ಕು || ಇಂತಪ್ಪ ಚಾರುದತ್ತಂ
ಗಿಂತಪ್ಪ ಮಗಳ್ ಜಗತ್ರಯಾಂತರದೊಳ್‌ ಮ
ತ್ತೆಂತಪ್ಪರುಮಂ ಗೆಲಲಾ
ರ್ಪಂತಪ್ಪುದು ಚೆಲ್ವಿನೆಡೆಯೊಳಂ ವೀಣೆಯೊಳಂ ೧

ವ || ಎಂದಿಂತಾ ಗಾಂಧರ್ವಾಚಾರ್ಯರ್ ಪೇೞೆ ವಸುದೇವಂ ಕೇಳ್ದು ಮೆಚ್ಚಿ ತನ್ನ ಕೈಯ ವಜ್ರಧಾರೆಯ ಕಂಕಣಮಂ ಕೊಟ್ಟೊಡೆ ಕೊಂಡೊಸೆದು ತನ್ನ ಮನೆಯಿಂ ಬೋನಮಂ ತರಿಸಿ ಪಿರಿದುಂ ಗೌರವದಿನುಣಲಿಕ್ಕಿ ಗೋಷ್ಠಿಗೆಯ್ಯುತ್ತಿರ್ದು ವಸುದೇವನ ವೀಣಾವಾದ್ಯ ಪ್ರವೀಣತೆಯನಾರೈದಱಿದು ನಾಳೆ ವೀಣಾಸ್ವಯಂಬರವೆಂ[ದೊ]ಡೆ ನಾಮುಂ ಎಮ್ಮ ಬಲ್ಲಂದದೊಳ್ ಬಾಜಿಸಿ ತೋ[ರ್ಪೆವು ಮ] ಱುದಿವಸಂ ಚಾರುದತ್ತನನುಮತದಿಂ

ಕಂ || ಬನ್ನಿಂ ವೀಣಾವಾದ್ಯ
ತ್ಪನ್ನತರಪ್ಪವರಿರೆಂದು ಪೊೞಲೊಳಗೊಸೆದ
ತ್ಯಾನಂದೋದಯದೆ[ಪಲವ]
ರುಂ ನರಪತಿತನಯರಾಗಳಲ್ಲಿಗೆ ವಂದರ್ ೨

ವ || ಅಂತು ಬಂದು ನಾಟ್ಯಶಾಲೆಯೊಳ್ ತಂತಮ್ಮು ಚಿತಸ್ಥಾನದೊಳಿರ್ದರಾಗಳ್ ಗಾಂಧರ್ವದ್ತತೆಯಂ ಪೊನ್ನ ಪಣ್ಣುಗೆಯ ಪಿಸಿಯನೇಱಿಸಿ ಚಾರುದತ್ತಂ ಮುಂದೆಗೊಂಡಾಕೆಯ ವಿದ್ಯಾಗರ್ವಮನೆ ಪೊಗೞಿಸುತ್ತಂ ಬಂದು ಮಹಾಸ್ಥಾಯಿಕೆಯಂ ಪೊಕ್ಕುವಿಳಾಸದಿನಿರೆ ರಂಗದ ನಡುವೆ ವೀಣೆಯಂ ಮುಂದಿಟ್ಟು ಕಿನ್ನರಾಂಗನೆಯಿರ್ಪಂತೆ ಗಾಂಧರ್ವದತ್ತೆಯಿರ್ಪುದುಮಾ ಗಂಧರ್ವಾಚಾ[ರ್ಯನ] ಕೆಲದೊಳ್ ಛಾತ್ರನಿರ್ಪಂತೆ ವಸುದೇವನಿರ್ದನನ್ನೆಗಂ ಸಭಾಪತಿ ಯನುಮತದಿನೊಬ್ಬರೊರ್ಬರನೆ ಬಾಜಿಸಲ್ವೇೞ್ದು ಮಾರುಮಂ ಮೆಚ್ಚದಿರೆ ವಸುದೇವಂ ಕನ್ನೆಯ ಮುಂದಣಿಂದೆ ವೀಣೆಯಂ ತರಿಸಿ ತಂತ್ರಿಯನಿಂಬುಮಾಡಿ ಸಮ ಪ್ರಹರಣ ವಿಶಧ ಶಮ ಮಧುರ ಜಸ ರಸ ದವ ವೃಷ್ಟಿ ಜಿತ ಶ್ರಮ ಸ್ವೇದ ದುಸ್ಥಿರ ನಖಂಗಳೆಂಬ ಹಸ್ತಾಂಗುಳಿಗಳೊಳ್ ಕೂಡಿ ವರ್ಣಾಳಂಕರ ಸ್ವರ ಪದ ಸಮಾಸೋಚ್ಛ್ವಾಸ ಸಭಾದೇಶ ತಾಳ ಲಯ ಯತಿ ಫಣಿಸ್ಥಾನ ದೇಶ ಕಾ[ಲ]ಜ್ಞತೆಗಳೆಂಬ ಚತುರ್ದಶಗುಣಂಗಳೊಳ್ ಕೂಡಿ ಬಾಜಿಸಿದಾಗಳ್

ಶಾ || ವೀಣಾವಾದ್ಯದ ಬಲ್ಮೆ ಬಲ್ಮೆಯಳವಂ ಗೆಲ್ದೊಪ್ಪೆ ತೇಜೋದಯಂ
ನಾಣಂ ಪಿಂಗಿಸೆ ರೂಪಿನೊಳ್ಪು ಮನದೊಳ್ ತಳ್ಪೊಯ್ಯೆ [ಸೋಲ್ವಂತಮಾ
ವೀಣಾಳಾಪಿನಿ] ಮಾಣ್ಬುದಾವುದೆನಗೀ ಜನ್ಮಾಂತರಕ್ಕೆಂತುಟುಂ
ಪ್ರಾಣಾಧೀಶ್ವರನೀತನೆಂದು ಕೊರಲೊಳ್ ತಂದಿಕ್ಕಿದಳ್ ಮಾಲೆಯಂ ೩

ವ || ವಸುದೇವಂಗೆ ಗೆಗೆಲ್ಲ [೦] ಗೊಟ್ಟುದುಮನೆನ್ನ ಮನಂ ಕೋಳ್ಪಟ್ಟುದುಮನೞಿಪುವೆನೆಂಬ ತೆಱದಿನಿಂತು ಮಾಲೆಯಂ ಕೊಟ್ಟಾಗಳಾಸೆವಟ್ಟುಬಂದು ಮಹಾಸಾಮಂತರುಂ ಖಿನ್ನರಾಗಿ ಮಗುೞ್ದುಪೋದರಾಗಳ್ ಚಾರುದತ್ತಂ ಒಸಗೆವಱೆಯಂ ಬಾಜಿಸವೇೞ್ದು ಮಹಾವಿಳಾಸದಿಂ ಮಗಳುಮನಳಿಯನುಮನೊಡಗೊಂಡುಪೋಗಿ ವೈವಾಹಕ್ರಿಯೆಯೊಳ್ ಪಸೆಯೊಳಿರಿಸಿ ಪಾಣಿಗ್ರಹಣಂಗೆಯ್ದು ಕೊಟ್ಟಾಗಳ್

ಮ || ನಯಭಾವಾನ್ವಿತೆಯೊಳ್ ವಿಳಾಸವತಿಯೊಳ್ ಸಾರೂಪ್ಯಸೌಂದರ್ಯಯು
ಕ್ತೆಯೊಳುದ್ಯದ್ಗುಣರಕ್ತೆಯೊಳ್ ಮಹಿತಳಪ್ರಖ್ಯತ ಗಾಂಧರ್ವದ
ತ್ತೆಯೊಳೌದರ್ಯ ಸುಕಾರ್ಯನಪ್ಪ ವಸುದೇವಾಂಕಂ ಮಹಾವೈಭವೋ
ದಯದಿಂದಂ ನೆರೆದಿರ್ದನೊಪ್ಪಿರೆ ಮನಸ್ಸಂಯೋಗಮುಂ ಭೋಗಮುಂ ೪

ಕಂ || ಅಂತು ವಸುದೇವವಿಭು ನಿ
ಶ್ಚಿಂತಂ ಗಾಂಧರ್ವದತ್ತೆಯೊಳ್ ನೆರೆದು ಕರಂ
ಸಂ[ತಸ] ದಿನಿರೆ ಸೊಗಯಿ [ಪ] ವ
ಸಂತಂ ಬಂದತ್ತು ಸಕಳಜನಹೃದಯಕರಂ ೫

ವ || ಆಗಳೆ[ಲ್ಲೆ] ಡೆಯೊಳಂ ತೆಂಕಣ ಗಾಳಿ ಚಾಮರವಿಕ್ಕು [ವಂತೆ] ಮೆಲ್ಲನೆ ಬೀಸೆ ವನತರುಗಳ ಪಣ್ಣೆಲೆಗಳ್ ಕೞಲೆ ಕಳಿಂಕೆಗಳ್ ತಾರಕೆಗಳಂತೊಗೆಯೆ ಕೊನೆಗಳ್ ಚೆಂಕೊನ್ನಿಗರಬ್ಬೆಯಂತೆ ನಿಮಿರೆ ತಳಿರನಂಗನ ಬಾಳಂತೆ ಪೊಳೆಯೆ ನನೆ ಸೊದರ ಕುಡಿ ತೆಗೆಯೆ ಮುಗುಳೇಱುಂಜವ್ವನೆಯ ಮೊಲೆಯಂತೆ ಬೀಗಿ ಪೊದಳ್ದಿರೆ ಅಲರ್ಗಳ್ ಘಟ್ಟಿವಳ್ಳರ ಪಸರದಂತೆ ಕಂಪಂ ಪ[ರ] ಕಲಿಸೆ ತುಂಬಿಯೆ ಪಾಟಕಾಱನಂತೆ ಮೊರೆಯೆ ಗಿಳಿ ಗಾನಿಸಿದ ನೆರವಿಯಂತೊಡನುಲಿಯೆ ಕೋಗಿಲೆಯೆ ಬಾಗಿ[ಲ್ಗಾ] ಪಿನರಂತೆ ಪುಗಿಲ್ ಪುಗಿಲೆನೆ ಉಯ್ಯಲು ಹೆಬ್ಬೆಯಾಡುವರಂತೆ ತಿಟ್ಟೆಯೊಳಾಡೆ ಹಿಂದೋಳಂ ಮಹದಾನಿಯ ಕೀರ್ತಿಯಂತೆಲ್ಲ ದೆಸೆಯೊಳಮೆಸೆಯ ಬಂದ ಸುಗ್ಗಿಯೊಳ್ ಪುರಮುಮರಸನುಂ ಚಾರುದೆತ್ತನುಂ ವಾಸುಪೂಜ್ಯ ಜಿನಚೈತ್ಯಾಲಯದ ಪೆಱಗಣ ಬನದೊಳ್ ಪೊೞಲೆಲ್ಲಂ ಮಹಾಯಾತ್ರೆಗೆ ಪೋಗಲ್ ಸಮಕಟ್ಟಿ ಪೋಗೆ ವಸುದೇವನುಂ ಗಾಂಧರ್ವ ದತ್ತೆಯುಮರ್ತಿಯೊಳೊಡವೋಗೆ

ಕಂ || ನಂದನಮಂ ನಯನ ಮನೋ
ನಂದನಮಂ ಪೊಕ್ಕು ಸಂ[ತಸಂ]ಬಟ್ಟು ಕರಂ
ಸುಂದರಮಪ್ಪ ಸರೋವರ
ದಂದಮನಭಿವಂದ್ಯಮಂ ನಿರೀಕ್ಷಿಸುತಿರ್ದಂ ೬

