ಕಂ || ವಿಭವದ್ವಿಭ[ಪತಿ]ವಿಕ್ರಮ
ನಭಿನುತ ದುಗ್ಧಾಬ್ಧಿವಿಭ್ರಮಾಭಯಶಂಕಾ
ಶುಭಭೂಷಣ ಭೃದ್ಭಾವಜ
ಸುಭಗಂ ವಸುದೇವನಿಂತು ಸುಖಮಿಪ್ಪಿನೆಗಂ ೧

ವ || ಅತಿಮುಕ್ತಕಋಷಿ ವಿಹಾರಿಸುತ್ತಮಾ ಪೊೞಲ್ಗೆವಂದಿರ್ದುಪವಾಸದ ಪಾರಣೆಯೊಳ್ ಚರ್ಯಾಮಾರ್ಗದಿಂ ಬರುತ್ತಿರೆ ಕಂಸನ ಮನೆಯ ಮುಂದೆ ಬಪ್ಪಾಗಳವರ ಬರವಂ ಜೀವಂಜಸೆ ಕಂಡು ಮೈದುನಋಷಿಯ ಕಾಡಲೆಂದು ಪರಿದಡ್ಡಮಿರ್ದು ನಿಮ್ಮೊಡವುಟ್ಟಿದ ದೇವಕಿಯಾನಂದವಸ್ತ್ರಮಿವು ನೋಡಿಮೆಂದು ಪಡಲಿಗೆಯೊಳಿಟ್ಟು ತೋಱಿ[ದೊ]ಡೆ ನಾಣ್ಚಿ ತೊಲಗಿಪೋಗುತ್ತಿರೆ ಮತ್ತಮಡ್ಡಂಬಂದು ತೋಱಿದೋಱಿಕಾ……

ಕಂ || ದೇವಕಿಗೆ ಪುಟ್ಟಿದಾತಂ
ಭೂವಿದಿತಂ ನಿನ್ನ ಗಂಡನು[೦] ತಂದೆಯುಮೇಂ
ದೇವರ್ ಕಾವಡಮವನಣ
ಮೋವದೆ ಕೊಲುಂದಲೇಕೊ………… ೨

ವ || ……ನಸು ತಾನವಯನುತಮಂತೆ ಭಟ್ಟಾರರ್ ಪೋದರಾ ಮಾತಂ ಕೇಳುತಂ ಜೀವಂಸೆಯ ಜೀವಂ ಪೋಗೆ ಬೆಕ್ಕಸಮಾಗಿ ಮಗುೞ್ದು ಬಂದು ಪಾಸಿನೊಳ್ ಮೆಯ್ಯನೀಡಾಡಿ ಋಷಿವಾಕ್ಯಂ ತಪ್ಪದೆಂದು ಬೆಚ್ಚನೆ ಸುಯ್ದು ಮಱುಗುತಿರ್ದಳನ್ನೆಗಂ ಕಂಸಂ ಬಂದು ಇಂತೇಕೆ ಚಿಂತಿಸುತಿರ್ದೆಯೆಂದು ಕೀಱಿ ಬೆಸೆಗೊಂಡೊಡೆಮ್ಮ ಮಯ್ದುನರಪ್ಪ ಅತಿಮುಕ್ತಕಋಷಿಯರ್ ಬಂದರವರಂ….ತ್ತಂ ತೆಗಳ್ದು ಕಾಡಿದೊಡೆ ಸಿಗ್ಗಾಗಿ ದೇವಕಿಗೆ ಪುಟ್ಟಿದಾತಂ ನಿನ್ನಾಣ್ಮ[ನುಮಂ] ನಿಮ್ಮಮ್ಮ ಸುಮಂ ಕೊಂದು ನೆಲನೆಲ್ಲಮನಾಳ್ಗುಂ ನೀಂ ಬೆಸೆಯದಿರೆಂದೊಡೆನಗೆ ಮಹಾಪ್ರಳಯಂ ಕವಿದಂತಾಗಿರ್ದುದೆನೆ ಕಂಸನಿಂತೆಂದಂ

ಕಂ || ಉಪವಾಸಪರಿಶ್ರಮದಿಂ
ವ್ಯಪಗತಮತಿಯಾಗಿ ನುಡಿದೊಡವರದನಂತ
ಪ್ಪಪವಾದಕಂಜಲಕ್ಕುಮೆ
[ಯು]ಪಾಯಮಂ ಬಲ್ಲೆನೆಂದು ಸಂತೈಸಿರ್ದಂ ೩

ವ || ಇರ್ದು ಕೆಲವಾನುಂ ದಿವಸದೊಳ್ ಕಂಸಂ ವಸುದೇವಸ್ವಾಮಿಯಲ್ಲಿಗೆ ಪೋಗಿ ದೆವಕಿ ಬೆಸ[ಲೆ]ಯಪ್ಪಂದೆನ್ನ ಮನೆಯೊಳ್ ಬೆಸಲೆಯಪ್ಪದಂತಲ್ಲದೆ ತವ[ರ್ಮ]ನೆಯ ಪೆಂಪುಮೆನ್ನ ಸೌಧರ್ಮಿಕೆಯ ಕೊಂಡಾಟಮುಮೆಸೆಯದೀ ಸ್ಥಿತಿಯನೀಯಲ್ವೇೞ್ಪುದೆಂದು ಭರಂಗೆಯ್ದು [ನು]ಡಿದೊಡಿತ್ತೆನೆಂದೊಡೊಸೆದು ಮಗುೞ್ದುಬಂದಿರ್ದೊಂ ವಸುದೇವನುಮಾ ಪ್ರಪಂಚಮಂ ದೇವಕಿಗೆ ಪೇೞ್ದೊಡೆ ಪೊಲ್ಲಕೆಯ್ದಿರವನಾವ ಕಾರಣದೊಳ್ ಬೇಡಿದನೆಂದಱಿಯದೇಕೊಡಂಬಟ್ಟಿ ರೆಂದೊಡದನತಿಮುಕ್ತಕಋಷಿಯರಂ ಬೆಸಗೊಳ್ವಂ ಬಾಯೆಂದಿರ್ವರುಂ ಪೋಗಿ ಭಟ್ಟಾರರಂ ಬಂದಿಸಿ ಮುಂದೆ ಕುಳ್ಳಿರ್ದು ಕಂಸನುಂ ಬೇಡಿಕೊಂಡ ಬಗೆಯಂದಮಂ ಬೆಸೆಗೊಂಡೊಡ ದಕ್ಕಂಜದಿರಿಂ ಮೂಱುಸೂೞ್ ಪುಟ್ಟಿದ ಮಕ್ಕಳುಮಂ ಮಾಯಾಶಿಶುಗಳಂ ನಿನ್ನ ಮುಂದಿಕ್ಕಿ ನೈಗಮದೇವಂ ನಿನ್ನ ಕೂಸುಗಳಂ ಕೊಂಡುಪೋಗಿ ನಡಪುಗುಂ ಬೞಿಕಿನ ಗರ್ಭದೊಳೊರ್ವಂ ಕಾರಣಪುರುಷನೇೞು ತಿಂಗಳೊಳ್ ಪುಟ್ಟುಗುಮಾತನಂ ನೀಂ ಪುಟ್ಟಿದಾಗಳೆ ಕಳಿಪುವುದೆನೆ ಬಂದಿಸಿ ತಮ್ಮಾವಾಸಕ್ಕೆ ಬಂದಿರ್ದು ಕೆಲವು ದಿವಸದಿಂ ಗರ್ಭವಾಗಿ ನವಮಾಸಂ ನೆಱೆದಂದು ಕಂಸಂ ದೇವಕಿಯಂ ತನ್ನ ಮನೆಗೊಯ್ದಿರಿಸಿದೊಡೆ

