ಕಂ || ಅಂತಾತ್ಮವರ್ಗದೊಡನೆ ಸು
ಖಂ ತಮ್ಮನ್ವಯದ ಸೂರ್ಯಪುರದೊಳೆ ಹರಿ ನಿ
ಶ್ಚಿಂ[ತೆಯಿನಿ]ರೆ ವಂಶಜರೆ
ಲ್ಲಂ ತಡೆಯದೆ ನೆರೆದು ಮಂತ್ರಿಸಹಿತಂ ಬಂದರ್ ೧

ವ || ಬಂದನಿಬರುಂ ಸಮುದ್ರವಿಜಯರ ಮುಂದೆ ಏಕಾಂತದೊಳ್ ಮಂತಣಮಿರ್ದು ನಾಮೆ ಪರಿಚ್ಛೇದಿಸಿದೊಡಾತಂ ಬೞಿಕೊಡಂಬಡನೀಗಳೆ ಕರೆದಾಳೋಚಿಸುವಮೆಂದು ಹರಿಯಂ ಕರೆಯಿಸಿ ಏಗೆಯ್ವಂ ಚಕ್ರವರ್ತಿಯ ಪಿರಿಯಳಿಯನಂ ಕೊಂದು ಬಂದಿಂತಿರಲಾಗದು ಸಂಧಿವಿಗ್ರಹ ಯಾನ [ಆಸನ] ಸಂಶ್ರಯ ದ್ವೈ[ಧೀ]ಭಾವಮೆಂಬ ಷಾಡ್ಗುಣ್ಯದೊಳಂ ನೆಗೞ್ದ ಬುದ್ಧಿವಂತರೆಲ್ಲಂ ಬಗೆದು ಪೇೞಿಮೆಂದೊಡೆಲ್ಲಂ ತಂತಮ್ಮ ಕಂಡ ನಯಂಗಳಂ ಪೇೞ್ದೊಡೆ ಸಮುದ್ರವಿಜಯನುದ್ದಾಮನೆಂಬ ಮಂತ್ರಿಮುಖ್ಯನನೆಂದಂ ನೀನಪ್ಪಡೆ ರಾಜಕಾರ್ಯವಿಚಾರಪರನೆ ಈಯೆಡೆಗೇಗೆಯ್ವಂ ಪೇೞಿಮೆಂದೊಡಾತನಿಂತೆಂದಂ ದುರ್ಬುದ್ಧಿ[ಆ] ಹಾರ್ಯಬುದ್ದಿ [ಬುದ್ಧಿಮಾನ್]ಯೆಂಬ ಮೂವರುಮರಸುಗಳೊಳಂ ನೀನೆ ಬುದ್ಧಿವಂತನೇನಂ ಪೇೞ್ವೆನಂತುಮೆನ್ನಱಿವನಿತಂ ಪೇೞ್ವೆನೇಕಚಿತ್ತದೊಳ್ ಕೇಳಿಮೆಂದಿಂತೆಂದಂ ಮುನ್ನಂ ಕಾಮ ಕ್ರೋಧ ಲೋಭ ಮಾಯ ಮದ ಮಾತ್ಸರ್ಯಮೆಂಬರಿಷಡ್ವರ್ಗಮನಡಂಗಿಸಿ [ದ್ಯೂ]ತಂ ಪಾನಂ ವೇಶ್ಯಂ ಮೃಗ [ಯಾ] ವಾಕ್ಪಾ[ರುಷ್ಯ] ಅರ್ಥದೂಷಣ[೦] ದಂಡಪಾ[ರುಷ್ಯ] ಮೇಂಬೇೞುಂ ಬೆಸನಂಗಳುಮಂ ಪೊರ್ದದೆ ಸ್ವಾಮ್ಯಮಾತ್ಯ ಜನಪದ ದುರ್ಗ ದಂಡ ಕೋಶ ಮಿತ್ರರೆಂಬ ರಾಜ್ಯಪ್ರಕೃ[ತಿ]ಗಳೇೞುಮನುಂಟುಮಾಡಿ ಪ್ರಭು ಮಂತ್ರೋತ್ಸಾಹ ಶಕ್ತಿತ್ರಯಂಗಳೊಳ್ ನೆಱೆದು ರಾ[ಷ್ಟ್ರ] ಪಾಳ [ಅಂತಪಾಲ] ಪ್ರತ್ಯಂತವಾಸಿಗಳೆಂಬ ಬಾಹ್ಯಪ್ರಕೃತಿಗಳುಮಂ ಕರ್ಮಣ್ಯ ಮಂತ್ರ ಲಾಭ ದಾಯಕಂ ಸಂಗ್ರಾಮಿಕಮೆಂಬ ನಾಲ್ಕುಂ ತೆಱದ ಭೃತ್ಯರುಮಂ ಪೊರೆದು ಬೃತ್ಯಪೋಷಣಂ ಪ್ರಜಾಪಾಳನಂ ಧರ್ಮರಕ್ಷಣಂ ಆತ್ಮಪ್ರಯತ್ನವೆಂಬ ನಾಲ್ಕುಂ ನೀತಿಗಳುಮಂ ಸಾ[ಮ]ಭೇದಮುಪಪ್ರದಾನ ದಂಡಮೆಂಬ ನಾಲ್ಕುಂ ನಯಂಗಳನಱಿದು ಗಿರಿದುರ್ಗ ವನದುರ್ಗ ಜಲದುರ್ಗಮೆಂಬ ಮೂಱುಂ ದುರ್ಗಂಗಳುಮಂ ಭೂ[ರಿ] ಕರ್ಮಣಾಮಾರಂಭೋಪಾಯ ಪು[ರುಷ] ದ್ರವ್ಯಸಂಪತ್ ದೇಶಕಾಲ[ವಿ]ಭಾಗ ವಿನಿಪಾತಪ್ರತೀಕಾರಮನೋಡರ್ಚಿ ಪಗೆವಂಗುಚ್ಚಾಟನೆ ಬಂಧನ ಕರ್ಮಣಾಮಪನಯನ ಸಾಪತ್ನ ವಾಸ್ತುಜಂ ಸ್ತೀಜಂ ವಾಗ್ಭುತಮ ರಾಜಮೆಂಬ ನಾಲ್ಕುಂ ಪಗೆಗಳೊಳಪ್ಪಪರಾಧಜಮದಱಿಂ ಸಂಧಿಯೆಂದುಮಾಗದು ವಿಗ್ರಹಂಗೆಯ್ವೊಡೀಗಳ್ ನಾಮಲ್ಪಬಳರೆಮದುವುಮಾಗದು ನೆಟ್ಟನಾತಂ ಮುಳಿದು ಬಾರನನ್ನೆಗಂ ಯಾನಮಂ ಮಾಡಿ ದುರ್ಗಾಶ್ರಯದೊಳ್ ಆಸನಂಗೆಯ್ದು ಮತ್ತಮೊಂದು ದೈವಬಲ ಮುಳ್ಳೆಡೆಯೊಳ್ ಸಂಶ್ರಯಮಂ ಮಾಡಿ ನಿಂತು ಬೞಿಯಂ ದ್ವೈಧೀಭಾವದೊಳೆಂತಾ ದೊಡಮಕ್ಕುಮೆಂದೊಡೆಲ್ಲರುಮದನೆ ಮೆಚ್ಚಿ