ವ || ಇಂತೆಲ್ಲರುಮಾ ಕೊಳದ ತೀರ್ಥೋದಕದೊಳ್ ಮಿಂದು ಕೈಗೈದುಬಂದು ಪಲವುಮರ್ಚನೆಗಳಂ ತಂದು ತೀರ್ಥಜಿನಾಲಯದ ದೇವರಂ ಬಂದಿಸಿ ಮಗುೞ್ದುಬಂದಾ ಕೊಳದ ತಡಿಯೊಳ್ ಗೋಷ್ಟಿಯಾಗಿರ್ದು ತಾವರೆಯೆಲೆಯಂ ಪಾಸಿ ರಸಾಯನಮಪ್ಪ ದಿವ್ಯಾಹರಮನುಂಡು ತಂಬುಲಂಗೊಂಡು ತಮ್ಮ ಮೆಚ್ಚಿದ ಲತಾಭವನಂಗಳೊಳಂದಿ ರ್ಮುತ್ತೆಯ ಜೊಂಪಂಗಳೊಳಂ ಪಲವುಂ ಪ್ರಾಣವಲ್ಲಭರಿರೆ ವಸುದೇವನುಂ ಗಂಧರ್ವದತ್ತೆಯುಮೊಂದು ಮಾಧವೀಗೃಹದೊಳಗೆ ಪುಱ್ಪಶಯನದೊಳ್ ಸ್ವೇಚ್ಛೆಯಿನಿರ್ದಿನಿಸುಬೇಗದಿನಲ್ಲಿಂದಮೆರ್ದು ಮತ್ತಂತೆ ನೋೞ್ಪಮೊಂದಶೋಕವೃಕ್ಷದ ಮೊದಲೊಳ್ ಪಲರ್ ಮಾದೆಂಗಕನ್ನೆಯರೊಡನೆಯನೇಕ ರಸಭಾವಾಭಿನಯಂಗಳಿಂದಾಡುತಿರ್ದ ಮಾದೆಂಗಿತಿಯಂ

ಕಂ || ನಿಱುದಲೆ ಬೆಳ[ರ್ವಾ]ಯ್ ಸುಲಿಪಲ್
ತುಱುಗೆಮೆಗಣ್ ಮಿಳಿರ್ವ ಪುರ್ವುಗಳ್ ನಳಿತೋಳ್ಗಳ್
ಕಿಱುಮೊಲೆ ತೆಳ್ಪಸಿಱೊಪ್ಪುವ
ಪೊಱವಾಱಳವಟ್ಟ ಜಂಘೆಗಳ್ ಮೆಲ್ಲಡಿಗಳ್ ೭

ವ || ಎಂದು ಕಂಡು ನೋಡಿ ಸೋಲ್ತು ಕೂಡಲ್ಪಡೆಯದೆ ಮಱುಗಿ

ಕಂ || ಜಗಮಂ ಮಱುಗಿಸಿ ಕೊಱಚಾ
[ಟಗೆಯಲ್ ನೆಱಿ ನಾಡೆ ಕೂಡುವ] ಬಗೆಯಿಂ ಬಿದಿ
[ಮಿಗೆ]ಮಾಡಿದನೆಂಬಂತಿರೆ
ಪೊಗಳಲ್ ಕರಮರಿದು ರೂಪು ಮಾದಂಗಿತಿ[ಯಾ] ೮

ಮುಟ್ಟಲ್ಕಾಗದ ಕುಲದೊಳ್
ಪುಟ್ಟಸಿ ಪಲರ್ಗೞಲನಾಗಿಸಲ್ಕೆ ವಿಧಾತ್ರಂ
ನೆಟ್ಟನೆ ಮಾಡಿದನೆಂಬಂ
ತಿಟ್ಟಳಮೊಪ್ಪುವುದು ರೂಪು ಮಾದಂಗಿತಿಯಾ  ೯

ಇರುಳೊಳ್ ಸೊಡರೆಸೆವಂತಿರೆ
ಕರಮೆಸೆಗುಂ ಚೆಲ್ವು ಕಷ್ಟಜಾತಿಯದೆಂದಾ
ದರದಿಂ ಬಿದಿ ಮಾಡಿ[ದಂತೆ]
ಕರ ಕರಮೊಪ್ಪುವುದು ರೂಪು ಮಾದಂಗಿತಿಯಾ ೧೦

ನಾಡೆ ಪೊಳೆದಿಂದ್ರನೀಲದ
ಕೋಡುಂಗಲ್ಲೊಂದು ರಶ್ಮಿಯೊಳ್ ಸು[ಗಿ]ದೊಗೆದ
ೞ್ಕೂಡುವ ಲತೆಯಂತಿರೆ ನಯ
ದಾಡುವ ರಸಭಾವದೊಳ್ಪು ಮಾದಂಗಿತಿಯಾ  ೧೧

ವ || ಅಂತಪ್ಪ ರೂಪುಂ ಗಾಡಿಯುಂ ನುಣ್ಗರ್ಪುಂಕೆಯ್ತಗು ಸುಂದರಿಯಂ ವಸಂತಪುರದೊಳ್ ಕೇತುಮತಿಯುಂ ಪುಷ್ಕಳಾವತಿಯೊಳ್ ಪ್ರಭಾವತಿಯುಂ ಸುರೂಪೆಯುಂ ಸರ್ವದೈತೆಯುಂ ಕ್ರೌಂಚಪುರದೊಳ್ ಲಲಿತಶ್ರೀಯುಂ ಕುಲಗಿರಿಯೊಳ್ ಪದ್ಮಾವತಿಯುಂ ಕಮಳಶ್ರೀಯುಂ ಕರ್ಮಣಿಜೆಯೊಳ್ ಚಂಪಕಮಾಲೆಯುಂ ಕೊಲ್ಲಾಪುರದೊಳ್ ಚಂದ್ರಾವತಿಯುಂ ಮತ್ತಮತ್ತಂತೆ ತೊ[ೞಲ್ವೀ] ಭೂಮಿಗೋಚರಕನ್ನೆಯರುಂ ವಿದ್ಯಾಧರಕನ್ನೆಯರುಮಾಗಿ ಶೋಭನಕ್ರಿಯಾ ವಿಧಾನದೊಳುಂ ಗಂಧರ್ವವಿದಾಹದೊಳುಂ ತಂದ ಪೆಂಡಿರೆಲ್ಲ ಮಱುನೂಱತೊಂಭತ್ತೆಣ್ಬರಾದರಂತ ವರನಲ್ಲಿಯಲ್ಲಿಯೆ ಬಿಸುಟು ಬಂದರಿಷ್ಟಪುರಮಂ ಪೊಕ್ಕಲ್ಲಿ ಹಿರಣ್ಯಾಕ್ಷನ ಮಗಳಪ್ಪ ರೋಹಿಣಿಯಂ

ಉ || ರೂಪಿನ ಚೆಲ್ವು ಜವ್ವನದಳುರ್ಕೆ ವಿಳಾಸದ ಕೆಯ್ತ ಸಂದ ನಾ
[ಣ್ಗಾ]ಪಿನ ಬಲ್ಪು ಮಾತುಗಳ ಮೆಲ್ಪು ಕರಂ ಸುಭಗುಳ್ಳುದೊಂದು ಕ
ಣ್ಗಾಪಿನ ಗರ್ವಮೆಲ್ಲ ತೆಱದಿಂದಮಪೂರ್ವಮಿಳಾವಿಭಾಗದೊಳ್
ಪೋ ಪೆಱರಿಲ್ಲರಿನ್ನೆನಿಪ ಕನ್ನೆಯನುನ್ನತತವಂಶಮಾನ್ಯೆಯಂ ೧೨

ವ || ಅವರಮ್ಮಂ ಸ್ವಯಂಬರದೊಳಲ್ಲದೆ ಕುಡೆನೆಂದು ನಾಲ್ಕುಂ ದಿಶಾಭಾಗದರಸುಮಕ್ಕಳೆಲ್ಲರುಮಂ ನೆಱಪಿ ನಿರತಿಶಯ ಸ್ವಯಂಬರಶಾಲೆಯೊಳನುಕ್ರಮದಿನಿರಿಸಿ ಮಂಗಳಪ್ರಸಾದನಾಳಂಕೃತೆಯಪ್ಪ ಮಂಗಳರಥಮನೇಱಿಸಿ ತಾನೊಂದು ಭದ್ರಹಸ್ತಿಯನೇಱಿ ಹಿರಣ್ಯಾ[ಕ್ಷ]ನತ್ಯುತ್ಸಾಹೋದಯನಾಗಿ ಬಪ್ಪುದಂ ವಸುದೇವಂ ಕಂಡಲ್ಲಿಯೊರ್ವನಂ ಕರೆದೀಬಪ್ಪನಾವೊನೆಲ್ಲಿಗೆವೋದಪ್ಪನೆಂದು ಬೆಸಗೊಂಡೆಲ್ಲಮನಱಿದಂದಮಿದಂ ನೋೞ್ಪೆನೆಂದಾ ಸ್ವಯಂಬರಶಾಲೆಯಂ ಪೊಕ್ಕು ಕಡೆಯ ಚೌವಳಿಗೆಯೊಳಿರ್ದ ರಾಜನೊರ್ವ ರಾಜಕುಮಾರನ ಮುಂದೆ ಬಾಜಿಸುವ ಪಱೆಯವರಲ್ಲಿಗೆವಂದವರೊಳ್ ಸಂಭಾಷಿಸುತಮಿರ್ದು ಪ[ೞಗ]ನ ಕಯ್ಯ ಪೞಹಮಂ [ಕೊಂ]ಡು ಬಾಜಿಸುತಿರ್ದನನ್ನೆಗಂ ತಳ್ತು ನೆಗೞ್ದ [ಸೀ]ಗುರಿಯಂಗಳುಂ ಬೀಸುವ ಚಾಮರಂಗಳುಮೆಸೆವ ತೂರ್ಯರವಂಗಳುಂ ಪೊಗೞ್ದು ಬಪ್ಪವರುಂ ಕಣ್ಣಱಿದು ನೆಗೞ್ವ ಪರಿಚಾರಕಿಯರುಂ ಕಾರ್ಯಮಱಿವ ವೃದ್ಧಕಂಚುಕಿಯರುಂಬೆರಸು ನೆಲನೆಲ್ಲಂ ನೆರೆದು ನೋಡಿ ರಾಜಕುಮಾರರರ ಮನಮಲ್ಲಾಡೆ ರೋಹಿಣಿಯ ರಥಂ ಬಂದು ಸ್ವಯಂಬರದ ನಡುವೆ ನಿಂದತ್ತಾಗಳೆ ಕಂಚುಕಿ ಕನ್ನೆಯ ಮುಂದಿರ್ದು

ಕಂ || ಇವರಿವರೀ ಕುಲದರಸುಗ
ಳಿವರಿವರೀ ಪೆಸರ ನೆಗೞ್ದ ನರಪತಿಗಳ್ ಮ
ತ್ತಿವರಿವರೀ ನಾಡಾಳ್ವವ
ರಿವರಿವರೀ ಗುಣಗಣಂಗಳೊಳ್ ನೆಱೆದವರ್ಗಳ್ ೧೩