ಕಂ || ಅಮಳಂ ಪೆತ್ತಾಗಳ್ ನೈ
ಗಮದೇವಂ ಕೃತಕಶಿಶುಗಳಂ ತಂದಂದಾ
ಕಮಳಾಸ್ಯೆಯ ಮುಂದೊ[ಯ್ದಿ]
ಟ್ಟು ಮಾಯದಿಂ ಕೊಂಡುಪೋದನಾ ಕೂಸುಗಳಂ ೪

ವ || ಅಂತೆ ಮತ್ತೆರಡುಂ ಸೂೞ್‌ ಪೆತ್ತಮಳ್ಗಳನಾ ದೇವಂ ಕೊಂಡುಪೋಗಿ ಮಳಯಪರ್ವತದೊಳ್ ನಡುಪುತಿರ್ದನಿತ್ತ ಕಂಸಂ ದೇವಕಿಗೆ ಬೆಸೆಲೆಯಾದಂದೆಲ್ಲಮಾಕೆಯ ಮುಂದಿರ್ದ ಮಾಯಾಶಿಶುಗಳನಾಕೆ ಪೆತ್ತ ಕೂಸುಗಳೆಂದೆ ಬಗೆದು ಕೊಂಡೊಯ್ದು ಶಿಲೆಯೊಳ್ ಪೊಯ್ದು ಕೊಂದತಿಮುಕ್ತಕರಾದೇಸಮಂ ಪುಸಿಮಾಡಿದೆನೆಂದು ಸಂತೋಷದೊಳಿರ್ದು ಮತ್ತಮಾಕೆಗೆ ನಾಲ್ಕನೆಯ ಗರ್ಭದಂದು ಕಂಸನ ಕಾಪಂ ಕೈಕೊಳ್ಳದೆ ಏೞನೆಯ ತಿಂಗಳೊಳ್ ಬಸಿ[ರ್ಮ]ಸಗಿ ಭಾದ್ರಪದಮಾಸದ ಶುದ್ಧ ದ್ವಾದಶಿಯುಂ ಶ್ರವಣನಕ್ಷತ್ರದಂದರ್ಧರಾತ್ರದ ಶುಭಲಗ್ನದೊಳ್ ಮಗನಂ ಪೆತ್ತಾಗಳ್ ದೇವಕಿ ಮುನ್ನಿನ ಕೂಸುಗಳಂ ಕಾಯಲಾರ್ತೆವಿಲ್ಲಿನ್ನಪ್ಪೊಡಮಿ ಕೂಸಂ ಕಾಯಲಾಪೊಡೊಳ್ಳಿತೆಂದು ವಸುದೇವಂಗೆ ಪೇೞ್ದೊಡಾತನಾಗಳೆ ಬಂದು ಕೂಸನೆತ್ತಿಕೊಂಡೀಗಳ್ ಮನೆಯೊಳ್ ನಡೆವಾಗಳ್ ಬಲದೇವಕುಮಾರನಱಿದು ಪರಿತಂದು ಕೊಡೆಯಂ ಪಿಡಿದುಬರೆ ಪೊಱಮಟ್ಟು ಪೊೞಲ ಗೋಪುರದ್ವಾರಮನೆಯ್ದುವಾಗಳಿನ್ನೆಂತೀ ಬಾಗಿಲಂ ತೆಱವುದೆಂಬ ಚಿಂತೆಯೊಳಿರೆ ಕೂಸು ಗಂಭೀರಧ್ವನಿಯಿಂ ಸೀಂತಡದನಾ ಗೋಪುರದ ಬಾಗಿಲ್ಮಾಡದ ಮೇಗಸಿಪಂಜರದೊಳ್ ಸಂಕಲೆಯೊಳಿರ್ದುಗ್ರಸೇನಮಹಾರಾಜಂ ಕೇಳ್ದು

ಕಂ || ಜೀವಂ ಸ್ಥಿರಾಯು ಸತ್ಸೌ
ಖ್ಯಾವಹಮರಿನೃಪತಿಮರ್ದನೋದಯ ವಿಪುಳ
ಶ್ರೀವರಸತ್ವಗಮಖಿಳ ಧ
ರಾವಳಯ ವಿಭುತ್ವಮಕ್ಕೆ ನಿನಗೆಂದಾಗಳ್ ೫

ವ || ಅದಂ ಕೇಳ್ದು ಕರಮೊಳ್ಳಿತ್ತಾಯ್ತು ಎಂದು ಬಾಗಿಲನೆಯ್ದಿ ನಿಂದಾಗಳ್ ಕೂಸಿನ ಕಾಲುಂಗುಟಂ ಪ[ಡಿ]ಯಂ ತಾಗಿದಾಗಳ್ ನ[ಗರ] ದೇವತೆ ಸನ್ನಿಹಿತಮಾಗಿ ಪುಣ್ಯಪುರುಷನೀತನ ಪೋಗಿಂಗೆ ವಿಘ್ನಮಾಗಲೀಯೆನೆಂದು ಪಡಿಗಳಂ ತೆಱೆದಾಗಳ್ ಪೊಱಮಟ್ಟು ಕತ್ತಲೆಯೊಳ್ ಪೋಪ ದೆಸೆಯನಱಿಯದೆ ನಿಂದೊಡೆ ದೇವತಾಪ್ರೇರಣೆಯಂ ಧವಳ ವೃಷಭೇಂದ್ರನೊಂದು ಬಂದೆರಡುಂ ಕೋಡತುದಿಯೊಳ್ ಬೆಳಗಿದ ಸೊಡರ್ವೆರಸು ಮುಂದೆ ನಡೆವಾಗಳದಱ ಬೆನ್ನನೆ ನಡೆದು ನಾಡೆಯಂತರಮಂ ಪೋಪಾಗಳ್ ಕಾಳಿಂದಿಯೆಂಬ ತೊಱೆಯ ತಡಿಯ ಕಲ್ಲೊಳ್ ಕಳಕಳಮಪ್ಪ ಧ್ವನಿಯಂ ಕೇಳ್ದು ನವಿಲ ಸರಮಂ ಕೇಳ್ದ ಪಾವಿನಂತ[ಗಿ]ದಿನ್ನೆಂತು ಪೋಪ ಬಗೆಯಿನೆಯ್ದೆ ಬರ್ಪಾಗಳಾಕುಳತಾವರ್ತ ನಿವರ್ತನ ಪರಿತಾವರ್ತನ ವಿಭಿನ್ನ ತರಂಗ ಭಂಗುರ ಸಫೇನ ಬುದ್ಬುದ ಚಟುಳ ಕುಟಿಳ ಭುಜಂಗ ಝಷ ನಕ್ರ ಶಿಂಶುಮಾರಾ[ದಿ] ಜಲಚರ ಸಂಕೀರ್ಣೋಭಯ ತಟಪ್ರಾಪ್ತ ಪೂರ್ಣ ಮಹಾನದಿಯನಾ ವೃಷಭಂ ತೊಟ್ಟನೆ ಪಾಯ್ದು ನಡೆವಾಗಳೆರಡುಂ ಕೆಲಕ್ಕೆ ನೀರುಡುಗಿ ಕೇರ್ಗಟ್ಟಿದಂತೆ ನಿಲೆ ಕಂಡದಱ ಬೞಿಯನೆ ನಡೆದು ತೊಱೆಯಂ ಕಳಿದೊಂದು ಕೃಷ್ಣಯಕ್ಷಿ ನಿವಾಸಮನೆ[ಯ್ದಿ]ದೊಡಾ ವೃಷಭಮದೃಷ್ಯಮಾಯ್ತವರಾ ದೇವತಾಸ್ಥಾನದೊಗಳಂ ಪೊಕ್ಕಿಪ್ಪಿನಮಲ್ಲಿಗೆ ಸಮೀಪದೊಳೊಂದು ತುಱುಪಟ್ಟಿಗೆಲ್ಲಂ ಪ್ರಧಾನ ನಂದಗೋವನೆಂಬಂ ತನ್ನ ಪೆಂಡತಿ ಗಂಡುಗೂಸುವಡೆವೆನಕ್ಕೆಂದಾ ಬಳಾರಿಗೆ ಪರಸಿ ಪೆಣ್ಗೂಸಂ ಪೆತ್ತಿದನಾನೊಲ್ಲೆನಾ ದೇವತೆಗೋಪ್ಪಿಸೆಂದು ತನ್ನಾಣ್ಮನ ಕಯ್ಯೊಳ್ ಕೊಟ್ಟೊಡಾತಂ ಕೊಂಡು ಬಂದು ದೇವತೆಗೆ

