ಕಂ || ಅಂತು ಪಡೆಯೊಳಗೆ ಮಾ
ಱಾಂತರನಿಱಿದೇಕೈಕವೀರರೇಱಂ ನೋಡಲ್‌
ಬಂದುದಯಾದ್ರಿಯೊಳಗೆ
ತಂದಂ ಘನತಿಮಿರಹರಣನತಿಶಯಕಿರಣಂ (?) ೧

ವ || ಅಂತಾದಿತ್ಯನುದಯಂಗೆಯ್ವಾಗಳ್‌ ನಾರಾಯಣನೊಡ್ಡಣಕ್ಕೆವಂದು ನೀಮಿಂದು ಸೇನಾಪತಿಯಾಗಿಮೆಂದುಗ್ರಸೇನ ಮಹಾರಾಜನಂ ಪೇೞ್ದಂ ಧರ್ಮಪುತ್ರನುಮಾತನೊಡನೆ ಶ್ವೇತನಂ ಪೇೞ್ದನಂತಿರ್ಬರುಂ ತಂತಮ್ಮ ಪಡೆಯ ಚಾತುದರ್ಯಂತಬಲಮನೊಡ್ಡಿರ್ದರತ್ತ ಜರಾಸಂಧ ನೊಡ್ಡಣಕ್ಕೆವಂದು ಶತ್ರುಕ್ಷಯನೆಂಬ ಮಂಡಳಿಕನಂ ಸೇನಾಪತಿ ಮಾಡಿ ಪೇೞ್ದನಾತನೊಡನೆ ದುರಿಯೋಧನಂ ಗಾಂಗೇಯನಂ ಪೇೞ್ದಿನಂತರವರುಂ ತಂತಮ್ಮ ಬಲಮನೊಡ್ಡಿನಿಂದೊಡುಗ್ರಸೇನ ಮಹಾರಾಜಂ ಶತ್ರುಕ್ಷಯಂಗಿದಿರಂ ನಡೆದು ಕಾದಿದನದಂ ಕಂಡು ಗಾಂಗೇಯಂ ಶ್ವೇತ [ನ]ನಾಂತು ಕಾದೆ

ಕಂ || ಚತುರಂಗಂ ಚತುರಂಗದೊ
ಳತಿ ಕೋಪದಿನೞಿಯೆ ಕಾದುವಾಗಳಗುರ್ವ
ಪ್ರತಿಮಮಮಾನಮಚಿಂತಿತ
ಮತರ್ಕ್ಯಮದ್ಭುತರಸಾಂಗಮಾ ರಣರಂಗಂ ೨

ವ || ಎನಿಸಿ ಪಡಲ್ವಟ್ಟು ತನ್ನ ಬಲಮಂ ಗಾಂಗೇಯಂ ಕಂಡು ರಥಮನೆಯ್ದೆ ನೂಂಕಿನಿಂದಪರಿಮಿತ ಶರಸಮೂಹಮೊಡನೆ ನಡುವಿನಮೆಚ್ಚೊಡಂಬೇಱಿಂಗೆ ಬೞಲ್ದಾ ಶ್ವೇತಂ ಬಿರ್ದನಾಗಳ್‌ ಕುರುಬಲಮಾರ್ದು ಪಱೆಯಂ ಪೊಯ್ಸಿದೊಡದನುಗ್ರಸೇನನಱೆದು ತನಗಿದಿರಾಂತೊಂಗೆಯ್ದೆ ಪರಿಯಿಸಿ ಕಾದಿ ಶತ್ರುಕ್ಷಯನಿಕ್ಕಿದೊನಂತಂದಿನ ದೆಸಮೊಡ್ಡಣಮನುಡಿಗಿ ಬಂದೆರಡುಂ ಪಡೆ ಬೀಡಿನೊಳಿರ್ದುದನಂತೊರ್ವರೋರ್ವರ ಕಾಳೆಗಮ [೦] ನೋಡುತ್ತಿರಲಾಗ ಪಲರುಮೋರೊ ರ್ವರೊಳ್‌ ಪೊಣರ್ದು ಕಾದುವಮೆಂದಿರುಳಂ ಕಳಿಪಿ ಬಯ್ಗಿರುಳೆರ್ದೆರಡುಂ ಬಲಮೊಡ್ಡಿ ನಿಲೆ ಜರಾಸಂಧಂ ತನ್ನ ಕಿಱಿಯ ಮಗಂ ಕಾಮದಂತನನಿಂದು ನೀನಭಿಮುಖವಾಗಿ ಕಾದೆಂದೊಡವನ ಬರವನಱಿದು ಬಳದೇವನಾತನನಾಂತಂ ಮುನ್ನಿನ ದೆವಸಂ ಗೆಲೆ ಕಾದಿದ ಮನಂ ಪೆರ್ಚಿನೊಳ್‌ ನೂಂಕಿದ ಗಾಂಗೇಯನಂ ದ್ರುಪದನಂತು ಪುಲ್ಮೊರಡಿಯ ಕಾಳ್ಕಿಚ್ಚು ತಗುಳ್ದಂತಿದಿರಬಲಮನೞಿಯೆ ಕಾದುವುದಂ ಕಂಡು

ಹರಿಣಿ ||
ಮನದೊಳೆನಸುಂ ಪೆಂಪಂ ಕೆಯ್ಕೊಳ್ಳದೇಳಿದರಪ್ಪ ದು
ರ್ಮನುಜರಿಱಿಯಲ್‌ ಮುನ್ನಂ ಬಂದಿರ್ದೊಡೇನಱಗಂಡಿಯಾ
ಯ್ತೆ[ನೆ] ಸುಖಮಿರ[ಲ್‌ ನೀಂ] ಪೋಗಿಂ[ದೆ] ನಿರಾಕುಳಮೆಂದು ಘೋ
ಷನೆವಿಡಿಸುತಂ ಬಂದಂ ಶಲ್ಯಂ ಮಹಾಬಲವಗರ್ವಿತಂ ೩

ವ || ಎಂದು ಗಾಂಗೇಯನಂ ಪೆಱಗಿಕ್ಕಿ ಮಾವನಪ್ಪ ದ್ರುಪದನೊಡನೆ ಕಾದುವಾಗಳಾತನ ಬಲ್ಲಾಳ್ತನದ ಪೆಂಪಂ ಕಂಡು

ಮ || ಕಲಿಯುಂ ಬಲ್ಲಾಳಮೆನ್ನಿಂದೊಳರೆ ಪೆಱರು[ಮೆಂ]ಬೀ ಹಟತ್ಕಾರದಿಂದಂ
ಮಲೆದೆಯ್ತಂದೆಮ್ಮ ಮಾವಂಗಿದಿರಿದಿ[ರುರೆ] ಬಂದಾಂತೆ [ಯಾಂತಂತೆ] ತಿಣ್ಣಂ
ನಿಲವೇೞೆಂದಟ್ಟಿ ಪಾರ್ಥಂ ಮುಳಿದಿರದೆಡೆಗೊಂಡಾಂತಡಾ ಶಲ್ಯಭೂಭೃ
ದ್ಪಲಮೞ್ಕಾಡಿತ್ತು ಬೇಗಂ ಕರಡಮನುರಿ ತಳ್ತೞ್ವಿದೊಂದಂದದಿಂದಂ ೪

ಕಂ || ಶಲ್ಯನುಮವಂಗೆ ಕುಸಿದೊಡ
ಖಲ್ಯನುಮಾಗಿರ್ಪೆನೆಂಬ ಬಗೆಯಿಂ[ದಿ]ಷ್ಟಾ
ದಿಲ್ಯಮನನಾಗಿ ಕಾದುಮ
ಮೊಲ್ಲ ಮಹಶೌರ್ಯದಳವನೇನಂ ಪೇೞ್ವೆಂ (?) ೫

