ಕಂ || ಅಂತು ಹರಿವಂಶತಿಳಕನ
ನಂತಗುಣಂ ದ್ವಾ[ರ]ವತಿಯೊಳಮರಾವತಿಯೊಳ್‌
ಸಂ[ತಸ] ದಿನಮರವಿಭುವಿ
ಪ್ಪಂತಿರೆ ನಿಶ್ಚಿಂತಮಿರ್ದನಿಪ್ಪನ್ನೆವರಂ ೧

ಮಂದಾನಿಲ ರಗಳೆ ||
ಪುಗೆ [ಶುಕ]ಪಿಕಸಮಿತಿ ವನಾಂತರದೊ[ಳ್‌
ಒ]ಗೆದೊಪ್ಪಿರೆ ಸಸಿ ಗಗನಾಂತರದೊ[ಳ್‌]
ತೆಂಗಾಳಿಯು ಬರುತಿರೆ ಮೃದುಪದ[ದೊಳ್‌]
ಭೃಂಗಾಳಿಗಳೆಱಿಗೆ ವನಸ್ಪತಿಯೊಳ್‌
ತುಱುಗಿರೆ ಕೊನೆಗಳ್‌ ಸೆಳೆಗೊಂಬುಗಳೊಳ್‌
ಮಿಱುಪಲರ್ಗಳಿನೊಪ್ಪಿರೆ ಲತೆವನೆಗಳ್‌
ಸುರಿಯುತ್ತಿರೆ ಮಾಮರದೊಳೆ[ನನೆಗಳ್‌]
ಕರಮೊಪ್ಪಿರೆ ಪೂಮರದೊಳೆ ನನೆಗಳ್‌
ಕುಸುಮಿಸುತಿರೆ ಮೆಲ್ಲನೆ ಸಂಪಗೆಗಳ್‌
ಪೊಸಗಂಪಂ ಪಸರಿಸೆ ಮಲ್ಲಿಗೆಗಳ್‌
ತಳಿ[ತೆಸೆ]ದಿರೆ ಪಲವುಮಶೋಕೆಗಳೊಳ್‌
ಮಿಳಿವುಯ್ಯಲು ಸೊಗಯಿಸೆ ನಂದನದೊಳ್‌
ವಿರಹಿಗಳ ಮನಕ್ಕೞಲೊದವೆ ಕರಂ
ನೆರೆದೊಪ್ಪುವರ್ಗೊಗೆಯೆ ರತಿಪ್ರಕರಂ
ಪಿಂ[ದೋ]ಳದ ಗಾಮರವೆಸೆಯೆ ಕರಂ
ಬಂದತ್ತು ಬಸಂತಮದತಿ ಸುಕರಂ ೨

ಕಂ || ಎಂತಿರೆ ಸೊಗಯಿಸುಗುಂ ವನ
ಮಂತಿರೆ ಕಡುರಾಗಮೊದವುಗುಂ ದಂಪತಿಗ
ಳ್ಗೆಂತಿರೆ ವಿಯೋಗಿ ಮಱುಗುರು
ಮಂತಿರೆ ಬಂದುದು ಬಸವಂತಮಭಿನುತ ಕಾಂತಂ ೩

ವ || ಅಂತು ವಸಂತಗಾಲ ಬಂದುದಂ ವನಪಾಲಕ [ನೆರವಿ] ಪೂರ್ವಾಪೂರ್ವಮಪ್ಪ ಪಲವುಂ ಕುಸುಮಂಗಳಂ ಕಂಡು ಚಕ್ರವರ್ತಿಯಲ್ಲಿಗೆ ವಂದು ಕಂಡು ವಸಂತದ ಬರವನಱಿಯೆ ಬಿನ್ನಪಂಗೆಯ್ಡೊಡರಸನೊಸೆದು ಜಲಕ್ರೀಡೆಯಾಡಲ್‌ ಬಗೆದು ತನ್ನರಸಿಯರ್ಕಳುಂ ಮೇಳದ ಸೂಳೆಯರುಂ ನೇಮಿಕುಮಾರಾದಿ ಕುಮಾರಗಣಮುಂ ತಾನುಂ ಪಸದಂನಂಗೊಡು ಮಹಾವಿಳಾಸದಿಂ ಬಂದುದ್ಯಾನಮಂ ಪೊಕ್ಕು ಪಂಚರತ್ನ ಶಿಳಾಖಚಿತಮಪ್ಪ ಬೊಡ್ಡಣಬಾವಿಯಂ ವನಿತಾಜನ ಸಹಿತಂ ಪೊಕ್ಕಾಗಳ್‌

ಕಂ || ಮೊಲೆ ಬಲ್ಮು ಗುಳಂ ಮೊಲೆ
ವಲರಂ ಕರ್ಣಮಿನನೊಳ್ಗುರುಳ್‌ ತುಂಬಿಗಳಂ
ಸಲೆ ಪೋಲ್ತು ಕೊಳನೆ
ನಲಿದಾಡುವ ತೆಱದಿನಾಡಿದರ್‌ ಕಾಮಿನಿಯರ್‌ (?) ೪

ಅಲರಿವು ಮೊಗಮಿವು ಮಿನಿವು
ಕುರುಳಿವು ತುಂಬಿಯ ಬಂಬಲವೆಂದಱಿಯಲು ಕಾಗೆ
ದ ಲಲನೆವೊಲಾಡುವಾಗಳಾ ಪೂಗೊಳದೊಳ್‌ (?)
…………………………………………………. ೫

ಕಾಡುತ್ತಮೆಯ್ದೆ ಪೋರ್ಕುಳಿ
ಯಾಡುತ್ತಂ ನಯದೆ ಚಲ್ಲಮೋಡು [ತ್ತಮದೋ
ಲಾಡುತ್ತಂ ರಾಗದಿ ಬರೆ]
ನೋಡೆ ಕರಂ ಕಾಂತೆಯರ್‌ ಕರಂ ಸೊಗಯಿಸಿದರ್‌ ೬

ಪತ್ತುತ್ತಂ ಹರಿಯಂ ಕೆಲ
ರೊತ್ತುತ್ತಂ ನೀರೊಳಾಳ್ವಿನಂ ಚಂದನದಿ
ಮ್ಮೆತ್ತುತ್ತಂ ಜೀರ್ಕೊಳವಿಯೊ
ಳೊತ್ತುತ್ತುಂ ರಾಗದಿಂದಮಾಡಿದರಾಗಳ್‌ ೭

ನೀರೇಜವದನೆಯರ್‌ ಶೃಂ
ಗಾರರಸಂ ತುಳಿಕೆಲದುಲಟಹದ ಜಗದಾ (?)
ಧಾರನನಧಿಕನ ನೇಮಿಕು
ಮಾರನ ಮೊಗದೊಳ್‌ ಕಡಂಗಿ ತುಳುಕಿದರಾಗಳ್‌ ೮

ವ || ನಮಿಕುಮಾರನಂತವರ ಸ್ವಭಾವದ ಪೊ[ಯ್ಲಿಂ]ಗದಾಂತದ ತನ್ನೀರ ಪೊ[ಯ್ಲಿ]ಗಳ್ಕುವನಲ್ಲ [ನವರಂ ಪ]ರಿದು ಮಾಣ್ದಾಗಳ್‌ ಜಲಕ್ರೀಡೆಯನುಪಸಂಹಾರಿಸಿ ನಾರಾಯಣನುಂ ನೇಮಿಕುಮಾರನುಂ ಪೊಱಮಟ್ಟು ಪೊರಮಟ್ಟು ನಿಂದಲ್ಲಿ ತಮ್ಮಣ್ಣನ ಸನ್ನೆಯನಱಿದಾಂತು ಕುಮಾರನೆ [ನ್ನೊ]ಲ್ಲವಣಿಗೆಯಂ ಪಿೞಿ[ಯಿ]ಮೆಂದು ಸತ್ಯಭಾಮೆಗೆ ಪೇೞ್ದೊಡಾಕೆ ಕಡುಮುಳಿದು ನೋಡಿ

ಕಂ || ಏ[ನೀ ನಿನ್ನೊ]ಲ್ಲಣಿಗೆಯ
ನಾನೇಂ ಪಿೞಿದ[ಪ್ಪು ದೆಕರ] ತಕ್ಕುದು ಬೇಡಾ
[ನೀನೆ]ನಗೆ ಚಕ್ರವರ್ತಿಯೆ
ಭೂನುತಮಾ[ದಾ]ದಿದೇವಿ[ಯೇಂ]ಬಾೞುವಳೇ ೯

ವ || ಅಂತಪ್ಪುದಪ್ಪುದಾನುಂ ಭಾ[ಗಿ]ನಿಯುಮೆಂಬ ಮಾತಪ್ಪುದೆನ್ನುಮಂ ನಿನ್ನುಮನಱಿಯದೆ ನುಡಿದೊಡೇನೆಂದು ತೆಗೞ್ದು ಬಗ್ಗಿಸಿ ಪೋಪಾಗಳ್‌ ರುಗ್ಮಿಣಿಮಹಾದೇವಿ ಸತ್ಯಭಾಮೆಯನಿನಿಸು[ಮ]ಲ್ಲಮೆಂದೆಂಗು ಮಾತೇಕೆ ನೇಮಿಕುಮಾರನನಪಹಾಸ್ಯಂಗೆಯ್ದು ಮುಳಿದು ನುಡಿದಿರಾತನ ಪೆಂಪನಱಿಯಿರೆ ಸ್ವರ್ಗಲೋಕದಿಂ ಬಂದಿಂ ಪುಟ್ಟು [ವಮೆಂ] ದು ಮುನ್ನಱುದಿಂಗಳುಂ[ಟೆ]ನೆ

ಕಂ || ದೇವೇಂದ್ರ ದೇವಿಯರ್‌ ಶಿವ
ದೇವಿಗೆ ಕರಮೊಸೆದು ಗರ್ಭಶೋಧನೆಗೆಯ್ಯಲ್‌
ಭಾವವಿಶುದ್ಧಿಯೆ ಬಂದಿ
[ರ್ದಾ] ವಿಧದ ಮಹಾತ್ಮದಳ [ವದೇಂ]ಕೇವಳಮೇ ೧೦

ಅಂದೆ ತಗುಳ್ದಿಂದ್ರನ ಬೆಸ
ದಿಂದ [೦]ಬಹು ಕನಕವೃಷ್ಟಿ ಸುರಿತಪ್ಪುದುಮಂ
ಬಂದಮರಸಹಸ್ರಂ ಕಾ
ವಂದಮುಮಂ ಕಂಡುಮಾತನಂ ನೀನಿ[ೞಿ]ಪಾ ೧೧

ವ || ಅದಲ್ಲದೆಯಂ

ಉ || ಆತನ ಪುಟ್ಟಿದಂದೊಸೆದು ಬಂದಮರಪ್ರಭು ಕೆಯ್ಯನೆತ್ತಿ ತಾ
ನಾತನನೆತ್ತಿಕೊಂಡು ಸುರಹಸ್ತಿಯನೇಱಿಸಿಕೊಂಡು ಪೋಗಿ ಸ
ನ್ನೂತ ಸುರಾದ್ರಿಯಲ್ಲಿರಿಸಿ ಪಾಲಸಮುದ್ರದ ನೀರನೊಪ್ಪೆ[ತಾ
ನಾತ] ತಿಭಕ್ತಿಯಿಂ ಮಿಸಿಸೆ ನಿಂದಳವೇನಿದು ಮರ್ತ್ಯರಂದಮೇ ೧೨