ವ || ಎಂದು ತೋಱುತ್ತಂ ನಡೆಯೆ ಕನ್ನೆ ನೋಡದಂತೆ ನೋಡುತ್ತಮವರ್ಗೆಲ್ಲಂ ಸಂಕಟಂ ಮಾಡುತ್ತುಂ ಬರೆ ಕಡೆಗಣಿಸಿ ಕಡಿದುಪೋದಡೆಯರಸುಗಳೆಲ್ಲ ಮರವಟ್ಟರಿದಿರವರ್ ಬೆಕ್ಕಸಂಬಟ್ಟರ್ ಮುಂದಣವರ್ ಮೆಳ್ಪಟ್ಟರಂತು ಮೇಲ್ಲಮೆಲ್ಲನೆಲ್ಲರುಮಂ ಕೞಿದು ನಚ್ಚಿದರ ನಚ್ಚೞಿದು ರಥಂ ರಣಾಂಗಣದೊಳ್ ಪರಿವಂತೆ ಪಲರಂ ನೋಯಿಸುತಂ ಪರಿದು ಕಡೆಯ ಚೌಪಳಿಗೆಯ ಪಱೆಯವರಂ ನೋೞ್ಪಳಲ್ಲಿ ತನ್ನಲ್ಲಿಗೆ ಸನ್ನೆಗೆಯ್ವಂತೆ ಬಾಜಿ[ಸುವ] ವಾದ್ಯಮಂ ತೊಟ್ಟನೆ ಕಂಡು ನಡೆನೋಡುತಿರ್ದು ನೋಡಿರೆ ಕಪ್ಪಡಿಗನಾಗಿಯುಂ

ಕಂ || [ಈ] ಜಗದೊಳೆನ್ನರಿಲ್ಲೀ
ತೇಜಮುಮೀ ರೂಪುಮಾಗಿಯುಂ ತಾಂ ಪರೆಯಂ
[ಮೂಜಗದ] ನೋಟಕ[ರಂ]
ಭ್ರಾಜಿಸುವಂ ನಾಡೆ ಸೋಲಮಂ ಯೋಜಿಸುವಂ ೧೪

ವ || ಎನುತಮಿರ್ದೆಂತುಂ ದಿಟ್ಟಿಯನುಗಿಯಲಾಱದೀತನಾರಾದೊಡಮೇಂ ಪೆಱಱ ನಱಸುವುದಂ ಸಾಲಿಸಿದನೆನ್ನುಮಂ ಸೋಲಿಸಿದನಂದು ರಥದಿಂದಮಿೞಿದು ಮಾಲೆಯನಾತನ ಕೊರಲೊಳಿಕ್ಕಿದಾಗಳೊಸಗೆವಱೆಯಂ ಪೊಯ್ಸಿ ಹಿರಣ್ಯಾಕ್ಷಂ ಬಂದು ನೋಡಿ ಸಾಮಾನ್ಯ ಪುರುಷನಲ್ಲನೀ ರೂಪದಿನಂತಲ್ಲದೆಯುಂ ಸ್ವಯಂಬರಧರ್ಮಮಿನ್ನೇನಾದೊಡಂ ಪೆಱದಂ ಬಗೆಯಲಾಗದೆಂದು ಮಗಳುಮನಳಿಯನುಮಂ ರಥಮನೇಱಿಸಿ ಮುಂದೆಗೊಂಡು ಪಿರಿದೊಂದಾಶ್ಚರ್ಯ[ಮಾಗೆ] ನೆರೆದೆರಸುಮಕ್ಕಳ ಮನಂ ಪವ್ವನೆ ಪಾಱೆ ಸುರೇಂದ್ರಲೀಲೆಯಿಂ ಪೊೞಲಂ ಪೊಕ್ಕಾಗಳಾ ರಾಜಪುತ್ರರೆಲ್ಲಮೊಂದೆಡೆಗೆ ವಂದಿಂತೆಂಬರ್

ಕಂ || ಪ್ರೌಢಿಯೊಳೆಂತಪ್ಪರುಮಂ
[ಕಡುಮೆಚ್ಚದೆ ಬಿನ್ನಣಿಯಹ ಪಱೆಯಂಗೊಸೆದಿ
ರ್ದೊಡೆಡೆಗೆ] ತಾಮುಣಲಿಕ್ಕುವ
ರೊಡಂಬಡಿಂ ಮಾಲೆಯಿಕ್ಕುವನ್ನರುಮೊಳರೇ ೧೫

ವ || ಇದೆಲ್ಲಮವರಮ್ಮನ ಮಾನಗರ್ವಮೆಂದು ಮುಳಿಸು ಪೆರ್ಚಿ ರಾಜಗೃಹ ಪುರಾಧೀಶ್ವರಂ ತ್ರಿಖಂಡಮಂಡಳಾಧಿಪತಿಯಪ್ಪ ಜರಾಸಂಧಚಕ್ರವರ್ತಿಗೆ ಪೇೞ್ದಟ್ಟಿ ದೊಡಾತನುಮಂತೆ ಮುಳಿದು ಬಂದುಮವರೊಳ್ ಕೂಡಿರ್ದು ರೋಹಿಣಿ ಯನೊಪ್ಪಿಸುವುದೊಪ್ಪಿಸದಡೆ ತನ್ನ ತಲೆಯುಮನಾ ಪಱೆಯನ ತಲೆಯುಮಂ ಕೊಳ್ವೆನೆಂದು ಚಕ್ರವರ್ತಿ ಬಂದನೆಂದು ಪೇೞ್ದಟ್ಟಿದೊಡೆ ಹಿರಣ್ಯಾಕ್ಷನೆಂಗುಮಾರ್ವಂದಡಮೇಂ ಸ್ವಯಂಬರಧರ್ಮ ಮನಳಿವೆನಲ್ಲೆನೆಂದು ಪೆರ್ಗಡೆಗಳಂ ಕಳಿಪಿ ತಾನುಂ ತನ್ನ ಮಂತ್ರಿಗಳುಂ ವಸುದೇವನುಮೇಕಾಂತ ದೊಳಿರ್ದೇಗೆಯ್ವಮೀ ಸ್ವಯಂಬರಂ ಪ್ರಾಣಂಬರವಾಯಿತ್ತೆನೆ ವಸುದೇವನಿಂತೆಂದಂ

ಕಂ || ನೆರೆದಾರ್ವಂದಡಮೇವರ್
ಧುರದೊಳತಿ ಕ್ರೋಧದಿಂ[ದಿದಿ]ರ್ಚಲ್ ದನುಜೇ
ಶ್ವರನು ಸುರನುಂ ವಿದ್ಯಾ
ಧರನುಂ ನೆಱೆಯರ್ ನರರ್ಕಳೆನಗಾರ್ ನೆಱೆವರ್ ೧೬

ಕಪ್ಪಡಿಗನಾಗಿ ಬಂದೆಂ
[ತ]ಪ್ಪದೆ ಪಱೆಕಾಱನಾಗಿ ನಿಂದೆಂ ರೂಪಿಂ
ದಪ್ಪುದನೆ ಕಂಡಿರಳವಿಗ
ಳಪ್ಪುದನಾಂ ತೋರ್ಪೆನಳ್ಕದೆನ್ನನೆ ನೋಡಿಂ ೧೭

ಆನಿನ್ನೇನೆನಲಕ್ಕುಮೆ
ಮಾನನನೆಂಬವರ್ಗಳೇವರೆನಗತಿಬಲದಿಂ
ದಾನವರಂ ಗೆಲ್ವೆನಿಭಂ
ಡಾನವರಂ ಗೆಲ್ವ ಮಾೞ್ಕೆಯಿಂದಾನವರಂ ೧೮

ವ || ನೀಮಿನ್ನೇನುಂ ಸಂಕಿಸಲ್ವೇಡೆಂದೊಡಂತೆಗೆಯ್ವೆಮೆಂದು ಯುದ್ಧಸನ್ನದ್ಧರಾಗಿ ತಮ್ಮ ಬಲಮಂ ಸನ್ನಣ್‌ಗೆಯ್ಯಲ್ವೇೞ್ದು ಸುಮಸ್ತಾಯುಧಂಗಳಂ ತೀವಿದ ರಥಮಂ ವಸುದೇವಂಗೆ ಕೊಟ್ಟು ತಾನಾನೆಯನೇಱಿ ಸಮಸ್ತ ಬಲಂಬೆರಸೊಡ್ಡಿ ನಿಂದನಿತ್ತಾ ಕೌರವ ಪಾಂಡವ ಯಾದವ ವಂಶಾದ್ಯನೇಕ ದೇಶಾಧೀಶ್ವರರೆಲ್ಲರುಮಂ ಕೂಡಿ ಜರಾಸಂಧನೊಡ್ಡಿ ನೀರದನಂತೆರಡು ಪಡೆಗಳು ಮೊಡ್ಡಿನಿಂದ ಪಱೆಯಂ ಪೊಯ್ಸಿ ಕಯ್ಯಂ ಬೀಸಿದಾಗಳ್ ಬೀೞ್ವಡೆ ತಾಗಿ ಪಡಲ್ವಡೆ ಕಾದಿ ದೞಂ ದೞದೊಳ್ ತಟ್ಟುತೀರಿದಿಂ ಬೞಿಯಂ ರಥದೊಳ್ ಪರಿದು ತಾಗಿದಲ್ಲಿ ತಮ್ಮ ಬಲದ ರಥಸಮೂಹಂ ಗೆಲೆ ಕಾದಲಾಱದುದಂ ಜರಾಸಂಧನ ತಮ್ಮ ನಪರಾಜಿತಂ ಕಂಡು ಹಸ್ತಿಸಾಧನಮಂ ಬೆಸಸಿದಾಗಳ್ ಹಿರಣ್ಯಾಕ್ಷಂ ತಾನುಂ ಕರಿಘಟೆಗಳೊಡನೆ ಗಜಾರೂಢನಾಗಿ ನೂಂಕಿ[ಕಾದೆ] ಮಾರ್ಬಲದ ಘಟೆ ಪೆಳಱಿದೊಡಪರಾಜಿತಂ ಜರಾಸಂಧನನುಮತದಿಂ ಸಮುದ್ರವಿಜಯನುಂ ಪೇೞ್ದಾಗಳ್ ತಾನುಂ ತಮ್ಮಂದಿರುಂ ಚಾತುರ್ದಂತಬಲಮಂ ನೂಂಕಿ ಕಾದಿ ಹಿರಣ್ಯಾಕ್ಷನ ಬಲಮನಂದಂತಿರೆ ಮಾಡಿ ಘಟೆಯನಲ್ಲಾಡಿ ಕಾದುವುದಂ ವಸುದೇವಂ ಕಂಡು

ಕಂ || ಎಲ್ಲರುಮನುರದೆ ಪಱೆಯವ
ನಲ್ಲನಿವಂ ತಕ್ಕನೆಂದು ಮಾಲೆಯನಿತ್ತಾ
ನಲ್ಲಳ ನೆವದನುವರಮಿದು
ಬಲ್ಲಾಳೊಳ್ ತೊಡರ್ದುಮಂತು ಕಯ್ವಾರ್ದಿರ್ಪಂ ೧೯

ವ || ಎಂದು ರಥಮಂ ಪರಿಯಿಸಿ ಮಾವನಂ ಪೆಱಗಿಕ್ಕಿ ಶರಸಂಧಾನಂಗೆಯ್ದು ಕಾದುವಾಗಳಂಬಿನ ಮೞೆ ಕೊಂಡಂತೆ ನೆತ್ತರ ಪೊನಲ್ ಪೊನಲನಟ್ಟಿಯಟ್ಟಿಯಾಡುವಿನ ಮಿದಿರ್ಚಿದ ಬಲಮಳ್ಕಾಡುತ್ತಮೆಚ್ಚಡೆ ಸಮುದ್ರವಿಜಯಂ ತನ್ನ ಬಲದಾನೆಯಾರೋಹಕ ರಾತನಂ ಬೇಱಿಂಗಳ್ಕಿದುದುಮನಿನಿಸುಳ್ಕಿದುದುಮನಱಿದು ತನ್ನ ರಥಮನೆಯ್ದೆ ನೂಂಕಿ ಕಾದೆ