ಕಂ || ನೀತಿಯುತಂ ನಮ್ಮೊಳತಿ
ಪ್ರೀತಿಯುತಂ ಖ್ಯತಿಸಂಯುತಂ ಪ್ರವಿಮಳಸಂ
ಜ್ಞಾತಿಯುತನೀತನದಱಿಂ
ದೀತನ ಬಗೆಗೊಂಡ ಕಜ್ಜಮಭ್ಯುದಯಕರಂ ೨

ವ || ಇಂತು ಪೆಱದಂ ಬಗೆಯದಿರಿಮೆಂದಾ ಕಜ್ಜಮನೆ ಕೈಕೊಂಡಿರ್ದು ಬಹುವಿಧ ದಾನಸನ್ಮಾನಂಗಳಿಂ ಪ್ರತ್ಯಂತಾಟವಿಕರ್ಕಳಂ ತಮ್ಮೊಳ್ ಪತ್ತಿಸಿ ನೆಗೞ್ದು ಉದಾಸೀನರಂ ಕಲ್ಯಾಣ ಮಿತ್ರರ್ ಮಾಡಿ ಮಿತ್ರವರ್ಗಮನಾತ್ಮದೇಹಸಮನಂ ಮಾಡಿ ಕರಮುಪಯೊಗಿ ಯಾಗಿರ್ಪಿನ ಮತ್ತ ಮಧುರೆಯೊಳ್ ಕಂಸನ ಪೆಂಡತಿ ಜೀವಂಜಸೆ ತನಗೊದವಿದೞಲೊಳ್

ಕಂ || ಒಂದನೆ ಕೇಳಿಂ ಕಂಸಂ
ಗೊಂದಾತನ ತಲೆಯನೇಱಿ ಮಿಯದೆ ಮಿಯೆಂ
ಸಂದೆಯಮೇನೀ [ಪ]ಗೆ ಮಡಿ
ದಂದಲ್ಲದೆ ನೆಟ್ಟನೆನ್ನ ತಲೆಯಂ ಮುಡಿಯೆಂ ೩

ವ || ಎಂಬ ಪ್ರತಿಜ್ಞೆಯನಱಿಯೆ ನುಡಿದುಗ್ರಸೇನನಂ ಬಂಚಿಸಿಪೋಗಿ ರಾಜಗೃಹ ಮನೆ [ ಯ್ದಿ ತಮ್ಮ] ಯ್ಯನಪ್ಪ ಜರಾಸಂಧನಲ್ಲಿಗೆವಂಧು ಪಱಿದ ತಲೆವೆರಸೊದಱಿಯೞುತ್ತಂ ನಿನ್ನಲೀಯಂ ಬೆಸಂದಪ್ಪಿದನೆಂದು ಪುಯ್ಯಲನಿಕ್ಕಿದಾಗಳ್ ತಂದೆಯುಂ ತಾಯುಮಾಕೆ ಯೊಡವುಟ್ಟಿದರುಂ ಬಂದು ಮಹಾದುಃಖಂಗೆಯ್ದು ಮೂರ್ಛೆವೋಗಿಯದಱಿಂದೆಚ್ಚತ್ತು ಯೆಂತು ಸತ್ತನಾರ್ ಕೊಂದರ್ ಪೇೞಿಮೆಂದು ಬೆಸಗೊಂಡು ಕೇಳ್ದಕ್ಕುಮಾತ ನೊರ್ವರುಮನೆತ್ತಿತರಲಱಿಯೆಂ(?)

ಉ || ಕೊಂದವನೆಲ್ಲಿಯುಂ ಪುಗುವನೀ ಸಕಳಾವನಿಯಾ[ದಿ]ಪೆಂಪಿನೊಳ್
ಸಂದ ನಗಂಗಳೆಂಬಿನಿತ ಪೊಕ್ಕಿರಲೇನಿವಱಿಂದಮತ್ತ ಮ
ತ್ತೊಂದೆಡೆಯುಂಟೆ ಮಾನಸರ್ಗೆ ಮತ್ತಿವಱೊಳ್ ನಿಲೆ ಕಾಯಲಿಂದ್ರನುಂ
ಬಂದೊಡಮೇನೊ ಕಾದಪನೆ ಪೇೞವರಾಂ ಮುನಿದಂದು ಬಾೞ್ವರೇ ೪

ವ || ಎಂದು ಸಂತೈಸಿ ತನ್ನ ಮಗನನಾಕೆಯೊಡವುಟ್ಟಿದನಂ ಕಾಲಯಮನೆಂಬನಂ ಪೋಗಿ ಯಾದವರೊಳ್ ಕಾದಿ ನಾರಾಯಣನೆಂಬೊನ ತಲೆಯಂ ತಪ್ಪುದಂತಲ್ಲದೆ ನಿಮಕ್ಕನ ಪ್ರತಿಜ್ಞೆಯುಮೆನ್ನೞಲುಂ ಪೋಗದೆಂದು ಬೆಸವೇೞ್ದೊಡಾತಂ ಮಹಾಬಲಪರಾಕ್ರಮನಾಗಿ ಪೊಱಮಟ್ಟು ಪಯಣಂಬೋಗಿ ಸೂರ್ಯಪುರದ ಸಮಿಪಕ್ಕೆ ಬಂದಾಗಳೆ ಮುನ್ನಮೆ [ಚ]ರರಿಂದವನ ಬರವನಱಿದೀ ಕೂಸುಗಳ್ಗೆ ನಾಮೆ ಸಾಒಲ್ವೆಮೆಂದು ಬಲದೇವ ವಾಸುದೇವ ಕುಮಾರರ್ ಪೋಱಮಡೆ ನಿಮಗಿದಾವುದನುವರ ನಾಮೆ ಸಾಲ್ವೆವೆಂದು ಕೆಲರರಸುಮಕ್ಕಳಿದಿರಿಂ ನಡೆದು ಕಾಲಯಮನನೋಡಿಸಿ ಮಗೞ್ದು ಬಂದಿರ್ದರಂತು ಮಗನೋಡಿಬಂದುದಂ ಜರಾಸಂಧಂ ಕೇಳ್ದು ಮುಳಿದ ಮೊಗಮಂ ಕಂಡು ಆತನ ತಮ್ಮ ನಪರಾಜಿತನೆಂಬಂ ಬಂದು ಬೆಸನಂ ಬೇಡಿಕೊಂಡು ಚಾತುರಂಗಬಲಸಹಿತಂ ಪಯಣಂಬರಲೆಯ್ದೆವಂದುದನಱಿದು ಸಮುದ್ರವಿಜಯಾದಿ ಯಾದವರೆಲ್ಲಂ ಸಮಸ್ತಸೇನಾಸಹಿ[ತ]ರಾಗಿ ಪೊಱಮಟ್ಟೊಡ್ಡಿದೊಡ ಪರಾಜಿತನುಂ ತನ್ನ ಬಲಮನಿಂಬಾಗೊಡ್ಡಿ ಕಯ್ಯಂ ಬೀಸಿದಾಗಳ್