ಕಂ || ಎನಗಕ್ಕೆ ಗಂಡುಗೂಸೆಂ
ದನುನಯದಿಂ ನಿನಗೆ ಪರಸಿ ಪೊಡವಂಟ್ಟುಂಮ
ತ್ತೆನಗಾದುದು ಪೆಣ್ಮಗುವಿದೆ
ನಿನಗಕ್ಕಾನೊಲ್ಲೆನೆಂದು ಮಡಗಿಟ್ಟಾತಂ ೬

ವ || ಮಗೞ್ದು ಪೋಗೆ ವಸುದೇವಂ ಕೇಳ್ದು ನಮ್ಮ ಕೂಸನೀತಂಗೆ ದೇವತೆ ಕೊಟ್ಟಂತೊಪ್ಪಿಸುವಮೆಂದು ಬಲದೇವನೊಳಾಳೋಚಿಸಿ ತಮ್ಮ ಕೂಸನಾ ದೇವತೆಯ ಮುಂದಿಟ್ಟಾ ಕೂಸನೆತ್ತಿಕೊಂಡಾ ದೇವತೆಯ ಪೆಱಗುಳಿದಿರ್ದು ಬಾ ಬಾ ನಿನಗೆ ಗಂಡು ಗೂಸನೀವೆನೆಂದೊಡಾ ದೇವತೆಯೆ ಕರೆದುದೆಂದು ಮಗುೞ್ದುಬಂದಾ ಗಂಡುಗೂಸನಱಿದೆತ್ತಿಕೊಂಡು ಪೋಗಿ ತನ್ನ ಪೆಂಡತಿಗೆ ದೇವತೆ ಗಂಡುಗೂಸನಿತ್ತು ದೆಂದೊಡೊಸಗೆಯಂ ಮಾಡಿ ಕೃಷ್ಣಯಕ್ಷಿ ಕೊಟ್ಟೊಡೀತನನಂತೆ ಕೃಷ್ಣನೆಂಬ ಪೆಸರಕ್ಕೆಂದು ಪರಸಿ ನಡಪುತ್ತಿರ್ದರಿತ್ತ ವಸುದೇವನುಂ ಬಲದೇವಕುಮಾರನುಂ ಆ ಕೂಸಂ ಕೊಂಡುಬಂದು ದೇವಕಿಯ ಮುಂದಿಕ್ಕಿ ನಿಶ್ಚಿಂತ[ದಿ] ನಿರ್ದರನ್ನೆಗಂ ಬೈಗಿರುಳು ಕಂಸಂ ದೇವಕಿಯು ಬೆಸಲೆಯಾದುದಂ ಕೇಳ್ದು ಬಂದು ಕಂಡವಂ ಪೆಣ್ಗೂಸಪ್ಪುದಱಿನೀ ಕೂಸಿನಾಣ್ಮನಿಂದ ಮೆತ್ತಾನುಂ ಕೇಡಕ್ಕುಮೆಂಬ ಬಗೆಯೊಳಾ ಕೂಸಿನ ಮೂಗನಡಂಗೊತ್ತಿ ವಿಕಟಂಮಾಡಿ ಪೋದನಂತಾ ಕೂಸು ಬಳೆದು ಜವ್ವನೆಯಾದಂದು ತನ್ನ ವಿರೂಪೆಯಾದುದಕ್ಕೆ ಪೇಸಿ ನಿರ್ವೇಗಮಾಗಿ ತಪಂಬಟ್ಟು ಪೋಗಿ ತೀರ್ಥಯಾತ್ರೆಗೆಯ್ಯುತ್ತಂ ಪೋಗಿ ವಿಂಧ್ಯಪರ್ವತಮಂ ಪೊಕ್ಕಲ್ಲಿರ್ದು

ಕಂ || ಓವದೆ ಮೆಯ್ಯಂ ದಂಡಿಸಿ
ಭಾವವಿಶುದ್ಧಿಯೊಳೆ ನೆಗಳೆ ಕಂಡು ಕಿರಾತರ್
ದೇವತೆಯೆ ನೆಟ್ಟನೆಂದು
ದ್ಭಾವಿಸಿ ಪೂಜಿಸುತಮಿರ್ದರಿಪ್ಪನ್ನೆವರಂ ೭

ವ || ಒಂದು ದಿವಸಂ ಪುಲಿ ಬಂದು ಪಾಯ್ದು ಕೊಂದು ತಿಂದು ಪೋದಡವರ್ ಮುನ್ನೆ ಪೂಜಿಸುವ ಬೇಡರಾ ದೇವತೆಯಂ ಕಾಣದೆ ಮೂಱುಬೆರಳಿರ್ದುವಂ ಕಂಡವಂ ನಿಱಿಸಿ ಪೂಜಿಸುತಿರ್ದರವುಂ ಕೊೞೆದೊಡೆ ಮೂಱು ದಕ್ಕಂ ನಿಱಿಸಿ ಮನ್ನಿಸುತ್ತಿರೆ ವಿಂಧ್ಯವಾಸಿನಿ ಭಗವತಿಯೆಂದಡಿತ್ತ ಪೆಸರ್ ನೆಗೞ್ದೆಲ್ಲೆಡೆಯೊಳಂ ಪ್ರಸಿದ್ಧಮಾಗಿ ನಡೆದತ್ತಿತ್ತ ಕಂಸನ ಪೊೞಲೋಳ್

ಚಂ || ಉರಿದುವು ಧಾತ್ರಿಯಿಂ ದೆಸೆಗಳಂಬರದಿಂ ರುಧಿರಾಂಬುಧಾರೆಗಳ್
ಸುರಿದುವು ತಾರಕಾವಳಿಗಳುಳ್ಕಿ ಪಗಲ್ ಬಿಡದತ್ತಮಿತ್ತಲುಂ
ಪರಿದುವು ಭೂಮಿ ಕಂಪಿಸುತಮಿರ್ದುದು ದೀಪ್ತದೊಳಿರ್ದು ಬಳ್ಳುಗಳ್
ಕರೆದುವು ಪೊಲ್ಲವಪ್ಪ ಕನಸಂ ಪರಿವೀಕ್ಷಿಸಿದಂ ನರಾಧಿಪಂ ೮