ವ || ಇಂತು ಭುವನತ್ರಿತಯ ಸ್ವಾಮಿಯಪ್ಪಾತಂಗೆ ನೇಮಿನಾಥಂಗೆ ಬೆಸಕೆಯ್ದುದನೆಲ್ಲ ಪಡೆಯಲಕ್ಕುಮನೆ ಸತ್ಯಭಾಮೆ ಎನ್ನಾಣ್ಮನಳವು ಸಾಮಾನ್ಯಮೆ

ಕಂ || ಹರಿ ಪುಟ್ಟಿದಂತೆ ಕೇಳ್ದಱಿ
ದರಿ ಬೆಸಸೆ ಕೊಲಲ್ಕೆ ಬಂದ ದೇವತೆಗಳನೆ
ಣ್ಬರುಮಂ ಗೆಲ್ದೊಂದಳವುಂ
ಧರೆಯಱಿದೊಡಮತ್ತಮೇಕೆ ನೀಂ ಮೆಯ್ಯಱಿಯಾ ೧೩

ಉ || ಗೋಕುಳ ರಕ್ಷಣಕ್ಕಗಮನೆತ್ತಿದನದ್ಭುತ ಕಾ [ಳಿಮಾ]ಹಿಯಂ
ಪ್ರಾಕಟಮಾಗೆ ಕೊಂದನಹಿಶಯ್ಯೆಯನೇಱಿದನೇಱಿದನೇಱಿಸಿದ್ದನು
ಗ್ರಾಕರ ಶಾರ್ಙ್ಗಮಂ ನಯದಿನೊತ್ತಿದನೊಪ್ಪುವ ಪಾಂಚಜನ್ಯಮಂ
ಭೀಕರಮಿಂತು ವಿಷ್ಣುವೆ ಪರಾಕ್ರಮಮೆಂಬುದನೇನೊ ಕೇಳಿರೇ ೧೪

ಕಂ || ಸಂದಿರ್ದ ಮಲ್ಲರಂ ಗೆ
ಲ್ವಂದಮುಮಂ ನೆಗೞ್ದ ಕಂಸ ವಿಧ್ವಂಸನದೊಂ
ದಂದಮುಮಂ ಶಿಶುಪಾಲ[ದೊ]
ನಂದಮುಮಂ ಬಗೆವೊಡಿನ್ನುಮತಿಶಯಮೊಳವೇ ೧೫

ಮ || ಅಱಿಯಾ ಜಂಭವತೀ [ಸತೀಹರಣಮಾದಾದಂ]ದು ವಿಕ್ರಾಂತಮಂ
ಮಱೆದೋ ನೀನೆ ವಲಂ ಪ್ರಣೂತ ವಿಪುಳ ಶ್ರೀಮಜ್ಜಿನೇಂದುಜ್ಜನಂ
ತಱಿದುಗ್ರಾಜಿಯೊಳಿರ್ದುಕೊಂಡು ವಿಳಸಚ್ಚಕ್ರಾದಿ ರ[ತ್ನಂಗಳುಂ
ತಱಿಸಂದಾದಿ] ರವುಂ ತ್ರಿಖಂಡಧರೆಯಂ ತಾಳ್ದಿರ್ದ ಮಹಾತ್ಮ್ಯಮಂ ೧೬

ವ || ಅಂತಪ್ಪ ಚಕ್ರವರ್ತಿಯ ಮಹಾದೇವಿಯನಗಂ ಬೆಸನಂ ಪೇೞ್ದರೆಂಬುದೇನೆಂದೊಡನೆ ಧರಾಚಕ್ರದೊಳ್‌ ಚಕ್ರವರ್ತಿ ನಾರಾಯಣನಿಂ ಪ್ರತಾಪಿಯುಂ ಬಲ್ಲಾಳ್ಗಳುಮಿಲ್ಲೆಂಬುದಂ ನೀನಱಿವೆಯಲ್ಲಿಂದಗ್ಗಳಮಾನಱಿವೆನಾತನ ಸಾಹಸಂಗಳಂ ನೀನೀಗಳಾತನ ಸಾರೆಯಾಗಿ ಕೇಳಿಂ ನುಡಿವೆಯಾಗಿರುಳುಂ ಪಗಲುಮೊರ್ಮೆಯುಂ ಮಱೆಯದೆ ನೆನೆಯುತ್ತಂ ಪೊಗೞುತ್ತಮಿರ್ಪಂ ನಿಮ್ಮ ರಸನಳವುಮುಪಮಾತೀತ ಮಾದೊಡಂ ತ್ರಿಭುವನಸ್ವಾಮಿಯಪ್ಪ ನೇಮಿಕುಮಾರನ ಬೆಸನನುಲ್ಲಂಘಿಸಲ್ಕಾಗ[ದಿರೆಕೆಟ್ಟೆ]ನೆನೆಯುಂ ಮುಳಿದು ಪೋದಾಗಳ್‌ ಬನ್ನಿಂ ಪೋಪ ಮೆಂದು ನೇಮಿಕುಮಾರನುಂ ನಾರಾಯಣನುಂ ಕೆಯ್ಗೆಯ್ದು ಬನದಿಂ ಪೊಱಮಟ್ಟು ಬಂದು ಪೊೞಲಂ ಪೊಕ್ಕಿರ್ದಲ್ಲಿ ನೇಮಿಕುಮಾರನತ್ತಿಗೆಯ ಮಾತಿಂಗೇವಯ್ಸಿಯುಂ ಮಹಾಪುರುಷರಳವಂ ಸ್ತ್ರೀಜನಮೆಂತರಿವರೈ ಹಿತಕಾರ್ಯಂಗಳುಂ ಪ್ರತಾಪಂಗಳುಮಗ್ಗಳಮಾಗಿರ್ಪುವವನಿನಿಸಾನುಂ ತೋರ್ಪೆನೆಂಬ ಬಗೆಯೊಳಂತಿರ್ದಣ್ಣ ನಾಯುಧಶಾಲೆಯಂ ಪೊಕ್ಕು ಕಾಪಿನವರನೊಟ್ಟಯ್ಸಿ ದಿವ್ಯಾರ್ಚನೆಯಿಂದರ್ಚಿಸಿರ್ದ ನಾಗಶಯ್ಯೆಯನೇಱಿ ಪಟ್ಟಿರ್ದು ಶಾರ್ಙ್ಗೂಯುಧಮನೇಱಿಸಿ ಪಾಂಚಜನ್ಯಮನೊತ್ತಿದಾಗಳ್‌

ಚಂ || ಪಱಿದವು ಲಾಯಮಂ ತುರಗ ಸಂಕುಳಮೆತ್ತಿ ಪೊದಳ್ದ ಕಂಬಮಂ
ಮುಱಿದವು ದಂತಿಗಳ್‌ ಮಸಗಿತಬ್ಧಿ ನೆಲಂ ನಡುಗಿತ್ತು ಬೆರ್ಚಿ ಮೆ
ಯ್ಯಱಿಯದೆ ಕಾಂತರಂ ತಳೆದರಂಗನೆಯರ್‌ ಬಲದೇವನಹಳ್ಕಿ ಬೆ
ಳ್ಕುಱುವನಿತಾಗೆ ನಿಂದನತಿಕೋಪದೆ ಬಾಳೆೞಲಿರ್ದನಚ್ಯುತಂ ೧೭

ವ || ಅಂತಾ ಶಂಖಧ್ವನಿಗೆ ಪುರಕ್ಷೋಭಮಾದೊಡೆ ಕಾಪಿನಾಳ್ ಬಂದು ನಾರಾಯಣಂಗೆ ಬಿನ್ನಪಂಗೆಯ್ದುಮಿಗಳೆಮ್ಮ ಕಾಪನುರದೆ ನೇಮಿಕುಮಾರಂ ನಾಗಶಯ್ಯೆಯನೇಱಿ ಶಾರ್ಙ್ಗೂ ಯುಧಮನೇಱಿಸಿ ಪಾಂಚಜನ್ಯಮನೊತ್ತಿದನೆಂದಡೆ ಹರಿ ಕೇಳ್ದು ತೊಟ್ಟನೆ ಬೆಱಗಾಗಿ ಬೆಕ್ಕಸಂಬಟ್ಟು ಬಾಯೊಳ್‌ ಕೆಯ್ಯನಿಟ್ಟು ನೀಡುಮಿರ್ದು ತನ್ನೊಳಿಂತೆಂದು ಬಗೆಗುಂ

ಕಂ || ಆತನೆ ರಾಜ್ಯದ ಮೊದಲಿಗ
ನಾತನೆ ಕರಮಧಿಕನಪ್ಪ ಸಾಹಸಪುರುಷಂ
ಮಾತೇನೊ ರಾಜ್ಯಮೋಹಮ
ನಾತಂ ಬಗೆದಾಗಳಾಗದೆಂಬರುಮೊಳರೇ ೧೮

ವ || ಎಂದು ಪರಿಚ್ಛೇದಿಸಿ ಮನದೊಳುಳ್ಳುಜ್ಜುಗದಿನಂಜುತ್ತಿರ್ದೊಂದು ದೆವಸಂ ಕಾಳೆಗದ ಮಾ[ತಂ] ಕೇಳ್ದು ಸತ್ವಮುಳ್ಳವರಾರೆಂದು ನುಡಿಯುತ್ತಿರ್ದಾಗಳ್‌ ಭೀಮಂ ಬಲ್ಲಿದನೆನೆ ಕೆಲರ್ ಬಲದೇವಂ ಬಲ್ಲಿದನೆಂದೊಡೊರ್ವನಿಂತೆಂದಂ

ಕಂ || ವ್ಯೋಮಚರಸಮಿತಿ ನೆಱೆಯದು
ಭೂಮಿಚರರ್‌ ನೆಱೆವರೊಳಗೆ ಪೋರ್ಕುಳಿಯಾಡಲ್‌
ನೇಮಿಕುಮಾರನ ಸತ್ವಂ
ಸಾಮಾನ್ಯಮೆ ಬಗೆವೊಡೆಂತುಮುಪಮಾತೀತಂ ೧೯

ವ || ಎಂದೊಡೆ ಹರಿಯಾತನಂ ಕರೆಯಲಟ್ಟಿ ಬರಿಸಿ ನೀನೆ ಬಲ್ಲಿದನೆಂಬರ್‌ ನೇಮಿಕುಮಾರಂ ಬೊಟ್ಟುದೋಱಿಪಂ ಬಾಯೆಂದೊಡೆ ಕುಮಾರನಿಂತೆಂದಂ

ಕಂ || ಪೊಡವೀಶ ಬೊಟ್ಟುದೋಱಿಪ
ಪೊಡರ್ಪದೇಕಜ್ಜಮಂತುಮಿದಿರಪ್ಪಡಮೆ
ನ್ನೆಡಗೆಯ್ಯ ಕಿಱುಕುಣಿಕ್ಕೆಯ
ಮಡಿಯೊತ್ತಿರೆ ನೋೞ್ಪೆಮೆಂದು ನೀಡಿದ ಬೆರಲಂ ೨೦