ಶಾ || ಬಿಲ್ಲೊಳ್ ಬಿಲ್ಲು ಹಯಂ ಹಯದೊಳಂ ಮದದಂತಿಯೊಳ್ ರಥಂ ರಥ
ದೊಳ್ತಾಗಿಳ್ಮೊ ಮುಳಿಯಾಗದರ್ತು ಪಲವುಂ ಶಸ್ತ್ರಂಗಳಿಂ ಕಾದುತಂ
ಪೆಲ್ಲಾಪೆಲ್ಲಿಯೊಳಗ್ಗಿ ತಗ್ಗಿ ಪೊಡರ್ದೆರ್ದೆಯ್ತಂದು ಮತ್ತಂ ಕರಂ
ಮಲ್ಲಾಮಲ್ಲಿ ತಗುಳ್ದುರುಳ್ತರೆ ಪಡಲ್ಪಟ್ಟತ್ತು [ತ]ತ್ಸಾಧನಂ (?) ೫

ವ || ಅಂತು ಪಡಲ್ಪಟ್ಟ ತನ್ನ ಬಲಮನಪರಾಜಿತಂ ಕಂಡು ಭಯಂಗೊಂಡು ಮನಮಲ್ಲಾಡುತ್ತಿರೆ ಬಲದೇವ ನಾರಾಯಣ[ರ್ಕಳ್] ನೂಂಕಿದೊಡಪರಾಜಿತನಳ್ಕಿ ಬೇಗಂ ಪತ್ತೆಂಟು ಕುದುರೆ ಯೊಳೋಡಿದನಾತನ ಬಲಮುಮಂತೆ ಪರೆದು ಪೋಯ್ತಂತಾ ಕಾಳೆಗಮಂ ಗೆಲ್ದು ಕೊಳ್ದಂ……..ಗೊಂಡು ಬಂದು ತಮ್ಮ ಪೊೞಲೊಳಿರ್ದೊಂದು ದೆವಸಂ ತಮ್ಮೊಳೇಕಾಂತಮಿರ್ದು ಜರಾಸಂಧ[ನೋಳ್] ನಮಗಿನ್ನೆಂತುಂ ಪಗೆಯಾದುದಿನ್ನೇಗೆಯ್ವಮೆನೆ ಮತ್ತಮುದ್ದಾಮನೆಂಬ ಮಂತ್ರಿಮುಖ್ಯನಿಂತೆಂದಂ

ಕಂ || ಕೊಂದಂ ಮುನ್ನಳಿಯನನೆ
ಯ್ತಂದ ತನೂಜನೂಮನಿಱಿದು ಬೆರ್ಚಿಸಿ ಬೞಿಯಂ
ಬಂದೊಡಮಟ್ಟಿದನುಮನಾ
ಗೆಂದಿರದಿದಿರಾಂತು ರಣದೊಳಿಱಿದೋಡಿಸಿದಂ ೬

ವ || ನಾಮಾತಂಗೆ ಭೃತ್ಯರಾಗಿ ನಡೆವುದುಗೆಟ್ಟು ದುರ್ವೃತ್ತನಾಗಿ ನೆಗೞ್ದಮದಱಿಂದೀ ಗೆಲ್ಲಮನೆ ಕೈಕೊಂಡೀಗಳ್ ಪೋಪುದು ನಯಮಾಯ್ತೆಂದಾಗಳ್ ಪೋಪುದಾಯಮಲ್ಲೆಂದಾಗಳ್ ನುಡಿಯೆ ನಿನ್ನ ಪೇೞ್ದುದೆ ಕಾರ್ಯಂ ನೀನಱಿವೆಯೆಂದು ಪೋಪ ಕಜ್ಜಮನೆತ್ತಿಕೊಂಡು ಪಯಣಕ್ಕೊಡರಿಸಿ ಮಿತ್ರವರ್ಗಮೆಲ್ಲಮಂ ಬರಿಸಿ ಶುಭದಿನದೊಳ್ ಪೊಱಮಟ್ಟು ಪಡುವಮೊಗದೆ ಪಯಣಂಬೋಗಿ ಕೆಳವು ದಿವಸದಿಂ

ಚಂ || ಕುರವಕ[ಚಂಪ]ಕಾರ್ಜು[ನ] ತಮಾಳ ಕುಚಂದನ ಚಂದ ನಾಗ ಜಂ
ಬಿರ ಪನಸಾಮ್ರ ನಿಂಬ ಕುಟಜಾದಿ ಮಹಾಕುಜಸಂಕುಳಂಗಳಿಂ
ಕರೆವ ಖಗಂಗಳಿಂ ನೆರೆವ ಖೇಚರ ದಿವ್ಯಯುಗಂಗಳಿಂ ಮನೋ
ಹರಮನನತಮಂ ದಿವಿಜಲೋಚನಕಾಂತಮನುಜ್ಜಯಂತಮಂ ೭

ವ || ಅಂತೆಯ್ದೆವಂದದಱೆಡೆಯನರ್ತಿಯೊಳ್ ನೋಡುತ್ತಮಂತೆಪೋಗಿ ಪದ್ಮಾವತೀವಿಷಯದೊಳ್ ತೃಣಕಾಷ್ಠತೋಯಬಹುಳಮಪ್ಪೆಡೆಯೊಳ್ ನಿಂದರಿತ್ತಂ

ಕಂ || [ಒ]ಡವಡೆ ಪಡಪಡಲ್ಪಡ(?)
ಕೆಡೆ ಪಸುಗೆಗಳಾ ಮುಖದೊಳ[ಮ] ಪರಾಜಿತನೆಂ
ಬೋಡವುಟ್ಟಿದಧಿಕಬಲನೊಂ
ದೊಡಲನೆ ಕೊಂಡೋಡಿ ತಂದಡಂಗಿರ್ದಿರವಂ ೮