ವ || ಅಂತವರಿರ್ವಲದ ಕಾಳೆಗದಗುರ್ವಿಂಗೆರಡುಂ ಪಡೆ ಬೆಕ್ಕಸಮಾಗಿ ನೋಡುತಿರ್ದರನ್ನೆಗಮಶನಿಘೋಷನೆಂಬಂ ಬಲದೇವನೊಳಾಂತು ಕಾದುತ್ತಿರೆ ಬಲದೇವನಂ ಪೆಱಗಿಕ್ಕಿ

ಕಂ || ದಾರಣಭಿನುತ ಗುಣಸಂ
ಧಾರಣ[ನ]ನುಗ್ರ ಭವದ್ವಿಷಾಭಂ ವಿದ್ವಿ
ದ್ವಾರಣ ಘಟಾಳಿದರ್ಪನಿ
ವಾರಣ ವಾರಣಮನಣೆದು ನೂಂಕಿದನಾಗಳ್‌ ೬

ವ || ನೂಂಕಿ ಹತ[ವಿ] ತತ ಕೋಳಾಹಳಮಾಗೆ ತೊತ್ತೞದುೞಿಯಿಸಿ ಮಾರ್ಬಲಮಂ ಪೇಸೇೞೆ ಕೊಂಡಶನಿಘೋಷನಿಕ್ಕಿದುದಂ ವಜ್ರಕಾಯಂ ಕಂಡು ತನ್ನಾನೆಯಂ ನೂಂಕಿ ಪಿರಿದು ಪೊತ್ತು ಕಾದುತ್ತಿರೆ ನೇಸರ್ಪಟ್ಟೊಡೆ

ಕಂ || ಇರುಳುಣಲಿಂತಾಗ ತಪೋ
ಭರಸಹಿತಂಗಂತೆ ತುೞಿಲಸಂದಂಗೆ ತಗು
ಳ್ದಿರುಳಿಱಿಯಲಾಗದೆಂತಿಂ
ತೆರಡುಂ ಪಡೆ ಪೋಗಿ ಮಗುೞ್ದು ಪೊಕ್ಕರ್‌ ಬೀಡಂ ೭

ವ || ಪೊಕ್ಕಿರುಳೆಲ್ಲಮಾಯದ ಪಸುಗೆಗಳ ಮಾತನೆ ನುಡಿಯುತ್ತಿರ್ದು ಬೆಳಗಾದಾಗಳೆಂದಿನಂತೆರಡುಂ ಪಡೆ ಸಮರಭೂಮಿಗೆ ಬಂದೊಡ್ಡಿನಿಂದಲ್ಲಿ ಸತ್ಯಕಂ ವಜ್ರಕಾಯನಂ ಕೊಂದಂ ಜಯದ್ರಥನುತ್ತರನಂ ಕೊಂದಂ ನಕುಳಂ ಭೂರಿಶ್ರವನಂ ವಿರಥಂ ಮಾಡಿದಂ ಮಹಾಸೇನಂ ದುಂದುಭಿಯಂ ……..ವಸುದೇವಂ ವಜ್ರಮುಷ್ಟಿಯನಿಕ್ಕಿದಂ ಧೃಷ್ಟದ್ಯಮ್ನಂ ಕೃಪನುಂ ಸಮಗಾಳೆಗಂಗಾದುತ್ತಿರೆಯಿರೆ ನೇಸರ್ಪಟ್ಟೊಡೆರಡುಂ ಬಲಮೊಡ್ಡಣಮನುಡುಗಿ ಬಂದು ಬೀಡಿನೊಳಿರ್ದಿರುಳಂ ಕೞಿಪಿ ಬಯ್ಗಿರುಳೆರ್ದು [ಪೞೆ]ಯಂತೆ ಬಂದೊಡ್ಡಿನಿಂದರನ್ನೆಗಂ ದುರ್ಯೋಧನ[೦] ಶಶಪ್ರಕರರೆಂಬ ದಾನವರಂ ವಿದ್ಯಾಗರ್ವಿತರಂ ಪಾಂಡವರನೆ ಭರಂಗೆಯ್ದೆಂತುಂ ಕೊಲ್ಲಿಮೆಂದು ಪೇೞ್ದೊಡವರ್‌ ಮಾಯಾಬಲಮಂ ವಿಗುರ್ವಿಸೆ ಪಾರ್ಥನಱಿದು ತನಗಂ ವಿದ್ಯಾಗರ್ವಮುಳ್ಳುದಱಿನಿದನಾನಲ್ಲದೆ ಪೆಱರ್‌ ಭೇದಿಸರೆಂದಾ ಮಾಯಾಬಲಕ್ಕಿದಿರಂ ನಡೆದವರ ಮಾಯಾವಿದ್ಯೆಗೆ ತಾಂ ಪ್ರತಿವಿದ್ಯೆಯಂ ಪೊಣರ್ಚಿ ಕಾದುತಿರ್ದರನ್ನೆಗಮಾ ಪ್ರಸ್ತಾವದೊಳ್‌

ಕಂ || ದ್ರೋಹ [ಠಮಾಳಂ ಮಾಡುವೆ
ನಾಹವ]ಮಂ ಕಂಡು ಮಾಣೆನೆಂ [ದಂದಿಂ]ತೀ
ಮಹಾತ್ಮ್ಯದಿಂದೆ ಚಕ್ರ
ವ್ಯೂಹಮನೊಡ್ಡಿರ್ದು ನಿಂದ ಕೌರವರಾಯಂ ೮

ವ || ಅಂದು ದುರ್ಯೋಧನಂ ಚಕ್ರವ್ಯೂಹಮಂ ಪಾಂಡವರ ಮೊನೆಗೆ ಸಾರ್ಚಿ ತಂದೊಡ್ಡಿ ಮಾರ್ಮಲೆಯುತ್ತಿರ್ದುದುಮಂ ಪೊರ್ದಿ ಬಂದಲೆವುದುಮಂ ಯಾದವರುಂ ಪಾಂಡವರುಮಱಿದು ನಾಮಾವೊಡ್ಡಣಮನೊಡ್ಡುವಮದನೆಂತು ಭೇದಿಸುವಮೆಂದೊಂದೆ ಡೆಗೆವರ್ಪುದುಮಭಿಮನ್ಯು ಬಂದೀ ಬೆಸನನೆನಗೆ ದಯಗೆಯ್ಯಿಮೆಂದು ಹರಿಗಂ ಧರ್ಮ ಪುತ್ರಂಗಂ ಕೆಯ್ಯಂ ಮುಗಿದು ಬೇಡಿದಾಗಳ್‌ ಧರ್ಮಜಂ ಮನದಳವನಱಿವನಪ್ಪುದಱಿಂ ದಿತ್ತೆನೆಂದೊಡೆ ಪೊಡೆವಟ್ಟು ಬೆಸಂಬಡೆದು ಜೀವಿತಂಬಡೆದನಂತೆ ಗುಡಿಗಟ್ಟಿ ಸನ್ನಣಂಗೆಯ್ದು ತನ್ನ ಬಲಮಂ ಕೂಡಿಕೊಂಡು ರಥಾರೂಢನಾಗಿ ಯುದ್ಧಾಭಿಮುಖದೊಳ್‌ ಪರಿಯಿಸುವಾಗಳ್‌ ದ್ರುಪದ ಧೃಷ್ಟದ್ಯುಮ್ನ ಘಟೋತ್ಕಚಾದಿಗಳುಂ ಪಾಂಡವರುಂ ಕುಮಾರನನೊರ್ವನನಟ್ಟಿ ನೋಡುತ್ತಿರಲಾಗೆಂದು ಸನ್ನಣಂಗೆಯ್ದು ಪೆಱಗಣಿಂ ನೂಂಕಿದರಾಗಳಾ ವ್ಯೂಹದ್ವಾರಪಾಲಕರಾಗಿ ನಿಜಬಲಸಹಿತಮೊಡ್ಡಿರ್ದ ದ್ರೋಣಾಚಾರ್ಯಂ ಕುಮಾರಂ ಬೆಸನಂ ಕೈಕೊಂಡು ಬರ್ಪ ಬರವಂ ಕಂಡು ತನ್ನವರನಂತೆ ಮಾಣಿಸಿ ತಾನಿನಿಸಡ್ಡಂ ಬಂದು

