕೊಲಲ್ ತಕ್ಕುದೇ ೭

ಕಂ || ಕೊಲ್ಲದ ತಪಮದು ದಿಟದಿಂ
ಸಲ್ಲದು ನಿನಗಿಂತು ಕೊಂದ ಪೆಣ್ಗೊಲೆ ಮುನ್ನಂ
ಪೊಲ್ಲದುವಂದದಱಿಂ[ದಿ
ನ್ನಿ] ಲ್ಲ ಫಲಪ್ರಾಪ್ತಿ ನಿನ್ನ ತಪದೊಳ್ ಕಾಮಾ ೮

ವ || ಎನೆ ಕಾಮದೇವನಿಂತೆಂದಂ

ಉ || ಪೆಂಡತಿ ರಂಡೆಯಾಗಿ ಕಡುದುಃಖಮನೆಯ್ದುಗುಮೆಂಬ ಕೂರ್ಮೆಯಿಂ
ಭಂಡಣಕ್ಕಳ್ಕಿ ಮಾಣ್ಗುಮೆ ಭಟಂ ಸುತರಗ್ಗಳದಾಸ್ಪದಂ ಮನಂ
ಗೊಂಡರ ಕೂಟಮೆಂಬ ತೊಡರಂ ಬಗೆದುದ್ಧತ ಕರ್ಮವೈರಿಯಂ
ದಂಡಿಸಲಾರ್ಪುದೊಂದು ತಪಮೆಂಬದನೊಲ್ಲದೆ ಮಾಣ್ದು ನಿಲ್ಕುಮೇ ೯

ವ || ಎಂಬಿನಂ ರತಿ ಬಂದಿಂತೆಂದಳ್

ಕಂ || ಚಕ್ರಧರನಾಂತ ಧರಣೀ
ಚಕ್ರದ ಪಿರಿದಪ್ಪ ಭರಮನಾರಾಂಪರೊ [ಪೇ
ೞೀ] ಕ್ರಮದಿಂದಳ್ಕಿ ತಪೋ
ನುಕ್ರಮದೊಳ್ ನೆಗೞ್ದೊಡೞಿಗುಮಿ ಹರಿವಂಶಂ ೧೦

ವ || ಎಂಬುದಂ ಕೇಳ್ದಂಗಜನಾಕೆಗಿಂತೆದಂ

ಕಂ || ಪಿರಿದಪ್ಪ ರಾಜ್ಯಭರದಿಂ
ಪಿರಿಯವು ದುಃಖ[೦]ಗಳೆಯ್ದಿ ನಮೆವೆಂ ತುದಿಯೊಳ್
ಹರಿವಂಶದೞಿವದೇವುದೊ
ಪರಮಪದಪ್ರಾಪ್ತಿಯೞಿಯದಿರ್ದೊಡೆ ಸಾಲ್ಗುಂ ೧೧

ವ || ಎನೆ ಬೇಗದೀತಂ ಮೋಹಕ್ಕೆ ತೊಡರ್ವನಲ್ಲೆಂದಿಂತೆಂದಳ್

ಪೃಥ್ವಿ || ರಸಾಯನಮನುಣ್ಬ [ನೀನರುಚಿಯಪ್ಪ] ಆಹಾರಮಂ
ಪ್ರಸನ್ನವನವಾಸಿಯಾಗಿ ಮಗುೞ್ದಿಪ್ಪ ಕಾಂತಾರದೊಳ್
ಪ್ರಶಸ್ತ ಮೃದುಶಯ್ಯಯೊಳ್ ಪವಡಿಪೈ ತಱಂಬೊತ್ತೆ ನೀಂ
ಸೈರಿಪೈ ನಿನಗೆ ಮೆಯ್ಯೊಡಂಬಡುಗುಮೇ ತಪೋಮಾರ್ಗದೊಳ್ (?) ೧೨

ಕಂ || ಮುತ್ತಿನ ಮಂಟಪದೊಳಗಿ
ಪ್ಪುತ್ತಮ ಕಲುನೆಲೆಯೊಳಿರ್ದು ಸೈರಿಸಲಾರ್ಪಾ
ಮತ್ತಂ ಮಾಡದೊಳಿಪ್ಪಿರ
ವೆತ್ತಂ ಮೞೆ ಬಿಡದೆ ಸುರಿಯೆ ಮರಮೊದಲಿರ್ಪಾ ೧೩

ನೆಲಮನೆಯೊಳೋಪಳೊಡನ
ಯ್ಕಿಲದೆವಸಂ ಸುಖದಿನಿರ್ಪೆಯಂಗಜತಪದಿಂ
ದೊಲೆದೊರ್ಮೆಯೆ ಬಯಲೆಡೆಗಳೊ
ಳಲಸದೆ ನೀಂ ಬೇೞ್ದ ವಾಸದೊಳ್ ಸೈರಿಸುವಾ ೧೪