ವ || ಜರಾಸಂಧಚಕ್ರವರ್ತಿ ಕೇಳ್ದುಮುನ್ನಳಿಯನ ಸತ್ತುದುಮಂ ಮಗನ ಬೆನ್ನಿತ್ತುದುಮ ನೀಗಳೊಡವುಟ್ಟಿದಂ ಪರಿಭವಂಬೆತ್ತು ದುಮದವ[ೞಲಂ]ಮಾಡೆ ಮುಳಿಸು ಪೆರ್ಚಿಯಾನುಂ ಬರಲುಮರಿಯರಾರೆಂಬುದನವ[ರ್ಗ] ಮಿಳಿಯನಾದೆನೆಂದು ಮತ್ತಮಾ ಕಾಲಯಮನೆಂಬ ಮಗನಂ ಕರೆದು ಇನ್ನು ನಿನ್ನ ಭಾವನ ಸತ್ತ ಸಾವುಮಂ ನಿಮ್ಮ ಕಿಱಿಯಯ್ಯಂ ಬನ್ನಂಬೆತ್ತುದುಮಂ ನೀನೆ ನೀಗಲೈ………..ಳ್ಪುಡಂ ಕರಂ ಕೂರಿದರಪ್ಪ ಪಲರುಮರಸುಮಕ್ಕಳುಮಂ ನಿನ್ನೊಡನೆ ಪೇೞ್ದಪೆಂ ನೀಂ ಪೋಗಿ ಪಗೆವರ ತಲೆಯಂ ತಂದಡಂ ಮೇಣಾ ನಿನ್ನ ತಲೆಯನವ[೦] ಕೊಂಡಡಂ… ಗುೞ್ದು ಬಂದಡೆ…………ರ ಮೇಗೆ ನಡೆಯೆನೆಂದು……ಳ್ದೊಡಂತೆಗೆಯ್ವೆನೆಂದು ಬೆಸನಂ ಕೈಕೊಂಡು ಒಂಭತ್ತಕ್ಷೋಹಿಣೀಬಲಂಬೆರಸು ಕೂಡಿಕೊಂಡು ಪಯಣಂಬರುತ್ತಿರ್ದನತ್ತ ಹರಿವಂಶಜರುಮಾ ಪದ್ಮಾವತೀವಿಷಯದಿಂ ಪೊಱಮಟ್ಟು ನಡೆದನೇಕಗ್ರಾಮ ಸರಿತ್ಪರ್ವತಂಗಳಂ ಕಳಿದವಂತೀವಿಷಯದೊಳಗುಜ್ಜಯಿನಿಯ ಪಶ್ಚಿಮಭಾಗದೊಳ್ ವಿಶ್ರಮಿಸಿರ್ದು ಮತ್ತೆ ನಡೆದು ಸಮುದ್ರತೀರಂ ಸಮಿಪ ವಿದ್ಯೋಪಕಂಠಮಂ ಸಾರ್ದು ಬೀಡಂಬಿಟ್ಟಿರೆ ಹರಿವಂಶ ಮಹಾಪುರುಷರಕ್ಷಣ ಕುಳದೇವತೆ ಕಾಳಯಮನ ಮಸಗಿಬರ್ಪ ಬರವನಱಿದು

ಕಂ || ಹರಿವಂಶ ನರಾಧಿಪರಂ
ಪರಿರಕ್ಷಿಪೆನಾನುಪಾಯದಿಂದೆೞ್ತ[ರುತಿ]
ಪ್ಪರಿಭೂಪಾಳತನೂಜರ
ಬರವಿನ ಮುಂದಱಿದು ಪೋಗಿ ಗಹನಾಂತರದೊಳ್ ೯

ವ || ಮುನ್ನೆ ನಾರಾಯಣ[೦] ಬಿಟ್ಟು ಪೋದೆಡೆಯೊಳ್ ಚಕ್ರವರ್ತಿಯ ಪಡೆ ಬಪ್ಪುದನಱಿದೆ[ನಿ] ತಾನುಂ ಕೊಂಡಂಗಳಂ ಮಾಡಿ ಪಲವುಂ ಪುಳ್ಳಿಗಳನನಿತು ಕೊಂಡದೊಳಮೊಟ್ಟಿ ಜಾಜ್ವಲ್ಯಮಾನಮಾಗುರುಪಿ ನಾರ್ಪ [ ಕಂ]ಪುಮಂ ಪಣ್ಣಿ ಕೊಂಡಂಗಳ ಮೊದಲೊಳೆಲ್ಲಂ ಕೆದಱಿದಪುಷ್ಪಾಕ್ಷತಂಗಳಂ ಮಾಡಿ ದೇವತೆ ತಾನೊಂದು ಕೊಂಡದ ಮೊದಲೊಳ್ ಬಡಬಿದ್ದಿಯ ರೂಪುಗೊಂಡು

ಕಂ || ಹಾಹಾ ಸಮುದ್ರವಿಜಯಾ
ಹಾಹಾ ಕೂರ್ತಗಲದಿಪ್ಪ ನೃಪತನುಜರಿರಾ
ಹಾಹಾ ನು[ತ]ವಸುದೇವಾ
ಹಾಹಾ ಬಲದೇವ ವಾಸುದೇವರ್ಕಳಿರಾ ೧೦

ಹಾಹಾ ವನಿತಾಜನಮೇ
ಹಾಹಾ ಕುಲಜಾತ ಸತ್ಕುಮಾರರ್ಕಳಿರಾ
ಹಾಹಾ ನಿಜಪರಿಜನಮೇ
ಹಾಹಾ ಬಲ್ಲಾ[ಳ್ಗ]ಳಪ್ಪ ತುೞಿಲಾಳ್ಗಳಿರಾ ೧೧

ಅಳವಱಿಯದಿನಿಬರುಂ ಪ್ರ
ಜ್ವಳನಾಗ್ನಿಯೊಳಿಂತು ಪೊಕ್ಕು ಕೆಮ್ಮನೆ ನಿಮ್ಮ
ಗ್ಗಳಿಕೆಗಿಡೆ ಹೊಕ್ಕು ಕಟ್ಟಿ
ರ್ತಳಮೊದವಿನಮಿಱಿದು ಸಾಯಲಾಗದೆ ಕೆನ್ನಂ ೧೨

ವ || ಎಂದಿದಂತು ಪಳ[ವಿ] ಸುತ್ತಿಪ್ಪಿನಂ ಕಾಲಯಮನ ಮುಂಗೋಳನಾಯಕರುರಿವ ಕೊಂಡಂಗಳಂ ಕಂಡು ತಮ್ಮ ರಸಂಗಂ ಪೇೞ್ದಟ್ಟಿ ತಾಮಲ್ಲಿರ್ಪಿನಂ ಕಾಲಯಮಂ ಬಂದೆಲ್ಲಾ ದೆಸೆಯೊಳಮುರಿವ ಕೊಂಡಂಗಳಂ ಕಂಡು ಬೆಕ್ಕಸಂಬಟ್ಟು ನಿಂದಂತೆ ನೋೞ್ಪಲ್ಲಿ ಪಳವಿಸುತ್ತಿರ್ದ ಬಡಬಿದ್ದಿಯಂ ಕಂಡೆಲೆಗಿಂತೇಕೆ ನೀಂ ಹರಿವಂಶದವರ ಪೆಸರೊಳ್ ಪಳವಿಸಿದಪ್ಪೆ ಯೆಂದೊಡಾಕೆಯಾನವರ ದಾದಿಯೆನೊಡಸಾಯಲಾಱದಿಂತು ಕುದಿದಪ್ಪೆನೆಂದೊಡವರೆಂತುಸತ್ತರೆನೆ

ಕಂ || ಅರಸಂಗೆ ಕೈದುವಿಡಿದೀ
ಪಿರಿದಾಗುವ ಪಾಪಮಟ್ಟಿತಿನ್ನದ ಮುನ್ನಂ
ಪರಿಭವಿಸಿ ಸಾವೆಮೆಂದಾ
ಹರಿವಂಶಜರೆಲ್ಲಮಿಲ್ಲಿ ಕಿಚ್ಚಂಪೊಕ್ಕರ್ ೧೩