ಕಂ || ಬೀರರ್‌ ಪಲಬರುಮೊಳ[ರವ]
ರಾರುಂ ಬರಲಣ್ಮರಲ್ಲಿ ಬರಲಕ್ಕುಮೆ ನೀಂ
ಬಾರದಿರು ಕೂಸೆ ಬಂದೊಡೆ
ಬಾರದು ಮಗುೞಲ್‌ ಸುರಾಸುರಪ್ರಭುಗಳ್ಗಂ ೯

ವ || ಎಂಬುದಂ ಕೇಳ್ದಭಿಮನ್ಯುವಿಂತೆಂದಂ

ಕಂ || ತಂದೆಯ ಬಿಲ್ಲೊವಜರಿರೇ
ನೆಂದೊಡಮಾಂ ನಿಮಗೆ ಮುಳಿಯೆನುಸಿರದೆ ನೀಮಿ
ರ್ದಂದದೊಳೆ ಮಿಡುಕದಂತಿರಿ
ಮೆಂದವರಂ ಕೞಿಯೆ ನರಸುತಂ ಪರಿಯಿಸಿದಂ ೧೦

ವ || ಪರಿಯಿಸಿ ಚಕ್ರವ್ಯೂಹದೊಳಗಂ ಪೊಲೆಗೇರಿಯನಾನೆ ಪೊಕ್ಕಂತೆರಡುಂ ಕೆಲನುಮನಲ್ಲಾಡೆ ಪುಗುತರೆ ಚಕ್ರವ್ಯೂಹದ ಸುೞಿವಿನೊಳಗಳಿಟ್ಟೆಡೆಯ ಕೃಪ ಕೃತವರ್ಮರೆಂಬ ನೆಚ್ಚಿನ ನಾಯಕರಿರ್ವರುಮೆರೞ್ದೆಸೆಯೊಳೊಡನೆ ಬಂದುತಾಗಿದಾಳಭಿಮನ್ಯು ವೈಶಾಖಮಂಡಳಮೆಂಬ ಸ್ಥಾನಕದೊಳ್‌ ನಿಂದು ಬಹುವಿದ್ಯ[ದಿ]ಮಿಸಲಂಬಂ ತೊಟ್ಟು ತೆಗೆದು

ಕಂ || ಎಡಕಂ ಬಳಕಂ ಸೂೞ್‌ ಸೂ
ೞೆಡೆಮಡಗದೆ ಮಗುೞ್ದು ಬೇಗಮಿಸುತೊಂ[ದೊಂ]ದಂ
ಪೊಡೆವಡಮುರಗದ ಕಡುಪೆರ
ಡೆಡೆಗಂ ಮಗುೞ್ವಂತುಟಾಯ್ತು[ವೇ]ಗಾಯ್ಲಿಕೆಯೊಳ್‌ ೧೧

ವ || ಅಂತೆರೞ್ದೆಸೆಯ ನೆರವಿಯುಮನೊಡನೆ ಪಡಲ್ವಡಿಸಿ ನಾಯಕರಿರ್ವರುಮಂ ಮುಟ್ಟುಗಿಡಿಸಿ ಕಾದುವನ್ನೆಗಂ ಪೆಱಗಂ ಬರ್ಪ ಭೀಮ ದ್ರುಪದಾದಿಗಳುಂ ದ್ರೋಣ ಶಲ್ಯ ವಿಕರ್ಣಾದಿಳ್ಗಡ್ಡಮಾಗಿ ಕಾದುತಿರ್ದರನ್ನೆಗಮಭಿಮನ್ಯುವಿದಿರಾಂತರಂ ಗೆಲೆ ಕಾದಿ ಮತ್ತ ಮೊಳಗಣಂತೆ ರಥಮನೆಸಗಲ್ವೇೞ್ದಾಗಳ್‌ ಸ್ಥಾನಕದೊಳ್‌ ನಿಂದು

ಕಂ || ಶರಸಂಧಾನಕ್ರಿಯೆಯಿಂ
ದೆರಡುಂ ದೆಸೆಗೆಸುತಮಂತೆ ಪರಿಯಿಸಿ ಲೋಗೇ
ಶ್ವರದೊಳಗೆ ಬಂಡಿವರಿವಂ
ತಿರೆ ಚಕ್ರವ್ಯೂಹದೊಳಗೆ ಪರಿದತ್ತುರಥಂ ೧೨

ವ || ಆಗಳ್‌ ವ್ಯೂಹದ ಕಟ್ಟು ಕೞಲೆ ಕುಮಾರನಧಟು ಕಣ್ಣೊಳ್‌ ತೊೞಲ್ದು ಬಲಮೊಡ್ಡಿಱೆಯಲ್‌ ಬಗೆದು ತಳಮಳಗಾದೊಡೊರ್ವಂ ಭೀಷ್ಮರನೆಯ್ದೆವಂದು ತಾವರೆಗೊಳನಂ ಮಂಜು ಕವಿದಂತಭಿಮನ್ಯು ಪುಗುತಂದನೆನೆ ಭೀಷ್ಮರ್‌ ತಮ್ಮ ರಥಮನೆಯ್ದೆ ಪರಿಯಿಸಿ ಬಂದಿಂತೆಂಬರ್‌

ಕಂ || ಬಲಸಹಿತಮೆಲ್ಲಮಿರ್ದಂ
ತೊಳಗಾದೈ ಮೊಮ್ಮ ನೀನೆ ನಿನ್ನುಮನಿನ್ನಾ
ನೊಳಕೆಯ್ದೆನೆನ್ನ ಪೇೞ್ದುದ
ನೊಳಕೊಂಡೆನ್ನತ್ತ ಬಂದು ಸುಖಮಿರಲಾಗಾ ೧೩

ವ || ಎಂಬುದನಭಿಮನ್ಯು ಕೇಳ್ದು ಮುಳಿದಿಂತೆಂದಂ

ಕಂ || ಏನೇನೋ ಕೂಸಿವನೆಂ
ದೇನುಂ ಸಂಕಿಸದೆ ನುಡಿದೊಡೇನಾಯ್ತಿಂತಿಂ
ತೀ ನೆರವಿಯೆಂಬ ಕಾಗೆಗ
ಳಾನಂಬಂ ತುಡೆ ನಭಕ್ಕೆ ಪಾಱವೆ ಮರುಳೇ ೧೪

ಬನ್ನಮನೊಳಕೊಂಡಳಿಪಿಂ
ದೆನ್ನಲ್ಲಿಗೆ ವಂದ ಕಾಣ್ಬುದೆಂಬುದನೆನೆ ಕೂ
[ರ್ತಿನ್ನಂ]ಜದಿರಿನ್ನಲಸದಿ
ರಿನ್ನಾಂತಿಱಿಯೆಂಬುದಜ್ಜ ನೀನಿಂತೆಂಬಾ ೧೫

