ಕಂ || ಮದ್ವಸಂತತಿಳಕಾಂಗನೆಯೊಳ್
ನೆರೆದಿಂತು ಚಾರುದತ್ತಂ ಸುಖಮಿರ್ಪಿನಮಾ
ಕಾಂತೆಯ ತಾಯಿ ಸೊಂಬಿನೊ
ಳಿರ್ದಪನಿಂತೀತನೆಂಬ ಬಗೆ ಪುಗೆ ಮನದೊಳ್ (?) ೧

ವ || ವಸಂತತಿಳಕೆಯ ತಾಯ್[ಕ]ರಮುಮ್ಮಳಿಸಿರ್ದುೞಿಯೆವೇೞ್ದಟ್ಟುವೊಡೆ ಮಗಳೊಡಂಬಡಲ್ ಬೇಱೆಯಾದುೞಿದಟ್ಟುವಡಮಾತನನಗಲಲೀಯಳೇಗೆಯ್ವೆನೆಂದು ಮಱುಕಂ ಪೆರ್ಚಿ ಮನದಭಿಮಾನಂ ಬಿರ್ಚಿ ಸೈರಿಸದೆ ನಯದಿನಾತಂ ಪೇೞ್ದಡಂತಾತನ ತಾ[ಯಿರ್ದ]ಲ್ಲಿಗೆ ನಿಚ್ಚಮಿವರಿರ್ವರ ಭೋಗಕ್ಕಂ ಮನೆಯ ಬೀಯಕ್ಕಂ ಸಾಸಿರ ಗದ್ಯಾಣಂ ಬೇೞ್ಕೆಂದಟ್ಟಿ ತರಿಸಿಕೊಳ್ಗುಂ ಮತ್ತಂ ಪರ್ವಮೊಸಗೆಯೆಂದು ವಿಶೇಷಮಾಗಿ ತರಿಸುಗುಮಂತಾಱುವರ್ಷದಂದಿಗೆ ಪದಿನಾಱುಕೋಟಿ ದ್ರವ್ಯಂ ತಪ್ಪದಂತು ಭಾನುದತ್ತಸೆಟ್ಟಿಯರಱಿದು ಪೆಂಡಿರ ಬುದ್ಧಿಗಿದು ಪಿರಿದಲ್ಲಾದೊಡೇನಾಚನ ಪ್ರಾಣಕ್ಕೆ ಮುಟ್ಟೆವರಿದಂದಿನ ಪರಿಭವಮಂ ಕಾಣಲಾಱೆನೆಂದು ನಿರ್ವೇಗದಿಂ ಜಿನಾಲಯದತ್ತಲ್ ಪೋಗಿ

ಕಂ || ತಱಿಸಂ[ದು] ಪತ್ತಿನಿಂದಿ
ತ್ತೆಱದ ಪರಿಗ್ರಹದ ತಳ್ತ ತೊಡರಂ ಮುಂದಂ
ಪಱಿದು ತಲೆವಱಿದು ಕ್ರಿಯೆಗಳ
ನಱಿದು ತಪೋಯೋಗಿಯಾಗಿ ಸುಖದಿಂದಿರ್ದಂ ೨

ವ || ಭಾನುದತ್ತಸೆಟ್ಟಿ ದೀಕ್ಷೆಗೊಂಡನೆಂಬ ಬುದ್ಧಿಯಂ ದೇವಿಲೆ ಕೇಳ್ದು ಪಿರಿದುಂ ಜಿನಮಹಿಮೆಯಂ ಮಾಡಿ ಮಗನ ಮೋಹದೊಳ್ ಮನೆಯೊಳಿರ್ದು ಮಗನ ಚಿತ್ತಾಭಿಘಾತವಾಗದಂತು ಬೀಯಕ್ಕೆನಿತನಾದೊಡಂ ಮಾರ್ಕೊಳ್ಳದೆ ಕುಡುತ್ತಮಿರ್ದು ಬಂದವರನಾತನವಸ್ಥಾಂತರಮಂ ಬೆಸಗೊಳ್ವಾಗಳವರಿಂತೆಂಬರ್

ಕಂ || ರತಿಯುಂ ಕಾಮನುಮೆಂತಂ
ತತಿಶಯ[ಮಾ]ಗಿರ್ಪರಿಂದ್ರನುಂ ರಂಭೆಯುಮಿ
ರ್ಪತಿಶಯಮೆಂತಂತಿರೆ ಸಂ
ತತಮಿರ್ಪರು ಮುದದೆ ನಿನ್ನ ಮಗನುಂ ಸೊಸೆಯುಂ ೩

ವ || ಎನೆ ರಾಗಂ ಪೆರ್ಚಿ ಸೈಪು ಬಿದಿರ್ಚಿ ನೆಗೞ್ದು ಪನ್ನೆರಡುವರುಷದಂದಿಗೆ ಮೂವತ್ತೆರುಡು ಕೋಟಿಯುಂ ನೆಱೆಯೆ ತವುವುದುಮೊಂದು ದಿವಸದ ಬೀಯಕ್ಕೆ ಮನೆಯಂ ಮಾಱಿ ತಾನಲ್ಲಿಯೊಂದೋವರಿಯಂ ಬೇಡಿಕೊಂಡು ಸೊಸೆಯುಂ ತಾನುಮಿರ್ದು ಮಱುದಿವಸ[೦] ಬೀಯಕ್ಕೆ ಕೂಂಟಣಿ ಪರಿಚಾರಕಿಯರ್ ಬಂದು ಪೇೞೆ ದೇವಿಲೆ ತಲೆಯಂ ಬಾಗಿರ್ದಳಿಂದಿಂಗೆನ್ನ ತುಡುಗೆಯೊಳವು ಚಿಂತಿಸುವಿರೇಕೆಂದು ಸೊಸೆ ತನ್ನ ತುಡುಗೆಯೆಲ್ಲಮಂ ಕಳೆದುಕುಡೆ ಕೊಂಡುಪೋದರವರ ಕೂಂಟಣಿಯಿನಿತು ಪೊತ್ತೇಕೆ ತಡೆದಿರೆಂದೊಡವರಿಂತೆಂದರ್ ದ್ರವ್ಯಮಿಲ್ಲದೆ ತಮ್ಮ ಸೊಸೆಯಾಭರಣಮೆಲ್ಲಮಂ ಕೊಟ್ಟಟ್ಟಿದರೆನೆ ಸಜ್ಜನವೆಂಡಿರ ತುಡುಗೆಯಂ ಗಂಡವರ್ಕಳಾಯುಧಮಂ ಕೊಳ್ವುದು ಪುರುಷಾರ್ಥಮಲ್ಲೆಂದು ಮಗುಳೆ ಕೊಟ್ಟಟ್ಟಿ ನಿರ್ದ್ರವ್ಯದಳಿಯನನೆಂತು[ಮಿರಿಸೆ]ನೆಂದು

