ಅನಂತ ಚತುಷ್ಟಯ ೧೦ – ೧೦ವ: ಅನಂತಜ್ಞಾನ, ಅನಂತದರ್ಶನ, ಅನಂತವೀರ್ಯ, ಅನಂತಸುಖ.

ಅರಸು ೭ – ೧ವ: ೧. ದುರ್ಬುದ್ಧಿ – ಪ್ರತಿನಿತ್ಯವೂ ದುರ್ವ್ಯಸನಿಯಾಗಿ ಧರ್ಮಾರ್ಥಗಳನ್ನು ದ್ವೇಷಿಸುವವನು. ೨. ಆಹಾರ್ಯಬುದ್ಧಿ – ಗುರು ಹೇಳಿದುದನ್ನು ತಿಳಿದು ಅದರಂತೆ ನಡೆಯದವನು. ೩. ಬುದ್ಧಿಮಾನ್‌ – ಗುರು ಹೇಳಿದಂತೆ ತಿಳಿದು ನಡೆಯುವವನು.

ಅರ್ಥಾಲಂಕಾರಗಳು ೭ – ೫ವ: ಸ್ವಭಾವ, ಆಖ್ಯಾನ, ಉಪಮಾ, ರೂಪಕ, ದೀಪಕ, ಅಧಿಕ, ಆಕ್ಷೇಪ, ಅರ್ಥಾಂತರನ್ಯಾಸ, ವ್ಯತಿರೇಕ, ವಿಭಾವನ, ಸಮಾಸೋಕ್ತಿ, ಉತ್ಪ್ರೇಕ್ಷೆ, ಹೇತು, ಸೂಕ್ಷ್ಮ, ವಕ್ರೋಕ್ತಿ, ಪ್ರೇಯ, ರಸವತ್‌, ಊರ್ಜಸ್ವಿ, ಪರ್ಯಾಯೋಕ್ತಿ, ಸಮಾಹಿತ, ಉದಾತ್ತ, ಅಪಹ್ನುತಿ, ಶ್ಲೇಷ, ವಿಶೇಷ, ಸದೃಶೋಕ್ತಿ, ವಿರೋಧ, ಅಪ್ರಸ್ತುತಸ್ತೋತ್ರ, ವ್ಯಾಜ, ವ್ಯಾಜನಿಂದೆ, ವ್ಯಾಜಸ್ತುತಿ, ನಿದರ್ಶನ, ಸಹೋಕ್ತಿ, ಪರಿವೃತ್ತಿ, ಸಂಕೀರ್ಣ, ಭಾವಿಕ

ಆರು ಅವಶ್ಯಕಗಳು ೧೪ – ೫೨ವ: ೧. ಸಾಮಾಜಿಕ – ಎಲ್ಲ ಜೀವಗಳಲ್ಲಿಯೂ ಸಮತ್ವ ಭಾವನೆ. ೨. ಚತುರ್ವಿಂಶತಿಸ್ತವನ – ಇಪ್ಪತ್ತುನಾಲ್ಕು ತೀರ್ಥಂಕರರ ಸ್ತವನ. ೩. ವಂದನಾ ಪಂಚಪರಮೇಷ್ಠಿವಂದನ. ೪. ಪರಿಕ್ರಮಣ – ಪ್ರತಿಕ್ರಮಣ, ಹತ್ತಿದ ದೋಷಗಳಿಗಾಗಿ ಪಶ್ಚಾತ್ತಾಪ. ೫. ಪ್ರತ್ಯಾಖ್ಯಾನ – ಮುಂದೆ ಇಂಥ ಪಾಪಕರ್ಮಗಳನ್ನು ಮಾಡುವುದಿಲ್ಲವೆಂದು ಪ್ರತಿಜ್ಞೆ ಮಾಡುವುದು. ೬. ಕಾಯೋತ್ಸರ್ಗ – ದೇಹಾಭಿಮಾನವನ್ನು ಬಿಟ್ಟು ಆತ್ಮಧ್ಯಾನದಲ್ಲಿರುವುದು.