ವ || [ಎನೆ ಕೇಳ್ದು] ನೆರೆದ ನೆರವಿ ನಾವಿನ್ನಾರಂ ಪಿಡಿತಪ್ಪಮಿ ವಂಶಂ ವಿಧ್ವಂಸಮಾಯಿ[ತ್ತು] ನಾಡತ್ತ ಪೋಪುರ್ದಂ ಚಕ್ರವರ್ತಿಯ ಪಗೆವರೊಳಾಳಾಗಿದುದುಮಿನ್ನಣಮೆ ಪೋಗಲಾಗ[ದೆಂದು] ದ್ವೀಪಾಂತರಂಗಳಂ ಪುಗುವಮೆಂದು ಪರೆದೋಡಿದರೆಂದು ಮತ್ತಮ ೞುತ್ತಂ ಕೊಂಡಂಗಳ ಮೊದಲೊಳೆಲ್ಲ ಪೋಗಿ ಪೆಸರ್ವೇೞ್ದು ಪಳವಿಸುವುದುಂ ವಿಸ್ಮಯಂಬಟ್ಟು ಕಿಚ್ಚುವಾಯ್ದ ವಿಧಿಗಳಂ ಕಂಡು ನಂಬಿ ಕೆಲವು ದಿವಸಮಿರ್ದವರ ಬೀಡುವಿಟ್ಟು ಪೋದೆಡೆ ಯಪ್ಪುದನಱಿದಱಿದು ನಿಶ್ಚೈಸಿ ತಪ್ಪಿಲ್ಲ ಹರಿವಂಶಜರೆಲ್ಲಮಿಲ್ಲಿ ಸತ್ತರೆಂದು ಮಗುೞ್ದು [ಪ]ಯಣಂಬೋಗಿ ಜರಾಸಂಧಂಗಾ ವೃತ್ತಾಂತಮೆಲ್ಲಮಂ ತಿಳಿಯೆಪೇೞ್ದುದುಮಾತನು ಮಾ ಮಾ [ತಂ] ನಂಬಿ ರಾಗದಿಂ

ಕಂ || ಈ ವಸುಧಾತಳದೊಳ್ ನರ
ನಾವನುಮಿರ್ಪನ್ನನಿಲ್ಲಮುಳ್ಳೊಡಮವನಂ
ತಾವೆಡೆಯಂ ಪುಗುವನೊ ದೆಸೆ
ದೇವತೆಗಳೆ ಪಿಡಿದು ನುಂಗುಗುಂ ಪೆಱದೇನೋ ೧೪

ವ || ಅವರ್ ತಾಮೆಂತುಂ ಬರ್ದುಂಕದುದನಱಿದು ತಾವೆ ಸತ್ತು ಚದುರರಾದರೆಂದು ಶತ್ರುಕ್ಷಯಮಾದುದಕ್ಕೆ ಮುಯ್ವಂ ನೋಡಿಯುಮೊಸಗೆಯಂ ಮಾಡಿ ಮೇಗಿಲ್ಲದ ಗರ್ವದಿಂ ಮೆಯ್ಯಱಿಯದಿರ್ದನಿತ್ತ ನಾರಾಯಣಾದಿಗಳ್ ಕಾಳಯಮನ ಮಗುೞ್ದು ಪೋದುದಂ ಕೇಳ್ದು ನಮ್ಮ ಪುಣ್ಯದೇವತೆಯ ಗೊಡ್ಡ ಮೆಂದೊಸೆದು ಮತ್ತಂ ನಡೆದು ಸಮುದ್ರತೀರಮನೆಯ್ದಿ ಬೀಡುವಿಟ್ಟಿರ್ದಿನ್ನೆಲ್ಲಿರ್ಪಮೆಂದು ತಮ್ಮೊಳಾಳೋಚಿಸುವಲ್ಲಿ ಮತ್ತಮುದ್ದಾ ಮ ನೆಂಬ ಮಂತ್ರಿಯೆಂದಂ ನಾರಾಯಣನಂ ದರ್ಭಶಯನದೊಳಿರಿಸುವಮಾತನ ಪುಣ್ಯದೇವತೆ ಪೇೞ್ಗುಮೆಂದು ಸಮಕಟ್ಟಿ ನಾರಾಯಣನಂ ಶುಚಿರ್ಭೂತನಾಗಿಯುಪವಾಸಂಗೆಯ್ದು ದರ್ಭಶಯ್ಯೆಯೊಳ್ ಪವಡಿಸಿದಾತನಂ ಚಕ್ರವರ್ತಿ ಮಾಡುವ ಪುಣ್ಯಮುಂ ಹರಿವಂಶದೊಳ್ ನೇಮಿಭಟ್ಟಾರಕನೆಂಬ ತ್ರಿಭುವನಸ್ವಾಮಿ ತಾನುದಯಂಗೆಯ್ವ ನಿರತಿಶಯ ಪುಣ್ಯಮುಂ ದೇವೇಂದ್ರನಂ ನೆನೆಯಿಸಿ ಬಗೆದು ನೋಡಿ ದೇವೇದ್ರಂ ಬೇಗಮವರ್ಗಿರಲೆಡೆಮಾಡುವೆನೆಂದು ಬಗೆದು ಹರಿವಂಶಕ್ಕಿರಲೆಡೆಗುಡುಗೆಂದು ವರುಣನಲ್ಲಿಗೆ ನೈಗಮದೇವರನಟ್ಟಿದೊಡಾ ದೇವಂ ಬಂದು ನಾರಾಯಣನ ಬಲದ ತೋಳಂ ಪೊಯ್ದೆತ್ತಿ ನಿನ್ನ ಮನೆಯ ಮಣಿಕನಕ ಯೋಗಾಳಂ ಕೃತಮಾಗಿ ಬಂದಿರ್ದ ದಿವ್ಯಧವಳಾಶ್ವಮಂ ನೀನೇಱಿ ಸಮುದ್ರದೊಳಗೆ ನಿನ್ನ ಮೆಚ್ಚುವನಿ ತೆಡೆಯಂ ಪರಿಯಿಸು ಪರಿಯಿಸಿ[ದ] ನಿತೆಡೆಯಂ ನಿನಗಿರಲೆಡೆಮಾಡುವೆನೆಂದು ಪೇೞ್ದು ಪೋದಿನಿಸುಬೇಗದಿನೆಚ್ಚತ್ತು ತನ್ನ ಕಂಡ ದರ್ಶನಮಂ ಪ್ರಭುಗಳ್ಗೆಲ್ಲಮಱಿಯೆ ಪೇೞ್ದೊಸೆದಿರ್ದು ಪೇೞ್ದಂದದೊಳ್ ದಿವ್ಯಮಪ್ಪ

ಚಂ || ತುರಗದ ಮೇಲೆವಾಯ್ದು ಕಡಿಕೆಯ್ದು ಮಹಾಪರದಿಕ್ಸಮುದ್ರದೊಳ್
ಪರಿಯಿಸೆ ಬೆಚ್ಚಿ ನೀರುಡುಗಿ ಪೋಯ್ತಿರಲಣ್ಮದೆ ಕಟ್ಟೆಗಟ್ಟಿದಂ
ತಿರೆ ನಿಲೆ ಭೂಮಿಪಂ ನೆರೆದು ಯೋಜನಮಾಗಿರೆ ಮಾತ್ರೆಗೇರಿ ಬಂ
ದಿರೆ ಕಡುರಾಗಮಾಗಿ ಸುರಿದರ್ ಸುರರೊಪ್ಪಿರೆ ಪುಷ್ಪವೃಷ್ಟಿಯಂ ೧೫