ಕಂ || ನಯಗತಿಯಿಂ ಕಬ್ಬಿನ ಸಿ
ಪ್ಪೆಯನಲತೆ[ಯ]ಪಿೞಿದುಕೊಂ[ಡದನಿರದೆ ಬಿಸುಟಂ
ತೆಯು] ಮುಂದಿ [ಕ್ಕೆ]ಸರಸವಿ
ಕ್ರಿಯೆ [ಯಿಂದ]ಟ್ಟಿದೊಡೆ ತಂದು ಮುಂದಿಕ್ಕಿದುವಂ (?) ೪

ವ || ಕಂಡವೆಲ್ಲಮನಾತನಂ ಕಾಣಲೀಯದೋಸರಿಸಿ ತಂದವಂದಿರಂ ಬೇಱೆ ಕರೆದೊಯ್ದು ನೀವೆನ್ನ ಪ್ರಾಣವಲ್ಲಭನುಂ ನಿರ್ದ್ರವ್ಯನಾದನೆಂದು ಕಳಿಪುಗೆಂದಟ್ಟಿ ಕಳೆದ ಕಳೆಗೆ ಮಾರಿಬಂದುದೆ ಯಾರುಂ ತವಿಸಲಾೞದಂತಪ್ಪ ದ್ರವ್ಯಂ ಮುನ್ನಮುಂಟದಱೊಳಗೆ ಮೂವತ್ತೆರಡು ಕೋಟಿ ದ್ರವ್ಯಮಾತನೊಡವೆಯುಂ ತನಗೆ ಬಂದುದು ತನ್ನ ಸುಡಲು [ಮ] ರ್ಕಾಡಲುಮೆನಿತು ಬೇೞ್ಕುಮಿನ್ನಂತಪ್ಪುದುಮಂ ನುಡಿಯದಿರಿಮೆಂದು ಜಡಿದಟ್ಟಿ ಕಳೆವುದುಮವರದೆಲ್ಲಮಂ ಕೂಂಟಣಿಗೆ ಪೇೞೆ ಕೇಳ್ದು ವಿಷಣ್ಣ ಮನಸಿಯಾಗಿಪ್ಪುದುಂ ವಸಂತತಿಳಕೆ ತನ್ನ ವಲ್ಲಭನ ತನ್ನೊಳಾರುಮಂ ನಂಬದಿರೆ ಮತ್ತಂ ಕೂಂಟಣಿಯೊಂದು ದಿನಮುಪಾಯಮಂ ಚರ್ಚಿಸಿ ತೆಂಗಿನೆಳಗಾಯೊಳಗೆ [ಸೊ]ರ್ಕಂ ತೀವಿ ಮಗಳ್ಗಮಳಿಯಂಗಮಟ್ಟಿ ದೊಡವರಿರ್ಬರುಮಱಿಯದೆ ಕುಡಿದು ಸೊರ್ಕಿ ಮೆಯ್ಯಱಿಯದಿರ್ದುದಂ ಕಂಡು ನಾಡೆಯುಮಿರುಳು ಪೋಪುದುಂ ಚಾರುದತ್ತನಂ ಭಾನುಸೆಟ್ಟಿಯ ಗೃಹದ ಮುಂದಣ ತಿಪ್ಪೆಯೊಳಿೞಿಪಿಮೆಂದು ನಾಲ್ವರ್ ಮನುಷ್ಯರ ಕಯ್ಯೊಳಟ್ಟಿದೊಡವರುಮಾಯಂದದೊಳಿೞಿಪಿ ಚಾರುದತ್ತನಮೇದ್ಯದ ನಾಯ ಪೇಪಂದಿಯ ಕತ್ತೆಗಳ ನಡುವೊಂದೆರಡುಜಾವಂಬರಮಿರ್ದು ಬೆಳಗಪ್ಪ ಜಾವದಾಗಳ್ ತೆಂಗಾಳಿ ಬೀಸೆ ಸೊರ್ಕು ತಿಳಿವುದುಂ ನಾಲ್ಕು ದೆಸೆಯುಮುಂ ನೋಡಿ ತನ್ನಿರ್ದಿರವುಮನಱಿದಿಂತೆಂದಂ

ಚಂ || ಸೊಗಯಿಪ ಮಾಡಮೆತ್ತ ಕಸಕುಪ್ಪೆಯ ತಿಪ್ಪೆಯ ಮೇಗಿದೆತ್ತ ತ
ಳ್ತಗಲದ ನಲ್ಲಳೆತ್ತುರುಗುರಕ್ಕೊಲೆದೆತ್ತುವ ಪಂದಿಯೆತ್ತ ಮಿ
ಕ್ಕಗರುವ ಧೂಪಮೆತ್ತ ಕೊಳೆನಾಱುವ ಗತ್ತದ ನಾತಮೆತ್ತ ರಾ
[ಗಗಳತಿ]ಗೇಯಮೆತ್ತ ಬೆಳರ್ಗತ್ತೆಯ ದುಸ್ವರಮೆತ್ತ ಕರ್ಮಮೋ ೫

ಮ || ಅಱಿದೆಂ ನಲ್ಲಳ ತಾಯ ಗೊಡ್ಡಮಿದುವೆಂದಿಂತಪ್ಪುದಂ ಚಿತ್ತದೊಳ್
ನಿಱಿ[ಸೆಂ]ಕರ್ಮದ ಗೊಡ್ಡಮಂ [ತದು ಪೆಱರ್ಗಿ]ಕ್ಕಿರ್ದು ಸಯ್ತಪ್ಪುದೊಂ
ದಱಿವೆಂ ಪೌರುಷದೊಳ್ಪುಗೆಟ್ಟು ಮಱೆದಿಂತೇಕಿರ್ಪೆಯೆಂಬಂತೆ ಬಂ
ದಱಿಪಿತ್ತೀಯೆಡೆಯೊ[ಳ್ಪು]ಕೆಯ್ದುದೆನಗೆಂದಿರ್ದಂ ಮನೋರಾಗದಿಂ ೬