ವ || ನಾರಾಯಣಂ ತನ್ನ ಪಿರಿದು ಕೆಯ್ಯೊಳ್‌ ಪಿಡಿದೊತ್ತಿದೊಡೆ ಬೊಟ್ಟನೊತ್ತಿದಂತಾದುದಿಲ್ಲ ತಾನೊಂದು ಕಡಿತಲೆವಟ್ಟುಮನೊತ್ತಿದಂತೇಂ ತನ್ನ ಕೆಯ್‌ ಚಳಿತು ಪತ್ತುವಿಟ್ಟು ಮೊಗಂಗೆಟ್ಟು ನಿಲೆ ಹರಿಯ ಮನದೇವಮನಱಿದು ಬಲದೇವನೆಂದನಿಂತಪ್ಪ ಮಹಾಸ್ವನಪ್ಪೊಡವುಟ್ಟ [ದ]ನಂ ನೀನೆ ಪಡೆದೆಯೈ ನಿನ್ನನ್ನರಾರ್‌ ಪುಣ್ಯವಂತರೆಂದಾಣಿಸಿ ನುಡಿದೊಡಂ ಕಿಱಿದಾನುಂ ಬೇಗದಿಂದೋಲಗಮಂ ಪರೆಯವೇೞ್ದು ತಾನುಂ ಬಲದೇ[ವ] ನುಮೇಕಾಂತಮಿರ್ದಂತಪ್ಪ ಬಲಗರ್ವಿತಂ ರಾಜ್ಯಮನಾಸೆವಟ್ಟಾಗಳೇಗೆಯ್ವೆಮೆನೆ ಬಲದೇವನಿಂತೆಂದಂ

ಕಂ || ಸ್ವರ್ಗಾವತರಣದಿಂ ಬೞಿ
ಸ್ವರ್ಗಕ್ಕೆಱೆಯಾತನೆಱಗಿ ಪೂಜಿಸಿ ಪೋದಂ
ಸ್ವರ್ಗಬರೆ ಕಾವರವರಪ
ವರ್ಗಶ್ರೀಯಲ್ಲದುೞಿದ ರಾಜ್ಯಮನೊಲ್ಲರ್‌ ೨೧

ವ || ಅದಱಿಂ ನೀನಿದಕ್ಕಿನಿಸು ನಿಶ್ಯಂಕಿತನಾಗಾತಂಗೆ ಸಂಸಾರವಿರಕ್ತಿಯಪ್ಪಂತು ಮಾಡಿದಪ್ಪೆನೆಂದೊಡಮಂತೆಗೆಯ್ಯಿಮೆಂದಲ್ಲಿಂದಮೆರ್ದು ಕೆಲವು ದೆವಸಂ ಬಲದೇವಸ್ವಾಮಿ ನೇಮಿಕುಮಾರಂಗೆ ಮದುವೆಯಂ ಮಾೞ್ಪಮೆಂದು ಸಮುದ್ರವಿಜಯಾದಿಗಳನೊಡಂ ಬಡಿಸಿದುಗ್ರಸೇನ ಮಹಾರಾಜನ ಮಕ್ಕಳಪ್ಪ ರಾಜೀವಮತಿಯೆಂಬಳ್ವೆರಸಯ್ನೂರ್ವರ್‌ ಕನ್ನೆಯರಂ ವಿವಾಹಕ್ಕೆ ಸಮಕಟ್ಟಿ ರತ್ನಮಯಮಪ್ಪ ವಿವಾಹಮಂಟಪಮಂ ಮಾಡಿಸಿ ತತ್ಸಮಿಪದೊಳೊಂದೆಡೆಯೊಳ್‌ ಪಿರಿದೊಂದು ಪಟ್ಟಿಯಂ ಮಾಡಿಯಲ್ಲಿಯೆನಿತಾನುಂ ಮೃಗದ ಪಿಂಡುಗಳಂ ತಂದು ಪುಗಿಸಿ ನಾರಾಯಣಂ ಬಂದುಪಚಾರಸ್ನೇಹದಿಂ ಕುಮಾರನಂ ವಿವಾಹಕ್ರಿಯೆಗೆಂತಾನುಮೊಡಂಬಡಿಸಿ ಮುತ್ತಿನ ಮಂಡವಿಗೆಯನೆತ್ತಿಸಿ ಕನಕ ಕಳಶಂಗಳಂ ನಿಲಿಸಿ ವಿಳಾಸಿನಿಯರ್ಕಳೆಲ್ಲರುಮಂ ಕೆಯ್ಗೆಯ್ದು ಬರಿಸಿ ಬುಧಜನಮೆಲ್ಲಮಂ ಬರಿಸಿ ಮಂಗಳಕಾರ್ಯ ಮಹಾವಿಭೂತಿಯಂ ಸಾಮಗ್ರಿಯಂಗೆಯ್ದು

ಕಂ || ಹರಿಪೂಜ್ಯನಪ್ಪ ನೇಮಿಗೆ
ಹರಿಕುಲತಿಲಕಂಗೆ ನೆಗೞ್ದ ಚಕ್ರಧರಂ ತಾಂ
ಹರಿ ಮದುವೆ ಮಾೞ್ಪೆನೆಂದಡೆ
ಪಿರಿದಾದೊಂದೊಸಗೆಯಳವನೇನಂ ಪೇೞ್ವೆಂ ೨೨

ವ || ಅಂತತಿಶಯಮಪ್ಪೊಸಗೆಯಂ ಮಾಡಿ ನೇಮಿಕುಮಾರನಂ ಕೆಯ್ಗೆಯ್ಸಿ ಪಟ್ಟವರ್ಧನಮನೇಱಿಸಿ ಛತ್ರ ಚಾಮರಾದಿ ರಾಜಚಿಹ್ನಂಗಳೆಸಗೆ ಮಂಗಳ ತೂರ್ಯರವ ಮೊಗೆಯೆ ಕನಕ ಕಳಶಂಗಳ್‌ ಮುಂದೆ ನಡೆಯೆ ಬಲದೇವ ವಾಸುದೇವ ಸಮುದ್ರವಿಜಯಾದಿಗಳ್‌ ಮುಂದಿಟ್ಟೊಡಗೊಂಡು ಮದವಳಿಗೆಯ ಮನೆಯೊಳ್‌ ಮದುವೆ ನೆಱಪುವೆನೆಂದು ಮಹಾವಿಭೂತಿಯಿಂ ಪೊಱಮಟ್ಟು ನಡೆವಾಗಳ್‌ ತಮ್ಮ ಮನೆಯ ಮುಂದಣ ಕೆಲದೊಳ್‌ ಪಿರಿಯ ಪಟ್ಟಿಯೆಲ್ಲಂ ತೀವಿಗೋೞುಮೇಳೆಂಬ ಮೃಗದ ಪಿಂಡಂ ನೇಮಿಕುಮಾರಂ ಕಂಡೀ ಮೃಗಸಮೂಹಮಿಲ್ಲಿಯೇಕಿ [ರ್ದುದೆಂ]ದು ಬೆಸಗೊಳೆ ಕೆಲದವರೆಂದರ್‌ ನಿಮ್ಮ ಮದುವೆಯ ಮಹಾಭೋಜನಕ್ರಿಯೆಗೆಂದು ಚಕ್ರವರ್ತಿ ತರಿಸಿದನೆಂದಡೆ ಕುಮಾರಂ ಭೋಂಕನಗಿದು ಕರೀಂದ್ರಮನುಗಿದು ನಿಱಿಸಿ

ಕಂ || ಎಂತೆಂತೊ ಪೇೞಿಮೀ ಮೃಗ
ಸಂತತಿಗಳ್‌ ಮದ್ವಿವಾಹ ಭೋಜನವಿಧಿಗೆಂ
ದಿಂತಿವು ಬಂದುದಱಿಂದಾ
ನಿಂತಲ್ಲದೆ ನರಕಗತಿಗೆ ಬೇಗಂ ಪೋ[ಪೆಂ] ೨೩

ವ || ಎಂದಾಗಳೆ ವೈರ್ಯಾಗಂ ಪುಟ್ಟಿ ನಿರ್ವೇಗಮುದಯಂಗೆಯ್ಯ ಪೆಱಗೆ ಬಪ್ಪ ಬಲದೇವಾದಿಗಳಂ ಮುಂದಣ್ಗೆ ಕರೆದಿಂತೆಂ

ಉ || ನಿಟ್ಟಿಸಲಾಗರ್ದಿದ ಮನುಜತ್ವದೊಳೀ ಮೃಗವೃಂದಮೆಲ್ಲಮಂ
ನೆಟ್ಟನೆ ಕೊಲ್ವ ಭೋಗದೆಡೆಗೊಲ್ಲೆನದಾದೊಡೆ ಸಲ್ಲೆನಿನ್ನವಂ
ಬಿಟ್ಟೊಡಮೊಲ್ಲೆನೆಂದೊಡದನಂತೆನವೇಡೆನೆ ಮತ್ತಮೆಂಗುಮೇಂ
ಮುಟ್ಟು [ವುದಂತ]ದಂ ಕಳೆದುಮುಣ್ಬರೆ ಸತ್ಪುರುಷರ್ಕಳಾದವರ್‌೨೪

ಕಂ || ಸಂಸಾರದ ಭೋಗಂ ಸ್ತ್ರೀ
ಸಂ[ಸಂ]ರ್ಗಮದಲ್ಲದೀಗಳಿಂ ತೆಱದ ಮಹಾ
ಹಿಂಸೆವಡೆದಂದಧೋಗತಿ
ಗಾಂ ಸಿಕ್ಕಿರದಿೞಿವೆನದಱಿನಿನ್ನಿವನುೞಿವೆಂ ೨೫

ಉ || ಇಂ ಪೆಱದೇನುಮೆನ್ನದಿರಿಮಾ ಮಹಿಮಾಕ್ರಿಯೆಯಿಂದಮಿಂತೆ ಮ
ತ್ತಾಂ ಪೊಱಮಟ್ಟು ಶ್ರೀಜಿನರ ಗೇಹದೊಳಿರ್ದು ತಪೋಭರಕ್ಕೆ ಮೆ
ಯ್ಯಾಂಪೆನಮೋಘಮಲ್ಲದೊಡೆ ಬಲ್ಲಿದವಪ್ಪಘಬಂಧಮೆಲ್ಲಮೆ
ನ್ನಿಂ ಪಱಿಪಟ್ಟು ಪೋಗ [ವ] ಪೋಗದೆ ಮೋಕ್ಷ ಮನೆಯ್ದಲಕ್ಕುಮೇ ೨೬