ಇಪ್ಪತ್ತೆಂಟು ಮೂಲಗುಣಗಳು ೧೧ – ೧೦೪ವ: ಪಂಚಮಹಾವ್ರತಗಳು (೫), ಪಂಚ ಸಮಿತಿಗಳು (೫), ಪಂಚೇಂದ್ರಿಯ ನಿಗ್ರಹ (೫), ಷಡಾವಶ್ಯಕಗಳು (೬), ಸ್ನಾನಾಭಾವ (೧), ಭೂಮಿಶಯನ (೧), ನಗ್ನತ್ವ (೧), ಕೇಶೋತ್ಪಾಟನ (೧), ಏಕಾಶನ (೧), ದಂತಧಾವನಾಭಾವ (೧), ಸ್ಥಿತಾಶನ (೧).

ಏಳು ಬೆಸನಗಳು ೭ – ೧ವ: ಈ ಏಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ವಾಕ್ಪಾರುಷ್ಯ, ಅರ್ಥದೂಷಣ, ದಂಡಪಾರುಷ್ಯ ಇವು ಮೂರು ಕೋಪದಿಂದ ಬಂದುವಾಗಿವೆ. ಮತ್ತೊಂದು ಕಾಮಜನ್ಯ. ಇವು ಮೃಗಯಾ, ದ್ಯೂತ, ಪಾನ, ಸ್ತ್ರೀವ್ಯಸನಗಳಾಗಿವೆ.

ಏಳು ರಾಜಪ್ರಕೃತಿಗಳು ೭ – ೧ವ: ೧. ಸ್ವಾಮಿ – ರಾಜನಿಗೆ ಇರಬೇಕಾದ ಸದ್ಗುಣಗಳಿಂದ ಕೂಡಿರುವವನು. ೨. ಅಮಾತ್ಯ – ಮಂತ್ರಿಸಂಪತ್ತು. ೩.ಜನಪದ – ಒಳ್ಳೆಯ ಪ್ರಜಾಸಂಪತ್ತು. ೪. ದುರ್ಗ – ರಾಜ್ಯರಕ್ಷಣೆಗೆ ತಕ್ಕಂತಹ ದುರ್ಗಸಂಪತ್ತು ೫. ದಂಡ –ಒಳ್ಳೆಯ ಸೈನ್ಯ. ೬. ಕೋಶಧರ್ಮದಿಂದ ಗಳಿಸಿದ ಅರ್ಥಸಂಪತ್ತು ೭. ಮಿತ್ರ – ಒಳ್ಳೆಯ ಸ್ನೇಹಿತರು.

ಐದು ಇಂದ್ರಿಯಗಳು ೧೪ – ೫೨ವ: ಕಣ್ಣು, ಕಿವಿ, ಮೂಗು, ನಾಲಗೆ, ಮೆಯ್‌

ಐದು ಪಾಪಗಳು ೧೦ – ೯ವ: ಕೊಲೆ, ಪುಸಿ, ಕಳವು, ಪರದಾರ, ಪರಿಗ್ರಹ,

ಐದು ಮಹಾವ್ರತಗಳು ೧೪ – ೫೨ವ: ೧. ಅಹಿಂಸಾ – ಮನೋವಾಕ್‌ ಕಾಯಗಳಿಂದಾದ ಪ್ರಾಣಿಗೂ ಹಿಂಸೆ ಮಾಡದಿರುವುದು. ೨. ಸತ್ಯ – ಯಾವಾಗಲೂ ನಿಜವನ್ನೇ ಹೇಳುವುದು. ೩. ಅಸ್ತೇಯ – ಕದಿಯದಿರುವುದು, ತನಗಾಗಿ ಕೊಟ್ಟದ್ದು ಹೊರತು ಬೇರೆ ವಸ್ತುಗಳನ್ನು ತೆಗೆದುಕೊಳ್ಳದಿರುವುದು. ೪. ಬ್ರಹ್ಮ – ಬ್ರಹ್ಮಚರ್ಯ; ಮನೋವಾಕ್‌ ಕಾಯಗಳಿಂದ ಸ್ತ್ರೀಸಂಗ, ಪುರುಷಸಂಗ ಮಾಡದಿರುವುದು. ೫. ಆಕಿಂಚನ್ಯ ಅಪರಿಗ್ರಹ; ಪ್ರಾಪಂಚಿಕ ವಿಷಯಗಳಲ್ಲಿ ಸ್ವಲ್ಪವೂ ಮನಸ್ಸು ಕೊಡದೆ ಅವನ್ನು ತ್ಯಾಗಮಾಡುವುದು.