ಕಂ || ಈತನ ಸಮನೀ ನರಪತಿ
ಗೀತನೆ ಪೌರುಷಪುರ[ಷ]ನರೇಂದ್ರನೆ ದೊರೆಯೆಂ
ದಾತಂಗಳನೆರಡು[೦]ಪಡೆ
ಯಾತಂಗಳು ನಿಂತು ನಿಳ್ಕಿ ನೊಡುತ್ತಿರ್ದರ್ ೨೦

ವ || ಅಂತು ಪಡೆಯೆಲ್ಲಂನೆ[ಱೆ ಕಾದುವಾ]ಗಳ್‌ ಸಮುದ್ರವಿಜಯನೆಂತು ನೋಡೆಚ್ಚೊಡಂ ತಲೆಯ ಮೇಗಂ ನೆಗೆದು ಪೋಕುಂ ವಸುದೇವನಂ ವಿನಯಮುಳ್ಳನಂತೆ ಮುಂದೆ ಬಿರ್ದಿಕ್ಕುವದಂ ಕಂಡು ವಸುದೇವನಾನೆಂತೆಚ್ಚೊಡಮಿ[ರ್ದೀ]ತನುಂ ಕೊಳ್ಳವೀತನಾರ್ಗೆಂದು ಸಾರಥಿಯಂ ಬೆಸಗೊಂಡೊಡಾತನೆಂಗುಮೀತಂ ಸೂರ್ಯಪುರಾಧಿಪತಿ ಸಮುದ್ರವಿಜಯನೆಂಬೊನೆಂದಾಗಳ್

ಕಂ || ಅಂತೆ ಪಿರಿಯಣ್ಣನೊ[ಳಮಿ]ಱಿ
ಅಂತಾಯ್ತೆ ಪಾಪಮೆನಗೆ[ರ]ಡುಂ ಪಡೆ ನೋಡ
ಲ್ಕೆಂತು ತೊಲಗಿರ್ಪೆನಾನಿ
ನ್ನೆಂತಱಿಪುವೆನೆಂತು[ಮಾಣ್ಬೆ]ನೆಂತಾಂ ಕಾಣ್ಬೆಂ ೨೧

ವ || ಎನೆ ಸಾರಥಿಯೆಂಗುಮಿಂತೆ ಚಿಂತಿಸುತಿರ್ದಡೆ ನೋೞ್ಪರ ಕಣ್ಗೆ ಕಿಱಿದಾಗಿಕ್ಕುಮೀಗಳೇ ರಥದಿನಿೞಿದು ಪೋಗಿ ಕಾಣ್ಗೆಂದೊಡಂತೆಗೆಯ್ವೆಮೆಂದಿರ್ಬರುಮಿೞಿದು ನೀಂ ಮುಂದೆ ಪೋ[ಗೆ] ಮಗುಬ್ಬೆಗಂಬಟ್ಟ[ಲ್ಲಿ] ಯಗ್ನಿ ಪ್ರವೇಶೋಪಾಯದಿಂ ಪೋಗಿ ದೇಶಾಂತರಂಗಳಂ ತೊೞಲ್ದೀಗಳಿಲ್ಲಿ ನಿಮ್ಮವರಂ ಪೊಣರೆ ಕಾದುತ್ತಿರ್ದು ತನ್ನಂಬಿನಪಾಯಂದಕೆನ್ನಂ ಬೆಸಗೊಂಡಱಿದು ಬೇಗಬಾಯೆಂದು ನಿಮ್ಮ ತಮ್ಮಂ ವಸುದೇವಂ ನಿಮ್ಮಡಿಯಂ ಕಾಣಲ್ಬಂದಪನೆಂದು ಪೇೞೆಂದಾತನನಟ್ಟಿ ತಾಂ ಪೆಱಗಂ ಬರ್ಪಾಗಳ್ ಸಮುದ್ರವಿಜಯಂ ಕಂಡಿವರಿರ್ವರುಮಿದಿರ್ವಂದರಾಗಿ ನಮ್ಮ ವರಾರುಮಿದಿರ್ಚದಿರಿಮೆನಲಂತೆ ನೋೞ್ಪಂ ಪೆಱಗಣಾತನಂದಮಂ ನಡೆನೋಡಿ

ಕಂ || ವಸುಧಾನಳದೊಳಗೆಲ್ಲಿಯು
ಮಸದೃಶಮಾಗಿರ್ಪ ರೂಪಿನೊಳ್ಪಿನೊಳಾತಂ
ವಸುದೇವನಂದದಂತೆಂ
ದೊಸೆದು ನೃಪಂ ನೋಡಿ ಕೂಡೆ ಸಾರಥಿ ಬಂದಂ ೨೨

ವ || ಬಂದು ಪೇೞ್ದಟ್ಟಿದಂದದೊಳಱಿಯೆ ಪೇೞ್ದಾಗಳೊಸೆದು ತನ್ನ ಕೊರಲ ಪದಕಮನಾತಂಗೆ ಕೊಟ್ಟು ನುಡಿಯುತಿರ್ಪಿನಂ ವಸುದೇವನೆಯ್ದೆವಂದು ಮೆಯ್ಯನಿಕ್ಕಿ ಪೊಡವಟ್ಟಾತನನಪ್ಪಿಕೊಂಡು ನಾಡೆ ಪೊತ್ತುವರಮ[ಗ]ಲ್ದುಬ್ಬೆ[ಗ]ದೊಳ್ ಮನ್ಯು ಮಿಕ್ಕು ಕಂಡ ಸಂತೋಷದೊಳ್ ಪಸೆ ಮಗುೞ್ದುಮೞ್ಕಱಿನೊಳ್ ನೋಡುತಿರ್ದನನ್ನೆಗಂ ವಸುದೇವಂ ಬಂದನೆಂಬುದಂ ಕೇಳ್ದಾತನ ಮತ್ತಿನೆಣ್ಬರಣ್ಣಂಗಳ್ ಪರಿತಂದೊಡವರುಮಂ ಕಂಡು ಪೊಡವಟ್ಟಪ್ಪಿಕೊಳ್ಲುತ್ತಿಮಿರೆ ಸಮುದ್ರವಿಜಯನೊಸಗೆವಱೆಯಂ ಪೊಯ್ಸೆ ಜರಾಸಂಧಂ ಕೇಳ್ದು ಸಂತೋಷಂಬಟ್ಟು ಯುದ್ಧಮನುಪಸಂಹರಿಸಬರೆ ವಸುದೇವನುಮಣ್ಣ[ನಭಿಮತ]ದಿಂ ಪೊಡೆವಟ್ಟು ಕಾಣ್ಬುದುಮವರನೊಡಗೊಂಡು ಮಹೋತ್ಸವದಿಂ ಪೊೞಲಂ ಪೊಕ್ಕು ರೋಹಿಣಿಗಂ ವಸುದೇವಂಗಂ ಮದುವೆಯಂ ಮಾಡಿ ಹಿರಣ್ಯಾಕ್ಷಂಗೆ ಪ್ರಸನ್ನವಾಗಿ ಸಮುದ್ರವಿಜಯನನಿರಿಸಿ ಬಂದರಸುಮಕ್ಕಳೆಲ್ಲರುಮನೊಡಗೊಂಡು ಜರಾಸಂಧಂ ಪೋದಂ ಸಮುದ್ರವಿಜಯಂ ತಮ್ಮ ನೊಡನೆ ಕೆಲವು ದಿವಸಮಿರ್ದು ವಸುದೇವಾ ನಿಂ ತಡೆಯದೆ ಬಪ್ಪುದೆಂದು ತನ್ನ ಪೊೞಲ್ಗೆ ಪೋದಂ

ಕಂ || ವಸುದೇವಂ ರೋಹಿಣಿಯೊಡ
ನೊಸೆದನುದಿಮಮಿತ ವಿಭವಯುತನಾಗಿರ[ಲು
ದ್ವ\ಸನ ಲಸದಶನ ವಿವಿಧ ನಿ
ವಸನ ಸುಭೋಗೋಪಭೋಗದಿಂ ಸುಖಮಿರ್ದಂ ೨೩

ವ || ಅಂತಿರುತಮೊಂದುದಿವಸಂ ಮಾಡದ ಮೇಗಣ ನೆಲೆಯೊಳ್ ಪವಡಿಸಿರ್ದ ವಸುದೇವನನೊರ್ವಳ್ ವಿದ್ಯಾಧರಿ ಬಂದು ವಿದ್ಯಾಶಕ್ತಿಯಿನೆತ್ತಿಕೊಂಡುಪೋಗಿ ವೇದಂಡಮೆಂಬ ಪರ್ವತದ ಮೇಗಣ ಗಗನಾನಂದಪುರಕ್ಕೊಯ್ದು ಉಪವನದೊಳಿರಿಸಿ ವಾಯುವೇಗಂಗಱೆಪಿ ದೊಡಾತನಿದಿರ್ಗೊಂಡೊಯ್ದು ತನ್ನ ಮಗಳಂ ಬಾಳಚಂದ್ರೆಯೆಂಬೊಳಂ ವಿವಾಹವಿಧಿಯಿಂ ಕೊಟ್ಟೊಡಲ್ಲಿ ಕೆಲವು ದಿವಸಮಿರ್ದು ಪೋಪ ಬಗೆಯೆಂತೆಂದೊಡಾ ವಾಯುವೇಗಂ ನಾನಾವಿಧ ವಸ್ತುವಾಹನುಗಳುಮಂ ಮಗುಳುಮಂ ಆಳಿಯನುಮಂ ವಿಮಾನದಿಂ ಕಳುಪೆ ಬಂದಂ ಅರಿಷ್ಟಪುರಮಂ ಪೊಕ್ಕು ಸುಖದಿನಿರ್ದು ಸೂರ್ಯಪುರವಿಂಗೆ ಪೋಪ ಬಗೆಯ ಹಿರಣ್ಯಾಕ್ಷಂಗಱಿಪಿ ದೊಡಾತನಿತಾನುಮಮೂಲ್ಯ ವಸ್ತುಗಳಂ ಬೞಿವೞಿಗೊಟ್ಟು ಕಳಿಪೆ ಪಯಣಂಬರುತ್ತಮಲ್ಲಲ್ಲಿ ಮದುವೆನಿಂದನಲ್ಲಲ್ಲಿರ್ದ ಪೆಂಡಿರೆಲ್ಲರುಮಂ ಬರಿಸಿಕಂಡು ದೇವನಿಕಾಯಮನೊಡಗೊಂಡು ಬರ್ಪ ದೇವೇಂದ್ರನಂತೆ ಪಯಣಂ ಬಂದು ಸೂರ್ಯಪುರಮನೆಯ್ದಿ ತನ್ನ ಬರವಂ ತಮ್ಮಣ್ಣಂಗೆ ಪೇೞ್ದಟ್ಟಿ ಮಹಾವಿಭೂತಿ[ಯಿಂ] ಪೊೞಲಂ ಪೊಕ್ಕು ತಮ್ಮ[ಣ್ಣಂಗಳ್ಗ] ಮತ್ತಿಗೆಗಳ್ಗಂಯಥಾಕ್ರಮದಿಂ ವಿನಯಪೂರ್ವಕಂ ಕಂಡತ್ಯಂತ ಸಂತುಷ್ಟನಾಗಿ ಕೆಲದಿವಸದಿಂ ರೋಹಿಣಿ[ಗ]ಗ್ರಮಹಿಷಿಪದಮಂ ಮಾಡಿದಿಂಬೞಿಯಮೊಂದು ದಿವಸಂ ತಲೆನೀರ್ಮಿಂದು ಸೂೞ್ಗೆವಂದು ಸುಳದಿ ನಿದ್ರಿತೆಯಾಗಿ ಬೆಳಗಪ್ಪ ಜಾವದಾಗಳ್