ವ || ಎನುತಮಿನ್ನಿಲ್ಲಿಪ್ಪೆನೆ ದೇಶತ್ಯಾಗಂಗೆಯ್ವೆನೆಂದು ಮನದೊಳ್ ನಿಶ್ಚಯ್ಸಿ ರ್ದೆಮ್ಮಬ್ಬೆಯಂ ಕಂಡು ಪೋಪೆನೆಂದು ತಮ್ಮ ಮನೆಗೆ ಪೋಗಿ ಬಾಗಿಲಂ ತೆಱೆಯಿಮೆನೆ ನೀನಾರ್ಗೆ ನಿಮ್ಮಬ್ಬೆ ಮನೆಯಂ ಮಾಱಿ ನಿಮ್ಮ ಮಾವನ ಮನೆಯೊಳಿರ್ದಳತ್ತಲ್ ಪೋಗು ಚಿಃ ನಿರ್ಭಾಗ್ಯಂ ಮೆಟ್ಟಿದ ನೆಲನಂ ಸಗಣಿದನೀರ್ದಳಿಯಿಮೆಂಬುದುಮವರ್ಗೆ ಮುಳಿದು ಕೊಲಲ್ ಬಗೆದು ತ[ನ್ನೊಳ್]ತಾನೆ ಮಂತಣಮಿರ್ದು ಬಡತನವಾಗೆ ಬಾೞಲಾಱದೆ ಮೇಲೆವಾಯ್ದನೆಂದು ಲೋಕಂ ಪೞಿಗುಮಿದನಾಂ ಗೆಯ್ಯೆನೆಂದು ಮಾವನ ಮನೆಗೆವಂದು ನೋಡಿ ಎಮ್ಮಬ್ಬೆಗಳೆತ್ತಲಿರ್ದರೆಂಬ ಧ್ವನಿಯಂ ದೇವಿಲೆ ಕೇಳ್ದು ಪರಿತಂದು ತರ್ಕಯ್ಸಿಕೊಂಡು ಬಂದಂದಮಂ ಕಂಡು [ಬೆ]ರ್ಚಿ ನಿಮ್ಮಯ್ಯಂಗಳ್ ಪೇೞ್ದುದು ತಪ್ಪಿದುದಿಲ್ಲವರ್ ತಂಪಬಡುವುದುಂ ನಮಗೆಡಱಾಯ್ತೆಂದ ೞ್ವಾಗಳೆನ್ನಂತಪ್ಪ ಪಾಪಕರ್ಮರ್ ಪುಟ್ಟಲೆನಗಾಗದೆನುತಿರ್ಪದುಂ ಮಿತ್ರಾವತಿ ಪು[ರುಷಂ] ಬಂದಂದಮಂ ಕಂಡು ಬೇಗಂ ಪರಿತಂದು ಕಮ್ಮೆಣ್ಣೆಯಂ ತಂದು ಮಜ್ಜನಂಬುಗು [ಬಿಜಯಂಗೆಯ್ಯೆನೆ ತನ್ನೊಳಿಂತೆಂದಂ]

ಕಂ || ಎಂದೆನಗೆ ಮದುವೆಯಾಯ್ತಾ
ದಂದಿಂದೆತ್ತಿತೆಗೆನ್ನ ವಿಯೋಗದಿನಾದಂದ
ಮದುಮಿವಳಗೆಯ್ದು ಪಚಾರಮಿ
ದಿಂದಿಂತಿದುವನಱಿದೆಂತಿರ್ಪೆಂ (?) ೭

ವ || ಅಬ್ಬಾ ನೀಮುಂ ಮುನ್ನಮೀಯೆ ಕೆಡಿಸಿದೆನವರ ಕಾಮಮಿಮ್ಮಡಿಯಂ ಪಡೆದಲ್ಲದೆ ಬಪ್ಪೆನಲ್ಲೆನೆಂದು ಕಪ್ಪಡಮಂ ಸೀಳ್ವಾಗ ಮಹಾಶೋಕದಿಂ ದೇವಿಲೆಯೞುತ್ತಮಿರೆ ಸಿದ್ಧಾರ್ಥ ಸೆಟ್ಟಿ ಕೇಳ್ದುಂ ಪರಿತಂದು ತಂದೆಯುಮನಳಿಯನುಮಂ ಸಂತಯಿಸಿ ನೀಮಿದೇಕೆ ದೇಶತ್ಯಾಗಂಗೆಯ್ವಿರೊ ಪಡೆದುದಂ ಪದಿನಾಱುಕೋಟಿ ಕಸವರಮುಂಟದುವಂ ಬೀಯಂಗೆಯ್ದು ಸುಖಮಿರಿಮೆಂದೊಡಿಂತೆಂದಂ

ಕಂ || ಆನಱಿದುದೆ ಕೊಕ್ಕರಿಕೆಗೆ
ತಾನಱಿ[ದು]ಸಾಲ್ದಿರ್ದುಮಱಿಯವೇೞ್ಪುದೆ ಲೋಕಂ
ಮಾನಿತೆಗೆ ಮುಟ್ಟುಪ[ಡ]ದಂ
ದೇನೊ ಪೆಱರ್ ಕಂಡಡಲ್ಲದಾಗದೆ ಬಿಸುಡಲ್ ೮

ವ || ಎನೆ ಮತ್ತಂ ಮಾವನೆಂಗು[೦]ಎಮ್ಮಿತ್ತುದನೆಂತುಮೊಲ್ಲಿರಪ್ಪಡೆ ನಿಮ್ಮ ಬುದ್ಧಿಯೆಂತಾದುದಂತೆ ನೆಗೞಿಂ

ಕಂ || ನೆಲೆಯಿಂದಗಲ [ಲ್ಕಾ]ಗದು
ನೆಲೆಯೊಳ್ ಬಹು [ವಿಧ] ದುಪಾಯಮಕ್ಕುಂ ಬಾೞಲ್
ನೆಲೆವೆ [ತ್ತು]ಗೆಯ್ವಮೆಂತುಂ
[ಫಲವೆತ್ತುದೆಂಬ ಮತಮ]ನಱಿಯಿರೇ ಮುನ್ನಂ ೯

ವ || ಎಂಬುದಂ ಕೇಳ್ದಾತನಿಂತೆಂದಂ

ಕಂ || ನೆಲೆಯೊಳ್ ಮುನಿ ಪಡೆದರ್ಥದ
ಬಲಮೞಿದೆರ್ಬಟ್ಟಿಯುಂಟೆ ತಾನ[ಲ್ಲಿಂದಂ]
ತೊಲಗದೆ ಸಿರ್ಕುವುದೇಕಾ
ನೆಲೆಬಲೆಯೇ ಪುರುಷನೇನವಂ ಮೃಗಕುಳಮೋ ೧೦