ವ || ಅಂತಾದುತ್ಪಾತಂಗಳ್ಗಂ ಪೊಲ್ಲಗನಸಿಂಗಮೇವಯ್ಸಿ ಚಿಂತಾಕ್ರಾಂತನಾಗಿರ್ದು ತನ್ನ ನಚ್ಚುವ ವರುಣನೆಂಬ ನೈಮಿತ್ತಿಕಂಗೆ ಬೞಿಯಟ್ಟಿಬರಿಸಿ ಮನ್ನಿಸಿರ್ದೆನಗೆ ಪಗೆವರೊಳರಾದರೆ ಪೇೞಿಮೆಂದೊಡವರ್ ಬಗೆದು ನೋಡಿ ಪಗೆವನೊರ್ಬಂ ಬಳೆದಪ್ಪನಾತಂ ಪೆರ್ಚಿದೊಡಾರ್ಗ ಮ ಸಾಧ್ಯಮಕ್ಕುಮಿಗಳೆ ಕೆಡಿಸು…….ರುಮೆ ಬಗೆಯಿಮೆಂದು ಪೋದ ಬೞಿಯಮೆಲ್ಲಿ ಪುಟ್ಟಿದನೆಂಬುದನೆಂತು ಭೇದಿಸುವೆನೆಂತು ಛೇದಿಸುವೆನೆಂದು ಬಗೆದು ಶುಚಿರ್ಭೂತನಾಗಿ ದರ್ಭಶಯನದೊಳಿರೆ ಮುನ್ನಿನ ಭವದೊಳ್ ಸಾಧ್ಯಮಾದೇೞುಂ ವ್ಯಂತರದೇವತೆಗಳ್ ಬಂದು ಬೆಸನೇನು ನೀನೇಕೆ ಚಿಂತಿಸುವೆಯೆನೆ ರಾಗದಿನೆನ್ನ ಪಗೆವನೊರ್ವಂ ಬಳೆದಪ್ಪೊಂ ಗಡಮಾತನನೆಲ್ಲಿಯಪ್ಪೊಡಮಾರಯ್ದುಮಱಿದುಂ ಬೇಗಂ ಕೊಲ್ಲಿಮೆಂದೊಡಮಂತೆಗೆಯ್ವೆಮೆಂದು ಪೋಗಿ ವಿಭಂಗಜ್ಞಾನದಿಂ ನಂದಿಗೋವನ ಮನೆಯೊಳ್ ಬಳೆದಪ್ಪನೆಂಬುದಂ ಬಗೆದಱಿದು ಬಾಳನ ಮೇಗಿನಿಬ[ರುಮೊ] ಡಮೋಪಂತೇಗಹನಮೊರ್ವರೊರ್ವರೆ ಪೋಗಿ ಸಾಧಿಸುವಮೆಂದು ಸಮಕಟ್ಟಿರ್ದು ಮುನ್ನ ಮಾಯೆ ಎಂಬ ದೇವತೆ ನಂದಗೋವನ ತುಱುಪಟ್ಟಿಗೆ ವಂದಾ ಕೂಸಿನ ದಾದಿಯ ರೂಪಂ ಕೈಕೊಂಡು ಮಾಯದ ಮಾತುಗಳಿಂ ತಡೆದೆನೆನ್ನ ಕೂಸು ಪಸಿದುದೆಂದೆತ್ತಿಕೊಂಡು ವಿಷಮಂ ಪೂಸಿದ ಮೊಲೆಯನೂಡುವಾಗಳಾತನ ಮೆಯ್ಯ ಪುಣ್ಯದೇವತೆ ಶತ್ರುದೇವತೆಯಪ್ಪುದನಱಿದು ಮುನಿಸನೊಡರ್ಚಿ

ಕಂ || ಮೊಲೆಯನೆರೞ್ಕಯ್ಯಿಂ ಪಿಡಿ
ದಲಂಘ್ಯಬಲನೊತ್ತಿ ನೆತ್ತರಂ ಪೀರ್ವಾಗಳ್
ಕೊಲಲಿವನಂ ಬಗೆದೆನ್ನೀ
ಕೊಲೆ ಕೊಲೆಯಾ[ಯ್ತೆಂದೆ]ನುತ್ತ ಮೋಡಿದಳಾಗಳ್ ೯

ವ || ಆ ದೇವತೆ ಭಯಂಗೊಂಡು ಕೋಳ್ಕೊಂಡು ಬಿಱುತೋಡೆ ಮತ್ತೆ ಕೆಲವು ದಿವಸದಿನಂಬ[ಳಿಕ್ಕಿ] ಯಾಡುವಂದು ಕೂಸಂ ಮಿಸಿಸಿ ಮನೆಯ ಮುಂದೊಂದು ಪೊರಸಿನ ಮೇಲೆ ಪಟ್ಟಿರಿಸಿದಾಗಳ್ ಮಹಾಕಾಳಿಯೆಂಬ ದೇವತೆ ಕಾಗೆಯ ರೂಪಾಗಿ ಬಂದಿೞಿಯಲೆಱಗಿದಡೆ

ಮ || ಎಡಗಯ್ಯೊಳ್ ಪಿಡಿದೊತ್ತಿ ಚಂಚುಪುಟಮಂ ನುರ್ಗಪ್ಪಿನಂ ಗಂ[ಟ]ಲಂ
ಪಿಡಿದೆತ್ತಂ ಬಲಗಯ್ಯೊಳೊತ್ತಿದೊಡೆ ಕಣ್ಪೋತಪ್ಪಿನಂ ಮುಟ್ಟುವಂ
ದೊಡಿದೇಂ ಪೊಕ್ಕಱಿಯಲ್ಕೆ ಪೋಗಿ ವಿಧಿಗೊಳ್ಳಟ್ಟಂತುಟಾಯ್ತೆಂದು ಮೆ
ಳ್ಪಡದಾ ದೇವತೆ ಕಾಗೆಗಾಗೆಗರವುತ್ತೋಡಿತ್ತು ಭೀತಾರ್ಥದಿಂ ೧೦

ತ್ರಿವಿಧಿ ||
ಅಂತಪ್ಪ ವಯಸದೊಳಂತಪ್ಪ ಬಲವೈರಿ
ಗಂತಪ್ಪ ತೆಱನೆ ಪೆಱದೇನೊ ಬಗೆದೊಡಿ
ನ್ನೆಂತಪ್ಪುದವನ ಬಲಗರ್ವಂ ೧೧

ವ || ಎಂದು ಬಾಳನ[೦]ಪಲರ್ ಪೊಗಳೆ ಬಲಂ ನೆಗೞೆ ನಡೆದಾಡುವಂದು ಪೃಥುಕನೆಂಬ ದೇವತೆ ಮಹಾರಭಸದಿಂ

ಕಂ || ಚಂಡಕ್ರೋಧದೆ ಭೋಂಕನೆ
ಬಂಡಿಯ ರೂಪಾಗಿ ಮಸಗಿ ಪರಿತರೆ ಬಾಳಂ
ಕಂಡು ಮುಳಿದೊದೆವುದುಂ ಕಾ
[ಲ್ಗೊಂ]ಡದು ಶತಖಂಡಮಾಗಿ ಕೆಡೆದತ್ತಾಗಳ್ ೧೨

ವ || ಅಂತಾ ದೇವತೆ ಕೞಲ್ದು ಬೞಲ್ದೆೞಲ್ದು ಪೋದೊಡಂದಿಂದಿತ್ತ ಪರಿವ ಬಂಡಿಯೊಳ್ ಕಾಲಂ ಕೋದನೆಂಬುರ್ವಿನದ ಮಾತು ಪರೆಯೆ ಪರಿದಾಡುವ ದೆವಸದಂದೂರ ಮಕ್ಕಳನಾಟಂದು ಬಡಿದುಮೊತ್ತಿಪಿಡಿದುಮವುಂಕಿಯುಮಡಸಿ ಕಟ್ಟಿಯುಮಿಕ್ಕಿಮೆಟ್ಟಿಯುಂ ಪುಯ್ಯಲಿಡಿಸೆ ನಿಚ್ಚಮಾತನ ಕಾರಣದಿನೆಲ್ಲರುಂ ಮನೆಗೆವಂದು ಗಾರಣಂಗುಡೆ ಯಶೋದೆಯೆಂಬೊಳಾತನ ತಾಯ್ ಬೇಸತ್ತೊಂದು ದಿವಸಂ ನೀರ್ಗೆವೋಗುತ್ತಮಾತನನೊಂದ ಪಿರಿದಪ್ಪೊರಲೊಳ್ ಕಟ್ಟಿಪೋದಡೆ