ತ್ರಿವಿಧಿ ||
ತೋಳಗು[ಗು]ಮೆಲ್ಲಿಗಂ ಬೆಳಗುತ್ತಮೊಪ್ಪುವಾ
ಕಳೆಗಳುಂ ನೆಱೆದು ಸೊಗಯಿಪ್ಪ ಚಂದ್ರನಂ
ನಳಿನಾಸ್ಯೆ ಕಂಡು ಕನಸಿ[ನೊಳು] ೨೪

ಕ್ಷೋಣಿಗೆ ಚೆಲ್ವಪ್ಪ ಮಾಣಿಕಮೊಂದನು
ಮಾಣದೆ ನುಂಗಿದ [ನ]ದನಾಗ ಕನಸಿನೊಳು
ಕಾಣುತ್ತೆ ರಾಗವೊದವಿರ್ದಳು ೨೫

ಇಂತಪ್ಪ ಕನಸನಾ ಕಾಂತೆ ಕಂಡೆಚ್ಚತ್ತು
ಕಾಂತಂಗೆ ತಿಳಿಪೆ ಕರಮೊಸೆ[ದಂ]
ತಾತನಾತ್ಮ ಗತದೊಳೊಸೆದಿರ್ದಂ ೨೬

ವ || ಪೂರ್ವಚಂದ್ರನಂ ಕಂಡುದುಂ ಮಾಣಿಕಮಂ ನುಂಗಿದುದುಂ ಲೋಕಪ್ರಸಿದ್ಧಮಪ್ಪ ಮಹಾಪುರಷನೊರ್ವಂ ನಿನ್ನ ಗರ್ಭದೊಳವತರಿಸುಗುಮೆಂದೊಡೊಸೆದಿರ್ದು ಕೆಲವು ದಿ[ನ]ದಿಂ ಗರ್ಭಚಿಹ್ನಮಾಗೆ ನವಮಾಸಂ ನೆಱೆದು ಶುಭದಿನದೊಳ್ ಮಗನಂ ಪೆತ್ತೊಡಾ ಕೂಸಿಂಗೆ ಬಲದೇವನೆಂದು ಪೆಸರನಿಟ್ಟಂತು ವಸುದೇವಸ್ವಾಮಿ ಸುಖದಿನಿರುತಮಾಯುಧವಿದ್ಯೋಪ ದೇಶಂಗೆಯ್ವಲ್ಲಿಗೊರ್ವನಾಗಂತುಕಂ ತೇಜೋಮೂರ್ತಿಯುಂ ರೂಪಸ್ವಿಯುಮಪ್ಪಂ ಬಂದು ಕಂಡ[ನಂ ನೀವೆಲ್ಲಿಂ] ಬಂದಿರೆನೆ ಕೌಶಂಬೆಯಿಂ ಬಂದೆಂ ಕಂಸನೆಂಬಂ ನೀಮುಂ ಸಕಳಕಳಾಶಳರೆಂಬುದಂ ಕೇಳ್ದು ಚಾಪವಿದ್ಯೆಯಂ ಕಲಿಯಲ್ ಬಂದೆನೆಂದೊಡಂತೆಗೆಯ್ಯೆಂದು ಧರ್ನುವಿದ್ಯೋಪದೇಶಂಗೆಯ್ಯುತಿರ್ದನೀತಂ ವೇದಂಡಪರ್ವತೋಪಕಂಠದೊಳಿರ್ದ ಪೌದನಪುರಾಧಿಪತಿ ಸಿಂಹರಥನೆಂಬಂ ತನ್ನ ಪೆರ್ಚಿನೊಳಂ ಮನದ ಬೆರ್ಚಿನೊಳಮಿಂತೆನುತಿರ್ಪಂ

ಕಂ || ಏನಾನುಂ ನೆವದಿಂ ತಾಂ
ಮು[ನಿ]ದಿಱಿವಡೆ ಖಚರರಾಜರುಂ ದೈತ್ಯರುಮಿ
ರ್ದಾನಲ್ಲಿನಿಸಾರ್ವರೆ ಪೇೞ್‌
ಮಾನಸರಿವರೆಂದು ಗಜಱಿ ಗರ್ಜಿಸುತಿರ್ಪಂ ೨೭

ಉ || ಕೋಟೆಗಳೆಂಬುವೇಂ ತ್ರಿವಿಧಮಲ್ಲದೆಯುಂ ಪೆಱವಂದಮಕ್ಕುಮೇ
ಕೋಟಿಭಟರ್ಕಳೆಂಬಿವರ್ಗಳಾ ಪರಿಸಂಖೆಯಿನತ್ತ[ಲೊ]ಲ್ವರೇ
ಕೂಟದ ನ[ಚ್ಚಿನೊಳ್ ಮ]ಲೆವನೆಂಬವರ್ಗಿಂದ್ರನೆ ಕೂಡಿ ನಿಲ್ವನೇ
ಕೀಟಸಮಾನ ಮರ್ತ್ಯರೆನಗಳ್ಕದೆ ಬಳ್ಕದೆ ನಿಲ್ವ ಗಂಡರೇ ೨೮

ವೆ || ಎಂದುಚ್ಚಾಟಸಿಯುಮಾಸ್ಫೋಟಿಸಿಯುಂ ನುಡಿದು ಕೆಲದ ನೆಲದರಸುಗಳುಮ ನೋಡಿಸಿಯುಮೆೞೆದುಕೊಳುತಂ ಮೇಗಿಲ್ಲದೊಟ್ಟೈಸಿ ಬಾೞ್ವುದುಂ ಜರಾಸಂದಚಕ್ರವರ್ತಿ ಕೇಳ್ದು ಮುಳಿದಾತನ ಮೇಲೆ[ದಂ]ಡಂ ಪೇೞ್ದೊ[ಡಾ]ದಂಡು ಕಾದಿ ಪಡಲ್ವಟ್ಟು ಸೋಲ್ತುೞಿಯೆ ಮುಟ್ಟುಗೆಟ್ಟು ಬಾಯ್ವಿಟ್ಟೋಡಿದೊಡೆ ಜರಾಸಂಧನದುವಂ ಕೇಳ್ದೞಲ್ದೆಂತಪ್ಪಡಮಾತನಂ ಗೆಲ್ದಂಗೆನ್ನ ಮಗಳುಮಂ ಮೆಚ್ಚಿದ ನಾಡುಮಂ ಕೊಡುವೆನೆಂದಿಂತೆಲ್ಲಾ ನೆಲದೊಳು ಘೋಷಣೆ[ಯಿಡಿಸಿ] ಸೂರ್ಯಪುರಕ್ಕೆ ವಂದಲ್ಲಿ ವಸುದೇವಂ ಪಿಡಿದನದನವರಣ್ಣಂ ಸಮುದ್ರವಿಜಯನಱಿದು ತಮ್ಮನ ಪರಾಕ್ರಮಮಂ ಮೆಚ್ಚಿ ತನ್ನ ಚತುರಂಗಬಲಮಂ ಪೇೞೆ ವಸುದೇವಂ ಕಂಸನನೊಡಗೊಂಡು ಯುದ್ಧಸನ್ನದ್ಧನಾಗಿ ನಡೆದು ಪೌದನಪುರಕ್ಕಾಸನ್ನವಾಗಿ ಬಿಟ್ಟು ಸಿಂಹರಥನಲ್ಲಿಗಣ್ಮುವಡಿದಿರೊಡ್ಡಿ ನಿಲ್ವುದೆಂದೊಡಾತಂ ಮುಳಿದು ಪೊಱಮಟ್ಟು ಚತುರಂಗಬಲಮನೊಡ್ಡಿದವರುಂ ತಮ್ಮ ಬಲಮನೊಡ್ಡಿ ಕೈವೀಸುವುದುಮೆರಡು ಬಲಮುಂ ತಾಗಿ ತಳ್ತಿಱಿದು ಪಡಲ್ವಟ್ಟುದುಮಂ ಕಂಡು ವಸುದೇವಂ ಮುಳಿದು ನೂಂಕಲ್ ಬಗೆದುದಂ ಕಂಸಂ ನಾಂ ಬಿಲ್ಗಲ್ವೆಯ ಚಟ್ಟನೆನ್ನೋಜನನುವರದೊಳ್ ಕುಸಿದಿರಲಾಗದೆಂದು ರಥಮಂ ಬೇಡಿಕೊಂಡು ಸಮರಸನ್ನದ್ಧನಾಗಿ ಸಿಂಹರಥನ ಬಲಕ್ಕೆ ಪರಿಯಿಸಿದಾಗಳ್

ಕಂ || ಕಂಸಂಗಾ ಸಿಂಹರಥಂ
ಕಂಸಂ ರಭಸದಿನಿದಿರ್ಚಿ ನಿನಗೇ ತ[ಕ್ಕಂ
ತಾಂ] ಸಮನಲೈ ಸಮರದೊ[ಳ್]
ನೀಂ ಸಾಯದೆ ತೊಲಗು ತೊಲಗು ಕಾಯ್ವರು [ಮೊಳ]ರೇ

ವ || ಎಂದು ಮನಂ ಪೆರ್ಚಿ ಮೇಗಿಲ್ಲದ ಗ[ರ್ವ]ದಿಂ ರಥಮನೆಯ್ದೆ ಸಾರ್ಚಿ ಪೆರ್ಚಿ ನುಡಿಯೆ ಕಂಸನೆಚ್ಚಂ

ಕಂ || ಒಡರಿಸೆ ಶರಸಂಧಾನದಿ
ನೆಡೆಯುಡುಗದೆ[ಬಂ]ದು ಪಲವುಮಂಬುಗಳಂಬಂ
ಕಡಿಯೆ ಧನುವುಡಿಯೆ ಹ[ಯಗಳ್]
ಕಡೆ[ಯೆ ರಥಂ ಕಡಿಯೆ] ತಡೆಯದಿರದಾರ್ದೆಚ್ಛಂ

ವ || ಅಂತೆಚ್ಚು ಭಿನ್ನಚಾಪನುಂ ಭಿನ್ನರಥನುಮಾದುದಂ ಕಂಡು ಮೇಲ್ವಾಯ್ದು ಪಿಡಿದು ಕಟ್ಟಿಕೊಂಡು ಬರ್ಪಾಗಳಾತನ ಬಲಮೊಡೆ ತಮ್ಮ ಬಲ ನೋಡೆ ಸಿಂಹರಥನಂ ವಸುದೆವಂಗೊಪ್ಪಿಸುವುದಂ ವಿಜಯಪಟಮಂ ಪೊಯಿಸಿ ಸಾರಮಪ್ಪ ವಸ್ತುವಾಹನಂಗಳಂ ಕೊಂಡು ಮಗುೞ್ದುಬಂದು ಸಮುದ್ರವಿಜಯನಂ ಕಂಡಾಗಳ್ ತಮ್ಮನ ಪರಾಕ್ರಮಕ್ಕೆ ಮೆಚ್ಚಿ ನೀನೆ ಕೊಂಡು ಪೋಗಿ ಜರಾಸಂಧಂಗೊಪ್ಪಿಸೆಂದೊಡಂತೆಗೆಯ್ವೆನೆಂದು ಸಿಂಹರಥನಂ ಕೊಂಡು ಪೋಗಿ ಚಕ್ರವರ್ತಿಗೊ[ಪ್ಪಿಸುವು] ದುಮಿಂತಪ್ಪ ಬಲ್ಲಾಳಂ ಪಿಡಿದ ಮಹಾಸತ್ವ ನೀನೆ ಪಿರಿಯನೆಂದದುವೆ ಮುಹೂರ್ತಮಾಗೆ ಮದುವೆನಿಂದು ಮೆಚ್ಚಿದ ನಾಡಂ ಬೇಡಿಕೊಳ್ಳೆನೆ ವಸುದೇವನಿಂತೆಂದಂ