ವ || ಎಂಬುದುಂ ಮಾವಂ ಮತ್ತೆಮಿಂತೆಂದನೆನ್ನಿ[ತ್ತುದು] ಮನೊಲ್ಲ[ದ]ಲೆವುದಳ[ವ]ಲ್ಲದ ಬದು[ಕ]ಲ್ಲೆಂದೊ[ಡ]ಱಿದೆಂ ನಿನ್ನವನಾರುಂ ನಿನ್ನ ಪೊಱೆಗಾರ್ಪವರಿಲ್ಲಾದೊಡಮೆನ್ನ ವಿನಯಕ್ಕಲ್ಲಿವರಂ ಪಿಡಿದುತರಲ್ವೇೞ್ಕುಂ ತನ್ನಿಮೆಂದು ಪೊಱೆಯಂ ಕಳೆದುಕೊಳೆ ಕೊಟ್ಟು ನಡೆದು ಪಾಲಾಶಪುರಮನೆಯ್ದಿದಾಗಳ್ ಚಾರುದತ್ತಂ ಕೆಱೆಯೊಳ್ ಕಾಲ್ಕರ್ಚುತಮಿರ್ದನನ್ನೆಗಮವಂ ಪೊೞಲಂ ಪೊಕ್ಕು ಕಡೆಯಂಗಡಿಯ ಕೆಲದೊಳ್ ಪೊಱೆಯನಿೞಿಪಿಯಾತಂ ಪೋದಂ ಸಿದ್ಧಾರ್ಥಸೆಟ್ಟಿಯಂ ವೃಷಭದಾಸನಂಬ ಸೆಟ್ಟಿ ಕಂಡು ಭಾನುಸೆಟ್ಟಿಯ ಮಯ್ದುನನೆಂದಱಿದು ಸಂಭಾವಿಸುತ್ತಿರ್ಪಿನಂ ಚಾರುದತ್ತನೆಯ್ದೆವಂದೊಡಾ ಪೊಱೆಗಳನೊಂದೆಯೆಡೆಯೊ [ಳಿೞಿಪೆ]ಇರ್ಬರುಮಂ ತನ್ನ ಮನೆಗೊಯ್ದತಿಪ್ರಿಯದಿನನ್ನಪಾನಾದಿಗಳಿಂ ತಣಿಪಿದಾಗಳ್ ಮೞೆಗಾಲಮಡಸಿತ್ತೇಗೆಯ್ವಮೆಮಗೊಂದಂಗಡಿಯಂ ಬಾಡಗೆಗುಡಿಮೆಂದು ಗಂದಿಗವಸರದೊಳಂ ಕ್ರಯವಿಕ್ರಯಂಗೆಯ್ವುತ್ತಮಿರ್ದು ಪೋಪುದುಂ ನಾಡೆಯಂ ನೂಲುಂ ಪತ್ತಿಯುಮಂ ಸಂಗ್ರಹಂಗೆಯ್ದು ಕೆಲವೆತ್ತಂದು ಕೆಲವೆತ್ತಂ ಬಾಡಗೆಗೊಂಡು ಭಂಡಮಂ ಪೇಱಿ ವೃಷಭದಾಸನಪ್ಪೈಸಿ ಪಿರಿದೊಂದು ಸಾ[ರ್ತದೊಡವೋಗಿ]ಪೆರ್ವೞುವಿನೊಳ್ ಬೀಡಂ ಬಿಟ್ಟಲ್ಲಿ ಕಾೞ್ಕಿಚ್ಚಿನೊಳ್ ಭಂಡಮೆಲ್ಲಂ ಬೆಂದತ್ತಾಗಳಾ ಬೀಡಿನವರೆಲ್ಲ[೦] ನೆರೆದೇಗೆಯ್ವಮೆನೆ ಚಾರುದತ್ತನಿಂತೆಂದಂ

ಕಂ || ಕೇಡೆಂಬುದು ಪುರುಷನನೀ
ಡಾಡಲುಮಲೆದಲೆದು ಕಾಡಲುಂ ಪುರುಷತೆಯಂ
ನೋಡಲುಮೆಂದಾದೊಡೆ ಚಿಃ
ನಾಡೆ ಮನಂಗೆಟ್ಟು ಮಗುೞಲಕ್ಕುಮೆ ಪೋಪಂ ೧೧

ವ || ಎಂದೊಡಂಬಡಿಸಿ ಮಱುದಿವಸಮೆತ್ತುಗಳಂ ಕೊಂಡು ಪಯಣಂಬೋಗುತ್ತಂ ಕಂಜಸ್ಥಮೆಂಬ ದುರ್ಗಾಧಿಪನ ಸೇನಾಪತಿ ಪೋಗುತ್ತಿರ್ದೊಡಾತನ ಬೀಡಿನೊಳ್ ಕೂಡಿಪೋಪಲ್ಲಿ ನೆರೆದಿಱಿದುಕೊಲಲ್ ಬಂದೊಡೆ ಚಾರುದತ್ತಂ ಬಿಲ್ಲಂಕೊಂಡಿದಿರಂ ಪೋಗಿ ತಾಗಿ ಶರಸಂಧಾನಂಗೆಯ್ದು ಕಾದಿ ಕಿರಾತಬಲಮ[ನೋಡಿಸಿ] ದಡೆ ಕೆಲದೊಳ್ ಬಂದು ಕಾದುವ ಬೇಡರೆಸೆಯಲ್ಕೆ ನೊಂದು ಬೞಲ್ದು ನಿಂದು ಬೇಗಮೊಂದು ಬಾಳು [ಮಮತ್ತಪರ] ಮುಮಂ ಕೊಂಡೆಯ್ದೆವಂದೊರನಾಂತಿಱಿದು ಗೆಲ್ದು ಬೞಲ್ದೊಂದು ಮರನಂ ನೆಮ್ಮಿರ್ದಾಗಳಾ ಸೇನಾಪತಿ ಪರಿತಂದೀತನಿಂ ಬರ್ದೆಮಿನ್ನು ಗಂಡನಾವನೀ ಲೋಕದೊಳೆಂದು ಪೊಗೞ್ದು ತನ್ನ ಬೀಡಿಂಗೊಯ್ದು ಪುಣ್ಣನೋವಿದೊಡೆ ಕೆಲವು ದಿವಸದಿಂ ತನ್ನ ಮನ್ನೊಡವಂದ ಸಂಘಾತಮುಮೊಂದೆಡೆಯೊಳಿರ್ದೇಗೆಯ್ವಮಲ್ಲಿ ಭಂಡಂ ಕೆಟ್ಟುದಿಲ್ಲಿಯ ಕಾಳೆಗದೊಳೆತ್ತುಂ ಪೋದುವು ನಾಮುಂ ನೊಂದೆಂತಾನುಂ ಬರ್ದುಂಕಿದೆವು ತಾನುಳ್ಳಡೆ ಮತ್ತಂ ಪಡೆಯಲಕ್ಕುಂ ಮಗುೞ್ವಮೆನೆ ಚಾರುದತ್ತನೆಂಗುಮಿದಾವುದು ಮಾತು

ಚಂ || ಹರಿ ಗಿರಿಕೂಟದಿಂ ಗಿರಿಗೆ ಲಂಘಿಸಿ ನೊಂ[ದ]ಪೆನೆಂದು ಮಾಣ್ಗುಮೇ
ಖರಕರನುಗ್ರರಾಹುವಿನ ಕೋಳ್ಗಗಿದೇಂ ಮಸುಳ್ದಿರ್ಕುಮೇ ಕರಂ
ಪಿರಿಯುರಿಯಳ್ವೆ ಚಂದನಮಹಾದ್ರುಮಮೇಂ ಗಳ ಪೊತ್ತು ನಾರ್ಕುಮೇ
ಪುರುಷನುದಗ್ರ ಸಾಹಸದ ನೋಟ ತಗುಳ್ದಡೆ ಬೆಬ್ಬೆಪೋಕುಮೇ ೧೨