ಕಂ || ಬೞಿಯಕ್ಕೆಯ[ೞಲ] ಸೈರಿಸ
ದೞಲ್ದು ಕುಸಿದಿರದೆ ಬಾಳಕಂ ಕಡುಪಿಂದಂ
ಕೊೞೆ ದಕ್ಕನೆೞೆವ ತೆಱದಿಂ
ದೆೞೆದೊರಲಂ ಪಿರಿದನಾಗಳಬ್ಬೆಯ ಬೆನ್ನೊಳ್ ೧೩

ವ || ಪರಿವನನೂರ ಪೊಱಗಣೆಯೊಳರ್ಜುನಿಯೆಂಬ ದೇವತೆ ತಾನೆರಡು ಮತ್ತಿಯ ಮರಂಗಳ ರೂಪಾಗಿ ಬಿಡದಡಸಿದವುಂಕಿದಾಗಳ್

ಕಂ || ಒಡನೆರಡುಂ ಕಯ್ಯಿಂದಂ
ಪಿಡಿದೆರಡುಂ ಮರನನೊತ್ತಿ ನೂಂಕಿದ ಭರದಿಂ
[ದಡಸಿಯೆ ಬೇ] ರ್ಕಿತ್ತೆರಡುಂ
ಕೆಡೆದವು ಪಡೆದವು ಜನಕ್ಕೆ ಪಿರಿದುಮಗುರ್ವಂ ೧೪

ವ || ಆ ಮಹಾವ್ಯಂತರದೇವತೆಯನಂತು ಗೆಲ್ದುದಕ್ಕೆ ಗೋಪಾಲಜನಂ ಬೆಕ್ಕಸಮಾಗಿ ನೋಡುತ್ತಿರೆಯಿರೆ ತಾಯ್ ಮಗುೞು ಬರುತ್ತಂ ಕಂಡಿದೇನಬ್ಬಾ ಕೂಸಲ್ತು ರಕ್ಕಸ ನೆಂದೊಡಗೊಂಡು ಬಂದು ಮನೆಯೊಳಿರಿಸೆ ಕೆಲವು ದಿವಸದಿಂ ನೆರಮನೆ ಮುಮ್ಮನೆಯಾಕೆಗಳ್ ಯಶೋದೆಯಲ್ಲಿಗೆವಂದು ನಿನ್ನ ಮಗನ ಗೊಡ್ಡಮಂ ಕೇಳೆಂದಿಂತೆಂದರ್

ಕಂ || ಎಮ್ಮೆಮ್ಮ ಮಕ್ಕಳಂ ನಿಸ
ದಮ್ಮೋದೆ ಕನಲ್ದು ಮಸಗಿ ಪರಿದೆಡೆಯಂ ಪೊ
ಕ್ಕೆಮ್ಮುಮನೆಮ್ಮಾಣ್ಮಂದಿರು
ಮಮ್ಮುಳಿಸಿಂ ಕೆಡೆಯೆ ನೂಂಕಿ ತೊತ್ತೞದುೞಿವೊಂ ೧೫

ವ || ಇದೇನಾ[ಳ]ನೆಯುಳ್ಳರಾನೆಯಂ ಕಟ್ಟಿಯಾಳರೆ ನಿಮ್ಮ ಮ[ಗ] ನುರ್ವಿನಂ ನಾಡಿಂ ಪೊಱಗೆಯೆಂದೊಡಾಕೆಯಿಂತೆಂದಳ್

ಕಂ || ಓವಿದನಂದಮನಱಿಯಿರೆ
ದೇವತೆಗಳ್ ಕೊಲಲು ಬಂದೊಡಱಿದಡಸಿ ತಗು
ಳ್ದೋವದವಂ ನಿಗ್ರಹಿಸಿದೊ
ಡೋವೋವೆಂದೊಳಱಿ ಪೆಳಱಿ ಪೋದವು ಭಯದಿಂ ೧೬

ಇವನಾರಮೂರ್ತಿಯೊಳ್ ಸಂ
ಭವಿಸಿದನೆಂದಱಿಯೆನಬ್ಬ ಬಳೆದೊಡಿವಂಗೀ
ಭುವನಮಹಿಭುವನಮಮರರ
ಭುವನಂ ಮುಳಿಸಿಂಗೆ ನೆಱೆಯವೆಂಬಂತಕ್ಕುಂ ೧೭

ವ || ಏವೆನೆನಗೆ ಬಸವಲ್ಲಂ ಕೂಸೆಂದು ಸೈರಿಸುವೊಡಂ ಸೈರಿಸದೊ……….. ಪೋದ ಬೞಿಯಂ ಕೆಲದಿವಸದಿಂದೊಂದೆಡೆಯೊಳ್ ಕೂಸುಗಳೊಡನಾಡುತ್ತಿರ್ದಲ್ಲಿ ತಾಳಜಂಘಿನಿಯೆಂಬ ದೇವತೆ ತಾೞಮರನಾಗಿರ್ದು ಕೊಡದಿಂ ಪಿರಿಯವು ಪಣ್ಗಳೊಳ್ ಸಿಡಿಲ್ಪೊಡೆದಂತೆ ಫಣಿಲ್ಫಣಿಲೆಂದೆಡೆವಿಡದೆ ತಲೆಯನೊಡೆವಿನಂ ಬೀೞ್ತರೆ ಬಾಳಕಂ

ಕಂ || ಕಡುಮುಳಿದು ಬೀೞ್ವ ಪಣ್ಗಳ
ನೊಡೆಯೆ ಕರಾಗ್ರದೊಳೆ ಪೊಡೆಯೆ ಮಾಣದಗುರ್ವಂ
ಪಡೆಯೆ ಪಿಡಿದೊತ್ತಿದಾಗಳ್
ಕೆಡೆಯೆ ಮರಂ ಬೆರ್ಚಿ ತಾಳಜಂಘಿನಿ ಪೋದಳ್ ೧೮

ವ || ಅಂತು ಛಲಂಗೆಟ್ಟು ಬಾಯಂಬಿಟ್ಟು ಪತ್ತುವಿಟ್ಟು ಮಾಯಮಾಗಿ ಪೋಗೆ ಜನಕ್ಕೆ ವಿಸ್ಮಯಮಾಗೆ ಬಾಳನ ಸಹಸಂ ಕಾಳನ ಸಾಹಸದಂತಗುರ್ವಾಗೆ ಮತ್ತಂ ಕೆಲವು ದಿವಸಕ್ಕೆ ಗಾರ್ದಭಿಯೆಂಬ ದೇವತೆ ಕತ್ತೆಯ ರೂಪಾಗಿ ಗಾಳಿಗೊಂಡಂತೆ ಮಸಗಿ ಬಾಯಂ ತೆಱೆದು ಕೇಳ್ದರೆರ್ದೆ ತೆಱೆವಂತೆ ಮಹಾರಭಸದಿಂದೂಳುತಂ ಪರಿತರೆ ಜನಮೆಲ್ಲಂ ಬೆರ್ಚಿಬೆಗಡುಗೊಂಡಡೆ ಕೆಲರೊಳಂಗಡಗಿ ನೋಡೆ ಕುಮಾರಂ ಕಂಡದಕ್ಕಿದಿರಂ ನಡೆದು ಪೊಯ್ಯೆ ಪೆಪ್ಪಳಿಸುವುದಂ ಕಂಡು ತಪ್ಪೆಮೆಟ್ಟಿ ಮಗುೞ್ದು

ಶಾ || ಪಿಂಗಾಲಂ ಪಿಡಿದೆತ್ತಿಕೊಂಡಸಕಗವೊಯ್ಲೊಯ್ದುತ್ತಮಿರ್ದಾಗಳಾ
ತಂಗಾ ದೇವತೆ ಬೆರ್ಚಿ ಪೋಗೆ ಪಲರುಂ ನೋಡುತ್ತಮಿರ್ದೆಂಬರೀ
ತಂಗೀ ಪ್ರಾಯದೊಳಿಂತುಟಾದುದು ಬಲಂ ತಾಂ ಜವ್ವನಂ ಪೊರ್ದಿದಂ
ದೇಂ ಗಂಡರ್ ಪೆಱರಾಂಪರೆಂಬರೊಳರೇ ಭೂಲೋಕದೊಳ್ ನಾಕದೊಳ್ ೧೯