ವ || ಪ್ರಾಣವಲ್ಲಭೆಯರ್‌ ನಿನ್ನ ಕುಂತಳಮನಿನಿಸು ತೆಗೆಯೆ ಸೈರಿಸೈ ತಲೆಯೆಲ್ಲಮಂ ಪಱಿಯೆ ಸೈರಿಸಲಾರ್ಪಾ ತಂಬುಲಂಗೊಂಡಲ್ಲದೆ ತಂಬುಲಮುಗುಳದಾ ತಾನೆಯುಪವಾಸಕ್ಕೆ ಮೆಯ್ಯನೊಡ್ಡುವಾ ನಿಚ್ಚಂ ಕತ್ತುರಿಯೊಳ್‌ ತಿವಿರ್ದು ಮಿವಾತನೆ [ವಿಷ್ಟ]ದ ಮಲಮಂ ಪೊತ್ತಿರ್ಪಾ ಪಲ್ಲ[೦] ನಿಚ್ಚ ಸುಲಿವಾ ಚೆನ್ನಿಗನೈ ಕಿಣಿವೆರಸಿರ್ಪಾ ದಿವ್ಯಾಂಬರಕರ್ತಿಗನೈ ದಿಗಂಬರನಪ್ಪಾ ನೆಲನಂ ಮೆಟ್ಟಿಯುಱಿಯದ ಗರ್ಭಸುಖಿಯೈ ನಡೆಯಲಱಿವಾ ಭೋಗಕ್ಕಲ್ಲದೆ ಯೋಗಕ್ಕಾರ್ಪಾ ಪರಮೇಶ್ವರಂಗೆ ನಿನಗೆ ತಮಮೆಂಬುದೇನಲ್ಲದೆಯುಂ ರತಿಯುಂ ಕಾಮನುಮಿರ್ಪರೆಂದುಪಮೆ ಮಾಡಿ ಲೋಕಮತೀತಾನಾಗತ ವರ್ತಮಾನಕಾಲದೊಳಂ ನುಡಿಯುತ್ತಿರ್ಪುದಂತು ನೀನಗಲ್ವೆಯೆಂಬುದೇನೆನೆ ಕಂದರ್ಪನೆಂಗುಂ

ಕಂ || ಅಂತೆ ತಪಃಕ್ರಿಯೆ ಸೈರಿಸು
ವಂತಿಳಿದಲ್ತೆನಗಮಿಂತಿದುಂ ಪೊಲ್ಲದುದ
ಲ್ತಿಂತಿವು ಸಲ್ಲದುದೆಂದಿದ
ನಿಂತಾ ನೆಗೞ್ದಪ್ಪೆನುಂತಗಲ್ವೆನೆ ನಿನ್ನಂ ೧೫

ಮ || ತೆರೆಯೆಂತಂತೆ ಸುರೇಂದ್ರಚಾಪದ ಬೆಡಂಗೆಂತಂತೆ ಪೂತಿರ್ದ ಪೂ
ಮರನೆಂತಂತೆ ಮುಗಿಲ್ಗಳುನ್ನತಿಕೆ ತಾನೆಂತಂತೆ ಮಂಜೊಡ್ಡಿ ಕೊಂ
ಡಿರವೆಂತಂತೆ ತಟಿರ್ಲತಾಕೃತಿಯ ಬೆಳ್ಪೆಂತಂತೆ ನಿಮ್ಮಿರ್ದುದೊಂ
ದಿರವುಂ ರಾಜ್ಯದಳುರ್ಕೆವೆತ್ತ ಬರವುಂ ಸಂಯೋಗಮುಂ ಭೋಗಮುಂ ೧೬

ವ || ಇಂತಪ್ಪುದನಱಿದು ಮುಂತಪ್ಪುದಂ ಮಱೆದೊಡಂತಪ್ಪುದು ಬುದ್ಧಿ ನಿನಗಮೇನಱಿವಿಲ್ಲಾ ಬಗೆದು ನೋಡಾ ಚತುರ್ಗತಿಯೊಳ್‌ ಪುಗದೆ ನೆಗೞ್ವುದೆನುತ್ತಿರೆ ವಿದರ್ಭೆ ಕಣ್ಣನೀರುಮೞಲುಮೊಗೆಯೆ ನೆಯುಮೆರ್ದೆಯುಮೊಡನಡಗೆ ನುಡಿಯುಂ ಕಾಲಮೊಡನೆ ದಡದಡಿಸೆ ನೂಲತೊಂಗಲುಂ ಮೆಯ್ಯುಮೊಡನಲುಗೆ ಮುಡಿಯುಮೊಲೆದುಮೊಡನೆ ಬೞಲೆ ಉದಯರಾಗಮುಮೊಡನೆ ಸಡಿಲೆ ಪರಿತಂದೆಲೆ ಪಾೞಿಕಾಱೂ ಕೇಳೆಂದಿಂತೆಂದಳ್‌