ಮಾರ್ಪಡೆಯೊ[ಳಮಿ]ರ್ದಡಮೇಂ
ಕೂರ್ಪುದನೆನಗಾಯದೊಳ್ಬಮಂ ಕೀರ್ತಿಯುಮಂ
ಕೂರ್ಪುಮನೊದವಿಪ ಮಾತೆನೆ
ತಪ್ಪುದು ಬೞಿಬರ್ಪ ಮಾತುದಪ್ಪುದೆ ನಂಟಂ ೧೬

ವ || ಪೊಲ್ಲಕೆಯ್ದ[ನ]ಯುಯ್ದಿರ್‌ ನುಡಿದೆನ್ನಂ

ಕಂ || ಪತ್ತಿಸುವುದನಾಂ ಕಂಡು
ತ್ಪತ್ತಿಸುವುದಿದಕ್ಕೆ ನಿಮ್ಮನೊಂದಿಸಿ ನೇರ್ತ
ಪ್ಪೆಂ ತಮ್ಮ ನೀತನೆನಿಪನೆ
ಪೆತ್ತಾಂ ಮಗನಿಂತು ಬಂದ ಮುತ್ತಯ್ಯನುಮಂ ೧೭

ವ || ಎಂದು ರಥಮನಿನಿಸು ತೊಲಗಿಸಿ ಕಳಿಯೆ ಪರಿಯಿಸೆ ಮಾರ್ಬಲಮೆಳಗೆಯ್ಯ ಮೇಲೆ ಕಾೞ್ಪುರದ ತೋರಷೆ ಪರಿದಂತಾನುಂ ಬೇಸಗೆಯೊಳಡವಿಯೊಳುರಿ ಪರಿದಂತಾನುಮಾಗೆ ರಥಂ ಪರಿತಂದು ದುರ್ಯೋಧನನ ಸಾಧನಮನೆಯ್ದೆವಂದಾಗಳಾತನ ಮಗಂ [ಲಕ್ಕಣಂ] ಕಂಡೆಯ್ದೆ ನೂಂಕಿದೊಡಭಿಮನ್ಯು ಮುಳಿದೆಚ್ಚಲ್ಲಿಂ ಮುನ್ನಮಾಹವದೊಳ್‌

ಕಂ || ಮುಱಿದ ವರೂಥಂಗಳ ನಡು
ಪಱಿದ ಹಯೋತ್ಕರದ ಕೆಡೆದ ಹರಿನಿಕರಮೆ ಪುಣ್‌
ಸುರಿಯುತ್ತಿರೆ ಬಿರ್ದ ಬಂಟರೆ
ಮೆಱೆದಾಡುವ ಭೂತಗಣಮೆ ನೋೞ್ವಂಗೆತ್ತಂ ೧೮

ವ || ಅಂತಗುರ್ವಾದ ಕೊಳ್ಗುಳದೊಳೆ

ಉ || ಜೋಳದ ಲೆಕ್ಕಮಂ ಕಳೆದೆನಾಂ ತಲೆಯೊಳ್‌ ಕಡುಗೂರ್ತ ಕೂರ್ಮೆಯಿಂ
ಮೇಳದ ಲೆಕ್ಕಮೆನ್ನರ್ದೆಯುದಾಳ್ದನುಮೆಲ್ಲಿದನಂತಱೆಂದಮಾ
ಮೇಳಮುಮಾಳದನುಂ ಖಗನಿಶಾಚರ ಘಟ್ಟಿತಮಾಗೆ ಬೀೞೆ ನೀ
ಜೋಳದೊಳಾಡಿ ಮೆಚ್ಚಿಸುವೆನಾಳದನನೆಂಬವೊಲಟ್ಟಿಯಾಡುಗುಂ ೧೯

ಕಂ || ಇಂತೆಮ್ಮಾಳ್ದನ ಋಣಮಂ
ತೆತ್ತೆಮೆನುತ್ತೊಡನೆ ರಾಗದಿಂ ತಮ್ಮಣ್ಣಂ
ಕೊತ್ತಳಿಗೆ ಮೆಱೆವ ತೆಱದೊಳ್‌
ಕೊತ್ತಳಿಗಾಡಿದವನೇಕವಿಧ ಲಯಗತಿಯಿಂ ೨೦

ವ || [ಲಕ್ಕಣ್ಣನ]ನಂತು ಕೊಂದು ವೀರಶ್ರೀಯಂ ತಂದು ಪಗೆವಡೆಯೊಳಿಂ ಗಂಡರಾರೆಂದು ಬಿಲ್ಲನೊಱೆನಿಂದು ಪೊಗೞಿಸುತ್ತಿರ್ಪುದಂ ದುರ್ಯೋಧನಂ ಕಂಡು ಚಕ್ರವ್ಯೂಹದ ಬಲ್ಬಳಿದುದಕ್ಕೆ ಮುನ್ನಂ ಬೆಕ್ಕಸಂಬಟ್ಟು ಬೞಿಯಂ ಮಗನಳಿದುದಕ್ಕುಬ್ಬೆಗಂ ಬಟ್ಟನಂತು ನೋವಿಮ್ಮಡಿಸೆಸೈರಿಸದೆ ಮೂರ್ಛೆವೋಪನಿತಾಗೆ ಚೇತರಿಸಿರ್ದಿರ್‌ ನಮ್ಮಲ್ಲಿ ಗಂಡರಾರಿರ್ದಿರೆನೆ ಗಂಡರಿನ್ನುಮೆನಿಬರಾನುಮೊಳರನ್ನೆಗಂ ಬೆಸನನೆನಗೆ ದಯಗೆಯ್ಯಿಮೆಂದು ಬೇಡಿಕೊಂಡು

ಕಂ || ಬಂಧನಮಂ ಪಱಿಯುತ್ತೆ ಮ
ದಾಂದೋದ್ಧತ ರೌದ್ರಭಾವಯುತ ಗಂಧ ಮಹಾ
ಸಿಂಧುರಮೆಯಿತರ್ಪಂತಿರೆ
ಸೈಂಧವನೆೞ್ತಂದು ತಾಗಿದಂ ನರಸುತನೊಳ್‌ ೨೨

ವ || ಆತನಂತು ತಾಗಿದುದಂ

ಕಂ || ಕುಸಿದು ಕಳಶೇಭಮಂ ಕಂ
ಡೆಸುತಿರೆ ಬಂದೆಡೆಯೊಳಾಂತರನಾಗಡೆ [ದಲ್‌] ಖಂ
ಡಿಸುವೊಂ ಬಾಣಗಳಂ ಪುಂ
ಜಿಸಿದಂತಿರೆ ಪೊದೞ್ದುವರ್ಗೆ ಮೇರೆಯಪ್ಪಿನೆಗಂ ೨೩

ವ || ಅಂತಭಿಮನ್ಯುದಯಾಸ್ತಮಾನಂಬರಂ ಕಾದುತ್ತಿರೆ ರಥದೊಳಗುಳ್ಳಾಯುಧಂಗಳೆಲ್ಲಂ ತವುಕಲಾಗೆ ಮಾಣ್ದು ಮಾಣ್ದೆಸುವುದಂ ಸೈಂಧವಂ ಕಂಡು

ಕಂ || ಮಾಱಾಂತೆನಿನಿಸು ಪೊತ್ತಿ
ನ್ನಾಱೈ ನೀಂ ಮಗನೆ ಕಾದುಕೊಳ್ಳೆಂದು ಕರಂ
ಜೀಱೆರ್ದು ನಭಕೆ ತಲೆ ಸಲೆ
ಪಾಱೆ ಮಹೋಗ್ರ ಪ್ರತಾಪಿ ಸೈಂಧವನೆಚ್ಚಂ ೨೪