ಕಂ || ಸನ್ನುತ ಧನುರ್ವಿದ್ಯೆಯು[ಮದ]
ನೆನ್ನೊಳ್ ನೆಱೆ ಕಲ್ತ ಚಟ್ಟನೀತಂ ಬಲಸಂ
ಪನ್ನಂ ದ್ವಿಪನಂ ರಣದೊಳ್
ಭಿನ್ನರಥಂ ಮಾಡಿ ಪಿಡಿದು ತಂದೆನಗಿತ್ತಂ ೩೧

ವ || ಆದಱಿಂ ನಿಮ್ಮ ಕೂಸುಮಂ ನಾಡುಮಂ ಈತಂಗೆ ಕುಡುವುದೆಂದು ಕಂಸನಂ ತೋಱಿದಾಗಳ್ ಜರಾಸಂಧನಾತನಂ ನೋಡಿ ನೀನೆಲ್ಲಿರ್ದುಬಂದೆ ಯಾರ ಮಗನೆನೆ ಕಂಸನೆಂಗುಮಾಂ ಕೌಶಂಬಿಯೆಂಬ ಪೊೞಲೊಳ್ ಕಪಿಳನೆಂಬ ಮಿಂಗುಲಿಗಂಗಂ ಅಂಬೋಧಿಯೆಂಬ [ಕಳ]ವತಿಗಂ ಮಗನಾಗಿ ಬೆಳೆದು ನಿಚ್ಚನಿಚ್ಚಂ ತೊಂಡಿಕೆಗೆಯ್ದು ಪುಯ್ಯಲ ಮಾಡುತ್ತಿರೆಯವರೆನ್ನಂ ಬೇಗಮಟ್ಟಿಕಳೆದೊಡೆ ತೊೞಲುತ್ತಂ ಬಂದು ಸೂರ್ಯಪುರದೊಳೀ ವಸುದೇವನ ಸಮೀಪದೊಳ್ ಬಿಲುವಿದ್ಯೆಯನಭ್ಯಾಸಿಸುತ್ತಮಿರ್ದೆನಿದೆನ್ನ ಕುಲಮಿಂತುಟು ನಿಮ್ಮ ಕೊ[ಳ್ಕೊ]ಡೆಗೆ ತಕ್ಕನಲ್ಲೆಂ ಬೆಸದೆಡೆಗೆ ತಕ್ಕನೆನೆ[ಯಿಂ]ತಪ್ಪ ರೂಪುಂ ತೇಜಮುಂ ವಿದ್ಯಾ ಕೌಶಳಮುಮಕು[ಲಿಗಂ] ಗಕ್ಕುಮೆಂಬುದಂ ಪರೀಕ್ಷಿಸಿಮೆಂದಾಗಳ್ ಕೌಶಂಬಿಯೊಳವರಯ್ಯ ನುಮಬ್ಬೆಯುಮಿರ್ದರವರ ಪಿಡಿದುಕೊಂಡು ಬನ್ನಿಮೆಂದಡವರ್ ಪೋಗಿ ಕೌಶಂಬಿಯೊಳಾರೈದು ಕಳವತಿಯಂ ಕಂಡು ನಿಮಗೆ ಚಕ್ರವರ್ತಿಯಟ್ಟಿದಂ ಬೇಗಂಬರ್ಪುದೆಂದಡವರಂಜಿ ನಡುಗುತ್ತಮೇಕೆ ಬೞಿಯಟ್ಟಿದನೆಂದಡೆ ಕಂಸ[೦] ನಿಮ್ಮ ಮಗನೆಂದಾರಯ್ಯಲಟ್ಟಿದ ನೆಂದೊಡವರಿಂತೆಂದರ್

ಕಂ || ಆತಂಗೆ ತಾಯ್ ಜಗುನೆಯಿ
ದಾತನ ತಂದೆಯಿದೆ ರತ್ನಮಂಜುಷೆ ಪಿಡಿಯೆಂ
ದಾತತಚಿತ್ತರ್ ಭಯದಿಂ
ದಾತಂಗಳ ಮುಂದೆ ತಂದು ತೋಱಿದರಾಗಳ್ ೩೨

ವ || ಜಗುನೆಯೊಳೀ ಮಂಜುಷೆಯಂ ಕಂಡು ತಂದದಱ ಕೀಲಂಗಳಚಿ ನೋಡೀಸಂ ಕಂಡು ನಡಪಿ ಬೆಳೆದು ತೋಂ[ಡು]ಗೈದಡೆ ತೋಱೆದಟ್ಟಿದೆವೆಂದು ಮಗನಲ್ಲ ನಿದಱ ಮಗನೀತಂ ಕೊಂಡು ಪೋಗಿಮೆಂದೊಡವರದಂ ಕೊಂಡುಬಂದು ಜರಾಸಂಧಂಗೆ ತೋಱಿದೊಡಂ ನೋೞ್ಪಲ್ಲಿ ಬರೆದಿರ್ದಕ್ಕರಂಗಳಂ ಬಾಜಿಸವೇೞ್ದಾಗಳ್

ಗದ್ಯ || ಸ್ವಸ್ತಿ ಸೂರಸ್[ನಾ] ನಾಮಲಂ[ಕರಿ]ಷ್ಣುರಸ್ತಿ ಮದು[ರಾ] ನಾಮನಗರೀ ತತ್ಪತಿಃ ಕೌರವ ಶ್ರೀಮದುಗ್ರಸೇ[ನೋ] ಮಹಾರಾ[ಜಃತ] ಸ್ಯಾಗ್ರ ಮಹಿಷೀ[ಪ]ದ್ಮಾವತೀನಾ[ಮ] ಕುಮರಗರ್ಭೋತ್ಪತ್ತಾವಲೋಕನ ಸಂಜನಿತ ಭಯಾಭ್ಯಾಂ ಪಿತೃಭ್ಯಾಂ ಮಂತ್ರಿಭಿಶ್ಚಾಯಂ ದಾರಕಃ[ಕಾಂಸ್ಯ] ಮಂಜೂಷಾಯಾಂ ವಸುವಾಸಿನಾಸಃ ನಿರ್ವಾಪ್ಯ ಯಮುನಾಪ್ರವಾಹೇ ನಿರ್ಮುಕ್ತಃ ಯೆ……..ದುಪ [ಗೃಹೀ]ತದಾರಕ ಮಿಮಾಂಕಮನೇನಾರ್ಥೇನ ಸುಪ್ರಯತ್ನಂ ಪೋಷಯತಿ ಭದ್ರಂ ಭವತಿ

ವ || ಎಂದು ಬಾಜಿಸುವಾಗ[ಳ್] ಜರಾಸಂಧನಂ ರಾಗದಿಂ ನೀನೆಂ[ತುಮೆ]ಮ್ಮಲೀಯನೆ ಇವರಮ್ಮನಪ್ಪ ಪಾಪಕರ್ಮನೀತನಂ ಕೊಂಡು ಮುಳಿಸಿನಿಂ ಮಂಜೂಷೆಯೊಳಿಟ್ಟು ಜಗುನೆಯೊಳ್ ಬಿಟ್ಟೊಡಾಯುಷ್ಯಬಲದೊಳ್ ಬರ್ದುಂಕಿದನೆಂದು ಮಹೋತ್ಸವಂ ಮಾಡಿ ಶುಭದಿನಮುಹೂರ್ತದೊಳ್ ಜೀವಂಜಸೆಯಂ ಕಂಸಂಗೆ ಕೊಟ್ಟು ವಸ್ತುವಾಹನಂಗಳಂ ಬೞಿವೞಿಗೊಟ್ಟು ನೀಂ ಮೆಚ್ಚಿದ ನಾಡಂ ಬೇಡಿಕೊಳ್ಳೆಂಬುದುಂ ಎನಗೆ ಕೂರ್ಪಾತಂ ಉಗ್ರಸೇನ ಮರಾಜನಪ್ಪೊಡಾತನ ನಾಡಂ ದಯಗೆಯ್ಯಿಮೆಂ ದೊಡಿದು ಕ್ರೋಧೋದ್ರೇಕಮೆಂದಱಿದು ನುಡಿದು ತಪ್ಪಲಾಗದೆಂದಾ ನಾಡಂ ಕೊಟ್ಟೊಡೆ ಕೊಂಡು ಪೊಡೆವಟ್ಟು ಕೈಕೊಂಡು ಪಗೆ ಕೈಗೆವಂದಂತೊಪ್ಪಿದುದಂ ಕಂಡರಸನುಂ ವಸುದೇವನುಮಿದೇಂ ಚೋದ್ಯಮೊ ತಂದೆಗಂ ಮಗಂಗಮಿಂತಾದ ಮುಳಿಸಾವ ಭವದೊಳಾದುದೋ ದಿವ್ಯಜ್ಞಾನಿಗಳಂಪ ಬೆಸಗೊಳ್ವಮೆಂದವರಿರ್ದಲ್ಲಿಗೆ ಪೋಗಿ ಮುನಿಗಳು ಬಂದಿಸಿ ಕುಳ್ಳಿರ್ದು ಭಟಾರಾ ಕಂಸಂಗಂ ಅವರಮ್ಮಂಗಂ ಆವ ಭವದೊಳಾದ ಮುಳಿಸೆನೆ ಭಟಾರರಿಂತೆಂದರ್

ಕಂ || [ಕೌ]ಸಿಕ [ಮೆಂ]ಬೊಂದೂರೊಳ್
ಭಾಸುರ ಪಂಚಾಗ್ನಿಯೆಂಬ ತಪದ ನಿಯೋಗಾ
ಭ್ಯಾಸದಿನಿರುಳುಂ ಪಗ[ಲುಮು]
ಪಾಸಕನಿರ್ಪಂ ವಶಿಷ್ಟನೆಂಬೊಂ ಪೆಸರಿಂ ೩೩