ವ || ಎಂಬ ಮಾತಿನ ಬಿಣ್ಪಂ ಕೇಳ್ದು ಬಲದೇವ ವಾಸುದೇವರ್‌ ಬೆಕ್ಕಸಂಬಟ್ಟರ್‌ ಸಮುದ್ರವಿಜಯಂ ಬೆಱಗಾದಂ ಶಿವದೇವಿ[ಯರ್‌] ಮೂರ್ಛೆವೋದರನ್ನೆಗಂ ಲೋಕಾಂತಿಕ ದೇವರ್‌ ಬಂದು ಆಕಾಶದೊಳಿರ್ದು ದೇವಲೋಕದ ನಮೇರು ಮಂದಾರ ಪಾರಿಜಾತ ಪು[ಷ್ಟಂ]ಗಳಂ ಪಾದಾಂಭೋಜದೊಳ್‌ ಸುರಿದಾಕಾಶದೊಳಿರ್ದು ನೇಮಿಕುಮಾರಾ ನೀನೊಳ್ಳಿತನೆ ಬಗೆದೈ ತೀರ್ಥಕರ ಪುಣ್ಯಮುದಯಂಗೆಯ್ದುದು ನಿಮಗೇವೇೞ್ದುದೆಂದನಿತಂ ನುಡಿದು ಶಿವದೇವಿಯರಂ ಮೂರ್ಚೆಯಿಂದೆಚ್ಚರಿಸಿ ನಿಮ್ಮ ಮಗಂ ತ್ರಿಭುವನಸ್ವಾಮಿಯಾಗಲಿರ್ಪನಲ್ಲನೀಗಳ್‌ ತಪಂಬಡದೆ ಮಾಣ್ಪನಲ್ಲಂ ನೀವಿನಿಸಿರ್ದೊಡಂಬಟ್ಟು ನೆಗೞಿಮೆಂದು ದೇವರ್‌ ಪೋದರಾಗಳ್‌ ನೇಮಿಕುಮಾರ ನಾನೆಯಿಂದಮಿೞಿದು ಮೃಗಂಗಳಂ ಬಿಡಿಸಿ ಮಗುೞ್ದು ಮನೆಗೆವಂ[ದೊ]ಸಗೆ ಮಂಟಪದೊಳಿರ್ದು ಮೆಯ್ಯುಂ ದ್ರವ್ಯಮುಂ ಕಳತ್ರ ಸಂಪರ್ಕಮುಮನಿತ್ಯಮೆಂಬುದಂ ಪೇೞ್ದು ತಾಂ ತ್ರಿಜ್ಞಾನಧಾರಿಯಾಗಿ ಪುಟ್ಟಿದನಪ್ಪುದಱಿಂ ತನ್ನ ಭವಾಂತರಮಂ ಬಲದೇವಾದಿಗಳ್ಗಂ ತಾಯಿಗಂ ತಂದೆಗಮಱಿಯೆ ಪೇೞ್ದು ಸಂಸಾರ ಸ್ಥಿತಿಯಂದಮನೊಳ್ಳಿತ್ತಱಿಪಿ ನೀಮೆನ್ನನಿಂ ಬಿಡಿಮಿದನೊಡಂಬಡಿಮೆಂದವರನೊಡಂಬಡಿಸಿ

ಕಂ || ಪರಿನಿಷ್ಕ್ರಮಣ ವಿಧಾನದ
ನಿರುಪಮ ಕಲ್ಯಾಣಮಂ ಚತುರ್ವಿಧ ದಿವಿಜೋ
ತ್ಕರಮೊಪ್ಪೆ ಮಾಡಲಂದಾ
ದರದಿಂ ಬಂದತ್ತು ವಿವಿಧ ವಿಭವ ಸಮೇತಂ ೨೭

ವ || ಬಂದು ದೇವರ್ಕಳೆ ಕೆಯ್ಕೊಂಡು ಕುಮಾರಂಗಭೀಷೇಕಂಗೆಯ್ದು ಮಂಗಳವಸದನಂಗೊಳಿಸಿ ರತ್ನಮಯಪ್ಪ ಸಿವಿಗೆಯ[ನೇಱಿ] ಮುನ್ನಂ ಜ್ಯೋತಿಷ್ಕದೇವರ್‌ ಪಾಡಿ ಕೊಂಡಾಡಿ ಆಕಾಶಕ್ಕೊಗೆದುಬರೆ ಬೞಿಯಂ ಕಲ್ಪವಾಸಿಗದೇವರವರ ಕೆಯ್ಯಿಂ ಕೊಂಡು ಪೊತ್ತು ಕೊಂಡುಜ್ಜಯಂತಗಿರಿಯನೆಯ್ದಿ ಗಿರಿಶಿಖರಶಿಲಾತಲದೊಳಿರಿಸಿ ಕುಮಾರನಂ ಪಸೆ[ಯು] ಮನುತ್ತರಾಭಿಮುಖಮಾಗಿರಿಸಿ ಪಂಚಮಹಾಶಬ್ದಂಗಳಂ ಬಾಜಿಸವೇೞ್ದುಂ ಬೞಿಯಂ ದೂ[ರಾಂತರದೊ]ಳಿರ್ದೋಲಗಿಸುತ್ತಿರೆ ಕುಮಾರಂ ವಸ್ತ್ರಾಭರಣಂಗಳಂ ಮೆಯ್ಯಿಂ ತೊಲಗಿಸಿ ಪೂರ್ವಾಭಿಮುಖದಿಂ ಪಲ್ಯಂಕಾಸನದೊಳಿರ್ದು ನಮಸ್ಸಿದ್ಧೇಭ್ಯಯೆಂದು ಪಂಚಮುಷ್ಟಿಯಿಂ ಕುಂತುಳಂಗಳಂ ಪಱಿಯೆ

ಕಂ || ಆಗಳ್‌ ದುಂದುಭಿಗಳ ರವ
ಮೋಗಡಿಸದೆ ನಭದೊಳೆಸೆದುವತಿಶಯದಿಂದಂ
ಪೂ[ಗ]ಳೆ ಸುರಿದತ್ತಂತತಿ
ರಾಗ [ದಿನ]ಮರರ್ಕಳಾಟ [ದಿಂ ಸಲೆಯಿ]ರ್ದರ್‌ ೨೮

ವ || ಇರ್ದಲ್ಲಿ ಸುರೇಂದ್ರನೆರ್ದು ರತ್ನಪಟಳದೊಳ್‌ ಕೇಶಪಾಶಮುನಿಟ್ಟು ಪಾಲ ಸಮುದ್ರದೊಳಿಕ್ಕಿಮೆಂದು ದೇವರ್ಕೆಯ್ಯೊಳ್‌ ಕೊಟ್ಟಟ್ಟಿ ದ್ರವ್ಯಭಾವಾರ್ಚನೆಗಳಿಂದರ್ಚಿಸಿ ಸ್ತುತಿಯಿಸಿ ದೇವನಿಕಾಯ ಸಹಿತಮಿಂದ್ರರ್‌ ತಮ್ಮಾ ವಾಸಕ್ಕೆ ಪೋದರ್‌ ಬಳಭದ್ರ ಕೇಶವಾದಿಗಳ್ ನೇಮಿಕುಮಾರಂ ನಿಚ್ಚಟನಾಗಿ ದೀಕ್ಷೆಗೊಂಡುದಕ್ಕೆ ಚೋದ್ಯಂಬಟ್ಟು ಪೂಜಿಸಿ ಪೊಡೆವಟ್ಟು ಮಗುೞ್ದು ಪೋದರಂದವರೊಡನೆ ಸಾಸಿರ್ವರರಸುಮಕ್ಕಳ್‌ ತಪಂಬಟ್ಟರಾತಂಗೆ ಕುಡಲೆಂದಿರ್ದ ರಾಜೀವಮತಿವೆರಸಯ್ನೂರ್ವರ್‌ ಕನ್ನೆಯರ್‌ ತಪಂಬಟ್ಟರಂತು ನೇಮಿನಾಥರ್‌ ಸಕಳ ವ್ರತಿಗಾಗಿ ದೀಕ್ಷೆಗೆಯ್ದು ನೇಮಿಯತಿವೆರಸು ಚರ್ಯಾಮಾರ್ಗಕೆಂದು ಬಂದು ಗಿರಿಶಿಖರದಿನಿೞಿದು ಗಿರಿನಗರಮಂ ಚರ್ಯಾಮಾರ್ಗದಿಂ ಪೊಕ್ಕಾಗಳದ ನಾಳ್ವವರದತ್ತರಾಜಂ ಕಂಡಿದಿರಂ ಬಂದೆಱಗಿ ತ್ರಿಕರಣಶುದ್ಧಿಯಿನನಿಬರುಮಂ ನಿಱಿಸಿದಾಗಳೆಲ್ಲರುಂ ಯಥೋಚಿತ ಕ್ರಮದಿನಾ ಹಾರಂಗೊಂಡಕ್ಷ ಯದಾನಮೆಂದು ಪರಸಿಮೆಂದರಾಗಳಾತನ ಮನೆಯ ಮುಂದೆ

ಕಂ || ಪಂಚಮಹಾವ್ರತ ಯತಿ ನಿಲೆ
ಸಂಚಿತ ಪುಣ್ಯಾಗಮಕ್ಕೆ ಮುನ್ನಮೆ ದಿವದಿಂ
ಸಂಚಕರಂ ಬರ್ಪಂತಿರೆ
ಪಂಚವಿಧಂ ರತ್ನರಾಶಿ ಸುರಿದತ್ತಾಗಳ್‌ ೨೯

ವ || ಭಟ್ಟಾರರ್‌ ಮತ್ತೆ ಪೋಗಿ ಉಜ್ಜಯಂತಗಿರಿಶಿಖರಶಿಲೆಯನೇಱಿ ಚಾತುರ್ಮಾಸ ಪ್ರತ್ಯಾಖ್ಯಾನಂಗೊಂಡಿರ್ದರ್‌ ವರದತ್ತರಾಜನುಂ ವೈರಾಗ್ಯಂ ಪುಟ್ಟೆ ಮಗಂಗೆ ರಾಜ್ಯಮಂ ಕೊಟ್ಟು ಪರಿಗ್ರಹದಿಂ ಪಱಿಪಟ್ಟು ಪೊಱಮಟ್ಟು ಬಂದು ನೇಮಿಭಟ್ಟಾರರಲ್ಲಿ ಸ[ಮ್ಯ]ತರಾಗಿರ್ದರ್‌ ನೇಮಿನಾಥರುಂ ಮುನ್ನಂ ಧರ್ಮಧ್ಯಾನೋಕ್ತರಾಗಿ ಬೞಿಯಂ ಶುಕ್ಲಧ್ಯಾನಧಾರಣ ಸಂಪೂರ್ಣತೆಯಿಂ

ಚಂ || ಘನತರ ಘಾತಿಕರ್ಮತಮಮೊರ್ಮೊದಲೋಡೆ ಮಹಾನುಭಾವದಿಂ
ದನುಪಮ ನೇಮಿನಾಥ ಇಪುಳೋದಯ ಪರ್ವತದೊಳ್‌ ವಿನೇಯ ಸ
ಜ್ಜನ ನಿಕರಾಂಬುಜಂಗಳಲರುತ್ತಿರೆ ಕೇವಳಬೋಧ ಸಪ್ಪುರ
ದ್ದಿನಕರಬಿಂಬಮಭ್ಯುದಯಮಾದುದಶೇಷ ಜಗತ್ರಯಸ್ತುತಂ ೩೦