ಐದು ಸಮಿತಿಗಳು ೧೪ – ೫೨ವ: ೧. ಈರ್ಯಾ – ಸುರ್ಯೋದಯವಾದ ಬಳಿಕ ಜೀವಿಗಳ ಹಿಂಸೆಯು ನಡೆಯದಂತೆ ತನ್ನ ಮುಂದಿನ ಒಂದು ಮಾರು ದಾರಿಯನ್ನು ಚೆನ್ನಾಗಿ ನೋಡುತ್ತಾ ನಡೆಯುವುದು. ೨. ಭಾಷಾ – ತನಗೂ ಪರರಿಗೂ ಹಿತಕರವೂ ಮಿತವೂ ನಿರ್ದೋಷವೂ ಆದ ಪ್ರಿಯವಚನವನ್ನು ಹೇಳುವುದು. ೩. ಏಷಣಾ – ದಾತೃಗಳು ವಿಧಿಪೂರ್ವಕವಾಗಿ ಕೊಡುವ ಆಹಾರವನ್ನು ಹರ್ಷ ವಿಷಾದಗಳಿಲ್ಲದೆ, ರುಚಿ ಅರುಚಿಯೆನ್ನದೆ ಶಾಂತತ್ವದಿಂದ ಸ್ವೀಕರಿಸುವುದು. ೪. ಆದಾನನಿಕ್ಷೇಪಣ – ಪುಸ್ತಕ ಕಮಂಡಲು ಮೊದಲಾದ ಉಪಕರಣಗಳನ್ನು ಜೀವಹಿಂಸೆಯಾಗದಂತೆ ಒಂದು ಸ್ಥಲದಲ್ಲಿಡುವುದು ಮತ್ತು ಪಿಂಛದಿಂದ ಸ್ವಚ್ಛ ಮಾಡಿ ತೆಗೆದುಕೊಳ್ಳುವುದು. ೫. ವ್ಯತ್ಸರ್ಗ – ತ್ರಸ ಸ್ಥಾವರ ಜೀವಗಳಿಗೆ ಪೀಡೆಯಾಗದಂತೆ ಜಂತುರಹಿತವಾದ ಗಟ್ಟಿನೆಲದ ಮೇಲೆ ಮಲಮೂತ್ರ ವಿಸರ್ಜನೆಯಾಗದಂತೆ ಜಂತುರಹಿತವಾದ ಗಟ್ಟಿನೆಲದ ಮೇಲೆ ಮಲಮೂತ್ರ ವಿಸರ್ಜನೆ ಮಾಡುವುದು ಮತ್ತು ಪ್ರಾಸುಕಜಲದಿಂದ ಶೌಚಕ್ರಿಯೆ ಮಾಡಿಕೊಳ್ಳುವುದು.