ವ || ಅದಲ್ಲದೆಯುಂ ಪ್ರಾರಬ್ಧಸ್ಯಾಂತಗಮನಂ ಮಹಾಪುರುಷಸ್ಯ ಲಕ್ಷಣವೆಂಬುದದಱಿಂ ನಮ್ಮ ಭವಿಷ್ಯದಳವಿನಂತೆಯ್ದೆ ನೋೞ್ಪುಮೆನೆ ಕೆಲಬರ್ ಮಗುೞ್ದುರ್ ಕೆಲವರನೊಡಗೊಂಡು ಬೀಡನಗಲ್ದುಪೋಗಿ ರತ್ನಮಯನಪ್ಪ ಕ[ಲ್ಗ]ಳಂ ಸೋರೆಯ ಗುಂಡಿಗೆಯೊಳ್ ತೀವಿಕೊಂಡು ಬರುತಿರೆ ಪುಲಿಯ ಗರ್ಜನೆಗೆ ಸಂಘಾತದವರೆಲ್ಲಂ ಮಗುೞ್ದೋಡಿದೊಡೊರ್ವನೆ ಬರ್ಪಲ್ಲಿ ಬೇಡರ್ ಕಂಡು ಬೇಹುವಂದನೆಂದು ಪಿಡಿಯಲಾ ಸೋರೆಯ ಗುಂಡಿಗೆಗಳ್ ಕೆಟ್ಟವಂತಲ್ಲಿಂ ಬರ್ದುಂಕಿಬಂದು ಮತ್ತಮನೇಕ ನಗರ ಗ್ರಾಮದೊಳಾದುಪಾಯಮಪಾಯದೊಳ್ ಕಿಡೆಯುಂ ಬೇಸಱದೆ ಬಂದು ಪ್ರಿಯಂಗುಪಟ್ಟಣಮೆಂಬ ವೇಳಾಪುರಮಂ ಪೊಕ್ಕಲ್ಲಿ ಭಾನುಸೆಟ್ಟಿಯರ ಯಾನಪಾತ್ರಪರಿಚಾರಕಂ ಸುರೇಂದ್ರದತ್ತನೆಂಬೊ ಕಂಡು ನಿಜನಿವಾಸಕ್ಕೊಯ್ದು ಸ್ನಾನಾನ್ನಪಾನಾದಿಗಳಿಂ ತಣಿಪಿ ತತ್ಪ್ರಪಂಚಮೆಲ್ಲಮಂ ಬೆಸಗೊಂಡು ಹೃದ್ಯೋಗಂಬಟ್ಟು ಸಿದ್ಧಾರ್ಥಂಗಿಂತೆಂದನೆನ್ನ ಪಡೆದ ಧನಮಂ ಕೈಕೊಂಡು ಸುಖದಿನಿರ್ಪಂತುಮಾಡೆನಲಾತ [೦] ನಿನ್ನ ಪಡೆದ ವಸ್ತುವಂ ಕೊಟ್ಟೊಡಮೊ[ಲ್ಲೆ]ನೆನೆ ಚಾರುದತ್ತನಿಂತೆಂದಂ

ಕಂ || ಅಪ್ಪುದದೆಂತುಂ ಬಂದಾ
ದಪ್ಪುದು ತನಗಾಗದಂದದಾಗದು ಮತ್ತಿರೆ
ತಪ್ಪುದನಱಿದೆಂ ಸಾಹಸ
ದೊಪ್ಪಮೆ ಸವಿವಂಗೆ ನೆಗೞ್ವನೆಂತಿರಲಾರ್ಪಂ ೧೩

ವ || ಅದಱಿಂ ನೀಮೇನುಮಂ ಬಗೆಯದೆ ಜಲಯಾತ್ರೆಯಂ ಸಂಘಾತ ಮುಳ್ಳೊಡವರ್ಗಪ್ಪಯಿಸುವನಿತೆ ಸಾಲ್ಗುಮೆಂಬುದುಮಂತೆಗೆಯ್ವೆನೆಂದು ನಾವಿಕನಾಯಕಂಗಪ್ಪೈಸಿ ಬಹಿತ್ರಮನೇಱಿ ಪೋಪಲ್ಲಿಯಾತನ ಬುದ್ಧಿಪೌರುಷಮಂ ಮೆಚ್ಚಿ ನಾವಿಕಾ ದಶವಂದಂ ಗೊಟ್ಟೊಡಾ ಪಣವಿಂಗವರ ಪೊಕ್ಕ ದ್ವೀಪದೊಳ್ ಕೊಂಡು ಪೆಱತು ದ್ವೀಪದೊಳ್ ಮಾಱಿ ನೀರ್ವಟ್ಟೆಯೊಳ್ ನಡೆದು ಕಳಶಪುರ ಗಜದ್ವೀಪ ಕಟಹರ ಲಂಕಾ ಅಶೋಕ ಸಿಂಹಳ ಪಾಂಡು ಕೇರಳ ಒಬ್ಬರಾದಿ ದ್ವೀಪ ದಶಪೂರ್ವಾಪರ ಸಮುದ್ರೋಪಕಂಠದ ಪಟ್ಟಣಂಗಳಂ ಪೊಕ್ಕು ಪನ್ನೆರಡುವರುಷದಂದಿಗೆ ಮೂವತ್ತೆರಡು ಕೋಟಿ ದ್ರವ್ಯಮಂ ನೆರಪಿ [ಇ]ನಿತಕ್ಕಂ ಭಂಡಮಂ ಕೊಂಡು ಪೋದಡಿಮ್ಮಡಿಯಕ್ಕುಂ ತಂದೆಯ ಪಡೆದಳವಿಗಗ್ಗಳಮಾಗಿಕ್ಕುಮಿಂ ಪೋಪೆನೆಂದಪೂರ್ವಭಂಡಮಂ ಕೊಂಡು ಪಾರಸಗೊಳಕ್ಕೆ ಬಂದಾ ನಾವಿಕರನೊಡಂಬಡಿಸಿ ಬಹಿತ್ರದೊಳ್ ತೀವಿ ತಾನುಮೇಱಿಸಿ ಯವಂ ತಿರ್ದಿ ನಡೆಯಿಸೆ ನಾಡೆಯಂತರಮಂ ಪೋದಲ್ಲಿ ತೊಟ್ಟನೆ