ಕಂ || ಮಾದೆಗನೆನೆಯುಂ ಮಿಗೆ ಮೆ
ಚ್ಚಾದುದುಮಂ ಬೞಿಯನಳಿಪಿ ಬರೆ ನಾ[ನುಂ.]ನೀಂ
ಪೋದುದುಮಂ ನಿನ್ನಾದುದ
ನಾದುದುಮಂ ಬಗೆದು ಕರುಣಿಸಲೆ ಕುಸುಮಶರಾ ೧೭

ಪೆಱಪೆಱದೇನೆಂಬೆಂನೊಯುಱೆ
ಮಾಱಿಸಿದೈ ಬೀವ ನಿನ್ನ ಗೆಲ[ವುಮೊಲವುಮಂ]
ತೋಱಿಸಿದೆಯಲ್ಲಿ ಮಿಳಿಯಂ
ಮಾಱಿಸಿದೈ ಬಗೆದು ನೋಡೆ ತಕ್ಕುದೆ ನೆಗೞಲ್‌ ೧೮

ಸಾಮಾನ್ಯ[ಮೆ ಬಗೆಯಲ್ಕೆಂ]
ಬೀ ಮಾವನ ಮಗ[ಳೆ] ನಾಡೆ ಕೊಂಡಾಡುವುದ
ಕ್ಕೇ[ಮೆಂ]ದು ಗೊಡ್ಡಮಾಡಿದ
ಕಾಮುಕರಂ ಸಂದುದೆನ್ನೊಳದು ನಂಬುಗೆಯಾ ೧೯

ನೀನೆನ್ನನೆಂದೆ [ಯೇನೆ
ನಾ]ನುಂ ಬಗೆಯಲ್ಲದಂತೆ ನೆಗೞ್ದೆಂಬಿಸುಡ
ಲ್ಕೇನಿದು ತಕ್ಕುದೆ ಚಕ್ರಿಯ
ಸೂನುವೆಯಾನಪ್ಪೊಡಬಲೆಯೆಂ ನಂಬಿದೆನುಂ ೨೦

ವ || ಅಂತು ಕುಲಂ ಪೊಲ್ಲದೆನೆ ಕೊಕ್ಕಱಿಸದಾಡಿದುದಂ ಬಂಚಿಸಿ ಪಿಂದೊಯ್ದುದಕ್ಕಂ ಅೞಲುಂ ಪುಟ್ಟದೆ ರಾಗಂ ಪುಟ್ಟಿದುದಕ್ಕಂ ಪೊೞಲೊಳಂ ಸವತಿಯರ ಮನೆಯೊಳಂ ಬೀವಂ ಮಾಱೆಂದಟ್ಟಿದೊಡೆ ಆಗಳರ್ತಿಯಾದುದುಮಂ ಇನಿಸೊಂದೊಂದೆ ಸಾಲದೆ ಕರುಣಿಸಲ್‌ ಕಾಮದೇವಾ ನೀನೆನ್ನಂ ಬಿಸುಟೞಲಿಸಿದ ಪಾಪಮಂ ನೀಗಲಲ್ಲದೆ ಮುನ್ನ ಕಟ್ಟಿರ್ದ ಕರ್ಮಂಗಳಂ ನೀಗುವನಿತಾವುದು ತಪಮಿ ಭ್ರಾಂತಂ ಬಿಸುಡೆಂದಡೆ ಕಾಮದೇವನಿಂತೆಂದಂ

ಉ || ನಿನ್ನೊಲವಿಂಗೆ ಮೆಚ್ಚಿ ತೊಡರ್ದಿನ್ನೆಗಮಿರ್ದುದೆ ಸಾಲ್ಗುಮಿಂ ತಗು
ಳ್ದೆನ್ನನವುಂಕಿ ದುರ್ಗತಿಯೊಳಿರ್ಕುವ ಕರ್ಮಸಮೂಹಮೂಲವಿ
ಚ್ಛಿನ್ನತೆ ಮಾೞ್ಪುದೊಂದು ತಪಮುಂಟದನಾಂ ನೆಗೞ್ದಪ್ಪೆನೇನುಮಿ
ನ್ನೆನ್ನತೆದಿರುಬ್ಬೆಗಂಬಡದಿರಂಬುಜನ್ನಿಭಲೋಲಲೋಚನೇ ೨೧

ವ || ಎಂಬಿನಂ ನಾರಾಯಣಂ ಬಂದೊಡೆ ಕಂಡೆಱಗಿ ದೇವರಲ್ಲಿಗಾಂ ಬಂದು ಬಿನ್ನಂಪಗೆಯ್ದು ಬಿೞ್ಕೊಂಡು ಪೋಗಲ್‌ ಬಗೆದಿರ್ದೆನನ್ನೆಗಂ ನೀಮೇೞ್ತಂದಿರೆನ್ನಂ ಬಿಡಿಮೆಂದು ಕ್ಕೆಯಂ ಮುಗಿದೆಱಗಿದಾಗಳ್‌ ಕಾಮದೇವಂಗೆ ನಾರಾಯಣಿಂತೆಂದಂ