ಕಾವ್ಯಾಲಂಕಾರಗಳು ೩ – ೩೩ವ, ೩ – ೬೭: ಜಾತಿ ಸ್ವಭಾವ, ಉಪಮೆ, ರೂಪಕ, ದೀಪಕಚ್ಛಾಯೆ, ಅರ್ಥೋಕ್ತಿ, ಆಕ್ಷೇಪ, ಅರ್ಥಾಂತರ, ವ್ಯತಿರೇಕ, ಭಾವನಾರ್ಥ, ಸಮಾಸೋಕ್ತಿ, ಅತಿಶಯ, ಉತ್ಪ್ರೇಕ್ಷೆ, ಹೇತುವಚನ, ಇಂಗಿತೋಕ್ತಿ, ಕ್ರಿಯಾರ್ಥ, ಯಥಾಶಂಕೆ, ಆಖ್ಯಾನ, ರಸವಾಹ, ಊರ್ಜಸ್ವಿ, ಪರ್ಯಾಯೋಕ್ತಿ, ಅಳುಂಬ (?) ಉದಾತ್ತವಚನ, ವಿಚಿತ್ರ, ಶ್ಲೇಷಾವಿರುದ್ಧ, ವಿಭ್ರಾಂತ ಸದೃಶೋಕ್ತಿ, ವಿರುದ್ಧಾರ್ಥ, ನಿಂದಾಪ್ರಶಂಸೆ, ವ್ಯಾಜಸ್ತುತಿ, ನಿದರ್ಶನ, ಸಹೋಕ್ತಿ, ಪರಿವೃತ್ಯಾರ್ಥ, ಧ್ವನಿ, ಸಂಕೀರ್ಣಾಳಂಕ್ರಿಯೆ, ಭಾವಿಕಾ.

ಚತುರ್ದಶ ಗುಣ ೫ – ೨ವ: ವರ್ಣ, ಅಲಂಕಾರ, ಸ್ವರ, ಪದ, ಸಮಾಸ, ಉಚ್ಛ್ವಾಸ, ಸಭಾ, ಆದೇಶ, ತಾಳ, ಲಯ, ಯತಿ, ಫಣಿಸ್ಥಾನ, ದೇಶ, ಕಾಲಜ್ಞತೆ.

ದಾನಗಳು ೧೦ – ೧೦ವ: ಗಿರಿದುರ್ಗ ಆಹಾರದಾನ, ಅಭಯದಾನ, ಶಾಸ್ತ್ರದಾನ, ಭೈಷಜ್ಯದಾನ.

ದುರ್ಗಗಳು ೭ – ೧ವ: ಗಿರಿದುರ್ಗ – ಬೆಟ್ಟಗಳಿಂದ ಆವೃತವಾದ ಸ್ಥಳ, ವನದುರ್ಗ ಕಾಡುಗಳಿಂದ ಆವೃತವಾದ ಸ್ಥಳ, ಜಲದುರ್ಗ – ನೀರಿನಿಂದ ಆವೃತವಾದ ಸ್ಥಳ.

ಧರ್ಮಗಳು ೭ – ೧ವ: ಪೂಜೆ, ಶೀಲ, ಉಪವಾಸ.

ನಯಗಳು ೭ – ೧ವ: ಸಾಮ, ಭೇದ, ದಂಡ.

ನಾಟ್ಯಾಂಗ ೨ – ೩೩ವ: ಉತ್ಕ್ಷೇಪಣ, ಆಕುಂಚನ, ಪ್ರಸಾರಣ, ಮನೋಭ್ರಮಣ, ಜಾವನ, ಸ್ಯಂದನ, ನಮನೋನ್ನಮನ, ಸ್ಥಿತಾಚಳಿತ, ಪ್ರಚಳಿತ, ಕ್ರಾಂತ, ಅಪಕ್ರಾಂತ, ಕ್ಷಿಪ್ತಕ, ಪತಾಕ, ತ್ರಿಪಾತಕ, ಕರ್ತರೀಮುಖ, ಅರ್ಧಚಂದ್ರ, ಕಳಾ, ಶುಕತುಂಡ.

ನೀತಿಗಳು ೭ – ೧ವ: ಭೃತ್ಯಪೋಷಣ, ಪ್ರಜಾಪಾಳನ, ಧರ್ಮರಕ್ಷಣ, ಆತ್ಮಪ್ರಯತ್ನ.

ಪಗೆಗಳು ೭ – ೧ವ: ಸಾಪತ್ನ, ವಾಸ್ತುಜ, ಸ್ತ್ರೀಜ, ವಾಗ್ಭೂತಮರಾಜ.

ಪದಗತಗಳು ೨ – ೩೧ವ: ನಾಮಾಖ್ಯಾತ, ಉಪಸರ್ಗ, ನಿಪಾತ, ತದ್ಧಿತ, ಸಮಾಸ, ಕೃತ್ಯೋಪೇತ, ವ್ಯಾಕರಣ, ಸಿದ್ಧಾಂತ.