ವ || ಸ್ಕೆಂಧವನಭಿಮನ್ಯುವಂ ಕೊಂದು ರಸಮಂ ಕೊಳ್ವ ವಾದಿಯಂತುದ್ವೃತ್ತನಾಗಿ ವಿಜಯಪಟಹಮಂ ಪೊಯಿಸಿ ನಿಂದು ದುಯೋಧನಂ ಕಂಡು ರಾಗಂ ಪೊಂಪುೞಿಯಾಗೊಸಗೆ ವರೇಯಂ ಪೊಯಿಸಿದನನ್ನೆಗಮಿತ್ತ ಸಂಸಪ್ತಕರ ಮಾಯಾಯುದ್ಧವನರ್ಜುನನೆಂತಾನುಂ ಭೇದಿಸಿ ಬಂದು ಧರ್ಮಪುತ್ರನಂ ಕಂಡು ತನ್ನ ಕಾದಿದ ವಿದ್ಯಾಬಲದ ಚಲದ ಸಾಹಸದ ಮಾತುಗಳಂ ನುಡಿಯುತ್ತಿರ್ದನತ್ತ ನಾರಾಯಣನೊಡ್ಡಿನೊಳ್‌ ವಸುದೇವಂ ಜರಾಸಂಧನ ಸಾಮಂತನಪ್ಪ ವಜ್ರಕುಂಡಳನೆಂಬ ಬಲ್ಲಾಳನಂ ಗೆಲ್ಲಂ ಕಾದಿ ಪಾರ್ವಗುಣಲಿಕ್ಕುವಂತೆ ಬಯ್ಗಂಬೊತ್ತಿಕ್ಕಿದನನ್ನೆಗಂ

ಕಂ || ದುರುಳನಭಿಮನ್ಯು ಸತ್ತೊಡೆ
ನರನಂ ಕೇಳಿಸುವೆನೆಂದು ಬಿನ್ನನೆ ಪೋಪಂ
ತಿರೆ ಬೆಳಗನುಡುಗಿ ಮೆಲ್ಲನೆ
ಖರಕಿರಣಂ ಪೋದನಸ್ತಶೈಳಕ್ಕಾಗಳ್‌ ೨೫

ವ || ಅಂತು ನೇಸರ್ಪಟ್ಟೊಡೆಲ್ಲಂ ತಂತಮ್ಮ ಬೀಡುಗಳ್ಗೆ ವಂದಿರ್ದಲ್ಲಿ ಯಾದವ ಪಾಂಡವರೆಲ್ಲ ಮರ್ಜುನನಲ್ಲಿಗೆವಂದು ಚಕ್ರವ್ಯೂಹದೊಳಭಿಮನ್ಯು ನಿಚ್ಚಟನಾಗಿ ಪೊಕ್ಕು ಪಲರಂ ಗೆಲೆ ಕಾದಿ [ಲಕ್ಕಣನಂ] ಕೊಂದು ನಿಂದೊನಂ ಸೈಂಧವಂ ಬಂದು ಕಾದಿ ಕೊಂದನೆಂಬುದನರ್ಜುನಂ ಕೇಳ್ದಾಗಳೆ ತಗುಳಲ್‌ ಬಗೆದು ದುಃಖಾಗ್ನಿಯಂ ಕ್ರೋಧಾಗ್ನಿ ಗೆಲೆ ನರನಿಂತೆಂದಂ

ಕಂ || ಎ [ಲ್ಲರ್‌] ಕೇಳಿಂ ಪೂಣ್ದುಂ
ಪೊಲ್ಲೆನಲಿಂ ನಾಳೆ ನೇಸಱಿಂದೊಳಗೆ ಕರಂ
ಬಲ್ಲಾಳಂ ಸೈಂಧವನಂ
ಕೊಲ್ಲದೊಡಗ್ನಿಪ್ರವೇಶದಿಂದಂ ಮಡಿವೆಂ ೨೬

ವ || ಎಂಬ ಪ್ರತಿಜ್ಞೆಯಂ ನುಡಿದೊಡೆಲ್ಲಂ ಬಾಯಂಬಿಟ್ಟಿರ್ದದಂತಂದಿನಿರುಳೆಲ್ಲ ಮಭಿಮನ್ಯುವಿನ ಕಾಳಗ……..ನಿನ ಮಾತುಮರ್ಜುನನ ಪೂಣ್ಕೆಯ ಮಾತುಂ ತಗುೞೆ ಬೆಳಗಾದಾಗಳರ್ಜುನನೊಡನೆ ಪೊಱಮಟ್ಟು ಪಾಂಡವರುಂ ಯಾದವರುಮೊಡ್ಡಿನಿಂದರತ್ತ ಜರಾಸಂಧನುಂ ಕೌರವರುಂ ಬಂದೊಡ್ಡಿನಿಂದರ್ಜುನನ ಪ್ರತಿಜ್ಞೆಯನಱಿದು ಶಲ್ಯಮಹಾರಾಜನುಂ ಭೀಷ್ಮನುಂ ದುಶ್ಯಾಸನನುಮಂ ಮೆಯ್ಗಾಪಾಗಿರಿಸಿದರ್‌ ಜರಾಸಂಧಂ ತನ್ನ ಪಿರಿಯ ಮಗನಂ ಕಾಳಯಮನೆಂಬನಂ ಪೇೞ್ದೊಡಾತನಂ ಜರತ್ಕುಮಾರನಾಂತಂ ವಜ್ರಶವನಂ ವ್ಯಾಘ್ರಕೇತುವಾಂತಂ ವೃಷಭಸೇನನಾಂತನಂತು ಕಾದುತ್ತಮಾತನ ಗಜಂ ಸುಪ್ರತೀಕಮನೆಯ್ದೆ ಪೊಕ್ಕಾ ದೞ ಮಹಾಯುದ್ಧಂಗೆಯ್ದು ಗೆಲ್ವಂ ಭೂರಿಶ್ರವಂ ಸತ್ಯಕನಂ ವಿರಥಂ ಮಾಡಿದುದನರ್ಜುನಂ ಕಂಡು ಮುಳಿದಾದಮಾನುಂ ಕಾದಿ ಭೂರಿಶ್ರವನನಿಕ್ಕಿದಂ ಇಕ್ಕಿ ಬೇಗಮಿವರಂ ಕೊಂದುಮೆನ್ನ ಮಗನಂ ಕೊಂದನಂ ಕೊಲ್ವೆನೆಂದು ಕೆಂಗೋಲ್‌ ಮಸಗಿದ ಜವನಂತೆಯಲೆ ಮುನ್ನೆ ಮಾಣು ಸೈಂಧವನಂ ಕಾಪಂ ಕೈಕೊಂಡು ಮಹಾಶಲ್ಯರಾಜನೆನಗೆ ಮಾಣಲಾಗೆಂದು ತನ್ನ ಸಮಸ್ತ ಬಲಂಬೆರಸು ಅರ್ಜುನನನಾಂತು ಕಾದುವಾಗಳ್‌

ಕಂ || ಇಂಬಱಿದು ಕುಣಿದು ತೆಗೆದಿದಿ
ರಂ ಬಂದೆಸು[ತಮಿರೆ]ಬಿಲ್ಲ ಪೆರ್ವಡೆಯಂ ಕಂ
ಡಂಬರತಳಮಂಬಿನಮಯ
ಮೆಂಬಿನಮೆಚ್ಚಂ ಧನಂಜಯಂ ಕಡುಮುಳಿಸಿಂ ೨೭