ಕಂ || ನೀಂ ತಪಮಂ ಕೈಕೊಳೆ ಪೆಱ
ರಾಂತಪರಾರೆನ್ನ ರಾಜ್ಯಭಾರಮನಿಂತೀ
ಭ್ರಾಂತನುೞಿ ನೇಮಿಯೆಂದುದ
ನೆಂತುಂ ಪುಸಿಮಾಡಿ ಕಳೆದೆನದನೇನಱಿಯಾ ೨೨

ವ || ಎನೆ ಕಾಮದೇವನಿಂತೆಂದಂ

ಕಂ || ನೇಮಿಯ ನುಡಿ ಪುಸಿಯಾಗದು
ಭೀಮ ಮಹಾಕರ್ಮವಿಜಯಿಯಾಗಲ್‌ ಬಗೆದೀ
ಕಾಮನ ಬಗೆ ಪೆಱದಾಗದು
ನೀಮೋತಿಂತರಸುಗೆಯ್ವುದಂಬುಜನಾಭಾ ೨೩

ವ || ಎನೆ ಚಕ್ರವರ್ತಿಯೆಂಗುಂ ದಾಡೆಯಿಲ್ಲದ ಸಿಂಗಮುಂ ಕೋಡಿಲ್ಲದಾನೆಯುಂ ತಾವರೆಯಿಲ್ಲದ ಕೊಳನುಂ ಚಂದ್ರನಿಲ್ಲದಿರುಳುಂ ಕಣ್ಣಿಲ್ಲದ ಮೊಗಮುಂ ನೀನಿಲ್ಲದರಸು ಮೊಪ್ಪದು ಕರ್ಚಿದ ಕೆಯ್ಯಂ ಬಿಸುಟು ಪೊಳೆವ ಬಾೞೆಗೆ ಪರಿದೆರಡಱಿಂ ಕೆಟ್ಟ ನರಿಯ ಕಥೆಯಂತೀಗಳಿನ ರಾಜ್ಯಶ್ರೀಯಂ ಬಿಸುಟು ಮೇಗಣ ಗತಿಗಾಟಿಸಿದವಳ್‌ ಸೇದೆಗಿಡುವರೆಂದೊಡೆ ಮನ್ಮಥನಿಂತೆಂದಂ

ಕಂ || ಶ್ರೀ[ಯ]ದು ಮುಂಗೆಯ್ದೈ ತಪ
ಶ್ರೀಯಿಂ ದೊರೆಕೊಂಡುದಪ್ಪುದೀ ಗೆಯ್ದ ತಪ
ಶ್ರೀಯಿಂ[ದ]ವಂಗೆ ಮುಕ್ತಿ
ಶ್ರೀಯೊಳ್‌ ಕೂಡಿರ್ಪೊಡೆಂತು ಪೊಲ್ಲದೆ ಚಕ್ರೀ ೨೪