ವ || ಮೇಗಾದಿತ್ಯನ ಬೆಂಕೆ ಸುಡಲ್ ನಾಲ್ಕುಂ ದೆಸೆಯೊಳಂ ಕಿಚ್ಚನೊಟ್ಟಿ ನಡುವಿರ್ದಗ್ಗಳದ ತಪಮಿದಲ್ಲದೆ ಪೆಱತಿಲ್ಲೆಂದಿರ್ಪಿನಮೊಂದುದೆವಸಂ ಚಾರಣಋಷಿಯರ್ ಕಂಡಹೋ ಕಷ್ಟಮಜ್ಞಾನ ತಪಮೆಂದು ಪೋಪಾಗಳಾ ತಾಪಸಂ ಎರ್ದು ಮುಳಿದು ನಿಚ್ಚಂ ಪುಳ್ಳಿಗಡಿವ ತನ್ನ ಕೊಡಲಿಯಂ ಕೊಂಡು ನಿಮೀಗಡಂ ಬಂದೆನ್ನ ತಪಮೆಂತಜ್ಞಾನಂ ಪೇೞ್ದಲ್ಲದೆ ಪೋಗಲೀಯೆನೆಂದಿರ್ದಡೆ ನಿನ್ನೊಟ್ಟಿದ್ದ ಕಿಚ್ಚಿನೊಳ್ ಬೇವ ಸಮಿಧೆಯೊಳಗಣ ಪೋೞಲೊಳಗೆ ಸೀಳ್ದು ನೋಡೆ ಮಿಡಮಡಿಮಿಡುಕುತ್ತ[೦] ಮಿಟ್ಟ ಪಾವಿನ ಮಱಿಗಳಂ ಕಂಡು ಚೋದ್ಯಂಬಟ್ಟು ಬಾಯಂಬಿಟ್ಟು ಬೇಗಮಾ ತಪಮಂ ಕೊಡಲಿಯನಲ್ಲಿಯೆ ಬಿಸುಟು ಮಹಾತಪೋಧನರ ಬೞಿಯನೆ ಪೋಗಿ ದೀಕ್ಷೆಯಂ ದಯೆಗೆಯ್ಯಿಮೆಂದು ಕೈಕೊಂಡು ಪಲವುಂ ಕ್ರಿಯಾಶಿಕ್ಷೆಯಂ ಬೞಿಯಂ ಕಾಯಕ್ಲೇಶಮೆ ರುಚಿಯಾಗಿ[ಯು]ಪವಾಸಿಯಾಗಿ ವಿಹಾರಿಸುತಂ ಬಂದು ಮಧುರೆಯೊಳಿರ್ದಡವರ ತಪದ ಮಹಾತ್ಮ್ಯಮನುಗ್ರ ಸೇನಮಹಾರಾಜಂ ಕೇಳ್ದಂತಪ್ಪಡವರನಾನಲ್ಲದೆ ಪೊೞಲೊಳಗಾರುಂ ನಿಲಿಸಲಾಗುದೆಂದು [ಗೋ]ಸನೆವಿಡಿಸೆ

ಮ || ಸ್ರ || ಮುನಿಪಂ ಮಾಸೋಪವಾಸಾಂತರದೊಳನುನಯಂ ಪಾರಿಸಲ್ಕೆಂದು ಪೊಕ್ಕೊ
ಯ್ಯನೆ ಚರ್ಯಾಮಾರ್ಗದಿಂದಂ ಬರೆ ಪೊೞಲವರ್ಗಳ್ ನೋಡುತಿರ್ದೆಲ್ಲರುಂ[ಗೋ]
ಸನೆಗಳ್ಕಿರ್ದರ್ ಮದೇಭಂ ಮಸಗಿ ಕೊಲೆ ಕೆಲರ್ ಬೆಚ್ಚಿ ಪುಯ್ಯಲ್ಚಿದಾಗಳ್
ಜನನಾಥಂ ತದ್ಗಜವ್ಯಾಜದೆ ಮಱೆಯೆ ಮಗುೞ್ತಂದನಂದಾ ಮುನೀಂದ್ರಂ ೩೪

ವ || ಅಂತು ಮಗುೞ್ದುಬದು ಮ[ತ್ತೆ] ಮಾಸೋಪವಾಸ ಪ್ರತ್ಯಾಖ್ಯಾನಂಗೊಂಡು ಪಾರಣೆಯ ದೆವಸದಂದಿಗೆ ಮತ್ತಂ ಚರಿಗೆವರೆ

ಕಂ || ಅರಮನೆಯೊಳ್ ಕಿರ್ಚೆರ್ದಡೆ
ಪಿರಿದುಂ ಸಂಕಟದೊಳಾಕುಳವ್ಯಾ[ನನುಮಾ]
ನರನಾಥಂ ನಿಱಿಸಲ್ ಮಱೆ
ದಿರೆ ಮುನಿಯುಮಲಾಭದಿಂದಮಂದೆ ಮಗುೞ್ದುಂ ೩೫

ವ || [ಬಂ]ದು ಜಿನಾಲಯದೊಳಿರ್ದು ಪೊೞಲನಾಳ್ದರಸನ ಭಕ್ತಿಯುಮನೆನ್ನ ಕಾಯಕ್ಲೇಶದ ಶಕ್ತಿಯುಮಂ ನೋೞ್ಪೆನೆಂಬಂತೆ ಮತ್ತಮೊಂದು ತಿಂಗಳ್ ನೋಂತು ಪಾರಿಸುವ ಬಗೆಯಿಂ ಪೋಗೆ ಪೊೞಲವರಳ್ಕಿ ನಿಲಿಸದಿರ್ದ[ರ]ಲ್ಲಿ

ಕಂ || ಮಂಡಳಿಕಂ ಬರೆ ನೃಪನಿದಿ
ರ್ಗೊಂಡು ಮನೋಮುದದೆ ಕಂಡು ಸತ್ಪ್ರಿಯದೆ ಮನಂ
ಗೊಂಡು ಕಡುರಾಗಮಂ ಕ
ಯ್ಕೊಂಡು ಮುನೀಶ್ವರನನಾತನಂದುಂ ಮಱೆದಂ ೩೬

ವ || ಮಱೆದೊಡಾ ಋಷಿ ಮಗು[ೞ್ದು]ಪೋಗುತ್ತಂ ಪೋಗಲಾಱದೊಂದೆ ಬೀದಿಯ ಕೆಲದೊಳ್ ಕರಂ ನೆಮ್ಮಿ ಬೞಲ್ದಿರೆ ಕಂಡವರ್ಗಳಿಂತೆಂದರ್

ಕಂ || ಆರುಂ ನಿಲಿಸದಿರಿಂ ಗಡ
ಮೀ ರುಷಿಯರನೆಂದು ಮೂಱು ಪಾರಣೆಯೊಳಮಿಂ
ತಾರಯ್ಯದಿರ್ದು ಕೊಂದವ
ರಾರಯ್ಯ ನರೇಂದ್ರನಂತೆನಲ್ ಮುನಿ ಮುನಿದಂ ೩೭

ವ || ಮುನಿದೊಡವರ ಸಾಧ್ಯಮಾದ ವಿದ್ಯಾದೇವತೆಗಳುಮ ಬಂದು ಬೆಸನೇನೆಂ[ದಡೆ] ನಗೀಗಳ್ ಪ್ರಾಣಾವಸ್ಥೆಯಾಗಿರ್ದುದು ಮಱುಭವದೊಳ್ ಬೆಸಕೆಮೆಂದೊಡಂತೆಗೆಯ್ವೆಮೆಂದು ಪೋದಿಂಬೞಿಯಮಿವರೆಲ್ಲಿಯುಂ ನಿಲ್ಲದೆ ನಾಮೆ ನಿಲ್ವೆ[ಮಂ]ತೆ ಕಣ್ಣುಂ ನಿಲೆ ಮುಳಿದ ಚಿತ್ತಮುಗ್ರಸೇನನ ಮೇಗಾಗಿ ಸತ್ತು ಆತನರಸಿಯಪ್ಪ ಪದ್ಮಾವತಿಯ ಗರ್ಭದೊಳವತರಿಸಿದೊಡಾಕೆ ತನ್ನ ಭರ್ತಾರನ ನೆತ್ತರಂ ಕುಡಿಯಲ್ ಬಯಸಿ ಬಯಕೆಯ ಪೊಲ್ಲಮೆಗೞಲ್ದು ಪೆಱರಾರ್ಗಂ ಪೇೞಲಱಿಯದೆ ಚಿಂತಾಕ್ರಾಂತೆಯಾಗಿರ್ದುದನರಸಂ ಕಂಡಿಂತೆಂದಂ

ಕಂ || ಅಳವು[೦] ದಕ್ಷಿಣ ಭುಜಬಳ
ದಳವದ ನೀಂ ಬಲ್ಲೆ ಬಗೆಯೆ ನೆಟ್ಟನೆ ನಭದೊಳ್
ನೆಲದೊಳ್ ಜಲನಿಧಿಯೆಡೆಯೊಳ್
ಬಗೆವಡೆನಗಮರಿಯರುಮೊಳರೇ (?) ೩೮

ವ || ಎನೆ ಭರ್ತಾ[ರಂ] ಬೆಸಗೊಂಡೊಂ ಪೇೞದಿರಲಾಗ ಪಾತಕಿಯ ಬಯಕೆಯ ಪೇೞಲಾಗದೆಂದು ಬೆಚ್ಚನೆ ಸುಯ್ಯೆ ಪೊಲ್ಲದದಂ ಬಯಸಿದುದು ನಿನ್ನ ದೋಷಮಲ್ತು ನಿನ್ನ ಬಸಿಱೊಳಿ[ರ್ದ] ಪ್ರಾಣಿಯ ಬಯಕೆಯಕ್ಕುಮದಕ್ಕೆ ಸಂಕಿಸದೆ ಪೇೞೆಂದು ಕೀಱಿ ಬೆಸಗೊಂಡೊಡಿಂತೆಂದಳ್

ಕಂ || ಸುರಿಗೆಯೊಳಂ ದೊಕ್ಕನೆ ನಿ
ನ್ನುರಮಂ ಪಿಡಿದಿಱಿದು ತೆಗೆಯೆ ಭೋರ್ಗರೆದು ಕರಂ
ಸುರಿ[ದೈ]ತಪ್ಪ ಬಿಸಿಯ ನೆ
ತ್ತರ ಗಟಗಟನಾಂ ಕುಡಿಯ[ಲೆ] ಬಯಸಿದೆನರಸಾ ೩೯

ವ || ಇದೆನ್ನ ಪೊಲ್ಲವಗೆಯೆನಗೆ ಬಲ್ವಗೆಯಾ[ದು]ದಱಿನೀ ಬಯಕೆಯ ಭಯ ವಿಂಗೇಕಾರಣಮಪ್ಪು[ದ] ದಱುಂ ನಿನ್ನಂ ಕೊಂದೆನ್ನಂ ಕಾವುದೊಳ್ಳಿತ್ತೆ ಮುನ್ನಂ ಸಾವುದೊಳ್ಳಿತ್ತು ನೀ ಮನಕ್ಷತಂಬಡದಿರೆಂದೊಡಾತನಿಂತೆಂದಂ

ಕಂ || ನಿನ್ನೞಿವಂ ನೋಡುತ್ತ
ಮ್ಮೆನ್ನಕ್ಕದರಸುಗೆಯ್ದು ಬಾ[ೞ್ವವನೇ]ಚಿಃ
ನಿನ್ನಾದುದನಪ್ಪೆಂ ಪೆಱ
ದನ್ನುಡಿಯದೆ ತೀರ್ಚು ನಿನ್ನ ಬಯಕೆಯನೆಂದಂ ೪೦