ವ || ಅಂತೆಚ್ಚು ನಾಲ್ಕುಂ ಬಲಮಂ ನಾಲ್ಕು ಗೞಿಗೆಯೊಳ್‌ ಪಡಲ್ವಡಿಸಿ ಶಲ್ಯ [೦] ತಳ್ತು ಕಾದುತ್ತಮರೆಜಾವದಿಂ ಕೆಯ್ಗೆಮಾಡಿ ಮತ್ತಂ ನೂಂಕಿದಾಗಳ್‌ ದ್ರೋಣಾಚಾರ್ಯಂ ಬಂದಾಂತೊಡಮವರೊಳ್‌ ಮುನಿಸನಿನಿಸುೞಿದು ಕಡುಬಿನ್ನಣಮನೆ ಮೆಱೆದು ಕಾದುತಿ[ರ್ದ]ರೆ ಜಾವಂ ಪೋದೊಡಿಲ್ಲಿ ತಡೆಯಾಗಲಾಗೆಂದು ವಿರಥಂ ಮಾಡಿ ನೀಮಿನ್ನುಬ್ಬೆಗಂಗೊಳ್ಳ ದೊವಜರಿಂತಿರಿಮೆಂದತ್ತ ನೂಂಕಿದೊಡೆ ಭೀಷ್ಮರ್‌ ಬಂದು ನೋಡಿಯರ್ಜುನನೇನೆನಗೆಂದು ಕಡೆಗಣಿಸಿ ಕಾದುತ್ತಿರ್ದು ವಿನಯದ ಪಾೞಿಯಂ ಬಗೆದೊಡೆ ಜೋಳದ ಪಾೞಿಗೆ ದೋಷಮಂತಲ್ಲದೆಯುಂ ಪೂಣ್ಕೆಗೆ ಪೊತ್ತು ಪೋದಪುದು ಮಾಣಲೆಂತುಮಾಗದೆಂದು ಶರಸಂಧಾನಂಗೆಯ್ದು ಕಣೆಪಂಜರದೊಳಿರಿಸಿ ನೀಮಿನ್ನನುವರದ ಪಸುಗೆಯಂ ಬಗೆಯವೇಡಜ್ಜ ಗತಿಯಂ ಬಗೆಯಿಂ ಮುಂದೆ ನೂಂಕಿದಪೆನೆಂದೆನಿಸು ನೂಂಕಿದಾಗಳ್‌ ದುಶ್ಯಾಸನಂ ಬಂದಾಂತಡಮಾತನನೊಂದೆ ಘಳಿಗೆಯೊಳಿಕ್ಕಿ ಪೊತ್ತಂ ನೋಡಿ ಮೂಱು ಜಾವದನಿತಾದುದಾತ ನೊಡ್ಡಣಕ್ಕೆ ಬಂದನೊ ಬಾರನೊ ಬಾರದೊಡೆಲ್ಲಿ ಪೊಕ್ಕಡಂ ತಲೆಯಂ ಕೊಳ್ವೆನೆಂದು ಕಡುವೇಗದಿನೆಯ್ತಪ್ಪಿನಮೆನ್ನನಿಂದು ಕೊಲ್ಲದೊಡೆ ಕಿಚ್ಚುವೊಗುವೆನೆಂದಿದ್ದಣ್ಣಂಗುೞಿದಿರ್ದು ಗೆಲ್ವುದು ತುೞಿಲಸಂದಂಗಾಯಮಲ್ತೋತಂಗಾನೆ ಕಿಚ್ಚಾಗಿ ಮಡಿಪುವೆನೆಂದು ತಾಗಿದ ಸೈಂಧವನಂ ಕಂಡು ರಾಗದಿಂ ತಾನುಂ ಕಾದಿ ಬೇಗಮಿದಿಬಲಮಂ ತವಿಸಿದಧಮನೆಯ್ದೆ ನೂಂಕಿರ್ದಿಂತೆಂದಂ

ಕಂ || ಎನ್ನಾತ್ಮ ಜನಂ ಕೊಂದ
ದುನ್ನತಿಕೆಯೊಳಿನಿತು ಪೊತ್ತುವರೆಗಂ ಬದ್ದೈ
ನಿನ್ನನ್ನರಾರೊ ಗಂಡರ್‌
ಮುನ್ನಂ ಬಗೆವಾಗಳಿನ್ನುಮವನೀತಳದೊಳ್‌ ೨೮

ವ || ಎನೆ ಸೈಂಧವನಿಂತೆಂದಂ

ಕಂ || ಆಂ ಚಲದಿಂ[ದಂ] ನಿನ್ನಂ
ಪಂಚತ್ವಕ್ಕೊಯ್ದು ಕೊಳ್ಳೆ ಗೆಲ್ಲಕೆ ಮುನ್ನಂ
ಸಂಚಕರಮಿಕ್ಕುವಂತಿರೆ
ಮುಂಚಿ ಭವತ್ಸುತನನಿಕ್ಕಿದೆನಗದು ಗೆಲವೇ ೨೯

ವ || ಎಂಬುದಂ ಕೇಳ್ದಪ್ಪುದಪ್ಪುದು ಬಲ್ಲಾಳ ಮಾತಿಂತಪ್ಪುದು ನಿನಗೆ ಮುನ್ನಿಂ ತಪ್ಪು ದಾರ್ತು ನಿಲ್ಲೆಂದು

ಮ || ಸ್ರ ||
ದಿವಿಜರ್‌ ಕೆಯ್ವಾರದಿಂದಂ ಗಗನತಳದೊಳಿರ್ದಾರೆ ವಿದ್ವಿಷ್ಟ ಭೂಭೃ
ನ್ನಿವಹಂ ಬೆಳ್ಕುತ್ತ ಬಾಯ್ವಿಟ್ಟಗಿದಗಿ[ದಿರ]ದಳ್ಳಾಡೆ ಬಿಲ್ಗೆಯ್ದು ಮಾಱೂಂ
ತವ [ನಾಯಶ್ವಂ]ಗಳುಂ ಸೂತನುಮೊಡೆಗೆಡೆತಪ್ಪಂತಿರೆಚ್ಚರ್ಜುನಂ ಸೈ
ಧವನಂ ಕೊಂದನಂ ನರಂಗಲ್ಲದೆ ಮಹಿತಳದೊಳ್‌ ಪೂಣ್ದುದಿನ್ನಾರ್ಗೆ ಸಲ್ಗುಂ ೩೦