ವ || ಅಂತು ನೇಮಿನಾಥಂಗೆ ಕೇವಲಜ್ಞಾನೋದಯಮಾದಾಗಳ್‌ ಚತುರ್ವಿಧ ದೇವನಿಕಾಯಮಾಸನಕಂಪದಿನಱಿದು ವಿಳಾಸದಿಂ ನೆರೆದು ಮೆಱೆದು ಬಂದಾಗಳಿಂದ್ರನ ಬೆಸದಿಂ ಧನದಂ ನಿರ್ಮಿಸಿದ ಸಮವಸರಣ ಭೂಮಿವಳಯಮಂ ಮಣಿಕನಕಮಯಮಾಗಿ ಸಮೆದತ್ತಲ್ಲಿ [ದೂರ್ಧ್ವ]ದೇಶ ಶ್ರೀಮಂಟಪಾಂತರ ತ್ರಿಪೀಠಾಗ್ರಸ್ಥಿತ ಸರ್ವತೋಭದ್ರ ಮಧ್ಯದೊಳಪ್ಪ ಮಹಾಪ್ರಾತಿಹಾರ್ಯ ಚತುಸ್ತ್ರಿಂಶದತಿಶಯ ಸಮೇತನಾಗಿ ಭಟ್ಟಾರಕರಿರೆ ವರದತ್ತಮುನಿಯುಂ [ಸರ್ವ]ರ್ಧಿ ಸಂಪನ್ನರಾಗಿ ಪ್ರಥಮಗಣಧರರಾದೊಂ ಸೌಧರ್ಮೇಂದ್ರನುಂ ದ್ವಾದಶಗಣದಿಂ ಬಳಸಿಯುಮಿರ್ದು ಪೂಜಿಸಿ ಪೊಗೞುತ್ತಂ ಕೇವಲ ಪೂಜಾಕಲ್ಯಾಣಮನಿಂತು ಮಾಡಿದಂ

ಕಂ || ದೇವಾದಿದೇವನಪ್ಪನ
ಕೇವಳಬೋಧೋದಯಂ ಪ್ರಸಿದ್ಧೋದಯಮಂ
ದೇವನಿಕಾಯ ಸಮೇತಂ
ದೇವೇಂದ್ರಂ ಮಾಡೆ ನೆಱೆಯೆ ಪೊಗೞ್ದನುಮೊಳನೇ ೩೧

ವ || ಅಂತು ನೇಮಿಭಟ್ಟಾರಂ ಕೇವಲಜ್ಞಾನೋದಯದಿಂ ತ್ರಿಭುವನಸ್ವಾಮಿಯಾಗಿರ್ದು ದೇವತೋದ್ಯಾನಕ್ಕೆ ಸಮವಸರಣಂ ಬಿಜಯಂಗೆಯ್ದುದಂ ವನಪಾಲಕಂ ಪೇಱೆ ನಾರಾಯಣಂ ಕೇಳ್ದು ಪೇೞ್ದವಂಗೆ ತುಷ್ಟಿದಾನಂಗೊಟ್ಟತ್ತಲೇೞಡಿಯಂ ನಡೆದೆಱಗಿ ವಂದನಾಭಕ್ಷಿಗೆ ಪೋಪಮೆಂದು ಸಾಱಲ್ವೇೞ್ದು ತನ್ನ ಸ್ತ್ರೀಜನಾದಿ ಸಮಸ್ತ ರಾಜಕುಮಾರಾಂತಃಪುರ ಪುರಜನ ಪರಿಜನ ಸಹಿತಮತಿಶಯ ವಿಳಾಸದಿಂ ಪೊಱಮಟ್ಟು ಪೋಗಿ ವಾಹನದಿಂದೞಿದು ಸಮವಸರಣ ಭೂಮಿಯನೆಯ್ದಿ ದೇವೇಂದ್ರ ನಿರ್ಮಿತಾತಿಶಯ ವಿಳಾಸಂಗಳಂ ನೋಡುತ್ತಮಂತೆಪೋಗಿ ಪೀಠಾಗ್ರಸ್ಥಿತ ಗಂಧಕುಟಿಪ್ರಾಸಾದಮಂ ಮೂಮೆ ಬಲಗೊಂಡು ಭಟ್ಟಾರಕರಭಿಮುಖದೊಳೆರ್ದು ಕರಕಮಳಮುಕುಳಾಳಂಕೃತನಾಗಿ ಮೆಯ್ಯನಿಕ್ಕಿ ಪೊಡೆವಟ್ಟಷ್ಟಾಂಗದರ್ಚನೆ ಯಿಂದರ್ಚಿಸಿ

ದಂಡಕ || ಜಯ ಸಕಳ ಜಗದ್ವಂದಿತಾಂಘ್ರಿದ್ವಯಾ ದುಷ್ಟಕರ್ಮಾಷ್ಟವಿದ್ವಿಷ್ಟನಾಶೀ ಗುಣಾನೀಕರತ್ನಪ್ರಭಾಶೀ ದಯಾಧರ್ಮತತ್ತ್ವೊಪದೇಶೀ ಭವನ್ಮಾರ್ಗಮಂ ಪೊರ್ದದಾಂ ಮುನ್ನೆಪಾಪಿಷ್ಟರಂ ದುಷ್ಟರಂ ಕಷ್ಟರಂ ಭ್ರಷ್ಟರಂ ದೇವರೆಂದಾಂ ಶರಣ್ಬೊಕ್ಕು ದುಶ್ಯಿಕ್ಷೆಯಂ ನಂಬಿ ದುಃಪಾಪಮಂ ತುಂಬಿ ದುಃಖಚ್ಚಿಗಾಧಾರಮಾಗಿರ್ದಧೋಲೋಕದೊಳ್‌ ಬಿರ್ದು ಬೆಳ್ಕುತ್ತೆ ನಾಂ ನಾರಕರ್ಕಂಡು ಬೆ [೦]ಕೊಂಡು ಪೋಪೋಗಲಿನ್ನೆತ್ತಪೋಪೈ ಮಹಾಪಾತಕಾ ಮುನ್ನೆ ನೀಂ ಪಾಣ್ಪನೈ ಬಂದಿರ್ದಳಪ್ಪೆಂದು ಸಂತಪ್ತ ಲೋಹಾಂಗನಾ ರೂಪಮಂ ಪತ್ತಿಸಿಟ್ಟಾಗಳಃಯೆಂದು ಮೆಯ್ಪೆಂದು ಪುಯ್ಯಲ್ಚೆ ಮತ್ತಂ ಕೆಲರ್‌ ಬಂದು ಮುಂಕಟ್ಟಿ ನೀಂ ಸೋಲ್ತೆಯೊಡ್ಡೆಂದು ಲೋಹದ್ರವಂಬೊಯ್ಯೆ ಸುಱ್ರೆಂದು ಬಾಯ್ಪೆಂದು ಕಣೆ ನಂದಿ ಸಾವೆಯ್ದುವಂತಾಗಿಯುಂ ಸಾಯದಿರ್ದೊಂಗೆ ನೀನಲ್ತೆ ಮುನ್ನ ಮೃಗವ್ರಾತಮಂಕೊಂಡು ಮಾಂಸಂಗಳಂ ತಿಂದು ಬಂದಾತನೈ ನಿನ್ನ ಖಂಡಂಗಳಂ ನೀನೆ ತಿನ್ನೆಂದು ಖಂಡಂಗಳಂ ಕೆತ್ತಿ ಬಾಯೊಳ್‌ ಕೂಡಿಟ್ಟು ಕನಲ್ವನ್ನೆಗಂ ಪುಣ್ಗಳೊಳೆ ಖಾರಮಂ ಪೂಸಿ ಮೆಯ್‌ ಬೇವಿನಂ ಕಾಸಿ ನೀನಿಂತು ಮುಂ [ಕೆ]ಟ್ಟೆಯಲ್ತೆ ಪಿಸುಣ್‌ ಪೇೞ್ದೆಯಲ್ತೆ ಕೊಲಲ್‌ ಪೇಸೆಯಲ್ತೆ ಗುಣಂಗೆಟ್ಟೆಯಲ್ತೆ ಕರಂ ಪಾಪಿಯಲ್ತೆ ಸತ್ತೆಯಣ್ಮೆಂದು ಬೆಂದೊತ್ತಿ ಕೊಂತಂಗಳಂ ಕುತ್ತಿ ಪಾದಂಗಳಂ ಮೆಟ್ಟಿ ಹಸ್ತಂಗ [ಳಂ] ಕಟ್ಟಿ ಗೂಂಟಂಗಳಿಂ ಬೆಟ್ಟಿ ಖಳ್ಗಂಗಳಿಂ ಪೋೞ್ದು ಹಸ್ತಂಗಳಿಂ ಸೀಳ್ದು ಕಂಡಂಗಳಿಂ ಸುಟ್ಟು ನಾರಾಚದಿಂದಿಟ್ಟು ನುರ್ಗಪ್ಪಿನಂ ಪೊಯ್ದು ಸಿಗ್ಗಪ್ಪಿನಂ ಪೊಯ್ದು ಶೈಳಾಗ್ರದತ್ತೊಯ್ದು ಮತ್ತಪ್ಪಿನಂನೂಂಕೆ ಬಂದಲ್ಲಿಯೊಡ್ಡಿರ್ದ ಶೂಲಂಗಳೊಳೆ ಚಕ್ರದೊಳೆ ಬಿರ್ದೌಡೆರ್ದುರ್ಚಿದಾಗಳ್‌ ಕನಲ್ದೇವೆ ನೋವೋವೆನುತ್ತಿರ್ದೊಂನಂ ದುಃಖದತ್ತಾರ್ದೆಂನಂ ಮತ್ತೆ ಬೆನ್ನಟ್ಟಿದಾಗಳ್‌ ಭಯಂಗೊಂಡು ಕಾೞ್ಕೊಂಡು ಕಾೞ್ಕಿಚ್ಚಿನೊಳ್‌ ಬಿರ್ದು ಸಂತಾಪಮಂ ಕೋಪಮಂ ಪಾಪಮಂ ಬೆರ್ಚಿ ಕಾಲಾಂತ್ಯದೊಳ್‌ ಬಂದು ತಿರ್ಯಗ್ಗತಿಸ್ಥಾನಂಗಳೊಳ್‌ ಪು[ಟ್ಟಿ]ಮತ್ತೆಯುಂ ಚುರ್ಚಿಯುಂ ಕರ್ಚಿಯುಂ ಕಟ್ಟಿಯುಂ ಮುಟ್ಟಿಯುಂ ಪೊಂಕೆಯುಂ ನೂಂಕೆಯುಂ ಮುಟ್ಟಿತ್ತೆಯುಂ ಕುತ್ತೆಯುಂ ಬರ್ದಿ ಸಂಕ್ಲೇಶಮಂ ಪೊರ್ದಿ ಬರ್ದ [೦]ತ್ಯ ದೊಳೆ ಮರ್ತ್ಯಲೊಕಕ್ಕೆ ವಂದಲ್ಲಿಯುಂ ದುಷ್ಟದೇಶಂಗಳೊಳ್‌ ಕಷ್ಟಗೋತ್ರಂಗಳೊಳ್‌ ಪುಟ್ಟಿದಾಗಳ್‌ ಮಹಾವ್ಯಾಧಿಯುಂ ತಾನು ಮೊದಲಾಗೆ ಮುನ್ನಾದ ಖೇದಮುಂ ಡಾಹಮುಂ ಮೋಹಮುಂ ಮೆಯ್ದಳುಂ ಪೊಯ್ದಳುಂ ಗುಲ್ಮಮುಂ ವಾತಮುಂ ಶ್ವಾಸಮುಂ ಖಾಸಮುಂ ಪೊರ್ದಿದಾಗಳ್‌ ಕರಂ ಪಿರಿದುಂ ಭಯಂಕರಂ ಬಾೞ್ವಲ್ಲಿಯುಂ ಕ್ಷು[ತ್ಪಿಪಾಸಾ]ಬಾಧೆಯಿಂದಂ ತೊೞಲ್ದೆಲ್ಲಿಯುಂ ಭೈಕ್ಷಮಂ ಪಡೆಯದೆಂಜಲ್ಗಳಂತಿಂದು [೦]ಕೀೞಿಲೊಳ್‌ ಪಟ್ಟುಂ ಕಣ್ಬಟ್ಟುಂ ನಾಣ್ಗೆಟ್ಟು ಮೆೞ್ಪಟ್ಟು ಬಾೞುತ್ತಮೆಂತಾನುಮಲ್ಪವ್ರತಂಗಳಿಂ ಕೂಡಿ ಸಾವೆ[ಯ್ದಿ]ದಿವ್ಯಾನ್ವಯಾ[ವಾ]ಸದೊಳ್‌ ಪುಟ್ಟಿಯುಂ ಕಿಲ್ಬಿಷಸ್ಥಾನಿಯಾಗಿರ್ದು ಕಿಂಕುರ್ವಾಣಂಗೆಯ್ದು ನಿಚ್ಚಂ ಮನೋದುಃಖದಿಂ ಸುಯ್ದು ಹಾ ಕಷ್ಟದಲ್ಲೀ ಯಂದಮೆಂದಂತೆ ಮತ್ತಂ ಮನುಷ್ಯಾಧರಾಂತಸ್ಥಾನದಾಗಳಾ ನೆತ್ತರೊಳ್‌ ಶುಕ್ಲದೊಳ್‌ ಶ್ಲೇಷ್ಮದೊಳ್‌ ವಾತದೊಳ್‌ ಪಿತ್ತದೊಳ್‌ ಮಾಂಸದೊಳ್‌ ಶಲ್ಯದೊಳ್‌ ಮಜ್ಜದೊಳ್‌ ಜಂತಿನೊಳ್‌ ಪೂೞ್ದಮೇದ್ಯಮಗಿರ್ಪುದಕ್ಕಂ ಕರಂ ಪೊಲ್ಲದಾನೊಲ್ಲೆನಿಂತಾದೊಡಿಂ ಬಲ್ಲೆನೆಂದಾಗಳೇಕೇಂದ್ರಿಯಾಕಾರದವರ್‌ ಪೊಕ್ಕನಂತರ ಭವಂಗಳೊಳ್‌ ತೊೞಲ್ತಂತಂತು ಮತ್ತಂ ಮನುಷ್ಯಾನ್ವಯಂಬೆತ್ತನೋ ನೋಡು ಸಯ್ಪಿಂ ಭವತ್ಪಾದಮಂ ಪೊರ್ದಲುಂ ಪೆತ್ತೆನಿಂ ಬರ್ದೆನಿನ್ನಂಜೆನಿಂ ಗೆಲ್ದೆನತ್ಯಂತ ಶೌರ್ಯಾನ್ವಿತಾ ಸುಪ್ರಸಿದ್ಧಾ ವಿಶುದ್ಧಾ ಮಹಾಶೌರ್ಯೋದಾರಿ ದುರಂತಾಪಹಾರಿ ಲಸದ್ಜ್ಞಾನಮೂರ್ತಿ ಜಗದೀಶ್ವರಕೀರ್ತಿ ಸುರೇಂದ್ರ ಪ್ರಾವಂದ್ಯ ಮುನೀಂದ್ರಾಭಿವಂದ್ಯ ಮದೀಯೋಗ್ರಕರ್ಮಾರಿಯಂ ಬೇಗದಿಂದಿಕ್ಕಿ ನೀನೆನ್ನನಿಂ ಮುಕ್ತಿಯೊಳ್‌ ಕೂಡು ದೇವಾ [ನಮಾಮಿ]ನೇಮಿನಾಥಾ ವಿನೂತಾ ಶರಣ್ಯಂ ಶರಣ್ಯಂ ನಮಸ್ತೇ ನಮಸ್ತೇ