ಪ್ರತೀಕಾರಗಳು ೭ – ೧ವ: ಭೂರಿ, ಕರ್ಮಣಾ, ಆರಂಭೋಪಾಯ, ಪುರುಷದ್ರವ್ಯ ಸಂಪತ್‌, ದೇಶಕಾಲ ವಿಭಾಗ, ವಿನಿಪಾತ ಪ್ರತೀಕಾರ, ಉಚ್ಚಾಟನ, ಬಂಧನ, ಕರ್ಮಣಾಮಪನಯನ

ಬಾಹ್ಯ ಪ್ರಕೃತಿಗಳು ೭ – ೧ವ: ರಾಷ್ಟ್ರಪಾಲ, ಅಂತಪಾಲ, ಪ್ರತ್ಯಂತವಾಸಿ.

ಭವನಗಳು ೭ – ೧೫ವ: ಏಕಸಾಲ, ದ್ವಿಶಾಲ, ತ್ರಿಶಾಲ, ಚತುಶ್ಯಾಲ, ಪಂಚತಳ, ಮಹಾಕೂಟ, ಕೂಟಸ್ವಸ್ತಿಕ, ಗುಲ್ಮೋತ್ಪಳ, ನಂದ್ಯಾವರ್ತ, ಶ್ರೀಭದ್ರಕಾಲ.

ಭೃತ್ಯರು ೭ – ೧ವ: ಕರ್ಮಣ್ಯ, ಮಂತ್ರ, ಲಾಭದಾಯಕ, ಸಂಗ್ರಾಮಿಕ.

ಮಲ್ಲಯುದ್ಧ ೬ – ೫೦ವ ಲಂಘನ, ವಲ್ಗನ, ಪ್ಲವನ, ವಿಕ್ರಮ, ಭ್ರಮರಿ, ಕರಣ, ಸಮಲತಾ, ಬಹುಕಳಿ, ಕತ್ತರಿ.

ಮೂರು ಕ್ಲೇಶಗುಪ್ತಿಗಳು ೧೪ – ೫೨ವ: ೧. ಮನ – ಸುಖದುಃಖಗಳಿಗೆ ಅಮಿತವಾಗಿ ವಶನಾಗದೆ ಸಮತಾಭಾವವನ್ನು ಸರ್ವರಲ್ಲಿಯೂ ತೋರಿ ತನ್ನ ಆತ್ಮ ಕಲ್ಯಾಣವನ್ನು ನೆನೆಯುವುದು. ೨. ವಾಕ್‌ – ಮೌನದಿಂದಿರುವುದು ಅಥವಾ ಮಿತವಾಗಿ ಮಾತನಾಡುವುದು. ೩. ಕಾಯ – ಆಗಮಗಳಲ್ಲಿ ಆಪ್ತರು ಹೇಳಿರುವ ಆಚರಣೆಗಳನ್ನು ಆಚರಿಸುವುದು.

ಶಕ್ತಿತ್ರಯಗಳು ೭ – ೧ವ: ಪ್ರಭು, ಮಂತ್ರ, ಉತ್ಸಾಹ.

ಷಾಡ್ಗುಣ್ಯ ೭ – ೧ವ: ರಾಜ್ಯ ರಕ್ಷಣೆಗೆ ರಾಜನಲ್ಲಿರಬೇಕಾದ ಆರು ಗುಣಗಳು. ೧. ಸಂಧಿ – ಸಂಧಾನ. ೨. ವಿಗ್ರಹ – ಶತ್ರುತ್ವವನ್ನು ಹೊಂದುವುದು. ೩. ಯಾನ – ಯುದ್ಧಕ್ಕಾಗಿ ಹೋಗುವುದು. ೪. ಆಸನ – ಶತ್ರುವಿಗೆ ಭಯವನ್ನುಂಟುಮಾಡಲು ಯಾತ್ರೆ ಹೊರಟು ಸ್ವಸ್ಥಾನದಲ್ಲಿಯೇ ನಿಲ್ಲುವುದು. ೫. ಸಂಶ್ರಯ – ದುರ್ಗವನ್ನಾಗಲಿ, ಮತ್ತೊಬ್ಬ ರಾಜನನ್ನಾಗಲಿ ಆಶ್ರಯಿಸುವುದು. ೬. ದ್ವೈದೀಭಾವ – ಸಂಧಿ ಮಾಡಿಕೊಂಡೂ ಯುದ್ಧದ ಯೋಜನೆಯಲ್ಲಿರುವುದು.