ಕಂ || ಮೊರೆಮೊರೆದು ಘೂರ್ಣಿಸುತ್ತಂ
ತೆರೆತೆರೆಗಳನಟ್ಟಿಪೊಯ್ದು ನೆಗೆದೊಗೆದು ಮುಗಿ
ಲ್ಪೊರೆವರೆಗಮೆಯ್ದಿ ಮಸಗುವ
ದೊರೆಯಾಯ್ತುತ್ಪಾತವಾತಘಾತ ಸಮುದ್ರಂ ೧೪

ವ || ಅಂತು ಸಮುದ್ರಂ ಬಹಿತ್ರಂ ಬೆದಱುವಂದು ತಿಟ್ಟನೆತಿಱಿದು ಕಲ್ಲೆಯುಂ ಕವಿಯುಮಾಗೆ ನಿರ್ಜೀವನುಮೆರ್ದು ಪೋಗೆ ಕೂವಕಂಭಂ ಮುಱಿಯೆ ಬಂಧಂ ಬಿರಿಯೆ ರಣಂ ಮುಱಿಯೆ ಕೀಲ್ ಕೞಲೆ ಬಿಗುಪು ಬೞಲೆ ನಿಪ್ಪುಗೆಭಯಂ ಮಿಗೆ ನಾವಿಕಾಜನಮೆರ್ದೆಗೆಟ್ಟು ಬಾಯ್ವಿಟ್ಟು ಸುಯ್ದು ಪೊಯ್ದು ಬೞಲ್ದೆೞಲ್ದು ಮಮ್ಮಲಮಱುಗೆ ಚಾರುದತ್ತಂ ಕಂಡು ಭಿನ್ನಮಾಗಲಿರ್ದ ಬಹಿತ್ರಮುಮಂ ಬನ್ನಮಾಗಲಿರ್ದ ಕಳತ್ರಮುಮಂ ನಂಬಿ ಮೆಳ್ಪಡುವುದಂ ಮಾೞ್ಕುಂ ಮುನ್ನಂ ತಱಿಸಲ್ವುದು ಕಾರ್ಯಮೆಂದು ಸಮುದ್ರಮಂ ಪಾಯಲ್ ಬಗೆವುದಂ ಸಿದ್ಧಾರ್ಥನನಱಿದಿಲ್ಲಿಪ್ಪ ಸಮಾಧಿಯೊಳ್ ಸಾಯಲುಮಱಿವುಳ್ಳಂಗಾಗದೆಂದು ಬೇಗಂ ಪ್ರಮಾದವಲಗೆಯನೇಱಿಸಿ ತಾನು[ಮೊಂ]ದು ಪಲಗೆಯನೇಱಿ ನೂಂಕಿ ಬ[ಹಿ]ತ್ರದಿಂ ಪೊಱಗಾದಾಗಳ್

ಕಂ || ತೀವಿದ ಪಾಪದ ಭರದಿಂ
ಜೀವಂ ಸಂಶ್ರುತಿಯೊಳಿರ್ದು ಕಿಡುವಂತೆ ಕರಂ
ತೀವಿದ ಭಂಡದಿನೊಪ್ಪುವ
ನಾವೆ ಮರುದ್ಘಾತದಿಂದಮರ್ಗಿದುದಾಗಳ್ ೧೫

ವ || ಅಂತಿರ್ಬರುಮಂತೆರಡುಂ ಪಲಗೆಯಂ ಪತ್ತಿಪೋಗುತ್ತುಮನ್ಯತ್ವಮೆಂಬನು ಪ್ರೇಕ್ಷೆಯನಿದಂ ಕಂಡು ನಂಬಿಮೆಂಬಂತೆ ತರೆಪೊಯ್ಲೊಳಿರ್ವರುಂ ಮಗುೞ್ದರಂತಾ ಚಾರುದತ್ತಂ ತೀರ್ಥಕರತ್ವಮೆಂಬ ಪುಣ್ಯಮಿಲ್ಲದೆಯುಮಾಸನ್ನಭವ್ಯ[ನನ]ಗಾರಕೇವಳಿಯಾಗೆ ಮೋಕ್ಷಕ್ಕೆ ಪೋಪಂತೆ ಬಹಿತ್ರಮಿಲ್ಲದೆಯುಂ ಪ್ರಮಾದವಲಗೆಗಳಂ [೦] ಪತ್ತಿ ಸಮುದ್ರದ ತಡಿಗೆವರುತ್ತಂ ಪ್ರಮಾದಾಸ್ಥಾನಂಗಳಂ ಬಂಚಿಸುವಂತೆ ಜಳಚರಂಗಳಂ ಬಂಚಿಸಿ ಅಶುಭ ಪರಿಣಾಮಮಂ ಗೆಲ್ವಂತೆ ತೆರೆಗಳನೊಡ್ಡೈಸಿ ಬಂದೊಂದು ಕುಱುವಮಂ ಸಾರ್ದಲ್ಲಿ ಪಲ್ಫಲಂಗಳಂ ತಿಂದು ಮೂಱುದಿವಸಮಿರ್ದು ಮತ್ತಮಾ ಪಲಗೆಯನೇಱಿ ಗಾಳಿಯ ವಶದಿಂದಂಬರಾ ವತಿಯೆಂಬೂರ್ಗೆವಂದಿೞಿದೊಡೂರವರ್ ಕಂಡು ಪಳಕಿದ ಮೆಯ್ಯೆಂದದಂ ಭಿನ್ನಪಾತ್ರೆಯೆಂದಱಿದು ಸಂಭಾಷಿಸುತಿರ್ದಿಂದಿಂಗೆರಡು ಮೂಱು ದಿವಸದಂದು ನಿಮ್ಮಂತೆ ಭಿನ್ನಪಾತ್ರೆಯಾಗಿ ಬಂದಂ ಚಂಪಾಪುರದ ವಾಸವ್ಯಂ ಭಾನುಸೆಟ್ಟಿಯರ ಮೈದುನಂ ಸಿಂಧುವಿಷಯದ ಶಬರಿಗ್ರಾಮದೊಳ್ ತಮ್ಮ ಭಾವದ ದ್ರವ್ಯಂ ಪದಿನಾಱುಕೋಟಿ ಇರ್ದುದೆಂದಲ್ಲಿಗೆ ವೋದನೆಂದೊಡವರೆಮ್ಮ ಮಾವಂದಿರವರ ದೇಹಂ ಬರ್ದುಂಕಿದಡೆ ಸಾಲ್ಗುಮೆಂದಲ್ಲಿ ರ್ಪಿನಂ ಭಾನುಸೆಟ್ಟಿಯರ ಚೈತ್ಯಾಲಯದ ದಾನಶಾಲಾಪ್ರತಿಪಾಲಕಂ ವರದತ್ತಂ ಪ್ರಿಯಂ ಗೆಯ್ದಿರಿಸಿ ನೀಮಿನ್ನಪ್ಪೊಡಮೊಂದೆಡೆಯೊಳಿರ್ಪುದೆನೆ ಚಾರುದತ್ತನಿಂತೆಂದಂ