ವ || ಎಂದಿಂತು ಸ್ತುತಿಯಿಸಿ ಗಣಧರದೇವರಂ ಬಂದಿಸಿ ಮುಂದೆ ಕುಳ್ಳಿರ್ದು ಧರ್ಮಮಂ ಕೇಳ್ದವಸರದೊಳ್‌ ರುಗ್ಮಿಣಿಮಹಾದೇವಿ ತನ್ನ ಭವಾಂತರಮಂ ಬೆಸಗೊಳೆ ಭಟ್ಟಾರರಿಂತೆಂದು ಪೇೞ್ದರ್‌

ಕಂ || ಶ್ರೀಪುರಮೆಂಬುದು ಪೊೞಲಂ
ಶ್ರೀಪತಿ ದುಷ್ಟಾಂತಕಾಖ್ಯನಾಳುತ್ತಿರೆ ಮ
ತ್ತಾ ಪೊೞಲೊಳಗಧ್ಯಯನಾ
ಧ್ಯಾಪನಪರ ಸೋಮಶರ್ಮನೆಂಬಂ ಪಾರ್ವಂ ೩೨

ವ || ಆತನ ಪಾರ್ವಂತಿ ಲಕ್ಷ್ಮೀಮತಿಯೆಂಬೊಳತ್ಯಂತ ರೂಪ ಯವ್ವನಾಳಂಕೃತೆಯಾಗಿರ್ಪಳಾಕೆಯುಮಾ ಪೊೞಲನಾಳ್ವರಸರ ಮಗಳ್‌ಶ್ರೀಮತಿಯೆಂಬಳತ್ಯಂತ ಸ್ನೇಹದಿಂ ಕೆಳೆಗೊಂಡತಿಪ್ರೀತಿಯಿಂದಮಿಕೆಯೊಂದು ದೆವಸಮಾ ಪಾರ್ವನ ಪೆಂಡತಿಯಪ್ಪ ಲಕ್ಷ್ಮೀ ಮತಿ ನಾಲ್ಕುನೀರ್ಮಿಂದು ಧವಳಪ್ರಸಾದನಾಳಂಕೃತೆಯಾಗಿ ತನ್ನ ಮನೆಯ ಮುಂದಿರ್ದ ಪಿರಿಯ ಕನ್ನಡಿಯಂ ನಿಱಿಸಿ ನೋೞ್ಪೂಗಳ್‌ ಚರ್ಯಾಮಾರ್ಗದಿಂ ಪುಗುತಂದರಂ

ರಗಳೆ || ಸುರಭಿಶರ ಸು[ರಾ]ಭಿಜಾತ ದಹನದೂರರಂ
ಪರೀಷಹರ್ತಾದಿರರಂ(?)
ಬರಿಗಳುರ್ಚಿಕೊಳಲ್‌ ಬರ್ಪುವೆನಿಪ ಕೃಶಶರೀರರಂ
ತಪಃಕ್ರಿಯಾತಿಶೂರರಂ
ಮಹಾವ್ರತೈಕವೀರರಂ
ಕರಮೆ ಜಿಂಜಿರಾಗಿ ಮರುಳ ರೂಪಿನೊಳ್‌ ಸಮಾನರಂ
ಕಳಂವೃತ್ತಹೀನರಂ
ದುರಿತವೈರಿನಾ[ಶ]ನಕ್ಕೆ ತಾಮತೀವ ಭೀಕರಂ
ಚರಿತ್ರಭಾರದಾಮರಂ
ಸಮಾಧಿಗುಪ್ತನಾಮರಂ(?)

ವ || ಕನ್ನಡಿಯೊಳ್‌ ಕಂಡು ಬೆರ್ಚಿ ಪೊಲ್ಲದಾಯ್ತೆಂದು ಮಂಗಳವಸದನಂಗೊಂಡು ಬೈಕಂಗುಳಿಯನಿನಿದಪ್ಪುದನುಯಿದುದೆಡೆದೆಮಿಯಾದೆ(?) ಬಸಿಱ್‌ ಬೆನ್ನೊಳ್‌ ಪತ್ತಿ ಬತ್ತಿ ಬಱಸಲಾದ ದೇಸಿಗನಂ ಕಂಡೆನಿಂತಪ್ಪವರನೇಕಿತ್ತ ಪುಗಲಿತ್ತರೆಂದು ಕಾಪಿನವರಂ[ಬಿ]ಡಿಸಿ ತಾನುಂ ಪಿರಿದಪ್ಪೇವಮಂ ಕೈಕೊಳ್ಳೆ ಪಾಪಂ ಬೆಂಕೊ[ಳ್ಳೆ]ಮನೆಯೊಳಗಂ ಪೊಕ್ಕಿರ್ದಳಿರ್ದು ಕೆಲವು ದೆವಸಕ್ಕೆ

ಕಂ || ಉಂಬರಕುಷ್ಠಂ ಮೂಡಿದೊ
ಡಿಂಬೞಿಯೆ ಮುರುಂಟಿ ಬಾತು ಕೀತೊಡದೆಲ್ಲಂ
[ಪಿಂಬ]ರಿದು ಪಡುಕೆನಾಱು
ತ್ತಂ ಬೇಗಂ ಪುೞಿದು ಕೊೞೆದು ನಮೆಯುತ್ತಿರ್ದಳ್‌ ೩೪

ವ || ಅಂತಿರೆ ಮನೆಯವರುಮಾಕೆಯಾಣ್ಮನು [೦]ನಿಚ್ಚ ನಿಚ್ಚಂ ಪೇಸಿ ಮೊಗಮಂ ಮುಚ್ಚಿ ಕೋಲನೂಂಕಿ ಬರ್ದುಕುತ್ತಮವುಂಕೆ ಸತ್ತಾ ಮನೆಯೊಳಿಲಿಯಾಗಿ ಪುಟ್ಟಿಯಾಕೆಯಾಣ್ಮನೆ ಬಡಿಯೆ ಸತ್ತು ಮತ್ತಮಲ್ಲಿ ಕೊೞೆವಾವಾಗಿ ಪುಟ್ಟಿದೊಡಾತನೆ ಕಂಡು ಸೊಪ್ಪುಗುಟ್ಟಿದೊಡೆ ಮಿಡುಮಿಡುಕಿ ಸತ್ತು ಬೆಳ್ಗತ್ತೆಯಾಗಿ ಪುಟ್ಟಿದಲ್ಲಿ ನಾಯಿ ತಿನೆ ಸತ್ತು ತುಱುಕಾಱರ ಮನೆಯೊಳ್‌ ನಾಯಾಗಿ ಮನೆಯೊಳಗೆ ಪಟ್ಟಲ್ಲಿಯೆ ಕಿಚ್ಚುಗೊಳೆ ಸತ್ತು ಜಗುನೆಯ ತಡಿಯೊಳಂಬಿಗರ ಬಸಿಱೊಳ್‌ ತುಂಬಿಗೆಯೆಂಬ ಪೆಸರಾಗಿ ಪುಟ್ಟಿ ಪೊಲ್ಲನಾರ್ಪುದಕ್ಕೆ ಪೇಸಿಯಲ್ಲಿಯವರಟ್ಟಿ ಕಳೆಯೆ ತೊಱೆಯ ತಡಿಗೆ ಪೋಗಿರ್ದಲ್ಲಿಯುಂ