ವ || ಆಗಳ್ ಹರಿಯ ಮೇಗಣಿಂದಮಿೞಿದೊಡಶ್ವರೂಪ [ಮದೃಶ್ಯ] ಮಾಗಿ ನಿಂದು ಪರಸಿ ಪೋದನಾಗಳ್ ಹರಿವಂಶಜರೆಲ್ಲಂ ನಾರಾಯಣನಂ ಪಸೆಯೊಳಿರಿಸಿ ಸೇಸೆಯನಿಕ್ಕಿ ತಮ್ಮ ಬೀಡಿನೊಳೆಲ್ಲಂ ಪಿರಿದುಮೊಸಗೆಯಂ ಮಾಡಿರ್ಪಿನಮಿಂದ್ರನ ಬೆಸದಿಂದ[ಮಡ್ಡಂ] ಬಂದು ಸಮುದ್ರದುಡುಗಿದ ನೀರೆಲ್ಲಂ ಪನ್ನೆರಡು ಯೋಜನಮೆಂಬ ನಾಲ್ವತ್ತೆಣ್ಗಾವುದ ಪರಿ ಪ್ರಮಾಣಮದಱ ಮಧ್ಯಪ್ರದೇಶದಲ್ಲಿ ಮುನ್ನಂ ತೀರ್ಥಕರ ಪರಮದೇವರುದಯಿಸುವುದಱಿಂದಂ ಸಮುದ್ರವಿಜಯ ಬಲದೇವ ವಾಸುದೇವರ್ಗೆಂದು ರತ್ನಮಯವಾಗಿ ಸಪ್ತತಳಮಪ್ಪ ಕರುಮಾಡಂಗಳಂ ಮೂಱಂ ಮಾಡಿ ಬಳಸಿ [ಯುಮಂತಃಪುರ] ಪ್ರಸಾದಾದ್ಯನೇಕ ವಿಧ ಪರಿಕರ ಲಸದ್ಗೃಹಾಳಿಗಳಂ ಸಮೆದು ಮಕರತೋರಣಾಳಂಕೃತ ಚತುರ್ಗೋಪುರೋದ್ಭಾಸಿತ ತ್ರಿವೇದಿಕಾಪರಿವೃತ ರಾಜಾಲಯ ಬಹಿರ್ಭಾಗದೊಳ್ ಸ್ವಗೋತ್ರಪ್ರಧಾನನಿವಾಸಮಪ್ಪೇಕಕಾಲ ದ್ವಿಶಾಲ ತ್ರಿಶಾಲ ಚತುಶ್ಯಾಲ ಪಂಚತಳ ಮಹಾಮಾಟ ಕೂಟ ಸ್ವಸ್ತಿಕ ವಳಭಿಪದ್ಮ ಗುಲ್ಮೋತ್ಪಳ ನಂದ್ಯಾವರ್ತ ಶ್ರೀಭದ್ರಶಾಲಾದ್ಯನೇಕವಿಧ ರಮ್ಯಭವನಂಗಳುಮನಷ್ಟಾದಶ ಪ್ರಕೋಷ್ಠ ಪ್ರಕೃತಿಭವನಂಗಳುಮನತಿಶಯ ಬಹುಪ್ರಕಾರಮನುಪಮ ಭವನಂಗಳುಮನಪೂರ್ವಮಾಗೆ ಸಮೆದಾ ಪೊೞಲ್ಗೆ ದ್ವಾರಾವತಿಯೆಂದು ಪೆಸರನಿಟ್ಟಿಂತು.

ಕಂ || ಚಕ್ರಿಗಿರಲ್ಕಂ ಧರ್ಮಸು
ಚಕ್ರೇಶ್ವರ ನೇಮಿಗುದಯದೆಡೆಯಾಗಲ್ಕಂ
ಶಕ್ರಂ ಮಾಡಿಸಿದೊಡೆ ಭೂ
ಚಕ್ರದೊಳಾ ಪೊೞಲನಾರೊ ಪೊ[ಗೞಲ್ಕ]ರಿವರ್ ೧೬

ವ || ಧನದನಂತು ಮಾಡಿ ಬಂದು ಸಮುದ್ರವಿಜಯಾದಿ ಹರಿವಂಶಪ್ರಭುಗಳಂ ಉಗ್ರಸೇನಾದಿ ಬಂಧುವರ್ಗಮುಂ ಮಂತ್ರಿಪುರೋಹಿತಶ್ರೇಷ್ಠಿ ಸೇನಾಪತಿಗಳುಮಂ ಮುಂದಿಟ್ಟು ನಾರಾಯಣನನೊಡಗೊಂಡು ಮಹಾವಿಭೂತಿಯಿಂ ಪುಗಿಸಿ ಕರುಮಾಡದೊಳ್ ವಿಷ್ಣುಗೆ ರಾಜ್ಯಾಭಿಷೇಕಂಗೆಯ್ದು ಸಿಂಹಾಸನದೊಳಿರಿಸಿ ತ್ರಿಖಂಡಮಂಡಳಾಧಿಪತಿಯಾಗೆಂದು ಪರಸಿ ಪಟ್ಟಂಗಟ್ಟಿ ಧನದಂ ಪೋದಿಂ ಬೞಿಯಂ ಪಿತೃಮಾತೃಗಳುಮಂ ಬಂಧುವರ್ಗ ಮೆಲ್ಲಮಂ ಪರಸಿ ಸೇಸೆಯನಿಕ್ಕಿ ಕಿಱಿದು ಬೇಗದಿಂ ಸಮುದ್ರವಿಜಯಾನುಮತದಿನೆಲ್ಲಂ ತಮಗುಚಿತಮಪ್ಪ ಮಾ[ಡಂ]ಗಳೊಳಂ ಮನೆಗಳೊಳಂ ಪೊಕ್ಕು ಸುಖದಿನಿರ್ದು ಕೆಲವು ದಿವಸದಿಂ ವಿಜಯಾರ್ಧಪರ್ವತದ ರಥನೂಪುಪರ ಚಕ್ರವಾಳಪುರಾಧಿಪಂ ಸುಕೇಶನೆಂಬ ವಿದ್ಯಾಧರರಾಜಂ ಮುನ್ನೆ ಕಂಸನಲ್ಲಿ ತನ್ನಟ್ಟಿದ ನಾಗಶಯ್ಯೆಯುಂ ಶಾರ್ಙ್ಗಾಯುಧ ಮುಮಮಯ್ವಾಯ ಶಂಖಮುಮಂ ಸಾಧಿಸಿದುದುಮಂ ಕಂಸನಂ ಕೊಂಡುಪೋಗಿ ಸಮುದ್ರದೊಳಗೆ ದ್ವಾರಾವತಿಯೆಂಬ ಪೊೞಲಂ ಮಾಡಿ ಸಂತೋಷದಿನಿರ್ದುದುನಂ ಕೇಳ್ದು ತನ್ನ ಮಗಳಂ