ವ || ಆಗಳರ್ಜುನನ ಮುನಿ [ಸಾಱಿ]ದಡೆ ಮಗನ ಸತ್ತುಬ್ಬೆಗಂ ಬರಲ್‌ ಬಗೆದು ದನಾಂ ನೋಡಲಾಱೆನೆಂಬಂತಾದಿತ್ಕನಸ್ತಮಾನಕ್ಕೆ ಸಂದೊಡುೞಿದ ಪಡೆ ಬೀಡಿಂಗೆ ಮಗುೞ್ದೊಡರ್ಜುನನುಂ ಬೀಡಿಂಗೆ ವಂದು ರಥದಿಂದಮಿೞಿದು[ವಂ]ದಂಗೆ ನೀರಿೞಿದು ತನಗಾತನ ಮಾತೆ ಮಾತಾಗೆ ಬೀಡಿಂಗೆಲ್ಲ ತನ್ನ ಮಾತೆ ಮಾತಾಗೆ ಬೆಳಗಾದೊಡೆ ಮತ್ತಮೆರಡುಂ ಬಲಮೊಡ್ಡಿ ನಿಲೆ ಮುನ್ನಿನ ದೆವಸಮರ್ಜುನನಾಟಂದು ಪಲರ್ಗೞಿವಂ ತಂದು ಸೈಂಧವನಂ ಕೊಂದು ಪೂಣ್ದ ಪೂಣ್ಕೆ ಸಂದು ಪೋದುದಕ್ಕೆ ಕೞಲ್ದೞಲ್ದಿರ್ದಾತನಿನಾತಂಗೀತನಲ್ಲದೆ ಪೆಱರಾರೆಂಬೊರ್ಗೆಯುಂ ದುಯೋಧನಂ ಕರ್ಣನ ಮೊಗಮಂ ನೋಡಿದೊಡಾಳ್ದನ ಕಣ್ಣಱಿದಿಂದೆನ್ನ ಕಾಳೆಗಮಂ ನೋಡಿಮೆಂದು ನೂಂಕುವಾಗಳಾತನೊಡನೊಂದಕ್ಷೋಹಿಣಿ ಬಲಮಂ ಪೇೞ್ದೊಡೆ ಕೂಡಿಕೊಂಡು ಮಸಗಿಬರ್ಪನಂ ಘಟೋತ್ಕಚನಾಂತು ವಿದ್ಯಾಬಲದೊಳಮೊಂದಕ್ಷೋಹಿಣಿ ತವೆಯಿಱಿದೆಯ್ದೆ ನೂಂಕಿದೊನಂ ಕರ್ಣಂ ಕಂಡು ಶಕ್ತಿಯಿಂದಿಟ್ಟುಕೊಂದು ಜಯಪಟಹರ್ಮ ಪೊಯ್ಸಿ ನಿಂದನಿತ್ತ ನಾರಾಯಣನೊಡ್ಡಣದೊಳ್‌ ಬಲದೇವಂ ನೂಂಕಿದೊಡಾತನಂ ಜರಾಸಂಧನ ಮಗಂ ಕಾಳಯಮಂ ಮೂಸಾಸಿರ್ಬರ್‌ ಮಕುಟಬದ್ಧರ ನೆರವಿವೆರಸಾಂತು ಕಾದೆ ಬಲದೇವನಿಬರುಮನಿಕ್ಕಿ ನಿಂದಂ ಮತ್ತಂ ದುಯೋಧನನ ಪಡೆಯೊಳ್‌ ದ್ರೋಣಂ ನೂಂಕಿದೊಡೆ ದ್ರುಪದನಾಂತೊಡಾತನಂ ದ್ರೋಣನಿಕ್ಕಿ ನಿಲೆ ತಮ್ಮಯ್ಯನನಿಕ್ಕಿದುದಂ ಧೃಷ್ಟದ್ಯುಮ್ನಂ ಮಸಗಿ ನೂಂಕಿ

ಕಂ || ಆಲೀಢಂ ನೆಲೆಯೊಳ್‌ ಪ್ರ
ತ್ಯಾಲೀಢಕ್ರಮದೊಳಿರ್ದು ತೆಗೆದಿಸೆ ಬಲ್ಲೊಳ್‌
ಮೇಲೆನಿಸಿದೊವಜ [ರಿ]ಪು ಕೊಳೆ
ಕಾಲಮುಖಪ್ರಾಪ್ತನಾದನಾ ರಣಮುಖದೊಳ್‌ ೩೧

ವ || ಅಂತು ದ್ರೋಣಾಚಾರ್ಯ ಸತ್ತುದಂ ದುಶ್ಯಾಸನಾದಿಗಳ್ ನೂರ್ವರು ಮಱಿದು ಬಂದು ತಾಗೆ ರಾಗದೊಳ್ ಭೀಮಂ ಧೃಷ್ಟದ್ಯುಮ್ನನಂ ಪೆಱಗಿಕ್ಕಿ ಪೊಕ್ಕಾಂತು ಗದೆಯೊಳನಿಬರುಮನೊಂದೊಂದೆವೊಯ್ಲೊಯ್ದು ಕೊಂದಮ ಜರಾಸಂಧನ ತಮ್ಮಂ ಶಂಕು ಕೆರ್ಣಿವೆರಸರುಸಾಸಿರ್ಬರ್ ಮಕುಟಬದ್ಧರ್ ಮೂಂಕಿದೊಡವರಂ ಸುಂದರಾಂಗನುಂ ಗೆಲ್ದು ವಿಜಯಪಟಹಮಂ ಪೊಯ್ಸಿದಾಗಳ್ ನೇಸಱ್ ಪಟ್ಟೊಡೆರಡುಂ ಬಲಮೊಡ್ಡಣಮನುಡಿಗಿ ಬೀಡಿಂಗೆವಂದಿರ್ದೊಡಲ್ಲಿ ದುರ್ಯೋಧನಂ ಪ್ರಧಾನಪುರುಷರ ಸಾವಿನೊಳ್ ಚಿಂತಿಸಿರೆ ನಿಮಗಾಳಾರಾನುಮಿಲ್ಲದಂತೇಕೆ ಚಿಂತಿಸುವಿರೆಂದ ಕರ್ಣನ ಮಾತಿಂಗೆ ಮುಚ್ಚಿಯುಂ ನಚ್ಚಿಯುಮಾತಂಗೆ ವೀರವಟ್ಟಮಂ ಕಟ್ಟಿದೊಸೆಗೆಯ ಮಾತಂತೆ ಪರೆಯ ಪಾಂಡವರ್ಕಳರ್ಜುನಂಗೆ ವೀರವಟ್ಟಮಂ ಕಟ್ಟಿದೊಡರ್ಜುನಂ ಕರ್ಣನಲ್ಲಿಗೆ ನಾಳೆ ಪೆಱರೊಳ್ ತೊಡವರದೆ ತಾನುಮಾನುಂ ಕಾದುವಮೆಂಬುದಂ ಪೇೞ್ದು ಬನ್ನಿಮೆಂದು ಬೂತನಟ್ಟಿದೊಡವರ್ ಬಂದು ಕರ್ಣನಂ ಕಾಣ್ಬಾಗಳಾತನ ಚಾಗಮಂ ಕೊಳಲ್ ಪುಗುವ ಪೊಱಮಡುವ ನೆರವಿಯ ಸಂದಣಿಯೊಳೆಂತಾನುಮೊತ್ತಿಪೊಕ್ಕು ನೋೞ್ಪಾಗಳೆಂತಪ್ಪವರಿರ್ದರೆಂದೊಡಾಱುಂ ಗುಣದೊಳ್ ಸಲೆ ನೆಗೆೞ್ವಸಿಧಾರಾವೃತ್ತಿಗಳಾಗಿರ್ದ ತುೞಿಲಸಂದರುಂ [ಪೆಣ್ಗಾವೆವೆಂದದ] ಮೆಯ್ಯನಿಱಿ ಯೆಮೆಂಬರುಂ ಪರಿವ ನೀರ್ಗುಡಿಯೆವೆಂಬರು ಪೊಯ್ದೊಡೆ ಬೆರ್ಚುವೆವಲ್ಲೆಂಬರುಂ ಕುದುರೆಯನಿಱಿಯೆವೆಂಬುರುಂ ಸ….ಗೆ ನೆರಪುವೆವೆಂಬರುವಮೊರ್ವರನೊಂದಲ್ಲದಿಱಿ ಯೆವೆಂಬರುಮೆನಿತು ನೊಂದಡಂ ಪ್ರಾಣಮುಳ್ಳೊಡೆ ಬೀೞೆವೆಂಬರುಂ ವೀರಸಂನ್ಯಾಸಂಗೆಯ್ವರುಂ ರಣದೀಕ್ಷೆಗೊಂಬರುಮುತ್ತರಾಂಗಣವಂ ಕೆಯ್ಯೊಡವರುಂ ಪೆಱವುಂ ದಾಯದ ಪಸುಗೆಗೊಂಡಾಡುವರುಂ ತಂತಮ್ಮ ಗುಣಂಗಳ ಪೂಣ್ಕೆಯುಮಂ ಪೊಗೞಿಸುತ್ತಂ ತೆಕ್ಕನೆ ತೀವಿರ್ದ ಸುಭಟಜನದ ನಡುವಿರ್ದ ಷಡ್ಗುಣ ಸಣಪೂರ್ಣನಂ ಕರ್ಣನಂ ಕಂಡರ್ಜುನನಿಂತೆಂದಟ್ಟಿದನೆದಂ