ಕಂ || ಅಳುಕೆ ನೆಲವಕ್ಕೆ ತನು ಕಿಸು
ಗುಳನಾಱೆ ಕನಲ್ದು[ಕೆಕ್ಕಳಂ]ಗೊಳೆ ಪಂ [ಕಂ
ಗಳೊಳೞ್ದುಂ]ಮೆಯ್‌ ಸಲೆ ಕು
ಕ್ಕುಳಗುದಿ[ಯಿಂ]ಪೊಂದೆ ಚಿತ್ತಮಾ ತುಂಬಿಗೆಯಾ ೩೫

ಮ || ಬಿಸಿಲೊಳ್‌ ನೊಂದು [ತ]ಗುಳ್ದು ಕೊಳ್ವ ಮೞೆಯೊಳ್‌ ತಾಂ ನಾಂದು ಪೆರ್ಗಾಳಿಯೊಳ್‌
ಕುಸಿದಾಸತ್ತು ನಿರಾಸೆಯಾಗಿ ಮನದೊಳ್‌ ಬೇಸತ್ತು ನಿಚ್ಚಂ ಕರಂ
ಪಡಿಸಿವೊಟ್ಟಯ್ಸೆ ಕನಲ್ದು ಪೆರ್ಚಿ ಮಱುಕಂ ಮೆಯ್‌ ಜೋಲ್ದು ಕಣ್ಬಿಟ್ಟು ಚಿಂ
ತಿಸುತ್ತಂ ಬರ್ದುಗುಮೇಂ ತಗುಳ್ದಲೆದುದೋ ದುಷ್ಕರ್ಮಮಾ ಕಾಂತೆಯಾ ೩೬

ವ || ಪಿಂತಿರ್ದಲ್ಲಿ ಪಿರಿದು ಜಾಲಮಂ ಬೀಸಿಕೊಂಡು ಮೀನಂ ತಿಂದೊಡಂ ಪಸಿವುಪೋಗದೆ ಕಣ್ಮನಂಬುಗುವಾಗೆ ಬರ್ದಿ ಬಾೞಿತ್ತಿರೆ [ತ್ತಾನು ಮಲ್ಲಿಗೆ] ಮುನ್ನೆ ಪೇೞ್ದ ಸಮಾಧಿಗುಪ್ತಮುನಿಯರ್‌ ಬಂದು ನೇಸಱ್‌ಪಟ್ಟುದೆಂದು ರಾತ್ರಿ ಪ್ರತಿಮಾಯೋಗದೊಳ್‌ ನಿಂದು ಬಂದುದನಾಕೆ ಕಂಡಿವರುಮೆನ್ನಂತೆ ಬಡವರುಂ ದೇಸಿಗರುಮೆಂದು ತನ್ನಳಿಪಿನೊಳ್‌ ಮಱೆವುಗುವಂತೆ ಪಱಿದ ಪಱುಗುಲಂ ತಂದು ಗಾಳಿಗೆ ಮಱೆವೊಡ್ಡಿ ತನ್ನ ಕರ್ಮದ ದುಃಖಕ್ಕೆ ತೊವಲೊಂದಂತೆ ತೊವಲೊಂದವರಂ ಕಡಿವ ಗುಂಗುಱುಮಂ ಚಿಕ್ಕಡುಮಂ ಸೋವುತ್ತಿರ್ದವರ್‌ ಕೆಯ್ಯನೆತ್ತಿಕೊಂಡಾಗಳೆನ್ನಧೋಗತಿಯಿಂದಮೆತ್ತಿಮೆಂಬಂತೆ ಕೆಯ್ಯಂ ಮುಗಿದು ಮೆಯ್ಯನಿಕ್ಕಿದಾಗಳ್‌ ಭಟ್ಟಾರರವಧಿಜ್ಞಾನ [ದಿನವ್ವಾ] ನಿನ್ನ ಮುನ್ನಿ ನೇೞನೆಯಭವದಲಟ್ಟಿಮಱೆಯಲಾಗ ಬಗೆದೆಮ್ಮು ಮನಱಿಯವೇೞ್ವಡೆ ಪೇೞೆನೆ ತೊಟ್ಟನೆ ಜಾತಿಸ್ಮರೆಯಾಗಿ ಕುಳ್ಳಿರ್ದುಕೆಯ್ಯಂ ಮುಗಿದಿಂತೆಂದಳ್‌

ಶಾ || ಮುನ್ನಾಂ ನಿಮ್ಮ ನೆಳ[ಳ್ದೆ ಪೇ]ಸಿ ಮಗುೞ್ದಾ ಕಾಣುತ್ತೆ ಮೆಯ್ವೆರ್ಚಿ ಬಂ
ದೆನ್ನಾನಾವಿಧದಿಂದಮಂದಿನ ಮಹಾಪಾಪಂ ಕರಂ ಪೆರ್ಚಿ ತ
ಳ್ತೆನ್ನಂ ದುರ್ಗತಿಗೊಯ್ಯೆ ನೊಂದೆನದುರ್ವೀ ದುಃಖಾಗ್ನಿಯೊಳ್‌ ಬೆಂದೆನಾಂ
ಮನ್ನಿಪ್ಪೆಂ ಮುನಿನಾಥ ನಿಮ್ಮ ನಱೆದೆಂ ಬೆ [ಳ್ಕು] ತ್ತೆ ನಾಂ ಬೆರ್ಚಿದೆಂ ೩೭

ವ || ಎನೆ ತುಂಬಿಗೆಗೆ ಪಾಪಂ ಪೋಗೆ ತಮಗೆ ಕರುಣಾರಸಮಾಗೆ ಭಟ್ಟಾರರಿಂತೆಂದರ್‌

ಕಂ || ಕೊಲ್ಲದೆ ಜೀವಂಗಳನಣ
ಮೊಲ್ಲದೆ ಪುಸಿ ಕಳವು ಶೌಚಮೆಂಬಿವನಳಿಪಿಂ
ಗಲ್ಲದೆ ದುರ್ಬುದ್ಧಿಗಳಂ
ಕಲ್ಲದೆ ನೆಗೞ್ದಂದು ಪುಣ್ಯಮಕ್ಕುಂ ಮಗಳೇ ೩೮

ದೇವಂ ನಿರ್ದೋಷಿಯೆ ತಪ
ಮಾವೆಡೆಯೊಳಮಳಿಪದಿರವೆ ಧರ್ಮಂ ಪೆಱದೇ
ನೋವುವುದೆ ಜೀವರಾಶಿಯ
ನೀ ವಿಧಿಯನೆ ನಂಬಿ ನೆಗೞುತಿರ್ಪುದು ಮಗಳೇ ೩೯

ತಾನೆಂತು ತನ್ನ ನೋವಿಂ
ಗೆಂತುಮೊಡಂಬಡುವನಲ್ಲನಂತಿರೆ ನೋವಂ
ನಾನಾ ವಿಧದಿಂ ಜೀವಗ
ಳೇನೊಂದಂದದೊಳಮಾಗಿಸಲ್ಗಡ ಮಗಳೇ (?) ೪೦

ಸೊಕ್ಕದಿರರ್ಥದ ಮದದಿಂ
ದುಕ್ಕದಿನಧಿನಾಥನೊತ್ತೆಯಣ್ಮುವ ಪದದೊಳ್‌
ಸುಕ್ಕದಿರು ನೆಟ್ಟನೆಂತುಂ
ಸಿಕ್ಕದಿರತಿಮೋಹಪಾಶದೊಳ್‌ ನೀಂ ಮಗಳೇ ೪೧

ಅೞಲದಿರೆಡರೆಡೆಯೊಳ್‌ ನೀಂ
ತೊೞಲದಿರಿಂಬಿಲ್ಲದೆಡೆಗೆ ಧರ್ಮಕ್ಕೆಂತುಂ
ಬೞಲದಿರು ತೊಱೆದ ಕಾಲದೊ
ಳೆೞಲದೆ ರತಿಶುದ್ಧಚಿತ್ತಮಪ್ಪುದು ಮಗಳೇ ೪೨

ಮಾಯಾಮನುೞಿದುಂ ಧರ್ಮಾ
ಮ್ನಾಯಮನಣಮುೞಿಯಲಾವ ಪದದೊಳಮೆಂತುಂ
ನ್ಯಾಯದೊಳೆ ನೆಗೞುಗುಂ [ಸು]ಗ
ತಿಯನೀಯಂದದೊಳೆ ಪಡೆದು ಸುಖ [ಮಿರು]ಮಗಳೇ ೪೩

ಸಲಿಪನಿತೆ ಕೈಕೊಳ್ವುದು
ಸಲಿಸಲ್‌ ನೆಱೆಯದುದನೆತ್ತಿಕೊಳ್ಳದಿರದ ನೀ
ತೊಲಗಿಸದಿರ್‌ ಮನದಿಂದಂ
ಸಲಿಸಂತಮನೆಯ್ದೆ ಕೊಂಡ ಗುಣಮಂ ಮಗಳೇ ೪೪

ವ || ಎಂದು ಧರ್ಮದೋಜೆಯಂ [ಕೇ]ಳ್ದು ಶ್ರಾವಕವ್ರತಂಗಳನೇಱಿಸಿ ನೀನಿಂತೆಮ್ಮ ಪೇೞ್ದ ತೆಱದೊಳ್‌ ವ್ರತೋಪಾಸಂಗಳೊಳ್‌ ನೆಗೞೆ ನಿನ್ನ ಪಾಪಬಂಧಮುಂ ಮೆಯ್ಯ ದುರ್ಗಂಧಮುಂ ಕಿಡುಗುಮದಱಿಂ ನೀಂ ಪೋಗಿ ರಾಜಗೃಹದೊಳ್‌ ಸುಂದರಿಯೆಂಬ [ಜ್ಜಿ] ಕೆಯರಂ ಸಾರ್ದಿದುð ಮೆಯ್ಯಂ ತವೆ ಭಾವಿಸುತಿರ್‌ ನಿನ್ನ ಲಕ್ಷ್ಮೀಮತಿ ಯಪ್ಪಂದಿನ ಕೆಳದಿ ಶ್ರೀಮತಿಯೆಂಬೊಳರಸುಮಗಳೀಗಳ್‌ ಜಿನಮಹಾಮಹಿಮೆಯಂ ಮಾಡಿದಪ್ಪೊಳಾಕೆಯು [ಮಾ]ರ್ಯಕೀಗಣದೊಡನೆವೋಗಿ ನೋಡಲ್‌ ಬಡವೆಯೆಂದು ಭಟ್ಟಾರರ್‌ ಪೋದರಂಬಿಗರ [ತುಂಬಿ] ಗೆಯುಂ ಮೆಲ್ಲಮೆಲ್ಲನೆ ರಾಜಗೃಹಕ್ಕೆ ಪೋಗಿ ವಸುಂಧರಾ[ಜ್ಜಿ]ಕೆಯರಂ ಸಾರ್ದಿರ್ದು ಪರೀಷಹದಿಂ ಮೆಯ್ಯಂ ದ[೦]ಡಿಸುತ್ತಮಿರ್ದಳಿತ್ತ ಕೆಲವು ದೆವಸದಿಂ ಶ್ರೀಮತಿ ಮಾಡುವಷ್ಟಾಹ್ನಿಕ ಮಹಿಮೆಗೆ ಸಮಾಧಿಗುಪ್ತ ವರದತ್ತ ಭಟ್ಟಾರರ್‌ ಮೊದಲಾಗೆ ಚಾತುರ್ವರ್ಣ ಶ್ರವಣಸಂಘಮೆಲ್ಲಂ ನೆರೆದಲ್ಲಿ ತುಂಬಿಗೆಯುಮಾ ಕಂತಿಯರೊಡನೆ ಬಂದಿರ್ದಲ್ಲಿ ಕಂತಿಯರೆಂದರ್‌ ಮಗಳೆ ನಿನಗೆ ಮುನ್ನೊಂದು ಭವದೊಳೀ ಮಹಿಮೆಯಂ ಮಾಡುವೀ ಶ್ರೀಮತಿಯೆ ಕೆಳದಿಯೆಂದು ಭಟ್ಟಾರರ್ವೆಸಸಿದರಪ್ಪಡೆ ನಿನ್ನನೊಯ್ದು ಕಾಣಿಸುವೆಮೇ ಪೇೞೆಂದೊಡೆ ತುಂಬಿ ಕೆಯ್ಯಂ ಮುಗಿದಿಂತೆಂದಳ್‌