ವ || [ಎ]ನ್ನು ಸಾವುದಕ್ಕಳ್ಳಿ ಮಾಣದಿರು ನಿನ್ನ ಸಾವುಮೆನಗೆ ಸಾ[ವಂ] ಮಾಡುಗು ಮೆಂದಲ್ಲಿಂದಮೆರ್ದುಪೋಗಿ ಪೆರ್ಗಡೆಯೊಳಾಳೋಚಿಸಿದೊಡದನಾಂ ತೀ[ರ್ಚು] ವೆನಾಱದಾಗಳ್ ನಿನ್ನಾದುದನಪ್ಪೆನನ್ನೆಗಮೇನುಮೆನ್ನದಿರಿಮೆಂದೊಡಂಬಡಿಸಿ ಕುಶಲನಪ್ಪ ಚಿತ್ರಿಕನಂ ಕರೆದೇಕಾಂತದೊಳಮರಸನ…….. ಸಮಂ ಮೆಯ್ಯೊಳೆಲ್ಲಂ ತೀವಿ ಮಾನೋನ್ಮಾರ್ಗ ಪ್ರದೇಶ ವರ್ಣರೇಖಾಶುದ್ಧಿ ಹಾವಭಾವವಿಳಾಸೋಪೇತಮಪ್ಪ ವಿಶುದ್ಧಮಂ ಸಮೆದು ಗೂಢದೊಳ್ ತಪ್ಪುದೆಂದೊಡಂತೆಗೆಯ್ಚೆನೆಂದು ಪೋಗಿ ಲೆಪ್ಪಮಿಟ್ಟು ನೃಪನ ರೂಪಂ ಪೋಲೆ ಮಾಡಿ ಕೆಲವು ದಿವಸದಿಂ ತಂದಾಗಳ್ ಚಿತ್ರಿಕಂಗೆ ಮೆಚ್ಚುಗೊಟ್ಟೇಕಾಂತದೊಳ್ ಪದ್ಮಾವತಿಯ ಮನೆಗಾ ಚಿತ್ರಮನೊಯ್ದು ಚಿತ್ರಿಕ[೦]ಮೊದಲಾದೆಲ್ಲರುಮಂ ಕಳೆದು ಬನ್ನಿಂ ನಿಮ್ಮ ಬಯಕೆಯಂ ತೀರ್ಚಿದಪ್ಪೆನರಸನ ಪರಿಚ್ಛೇದಮಂ ಕೇಳ್ದಿರೆಂತುಂ ಮಾಣ್ಬನಲ್ಲೆಂದೊಡಂಬಡೆ ನುಡಿವುದು[ ಮಂ]ತೆ[ಗೆಯ್ವೆ]ನೆನೆ ನೆನೆಯಲಾಗದುದಂ ನೋಡಲಾಗದೆಂದರಸಿಯ ಕಣ್ಣಂ ಕಟ್ಟಿ ಸುರಿಗೆಯಂ ಕಯ್ಯೊಳ್ ಕೊಟ್ಟು ಮುಂದಣ್ಗೆ ತಂದು ಬೇಗಂ ನೆಗರೞಿಮೆನೆ

ಕಂ || ಎಡಗಯ್ಯೊಳ್ ಮುಂದಲೆಯಂ
ಪಿಡಿದಿಱಿದು ಮರಲ್ಚಿಯೊತ್ತಿ ಸುರಿಗೆಯೊಳುರಮಂ
ಪಿಡಿಕುತ್ತುಗುತ್ತಿ ನೆತ್ತರ
ನುಡುಪಾನನೆ ಕುಡಿದು ತಣಿದು ಮೂರ್ಛೆಗೆ ಸಂದಳ್ ೪೧

ವ || ಅಂತು ಮೂರ್ಛಿಸಿ ಬಿರ್ದರಸಿ ಮೂರ್ಛೆಯಿದೆಚ್ಚಱದ [ಮು]ನ್ನಮಾ ರೂಪಿನರಸನಂ ಪಿಡಿದೊಯ್ದುಂತೊಯ್ದು ಪು[ಣ್ಣ] ನುಡಿದುಳಿಪುವಂತೆಗೆಯ್ದೊಂದೆಡೆಯೊಳಿರಿಸಿ ಬಂದು ಶೀತಳಕ್ರಿಯೆಯೊಳರಸಿಯಂ ಮೂರ್ಛೆದಿಳಿಪೆ ನಿನ್ನರಸಂ ಬರ್ದುಂಕಿದೊನೆಂದು ಸಂತೈಸಿದಿಂಬೞಿಯಂ ಕೆಲವು ದಿವಸದಿಂ ನವಮಾಸಂ ನೆರೆದು ಮಗನಂ ಪೆತ್ತಾಗಳರಸಂ ವಿಪರೀತಮಂ ಬಯಸಿದ ಬಯಕೆಯೊಳ್ ಪುಟ್ಟಿದಾತನೆಂತಪ್ಪನೊ ನೋೞ್ಪೆನೆಂದು ಬಂದು ನೋೞ್ಪಾಗಳ್

ಕಂ || ಕಿಸುಗಣ್ ಬಿಟ್ಟ ಕರ್ಣಂ ಕಾ
ಯ್ಪೆಸೆದಿರೆ ಪಿಡಿಕೆಯ್ಸಿ ನಿಮಿರ್ದ ಕೈ ಕಿಱಿಕದಪು
ಮಸದಳದ ಮುಳಿಸಿದೆಮ್ಮುಂ
ಬಿಸುನೆತ್ತರನೊರ್ಮೆ ಕುಡಿದೆಯಿನ್ನು ತಣಿಯಾ(?) ೪೨

ವ || ಎಂದಂತೆ ಬಂದು [ಕಂ]ಸಂ ಮಂಜುಷೆಯಂ ಸಮೆಯಸಿ ಕೂಸನಲ್ಲಿಟ್ಟು ಪೊನ್ನ ಪೊಟ್ಟಣಮಂ ಕಟ್ಟಿ ಕೆಲದೊಳಿಟ್ಟು ಪೊನ್ನಂ ಕೊಂಡೀ ಕೂಸನಾರ್ ಕಂಡಡಂ ನಡಪುಗೀತನಿಂತೆಂಬಾತನ ಮಗನೆಂದಕ್ಕರಂಗಳಂ ಬರೆದು ಮಂಜು[ಷಮ] ನಂತು ಮರದೊಳಮರ್ಚಿ ಜಗುನೆಯೆಂಬ ತೊಱೆಯೊಳ್ ಬಿಟ್ಟರದಂ ಕೌಶಂಬಿಯ ಕಳವ[ತಿ] ಕೊಂಡು ನಡಪಿದಳೆಂದೆಲ್ಲಮಂ ದಿವ್ಯಜ್ಞಾನಿಗಳ್ ಪೇೞೆ ಕೇಳ್ದು ಮಗುೞ್ದು ಬಂದಿರ್ದು ಕೆಲವು ದಿವಸದಿಂ ಕಂಸಂ ವಸುದೇವನಲ್ಲಿಗೆ ವಂದು ನಿಮ್ಮಡಿಯಿಂದೆನಗಿನಿವಿರಿದು ಪದವಿಯಾಯ್ತೆನ್ನ ವಿನಯದೞ್ಕಱಿನಳವಿಗಿನ್ನೆನ್ನ ಪೊೞಗ್ಗೆ ಪೋಪೆನೆಂದು ಬಿನ್ನವಿಸೆ ಇನ್ನು ಕೆಲವು ದಿವಸಮಿರ್ದೊಡಲ್ಲದೆನಗೆ ಸಂತೋಷಮಿಲ್ಲೆಂದು ಭರಂಗೆಯ್ದೊಡಂತೆಗೆಯ್ವೆನೆನೆ ಕಂಸಂ ಪೋಪ ಬಗೆಯಂ ಜರಾಸಂಧಂಗೆ ಪೇೞ್ದೊಡತಿಪ್ರಿಯದಿಂ ಮಗಳುಮನಳಿಯನುಮಂ ಕಳುಪಿ ವಸುದೇವ ಸಹಿತಂ ಪಯಣಂಬೋಗಿ ಮಧುರೆಯನೆಯ್ದಿ ಕಂಸಂ ತಮ್ಮಮ್ಮನಪ್ಪುಗ್ರಸೆನನಲ್ಲಿಗಿಂತೆಂದಟ್ಟಿದಂ

ತರಳ ||

ಪೆಱರ್ಗೆ ಪುಟ್ಟಿದ ಮಕ್ಕಳಂ ಕೊಲಲಾಗ ಬೇಡರ ಜಾತಿಗಂ
ಮಱೆದು ಜಾತಿಯ ಪೆಂಪನೋವದೆ ಪಾೞಿಯಂ ಬಿಸುಟೊಳ್ಳಿತ
ಪ್ಪ[ಱಿ]ವನಾತ್ಮ ತನೂಜನಂ ಕಡುಪಾಪದಿಂ ಮುಳಿಸುಣ್ಮೆ ತಾಂ
ತೊಱೆಯೊಳಿಕ್ಕಿದ ಪಾತಕಂ ಪೊಱಮಟ್ಟು ಕಾದುವುದೆಂಬುದಂ ೪೩

ವ || ನುಡಿದು ಜಡಿದಟ್ಟಿದೊಡೆ ಪೊಱಮಟ್ಟೊಡ್ಡಿದನದಂ ಕಂಸ[ನುಂ] ತನ್ನ ಚತರಂಗಬಲಮನೊಡ್ಡಿ ತವೆಯಿಱಿದುಗ್ರಸೇನ ಮಹಾರಾಜನುಮಂ ತಮ್ಮಬ್ಬೆಯಪ್ಪ ಪದ್ಮಾವತಿಯುಮಂ ಪೊೞಲ ಬಾಗಿಲ್ಮಾಡದ [ಮೇ]ಗಸಿಪಂಜರದೊಳ್ ಸೆಱಿಯಿಟ್ಟು ತಾನುಂ ವಸುದೇವಸ್ವಾಮಿಯುಮತ್ಯುತ್ಸಾಹದಿಂ ಪೊೞಲಂ ಪೊಕ್ಕುಸುಖದಿಂದಮಿರ್ದು ಬೞಿಯಂ ಉಗ್ರಸೇನನಿಂ ಪಿರಿಯ ದೇವಸೇನನ ಮಕ್ಕಳ್ ದೇವಕಿಯುಮತಿಮುಕ್ತನೆಂಬಿರ್ವರೊಳತಿ ಮುಕ್ತಕುಮಾರಂ ವೈರಾಗ್ಯದಿಂ ತಪಂಬಟ್ಟುಪೋದನಾ ದೇವಕಿಯೆಂಬ ಕನ್ನೆಯಂ ಕಂಸಂ ಬೞಿಯಟ್ಟಿ ಬರಿಸಿ ಗುರುದಕ್ಷಿಣೆಯೆಂದು ವಸುದೇವಂಗೆ ಮಹಾ ವಿಭೂತಿಯಿಂ ವಿವಾಹಂ ಮಾಡಿಕುಡೆ

ಮ || ಪಸುರ್ವಂದ[ರ್ತಳಿರಾ]ತ್ತಪೂರ್ಣಕಳಶಂ ಶ್ರೀಖಂಡಮಂಭೋರುಹಂ
ಪಸೆ ತೂರ್ಯಧ್ವನಿ ದರ್ಪಣಂ ದ[ಧಿ] ವಿಳಾ[ಸಿನ್ಯೋ]ತ್ಕರಂ ಚಾಮರಂ
ಕುಸುಮಂ ಮಂಗಳಗೇಯಮೆಂಬಿವಱೊಳಾದತ್ಯಂತ ತಚ್ಛೋಭೆಯಿಂ
ವಸುದೇವಪ್ರಭು ದೇವಕೀಲಲನೆಯೊಳ್ ಕೂಡಿರ್ದನುತ್ಸಾಹದಿಂ ೪೪

ಗದ್ಯ || ಇದರ್ಹತ್ಸರ್ವಜ್ಞ ಪಾದಪದ್ಮ ವಿರಾಜಿತೋತ್ತಮಾಂಗ ಶ್ರೀ ಬಂಧುವರ್ಮ ನಿರ್ಮಿತಮಪ್ಪ ಹರಿವಂಶಾಭ್ಯುದಯದೊಳ್ ಕಂಸಭವಾಂತರಂ

ಪಂಚಮಾಶ್ವಾಸಂ