ಕಂ || ನಿರುಪಮಿತ ಸತ್ಯಭಾಮಾ
ವರ ಕನ್ನೆಯನಖಿಲಲೋಕಮಾನ್ಯೆಯನೆಂತುಂ
ಹರಿಗೆ ಕುಡಲೆಂದು ಪರಹಿತ
ನುರುಮಹಿತಂ ಪ್ರಕಟವಸ್ತುವಾಹನ ಸಹಿತಂ ೧೭

ವ || ಮಹಾನುರಾಗದಿನೊಡಗೊಂಡು ಬಂದು ಸಮುದ್ರವಿಜಯಾದಿಗಳಂ ಯಥೋಚಿತಕ್ರಮದಿಂ ಕಂಡು ಶುಭಮುಹೂರ್ತದೊಳ್ ಹರಿಗಂ ಸತ್ಯಭಾಮೆಗಂ ಪಾಣಿ ಗ್ರಹಣಂಗೆಯ್ದು ಅಮೌಲ್ಯವಸ್ತುಗಳಂ ಬೞುವೞಿಗೊಟ್ಟು ಕೆಲವು ದಿನಸಮನಿರ್ದತಿ ಪ್ರಿಯದಿಂ ಕಳಿಪೆ ಪೋದಂ

ಕಂ || ಅಂತು ಹರಿ ಸತ್ಯಭಾಮಾ
ಕಾಂತೆಯೊಳೊಡಗೂಡಿ ನಿಂದು ಪಲದೆವಸಂ ನಿ
ಶ್ಚಿಂತತೆಯಿನಿರ್ದನಿರೆ ಹರಿ
[ಸಂ ತರೆ]ಸುಖದಂತನೆಯ್ದಿಯಖಿಳಖ್ಯಾತಂ ೧೮

ವ || ಅಂತಿರ್ದೊಂದು ದಿವಸಂ ಮಹಾಸ್ಥಾಯಿಕೆಯೊಳ್

ಕಂ || ತೊಳತೊಳತೊಳಗುವ ಮಿಂಚಿನ
ಬಳಗಮನಿೞಿಪೊಂದು ತೇಜಮಗ್ಗಳಿಕೆ ಮನಂ
ಗೊಳುತಿ ನಭದಿಂ ನಾರದ
ನಿೞಿತಂದಂ ಭೋಜನಾಮನಲ್ಲಿಗೆ ವಂದಂ ೧೯

ವ || ಬಂದುದನಱಿದು ನಾರಾಯಣನುಮತಿಪ್ರೀತಿಯಿನೇಱಲಿಕ್ಕಿ ಕುಳ್ಳಿರ್ದೊನ ನಿನ್ನೆಗಮೆಲ್ಲಿರ್ದು ಬಂದಿರೇಬಾರ್ತೆ ಬೆಸನೇನೆನೆ ವಿದರ್ಭವಿಷಯದೊಳ್ ಕೂಂಡಿನಪುರಮೆಂಬ ಪೊೞಲದನಾಳ್ವಂ ವಿಶ್ವಾವಸುವೆಂಬನರಸನಾತಂಗಂ ಶ್ರೀಮತಿಯೆಂಬರಸಿಗಂ ಪುಟ್ಟಿದಂ ರುಗುಮಿನಕುಮಾರನೆಂಬೊನಾತನಿಂ ಕಿಱಿಯಳ್ ನಿರತಿಶಯ ರೂಪಲಾವಣ್ಯ ಮಹಾ ಪೂಣ್ಯಸಮೇತೆಯಂ

ಕಂ || ಎಣೆಯಿಲ್ಲೆನಿಸುವ ಸಲ್ಲ
ಕ್ಷಣಯುತ ಕುಲಜನಿತ ವಿನುತ ವನಿತೆಯನಗಧಾ
ರಿಣಿಯಂ ನಯನಮನೋಹಾ
ರಿಣಿಯಂ ರುಗ್ಮಿಣಿಯನಖಿಳ ನಯಕಾರಿಣಿಯಂ ೨೦

ವ || ಕಂಡು ಮನದೆಗೊಂಡು ನಿನಗೆ ಮನೋಹಾರಿಣಿಯಾಗಲ್ಕೆ ತಕ್ಕಳೆಂದು ಬಂದೆಮೆನೆ ಹರಿ ರಾಗದಿಂ ಪೇೞಿಮಾಕೆಯವಯವಂಗಳೇನೊಳ್ಳಿದವೆಯೆನೆ ಮತ್ತಂ ನಾರದನಿಂತೆಂದಂ

ಕಂ || ಮೆಲ್ಲಿದವಾಗಿ ನಯಂಬಡೆ
ದೆಲ್ಲಿಯುಮಾ ತಾಮ್ರಭಾವಮೆಸೆದಿರೆ ಪಲವುಂ
ಸಲ್ಲಕ್ಷಣಂಗಳಿಂದು
ತ್ಫುಲ್ಲಾಂಬುಜವದನೆಯಡಿದಳಿರ್ ಸೊಗಯಿಸುಗುಂ ೨೧

ಬಿರ್ದ ಪೊಸದಳಿರ ಮೇಗೊರ
ಗಿರ್ದೆರಡಾಮೆಗಳ ಮಾೞ್ಕೆಯೆಂತಂತೆ ನಯಂ
ಪೊರ್ದೆ ಕಡುಚೆಲ್ವಿನತ್ತೊಲೆ
ದಿರ್ದುವು ಪೊಱವಡಿಗಳೆರಡುಮಬ್ಜಾನನೆ[ಯಾ] ೨೨

ನಿರುಪಮ ಲಲಿತ ಲತಾಂಗಿಯ
ಚರಣ ಲಸತ್ಕಿಸಲಯಾಗ್ರ ಪರಿಶೋಭಿತ ಭಾ
ಸುರ ನಖಕಿರಣಾವಳಿಗಳ
ನಿರತಿಶಯಾಕಾರದೊಳ್ಪನೇವಣ್ಣಿಸುವೆಂ ೨೩

ಉಂಗುಟಮುಮುಗುರ್ಗಳುಂ ನೆಱೆ
ದಿಂಗಳ[ನ]ನುಕರಿಪು [ವ]ರ್ಥವಾದಂ[ದಿ]ನ ಚಂ
ದ್ರಂಗೆಣೆ ತಾನೆಂ [ದು ಕರಂ
ಪಿಂ]ಗದೆ ಸುಟ್ಟಪವು ನೊಸಲನಾ ಕನ್ನಿಕೆಯಾ ೨೪

ಪಡೆಗುಂ ವಿರಹವ್ಯಥೆಯಂ
ನಡೆನೋಡಿದ ದೇವರಾಜನಿಭಮನುಜಂಗಂ
ಪಡೆಗುಂ ಜಯಮಂ ಮದನಂ
ಗುಡುಪಾಸ್ಯೆಯ ಚೆಲ್ವನಪ್ಪ ಕಿಱುದೊಡೆಯ ನಯಂ ೨೫