ವ || ನಿನ್ನಿಂದವಗ್ಗಳಮಪ್ಪ ಬಲ್ಲಾಳಾವನುಮಿಲ್ಲಂತಪ್ಪ ನೀನುಮೆಲ್ಲಂ ರಾಜ್ಯದ ಕೇಡುಮಂ ಕಾಯಲ್‌ಬಾರದುದಂ ನಿಮಗಱಿಯಲಕ್ಕುಮಾಂ ಬೆರ್ಚಿದೆನೆಂದಮಿರ್ಪಿನಲ್ಲೆನೆಂದೊಡೆಲ್ಲರುಂ ಬೆಕ್ಕಸಮಾಗಿರ್ದರನ್ನೆಗಂ ಶಂಭುಕುಮಾರಂ ಬಂದೆಲ್ಲರ್ಗಮೆಱಗಿ ಕೆಯ್ಯಂ ಮುಗಿದೆಮ್ಮಣ್ಣ ನಾದುದನಾನುಮಾದೆನೆನ್ನುಮಂ ಬಿಡಿಮೆಂದಾಗಳ್‌ ರುಗ್ಮಿಣೀ [ಮಹಾದೇವಿಯಾಗಿ] ಸ್ತ್ರೀಜನಮುಂ ಹಾಹಾಕ್ರಂದನಂಗಳ್‌ ನೆಗೞೆ ದುಃಖಂಗೆಯ್ದಿಂ ಬೞಿಯಮೆಂತುಮೊಡಂಬಡಿಸಲಾಱದೆ ತನಗಂ ದುರ್ಮೋಹಮುಂಟದಱಿಂ ಹರಿ ತನ್ನ ಮಾಡಕ್ಕೆದ್ದು ಪೋದಂ ಬಲದೇವಂ ವೈರಾಗ್ಯಮುಂಟಾಗಿಯುಮೊಡವುಟ್ಟಿದನನಗಲಲಾಱದಾತನು[೦] ತನ್ನ ಮಾಡಕ್ಕೆ ಪೋದನಾಗಳ್‌ ಸಮುದ್ರವಿಜಯಾದಿಗಳೊಂಬಂದಿಂಬರುಂ ಸತ್ಯಭಾಮೆ ರುಗ್ಮಿಣಿ ಮೊದಲಾಗೆ ಮಹಾದೇವಿಯರ್ಕಳುಂ ಕೆಲರ್‌ ಬಲದೇವ ಸುತರ್ಕಳುಂ ಬೆರಸು ಕಾಮದೇವನುಂ ಶಂಭುಕುಮಾರನುಂ ಅನಿರುದ್ಧಕುಮಾರನುಂ ಮೊದಲಾಗೆ ಕುಮಾರವರ್ಗಮುಮರಸಿಯರ್ಕಳುಂ ಕೆಯ್ಗೆಯ್ದು ಮಹಾವಿಭೂತಿಯಿಂ ಪೊೞಲಿಂ ಪೊಱಮಟ್ಟು ಉಜ್ಜಯಂತಗಿರಿಗೆ ಪೋಗಿ ನೇಮಿಭಟ್ಟಾರರ ಸಮವಸರಣಮಂ ಪೊಕ್ಕು ಬಲಗೊಂಡು ಬಂದಿಸಿ ದೀಕ್ಷೆಯಂ ಬೇಡಿ ವರದತ್ತಗಣಧರಸ್ವಾಮಿಯ ಗಣದಲ್ಲಿ ದೀಕ್ಷೆಗೊಂಡುಗ್ರೋಗ್ರಮಾಗೆ ತಂಪಗೆಯ್ಯುತಿರ್ದರಿತ್ತ ನಾರಾಯಣನಾರ್ಪೊಂದೊಡಮೇನಾನೀ ರಾಜ್ಯಮಂ ಬಿಸುಡೆನೆಂಬ ದುರ್ಮೋಹದೊಳರಸುಗೆಯ್ಯುತಿರೆ

ಕಂ || ದ್ವಾದಶವರ್ಷಂ ನೆರೆದ
ತ್ತಾದೇಶಂ ತಪ್ಪಿತೆಂದು ಮಿಕ್ಕಧಿ [ಕರ] ಮಾ
[ಸಾ] ದಳವಿಯಱಿಯದೆ ಮಗು
ೞ್ದುಂ ದೀಪಾಯನಮುನೀಶ್ವರಂ ಪುಗುತಂದಂ ೨೫

ವ || ಅಂತು ದೀಪಾಯನಮುನೀಂದ್ರಂ ದ್ವಾರಾವತಿಯಂ ಪೊಕ್ಕೊಂದು ದೆವಸಂ ಪುರಬಹಿರ್ಭಾಗಾಂತರದೊಳ್‌ ಕಲ್ನೆಲೆನಿಂದೊಡಂದಿನ ದೆವಸಂ ರಾಜಕುಮಾರರ್‌ ಪಲರುಂ ನೆರೆದಾನೆವೇಂಟೆಗೆ ಪೋಗಿ ಮಗುೞ್ದೂಗಳವರೊಡನೆ ಪೋದ ಪೊಲೆನೆರವಿ ನೀರಡಿಸಿ ಬೞಲ್ದು ದೊಣೆಗಳೊಳ್‌ ಮುನ್ನೆ ಪೊಯ್ದಂದಿನ ಕಳ್‌ಬಳೆದು ತಿಳಿದಿದ್ದೊಡದಂ ನೀರೆಗೆತ್ತು ಕುಡಿದು ಸೊಕ್ಕಿ ಪಾಡುತ್ತುಮಾಡುತ್ತುಂ ಬಂದಾ ಕಲ್ನೆಲೆ ನಿಂದ ಮುನಿಯಂ ಕಂಡು ಮುನಿದು ಗುಂಡುಗಳಂ ಕೊಂಡಿಟ್ಟು ತಣಿಯದೆ ಕಲ್ಲುಗಳನಡಕಿತಂದೊಟ್ಟಿ ಕೊರಳ್ವರಂ ಪೊೞ್ದಿರ್ದಢದನೇಱಿ ತಲೆಯಂ ರುಂಜೆಯುರ್ದಿ ಬಾಜಿಸಿ ಪಾಡುತ್ತಿರೆ ಮುನಿಗೆ ಮುನಿಸುಮಾಯುಷ್ಯಾವಸಾನಮುಮೊಡನಾಗೆ ಪೊಲೆಯರ್‌ ಪತ್ತುವಿಟ್ಟು ಪೋದ ಬೞಿಯುಮವರ್ಗಾ ಕಲ್ನೆಲೆ ನಿಂದುದುಂ ಕಲುಗೊಂಡಿಟ್ಟುದುಂ ಕಲ್ಲನೊಟ್ಟಿದುದುಮಧಿಕಮಾಗೆ ಕಂಠಗತಪ್ರಾಣಮಾಗಿರ್ದುದುಂ ಬಲದೇವ ವಾಸುದೇವರ್ಕಳ್‌ ಕೇಳ್ದು ಪರಿತಂತು ಕಲ್ಲೆಲ್ಲಮಂ ಕಳೆದು ಕುಳ್ಳಿರಿಸಿ ಕ್ಷಮಿಯಿಸಿಮೆಂದು ಕೆಯ್ಯಂ ಮುಗಿದೆಱಗಿದೊಡೆ ಕಂಡಾ ಮುನಿಯಿರ್ವರುಮುೞಿವಿರೆಂದೆರಡುಂ ಬೆರಲಂ ತೋಱಿದೊಡೆ ಮಗುೞ್ದುಪೋಗಿ ಶಾಂತಿಗೆಯ್ಯುತ್ತಿರ್ದರಂತು ದೀಪಾಯನರ್‌ ಸತ್ತು ಭವನವಾಸಿಲೋಕದೊಳಗ್ನಿಕುಮಾರನಾಗಿ ಪುಟ್ಟಿ ತನ್ನೊಳೊಗೆದ ವಿಭಂಗಜ್ಞಾನದಿಂ ಮುನ್ನಿನ ಭವದೊಳ್‌ ದ್ವಾರಾವತಿಯ ಪೊಲೆಯರ ಗೆಯ್ದೋಗಮಱಿತು ಬಂದವ….. ಮುನ್ನಮುೞಿವೆನೆಂಬಂತೆ