ಸ್ವರಗತಗಳು: ೨ – ೩೧ರ ಸರಸ್ವತಿ, ಗ್ರಾಮ, ಶ್ರುತಿ, ಮೂರ್ಚನೆ, ಆನನ, ಸ್ಥಾನ, ವೃತ್ತಿ, ಶುಷ್ಕು, ಸಾಧಾರಣ, ಜಾತಿ, ವರ್ಣ, ಅಲಂಕಾರ.

ಹತ್ತು ಮುನಿಧರ್ಮಗಳು: ೧. ಉತ್ತಮಕ್ಷಮಾ – ಕೋಪವನ್ನು ಪೂರ್ಣವಾಗಿ ತೊರೆದು ಯಾರು ಯಾವ ಕೇಡು ಮಾಡಿದರೂ ಸಹಿಸಿಕೊಳ್ಳುವುದು. ೨. ಮಾರ್ದವ – ಅಹಂಕಾರವನ್ನು ಮೆಟ್ಟಿ ವಿನಯವನ್ನು ಬೆಳಸುವುದು. ೩. ಆರ್ಜವ – ಮರೆಮೋಸಗಳನ್ನು ಬಿಟ್ಟು ಸರಳತೆಯಿಂದಿರುವುದು. ೪. ಸತ್ಯ – ನಿಜವನ್ನೆ ಆಡುವುದು. ೫. ಶೌಚ – ಕೆಟ್ಟ ಆಲೋಚನೆ, ಕೆಟ್ಟಮಾತು, ಕೆಟ್ಟ ಕೆಲಸಗಳಿಲ್ಲದೆ ಶುಚಿಯಾಗಿರುವುದು. ೬. ಸಂಯಮ – ಇಂದ್ರಿಯನಿಗ್ರಹ ಮತ್ತು ಪ್ರಾಣಿದಯೆ. ೭. ತಪಸ್ಸು – ಉತ್ತಮವಾದ ತಪಸ್ಸು ಮಾಡುವುದು. ೮. ತ್ಯಾಗ – ಪ್ರಾಪಂಚಿಕ ವಿಷಯಗಳಲ್ಲಿ ಆಸಕ್ತಿಯನ್ನು ತೊರೆಯುವುದು. ೯. ಆಕಿಂಚನ್ಯ – ತನ್ನದಲ್ಲದ ಯಾವುದನ್ನೂ ತೆಗೆದುಕೊಳ್ಳದಿರುವುದು. ೧೦. ಬ್ರಹ್ಮಚರ್ಯ – ಮನೋವಾಕ್ಕಾಯಗಳಿಂದ ಸ್ತ್ರೀವಿಷಯಾಸಕ್ತಿಯನ್ನು ಬಿಡುವುದು.