ವ || ಅಂತಾ ಗಾರ್ದಭರೂಪದುಗ್ರದೇವತೆಯಂ ಗೆಲ್ದೊಡೆ ತನ್ನ ತುಱುಗಜ್ಜದೊಳ್ ವಾಸುದೇವಂ ಕತ್ತೆಯ ಕಾಲ್ವಿಡಿದನೆಂಬ ಮಾತಂದಿ [ದಮಿತ್ಥ]ಮಾಗೆ ನಾಡೆಯುಂ ಪೋದೊಡೊಂದು ದಿವಸಂ ಕೇಶನಿಯೆಂಬ ದೇವತೆ ದುಷ್ಟಾಶ್ವದ ರೂಪದಿಂ ನುಂಗುವಂತೆ ಕೆಳರ್ದು ಕೆಳರುತ್ತಮೆಯ್ತಪ್ಪುದನೊಂದೆಡೆ ಕುಮಾರಂ ಕಂಡು

ಕಂ || ಎಡಗಯ್ಯೊಳುತ್ತರೋಷ್ಠದ
ಕಡೆಯಂ ಪಿಡಿದೊತ್ತಿ ಕಬ್ಬಮಂ ಬಲಗಯ್ಯೊಳ್
ಪಿಡಿದು ತೆಗೆದೊಂಗೆ ಪಶ್ಚಿಮ
ದೆಡೆವರೆಗಂ ಸೀಳ್ದೊಡೇಂ ಬಲಸ್ಥನೊ ಕೃಷ್ಣಂ ೨೦

ವ || ಎಂದೆಲ್ಲಂ ಪೊಗೞ್ವಂತು ಸೀಳ್ದೀಡಾಡಿದೊಡೆ ದೇವತೆ ಮಾಯಮಾಯ್ತು ಹರಿಯ ಸಾಹಸಮಗುರ್ವಾಯ್ತು

ಕಂ || ಅಂತರಿಭೂಪಾಳನ ಬೆಸ
ದಿಂ ತಡೆಯದೆ ಕೊಲಲು ಬಂದ ನೆಗೞ್ದಿರ್ದೇೞುಂ
ವ್ಯಂತರಮಂ ತದ್ವಿಷಯಾ
ಭ್ಯಂತರಮಂ ಸಾರಲೀಯದಂತಿರೆ ಕಳೆದಂ ೨೧

ವ || …………….. ಮೊಂದೆಡೆಗೆ ವಂದಿರ್ದು ಮತ್ತೆ ವಿಜೃಂಭಿಸುವ ಬಗೆಗೆಟ್ಟು ಬಾಯಂಬಿಟ್ಟು ಸೋಲ್ತಂಕದಂತೆ ತಲೆಯಂ ಬಾಗಿ ಸಿಗ್ಗಾಗಿ ತಮ್ಮೊಳೆಂಗುಂ ನಮ್ಮಂ ಸಾಧಿಸಿದಾಳ್ದಂಗೆರಡುಂ ಭವದೊಳುಪಕಾರಮಂ ಮಾಡಲಾರ್ತೆಮಿಲ್ಲಿನ್ನಾ ಪಗೆವನಂ ಮುಟ್ಟೆವಂದು ಕೊಲಲೆಂತುಮಾರ್ತೆವಿಲ್ಲ ಮಾಕಾಶಾಂತರದೊಳ್ ಗೆಂಟಾಗಿರ್ದು ಸಿಳಾವರುಷದಿನೊರ್ಮೆ ಘಾತಿಸಿ ನೋೞ್ಪೆನೆಂದುಮಿರ್ವರುಮೊಂದಾಗಿ ಬಂದು ಜ್ಯೇಷ್ಠಮಾಸದೊಳೊಂದುತ್ಪಾತವಾತಪ್ರಘಾತಮಾಗೆ ಮೊೞಗಂ ಮಿಂಚಂ ಸಿಡಿ[ಲಂ] ಬೆರಸು ಮೞೆ ಕೊಳ್ವಂತೆ ಮಸಗಿ

ಕಂ || ಕಲ್ಲಮೞೆ ಕರೆಯೆ ಪು[ಗ] ಲೆಡೆ
ಯಿಲ್ಲದೆ ಕಡುನೊಂದು ಜೀವಧನ[ಮುಂ] ಜನಮುಂ
ತಲ್ಲೞದಿಂ ಕೋಳ್ಗುದಿಗೊ
ಳ್ವಲ್ಲಿ ಕುಮಾರಂ ಭಯಸ್ಥರಾಗದಿ[ರೆಂ]ದಂ ೨೨

ವ || ಎನುತ್ತಂ ಬೇಗಮಾ ತುಱುಪಟ್ಟಿಯ ಕೆಲದೊಳಿರ್ದು ಗೋವರ್ಧನಮೆಂಬೇಕಶಿಲೆಯ ಬೆಟ್ಟಕ್ಕೆ ಬಂದು

ಹರಿಣಿ ||
ಭರದಿಜನೊಗೆದಂತಾಗಳ್ ಶೈಲಂ ಸಿಡಿಲ್ದಿರೆ ಪೊತ್ತು ಬಂ
ದಿರದೆ ಮೊಣಕಾಲಿಕ್ಕಿ[ರ್ದಿನ್ನೊ]ತ್ತಿ ಮೂರ್ಧದೆ ಬೇಗದಿಂ
ಕರಮನಡಿಯೊಳ್ ನೂಂಕುತ್ತಾರ್ದೆತ್ತಿಕೊಂಡುರದಿಂದಮಾಂ
ತುರದ ದೆಸೆಯಿಂ ಮುಯ್ವಿಂಗಾ ಮುಯ್ವಿನಿಂ ತಲೆಗೆತ್ತಿದಂ ೨೩

ಕಂ || ಎತ್ತುತ್ತೆ ನಿಂದು ಕರೆಕರೆ
ದತ್ತಿತ್ತ ಕೊ ಮನುಜ ಗೋಕುಲಂಗಳುಮಂ ತ
ನ್ನತ್ತಣ್ಗೆ ಬರಿಸಿ ಹರಿ ತಾಂ
ಪೊತ್ತಿರ್ದುಂ ಗಿರಿಯನೇೞುದಿವಸಂಬರೆಗಂ ೨೪