ಉ || ಅಂದಿನ ಪುಣ್ಯದೊಳ್‌ ನೃಪತನೂಜೆಯೊಳಾಂ ಕೆಳೆಗೊಂಡ ಪೆಂಪಿನೊಂ
ದಂದಮುಮಂ ಸುಧರ್ಮದನುಬಂಧಮುಮಂ ಕಿಡೆ ತಮ್ಮ ನೀಂದ್ರರಂ
ನಿಂದಿಸಿ ದುಃಖದೊಳ್‌ ಮುಳಿಸಿದಂಗೆನಗಾವಱಿವಾವ ಪೆಂಪದೇ
ನಂದದೊಳೇಂ ಮೊಗಂಬೆರಸು ಕಾಣ್ಬೆನೊ ಸನ್ನುತ ರಾಜಪುತ್ರಿಯಂ ೪೫

ವ || ಎಂದದುವೆ ನಿರ್ವೇಗಮಾಗಿ ಮೆಯ್ಯುಮಾಯುಮೊಡನೆ ತಪ್ಪುದಿನ್ನೆನಗೆ ಸಂನ್ಯಸನ ಪ್ರತ್ಯಾಖ್ಯಾನಮಂ ದಯೆಗೆಯ್ಯಿಮೆಂದೊಡಂಬಡಿಸಿಕೊಂಡೊಂದು ಗುಹೆಯಂ ಪೊಕ್ಕು ನೋನುತ್ತಿರ್ದಳದಂ ಸಮಾಧಿಗುಪ್ತ ಮುನೀಂದ್ರರ್‌ ಕೇಳ್ದು ಶ್ರೀಮತಿಗಱಿಯೆ ಪೇೞ್ದೊಡಗೊಂಡು ಬಂದಾ ಗುಹೆಯಂ ಪೊಕ್ಕಾಗಳಾಕೆ ಭಟ್ಟಾರಕರ್ಗೆಱಗಿ ಪೊಡೆವಟ್ಟಿರ್ದಲ್ಲಿ ಇರ್ಬರುಮೊರ್ವ ರೊರ್ವರಂ ನೋಡಿ ಮನ್ಯುಮಿಕ್ಕುಮಱಿವಿನೊಳ್‌ ಸೈರಿಸಿ ಪಾಪದ ಫಲಮಿಂತುಟು ನೋಡೆಂದು ನುಡಿದಿರಿಂತಪ್ಪ ಗುರುಗಳ್ಗಮಿಂತಪ್ಪ ಧರ್ಮಮುಮಂಪಡೆದೆಯೊಳ್ಳಿತ್ತಾಯ್ತೆಂದರ್ಚನೆಯಂ ತರಿಸಿ ಭಟ್ಟಾರರ ವಕ್ಖಣೆಯಂ ಕೇಳ್ದು ಪೇೞಿಮವರ್ಗೆ ಪರಿಯಷ್ಟಿಗೆಯ್ಯಲಜ್ಜಿ[ಕೆ]ಯರ್ಕಳಂ ಪೇೞ್ದವರ್‌ ಪೋದರಂತು ಅಂಬಿಗರ ತುಂಬಿಗೆ ಮಹಾಮಹಿಮೆಯೊಳ್‌ ನೋಂತು ಸಮಾಧಿ ಕೂಡಿ ಮುಡಿಪಿ ದೇವ ಲೋಕದೊಳೆ ಪಳಿತೋಪಮಾಯುಷ್ಯಸ್ಥಿತಿಯೊಳಾಗಿ ಮಣಿಚೂಳೆಯೆಂಬ ದೇವಿಯಾಗಿ ಪುಟ್ಟಿ ದಿವ್ಯಸುಖಮನುಂಡಲ್ಲಿಂ ಬಂದು ವಿದರ್ಭರಾಜಂಗೆ ಪುಟ್ಟಿಬಂದೀಗಳೀ ಚಕ್ರಿಗೆ ರುಗ್ಮಿಣಿ ಮಹಾದೇವಿಯಾಗಿರ್ದಿರಬ್ಬ ನೀವೆಂದು ಭಟ್ಟಾರರ್‌ ಪೇೞೆ ಕೇಳ್ದು ಬೞಿಯಂ ಬಲದೇವಂ ಕೆಯ್ಯಂ ಮುಗಿದಿಂತೆಂದಂ

ಕಂ || ಸುರಪತಿ ಮಾಡಿದನಂಬುಧಿ
ಪರಿವೇಷ್ಟಿತ ಪುರಮನಾಳ್ವ ನೃಪನುಂ ಚಕ್ರೇ
ಶ್ವರ ನಿನ್ನಿಂದಂ ನಿಲ್ಕುಮೊ
ಪರವಶದಿಂ ನಿಲ್ಕುಮೋ ಮುನೀಶ್ವರ ಬೆಸಸಿಂ ೪೬

ವ || ಎನೆ ಭಟ್ಟಾರರಿಂತೆಂದ[ರ್‌] ಪನ್ನೆರಡು ವರ್ಷದಂದಿಂಗೆ ಕಳ್ಳಿಂದಂ ದೀಪಾಯನ ಕುಮಾರನಿಂದಂ ದ್ವಾರಾಮತಿ ಬೆಂದು ಕಿಡುಗುಂ ನೀನುಂ ಚಕ್ರಿಯಮಿರ್ವರುಂ ಬರ್ದುಂಕಿ ಪೊಱಮಡುವಿರ್‌ ಜರತ್ಕುಮಾರ[೦] ನಚ್ಚುವಂಬಿನೊಳಾತನೆಸೆಯೆ ಚಕ್ರಿ ಸಾಗುಮೆನೆ ಬಲದೇವಂ ಬೆಕ್ಕಸಮಾಗಿ ನಿರ್ವೇಗಂ ಪುಟ್ಟಿಯುಂ ಸಹೋದರ ಸ್ನೇಹದೊಳಂ ಚಕ್ರಿಯಂ ಮುನ್ನಮಗಲಲಾಱದೆ ಮಾಣ್ದಂ ಸಮುದ್ರವಿಜಯನುಂ ವಸುದೇವಾದಿ ಸೋದರರುಂ ಪೆಱರುಂ ವಯೋವೃದ್ಧ ರಾಜೇಶ್ವರರೊಡನಾಗಳೆ ದೀಕ್ಷೆಯಂ ಕೈಕೊಂಡರ್‌ ಬಲದೇವ ವಾಸುದೇವಾ ದಿಗಳ್‌ ಭಟ್ಟಾರರಂ ಬಂದಿಸಿ ಸಮವಶ್ರುತಿಯಂ ಪೊಱಮಟ್ಟು ಬಂದು ಪೊೞಲಂ ಪೊಕ್ಕಿರ್ದಲ್ಲಿ ದೀಪಾಯನಕುಮಾರನೆಂಗುಮೆನ್ನಿಂ ಕಿಡುಗುಮಪ್ಪೊಡಾನದನಾಗಲೀಯೆನೆಂದು ಪರಿಚ್ಛೇದಿಸಿ ತಪಂಬಟ್ಟು ಪೊೞಲಿಂ ಪೋದಂ ಮುನಿವಚನಮಂ ಪುಸಿಮಾಡುವೆನೆಂದು ಜರತ್ಕುಮಾರಂ ತನ್ನ ನಚ್ಚುವಂಬೆಲ್ಲಮನೆಲ್ಲರ್ಗಂ ತೋಱಿ ನೋಡೆ ನೋಡೆ ಸಮುದ್ರದೊಳಗೀಡಾಡಿ ತಾನುಂ ಪೊಱಮಟ್ಟು ಪೋಗಿ ಮಹಾರಣ್ಯಮಂ ಪೊಕ್ಕ ಪ್ರತ್ಯಕ್ಷದೊಳಂತು ಸರ್ವಜ್ಞಂ ಪೇೞ್ದೊಡಂ ವಿಷ್ಣು ಮೋಹನೀಯಶಕ್ತಿಯ ವಶದಿಂದ ಮಱೆದು ಸಂಸಾರಮೋಹದೊಳ್‌ ಪೊಱಲೊಳುಳ್ಳ ಕಳ್ಳೆಲ್ಲಮಂ ನಿರವಶೇಷಮೊಯ್ದಡವಿಯೊಳಂ ಬೆಟ್ಟುಗಳೊಳಂ ಪೊಯ್ಸಿ

ಶಾ || ಆದೇಶಸ್ಥಿತಿ ಕಾರಣಂಗಳನಡುರ್ತಾದೇಶದಿಂ ತೂಳ್ದು ಪೇ
ೞ್ದೂದೇಶಂ ಪುಸಿಯಕ್ಕುಮೆಂಬ ಬಗೆಯಿಂ ಚಕ್ರಾಯುಧಂ ಚಿತ್ತಸಂ
ಹ್ಲಾದಂ ಕ್ಯಮಿಗೆ ಬಂಧುವರ್ಗ ಸಹಿತಂ ಸಂಸಾರಮಂ ನಿತ್ಯಮೆಂ
ದಾದಂ ಸಂತಸದಿಂದಮಿರ್ದೆನಖೀಳಶ್ರೀಕಾಮಿನೀವಲ್ಲಭಂ ೪೭

ಗದ್ಯ || ಇದರ್ಹತ್ಸರ್ವಜ್ಞ ಪಾದಪದ್ಮವಿರಾಜಿತೋತ್ತಮಾಂಗ ಶ್ರೀ ಬಂಧುವರ್ಮ ನಿರ್ಮಿತಮಪ್ಪ ಹರಿವಂಶಾಭ್ಯುದಯದೊಳ್ ನೇಮಿಕುಮಾರ ಪರಿನಿಃಕ್ರಮಣ ವರ್ಣನಂ

ತ್ರಯೋದಶಾಶ್ವಾಸಂ