ಕಂ || ತನಗೊಸೆದು ವೀರಪಟ್ಟಮ
ನನುವರದೊಳ್ ನಚ್ಚಿ ಕಟ್ಟಿದಂ ತನ್ನಾಳ್ದಂ
ಮನದೊಳದಂ ನೆನೆದೆಂತುಂ
ಘನಮಪ್ಪುದು ನಾಳೆ ತನಗಮೆನಗಂ ಯುದ್ಧಂ ೩೨

ವ || ಇದಾತನ ಮಾತಾನುಮೊಂದನೆಂದಪೆನದಾವುದೆಂದೊಡೆ

ಕಂ || ನರನಿರ್ದಂ ಮಾರ್ಪಾಡಿಯೊ
ಳರಿದೆನಗಾವುದಱ ಗರ್ವಮಾವುದಱಳವೇ
ವಿರಿಯೆನಿದನೊಲ್ಲೆನೆನ್ನದೆ
ಮರುಳೇ ನೀನಿಂತು ವೀರವಟ್ಟಮನಾಂಪೋ ೩೩

ವ || ಎನೆ ಕರ್ಣನೆಂದಂ ಪೊಲ್ಲದೆಂದೆಂ ಬಲ್ಲಾಳ್ತನದ ದೆಸೆಯ ತುೞಿಲಾಳ್ತನಂ ಪಲರಂ ಕೊಲ್ವುದೆ ಗೆಲ್ಲಂ ವೀರಸಿದ್ಧಾಂತದೋಜೆಯೊಳ್ ಸಲೆ ನೆಗೞ್ದನೆಂದಾ ಪಟ್ಟ ಮನಾಂತೆನದಂ ನಾಳೆ ಕಾಣಲಕ್ಕುಂ ಪೋಗಿಮೆಂದಾ ಬಂದೊಂಗೆ ಪಿರಿದನಿತ್ತು ಕಳೆದನಂತಿರ್ವರುಂ ನಾಳೆ ಕಾದುವ ಸಮಕಟ್ಟಂತಂತೆ ಪರೆಯ ಬೆಳಗಾದಾಗಳೆರೞ್ ಬಲಮುಮೊಡ್ಡಿನಿಲೆ ಜರಾಸಂಧ ತನ್ನ ಮಹಾಸಾಮಂತಂ ಜಯದ್ರಥನೆಂಬೊನಂ ನೂಂವೇೞ್ದನತ್ತ ನಾರಾಯಣ ಜಸದಿಂ ಮಹಾಪದ್ಮನೆಂಬ ಮಹಾಸಾಮಂತನಾಂತು ಕಾದುತ್ತಿರ್ದನುೞಿದ ನೆರವಿಯುಂ ಪಾಂಡವರುಂ ಹರಿಯುಮರ್ಜುನನ ಕಾಳಗಮಂ ನೋೞ್ಪಮೆಂದು ಬಂದಿರ್ದರಾ ಕೌರವರಾಜನುಂ ಜರಾಸಂಧನುಂ ಬೆರಸುಳ್ಳ ನೆರವಿಯೆಲ್ಲಂ ಕರ್ಣನನುವರಮಂ ನೋಡಲೆಂದು ಬಂದಿರ್ದರಿರ್ವರೀ ಯುದ್ಧಮಂ ಕೇಳ್ದು ಕಿನ್ನರ ಕಿಂಪುರುಷ ಗರುಡಾದ್ಯನೇಕಾಮರಗಣಮೆಲ್ಲಂ ಬಂದು ತಂತಮ್ಮ ವಿಮಾನಂ ಗಳನೋಳಿಯಿನೇಱಿ ಗಗನಭಾಗದೊಳ್ ನೋಡುತಿರ್ದರಾಗಳ್ ಕರ್ಣಂ ತನ್ನ ವೀರಭಟ ಸೇನೆವೆರಸು ಕಾಕಧ್ವಜಮನೊತ್ತಿಸಿ ಪಟುಪಟಹರವಂಗಳೆಸೆಯೆ ತನಗೆ ನಿಜಮಪ್ಪಾ[ಱುಂ] ಗುಣಂಗಳನೆ ಪೊಗೞಿಸುತ್ತಂ ಬಂದು ತಮ್ಮ ಬಲಮೆಲ್ಲಮಂ ಪೆಱಗಿಕ್ಕಿ ಮುಂದೊಡ್ಡಿನಿಂದನದಂ ಕಂಡರ್ಜುನಂ ನಿಜಸಾಧನಂಬೆರಸು ವಾನರಧ್ವಜಮನೆತ್ತಿಸಿ ಸಾಹಸಮನೆ ಪೊಗೞಿಸುತ್ತಂ ತೂರ್ಯಧ್ವಜಿನಿಗಳೆಸೆಯೆ ನೂಂಕಿಪೊಕ್ಕು ಕರ್ಣನಿದಿರೊಳಾಂತರನಂತಿರ್ವರುಂ ತಂತಮ್ಮ ವರುಮಿಲ್ಲೆಂಬುದೊಂದು ಪೆಸರಾಗೆ ತಿಳ್ತಿಱಿದು ಮಮ್ಮೞಿಯಾಗೆ ಮುಂದಣ ಬಲಂ ತಪ್ಪೊಡೆಯಿರ್ವರುಂ ರಥಂಗಳಂ ಸಾರ್ಚಿ ಶರಸಂಧಾನಂಗೆಯ್ದು ಪಿರಿದು ಪೊತ್ತು ಕಾದ ಕರ್ಣನುತ್ತರಿಸಲಾಱದೆ ವಿದ್ಯಾಶಕ್ತಿಯುಕ್ತ ಬಾಣಂಗಳಿಂ ಕಾದಲ್ ಬಗೆದು

ಕಂ || ಅನಲಶರದಿಂದಮಿನಸುತ
ಮುನಿದೆಚ್ಚೊಡೆ ಪರ್ವಿದಿರಿಯ ಪಡೆ ಕವಿತೆರೆ ಕಂ
ಡೆನಸುಂ ಮಾಣದೆ ಪಾರ್ಥಂ
ವನನದಿಶರದಿಂದಮೆಚ್ಚು ಕಿಡಿಸಿದನಾಗಳ್ ೩೪

ಗಿರಿಶರದೆ ಕರ್ಣನೆಚ್ಚೊಡೆ
ಗಿರಿಮಯಮಾಗೊಡೆನೆ ಕವಿವುದಂ ಕಾನುತೆ ಭಾ
ಸುರ ವಜ್ರಶರದೆ ಭೇದಿಸಿ
ಸುರೇಂದ್ರಸುತನೆಂಬುದಂ ನರಂ ಪ್ರಕಟಿಸಿದಂ ೩೫