ವ || ಅಂತು ದಿನಸಪ್ತಕದಿಂ ಬೞಿಯಮಾ ದೇವತೆಗಳೀತನನೆಂತುಮಸಾಧ್ಯನುಮಜಾ[ತ]ನು ಮೆಂದು ಬೇಸತ್ತು ಪತ್ತುವಿಟ್ಟುಪೋದಡಲ್ಲಿರ್ದ ಮನುಷ್ಯ ಗೋಕುಲಂಗಳುಮಂ ತೊಲಗಿಸಿ ಮೆಲ್ಲನಾ ಗಿರಿಯನಲ್ಲಿೞಿಪಿ ಬಂದಿರೆ ಗೋವರ್ಧ[ನ]ನೆಂದು ಪೆಸರೆಸೆಯೆ ದೇವೋಪಸರ್ಗವಿಜಯಮಂ ಕೇಳ್ದು ಶತ್ರುಗಳತ್ತ ಬೆಸೆಯೆ ನಂದಗೋವನ ಮಗನೊರ್ವನತಿ ಬಲಗರ್ವಿತನುಮಚಿಂತ್ಯ ಸಾಹಸಾನ್ವಿತನುಮೆಂಬೀ ಮಾತು ಪರೆಯೆ ದೇವಕಿ ಕೇಳ್ದತ್ಯಂತ ಹರ್ಷಚಿತ್ತೆಯಾಗಿ ಮಗನಂ ನೋೞ್ಪ ಮೋಹಂ ತಿಣ್ಣಮಾಗೆ ಸೈರಿಸದೆ ವಸುದೇವಸ್ವಾಮಿಗಂ ಬಲದೇವಕುಮಾರಂಗಮಱಿಪಿದೊಡವರುಮೊಂದುಪಾಯದೊಳ್ ನೋೞ್ಪಮೆಂದೊಡಂ ಬಟ್ಟಿರ್ದು ಗೋಮುಖಿಯೆಂಬ ನೋಂಪಿಯಂ ದೇವಕಿ ನೋನಲ್ ಪೋದಪಳೆಂಬ ಮಾತು ಪರೆಯೆ ನುಡಿದು ತೊಟ್ಟನೊಂದು ದೆವಸಂ ವಸುದೇವನುಂ ದೇವಕಿಯುಂ ಬಳಭದ್ರನುಂ ತಮ್ಮ ನಿಜತಂತ್ರಮನೊಡಗೊಂಡು ತುಱುಪಟ್ಟಿಗೆ ವಂದು ಕೃಷ್ಣಯಕ್ಷಿಯ ಮುಂದಿರ್ದು ನಂದಗೋಪನಂ ಬರಿಸಿ ತಾಮುಂ ಗೋಮುಖಿಯೆಂಬ ನೋಂಪಿಗೆ ಬಂದುದನಱಿಪಿ ನಾಳೆ ನೀವೆಲ್ಲಂ ನೋಂಪಿಗೆ ಬರ್ಪುದಿಲ್ಲಿರ್ದಱಂಬುಗಱೆವುದರ್ಚಿಸುವುದೆಂದು ಪೇೞ್ದಾತನಂ ಪೋಗವೇೞ್ದಂದಿನ ದಿವಸಮಾ ದೇವತಾಗೃಹದೊಳತಿಶಯದಿಂ ಜಾಗರಮಿರ್ದು ಬೈಗಿರುಳು ನೋಂಪಿಯ ವಿಭೂತಿಯಂ ಮಾಡಲುಮಾತ್ಮಜನಂ ನೋಡಲುಮೆಂದಿರ್ಪಿನಮಿತ್ತ ವಿದ್ಯಾಧರಶ್ರೇಢಿಯೊಳ್ ಮುನ್ನಿನಂಗಾರನೆಂಬ ಖೇಚರಂ ತನಗೆಂದಿರ್ದ ಕೂಸಂ ವಸುದೇವಂಗೆ ಕೊಟ್ಟೞಲೊಳಮಾಕೆಯೊಳ್ ಕಾದಿ ಸೋಲ್ತ ಬನ್ನದೊಳಂ

ಕಂ || ಅಂಗಾರದ ಕಲಿತನಮುಮ
ನಂಗಾರಕ ಚಕ್ರಚಾರದುಗ್ರತೆಯುಮನಾ
ಳ್ವಂಗಾರವೇಗನಂಗಾ
ರಂಗಾರಕ ಸದೃಶಮಾದನಂದಿಂಬೞಿಯಂ ೨೫

ವ || ಅಂತಾಗಿರ್ದೊಡೊರ್ವಂ ನೈಮಿತ್ತಿಕಂ ನಿನಗೊರ್ವಂ ಪಗೆವನೊಳನದಾರೆಂದೊಡೆ ವಸುದೇವನ ಮಗಂ ಬಲಗರ್ವಿತನೆಂದೊಡಾಗಳೆ ತನ್ನ ಷೆರ್ಗಡೆಯು[ಮರಿಷ್ಟನಂ ಜವದಿಂ]ಪೋಗಿ ವಸುದೇವನ ಮಗಂ ತುಱುಪಟ್ಟಿಯೊಳ್ ಬೆಳೆಯುತ್ತಿರ್ದನಾತನಂ ನೀನಾವುದಾನುಮುಪಾಯ ದೊಳಂ ಕೊಲ್ಲೆಂದಟ್ಟುವುದುಮಾತಂ ಮನೋವೇಗದಿಂದಂ ಬಂದಾ ತುಱುಪಟ್ಟಿಯೊಳ್ ವೃಷಭ ರೂಪದಿಂ ಕೆಂಗಲ್ ಮಸಗಿ ಪೋಪ ಬರ್ಪ ಜನಮನಟ್ಟಿಕೊಲುತ್ತಮಿರೆ ಪೊೞಲೆಲ್ಲ ಮಲ್ಲಕಲ್ಲೋಳಮಾಗಿ ಕುಮಾರನಲ್ಲಿಗೆ ಪರಿದೆಯ್ದಿ ಪೇೞೆ

ಕಂ || [ಚ]ಲದಿಂದಿದಿರಿದಿರಂ ಪೊ
ಕ್ಕಲಘುಭುಜಂ ಕೋಡನಡಸಿ ಪಿಡಿದೆಡಗಯ್ಯೊಳ್
ಬಲಗರ್ವದಿಂ ಮುಸುಂಬಂ
ಬಲಗಯ್ಯೊಳ್ ಪಿಡಿದುಕೊಂಡು ಗೋಣ್ಮುರಿಮುರಿದೊಂ ೨೬

ಪಿಡಿದಂತು ಮುರಿಯೆ ಗೋಣುಡಿ
ದುಡಿಮಡಿಯಾಗಳ್ಕಿ ನಡುಗಿ ತಡದಡಿಸಿ ಪೊಡ
ರ್ಪುಡುಗಿ ಕಡುಭಯದೆ ಗೋಳ್ಗರೆ
ದಡಿಮೊದಲೊಳ್ ಕೆಡೆದು ಮಾಯಮಾಯ್ತು ವೃಷಭಂ ೨೭

ವ || ಆ ಮಹಾಮಾಯಾವೃಷಭನಂತೆ ಗೆಲ್ದ ಗೆಲ್ಲಮೆಲ್ಲಿಗಂ ಪರೆಯೆ ನಂದಗೋವಂ ಪರಿತಂದು ರಾಗದಿಂ ಮಗನನಪ್ಪಿಕೊಂಡು ಮನೆಗೆವಂದು ಬನ್ನಿಮರಸರ ನೋಂಪಿಯಂ ನೋೞ್ಪಮೆಂದು ಸಮಸ್ತಮುಳ್ಳ ತುಱುವುಂ ಕಱುವುಂ ಗೋಪಾಳಕರುಂ ಸ್ತೀಜನಮುಂ ತಾನುಂ ತನ್ನ ಪೆಂಡತಿಯುಂ ಕುಮಾರಸಹಿತಮಾ ದೇವತೆಯ ಮೆನೆಗೆವಂದು

ಕಂ || ಗೋಪಾಳಕಜನತತಿಯುಂ
ಗೋಪವಧೂಜನಮುಮವರ ನಾಯಕರುಂ ತ
[ದ್ರೂ]ಪಾಂಕನೋಪವಾಸ
ವ್ಯಾಪಾರದೊಳೊಸೆದಱಂಬುಗಱೆದರ್ಚಿಸಿದರ್ ೨೮