ಕಂ || ಅನುವರದೊಳೆ ಕಡುದುೞಿಲಾ
ಳೆನಿತುಂ ತಾಂ ನೋಗುಮನಿತೆ ತಱಿಸಲ್ತರ್ಪಂ
ತೆನೆ ತಳಿಗುಂ ಸತ್ಪುರುಷ[ರು]
ಮನಿತೆ ಚಲಂ ಪುಟ್ಟಿ ಸಾಹಸಾನ್ವಿ [ತರ]ಕ್ಕುಂ ೧೬

ವ || ಎನಗರ್ಥಮಾದೊಡಮಾಗದೊಡಂ ಸಾಹಸಪುರುಷನೆಂಬಿನತೆ ಸಾಲ್ವುದೆನೆ ಮೆಚ್ಚಿ ಭರಂಗೆಯ್ದಿರಿಸಿ ನಾಲ್ಕು ದಿವಸಮಿರ್ದು ಸಿಂಧುವಿಷಯಕ್ಕೆ ಪೋಗಿ ಧನದತ್ತ ಸೆಟ್ಟಿಯರಂ ಕಂಡು ತಮ್ಮ ಮಾವಂದಿರಪ್ಪ ಸಿದ್ಧಾರ್ಥಸೆಟ್ಟಿಯರ ಸುಖವಾರ್ತೆಯಂ ಬೆಸಗೊಳ್ವುದು ಮಾತನೆಂದ [೦] ನಿಮ್ಮ ಮಾವಂದಿರ್ವಂದು ತಮ್ಮ ವೃತ್ತಾಂತಮಂ ಪೇೞ್ದು ಜಲಯಾತ್ರ ವ್ಯವಹಾರದೊಳ್ ಧನಂಬಡೆದು ಬರ್ಪಲ್ಲಿ ಬಹಿತ್ರಂ ಭಿನ್ನಮಾಗೆ ಪ್ರಮಾದವಲಗೆಯಂ ಪಿಡಿದು ಬಂದೆವೆಂದು ತಮ್ಮ ವೃತ್ತಾಂತಮಂ ಪೇೞ್ದು ನಿನ್ನ ದೇಶತ್ಯಾಗದೆ ದೆಸೆಯೊಳ್ ಪಲಕಾಲಂ ಸತ್ತನೊಳನೆಂಬ ಸುದ್ದಿಯಂ ಕೇಳ್ದೆಮಿಲ್ಲ ದೈವಬಲದಿಂ ಬರ್ದುಂಕುಗುಮೆಂದು ಪೇೞ್ದು ದುಃಖಿತನಾಗಿರೆ ನಿಮ್ಮ ಭಾವನ ದ್ರವ್ಯಂ ಪದಿನಾಱುಕೋಟಿಯೆಮ್ಮ ಕೈಯೊಳಿರ್ದುದದಂ ಕೊಂಡುಪೋಗಿಮೆನಲೊಲ್ಲೆ ನೆಂದೊಡೆಂತಾನುಮೊಡಂಬಡಿಸಿ ಎಂಟುಕೋಟಿಯಂ ಕೊಟ್ಟು ಚಂಪಾಪುರಕ್ಕೆ ಕಳಿಪಿದೆಂ ನೀನುಂ ಬರ್ದುಂಕಿ ಬಂದುದೊಳ್ಳಿತಾಯ್ತಿನ್ನೆಂಟುಕೋಟಿ ದ್ರವ್ಯಮಿರ್ದುದಂ ಕೈಕೊಳ್ಳೆನೆ ಚಾರುದತ್ತನಿಂತೆಂದಂ

ಉ || ತಂದೆಯ ಮುನ್ನಿನುಳ್ಳ ಧನಮೆಲ್ಲಮನಾಂ ಕಿಡಿಪಂದು ನಾಡೆಯುಂ
ನೊಂದು ಮದೀಯ ಬಾಹುಬಲದೊಂದಳವಂ ಸಲೆ ನೋೞ್ಪೆನೆಂದು ಬಂ
ದಂದಮದಕ್ಕೆ ಬಂದ ತೆಱನಾಗದೆ ಕೊಟ್ಟಡೆ ಕೊಳ್ವೆನಲ್ಲೆನಾ
ತಂದೆಯ ಧರ್ಮಮೆಲ್ಲಿಯೊಳವಲ್ಲಿಗೆ ಮಾಡು ವಣಿಕ್ಕುಲಾಧಿಪಾ ೧೭

ವ || ಎಂದೊಡಂತೆಗೆಯ್ವೆನೆಂದು ಧನದತ್ತಸೆಟ್ಟಿಯಾತನ ಪದಕ್ಕೆ ಭಾನುಸೆಟ್ಟಿಯರ್ ಮಾಡಿಸಿ ಚೈತ್ಯಾಲಯಮೆಲ್ಲಿಯೊಳವಲ್ಲಿಗೆ ಕೊಟ್ಟಟ್ಟಿ ಮತ್ತಮಿಂತೆಂದಂ

ಕಂ || ನೆರಪುವೆನೆಂದುಂ ಧನಮಂ
ಪರಪುಗುಮೆಲ್ಲಂದದಿಂ ವಿಧಾತ್ರನದಂ ಮಾ
ಣ್ದಿರು ನೀಂ ಬಲ್ಲಿದನವನೊಳ್
ಕರಮೆ ಚಲಂಗೆಯ್ದು [ಸೇದೆ] ಗಿಡದಿರು ಮರುಳೇ ೧೮

ವ || ಎನೆ ಚಾರುದತ್ತನಿಂತೆಂದಂ

ಕಂ || ಬಲ್ಲಿದನಪ್ಪೊಂ ಬಿದಿಯೆಂ
ದೆಲ್ಲಮನಾನಱಿವೆನಱಿದುಮೀ ಪ್ರಾಣಂ ತಳು
ವಿಲ್ಲದೆ ಪೋಪಿನಮಾಗಳು
ಮಲ್ಲದ ಸಾಹಸಮನಾಂ ಬಿಸುೞ್ಪೆನೆ ಭಯದಿಂ ೧೯