ಮಂದಾನಿಲ ರಗಳೆ ||
ಪೊಲೆಗೇರಿಯೊಳುರಿ ನೆಗೆದೊದವೆ ಕರಂ
ಪಲವೊಂದಿಯೆ ಬೆಂದವು ಗೃಹನಿಕರಂ
ಬಳಸಿರ್ದ ವಿಜಾತಿ ಗೃಹಾಂತರದೊಳ್‌
ಅಳುರ್ದೊದವಿದುದುರಿ ಗಗನಾಂತರದೊಳ್‌
ಮಂದುರಮನೆ ಉರಿದವು ಉಳ್ಳನಿತುಂ
ಬೆಂದವು ಗಜಶಾಲೆಗಳೆನಿತನಿತುಂ
ಕರಮುರಿದವು ಸೂಳೆಯೊರೊಳ್ಮನೆಗಳ್‌
ಒಡೆನೊಗೆದುರಿದವು ಪರದರ ಮನೆಗಳ್‌
ಕಡು ನೆಗೆದುರಿದವು ಪಾರ್ವರ ಮನೆಗಳ್‌
ಅಂತಃಪುರವರ ಗೃಹತತಿಯೊಳಗಂ
ಸಂತತಮೞ್ವಿದ ಉರಿಗಳ ಬಳಗಂ
ಮಣಿಮಾಡಂ ಮುರಿದವಭೇದ್ಯಕರಂ
ದಿಣರಲ್‌ ಕರಮುರಿದುದು ಚೋದ್ಯಕರಂ
ಎತ್ತಣದುರಿ ನೋಡಿಮದೆಂಬಿನೆಗಂ
[ಯಿತ್ತ]ೞಿದವ್ಯಾವೋವೆಂಬಿನೆಗಳಂ
ಪುಗಲೆಡೆ ನಮಗಿಲ್ಲೆಂದರ್‌ ಕೆಲಬರ್‌
ಕಡುನಲ್ಲ [ರ]ಪ್ಪಿ ಮಡಿದರ್‌ ಕೆಲಬರ್
ಮಡಿವಾತ್ಮಜರಂ ಕೆಲಬರ್‌ ಪಿಡಿದರ್‌
ಕಾವವರ್ಗಳನಱಸಿ ಕೆಲರ್‌ ತಿರಿದರ್‌
ದೇವಾಲಯದತ್ತ ಕೆಲ[ರ್] ಪರಿದರ್‌
ಪರಿಯುತ್ತೆ ಕೆಲರ್‌ ವೀರಾಸನದಿಂ
ದಿರುತಂ ಮಡಿದರ್‌ ಸಂನ್ಯಾಸನದಿಂ
ಪೊಱಮಡುವರುಮಂ ಶಿಖಿ ಪಿಡಿದಳುರ್ವುತ್ತಂ
ನೆಱಪಲು ಮುನಿಸಂಚಲದಿಂ ಕೆಳಲಂ(?)
ಬಗೆಬಗೆದಾ ಮುನಿಸಿನೊಳೊಗೆದೞಲ್ದಂ
ಧಗಧಗಿಸುವಿನಂ ಸುಟ್ಟಂ ಪೊೞಲಂ ೨೬