ವ || ಅರ್ಚಿಸಿದ ಬೞಿಯಂ ದೇವಕಿ ಮಂಗಳ ಪ್ರಸಾದನಾಳಂಕೃತೆಯಾಗಿ ದೇವತಾ ಗೃಹದ ಮುಂದೆ ಮಹಾಸ್ಥಾಯಿಕೆಯೊಳಿರ್ದ ವಸುದೇವಸ್ವಾಮಿಯ ಕೆಲದೊಳ್ ಕುಳ್ಳಿರ್ದು ನಂದಗೋವನಂ ಯಶೋದೆ[ಯಂ] ಕೃಷ್ಣಕುಮಾರನಂ ತಮ್ಮ ಮುಂದೆ ಕುಳ್ಳಿರವೇೞ್ದೀ ನೋಂಪಿಯೊಳ್ ಗೋಪಾಲನಾಯಕರಂ ಮನ್ನಿಸಲ್ವೇೞ್ಕುಮೆಂದಿರ್ವರ್ಗಮುಡಲಂ ತುಡಲುಂ ಕೊಟ್ಟು ಬೞಿಯಮಱಿಯದಂತೀ ಕೂಸಾವೊನೆಂದೊಡೆಮ್ಮ ಮಗನೆನೆ ನಿಮ್ಮಮುದ್ದುಗಣ್ಗಳನೆಂತು ಮನ್ನಿಸುವಿರಂತೀತನುಮಂ ಮನ್ನಿಸುವುದೆಂದು ಅಮೂಲ್ಯಮಪ್ಪಾಭರಣವಸ್ತ್ರಂಗಳಂ ತುಡಿಸಿಯುಮುಡಿಸಿಯುಂ ದಿವ್ಯ ಪುಷ್ಪಂಗಳಂ ತುಱುಂಬನಿಕ್ಕಿ ನೋಡಿ ಸೈರಿಸದೆ ಕುಮಾರನಂ ತನ್ನ ತೊಡೆಯಮೇಲಿರಿಸಿಯರ್ಕಱಿನೊಳ್ ದೇವಕಿಯಂ

ಕಂ || ಮೊಲೆ ತೊರೆಯೆ ಸುರಿಯೆ ಪಾಲೊ[ಳ್
ಮೊ]ಲೆಗಳ ಮೇಲೆಸೆವ ದುಕುಲಮದು ನಾಂದೊಡದಂ
ಬಲದೇವನಱಿದು ಕಜ್ಜದ
ಬಲಮೞಿದಂತೆಂದು ಮನದ ಬಗೆಯಿಂದಾಗಳ್ ೨೯

ಗೋಮುಖಿಯ ನೋಂತವರ್ಗಳ್
ತಾಮರ್ತಿಯೆ ಪಾಲೊಳಲ್ಲಿ ಮಿವುದು ಗಡಮೆಂ
ದಾ ಮಹಿನುತ ಬಲದೇವಂ
ಪ್ರೇಮದಿ ದೇವಕಿಯ ಮೇಲೆ ಪಾಲಂ ಸುರಿದಂ ೩೦

ವ || ದೇವಕಿಯ ಪುತ್ರಸಂಬಂಧಮಂ ಬಲದೇವಂ ಪ್ರಕಾಶ್ಯಮಾಗಲೀಯದಂತು ಕಾದು ಕುಮಾರನನವಂಗೊಪ್ಪಿಸಿ ಪೊೞಲ್ಗೆವಂದಿರ್ದರಂತಾ ನಾಡೊಳಮಾ ದೇವರ ನೋಂಪಿಯಂ ಕೊಂಡಾಡುವದುಮದಂ ನೋಂತವರ್ ಪಾಲೊಳ್ ಮಿವುದುಮಾಯ್ತನ್ನೆಗಮತ್ತ ವಿಜಯಾರ್ಧಪರ್ವತದ ರಥನೂಪುರಚಕ್ರವಾಳಪುರಮನಾಳ್ವ ಸುಕೇತುವೆಂಬ ವಿದ್ಯಾಧರಂಗಂ ಸ್ವಯಂಪ್ರ[ಭೆಯೆಂ]ಬರಸಿಗಂ ಪುಟ್ಟಿದಂ

ಚಂ || ಅತಿಶಯಮಪ್ಪ ರೂಪು ಕಡುಗಾಡಿ ಪವಣ್ನೆಲೆ ತೀವದಿರ್ದುದೊಂ
ದತಿನುತ ಯವ್ವನಂ ತನಗದಿಟ್ಟಳಮೊಪ್ಪಮನೀಯುತಿರ್ದಳಂ
ಕೃತ ಮ[ಹನೀ]ಯ ಹಾವರಸಭಾವವಿಳಾಸ ಸುವಿಭ್ರಮೋದಯಾ
ನ್ವಿತೆ ಗುಣಧಾಮೆಯಂ ಸದಭಿರಾಮೆಯನುತ್ತಮ ಸತ್ಯಭಾಮೆಯಂ ೩೧

ವ || ಒಂದೆವಸಮವರಯ್ಯಂ ಮಗಳ ಮೊಗಮಂ ನೋಡಿ ಪೇೞಿಮಿಕೆಗೆಂತಪ್ಪ ಭರ್ತಾರನಕ್ಕುಮೆಂದು ನೈಮಿತ್ತಕರಂ ಬೆಸಗೊಂಡೊಡವರಿಂತೆಂದರ್ ತ್ರಿಖಂಡಮಂಡಳಾಧಿಪತಿಯಪ್ಪ ಚಕ್ರವರ್ತಿಗಗ್ರಮಹಿಷಿಯಕ್ಕುಮೆಂದೊಡಂತಪ್ಪಾತನನೆಂತಱಿಯಲಕ್ಕುಮನೆ ನಿನ್ನ ಮನೆಯೊಳಿರ್ದ ದಿವ್ಯಮಪ್ಪ ನಾಗಶಯ್ಯೆಯೊಳ್ ಪಟ್ಟಿರ್ದಡಂ ಶಾರ್ಙ್ಗಮೆಂಬ ಬಿಲ್ಲೆನೇಱಿಸಿದೊಡಮಯ್ವಾಯ ಶಂಖ ಮನೊತ್ತಿದೊಡಮಱಿಯಲಕ್ಕುಮೆಂದೊಡಂತಪ್ಪೊ[ಡೀ]ಗಳ್ ಭರತಕ್ಷೇತ್ರದೊಳ್ ಪ್ರಚಂಡನಾಗಿರ್ದೊಂ ಕಂಸನಾತನಲ್ಲಿಗಟ್ಟುವಮೆಂದು ಸಮಕಟ್ಟಿ ಪೆರ್ಗಡೆಗಳ ಕಯ್ಯೊಳವನಟ್ಟಿದೊಡೆ ಬಮದು ಮಧುರೆಯೊಳಿದ್ ಕಂಸಂಗೆ ತೋಱಿ ಮನೆವಾರ್ತೆಯಂ ಪೇೞ್ದೊ ಡೆನಗಸಾಧ್ಯಂ ಪೆಱನೊರ್ವಂ ಸಾಧ್ಯಪುರುಷನುಳ್ಳೊಡಾರಯ್ವೆನೆಂದು ಕೈಕೊಂಡಿರಿಸಿ ನಾಡೊಳೆಲ್ಲಂ ಗೋಸನೆವಿಡಿಸಿದೊಡಾ ಗೋಸನೆ ತುಱುಪಟ್ಟಿಯತ್ತ ಬಂದಲ್ಲಿ ಕೃಷ್ಣಕುಮಾರಂ ಕೇಳ್ದಲ್ಲಿಗೆಯ್ದೆಪೋಗೆ ಗೋಸನೆಯೊಡವಂದ ಪೆರ್ಗಡೆಯದೇತಱ ಗೋಸನೆಯೆನೆ ದೃಷ್ಟಿವಿಷಮಪ್ಪ ನಾಗಶಯ್ಯೆಯನೇಱಿ ಶಾರ್ಙ್ಗಧನುವನೇಱಿಸಿ [ಪಾಂ]ಚಜನ್ಯಮೆಂಬಯ್ವಾಯಶಂಖಮನೊತ್ತಿದೊಂಗೆ ವಿದ್ಯಾಧರರಾಜಂ ತನ್ನ ಮಗಳಂ ಕುಡುವನಂತಪ್ಪನನಾರಯ್ವ ಗೋಸನೆಯೆನೆ