ವ || ಎಂದು ಮಱುಮಾತಿಂಗೆಡೆಯಿಲ್ಲದಂತು ನುಡಿದಲ್ಲಿ ಕೆಲವು ದಿವಸಮಿರೆ ದಾನಶೂರನುಂ ಸಾಹಸಪುರುಷನುಮೀ ಕಾಲದೊಳ್ ಚಾರುದತ್ತನಲ್ಲದೆ ಪೆಱನಿಲ್ಲೆಂದು ಲೋಕಮೆಲ್ಲಮುದ್ಭ್ರಾಂತು ಗೊಂಡಿರುಳುಂ ಪಗಲುಂ ಪೊಗೞ್ಗೆ ವೀರಪ್ರಭನೆಂಬ ವ್ಯಂತರದೇವಂ ಕೇಳ್ದಾತನ ಪ್ರಾಣತ್ಯಾಗಿಯಪ್ಪುದಂ ನೋೞ್ಪೆನೆಂದಾತನ ದೇವರ್ಗಾಣಲು ಬರ್ಪ ಚೈತ್ಯಾಲಯದ ಪೆಱಗಣೋವರಿಯೋವರಿಯೊಳ್ ಭಟ್ಟಿಸಾಮುದ್ರಿಕ ವೀರಪಾಂಡ್ಯ ಸಹಿತಂ ವಿಕ್ರಮಾದಿತ್ಯನ ರೂಪುಗೊಂಡು ಶೂಲೆಯಾಯ್ತೆಂದು ಪುಯ್ಯಲ್ಚುತಿರೆ ಚಾರುದತ್ತಂ ಬಂದು ಬಸದಿಯಂ ಬಲಗೊಳ್ಳುತಂ ಕಂಡಿದೇಕೆ ಪೊರಳ್ದು ಪುಯ್ಯಲ್ಚಿದಪನೆನೆ ವೀರಪಾಂಡ್ಯನಿಂತೆಂದಂ

ಸ್ರ || ಈತಂ ಶ್ರೀ[ರೂಪ] ವಂಶಪ್ರಭು ವಿಶದಯಶಂ ನಿರ್ಭಯಕ್ಷೋದರೋದ್ಯ
ತ್ತಾರಾಳಂಬೋಧಿಯೊಳ್ ಸಾಹಸದೆ ಪಡೆದುದುಂ ಭಾಗವಂ ಪೂಣ್ದು ನಿಚ್ಚಂ (?)
ಬೂತಾಧೀನರ್ಕಳಾರ್ಕೆಟ್ಟೞಿದ ಬಡವರಾರೆಂದು ತಾನೀಯುತಂ ವಿ
ಖ್ಯಾತೋಪೇತಂ ತೊೞಲ್ವಂ ಧರಣಿವಳಯಮಂ ವಿಕ್ರಮಾದಿತ್ಯನೆಂಬೊಂ ೨೦

ವ || ಅಂತಪ್ಪಾತಂ ತೊ[ಟ್ಟ]ನಿಲ್ಲಿಗೆವಂದಿಂದಿನಿರುಳ್ ಶೂಲೆಯೆಂಬ ಮಹಾವ್ಯಾಧಿಯಾಗಿ ಸೇದೆಗೆಟ್ಟಪ್ಪೊನೀ ವ್ಯಾಧಿಯುಂ ಮಾನಸರ ಬಲದ ಬಱಿಯ ಎಲುವಿನೊಳ್ ತಾವಂಗೊಡ[ಲ್ಲ]ದೆ ಪೋಗದೆಮ್ಮೊಳಾರ್ ಸತ್ತಡಮೀತಂ ಬಾೞ್ವನಲ್ಲನದಱಿನೀಯಲಾಪ್ಪನಂ ಬೇಡಿಪೋಗಲೆಂದಿರ್ದೆ ಮೆಂದೊಡಾನೀವೆನನ್ನೆಗ [೦] ಮಾಣಿಂ ದೇವರದೇವಂಗೆ ಪೊಡೆವಟ್ಟುಬಂದಪೆ ನೆಂಬುದುಮಾತನಿಂತೆಂದಂ

ಕಂ || ಈವೆಡೆಯೊಳೀವ ಬಗೆದಂ
ದೀವಂ ಮಾಣೆಂಬುದು [ವರ] ಗಂಡರ ಮಾತ
ಲ್ಲೀವೆಡೆಯೊಳಮಿಱಿವೆಡೆಯೊಳ
ಮಾವನುಮಿನಿಸುಗಿ[ಗ] ಮಱಿದೆಮೇಳಿಂ ಬೇಗಂ ೨೧

ವ || ಎನೆ ಚಾರುದತ್ತನಿಂತೆಂದಂ

ಕಂ || ಬೇಡುವ ಮನಮಾದಂದಾ
ಳಾಡುವ ಮನಮಕ್ಕುಮಱಿಯಲಾದುದು ನಿಮ್ಮಂ
ಕೂಡೆ ನೆಗೞ್ದಿರ್ದ ನಿಜಪತಿ
ನಾಡೆಯುಮಾತುರನೊತೊದರೆ ಪದುಳಮೊ ಪೇೞಿಂ ೨೨

ವ || ಎಂದೊಡೆಮ್ಮ ರಸನೊಳೆಂ ನಿನ್ನ ನುಡಿಯಂ ನೀನೆಯಱಿವೈ ಪೋಗೆನೆ ಪೋಗಿ ಸರ್ವಜ್ಞಂಗೆ ಚತುರ್ಭಕ್ತಿಪೂರ್ವಕಂ ಪೊಡೆವಟ್ಟು ಬಂದಿಸಿ ಬಂದು ತಾಂ ತೋಱೆಂದು ವೀರಪಾಂಡ್ಯನ ಕಯ್ಯ ಸುರಿಗೆಯಂ ಕೊಂಡು ಬಲದ ಬರಿಯನರಿದು ವಿಕ್ರಮಾದಿತ್ಯನ ಕಯ್ಯೊಳಿತ್ತು ಬಂದು ಚೈತ್ಯಾಲಯದ ಮುಂದೆ ಮೂರ್ಛೆಹೋಗಿ ಬಿರ್ದನಾಗಳಾ ಬರಿಯೊಳ್ ತಾವಂಗೆಯ್ದೊಡೆ ಶೂಲೆ ಕೆಟ್ಟಿರ್ದವೆಲ್ಲಂ ಬಂದುವೆಂದೊ[ಡೊ]ರ್ವಂ ಪರದರ ಮಗಂ ತನ್ನ ಬಱಿಯನಿತ್ತು ಸತ್ತುಪಟ್ಟನೆನೆ ಬೇಗಂ ಬಂದು ಸಂಜೀವನ ಪ್ರಯೋಗದಿಂದೆತ್ತಿ ಪೊರೞ್ದೆದ್ದು ನಿಂದನಂ ವಿಕ್ರಮಾದಿತ್ಯನಿಂತೆಂದಂ

ಕಂ || ಧನಮಂ ಲಾಭಕ್ಕೀವುದು
ತನುವಂ ಗತಿಗೀವುದೆರಡು [ಮಿ]ವು ವೈಶ್ಯಗುಣಂ
ಧನವಂ ತನುವಂ ಬೇಡಿದ
ಮನುಜಂಗೆರಡಿಲ್ಲದೀವುದಿದು ಪರದಿಕೆಯೇ ೨೩