ಕಂ || ದ್ವಾರಾವತಿ ಬೇಯೆ ಕರಂ
ನೀರ ಹಳಾಯುಧನಡುರ್ತು ತಳಿದೊಡೆ ಪೊಕ್ಕಾ
ನೀರುರಿಯೆಣ್ಣೆಯಂತಿರೆ
ಭೋರೆಂದಳುರ್ವಂದು ಕಾಯಲಾರ್ಪರುಮೊಳರೇ ೨೭

ವ || ಅದಂ ಕಂಡು ಬೇವುದಿದು ಖೇಚರಾಸುರ ಜನಿತಮೊಯೆಂದು ಮುಳಿದು ದಿವ್ಯರಕ್ಷಿತಮಪ್ಪ ಚಕ್ರಮಂ ನೆನೆದೊಡೆ ಮುನ್ನಱುದಿಂಗಳ್‌ ಪುಣ್ಯಕ್ಷಯಮಾದೊಡಾ ಯುಧಶಾಲೆಯೊಳಿರ್ದ ಚಕ್ರರತ್ನಂ ಮೊದಲಾಗಿ ಪತ್ತುವಿಟ್ಟು ಪೋದುದನಱಿದಿನ್ನಿರಲಾಗ ಬನ್ನಿಮೆಂದಂತಪ್ಪ ಚಕ್ರವರ್ತಿ ಬಲದೇವನುಂ ತಾನುಮಿರ್ಬರೆ ಪೊೞಲಿಂ ಪೊಱಮ[ಟ್ಟು ತೆಂಕ]ಮೊಗದೆ ನಡೆದು ಪಯಣಂ ಬರುತ್ತಂ

ಮ || ಜ್ವಲನಂ ಕಾಯ್ದೊಡೆ ಕೂರ್ತು ತನ್ನ ನೆಲನುಂ ಕಾಯ್ದಂತೆ ಕಾಯ್ದಿರ್ದಳಾ
ತಳಮಂ ಮೆಟ್ಟಿ ಪುಗುಳ್ಗಳಾಗೆ ಪುಗುಳಂ ಕಲ್ಲೊತ್ತೆ ನೊಂದಾಗಳ
ಗ್ಗಳಮಿಂ ನೋೞ್ಪನೆ ನಾನುಮೆಂಬ ತೆಱದಿಂದೆತ್ತಂ ಬಿಸಿಲ್‌ ಕಾಯೆ ಸೂ
ಡೊಳಬಿರ್ದಂತೆ ಬೞಲ್ದೆೞಲ್ದು ನಡೆದರ್‌ ಶ್ರೀಮಂತರಂತಿರ್ವರುಂ ೨೮

ಕಂ || ಬಲಗರ್ವಿತಪ್ರತಾಪಿಗ
ಳಲಂಘ್ಯರಪ್ರತಿಮರಖಿಳ ಭೂಭೃತ್ಪ್ರಭುಗಳ್‌
ಬಲದೇವ ವಾಸುದೇವರ್‌
ನೆಲೆಗಟ್ಟೇಕಾಕಿಯಾದರುೞಿದವರಳವೇ ೨೯