ಹದಿನಾಲ್ಕು ಪುಬ್ಬಗಳು ೧೪ – ೫೩ವ: ೧ ಉತ್ಪಾದ – ಉತ್ಪತ್ತಿಯ ಸಮಗ್ರ ತಿಳುವಳಿಕೆ. ೨. ಅಗ್ರಾಯಿಣಿ – ಜೀವ ಪರ್ಯಾಯಿಗಳ ವಿವರವುಳ್ಳುದು. ೩. ವೀರ್ಯಾನುಪ್ರವಾದ ಅನಂತವೀರ್ಯಗುಣದ ವಿವರಣೆ ಮಾಡುವ ಅನುವದಿಸುವ ಶಕ್ತಿ. ೪. ಆಸ್ತಿನಾಸ್ತಿಪ್ರವಾದ ಆಸ್ತಿಕ್ಯ ನಾಸ್ತಿಕ್ಯಗಳ ಸ್ಪಷ್ಟ ಜ್ಞಾನ ೫. ಆತ್ಮ ಪ್ರವಾದ – ಆತ್ಮದ ಪೂರ್ಣ ಕಲ್ಪನೆ. ೬. ಸತ್ಯಪ್ರವಾದ ಸತ್ಯದ ತಿಳುವಳಿಕೆ. ೭. ಜ್ಞಾನಪ್ರವಾದ – ಸಮ್ಯಕ್‌ಜ್ಞಾನದ ಸಂಪೂರ್ಣ ತಿಳುವಳಿಕೆ. ೮. ಕರ್ಮಪ್ರವಾದ – ಕರ್ಮದ ಸಂಪೂರ್ಣ ತಿಳುವಳಿಕೆ. ೯. ಪ್ರತ್ಯಾಖ್ಯಾನ – ತಿರಸ್ಕಾರದ ಕಲ್ಪನೆ. ೧೦.ವಿದ್ಯಾನುವಾದ – ವಿದ್ಯೆಯನ್ನು ಅನುವಾದ ಮಾಡುವ ಸಾಮರ್ಥ್ಯ. ೧೧. ಕಲ್ಯಾಣನಾಮಧೇಯ – ಆತ್ಮ ಹಿತದ ಕಲ್ಪನೆ. ೧೨. ಪ್ರಾಣವಾದ – ಪ್ರಾಣದ ಕಲ್ಪನೆ. ೧೩. ಕ್ರಿಯಾವಿಶಾಲ – ಕ್ರಿಯೆಯ ಸ್ವರೂಪ. ೧೪. ಲೋಕಬಿಂದುಸಾರ – ಲೋಕದ ತಿಳುವಳಿಕೆ.

ಹನ್ನೆರಡು ಅಂಗಗಳು ೧೪ – ೫೩ವ: ೧.ಆಚಾರ – ಚಾರಿತ್ರ್ಯ ಯಾವ ರೀತಿ ಇರಬೇಕೆಂದು ಹೇಳುವ ಶಾಸ್ತ್ರ ವಿಭಾಗ. ೨. ಸೂತ್ರಕೃತ – ಶಾಸ್ತ್ರದ ಸೂತ್ರ ರಚಿಸುವಿಕೆ. ೩. ಸ್ಥಾನ – ಸ್ಥಳ ವಿಶೇಷಗಳ ಕಲ್ಪನೆಯ ವಿವರವುಳ್ಳದು; ಲೋಕಾಲೋಕಗಳ ವರ್ಣನೆಯುಳ್ಳುದು (?). ೪. ಸಮವಾಯ – ಶಾಸ್ತ್ರಗಳ ಅಂಗೋಪಾಂಗಗಳ ನಿತ್ಯಸಂಬಂಧಜ್ಞಾನ. ೫. ವ್ಯಾಖ್ಯಾಪ್ರಜ್ಞಪ್ತಿ – ಶಾಸ್ತ್ರ – ವಚನಗಳಿಗೆ ವಿವರಣ ಮಾಡುವ ಶಕ್ತಿ. ೬. ಜ್ಞಾತೃಧರ್ಮಕಥಾ – ಸಮ್ಯಕ್‌ ಜ್ಞಾನಿಗಳ ಕಥೆಯ ವಿವರ. ೭. ಉಪಾಸಕಾಧ್ಯಯನ – ಉಪಾಸನೆಯನ್ನು ವಿವರಿಸುವ ಶಾಸ್ತ್ರವಿಭಾಗ. ೮. ಅಂತಕೃದ್ಧಶಾ – ಕರ್ಮದ ಕೊನೆಯ ಅವಸ್ಥೆಗಳನ್ನು ವಿವರಿಸುವ ಶಾಸ್ತ್ರವಿಭಾಗ. ೯. ಅನುತ್ತರೌಪಪಾತಿಕ – ಅನಂತರ ಹುಟ್ಟುವ ಅವಸ್ಥೆಯ ವಿವರ. ೧೦. ಪ್ರಶ್ನವ್ಯಾಕರಣ – ಪ್ರಶ್ನೆಮಾಡುವುದು, ವ್ಯಾಕರಣಗಳ ವಿವರವುಳ್ಳದು. ೧೧. ವಿಪಾಕಸೂತ್ರ – ಪುಣ್ಯ ಹಾಗೂ ಪಾಪಗಳ ಫಲಗಳ ವರ್ಣನೆಯುಳ್ಳುದು. ೧೨. ದೃಷ್ಟಿವಾದ – ಪರಿಕರ್ಮ, ಸೂತ್ರ, ಪ್ರಥಮಾನುಯೋಗ, ಪೂರ್ವಗತ ಮತ್ತು ಚೂಲಿಕಾ ಎಂಬ ಐದು ಖಂಡಗಳಿವೆ.