ಮನಮೊಸೆದು ನೆರೆಯೆ ನೋವೇ
ನನುನಯದಿಂ ಬಾರದಾಕೆಯು[ಳ್ದೊ]ಡೆಯಂ ಮು
ನ್ನೆನಸುಂ ನೋಡಲ್ಪ[ಡದೇ]
ಕೆನೆ ನೋಡಲ್ ಬೞಿಕೆ ಬಾರದುೞಿದವಯವಮಂ ೨೬

ಮದನನಿಧಾನಮನೊಳಕೆ
ಯ್ದುದಱೆಂ ಕನ್ನೆಯ ನಿತಂಬಮುನ್ನತಿಕೆಯಿನೊ
ಪ್ಪಿದುದಂತೆಯುಮಲ್ತೆ ನಿಧಾ
ನದ ಮೇಗಿರ್ದ [ಡವನಾವನು]ನ್ನತನಾಗಂ ೨೭

ಮೃದುತರ ಭಂಗಿಯೊಳಲ್ಲಾ
ಟದೊಳಱಿದಪ್ಪುದಱೊಳಂತೆ ನಡುವುಂ ಲತೆಯುಂ
ಸುದತಿಯ ನಡು ತನ್ನಂ ನೋ
ಡಿದನಂ ಸೋಲಿಸುಗುಮಿಂತಿದಗ್ಗಳದ ಗುಣಂ ೨೮

ತಿವ[ಳಿಯೊ]ಳೊಳ್ಪು ನಿಜಂ ತೆಳು
ಪವಿರಳಮತಿನುತಮಕೃತ್ರಿಮಂ ನುಣ್ಪೆನೆ ನೋ
ೞ್ಪವರ ಮನಂಬುಗುವಂತೊ
ಪ್ಪುವ ಬಸಿ[ಱುಂ ತೊ]ಳಪ ವಿಮಳ ಕಮಳಾನನೆ[ಯಾ] ೨೯

ಅತಿಲಲಿತ ಲತಾಮಧ್ಯ
[ಸ್ಥಿ]ತೈಕ ಕುಸುಮಕ್ಕೆ ಸೆಣಸಿ ನಂದ್ಯಾವರ್ತಂ
ಪ್ರತಿಯಣಮಲ್ಲದೆಯುಂ ತಾಂ
ಪ್ರತಿಯಾಗಲ್ ಪಡೆದುದಕ್ಕೆ ಚೋದ್ಯಂಬಡುವೆಂ ೩೦

ಸ್ತನ ಜಘನಂಗಳ ನಡುವೆಂ
ಬನಿತಱಿನುಂಟೆನಿಪ ನಡುವಿನೊಳ್ ಬಾಸೆಯ[ದೇ]
ನೆನೆ [ಅಸಿದಲ್ಲದು]ದಿಲ್ಲೆಂ
ಬನಿತಾಗಿರ್ದಪು[ವು] ಬಾಸೆ [ನೀಳಾಳಕಿಯಾ] ೩೧

ಮೃಗನೇತ್ರೆಯ ಮೊಲೆಗಳ ಬಿಗಿ
ದೊಗೆದಂದಂ ರೋಮರಾಜಿಯೆಂಬೆಳನಾಗಂ
ಮೊಗಮೆಂಬುದು ಪತಿಗೆಯ್ತರೆ
ಪುಗಲೀಯದೆ ತಾಗುವಂದಮೆಂದಾಂ ಬಗೆವೆಂ ೩೨

ಅಳಿಕುಳಕುಂತಳೆಯೊಪ್ಪುವ
ನಳಿತೋಳ ಬೆಡಂಗಿನಿಂದಮಿಂತೀ ಲೋಕಂ
ಗಳನಲೆವುದೊಂದು ದರ್ಪಮ
ನೊಳಕೆಯ್ದುದಱಿಂ ಪ್ರಸಿದ್ಧಮಾದನನಂಗಂ ೩೩

ಆ ಸತಿಯ ಮನದ ಮೆಲ್ಪಂ
ಭಾಸುರಗುಣರಕ್ತೆಯಪ್ಪುದಂ ಕರತಳವಿ
ನ್ಯಾಸದ ಮೆಲ್ಪಂ ರಕ್ತಾ
ಭಾ[ಸದ] ನಯದಿಂ[ದಮಱಿ]ವೆನುಂತೆತ್ತಱಿವೆಂ ೩೪

ಸರಿಸಿಜ ಸನ್ನಿಭ ನಯನೆಯ
ಬೆರಳ್ಗೆ ಮನುಮಥ [ನ ಸರಳೆ] ಸೆಣಸಾ[ಡಿ]ಸಮಂ
ಬರಲುಂ ನೆಱೆಯದೆಯದೆ ಮೆ
ಯ್ಗರೆದೆರ್ದೆಗೊ[ಳ್ವಾ]ಯಮೇಂ ಮನಂಗೊಳಿಸಿಕ್ಕುಂ ೩೫

ಅಂಗನೆಯ ಹಸ್ತನಖಮೆ[ಳ]
ದಿಂಗಳ್ ಕೇದಗೆಯ ಸುಳಿಯ ಮಧುವೆಂಬುದನೆ
ತ್ತಂ ಗೆಲ್ಲಿರ್ದವು ತೊಳಗುವ
ಪೊಂಗಿನೊಳಾಕೃತಿಯೊಳೆಸೆವ ವರ್ಣಕ್ರಮದೊಳ್ ೩೬

ಬೆಳರ್ವಸುರಿಂದ[ಮ]ಣ್ಕೆಯ
ನಿಳಿಸುವ ನುಣ್ಪೊಗರ ತೋಳ ಮೊದಲಂ ಕಂಡಾ
ಗಿಳಿ ನೊಂದು ಸಂ[ತ] ಸಿಕ್ಕೆ[ಯ]
ಯೆಳೆದಳಲಿಗೆ ಮಗುೞ್ದು ಕಂಡ ಸಂ[ತಸ]ಮೆ ಸಮಂ ೩೭

ಆಕೆಯ ಕೊರಲಂದಮನವ
ಲೋಕಿಪೆ ತುಂಗಂಗಳಂತೆ ಶೃಂಗಾರರಸಾ
ರ್ದ್ರಕಾಸ್ತಿಯಕ್ಕುಮದಱಿಂ
ದಾಕೆಗೆ ಸುತಲಾಭಮಪ್ಪುದದು ಸಂದೇಹಂ(?) ೩೮

ಎನ್ನಂ ನೋಡಲ್ ಮಾಱು
ತ್ಪನ್ನತಿಕೆಯನುಂಟುಮಾಡಿ ನೋಡಿದರೆರ್ದೆಯಂ
ಭಿನ್ನಂ ಮಾಡುವೆನೆಂಬಂ
ತುನ್ನತಕುಚಯುಗೆಯ ಬಾಯ್‌ಕರಂ ಸೊಗಯಿಸುಗುಂ ೩೯

ಲಲನೆಯ ದಶನದ್ಯುತಿಯೊಳ್
ಮಲೆದೆಡಱುತೆ ಕುಸಿದ ಮಿಂಚಿನಂದಮನಱಿದಿಂ
ಜಲವರ್ಷಕಾಲಮಪ್ಪಿನ
ಮಲಸದ ಗಂಡಂಗೆ ಶಿಶಿರರಿತು ಕಳೆವುದದಂ ೪೦