ವ || ಅಂತಿಬ್ಬರುಂ ಶ್ರಮಂಬಟ್ಟು ದೆಸೆಗಟ್ಟು ಪೋಗಿ ಮೂಱು ಜಾವಮಪ್ಪಿನಂ ನಡೆದು ಪಥಪರಿಶ್ರಮಮನಾಱಿಸಲೆಂದೊಂದು ಮರದಡಿಯೊಳಿರ್ದಲ್ಲಿ ಬಲದೇವಸ್ವಾಮಿ ತಮ್ಮನ ಪಸಿದುದನಱಿದಿಲ್ಲಿಮಾನಿತ್ತತ್ತಲಱಸಿ ನಮಗಾಹಾರಮಂ ತಂದಪ್ಪೆನೆಂದಲ್ಲಿಂದಮೆದ್ದು ಕಿಱಿದಂತರಮಂ ಪೋಗಿ ಪಿರದಪ್ಪಾರವೆಯಂ ಕರ್ಗಿ ತೋರ್ಪ ಬನಮಂ ಕಂಡೆಯ್ದೆ ಪೋಗಿಯೊರ್ವನಂ ಕಂಡೀ ಪೊೞಲಾವುದಿದನಾರಾಳ್ವರೆನೆ ವನಕುಸುಮಮೆಂಬುದು ಪೊೞದಂ ದುರ್ಯೋಧನನ ಮಮ್ಮಂಕಯವರನೆಂಬನಾಳ್ವನೆಂದೊಡಂತೆಯೆಂದು ಪೋಗಿ ಪೊೞಲಂ ಪೊಕ್ಕೊಡಲ್ಲಿ ದ್ವಾರಾವತಿ ಬೆಂದಪುದೆಂಬ ಪಡೆಮಾತಂ ಕೇಳ್ದು ಗುಡಿಗಟ್ಟಿಯಿಂಡೆಯಾಡುವುದಂ ನೋಡುತ್ತಮಂತೆ ಪೊಕ್ಕು ನಾಗದತ್ತನೆಂಬೊರ್ವ ಪರದನಂ ಕಂಡಾತನಂಗಡಿಯೊಳ್‌ ಕುಳ್ಳಿರ್ದು ತಾಂ ಪರಮೇಶ್ವರನಪ್ಪುದಱೆಂ ಮಾಱಿನ ಲೆಕ್ಕಮಂ ಬಗೆಯದೆ ತನ್ನ ಕಿವಿಯ ಕುಂಡಲಂಗಳಂ ಕಳೆದಿವಂ ಕೊಂಡು ಕಿಱಿದುಂ ಕೊೞಂ ಕಲಸಿಯಟ್ಟಿಮೆಂದು ಕೊಟ್ಟೊಡೆ ಪರದಂ ಕೊಂಡು ಮನೆಗೆ ಪರಿತಂದು ಕೂೞಂ ಬಾಗವೇೞ್ದು ಮತ್ತಮಾ ಕುಂಡಳಂಗಳು ನೋಡಿ

ಕಂ || ಇವರದಿವು ರತ್ನಕುಂಡಳ
ಮಿವಗೊಡೆಯಂ ದಿವ್ಯಮಾನವಂ ಮತ್ತದಱೆಂ
ದಿವನವನಿಪತಿಗೆ ತೋಱದೊ
ಡವಿನಯವೆಂದೊಸೆದು ಪರಿದನರಮನೆಗಾಗಳ್‌ ೩೦

ವ || ಪರಿದರಸನಂ ಕಂಡೊರ್ವಂ ಧವಳಾಂಗಂ ಭದ್ರಾಕಾರಂ ದೇವನಕ್ಕೆ ಮಾನವನಕ್ಕೆ ಬಂದೆನ್ನಂಗಡಿಯೊಳ್‌ ಕುಳ್ಳಿರ್ದಿವಂ ಕೂೞ್ಗೆ ಕೊಟ್ಟೊಡೆ ಕೊಂಡುಬಂದೆನೆಂದು ರತ್ನಕುಂಡಳಂಗಳಂ ತೋಱಿದೊಡೆ ನೋಡಿ ಕಯವರಂ ಚೋದ್ಯಂಬಟ್ಟು ಪೆಱನಲ್ಲನಾತಂ ಬಲದೇವನಿವಾತನ ಕುಂಡಳಮೆನ್ನ ಪಗೆ ಸಮನಿಸಿತೆಂದು ಪರದನಂ ಪೋಗವೇೞ್ದು ಬೇಗಂ ತನ್ನಾಳೆಲ್ಲಮಂ ಬರವೇೞ್ದು ನಡೆದಾತನ ಮೇಗೊಳ್ವ ಬಟ್ಟೆಯೊಳೊಡ್ಡಿ ನಿಂದನನ್ನೆಗಮಾ ಪರದಂ ಕೂೞಂ ಕಲಸಿ ಪಲವುಂ ಬಾಡುವೆರಸಿ ಕೂೞನೊಂದು ದಳಿಂಬದ ಕಪ್ಪಟದೊಳ್‌ ಕಟ್ಟಿಕೊಟ್ಟಡೆಕೊಂಡು ಬರ್ಪನಂ ಕಯವರನಾಳೆಲ್ಲಮೊದಱಿ ತಾಗುವುದಂ ಕೆಯ್ಯ ಕೂೞನಾಕಾಶಕ್ಕೀಡಾಡಿ ದೊಡಾತನ ಪುಣ್ಯಕ್ಷಯದೊಳಾರುಂ ಪಿಡಿಯದಿರೆ ನೆಲಕ್ಕೆ ವರೆ ಮತ್ತಂ ಕೊಂಡಿನ್ನೆನಗಪ್ಪ ಪುಣ್ಯ ದೇವತೆಗಳೊಳರಪ್ಪಡೆ ಪಿಡಿಯಿಮೆಂದಾಕಾಶಕ್ಕೆ ಮಗುೞ್ದೀಡಾಡಿದೊಡೆ ಪಿಡಿದಿರ್ದರಾಗಳತ್ತಿತ್ತ ನೋಡಿ ಪಿರಿದೊಂದು ಗಜಸ್ತಂಭಮಂ ಕಿೞ್ತುಕೊಂಡು