ಹನ್ನೆರಡು ತಪಗಳು ೧೪ – ೫೨ವ: ೧. ಅನಶನ – ಉಪವಾಸ. ೨. ಅವಮೌದಾರ್ಯ – ಉನೋದರತೆ, ನಿರಾಹಾರ ತಪಶ್ಚರ್ಯ. ೩. ವೃತ್ತಿಪರಿಸಂಖ್ಯಾನ – ಊಟಕ್ಕೋಸ್ಕರ ಹೋಗುವ ಮನೆಗಳ ನಿಯಮ ಮೊದಲಾದವನ್ನು ಮಾಡಿಕೊಳ್ಳುವುದು. ೪. ರಸಪರಿತ್ಯಾಗ – ಆರೂ ರಸಗಳನ್ನು ಇಲ್ಲವೆ ಒಂದರಡನ್ನು ಬಿಡುವುದು. ೫. ಏಕಶಯ್ಯಾಸನ – ವಿವಿಕ್ತಶಯ್ಯಾಸನ, ಏಕಾಂತಸ್ಥಾನದಲ್ಲಿರುವುದು ಮತ್ತು ಮಲಗುವುದು. ೬. ಕಾಯಕ್ಲೇಶ – ಶರೀರಕ್ಕೆ ಕಷ್ಟ ಕೊಡುವುದು. ೭. ಪ್ರಾಯಶ್ಚಿತ್ತ – ದೋಷಕ್ಕಾಗಿ ದಂಡಕೊಡುವುದು. ೮. ವಿನಯ – ರತ್ನತ್ರಯಕ್ಕೂ ಅದನ್ನು ಧರಿಸಿದವರಿಗೂ ವಿನಯ ತೋರಿಸುವುದು. ೯. ವೈಯಾಪೃತ್ಯ – ವೈಯಾವೃತ್ಯ, ಪಾದಸಂವಾಹನ ಮೊದಲಾದವುಗಳಿಂದ ಗುರುಗಳನ್ನೂ ಮುನಿಗಳನ್ನೂ ಸೇವಿಸುವುದು. ೧೦. ಸ್ವಾಧ್ಯಾಯ – ಶಾಸ್ತ್ರಗಳನ್ನು ಓದುವುದು. ೧೧. ಧ್ಯಾನ – ಧ್ಯಾನ ಮಾಡುವುದು; ಇದರಲ್ಲಿ ಆರ್ತ, ರೌದ್ರ, ಧರ್ಮ, ಶುಕ್ಲ ಎಂಬ ನಾಲ್ಕು ಬಗೆಯಿದೆ. ೧೨. ಉತ್ಸರ್ಗ – ವ್ಯುತ್ಸರ್ಗ, ಶರೀರದ ಮೇಲಿನ ಮಮತೆಯನ್ನು ಕಡಿಮೆ ಮಾಡುವುದು.

ಹಸ್ತಾಂಗುಳಿಗಳು ೫ – ೨ವ ಸಮ, ಪ್ರಹರಣ, ವಿಶದ, ಶಮ, ಮಧುರ, ಜಸ, ರಸ, ದವ,ವೃಷ್ಟಿ, ಜಿತ, ಶ್ರಮ, ಸ್ವೇದ, ದುಸ್ಥಿರ, ನಖ.